Wednesday, August 8, 2012

ಆನಂತರ....

ಮೂಗಿಗೆ ಯಾರೋ ಹತ್ತಿ ಗಿಡಿದಿದ್ದಾರೆ
ಕಿರಿಕಿರಿ, ಯಾತನೆ
ಜೋರಾಗಿ ಉಸಿರುಬಿಟ್ಟು ಹತ್ತಿ ಹಾರುವಂತೆ ಮಾಡಲಾರೆ
ಉಸಿರು ನಿಂತು ಹೋಗಿದೆ

ಕೈಗಳನ್ನು ಕಾಲುಗಳನ್ನು ಮಡಿಚಿದ್ದಾರೆ
ಊಹೂಂ, ಅಕ್ಷರಶಃ ಲಟಲಟನೆ ಮುರಿದಿದ್ದಾರೆ
ನೋವಿಗೆ ಚೀರೋಣವೆಂದರೆ ನಾಲಗೆ ಹೊರಳುತ್ತಿಲ್ಲ
ಹಣೆಯ ಮೇಲೆ ವಿಭೂತಿ ಬಳಿಯಲಾಗಿದೆ
ನಂಗೆ ವಿಭೂತಿ, ಕುಂಕುಮ ಅಲರ್ಜಿ ಕಣ್ರಯ್ಯಾ,
ನವೆತ ಶುರುವಾಗುತ್ತೆ ಅಂತ ಹೇಳಬೇಕಿನಿಸುತ್ತದೆ, ಆಗುತ್ತಿಲ್ಲ
ಹಣೆಯ ಮೇಲೆ ನಾಲ್ಕಾಣೆ ಪಾವಲಿ ಅಂಟಿಸಲಾಗಿದೆ
ಅದು ತಣ್ಣಗೆ ಕೊರೆಯುತ್ತಿದೆ ಎದೆಯವರೆಗೆ

ಬಾಯಿ ಬಿಡಿಸಿದಂತೇ ಇದೆ;
ಇಡೀ ನೆತ್ತಿ ಗಲ್ಲ ಒಂದು ಮಾಡಿ ಬ್ಯಾಂಡೇಜು ಕಟ್ಟಿ
ಬಾಯಿ ಮುಚ್ಚಿದ್ದಾರೆ
ಆದರೂ ಹಲ್ಲು ಕಾಣುತ್ತಿದೆ; ವಿಕಾರವಾಗಿ
ಹೀಗೆ ಕಟ್ಟುವ ಬದಲು ತುಟಿಗಳನ್ನು ಹೊಲೆದುಬಿಡಬಾರದಿತ್ತೆ
ಎಂಬ ಪ್ರಶ್ನೆ ನನ್ನದು, ಯಾರನ್ನು ಕೇಳಲಿ?

ಸ್ನಾನಕ್ಕೆ ಕರೆದೊಯ್ದಿದ್ದರು, ಬೆನ್ನು ನಿಲ್ಲುತ್ತಿರಲಿಲ್ಲ
ಒಬ್ಬ ಭುಜ ಹಿಡಿದುಕೊಂಡಿದ್ದ
ಪೂರ್ತಿ ಬೆತ್ತಲೆ ನಾನು
ಇಷ್ಟು ವರ್ಷ ಮುಚ್ಚಿಟ್ಟುಕೊಂಡಿದ್ದ ಕಲೆಗಳು, ವ್ರಣಗಳು, ಮಚ್ಚೆಗಳು
ಎಲ್ಲಾ ಬಟಾಬಯಲು
ಬಿಸಿಬಿಸಿ ನೀರು ಸುರಿಯುತ್ತಿದ್ದಾರೆ, ಮೈ ಹಬೆಯಾಡುತ್ತಿದೆ
ಒಂದು ಕೈ ಒರಟಾಗಿ ಉಜ್ಜಿದ್ದಕ್ಕೆ ಎದೆಯ ಚರ್ಮ ಕಿತ್ತುಬಂದಿದೆ
ಇಶ್ಯೀ ಎಂದು ಆ ಕೈಯನ್ನು ಸೋಪಿನಿಂದ ಉಜ್ಜಿ ತೊಳೆಯಲಾಗಿದೆ

ನಾನು ಸತ್ತಿದ್ದೇನೆ
ಹಾಗಂತ ಎಲ್ಲ ಮಾತನಾಡುತ್ತಿದ್ದಾರೆ
ಈಗ ನಾನು ಅವನೂ ಅಲ್ಲ, ಇವನೂ ಅಲ್ಲ, ಅದು ಮಾತ್ರ
ದೊಡ್ಡಗಂಟಲಲ್ಲಿ ಯಾರೋ ಅಳುತ್ತಿದ್ದಾರೆ
ತಲೆ ಸವರಿ ಸಮಾಧಾನ ಹೇಳಬೇಕಿನಿಸುತ್ತಿದೆ, ಹೇಳಲಾರೆ

ರಾಶಿರಾಶಿ ಹೂವು, ಅದರ ಗಂಧಕ್ಕೆ ವಾಕರಿಕೆಯಾಗುತ್ತಿದೆ
ಪಕ್ಕದಲ್ಲಿ ಹಚ್ಚಿಟ್ಟ ಕಂತೆಗಟ್ಟಲೆ ಅಗರಬತ್ತಿಯ ಘಮವೂ ಹೇಸಿಗೆ
ಹೂವ ಒಡಲಲ್ಲಿ ಸಾವಿನ ಗಂಧ ಹುಟ್ಟಿದ್ದನ್ನು ಇವತ್ತೇ ನೋಡಿದ್ದು ನಾನು

ಅದೋ ವಿದ್ಯುತ್ ಚಿತಾಗಾರ
ಎಲ್ಲ ಕಿತ್ತು ಬರಿಮೈಯನ್ನು ಒಳಗೆ ತಳ್ಳಲಾಗಿದೆ
ಎಂಥದ್ದೋ ಅಸಂಬದ್ಧ ಮಂತ್ರ, ಚೀರಾಟ
ಬಾಗಿಲು ಮುಚ್ಚಿದ ಮೇಲೆ ಒಳಗೆ ಕಂಡಿದ್ದು
ಬೆಂಕಿಯ ಕುಲುಮೆ, ಇನ್ಯಾವುದೋ ಹೆಣ ಬೇಯುವ ಚಿಟಪಟ ಸದ್ದು

ನಾನೀಗ ಬೇಯುತ್ತೇನೆ, ಗಂಟೆಗಟ್ಟಲೆ
ಬೂದಿಯಾಗುವವರೆಗೆ
ಬೂದಿ ಯಾವುದೋ ನದಿಯಲ್ಲಿ ಕರಗಿಹೋಗುತ್ತದೆ

ಬೆಂಕಿಯಲ್ಲಿ, ನೀರಲ್ಲಿ, ಗಾಳಿಯಲ್ಲಿ, ಮಣ್ಣಿನಲ್ಲಿ
ನನ್ನ ದೇಹ ಹರಿದು ಹಂಚಿಹೋಗಿದೆ

ಎಲ್ಲ ವಿಸರ್ಜನೆಯಾದ ಮೇಲೆ ಈಗ ನಿರಾಳ
ನನ್ನನ್ನು ನಾನು ಸುಲಭವಾಗಿ
ಹುಡುಕಿಕೊಳ್ಳಬಹುದು;
ಯಾರ ಅಂಕೆ, ತಂಟೆ, ತಕರಾರುಗಳೂ ಇಲ್ಲದೆ
ನಾನೀಗ ಸ್ವಯಂಪೂರ್ಣ

No comments: