ಅಯ್ಯಾ
ಗಂಟಲು ತುಂಬಿ ಬರುವ
ಪ್ರೀತಿಯನ್ನು ಹೀಗೆ
ಧರಿಸುವುದು ಇಷ್ಟೊಂದು
ಕಷ್ಟವೆಂದು ಗೊತ್ತಿರಲಿಲ್ಲ
ಶಕ್ತಿ ಕೊಡು
ಮೀನಿಗೆ ನೀರಲ್ಲಿ
ಈಜುವುದು ಗೊತ್ತು
ನೀರೇ ಆಗಿಬಿಡುವುದು ಕಷ್ಟ
ಮೀನೂ, ನೀರೂ ಎರಡೂ ಆಗಿ
ಈಜುತ್ತಿದ್ದೇನೆ, ರೆಕ್ಕೆಗಳಿಗೆ ಎಲ್ಲಿಲ್ಲದ ಕಸುವು
ನಾನು ಸಮುದ್ರದಡಿಯ
ಕಪ್ಪೆಚಿಪ್ಪು
ಹೊರಗಿನ ಕವಾಟ ಗಟ್ಟಿ
ಒಳಗೆ ಪಿತಪಿತ, ಬಲು ಸೂಕ್ಷ್ಮ
ನಿನ್ನ ಕೈಯಾರೆ ನನ್ನ ಉಪಚರಿಸು
ಎಲ್ಲ ತೊರೆದು ಹೋಗಿ
ಕಾಡಗರ್ಭದಲ್ಲಿ ನಿಂತರೂ
ಇದೊಂದು ಪ್ರೀತಿ
ಎದೆಗೊತ್ತಿ ನಿಲ್ಲುತ್ತದೆ
ಬುದ್ಧನ ನಿಲುವಂಗಿ ಕಿತ್ತೆಸೆದು
ನಿರ್ವಾಣನಾಗಿ ಓಡಿಬರುತ್ತೇನೆ
ಅಯ್ಯಾ
ಶಕ್ತಿ ಕೊಡು
ಇದನ್ನು ತೊರೆದು ಬದುಕಲಾರೆ
ಧರಿಸಬೇಕು
ಹಣೆಯ ಮೇಲೆ, ನೆತ್ತಿಯ ಮೇಲೆ
ಎದೆಯ ಮೇಲೆ
ಎಲ್ಲೆಂದರಲ್ಲಿ ಧರಿಸಬೇಕು
ತೇಯ್ದು ಹಚ್ಚಿದ ಗಂಧದ ಅಂಟು
ಕೊರಳ ಸುತ್ತ ಘಮಘಮಿಸಬೇಕು
ಧರಿಸಬೇಕು,
ಚರ್ಮವನು ದಾಟಿ ಒಳಗೆ, ಇನ್ನೂ ಒಳಗೆ
ಕಣ್ಣಪಾಪೆಯ ಒಳಗೆ, ಮಿದುಳ ಬಳ್ಳಿಯ ಮೇಲೆ
ಕರುಳ ಸುರಂಗದ ಒಳಗೆ, ಹೃದಯ ಕವಾಟಗಳ ಮೇಲೆ
ಎಲ್ಲೆಂದರಲ್ಲಿ ಧರಿಸಬೇಕು
ಅಯ್ಯಾ,
ಪ್ರೀತಿ ಧರಿಸುವುದು ಅಷ್ಟು ಸುಲಭವಲ್ಲ
ನನ್ನದೆನ್ನುವ ಎಲ್ಲವನ್ನೂ ಕಿತ್ತು ಒಗೆಯಬೇಕು
ಸಾವಿನ ಕುಲುಕುಲು ನಗುವಿಗೆ
ಹತ್ತಿರ, ಮತ್ತಷ್ಟು ಹತ್ತಿರವಾಗಬೇಕು
ಅದರ ಹಿತವಾದ ಸಪ್ಪಳಕ್ಕೆ ಕಿವಿಯಾಗಬೇಕು
ನೀನು ನಿರಾಕಾರಿ, ನಿರಂಹಕಾರಿ, ನಿರ್ಗುಣಿ
ಎಲ್ಲ ಧರಿಸಿ ನಿಲ್ಲಬಲ್ಲೆ;
ನನ್ನ ಪಾಡು ಕೇಳು
ಇದರ ಸುಖಾನುಭೂತಿಗೆ
ಮುಟ್ಟಿದಲ್ಲೆಲ್ಲ ರಕ್ತ ಜಿನುಗುತ್ತದೆ
ಆ ಕೆಂಪಿನಲ್ಲಿ
ನನ್ನ ಬಣ್ಣಗಳೆಲ್ಲ ದಿಕ್ಕಾಪಾಲಾಗಿದೆ
ಪ್ರೀತಿಯನ್ನು ಧರಿಸುವುದೆಂದರೆ
ಕಾಲನ ಜತೆ ಅನುಸಂಧಾನ
ಸಾವಿನ ಜತೆ ಕುಶಲೋಪರಿ
ನಿನ್ನ ಜತೆಗೆ ಹುಸಿ ಮುನಿಸು
ಅಯ್ಯಾ ಶಕ್ತಿ ಕೊಡು
ಈ ಆಸೀಮ ಪ್ರೀತಿಯನ್ನು ಧರಿಸಿದ್ದೇನೆ
ಬೆಳಕು ಬೊಗಸೆಯಲ್ಲಿ ಕುಳಿತಿದೆ
ಅದು ಚೆಲ್ಲದಂತೆ ಗಟಗಟ ಕುಡಿದುಬಿಡಲು
ಪ್ರಾಣವಾಯು ಕೊಡು
ನಾನು ಮತ್ತೆ ಉಸಿರಾಡುತ್ತೇನೆ
No comments:
Post a Comment