Saturday, July 7, 2012

ಜೀವ


ನಕ್ಷತ್ರ ಇಡಿ ಇಡಿಯಾಗಿ ಕಳಚಿ
ಉಡಿಗೆ ಬಂದು ಬಿದ್ದಿದೆ
ಅದರ ಶಾಖಕ್ಕೆ ಇಂಚಿಂಚೇ
ಕರಗುತ್ತಿದ್ದೇನೆ

ಎವೆಯಿಕ್ಕಿ ನೋಡಲಾರೆ
ಬೆಳಕಿಗೆ ಕಣ್ಣು ಹೋದೀತೆಂಬ ಭೀತಿ

ಆಕಾಶದ ಕೊರಳಿಗೆ
ಸುಗಂಧರಾಜನ ಮಾಲೆ ಕಟ್ಟುತ್ತಿದ್ದೇನೆ
ಮಾಲೆಯ ಭಾರಕ್ಕೆ
ಆಕಾಶ ತೊನೆಯುತ್ತಿದೆ

ಎಲ್ಲೋ ಆಳದಲ್ಲಿ
ಇದು ಮಿಸುಕಾಡುತ್ತಿದೆ
ರಕ್ತ ಧಿಮಿಧಿಮಿ ಹರಡುತ್ತಿದೆ
ಅದರ ಕುದಿಗೆ
ಕನಸೊಂದು ಬೇಯುತ್ತಿದೆ

ಮುಂಗಾರಿನ ಹಸಿಮೈ
ಮಣ್ಣು ಅಗೆದು, ನೇಗಿಲು ಗೀರಿ
ಒಳನುಗ್ಗುವ ಸಂಭ್ರಮ
ಅಗೋ, ಭೂಮಿಯೇ ಬಸಿರಾದಂತೆ
ಧೂಳು ಗಿರಿಗಿಟ್ಟಲೆಯಾಡುತ್ತಿದೆ

ಇದು ಮಿಸುಕುತ್ತಿದೆ
ಕೈಚಾಚಿ ನಿಂತಿದೆ
ನಾನಿದರ ಪಾದವಾಗುತ್ತೇನೆ
ನೆತ್ತಿಯಾಗುತ್ತೇನೆ, ಹಣೆಯಾಗುತ್ತೇನೆ
ತುಟಿಯಾಗುತ್ತೇನೆ, ಕೊರಳಾಗುತ್ತೇನೆ

ಅದರ ಪುಟ್ಟ ಹಸ್ತ
ನನ್ನ ಬೊಗಸೆಯೊಳಗೆ
ಇದಕ್ಕೆ ಜೀವ ಉಣಿಸಬೇಕು
ಅದರಾತ್ಮವನ್ನು
ಎದೆಯ ಮೇಲೆ ಧರಿಸಬೇಕು

ಇತ್ತಿತ್ತಲಾಗಿ

ಈ ನಗರದಲ್ಲಿ ಹಾಡಹಗಲೇ
ಬೆಳದಿಂಗಳ ಕೊಲೆಯಾಗಿದೆ


ಚೂಪು ಮೂತಿಯ ಇಮಾರತುಗಳು
ಚಂದ್ರನನ್ನು ದಸ್ತಗಿರಿ ಮಾಡಿಕೊಂಡಿವೆ

ನೋಟುಗಳ ಮೇಲೆ ಕ್ರೌರ್ಯದ ವಿಷ ಛಾಪಿಸಲ್ಪಟ್ಟಿದೆ
ಗಾಂಧಿ ಮುಖ ಕಣ್ಮರೆಯಾಗಿದೆ

ಇತ್ತಿತ್ತಲಾಗಿ

ಮ್ಯಾನ್ ಹೋಲುಗಳಲ್ಲಿ ಮನುಷ್ಯರ ವಿಸರ್ಜನೆಗಳಿಗಿಂತ
ಹೆಚ್ಚು ರಕ್ತವೇ ಹರಿಯುತ್ತಿದೆ

ವಿದ್ಯುತ್ ತಂತಿಗೂ ಮನುಷ್ಯನ ನರನಾಡಿಗಳಿಗೂ
ಕೂಡಿಸಿ ವೆಲ್ಡಿಂಗ್ ಮಾಡಲಾಗಿದೆ

ರಾತ್ರಿ ಕ್ರೋಧೋನ್ಮತ್ತ ನರಿಗಳು ಓಡಾಡುತ್ತವೆ;
ಅವುಗಳ ಕಿರುಚಾಟಕ್ಕೆ ಮಕ್ಕಳ ನಿದ್ದೆ ಹಾರಿಹೋಗಿದೆ

ಇತ್ತಿತ್ತಲಾಗಿ

ದೇವರ ಹೆಸರಿನಲ್ಲಿ ಸೈತಾನರು ವಿಜೃಂಭಿಸುತ್ತಿದ್ದಾರೆ
ಸೈತಾನರ ಕಂಡರೆ ಭೀತಿ ಜನರಿಗೆ

ಮನೆಗಳಿಗೆ ಕಬ್ಬಿಣದ ಸರಳಿನ ಬಾಗಿಲು ಜಡಿಯಲಾಗಿದೆ
ಎಂದೂ ತೆರೆಯದಂತೆ ಗ್ರಿಲ್ ಮಾಡಲಾಗಿದೆ

ಮನೆಬೆಕ್ಕುಗಳು ಆಚೆ ಹೋಗಲಾಗದೆ
ದೇವರ ಕೋಣೆಯಲ್ಲೇ ಕಕ್ಕಸ್ಸು ಮಾಡಿವೆ

ಇತ್ತಿತ್ತಲಾಗಿ

ಹೊಸ ಪೀಳಿಗೆಯ ರಾಜಮಹಾರಾಜರು
ಹಾದಿಬೀದಿಯಲ್ಲೇ ಮೈಥುನ ಮಾಡುತ್ತಾರೆ

ಮ್ಯೂಸಿಯಮ್ಮುಗಳಲ್ಲಿ ಯಾರದೋ ಕನ್ನಡಕ
ಮತ್ಯಾರದೋ ಖಾದಿ ಅಂಗಿ ಕರಗಿಹೋಗಿವೆ

ದಾರಿತಪ್ಪಿದ ನಾಯಿಗಳು ಎಳೆ ಮಕ್ಕಳನ್ನೇ ಹರಿದು ತಿನ್ನುತ್ತಿವೆ,
ಯಾರ ಮೇಲಿನ ದ್ವೇಷವೋ?

ಇತ್ತಿತ್ತಲಾಗಿ

ಪರಂಪರೆಯ ಖಾಸಗಿ ಅಂಗವನ್ನು
ಇವರೆಲ್ಲ ಮುತ್ತಿಕ್ಕಿ ಮುದ್ದಾಡುತ್ತಿದ್ದಾರೆ

ಕರಗಿದ ಹೆಣದಿಂದ ಎಬ್ಬಿಸಿದ
ಮೂಳೆಗಳ ಮೇಲೂ ಧರ್ಮದ ವ್ಯಾಖ್ಯಾನ

ಯಜ್ಞದ ಬೆಂಕಿಯಲ್ಲಿ ಮಣ್ಣಿನ
ಅಂತಃಸಾಕ್ಷಿಯೇ ಸುಟ್ಟು ಭಸ್ಮವಾಗುತ್ತಿದೆ


ಶಾಪಿಂಗ್ ಮಾಲ್‌ಗಳಲ್ಲಿ ಕರುಣಾಜನಕ ಕಣ್ಣುಗಳನ್ನು
ಎಗ್ಗಿಲ್ಲದಂತೆ ಸುಟ್ಟು ತಿನ್ನಲಾಗುತ್ತದೆ

ಪಿಜ್ಜಾ ಕಾರ್ನರುಗಳಲ್ಲಿ ಮೆಟ್ರೋ ಟ್ರೈನಿನ ಗಡಗಡ ಸದ್ದನ್ನು
ನೆಂಚಿಕೊಳ್ಳಲು ನೀಡಲಾಗುತ್ತದೆ

ಕಾಫಿ ಡೇಗಳ ನೀಟಾಗಿ ಪೇರಿಸಿಟ್ಟ ಕುಂಡಗಳಲ್ಲಿ ಕ್ರೌರ್ಯದ
ಹೂವುಗಳು ಅರಳುತ್ತಿವೆ

ಇತ್ತಿತ್ತಲಾಗಿ

ಹದ್ದುಗಳು ಕೆಳಗೆ, ಇನ್ನೂ ಕೆಳಗೆ ಹಾರುತ್ತಿವೆ
ಸತ್ತವರ ಮಾಂಸಕ್ಕಿಂತ ಜೀವಂತ ಮಾಂಸವೇ ಬಲುಪ್ರಿಯ

ಚಂಡಮಾರುತಗಳು ಸರಹದ್ದು ದಾಟಿ ಬಿಜಂಗೈಯುತ್ತಿವೆ
ಅವೂ ಕೂಡ ಜಾಗತೀಕರಣಗೊಂಡಿವೆ

ಜೋಡಿ ಪಾರಿವಾಳಗಳಿಗೆ ಕೂಡುವುದು ಸಾಧ್ಯವಾಗುತ್ತಿಲ್ಲ
ಮನುಷ್ಯರ ನಿಟ್ಟುಸಿರ ಶಾಖಕ್ಕೆ ವೀರ್ಯ ಬಸಿದುಹೋಗಿದೆ

ಇತ್ತಿತ್ತಲಾಗಿ

ಸಂಪ್ರದಾಯದ ಹೆಣಗಳು ಒಂದೊಂದಾಗಿ ಉರಿಯುತ್ತಿವೆ
ಬೂದಿಯಷ್ಟೇ ಉಳಿಯಬೇಕು

ಬೂದಿ ಕರಗಿದ ಮೇಲೆ
ಹೊಸ ಮಿಂಚುಹುಳಗಳು ಹುಟ್ಟಲೇಬೇಕು, ಬೆಳಗಲೇಬೇಕು

ಎಲ್ಲ ಮುಗಿದ ಮೇಲೆ
ಹೊಸ ಬೆಳಕು ಮೂಡಲೇಬೇಕು

ಇತ್ತಿತ್ತಲಾಗಿ
ಒಂಚೂರು ಚೂರೇ ಬೆಳಕಾಗುತ್ತಿದೆ

ತಹತಹ...

ಇಲ್ಲಿ ಸುಡುವ ಧಗೆಯ ನಡುಬೇಸಿಗೆ
ಬೆಂಕಿಯ ಹೊಕ್ಕು ಬಂದಿದೆ ಗಾಳಿ
ಕೊತಕೊತನೆ ಕುದಿಯುತ್ತಿದೆ ರಕ್ತ
ಅದನ್ನು ತಣಿಸಲು ಬಿರುಮಳೆಯೇ ಬೀಳಬೇಕು

ಬಟ್ಟೆ ಕಳಚಿ ಅಂಗಾತ ಮಲಗಿದ್ದೇನೆ
ಫ್ಯಾನು ಗಿರಗಟ್ಟಲೆಯಂತೆ ಸುತ್ತುತ್ತಿದೆ
ಅದಕ್ಕೂ ಹುಚ್ಚು ಆವೇಶ
ಅದರ ನೆರಳು ಗೋಡೆಯ ಮೇಲೆ ಏಕತ್ರಗೊಂಡಿದೆ
ಕೆಟ್ಟ ಮುಲುಕಾಟ, ವಿಕಾರ ಚಿತ್ರ

ಒಂದು ಸಣ್ಣ ತಂಪು ಗಾಳಿ ಕಿಟಕಿಯೊಳಗಿಂದ
ತೂರಿ ಬಂದು ಹಾಗೇ ವಾಪಾಸಾಗಿದೆ
ಬರದೇ ಇದ್ದಿದ್ದರೆ ಒಳಿತಿತ್ತು
ಇನ್ನು ಈ ಧಗೆಯ ಸಹಿಸಲಾರೆ
ನಿದ್ರೆಯಲ್ಲೂ ಅದು ನನ್ನ ಕೊಂದು ತಿನ್ನುತ್ತದೆ

ಮೈಯೆಲ್ಲಾ ಬೆವರಲ್ಲಿ ಒದ್ದೆಮುದ್ದೆ
ಹಿಂಡಿಹಿಂಡಿ ಹರಿದುಹೋಗುತ್ತಿರುವುದು
ನನ್ನದೇ ರಕ್ತವೇ?
ಜೀವ ಬಸಿದು ಬಸಿದು ಸೋರಿಹೋಗಿ
ಒಣಕಲು ಮೂಳೆಗೂಡುಗಳಷ್ಟೆ ಉಳಿದಿವೆ

ಹುಡಿಯಾಗಲಿನ್ನೂ ಅವಸರವಿಲ್ಲ
ನಾಗರಿಕತೆಯ ಮಣ್ಣ ಮೇಲೆ
ಹೊಸ ಹನಿಗಳು ಬೀಳಬಹುದು
ಮೊದಲ ಮಳೆಗೆ ಮಣ್ಣೂ ಪುಳಕಗೊಳ್ಳಬಹುದು

ಮತ್ತೆ ಜೀವ ತುಂಬಿಬಂದು
ಒಡ್ಡುಗಳಿಂದ ಚೈತನ್ಯ ಹರಿಯಬಹುದು
ಬಹುದು, ಬಹುದು, ಬಹುದು
ಸದ್ಯಕ್ಕೆ ನಾನು ತಹತಹ ಕುದಿಯುತ್ತಿದ್ದೇನೆ
ನನ್ನ ಅಸ್ತಿತ್ವ ನೋಡಿಕೊಳ್ಳಲು ಇದು ಒಳ್ಳೆಯ ಕಾಲ

ದೇವರು, ಗರ್ಭಗುಡಿ ಮತ್ತು ಪ್ರೀತಿ

ಗರ್ಭಗುಡಿಯಲ್ಲಿ ಏನಿರುತ್ತೆ?
ಇದು ಎಂದೂ ತಣಿಯದ ಕುತೂಹಲ
ದೇಗುಲದಲ್ಲಿ ಇದ್ದಷ್ಟು ಹೊತ್ತು
ಇಣುಕಿ ಕತ್ತು ನೋವು

ದೇವರ ಮೂರ್ತಿ ತುಂಬ ತರಾವರಿ ಹೂವು
ಅಲಂಕಾರಕ್ಕೆ ಅವನ ದೇಹ ಕಾಣದು
ಗಂಧ-ಕುಂಕುಮ ಮೆತ್ತಿದ ಹಣೆಯಲ್ಲಿ
ನೆರಿಗೆಗಳು ಮಾಯ

ಒಳಗೆ ಕತ್ತಲು, ಗೌಗತ್ತಲು
ಎರಡು ನಂದಾದೀಪಗಳು ಬೆಳಗುತ್ತಿವೆ
ಸಾಲದು ಬೆಳಕು,
ಅವನು ಕಾಣನು

ಜಾಗಟೆ-ನಗಾರಿಗಳು
ಎದೆ ಒಡೆವಂತೆ ಹೊಡೆದುಕೊಳ್ಳುತ್ತಿವೆ,
ಅವುಗಳೂ ಈಗ ವಿದ್ಯುದೀಕರಣಗೊಂಡಿವೆ ಭೀ
ತಿ ಹುಟ್ಟಿಸುವ ಶಬ್ದದ ನಡುವೆ ಕತ್ತಲಿಗೆ ಇನ್ನಷ್ಟು ಶಕ್ತಿ

ಅವನನ್ನು ಕಾಣುವಾಸೆ ನನಗೆ
ಮಹಾಮಂಗಳಾರತಿ ತಟ್ಟೆಯ ಪ್ರಭೆ ಕಣ್ಣುಕುಕ್ಕುತ್ತಿದೆ
ಅದನ್ನು ನೋಡಿದ ಮೇಲೆ ಗರ್ಭಗುಡಿಯಲ್ಲಿ ಮತ್ತೂ ಕತ್ತಲು

ಮನುಷ್ಯನ ಅತ್ಯಂತಿಕ ಗುರಿ ದೇವರು ಮತ್ತು ಪ್ರೀತಿ
ಹಾಗಂತ ಎಲ್ಲೋ ಕೇಳಿದ ನೆನಪು
ದೇವರು ಆರತಿ ತಟ್ಟೆಯ ಝಣಝಣದಲ್ಲಿ
ಧೂಪದ ಮಸುಕಿನಲ್ಲಿ, ಭಕ್ತರ ಬೆವರ ವಾಸನೆಯಲ್ಲಿ
ಪೂಜಾರಿಯ ಬೆತ್ತಲೆ ಕಂಕುಳಲ್ಲಿ ಕಳೆದುಹೋಗಿದ್ದಾನೆ

ಪ್ರೀತಿ ಎಲ್ಲಿದೆ?
ಕತ್ತಲ ಗರ್ಭಗುಡಿಯಲ್ಲಿರಬಹುದೇ?
ಗೊತ್ತಿಲ್ಲ
ಪ್ರೀತಿಯೇ ದೇವರಾಗುವ
ದೇವರೇ ಪ್ರೀತಿಯಾಗುವ
ಕ್ಷಣಕ್ಕೆ ನಾನು ಹಂಬಲಿಸಿದ್ದೇನೆ

ಆಫ್ರೀನ್ ಕೇಳುತ್ತಿದ್ದಾಳೆ: ಅಪ್ಪ, ನನ್ನದೇನು ತಪ್ಪು?

ಇವತ್ತು ನನ್ನ ನಮಾಜ್-ಇ-ಜನಾಜಾ
ಕಡೆಯ ಪ್ರಾರ್ಥನೆ ನನಗಾಗಿ,
ನೀವೂ ಪ್ರಾರ್ಥಿಸಿ

ಕಿವಿಯಲ್ಲಿ ಇನ್ನೂ ಆಜಾನ್
ಮೊಳಗು ಹಾಗೇ ಇದೆ
ನಾನು ಆಫ್ರೀನ್,
ಆಫ್ರೀನ್ ಅಂದರೆ ಉತ್ತೇಜನ

ಅಮ್ಮಳ ಗರ್ಭಚೀಲದಲ್ಲಿ
ಬೆಚ್ಚಗೆ ಈಜಾಡುವಾಗಲೇ
ನನಗೊಬ್ಬಳು ಜತೆಗಾತಿಯಿದ್ದಳು-ನಮ್ಮಕ್ಕ
ಅಪ್ಪನ ಹಿಂಸೆಗೆ ಅವಳು ಅಲ್ಲೇ ಸತ್ತಳು

