Saturday, July 7, 2012

ನೋವು...

ಹಾಗೆ ಯಾರ ದೇಹದ ನೋವನ್ನೂ ಯಾರೂ
ಹೀರಿ ನೀಗಿಸುವಂತಿಲ್ಲ
ಹೀರುವಂತಿದ್ದರೆ ನಿನ್ನ ನೋವನ್ನು
ನಾನೇ ತುಟಿಯೊತ್ತಿ ಗಟಗಟನೆ ಕುಡಿದುಬಿಡುತ್ತಿದ್ದೆ

ಮನಸ್ಸು ನೋಯುತ್ತದೆ,
ದುಃಖ ಕಟ್ಟಿ ನಿಲ್ಲುತ್ತದೆ ಎದೆಯಲ್ಲಿ, ಗಂಟಲಲ್ಲಿ, ಕಿಬ್ಬೊಟ್ಟೆಯಲ್ಲಿ
ಒಂದು ಸಾಂಗತ್ಯದ ಮಾತಿಗೆ ದುಃಖ ಕರಗಬಹುದು
ದೇಹದ ನೋವು ಹಾಗಲ್ಲ, ಅದು ಸುಲಭಕ್ಕೆ ಕರಗುವುದಿಲ್ಲ

ದಿನೇದಿನೇ ಕರಗುವ ಕಸದಂತೆ ದೇಹ
ನಮ್ಮದೇ ಅಂಗಾಂಗಗಳು ನಮಗೇ ಪರಕೀಯ
ಆಪರೇಷನ್ ಥಿಯೇಟರಿನಲ್ಲಿ ಮಸುಕುಧಾರಿ ವೈದ್ಯರು
ಒಂದೊಂದೇ ಅವಯವಗಳನ್ನು
ನಿರ್ದಯವಾಗಿ ಕತ್ತರಿಸಿ ಎಸೆಯುತ್ತಾರೆ
ನಿತ್ಯ ಒಂದು ವೈಕಲ್ಯ

ಮುಟ್ಟಿ, ತಬ್ಬಿ, ಮುತ್ತಿಟ್ಟು
ನೋವ ಮರೆಸುವ ಜಾದೂ ನನಗೆ ಗೊತ್ತಿಲ್ಲ
ಹಾಗೆ ಉಪಚರಿಸುವೆನೆಂಬ ನನ್ನ ಅಹಂಕಾರವೇ ಬೊಗಳೆ
ನೀನು ನೋಯುತ್ತೀಯ, ನಾನು ಬೇಯುತ್ತೇನೆ
ಇದಿಷ್ಟೇ ಸತ್ಯ

ಆದರೂ ನಿನ್ನ ಗಾಯಕ್ಕೆ ನನ್ನ ಹಲ್ಲನ್ನೂರುತ್ತೇನೆ
ಬಾಯಿ ತುಂಬಾ ರಕ್ತ ರಕ್ತ ರಕ್ತ...
ಮುಕ್ಕುಳಿಸಿ ಎಸೆದು
ಮತ್ತೆ ಮತ್ತೆ ತುಟಿಯೊತ್ತಿ ನಿಲ್ಲುತ್ತೇನೆ

ನನ್ನವು ಅಸಹಾಯಕ ಕೈಗಳು
ಸಂಜೀವಿನಿ ಪರ್ವತ ಹೊತ್ತು ತರಲಾರೆ
ಗಂಟಲು ಒಣಗಿಹೋಗಿದೆ
ಬಿಕ್ಕುವ ನಿನ್ನ ಕಣ್ಣಹನಿಗಳ ಕುಡಿದೇ
ಉಪಚಾರಕ್ಕೆ ನಿಲ್ಲುವೆ,
ನಿನ್ನ ನೋವ ಮರೆಸುವ ಶಕ್ತಿಯನ್ನು
ನೀನೇ ನನಗೆ ಕೊಟ್ಟುಬಿಡು...

No comments: