Thursday, January 26, 2012

ಕರಗಬೇಕು


ಕಾಲನ ಆಕಳಿಕೆಯ ಸದ್ದಿಗೆ ಜಡವಾಗದೆ
ಇಂಚಿಂಚೇ ಕರಗಿ
ನೀರಾಗಿ ಹರಿಯಬೇಕು

ಮನಸ್ಸಿಗೆ ಚಲನೆ ಗೊತ್ತು
ನಾಗಾಲೋಟ
ಮನಸ್ಸನ್ನು ಹಿಡಿದು ದೇಹದ ಭಾರಕ್ಕೆ
ಹೊಂದಿಸಬೇಕು

ಪುಟಿಯಬೇಕು, ಅದುರಬೇಕು
ನಡುಗಬೇಕು, ಬೆಚ್ಚಬೇಕು
ಹನಿಹನಿಯಾಗಿ ಜಿನುಗಬೇಕು

ಹೀಗೆ ಕರಗದ ಹೊರತು
ಸಾವಿಗೊಂದು ಚೈತನ್ಯ ಸಿಗದು
ಆತ್ಮದ ಕಾಣ್ಕೆಗೆ
ಕಣ್ಣು ಸಿಗದು

ಕರಗಬೇಕು, ಖಾಲಿಯಾಗಬೇಕು
ಯಾವುದೂ ಶೇಷವಾಗದಂತೆ
ಸೊನ್ನೆಯಾಗಬೇಕು
ಕರಗಿ
ಮಲ್ಲಿಗೆ ಬಳ್ಳಿಯ ಪಾದಕ್ಕೆ
ನೀರಾಗಿ ತೊಡರಿಕೊಂಡು
ಹೊಸಜೀವದ ಚೇತನವಾಗಬೇಕು

ಬುದ್ಧನಾಗಬೇಕು

Monday, January 23, 2012

ಆಹ್ವಾನ


ಕಲ್ಲುಕವಣೆ ತೂರುವವರು ತೂರಲಿ
ಅವರ ವಿಕೃತ ಖುಷಿಯನ್ನು ನೋಡಿ
ನಾನು ಮರುಕಪಡುತ್ತೇನೆ

ಅವರಿಗೆ ಗೊತ್ತಿಲ್ಲ
ಕಲ್ಲೆಂದರೆ ನನಗೆ ಪ್ರೀತಿ
ಅದರ ಏಟು ಬಿದ್ದ ಜಾಗದಲ್ಲೆಲ್ಲ
ನಾನು ಮತ್ತೆ ಮತ್ತೆ ಹುಟ್ಟಿದ್ದೇನೆ
ರಕ್ತ ಬೀಜಾಸುರನಂತೆ

ನನ್ನ ಅಕ್ಷರಗಳು
ಸುಡುಗಾಡಿನಲ್ಲೂ ಹುಟ್ಟುತ್ತವೆ
ಅವುಗಳಿಗೆ ಯಾರ ಹಂಗೂ ಇಲ್ಲ
ಯಾರಿಲ್ಲವೆಂದರೂ ಕರಗಿದ ಶವಗಳ
ಅಸ್ಥಿಗಳೊಂದಿಗೆ ಮಾತನಾಡುತ್ತವೆ

ಕಡಲ ಮುಂದೆ ಕುಳಿತಿದ್ದೇನೆ
ಇಡಿ ಇಡಿಯಾಗಿ ಕುಡಿದುಬಿಡುವ ಉನ್ಮಾದ
ನೆತ್ತಿಮೇಲೆ ಸುಡುವ ಸೂರ್ಯ
ಇಡಿಯಾಗಿ ಒಳಗೆ ಎಳೆದುಕೊಳ್ಳುವ ಸಡಗರ

ಸಕಲ ಸದ್ಗುಣ ಸಂಪನ್ನರೆಂದರೆ
ವಾಕರಿಕೆ ನನಗೆ,
ಎಂತಲೇ ಅವರಿಗೆ ಆಹ್ವಾನ ನೀಡುತ್ತಿರುವೆ
ಕಲ್ಲು ತೂರುವ ಅವಿವೇಕಿಗಳೇ
ಬನ್ನಿ, ನನ್ನ ಅಹಂಕಾರವನ್ನು ಮೀಟಿ ಒಮ್ಮೆ
ಎಸೆಯುವುದಾದರೆ ಪರ್ವತವನ್ನು ಬುಡಸಮೇತ
ಕಿತ್ತು ಎಸೆಯಿರಿ

ಅಗೋ ಸಂಜೆಯಾಗಿದೆ
ಹೊನ್ನ ಬೆಳಕು
ನಾನು ಆಕಾಶವನ್ನೇ ತಬ್ಬಬೇಕು
ಈಗ ತೊಲಗಿ ಇಲ್ಲಿಂದ

Sunday, January 22, 2012

ಬೆಂಕಿ


ರಾಮನವಮಿಯಂದು
ರಾವಣನ ಭೂತ ಧಗಧಗ ಉರಿಯುತ್ತದೆ
ಹತ್ತು ತಲೆಗಳ ತುಂಬಾ ಪಟಾಕಿಗಳ ಢಮಢಮ

ಸೀತೆ ಸುಟ್ಟುಕೊಂಡಿದ್ದಳು
ತನ್ನನ್ನು ತಾನೇ
ರಾಮ ಪ್ರೇಕ್ಷಕ ಅಥವಾ ನಿರ್ದೇಶಕ

ಸುಟ್ಟುಕೊಳ್ಳಬೇಕು ಅಥವಾ ಸುಡಿಸಿಕೊಳ್ಳಬೇಕು
ನಿಜಾಯಿತಿಯ ಪ್ರದರ್ಶನಕ್ಕೆ

ಚಿತೆ ಉರಿಯುವಾಗ
ಸುತ್ತ ನೆರೆದವರಿಂದ
ಉರಿದುಹೋದವನ ಬದುಕಿನ
ಪೋಸ್ಟ್ ಮಾರ‍್ಟಮ್

ಬೆಂಕಿ ಅಂದರೆ ಹಾಗೆಯೇ
ಅದರ ಎದೆಯ ಆಳದಲ್ಲೇ
ಋಜುತ್ವದ ಪರೀಕ್ಷೆಗಳು
ಕ್ಯಾರೆಕ್ಟರ್ ಸರ್ಟಿಫಿಕೇಟುಗಳು

ನೀನು ಉರಿಯುತ್ತಿದ್ದೀಯ
ಕಣ್ಣುಗಳಿಂದ ಕಿಡಿಗಳು ಹೊಮ್ಮುತ್ತಿವೆ
ದೇಹಕ್ಕೂ ತಟ್ಟಿದೆ ತಾಪ

ಈಗ ತಣ್ಣಗಾಗು
ಸಾಕು ಉರಿದಿದ್ದು
ಆತ್ಮಕ್ಕೆ ದೇಹ ಉತ್ತರ ಕೊಟ್ಟುಕೊಳ್ಳಲಿ

ಸೀತೆಯ ಸ್ವಯಂಚಿತೆಯ ಎದುರು
ರಾಮನ ಆತ್ಮಸಾಕ್ಷಿ ಉರಿಯುತ್ತಿದೆ

Monday, January 16, 2012

ಕತ್ತಲಿಗಾಗಿ ಹಂಬಲಿಸಿ...


ಬೆಳಕು-ಬಿಸಿಲು
ಎದೆಯೊಳಗೆ ಇಳಿಯುತ್ತಿದೆ
ನಾನು ಭೀತಿಯಿಂದ
ಕತ್ತಲಿಗೆ ಆತು ನಿಂತಿದ್ದೇನೆ

ಕತ್ತಲು ನನ್ನ ಆತ್ಮಸಂಗಾತಿ
ಬೆಳಕಿನಿಂದ ಸುಟ್ಟ ನನ್ನ ರೆಕ್ಕೆಗಳಿಗೆ ಮುಲಾಮು
ರಾತ್ರಿಗಳಲ್ಲಿ ಬಂದು ತಬ್ಬಿ
ನೆತ್ತಿ ನೇವರಿಸುವ ಗೆಳೆಯ

ಬೆಳಕು ಇಳಿಯುತ್ತಿದೆ ಒಳಗೆ
ಬೆಳಕೋ ಪರಮ ಅಹಂಕಾರಿ
ಎದೆಯ ವ್ರಣ-ಕೀವು ನೋಡಿ
ಗಹಗಹಿಸಿ ನಕ್ಕು ಗೇಲಿ ಮಾಡುತ್ತದೆ

ಬೆಳಕು ನನ್ನ ದೃಷ್ಟಿ ಕಿತ್ತುಕೊಂಡಿದೆ
ಪ್ರಿಯವಾದ ಏನನ್ನೂ ನೋಡಲಾರೆ
ಹಾಗೆ ನೋಡಲು ನನಗೆ
ಕತ್ತಲೆಯೇ ಬೇಕು, ಅದರ ಭವ್ಯ ದೃಷ್ಟಿಯೇ ಬೇಕು

ಕಣ್ಣುಮುಚ್ಚಿ ಕತ್ತಲನ್ನು ಧೇನಿಸುತ್ತೇನೆ
ಉಂಡೆ ಉಂಡೆಯಂತೆ
ವರ್ಣವರ್ಣಗಳಲ್ಲಿ ಬೆಳಕು ಹಾಜರಾಗುತ್ತದೆ
ಪಾಪಿ ಚಿರಾಯು

ಹೊಕ್ಕುಳ ಮೇಲೆ
ದೀಪದ ಬಳ್ಳಿ ಯಾರು ಹಚ್ಚಿದರೋ
ನಾನಂತೂ ಆರಿಸಲಾರೆ
ಕಣ್ಣು ಕಪ್ಪು ಕಪ್ಪು

ಹೊರಡಬೇಕು ಈಗ
ಬೆಳಕಿಲ್ಲದ ಜಾಗಕ್ಕೆ
ಕತ್ತಲನ್ನೇ ಹಾಸಿ ಹೊದ್ದು
ನೆಮ್ಮದಿಯಿಂದ ಮಲಗಬೇಕು

ಆಕೃತಿ


ಹೀಗೆ ಕಣ್ಣೆದುರು ಎದ್ದುನಿಂತ
ಆಕೃತಿಗಳೆಲ್ಲ
ಸುಳ್ಳುಸುಳ್ಳಾದ ಮೇಲೆ
ಚಿತ್ರ ಬರೆಯುವುದನ್ನೇ ಬಿಟ್ಟಿದ್ದೇನೆ

ಗೀಚಿದ ರೇಖೆಗಳೆಲ್ಲ
ಸುಳ್ಳಾಗಿ
ಅಣಕಿಸುವಾಗ
ಸತ್ಯ ತೆರೆ ಹಿಂದೆ ನಿಂತು
ಅಮೂರ್ತ ನಗೆ ಚಿಮ್ಮುತ್ತದೆ

ಮೊದಲೆಲ್ಲ
ರೇಖೆ ಎಳೆದು, ಬಣ್ಣ ತುಂಬಿ
ಅದು ಜೀವತುಂಬುವಾಗಲೆಲ್ಲ
ಖುಷಿಯಿಂದ ಕುಣಿದು ಕುಪ್ಪಳಿಸಿದ್ದೇನೆ

ಬಣ್ಣ ಕರಗಿ, ರೇಖೆಗಳು ಅಸ್ಪಷ್ಟವಾಗಿ
ಕಂಡ ಆಕೃತಿಯೇ ಸುಳ್ಳಾದಮೇಲೆ
ಖುಷಿ ಸತ್ತಿದೆ
ರೇಖೆ ಎಳೆವ ಬೆರಳುಗಳೂ ಸತ್ತಿವೆ

ಆಕೃತಿಗಳು
ನನ್ನ ಕೃತಿಗಳಲ್ಲ, ಅದನ್ನು ಕಡೆಯುವ ಸ್ವಾತಂತ್ರ್ಯ ನನಗಿಲ್ಲ
ಹೀಗಂತ ಸಮಾಧಾನ ಹೇಳಿಕೊಳ್ಳುತ್ತೇನೆ

ಚಿತ್ರಗಳಿಂದಾಚೆ
ಹುಡುಕಬೇಕು
ಸಿಕ್ಕಷ್ಟು ಮುಟ್ಟಿ ತಡವಿ ಸುಮ್ಮನಾಗಬೇಕು
ಯಾಕೆಂದರೆ ಇಲ್ಲಿ ಯಾವುದಕ್ಕೂ ಆಕಾರವಿಲ್ಲ
ನನಗೂ, ನಿನಗೂ...

Saturday, January 14, 2012

ಚಹರೆ


ನಿನ್ನ ಮೊಗದಲ್ಲಿ
ನಿನ್ನ ಚಹರೆಯೇ ನಾಪತ್ತೆ

ಜೋರುಗಾಳಿಗೆ ಹೂವು ಅದುರಿ
ಕೆಳಗೆ ಬಿತ್ತು ಈಗಷ್ಟೆ
ನಿನಗದು ಕೇಳಿಸಲೇ ಇಲ್ಲ
ನಿನ್ನೆಮೊನ್ನೆಯವರೆಗೆ ಮರಿಗುಬ್ಬಿಗಳ
ನಿಟ್ಟುಸಿರ ಸದ್ದೂ ಕೇಳುತ್ತಿತ್ತಲ್ಲವೇ ನಿನಗೆ?

ಎದುರು ನಿಂತಿದ್ದೇನೆ
ನನ್ನ ಗುರುತಿಸುತ್ತಿಲ್ಲ ನೀನು
ಆ ಕಣ್ಣುಗಳೂ ನಿನ್ನವಲ್ಲ
ಅಪರಿಚಿತ ದೃಷ್ಟಿ
ಮೈಲುಮೈಲುಗಳ ದೂರದಲ್ಲೇ
ಗುರುತು ಹಿಡಿಯುತ್ತಿದ್ದ ಕಣ್ಣುಗಳಲ್ಲವೇ ಅವು

ಕಮಟು ಅತ್ತರಿನ ವಾಸನೆ
ನನಗೆ ಉಸಿರುಗಟ್ಟುತ್ತಿದೆ
ನಿನಗೂ ಚೇಳು ಕುಟುಕಿದಂತಾಗಬೇಕಿತ್ತು
ಆದರೂ ನಿರ್ಜೀವ ಪ್ರತಿಕ್ರಿಯೆ

ಇಲ್ಲ, ಇದು ನೀನಲ್ಲ
ಇದು ನಿನ್ನ ಚಹರೆಯಲ್ಲ

ಯಾರೋ ನಿನ್ನನ್ನು ಸೀಳುತ್ತಿದ್ದಾರೆ
ಕೈಯಲ್ಲಿ ಗರಗಸ
ನಿನ್ನ ದೇಹ ಗಾಳಿಯಲ್ಲಿ
ತೂಯ್ದು ಓಲಾಡುತ್ತಿದೆ
ನಿನ್ನ ಪ್ರತಿಕ್ರಿಯೆ ಶೂನ್ಯ

ಹೊರಡು ಇಲ್ಲಿಂದ
ಬೆಳಕಿನಲ್ಲಿ ಶಬ್ದ ಹುಡುಕಬೇಡ
ಹುಡುಕಿ ನಿನ್ನ
ಚಹರೆ ಕಳೆದುಕೊಳ್ಳಬೇಡ

ಬೆಳಕಿಗೆ ಕಣ್ಣು ಸುಟ್ಟುಕೊಂಡವರು
ಸಾವಿರ ಸಾವಿರ ಜನರು ಜಗದಲ್ಲಿ

ಕಣ್ಣು
ಕಳೆದುಕೊಳ್ಳಬೇಡ

Friday, January 13, 2012

ತುತ್ತು


ಒಂದೊಂದೇ ಅಗುಳು
ಹೀಗೆ ಬೆರಳಲ್ಲಿ ನಯವಾಗಿ ಸ್ಪರ್ಶಿಸಿ
ಗುಟುಕು ಗುಟುಕಾಗಿ
ನಿನ್ನ ಬಾಯಿಗಿಡುತ್ತಿದ್ದೇನೆ

ನನ್ನ ಹೊಟ್ಟೆ ಭರ್ತಿ ಈಗ
ನಿನ್ನ ಕಣ್ಣ ಹನಿಗಳನ್ನೇ ಕುಡಿದು

ಇಕೋ ತುತ್ತು
ಕಣ್ಮುಚ್ಚು
ಹೀಗೆ ನನ್ನ ನೋಡಬೇಡ
ಪ್ರಶ್ನೆಗಳಿಗೆ ಉತ್ತರವಿಲ್ಲ

ಅಗುಳು ಅಗುಳ ಮೇಲೂ
ಯಾರದ್ದೋ ಹೆಸರಿರುತ್ತಂತೆ
ಇದರ ಮೇಲೆ ನಿನ್ನ ಹೆಸರಿದೆಯಾ?
ಗೊತ್ತಿಲ್ಲ ನನಗೆ

ಸೆರೆ ಉಬ್ಬಿಸಬೇಡ
ಅನ್ನ ಗಂಟಲಿಗಿಳಿಯದು
ಉಸಿರಿಗೂ, ಅನ್ನಕ್ಕೂ
ಒಂದೇ ದಾರಿ ದೇಹದಲ್ಲಿ

ಹೊಟ್ಟೆ ತುಂಬಾ ತಿನ್ನು ಮಗುವೇ
ನನ್ನ ಕೈಯಲ್ಲಿ ತಿಂದೆಯೆಂಬುದನ್ನು ಮರೆತುಬಿಡು
ಮಲಗು ಈಗ ಗಡದ್ದಾಗಿ
ನಕ್ಷತ್ರಗಳ ಮೂಲಕ ಕನಸ ಹೆಣೆದು ಕಳಿಸುತ್ತೇನೆ

ತುತ್ತೆಂದರೆ ಸುಮ್ಮನಲ್ಲ
ತುಟಿ ಸೋಕಿದ
ಒಂದೊಂದೇ ಅಗುಳ ಮೇಲೂ
ಕಾಲನ ಹೆಣಿಗೆಯುಂಟು

Thursday, January 12, 2012

ದಾಹ


ಎಷ್ಟು ನೀರು ಕುಡಿದರೂ
ಇಂಗದ ದಾಹ
ಗಂಟಲಿಗಿಳಿದಷ್ಟೂ
ದಾಹ

ಏನು? ಒಳಗೆ ಬೆಂಕಿ ಹೊತ್ತಿದೆಯೇ?
ಇಳಿದ ನೀರು ಲಾವಾರಸದಂತೆ
ಬುಸುಗುಡುತ್ತಿದೆ
ಅದನ್ನು ಆರಿಸಲೂ ನೀರೇ ಬೇಕು

ಮೈ ಬಿಸಿಯಾಗುತ್ತಿದೆ
ಜಲಪಾತಕ್ಕೆ ಮೈಯೊಡ್ಡುವ ಬಯಕೆ
ಚರ್ಮಕ್ಕೂ ದಾಹ
ರೋಮರೋಮಗಳಿಗೂ ದಾಹ

ದಾಹ ತಣಿಯದ ದಾಹ
ಉರಿವ ಸೂರ‍್ಯನಿಗೆ ನನ್ನದೇ ರಕ್ತ ಬೇಕು
ಒಂದೊಂದೇ ಹನಿ ರಕ್ತ ಬಸಿದು ಕೊಟ್ಟು
ನಾನು ನಿರ್ಜಲನಾಗುತ್ತಿದ್ದೇನೆ

ನನ್ನ ಕವಿತೆಗೂ ದಾಹ
ಅದು ನನ್ನನ್ನೇ ಕುಡಿಯಬಯಸುತ್ತದೆ
ನಾನು ಇಂಚಿಂಚೇ ಕರುಗುತ್ತೇನೆ
ಕರಗಿ ಕವಿತೆಯಲ್ಲಿ ಸೇರಿಹೋಗುತ್ತೇನೆ
ಬೆತ್ತಲಾಗುತ್ತೇನೆ

ಅಳಲು ಒಂದು ಹನಿ
ಕಣ್ಣೀರಾದಾರೂ ಬೇಕು
ಕಣ್ಣ ರೆಪ್ಪೆ ಮಿಡುಕುತ್ತಿದೆ
ಏನು? ಕಣ್ಣೀರೂ ಖಾಲಿಯಾಯಿತೇ?
ಕಣ್ಣಿಗೂ ದಾಹ

ದಾಹ, ಎಂದೂ ತೀರದ ದಾಹ
ಜೀವಾತ್ಮಕ್ಕೂ ಆವರಿಸಿದ ದಾಹ

Tuesday, January 10, 2012

ನಿನ್ನ ಸನ್ನಿಧಿ



ಮಂಜು ಮುತ್ತಿದ ಬೆಟ್ಟ
ಹೊಳೆವ ಹೊಳೆ, ಸುರಿವ ಝರಿ
ಸುರುಳಿ ಸುರುಳಿ ಸುತ್ತುವ ತೊರೆ
ನಿನ್ನ ಸನ್ನಿಧಿ

ಕಡಲಿನಂತೆ ವಿಸ್ತಾರ ಕಾಡು
ಗುಡ್ಡದಂಥ ಮರ, ಮರದಂಥ ಬಳ್ಳಿ
ಹೂವು, ಎಲೆ, ಕಾಯಿ, ಹಣ್ಣು, ಹೀಚು
ನಿನ್ನ ಸನ್ನಿಧಿ

ಹಕ್ಕಿಯ ಕೇಕೆ
ಜೀರುಂಡೆಯ ಜೀರ್ ಧ್ವನಿ
ಹುಳಹುಪ್ಪಟೆಗಳ ಕುಟುಕುಟು
ನಿನ್ನ ಸನ್ನಿಧಿ

ಕಾಡತಬ್ಬಿದ ಮಹಾಮೌನ
ಗಿಡಗಳೆಡೆಯಲ್ಲಿ ಹರಡಿದ ನೆರಳು
ಕಲ್ಲು, ಮಣ್ಣು,
ನಿನ್ನ ಸನ್ನಿಧಿ

ನೀರು, ನೀರು, ನೀರು
ಕಲ್ಲನಡುವೆ ಸುಳಿವ ನೀರು
ಭೂಮಿಯಿಂದೆದ್ದ ನೀರು
ಅಮೃತದಂಥ ನೀರು
ಹೊಸಹುಟ್ಟು ಕೊಟ್ಟ ನೀರು
ನಿನ್ನ ಸನ್ನಿಧಿ

ಗಾಳಿ ಗಾಳಿ ಗಾಳಿ
ಧಿಮ್ಮನೆ ಎದ್ದ ಗಾಳಿ
ನರನಾಡಿಗಳಲ್ಲೂ ಹರಿದ ಗಾಳಿ
ನಿನ್ನ ಕಾಲಸಪ್ಪಳ ಕೇಳಿಸಿದ ಗಾಳಿ
ನಿನ್ನೆದೆಯ ಸದ್ದು ಹೊರಡಿಸಿದ ಗಾಳಿ
ನಿನ್ನ ಸನ್ನಿಧಿ

