-೧-
ಪಾತಿ ಮಾಡಿ, ಈಗ ಹುಗಿದಿಟ್ಟ ಗಿಡದಂತೆ
ಮಾತು, ಮಾತು
ಅದು ಬೆಳೆದಂತೆ ಮೌನ ಮುಸುಕು ಹೊದ್ದು
ಮಲಗಿದೆ, ಗಾಢ ನಿದ್ದೆ
-೨-
ನಿಜ, ಒಂದು ಹಿತವಾದ ಅಪ್ಪುಗೆಗೆ
ಸಾವಿರ ಮಾತಿನ ಶಕ್ತಿ
ಆದರೆ, ತಬ್ಬಿದಾಗ ಆಡಿದ ಮಾತಿಗೆ
ಲಕ್ಷ ದೀಪಗಳ ಮೆರುಗು
-೩-
ನಾನು ನಿದ್ದೆಗೆ ಹೊರಳಿದ್ದಾಗ
ನೀನು ಪೂರ್ಣ ಎಚ್ಚರ
ನಿನ್ನ ಕಣ್ಣ ಪಹರೆಯಲ್ಲಿ
ನಾನು ಯುಗಯುಗಗಳನ್ನು ದಾಟಿ ಹೋದೆ
-೪-
ಈಗಷ್ಟೆ ತೊಟ್ಟು ಕಳಚಿದ
ಹೂವು ನಿನ್ನ ಪಾದದ ಮೇಲೆ
ಹೂವಿಗಂಟಿದ ನೀರಹನಿಯಾಗಿ ಸೋಕಿದ್ದೇನೆ
ಧೂಳಿನ ಜತೆ ನೀರ ಸರಸ
-೫-
ನೀನು ನನ್ನ ಎಂದೂ ತೀರದ ಹಸಿವು
ಭಗಭಗನೆ ಒಡಲು ಉರಿಸುವ ದಾಹ
ಪ್ರೀತಿ ಮೋಕ್ಷವೂ ಅಲ್ಲ, ಧರ್ಮವೂ ಅಲ್ಲ
ಪ್ರೀತಿ ಹಸಿವು, ಪ್ರೀತಿ ದಾಹ
-೬-
ನಿನ್ನ ಕಂಡುಕೊಳ್ಳುವುದಕ್ಕೆ
ನೀನಾಗಹೊರಟೆ ನಾನು
ದಾರಿಗುಂಟ ಸಾವಿರ ವಿಸ್ಮಯ
ನೀನಾಗುವುದೆಂದರೆ ಹೊಸಜನ್ಮ ಎತ್ತಿ ಬರುವುದು
-೭-
ಎಷ್ಟೊಂದು ಹೆಜ್ಜೆ ಗುರುತುಗಳು
ನಿನ್ನವೂ ನನ್ನವೂ
ಒಂದರ ಮೇಲೊಂದು ಹರಡಿ
ಮಿಲನದ ಖುಷಿಯಲ್ಲಿವೆ
-೮-
ನೀನು ಪ್ರೀತಿಸುವ ಮುನ್ನ
ಈ ನನ್ನ ಕಾಯ ಇಷ್ಟು ಪ್ರಿಯವಾಗಿರಲಿಲ್ಲ
ಆತ್ಮವನ್ನು ಹೀಗೆ ಬೆತ್ತಲೆಯಾಗಿ
ನೋಡುವ ಶಕ್ತಿಯೂ ನನಗಿರಲಿಲ್ಲ
-೯-
ನಿನ್ನನ್ನು ಪ್ರೀತಿಸುವುದೆಂದರೆ
ಎಲ್ಲ ಅರ್ಥಗಳನ್ನು ಒಡೆದು ಕಟ್ಟುವುದು
ಪ್ರೀತಿ, ಕಾಮ, ನೋವು, ಸಾವು
ಎಲ್ಲದಕ್ಕೂ ಹೊಸ ಅರ್ಥಗಳನ್ನು ಸೃಜಿಸುವುದು
-೧೦-
ಪ್ರೀತಿ ಕೊಡುವುದು ಸುಲಭ
ನಿನ್ನ ಸಮುದ್ರದ ಅಲೆಗಳಂಥ ಪ್ರೀತಿಗೆ
ತಾಳಿಕೊಳ್ಳುವುದು ಕಷ್ಟ
ನಾನೀಗ ದಡವಾಗಿ ಉಳಿದಿಲ್ಲ
No comments:
Post a Comment