Wednesday, August 8, 2012

ಆಕಾರ....

ಆಕಾರಗಳ ಮಾತು ಬಿಡು
ಇಲ್ಲಿ ಯಾವುದಕ್ಕೂ ಆಕಾರವಿಲ್ಲ
ಬಾಚಿ ತಬ್ಬಿದಂತೆಲ್ಲ
ನಾನು ನಿನಗೊಂದು ಹಿಡಿ
ನೀನು ನನಗೊಂದು ಹಿಡಿ

ಇಡಿಯಾಗಿ ಹಿಡಿದೆವೆಂಬ ಭ್ರಮೆಗೆ
ಆಯಸ್ಸು ಕಡಿಮೆ
ಹುಡುಕುತ್ತ ಹೋದರೆ, ಹಿಡಿಯುತ್ತ ಹೋದರೆ
ಎಲ್ಲವೂ ಅಮೂರ್ತ

ಮಣ್ಣು ಕಲೆಸಿ ಮಡಿಕೆ ಮಾಡಿದವನಿಗಷ್ಟೇ ಗೊತ್ತು
ಮಣ್ಣೂ ಮಡಕೆಯೂ ಒಂದೇ ಎಂದು
ಮಣ್ಣು ಅನ್ನವೂ ಆಗುತ್ತದೆ
ಅನ್ನ ಅದೇ ಮಡಕೆಯೊಳಗೆ ಬೇಯುತ್ತದೆ
ಅನ್ನ ಬೂದಿಯೂ ಆಗುತ್ತದೆ

ಹೂಂ, ನೀ ಹೇಳುವುದು ನಿಜ
ಕಂಡ ಆಕೃತಿಗಳು ಸುಳ್ಳಾದರೆ
ನಿಜಾಯಿತಿಯ ಕೊರಳು ಕೊಯ್ದುಹೋದರೆ
ನೋವ ಸಹಿಸುವುದು ಕಷ್ಟ

ಉಸಿರು, ನಿಟ್ಟುಸಿರು
ಹಾಗೆ ದೀರ್ಘವಾಗಿ ಎಳೆಯಬೇಡ
ವಾಪಾಸು ಬರುವ ಗಾಳಿ
ಈಟಿಯಂತೆ ಚುಚ್ಚುತ್ತದೆ;
ನಿನ್ನನ್ನೂ ನನ್ನನ್ನೂ

ಹಾಗೆ ನೋಡಿದರೆ
ಉಸಿರಿಗೂ ನೋವಿಗೂ ಆಕಾರವಿಲ್ಲ
ಕಣ್ಣಂಚಲ್ಲಿ ಜಿನುಗುವ ನೀರಿಗೂ ಆಕಾರವಿಲ್ಲ

ಅದಕ್ಕೆ ಹೇಳಿದ್ದು ಕಣೇ
ಆಕಾರಗಳ ಗೊಡವೆ ಬಿಡು
ಬಾ, ನನ್ನೆದೆಗೂಡಲ್ಲಿ ಬೆಚ್ಚಗೆ ಮಲಗು
ಎದೆಗೂಡಿಗೊಂದು ಆಕಾರ ಸಿಕ್ಕರೂ ಸಿಗಲಿ

No comments: