ಇವತ್ತು ನನ್ನ ನಮಾಜ್-ಇ-ಜನಾಜಾ
ಕಡೆಯ ಪ್ರಾರ್ಥನೆ ನನಗಾಗಿ,
ನೀವೂ ಪ್ರಾರ್ಥಿಸಿ
ಕಿವಿಯಲ್ಲಿ ಇನ್ನೂ ಆಜಾನ್
ಮೊಳಗು ಹಾಗೇ ಇದೆ
ನಾನು ಆಫ್ರೀನ್,
ಆಫ್ರೀನ್ ಅಂದರೆ ಉತ್ತೇಜನ
ಅಮ್ಮಳ ಗರ್ಭಚೀಲದಲ್ಲಿ
ಬೆಚ್ಚಗೆ ಈಜಾಡುವಾಗಲೇ
ನನಗೊಬ್ಬಳು ಜತೆಗಾತಿಯಿದ್ದಳು-ನಮ್ಮಕ್ಕ
ಅಪ್ಪನ ಹಿಂಸೆಗೆ ಅವಳು ಅಲ್ಲೇ ಸತ್ತಳು
ಅಮ್ಮಳ ತುಂಬಿದ ಹೊಟ್ಟೆಯ ಮೇಲೆ
ಅಪ್ಪನ ಕೆಕ್ಕರುಗಣ್ಣು
ಭಯದಲ್ಲಿ ಮುದುಡಿ ಕುಳಿತಿದ್ದೆ ನಾನು
ಈ ಜಗಕ್ಕೆ ಕಣ್ಣು ತೆರೆದುಕೊಂಡ
ಮೊದಲ ಆರು ದಿನಗಳು ದೇವತೆಗಳೇ
ಆರೈಕೆ ಮಾಡುತ್ತಾರಂತೆ
ಅಪ್ಪ ಅಡ್ಡ ನಿಂತಿದ್ದ- ದೇವತೆಗಳಿಗೂ ನನ್ನ ಹಾಲುಗಲ್ಲಕ್ಕೂ ನಡುವೆ
ಪವಿತ್ರ ಜಮ್ ಜಮ್ ನೀರು
ನನ್ನ ಗಂಟಲಿಗೆ ಇಳಿಯುವ ಮುನ್ನವೇ
ಅಪ್ಪ ನನ್ನ ಎದೆಗೆ ಉರಿಯುವ ಸಿಗರೇಟು ಚುಚ್ಚಿ ಬಿಟ್ಟ
ಮೆದುಳು ಹರಿಯುವ ಹಾಗೆ ಗೋಡೆಗೆ ತಲೆ ಜಜ್ಜಿಬಿಟ್ಟ
ನೆತ್ತಿ ಕೂಡಿಲ್ಲ, ಹೊಕ್ಕುಳ ಗಾಯ ಆರಿಲ್ಲ
ಅಳುವುದೊಂದು ಗೊತ್ತಿತ್ತು ನನಗೆ
ಅಪ್ಪನಿಗೇನು ದ್ವೇಷ ನನ್ನ ಮೇಲೆ?
ಹೇಗೆ ಕೇಳಲಿ? ನಾಲಿಗೆ ಹೊರಳುತ್ತಿಲ್ಲ
ಅಪ್ಪಾ ಎಂದು ಚೀರಲೂ ನನ್ನಿಂದ ಸಾಧ್ಯವಿಲ್ಲ
ಎಳೇ ಮೆದುಳು ನುಜ್ಜುಗಜ್ಜು ಅಪ್ಪನ ಹೊಡೆತಕ್ಕೆ ಫಿಡ್ಸು,
ತಲೆಯಲ್ಲಿ ರಕ್ತಸ್ರಾವ ಇನ್ನು ಬದುಕಲಾರೆ ಎಂದು ಹೊರಟುಬಿಟ್ಟೆ
ನನ್ನ ಕಳಕೊಂಡು ಅಮ್ಮ ಈಗ ತಬ್ಬಲಿಯಾಗಿದ್ದಾಳೆ
ಅವಳದಿನ್ನೂ ಹಸಿಮೈ, ಉಕ್ಕಿಚೆಲ್ಲುವ ಮೊಲೆಹಾಲು
ಎಲ್ಲ ಬಿಟ್ಟು ಹೊರಟಿದ್ದೇನೆ
ಇವತ್ತು ನನ್ನ ಜನಾಜಾ,
ಆಮೇಲೆ ಮಣ್ಣು
ಹೋಗುವ ಮುನ್ನ
ಅವನನ್ನು ಕೇಳಬೇಕಿತ್ತು
ಅಪ್ಪ, ನನ್ನದೇನು ತಪ್ಪು?
No comments:
Post a Comment