Saturday, July 7, 2012

ಇತ್ತಿತ್ತಲಾಗಿ

ಈ ನಗರದಲ್ಲಿ ಹಾಡಹಗಲೇ
ಬೆಳದಿಂಗಳ ಕೊಲೆಯಾಗಿದೆ


ಚೂಪು ಮೂತಿಯ ಇಮಾರತುಗಳು
ಚಂದ್ರನನ್ನು ದಸ್ತಗಿರಿ ಮಾಡಿಕೊಂಡಿವೆ

ನೋಟುಗಳ ಮೇಲೆ ಕ್ರೌರ್ಯದ ವಿಷ ಛಾಪಿಸಲ್ಪಟ್ಟಿದೆ
ಗಾಂಧಿ ಮುಖ ಕಣ್ಮರೆಯಾಗಿದೆ

ಇತ್ತಿತ್ತಲಾಗಿ

ಮ್ಯಾನ್ ಹೋಲುಗಳಲ್ಲಿ ಮನುಷ್ಯರ ವಿಸರ್ಜನೆಗಳಿಗಿಂತ
ಹೆಚ್ಚು ರಕ್ತವೇ ಹರಿಯುತ್ತಿದೆ

ವಿದ್ಯುತ್ ತಂತಿಗೂ ಮನುಷ್ಯನ ನರನಾಡಿಗಳಿಗೂ
ಕೂಡಿಸಿ ವೆಲ್ಡಿಂಗ್ ಮಾಡಲಾಗಿದೆ

ರಾತ್ರಿ ಕ್ರೋಧೋನ್ಮತ್ತ ನರಿಗಳು ಓಡಾಡುತ್ತವೆ;
ಅವುಗಳ ಕಿರುಚಾಟಕ್ಕೆ ಮಕ್ಕಳ ನಿದ್ದೆ ಹಾರಿಹೋಗಿದೆ

ಇತ್ತಿತ್ತಲಾಗಿ

ದೇವರ ಹೆಸರಿನಲ್ಲಿ ಸೈತಾನರು ವಿಜೃಂಭಿಸುತ್ತಿದ್ದಾರೆ
ಸೈತಾನರ ಕಂಡರೆ ಭೀತಿ ಜನರಿಗೆ

ಮನೆಗಳಿಗೆ ಕಬ್ಬಿಣದ ಸರಳಿನ ಬಾಗಿಲು ಜಡಿಯಲಾಗಿದೆ
ಎಂದೂ ತೆರೆಯದಂತೆ ಗ್ರಿಲ್ ಮಾಡಲಾಗಿದೆ

ಮನೆಬೆಕ್ಕುಗಳು ಆಚೆ ಹೋಗಲಾಗದೆ
ದೇವರ ಕೋಣೆಯಲ್ಲೇ ಕಕ್ಕಸ್ಸು ಮಾಡಿವೆ

ಇತ್ತಿತ್ತಲಾಗಿ

ಹೊಸ ಪೀಳಿಗೆಯ ರಾಜಮಹಾರಾಜರು
ಹಾದಿಬೀದಿಯಲ್ಲೇ ಮೈಥುನ ಮಾಡುತ್ತಾರೆ

ಮ್ಯೂಸಿಯಮ್ಮುಗಳಲ್ಲಿ ಯಾರದೋ ಕನ್ನಡಕ
ಮತ್ಯಾರದೋ ಖಾದಿ ಅಂಗಿ ಕರಗಿಹೋಗಿವೆ

ದಾರಿತಪ್ಪಿದ ನಾಯಿಗಳು ಎಳೆ ಮಕ್ಕಳನ್ನೇ ಹರಿದು ತಿನ್ನುತ್ತಿವೆ,
ಯಾರ ಮೇಲಿನ ದ್ವೇಷವೋ?

ಇತ್ತಿತ್ತಲಾಗಿ

ಪರಂಪರೆಯ ಖಾಸಗಿ ಅಂಗವನ್ನು
ಇವರೆಲ್ಲ ಮುತ್ತಿಕ್ಕಿ ಮುದ್ದಾಡುತ್ತಿದ್ದಾರೆ

ಕರಗಿದ ಹೆಣದಿಂದ ಎಬ್ಬಿಸಿದ
ಮೂಳೆಗಳ ಮೇಲೂ ಧರ್ಮದ ವ್ಯಾಖ್ಯಾನ

ಯಜ್ಞದ ಬೆಂಕಿಯಲ್ಲಿ ಮಣ್ಣಿನ
ಅಂತಃಸಾಕ್ಷಿಯೇ ಸುಟ್ಟು ಭಸ್ಮವಾಗುತ್ತಿದೆ


ಶಾಪಿಂಗ್ ಮಾಲ್‌ಗಳಲ್ಲಿ ಕರುಣಾಜನಕ ಕಣ್ಣುಗಳನ್ನು
ಎಗ್ಗಿಲ್ಲದಂತೆ ಸುಟ್ಟು ತಿನ್ನಲಾಗುತ್ತದೆ

ಪಿಜ್ಜಾ ಕಾರ್ನರುಗಳಲ್ಲಿ ಮೆಟ್ರೋ ಟ್ರೈನಿನ ಗಡಗಡ ಸದ್ದನ್ನು
ನೆಂಚಿಕೊಳ್ಳಲು ನೀಡಲಾಗುತ್ತದೆ

ಕಾಫಿ ಡೇಗಳ ನೀಟಾಗಿ ಪೇರಿಸಿಟ್ಟ ಕುಂಡಗಳಲ್ಲಿ ಕ್ರೌರ್ಯದ
ಹೂವುಗಳು ಅರಳುತ್ತಿವೆ

ಇತ್ತಿತ್ತಲಾಗಿ

ಹದ್ದುಗಳು ಕೆಳಗೆ, ಇನ್ನೂ ಕೆಳಗೆ ಹಾರುತ್ತಿವೆ
ಸತ್ತವರ ಮಾಂಸಕ್ಕಿಂತ ಜೀವಂತ ಮಾಂಸವೇ ಬಲುಪ್ರಿಯ

ಚಂಡಮಾರುತಗಳು ಸರಹದ್ದು ದಾಟಿ ಬಿಜಂಗೈಯುತ್ತಿವೆ
ಅವೂ ಕೂಡ ಜಾಗತೀಕರಣಗೊಂಡಿವೆ

ಜೋಡಿ ಪಾರಿವಾಳಗಳಿಗೆ ಕೂಡುವುದು ಸಾಧ್ಯವಾಗುತ್ತಿಲ್ಲ
ಮನುಷ್ಯರ ನಿಟ್ಟುಸಿರ ಶಾಖಕ್ಕೆ ವೀರ್ಯ ಬಸಿದುಹೋಗಿದೆ

ಇತ್ತಿತ್ತಲಾಗಿ

ಸಂಪ್ರದಾಯದ ಹೆಣಗಳು ಒಂದೊಂದಾಗಿ ಉರಿಯುತ್ತಿವೆ
ಬೂದಿಯಷ್ಟೇ ಉಳಿಯಬೇಕು

ಬೂದಿ ಕರಗಿದ ಮೇಲೆ
ಹೊಸ ಮಿಂಚುಹುಳಗಳು ಹುಟ್ಟಲೇಬೇಕು, ಬೆಳಗಲೇಬೇಕು

ಎಲ್ಲ ಮುಗಿದ ಮೇಲೆ
ಹೊಸ ಬೆಳಕು ಮೂಡಲೇಬೇಕು

ಇತ್ತಿತ್ತಲಾಗಿ
ಒಂಚೂರು ಚೂರೇ ಬೆಳಕಾಗುತ್ತಿದೆ

No comments: