Wednesday, December 31, 2008

ನಾಳೆ ಎಲ್ಲವೂ ಬದಲಾಗುತ್ತದೆ ಗೆಳತಿ...




ಯಾಕೋ ಎಲ್ಲವೂ ಎಂದಿನಂತಿಲ್ಲ ಗೆಳತಿ
ಅಲಾರಾಮು ಹೊಡಕೊಂಡರೆ
ಯಾರೋ ಕರುಳು ಸೀಳಿದಂತೆ
ಕಾಲಿಂಗ್ ಬೆಲ್ ರಿಂಗಣಿಸಿದರೆ
ಹೃದಯ ಚೂರು ಚೂರಾದಂತೆ
ಬಾಗಿಲು ಬಡಿದ ಶಬ್ದಕ್ಕೆ
ಮಿದುಳು ಹರಿದು ಹೋದಂತೆ

ಯಾಕೋ ಎಲ್ಲವೂ ಎಂದಿನಂತಿಲ್ಲ ಗೆಳತಿ
ಬೇಟೆನಾಯಿಗಳು ಕೋರೆ ಅಗಲಿಸಿಕೊಂಡು ಕೂತಿವೆ
ಆ ಕುನ್ನಿಗಳಿಗೆ ಆಹಾರ ಯಾರು? ನೀನೇ? ನಾನೇ?
ಮೇಲೆ ನಭದಲ್ಲಿ ದಿಕ್ಕಾಪಾಲಾದ ಮೋಡಗಳು
ಸುರಿಸಿದ್ದು ಮಳೆಯೇ? ಬೆಂಕಿಯ ಉಂಡೆಗಳೆ?

ಕಿಟಕಿ ತೆರೆದು ನೋಡುತ್ತಿದ್ದೇನೆ
ಎಲ್ಲರ ಹೆಗಲ ಮೇಲೂ ಬಗೆಬಗೆಯ ಶಸ್ತ್ರಾಸ್ತ್ರಗಳ ಮಣಭಾರ
ಈಗೀಗ ಅನ್ನಕ್ಕಿಂತ ಬಂದೂಕೇ ಶ್ರೇಷ್ಠ
ನೀರಿಗಿಂತ ಬಿಸಿಬಿಸಿ ರಕ್ತವೇ ಸಸ್ತಾ

ಬೆದರಬೇಡ ಗೆಳತಿ
ಹಾಗೇ ಮಲಗು, ನಿದ್ದೆ ಹತ್ತಲಿ ನಿನಗೆ
ಇವೆಲ್ಲವೂ ನಾಳೆ ಬೆಳಗಾಗುವುದರೊಳಗೆ ಬದಲಾಗುತ್ತವೆ
ನಿರೀಕ್ಷೆ ಇಟ್ಟುಕೋ
ನಿನ್ನ ಸೈರಣೆಗಿದೋ ಅಗ್ನಿಪರೀಕ್ಷೆ

ಸೂರ್ಯನನ್ನೂ ಅಪಹರಿಸಲಾಗಿದೆ
ಅವನೇ ಒತ್ತೆಯಾಳು
ಅವನನ್ನು ಹೊತ್ತೊಯ್ದವರ ಬೇಡಿಕೆ
ನನ್ನ ನಿನ್ನ ಗುಟುಕು ಜೀವ

ಆಶೆಗಳನ್ನು ಕಟ್ಟಿಕೋ
ಕರಿಮೋಡಗಳನ್ನು ದಾಟಿ ಸೂರ್ಯನನ್ನು ತಲುಪಿ
ಬಿಡಿಸಿ ತರೋಣ ಅವನನ್ನು
ಹರಿಸೋಣ ಬೆಳಕನ್ನು
ಬೆಳಗೋಣ ಎಲ್ಲರೆದೆ ಗೂಡನ್ನೂ

ದ್ವೇಷ ಸುಡುವುದಕ್ಕೂ ಧೈರ್ಯ ಬೇಕು ಕಣೆ ಗೆಳತಿ
ಇಳಿಯಬೇಕು ಅಂತರಂಗಕ್ಕೆ
ಆಳಕ್ಕೆ, ಮತ್ತೂ ಆಳಕ್ಕೆ
ಅಲ್ಲಿ ಅಂಧಕಾರವಿಲ್ಲ, ಬೆಳಕೇ ಎಲ್ಲ
ಯಾವುದು ಜಗತ್ತೋ ಅದಕ್ಕೆ ಕತ್ತಲೆಯ ಹಂಗಿಲ್ಲ

ವಿದಾಯ ಹೇಳೋಣ ಬಾ
ಕಾಡಿದ ಕೆಟ್ಟ ಕನಸುಗಳಿಗೆ
ಬಾಡಿಗೆ ಹಂತಕ ತ್ರಿಶೂಲಗಳಿಗೆ, ಬಾಂಬುಗಳಿಗೆ

ನಂಬು ಗೆಳತಿ
ಎಲ್ಲ ಸರಿಹೋಗುತ್ತದೆ
ಸಿಡಿಲು, ಬಿರುಗಾಳಿ, ಸಮುದ್ರದುಬ್ಬರ
ಎಲ್ಲ ಅಬ್ಬರಗಳ ನಡುವೆಯೂ
ಒಂದೇ ಒಂದು ತೆನೆ ನನ್ನ, ನಿನ್ನ
ಹೊಟ್ಟೆ ತುಂಬಿಸುತ್ತದೆ

ಬಾ ಗೆಳತಿ
ನನ್ನ ತೋಳೊಳಗೆ ಹುದುಗಿ
ಗಡದ್ದಾಗಿ ನಿದ್ದೆ ಮಾಡು
ನಾಳೆ ಎಲ್ಲವೂ ಬದಲಾಗುತ್ತದೆ

Sunday, December 28, 2008

ರಾಮಚಂದ್ರಗೌಡರ ‘ಬ್ರಾಹ್ಮಿನ್ ಫೋಬಿಯಾ’

‘ಜಗತ್ತಿಗೆ ಆದರ್ಶಪ್ರಾಯರೆನಿಸಿದ ಬ್ರಾಹ್ಮಣರಿಗೆ ಬಿಜೆಪಿ ಹೆಚ್ಚಿನ ಆದ್ಯತೆ ನೀಡಿದೆ. ಒಟ್ಟು ೧೧ ಮಂದಿ ಬ್ರಾಹ್ಮಣರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿ ಮೇಲ್ಪಂಕ್ತಿ ಹಾಕಲಾಗಿದೆ. ಹಾಗಾಗಿ ನಮ್ಮದು ಬ್ರಾಹ್ಮಣರ ಸರ್ಕಾರ.’

‘ಬ್ರಾಹ್ಮಣರು ಈ ರೀತಿಯ ಸ್ಥಾನಮಾನ ಪಡೆಯಲು ಅರ್ಹರು. ಏಕೆಂದರೆ ಬ್ರಾಹ್ಮಣರು ಚಿಂತನೆ ಮಾಡುವ ಜನ. ಅವರಿಗೆ ಸಾಧಿಸುವ ಛಲವಿದೆ. ಅಸಾಧ್ಯವಾದುದನ್ನು ಸಾಧಿಸುವ ಯುಕ್ತಿ ಶಕ್ತಿ ಇದೆ. ಸರ್ಕಾರಕ್ಕೆ ಬ್ರಾಹ್ಮಣರ ಮಾರ್ಗದರ್ಶನ ಅಗತ್ಯವಾಗಿದೆ. ಹಾಗೆಯೇ ಸ್ವಾಮೀಜಿಗಳ ಸಹಕಾರ ಕೂಡ ಬೇಕಿದೆ.’

ಕೂಟ ಮಹಾಜಗತ್ತು ಸಾಲಿಗ್ರಾಮ ಹಾಗು ಕೂಟ ಸಮಾಜ ಸಂಸ್ಥೆಗಳ ಒಕ್ಕೂಟ ಡಿ.೨೭ರ ಶನಿವಾರ ಏರ್ಪಡಿಸಿದ್ದ ೨ನೇ ವಿಶ್ವಕೂಟ ಸಮ್ಮೇಳನದಲ್ಲಿ ಭಾಗವಹಿಸಿದ್ದ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಹೇಳಿರುವ ಮಾತುಗಳು ಇವು. (ಪ್ರಜಾವಾಣಿ/೨೮-೧೨-೨೦೦೮, ಪುಟ-೯)

ನಿಸ್ಸಂಶಯವಾಗಿ ಇದು ಅನಾಗರಿಕ ಮಂತ್ರಿಯೊಬ್ಬ ನೀಡಬಹುದಾದ ಅನಾಗರಿಕ ಹೇಳಿಕೆ. ನೇರವಾಗಿ ಇದು ಪ್ರಜಾಪ್ರಭುತ್ವದ ಅವಹೇಳನ. ತೀರಾ ಬ್ರಾಹ್ಮಣ ಸಮುದಾಯದ ಜನರೇ ಮುಜುಗರ ಪಟ್ಟುಕೊಳ್ಳುವಂತೆ, ಅಸಹ್ಯ ಪಟ್ಟುಕೊಳ್ಳುವಂತಿದೆ ಈ ಹೇಳಿಕೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟ ಒಬ್ಬನೇ ಒಬ್ಬ ಒಳ್ಳೆಯ ಬ್ರಾಹ್ಮಣನೂ ರಾಮಚಂದ್ರ ಗೌಡರ ಈ ಭಟ್ಟಂಗಿತನವನ್ನು ಒಪ್ಪಲಾರ ಎಂಬುದು ಸತ್ಯ. ಅದರರ್ಥ ಇದು ಬ್ರಾಹ್ಮಣರಿಗೇ ಅಪಥ್ಯವಾಗುವ, ಅಸಹನೀಯ ಅನಿಸುವ ಹೇಳಿಕೆ.

ಕರ್ನಾಟಕ ಸರ್ಕಾರವನ್ನು ಬ್ರಾಹ್ಮಣರ ಸರ್ಕಾರ ಎಂದು ಹೇಳುವ ಮೂಲಕ ಶೇ.೯೭ರಷ್ಟು ಬ್ರಾಹ್ಮಣೇತರರನ್ನು ಅವಮಾನಿಸಿ ರಾಮಚಂದ್ರಗೌಡರು ಹೊಸಮಾರ್ಗವೊಂದನ್ನು ತುಳಿದಿದ್ದಾರೆ. ಇಂಡಿಯಾದ ಇತಿಹಾಸದಲ್ಲಿ ಒಬ್ಬನೇ ಒಬ್ಬ ಮಂತ್ರಿಯೂ ತಾನು ಪ್ರತಿನಿಧಿಸುವ ಸರ್ಕಾರವನ್ನು ಬ್ರಾಹ್ಮಣರ ಸರ್ಕಾರ ಎಂತಲೋ, ಒಕ್ಕಲಿಗರ ಸರ್ಕಾರ ಎಂದೋ, ಬನಿಯಾಗಳ ಸರ್ಕಾರ ಎಂದೋ, ಮಾರ್ವಾಡಿಗಳ ಸರ್ಕಾರ ಎಂದೋ, ಹೊಲೆಯರ ಸರ್ಕಾರ ಎಂದೋ ಕರೆದಿರಲಿಲ್ಲ. ರಾಮಚಂದ್ರಗೌಡರು ಒಂದು ರಾಜ್ಯಸರ್ಕಾರವನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವ ಮೂಲಕ ಇತಿಹಾಸದಲ್ಲಿ ದಾಖಲಾಗುವಂಥ ಹೇಳಿಕೆ ನೀಡಿದ್ದಾರೆ; ತನ್ಮೂಲಕ ತಾವೂ ಸಹ ಇತಿಹಾಸದ ಪುಟಗಳನ್ನು ಸೇರಿದ್ದಾರೆ. ರಾಜ್ಯ ಸರ್ಕಾರ ಬ್ರಾಹ್ಮಣರದ್ದು ಎಂದು ಹೇಳಿದರೆ ಬ್ರಾಹ್ಮಣೇತರರು ಏನಂದುಕೊಂಡಾರು ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದ ರಾಮಚಂದ್ರಗೌಡರು ಮುಂದೆ ತಮ್ಮ ಹೇಳಿಕೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೋ ಕಾದು ನೋಡಬೇಕು.

ರಾಮಚಂದ್ರಗೌಡರು ಹೇಳಿದಂತೆ ಬ್ರಾಹ್ಮಣರು ಇವತ್ತಿನ ರಾಜ್ಯ ಸರ್ಕಾರದಲ್ಲಿ ತಮ್ಮ ಸಂಖ್ಯಾಬಲವನ್ನು ಮೀರಿ ಆದ್ಯತೆ ಪಡೆದುಕೊಂಡಿದ್ದಾರೆ. ಸಹಜವಾಗಿ ಬ್ರಾಹ್ಮಣರಿಗೆ ಕೊಡಮಾಡಲಾದ ಹೆಚ್ಚುವರಿ ಸ್ಥಾನಮಾನಗಳು ಇತರ ಸಮುದಾಯಗಳ ಪಾಲು ಎಂದು ಬೇರೆ ಹೇಳಬೇಕಾಗಿಲ್ಲ. ಇದಕ್ಕಾಗಿ ರಾಮಚಂದ್ರಗೌಡರಾದಿಯಾಗಿ ಸರ್ಕಾರದ ಮುಖ್ಯಸ್ಥರು ಪಶ್ಚಾತ್ತಾಪಪಡಬೇಕೆ ಹೊರತು ಹೀಗೆ ನಿರ್ಲಜ್ಜೆಯಿಂದ ಸಮರ್ಥಿಸಿಕೊಳ್ಳಬೇಕಾಗಿರಲಿಲ್ಲ.
ಸರ್ಕಾರಕ್ಕೆ ಬ್ರಾಹ್ಮಣರ ಮಾರ್ಗದರ್ಶನ ಅಗತ್ಯವಾಗಿದೆ ಎಂದು ರಾಮಚಂದ್ರಗೌಡರು ಫರ್ಮಾನು ಹೊರಡಿಸಿದ್ದಾರೆ. ಹಾಗಿದ್ದರೆ ಸರ್ಕಾರಕ್ಕೆ ದಲಿತರ ಮಾರ್ಗದರ್ಶನ ಬೇಡವೆ? ಹಿಂದುಳಿದ ಜಾತಿಜನರ ಮಾರ್ಗದರ್ಶನ ಬೇಡವೆ? ಒಕ್ಕಲಿಗರು-ಲಿಂಗಾಯಿತರ ಮಾರ್ಗದರ್ಶನ ಬೇಡವೆ? ಕ್ರಿಶ್ವಿಯನ್ನರು-ಮುಸ್ಲಿಮರ ಮಾರ್ಗದರ್ಶನ ಬೇಡವೆ? ಆದಿವಾಸಿಗಳು-ಅಲೆಮಾರಿಗಳ ಮಾರ್ಗದರ್ಶನ ಬೇಡವೆ? ರಾಮಚಂದ್ರಗೌಡರ ಮಾತಿನಲ್ಲೇ ಹೇಳುವುದಾದರೆ ಈ ಎಲ್ಲ ಸಮುದಾಯಗಳ ಜನರಿಗೆ ಸಾಧಿಸುವ ಛಲವಿಲ್ಲವೆ, ಯುಕ್ತಿ-ಶಕ್ತಿ ಇಲ್ಲವೆ?

ರಾಮಚಂದ್ರಗೌಡರು ಹೀಗೆ ಹೊಣೆಗೇಡಿಯಂತೆ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಯಡಿಯೂರಪ್ಪನವರ ಸಂಪುಟದ ಸದಸ್ಯರಲ್ಲಿ ಹಲವರು ಪದೇ ಪದೇ ಹೀಗೆ ಅಪ್ರಬುದ್ಧ, ಅವಾಂತರಕಾರಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಸ್ವತಃ ಯಡಿಯೂರಪ್ಪನವರೇ ಆಗಾಗ ಇಂಥ ಹೇಳಿಕೆ ನೀಡುವ ಮೂಲಕ ತನ್ನ ಸ್ಥಾನದ ಘನತೆಯನ್ನು ಕೆಳಕ್ಕೆ ಇಳಿಸುತ್ತ ಬಂದಿದ್ದಾರೆ. ಹಾಗಾಗಿ ರಾಮಚಂದ್ರಗೌಡರ ಮಾತುಗಳು ಹೆಚ್ಚು ಆಶ್ಚರ್ಯವನ್ನೇನೂ ಉಂಟುಮಾಡುವುದಿಲ್ಲವಾದರೂ ಸರ್ಕಾರದ ಘನತೆಯ ಪ್ರಶ್ನೆಯನ್ನು ಹರಾಜಿಗಿಡುವ, ಸಂವಿಧಾನದ ಸಮಾನತೆಯ ತಳಹದಿಯನ್ನು ಅಭದ್ರಗೊಳಿಸುವ ಇಂಥ ಪ್ರಯತ್ನಗಳು ಪ್ರಜಾಪ್ರಭುತ್ವವಾದಿ ಮನಸ್ಸುಗಳನ್ನು ಘಾಸಿಗೊಳಿಸುತ್ತಲೇ ಇರುತ್ತವೆ.

ರಾಮಚಂದ್ರಗೌಡರಿಗೆ ಆಗಿರುವುದಾದರೂ ಏನು? ಯಾಕೆ ಅವರು ಬ್ರಾಹ್ಮಣರನ್ನು ಮಾತ್ರ ಸರ್ವಶ್ರೇಷ್ಠರೆಂದು ಭಾವಿಸುತ್ತಾರೆ? ಎಲ್ಲ ಸಮುದಾಯಗಳ ಜನರು ಆಯ್ಕೆ ಮಾಡಿ ಕಳುಹಿಸಿದ ಸರ್ಕಾರವನ್ನು ‘ಬ್ರಾಹ್ಮಣರ ಸರ್ಕಾರ’ ಎಂದು ಕರೆಯುವ ಮೂಲಕ ಅವರು ಯಾಕೆ ಬ್ರಾಹ್ಮಣೇತರರನ್ನು ಕ್ಷುಲ್ಲಕವಾಗಿ ನೋಡುತ್ತಾರೆ? ಕರ್ನಾಟಕದ ಆರು ಕೋಟಿಗೂ ಹೆಚ್ಚು ಜನಸಂಖ್ಯೆಯ ಪ್ರತಿಯೊಬ್ಬ ವ್ಯಕ್ತಿಗೂ ಈ ಸರ್ಕಾರ ಉತ್ತರದಾಯಿಯಾಗಿರುತ್ತದೆ, ಮಾತ್ರವಲ್ಲದೆ ಆ ಎಲ್ಲ ಜನಸಮುದಾಯಗಳ ಪಾಲಿಗೆ ಇದು ಅವರದೇ ಸರ್ಕಾರ ಎಂದು ರಾಮಚಂದ್ರಗೌಡರಿಗೆ ಯಾಕೆ ಅನಿಸುವುದಿಲ್ಲ?

ನನಗನ್ನಿಸುವ ಮಟ್ಟಿಗೆ ರಾಮಚಂದ್ರಗೌಡರು ತೀವ್ರ ಸ್ವರೂಪದ ‘ಬ್ರಾಹ್ಮಿನ್ ಫೋಬಿಯಾ’ಗೆ ಒಳಗಾಗಿದ್ದಾರೆ. ಇದು ಒಂದು ಬಗೆಯ ಖಾಯಿಲೆ. ಸಮಾಜಶಾಸ್ತ್ರೀಯ ಅಧ್ಯಯನದಲ್ಲಿ ತೊಡಗಿಕೊಂಡಿರುವ ಚಿಂತಕ ಡಾ.ಸಿ.ಜಿ.ಲಕ್ಷ್ಮಿಪತಿಯವರು ತಮ್ಮ ಕ್ಯಾಸ್ಟ್ ಕೆಮಿಸ್ಟ್ರಿ ಎಂಬ ಕೃತಿಯಲ್ಲಿ ಈ ‘ಬ್ರಾಹ್ಮಿನ್ ಫೋಬಿಯಾ’ ಕುರಿತು ಉಲ್ಲೇಖಿಸಿದ್ದಾರೆ. ಅವರ ಪ್ರಕಾರ ‘ಬ್ರಾಹ್ಮಿನ್ ಫೋಬಿಯಾ’ ಎಂದರೆ ಬ್ರಾಹ್ಮಣರ ಕುರಿತು ಬ್ರಾಹ್ಮಣೇತರರಿಗೆ ಇರಬಹುದಾದ ಅಂಜಿಕೆ, ಅಗಾಧ ಭಯ, ಅಳುಕು, ಕೀಳರಿಮೆ, ಬಲಿಪಶುತನದ ಕಲ್ಪನೆ ಹಾಗು ಅನುಭವಿಸುವಿಕೆ, ಮುಂದೆ ಎಂದಾದರೂ ಬ್ರಾಹ್ಮಣರಿಂದ ತೊಂದರೆಗೋ, ಕುತಂತ್ರಕ್ಕೋ ಒಳಗಾಗಬಹುದೆಂಬ ಅನುಮಾನಿತ ಸತ್ಯ, ಇತ್ಯಾದಿ.

‘ಬ್ರಾಹ್ಮಿನ್ ಫೋಬಿಯಾ’ಗೆ ಕೇವಲ ರಾಮಚಂದ್ರಗೌಡರು ಒಳಗಾಗಿದ್ದಾರೆ ಎಂದು ಭಾವಿಸಬೇಕಾಗಿಲ್ಲ. ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಆದಿಯಾಗಿ ಸಾಕಷ್ಟು ಮಂದಿ ಈ ಬಗೆಯ ಖಾಯಿಲೆಯಿಂದ ನರಳುತ್ತಿದ್ದಾರೆ. ಹೊಸದಾಗಿ ಈಗ ‘ಮಠಾಧೀಶರ ಫೋಬಿಯಾ’ ಸಹ ನಮ್ಮ ಮುಖಂಡರನ್ನು ಆವರಿಸಿಕೊಂಡಿದೆ. ಎಲ್ಲೋ ಒಬ್ಬ ಎಚ್.ವಿಶ್ವನಾಥ್ ಅಂಥವರು ಇದನ್ನು ಮೀರಿದರಾದರೂ ಕರ್ನಾಟಕದ ಸಂದರ್ಭದಲ್ಲಿ ಮಠಾಧೀಶರ ಫೋಬಿಯಾದಿಂದ ತಪ್ಪಿಸಿಕೊಳ್ಳದ ಜನನಾಯಕರೇ ಇಲ್ಲ.

ಡಾ.ಸಿ.ಜಿ.ಲಕ್ಷ್ಮಿಪತಿಯವರು ಅಧಿಕಾರಶಾಹಿಯ ‘ಬ್ರಾಹ್ಮಿನ್ ಫೋಬಿಯಾ’ ಕುರಿತು ಹೀಗೆ ಬರೆಯುತ್ತಾರೆ: “ಮಧ್ಯಮ ವರ್ಗ/ಅಧಿಕಾರಶಾಹಿಯಲ್ಲಿರುವ ಬ್ರಾಹ್ಮಣೇತರರು ‘ಬ್ರಾಹ್ಮಿನ್ ಫೋಬಿಯಾ’ದಿಂದ ನರಳುತ್ತಿರುವ ಗುಂಪಿನಲ್ಲಿ ಪ್ರಥಮಸ್ಥಾನದಲ್ಲಿ ನಿಲ್ಲುತ್ತಾರೆ. ಅಧಿಕಾರಶಾಹಿಯ ಉನ್ನತಸ್ಥಾನದಲ್ಲಿ ಬ್ರಾಹ್ಮಣರು ಇರುವುದರಿಂದಲೂ, ಪರಂಪರಾನುಗತವಾಗಿ ಸರ್ಕಾರಿ ಕಾನೂನುಗಳನ್ನು ಬಲ್ಲ ಬ್ರಾಹ್ಮಣ ಜಾತಿಯವರನ್ನು ಜ್ಞಾನಿಗಳೆಂದು ಭಾವಿಸುವ ಬ್ರಾಹ್ಮಣೇತರರು ಕಾನೂನಿನಲ್ಲಿ ಅವರನ್ನು ಮೀರಿಸುವವರೇ ಇಲ್ಲವೆಂದು ಭಾವಿಸಿ ಅವರು ಹೇಳಿದ್ದನ್ನು ಸರಿಯಿರಲಿ, ತಪ್ಪಿರಲಿ, ಸತ್ಯವೆಂದೇ ಗ್ರಹಿಸುತ್ತಾರೆ.”

ರಾಮಚಂದ್ರಗೌಡರು ಹೇಳಿಕೇಳಿ ಭಾರತೀಯ ಜನತಾ ಪಕ್ಷದ ಮುಖಂಡ. ಹೀಗಾಗಿ ಗೌಡರಿಗೆ ‘ಕೇಶವಶಿಲ್ಪ’ದವರನ್ನು ಒಲಿಸಿಕೊಳ್ಳುವ ಧಾವಂತ. ಕೇಶವಶಿಲ್ಪದವರನ್ನು ಮೆಚ್ಚಿಸಲು ಬ್ರಾಹ್ಮಣರನ್ನು ಹೊಗಳಬೇಕು ಎಂದು ರಾಮಚಂದ್ರಗೌಡರು ಭಾವಿಸಿದ್ದರೆ ಆಶ್ಚರ್ಯವೇನಿಲ್ಲ. ಕೆಲ ದಿನಗಳ ಹಿಂದೆ ರಾಮಚಂದ್ರಗೌಡರನ್ನು ಸಂಪುಟದಿಂದ ಕೈಬಿಡಲಾಗುವುದು ಎಂಬ ವದಂತಿಗಳು ಹಬ್ಬಿದ್ದವು. ಯಾರನ್ನೇ ಆಗಲಿ ಸಂಪುಟಕ್ಕೆ ಸೇರಿಸಿಕೊಳ್ಳಲು ಅಥವಾ ಸಂಪುಟದಿಂದ ಕೈಬಿಡಲು ‘ಕೇಶವಶಿಲ್ಪ’ದ ಅನುಮತಿ ಬೇಕು ಎಂಬುದು ರಹಸ್ಯವೇನಲ್ಲ. ರಾಮಚಂದ್ರಗೌಡರು ಇಂಥ ಹೇಳಿಕೆಗಳನ್ನು ನೀಡುವ ಮೂಲಕ ಯಾರ ಮನವೊಲಿಸಲು ಯತ್ನಿಸುತ್ತಿದ್ದಾರೆ ಎಂದು ಬಿಡಿಸಿ ಹೇಳಬೇಕಾಗಿಲ್ಲ.

ಗೌಡರಿಗೆ ಬಹುಶಃ ತೀವ್ರ ಸ್ವರೂಪದ ಕೀಳರಿಮೆಯೂ ಕಾಡುತ್ತಿರಬಹುದು. ಯಾವತ್ತೂ ರಾಮಚಂದ್ರಗೌಡರು ತಮ್ಮ ಜಾತಿಯ ಸಭೆಯಲ್ಲಿ ಭಾಗವಹಿಸಿ, ‘ಒಕ್ಕಲಿಗರು ಯಾರಿಗೂ ಏನೂ ಕಡಿಮೆಯಿಲ್ಲ, ನಾವು ಎಲ್ಲದಕ್ಕೂ ಸಮರ್ಥರು’ ಎಂದು ಹೇಳಿಕೆ ನೀಡಿದ ನೆನಪು ನನಗಿಲ್ಲ. ಹಾಗೆ ನೋಡಿದರೆ ಇಂಥ ವಿಶ್ವಾಸದ ನುಡಿಗಳು ಬೇಕಾಗಿರುವುದು ಈಗೀಗ ಪ್ರವರ್ಧಮಾನಕ್ಕೆ ಬರುತ್ತಿರುವ ಒಕ್ಕಲಿಗ ಸಮುದಾಯಕ್ಕೇ ಹೊರತು, ಬ್ರಾಹ್ಮಣ ಸಮುದಾಯಕ್ಕಲ್ಲ.

ತಮಾಶೆಯೆಂದರೆ ಈ ಬ್ರಾಹ್ಮಿನ್ ಫೋಬಿಯಾ ಕೇವಲ ರಾಜಕಾರಣಿಗಳನ್ನು ಮಾತ್ರ ಭಾದಿಸುತ್ತಿಲ್ಲ. ಕೆಳಸಮುದಾಯಗಳ ಮಠಾಧೀಶರೂ ಈ ಖಾಯಿಲೆಯಿಂದ ನರಳುತ್ತಿದ್ದಾರೆ. ಒಕ್ಕಲಿಗ ಮಠಾಧೀಶರೊಬ್ಬರು ಹಿಂದೆ ಬ್ರಾಹ್ಮಣ ಮಠಾಧೀಶರ ಕಾಲಿಗೆ ಎರಗಿದಾಗ ಒಬ್ಬರು ಅವರಿಗೆ ಹೀಗೆ ಪ್ರಶ್ನೆ ಕೇಳಿದರಂತೆ: ‘ಸ್ವಾಮೀಜಿ, ನೀವೂ ಸಹ ಜಗದ್ಗುರುಗಳು, ಅವರೂ (ಬ್ರಾಹ್ಮಣ ಮಠಾಧೀಶರು) ಸಹ ಜಗದ್ಗುರುಗಳು. ಹೀಗಿರುವಾಗ ನೀವು ಅವರ ಪಾದಕ್ಕೆ ನಮಸ್ಕರಿಸಿದ್ದು ತಪ್ಪಲ್ಲವೆ?’

ಈ ಪ್ರಶ್ನೆಗೆ ಒಕ್ಕಲಿಗ ಸ್ವಾಮೀಜಿಯ ಉತ್ತರ ಹೀಗಿತ್ತು: ‘ನೀವು ಹೇಳುವುದು ಸರಿ. ನಾವಿಬ್ಬರೂ ಜಗದ್ಗುರುಗಳೇ ಹೌದು. ಆದರೆ ಅವರು ಬ್ರಾಹ್ಮಣರಾದ್ದರಿಂದ ಅವರ ಪಾದಕ್ಕೆ ನಮಸ್ಕರಿಸಿದೆ!’

ಜನಸಾಮಾನ್ಯರಲ್ಲಿರುವ ‘ಬ್ರಾಹ್ಮಿನ್ ಫೋಬಿಯಾ’ ಬಗ್ಗೆ ಹೊಸದಾಗಿ ಏನೂ ಹೇಳಬೇಕಾಗಿಲ್ಲ. ‘ಬ್ರಹ್ಮಹತ್ಯೆ ಮಹಾಪಾಪ’ ಎಂಬ ಭಾವ ಈ ದೇಶದ ಶೂದ್ರರ ನರನಾಡಿಗಳಲ್ಲೂ ಸೇರಿಹೋಗಿದೆ. ಬ್ರಾಹ್ಮಣನನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ನೋಯಿಸುವುದನ್ನು ಈ ಜನ ಕಲ್ಪಿಸಿಕೊಳ್ಳಲಿಕ್ಕೂ ಬೆದರುತ್ತಾರೆ. ಬ್ರಾಹ್ಮಣರಿಗೆ ಎಲ್ಲ ಕ್ಷೇತ್ರಗಳಲ್ಲೂ ಮೊದಲ ಆದ್ಯತೆ ಎಂಬ ಮಂತ್ರವನ್ನು ಎಲ್ಲ ಸಮುದಾಯಗಳೂ ಪ್ರತಿಭಟನೆಯೇ ಇಲ್ಲದಂತೆ ಒಪ್ಪಿಕೊಂಡಿವೆ. ಪಂಚಾಂಗ, ಜ್ಯೋತಿಷ್ಯ, ವಾಸ್ತು, ಭೂತಪ್ರೇತ, ಸ್ವರ್ಗ-ನರಕಗಳು, ಸ್ಮೃತಿ-ಪುರಾಣಗಳು ಬ್ರಾಹ್ಮಣೇತರರು ಬ್ರಾಹ್ಮಣರನ್ನು ಭೀತಿಯಿಂದ, ಒಂದು ಬಗೆಯ ಕೀಳರಿಮೆಯಿಂದ ಬೆದರುವಂತೆ ಮಾಡಿವೆ. ರಾಮಚಂದ್ರಗೌಡರು ಸಹ ಈ ನರಕದಲ್ಲೇ ಬದುಕುತ್ತಿದ್ದಾರೆ.

ರಾಮಚಂದ್ರಗೌಡರ ಹೇಳಿಕೆಯನ್ನು ಮತ್ತೆಮತ್ತೆ ಬೇರೆಬೇರೆ ಆಯಾಮಗಳಲ್ಲಿ ಪರಿಶೀಲಿಸಿ ನೋಡಿದಾಗ ಅವರನ್ನು ಕಾಡುತ್ತಿರುವುದು ‘ಬ್ರಾಹ್ಮಿನ್ ಫೋಬಿಯಾ’ ಎಂಬ ಖಾಯಿಲೆ ಎಂದು ಮನದಟ್ಟಾಗಿ, ಇಷ್ಟೆಲ್ಲ ಬರೆದಿದ್ದೇನೆ. ಸರ್ಕಾರವನ್ನು ಒಂದು ಜಾತಿಯ ತಲೆಗೆ ಕಟ್ಟಿದ ಮಂತ್ರಿಯನ್ನು ಇನ್ನೂ ಸಂಪುಟದಲ್ಲೇ ಇಟ್ಟುಕೊಂಡರೆ ಅದು ಯಡಿಯೂರಪ್ಪನವರಿಗೇ ಅವಮಾನ. ಯಡಿಯೂರಪ್ಪ ರಾಜ್ಯದ ಎಲ್ಲ ಬ್ರಾಹ್ಮಣೇತರರಲ್ಲೂ ಕ್ಷಮೆ ಯಾಚಿಸುವ ಜತೆಗೆ ರಾಮಚಂದ್ರಗೌಡರ ಹೇಳಿಕೆಯಿಂದ ಕಿರಿಕಿರಿ ಅನುಭವಿಸಿರಬಹುದಾದ ಸಜ್ಜನ ಬ್ರಾಹ್ಮಣರಲ್ಲೂ ಕ್ಷಮೆ ಕೋರಬೇಕು. ಆದರೆ ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ, ಇಂಥದ್ದನ್ನೆಲ್ಲ ತಿಪ್ಪೆ ಸಾರಿಸುವ ಪರಿಪಾಠವೇ ನಡೆದಿರುವುದರಿಂದ ಏನನ್ನೂ ನಿರೀಕ್ಷಿಸುವಂತಿಲ್ಲ. ಹಾಗಿದ್ದೂ ರಾಜ್ಯದ ಪ್ರಜ್ಞಾವಂತ ಜನರು ತಮ್ಮ ಸಿಟ್ಟನ್ನು ದಾಖಲಿಸದೇಹೋದಲ್ಲಿ ರಾಮಚಂದ್ರಗೌಡರಂಥವರನ್ನು ಸಾರಾಸಗಟಾಗಿ ಎಲ್ಲರೂ ಒಪ್ಪಿಕೊಂಡಂತಾಗುತ್ತದೆ.

‘ಬ್ರಾಹ್ಮಿನ್ ಫೋಬಿಯಾ’ಗೆ ಒಳಗಾಗಿರುವ ರಾಮಚಂದ್ರಗೌಡರ ಕುರಿತು ಇನ್ನೇನು ಹೇಳುವುದು? ಈ ಕ್ಷಣಕ್ಕೆ ಅವರ ಕುರಿತು ನನಗಂತೂ ಸಿಟ್ಟು ಬರುತ್ತಿಲ್ಲ, ಅನುಕಂಪವಾಗುತ್ತಿದೆ. ಬೇಗ ಅವರು ತಮ್ಮ ಖಾಯಿಲೆಯಿಂದ ಗುಣಮುಖರಾಗಲಿ.

ಗೆಟ್ ವೆಲ್ ಸೂನ್ ಮಿ.ರಾಮಚಂದ್ರಗೌಡ!

Friday, December 19, 2008

ಸಾವು ಅಲ್ಲಿ ಮನೆಮನೆಯ ಮುಂದೆ ಗಸ್ತು ಹೊಡೆಯುತ್ತಿದೆ


ಎರಡನೇ ಮಹಾಯುದ್ಧದ ಕಾಲವದು. ನಾಜೀ ಆಧಿಪತ್ಯದ ಜರ್ಮನಿ ತನ್ನ ಸುತ್ತಮುತ್ತಲಿನ ಒಂದೊಂದೇ ರಾಷ್ಟ್ರಗಳನ್ನು ಆಕ್ರಮಿಸಿಕೊಳ್ಳುತ್ತಿತ್ತು. ಪೋಲೆಂಡ್, ಡೆನ್ಮಾರ್ಕ್, ನಾರ್ವೆ, ನೆದರ್‌ಲ್ಯಾಂಡ್, ಬೆಲ್ಜಿಯಂಗಳನ್ನು ತನ್ನ ಅಸಾಮಾನ್ಯ ಸೈನ್ಯಬಲದಿಂದ ವಶಪಡಿಸಿಕೊಂಡ ಜರ್ಮನಿ ಬಲಶಾಲಿ ಫ್ರಾನ್ಸ್ ದೇಶವನ್ನೂ ಸಹ ಆಕ್ರಮಿಸಿಕೊಂಡಿತ್ತು.

ಆ ಕಾಲಕ್ಕೆ ಜರ್ಮನಿ ‘ಅಟ್ಲಾಂಟಿಸ್ ಎಂಬ ರಹಸ್ಯ ನೌಕೆಯೊಂದನ್ನು ದಕ್ಷಿಣ ಅಟ್ಲಾಂಟಿಕ್ ಹಾಗು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ದಾಳಿಗೆ ಇಳಿಸಿತ್ತು. ಮಹಾಯುದ್ಧದ ಮಿತ್ರರಾಷ್ಟ್ರಗಳ ಹಡಗುಗಳನ್ನು ನಾಶಗೊಳಿಸುವುದು ಈ ರಹಸ್ಯ ನೌಕೆಗೆ ನೀಡಲಾಗಿದ್ದ ಕಾರ್‍ಯಸೂಚಿ. ಇಂಥ ಹಲವು ರಹಸ್ಯ ನೌಕೆಗಳನ್ನು ಜರ್ಮನಿ ಉಪಯೋಗಿಸುತ್ತಿತ್ತಾದರೂ ಅತ್ಯಂತ ಭೀಕರ ನೌಕೆ ಎನಿಸಿಕೊಂಡಿದ್ದು ‘ಅಟ್ಲಾಂಟಿಸ್. ಅದಕ್ಕೆ ಕಾರಣ ‘ಅಟ್ಲಾಂಟಿಸ್ ನೌಕೆಯ ಕ್ಯಾಪ್ಟನ್ ಬರ್ನ್‌ಹಾರ್ಡ್ ರೋಗೆ ಎಂಬಾತನ ಅದ್ಭುತ ಸಾಮರ್ಥ್ಯ ಹಾಗು ಸಾಹಸಗಳು.

ಮಿತ್ರರಾಷ್ಟ್ರಗಳ ಹಲವಾರು ನೌಕೆಗಳನ್ನು ನಾಶಪಡಿಸಿದ ‘ಅಟ್ಲಾಂಟಿಸ್ ಹೆಸರು ಕೇಳಿದರೆ ನಡುಗುವ ಸ್ಥಿತಿ ಆಗ ನಿರ್ಮಾಣವಾಗಿತ್ತು. ಮಾಮೂಲು ಸರಕು ಸಾಗಣೆ ಹಡಗಿನಂತೆ ಕಾಣುತ್ತಿದ್ದ ಈ ನೌಕೆಯಲ್ಲಿ ಆ ಕಾಲದ ಅತ್ಯಾಧುನಿಕ ಫಿರಂಗಿಗಳು, ಮಿಷನ್ ಗನ್ನುಗಳು, ಜಲಾಂತರ್ಗಾಮಿ ವಿಮಾನಗಳನ್ನು ಅಡಗಿಸಿಡಲಾಗುತ್ತಿತ್ತು. ಎದುರಿಗೆ ಯಾವುದಾದರೂ ನೌಕೆ ಬಂದಾಗ ಹಡಗಿನ ಸ್ವರೂಪವನ್ನೇ ಬದಲಿಸಿ ಅದನ್ನು ಜಪಾನ್ ದೇಶದ ಹಡಗಿನಂತೆಯೋ, ಸೋವಿಯತ್ ದೇಶದ ಹಡಗಿನಂತೆಯೋ ಅಣಿಗೊಳಿಸಲಾಗುತ್ತಿತ್ತು. ವೈರಿ ನೌಕೆ ಹತ್ತಿರವಾಗುತ್ತಿದ್ದಂತೆ ಅದರ ಮೇಲೆ ದಾಳಿ ನಡೆಸಿ ಮುಳುಗಿಸಲಾಗುತ್ತಿತ್ತು.

ಇಷ್ಟೆಲ್ಲ ಸಾಹಸಗಳನ್ನು ಅತ್ಯಂತ ನೈಪುಣ್ಯದಿಂದ ಮಾಡುತ್ತಿದ್ದ ರೋಗೆ ಪ್ರಥಮ ವಿಶ್ವಯುದ್ಧದಲ್ಲೂ ಪಾಲ್ಗೊಂಡಿದ್ದ. ಆದರೆ ಈತ ಪ್ರವರ್ಧಮಾನಕ್ಕೆ ಬಂದಿದ್ದು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ. ೧೯೩೯ರ ಡಿಸೆಂಬರ್‌ನಲ್ಲಿ ಜರ್ಮನಿ ‘ಅಟ್ಲಾಂಟಿಸ್ ನೌಕೆಯನ್ನು ರೂಪಿಸಿ, ೧೯೪೦ರಲ್ಲಿ ಸಾಗರದ ಕುರುಕ್ಷೇತ್ರಕ್ಕೆ ಇಳಿಸಿತ್ತು. ೧೯೪೧ರಲ್ಲಿ ನವೆಂಬರ್ ೨೨ರಂದು ಬ್ರಿಟನ್ ಯುದ್ಧನೌಕೆ ಡವಾನ್ ಶೈರ್ ದಾಳಿಗೆ ಸಿಲುಕಿ ನಾಶವಾಗುವುದಕ್ಕೆ ಮುನ್ನ ಈ ನೌಕೆ ನಡೆಸಿದ ಕಾರ್ಯಾಚರಣೆ, ತೋರಿದ ಸಾಹಸಗಳಿಗೆ ಲೆಕ್ಕವಿಲ್ಲ.

ಇದೆಲ್ಲ ರೋಗೆಯ ಸಾಹಸದ ಕಥೆಯಾಯಿತು. ಆದರೆ ಬಹುಮುಖ್ಯವಾಗಿ ಗುರುತಿಸಬೇಕಾದ ವಿಷಯವೇ ಬೇರೆ. ರೋಗೆ ಇತರ ಯುದ್ಧಪಿಪಾಸುಗಳ ಹಾಗೆ ಇರಲಿಲ್ಲ. ಆತ ಅತ್ಯಂತ ಪ್ರಾಮಾಣಿಕವಾಗಿ ಯುದ್ಧನೀತಿಯನ್ನು ಪಾಲಿಸುತ್ತಿದ್ದ. ವೈರಿನೌಕೆಗಳ ಮೇಲೆ ದಾಳಿ ನಡೆಸಿದಾಗ ಆತ ಯಾರನ್ನೂ ಕೊಲ್ಲುತ್ತಿರಲಿಲ್ಲ. ಆತ ಮಾನವಹಕ್ಕುಗಳನ್ನು ಗೌರವಿಸುತ್ತಿದ್ದ. ವೈರಿ ನೌಕೆಗಳನ್ನು ಮುಳುಗಿಸುವ ಮುನ್ನ ಅವನು ಆ ನೌಕೆಯಲ್ಲಿ ಇದ್ದ ಎಲ್ಲರನ್ನೂ ತನ್ನ ನೌಕೆಗೆ ಹತ್ತಿಸಿಕೊಳ್ಳುತ್ತಿದ್ದ. ಆ ಯುದ್ಧ ಖೈದಿಗಳಿಗೆ ಊಟ, ತಿಂಡಿ, ಮಲಗಲು ಕೋಣೆ ಎಲ್ಲವನ್ನೂ ಒದಗಿಸುತ್ತಿದ್ದ. ಯುದ್ಧ ಖೈದಿಗಳು ಎಲ್ಲರಂತೆ ಆರಾಮವಾಗಿ ಓಡಾಡಿಕೊಂಡಿರಬಹುದಾಗಿತ್ತು.

ಇನ್ನೂ ವಿಚಿತ್ರವೆಂದರೆ ರೋಗೆ ಜತೆಗಿದ್ದ ಯುದ್ಧಖೈದಿಗಳು ಅಟ್ಲಾಂಟಿಸ್‌ನಲ್ಲೇ ಒಂದು ಕ್ಲಬ್ ಮಾಡಿಕೊಂಡಿದ್ದರು. ಆ ಕ್ಲಬ್ ನಡೆಸುವ ಕಾರ್ಯಕ್ರಮಗಳಿಗೆ ರೋಗೆ ಸೇರಿದಂತೆ ಅಟ್ಲಾಂಟಿಸ್‌ನ ಅಧಿಕಾರಿಗಳು ಅತಿಥಿಗಳಾಗಿ ಬರುತ್ತಿದ್ದರು. ಯುದ್ಧಖೈದಿಗಳನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ರೋಗೆ ಅವರಿಗೆ ಬೀಳ್ಕೊಡುಗೆ ಪಾರ್ಟಿ ಕೊಡುತ್ತಿದ್ದ.

ಇಂಥ ಮಾನವೀಯ ಗುಣಗಳಿಂದಲೇ ರೋಗೆ ಇತಿಹಾಸದ ಪುಟ ಸೇರಿಹೋದ. ಹಲವು ರಾಷ್ಟ್ರಗಳು ಆತನಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದವು. ಜರ್ಮನಿ ಸೋಲುಂಡರೂ ಮಿತ್ರರಾಷ್ಟ್ರಗಳು ರೋಗೆಯನ್ನು ಬಂಧಿಸಲಿಲ್ಲ. ೧೯೮೨ರ ಜೂನ್ ೨೯ರಂದು ಮೃತಪಟ್ಟ ರೋಗೆ ೮೨ ವರ್ಷಗಳ ತುಂಬು ಜೀವನವನ್ನು ನಡೆಸಿದ.

********

ಯುದ್ಧವೆಂಬುದೇ ಅಮಾನವೀಯ. ಅದರಲ್ಲಿ ರೋಗೆಯಂಥವರನ್ನು ಹುಡುಕುವುದು ಕಷ್ಟ. ಕೊಲ್ಲಿಯಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ಇದೆಲ್ಲವೂ ನೆನಪಾಗುತ್ತಿದೆ. ಬುಷ್ ಹಾಗು ಟೋನಿ ಬ್ಲೇರ್‌ಗಳ ರಣಹದ್ದುಗಳಂಥ ಸೈನ್ಯ ಇರಾಕ್‌ನ ಮೇಲೆ ಹಗಲಿರುಳೆನ್ನದೆ ಎರಗುತ್ತಿದೆ. ಕೇವಲ ಇರಾಕಿ ಸೈನ್ಯ ಈ ಪಡೆಗಳ ಗುರಿಯಲ್ಲ. ನೇರವಾಗಿ ಅಮಾಯಕ ಇರಾಕಿ ನಾಗರಿಕರು ಬಲಿಯಾಗುತ್ತಿದ್ದಾರೆ. ಬುಷ್ ಸೈನ್ಯ ಜನವಸತಿ ಪ್ರದೇಶಗಳ ಮೇಲೆ ಮಿಸೈಲುಗಳನ್ನು ಬಿಟ್ಟು ಸಾವಿರಾರು ಮುಗ್ಧರನ್ನು ಕೊಲ್ಲುತ್ತಿದೆ.

ಪ್ರಮುಖ ಬಂದರುಗಳನ್ನು ಅಮೆರಿಕ ಹಿಡಿದಿಟ್ಟುಕೊಂಡಿರುವುದರಿಂದ ಇರಾಕ್‌ನಲ್ಲಿ ಈಗ ಜೀವನಾವಶ್ಯಕ ವಸ್ತುಗಳ ಸಾಗಣೆ ಕಾರ್ಯ ನಿಂತುಹೋಗಿದೆ. ಮಕ್ಕಳು ಹಸಿವಿನಿಂದ ಸಾಯುತ್ತಿವೆ. ಕಳೆದ ಕೊಲ್ಲಿ ಯುದ್ಧದಲ್ಲಿ ಸುಮಾರು ೨೫,೦೦೦ ಎಳೆಯ ಕಂದಮ್ಮಗಳು ಹಸಿವಿನಿಂದಲೇ ಸತ್ತು ಹೋಗಿದ್ದವು. ಈ ಬಾರಿ ಈ ಸಂಖ್ಯೆ ಇದಕ್ಕಿಂತ ಕಡಿಮೆಯಿರುವುದು ಸಾಧ್ಯವೇ ಇಲ್ಲ.

ಯುದ್ಧವೆಂಬುದಕ್ಕೆ ಮಾನವೀಯತೆ ಇರುವುದು ಸಾಧ್ಯವಿಲ್ಲ. ಧರ್ಮಸ್ಥಾಪನೆಗಾಗಿ ಯುದ್ಧ ಎಂಬ ಸ್ಲೋಗನ್ನನ್ನು ಎಲ್ಲ ಧರ್ಮಗಳು ಬಳಸುತ್ತವೆ. ಆದರೆ ಸತ್ಯ ಏನೆಂದರೆ ಎಲ್ಲ ಧರ್ಮಗಳೂ ಯುದ್ಧೋನ್ಮಾದಿಗಳು. ಅಹಿಂಸೆಯನ್ನು ಪ್ರತಿಪಾದಿಸಿದ, ಪರಿಪಾಲಿಸಿದ ಬುದ್ಧಧಮ್ಮ ನಮ್ಮ ಇಂದಿನ ರಣೋತ್ಸಾಹಿಗಳ ನಡುವೆ ಔಟ್‌ಡೇಟ್ ಆದ ಧರ್ಮ. ಹಿಟ್ಲರ್ ಮಹಾಯುದ್ಧಗಳ ಸಂದರ್ಭದಲ್ಲಿ ಜ್ಯೂಗಳ ಮಕ್ಕಳನ್ನೆಲ್ಲ ಕುರಿಗಳನ್ನು ತುಂಬುವ ಹಾಗೆ ತುಂಬಿ ಸಾಗಿಸಿ ಕೊಲ್ಲುತ್ತಿದ್ದ. ಬಹುತೇಕ ಮಕ್ಕಳು ಲಾರಿಗಳಲ್ಲೇ ಉಸಿರುಗಟ್ಟಿ ಸಾಯುತ್ತಿದ್ದವು. ಬದುಕುಳಿದವುಗಳನ್ನು ಗ್ಯಾಸ್ ಚೇಂಬರ್‌ಗಳಲ್ಲಿ ಹಾಕಿ ಸಾಯಿಸಲಾಗುತ್ತಿತ್ತು. ಈಗ ಜಾರ್ಜ್ ಬುಷ್ ಸರದಿ. ಈತ ಇರಾಕಿ ಮಕ್ಕಳನ್ನು ಹಸಿವೆಯಿಂದ ಕೊಲ್ಲುತ್ತಿದ್ದಾನೆ.

ಒಬ್ಬ ಕ್ಯಾಪ್ಟನ್ ರೋಗೆಯ ಮಾನವೀಯತೆ ಬುಷ್‌ನಲ್ಲಾಗಲೀ, ಬ್ಲೇರ್‌ನಲ್ಲಾಗಲಿ, ಸದ್ದಾಂ ಹುಸೇನ್‌ನಲ್ಲಾಗಲೀ ಇಲ್ಲವೇ ಇಲ್ಲ. ಹಾಗಾಗಿ ‘ಸಾವು ಇರಾಕ್‌ನ ಮನೆಮನೆಯ ಮುಂದೆಯೂ ಗಸ್ತು ಹೊಡೆಯುತ್ತಿದೆ. ಮುಗ್ಧಮಕ್ಕಳು ಗುಂಡಿಗೆ, ಬಾಂಬಿಗೆ, ಹಸಿವಿಗೆ ಪ್ರಾಣ ಬಿಡುತ್ತಿವೆ.
ಯುದ್ಧಕ್ಕೆ ಧಿಕ್ಕಾರವಿರಲಿ

ಏಪ್ರಿಲ್ ೧೫, ೨೦೦೩, ಅಭಿಮನ್ಯು ಪತ್ರಿಕೆ

******

ಇರಾಕ್ ಮೇಲೆ ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ನಡೆಸಿದ ದಾಳಿ ಸಂದರ್ಭದಲ್ಲಿ ಬರೆದ ಲೇಖನವಿದು.

ಜಾರ್ಜ್ ಬುಷ್ ಮೇಲೆ ಇರಾಕಿ ಪತ್ರಕರ್ತ ಅಲ್‌ಜೈದಿ ಬೂಟು ಎಸೆದು ಸುದ್ದಿಯಾಗಿದ್ದಾನೆ. ಆತ ಮೊದಲ ಬೂಟನ್ನು ಎಸೆಯುವಾಗ ‘ಎಲೆ ನಾಯಿ, ಇರಾಕಿ ಜನರಿಂದ ಇದು ನಿನಗೆ ವಿದಾಯ ಮುತ್ತು ಎಂದು ಹೇಳಿದ್ದ. ಎರಡನೇ ಬೂಟನ್ನು ಎಸೆಯುವಾಗ ‘ವಿಧವೆಯರ, ತಬ್ಬಲಿ ಮಕ್ಕಳ, ಯುದ್ಧದಲ್ಲಿ ಸತ್ತ ಎಲ್ಲರ ಪರವಾಗಿ ನಿನಗಿದು ಕಾಣಿಕೆ ಎಂದು ಹೇಳಿದ್ದಾನೆ.

ಇರಾಕ್‌ನಲ್ಲಿ ಸಮೂಹನಾಶಕ ಶಸ್ತ್ರಾಸ್ತ್ರಗಳಿವೆ ಎಂಬ ಕುಂಟುನೆಪವನ್ನೊಡ್ಡಿ ಅಮೆರಿಕ ಆ ದೇಶದ ಮೇಲೆ ಯುದ್ಧ ಹೇರಿತು. ಜಗತ್ತಿನ ಇತರ ರಾಷ್ಟ್ರಗಳಿಗೆ ಈ ಯುದ್ಧವನ್ನು ವಿರೋಧಿಸುವ ಶಕ್ತಿಯೂ ಇರಲಿಲ್ಲ. ಯುದ್ಧ ಮುಗಿದ ಮೇಲೆ ಇರಾಕ್‌ನಲ್ಲಿ ಯಾವ ಸಮೂಹನಾಶಕ ಶಸ್ತ್ರಾಸ್ತ್ರವೂ ಲಭ್ಯವಾಗಲಿಲ್ಲ.
ಆದರೆ ಲಕ್ಷಗಟ್ಟಲೆ ಜನ ಸತ್ತು ಹೋದರು. ಕೊಲೆಗಡುಕ ಬುಷ್ ಅಮಾಯಕ ಮಕ್ಕಳನ್ನು ಹಸಿವೆಯಿಂದ ಸಾಯುವಂತೆ ಮಾಡಿದ. ಯಾವ ಕೋರ್ಟಿನಲ್ಲೂ ಈ ಕೊಲೆಗಳಿಗಾಗಿ ಬುಷ್‌ಗೆ ಶಿಕ್ಷೆಯಾಗುವುದಿಲ್ಲ. ಜೈದಿ ಬೂಟು ಎಸೆದ ತಕ್ಷಣ ಆ ಮಕ್ಕಳು ಬದುಕಿ ಬರಲಾರರು ನಿಜ, ಆದರೆ ಅಲ್‌ಜೈದಿ ಇರಾಕಿ ಜನರ ಒಡಲುರಿಯನ್ನೇ ಅಭಿವ್ಯಕ್ತಿಸಿದ್ದಾನೆ.

ಮುಂಬೈ ದಾಳಿಯ ನಂತರ ಪಾಕಿಸ್ತಾನದ ಮೇಲೆ ಯುದ್ಧ ಹೂಡಬೇಕು ಎಂದು ನಮ್ಮ ಕೆಲ ದೇಶಭಕ್ತ ಯುದ್ಧೋನ್ಮಾದಿಗಳು ಒಕ್ಕೊರಲಿನಿಂದ ಕೂಗಿಡುತ್ತಿದ್ದಾರೆ. ಬೂಟು ಪ್ರಕರಣ ಹಾಗು ಯುದ್ಧೋನ್ಮಾದಿಗಳ ಅರಚಾಟದ ನಡುವೆ ೨೦೦೩ರಲ್ಲಿ ಬರೆದಿದ್ದ ಈ ಲೇಖನ ನೆನಪಾಯಿತು. ಅದನ್ನು ಇಲ್ಲಿ ಪ್ರಕಟಿಸಿದ್ದೇನೆ.

Tuesday, December 2, 2008

enough is enough!

ಮುಂಬೈ ಇತಿಹಾಸದ ಕರಾಳ ದಿನಗಳು ಕಳೆದ ನಂತರ ಈಗ ಎಲ್ಲೆಡೆ ದೂಷಣೆಯ ಆಟಗಳು ನಡೆಯುತ್ತಿವೆ. ಎಲ್ಲ ಟಿವಿ ಚಾನೆಲ್‌ಗಳು ನೇರವಾಗಿ ರಾಜಕಾರಣಿಗಳನ್ನು ಟಾರ್ಗೆಟ್ ಮಾಡಿಕೊಂಡು ಬಯ್ಗುಳಗಳ ಸುರಿಮಳೆ ಕರೆಯುತ್ತಿವೆ.

ಜನ ಆಕ್ರೋಶಗೊಂಡಿರುವುದು ನಿಜ. ಮುಂಬೈ ಭಯೋತ್ಪಾದನೆಯ ನಂತರ ಜನರ ವಿಶ್ವಾಸವೇ ಕುಸಿಯುತ್ತಿದೆ. ದೇಶದ ಪಾಲಿಗೆ ಸಂಕಟದ ದಿನಗಳು ಇವು. ಭಯೋತ್ಪಾದನೆಯ ಪೀಡೆಗೆ ಉತ್ತರಗಳನ್ನು ಹುಡುಕಿಕೊಳ್ಳಲು ನಮ್ಮ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂಬುದು ಅಕ್ಷರಶಃ ನಿಜ.

ಆದರೆ ಯಾಕೆ ಇಂಥ ಆರೋಪಗಳೆಲ್ಲ ಕೇವಲ ರಾಜಕಾರಣಿಗಳನ್ನೇ ಕೇಂದ್ರೀಕರಿಸಿವೆ? ಶಾಸನ ರೂಪಿಸುವ ಜನ ರಾಜಕಾರಣಿಗಳಾದರೂ ಅದನ್ನು ಅನುಷ್ಠಾನಗೊಳಿಸುವವರು ಆಡಳಿತಶಾಹಿ ವ್ಯವಸ್ಥೆಯಲ್ಲವೆ? ಯಾಕೆ ಯಾರೂ ಸಹ ಬ್ಯೂರಾಕ್ರಸಿ ವಿರುದ್ಧ ಮಾತನಾಡುತ್ತಿಲ್ಲ.?

‘ಲಿಪ್‌ಸ್ಟಿಕ್ ಹಾಕಿಕೊಂಡ, ಕೋಟು ಧರಿಸಿಕೊಂಡ ಕೆಲವರು ಬೀದಿಗಿಳಿದರೆ ಅವರು ಇಡೀ ದೇಶದ ಪ್ರತಿನಿಧಿಗಳಾಗಲು ಸಾಧ್ಯವೆ? ಭಯೋತ್ಪಾದನೆ ನಡೆಸುತ್ತಿರುವುದು ಪಾಕಿಸ್ತಾನದ ಕೆಲವರು ಮತ್ತು ಅದಕ್ಕೆ ಪ್ರೇರಣೆ ನೀಡುತ್ತಿರುವುದು ಐಎಸ್‌ಐ. ರಾಜಕಾರಣಿಗಳ ಮೇಲೆ ಯಾಕೆ ಇಷ್ಟು ಆಕ್ರೋಶ?

ಹೀಗೆ ಭಾರತೀಯ ಜನತಾ ಪಕ್ಷದ ಮುಖಂಡ ಮುಕ್ತಾರ್ ಅಬ್ಬಾಸ್ ನಕ್ವಿ ಹೇಳುತ್ತಿದ್ದಂತೆ ಟೈಮ್ಸ್ ನೌ ಚಾನೆಲ್‌ನಲ್ಲಿ ಪ್ರತಿಕ್ರಿಯೆಗಳ ಸುರಿಮಳೆ. ಎಲ್ಲರೂ ನಕ್ವಿಯನ್ನು ವಾಚಾಮಗೋಚರ ಬೈಯುವವರೇ.

ಆದರೆ ಆಳಕ್ಕಿಳಿದು ಯೋಚಿಸುವುದಾದರೆ ನಮ್ಮ ಸೋ ಕಾಲ್ಡ್ ಸುಶಿಕ್ಷಿತ ಜನರು ಎಂದಾದರೂ ಮತಗಟ್ಟೆಗೆ ಬಂದು ಮತಚಲಾಯಿಸಿದ ಉದಾಹರಣೆ ಇದೆಯೇ? ಚುನಾವಣೆಗೆ ನಿಲ್ಲುವವರೆಲ್ಲ ಕೊಳಕರು ಎಂದು ಸಾರಾಸಗಟಾಗಿ ಹೇಳುವ ಇದೇ ಜನ ಎಂದಾದರೂ ಕನಿಷ್ಠ ನಗರಪಾಲಿಕೆ ಚುನಾವಣೆಯಲ್ಲಿ ನಿಲ್ಲುವ ಧೈರ್ಯ ತೋರಿದ್ದಾರೆಯೇ? ಜನಪ್ರತಿನಿಧಿಗಳ ಆಯ್ಕೆ ವಿಷಯದಲ್ಲಿ ಯಾವತ್ತೂ ಮುಗುಮ್ಮಾಗಿ ಇರುವ ಈ ಜನರು ಈಗ ರಾಜಕಾರಣಿಗಳ ವಿರುದ್ಧ ಆಕ್ರೋಶ ತೋಡಿಕೊಂಡರೆ ಪ್ರಯೋಜನವೇನು?

******




ಎನಫ್ ಈಸ್ ಎನಫ್, ಇಂಡಿಯಾಸ್ ೯/೧೧, ಸ್ಪಿರಿಟ್ ಆಫ್ ಮುಂಬೈ... ಇಂಥ ಸವಕಲು ಶಬ್ದಗಳನ್ನೇ ನಮ್ಮ ಟಿವಿ ಚಾನೆಲ್‌ಗಳು ಧಾರಾಳವಾಗಿ ಬಳಸುತ್ತಿವೆ. ವೀ ನೀಡ್ ಆಕ್ಷನ್ ಎಂದು ಒಂದೇ ಸಮನೆ ಚಾನೆಲ್‌ಗಳ ನಿರೂಪಕರು, ವರದಿಗಾರರು ಅಬ್ಬರಿಸುತ್ತಿದ್ದಾರೆ.

ಮುಂಬೈನ ಲೋಕಲ್ ಟ್ರೈನ್‌ಗಳಲ್ಲಿ ಭೀಕರ ಸ್ಫೋಟಗಳು ನಡೆದ ಘಟನೆಯ ನಂತರ ಮಾರನೇ ದಿನವೇ ಮುಂಬೈ ನಿವಾಸಿಗಳು ಮತ್ತೆ ದೈನಂದಿನ ಬದುಕಿಗೆ ಹಿಂತಿರುಗಿದರು. ಆಗ ಹುಟ್ಟಿಕೊಂಡಿದ್ದು ಸ್ಪಿರಿಟ್ ಆಫ್ ಮುಂಬೈ ಎಂಬ ಪದಪುಂಜ. ಆದರೆ ಮುಂಬೈ, ಬೆಂಗಳೂರಿನಂಥ ನಗರಗಳಲ್ಲಿ ಎಂಥ ಸ್ಫೋಟಗಳು ಸಂಭವಿಸಿದರೂ ಮಾರನೇ ದಿನ ಹೊಟ್ಟೆಪಾಡಿನ ಕೆಲಸಗಳಿಗೆ ಹೋಗಲೇಬೇಕಾದ ಅನಿವಾರ್ಯತೆ ಸಾಮಾನ್ಯ ಜನರದ್ದು. ಸ್ಪಿರಿಟ್ ಎನ್ನುವುದಕ್ಕಿಂತ ಅದು ಬದುಕಿನ ಅನಿವಾರ್ಯತೆ.

ಆದರೆ ಈ ಎಲ್ಲ ಚಾನೆಲ್‌ಗಳು ಮರೆಮಾಚುತ್ತಿರುವ ಅಂಶವೆಂದರೆ ಮುಂಬೈ ಮೇಲೆ ನಡೆದ ದಾಳಿಯನ್ನು ಅಗತ್ಯಕ್ಕಿಂತ ಹೆಚ್ಚು ವೈಭವೀಕರಿಸುವುದರೊಂದಿಗೆ ಭಯೋತ್ಪಾದಕರ ಉದ್ದೇಶವನ್ನು ಸಫಲಗೊಳಿಸಿದ್ದು ಇದೇ ಚಾನೆಲ್‌ಗಳು! ಉಗ್ರಗಾಮಿಗಳೆಂಬ ನರರಾಕ್ಷಸರು ನಡೆಸಿದ ಭಯೋತ್ಪಾದನೆಯದ್ದು ಒಂದು ತೂಕವಾದರೆ ಇಡೀ ದೇಶದ ಜನರಲ್ಲಿ ಭೀತಿ, ಆತಂಕ ಹುಟ್ಟಿಸಿದ ಚಾನೆಲ್‌ಗಳ ಭಯೋತ್ಪಾದನೆಯದ್ದು ಇನ್ನೊಂದು ತೂಕ.

*******

ಶುಕ್ರವಾರ ಎನ್‌ಎಸ್‌ಜಿ ಕಮ್ಯಾಂಡೋಗಳು ನಾರಿಮನ್ ಹೌಸ್, ತಾಜ್, ಒಬೆರಾಯ್‌ಗಳಲ್ಲಿ ಅಂತಿಮ ಕಾರ್ಯಾಚರಣೆ ನಡೆಸುತ್ತಿದ್ದ ಹೊತ್ತಿನಲ್ಲೇ ಮಧ್ಯಾಹ್ನದ ಸುಮಾರಿಗೆ ಎಲ್ಲ ಚಾನೆಲ್‌ಗಳು ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ವಿಟಿ ಸ್ಟೇಷನ್‌ನಲ್ಲಿ ಮತ್ತೆ ಗುಂಡಿನ ದಾಳಿ ಎಂಬ ಸುದ್ದಿ ಬಿತ್ತರಿಸತೊಡಗಿದವು.

ಎರಡು ಸುತ್ತಿನ ಗುಂಡಿನ ದಾಳಿ ನಡೆದಿದೆ. ಜನ ಭಯಭೀತರಾಗಿ ಓಡುತ್ತಿದ್ದಾರೆ ಎಂದು ಪುಂಖಾನುಪುಂಖ ವರದಿಗಳು ಪ್ರಸಾರವಾದವು. ಇಡೀ ಮುಂಬೈಗೆ ಹುಚ್ಚು ಹಿಡಿಸುವಂಥ ಸನ್ನಿವೇಶ ಅದು. ಇನ್ನೇನು ಕಮ್ಯಾಂಡೋ ಆಪರೇಷನ್ ಮುಗಿದು ಎಲ್ಲವೂ ಸರಿಹೋಗಲಿದೆ ಎಂದುಕೊಂಡಿದ್ದ ಮುಂಬೈ ನಿವಾಸಿಗಳು ಸ್ಫೋಟಗೊಳ್ಳಲು ಮತ್ತೇನು ಬೇಕಿತ್ತು?

ಕೆಲಕ್ಷಣಗಳಲ್ಲೇ ಮುಂಬೈ ಪೊಲೀಸರು ಈ ಸುದ್ದಿ ಸುಳ್ಳು ಎಂಬ ಪ್ರಕಟಣೆ ನೀಡಿದರು. ಹಾಗೆ ಪ್ರಕಟಣೆ ನೀಡಿದ ನಂತರವೂ ಹೊಸದಾಗಿ ದಾಳಿ ನಡೆದಿರುವುದು ನಿಜ ಎಂದೇ ಚಾನೆಲ್‌ಗಳು ಹೇಳುತ್ತಿದ್ದವು.

ಟೈಮ್ಸ್ ನೌ ಚಾನೆಲ್‌ನಲ್ಲಿ ವರದಿಗಾರ್ತಿಯೊಬ್ಬಳು ಅಕ್ಷರಶಃ ಅಳುತ್ತ, ‘ಅರ್ನಾಬ್ ನಾನು ವಿಟಿ ಸ್ಟೇಷನ್ ಬಳಿ ಇದ್ದೇನೆ. ಎರಡು ಸುತ್ತಿನ ಗನ್ ಫೈರ್ ಮುಗಿದು ಈಗ ಮೂರನೇ ಸುತ್ತಿನ ಫೈರಿಂಗ್ ನಡೆಯುತ್ತಿದೆ. ಜನ ದಿಕ್ಕಾಪಾಲಾಗಿ ಓಡುತ್ತಿದ್ದಾರೆಎಂದು ವದರಲಾರಂಭಿಸಿದ್ದಳು.

ಆದರೆ ವಿಚಿತ್ರವೆಂದರೆ ಫೈರಿಂಗ್ ನಡೆದೇ ಇರಲಿಲ್ಲ; ಮತ್ತು ಅದನ್ನು ಮಹಾರಾಷ್ಟ್ರ ಪೊಲೀಸರು ಪದೇಪದೇ ಚಾನೆಲ್‌ಗಳಿಗೆ ಹೇಳಿದರೂ ಅವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ನಡೆಯದ ಗುಂಡಿನ ದಾಳಿಯನ್ನು ನೋಡಿ ಚಾನೆಲ್ ವರದಿಗಾರ್ತಿ ಅಳುತ್ತಾ ವರದಿ ಮಾಡುತ್ತಾಳೆ ಎಂದರೆ ಅದನ್ನು ಹೇಗೆ ಕಲ್ಪಿಸಿಕೊಳ್ಳುವುದು? ಒಂದೇ ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದು. ಅಥವಾ ಆಕೆಯನ್ನು ನಂಬುವವರಿಗೆ ತಲೆಕೆಟ್ಟಿರಬೇಕು.

ಇದಾದ ಕೆಲವು ಕ್ಷಣಗಳಲ್ಲಿ ಸಿಎನ್‌ಎನ್ ಐಬಿಎನ್‌ನ ರಾಜದೀಪ್ ಸರದೇಸಾಯಿ ಇಂಥ ಸುದ್ದಿಯನ್ನು ತಮ್ಮ ಚಾನೆಲ್‌ನಲ್ಲೂ ಪ್ರಸಾರ ಮಾಡಿದ್ದಕ್ಕಾಗಿ ಎಲ್ಲ ವೀಕ್ಷಕರ ಕ್ಷಮೆ ಕೋರುವುದಾಗಿ ಹೇಳಿದರು. ಪೊಲೀಸ್ ಇಲಾಖೆಯ ಒತ್ತಡದಿಂದಾಗಿ ಅರ್ನಾಬ್ ಗೋಸ್ವಾಮಿ ಸಹ ನಾವು ಸ್ಪೆಕ್ಯುಲೇಷನ್ ಮಾಡುವುದಿಲ್ಲ ಎಂದು ಪದೇ ಪದೇ ಹೇಳಿದರು.

ಆದರೆ ಅಷ್ಟು ಹೊತ್ತಿಗೆ ಅನಾಹುತ ಸಂಭವಿಸಿತ್ತು. ವಿಟಿ ಸ್ಟೇಷನ್ ಬಳಿ ಜನ ದಿಕ್ಕೆಟ್ಟು ಓಡತೊಡಗಿದ್ದರು. ಸಮೀಪದ ಆಸ್ಪತ್ರೆಯಿಂದ ರೋಗಿಗಳ ಸಮೇತ ಎಲ್ಲರೂ ಜೀವ ಕೈಯಲ್ಲಿ ಹಿಡಿದು ದಿಕ್ಕಾಪಾಲಾಗಿ ಓಡಿದರು. ಇದನ್ನೂ ಸಹ ಈ ಚಾನೆಲ್‌ಗಳು ಪ್ರಸಾರ ಮಾಡಿ ‘ಪುಣ್ಯ ಕಟ್ಟಿಕೊಂಡವು.

********

ಚಾನೆಲ್‌ಗಳು ಸಹ ಭಯೋತ್ಪಾದನೆಯಲ್ಲಿ ತೊಡಗಿರುವುದನ್ನು ಗಮನಿಸಿದ ಮುಂಬೈ ಪೊಲೀಸರು ಇಡೀ ನಗರದಾದ್ಯಂತ ಕೇಬಲ್ ಟಿವಿಗಳನ್ನು ಬಂದ್ ಮಾಡಿಸಿದರು. ಚಾನೆಲ್‌ಗಳ ಹರಡುವ ಸುಳ್ಳು ಸುದ್ದಿಯನ್ನು ತಡೆಯುವ ಸಾಹಸ ಮಾಡುವುದಕ್ಕಿಂತ ಚಾನೆಲ್‌ಗಳ ಪ್ರಸಾರ ಬಂದ್ ಮಾಡುವುದೇ ಸುಲಭ ಎಂದು ಅವರು ಭಾವಿಸಿರಬೇಕು.

ಸ್ಪೆಕ್ಯುಲೇಷನ್ ಮಾಡುವುದಿಲ್ಲ ಎಂದು ಘೋಷಿಸುತ್ತ ಕುಳಿತಿದ್ದ ಅರ್ನಾಬ್ ಮತ್ತೆ ತಮ್ಮ ಹಳೆ ವರಸೆಗೆ ಹಿಂದಿರುಗಿದರು. ಮುಂಬೈನಲ್ಲಿ ಚಾನೆಲ್‌ಗಳನ್ನು ಬಂದ್ ಮಾಡಲಾಗಿದೆಯಂತೆ. ನನ್ನ ಮೊಬೈಲ್‌ಗೆ ಎಸ್‌ಎಂಎಸ್‌ಗಳ ಸುರಿಮಳೆಯಾಗುತ್ತಿದೆ.

ಇದು ಮುಂಬೈ ಇತಿಹಾಸದ ಕರಾಳ ದಿನ, ಮಾಧ್ಯಮಗಳ ಇತಿಹಾಸದ ಕರಾಳ ದಿನ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದೆಲ್ಲಾ ಅರಚಾಡತೊಡಗಿದರು.

ಚಾನೆಲ್‌ಗಳು ಬಂದ್ ಆದರೆ ಜನ ಇನ್ನಷ್ಟು ಭೀತರಾಗಬಹುದು. ಏನೋ ಅನಾಹುತ ನಡೆದಿದೆ ಎಂದು ಜನ ಭಾವಿಸಲು ಅವಕಾಶವಿದೆ. ನಾವು ಸಂಯಮದಿಂದಲೇ ವರದಿ ಮಾಡುತ್ತೇವೆ. ಪೊಲೀಸ್ ಇಲಾಖೆಯವರು ಚಾನೆಲ್‌ಗಳನ್ನು ತೆರಯಲಿ ಎಂದು ರಾಜ್‌ದೀಪ್ ಸರ್‌ದೇಸಾಯಿ ಕೊಂಚ ವಿನಯದಿಂದಲೇ ಸಿಎನ್‌ಎನ್ ಐಬಿಎನ್‌ನಲ್ಲಿ ಹೇಳುತ್ತಿದ್ದರು.

********

ತಾಜ್ ಹೋಟೆಲ್‌ನಲ್ಲಿ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಮೀಡಿಯಾಗಳೆಲ್ಲ ಏನು ಮಾಡುತ್ತಿದ್ದವು? ಕೇವಲ ನೂರು ಅಡಿ ಅಂತರದಲ್ಲಿ ನಾವಿದ್ದೇವೆ ಎನ್ನುತ್ತ ಮಲಗಿಕೊಂಡೇ ವರದಿ ಮಾಡಿದರು ನಮ್ಮ ವರದಿಗಾರರು. ಅವರ ಸಾಹಸಕ್ಕೆ ಮೆಚ್ಚೋಣ. ಆದರೆ ಅಂಥ ಹುಚ್ಚಾಟ ಬೇಕಿತ್ತೆ?

ಒಂದು ಗುಂಡು ಮೊಳಗಿದ ತಕ್ಷಣ ತಾಜ್ ಬಳಿ ಮಲಗಿದ ವರದಿಗಾರರು ಟಿವಿ ಪರದೆಗಳ ಮುಂದೆ ಪ್ರತ್ಯಕ್ಷರಾಗಿ ತಾಜಾ ಸುದ್ದಿ ಹೇಳುತ್ತಿದ್ದರು. ಇಡೀ ದೇಶ ಇದನ್ನು ನೋಡುತ್ತಿರುತ್ತದೆ ಎಂಬ ಪರಿವೆಯೇ ಇಲ್ಲದಂತೆ ತಮ್ಮ ಸಾಹಸ ಪ್ರದರ್ಶನಕ್ಕೇ ಎಲ್ಲ ಚಾನೆಲ್‌ಗಳು ಮುಗಿಬಿದ್ದಿದ್ದವು.

ಪೊಲೀಸರು ಪದೇ ಪದೇ ಬಂದು ಮೀಡಿಯಾದವರನ್ನು ಅಲ್ಲಿಂದ ದೂರ ಕಳಿಸಲು ನಡೆಸಿದ ಎಲ್ಲ ಯತ್ನಗಳು ವಿಫಲವಾದವು. ತಮ್ಮ ಸಿಬ್ಬಂದಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿ ಹುತಾತ್ಮರಾಗಲಿ ಎಂದು ಚಾನೆಲ್‌ಗಳ ಒಡೆಯರು ಬಯಸಿದ್ದರೆ?

ಈ ಚಿತ್ರ ಕೇವಲ ನಮ್ಮ ಬಳಿ ಇದೆ, ಈ ಸುದ್ದಿಯನ್ನು ನಾವೇ ಮೊದಲು ಬ್ರೇಕ್ ಮಾಡಿದ್ದು, ನಮ್ಮ ವರದಿಗಾರರು ಕೆಲವೇ ಅಡಿ ದೂರದಲ್ಲಿದ್ದು ವರದಿ ಮಾಡಿದರು, ಒಂದು ಗುಂಡು ನಮ್ಮ ಕ್ಯಾಮೆರಾ ಕ್ರೂ ಸಮೀಪವೇ ಹಾದಿ ಹೋಯಿತು... ಎಂದೆಲ್ಲ ತೀರಾ ಅಸಹ್ಯಕರವಾಗಿ ತಮ್ಮ ಚಾನೆಲ್‌ಗಳ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಯತ್ನಿಸಿದ್ದು ಬೆಂದ ಮನೆಯಲ್ಲಿ ಗಳ ಹಿರಿದಂತೆ ಅಲ್ಲವೆ?

ಮೀಡಿಯಾದವರು ಇದ್ದಾರೆ ಎಂಬ ಕಾರಣಕ್ಕೆ ಉಗ್ರರು ಆ ಭಾಗದಲ್ಲೇ ಹೆಚ್ಚು ಬಾಂಬ್‌ಗಳನ್ನು ಸಿಡಿಸಿದರು, ಗುಂಡಿನ ದಾಳಿ ನಡೆಸಿದರು. ತನ್ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಚಾರ ಗಳಿಸಿದರು ಎಂದು ಬ್ಲಾಗ್ ಒಂದರಲ್ಲಿ ಬರೆದಿದ್ದನ್ನು ಗಮನಿಸಿದೆ. ಯಾಕೆ, ಮೀಡಿಯಾದವರಿಗೆ ಇಷ್ಟು ಸರಳ ಸೂಕ್ಷ್ಮಗಳು ಅರ್ಥವಾಗಲಿಲ್ಲವೆ?

ದಾಳಿಯಿಂದ ಬದುಕುಳಿದ ಬಂದ ಕೆಲ ಅಮೆರಿಕನ್ ಪ್ರಜೆಗಳು ಸಿಎನ್‌ಎನ್ ಚಾನೆಲ್‌ನಲ್ಲಿ ತಾವು ಯಾವ ಕೊಠಡಿಯಲ್ಲಿ ಇದ್ದೆವು ಎಂದು ಪ್ರಸಾರ ಮಾಡಿದ್ದರಿಂದಾಗಿ ಜೀವ ಉಳಿಸಿಕೊಂಡಿದ್ದೇ ಹೆಚ್ಚು ಎಂದು ಹೇಳಿಕೊಂಡಿದ್ದಾರೆ. ಅಲ್ಲಿ ಸಿಕ್ಕಿಬಿದ್ದಿದ್ದ ಜನರ ಪ್ರಾಣದ ಬೆಲೆಗಿಂತ ರೋಚಕ ಸುದ್ದಿಗಳನ್ನು ಉಣಬಡಿಸುವ ಚಾನೆಲ್‌ಗಳ ರಕ್ತದಾಹದ ಅಬ್ಬರವೇ ಹೆಚ್ಚಾಗಿ ಹೋಯಿತಲ್ಲ?

ಭಯೋತ್ಪಾದಕರು ಈ ಬಾರಿ ಮುಂಬೈಗೆ ಕಾಲಿಟ್ಟಾಗಲೇ ವಿದೇಶೀಯರನ್ನು ಗುರಿಯಾಗಿರಿಸಿಕೊಂಡಿದ್ದರು. ಸಾಕಷ್ಟು ವಿದೇಶೀಯರನ್ನು ಕೊಂದು ಹಾಕುವಲ್ಲಿ ಸಫಲರಾದರು. ವಿಶ್ವವೇ ತಮ್ಮನ್ನು ಗಮನಿಸಿಬೇಕು ಎಂದು ಅವರು ಬಯಸಿದ್ದರು. ಅವರ ಬಯಕೆಯಂತೆ ನಮ್ಮ ಮೀಡಿಯಾಗಳು ಭಯೋತ್ಪಾದಕರ ವಿಧ್ವಂಸಕ ದೃಶ್ಯಗಳನ್ನು ಲೈವ್ ಪ್ರಸಾರ ಮಾಡಿದವು. ಮತ್ತು ಅವರ ಉದ್ದೇಶವನ್ನು ಈಡೇರಿಸಿದವು.

*******

ಮೀಡಿಯಾಗಳು ಯಾವ ಪರಿಯ ಭಯೋತ್ಪಾದನೆ ಹುಟ್ಟು ಹಾಕಿದವೆಂದರೆ ಗಾನಕೋಗಿಲೆ ಲತಾ ಮಂಗೇಶ್ಕರ್ ಟಿವಿಗಳನ್ನು ನೋಡುತ್ತ ೩೦೦ ಬಾರಿ ಅತ್ತುಬಿಟ್ಟೆ ಎಂದು ಹೇಳಿಕೆ ನೀಡಿದರು. ಪಾಪ ಅವರಿಗೆ ಗೊತ್ತಿರದ ವಿಷಯವೆಂದರೆ ಟಿವಿ ಚಾನೆಲ್‌ಗಳು ಒಂದೇ ದೃಶ್ಯವನ್ನು ಸಾವಿರ ಬಾರಿ ತೋರಿಸಿ, ಅದನ್ನು ಈಗಷ್ಟೆ ನಡೆದಿದೆ ಎಂಬಂತೆ ಬಿಂಬಿಸುತ್ತಾರೆ. ಕಡೇ ಪಕ್ಷ ಆ ದೃಶ್ಯದ ಮೇಲ್ಭಾಗದಲ್ಲಿ ಕಾಣಿಸುವ ಲೈವ್ ಎಂಬ ಅಕ್ಷರಗಳನ್ನು ಕಿತ್ತುಹಾಕಬೇಕೆನ್ನುವ ಸೌಜನ್ಯವೂ ಅವರಿಗಿರುವುದಿಲ್ಲ.

ಟಿವಿಗಳ ಮುಂದೆ ಕುಳಿತ ಅಮಾಯಕ ಜನರು, ಇನ್ನೊಂದು ಗುಂಡು ಬಿತ್ತು, ಇನ್ನೊಂದು ಬಾಂಬು ಸ್ಫೋಟಿಸಿತು ಎಂದು ಗಾಬರಿಪಡುತ್ತಲೇ, ಬೆದರುತ್ತಲೇ ಕಾಲ ಕಳೆಯುತ್ತಾರೆ.

ಹಾಗಂತ ಮುಂಬೈನಲ್ಲಿ ನಡೆದ ಘಟನೆ ಸಾಮಾನ್ಯ ಪ್ರಮಾಣದ್ದು ಎಂದೇನು ಹೇಳುತ್ತಿಲ್ಲ. ನಿಸ್ಸಂಶಯವಾಗಿ ಇದು ಭಾರತದ ಮೇಲೆ ನಡೆದ ಬಹುದೊಡ್ಡ ಆಕ್ರಮಣ. ಇದನ್ನು ಸುಲಭವಾಗಿ ಅರಗಿಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ ಚಾನೆಲ್‌ಗಳು ಇಂಥ ದೊಡ್ಡ ಆಕ್ರಮಣವೊಂದನ್ನು ಇನ್ನಷ್ಟು ಬೆಳೆಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದವು.

*******

ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಕಾರ್ಯಾಚರಣೆ ಮುಗಿದ ನಂತರ ತಾಜ್ ಹೋಟೆಲಿಗೆ ಭೇಟಿ ನೀಡಿದರು. ಆಗ ಅವರೊಂದಿಗೆ ಪುತ್ರ, ಬಾಲಿವುಡ್ ನಟ ರಿತೇಶ್ ದೇಶಮುಖ್ ಇದ್ದರು. ಅವರೊಂದಿಗೆ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ರಾಮ್‌ಗೋಪಾಲ್ ವರ್ಮಾ ಸಹ ಇದ್ದರು.

ದೇಶಮುಖ್ ತಮ್ಮೊಂದಿಗೆ ಹಿರಿಯ ಅಧಿಕಾರಿಗಳನ್ನು ಕರೆದೊಯ್ದಿದ್ದರೆ, ಸಚಿವ ಸಂಪುಟದ ಸದಸ್ಯರನ್ನು ಕರೆದೊಯ್ದಿದ್ದರೆ ಯಾರ ಆಕ್ಷೇಪಣೆಯೂ ಇರಲಿಲ್ಲ. ರಿತೇಶ್‌ಗೆ, ವರ್ಮಾಗೆ ಅಲ್ಲೇನು ಕೆಲಸವಿತ್ತು. ಸಹಜವಾಗಿಯೇ ಇದು ವಿವಾದಕ್ಕೆ ಕಾರಣವಾಯಿತು. ದೇಶಮುಖ್ ಉದ್ದೇಶಪೂರ್ವಕವಾಗಿ ಅವರನ್ನು ಕರೆದೊಯ್ದಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಉದ್ದೇಶಪೂರ್ವಕವಾಗಿ ಕರೆದೊಯ್ಯದಿದ್ದರೂ ಅದು ಅಕ್ಷಮ್ಯ ಎಂಬುದರಲ್ಲಿ ಎರಡು ಮಾತಿಲ್ಲ.

ಚಾನೆಲ್‌ಗಳು ಯಥಾಪ್ರಕಾರ ದೇಶಮುಖ್ ವಿರುದ್ಧ ಹರಿಹಾಯುತ್ತಿವೆ. ವರ್ಮಾ ಮುಂದಿನ ಸಿನಿಮಾಗೆ ತಯಾರಿ ನಡೆಸಲು ಅಲ್ಲಿಗೆ ಹೋಗಿದ್ದಾನೆ ಎಂಬಲ್ಲಿಂದ ಹಿಡಿದು, ಟೆರರ್ ಟೂರಿಸಮ್, ಪಿಕ್ನಿಕ್ ಮಾಡಿದರು ಎನ್ನುವವರೆಗೆ ಟೀಕೆಗಳು ಮುಂದುವರೆಯುತ್ತಿವೆ. ದೇಶಮುಖ್ ಅವರನ್ನು ಎಲ್ಲರೂ ಖಂಡಿಸಬೇಕು, ನಿಜ.

ಆದರೆ ಇದೇ ಚಾನೆಲ್‌ಗಳು ಮುಂಬೈನಲ್ಲಿ ನಡೆದ ಇಡೀ ದೃಶ್ಯಾವಳಿಗಳನ್ನು ಡಾಕ್ಯುಮೆಂಟರಿ ರೂಪದಲ್ಲಿ ಪ್ರಸ್ತುತಪಡಿಸುತ್ತ ಇದೇ ವರ್ಮಾನ ಅಂಡರ್‌ವರ್ಲ್ಡ್ ಸಿನಿಮಾಗಳ ಮ್ಯೂಸಿಕ್ ಟ್ಯೂನ್‌ಗಳನ್ನು ಹಿನ್ನೆಲೆಯಲ್ಲಿ ಬಳಸಿ ಮಾಡಿದ್ದೇನು? ಇಡೀ ಮುಂಬೈ ದೃಶ್ಯಾವಳಿಗಳನ್ನು ಇವರು ಹಾಲಿವುಡ್ ಆಕ್ಷನ್ ಸಿನಿಮಾಗಳ ಹಾಗೇ ತೋರಿಸಲಿಲ್ಲವೆ?

ಸಿನಿಮಾಗಳಲ್ಲಿ ಇರುವ ನಾಟಕೀಯತೆ, ಹಿನ್ನೆಲೆ ಸಂಗೀತ, ವೈಭವ ಎಲ್ಲವೂ ಇವರು ತೋರಿಸುವ ತುಣುಕುಗಳಲಿಲ್ಲವೆ?

*******

ಜನ ಆಕ್ರೋಶಗೊಂಡಿದ್ದಾರೆ. ಸಿಟ್ಟು ನೆತ್ತಿಗೇರಿದೆ. ತಮ್ಮನ್ನು ರಕ್ಷಿಸುವ ಜನರೆಲ್ಲ ಎಲ್ಲಿ ಹೋದರು ಎಂದು ಕೇಳುತ್ತಿದ್ದಾರೆ. ಟಿವಿ ಚಾನೆಲ್‌ಗಳು ಇದನ್ನು ಬಳಸಿಕೊಂಡು ಈಗ ರಾಜಕಾರಣಿಗಳ ವಿರುದ್ಧ ಯುದ್ಧ ಸಾರಿವೆ.

ಈ ಪ್ರಕ್ರಿಯೆಯಲ್ಲಿ ಹರಿದುಬರುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿ. ದೇಶದ ಆಡಳಿತ ಸೂತ್ರವನ್ನು ಎನ್‌ಎಸ್‌ಜಿಯೇ ನಡೆಸಬೇಕು, ಮಿಲಿಟರಿ ಆಡಳಿತ ಬರಬೇಕು, ಅಮೆರಿಕ ದೇಶವು ಇರಾಕ್ ಹಾಗು ಅಫಘಾನಿಸ್ತಾನಗಳ ಮೇಲೆ ನಡೆಸಿದಂತೆ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕು, ರಾಜಕಾರಣಿಗಳಿಗೆ ಇರುವ ಭದ್ರತೆ ತೆಗೆದುಹಾಕಿ ಅವರನ್ನು ಸಾಯಲು ಬಿಡಬೇಕು... ಇಂಥದ್ದೇ ತಲೆಬುಡವಿಲ್ಲದ ಸುಧಾರಣಾ ಪ್ರಸ್ತಾಪಗಳು.

ಬೆಂಗಳೂರಿನಲ್ಲಿ ೧೧-೩೦ಕ್ಕೆ ಡಿಸ್ಕೋಥೆಕ್‌ಗಳನ್ನು ಬಂದ್ ಮಾಡಿ ಎಂದರೆ ಗಾಂಧಿ ಪ್ರತಿಮೆ ಬಳಿ ಬಂದು ಪ್ರತಿಭಟನೆ ನಡೆಸುವ ಜನರೇ ಇಂಥ ಪ್ರಸ್ತಾಪಗಳನ್ನು ಒಡ್ಡುತ್ತಿದ್ದಾರೆ ಎಂಬುದು ವಿಶೇಷ. ಒಂದು ಹೊಟೆಲ್‌ನಲ್ಲಿ ಸಣ್ಣ ಚೆಕಿಂಗ್ ವ್ಯವಸ್ಥೆಗೆ ಒಳಗಾಗಲು ಕೊಸರಾಡುವ ಜನ ಮಿಲಿಟರಿ ಆಡಳಿತದ ಬಗ್ಗೆ ಮಾತನಾಡುತ್ತಾರೆ ಎಂಬುದೇ ದೊಡ್ಡ ತಮಾಶೆ. ಮಿಲಿಟರಿ ಆಡಳಿತವು ದೇಶದ ಜನರ ಬದುಕುವ ಹಕ್ಕನ್ನು ನಿರಾಕರಿಸುತ್ತದೆ ಎಂಬ ಸರಳ ಸತ್ಯ ಈ ಪುಣ್ಯಾತ್ಮರಿಗೆ ಗೊತ್ತಿಲ್ಲದಿರುವಷ್ಟು ಅಮಾಯಕರೆ ಈ ಜನ? ಮಹಾತ್ಮಗಾಂಧಿ, ಇಂದಿರಾಗಾಂಧಿ, ರಾಜೀವ್‌ಗಾಂಧಿ..ಹೀಗೆ ಹಲವು ಮಂದಿ ಈಗಾಗಲೇ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದಾರೆ. ನಮ್ಮ ವಿಐಪಿಗಳ ಭದ್ರತೆ ಹಿಂದಕ್ಕೆ ತೆಗೆದುಕೊಂಡು, ಅವರುಗಳೂ ಸತ್ತುಹೋದರೆ ದೇಶ ಉದ್ಧಾರವಾಗುತ್ತದೆಯೇ?

ಪಾಕಿಸ್ತಾನ ಒಂದು ಅಣು ರಾಷ್ಟ್ರ. ಹೆಸರಿಗೆ ಅಲ್ಲಿರುವುದು ಪ್ರಜಾಪ್ರಭುತ್ವ ಸರ್ಕಾರವಾದರೂ ಅಲ್ಲಿರುವುದು ಅರಾಜಕ ವ್ಯವಸ್ಥೆ. ಆ ದೇಶದ ಅಧ್ಯಕ್ಷನಿಗೆ ಮಾನಸಿಕ ಸ್ಥಿಮಿತ ಇಲ್ಲ ಎಂಬ ಮಾಹಿತಿಗಳಿವೆ. ಐಎಸ್‌ಐ, ಸೇನೆಯಂಥ ಅಪಾಯಕಾರಿ ಅಂಗಗಳೂ ಸಹ ಅಧ್ಯಕ್ಷ, ಪ್ರಧಾನಿಯ ಹಿಡಿತದಲ್ಲಿ ಇಲ್ಲ.

ಆ ದೇಶ ಎಂಥ ದುರ್ಗತಿಯಲ್ಲಿದೆ ಎಂದರೆ ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಗೆ ತಯಾರಿಸಲಾದ ಮುಜಾಹಿದಿನ್‌ಗಳು ಇವತ್ತು ಪಾಕಿಸ್ತಾನವನ್ನೇ ನುಂಗುವಷ್ಟು ಬೆಳೆದಿದ್ದಾರೆ. ಅವರು ಸಾಕಿದ ಘಟಸರ್ಪಗಳು ಅವರನ್ನೇ ಕಡಿಯುತ್ತಿವೆ. ಇಂಡಿಯಾದಲ್ಲಿ ನಡೆಯುವ ಹಾಗೆಯೇ ಪಾಕಿಸ್ತಾನದಲ್ಲೂ ಭಯೋತ್ಪಾದಕರ ಸಾವಿನ ಆಟಗಳು ನಡೆಯುತ್ತಿವೆ.

ಒಂದೆಡೆ ಚೀನಾ, ಮತ್ತೊಂದೆಡೆ ಅಮೆರಿಕದ ಚದುರಂಗದ ಆಟದ ಕಾಯಿಯಾಗಿರುವ ಪಾಕಿಸ್ತಾನ ನಿಜಕ್ಕೂ ಕ್ಷೆಭೆಯಲ್ಲಿದೆ. ಇಂಥ ಅಸ್ವಸ್ಥ ಮನಸ್ಸಿನ ರಾಷ್ಟ್ರವೊಂದರ ಮೇಲೆ ಏಕಾಏಕಿ ಯುದ್ಧ ಹೂಡಿದರೆ, ಒಂದೊಮ್ಮೆ ಅದು ತನ್ನಲ್ಲಿನ ಅಣ್ವಸ್ತ್ರವನ್ನು ಭಾರತದ ಮೇಲೆ ಪ್ರಯೋಗಿಸಿದರೆ ಅದರ ಪರಿಣಾಮಗಳೇನಾಗುತ್ತವೆ? ಅದರ ಬಗ್ಗೆ ಯೋಚಿಸುವವರ್‍ಯಾರು?