ಮೊಗೆದಷ್ಟೂ ನೀನು-ಕುಡಿದಷ್ಟೂ ನೀನು
ಕಂಡಷ್ಟೂ ನೀನು-ಕೈ ಚಾಚಿದಷ್ಟೂ ನೀನು

ನನ್ನ ತೋಯಿಸಿದ ನೀನು
ನಾನು ಧ್ಯಾನಿಸಿದ ನೀನು

ಕಾಡೆಂದರೆ ನಿನ್ನ ಸನ್ನಿಧಿ

ಭ್ರೂಣದ ಮಾತು


ಬೆರಳಿಗೆ ಬೆರಳು
ಬೆಸೆಯುವಾಗೆಲ್ಲ
ಕೊರಳು ಉಬ್ಬುತ್ತದೆ
ಹೊಟ್ಟೆಯಲ್ಲಿ ಸಣ್ಣ ಮಿಂಚು
ಒಳಗೇನೋ ಮಿಸುಕಾಡಿದ,
ಕಿಬ್ಬೊಟ್ಟೆಯ ಒಳಗೋಡೆಗೆ ಮೆತ್ತಗೆ ಒದ್ದ ಅನುಭೂತಿ

ನನ್ನ ಒಡಲಲ್ಲೂ ಒಂದು ಭ್ರೂಣವಿದೆಯೇ?
ಕಿಬ್ಬೊಟ್ಟೆ ಮೇಲೆ ನೀನು ಮಂಡಿಯೂರಿದಾಗೆಲ್ಲ
ಆ ಕೂಸು ನಿನ್ನೊಂದಿಗೆ ಮಾತಿಗೆ ನಿಲ್ಲುತ್ತದೆಯೇ?

ಜಗತ್ತೆಲ್ಲ ಸುತ್ತಾಡು
ಕಡೆಗೊಮ್ಮೆ ನನ್ನ ಮಡಿಲಿಗೇ ವಾಪಾಸು ಬರುತ್ತೀ
ಎಂದು ನೀನೇ ಹೇಳಿದ ನೆನಪು
ಒಳಗಿರಬಹುದಾದ ಭ್ರೂಣ ಕಿಲಕಿಲನೆ ನಗುತ್ತದೆ

ಹೌದಲ್ಲವೇ
ಹಾಗೆ ಜಗತ್ತು ಸುತ್ತುವಾಗ
ಒಡಲಲ್ಲಿ ಇದೊಂದು ಭ್ರೂಣ ಪರಿಭ್ರಮಿಸುತ್ತಲೇ ಇತ್ತಲ್ಲವೇ?
ಒಳಗೇ ಇರುವಾಗ ಮತ್ತೆ ವಾಪಾಸು ಹೋಗುವುದೆಲ್ಲಿಂದ?

ಮತ್ತೆ ಮತ್ತೆ ಕಿವಿಯಲ್ಲಿ ಯಾರೋ
ಕೂಗಿ ಕೂಗಿ ನನ್ನ ಹೆಸರು ಕರೆದಂತಾಗುತ್ತದೆ
ನಾನು ಮಂಕುಬಡಿದು ಕುಳಿತಿದ್ದೇನೆ
ಭ್ರೂಣ ಮತ್ತೆ ಮತ್ತೆ ಮಾತಾಡುತ್ತದೆ
ಕಲಕಲ ಓಡಾಟ, ಕಿಲಕಿಲ ನಗು

ನಾನು ನನ್ನನ್ನೇ
ಇರಿದುಕೊಳ್ಳುತ್ತಿದ್ದೇನೆ

Monday, January 9, 2012

ಕವಿತೆಯಾಗಲಾರೆ ನಾನು


ಕವಿತೆಯಾಗಲಾರೆ ನಾನು
ಜಾಳುಜಾಳು
ಇಡಿಇಡಿಯಾಗಿ ಹಿಡಿತಕ್ಕೆ ಸಿಕ್ಕಂತೆ
ಬರೀ ವಾಚ್ಯ

ಹಣೆ ಮೇಲಿನ
ನಾಲ್ಕು ಅಡ್ಡಗೆರೆ
ಮೂರು ಉದ್ದಗೆರೆ
ಕಥೆ-ಕಣಿ ಹೇಳುತ್ತವೆ

ನಿನ್ನ ಮಡಿಲಲ್ಲಿ ನೆಂದು
ತೊಪ್ಪೆಯಾದ ದಿನ
ನೆನಪಿದೆ, ನಾನು ಕವಿತೆಯಾಗಿ ಝಲ್ಲನೆ
ಉಕ್ಕಿದ್ದೆ
ಆಹಾ, ಏನು ಪ್ರತಿಮೆ? ಏನು ರೂಪಕ?
ಭಾವಸಾಗರದಲ್ಲಿ ತೇಲುವಾಗ
ದೇಹದ ಕಣಕಣವೂ ಕಾವ್ಯ

ಮತ್ತೆ ಹೊರಗೆ ಬಿಸಿಲಿಗೆ ಬಂದು
ನಿಂತೆ ನೋಡು
ಕಾವು, ಧಗಧಗ ಉರಿ
ಕವಿತೆ ಕರಗಿ ಕಥೆಯಾದೆ
ಆಮೇಲೆ ಅದೂ ಮುಗಿದು
ಬಿಗಿ ನಿಟ್ಟುಸಿರು, ಮಹಾಮೌನ

ಹೂಂ ಕಣೆ
ನಾನು ಕವಿತೆಯಾಗಲಾರೆ

Friday, January 6, 2012

ಮಗುವಿಗೆ....


ಪ್ರಾಣಬಿಂದು ಎಲ್ಲಿದೆ?
ಬೆರಳಲ್ಲೋ, ಕೊರಳಲ್ಲೋ?
ಹೊಕ್ಕುಳಲ್ಲೋ, ಪಾದದಲ್ಲೋ?
ಅಥವಾ ನೆತ್ತಿಯಲ್ಲೋ?

ಮಗೂ
ನಿನ್ನ ನೆತ್ತಿ ಮೇಲೆ
ಕೈಯಿಟ್ಟಾಗ ಕೈಗೆ ತಾಕಿದ್ದು
ಪ್ರಾಣಬಿಂದುವೇ?

ಹಾಗೆ ಕೈಯಿಡುವಾಗ
ನನ್ನದೂ ಒಂದಷ್ಟು ಆಯಸ್ಸು
ನಿನಗೆ ದಾಟಿಸುವಂತಿದ್ದರೆ
ಎಷ್ಟು ಚೆನ್ನಾಗಿತ್ತು?

ಕಣ್ಣು ಅರಳಿಸಿ ನೋಡಿದಾಗ
ನನ್ನ ದೃಷ್ಟಿಯೇ ತಾಕಿದಂತಾಗಿ
ಆಕಾಶ ನೋಡುತ್ತೇನೆ
ದಿಟ್ಟಿಸುವ ಧೈರ‍್ಯವೂ ಉಡುಗುತ್ತದೆ

ಹೊಕ್ಕುಳ ಬಳ್ಳಿಗಳು
ಹೀಗೂ ಹೆಣೆದುಕೊಳ್ಳುತ್ತವೆಯೇ?
ನಿನ್ನ ಕಣ್ಣಲ್ಲಿ
ಅರ್ಥಗಳನ್ನು ಹುಡುಕುತ್ತಿದ್ದೇನೆ

ಅಗೋ,
ಅಲ್ಲಿ ಹಕ್ಕಿ
ತನ್ನ ಮರಿಗೆ ಗುಟುಕು ಕೊಡುತ್ತಿದೆ
ಒಂದೊಂದೇ ಗುಟುಕು ಇಳಿದಂತೆ
ಮರಿಹಕ್ಕಿ ರೆಕ್ಕೆ ಪಡಪಡಿಸಿ
ಜೀವಸಂಚಾರ

ಮಗೂ,
ಬೆಚ್ಚಗಿರು ಬದುಕಿನುದ್ದಕ್ಕೂ
ರಕ್ಷೆಗಿರಲಿ ನನ್ನ ಪ್ರಾಣಬಿಂದು
ನಿನ್ನ ಈ ನಿರ್ಮಲ ನಗು
ಹಾಗೇ ಜಗಮಗಿಸಲಿ
ಬೆಳಕು ಕೊಡಲಿ ಜಗಕೆ

ಮೂಲೆಯಲ್ಲಿ ಕೂತ
ಜಂಗಮ ನಾನು
ನಿನ್ನ ಹರ್ಷವನ್ನು
ಸಂಭ್ರಮಿಸುತ್ತೇನೆ

ದೇಹಾತ್ಮ


ಅಯ್ಯಾ..

ತಕೋ ಹಿಡಿ
ನನ್ನ ಹಣೆಯನ್ನು
ನಿನ್ನ ಪಾದಕ್ಕೆ ಒತ್ತಿದ್ದೇನೆ
ಮಂಡಿಯೂರಿದ್ದೇನೆ

ಹುಡುಕಿದೆ ಅಹಂಕಾರದ ಕಣ್ಣು
ಪಾದದಲ್ಲೇದಾರೂ ಕಂಡರೆ
ಹೊಸಕಿ ಹಾಕಿ
ನಿನಗೆ ಬಿಡುಗಡೆ ಕೊಡೋಣವೆಂದುಕೊಂಡೆ
ಕಾಣಲಿಲ್ಲ, ನನ್ನ ಕಣ್ಣೇ ಮಂಜು

ಅಯ್ಯಾ

ಹಿಡಿ ನನ್ನದೇ ತೊಗಲು
ಕಿತ್ತು
ಅರಿವೆ ಮಾಡಿ
ಹೊದೆಸಿದ್ದೇನೆ


ಏನು? ಚಳಿಯೇ ನಿನಗೆ?
ಆದರೂ ನಡುಗಿದ ಸೂಚನೆಯಿಲ್ಲ
ತೊಗಲು ಕಿತ್ತುಕೊಂಡ ನಾನೇ
ಗಡಗಡ ಅದುರುತ್ತಿದ್ದೇನೆ

ಅಯ್ಯಾ

ಇಕೋ ನನ್ನದೇ ಹಸಿಮಾಂಸ
ನೈವೇದ್ಯವಾಗಿ ಇಕ್ಕಿದ್ದೇನೆ
ಜತೆಗೆ ರಕ್ತರಕ್ತ
ಝಲ್ಲನೆ ತೋಯಿಸಿದ್ದೇನೆ

ನೀನು ತಿಂದಿದ್ದು ಕಾಣೆ
ನೀನು ಹಸಿದಿದ್ದಾರೂ ಯಾವಾಗ?
ಹಸಿವು-ನಿದ್ದೆ-ಮೈಥುನ
ಮೀರಿದವನಲ್ಲವೇ ನೀನು?

ಅಯ್ಯಾ

ನನಗೆ ಬಿಡುಗಡೆ ಬೇಕು
ಇದರಿಂದ, ಅದರಿಂದ, ಎಲ್ಲದರಿಂದ
ಕಡೆಗೆ ನಿನ್ನಿಂದಲೂ

ನಾನು ದೇಹ
ನೀನು ಆತ್ಮ
ನಿನ್ನೊಳಗೆ ನಾನು ಸೇರಲಾರೆ
ನನ್ನೊಳಗೆ ನೀನು ಸೇರಲಾರೆ

ಒಂದೇ ದೇಹವಾಗಿಸು
ಅಥವಾ ಆತ್ಮವಾಗಿಸು
ಇಲ್ಲವೇ ದೇಹಾತ್ಮಗಳಿಲ್ಲದ
ಅಮೃತಬಿಂದುವಾಗಿಸು

ಅಯ್ಯಾ

ಇಕೋ ಹಿಡಿ
ಇಡೀ ದೇಹ ನಿನಗರ್ಪಿಸಿದೆ
ಆತ್ಮ ಅರ್ಪಿಸಿ ಎಷ್ಟೋ ಕಾಲವಾಯಿತು.

Thursday, January 5, 2012

ಸಾವಿನೊಡನೆ ಮಾತು


ಸಾವು ಆಗಾಗ
ಹೀಗೆ ಕದತಟ್ಟಿ ಬಂದು
ನಿಲ್ಲುವುದುಂಟು
ನಾನು ಕುಶಲೋಪರಿ ಕೇಳುತ್ತೇನೆ

ಒಮ್ಮೊಮ್ಮೆ ಅದು ಬಂದಷ್ಟೇ
ವೇಗವಾಗಿ ಸರಸರನೆ ವಾಪಾಸು
ಹೋಗುವುದುಂಟು

ಕೆಲವೊಮ್ಮೆ
ಸಲೀಸಾಗಿ ಹೋಗುವುದಿಲ್ಲ
ಮಾತು, ಮಾತು, ಮಾತು
ವಾಚಾಳಿ

ಮಾತೋ, ಬರಿಯ ವಟವಟ
ಕೇಳಿಕೇಳಿ ಸಾಕಾಗಿ ಹೋಗುವಷ್ಟು
ಬೇಕಿದ್ದರೆ ಎಳೆದುಕೊಂಡು ಹೋಗು
ಮಾತುಮುಗಿಸು
ಕೇಳಲಾರೆ, ಸಾಕುಮಾಡು
ಎಂದು ಗೋಗರೆಯುತ್ತೇನೆ

ಸಾವಿಗೆ ಮಾತಿನ ಚಟ
ಒಡಲಬೆಂಕಿಗೆ ಮತ್ತೆ ಮತ್ತೆ ತುಪ್ಪ ಸುರಿದು
ಗಾಳಿಬೀಸಿ
ಎದ್ದು ಹೋಗುತ್ತದೆ

ನಾನು ಉರಿದು ಉರಿದು
ಚಟಚಟನೆ ಮೈಮುರಿದು ಏಳುತ್ತೇನೆ
ಸಾವು ಹತ್ತಿರದಲ್ಲೇ ಇದ್ದೇನೆ, ಮತ್ತೆ ಬರುತ್ತೇನೆ
ಎನ್ನುತ್ತ ಮುಸಿಮುಸಿ ನಗುತ್ತದೆ

Wednesday, January 4, 2012

ಸೋರಿಕೆ


ಪ್ರಿಯವಾದದ್ದೆಲ್ಲ
ಕಣ್ಣೆದುರೇ ಬೊಗಸೆಯಿಂದ
ಸೋರಿ ಹೋಗುತ್ತದೆ
ನಾನು ಅಸಹಾಯಕ

ಕಣ್ಣೀರು ಉಮ್ಮಳಿಸಿಬರುವಾಗ
ಯಾರೂ ನೋಡದಿರಲಿ
ಕೆನ್ನೆ ಕೆಂಪಾಗಿ ಅದುರುವುದು
ಯಾರಿಗೂ ಕಾಣದಿರಲಿ

ಕಾಲನ ಬಳಿ ಮಂಡಿಯೂರಿ
ನಿಂತು ಅಂಗಲಾಚಿದ್ದು ಸಾಕು
ರೆಕ್ಕೆ ಮುರಿದುಬಿದ್ದ ಮೇಲೆ
ಹಾರುವ ಯೋಚನೆಯೂ ಸಾಕು

ಹೀಗೆಂದುಕೊಂಡೇ
ಮತ್ತೆ ಮತ್ತೆ ಮೊಗೆಯಹೊರುಡುತ್ತೇನೆ
ಬಾವಿ, ಹಳ್ಳ, ಹೊಳೆ, ಸಮುದ್ರ
ಕಡೆಗೇನೂ ಸಿಗದಿದ್ದರೆ ಕಣ್ಣೀರ ಅಂತರ್ಜಲ

ಬೊಗಸೆಯೇನೋ ತುಂಬುತ್ತದೆ
ಬೆರಳುಗಳ ಅಂಚಿನಿಂದ ಸೋರಿಹೋಗುತ್ತದೆ
ಮತ್ತೆ ಕೈ ಖಾಲಿ
ಒಡಲು ಬರಿದು
ಮಡಿಲು ಬಿಕ್ಕುತ್ತದೆ.

ಏನನ್ನೂ ಕೇಳದೇ....


ಏನನ್ನೂ ಕೇಳದೆ
ಪ್ರೀತಿಸುವುದು ಕಷ್ಟಕಷ್ಟ

ಪ್ರತಿನಿತ್ಯ ಖಾಲಿ ಹೊಟ್ಟೆ
ಬರಿಗೈ

ಬೇಡವಾದ ಪ್ರೀತಿ
ಎಷ್ಟು ಸುರಿದರೇನು?

ನಾನೇನು ಕೇಳಿದ್ದೆನಾ
ಅನ್ನಿಸಿಕೊಂಡಾಗಲೆಲ್ಲ
ಎದೆ ಮುಳ್ಳರಾಶಿಯ ಮೇಲೆ
ಮಗ್ಗುಲು ಬದಲಾಯಿಸುತ್ತದೆ

ಏನನ್ನೂ ಬೇಡದೆಯೂ
ಭಿಕ್ಷುಕನ ಮನಸ್ಸು

ಕೊಟ್ಟಿದ್ದು ಬೇಡವಾದಾಗ
ಇರುವುದೆಲ್ಲ ರದ್ದಿ
ಒಡಲು ಕಸದ ತೊಟ್ಟಿ

ಕಸದ ರಾಶಿಯಲ್ಲಿ
ಹುಳಹುಪ್ಪಟೆಗಳು ಬೆಳೆಯುತ್ತವೆ
ಎಲ್ಲ ಕೊಳೆಯುತ್ತದೆ
ಕೊಳೆತು ಗೊಬ್ಬರವಾಗುತ್ತದೆ

ಏನನ್ನೂ ಕೇಳದೇ
ಪ್ರೀತಿಸುವುದೆಂದರೆ
ಸಾಪೇಕ್ಷ ನೋವು
ನಿರಪೇಕ್ಷ ಮೌನ
ಮತ್ತು....

ಸದ್ದಿಲ್ಲದೆ
ಆವರಿಸುವ
ಸಾವು

Tuesday, January 3, 2012

ನಾನು


ನಂದೂ ಒಂದು ಹೆಸರು
ನೀನು, ಅವರು, ಎಲ್ಲರೂ
ಕರೆಯೋದ್ರಿಂದ
ಅದೇ ನಾನು

ಹೌದಾ?
ನಾನಂದರೆ ಬರೀ ನನ್ನ ಹೆಸರಾ?
ಅಥವಾ ಇನ್ನೂ ಏನೇನಾದರೂ
ಇರಬಹುದೇ?

ನನ್ನೊಳಗಿನ ನೀನು?
ನಿನ್ನೊಳಗಿನ ನಾನು?
ಮೊನ್ನೆ ಸತ್ತಿದ್ದ ನಾನು?
ಇವತ್ತು ಹುಟ್ಟಿದ ನಾನು?

ಅವತ್ತು ಛೀ
ಎಂದು ಅನಿಸಿಬಿಟ್ಟಿದ್ದ ನಾನು
ಇನ್ಯಾವತ್ತೋ ಉಬ್ಬಿ
ಬಿರಿದುಹೋಗಿದ್ದ ನಾನು

ನಿನ್ನೆಯಿದ್ದಂತೆ ಇವತ್ತಿಲ್ಲ
ಮೊನ್ನೆಯಿದ್ದಂತೆ ನಿನ್ನೆಯಿರಲಿಲ್ಲ
ಮೊನ್ನೆ ಕಣ್ಣ ಸುತ್ತ ಕಪ್ಪು ಉಂಗುರ ಮೂಡಿರಲಿಲ್ಲ
ನಿನ್ನೆ ಗಡ್ಡದಲ್ಲಿ ಬಿಳಿಕೂದಲು ಇರಲಿಲ್ಲ
ಮೊನ್ನೆ ಇದ್ದವನೂ ನಾನೇನಾ?
ನಿನ್ನೆಯವನೂ ನಾನೇನಾ?
ಇವತ್ತು ಹೀಗೆ ಈ ಕ್ಷಣಕ್ಕೆ ಇರುವವನು ನಾನೇನಾ?
ನಾಳೆ ಬೆಳಿಗ್ಗೆ ಹುಟ್ಟುವವನೂ ನಾನೇನಾ?

ನಿನ್ನೆ ಕುಕ್ಕುರುಗಾಲು ಬಡಿದುಕೊಂಡು ಕೂತು
ಕಣ್ತುಂಬ ಅತ್ತಿದ್ದೆಲ್ಲ
ಇವತ್ತು ನೆನಪಾಗಿ ನಗು ಉಕ್ಕುಕ್ಕಿ ಬರುತ್ತಿದೆ

ಹೌದು,
ನಾನು
ಸ್ಥಾವರನಲ್ಲ
ಜಂಗಮ
ಸಾಯುವವರೆಗೆ
ನಾನು ನಾನೇ
ಸತ್ತ ಮೇಲೆ ಮಾತ್ರ
ಅದು

Monday, January 2, 2012

ಮನಸ್ಸು ಮುಟ್ಟೋದು ಅಂದ್ರೆ


ಮನಸ್ಸು ಮುಟ್ಟೋದು ಅಂದ್ರೆ
ದೇಹ ಹಿಡಿ ಮಾಡಿಕೊಂಡು
ಮಂಡಿಯೂರಿ ನಿಲ್ಲೋದು

ಕೆನ್ನೆ ಮೇಲೆ ವಿನಾಕಾರಣ
ಬೆಳೆದುನಿಲ್ಲೋ
ಅಹಂಕಾರದ ದುರ್ಮಾಂಸವನ್ನು
ಕಿತ್ತು ಕಸದ ತೊಟ್ಟಿಗೆ ಎಸೆಯೋದು

ದೇಹಕ್ಕೆ ಮನಸ್ಸು ಆವಾಹಿಸಿಕೊಳ್ಳೋದು ಕಷ್ಟ
ದೇಹ ಮನಸ್ಸಲ್ಲಿ ಕರಗದ ಹೊರತು
ಪ್ರತಿ ಸ್ಪರ್ಶಕ್ಕೂ
ಯಂತ್ರದ ನಿರ್ಜೀವತೆ

ಶಬ್ದ ಕೇಳಿಸಿಕೋ
ಹಕ್ಕಿ ಮಿಡಿದ ಸದ್ದು
ಎಲೆ ಅರಳಿದ ಸದ್ದು
ಮಂಜಹನಿ ಹೊರಳಿದ ಸದ್ದು
ಚಿಟ್ಟೆ ರೆಕ್ಕೆ ಆಡಿಸಿದ ಸದ್ದು
ಹಸುವಿನ ಕೆಚ್ಚಲ ಮೊಲೆತೊಟ್ಟುಗಳು
ಒಂದಕ್ಕೊಂದು ತಾಗಿದ ಸದ್ದು

ಒಮ್ಮೆ ಉಸಿರು ಬಿಗಿಹಿಡಿದು
ನಿಟ್ಟುಸಿರು ಬಿಟ್ಟು ಮತ್ತೆ ಉಸಿರೆಳೆದುಕೋ
ವಿಧವಿಧದ ಗಂಧ ತಾಕಬೇಕು
ಮಣ್ಣ ಗಂಧ
ಮಕರ ಗಂಧ
ಗಾಳಿ ಗಂಧ
ನೀರ ಗಂಧ
ಸಕಲಜೀವಗಳ ಮಿಥುನ ಗಂಧ

ರೆಪ್ಪೆ ಪಡಪಡನೆ ಹೊಡೆದು ಒಮ್ಮೆ
ಅಕ್ಷಿಪಟಲ ತೆರೆದು ನೋ??
ಕೋಟಿಕೋಟಿ ನಕ್ಷತ್ರಗಳು
ಬಣ್ಣಬಣ್ಣದ ಕಣಗಳಾಗಿ ಹೊಳೆಯಬೇಕು

ಹೀಗೆ ಕಾಣದ, ಕೇಳದ, ಆಘ್ರಾಣಿಸದ ಹೊರತು
ಮನಸ್ಸು ಮುಟ್ಟಲಾಗದು

ಮನಸ್ಸು ಮುಟ್ಟಲು
ದೇಹ ಕರಗಿಸಬೇಕು,
ಎದೆ ಹೊನಲಾಗಿ
ಹರಿಯಬೇಕು.