Friday, January 6, 2012

ದೇಹಾತ್ಮ


ಅಯ್ಯಾ..

ತಕೋ ಹಿಡಿ
ನನ್ನ ಹಣೆಯನ್ನು
ನಿನ್ನ ಪಾದಕ್ಕೆ ಒತ್ತಿದ್ದೇನೆ
ಮಂಡಿಯೂರಿದ್ದೇನೆ

ಹುಡುಕಿದೆ ಅಹಂಕಾರದ ಕಣ್ಣು
ಪಾದದಲ್ಲೇದಾರೂ ಕಂಡರೆ
ಹೊಸಕಿ ಹಾಕಿ
ನಿನಗೆ ಬಿಡುಗಡೆ ಕೊಡೋಣವೆಂದುಕೊಂಡೆ
ಕಾಣಲಿಲ್ಲ, ನನ್ನ ಕಣ್ಣೇ ಮಂಜು

ಅಯ್ಯಾ

ಹಿಡಿ ನನ್ನದೇ ತೊಗಲು
ಕಿತ್ತು
ಅರಿವೆ ಮಾಡಿ
ಹೊದೆಸಿದ್ದೇನೆ


ಏನು? ಚಳಿಯೇ ನಿನಗೆ?
ಆದರೂ ನಡುಗಿದ ಸೂಚನೆಯಿಲ್ಲ
ತೊಗಲು ಕಿತ್ತುಕೊಂಡ ನಾನೇ
ಗಡಗಡ ಅದುರುತ್ತಿದ್ದೇನೆ

ಅಯ್ಯಾ

ಇಕೋ ನನ್ನದೇ ಹಸಿಮಾಂಸ
ನೈವೇದ್ಯವಾಗಿ ಇಕ್ಕಿದ್ದೇನೆ
ಜತೆಗೆ ರಕ್ತರಕ್ತ
ಝಲ್ಲನೆ ತೋಯಿಸಿದ್ದೇನೆ

ನೀನು ತಿಂದಿದ್ದು ಕಾಣೆ
ನೀನು ಹಸಿದಿದ್ದಾರೂ ಯಾವಾಗ?
ಹಸಿವು-ನಿದ್ದೆ-ಮೈಥುನ
ಮೀರಿದವನಲ್ಲವೇ ನೀನು?

ಅಯ್ಯಾ

ನನಗೆ ಬಿಡುಗಡೆ ಬೇಕು
ಇದರಿಂದ, ಅದರಿಂದ, ಎಲ್ಲದರಿಂದ
ಕಡೆಗೆ ನಿನ್ನಿಂದಲೂ

ನಾನು ದೇಹ
ನೀನು ಆತ್ಮ
ನಿನ್ನೊಳಗೆ ನಾನು ಸೇರಲಾರೆ
ನನ್ನೊಳಗೆ ನೀನು ಸೇರಲಾರೆ

ಒಂದೇ ದೇಹವಾಗಿಸು
ಅಥವಾ ಆತ್ಮವಾಗಿಸು
ಇಲ್ಲವೇ ದೇಹಾತ್ಮಗಳಿಲ್ಲದ
ಅಮೃತಬಿಂದುವಾಗಿಸು

ಅಯ್ಯಾ

ಇಕೋ ಹಿಡಿ
ಇಡೀ ದೇಹ ನಿನಗರ್ಪಿಸಿದೆ
ಆತ್ಮ ಅರ್ಪಿಸಿ ಎಷ್ಟೋ ಕಾಲವಾಯಿತು.

No comments: