ಇಲ್ಲಿ ಸುಡುವ ಧಗೆಯ ನಡುಬೇಸಿಗೆ
ಬೆಂಕಿಯ ಹೊಕ್ಕು ಬಂದಿದೆ ಗಾಳಿ
ಕೊತಕೊತನೆ ಕುದಿಯುತ್ತಿದೆ ರಕ್ತ
ಅದನ್ನು ತಣಿಸಲು ಬಿರುಮಳೆಯೇ ಬೀಳಬೇಕು
ಬಟ್ಟೆ ಕಳಚಿ ಅಂಗಾತ ಮಲಗಿದ್ದೇನೆ
ಫ್ಯಾನು ಗಿರಗಟ್ಟಲೆಯಂತೆ ಸುತ್ತುತ್ತಿದೆ
ಅದಕ್ಕೂ ಹುಚ್ಚು ಆವೇಶ
ಅದರ ನೆರಳು ಗೋಡೆಯ ಮೇಲೆ ಏಕತ್ರಗೊಂಡಿದೆ
ಕೆಟ್ಟ ಮುಲುಕಾಟ, ವಿಕಾರ ಚಿತ್ರ
ಒಂದು ಸಣ್ಣ ತಂಪು ಗಾಳಿ ಕಿಟಕಿಯೊಳಗಿಂದ
ತೂರಿ ಬಂದು ಹಾಗೇ ವಾಪಾಸಾಗಿದೆ
ಬರದೇ ಇದ್ದಿದ್ದರೆ ಒಳಿತಿತ್ತು
ಇನ್ನು ಈ ಧಗೆಯ ಸಹಿಸಲಾರೆ
ನಿದ್ರೆಯಲ್ಲೂ ಅದು ನನ್ನ ಕೊಂದು ತಿನ್ನುತ್ತದೆ
ಮೈಯೆಲ್ಲಾ ಬೆವರಲ್ಲಿ ಒದ್ದೆಮುದ್ದೆ
ಹಿಂಡಿಹಿಂಡಿ ಹರಿದುಹೋಗುತ್ತಿರುವುದು
ನನ್ನದೇ ರಕ್ತವೇ?
ಜೀವ ಬಸಿದು ಬಸಿದು ಸೋರಿಹೋಗಿ
ಒಣಕಲು ಮೂಳೆಗೂಡುಗಳಷ್ಟೆ ಉಳಿದಿವೆ
ಹುಡಿಯಾಗಲಿನ್ನೂ ಅವಸರವಿಲ್ಲ
ನಾಗರಿಕತೆಯ ಮಣ್ಣ ಮೇಲೆ
ಹೊಸ ಹನಿಗಳು ಬೀಳಬಹುದು
ಮೊದಲ ಮಳೆಗೆ ಮಣ್ಣೂ ಪುಳಕಗೊಳ್ಳಬಹುದು
ಮತ್ತೆ ಜೀವ ತುಂಬಿಬಂದು
ಒಡ್ಡುಗಳಿಂದ ಚೈತನ್ಯ ಹರಿಯಬಹುದು
ಬಹುದು, ಬಹುದು, ಬಹುದು
ಸದ್ಯಕ್ಕೆ ನಾನು ತಹತಹ ಕುದಿಯುತ್ತಿದ್ದೇನೆ
ನನ್ನ ಅಸ್ತಿತ್ವ ನೋಡಿಕೊಳ್ಳಲು ಇದು ಒಳ್ಳೆಯ ಕಾಲ
No comments:
Post a Comment