ಅಮ್ಮಳ ತುಂಬಿದ ಹೊಟ್ಟೆಯ ಮೇಲೆ
ಅಪ್ಪನ ಕೆಕ್ಕರುಗಣ್ಣು
ಭಯದಲ್ಲಿ ಮುದುಡಿ ಕುಳಿತಿದ್ದೆ ನಾನು

ಈ ಜಗಕ್ಕೆ ಕಣ್ಣು ತೆರೆದುಕೊಂಡ
ಮೊದಲ ಆರು ದಿನಗಳು ದೇವತೆಗಳೇ
ಆರೈಕೆ ಮಾಡುತ್ತಾರಂತೆ
ಅಪ್ಪ ಅಡ್ಡ ನಿಂತಿದ್ದ- ದೇವತೆಗಳಿಗೂ ನನ್ನ ಹಾಲುಗಲ್ಲಕ್ಕೂ ನಡುವೆ

ಪವಿತ್ರ ಜಮ್ ಜಮ್ ನೀರು
ನನ್ನ ಗಂಟಲಿಗೆ ಇಳಿಯುವ ಮುನ್ನವೇ
ಅಪ್ಪ ನನ್ನ ಎದೆಗೆ ಉರಿಯುವ ಸಿಗರೇಟು ಚುಚ್ಚಿ ಬಿಟ್ಟ
ಮೆದುಳು ಹರಿಯುವ ಹಾಗೆ ಗೋಡೆಗೆ ತಲೆ ಜಜ್ಜಿಬಿಟ್ಟ

ನೆತ್ತಿ ಕೂಡಿಲ್ಲ, ಹೊಕ್ಕುಳ ಗಾಯ ಆರಿಲ್ಲ
ಅಳುವುದೊಂದು ಗೊತ್ತಿತ್ತು ನನಗೆ
ಅಪ್ಪನಿಗೇನು ದ್ವೇಷ ನನ್ನ ಮೇಲೆ?

ಹೇಗೆ ಕೇಳಲಿ? ನಾಲಿಗೆ ಹೊರಳುತ್ತಿಲ್ಲ
ಅಪ್ಪಾ ಎಂದು ಚೀರಲೂ ನನ್ನಿಂದ ಸಾಧ್ಯವಿಲ್ಲ
ಎಳೇ ಮೆದುಳು ನುಜ್ಜುಗಜ್ಜು ಅಪ್ಪನ ಹೊಡೆತಕ್ಕೆ ಫಿಡ್ಸು,
ತಲೆಯಲ್ಲಿ ರಕ್ತಸ್ರಾವ ಇನ್ನು ಬದುಕಲಾರೆ ಎಂದು ಹೊರಟುಬಿಟ್ಟೆ

ನನ್ನ ಕಳಕೊಂಡು ಅಮ್ಮ ಈಗ ತಬ್ಬಲಿಯಾಗಿದ್ದಾಳೆ
ಅವಳದಿನ್ನೂ ಹಸಿಮೈ, ಉಕ್ಕಿಚೆಲ್ಲುವ ಮೊಲೆಹಾಲು
ಎಲ್ಲ ಬಿಟ್ಟು ಹೊರಟಿದ್ದೇನೆ
ಇವತ್ತು ನನ್ನ ಜನಾಜಾ,
ಆಮೇಲೆ ಮಣ್ಣು

ಹೋಗುವ ಮುನ್ನ
ಅವನನ್ನು ಕೇಳಬೇಕಿತ್ತು
ಅಪ್ಪ, ನನ್ನದೇನು ತಪ್ಪು?

ವಿದಾಯದ ಗಳಿಗೆ


ಬಾ
ಹಣೆಗೆ ಹಣೆ ಹಚ್ಚಿ
ಬಿಗಿದುಬಂದ ಗಂಟಲಲ್ಲಿ
ಗೊಗ್ಗರು ಧ್ವನಿಯಲ್ಲೇ ಮಾತನಾಡೋಣ

ವಿದಾಯದ ಗಳಿಗೆಯಲ್ಲಿ
ಯಾವ ಮಾತೂ ಉಳಿಯದೇ ಹೋಗಲಿ
ಏನೊಂದೂ ಅತೀತವಾಗದಿರಲಿ

ಬಾ ಏಕಾಂತದ ಜಗಲಿಯಿಂದ ಈಚೆ ಬಾ
ಉಡುವುದಕ್ಕೆ ಕತ್ತಲೆಯಿದೆ
ಮೈತುಂಬಾ ಹೊದ್ದು ಬೆತ್ತಲೆಯಾಗಿರೋಣ
ಜಗದ ಹಳವಂಡಗಳನ್ನೆಲ್ಲ ಒಂದು ಕ್ಷಣ ಮರೆತುಬಿಡೋಣ

ಮಾತಿಗೆ ಕೂರೋಣ, ಮೈಮರೆತುಬಿಡೋಣ
ನೀನು ಭೂಮಿ, ನಾನು ಕಾಲ
ಎಷ್ಟು ಹೊತ್ತು ತಬ್ಬಿ ಕುಳಿತಿರಲು ಸಾಧ್ಯ?
ಬಿಡುಗಡೆ ಬೇಕು ಇಬ್ಬರಿಗೂ

ಬಾ ಇಬ್ಬರೂ ನಾಲ್ಕು ಹನಿ ಕಣ್ಣೀರಿಡೋಣ
ತೋಯ್ದ ಕೆನ್ನೆಗಳಲ್ಲಿ ಇಬ್ಬರ ಸುಖವೂ ಬೆಂದುಹೋಗಲಿ Z
ಣಕಾಲವಾದರೂ ಅಹಂಕಾರ ಹುಗಿಯೋಣ
ನಪುಗಳ ಹುಣ್ಣು ಕತ್ತರಿಸಿ ಎಸೆದು
ಧ್ಯಾನಕ್ಕೆ ಕೂರೋಣ, ಅಖಂಡ ಧ್ಯಾನ

ನಗಬೇಕು, ಎದೆ ಬಿರಿಯುವಂತೆ ರೋಷಾವೇಶದಲ್ಲಿ
ಸಾವು ಎದ್ದು ಒದೆಯುವಷ್ಟು
ನಕ್ಕುಬಿಡೋಣ

ಬಾ ವಿದಾಯದ ಗಳಿಗೆಯಲ್ಲಿ
ಏನೊಂದನ್ನೂ ಕಳೆದುಕೊಳ್ಳುವುದು ಬೇಡ
ಪೂರ್ತಿಯಾಗಿ ಕರಗಿಬಿಡೋಣ
ಕಾಲವಾಗೋಣ ಲಯವಾಗೋಣ
ಎಲ್ಲದಕ್ಕೂ ಇಲ್ಲವಾಗೋಣ

ಸೀತೆ

ಎದುರಿಗೆ ಅಗ್ನಿಕುಂಡ, ಪಕ್ಕದಲ್ಲಿ ಅಗ್ನಿಯಂಥ ಗಂಡ
ತೊದಲುವ ನಾಲಗೆ ಬೆದರುಗಣ್ಣು, ಬಾಣಲೆ ಮನಸ್ಸುಗಳು

ಇಲ್ಲಿ ಮಾತು ನಂಬಿಕೆಗೆಟ್ಟಿದೆ
ಅಗ್ನಿಗೂ ಬೇಕಿದೆ ಪರೀಕ್ಷೆ

ಅಶೋಕವನದ ಶೋಕದ ನಡುವೆಯೂ
ಕಟ್ಟಿಕೊಂಡ ಕನಸುಗಳಿಗೆ ಈಗ ಸಂಸ್ಕಾರ ಆಗಬೇಕು
ಸೂತಕ ಕಳೆಯಬೇಕು

ಎಷ್ಟು ದಿವಸದ ವಿರಹವೇ ಸೀತೆ?
ವಿರಹ ಕರಗಿ ಅವನೆದುರು ನಿಂತಾಗ
ಈ ಅನುಮಾನದ ಕಣ್ಣೇ?
ಇದು ಆತ್ಮಕ್ಕೂ ಅಂಟಿದ ಕಳಂಕವೇ ಹೆಣ್ಣೇ?

ಕಳಕೊಂಡಿದ್ದು ಸಿಕ್ಕೀತೇ ಎಂದು
ಕಳೆದುಹೋದ ನನ್ನವನು ದಕ್ಕಿಸಿಕೊಂಡಾನೇ ಎಂದು
ಜೀವ ಬಿಕ್ಕಳಿಸಿ ಬಿಕ್ಕಳಿಸಿ
ಹಿಡಿಯಷ್ಟಾಗಿ, ಅಣುವಾಗಿ ಕಾದವಳಿಗೀಗ
ಎದುರಿಗೆ ಅಗ್ನಿಕುಂಡ ಜತೆಯಲ್ಲಿ ಅಗ್ನಿಯಂಥ
ಗಂಡ ಬೇಯುತ್ತಾಳವಳು, ಉರಿಯುತ್ತಾಳವಳು

ಬೆಂದು, ಉರಿದ ಬೂದಿಯಿಂದ
ಎದ್ದು ಮತ್ತೆ ಹಿಡಿಯಾಗಿ,
ಅಣುವಾಗಿ ಅವನೆದುರು ನಿಂತು ತಣ್ಣಗಾಗುತ್ತಾಳೆ,
ಮುಂದಿನ ಪರೀಕ್ಷೆಗೆ ಸಿದ್ಧಳಾಗುತ್ತಾಳೆ

ಉರಿಯುತ್ತಿವೆ ಹೃದಯಗಳು
ಉರಿವ ಚೀತ್ಕಾರದ ನಡುವೆ
ಎಲ್ಲೋ ರಾವಣನ ಆತ್ಮ
ಗಹಗಹಿಸಿ ನಕ್ಕಿದ್ದು ಮಾತ್ರ ದುರಂತ !

ದಾರಿ

ನಿನ್ನ ಸ್ಮರಣೆಗೆ ಭೂಮಿಯ ತೂಕ
ನನಗೆ ಸಣ್ಣಗೆ ಜ್ವರ, ನಡುಕ

ಧೋ ಎನ್ನುವ ಮಾತಿನ ಸುರಿಮಳೆ
ನೆಂದು ನೆಂದು ನಾನೂ ನೀನು ತೊಪ್ಪೆ

ಒಂದೇ ಒಂದು ಬಿಗಿ ಸ್ಪರ್ಶಕ್ಕೆ
ಸಾವಿರ ಮಾತಿನ ಶಕ್ತಿ, ಆದರೂ ಒಮ್ಮೊಮ್ಮೆ ಮೌನ

ಅರೆನಿದ್ರೆಯಲ್ಲೂ ನಿನ್ನ ನೆನಪಿನ ಮಂಪರು
ಬಾಚಿ ತಬ್ಬಿ ಎದೆಯೊಳಗೆ ಮುಚ್ಚಿಟ್ಟುಕೊಂಡಿದ್ದಷ್ಟೇ ನೆನಪು

ಜೀವ ಸೋಕುವಷ್ಟು ಸನಿಹ ನಿನ್ನ ಉಸಿರು
ಹೀರಿದ್ದೇನೆ, ಒಡಲು ತುಂಬಿಬಂದಿದೆ

ಆಹಾ! ಮತ್ತೆ ಬಂತು ನೋಡು ಬದುಕುವ ಆಸೆ
ಅಯ್ಯೋ! ಅದರೊಂದಿಗೆ ಒದ್ದುಕೊಂಡು ಬಂದಿದ್ದು ಸಾವಿನ ಭೀತಿ

ಇಲ್ಲ, ನಿನ್ನ ಕಣ್ಣ ಬೆಳಗಿಗೆ ಎಲ್ಲ ಭೀತಿಯನ್ನೋಡಿಸುವ ಛಾತಿ
ಪುಟ್ಟ ರೆಪ್ಪೆಗಳ ಅಡಿಯಲ್ಲಿ ನಾನು ಈಗ ಭದ್ರ

ನಡೆದುಬಿಡು, ನನ್ನೊಂದಿಗೆ ಹೀಗೇ ದಾರಿಗುಂಟ
ಜಗದ ಆಚೆಗೂ ಒಂದು ಬದುಕಿದೆಯಾ ನೋಡೇಬಿಡೋಣ

ಇಲ್ಲಿ ನೀನಿದ್ದೀಯ, ನಾನಿದ್ದೇನೆ
ನಮ್ಮೊಂದಿಗೆ ಕಾಲಾತೀತ ದಾರಿ ಸಮುದ್ರದಂತೆ ಬಿದ್ದುಕೊಂಡಿದೆ

ಇಗೋ, ಹಿಡಿ ನನ್ನ ತೋಳು
ಮೊದಲು ಹೊರಡೋಣ, ದಾರಿ ಹುಡುಕುವ ಗೊಡವೆ ಬೇಡ

ಗರ್ಭದ ಸಂಜ್ಞೆ

ನಿನ್ನೆ ತಾನೇ ಪುಟ್ಟಹಕ್ಕಿ
ಗೂಡು ಕಟ್ಟಿದ್ದನ್ನು ಕಂಡೆ
ಮೊಟ್ಟೆ ಇಟ್ಟು ಕಾವಿಗೆ ಕೂತಿದ್ದನ್ನು ಕಂಡೆ

ಇವತ್ತು ನನ್ನ ಹೊಟ್ಟೆಯೊಳಗೆ
ಸಣ್ಣ ಮಿಡುಕಾಟ
ಗರ್ಭ ಕಟ್ಟಿದ ಹಾಗೆ
ಒಂದು ಶಬ್ದವಿಲ್ಲದ ಚಲನೆ

ದಿನವೂ ನನ್ನಂಗಳದ
ಮಲ್ಲಿಗೆ ಬಳ್ಳಿಯಲ್ಲಿ ಹೊಸ ಹೊಸ
ಹೂವು ಅರಳುತ್ತವೆ
ಒಂದೊಂದು ಹೂವೂ
ಈಗಷ್ಟೇ ಹುಟ್ಟಿದ ಹಸುಗೂಸಿನ
ಎಳೇ ಪಾದಗಳ
ಬೆರಳುಗಳಂತೆ ಕಾಣುತ್ತವೆ

ಕಿಬ್ಬೊಟ್ಟೆಯಾಳದಿಂದ ಇದೇನೋ
ವಿಲಕ್ಷಣ ವೇದನೆ
ಮಗು ಕೈಕಾಲು ಬಡಿದ ಗುರುತು

ನನ್ನ ಗರ್ಭದ ಚೀಲ ಒಡೆದುಹೋಗಿದೆ
ಯಾರೋ ಶ್ರದ್ದೆಯಿಂದ ಹೊಲೆದು
ಹೊಸ ಜೀವಕ್ಕೆ ಆಹ್ವಾನವೀಯುತ್ತಿದ್ದಾರೆ

ಹಡೆಯಲಾರೆ, ಹಡೆಯದೇ ಇರಲಾರೆ
ಗರ್ಭದ ಸಂಜ್ಞೆಗಳನ್ನು ಬಹುಕಾಲ ಹೊತ್ತು ಬದುಕಲಾರೆ

ಪುಟ್ಟಹಕ್ಕಿಯ ಮರಿಗಳು
ಈಗ ಮೊಟ್ಟೆಯೊಡೆದು ಹೊರಬಂದಿವೆ
ಸಣ್ಣ ಕೊಕ್ಕುಗಳಿಂದ ಅವು ನನ್ನ ಕಣ್ಣ ಕುಕ್ಕುತ್ತಿವೆ

ಏನು? ಅವು ನನ್ನ ಕಣ್ಣುಗಳ ತಿಂದೇಬಿಡುತ್ತವೆಯೇ?
ಬೇನೆ, ಬೇನೆ, ಬೇನೆ...

ಮಗು ಈಗ ನಿಧಾನ ಬೆಳೆಯುತ್ತಿದೆ
ಪುಟ್ಟ ಮೂಗು, ಪುಟಾಣಿ ಕಣ್ಣು
ಅವಳ ಮೈಯ ವಾಸನೆಗೆ
ಹೊಸಕಣ್ಣುಗಳು ಬಂದಿವೆ

ಗರ್ಭ ಚಲಿಸುತ್ತಿದೆ...

ಏನೂ ಹೇಳದೆಯೇ.....

ಏನೂ ಹೇಳದೆಯೇ
ನನಗೆಲ್ಲಾ ಗೊತ್ತಾಗಬೇಕು
ಕಣ್ಣುಹನಿಯುವ ಮುನ್ನವೇ
ಬೊಗಸೆ ಚಾಚಬೇಕು

ಹಸಿವು ಕೆರಳುವ ಮುನ್ನ
ತುತ್ತು ನಾನಾಗಬೇಕು
ಜೀವದಗುಳುಗಳ ತಂದು
ಪ್ರೀತಿಯುಣಿಸಬೇಕು

ನಿದ್ದೆ ಅಪ್ಪುವ ಮುನ್ನ
ನಾನೇ ತಬ್ಬಬೇಕು
ಕನಸ ಬಣ್ಣದ ಜಾತ್ರೆ
ಮಡಿಲ ತುಂಬಬೇಕು

ಚಿಂತೆ ಕಾಡುವ ಮುನ್ನ
ಚೈತನ್ಯ ಮೊಗೆದಿಡಬೇಕು
ಒಂದು ಸ್ಪರ್ಶದಿಂದ
ನೋವ ನುಂಗಬೇಕು

ಬಾ ಎಂದು ಚೀರುವ ಮುನ್ನ
ಮಂಡಿಯೂರಿ ನಿಂತಿರಬೇಕು
ಕಣ್ಣ ನೋಟದಿಂದ
ಎದೆತಂತಿ ಮೀಟಬೇಕು

ಕರಳು ಹಿಂಡುವ ದಾರಿ
ಆಸರೆಗೆ ಕೈ ಬೇಕು
ನೀನು ಚಾಚಿದಲ್ಲೆಲ್ಲ
ನಾನೇ ಇದ್ದುಬಿಡಬೇಕು

ಸಾವ ಧೇನಿಸುವ ಮುನ್ನ
ಬದುಕ ಹೊತ್ತುತರಬೇಕು
ಜೀವಜೀವದ ಘಮಲು
ಹರಡಿ ಕರಗಬೇಕು

ಏನೂ ಹೇಳದೆಯೇ
ನನಗೆಲ್ಲ ಗೊತ್ತಾಗಬೇಕು
ನಿನ್ನ ಎದೆಯಬಡಿತ
ನನ್ನ ಲೆಕ್ಕಕ್ಕೆ ಸಿಗಬೇಕು

ಪ್ರವೇಶ...

ನಿನ್ನ ಮುಟ್ಟಿದೆ ನಾನು
ತಣ್ಣಗೆ ಕೊರೆಯುತ್ತಿದ್ದವು ನಿನ್ನ ಕೈಗಳು
ಈಗ ಅರಳಿದ ಹೂವು
ಕಳಚಿ ಕೈಗೆ ಬಂದಂತೆ

ನಾನು ಹಬೆಯಾಡುತ್ತಿದ್ದೆ
ಶಾಖಕ್ಕೆ ನಿನ್ನ ಮುಂಗೈ ಸುಟ್ಟಿತಾ?
ಧಾವಂತ ನನಗೆ

ಉಗುರು, ಗೆಣ್ಣುಗಳನ್ನೆಲ್ಲ ತೀಡಿದೆ
ಹುಡುಕಿದೆ ನನ್ನ ಕನಸಿನ ಚಿತ್ರಗಳನ್ನು
ನಿನ್ನ ಚರ್ಮದಲ್ಲಿ ಮೆತ್ತಗೆ ಉಸಿರಾಟ
ತೆಳ್ಳಗೆ ಬೆವರು

ಕೊರಳ ಮೇಲೆ ತುಟಿಯನೊತ್ತಿದೆ
ಕೊಳಲಾಯಿತು ಮನಸು
ಎಂಥದ್ದೋ ನಾದ ಪ್ರವಹಿಸುತ್ತದೆ
ಧಮನಿ ಧಮನಿಗಳಲ್ಲಿ

ಧ್ಯಾನ, ಧ್ಯಾನ, ಧ್ಯಾನ
ನನ್ನ ಚಿತ್ತ ಭಿತ್ತಿಗಳಲ್ಲಿ ನಿನ್ನ ಧ್ಯಾನ
ಧ್ಯಾನಕ್ಕೆ ಕುಳಿತಿದ್ದು ನಾನಲ್ಲದ ನಾನು
ನನ್ನ ಕಳಕೊಂಡ ನಾನು
ನೀನಾಗಿ ಹೋದ ನಾನು

ಎದೆಗೊತ್ತಿಕೊಂಡೆ
ನಿನ್ನ ನೆತ್ತಿಯ ಮೇಲೆ ನನ್ನ ಸುಡುಸುಡು ಉಸಿರು
ಕಟ್ಟಿದ್ದ ಉಸಿರು ಬಿಟ್ಟು ಬಿಡುಗಡೆ
ಉಸಿರು ಹಿಡಕೊಂಡಷ್ಟು ಹೊತ್ತು ಸಾವು
ಬಿಟ್ಟರೆ ಬದುಕು; ನಾನು ಬದುಕಿಕೊಂಡೆ

ಮೊಣಕಾಲೂರಿ ಮಡಿಲಲ್ಲಿ ಮುಖವೊಡ್ಡಿದೆ
ಮಿಂದೆ; ನಿನ್ನುಡಿಯ
ಘಮ್ಮೆನುವ ಮೈಗಂಧಲ್ಲಿ
ತೋಯ್ದು ಹೋದೆ
ಗಂಧಕ್ಕೂ ಜೀವಕ್ಕೂ ಬಿಡಿಸಲಾಗದ ನಂಟು

ನಿನಗೆ ಸಣ್ಣ ನಿದ್ದೆ
ನನ್ನ ಕಣ್ಣ ಪಹರೆಯಲ್ಲಿ
ನಿನ್ನ ದೇಹ ಬಾಗಿ ಒರಗಿದಾಗ
ನೀನಿರಲಿಲ್ಲ, ನಾನೇ ಎಲ್ಲವಾಗಿದ್ದೆ

ಅರೆತೆರೆದ ನಿನ್ನ ಕಣ್ಣರೆಪ್ಪೆಗಳಿಂದ
ನನ್ನ ಕಾವ್ಯ ಜಿನುಗುತ್ತಿದೆ
ನಾನು ಹೀರಿದೆ
ಒಳಗೆ ಇಳಿದಂತೆ ನಾನೇ ಕಾವ್ಯವಾದೆ

ಪ್ರೀತಿ ಅಂದರೆ ಸಮರ್ಪಣೆ
ಪ್ರೀತಿ ಅಂದರೆ ಚಮತ್ಕಾರ
ಪ್ರೀತಿ ಅಂದರೆ ನಿಜಾಯಿತಿ
ಹೀಗೇ ಏನೇನೇ ಕೇಳಿದ್ದೇನೆ
ನನಗನ್ನಿಸಿತು;
ಪ್ರೀತಿ ಅಂದರೆ ಆಗಾಗ
ವಿನಾಕಾರಣ ತುಂಬಿಕೊಳ್ಳುವ ನಿನ್ನ ಕಂಗಳು
ಕಣ್ಣುಗಳೆಡೆಯಲ್ಲಿ ಹುಟ್ಟುವ ಕಾಮನಬಿಲ್ಲು

ನೀನು ಭೂಮಿ
ನನ್ನ ಹೊರುವಾಸೆ ನಿನಗೆ
ನಿನ್ನ ತೋಳೊಳಗೆ ಸೇರುವ ಮೊದಲು
ಎದೆಯ ನೋವು ಕಿತ್ತೆಸೆಯಬೇಕು

ಸುಖ ತುಂಬಾ ಹಗುರ
ರೆಕ್ಕೆ ಬಿಚ್ಚಿ ಪಕ್ಷಿ ಹಾರಿದಂತೆ
ನೋವು ಭಾರ ಭಾರ
ಎದೆ ಜೋತುಬೀಳುತ್ತದೆ

ಹಕ್ಕಿಯ ಪುಕ್ಕದಷ್ಟೇ ಹಗುರಾಗಿ
ನಿನ್ನ ಮೇಲೆ ಬಂದು ಕೂರಬೇಕು
ಕೂತು, ಮಲಗಿ, ಕೊಸರಿ, ಬೆವರಿ
ಕಡೆಗೆ ನಿಶ್ಚಲನಾಗಬೇಕು

ಬಟ್ಟೆ ಬಚ್ಚಿ ಕಳಚಿದಷ್ಟೇ ಸರಾಗವಾಗಿ
ಮೈಯ ಅಂಗಾಗಗಳನ್ನೆಲ್ಲ ಕಳಚಿಡಬೇಕು
ಎಲ್ಲ ಕಳಚಿ, ಏನೂ ಇಲ್ಲದಂತಾಗಿ
ನಿನ್ನೊಳಗೆ ನಿರ್ವಾಣವಾಗಿ ಪ್ರವೇಶಿಸಬೇಕು.