******

ಟಿವಿ ಚಾನೆಲ್‌ಗಳಲ್ಲಿ ಇಂಥ ವಿಷಯಗಳನ್ನು ಚರ್ಚೆ ಮಾಡಲು ಬರುತ್ತಿರುವ ಎಕ್ಸ್‌ಪರ್ಟ್‌ಗಳಾದರೂ ಯಾರು? ಕಿರುತೆರೆ ನಟಿ ಸ್ಮೃತಿ ಇರಾನಿ, ಬಾಲಿವುಡ್ ನಟ ರಾಹುಲ್ ಬೋಸ್ ತರಹದ ಸಿನಿಮಾ ಮುಖಗಳು, ಪ್ರಸಾದ್ ಬಿದ್ದಪ್ಪನ ತರಹದ ಫ್ಯಾಷನ್ ಗುರುಗಳು, ದೇಶದ ಸಾಮಾಜಿಕ ಬದುಕಿನ ಚಿತ್ರವೇ ಗೊತ್ತಿಲ್ಲದ ಒಂದಷ್ಟು ಟೆಕ್ಕಿಗಳು, ಉದ್ಯಮಿಗಳು, ಡಿಜೆಗಳು, ಎನ್‌ಜಿಓಗಳ ಹೆಸರಿನ ಕೆಲ ಸಮಾಜಸೇವಕರು...

ಯಾಕೆ ತಮ್ಮ ಪ್ಯಾನೆಲ್‌ನಲ್ಲಿ ಒಬ್ಬ ರಿಕ್ಷಾವಾಲನನ್ನು, ಒಬ್ಬ ಕೂಲಿ ಕಾರ್ಮಿಕನನ್ನು, ಒಬ್ಬ ಬಸ್ ಡ್ರೈವರನ್ನು, ಒಬ್ಬ ಕೊಳಗೇರಿ ಹೆಂಗಸನ್ನು ಇವರು ಕೂಡಿಸಿಕೊಳ್ಳುವುದಿಲ್ಲ? ಯಾಕೆ ಅವರ ಅಭಿಪ್ರಾಯಗಳನ್ನು ಪಡೆಯುವುದಿಲ್ಲ? ಅವರ್‍ಯಾರೂ ಈ ದೇಶದ ಪ್ರಜೆಗಳಲ್ಲವೆ? ಈ ದೇಶದ ಬಡ ಶ್ರಮಿಕ ಜನವರ್ಗದ ಅಭಿಪ್ರಾಯಗಳನ್ನು ಕೇಳಿ ನೋಡಿ, ಈ ಟಿವಿ ಚಾನೆಲ್‌ಗಳ ಪ್ಯಾನೆಲ್‌ಗಳಲ್ಲಿ ಕುಳಿತು ಮಾತನಾಡುವ ಪ್ರಭೃತಿಗಳಿಗಿಂತ ಸೆನ್ಸಿಬಲ್ ಆಗಿ ಅವರು ಮಾತನಾಡಬಲ್ಲರು.

ವಿ ನೀಡ್ ಟು ಡು ಸಮ್‌ಥಿಂಗ್ ಎಂದು ಸಾರಿ ಹೋಗುವ ಈ ಜನರು ಜವಾಬ್ದಾರಿ ತಮ್ಮ ಮೇಲೆ ತೆಗೆದುಕೊಳ್ಳಲು ಹಿಂಜರಿಯುವವರು. ಚುನಾವಣೆಗೆ ಸ್ಪರ್ಧಿಸಿ ಎಂದರೆ ಮುಖಮುಚ್ಚಿಕೊಳ್ಳುವವರು. ಕಡೆ ಪಕ್ಷ ಮತದಾನವನ್ನಾದರೂ ಮಾಡಿ ಅಂದರೆ ಅವರಿಗೆ ಚುನಾವಣೆಯ ದಿನ ಬ್ಯುಸಿ ಷೆಡ್ಯೂಲ್‌ಗಳಿರುತ್ತವೆ!

ಎನ್‌ಡಿಟಿವಿಯ ಬರ್ಖಾ ದತ್ ದಾಳಿಯ ನಂತರ ನಡೆಸಿಕೊಟ್ಟ ವಿ ದ ಪೀಪಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಏಕೈಕ ರಾಜಕಾರಣಿ ಅಭಿಷೇಕ್ ಸಿಂಗ್ವಿ. ಈ ಕಾರ್ಯಕ್ರಮಕ್ಕೆ ಬಂದರೆ ಜನರ ಕೈಯಲ್ಲಿ ಹೊಡೆಸಿಕೊಳ್ಳಬೇಕಾಗುತ್ತದೆ ಎಂದು ಯಾರೂ ಬಂದಿಲ್ಲ ಎಂದು ಬರ್ಖಾ ಬಾಲಿಷವಾಗಿ ಹೇಳಿ ಜನರನ್ನು ಕೆರಳಿಸುತ್ತಿದ್ದರು.

ಎಲೆಕ್ಟ್ರಾನಿಕ್ ಮಾಧ್ಯಮಗಳ ಕೆಲ ಪತ್ರಕರ್ತರು ದೇಶದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಮತ್ತು ಅದೇ ರೀತಿಯ ಉನ್ನತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರಿಗೆ ಇಂಥ ಪ್ರಶಸ್ತಿ ಕೊಟ್ಟವರು ಯಥಾಪ್ರಕಾರ ರಾಜಕಾರಣಿಗಳೇ.

ರಾಜಕಾರಣಿಗಳ ವಿರುದ್ಧ ಹರಿಹಾಯುತ್ತಿರುವ ಈ ಪತ್ರಕರ್ತರಲ್ಲಿ ಕೆಲವರಾದರೂ ತಮ್ಮ ಪ್ರಶಸ್ತಿಗಳನ್ನು ವಾಪಾಸು ಮಾಡಿ ಪ್ರತಿಭಟನೆ ದಾಖಲಿಸುವರೋ ಎಂದು ಕಾಯುತ್ತಿದ್ದೇನೆ!

**********

ಮುಂಬೈ ಬಾಂಬ್ ಸ್ಫೋಟದ ಪರಿಣಾಮಗಳು ವಿಪರೀತ. ತೀರಾ ಗಂಭೀರವೆಂದರೆ ದೇಶದಲ್ಲಿ ಮತ್ತೆ ಧರ್ಮದ ಹೆಸರಿನಲ್ಲಿ ಧ್ರುವೀಕರಣ ನಡೆಯುತ್ತಿದೆ. ಮುಸ್ಲಿಮರು ಸುಲಭವಾಗಿ ಹಿಂದೂ ಮೂಲಭೂತವಾದಿಗಳ ಸಾಫ್ಟ್ ಟಾರ್ಗೆಟ್ ಆಗುವ ಸಾಧ್ಯತೆಗಳೂ ಇವೆ.

ನಿಜ, ಭಾರತೀಯ ಮುಸ್ಲಿಮರಲ್ಲೂ ಭಯೋತ್ಪಾದಕರನ್ನು ಬೆಂಬಲಿಸುವ, ಭಯೋತ್ಪಾದನೆಯಲ್ಲಿ ತೊಡಗಿಕೊಂಡಿರುವ ಸಣ್ಣ ಗುಂಪೊಂದಿದೆ. ಗಡಿಯಾಚೆಗಿನ ಭಯೋತ್ಪಾದನೆ ಇಂದು ದೇಶದ ಒಳಗಿನ ಭಯೋತ್ಪಾದನೆಯಾಗಿ ರೂಪಾಂತರಗೊಳ್ಳುತ್ತಿದೆ. ಅದೇ ಸಂದರ್ಭದಲ್ಲಿ ಮುಸ್ಲಿಮರು ನಡೆಸುವ ಭಯೋತ್ಪಾದನೆಗೆ ಪ್ರತಿಯಾಗಿ ಹಿಂದೂಗಳ ಭಯೋತ್ಪಾದನೆಯೂ ಆರಂಭಗೊಂಡಿದೆ.

ಮಾಲೇಗಾಂವ್ ಸ್ಫೋಟದ ಪ್ರಕರಣ ಹಿಂದೂ ಭಯೋತ್ಪಾದನೆಯ ಮೊದಲ ಪ್ರಕರಣ ಎಂದು ಸುಳ್ಳು ಸುಳ್ಳೇ ಹೇಳುವುದು ಬೇಡ. ಬಾಬರಿ ಮಸೀದಿ ಧ್ವಂಸದಿಂದ ಹಿಡಿದು ಗುಜರಾತ್ ನರಮೇಧದವರೆಗೆ ಹಿಂದೂ ಮೂಲಭೂತವಾದಿಗಳು ನಡೆಸಿದ ದುಷ್ಕೃತ್ಯಗಳೂ ಸಹ ಭಯೋತ್ಪಾದನೆಯೇ ಎಂಬುದನ್ನು ಮರೆಮಾಚುವಂತಿಲ್ಲ.

ಮಾಲೆಗಾಂವ್ ಸ್ಫೋಟದ ತನಿಖೆ ನಡೆಸಿದ್ದ ಮುಂಬೈ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಭಯೋತ್ಪಾದಕರ ಗುಂಡಿಗೆ ಬಲಿಯಾದರು. ಒಂದು ವೇಳೆ ಅವರು ಬದುಕಿದ್ದರೆ ಇವತ್ತು ಅವರನ್ನು ಹೀರೋ ಮಾಡಿರುವ ಜನರೆಲ್ಲ ಅವರ ವಿರುದ್ಧ ಕೊಳಕುಶಬ್ದಗಳಲ್ಲಿ ಮಾತನಾಡುತ್ತಿದ್ದರು. ಇಡೀ ಮುಂಬೈ ದಾಳಿಯ ಹೊಣೆಯನ್ನು ಕರ್ಕರೆ ತಲೆಗೆ ಹೊರಿಸಿ, ಆತನನ್ನು ಮಾನಸಿಕವಾಗಿ ಸಾಯಿಸಿಬಿಡುತ್ತಿದ್ದರು. ಇದರ ಅರಿವಿರುವ ಕರ್ಕರೆ ಪತ್ನಿ ನರೇಂದ್ರ ಮೋದಿ ಕೊಡಲು ಬಯಸಿದ್ದ ಭಕ್ಷೀಸನ್ನು ತಿರಸ್ಕರಿಸಿದರು.

ದೇಶ ಇಂದು ಒಗ್ಗಟ್ಟಾಗಿ, ಎದುರಾಗಿರುವ ಸಂಕಟಗಳಿಗೆ ಉತ್ತರ ಕಂಡುಕೊಳ್ಳಬೇಕು. ದೇಶಕ್ಕಾಗಿ ಮಡಿದ ವೀರಯೋಧರ ತ್ಯಾಗ-ಬಲಿದಾನಗಳು ವ್ಯರ್ಥವಾಗದಂತೆ ನಮ್ಮ ಆಡಳಿತ ವ್ಯವಸ್ಥೆ ಕ್ರಮಕೈಗೊಳ್ಳಬೇಕು. ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಏನೇನು ಮಾಡಲು ಸಾಧ್ಯವೋ ಅದೆಲ್ಲವನ್ನೂ ನಮ್ಮ ಸರ್ಕಾರಗಳು ಮಾಡಬೇಕು. ಸಿನಿಕ ಪ್ರತಿಕ್ರಿಯೆಗಳ ಅಬ್ಬರದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡಹುವ ಪ್ರಯತ್ನಗಳು ಸಲ್ಲದು. ದೇಶದ ಧರ್ಮದ ಹೆಸರಿನಲ್ಲಿ ಸಂಪೂರ್ಣ ಒಡೆದುಹೋಗದಂತೆ ತಡೆಯಬೇಕಾಗಿರುವುದು ತಕ್ಷಣದ ಅಗತ್ಯ. ಹಿಂದೂಗಳು ತಮ್ಮೊಳಗಿನ ಭಯೋತ್ಪಾದಕರ ವಿರುದ್ಧ, ಮುಸ್ಲಿಮರು ತಮ್ಮೊಳಗಿನ ಭಯೋತ್ಪಾದಕರ ವಿರುದ್ಧ ಹೋರಾಡುವಂತಾಗಬೇಕು. ಚಾನೆಲ್‌ಗಳು ಇಂಥ ವಿಷಯಗಳಿಗೆ ಆದ್ಯತೆ ನೀಡುವ ಬದಲು ನಕ್ವಿ, ಆರ್.ಆರ್.ಪಾಟೀಲ್, ದೇಶಮುಖ್, ಅಚ್ಯುತಾನಂದನ್ ಇತ್ಯಾದಿ ವ್ಯಕ್ತಿಗಳ ವಿರುದ್ಧ ಸಮರ ಸಾರುತ್ತಲೇ ಕುಳಿತಿದ್ದರೆ ಅವರ ಟಿಆರ್‌ಪಿ ಹೆಚ್ಚುತ್ತದೆಯೇ ಹೊರತು ದೇಶ ಉದ್ಧಾರವಾಗಲಾರದು.

ಇಡೀ ಜಗತ್ತಿಗೆ ಬುದ್ಧಿ ಹೇಳುವ ಚಾನೆಲ್‌ಗಳ ಜನ ಇದನ್ನು ಗಮನಿಸುವರೆ?
ಚಾನೆಲ್‌ಗಳು ಹೇಳುತ್ತಿರುವ ಮಾತನ್ನು ಅವರಿಗೇ ಅನ್ವಯಿಸಿ ಹೇಳುವುದಾದರೆ...
enough is enough!

********