Wednesday, August 8, 2012

ಕಾಯಬೇಕು

ಕಾಯಬೇಕು ಹೀಗೆ
ಕಾಲದ ತಲೆಯ ಮೇಲೆ ಮೆಟ್ಟಿಕೊಂಡು
ಹಲ್ಲುಕಚ್ಚಿ, ಎದೆ ಕಲ್ಲುಮಾಡಿಕೊಂಡು
ಕಾಯುವುದು ಸಲೀಸಾಗಬೇಕು;
ಒಳಗೆ ಬೇಯುವುದು ಗೊತ್ತಾಗದಂತೆ

ನೋಯದ ಹೊರತು
ಎದೆಯಲ್ಲಿ ನಾದ ಹುಟ್ಟದು
ಭೂಮಿ ಹುಟ್ಟಿದ್ದೇ ದೊಡ್ಡ ಆಸ್ಫೋಟದಿಂದ
ಎಂದು ಕೇಳಿದ ನೆನಪು

ನಿನ್ನ ಸೋಕಿದ ಮೇಲೆ
ಇಹಕ್ಕೂ ಪರಕ್ಕೂ ವ್ಯತ್ಯಾಸವೆಂಬುದಿಲ್ಲ
ಎರಡರ ನಡುವೆ ನನ್ನದು ನಿರಂತರ ಚಲನೆ

ಕತ್ತಲು ಗರ್ಭಗುಡಿಯಲ್ಲಿ
ನಿನ್ನ ಮೂರ್ತಿಯೊಂದರ ಹೊರತು ಮತ್ತೇನೂ ಇಲ್ಲ
ನನ್ನ ಒಡಲ ನಡುಕ
ಈಗ ನನಗೇ ಕಾಣುವಷ್ಟು ಮೂರ್ತ

ಕಾಯ ಬಳಲುತ್ತದೆ
ಜೀವ ಹಿಡಿಯಾಗಿ ನಲುಗುತ್ತದೆ
ಆದರೂ ಪರಸ್ಪರ ಕಾಯಬೇಕು
ಒಳಗೊಳಗೆ ಹೊರಳಿಹೊರಳಿ
ಮುದ್ದೆಯಾಗಿ, ಹಿಡಿಯಾಗಿ, ಧೂಳಾಗಬೇಕು

ನೀನು ಎಚ್ಚರವಿದ್ದಾಗ ನಾನು ನಿದ್ದೆ
ನಾನು ಎಚ್ಚರವಿದ್ದಾಗ ನೀನು ನಿದ್ದೆ
ನಿನ್ನ ಕನಸನ್ನು ನಾನು ಕಾಯುವೆ
ನನ್ನ ಕನಸನ್ನು ನೀನು ಕಾಯುತ್ತೀಯ
ನಿದ್ದೆಯಲ್ಲೇ ನಮ್ಮ ಎಚ್ಚರವನ್ನು ಮುಟ್ಟಬೇಕು
ಪ್ರಜ್ಞೆಯ ತಳದಲ್ಲಿ ವಿಶ್ವಾಸದ ಬೆಳಕು ಹುಡುಕಬೇಕು

ಕಾಯೋಣ ಕಣ್ಣೆವೆ ಮುಚ್ಚದೆ

ಆನಂತರ....

ಮೂಗಿಗೆ ಯಾರೋ ಹತ್ತಿ ಗಿಡಿದಿದ್ದಾರೆ
ಕಿರಿಕಿರಿ, ಯಾತನೆ
ಜೋರಾಗಿ ಉಸಿರುಬಿಟ್ಟು ಹತ್ತಿ ಹಾರುವಂತೆ ಮಾಡಲಾರೆ
ಉಸಿರು ನಿಂತು ಹೋಗಿದೆ

ಕೈಗಳನ್ನು ಕಾಲುಗಳನ್ನು ಮಡಿಚಿದ್ದಾರೆ
ಊಹೂಂ, ಅಕ್ಷರಶಃ ಲಟಲಟನೆ ಮುರಿದಿದ್ದಾರೆ
ನೋವಿಗೆ ಚೀರೋಣವೆಂದರೆ ನಾಲಗೆ ಹೊರಳುತ್ತಿಲ್ಲ
ಹಣೆಯ ಮೇಲೆ ವಿಭೂತಿ ಬಳಿಯಲಾಗಿದೆ
ನಂಗೆ ವಿಭೂತಿ, ಕುಂಕುಮ ಅಲರ್ಜಿ ಕಣ್ರಯ್ಯಾ,
ನವೆತ ಶುರುವಾಗುತ್ತೆ ಅಂತ ಹೇಳಬೇಕಿನಿಸುತ್ತದೆ, ಆಗುತ್ತಿಲ್ಲ
ಹಣೆಯ ಮೇಲೆ ನಾಲ್ಕಾಣೆ ಪಾವಲಿ ಅಂಟಿಸಲಾಗಿದೆ
ಅದು ತಣ್ಣಗೆ ಕೊರೆಯುತ್ತಿದೆ ಎದೆಯವರೆಗೆ

ಬಾಯಿ ಬಿಡಿಸಿದಂತೇ ಇದೆ;
ಇಡೀ ನೆತ್ತಿ ಗಲ್ಲ ಒಂದು ಮಾಡಿ ಬ್ಯಾಂಡೇಜು ಕಟ್ಟಿ
ಬಾಯಿ ಮುಚ್ಚಿದ್ದಾರೆ
ಆದರೂ ಹಲ್ಲು ಕಾಣುತ್ತಿದೆ; ವಿಕಾರವಾಗಿ
ಹೀಗೆ ಕಟ್ಟುವ ಬದಲು ತುಟಿಗಳನ್ನು ಹೊಲೆದುಬಿಡಬಾರದಿತ್ತೆ
ಎಂಬ ಪ್ರಶ್ನೆ ನನ್ನದು, ಯಾರನ್ನು ಕೇಳಲಿ?

ಸ್ನಾನಕ್ಕೆ ಕರೆದೊಯ್ದಿದ್ದರು, ಬೆನ್ನು ನಿಲ್ಲುತ್ತಿರಲಿಲ್ಲ
ಒಬ್ಬ ಭುಜ ಹಿಡಿದುಕೊಂಡಿದ್ದ
ಪೂರ್ತಿ ಬೆತ್ತಲೆ ನಾನು
ಇಷ್ಟು ವರ್ಷ ಮುಚ್ಚಿಟ್ಟುಕೊಂಡಿದ್ದ ಕಲೆಗಳು, ವ್ರಣಗಳು, ಮಚ್ಚೆಗಳು
ಎಲ್ಲಾ ಬಟಾಬಯಲು
ಬಿಸಿಬಿಸಿ ನೀರು ಸುರಿಯುತ್ತಿದ್ದಾರೆ, ಮೈ ಹಬೆಯಾಡುತ್ತಿದೆ
ಒಂದು ಕೈ ಒರಟಾಗಿ ಉಜ್ಜಿದ್ದಕ್ಕೆ ಎದೆಯ ಚರ್ಮ ಕಿತ್ತುಬಂದಿದೆ
ಇಶ್ಯೀ ಎಂದು ಆ ಕೈಯನ್ನು ಸೋಪಿನಿಂದ ಉಜ್ಜಿ ತೊಳೆಯಲಾಗಿದೆ

ನಾನು ಸತ್ತಿದ್ದೇನೆ
ಹಾಗಂತ ಎಲ್ಲ ಮಾತನಾಡುತ್ತಿದ್ದಾರೆ
ಈಗ ನಾನು ಅವನೂ ಅಲ್ಲ, ಇವನೂ ಅಲ್ಲ, ಅದು ಮಾತ್ರ
ದೊಡ್ಡಗಂಟಲಲ್ಲಿ ಯಾರೋ ಅಳುತ್ತಿದ್ದಾರೆ
ತಲೆ ಸವರಿ ಸಮಾಧಾನ ಹೇಳಬೇಕಿನಿಸುತ್ತಿದೆ, ಹೇಳಲಾರೆ

ರಾಶಿರಾಶಿ ಹೂವು, ಅದರ ಗಂಧಕ್ಕೆ ವಾಕರಿಕೆಯಾಗುತ್ತಿದೆ
ಪಕ್ಕದಲ್ಲಿ ಹಚ್ಚಿಟ್ಟ ಕಂತೆಗಟ್ಟಲೆ ಅಗರಬತ್ತಿಯ ಘಮವೂ ಹೇಸಿಗೆ
ಹೂವ ಒಡಲಲ್ಲಿ ಸಾವಿನ ಗಂಧ ಹುಟ್ಟಿದ್ದನ್ನು ಇವತ್ತೇ ನೋಡಿದ್ದು ನಾನು

ಅದೋ ವಿದ್ಯುತ್ ಚಿತಾಗಾರ
ಎಲ್ಲ ಕಿತ್ತು ಬರಿಮೈಯನ್ನು ಒಳಗೆ ತಳ್ಳಲಾಗಿದೆ
ಎಂಥದ್ದೋ ಅಸಂಬದ್ಧ ಮಂತ್ರ, ಚೀರಾಟ
ಬಾಗಿಲು ಮುಚ್ಚಿದ ಮೇಲೆ ಒಳಗೆ ಕಂಡಿದ್ದು
ಬೆಂಕಿಯ ಕುಲುಮೆ, ಇನ್ಯಾವುದೋ ಹೆಣ ಬೇಯುವ ಚಿಟಪಟ ಸದ್ದು

ನಾನೀಗ ಬೇಯುತ್ತೇನೆ, ಗಂಟೆಗಟ್ಟಲೆ
ಬೂದಿಯಾಗುವವರೆಗೆ
ಬೂದಿ ಯಾವುದೋ ನದಿಯಲ್ಲಿ ಕರಗಿಹೋಗುತ್ತದೆ

ಬೆಂಕಿಯಲ್ಲಿ, ನೀರಲ್ಲಿ, ಗಾಳಿಯಲ್ಲಿ, ಮಣ್ಣಿನಲ್ಲಿ
ನನ್ನ ದೇಹ ಹರಿದು ಹಂಚಿಹೋಗಿದೆ

ಎಲ್ಲ ವಿಸರ್ಜನೆಯಾದ ಮೇಲೆ ಈಗ ನಿರಾಳ
ನನ್ನನ್ನು ನಾನು ಸುಲಭವಾಗಿ
ಹುಡುಕಿಕೊಳ್ಳಬಹುದು;
ಯಾರ ಅಂಕೆ, ತಂಟೆ, ತಕರಾರುಗಳೂ ಇಲ್ಲದೆ
ನಾನೀಗ ಸ್ವಯಂಪೂರ್ಣ

ಹೊಕ್ಕುಳ ಮೇಲೆ ಹಚ್ಚಿಟ್ಟ ಹಣತೆ

ವಿಪರೀತ ಹೊಟ್ಟೆ ನೋವು ಕಣೇ ಅಮ್ಮ
ಎಂದು ನರಳಾಡುವಾಗ
ಆಕೆ ಭಟ್ಟಿ ಜಾರಿರಬೇಕು ಎಂದು ಧಾವಂತಕ್ಕೆ ಬಿದ್ದಳು
ಹೊಕ್ಕುಳ ಮೇಲೆ ಸೆಗಣಿಯ ಕೆರಕ
ಅದರ ಮೇಲೆ ದೀಪ ಹಚ್ಚಿಟ್ಟಳು
ಹೊಟ್ಟೆ ನೀವಿ ನೀವಿ
ಜಾರಿದ ಭಟ್ಟಿ ಮತ್ತೆ ಸ್ವಸ್ಥಾನಕ್ಕೆ
ನನಗೂ ಅವಳಿಗೂ
ಯಾತನೆಯಿಂದ ಬಿಡುಗಡೆ

ಅವತ್ತು ಆ ದೀಪದ ಬೆಳಕಿಗೆ ಕಣ್ಣು ಕೀಲಿಸಿ ನಿಂತಿದ್ದು
ಇವತ್ತಿಗೂ ಹಾಗೇ ನೆಟ್ಟನೋಟದಲ್ಲಿ ನೋಡುತ್ತಿದ್ದೇನೆ
ಹೊಕ್ಕುಳ ಮೇಲೆ ಹಚ್ಚಿಟ್ಟ ಹಣತೆ
ಉರಿದರೆ ಬದುಕು, ಆರಿದರೆ ಸಾವು
ದೀಪ ಆರದಂತೆ ಬದುಕಬೇಕು
ಅದು ಬೆಳಗುವಷ್ಟು ಕಾಲ ಸಾವೂ ಜೀವಂತ

ಹೊಕ್ಕುಳ ಮೇಲೆ ದೀಪ ಹಚ್ಚಿಟ್ಟು
ವರ್ಷಗಳು ಆದ ಮೇಲೆ ಒಂದೊಂದೇ ಗಾಯ
ಯಾರೋ ಜಿಗುಟಿದ್ದು, ಚುಚ್ಚಿದ್ದು..
ಒಮ್ಮೊಮ್ಮೆ ನಾನೇ ತರಿದುಕೊಂಡಿದ್ದು
ಈ ನೋವು ತಡಕೊಳ್ಳಬೇಕು
ತಡಕೊಂಡಷ್ಟು ಕಾಲ ದೀಪ ಬೆಳಗುತ್ತದೆ

ದೀಪದ ಬೆಳಕಿಗೆ ಕಣ್ಣು ಕೊಟ್ಟಿದ್ದೇನೆ
ಕಣ್ಣುಗುಡ್ಡೆಗಳಲ್ಲಿ ಮಂಜು ಮಂಜು
ಆಗಾಗ ನೀರು ಧಾರೆ ಧಾರೆ; ವಿನಾಕಾರಣ

ಸುಖಾಸುಮ್ಮನೆ ಒಂದಷ್ಟು ಹೊಕ್ಕುಳ ಬಳ್ಳಿಗಳು
ಹೀಗೇ ಹುಟ್ಟಿಕೊಳ್ಳುತ್ತವೆ
ಯಾರೋ ಕತ್ತರಿಸಿ ಕತ್ತರಿಸಿ ಎಸೆಯುತ್ತಾರೆ
ನಾನು ಅಸಹಾಯಕ
ಕೂಸು ಅಲ್ಲಿ ವಿಲಕ್ಷಣವಾಗಿ ಕಿರುಚಿ
ಸಾಯುವುದನ್ನು ನೋಡಲಾರೆ
ಧಮನಿಧಮನಿಗಳಿಂದ ರಕ್ತ ಹರಿಸಿದ್ದೆ
ಈಗ ಕಡುಗೆಂಪು ನನ್ನ ಹೊಟ್ಟೆಯಮೇಲೆ
ಮಾಂಸ ಕತ್ತರಿಸುವ ಮರದ ತುಂಡು

ದೀಪದ ಬೆಳಕ ದಿಟ್ಟಿಸುತ್ತಲೇ ಇದ್ದೇನೆ
ಇದೇನು ಸಾವೋ, ಬದುಕೋ
ಒಂದೂ ಅರ್ಥವಾಗದ ಸೋಜಿಗ

ಕಣ್ಣುಗಳು ಬಳಲಿವೆ, ಇನ್ನು ನೋಡಲಾರೆ
ದೃಷ್ಟಿ ತೆಗೆದ ಕೂಡಲೇ ದೀಪ ಆರುತ್ತದೆ
ಜೀವ ಆರುವ ಕ್ಷಣಕ್ಕೆ ಸಿದ್ಧನಾಗಬೇಕು

ಅಮ್ಮನಿಗೆ ಕೇಳಬೇಕಿನಿಸುತ್ತದೆ
ಭಟ್ಟಿಯಲ್ಲ, ಜಾರುತ್ತಿರುವುದು ಜೀವ
ಉಳಿಸಿಕೊಡು, ಆತ್ಮವನ್ನು ನೀವಿನೀವಿ

ಚಲನೆ

ಎಡದ ಮಗ್ಗುಲಲ್ಲಿ ಏಳಬಾರದಂತೆ
ಹಾಗಂತ ಹಿರಿಯರು ಹೇಳಿದ ಮಾತು

ನಾನು ಎಡದಲ್ಲೂ, ಬಲದಲ್ಲೂ ದಿಢೀರನೆ ಏಳಲಾರೆ
ಪುಟ್ಟ ಹೃದಯದ ಗೂಡಲ್ಲಿ ನೀನು ಮಲಗಿರುತ್ತೀ
ನಿದ್ದೆಗೆಡದಂತೆ ನಿಧಾನ ಏಳಬೇಕು

ಚಿಮ್ಮಿ ನೆಗೆಯುವ ಕರು
ತಾಯ ಮೊಲೆಯಲ್ಲಿ ಬಾಯಿಡುವ ಘಳಿಗೆ
ತುಟಿ, ಮೊಲೆ ಎರಡರ ಬಳಿಯೂ ಶಬ್ದವಿಲ್ಲ

ಮಳೆಗೆ ಇಳೆ ಕಾಯುತ್ತದೆ;
ನನಗೆ ನೀನು ಕಾಯುವಂತೆ
ಕಾಯುವ ಪ್ರತಿ ಕ್ಷಣವೂ
ಸುಖದ ಬೇಗೆಯಲ್ಲಿ ಬೇಯುತ್ತದೆ

ಹೂವನ್ನೂ ಅದರ ಸುಗಂಧವನ್ನೂ
ಬೇರೆ ಮಾಡಲಾಗದು
ಒಂದನ್ನು ಬಿಟ್ಟು ಒಂದರ ಅಸ್ತಿತ್ವವಿಲ್ಲ
ಮಲ್ಲಿಗೆಯ ಹೊಕ್ಕುಳಲ್ಲಿ ಗಂಧ ನಿಶ್ಚಿತ

ಬಾ, ನಿನ್ನ ಕಣ್ಣುಗಳನ್ನು ಸಂಧಿಸುತ್ತೇನೆ
ಹೊಸ ಹುಟ್ಟೊಂದು ಸಾಧ್ಯವಾಗಲಿ
ಕಣ್ಣು ಕಣ್ಣು ಕೂಡಿಸುವ ಬೆಳಕಿನ ರೇಖೆಗಳಿಗೆ
ಹೊಸಗರ್ಭ ಕಟ್ಟಿಸುವ ಶಕ್ತಿಯಿದೆ

ಮುಮ್ಮುಖವೋ, ಹಿಮ್ಮುಖವೋ
ಚಲನೆ ಎಂಬುದು ಚಲನೆಯೇ ದಿಟ
ರಕ್ತ ತಣ್ಣಗಾಗುವ ಮುನ್ನ
ಚಲಿಸುತ್ತಲೇ ಇದ್ದುಬಿಡೋಣ