ವಿಪರೀತ ಹೊಟ್ಟೆ ನೋವು ಕಣೇ ಅಮ್ಮ
ಎಂದು ನರಳಾಡುವಾಗ
ಆಕೆ ಭಟ್ಟಿ ಜಾರಿರಬೇಕು ಎಂದು ಧಾವಂತಕ್ಕೆ ಬಿದ್ದಳು
ಹೊಕ್ಕುಳ ಮೇಲೆ ಸೆಗಣಿಯ ಕೆರಕ
ಅದರ ಮೇಲೆ ದೀಪ ಹಚ್ಚಿಟ್ಟಳು
ಹೊಟ್ಟೆ ನೀವಿ ನೀವಿ
ಜಾರಿದ ಭಟ್ಟಿ ಮತ್ತೆ ಸ್ವಸ್ಥಾನಕ್ಕೆ
ನನಗೂ ಅವಳಿಗೂ
ಯಾತನೆಯಿಂದ ಬಿಡುಗಡೆ
ಅವತ್ತು ಆ ದೀಪದ ಬೆಳಕಿಗೆ ಕಣ್ಣು ಕೀಲಿಸಿ ನಿಂತಿದ್ದು
ಇವತ್ತಿಗೂ ಹಾಗೇ ನೆಟ್ಟನೋಟದಲ್ಲಿ ನೋಡುತ್ತಿದ್ದೇನೆ
ಹೊಕ್ಕುಳ ಮೇಲೆ ಹಚ್ಚಿಟ್ಟ ಹಣತೆ
ಉರಿದರೆ ಬದುಕು, ಆರಿದರೆ ಸಾವು
ದೀಪ ಆರದಂತೆ ಬದುಕಬೇಕು
ಅದು ಬೆಳಗುವಷ್ಟು ಕಾಲ ಸಾವೂ ಜೀವಂತ
ಹೊಕ್ಕುಳ ಮೇಲೆ ದೀಪ ಹಚ್ಚಿಟ್ಟು
ವರ್ಷಗಳು ಆದ ಮೇಲೆ ಒಂದೊಂದೇ ಗಾಯ
ಯಾರೋ ಜಿಗುಟಿದ್ದು, ಚುಚ್ಚಿದ್ದು..
ಒಮ್ಮೊಮ್ಮೆ ನಾನೇ ತರಿದುಕೊಂಡಿದ್ದು
ಈ ನೋವು ತಡಕೊಳ್ಳಬೇಕು
ತಡಕೊಂಡಷ್ಟು ಕಾಲ ದೀಪ ಬೆಳಗುತ್ತದೆ
ದೀಪದ ಬೆಳಕಿಗೆ ಕಣ್ಣು ಕೊಟ್ಟಿದ್ದೇನೆ
ಕಣ್ಣುಗುಡ್ಡೆಗಳಲ್ಲಿ ಮಂಜು ಮಂಜು
ಆಗಾಗ ನೀರು ಧಾರೆ ಧಾರೆ; ವಿನಾಕಾರಣ
ಸುಖಾಸುಮ್ಮನೆ ಒಂದಷ್ಟು ಹೊಕ್ಕುಳ ಬಳ್ಳಿಗಳು
ಹೀಗೇ ಹುಟ್ಟಿಕೊಳ್ಳುತ್ತವೆ
ಯಾರೋ ಕತ್ತರಿಸಿ ಕತ್ತರಿಸಿ ಎಸೆಯುತ್ತಾರೆ
ನಾನು ಅಸಹಾಯಕ
ಕೂಸು ಅಲ್ಲಿ ವಿಲಕ್ಷಣವಾಗಿ ಕಿರುಚಿ
ಸಾಯುವುದನ್ನು ನೋಡಲಾರೆ
ಧಮನಿಧಮನಿಗಳಿಂದ ರಕ್ತ ಹರಿಸಿದ್ದೆ
ಈಗ ಕಡುಗೆಂಪು ನನ್ನ ಹೊಟ್ಟೆಯಮೇಲೆ
ಮಾಂಸ ಕತ್ತರಿಸುವ ಮರದ ತುಂಡು
ದೀಪದ ಬೆಳಕ ದಿಟ್ಟಿಸುತ್ತಲೇ ಇದ್ದೇನೆ
ಇದೇನು ಸಾವೋ, ಬದುಕೋ
ಒಂದೂ ಅರ್ಥವಾಗದ ಸೋಜಿಗ
ಕಣ್ಣುಗಳು ಬಳಲಿವೆ, ಇನ್ನು ನೋಡಲಾರೆ
ದೃಷ್ಟಿ ತೆಗೆದ ಕೂಡಲೇ ದೀಪ ಆರುತ್ತದೆ
ಜೀವ ಆರುವ ಕ್ಷಣಕ್ಕೆ ಸಿದ್ಧನಾಗಬೇಕು
ಅಮ್ಮನಿಗೆ ಕೇಳಬೇಕಿನಿಸುತ್ತದೆ
ಭಟ್ಟಿಯಲ್ಲ, ಜಾರುತ್ತಿರುವುದು ಜೀವ
ಉಳಿಸಿಕೊಡು, ಆತ್ಮವನ್ನು ನೀವಿನೀವಿ
No comments:
Post a Comment