Wednesday, August 8, 2012

ಕಾಯಬೇಕು

ಕಾಯಬೇಕು ಹೀಗೆ
ಕಾಲದ ತಲೆಯ ಮೇಲೆ ಮೆಟ್ಟಿಕೊಂಡು
ಹಲ್ಲುಕಚ್ಚಿ, ಎದೆ ಕಲ್ಲುಮಾಡಿಕೊಂಡು
ಕಾಯುವುದು ಸಲೀಸಾಗಬೇಕು;
ಒಳಗೆ ಬೇಯುವುದು ಗೊತ್ತಾಗದಂತೆ

ನೋಯದ ಹೊರತು
ಎದೆಯಲ್ಲಿ ನಾದ ಹುಟ್ಟದು
ಭೂಮಿ ಹುಟ್ಟಿದ್ದೇ ದೊಡ್ಡ ಆಸ್ಫೋಟದಿಂದ
ಎಂದು ಕೇಳಿದ ನೆನಪು

ನಿನ್ನ ಸೋಕಿದ ಮೇಲೆ
ಇಹಕ್ಕೂ ಪರಕ್ಕೂ ವ್ಯತ್ಯಾಸವೆಂಬುದಿಲ್ಲ
ಎರಡರ ನಡುವೆ ನನ್ನದು ನಿರಂತರ ಚಲನೆ

ಕತ್ತಲು ಗರ್ಭಗುಡಿಯಲ್ಲಿ
ನಿನ್ನ ಮೂರ್ತಿಯೊಂದರ ಹೊರತು ಮತ್ತೇನೂ ಇಲ್ಲ
ನನ್ನ ಒಡಲ ನಡುಕ
ಈಗ ನನಗೇ ಕಾಣುವಷ್ಟು ಮೂರ್ತ

ಕಾಯ ಬಳಲುತ್ತದೆ
ಜೀವ ಹಿಡಿಯಾಗಿ ನಲುಗುತ್ತದೆ
ಆದರೂ ಪರಸ್ಪರ ಕಾಯಬೇಕು
ಒಳಗೊಳಗೆ ಹೊರಳಿಹೊರಳಿ
ಮುದ್ದೆಯಾಗಿ, ಹಿಡಿಯಾಗಿ, ಧೂಳಾಗಬೇಕು

ನೀನು ಎಚ್ಚರವಿದ್ದಾಗ ನಾನು ನಿದ್ದೆ
ನಾನು ಎಚ್ಚರವಿದ್ದಾಗ ನೀನು ನಿದ್ದೆ
ನಿನ್ನ ಕನಸನ್ನು ನಾನು ಕಾಯುವೆ
ನನ್ನ ಕನಸನ್ನು ನೀನು ಕಾಯುತ್ತೀಯ
ನಿದ್ದೆಯಲ್ಲೇ ನಮ್ಮ ಎಚ್ಚರವನ್ನು ಮುಟ್ಟಬೇಕು
ಪ್ರಜ್ಞೆಯ ತಳದಲ್ಲಿ ವಿಶ್ವಾಸದ ಬೆಳಕು ಹುಡುಕಬೇಕು

ಕಾಯೋಣ ಕಣ್ಣೆವೆ ಮುಚ್ಚದೆ

ಆನಂತರ....

ಮೂಗಿಗೆ ಯಾರೋ ಹತ್ತಿ ಗಿಡಿದಿದ್ದಾರೆ
ಕಿರಿಕಿರಿ, ಯಾತನೆ
ಜೋರಾಗಿ ಉಸಿರುಬಿಟ್ಟು ಹತ್ತಿ ಹಾರುವಂತೆ ಮಾಡಲಾರೆ
ಉಸಿರು ನಿಂತು ಹೋಗಿದೆ

ಕೈಗಳನ್ನು ಕಾಲುಗಳನ್ನು ಮಡಿಚಿದ್ದಾರೆ
ಊಹೂಂ, ಅಕ್ಷರಶಃ ಲಟಲಟನೆ ಮುರಿದಿದ್ದಾರೆ
ನೋವಿಗೆ ಚೀರೋಣವೆಂದರೆ ನಾಲಗೆ ಹೊರಳುತ್ತಿಲ್ಲ
ಹಣೆಯ ಮೇಲೆ ವಿಭೂತಿ ಬಳಿಯಲಾಗಿದೆ
ನಂಗೆ ವಿಭೂತಿ, ಕುಂಕುಮ ಅಲರ್ಜಿ ಕಣ್ರಯ್ಯಾ,
ನವೆತ ಶುರುವಾಗುತ್ತೆ ಅಂತ ಹೇಳಬೇಕಿನಿಸುತ್ತದೆ, ಆಗುತ್ತಿಲ್ಲ
ಹಣೆಯ ಮೇಲೆ ನಾಲ್ಕಾಣೆ ಪಾವಲಿ ಅಂಟಿಸಲಾಗಿದೆ
ಅದು ತಣ್ಣಗೆ ಕೊರೆಯುತ್ತಿದೆ ಎದೆಯವರೆಗೆ

ಬಾಯಿ ಬಿಡಿಸಿದಂತೇ ಇದೆ;
ಇಡೀ ನೆತ್ತಿ ಗಲ್ಲ ಒಂದು ಮಾಡಿ ಬ್ಯಾಂಡೇಜು ಕಟ್ಟಿ
ಬಾಯಿ ಮುಚ್ಚಿದ್ದಾರೆ
ಆದರೂ ಹಲ್ಲು ಕಾಣುತ್ತಿದೆ; ವಿಕಾರವಾಗಿ
ಹೀಗೆ ಕಟ್ಟುವ ಬದಲು ತುಟಿಗಳನ್ನು ಹೊಲೆದುಬಿಡಬಾರದಿತ್ತೆ
ಎಂಬ ಪ್ರಶ್ನೆ ನನ್ನದು, ಯಾರನ್ನು ಕೇಳಲಿ?

ಸ್ನಾನಕ್ಕೆ ಕರೆದೊಯ್ದಿದ್ದರು, ಬೆನ್ನು ನಿಲ್ಲುತ್ತಿರಲಿಲ್ಲ
ಒಬ್ಬ ಭುಜ ಹಿಡಿದುಕೊಂಡಿದ್ದ
ಪೂರ್ತಿ ಬೆತ್ತಲೆ ನಾನು
ಇಷ್ಟು ವರ್ಷ ಮುಚ್ಚಿಟ್ಟುಕೊಂಡಿದ್ದ ಕಲೆಗಳು, ವ್ರಣಗಳು, ಮಚ್ಚೆಗಳು
ಎಲ್ಲಾ ಬಟಾಬಯಲು
ಬಿಸಿಬಿಸಿ ನೀರು ಸುರಿಯುತ್ತಿದ್ದಾರೆ, ಮೈ ಹಬೆಯಾಡುತ್ತಿದೆ
ಒಂದು ಕೈ ಒರಟಾಗಿ ಉಜ್ಜಿದ್ದಕ್ಕೆ ಎದೆಯ ಚರ್ಮ ಕಿತ್ತುಬಂದಿದೆ
ಇಶ್ಯೀ ಎಂದು ಆ ಕೈಯನ್ನು ಸೋಪಿನಿಂದ ಉಜ್ಜಿ ತೊಳೆಯಲಾಗಿದೆ

ನಾನು ಸತ್ತಿದ್ದೇನೆ
ಹಾಗಂತ ಎಲ್ಲ ಮಾತನಾಡುತ್ತಿದ್ದಾರೆ
ಈಗ ನಾನು ಅವನೂ ಅಲ್ಲ, ಇವನೂ ಅಲ್ಲ, ಅದು ಮಾತ್ರ
ದೊಡ್ಡಗಂಟಲಲ್ಲಿ ಯಾರೋ ಅಳುತ್ತಿದ್ದಾರೆ
ತಲೆ ಸವರಿ ಸಮಾಧಾನ ಹೇಳಬೇಕಿನಿಸುತ್ತಿದೆ, ಹೇಳಲಾರೆ

ರಾಶಿರಾಶಿ ಹೂವು, ಅದರ ಗಂಧಕ್ಕೆ ವಾಕರಿಕೆಯಾಗುತ್ತಿದೆ
ಪಕ್ಕದಲ್ಲಿ ಹಚ್ಚಿಟ್ಟ ಕಂತೆಗಟ್ಟಲೆ ಅಗರಬತ್ತಿಯ ಘಮವೂ ಹೇಸಿಗೆ
ಹೂವ ಒಡಲಲ್ಲಿ ಸಾವಿನ ಗಂಧ ಹುಟ್ಟಿದ್ದನ್ನು ಇವತ್ತೇ ನೋಡಿದ್ದು ನಾನು

ಅದೋ ವಿದ್ಯುತ್ ಚಿತಾಗಾರ
ಎಲ್ಲ ಕಿತ್ತು ಬರಿಮೈಯನ್ನು ಒಳಗೆ ತಳ್ಳಲಾಗಿದೆ
ಎಂಥದ್ದೋ ಅಸಂಬದ್ಧ ಮಂತ್ರ, ಚೀರಾಟ
ಬಾಗಿಲು ಮುಚ್ಚಿದ ಮೇಲೆ ಒಳಗೆ ಕಂಡಿದ್ದು
ಬೆಂಕಿಯ ಕುಲುಮೆ, ಇನ್ಯಾವುದೋ ಹೆಣ ಬೇಯುವ ಚಿಟಪಟ ಸದ್ದು

ನಾನೀಗ ಬೇಯುತ್ತೇನೆ, ಗಂಟೆಗಟ್ಟಲೆ
ಬೂದಿಯಾಗುವವರೆಗೆ
ಬೂದಿ ಯಾವುದೋ ನದಿಯಲ್ಲಿ ಕರಗಿಹೋಗುತ್ತದೆ

ಬೆಂಕಿಯಲ್ಲಿ, ನೀರಲ್ಲಿ, ಗಾಳಿಯಲ್ಲಿ, ಮಣ್ಣಿನಲ್ಲಿ
ನನ್ನ ದೇಹ ಹರಿದು ಹಂಚಿಹೋಗಿದೆ

ಎಲ್ಲ ವಿಸರ್ಜನೆಯಾದ ಮೇಲೆ ಈಗ ನಿರಾಳ
ನನ್ನನ್ನು ನಾನು ಸುಲಭವಾಗಿ
ಹುಡುಕಿಕೊಳ್ಳಬಹುದು;
ಯಾರ ಅಂಕೆ, ತಂಟೆ, ತಕರಾರುಗಳೂ ಇಲ್ಲದೆ
ನಾನೀಗ ಸ್ವಯಂಪೂರ್ಣ

ಹೊಕ್ಕುಳ ಮೇಲೆ ಹಚ್ಚಿಟ್ಟ ಹಣತೆ

ವಿಪರೀತ ಹೊಟ್ಟೆ ನೋವು ಕಣೇ ಅಮ್ಮ
ಎಂದು ನರಳಾಡುವಾಗ
ಆಕೆ ಭಟ್ಟಿ ಜಾರಿರಬೇಕು ಎಂದು ಧಾವಂತಕ್ಕೆ ಬಿದ್ದಳು
ಹೊಕ್ಕುಳ ಮೇಲೆ ಸೆಗಣಿಯ ಕೆರಕ
ಅದರ ಮೇಲೆ ದೀಪ ಹಚ್ಚಿಟ್ಟಳು
ಹೊಟ್ಟೆ ನೀವಿ ನೀವಿ
ಜಾರಿದ ಭಟ್ಟಿ ಮತ್ತೆ ಸ್ವಸ್ಥಾನಕ್ಕೆ
ನನಗೂ ಅವಳಿಗೂ
ಯಾತನೆಯಿಂದ ಬಿಡುಗಡೆ

ಅವತ್ತು ಆ ದೀಪದ ಬೆಳಕಿಗೆ ಕಣ್ಣು ಕೀಲಿಸಿ ನಿಂತಿದ್ದು
ಇವತ್ತಿಗೂ ಹಾಗೇ ನೆಟ್ಟನೋಟದಲ್ಲಿ ನೋಡುತ್ತಿದ್ದೇನೆ
ಹೊಕ್ಕುಳ ಮೇಲೆ ಹಚ್ಚಿಟ್ಟ ಹಣತೆ
ಉರಿದರೆ ಬದುಕು, ಆರಿದರೆ ಸಾವು
ದೀಪ ಆರದಂತೆ ಬದುಕಬೇಕು
ಅದು ಬೆಳಗುವಷ್ಟು ಕಾಲ ಸಾವೂ ಜೀವಂತ

ಹೊಕ್ಕುಳ ಮೇಲೆ ದೀಪ ಹಚ್ಚಿಟ್ಟು
ವರ್ಷಗಳು ಆದ ಮೇಲೆ ಒಂದೊಂದೇ ಗಾಯ
ಯಾರೋ ಜಿಗುಟಿದ್ದು, ಚುಚ್ಚಿದ್ದು..
ಒಮ್ಮೊಮ್ಮೆ ನಾನೇ ತರಿದುಕೊಂಡಿದ್ದು
ಈ ನೋವು ತಡಕೊಳ್ಳಬೇಕು
ತಡಕೊಂಡಷ್ಟು ಕಾಲ ದೀಪ ಬೆಳಗುತ್ತದೆ

ದೀಪದ ಬೆಳಕಿಗೆ ಕಣ್ಣು ಕೊಟ್ಟಿದ್ದೇನೆ
ಕಣ್ಣುಗುಡ್ಡೆಗಳಲ್ಲಿ ಮಂಜು ಮಂಜು
ಆಗಾಗ ನೀರು ಧಾರೆ ಧಾರೆ; ವಿನಾಕಾರಣ

ಸುಖಾಸುಮ್ಮನೆ ಒಂದಷ್ಟು ಹೊಕ್ಕುಳ ಬಳ್ಳಿಗಳು
ಹೀಗೇ ಹುಟ್ಟಿಕೊಳ್ಳುತ್ತವೆ
ಯಾರೋ ಕತ್ತರಿಸಿ ಕತ್ತರಿಸಿ ಎಸೆಯುತ್ತಾರೆ
ನಾನು ಅಸಹಾಯಕ
ಕೂಸು ಅಲ್ಲಿ ವಿಲಕ್ಷಣವಾಗಿ ಕಿರುಚಿ
ಸಾಯುವುದನ್ನು ನೋಡಲಾರೆ
ಧಮನಿಧಮನಿಗಳಿಂದ ರಕ್ತ ಹರಿಸಿದ್ದೆ
ಈಗ ಕಡುಗೆಂಪು ನನ್ನ ಹೊಟ್ಟೆಯಮೇಲೆ
ಮಾಂಸ ಕತ್ತರಿಸುವ ಮರದ ತುಂಡು

ದೀಪದ ಬೆಳಕ ದಿಟ್ಟಿಸುತ್ತಲೇ ಇದ್ದೇನೆ
ಇದೇನು ಸಾವೋ, ಬದುಕೋ
ಒಂದೂ ಅರ್ಥವಾಗದ ಸೋಜಿಗ

ಕಣ್ಣುಗಳು ಬಳಲಿವೆ, ಇನ್ನು ನೋಡಲಾರೆ
ದೃಷ್ಟಿ ತೆಗೆದ ಕೂಡಲೇ ದೀಪ ಆರುತ್ತದೆ
ಜೀವ ಆರುವ ಕ್ಷಣಕ್ಕೆ ಸಿದ್ಧನಾಗಬೇಕು

ಅಮ್ಮನಿಗೆ ಕೇಳಬೇಕಿನಿಸುತ್ತದೆ
ಭಟ್ಟಿಯಲ್ಲ, ಜಾರುತ್ತಿರುವುದು ಜೀವ
ಉಳಿಸಿಕೊಡು, ಆತ್ಮವನ್ನು ನೀವಿನೀವಿ

ಚಲನೆ

ಎಡದ ಮಗ್ಗುಲಲ್ಲಿ ಏಳಬಾರದಂತೆ
ಹಾಗಂತ ಹಿರಿಯರು ಹೇಳಿದ ಮಾತು

ನಾನು ಎಡದಲ್ಲೂ, ಬಲದಲ್ಲೂ ದಿಢೀರನೆ ಏಳಲಾರೆ
ಪುಟ್ಟ ಹೃದಯದ ಗೂಡಲ್ಲಿ ನೀನು ಮಲಗಿರುತ್ತೀ
ನಿದ್ದೆಗೆಡದಂತೆ ನಿಧಾನ ಏಳಬೇಕು

ಚಿಮ್ಮಿ ನೆಗೆಯುವ ಕರು
ತಾಯ ಮೊಲೆಯಲ್ಲಿ ಬಾಯಿಡುವ ಘಳಿಗೆ
ತುಟಿ, ಮೊಲೆ ಎರಡರ ಬಳಿಯೂ ಶಬ್ದವಿಲ್ಲ

ಮಳೆಗೆ ಇಳೆ ಕಾಯುತ್ತದೆ;
ನನಗೆ ನೀನು ಕಾಯುವಂತೆ
ಕಾಯುವ ಪ್ರತಿ ಕ್ಷಣವೂ
ಸುಖದ ಬೇಗೆಯಲ್ಲಿ ಬೇಯುತ್ತದೆ

ಹೂವನ್ನೂ ಅದರ ಸುಗಂಧವನ್ನೂ
ಬೇರೆ ಮಾಡಲಾಗದು
ಒಂದನ್ನು ಬಿಟ್ಟು ಒಂದರ ಅಸ್ತಿತ್ವವಿಲ್ಲ
ಮಲ್ಲಿಗೆಯ ಹೊಕ್ಕುಳಲ್ಲಿ ಗಂಧ ನಿಶ್ಚಿತ

ಬಾ, ನಿನ್ನ ಕಣ್ಣುಗಳನ್ನು ಸಂಧಿಸುತ್ತೇನೆ
ಹೊಸ ಹುಟ್ಟೊಂದು ಸಾಧ್ಯವಾಗಲಿ
ಕಣ್ಣು ಕಣ್ಣು ಕೂಡಿಸುವ ಬೆಳಕಿನ ರೇಖೆಗಳಿಗೆ
ಹೊಸಗರ್ಭ ಕಟ್ಟಿಸುವ ಶಕ್ತಿಯಿದೆ

ಮುಮ್ಮುಖವೋ, ಹಿಮ್ಮುಖವೋ
ಚಲನೆ ಎಂಬುದು ಚಲನೆಯೇ ದಿಟ
ರಕ್ತ ತಣ್ಣಗಾಗುವ ಮುನ್ನ
ಚಲಿಸುತ್ತಲೇ ಇದ್ದುಬಿಡೋಣ

ನಿರಾಕಾರ ತುಂಬುತ್ತ

ಎದುರಿಗಿನ ದಿಬ್ಬ ಹತ್ತಲಾರದೆ
ಅಬ್ಬರಿಸುವ ಲಾರಿ,
ತುಟಿಗೆ ತಾಗಿಸದ ಲಸ್ಸಿ
ತಣ್ಣಗೆ ಕುಳಿತಿದೆ ಲೋಟದಲ್ಲಿ;

ಗಂಟು ಕಟ್ಟಿ ಕಟ್ಟಿ
ವೈನಾಗಿ ಬಾಡಿಸಿದ
ಕೆಸುವಿನ ಎಲೆಯ ಮೇಲೆ
ಒನದಾಡಿದ ಒಂದು ನೀರ ಹನಿ
ಬೆಳಕು ಹಾಯಬೇಕು
ಬಣ್ಣ ತುಂಬಲು;

ಅದಕ್ಕೊಂದು ಕಸುವಿದೆ,
ತೆಳ್ಳಗೆ ಪದರು ಪದರಾಗಿ
ಉತ್ತರಿಸುವ ಕಳಲೆ ಕೈಯಿಗೆ,
ಅದಕ್ಕೂ ಕಸುವಿದೆ,
ಪದರು ಪದರನ್ನೆ
ಒಂದೊಂದಾಗಿ ನಾಲಿಗೆಯ
ಪದರದ ಮೇಲಿಡುವುದಕ್ಕೆ;

ದೇಹಬಿಟ್ಟ ಮನದಂತೆ
ಭೋ...ಎಂದು ಧುಮ್ಮಿಕ್ಕುವ ಜಲಪಾತ
ಮೈದುಂಬಿ ಹರಿಯುತ್ತದೆ,
ಆಕಾರ ಪಡೆಯುತ್ತ,
ನಿರಾಕಾರ ತುಂಬುತ್ತ.

ಆಕಾರ....

ಆಕಾರಗಳ ಮಾತು ಬಿಡು
ಇಲ್ಲಿ ಯಾವುದಕ್ಕೂ ಆಕಾರವಿಲ್ಲ
ಬಾಚಿ ತಬ್ಬಿದಂತೆಲ್ಲ
ನಾನು ನಿನಗೊಂದು ಹಿಡಿ
ನೀನು ನನಗೊಂದು ಹಿಡಿ

ಇಡಿಯಾಗಿ ಹಿಡಿದೆವೆಂಬ ಭ್ರಮೆಗೆ
ಆಯಸ್ಸು ಕಡಿಮೆ
ಹುಡುಕುತ್ತ ಹೋದರೆ, ಹಿಡಿಯುತ್ತ ಹೋದರೆ
ಎಲ್ಲವೂ ಅಮೂರ್ತ

ಮಣ್ಣು ಕಲೆಸಿ ಮಡಿಕೆ ಮಾಡಿದವನಿಗಷ್ಟೇ ಗೊತ್ತು
ಮಣ್ಣೂ ಮಡಕೆಯೂ ಒಂದೇ ಎಂದು
ಮಣ್ಣು ಅನ್ನವೂ ಆಗುತ್ತದೆ
ಅನ್ನ ಅದೇ ಮಡಕೆಯೊಳಗೆ ಬೇಯುತ್ತದೆ
ಅನ್ನ ಬೂದಿಯೂ ಆಗುತ್ತದೆ

ಹೂಂ, ನೀ ಹೇಳುವುದು ನಿಜ
ಕಂಡ ಆಕೃತಿಗಳು ಸುಳ್ಳಾದರೆ
ನಿಜಾಯಿತಿಯ ಕೊರಳು ಕೊಯ್ದುಹೋದರೆ
ನೋವ ಸಹಿಸುವುದು ಕಷ್ಟ

ಉಸಿರು, ನಿಟ್ಟುಸಿರು
ಹಾಗೆ ದೀರ್ಘವಾಗಿ ಎಳೆಯಬೇಡ
ವಾಪಾಸು ಬರುವ ಗಾಳಿ
ಈಟಿಯಂತೆ ಚುಚ್ಚುತ್ತದೆ;
ನಿನ್ನನ್ನೂ ನನ್ನನ್ನೂ

ಹಾಗೆ ನೋಡಿದರೆ
ಉಸಿರಿಗೂ ನೋವಿಗೂ ಆಕಾರವಿಲ್ಲ
ಕಣ್ಣಂಚಲ್ಲಿ ಜಿನುಗುವ ನೀರಿಗೂ ಆಕಾರವಿಲ್ಲ

ಅದಕ್ಕೆ ಹೇಳಿದ್ದು ಕಣೇ
ಆಕಾರಗಳ ಗೊಡವೆ ಬಿಡು
ಬಾ, ನನ್ನೆದೆಗೂಡಲ್ಲಿ ಬೆಚ್ಚಗೆ ಮಲಗು
ಎದೆಗೂಡಿಗೊಂದು ಆಕಾರ ಸಿಕ್ಕರೂ ಸಿಗಲಿ

ಜೀವಬೆಳಕು.

ನಿಲ್ಲಿಸದೆ ಬಡಿಯುತ
ಯಾವುದು ಯಾವುದೆಂದು
ಬೇರೆಮಾಡಲಾಗದೆ ಬೆರೆತ
ಜೇನು-ಬಯಲು;
ಜೀ...ಎಂದು ಜೀಕುತ್ತ
ರಾತ್ರಿ ಕನಸುಗಳ ತೂಗುಯ್ಯಾಲೆಯಲಿ,
ಮುಂಚಾಚಿ ಚೂಪು
ಮುಳ್ಳೆಂಬ ಬಾಯಿಯ
ನೀನು ಮುಟ್ಟಿದ್ದಾದರೂ ಏನು?
ಅದುರುವ ಹೂವ ಹೊಕ್ಕಳು!
ಒಂದೊಂದೇ ಗಳಿಗೆಯ ಒಂದುಮಾಡಿ,
ತುಂಬಿದ ಜೀವರಸದ ಬಟ್ಟಲು!
ಬಾನ ಸಜ್ಜದ ಕೆಳಗೆ
ನೇತುಬಿದ್ದ ನಿನ್ನ ಸಂತತಿ,
ಬಿಳಲ ತುದಿಗೂ ಇದೆಯಲ್ಲ ಬೇರಿನ ಶೃತಿ!

ಉರಿವ ಹಣತೆಯ ಕೆಳಗೆ
ಹೊಟ್ಟೆಯಾನಿಸಿ ಮಲಗಿಬಿಟ್ಟ
ಹಲ್ಲಿಯ ಕಣ್ಗುಡ್ಡೆಗಳಿಗೆ
ಹಿಡಿದು, ತಬ್ಬಿ ಸಂಗಾತಿ ತುಟಿಯ
ಜೇನು ನೆಕ್ಕುವ ತವಕ;

ಅದುರುವ ತುಟಿ, ಕಣ್ಣು, ಹೊಕ್ಕಳಿನ
ಕೆಳಗೆ ಕಾಣದ ಕತ್ತಲು,
ಕತ್ತಲಲಿ ಕೂಡಿಟ್ಟ ಜೇನಹನಿ
ಜೀವಬೆಳಕು

ಬಾ....

ಕರುಳು ಒಂದಕ್ಕೊಂದು
ಹೆಣೆದು ಜಡೆಯಾಗಿ
ನಡುವೆ ಸುಳಿವ ರಕ್ತ ಸಿಕ್ಕುಸಿಕ್ಕಾಗಿ
ಒಡಲು ಭಗಭಗ
ಬಾ ಈ ಗಂಟು ಬಿಡಿಸಿಬಿಡು

ಹೃದಯದಲ್ಲಿ ನೂರೆಂಟು ಸೀಳು
ಒಮ್ಮೆಗೇ ಪ್ರಾಣ ಕಿತ್ತು ಹೋದಂತೆ
ಕ್ಷಣಕ್ಕೊಂದು ಸೀಳಿನಿಂದ ನೋವು
ಎದೆ ಮತ್ತೆ ಮತ್ತೆ ಭಾರ
ಬಾ ಈ ಸೀಳುಗಳನ್ನು ಹೊಲೆದುಬಿಡು

ನೆತ್ತಿ ಅದುರುವಂತೆ
ಇದೇನೋ ಯಾತನೆ
ಮೆದುಳು ಬಳ್ಳಿ ಹರಿದುಹೋದಂತೆ
ಧುಮುಗುಡುವ ಹಣೆ
ಬಾ ನೆತ್ತಿಯನೊಮ್ಮೆ ಕೂಡಿಸಿಬಿಡು

ತೊಡೆಗಳಲ್ಲಿ ನಡುಕ
ಕಿಬ್ಬೊಟ್ಟೆಯಲ್ಲಿ ಆರದ ಕೀವು
ಬೆರಳ ಗೆಣ್ಣುಗಳಲ್ಲಿ ಬಾವು
ಪಾದದಲ್ಲಿ ಸೆಳೆತ
ಬಾ ಎಲ್ಲ ವಾಸಿಮಾಡಿಬಿಡು

ಬಾ, ಬಂದು ಹಾಗೇ ಹೋಗಬೇಡ
ಖಾಲಿ ಕೈಯಲ್ಲಿ ಕಳಿಸಲಾರೆ
ಜೀವವೊಂದು ಉಳಿದಿದೆ;
ಅದನ್ನೇ ನಿನ್ನ ಮಡಿಲಿಗೆ ಸುರಿದು ಕಳಿಸುವೆ
ಜೀವರಸವನ್ನೇ ತನಿಯೆರೆಯುವೆ ನಿನ್ನ ನೆತ್ತಿಯ ಮೇಲೆ

ಅನಂತ ಸುಖ

ಈ ಎಲ್ಲವೂ ನಾನೇ ಆಗಿದ್ದೆ;
ಹೆಣೆದ ಕರುಳು, ಒಡೆದ ತುಟಿ
ಮುರಿದ ಹೃದಯ, ಸೆಟೆದ ಕೈ ಕಾಲು
ತುಂಬಿದ ಕೊಳವಾದ ಕಣ್ಣುಗಳು
ಅಪೂರ್ಣ ಆತ್ಮ, ಅಮೂರ್ತ ಕಾಯ

ನೀನು ಹೊತ್ತು ತಂದದ್ದು ಅನಂತ ಸುಖ
ಮೊದಲು ಸಣ್ಣ ಮಿಸುಕಾಟ
ಆಮೇಲೆ ಚಲನೆ
ತದನಂತರ ಸಾವಿರ ಅಶ್ವಗಳ ಓಡಾಟ
ಕೆನೆದು ಕೆನೆದು ನಿಂತಿತು ದೇಹ

ಕಲ್ಲುಗಳೆಡೆಯಲ್ಲಿ ಒರತೆ ಹುಟ್ಟಿ
ಚಿಮ್ಮನೆ ಹಾರುವಂತೆ
ಜಡಗೊಂಡ ದೇಹ ಒಂದೇ ಸಮನೆ ಜಿನುಗುತ್ತಿದೆ
ಬೆವರುತ್ತಿದೆ, ಹನಿಯುತ್ತಿದೆ

ಹೀಗೆ ಜಿನುಗಿ, ಬೆವರಿ, ಹನಿದು
ಪೂರ್ತಿ ಕರುಗುವ ಮುನ್ನ
ಆ ಅನಂತ ಸುಖವನ್ನೊಮ್ಮೆ
ಇಡಿಯಾಗಿ ಅನುಭವಿಸಲುಬಿಡು

ನನ್ನ ಪೂರ್ಣಗೊಳಿಸು
ಗೆರೆ, ವೃತ್ತಗಳಿಂದ ಹೇಗೆ ಕೂಡಿಸಲು
ಸಾಧ್ಯವೋ ಹಾಗೆ ಕೂಡಿಸುತ್ತ ಹೋಗು
ನಾನು ನಿನಗೆ ದಕ್ಕುತ್ತೇನೆ, ಇಡಿಯಾಗಿ

ಎದೆಯಲ್ಲಿ ಒಂದು ಹಕ್ಕಿ
ಈಗ ಎದ್ದು ಚಡಪಡಿಸಿ ರೆಕ್ಕೆ ಬಡಿದಿದೆ
ಸಣ್ಣ ಚಳುಕು, ನೀನು ಹಕ್ಕಿ
ಅದರ ಗುಟುಕು ಜೀವ ನಾನು

ಹೌದು, ಅನಂತ ಸುಖವೆಂದರೆ
ಸಾವು ಮತ್ತು ಬದುಕು
ಎರಡನ್ನೂ ಬಿಗಿಯಾಗಿ ತಬ್ಬದ ಹೊರತು
ಅದು ದಕ್ಕುವುದಿಲ್ಲ
ದಕ್ಕಿಸಿಕೊಳ್ಳೋಣ...

ಮಾತು ಮಾತು ಮಾತು...

-೧-
ಪಾತಿ ಮಾಡಿ, ಈಗ ಹುಗಿದಿಟ್ಟ ಗಿಡದಂತೆ
ಮಾತು, ಮಾತು
ಅದು ಬೆಳೆದಂತೆ ಮೌನ ಮುಸುಕು ಹೊದ್ದು
ಮಲಗಿದೆ, ಗಾಢ ನಿದ್ದೆ

-೨-
ನಿಜ, ಒಂದು ಹಿತವಾದ ಅಪ್ಪುಗೆಗೆ
ಸಾವಿರ ಮಾತಿನ ಶಕ್ತಿ
ಆದರೆ, ತಬ್ಬಿದಾಗ ಆಡಿದ ಮಾತಿಗೆ
ಲಕ್ಷ ದೀಪಗಳ ಮೆರುಗು

-೩-
ನಾನು ನಿದ್ದೆಗೆ ಹೊರಳಿದ್ದಾಗ
ನೀನು ಪೂರ್ಣ ಎಚ್ಚರ
ನಿನ್ನ ಕಣ್ಣ ಪಹರೆಯಲ್ಲಿ
ನಾನು ಯುಗಯುಗಗಳನ್ನು ದಾಟಿ ಹೋದೆ

-೪-
ಈಗಷ್ಟೆ ತೊಟ್ಟು ಕಳಚಿದ
ಹೂವು ನಿನ್ನ ಪಾದದ ಮೇಲೆ
ಹೂವಿಗಂಟಿದ ನೀರಹನಿಯಾಗಿ ಸೋಕಿದ್ದೇನೆ
ಧೂಳಿನ ಜತೆ ನೀರ ಸರಸ

-೫-
ನೀನು ನನ್ನ ಎಂದೂ ತೀರದ ಹಸಿವು
ಭಗಭಗನೆ ಒಡಲು ಉರಿಸುವ ದಾಹ
ಪ್ರೀತಿ ಮೋಕ್ಷವೂ ಅಲ್ಲ, ಧರ್ಮವೂ ಅಲ್ಲ
ಪ್ರೀತಿ ಹಸಿವು, ಪ್ರೀತಿ ದಾಹ

-೬-
ನಿನ್ನ ಕಂಡುಕೊಳ್ಳುವುದಕ್ಕೆ
ನೀನಾಗಹೊರಟೆ ನಾನು
ದಾರಿಗುಂಟ ಸಾವಿರ ವಿಸ್ಮಯ
ನೀನಾಗುವುದೆಂದರೆ ಹೊಸಜನ್ಮ ಎತ್ತಿ ಬರುವುದು

-೭-
ಎಷ್ಟೊಂದು ಹೆಜ್ಜೆ ಗುರುತುಗಳು
ನಿನ್ನವೂ ನನ್ನವೂ
ಒಂದರ ಮೇಲೊಂದು ಹರಡಿ
ಮಿಲನದ ಖುಷಿಯಲ್ಲಿವೆ
-೮-
ನೀನು ಪ್ರೀತಿಸುವ ಮುನ್ನ
ಈ ನನ್ನ ಕಾಯ ಇಷ್ಟು ಪ್ರಿಯವಾಗಿರಲಿಲ್ಲ
ಆತ್ಮವನ್ನು ಹೀಗೆ ಬೆತ್ತಲೆಯಾಗಿ
ನೋಡುವ ಶಕ್ತಿಯೂ ನನಗಿರಲಿಲ್ಲ

-೯-
ನಿನ್ನನ್ನು ಪ್ರೀತಿಸುವುದೆಂದರೆ
ಎಲ್ಲ ಅರ್ಥಗಳನ್ನು ಒಡೆದು ಕಟ್ಟುವುದು
ಪ್ರೀತಿ, ಕಾಮ, ನೋವು, ಸಾವು
ಎಲ್ಲದಕ್ಕೂ ಹೊಸ ಅರ್ಥಗಳನ್ನು ಸೃಜಿಸುವುದು

-೧೦-
ಪ್ರೀತಿ ಕೊಡುವುದು ಸುಲಭ
ನಿನ್ನ ಸಮುದ್ರದ ಅಲೆಗಳಂಥ ಪ್ರೀತಿಗೆ
ತಾಳಿಕೊಳ್ಳುವುದು ಕಷ್ಟ
ನಾನೀಗ ದಡವಾಗಿ ಉಳಿದಿಲ್ಲ

ಧಾರಣೆ

ಅಯ್ಯಾ
ಗಂಟಲು ತುಂಬಿ ಬರುವ
ಪ್ರೀತಿಯನ್ನು ಹೀಗೆ
ಧರಿಸುವುದು ಇಷ್ಟೊಂದು
ಕಷ್ಟವೆಂದು ಗೊತ್ತಿರಲಿಲ್ಲ
ಶಕ್ತಿ ಕೊಡು

ಮೀನಿಗೆ ನೀರಲ್ಲಿ
ಈಜುವುದು ಗೊತ್ತು
ನೀರೇ ಆಗಿಬಿಡುವುದು ಕಷ್ಟ
ಮೀನೂ, ನೀರೂ ಎರಡೂ ಆಗಿ
ಈಜುತ್ತಿದ್ದೇನೆ, ರೆಕ್ಕೆಗಳಿಗೆ ಎಲ್ಲಿಲ್ಲದ ಕಸುವು

ನಾನು ಸಮುದ್ರದಡಿಯ
ಕಪ್ಪೆಚಿಪ್ಪು
ಹೊರಗಿನ ಕವಾಟ ಗಟ್ಟಿ
ಒಳಗೆ ಪಿತಪಿತ, ಬಲು ಸೂಕ್ಷ್ಮ
ನಿನ್ನ ಕೈಯಾರೆ ನನ್ನ ಉಪಚರಿಸು

ಎಲ್ಲ ತೊರೆದು ಹೋಗಿ
ಕಾಡಗರ್ಭದಲ್ಲಿ ನಿಂತರೂ
ಇದೊಂದು ಪ್ರೀತಿ
ಎದೆಗೊತ್ತಿ ನಿಲ್ಲುತ್ತದೆ
ಬುದ್ಧನ ನಿಲುವಂಗಿ ಕಿತ್ತೆಸೆದು
ನಿರ್ವಾಣನಾಗಿ ಓಡಿಬರುತ್ತೇನೆ

ಅಯ್ಯಾ
ಶಕ್ತಿ ಕೊಡು
ಇದನ್ನು ತೊರೆದು ಬದುಕಲಾರೆ
ಧರಿಸಬೇಕು
ಹಣೆಯ ಮೇಲೆ, ನೆತ್ತಿಯ ಮೇಲೆ
ಎದೆಯ ಮೇಲೆ
ಎಲ್ಲೆಂದರಲ್ಲಿ ಧರಿಸಬೇಕು
ತೇಯ್ದು ಹಚ್ಚಿದ ಗಂಧದ ಅಂಟು
ಕೊರಳ ಸುತ್ತ ಘಮಘಮಿಸಬೇಕು

ಧರಿಸಬೇಕು,
ಚರ್ಮವನು ದಾಟಿ ಒಳಗೆ, ಇನ್ನೂ ಒಳಗೆ
ಕಣ್ಣಪಾಪೆಯ ಒಳಗೆ, ಮಿದುಳ ಬಳ್ಳಿಯ ಮೇಲೆ
ಕರುಳ ಸುರಂಗದ ಒಳಗೆ, ಹೃದಯ ಕವಾಟಗಳ ಮೇಲೆ
ಎಲ್ಲೆಂದರಲ್ಲಿ ಧರಿಸಬೇಕು

ಅಯ್ಯಾ,
ಪ್ರೀತಿ ಧರಿಸುವುದು ಅಷ್ಟು ಸುಲಭವಲ್ಲ
ನನ್ನದೆನ್ನುವ ಎಲ್ಲವನ್ನೂ ಕಿತ್ತು ಒಗೆಯಬೇಕು
ಸಾವಿನ ಕುಲುಕುಲು ನಗುವಿಗೆ
ಹತ್ತಿರ, ಮತ್ತಷ್ಟು ಹತ್ತಿರವಾಗಬೇಕು
ಅದರ ಹಿತವಾದ ಸಪ್ಪಳಕ್ಕೆ ಕಿವಿಯಾಗಬೇಕು

ನೀನು ನಿರಾಕಾರಿ, ನಿರಂಹಕಾರಿ, ನಿರ್ಗುಣಿ
ಎಲ್ಲ ಧರಿಸಿ ನಿಲ್ಲಬಲ್ಲೆ;
ನನ್ನ ಪಾಡು ಕೇಳು
ಇದರ ಸುಖಾನುಭೂತಿಗೆ
ಮುಟ್ಟಿದಲ್ಲೆಲ್ಲ ರಕ್ತ ಜಿನುಗುತ್ತದೆ
ಆ ಕೆಂಪಿನಲ್ಲಿ
ನನ್ನ ಬಣ್ಣಗಳೆಲ್ಲ ದಿಕ್ಕಾಪಾಲಾಗಿದೆ

ಪ್ರೀತಿಯನ್ನು ಧರಿಸುವುದೆಂದರೆ
ಕಾಲನ ಜತೆ ಅನುಸಂಧಾನ
ಸಾವಿನ ಜತೆ ಕುಶಲೋಪರಿ
ನಿನ್ನ ಜತೆಗೆ ಹುಸಿ ಮುನಿಸು

ಅಯ್ಯಾ ಶಕ್ತಿ ಕೊಡು
ಈ ಆಸೀಮ ಪ್ರೀತಿಯನ್ನು ಧರಿಸಿದ್ದೇನೆ
ಬೆಳಕು ಬೊಗಸೆಯಲ್ಲಿ ಕುಳಿತಿದೆ
ಅದು ಚೆಲ್ಲದಂತೆ ಗಟಗಟ ಕುಡಿದುಬಿಡಲು
ಪ್ರಾಣವಾಯು ಕೊಡು

ನಾನು ಮತ್ತೆ ಉಸಿರಾಡುತ್ತೇನೆ