ನಿನ್ನ ಸ್ಮೃತಿಯನ್ನು ಮುಟ್ಟಿ ಮುಟ್ಟಿ ಬರಬೇಕು
ಹಣೆಯೊಳಗೆ ಇಳಿದು ಗಂಟಲಿಗೆ ಪ್ರವೇಶಿಸಬೇಕು
ಹೊರಗೆ ಬರಲಾರೆ, ಅಲ್ಲೇ ಇದ್ದು
ಲೋಕದ ಸದ್ದುಗಳನ್ನೆಲ್ಲ ಕೇಳಿಸಿಕೊಳ್ಳಬೇಕು

ಹೌದು ಕಣೇ,
ನಾನು ದೇಹದಿಂದ ಮುಕ್ತನಾಗಬೇಕು
ಆಮೇಲೆ ನಿನ್ನ ಪವಿತ್ರ ಆತ್ಮದಲ್ಲಿ ಕರಗಬೇಕು

ಇಕೋ ಬಂದೆ
ನಿನ್ನ ಹಣೆಯಲ್ಲಿ ಹೊಳೆವ ಸಿಂಧೂರದ
ನಟ್ಟ ನಡುವಿನಲ್ಲೇ ಒಂದು ಚುಕ್ಕಿಯಾಗಿ
ಇಳಿಯುತ್ತೇನೆ

ಆಳ
ಆಳ
ಮತ್ತೂ ಆಳ
ಮತ್ತೆಂದೂ ಹೊರಗೆ ಬಾರದಷ್ಟು
ಆಳ

ನೋವು...

ಹಾಗೆ ಯಾರ ದೇಹದ ನೋವನ್ನೂ ಯಾರೂ
ಹೀರಿ ನೀಗಿಸುವಂತಿಲ್ಲ
ಹೀರುವಂತಿದ್ದರೆ ನಿನ್ನ ನೋವನ್ನು
ನಾನೇ ತುಟಿಯೊತ್ತಿ ಗಟಗಟನೆ ಕುಡಿದುಬಿಡುತ್ತಿದ್ದೆ

ಮನಸ್ಸು ನೋಯುತ್ತದೆ,
ದುಃಖ ಕಟ್ಟಿ ನಿಲ್ಲುತ್ತದೆ ಎದೆಯಲ್ಲಿ, ಗಂಟಲಲ್ಲಿ, ಕಿಬ್ಬೊಟ್ಟೆಯಲ್ಲಿ
ಒಂದು ಸಾಂಗತ್ಯದ ಮಾತಿಗೆ ದುಃಖ ಕರಗಬಹುದು
ದೇಹದ ನೋವು ಹಾಗಲ್ಲ, ಅದು ಸುಲಭಕ್ಕೆ ಕರಗುವುದಿಲ್ಲ

ದಿನೇದಿನೇ ಕರಗುವ ಕಸದಂತೆ ದೇಹ
ನಮ್ಮದೇ ಅಂಗಾಂಗಗಳು ನಮಗೇ ಪರಕೀಯ
ಆಪರೇಷನ್ ಥಿಯೇಟರಿನಲ್ಲಿ ಮಸುಕುಧಾರಿ ವೈದ್ಯರು
ಒಂದೊಂದೇ ಅವಯವಗಳನ್ನು
ನಿರ್ದಯವಾಗಿ ಕತ್ತರಿಸಿ ಎಸೆಯುತ್ತಾರೆ
ನಿತ್ಯ ಒಂದು ವೈಕಲ್ಯ

ಮುಟ್ಟಿ, ತಬ್ಬಿ, ಮುತ್ತಿಟ್ಟು
ನೋವ ಮರೆಸುವ ಜಾದೂ ನನಗೆ ಗೊತ್ತಿಲ್ಲ
ಹಾಗೆ ಉಪಚರಿಸುವೆನೆಂಬ ನನ್ನ ಅಹಂಕಾರವೇ ಬೊಗಳೆ
ನೀನು ನೋಯುತ್ತೀಯ, ನಾನು ಬೇಯುತ್ತೇನೆ
ಇದಿಷ್ಟೇ ಸತ್ಯ

ಆದರೂ ನಿನ್ನ ಗಾಯಕ್ಕೆ ನನ್ನ ಹಲ್ಲನ್ನೂರುತ್ತೇನೆ
ಬಾಯಿ ತುಂಬಾ ರಕ್ತ ರಕ್ತ ರಕ್ತ...
ಮುಕ್ಕುಳಿಸಿ ಎಸೆದು
ಮತ್ತೆ ಮತ್ತೆ ತುಟಿಯೊತ್ತಿ ನಿಲ್ಲುತ್ತೇನೆ

ನನ್ನವು ಅಸಹಾಯಕ ಕೈಗಳು
ಸಂಜೀವಿನಿ ಪರ್ವತ ಹೊತ್ತು ತರಲಾರೆ
ಗಂಟಲು ಒಣಗಿಹೋಗಿದೆ
ಬಿಕ್ಕುವ ನಿನ್ನ ಕಣ್ಣಹನಿಗಳ ಕುಡಿದೇ
ಉಪಚಾರಕ್ಕೆ ನಿಲ್ಲುವೆ,
ನಿನ್ನ ನೋವ ಮರೆಸುವ ಶಕ್ತಿಯನ್ನು
ನೀನೇ ನನಗೆ ಕೊಟ್ಟುಬಿಡು...