ನಿನ್ನ ಮುಟ್ಟಿದೆ ನಾನು
ತಣ್ಣಗೆ ಕೊರೆಯುತ್ತಿದ್ದವು ನಿನ್ನ ಕೈಗಳು
ಈಗ ಅರಳಿದ ಹೂವು
ಕಳಚಿ ಕೈಗೆ ಬಂದಂತೆ
ನಾನು ಹಬೆಯಾಡುತ್ತಿದ್ದೆ
ಶಾಖಕ್ಕೆ ನಿನ್ನ ಮುಂಗೈ ಸುಟ್ಟಿತಾ?
ಧಾವಂತ ನನಗೆ
ಉಗುರು, ಗೆಣ್ಣುಗಳನ್ನೆಲ್ಲ ತೀಡಿದೆ
ಹುಡುಕಿದೆ ನನ್ನ ಕನಸಿನ ಚಿತ್ರಗಳನ್ನು
ನಿನ್ನ ಚರ್ಮದಲ್ಲಿ ಮೆತ್ತಗೆ ಉಸಿರಾಟ
ತೆಳ್ಳಗೆ ಬೆವರು
ಕೊರಳ ಮೇಲೆ ತುಟಿಯನೊತ್ತಿದೆ
ಕೊಳಲಾಯಿತು ಮನಸು
ಎಂಥದ್ದೋ ನಾದ ಪ್ರವಹಿಸುತ್ತದೆ
ಧಮನಿ ಧಮನಿಗಳಲ್ಲಿ
ಧ್ಯಾನ, ಧ್ಯಾನ, ಧ್ಯಾನ
ನನ್ನ ಚಿತ್ತ ಭಿತ್ತಿಗಳಲ್ಲಿ ನಿನ್ನ ಧ್ಯಾನ
ಧ್ಯಾನಕ್ಕೆ ಕುಳಿತಿದ್ದು ನಾನಲ್ಲದ ನಾನು
ನನ್ನ ಕಳಕೊಂಡ ನಾನು
ನೀನಾಗಿ ಹೋದ ನಾನು
ಎದೆಗೊತ್ತಿಕೊಂಡೆ
ನಿನ್ನ ನೆತ್ತಿಯ ಮೇಲೆ ನನ್ನ ಸುಡುಸುಡು ಉಸಿರು
ಕಟ್ಟಿದ್ದ ಉಸಿರು ಬಿಟ್ಟು ಬಿಡುಗಡೆ
ಉಸಿರು ಹಿಡಕೊಂಡಷ್ಟು ಹೊತ್ತು ಸಾವು
ಬಿಟ್ಟರೆ ಬದುಕು; ನಾನು ಬದುಕಿಕೊಂಡೆ
ಮೊಣಕಾಲೂರಿ ಮಡಿಲಲ್ಲಿ ಮುಖವೊಡ್ಡಿದೆ
ಮಿಂದೆ; ನಿನ್ನುಡಿಯ
ಘಮ್ಮೆನುವ ಮೈಗಂಧಲ್ಲಿ
ತೋಯ್ದು ಹೋದೆ
ಗಂಧಕ್ಕೂ ಜೀವಕ್ಕೂ ಬಿಡಿಸಲಾಗದ ನಂಟು
ನಿನಗೆ ಸಣ್ಣ ನಿದ್ದೆ
ನನ್ನ ಕಣ್ಣ ಪಹರೆಯಲ್ಲಿ
ನಿನ್ನ ದೇಹ ಬಾಗಿ ಒರಗಿದಾಗ
ನೀನಿರಲಿಲ್ಲ, ನಾನೇ ಎಲ್ಲವಾಗಿದ್ದೆ
ಅರೆತೆರೆದ ನಿನ್ನ ಕಣ್ಣರೆಪ್ಪೆಗಳಿಂದ
ನನ್ನ ಕಾವ್ಯ ಜಿನುಗುತ್ತಿದೆ
ನಾನು ಹೀರಿದೆ
ಒಳಗೆ ಇಳಿದಂತೆ ನಾನೇ ಕಾವ್ಯವಾದೆ
ಪ್ರೀತಿ ಅಂದರೆ ಸಮರ್ಪಣೆ
ಪ್ರೀತಿ ಅಂದರೆ ಚಮತ್ಕಾರ
ಪ್ರೀತಿ ಅಂದರೆ ನಿಜಾಯಿತಿ
ಹೀಗೇ ಏನೇನೇ ಕೇಳಿದ್ದೇನೆ
ನನಗನ್ನಿಸಿತು;
ಪ್ರೀತಿ ಅಂದರೆ ಆಗಾಗ
ವಿನಾಕಾರಣ ತುಂಬಿಕೊಳ್ಳುವ ನಿನ್ನ ಕಂಗಳು
ಕಣ್ಣುಗಳೆಡೆಯಲ್ಲಿ ಹುಟ್ಟುವ ಕಾಮನಬಿಲ್ಲು
ನೀನು ಭೂಮಿ
ನನ್ನ ಹೊರುವಾಸೆ ನಿನಗೆ
ನಿನ್ನ ತೋಳೊಳಗೆ ಸೇರುವ ಮೊದಲು
ಎದೆಯ ನೋವು ಕಿತ್ತೆಸೆಯಬೇಕು
ಸುಖ ತುಂಬಾ ಹಗುರ
ರೆಕ್ಕೆ ಬಿಚ್ಚಿ ಪಕ್ಷಿ ಹಾರಿದಂತೆ
ನೋವು ಭಾರ ಭಾರ
ಎದೆ ಜೋತುಬೀಳುತ್ತದೆ
ಹಕ್ಕಿಯ ಪುಕ್ಕದಷ್ಟೇ ಹಗುರಾಗಿ
ನಿನ್ನ ಮೇಲೆ ಬಂದು ಕೂರಬೇಕು
ಕೂತು, ಮಲಗಿ, ಕೊಸರಿ, ಬೆವರಿ
ಕಡೆಗೆ ನಿಶ್ಚಲನಾಗಬೇಕು
ಬಟ್ಟೆ ಬಚ್ಚಿ ಕಳಚಿದಷ್ಟೇ ಸರಾಗವಾಗಿ
ಮೈಯ ಅಂಗಾಗಗಳನ್ನೆಲ್ಲ ಕಳಚಿಡಬೇಕು
ಎಲ್ಲ ಕಳಚಿ, ಏನೂ ಇಲ್ಲದಂತಾಗಿ
ನಿನ್ನೊಳಗೆ ನಿರ್ವಾಣವಾಗಿ ಪ್ರವೇಶಿಸಬೇಕು.
ನಿನ್ನ ಸ್ಮೃತಿಯನ್ನು ಮುಟ್ಟಿ ಮುಟ್ಟಿ ಬರಬೇಕು
ಹಣೆಯೊಳಗೆ ಇಳಿದು ಗಂಟಲಿಗೆ ಪ್ರವೇಶಿಸಬೇಕು
ಹೊರಗೆ ಬರಲಾರೆ, ಅಲ್ಲೇ ಇದ್ದು
ಲೋಕದ ಸದ್ದುಗಳನ್ನೆಲ್ಲ ಕೇಳಿಸಿಕೊಳ್ಳಬೇಕು
ಹೌದು ಕಣೇ,
ನಾನು ದೇಹದಿಂದ ಮುಕ್ತನಾಗಬೇಕು
ಆಮೇಲೆ ನಿನ್ನ ಪವಿತ್ರ ಆತ್ಮದಲ್ಲಿ ಕರಗಬೇಕು
ಇಕೋ ಬಂದೆ
ನಿನ್ನ ಹಣೆಯಲ್ಲಿ ಹೊಳೆವ ಸಿಂಧೂರದ
ನಟ್ಟ ನಡುವಿನಲ್ಲೇ ಒಂದು ಚುಕ್ಕಿಯಾಗಿ
ಇಳಿಯುತ್ತೇನೆ
ಆಳ
ಆಳ
ಮತ್ತೂ ಆಳ
ಮತ್ತೆಂದೂ ಹೊರಗೆ ಬಾರದಷ್ಟು
ಆಳ
No comments:
Post a Comment