ಇದು ನನಗೆ ತುಂಬ ಮಹತ್ವದ ಕಾರ್ಯಕ್ರಮ. ಭಾರತೀಯ ಸೇನೆಯ ಸಂಸ್ಥೆಯಾಗಿರುವ ೫೧೫ ಭೂಸೇನಾ ಕಾರ್ಯಾಗಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೨೧ನೇ ಜನ್ಮದಿನಾಚರಣೆಯನ್ನು ಆಯೋಜಿಸಿ ನನ್ನನ್ನು ಮುಖ್ಯಭಾಷಣಕ್ಕಾಗಿ ಕರೆದಿರುವುದು ನನಗೆ ದೊರೆತ ಗೌರವ ಎಂದೇ ಭಾವಿಸುತ್ತೇನೆ. ಸೇನೆಯಲ್ಲಿ ದುಡಿಯುವವರು ಬಹುತೇಕ ದಮನಿತ ಸಮುದಾಯಗಳಿಗೆ ಸೇರಿದವರೇ ಆಗಿರುತ್ತಾರೆ. ದಮನಿತರಿಗೆ ಧ್ವನಿ ಕೊಟ್ಟ ಬಾಬಾಸಾಹೇಬರನ್ನು ನೆನೆಯುವ ಕಾರ್ಯಕ್ರಮ ಈ ಹಿನ್ನೆಲೆಯಲ್ಲಿ ಅತ್ಯಂತ ಔಚಿತ್ಯಪೂರ್ಣ ಎಂದು ನಾನು ಭಾವಿಸಿದ್ದೇನೆ.
ಗಾಂಧೀಜಿಯವರಿಗೆ ಅಹಿಂಸೆಯನ್ನು ಪ್ರತಿಪಾದಿಸುವುದು ಸುಲಭವಾಗಿತ್ತು. ಯಾಕೆಂದರೆ ಗಾಂಧೀಜಿಯವರು ಯಾವ ಸಮುದಾಯದಿಂದ ಬಂದಿದ್ದರೋ ಆ ಸಮುದಾಯ ಸಾಮಾಜಿಕ ತರತಮದ ವ್ಯವಸ್ಥೆಯಿಂದ ಹಿಂಸೆಯನ್ನು ಅನುಭವಿಸಿರಲಿಲ್ಲ. ಹಿಂಸೆಗೆ ಹಿಂಸೆಯೇ ಉತ್ತರ ಅನ್ನುವ ಯುದ್ಧೋನ್ಮಾದಿ ಕಾಲಘಟ್ಟದಲ್ಲಿ ಗಾಂಧೀಜಿಯಂಥ ಜೀವಪರ ಹೋರಾಟಗಾರನಿಗೆ ಅಹಿಂಸೆ ಸಹಜ ಆಯ್ಕೆ ಆಗಿತ್ತು. ಆದರೆ ಇದನ್ನೇ ಅಂಬೇಡ್ಕರ್ ಅವರಿಗೂ ಹೇಳುವಂತಿಲ್ಲ. ಶತಶತಮಾನಗಳಿಂದ ನಡೆದುಬಂದ ಶೋಷಣೆ, ದಬ್ಬಾಳಿಕೆ, ದೈಹಿಕ-ಮಾನಸಿಕ ಹಿಂಸೆಗಳಿಗೆ ಹಿಂಸಾತ್ಮಕ ಮಾರ್ಗದಲ್ಲೇ ಪ್ರತೀಕಾರ ತೆಗೆದುಕೊಳ್ಳೋಣ ಎಂದು ಅಂಬೇಡ್ಕರ್ ಸುಲಭವಾಗಿ ಹೇಳಬಹುದಿತ್ತು. ಆದರೆ ಎಂದೂ ಅವರು ಹಾಗೆ ಹೇಳಲಿಲ್ಲ. ಹೀಗಾಗಿ ನನಗೆ ಗಾಂಧಿಗಿಂತಲೂ ಅಂಬೇಡ್ಕರ್ ನಿಜವಾದ ಅರ್ಥದ ಅಹಿಂಸಾವಾದಿಯಾಗಿ ಕಾಣುತ್ತಾರೆ. ಬುಡಕಟ್ಟು ಜನರ ಹಕ್ಕುಗಳಿಗಾಗಿ ದೇಶದ ಹಲವಾರು ರಾಜ್ಯಗಳಲ್ಲಿ ಹೊತ್ತಿರುವ ನಕ್ಸಲ್ ಚಟುವಟಿಕೆಗಳ ಹಿನ್ನೆಲೆಯಲ್ಲಿ ಇದನ್ನು ನೋಡಬೇಕು. ಅಂಬೇಡ್ಕರ್ ಎಂದೂ ಹಿಂಸೆಗೆ ಪ್ರಚೋದಿಸಲಿಲ್ಲ.
ಅಂಬೇಡ್ಕರ್ ಅವರ ಕಾಲಘಟ್ಟದಲ್ಲೇ ಎರಡು ಮಾದರಿಯ ಹೋರಾಟಗಳಿದ್ದವು. ಭಾರತೀಯ ಸೈನ್ಯದಲ್ಲಿದ್ದ ಭಾರತೀಯರನ್ನೇ ಒಗ್ಗೂಡಿಸಿ ಪ್ರತ್ಯೇಕ ಸೈನ್ಯ ಕಟ್ಟುವ ಪ್ರಯತ್ನದಲ್ಲಿ ಸುಭಾಷ್ ಚಂದ್ರ ಬೋಸ್ ಇದ್ದರು. (ಭಾರತಕ್ಕೆ ಸ್ವಾತಂತ್ರ್ಯ ದೊರಕಲು ಮುಖ್ಯ ಕಾರಣವಾಗಿದ್ದು ಇದೇ ಎಂದು ಅಂಬೇಡ್ಕರ್ ಅವರೇ ಹೇಳುತ್ತಾರೆ.) ಮತ್ತೊಂದು ಜನರ ಭಾವನೆಗಳನ್ನು ಸುಲಭವಾಗಿ ಕೆರಳಿಸಬಲ್ಲದಾಗಿದ್ದ ಉಪವಾಸ ಸತ್ಯಾಗ್ರಹದಂಥ ಗಾಂಧಿ ಮಾದರಿಯ ಹೋರಾಟ. ಈ ಎರಡನ್ನೂ ಬಿಟ್ಟು ಅಂಬೇಡ್ಕರ್ ಆಯ್ದುಕೊಂಡಿದ್ದು ಸಾಮಾಜಿಕ ಅನಿಷ್ಠ, ಅಸಮಾನತೆಗಳಿಗೆ ಪ್ರತಿರೋಧಿಸುವ ಬೌದ್ಧಿಕ ಸಂಘರ್ಷದ ಮಾರ್ಗ, ಜನಜಾಗೃತಿಯ ಮಾರ್ಗ.
ನಾವು ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳುವುದರಲ್ಲೇ ಎಡವಿದ್ದೇವೆ. ಭಾರತ ಸಂವಿಧಾನ ಅಂಬೇಡ್ಕರ್ ಅವರ ಪೂರ್ಣ ಕನಸೇನೂ ಅಲ್ಲ. ಸಂವಿಧಾನದಲ್ಲಿ ಸೇರಿಸಲು ಸಾಧ್ಯವಾಗದ ಎಷ್ಟೋ ಕನಸುಗಳನ್ನು ಅಂಬೇಡ್ಕರ್ ಹೊಂದಿದ್ದರು. ಎಲ್ಲ ಕೈಗಾರಿಕೆಗಳು ರಾಷ್ಟ್ರೀಕರಣಗೊಳ್ಳಬೇಕು ಎಂದು ಬಾಬಾಸಾಹೇಬರು ಬಯಸಿದ್ದರು. ಕೃಷಿ ಕ್ಷೇತ್ರವೂ ಸಹ ಪೂರ್ಣ ರಾಷ್ಟ್ರೀಕರಣಗೊಳ್ಳಬೇಕು ಎಂದು ಅವರು ಬಯಸಿದ್ದರು. ಸಾವಿರಾರು ಎಕರೆ ಜಮೀನು ಹೊಂದಿರುವ ಭೂಮಾಲೀಕರಿಂದ ಭೂಮಿಯನ್ನು ಹಿಂದಕ್ಕೆ ಪಡೆದು ಸರ್ಕಾರವೇ ಅದನ್ನು ವಹಿಸಿಕೊಳ್ಳಬೇಕು. ಸರ್ಕಾರವೇ ಅದನ್ನು ರೈತರಿಗೆ ಉಳುಮೆ ಮಾಡಲು ಗೇಣಿಗೆ ನೀಡಬೇಕು ಎಂಬುದು ಬಾಬಾಸಾಹೇಬರ ಕನಸಾಗಿತ್ತು. ಕೈಗಾರಿಕೆ ಮತ್ತು ಕೃಷಿ ಎರಡೂ ಪೂರ್ಣ ಪ್ರಮಾಣದಲ್ಲಿ ರಾಷ್ಟ್ರೀಕರಣಗೊಂಡರೆ ಬಡವ ಬಲ್ಲಿದನೆಂಬ ಭೇದ ಎಲ್ಲಿ ಉಳಿಯಲು ಸಾಧ್ಯವಿತ್ತು? ಹಾಗೆ ನೋಡಿದರೆ ಹೆಚ್ಚು ಶ್ರಮಿಕರೇ ಹೆಚ್ಚು ಶ್ರೀಮಂತರಾಗುತ್ತಿದ್ದರು. ದುಡಿಯುವವನೇ ದೊಡ್ಡವನಾಗುತ್ತಿದ್ದ. ಇದು ಸಹಜನ್ಯಾಯವಾಗುತ್ತಿತ್ತು. ಅಂಬೇಡ್ಕರ್ ಅವರ ಈ ಆಶಯಕ್ಕೆ ಸಂವಿಧಾನ ರಚನೆಯ ಸಂದರ್ಭದಲ್ಲಿ ವಿರೋಧಗಳು ಬಂದು ಅವು ಜಾರಿಯಾಗಲಿಲ್ಲ. ಆಗಿದ್ದರೆ ದುಡಿಸಿಕೊಳ್ಳುವವನು ದೊಡ್ಡವನಾಗುವ, ದುಡಿಯುವವನು ಚಿಕ್ಕವನಾಗುವ ವ್ಯವಸ್ಥೆ ತೊಲಗುತ್ತಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರು ತಮ್ಮ ಆಪ್ತ ಸಹಾಯಕ ನಾನಕ್ ಚಂದ್ ರತ್ತೂ ಬಳಿ ಹೀಗೆ ಹೇಳಿದ್ದರು.
“ ನನ್ನ ಮನಸ್ಸಿನಲ್ಲಿರುವುದು, ನನಗೆ ನೋವುಂಟು ಮಾಡುತ್ತಿರುವುದು ಯಾವುದೆಂದು ಬಹುಶಃ ನಿಮಗೆ ಅರ್ಥವಾಗುತ್ತಿಲ್ಲ. ನನ್ನ ಮೊದಲ ಚಿಂತೆ ನನ್ನ ಬದುಕಿನ ಅತಿ ದೊಡ್ಡ ಧ್ಯೇಯವನ್ನು ಈಡೇರಿಸಲು ಸಾಧ್ಯವಾಗಲಿಲ್ಲ ಎನ್ನುವುದು. ನನ್ನ ಜನ ಆಳುವ ವರ್ಗವಾಗುವುದನ್ನು, ಇತರ ಸಮುದಾಯಗಳ ಜತೆ ರಾಜಕೀಯ ಅಧಿಕಾರ ಹಂಚಿಕೊಳ್ಳುವುದನ್ನು ನನ್ನ ಜೀವಮಾನದಲ್ಲೇ ನೋಡಬಯಸಿದ್ದೆ. ಅದಾಗಲಿಲ್ಲ. ನಾನೀಗ ಬಲಹೀನನಾಗಿದ್ದೇನೆ....
ಬಾಬಾ ಸಾಹೇಬರ ನೋವಿನ ನುಡಿಗಳು ಇವು. ದಲಿತರು ಆಳುವ ವರ್ಗವಾಗಬೇಕು ಎಂದು ಅವರು ಬಯಸಿದ್ದರು. ಅವರ ಕನಸಿಗೆ ಅಡ್ಡಗಾಲಾಗಿದ್ದು ಗಾಂಧೀಜಿಯವರೇ. ಪೂನಾ ಒಪ್ಪಂದದಲ್ಲಿ ಗಾಂಧೀಜಿಯವರ ಉಪವಾಸಕ್ಕೆ ಅಂಬೇಡ್ಕರ್ ಮಣಿಯಬೇಕಾಯಿತು. ಒಂದುವೇಳೆ ಅಂಬೇಡ್ಕರ್ ಆಶಯದಂತೆ ಶೋಷಿತರಿಗೆ ಎರಡು ಮತಗಳ ಹಕ್ಕನ್ನು ನೀಡಿದ್ದರೆ ಬಹುಶಃ ದಲಿತ ರಾಜಕಾರಣ ಇಂದಿನ ದುಸ್ಥಿತಿಯನ್ನು ತಲುಪುತ್ತಿರಲಿಲ್ಲ. ಎಲ್ಲಿಯವರೆಗೆ ದಲಿತ ಜನಪ್ರತಿನಿಧಿಗಳು ಮೇಲ್ಜಾತಿ ರಾಜಕಾರಣಿಗಳ ಅಂಕೆಯಲ್ಲಿ ಇರುತ್ತಾರೋ ಅಲ್ಲಿಯವರೆಗೆ ದಲಿತರ ಉದ್ಧಾರ ಸಾಧ್ಯವಿಲ್ಲ ಎಂಬುದನ್ನು ಅಂದೇ ಬಾಬಾಸಾಹೇಬರು ಮನಗಂಡಿದ್ದರು.
ಇವತ್ತು ಎಂಥ ಪರಿಸ್ಥಿತಿ ಇದೆ ನೋಡಿ. ಹೋರಾಟದ ರಥವನ್ನು ಇಲ್ಲಿಯತನಕ ಎಳೆದುತಂದು ನಿಲ್ಲಿಸಿರುವೆ, ಎಲ್ಲ ಅಡೆತಡೆಗಳನ್ನೆದುರಿಸಿ ಅದು ಮುಂದೆ ಸಾಗಬೇಕು. ನನ್ನ ಉತ್ತರಾಧಿಕಾರಿಗಳು ಈ ರಥವನ್ನು ಮುಂದೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲದಿದ್ದರೂ ಚಿಂತೆಯಿಲ್ಲ. ಅದನ್ನು ಇದ್ದಲ್ಲಿಯೇ ನಿಲ್ಲಿಸಬೇಕೇ ಹೊರತು ಹಿಂದೆಳೆಯಬಾರದು. ಇದು ನನ್ನ ಕೊನೆಯ ಪ್ರಾರ್ಥನೆ ಎಂದಿದ್ದರು ಅಂಬೇಡ್ಕರ್. ಆದರೆ ರಥವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ, ಹಿಂದಕ್ಕೆಳೆಯುವ ಪ್ರಮೇಯವೇ ಇಲ್ಲದಂತೆ ಸಾಮಾಜಿಕ ನ್ಯಾಯದ ರಥವನ್ನೇ ಮಾಯ ಮಾಡಲಾಗಿದೆ. ಅದು ಕಾಣೆಯಾಗುವಂತೆ ನೋಡಿಕೊಳ್ಳಲಾಗಿದೆ.
ಕೋಲಾರ ಜಿಲ್ಲೆ ಚಿಂತಾಮಣಿಯ ಕಂಬಾಲಪಲ್ಲಿಂiಲ್ಲಿ ದಲಿತರ ಸಾಮೂಹಿಕ ನರಮೇಧ ನಡೆಯಿತು. ಏಳು ಮಂದಿ ದಲಿತರು ಬಲಿಯಾದರು. ೨೦೦೦ನೇ ಇಸವಿ ಮಾರ್ಚ್ ೧೧ರಂದು ನಡೆದ ಘಟನೆ ಇದು. ಘಟನೆಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಬರೆದ ತೀರ್ಪು ಹೀಗಿತ್ತು: ಘಟನೆಗೆ ಸಂಬಂಧಿಸಿದ ಪ್ರಾಥಮಿಕ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ವಸ್ತುಸ್ಥಿತಿಯನ್ನು ಗಮನಿಸಿದರೆ ಹಾಗೂ ಸರ್ಕಾರಿ ಅಭಿಯೋಜಕರು ಪ್ರಕರಣದಲ್ಲಿ ಹೆಸರಿಸಿರುವ ಆರೋಪಿಗಳೇ ಹತ್ಯೆ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ವಿಫಲವಾಗಿರುವುದರಿಂದ ಸಂಖ್ಯೆ ಒಂದರಿಂದ ಮೂವತ್ತೆರಡರವರೆಗಿನ ಎಲ್ಲ ಆರೋಪಿಗಳನ್ನು ನಿರ್ದೋಷಿಗಳೆಂದು ನಿರ್ಧರಿಸಿ ನ್ಯಾಯಾಲಯವು ಖುಲಾಸೆಗೊಳಿಸಿದೆ.
ನನಗೆ ನ್ಯಾಯಾಲಯದ ತೀರ್ಪಿಗಿಂತಲೂ ಅಚ್ಚರಿಯೆನಿಸಿದ್ದು ಇದಕ್ಕೆ ನಾಗರಿಕ ಸಮಾಜದ ತಣ್ಣನೆಯ ಪ್ರತಿಕ್ರಿಯೆ. ಅದರಲ್ಲೂ ವಿಶೇಷವಾಗಿ ದಲಿತ ಚಳವಳಿಗಳು ಮತ್ತು ದಲಿತ ಜನಪ್ರತಿನಿಧಿಗಳು ಇದನ್ನು ಸ್ವೀಕರಿಸಿದ ರೀತಿ. ದಲಿತ ಜನಪ್ರತಿನಿಧಿಗಳದ್ದೊಂದು ಸಮಸ್ಯೆ. ಅವರಿಗೆ ತಮ್ಮ ಯಾವುದೋ ಪಕ್ಷದಿಂದ ಕಿತ್ತುಹಾಕಿದಾಗ, ಇನ್ನೇನೋ ಅನ್ಯಾಯವಾದಾಗ ಮಾತ್ರ ಅವರಿಗೆ ದಲಿತರೆಂಬುದು ಸ್ಮರಣೆಗೆ ಬರುತ್ತದೆ. ವಿಧಾನಸಭೆಯಲ್ಲೇ ಬೇಕಿದ್ದರೂ ಬಟ್ಟೆ ಕಳಚಿಕೊಂಡು ನರ್ತಿಸುತ್ತಾರೆ. ಆದರೆ ಕಂಬಾಲಪಲ್ಲಿ ತೀರ್ಪಿನ ಕುರಿತು ಅವರು ಎಂದಿಗೂ ಮಾತನಾಡಲಾರರು. ಇದು ಕಂಬಾಲಪಲ್ಲಿಯ ವಿಷಯ ಮಾತ್ರವಲ್ಲ, ಬಿಹಾರದಲ್ಲೂ ಮೊನ್ನೆಮೊನ್ನೆ ಇಂಥದ್ದೇ ತೀರ್ಪು ಬಂತು. ಇಂಥ ತೀರ್ಪುಗಳು ಬರುತ್ತಲೇ ಇರುತ್ತವೆ. ಇಡೀ ವ್ಯವಸ್ಥೆಯೇ ಇಂಥ ತೀರ್ಪಿನ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುತ್ತದೆ. ಮೊನ್ನೆಮೊನ್ನೆ ದಲಿತನೊಬ್ಬನ ನರಬಲಿಯೂ ಈ ರಾಜ್ಯದಲ್ಲಿ ನಡೆದುಹೋಯಿತು? ಯಾರಾದರೂ ದಲಿತ ಜನಪ್ರತಿನಿಧಿಗಳು ಮಾತನಾಡಿದ್ದನ್ನು ಕೇಳಿದಿರಾ? ಎಲ್ಲಿದೆ ಅಂಬೇಡ್ಕರ್ ಎಳೆದು ತಂದ ಹೋರಾಟದ ರಥ? ಎಲ್ಲಿದ್ದಾರೆ ಅಂಬೇಡ್ಕರ್ ಉತ್ತರಾಧಿಕಾರಿಗಳು?
ರಾಷ್ಟ್ರೀಕರಣಗೊಳಿಸುವುದು ಬಡವರಿಗೆ ನ್ಯಾಯ ಕೊಡಿಸುವ ಸುಲಭದ ದಾರಿ ಎನ್ನುವುದು ಅಂಬೇಡ್ಕರ್ ಅವರಿಗೆ ಗೊತ್ತಿತ್ತು. ಆದರೆ ಇವತ್ತು ಉದಾರೀಕರಣದ ಫಲವಾಗಿ ಸರ್ಕಾರಿ ಸಂಸ್ಥೆಗಳೆಲ್ಲವೂ ಖಾಸಗಿಯವರ ಪಾಲಾಗುತ್ತಿದೆ. ಕುಡಿಯುವ ನೀರನ್ನು ಕೂಡ ಖಾಸಗೀಕರಣಗೊಳಿಸಲಾಗಿದೆ. ಎಸ್‌ಇಜಡ್ ಗಳ ಮೂಲಕ ಪರ್ಯಾಯ ಸರ್ಕಾರಗಳು ಅಸ್ತಿತ್ವಕ್ಕೆ ಬರುತ್ತಿವೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಬಂಡವಾಳ ಹಿಂದಕ್ಕೆ ಪಡೆಯಲೆಂದೇ ಕೇಂದ್ರ ಸರ್ಕಾರ ಒಂದು ಪ್ರತ್ಯೇಕ ಇಲಾಖೆ, ಸಚಿವರನ್ನು ನೇಮಿಸಿತ್ತು. ಎಲ್ಲವೂ ಖಾಸಗೀಕರಣವಾದ ಮೇಲೆ ಮೀಸಲಾತಿಗೆ ಮಹತ್ವವೆಲ್ಲಿ ಉಳಿಯಿತು? ಮೀಸಲಾತಿ ಇದ್ದರೆಷ್ಟು ಬಿಟ್ಟರೆಷ್ಟು?
ತಂಗರಾಜ್ ಅವರು ಮಾತನಾಡುತ್ತ ಒಂದು ಮಾತನ್ನು ಹೇಳಿದ್ದರು. ಸುಶಿಕ್ಷಿತ ದಲಿತರು ಸರ್ಕಾರ ಮತ್ತು ನಿರ್ಗತಿಕ ದಲಿತರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಬಾಬಾಸಾಹೇಬರು ಹೇಳಿದ್ದರು. ಆದರೆ ಈ ಕೆಲಸ ಆಗ್ತಾ ಇಲ್ಲ ಎಂದು. ಹೌದಲ್ಲವೇ? ವಿದ್ಯಾವಂತ ದಲಿತರು, ಮೀಸಲಾತಿಯ ಲಾಭ ಪಡೆದ ದಲಿತರು ಏನು ಮಾಡುತ್ತಿದ್ದಾರೆ? ಈ ಸೇತುವೆಯ ಕೆಲಸ ಮಾಡಿದ್ದರೆ ದಲಿತರಲ್ಲಿ ಇನ್ನೂ ನಿರ್ಗತಿಕರು ಯಾಕೆ ಉಳಿಯುತ್ತಿದ್ದರು? ಯಾಕೆ ಮೇಲಿಂದ ಮೇಲೆ ದೌರ್ಜನ್ಯ ಪ್ರಕರಣಗಳು ಇನ್ನೂ ನಡೆಯುತ್ತಿದ್ದವು?
ಸುಶಿಕ್ಷಿತ ದಲಿತರು ಸಾಮಾಜಿಕ ಮನ್ನಣೆಗಾಗಿ ಬ್ರಾಹ್ಮಣ್ಯವನ್ನು ಆವಾಹಿಸಿಕೊಳ್ಳುತ್ತಿದ್ದಾರೆ. ದಲಿತರ ಮನೆಗಳಲ್ಲಿ ಇವತ್ತು ಸತ್ಯನಾರಾಯಣ ಪೂಜೆಗಳು ನಡೆಯುತ್ತಿವೆ. ಈ ಮೀಸಲಾತಿ ಫಲಾನುಭವಿ ದಲಿತರು ಜ್ಯೋತಿಷಿಗಳು-ಪುರೋಹಿತರ ಬೆನ್ನು ಬಿದ್ದಿದ್ದಾರೆ. ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ ಎಂದು ಅಂಬೇಡ್ಕರ್ ಬೌದ್ಧ ಧಮ್ಮವನ್ನು ಸ್ವೀಕರಿಸಿದರು. ಆದರೆ ಅಂಬೇಡ್ಕರ್ ಚಿಂತನೆಗಳ ಫಲಾನುಭವಿಗಳು ಶ್ರೇಣೀಕೃತ ಸಮಾಜದಲ್ಲಿ ಬ್ರಾಹ್ಮಣೀಕರಣಗೊಳ್ಳುತ್ತಿದ್ದಾರೆ. ಕೆಲವರು ತಮ್ಮ ಜಾತಿಗಳನ್ನು ಹೇಳಿಕೊಳ್ಳುವುದನ್ನೂ ಬಿಟ್ಟಿದ್ದಾರೆ.
ದೇಶದಲ್ಲಿ ಮಲಹೊರುವ ಪದ್ಧತಿ ನಿಷೇಧ ಮಾಡಿ ಆದೇಶ ಹೊರಡಿಸಿದ್ದು ಮೊಟ್ಟಮೊದಲ ಬಾರಿಗೆ ಕರ್ನಾಟಕ ಸರ್ಕಾರ. ನಂತರ ಕೇಂದ್ರ ಸರ್ಕಾರವೂ ಅದನ್ನು ಕಾಯ್ದೆಯಾಗಿ ಜಾರಿಗೆ ತಂದಿದ್ದು. ಆದರೆ ಇವತ್ತಿಗೂ ಕರ್ನಾಟಕದಲ್ಲಿ ಮಲ ಹೊರುವ ಪದ್ಧತಿ ನಡೆದೇ ಇದೆ. ಮಲದ ಗುಂಡಿಗೆ ಇಳಿದು, ವಿಷಯುಕ್ತ ಗಾಳಿ ಸೇವಿಸಿ ಸಾಕಷ್ಟು ಮಂದಿ ಸತ್ತು ಹೋಗಿದ್ದಾರೆ, ಸತ್ತು ಹೋಗ್ತಾನೇ ಇದ್ದಾರೆ. ಮುಂದೆಯೂ ಸಾಯಲಿದ್ದಾರೆ. ಇವರಿಗಾಗಿ ನಮ್ಮ ದಲಿತ ಜನಪ್ರತಿನಿಧಿಗಳು ಏನು ಮಾಡಿದ್ದಾರೆ? ಯಾಕೆ ಕಾಯ್ದೆ ಅನುಷ್ಠಾನಕ್ಕೆ ತರಲು ಇವರು ಒತ್ತಡ ಹೇರೋದಿಲ್ಲ?
ದಲಿತ ಜನಪ್ರತಿನಿಧಿಗಳ ಮಾತು ಹಾಗಿರಲಿ. ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ಯಾವನಿಗೇ ಆದರೂ ಮಲದ ಗುಂಡಿ ಶುದ್ಧ ಮಾಡಲು ಹೋಗಿ ಜನರು ಸಾಯುತ್ತಿರುವುದನ್ನು ಕಂಡು ಒಂದಷ್ಟು ನಾಚಿಕೆಯೆನಿಸಬೇಕು. ಏನಾಗಿ ಹೋಗಿದೆ ನಮ್ಮ ಸಂವೇದನೆಗಳಿಗೆ? ಎಲ್ಲಿದೆ ಅಂಬೇಡ್ಕರ್ ಅವರು ಎಳೆದು ತಂದ ಹೋರಾಟದ ರಥ?
ದಲಿತರಿಗೆ ಅಸ್ಪೃಶ್ಯತೆಯಿಂದ ಮುಕ್ತಿ ದೊರೆತರೆ ಸಾಲದು, ಸಾಮಾಜಿಕ ಸಮಾನತೆ ಬೇಕು. ಇತರ ಜನವರ್ಗದವರೊಂದಿಗೆ ಸಮಾನವಾಗಿ ಬದುಕುವ ವಾತಾವರಣ ನಿರ್ಮಾಣವಾಗಬೇಕು ಎಂದು ಬಾಬಾಸಾಹೇಬರು ಬಯಸಿದ್ದರು. ಇವತ್ತು ಅಸ್ಪೃಶ್ಯತೆಯೂ ಜೀವಂತವಾಗಿದೆ, ಸಾಮಾಜಿಕ ಸಮಾನತೆಯೂ ಇಲ್ಲದಂತಾಗಿದೆ.
ಅಸ್ಪೃಶ್ಯತೆ ಎಂದರೆ ಕೇವಲ ಮುಟ್ಟಬಾರದು ಅನ್ನೋ ಮಾತಲ್ಲಿ ಇಲ್ಲ. ದಲಿತನೊಬ್ಬನೊಂದಿಗೆ ಶೇಕ್ ಹ್ಯಾಂಡ್ ಮಾಡಿದ ಮಾತ್ರಕ್ಕೆ, ಹೊಟೆಲಿನಲ್ಲಿ ಒಟ್ಟಿಗೆ ಕುಳಿತು ಊಟ ಮಾಡಿದ ಮಾತ್ರಕ್ಕೆ ಅಸ್ಪೃಶ್ಯತೆ ತೊಲಗಿತು ಎಂದರ್ಥವಲ್ಲ. ಕಣ್ಣಲ್ಲೇ ಇರಿಯುವ ಅಸ್ಪೃಶ್ಯತೆಯ ಭಾವವನ್ನು ಪ್ರದರ್ಶಿಸುವಷ್ಟು ಸವರ್ಣೀಯರು ಶಕ್ತರು. ಮಾನಸಿಕ ಅಸ್ಪೃಶ್ಯತೆ ಮೊದಲು ತೊಲಗಬೇಕು. ದಲಿತರ ಹಕ್ಕುಗಳಿಂದ ವಂಚಿಸುವಂಥ ಎಲ್ಲ ವಿಧಾನಗಳೂ ಅಸ್ಪೃಶ್ಯತೆಯೇ. ದಲಿತರಿಗೆ ಸಾಮಾಜಿಕ ಸ್ಥಾನಮಾನವನ್ನು ನೀಡಲೊಲ್ಲದ ಮನಸ್ಥಿತಿಯೂ ಅಸ್ಪೃಶ್ಯತೆಯ ರೂಪವೇ ಆಗಿರುತ್ತದೆ.
ಅಂಬೇಡ್ಕರ್ ಕನಸಿನ ಭಾರತ ಇನ್ನೂ ನಿರ್ಮಾಣವಾಗಿಲ್ಲ. ಬುದ್ಧ, ಬಸವ, ಅಂಬೇಡ್ಕರ್ ಅವರು ಕೊಟ್ಟ ಬೆಳಕಲ್ಲಿ ನಾವಿನ್ನೂ ಸಾಗಬೇಕಾದ ಹಾದಿ ಇನ್ನೂ ದೂರವಿದೆ, ಒಟ್ಟಾಗಿ ಸಾಗೋಣ ಎಂದು ಕಳಕಳಿಯಿಂದ ವಿನಂತಿಸುವೆ.
ಸೇನಾಧಿಕಾರಿಗಳ ಜತೆ ವೇದಿಕೆ ಹಂಚಿಕೊಂಡ ಮೊದಲ ಕಾರ್ಯಕ್ರಮ ಇದು. ೫೧೫ ಭೂಸೇನಾ ಕಾರ್ಯಾಗಾರದ ವ್ಯವಸ್ಥಾಪಕ ನಿರ್ದೇಶಕರಾದ ಕಮಾಂಡೆಂಟ್ ಬ್ರಿಗೇಡಿಯರ್ ರಾಜೇಶ್ ಜಸ್ವಾಲ್ ಅವರು ಸೊಗಸಾಗಿ ಮಾತನಾಡಿದರು. ದಲಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವಾಗ, ೨೫ ವರ್ಷ ಸೇವೆ ಸಲ್ಲಿಸಿದ ದಲಿತ ನೌಕರರನ್ನು ಸನ್ಮಾನಿಸುವಾಗ ಅವರೊಂದಿಗೆ ಒಡನಾಡಿದ ರೀತಿ, ಅವರ ಅಂತಃಕರಣ ನನಗೆ ನಿಜಕ್ಕೂ ಇಷ್ಟವಾಯಿತು. ೫೧೫ ರಾಜೇಶ್ ಅವರ ನೇತೃತ್ವದಲ್ಲಿ ೫೧೫ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಆಶಿಸುವೆ.
ನಾನು ನನ್ನ ಭಾಷಣವನ್ನು ಈ ನೆಲದ ಭಾಷೆಯಾದ ಕನ್ನಡದಲ್ಲೇ ಮಾಡಿದ್ದೇನೆ. ಎಲ್ಲರಿಗೂ ಅರ್ಥವಾಗಿದೆಯೆಂದು ಭಾವಿಸುತ್ತೇನೆ. ೫೧೫ ಸ್ವಾತಂತ್ರ್ಯಪೂರ್ವದಿಂದಲೇ ಇಲ್ಲಿ ಸ್ಥಾಪನೆಯಾಗಿರುವ ಸಂಸ್ಥೆ. ಈ ನೆಲದಲ್ಲಿರುವುದರಿಂದ ನೆಲದ ಭಾಷೆಯನ್ನೂ ಇಲ್ಲಿ ಕೆಲಸ ನಿರ್ವಹಿಸುವವರು ಕಲಿತು ಮಾತನಾಡುವಂತಾಗಬೇಕು ಎನ್ನುವುದು ನನ್ನ ಅಪೇಕ್ಷೆ. ನಾನು ತಮಿಳುನಾಡಿಗೋ, ಆಂಧ್ರಕ್ಕೋ ಜೀವನೋಪಾಯಕ್ಕಾಗಿ ವಲಸೆ ಹೋದರೆ ಅಲ್ಲಿನ ಭಾಷೆಗಳನ್ನು ಕಲಿತು ಬೆರೆಯಬೇಕು. ಹಾಗೆಯೇ ಇಲ್ಲಿಗೆ ಬಂದವರೂ ಕೂಡ.
ಇಷ್ಟನ್ನು ಹೇಳುತ್ತಾ ಈ ಸದವಕಾಶ ಕಲ್ಪಿಸಿದ್ದಕ್ಕಾಗಿ ಎಲ್ಲರಿಗೂ ವಂದಿಸಿ ನನ್ನ ಮಾತು ಮುಗಿಸುತ್ತೇನೆ
ಕಾರ್ಯಕ್ರಮ: ೫೧೫ ಭೂಸೇನಾ ಕಾರ್ಯಾಗಾರದ ನೌಕರ ಸಂಘಟನೆಗಳು ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ
ಉಪಸ್ಥಿತರು: ಬ್ರಿಗೇಡಿಯರ್ ರಾಜೇಶ್ ಜಸ್ವಾಲ್, ಕಮಾಂಡೆಂಟ್ ಹಾಗು ಎಂಡಿ, ೫೧೫ ಭೂಸೇನಾ ಕಾರ್ಯಾಗಾರ
ಶ್ರೀ ತಂಗರಾಜು, ಆಯುಕ್ತರು, ರಾಜ್ಯ ಮಾಹಿತಿ ಆಯೋಗ.
No comments:
Post a Comment