ಕಾಯಬೇಕು ಹೀಗೆ
ಕಾಲದ ತಲೆಯ ಮೇಲೆ ಮೆಟ್ಟಿಕೊಂಡು
ಹಲ್ಲುಕಚ್ಚಿ, ಎದೆ ಕಲ್ಲುಮಾಡಿಕೊಂಡು
ಕಾಯುವುದು ಸಲೀಸಾಗಬೇಕು;
ಒಳಗೆ ಬೇಯುವುದು ಗೊತ್ತಾಗದಂತೆ
ನೋಯದ ಹೊರತು
ಎದೆಯಲ್ಲಿ ನಾದ ಹುಟ್ಟದು
ಭೂಮಿ ಹುಟ್ಟಿದ್ದೇ ದೊಡ್ಡ ಆಸ್ಫೋಟದಿಂದ
ಎಂದು ಕೇಳಿದ ನೆನಪು
ನಿನ್ನ ಸೋಕಿದ ಮೇಲೆ
ಇಹಕ್ಕೂ ಪರಕ್ಕೂ ವ್ಯತ್ಯಾಸವೆಂಬುದಿಲ್ಲ
ಎರಡರ ನಡುವೆ ನನ್ನದು ನಿರಂತರ ಚಲನೆ
ಕತ್ತಲು ಗರ್ಭಗುಡಿಯಲ್ಲಿ
ನಿನ್ನ ಮೂರ್ತಿಯೊಂದರ ಹೊರತು ಮತ್ತೇನೂ ಇಲ್ಲ
ನನ್ನ ಒಡಲ ನಡುಕ
ಈಗ ನನಗೇ ಕಾಣುವಷ್ಟು ಮೂರ್ತ
ಕಾಯ ಬಳಲುತ್ತದೆ
ಜೀವ ಹಿಡಿಯಾಗಿ ನಲುಗುತ್ತದೆ
ಆದರೂ ಪರಸ್ಪರ ಕಾಯಬೇಕು
ಒಳಗೊಳಗೆ ಹೊರಳಿಹೊರಳಿ
ಮುದ್ದೆಯಾಗಿ, ಹಿಡಿಯಾಗಿ, ಧೂಳಾಗಬೇಕು
ನೀನು ಎಚ್ಚರವಿದ್ದಾಗ ನಾನು ನಿದ್ದೆ
ನಾನು ಎಚ್ಚರವಿದ್ದಾಗ ನೀನು ನಿದ್ದೆ
ನಿನ್ನ ಕನಸನ್ನು ನಾನು ಕಾಯುವೆ
ನನ್ನ ಕನಸನ್ನು ನೀನು ಕಾಯುತ್ತೀಯ
ನಿದ್ದೆಯಲ್ಲೇ ನಮ್ಮ ಎಚ್ಚರವನ್ನು ಮುಟ್ಟಬೇಕು
ಪ್ರಜ್ಞೆಯ ತಳದಲ್ಲಿ ವಿಶ್ವಾಸದ ಬೆಳಕು ಹುಡುಕಬೇಕು
ಕಾಯೋಣ ಕಣ್ಣೆವೆ ಮುಚ್ಚದೆ
No comments:
Post a Comment