Friday, November 6, 2009

ಮಾಂಸದ ರಾಶಿಯಂಥ ಯಡಿಯೂರಪ್ಪ ಹಾಗು ಸಂವಹನದ ಚಿಂತನಾಗೋಷ್ಠಿ

ಟೊಲೆಡೋದಲ್ಲಿ ಹುಲಿಯೊಂದನ್ನು ಆತ ಪಳಗಿಸಿ ಪ್ರದರ್ಶಿಸುತ್ತಿದ್ದಾನೆ. ಹೊಸ ಜಗತ್ತಿನಿಂದ ರಾಜನಿಗೆ ಸಂದ ಕಾಣಿಕೆ ಅದು. ಸರಪಳಿಯಲ್ಲಿ ಥೇಟು ನಾಯಿಮರಿಯಂತೆ ವಿಧೇಯವಾಗಿ ನಡೆದು ಬರುತ್ತಿದೆ.

ಗೊನ್ಸಾಲೋ ಡಿ ಒವಿಡೋ, ಟೊಲೆಡೋದ ರಾಜ್ಯಪಾಲ, ಹುಲಿಯನ್ನು ಗಮನಿಸುತ್ತಾನೆ. ಅವನ ರಕ್ತ ಹೆಪ್ಪುಗಟ್ಟುತ್ತದೆ. ಜಾಗುವಾರ್‌ನ ನಿಲುವೇ ಅಂಥಾದ್ದು. ಆತ ಹೇಳುತ್ತಾನೆ. ‘ಈ ಪ್ರಾಣಿಯನ್ನು ಪೂರಾ ನಂಬಕೂಡದು. ಸ್ನೇಹದಲ್ಲಿ ಇರಕೂಡದು. ಮನುಷ್ಯರ ಸಂಗಕ್ಕೆ ಹೇಳಿದ ಪ್ರಾಣಿ ಇದಲ್ಲ...

ಹುಲಿಯಾಡಿಸುವಾತ ನಗುತ್ತಾನೆ. ಸರಪಳಿ ಬಿಚ್ಚಿ ಅದರ ಬೆನ್ನು ಸವರುತ್ತಾನೆ. ಹುಲಿ ಗುರುಗುಡುತ್ತದೆ. ಭೂಮಿಯೊಡಲ ಕಂಪನದಂತೆ ಅದು ಒವಿಡೋನ ಗರ್ಭಕ್ಕೇ ಇಳಿಯುತ್ತಿದೆ.

ಕೋರೆಹಲ್ಲಿನ ಈ ಗುರುಗಾಟ ಕೇಡಿನ ಸಂಜ್ಞೆಯಂತಿದೆ. ಒಂದಲ್ಲ ಒಂದು ದಿನ ಹುಲಿಯಾಡಿಸುವಾತ ಅದಕ್ಕೆ ಬಲಿಯಾಗಲೇಬೇಕು. ತಟ್ಟೆಯಲ್ಲಿ ವಿಧೇಯವಾಗಿ ಅನ್ನ ನೆಕ್ಕಲೆಂದು ಆ ದೇವರು ಈ ಭೀಕರ ಪ್ರಾಣಿಗೆ ಹಲ್ಲು ಉಗುರು ದೈತ್ಯ ಶಕ್ತಿ ನೀಡಿದ್ದಾನೆಯೇ? ಈ ಹುಲಿಯ ವಂಶದವರಾರೂ ತಟ್ಟೆಯಲ್ಲಿ ಉಂಡವರಲ್ಲ. ಬಗೆದು ಸೀಳಿ ಜಗಿದು ನುಂಗುವುದು ಬಿಟ್ಟರೆ ಇನ್ನಾವ ನಡವಳಿಕೆ ಈ ಹುಲಿಗೆ ಗೊತ್ತು? ಹುಲಿಯಾಡಿಸುವಾತ ಇನ್ನೂ ನಗುತ್ತಿದ್ದಾನೆ. ಒವಿಡೋನಲ್ಲಿ ಅಲೆಅಲೆಯಾಗಿ ಯೋಚನೆ, ಅಸಹನೆ ಹೊಗೆಯಾಡುತ್ತಿದೆ.

ಹುಲಿಯಾಡಿಸುವಾತ ಈಗ ಕೆಂಪನೆ ಮಾಂಸದ ರಾಶಿಯಂತೆ ಕಾಣಿಸುತ್ತಿದ್ದಾನೆ. ಹೊಸ ಪ್ರಪಂಚದ ಹಿಂಸ್ರ ಸಾರ್ವಭೌಮ, ಸಾಕು ಪ್ರಾಣಿಯಾಗಲು ಸಾಧ್ಯವೇ ಇಲ್ಲ.

ಒವಿಡೋ ಸ್ಫೋಟಗೊಂಡಂತೆ ಮುಖ ತಿರುವಿ ಆಜ್ಞಾಪಿಸುತ್ತಾನೆ. ‘ಅದರ ಉಗುರು ಕಿತ್ತುಹಾಕಿ, ಹಲ್ಲುಗಳನ್ನು ಕಿತ್ತು ಬಿಡಿ

*****

ಎಡುವರ್ಡೊ ಗೆಲಿಯಾನೋ ಬರೆದ ಮೆಮೊರಿ ಆಫ್ ಫೈರ್‌ನ ಒಂದು ಅಧ್ಯಾಯದಲ್ಲಿ ಕಾಣಿಸುವ ಬರೆಹವಿದು. (ಕೆ.ಪಿ.ಸುರೇಶ್ ಅವರ ಅನುವಾದ: ಬೆಂಕಿಯ ನೆನಪು)

ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಈಗಿನ ಪರಿಸ್ಥಿತಿ ಹೀಗೆಯೇ ಇದೆ. ಅವರೀಗ ಕೆಂಪನೆ ಮಾಂಸದ ರಾಶಿಯಂತೆ ಕಾಣುತ್ತಿದ್ದಾರೆ. ಯಡಿಯೂರಪ್ಪ ಅವರ ಮೈ ತುಂಬ ಬಳ್ಳಾರಿಯ ರೆಡ್ಡಿಗಳು ಪರಚಿದ, ಗೀರಿದ ಗಾಯದ ಗುರುತುಗಳು.

ಬಳ್ಳಾರಿಯ ರೆಡ್ಡಿಗಳು ಆಕ್ರಮಣಶೀಲರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ವಿಧಾನಪರಿಷತ್‌ನಲ್ಲಿ ತಮ್ಮದೇ ಸರ್ಕಾರದ ಮುಖ್ಯಮಂತ್ರಿಯ ವಿರುದ್ಧ ೧೫೦ ಕೋಟಿ ರೂ. ಭ್ರಷ್ಟಾಚಾರದ ಆರೋಪವನ್ನು ಹೇರಿದಾತ ಜನಾರ್ದನ ರೆಡ್ಡಿ. ಕಾಲು ಕೆರೆದು ಜಗಳಕ್ಕೆ ನಿಂತರೆ ರೆಡ್ಡಿಗಳು ಥೇಟ್ ತೆಲುಗು ಸಿನಿಮಾದ ವಿಲನ್‌ಗಳಂತೆ ಆಡುತ್ತಾರೆ (ಹೀರೋಗಳಂತೆ ಭಾವಿಸಿಕೊಂಡಿರುತ್ತಾರೆ).ಇದ್ಯಾವುದೂ ಯಡಿಯೂರಪ್ಪ ಅವರಿಗೆ ಗೊತ್ತಿರದ ವಿಷಯಗಳೇನೂ ಆಗಿರಲಿಲ್ಲ.

ಜೆಡಿಎಸ್ ಜತೆ ಮೈತ್ರಿ ಮುರಿದು ಬಿದ್ದ ನಂತರ ರೆಡ್ಡಿಗಳನ್ನು ಅಗತ್ಯಕ್ಕಿಂತ ಹೆಚ್ಚು ಮುದ್ದು ಮಾಡಿದ ಯಡಿಯೂರಪ್ಪ ವಿಧಾನಸಭೆ ಚುನಾವಣೆಯಲ್ಲಿ ಒಂದೇ ಕುಟುಂಬ ನಾಲ್ವರಿಗೆ ಟಿಕೆಟ್ ನೀಡಿದರು. ಬಿಜೆಪಿ ಅಭ್ಯರ್ಥಿಗಳಿಗೆ ಫಂಡು ಕೊಡಿಸಿ ಸ್ವತಃ ತಾವೂ ಹಾಗು ಅಭ್ಯರ್ಥಿಗಳು ಏಕಕಾಲಕ್ಕೆ ಅವರ ಹಂಗಿಗೆ ಬಿದ್ದರು. ಬಹುಮತಕ್ಕೆ ಕೆಲಸ್ಥಾನಗಳು ಕಡಿಮೆ ಬಂದಾಗ ಆರು ಮಂದಿ ಪಕ್ಷೇತರರನ್ನು ಕೊಂಡುಕೊಳ್ಳುವ ಕೆಲಸವನ್ನೂ ರೆಡ್ಡಿಗಳ ಸುಪರ್ದಿಗೇ ಬಿಟ್ಟರು.

ಚುನಾವಣೆಯಲ್ಲಿ ಬಂಡವಾಳ ಹೂಡಿದ ಕಾರಣಕ್ಕಾಗಿ ಒಂದೇ ಕುಟುಂಬದ ಮೂವರಿಗೆ ಸಚಿವಗಿರಿಯನ್ನು ಕೊಡಲಾಯಿತು. ಕಂದಾಯ, ಆರೋಗ್ಯ, ಪ್ರವಾಸೋದ್ಯಮ ಖಾತೆಗಳು ರೆಡ್ಡಿಗಳ ಪಾಲಾಯಿತು.

ಇದಾದ ತರುವಾಯ ನಡೆದದ್ದು ಆಪರೇಷನ್ ಕಮಲ. ಜೆಡಿಎಸ್-ಕಾಂಗ್ರೆಸ್ ಪಕ್ಷಗಳಿಂದ ಶಾಸಕರನ್ನು ಹಿಡಿದು ತಂದು, ರಾಜೀನಾಮೆ ಕೊಡಿಸಿ ಮತ್ತೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವ ಕೆಲಸವನ್ನೂ ರೆಡ್ಡಿಗಳೇ ವಹಿಸಿಕೊಂಡರು. ಕೆಲವು ಆಪರೇಷನ್ ಮುಖ್ಯಮಂತ್ರಿ ಇಶಾರೆಯ ಮೇರೆಗೆ ನಡೆದರೆ ಮತ್ತೆ ಕೆಲವು ರೆಡ್ಡಿಗಳ ಮರ್ಜಿಗೆ ತಕ್ಕಂತೆ ನಡೆದವು.

ಅಲ್ಲಿಗೆ ಮುಖ್ಯಮಂತ್ರಿ ಬಳ್ಳಾರಿಯ ಗಣಿ ದಂಧೆಕೋರರ ಎದುರು ಸಂಪೂರ್ಣ ತಲೆಬಾಗಿಸಿ ನಿಂತಾಗಿತ್ತು. ಬಿಜೆಪಿಯ ಸಾಕಷ್ಟು ಸಂಖ್ಯೆಯ ಶಾಸಕರು, ಸಚಿವರು ರೆಡ್ಡಿಗಳ ಆಜ್ಞಾನುಧಾರಕರಾಗಿ ಬದಲಾಗಿ ಹೋಗಿದ್ದರು. ಅರ್ಥಾತ್ ತಮ್ಮನ್ನು ತಾವು ಸಂಪೂರ್ಣ ರೆಡ್ಡಿಗಳಿಗೆ ಮಾರಿಕೊಂಡಿದ್ದರು.

****

ಇದೆಲ್ಲ ಮುಗಿದ ಮೇಲೆ ನಡೆದದ್ದು ವಿರಸಪರ್ವ. ಅದನ್ನು ಎಲ್ಲರೂ ಊಹಿಸಿದ್ದರು. ರೆಡ್ಡಿಗಳಿಗೆ ಸಂಪೂರ್ಣ ಸರ್ಕಾರವನ್ನೇ ತಮ್ಮ ತೆಕ್ಕೆಗೆ ತಂದುಕೊಳ್ಳುವ ಆತುರ. ಬಂಡವಾಳಶಾಹಿಯ ಮನಸ್ಥಿತಿ ಅದು. ಅದರಲ್ಲೂ ದಿನಕ್ಕೆ ಕೋಟ್ಯಂತರ ರೂ. ದುಡಿಯುವ ರೆಡ್ಡಿಗಳಿಗೆ ಎಲ್ಲರನ್ನೂ ಕೊಂಡುಕೊಳ್ಳುವ ದುರಹಂಕಾರ. ಯಡಿಯೂರಪ್ಪ ಜತೆ ಜಗಳಕ್ಕೆ ಬಿದ್ದರು. ಸಿಟ್ಟಿನ ಮಲ್ಲ ಯಡಿಯೂರಪ್ಪ ಸುಮ್ಮನಿದ್ದಾರೆಯೇ? ಅವರೂ ಜಗಳಕ್ಕೆ ನಿಂತರು.

ಉತ್ತರ ಕರ್ನಾಟಕದಲ್ಲಿ ಭೀಕರ ನೆರೆ. ಅದನ್ನು ಯಾರೂ ಊಹಿಸಿರಲಿಲ್ಲ. ಮುಖ್ಯಮಂತ್ರಿ ಬೆಂಗಳೂರಿನ ಬೀದಿಬೀದಿಯಲ್ಲಿ ಜನರಿಂದ ಭಿಕ್ಷಾಟನೆಗೆ ನಿಂತರೆ ಅತ್ತ ರೆಡ್ಡಿಗಳು ಬಳ್ಳಾರಿ ಗಣಿ ದಂಧೆಕೋರರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆಸಿ ೫೦ ಕೋಟಿ ರೂ. ಸಂಗ್ರಹಿಸಿದರು.

ಉತ್ತರ ಕರ್ನಾಟಕದ ಜನತೆ ನೆರೆಯಿಂದ ಕಂಗೆಟ್ಟಿರುವಾಗ, ಯಡ್ಡಿ-ರೆಡ್ಡಿಗಳು ಒಂದಾಗಿ ಕೆಲಸ ಮಾಡಬೇಕಾದ ಅಗತ್ಯವಿತ್ತು. ಮಾನವೀಯವಾಗಿ ಯೋಚಿಸುವವರು ಇದನ್ನೇ ಮಾಡುತ್ತಿದ್ದರು. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲು ನೆರೆ ಪರಿಹಾರದ ಕಾರ್ಯಕ್ರಮಗಳು ಉಭಯ ಬಣದವರಿಗೂ ಒಂದು ವೇದಿಕೆಯಾಗಬೇಕಿತ್ತು. ಆದರೆ ನೆರೆಯನ್ನೇ ವಿಷಯವಾಗಿಟ್ಟುಕೊಂಡು ಮತ್ತಷ್ಟು ದೂರಾದರು.

ನಂತರದ್ದು ಶಕ್ತಿ ಪ್ರದರ್ಶನ. ನೆರೆಯಲ್ಲಿ ನಲುಗುತ್ತಿರುವ ಜನಪ್ರತಿನಿಧಿಗಳು ಗೋವಾ-ಹೈದರಾಬಾದ್‌ಗಳಿಗೆ ಧಾವಿಸಿದರು. ಅಲ್ಲಿ ಅವರಿಗೆ ಸಂಪೂರ್ಣ ಮೋಜು-ಮಸ್ತಿ.

*****

ಬೆಂಗಳೂರಿನಲ್ಲಿ ಅಧಿಕಾರ ಹಿಡಿದು ಕುಳಿತಿರುವ ನೀಚರು... ಕಂಸನ ಸಂಹಾರವಾಗಬೇಕು... ನಮ್ಮ ಕೆಲಸಗಳಿಗೆ ಅಡ್ಡಗಾಲು ಹಾಕುತ್ತಿರುವ ನರಿಗಳು... ಇತ್ಯಾದಿ ಇತ್ಯಾದಿಯಾಗಿ ರೆಡ್ಡಿಗಳು ಮುಖ್ಯಮಂತ್ರಿಯನ್ನೇ ತಿವಿದು ಮಾತನಾಡುತ್ತಿದ್ದಾರೆ. ಹುಲಿಗೆ ಸೀಳಿ, ಜಗಿಯುವುದನ್ನು ಬಿಟ್ಟರೆ ಬೇರೇನು ಗೊತ್ತು? ಅದು ತನ್ನ ಸಹಜ ಕರ್ಮವನ್ನೇ ಆರಂಭಿಸಿದೆ. ಸೀಳುತ್ತಿದೆ, ಜಗಿಯುತ್ತಿದೆ, ಗೀರುತ್ತಿದೆ.

ತಮ್ಮ ವಿರುದ್ಧ ಇಷ್ಟೆಲ್ಲ ಮಾತನಾಡಿದರೂ ಯಡಿಯೂರಪ್ಪ ಅಸಹಾಯಕರು. ಸಂಧಾನ ಸಂಪೂರ್ಣ ಮುರಿದು ಬೀಳುವ ಕಡೆ ಗಳಿಗೆಯವರೆಗೆ ರೆಡ್ಡಿಗಳನ್ನು ಅವರು ಸಂಪುಟದಿಂದ ಕೈ ಬಿಡಲಾರರು. ಎಲ್ಲ ಸ್ವಯಂಕೃತಾಪರಾಧ.

ಈ ನಡುವೆ ಉತ್ತರ ಕರ್ನಾಟಕದ ಜನ ಏನು ಮಾಡಬೇಕು? ಅವರ ಕಷ್ಟಗಳನ್ನು ಕೇಳುವವರು ಯಾರು? ಅಲ್ಲಿ ಮುರಿದು ಬಿದ್ದಿರುವ ಮನೆಗಳನ್ನು ಕಟ್ಟಿಕೊಡುವವರು ಯಾರು? ನಲುಗಿ ಹೋಗಿರುವ ಬದುಕನ್ನು ರಿಪೇರಿ ಮಾಡುವವರು ಯಾರು?

ಸರ್ಕಾರ ಪರಿಹಾರ ನೀಡುತ್ತದೆ, ಅದು ಜನರ ಹಕ್ಕು. ಆದರೆ ರೆಡ್ಡಿಗಳಂತವರು ತಮ್ಮ ಜೇಬಿನಿಂದ ಹಣ ನೀಡಿದರೆ ಅದು ಭಿಕ್ಷೆ. ಜನರೂ ಸಹ ಮಾರಾಟದ ಸರಕುಗಳಾಗುತ್ತಾರೆ. ರೆಡ್ಡಿಗಳು ಈಗಾಗಲೇ ಪರ್ಯಾಯ ಸರ್ಕಾರದಂತೆ ಫೋಸು ಕೊಡುತ್ತಿದ್ದಾರೆ. ತಾವೇ ಮಂತ್ರಿಗಳಾಗಿರುವ ಸರ್ಕಾರವನ್ನೇ, ತಮ್ಮ ಮುಖ್ಯಮಂತ್ರಿಯನ್ನೇ ಗೇಲಿ ಮಾಡಿ, ಕುಸಿದು ಬಿದ್ದಿರೋದು ೫೦,೦೦೦ ಸಾವಿರ ಮನೆಗಳು; ಅವನ್ನು ನಮ್ಮ ಸ್ವಂತ ಹಣದಲ್ಲಿ, ತಮ್ಮ ಗಣಿ ದಂಧೆಕೋರ ಗಣದ ಹಣದಲ್ಲಿ ಕಟ್ಟಿಸ್ತೀವಿ ಬಿಡ್ರೀ ಎಂದು ಗುಟುರು ಹಾಕುತ್ತಿದ್ದಾರೆ.

ಯಡ್ಡಿ-ರೆಡ್ಡಿಗಳು ಇಬ್ಬರೂ ಸೇರಿ ಜನರನ್ನು ಭಿಕ್ಷಕುರನ್ನಾಗಿಸಿದ್ದಾರೆ. ಇದಕ್ಕಿಂತ ಹೀನ, ಅಮಾನವೀಯ ನಡೆ ಇನ್ನೇನಿರಲು ಸಾಧ್ಯ?

*****

ಉತ್ತರ ಕರ್ನಾಟಕದಲ್ಲಿ ಅಪ್ಪಳಿಸಿದ ನೆರೆ, ಮತ್ತದರ ನಂತರದ ಬೆಳವಣಿಗಳು ಗಾಬರಿ ಹುಟ್ಟಿಸುವಂತಿದೆ. ಜನ ನಿಜಕ್ಕೂ ತಬ್ಬಲಿಗಳಾಗಿದ್ದಾರೆ. ತಾವು ಬೀದಿಗೆ ಬಿದ್ದಿದ್ದರೂ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಉಳಿತಾನೇನ್ರೀ ಎಂದು ಕೇಳುವಷ್ಟು ಅವರು ಅಮಾಯಕರು. ಈಗಾಗಲೇ ಋಣಕ್ಕೆ ಬಿದ್ದಿರುವ ಸಾಕಷ್ಟು ಜನರಿಗೆ ರೆಡ್ಡಿ-ಶ್ರೀರಾಮುಲುಗಳೇ ದೇವರು. ಅತ್ಯಂತ ಸಭ್ಯ, ಪ್ರಾಮಾಣಿಕ ಜನರನ್ನೂ ಭ್ರಷ್ಟರಾಗಿಸಿದ ಕೀರ್ತಿ ರೆಡ್ಡಿಗಳದು.

ಇದರ ನಡುವೆ ನೆರೆಯ ನಂತರದ ಕಟ್ಟುವ ಕೆಲಸ ಹೇಗೆ ಸಾಗಿದೆ? ಅದನ್ನು ನಿರ್ವಹಿಸುವವರು ಯಾರು? ಹೇಗೆ? ಈ ಕೆಲಸದಲ್ಲೂ ನಡೆಯುತ್ತಿರುವ ಸ್ವಜನ ಪಕ್ಷಪಾತ, ಸಾಮಾಜಿಕ ತಾರತಮ್ಯದ ಸ್ವರೂಪಗಳು ಎಂಥವು. ಗ್ರಾಮೀಣ ಆರ್ಥಿಕತೆಯ ಎಬಿಸಿಡಿ ಗೊತ್ತಿಲ್ಲದವರು ಅಲ್ಲಿ ಏನನ್ನು ಮಾಡಬಲ್ಲರು? ಸ್ಥಳಾಂತರಗೊಳ್ಳಬೇಕಾದ ಹಳ್ಳಿಗಳ ಜನರ ಕಥೆಗಳೇನು? ನಿಜಕ್ಕೂ ಈ ಗ್ರಾಮಗಳು ಸ್ಥಳಾಂತರಗೊಳ್ಳಬೇಕೆ? ಇಂಥ ನೂರಾರು ಪ್ರಶ್ನೆಗಳನ್ನು ಇಟ್ಟುಕೊಂಡು ಸಂವಹನ ಸಂಘಟನೆ ಇದೇ ೧೨ ರಂದು ಗುರುವಾರ ಇಡೀ ದಿನ ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದ ಸೆನೆಟ್ ಸಭಾಂಗಣದಲ್ಲಿ ಚಿಂತನಾ ಗೋಷ್ಠಿ ಇಟ್ಟುಕೊಂಡಿದೆ.

ಡಾ.ಯು.ಆರ್.ಅನಂತಮೂರ್ತಿ ಗೋಷ್ಠಿಯನ್ನು ಉದ್ಘಾಟಿಸುತ್ತಾರೆ. ನಾಡಿನ ವಿವಿಧ ಕ್ಷೇತ್ರದ ಗಣ್ಯರು ಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಾರೆ. ನೀವೆಲ್ಲರೂ ಈ ಗೋಷ್ಠಿಗೆ ಬನ್ನಿ ಎಂಬುದು ನನ್ನ ಪ್ರೀತಿಯ ಮನವಿ.

ಹೆಚ್ಚಿನ ವಿವರಗಳು ಸಂವಹನ ಬ್ಲಾಗ್‌ನಲ್ಲಿದೆ. ಅಲ್ಲೂ ಒಮ್ಮೆ ಹೋಗಿ ಬನ್ನಿ

Wednesday, August 12, 2009

ತಿರುವಳ್ಳುವರ್, ಸಾಹಿತಿಗಳು, ಮಾಧ್ಯಮಗಳು, ಇತ್ಯಾದಿ...

ತಿರುವಳ್ಳುವರ್ ಪ್ರತಿಮೆ ಅನಾವರಣದ ವಿಷಯದಲ್ಲಿ ಕನ್ನಡ ಸಂಘಟನೆಗಳು ನಡೆದುಕೊಂಡ ರೀತಿಯ ಬಗ್ಗೆ ಎಲ್ಲೆಡೆ ಪುಂಖಾನುಪುಂಖ ಉಪದೇಶಗಳ ಸುರಿಮಳೆಯಾಗುತ್ತಿದೆ. ಪತ್ರಿಕೆಗಳ ವಾಚಕರ ವಾಣಿಗಳು ತುಂಬಿ ಹರಿಯುತ್ತಿವೆ. ಸಂಪಾದಕೀಯ ಪುಟಗಳಲ್ಲಿ ಸಂಪಾದಕರು, ಮುಖ್ಯ ವರದಿಗಾರರು, ಇತರ ಪತ್ರಕರ್ತರಾದಿಯಾಗಿ ಎಲ್ಲರೂ ಪುಗಸಟ್ಟೆ ಬೋಧನೆಗಳ ಜ್ಞಾನಾಮೃತವನ್ನು ಹರಿಸುತ್ತಲೇ ಇದ್ದಾರೆ. ತಿರುವಳ್ಳುವರ್ ಪ್ರತಿಮೆ ಅನಾವರಣ ಒಂದು ಐತಿಹಾಸಿಕ ಸಾಧನೆ, ಅದರಿಂದ ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವಿನ ದಶಕಗಳ ವಿರಸ ಕೊನೆಗೊಂಡಿದೆ, ಭಾವನಾತ್ಮಕ ಬೆಸುಗೆ ಸಾಧ್ಯವಾಗಿದೆ, ಯಡಿಯೂರಪ್ಪ ಮಹತ್ಸಾಧನೆ ಮಾಡಿದ್ದಾರೆ-ಹೀಗಾಗಿ ಅವರನ್ನು ಕನ್ನಡ ಸಂಘಟನೆಗಳು ಬೆಂಬಲಿಸಬೇಕಿತ್ತು, ಪ್ರತಿಭಟನೆಗೆ ಇಳಿಯಬಾರದಿತ್ತು ಎಂಬುದು ಈ ಎಲ್ಲ ಪಂಡಿತರ ಒಂದೇ ಗಂಟಲಿನ ಕೂಗು.

ಈ ಎಲ್ಲ ಮಹಾನುಭಾವರ ಪ್ರಕಾರ ಕನ್ನಡ ಸಂಘಟನೆಗಳ ಮುಖಂಡರಿಗೆ ಬುದ್ಧಿಯಿಲ್ಲ, ಅವರೆಲ್ಲ ಮೂರ್ಖರು. ಅವರು ಗಲಾಟೆಕೋರರು. ಎ.ಕೆ.ಸುಬ್ಬಯ್ಯ ಹೇಳುವಂತೆ ಹೊಟ್ಟೆಪಾಡಿಗಾಗಿ ಚಳವಳಿ ಮಾಡಿಕೊಂಡವರು. ಹೀಗಾಗಿ ಅವರನ್ನು `ಸರಿದಾರಿಗೆ ತರುವ ಯತ್ನದಲ್ಲಿ ಎಲ್ಲ ಬೋಧನೆಗಳು ನಡೆಯುತ್ತಿವೆ.

ನಿಜ, ಕನ್ನಡ ಸಂಘಟನೆಗಳ ಮುಖಂಡರು ಬುದ್ಧಿವಂತರು, ಮೇಧಾವಿಗಳೇನೂ ಅಲ್ಲ. ಹೀಗಾಗಿಯೇ ಕರ್ನಾಟಕದ ಇತಿಹಾಸದಲ್ಲಿ ಒಬ್ಬನೇ ಒಬ್ಬ ಕನ್ನಡ ಚಳವಳಿಗಾರನಿಗೂ ಇದುವರೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿಲ್ಲ. ಒಬ್ಬನೇ ಒಬ್ಬ ಚಳವಳಿಗಾರನಿಗೂ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿಯಲ್ಲಿ ಬಿಡಿಎ ಸೈಟು ನೀಡಲಾಗಿಲ್ಲ. ಕನ್ನಡ ಚಳವಳಿಗಾರರು ಅಕಾಡೆಮಿ ಅಧ್ಯಕ್ಷರಾಗಲಿಲ್ಲ, ಸರ್ಕಾರ ಮತ್ತದರ ಅಂಗಸಂಸ್ಥೆಗಳು ಕೊಡಮಾಡುವ ಪ್ರಶಸ್ತಿಗಳ ಫಲಾನುಭವಿಗಳೂ ಆಗಲಿಲ್ಲ.

ಕನ್ನಡ ಚಳವಳಿ ಮುಖಂಡರು, ಕಾರ್ಯಕರ್ತರು ನಿಜಕ್ಕೂ ದಡ್ಡರು. ಹೀಗಾಗಿಯೇ ಅವರು ತಮ್ಮ ಮೇಲೆ ಹತ್ತಾರು ಕೇಸುಗಳನ್ನು ಮೈಮೇಲೆ ಹೇರಿಕೊಂಡಿದ್ದಾರೆ. ಆಗಾಗ ಜೈಲಿಗೆ ಹೋಗಿ ಬರುತ್ತಾರೆ. ಪೊಲೀಸರ ಲಾಠಿ ರುಚಿ ಆಗಾಗ ಅನುಭವಿಸುತ್ತಾರೆ. ಕೋರ್ಟಿನಲ್ಲಿ ದಿನವೂ ಹೋಗಿ ಕೈ ಕಟ್ಟಿ ನಿಂತುಕೊಳ್ಳುತ್ತಾರೆ.

ಅವರು ಬುದ್ಧಿವಂತಲ್ಲ, ಬುದ್ಧಿವಂತರಾಗಿದ್ದರೆ, ಅವರೂ ಸಹ ಗಾಜಿನ ಮನೆಯಲ್ಲಿ ಕುಳಿತುಕೊಂಡು ಬೋಧನೆಗೆ ಇಳಿಯುತ್ತಿದ್ದರು. ಚಳವಳಿಗಾರರು ಯಾವ ವಿಷಯವನ್ನು ಚಳವಳಿಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಅಲ್ಲೇ ಕುಳಿತು ಆದೇಶ ನೀಡುತ್ತಿದ್ದರು.

****

ಅಸಲಿಗೆ ನಮ್ಮ ಮಾಧ್ಯಮಗಳು ತಿರುವಳ್ಳುವರ್ ಪ್ರತಿಮೆ ಅನಾವರಣದ ವಿಷಯದಲ್ಲಿ ಕನ್ನಡ ಸಂಘಟನೆಗಳ ನಿಲುವು ಏನಾಗಿತ್ತು ಎಂಬುದನ್ನು ಸರಿಯಾಗಿ ಬಿಂಬಿಸಲೇ ಇಲ್ಲ. ತಿರುವಳ್ಳುವರ್ ಪ್ರತಿಮೆ ಅನಾವರಣ ನಡೆಯಲು ನಮ್ಮ ಅಭ್ಯಂತರವೇನೂ ಇಲ್ಲ. ಅದಕ್ಕೂ ಮುನ್ನ ತಮಿಳುನಾಡು ಸರ್ಕಾರದ ಕಿತಾಪತಿಗಳು ನಿಲ್ಲಲಿ ಎಂಬುದು ಅವರ ಬೇಡಿಕೆಯಾಗಿತ್ತು. ತಿರುವಳ್ಳುವರ್ ಬಗ್ಗೆ ನಮಗೆ ಗೌರವವಿದೆ, ಆದರೆ ಪ್ರತಿಮೆ ಹಿಂದೆ ನಿಂತಿರುವ ಭಾಷಾಂಧ ಶಕ್ತಿಗಳನ್ನು ನಾವು ವಿರೋಧಿಸುತ್ತೇವೆ ಎಂದು ಅವರು ಪದೇ ಪದೇ ಹೇಳುತ್ತಲೇ ಬಂದರು.

ಮಾಧ್ಯಮಗಳಿಗೆ ಜಾಣ ಕುರುಡು. ಕನ್ನಡಪರ ಸಂಘಟನೆಗಳನ್ನು ಜಗಳಗಂಟರು ಎಂದು ಬಿಂಬಿಸಲು ಅವುಗಳು ನಿರ್ಧರಿಸಿಯಾಗಿತ್ತು. ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂಪಾದಕರೋರ್ವರು ತಮ್ಮ ಅಂಕಣದಲ್ಲಿ ಇದನ್ನು ಬರೆದರು. ಮತ್ತೋರ್ವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು ತಮ್ಮ ಪತ್ರಿಕೆಯ ಮುಖಪುಟದಲ್ಲಿ ಇಂಥದ್ದೇ ಲೇಖನ ಬರೆದು, ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಮುಂದಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಹಾಡಿ ಕೊಂಡಾಡಿದರು. ಆನಂತರ ನಡೆದಿದ್ದೆಲ್ಲ ನಮ್ಮ ಸಾಹಿತಿ-ಪತ್ರಕರ್ತರ ಹೃದಯ ವೈಶಾಲ್ಯದ, ವಿಶ್ವ ಮಾನವ ಸಂದೇಶಗಳ, ಭಾವೈಕ್ಯತೆ, ರಾಷ್ಟ್ರೀಯತೆಯ ಅನಾವರಣ!

ಪ್ರಜಾವಾಣಿ ಹಾಗು ವಿಜಯಕರ್ನಾಟಕ ಪತ್ರಿಕೆಗಳು ತಳೆದ ನಿಲುವನ್ನೇ ಇತರ ಪತ್ರಿಕೆಗಳು ಅನುಸರಿಸಿದವು. ಕನ್ನಡ ಚಳವಳಿಯ ವಿಷಯದಲ್ಲಿ ಯಾವಾಗಲೂ ಒಂದು ಹೆಜ್ಜೆ ಕನ್ನಡಪರವಾಗೇ ಇರುವ ಕನ್ನಡಪ್ರಭವೂ ಸಹ ಇದನ್ನೇ ಮಾಡಿತು.

ಪತ್ರಿಕೆಗಳು ತನ್ನ ಒಲವು ನಿಲುವುಗಳನ್ನು ನಿರ್ಧರಿಸಲು ಸ್ವತಂತ್ರವಾಗಿರುತ್ತವೆ. ಅವುಗಳನ್ನು ಪ್ರಶ್ನಿಸುವ ಪ್ರಯತ್ನವನ್ನೇನೂ ನಾನು ಮಾಡುತ್ತಿಲ್ಲ. ಕನ್ನಡ ಸಂಘಟನೆಗಳ ನಿಲುವುಗಳನ್ನು ಪತ್ರಿಕೆಗಳು ಒಪ್ಪಬೇಕು ಎಂದೇನೂ ಇಲ್ಲ.

ಆದರೆ ಸಾಹಿತಿಗಳು-ಪತ್ರಕರ್ತರು ತೆಗೆದುಕೊಂಡ ನಿರ್ಧಾರವನ್ನೇ ಒಪ್ಪಬೇಕು ಎಂಬ ದರ್ದು ಕನ್ನಡ ಚಳವಳಿಗಾರರಿಗೂ ಇಲ್ಲ ಎಂಬುದನ್ನು ಮರೆಯುವಂತಿಲ್ಲ. ಕನ್ನಡ ಚಳವಳಿಗಳು ಸಾಹಿತಿಗಳ-ಪತ್ರಕರ್ತರ ಮರ್ಜಿಯಿಂದಲೇ, ಅವರ ಆದೇಶದಿಂದಲೇ, ಅವರ ಕುಮ್ಮಕ್ಕಿನಿಂದಲೇ ನಡೆಯಬೇಕಾಗಿಲ್ಲ. ಕನ್ನಡದ ಅತಿ ಹೆಚ್ಚು ಪ್ರಸಾರದ ಎರಡು ಪತ್ರಿಕೆಗಳ ಸಂಪಾದಕರು ತೆಗೆದುಕೊಂಡ ನಿಲುವನ್ನು ಧಿಕ್ಕರಿಸಿ, ಕನ್ನಡ ಚಳವಳಿಗಾರರು ತಮ್ಮದೇ ದಾರಿ ಹುಡುಕಿಕೊಂಡರು. ಅವರು ನಮ್ಮ ಮಾತು ಕೇಳಬೇಕಿತ್ತು ಎಂಬ ದುರಂಹಕಾರ, ಹಠ ಯಾರಿಗಾದರೂ ಇದ್ದರೆ ಅವರು ಅದನ್ನು ತೆಪ್ಪಗೆ ಕಿತ್ತು ಎಸೆಯುವುದು ಒಳ್ಳೆಯದು.

****

ತಿರುವಳ್ಳುವರ್ ಪ್ರತಿಮೆ ಅನಾವರಣ ನಮ್ಮ ಸಾಹಿತಿ ಮಹೋದಯದ ದೃಷ್ಟಿಯಲ್ಲಿ ಎರಡೂ ರಾಜ್ಯಗಳ ನಡುವಿನ ಭ್ರಾತೃತ್ವವನ್ನು ಬೆಳೆಸುವ ಯತ್ನ. ಹಳೆಯ ಜಗಳವನ್ನು ಮರೆಯುವ, ಹೊಸ ಕೊಡು-ಕೊಳ್ಳುವಿಕೆಯತ್ತ ಸಾಗುವ ಹಾದಿ. ನಿಜವಿರಬಹುದು. ಆದರೆ ತಮಿಳುನಾಡು-ಕರ್ನಾಟಕ ರಾಜ್ಯಗಳ ನಡುವೆ ಇರುವ ಎಲ್ಲ ಸಮಸ್ಯೆಗಳೂ ಒಂದೇ ಏಟಿಗೆ ಬಗೆಹರಿದುಹೋಯಿತು ಎಂಬ ಭ್ರಮೆಯನ್ನು ಬಿತ್ತುವ ಯತ್ನವನ್ನು ಇವರೆಲ್ಲರೂ ಬಿಂಬಿಸಿದರು. ೧೯ ವರ್ಷಗಳ ಹಿಂದೆ ತಿರುವಳ್ಳುವರ್ ಪ್ರತಿಮೆ ಅನಾವರಣ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ಚಿದಾನಂದಮೂರ್ತಿಯವರು ಒಂದು ಹೆಜ್ಜೆ ಮುಂದೆ ಹೋಗಿ, `ಯಾರು ಏನೇ ಹೇಳಿದರೂ ಇಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ಯಾರಿಂದಲೂ ತಪ್ಪಿಸಲಾಗದು ಎಂದು ಥೇಟ್ ಮುಖ್ಯಮಂತ್ರಿಯ (ಆಡಳಿತಗಾರನ ಹಾಗೆ) ಹಾಗೆ ಹೇಳಿದರು.

ಆದರೆ ಅವರೆಲ್ಲರೂ ಮರೆತ ವಿಷಯವೆಂದರೆ, ೧೮ ವರ್ಷಗಳಿಂದ ಇದ್ದ ಮುಸುಕನ್ನು ತೆಗೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದ್ದಕ್ಕಿದ್ದಂತೆ ಯಾಕೆ ಯತ್ನಿಸಿದರು ಎಂಬುದು. ತಿರುವಳ್ಳುವರ್ ಕುರಿತು ಯಡಿಯೂರಪ್ಪನವರಿಗೆ ಇದ್ದಕ್ಕಿದ್ದಂತೆ ಗೌರವ ಹುಟ್ಟಿದ್ದೇಕೆ ಎಂಬುದರ ಕುರಿತು ಇವರೆಲ್ಲ ಯಾಕೆ ಯೋಚಿಸಲಿಲ್ಲ?

ಕನ್ನಡ ಸಂಘಟನೆಗಳು ಮುಖ್ಯಮಂತ್ರಿಗಳ `ದೂರದೃಷ್ಟಿಯನ್ನು ಚೆನ್ನಾಗಿಯೇ ಗ್ರಹಿಸಿದವು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮಿಳರ ವೋಟ್‌ಬ್ಯಾಂಕ್ ಪಡೆದರೆ ಇನ್ನೂ ೨೦ ಸ್ಥಾನ ಗೆಲ್ಲುವ ಅವಕಾಶ ಇರುವುದರಿಂದಲೇ ಯಡಿಯೂರಪ್ಪ ಈ ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ಈ ಸಂಘಟನೆಗಳು ನೇರವಾಗಿಯೇ ಹೇಳಿದವು.

ಮಹಾಮಾನವತಾವಾದಿ ಬಸವಣ್ಣನವರ ಚಿಂತನೆಗಳನ್ನೇ ಗೌರವಿಸದ ಜನರಿಗೆ ತಿರುವಳ್ಳುವರ್ ಆದರ್ಶಗಳ ಪಾಲನೆ ಇದ್ದಕ್ಕಿದ್ದಂತೆ ನೆನಪಾಗಿದ್ದೇಕೆ ಎಂದು ಈ ಸಾಹಿತಿಗಳಿಗೆ ಅರ್ಥವಾಗಲೇ ಇಲ್ಲ. ಆದರೆ ಕನ್ನಡ ಸಂಘಟನೆಗಳು ಚೆನ್ನಾಗಿಯೇ ಇದನ್ನು ಅರ್ಥ ಮಾಡಿಕೊಂಡಿದ್ದವು. ಆದರೂ ಕನ್ನಡ ಚಳವಳಿಗಾರರೇ ದಡ್ಡರೆಂಬಂತೆ ಬಿಂಬಿಸಲಾಯಿತು.

ತಮಾಶೆಯೆಂದರೆ ಈ ಬಾರಿ ಎಡ-ಬಲ ಬೇಧವಿಲ್ಲದಂತೆ ನಮ್ಮ ಕೆಲ ಸಾಹಿತಿಗಳು ಸರ್ಕಾರದ ಪರವಾಗಿ ನಿಂತುಕೊಂಡರು. ಕೇವಲ ಸರ್ಕಾರದ ಪರ ನಿಂತುಕೊಳ್ಳದೆ, ಕನ್ನಡ ಸಂಘಟನೆಗಳ ವಿರುದ್ಧ ನಿಂತುಕೊಂಡರು. ಪ್ರಜಾವಾಣಿಯ ವಾಚಕರ ವಾಣಿಯಲ್ಲಿ ಬರೆದ ಲೋಹಿಯಾವಾದಿಯೊಬ್ಬರು ಕನ್ನಡ ಸಂಘಟನೆಗಳು ಯಾವ ವಿಷಯವನ್ನು ಚಳವಳಿಗೆ ಆಯ್ಕೆ ಮಾಡಿಕೊಳ್ಳಬಾರದು, ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಉಪದೇಶಾಮೃತ ನೀಡಿದರು. ಕನ್ನಡ ಸಂಘಟನೆಗಳನ್ನು ತಾವೇ ಸಂಬಳ ಕೊಟ್ಟು ಸಾಕಿಕೊಂಡಂತೆ ಇತ್ತು ಅವರ ವಾದಸರಣಿ. ಸಾಲದಕ್ಕೆ ಕನ್ನಡ ಸಂಘಟನೆಗಳನ್ನು ಗಲಾಟೆ ಸಂಘಟನೆಗಳು ಎಂದು ಜರಿದರು.

ಇದಕ್ಕೆ ತಕ್ಕ ಉತ್ತರವನ್ನು ಚಂಪಾ ಅದೇ ವಾಚಕರ ವಾಣಿಯಲ್ಲಿ ನೀಡಿದ್ದಾರೆ. ಚಂಪಾ ಹೀಗೆ ಹೇಳಿದ್ದಾರೆ: ಕ್ರಾಂತಿಯ ಮಿಡಿತವಿರುವ ಬುದ್ಧಿವಂತರು `ಅನುಕೂಲ ನೋಡಿಕೊಂಡು ಮಾರ್ಗದರ್ಶನ ಮಾಡಲಿ. ಇಲ್ಲವಾದರೆ ಇಂಥವರಿಗೆ `ಗಂಟಲು ಸತ್ತ ಬುದ್ಧಿವಂತರು ಎಂದು ನಾವೂ ಕರೆಯಬೇಕಾದೀತು. ಬರೀ ಮೂಗು ಮುರಿಯುತ್ತ ಕುಂತರೆ ವಿಕಾರಗೊಳ್ಳುವುದು ನಿಮ್ಮ ಮುಖವೇ! ನಿಮ್ಮ ಮಾರ್ಗವೂ ಬೇಕಾಗಿಲ್ಲ, ದರ್ಶನವೂ ಬೇಕಾಗಿಲ್ಲ!

*****

ತಿರುವಳ್ಳುವರ್ ಪ್ರತಿಮೆ ಅನಾವರಣದ ದಿನದಂದು ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಭಾವಚಿತ್ರವನ್ನು ಹಿಡಿದು ಕೆಲ ತಮಿಳು ಭಾಷಾಂಧರು ಘೋಷಣೆ ಕೂಗುತ್ತಿದ್ದರು. ಕೆಲವು ಟಿವಿಗಳಲ್ಲೂ ಈ ದೃಶ್ಯ ಪ್ರಸಾರವಾಯಿತು. ಮುಖ್ಯಮಂತ್ರಿಯ ಭಾವಚಿತ್ರದೊಂದಿಗೆ ಪ್ರಭಾಕರನ್ ಭಾವಚಿತ್ರವನ್ನೂ ಬಳಸಿದ್ದ ಕೆಲವು ದೊಡ್ಡ ಗಾತ್ರದ ಬ್ಯಾನರ್‌ಗಳು ಕಾರ್ಯಕ್ರಮದದ ಸಭಾಂಗಣದ ಸುತ್ತ ಮಿರಿಮಿರಿ ಮಿಂಚುತ್ತಿದ್ದವು.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪ್ರಭಾಕರನ್ ಘೋಷಿತ ಅಪರಾಧಿಯಾಗಿದ್ದ. ಎಲ್‌ಟಿಟಿಇ ಭಾರತದಲ್ಲಿ ನಿಷೇಧಿತ ಸಂಘಟನೆ. ಜಾಗತಿಕ ಭಯೋತ್ಪಾದನೆಯಲ್ಲಿ ಆತ್ಮಾಹುತಿ ದಳವನ್ನು ಪರಿಚಯಿಸಿದ್ದೇ ಎಲ್‌ಟಿಟಿಇ.

ಬೆಂಗಳೂರು ತಮಿಳು ಸಂಘ ಹಿಂದಿನಿಂದಲೂ ಎಲ್‌ಟಿಟಿಇ ಕುರಿತು ತಳೆದ ನಿಲುವು ಏನೆಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ತಮಿಳುನಾಡಿನಲ್ಲಿ ಎಲ್‌ಟಿಟಿಇ ಮುಖವಾಣಿಯಾಗೇ ಇರುವ ನೆಡುಮಾರನ್ ಮತ್ತಿತರರೇ ಈ ಸಂಘದ ಆದರ್ಶ. ವಿಶ್ವ ತಮಿಳು ಸಮ್ಮೇಳನದಲ್ಲಿ ಕನ್ನಡಿಗರ ವಿರೋಧದ ನಡುವೆಯೂ ನೆಡುಮಾರನ್ ಕರೆಸಿ ಭಾಷಣ ಮಾಡಿಸಿದ್ದೂ ಇದೇ ತಮಿಳು ಸಂಘವೇ. ಎಲ್‌ಟಿಟಿಇಗೆ ಬೆಂಗಳೂರಿನಲ್ಲಿ ಹಣ ಸಂಗ್ರಹಿಸಿ ದೇಣಿಗೆಯಾಗಿ ನೀಡಲಾಗುತ್ತಿತ್ತು ಎಂಬುದೂ ರಾಜೀವ್ ಹತ್ಯೆಕೋರರ ವಿರುದ್ಧ ಕಾರ್ಯಾಚರಣೆಯಲ್ಲಿ ಬಯಲಾಯಿತು.

ಡಾ.ರಾಜ್ ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ ನಂತರ ರಾಜಿಪಂಚಾಯ್ತಿಗೆ ಹೋದವರು ಯಾರು ಎಂಬುದೂ ಎಲ್ಲರಿಗೆ ಗೊತ್ತಿರುವ ವಿಷಯ. ರಾಜ್ ಬಿಡುಗಡೆಗೆ ವೀರಪ್ಪನ್ ಒಡ್ಡಿದ ಷರತ್ತುಗಳೆಲ್ಲವೂ ಬೆಂಗಳೂರಿನ ಭಾಷಾಂಧ ತಮಿಳರ ಷರತ್ತುಗಳೇ ಆಗಿದ್ದವು ಎಂಬುದನ್ನೂ ಮರೆಯುವಂತಿಲ್ಲ. ರಾಜ್ ಬಿಡುಗಡೆಗೆ ಕಳುಹಿಸಲಾದ ಕೋಟಿಗಟ್ಟಲೆ ಹಣದಲ್ಲಿ ಸಾಕಷ್ಟು ಹಣ ಬೆಂಗಳೂರಿನ ಜನರಿಗೇ ಸಂದಾಯವಾದವು ಎಂಬ ವರ್ತಮಾನವೂ ಇದೆ.

ತಿರುವಳ್ಳುವರ್ ಪ್ರತಿಮೆ ಅನಾವರಣದ ದಿನ ಇದೇ ಶಕ್ತಿಗಳು ತೋಳು, ತೊಡೆ ತಟ್ಟಿ ನಿಂತವು. ಮುಖ್ಯಮಂತ್ರಿಯ ಜತೆ ಪ್ರಭಾಕರನ್ ಫೋಟೋ ಅಂಟಿಸುವಷ್ಟು ಧೈರ್ಯವನ್ನು ಪ್ರದರ್ಶಿಸಿದವು.

ತಮಾಶೆ ಎಂದರೆ ಕನ್ನಡಪ್ರಭ, ವಾರ್ತಾಭಾರತಿ ಹೊರತು ಪಡಿಸಿ ಬೇರೆ ಪತ್ರಿಕೆಗಳು ಪ್ರಭಾಕರನ್ ಭಾವಚಿತ್ರವನ್ನು ಹೊತ್ತು ಕುಣಿಸಿದ ವಿಷಯವನ್ನು ಪ್ರಕಟಿಸಲೇ ಇಲ್ಲ. ಅದು ಇತರ ಪತ್ರಿಕೆಗಳಿಗೆ ಸುದ್ದಿಯಾಗುವಂಥ ವಿಷಯವೇ ಆಗಿರಲಿಲ್ಲವೇನೋ? ಅಥವಾ `ಹೊಸ ಶಕೆ ಆರಂಭ, `ಭಾವನಾತ್ಮಕ ಬೆಸುಗೆ ಇತ್ಯಾದಿ ತಲೆಬರೆಹದ ಸುದ್ದಿಗಳ ನಡುವೆ `ಮೊಸರಲ್ಲಿ ಕಲ್ಲು ಯಾಕೆ ಎಂದು ಅವು ನಿರ್ಧರಿಸಿಬಿಟ್ಟವೇನೋ!

ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಗಡಿ ಹೋರಾಟ ಸಮಿತಿ ಅಧ್ಯಕ್ಷ ರಾವ್ ಬೈಂದೂರ್ ಎಂಬ ಹಿರಿಯ ಜೀವವನ್ನು, ಅವರ ಕೆಲ ಸಂಗಡಿಗರ ಸಮೇತ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿರುವಾಗಲೇ ಬಂಧಿಸಲಾಯಿತು. ಷರತ್ತುಬದ್ಧವಾಗಿ ತಿರುವಳ್ಳುವರ್ ಪ್ರತಿಮೆ ಅನಾವರಣ ಆಗಬೇಕು ಎಂದು ಹೇಳಿದ್ದೇ ಅವರ ತಪ್ಪು. ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು, ಎರಡು ಸಮುದಾಯಗಳ ನಡುವೆ ದ್ವೇಷ ಹಬ್ಬಿಸುವ ಯತ್ನದ ಆರೋಪದಲ್ಲಿ ರಾವ್ ಬೈಂದೂರ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದರು.

ಇತ್ತ ದೇಶದ ಮಾಜಿ ಪ್ರಧಾನಿಯನ್ನು ಕೊಂದ, ನಿಷೇಧಿತ ಸಂಘಟನೆಯ ಮುಖ್ಯಸ್ಥ, ಇತ್ತೀಚಿಗಷ್ಟೆ ಶ್ರೀಲಂಕಾ ಸೈನ್ಯದಿಂದ ಕೊಲ್ಲಲ್ಪಟ್ಟ ಪ್ರಭಾಕರನ್ ಎಂಬ ರಾಷ್ಟ್ರದ್ರೋಹಿಯ ಭಾವಚಿತ್ರದ ಮೆರವಣಿಗೆ ನಡೆಸುವವರೇ ಧನ್ಯರು. ಅವರ ಮೇಲೆ ಕೇಸೂ ಇಲ್ಲ, ದೂರೂ ಇಲ್ಲ. ನಮ್ಮ ಪತ್ರಿಕೆಗಳ ಸಂಪಾದಕೀಯ ಪುಟದಲ್ಲಿ `ಇದು ಸಲ್ಲ ಎಂಬ ಒಂದು ಸಾಲೂ ಇಲ್ಲ. ಕೆಲ ಸಾಹಿತಿಗಳದ್ದು ಯಥಾಪ್ರಕಾರ ಈ ವಿಷಯದಲ್ಲಿ ಗಂಭೀರ ಮೌನ. ಒಂದು ವೇಳೆ ಇದನ್ನೂ ಕನ್ನಡ ಸಂಘಟನೆಗಳು ಪ್ರಶ್ನಿಸಿದರೆ, ಕನ್ನಡ ಚಳವಳಿಗಾರರು ದಡ್ಡರು ಎಂದು ಅವರು ಮತ್ತೆ ಬಾಯಿಬಡಿದು ಕಿರುಚುತ್ತಾರೆ.


*****
ಕನ್ನಡ ಚಳವಳಿಗಾರರು ಬಳಸುವ ಭಾಷೆಯ ಬಗ್ಗೆ, ಉಚ್ಛಾರಣೆಯ ದೋಷದ ಬಗ್ಗೆಯೂ ಮತ್ತೆ ಕೆಲವರು ಚರ್ಚೆ ಆರಂಭಿಸಿದ್ದಾರೆ. ಈ ಕುರಿತು ನಾನು ಹಿಂದೆಯೇ ಬರೆದಿದ್ದೆ. ಸಂಸ್ಕೃತಭೂಯಿಷ್ಠವಾದ ಕನ್ನಡವನ್ನು ಮಾತನಾಡುವವರು ಮಾತ್ರ ಕನ್ನಡಿಗರು ಎಂಬುದು ಇವರ ವರಸೆ. ಹೀಗೆಲ್ಲ ಮಾತನಾಡುವವರು ಮೇಲ್ವರ್ಗಕ್ಕೆ ಸೇರಿದವರು ಎಂಬುದು ಸ್ಪಷ್ಟ.

ಮೊನ್ನೆ ಟಿವಿ ಆಂಕರ್ ಒಬ್ಬರು ಇದೇ ಪ್ರಶ್ನೆಯನ್ನು ಎತ್ತಿದರು. ಕನ್ನಡ ಚಳವಳಿಗಾರರೊಬ್ಬರಿಗೆ ಒಂದೇ ಒಂದು ವಾಕ್ಯ ತಪ್ಪಿಲ್ಲದಂತೆ ಮಾತನಾಡಲು ಬರುವುದಿಲ್ಲ. ಇವರು ಎಂಥ ಚಳವಳಿ ಮಾಡುತ್ತಾರೆ ಎಂದು ಅವರು ಮತ್ತೊಬ್ಬ ಚಳವಳಿಗಾರನಿಗೆ ಪ್ರಶ್ನಿಸುತ್ತಿದ್ದರು.

ಇದೇ ಚಾನೆಲ್‌ಗೆ ಪ್ರೈಮ್‌ಬ್ಯಾಂಡ್‌ನಲ್ಲಿ ಕೇಬಲ್ ಆಪರೇಟರ್‌ಗಳು ಅವಕಾಶ ನೀಡದೇ ಇದ್ದಾಗ, ಆ ಚಾನೆಲ್‌ಗೆ ಆಸರೆಗೆ ನಿಂತಿದ್ದು ಅದೇ ಕನ್ನಡ ಹೋರಾಟದ ಮುಖಂಡರೇ ಎಂಬುದು ವಿಚಿತ್ರ. ಆಗ ಅವರಿಗೆ ಭಾಷಾಶುದ್ಧಿಯ ಅಗತ್ಯತೆ ಕಂಡುಬಂದಿರಲಿಲ್ಲ.

ಚಳವಳಿಗಾರರನ್ನು ಕನ್ನಡದ ಹೆಸರಿನಲ್ಲಿ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವಾಗ ಈ ಮಂದಿಗೆ ಚಳವಳಿಗಾರರ ಭಾಷಾ ಜ್ಞಾನ, ವ್ಯಾಕರಣ ಜ್ಞಾನ ನೆನಪಿಗೆ ಬರುವುದಿಲ್ಲ.

ಕನ್ನಡ ಕಾರ್ಯಕರ್ತನೊಬ್ಬ ಈ ಬಗ್ಗೆ ನೊಂದು ಮಾತನಾಡಿದಾಗ ಆತನಿಗೆ ಹೇಳಿದೆ: ನಿಮಗೆ ಭಾಷಾ ಶುದ್ಧಿ ಇಲ್ಲ ಎಂದು ಹೇಳುವವರಿಗೆ ಹೃದಯವೇ ಶುದ್ಧವಿಲ್ಲ. ಅವರ ದೇಹದ ಭಾಷೆ(ಮ್ಯಾನರಿಸಂ)ಯನ್ನು ಗಮನಿಸಿ ನೋಡಿ. ಅಸಹ್ಯವಾಗುತ್ತದೆ. ಅಂಥವರ ನೀತಿಪಾಠ ನಿಮಗೆ ಬೇಕಾಗೂ ಇಲ್ಲ.

*****

ಬಸವಣ್ಣನ ನಾಡು ಇದು. ಪ್ರತಿಮಾ ಸಂಸ್ಕೃತಿ ನಮ್ಮ ರಾಜ್ಯಕ್ಕೆ ಒಗ್ಗಿಬರದ ವಿಷಯ. `ಸ್ಥಾವರಕ್ಕಳಿವುಂಟು, ಜಂಗಕ್ಕಳಿವಿಲ್ಲ ಎಂದವರು ನಮ್ಮ ಬಸವಾದಿ ಶರಣರು.

ಈಗಾಗಲೇ ಸ್ಥಾಪನೆಯಾಗಿರುವ ಎಲ್ಲ ಪ್ರತಿಮೆಗಳ ಮೇಲೂ ಕಾಗೆ-ಗೂಬೆಗಳು ಕೂತು-ಹೇತು ಹೋಗುತ್ತವೆ. ಒಮ್ಮೊಮ್ಮೆ ಮನುಷ್ಯರೇ ಈ ಕೆಲಸವನ್ನು ಮಾಡುತ್ತಾರೆ. ಮಲ ಸುರಿಯುತ್ತಾರೆ, ಚಪ್ಪಲಿ ಹಾರ ಹಾಕುತ್ತಾರೆ.

ಇವತ್ತು ನಮ್ಮ ಸಾಹಿತಿಗಳ ದಿವ್ಯದೃಷ್ಟಿಯಲ್ಲಿ ಸೌಹಾರ್ದತೆಯ ಸಂಕೇತವಾಗಿರುವ ತಿರುವಳ್ಳುವರ್, ಸರ್ವಜ್ಞ ಪ್ರತಿಮೆಗಳು ನಾಳೆ ದ್ವೇಷದ ರೂಪಕಗಳನ್ನೂ ಹರಡಬಹುದು.

ಅಷ್ಟಕ್ಕೂ ತಮಿಳರ ಆಕ್ರಮಣಶೀಲತೆ, ಸಾಮ್ರಾಜ್ಯಶಾಹಿ ಮನೋಭಾವದ ಪರಿಚಯ ಎಲ್ಲರಿಗೂ ಇದೆ. ತಿರುವಳ್ಳುವರ್ ಪ್ರತಿಮೆ ಅನಾವರಣವಾದ ಮಾತ್ರಕ್ಕೆ ತಮಿಳುನಾಡು ಸರ್ಕಾರ ಕಿತಾಪತಿ ಬಿಡುತ್ತದೆ ಎಂದು ಭಾವಿಸುವವನು ಶತಮೂರ್ಖನೇ ಆಗಿರಬೇಕು. ಮುಂದೆ ಕಾವೇರಿ ವಿಷಯಕ್ಕೋ, ಹೊಗೇನಕಲ್ ವಿಷಯಕ್ಕೋ ಮತ್ತೆ ವಿವಾದ ಎದ್ದು ನಿಂತಾಗ ನಮ್ಮ ವಿಶಾಲ ಹೃದಯದ ಸಾಹಿತಿ-ಪತ್ರಕರ್ತರು ಯಾವ ನಿಲುವು ತಳೆಯುತ್ತಾರೋ ಕಾದು ನೋಡಬೇಕು.

****

ಈ ಲೇಖನ ಬರೆಯುವ ಹೊತ್ತಿಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡರಿಗೆ ಜೈಲಿನಿಂದ ಬಿಡುಗಡೆಯಾಗಿರಲಿಲ್ಲ. ಜೈಲು ಚಳವಳಿಗಾರರಿಗೆ ಹೊಸದೇನೂ ಅಲ್ಲ. ಇವತ್ತು ಹೋಗುತ್ತಾರೆ, ನಾಳೆ ಬರುತ್ತಾರೆ.

ಆದರೆ ಸರ್ಕಾರದ, ಪ್ರಭುತ್ವದ ಮರ್ಜಿಗೆ ಬಿದ್ದು, ಅವಕಾಶಗಳಿಗಾಗೋ, ಬಿಟ್ಟಿ ಪ್ರಚಾರಕ್ಕಾಗೋ, ಜಾತಿಯ ಕಾರಣಕ್ಕೋ ಚಳವಳಿಗಾರರನ್ನು ನಿಂದಿಸುವ ಕಾಯಕ ಮಾಡಿಕೊಂಡು ಬರುತ್ತಿರುವ ಮೇಧಾವಿಗಳು ತಮ್ಮ ಸುತ್ತಲೇ ಒಂದು ಜೈಲನ್ನು ಕಟ್ಟಿಕೊಂಡಿದ್ದಾರೆ. ಅವರು ಅದರಿಂದ ಯಾವತ್ತೂ ಹೊರಬರಲಾರರು. ಸರ್ಕಾರದ ಜೀತಗಾರಿಕೆಯ ಬಂಧೀಖಾನೆಯಲ್ಲಿ ಅವರದು ಜೀವಾವಧಿ ಶಿಕ್ಷೆ.

*****

ಈ ಲೇಖನದ ಮೂಲಕ ಹಲವಾರು ಗೆಳೆಯರ ಮುನಿಸನ್ನು ಎದುರಿಸಬೇಕಾಗುತ್ತದೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಹೊಸ ಶತ್ರುಗಳು ಸೃಷ್ಟಿಯಾಗುತ್ತಾರೆ ಎಂಬುದೂ ಗೊತ್ತಿದೆ. ಆದರೆ ಕಳೆದ ಹತ್ತು ವರ್ಷಗಳಿಂದ ಕನ್ನಡ ಚಳವಳಿಗಾರರನ್ನು ತುಂಬ ಹತ್ತಿರದಿಂದ ಗಮನಿಸಿಕೊಂಡು ಬಂದಿದ್ದೇನೆ. ಅವರ ತಳಮಳ, ನೋವು ಸಂಕಟಗಳೆಲ್ಲವನ್ನೂ ನಾನು ಪ್ರತ್ಯಕ್ಷ ನೋಡಿದ್ದೇನೆ.

ಹೀಗಾಗಿ ಅವರನ್ನು ಅಪಮಾನಿಸುವ, ಅವರ ಕಾಳಜಿಯನ್ನು ಅನುಮಾನದಿಂದ ನೋಡುವ ಯಾರನ್ನೇ ಆಗಲಿ ನಾನು ವಿರೋಧಿಸುತ್ತೇನೆ. ಅದು ನನ್ನ ಕರ್ತವ್ಯವೆಂದೇ ಭಾವಿಸಿದ್ದೇನೆ.

Sunday, July 19, 2009

ಹಳ್ಳಿ ಥೇಟರ್‌ನ ಪವಾಡ ಮತ್ತು ಪ್ರಸಾದ್

ಪತ್ರಿಕೆ, ಚಳವಳಿ, ಸಂಘಟನೆ ಇತ್ಯಾದಿಗಳಲ್ಲಿ ಹೊರಳಿಕೊಂಡು, ಆದರ್ಶದ ಹುಮ್ಮಸ್ಸಿನಲ್ಲಿ ಓಡಾಡುವಾಗ ನಮ್ಮ ಕಣ್ಣಿಗೆ ಬಿದ್ದವರು ರಕ್ಷಿದಿ ಪ್ರಸಾದ್. ಅವತ್ತಿಗೆ ಅವರು ನಮಗೆ ಒಂಥರ ನಿಗೂಢ ವ್ಯಕ್ತಿ. ದಿನವೂ ಪತ್ರಿಕೆಗಳನ್ನು ಕೊಳ್ಳಲು ಗೆಳೆಯ ನಜರುಲ್ಲಾ ಅವರ ಅಂಗಡಿಗೆ ಅವರು ಬರುತ್ತಿದ್ದರು. ಅವತ್ತು ಹೊಸದಾಗಿ ಬಂದ ಎಲ್ಲ ಪತ್ರಿಕೆಗಳನ್ನೂ ಅವರು ಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತು ಅಲ್ಲೇ ಹರಟೆ, ಒಂದಷ್ಟು ಓಡಾಟ, ನಂತರ ಬಂದ ಬೈಕ್‌ನಲ್ಲೇ ವಾಪಾಸು ಬೆಳ್ಳೇಕೆರೆಗೆ ಹೋಗುತ್ತಿದ್ದರು.

ಸಕಲೇಶಪುರದ ಮೂಡಿಗೆರೆಗೆ ಹೋಗುವ ರಸ್ತೆಯಲ್ಲಿ ಹಾನುಬಾಳಿಗೂ ಮುನ್ನ ಸಿಗುವ ಬೆಳ್ಳೇಕೆರೆಯಲ್ಲಿ `ಜೈ ಕರ್ನಾಟಕ ಸಂಘದ ಬೋರ್ಡನ್ನು ಆಗಾಗ ನೋಡಿದ್ದೆವು, ಆ ಸಂಘದಲ್ಲಿ ಪ್ರಸಾದ್ ಕ್ರಿಯಾಶೀಲರು ಎಂಬುದು ಗೊತ್ತಿತ್ತು. ನಂತರ ನಿಧಾನವಾಗಿ ಪ್ರಸಾದರ ಎಲ್ಲ ಚಟುವಟಿಕೆಗಳು ಗೊತ್ತಾಗತೊಡಗಿದಾಗಿನಿಂದ ಈ ವ್ಯಕ್ತಿ ಮತ್ತಷ್ಟು ನಿಗೂಢ ಅನಿಸತೊಡಗಿತ್ತು.

ಸಕಲೇಶಪುರದಂಥ ಪಟ್ಟಣದಲ್ಲಿ ಒಂದು ಸಂಘಟನೆಯನ್ನು ಕಟ್ಟಿ ಬೆಳೆಸಲು ನಾವು ಪಟ್ಟ ಪರದಾಟಗಳನ್ನು ನೆನಪಿಸಿಕೊಂಡರೆ ಮೈ ಜುಮ್ಮೆನಿಸುತ್ತದೆ. ಆದರೆ ಪ್ರಸಾದ್ ಬೆಳ್ಳೇಕೆರೆಯಂಥ ಕುಗ್ರಾಮದಲ್ಲಿ ಪವಾಡವನ್ನೇ ಸಾಧಿಸಿದ್ದರು.

ಪ್ರಸಾದ್ ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್ ಕೃತಿಯನ್ನು ಎರಡೆರಡು ಬಾರಿ ಓದಿದೆ. ಅವರ ಮೇಲಿದ್ದ ಗೌರವ ಇಮ್ಮಡಿಯಾಯಿತು ಎಂದಷ್ಟೆ ಹೇಳಿದರೆ ಕ್ಲೀಷೆ ಅನಿಸುತ್ತದೆ. ಹೆಗ್ಗೋಡಿನಲ್ಲಿ ಕುಳಿತು ಸುಬ್ಬಣ್ಣ ಮಾಡಿದ್ದನ್ನೇ ರಕ್ಷಿದಿ ಪ್ರಸಾದ್ ಬೆಳ್ಳೇಕೆರೆಯಲ್ಲಿ ಮಾಡಿದರು. ಸುಬ್ಬಣ್ಣ ಅವರಿಗಿದ್ದ ಆರ್ಥಿಕ ಅನುಕೂಲಗಳು, ಸಾಂಸ್ಕೃತಿಕ ಲೋಕದ ದಿಗ್ಗಜರ ಬೆಂಬಲ ಪ್ರಸಾದ್ ಅವರಿಗಿರಲಿಲ್ಲ. ಆದರೂ ಅವರು ಎದೆಗುಂದಲಿಲ್ಲ. ವಿಶ್ವಾಸ ಕಳೆದುಕೊಳ್ಳಲಿಲ್ಲ. ಅವರ ಜತೆಗಾರರು ಸಹ ಅವರನ್ನು ಕೈಬಿಡಲಿಲ್ಲ. ಎಲ್ಲ ಅಡೆ ತಡೆಗಳ ನಡುವೆಯೂ ಅವರು ಬೆಳ್ಳೇಕೆರೆಯನ್ನು ಕನ್ನಡ ರಂಗಭೂಮಿಯ ಭೂಪಟದಲ್ಲಿ ತಂದು ನಿಲ್ಲಿಸಿದರು. ಇಂಥವು ಎಲ್ಲರಿಂದಲೂ, ಎಲ್ಲ ಕಡೆಯಲ್ಲೂ ಆಗುವುದಿಲ್ಲ. ಹೀಗಾಗಿ ಪ್ರಸಾದ್ ಹಾಗು ಬೆಳ್ಳೇಕೆರೆಯ ಹೆಸರುಗಳೇ ನನ್ನಂಥವರಿಗೆ ಹೆಮ್ಮೆಯನ್ನು ಉಕ್ಕಿಸುವ, ಸ್ಪೂರ್ತಿಯನ್ನು ಚಿಮ್ಮಿಸುವ ಸಾಧನಗಳು.

****ಅಷ್ಟಕ್ಕೂ ಪ್ರಸಾದ್ ಬೆಳ್ಳೇಕೆರೆಯಂಥ ಕುಗ್ರಾಮದಲ್ಲಿ ಮಾಡಿದ ಪವಾಡವೇನು ಎಂಬುದನ್ನು ಅರಿಯಲು ಅವರ `ಬೆಳ್ಳೇಕೆರೆ ಹಳ್ಳಿಥೇಟರ್ ಕೃತಿಯನ್ನು ಓದಬೇಕು. ತಮ್ಮ ಕೃತಿಯನ್ನು ಅವರು `ಒಂದು ಗ್ರಾಮೀಣ ರಂಗಭೂಮಿಯ ಆತ್ಮಕಥನ ಎಂದು ಅವರು ಕರೆದುಕೊಂಡಿದ್ದಾರೆ.

ಏಕಕಾಲಕ್ಕೆ ಒಂದು ರೋಚಕ ಕಾದಂಬರಿಯೂ, ಆತ್ಮರತಿಯಿಲ್ಲದ ಆತ್ಮಚರಿತ್ರೆಯೂ, ಅಜ್ಞಾತ ಹಳ್ಳಿಯೊಂದರ ಚರಿತ್ರೆಯೂ ಆಗಿಬಿಡುವ ಈ ಕೃತಿಯ ಸೊಗಡು ಇರುವುದೇ ನಿರೂಪಣೆಯ ವಿಧಾನದಲ್ಲಿ. ನಿರುದ್ವಿಗ್ನವಾಗಿ, ಭಾವಾವೇಶವಿಲ್ಲದೆ ತಮ್ಮ ಸುತ್ತಲ ಬದುಕನ್ನು ಕಟ್ಟಿಕೊಡುವ ಪ್ರಸಾದ್ ಒಮ್ಮೊಮ್ಮೆ ತೇಜಸ್ವಿಯವರನ್ನು ನೆನಪಿಸುತ್ತಾರೆ. ಈ ಬಗೆಯ ನಿರುಮ್ಮಳ ಬರವಣಿಗೆ ಪ್ರಸಾದ್ ಅವರಿಗೆ ಸುಲಭವಾಗಿ ಒಗ್ಗಿರುವುದನ್ನು ಗಮನಿಸಿದರೆ, ಇಷ್ಟು ವರ್ಷ ನಾಟಕಗಳನ್ನು ಹೊರತುಪಡಿಸಿ ಏನನ್ನೂ ಬರೆಯಲಿಲ್ಲವೇಕೆ ಎಂಬ ವ್ಯಥೆಯೂ ಕಾಡುತ್ತದೆ.

ಡೈರಿ ಫಾರಂನ ಉದ್ಯೋಗಿಯಾಗಿ, ಇಡೀ ಕಾರ್ಮಿಕವಲಯದ ಜತೆ ಒಡನಾಡುತ್ತ, ಪ್ರಸಾದ್ ಕಟ್ಟಿಕೊಂಡ ಬದುಕೇ ಒಂದು ಕಾವ್ಯ. ಇವತ್ತಿನ ಕಾಲಘಟ್ಟಕ್ಕೆ ಒಂಥರಾ ಸಿನಿಮೀಯ ಅನಿಸುವ ಘಟನೆಗಳು ಇಲ್ಲಿವೆ. ನಿರಕ್ಷರಿ ಎನಿಸಿಕೊಳ್ಳಲು ಅವಮಾನವೆನಿಸಿ, ಅಕ್ಷರ ಕಲಿಯಲು ತೊಡಗುವ ಲಕ್ಷ್ಮಯ್ಯನಿಗೆ ಪುಟ್ಟ ವಯಸ್ಸಿನಲ್ಲೇ ಮೇಷ್ಟ್ರಾಗುವುದರೊಂದಿಗೆ ಪ್ರಸಾದ್ ಅವರ ಸಾಮಾಜಿಕ ಜೀವನ ಆರಂಭಗೊಳ್ಳುತ್ತದೆ.

ತದನಂತರ ಓದು ಬಾರದ ಕಾರ್ಮಿಕರನ್ನೆಲ್ಲ ಗುಡ್ಡೆ ಹಾಕಿ, ಅವರಿಗೆ ಅಕ್ಷರಾಭ್ಯಾಸ ಕಲಿಸುವುದು, ಅದಕ್ಕಾಗಿ ರಾತ್ರಿ ಶಾಲೆಯನ್ನು ತೆರೆಯುವುದು, ನಂತರ ಅದೇ ಜನರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟುವುದು, ಕಟ್ಟಿದ ನಾಟಕ ತಂಡವನ್ನು ರಾಜ್ಯ ಮಟ್ಟದ ಖ್ಯಾತಿಗೆ ತಂದು ನಿಲ್ಲಿಸುವುದು.... ಹೀಗೆ ಸಾಗುತ್ತದೆ ಪ್ರಸಾದ್ ಅವರ ಯಶೋಗಾಥೆ.

ಈ ದೊಡ್ಡ ಪಯಣದಲ್ಲಿ ಪ್ರಸಾದ್ ಅವರಿಗೆ ಹೆಗಲಿಗೆ ಹೆಗಲು ಕೊಟ್ಟವರು ನೂರಾರು ಮಂದಿ. ಬೌದ್ಧಿಕ ವಲಯದ ಜನರಿಗೆ ಸೀಮಿತವಾಗಿದ್ದ ಹವ್ಯಾಸಿ ರಂಗಭೂಮಿಯನ್ನು ಅನಕ್ಷರಕುಕ್ಷಿಗಳು, ಈಗಷ್ಟೆ ಅಕ್ಷರ ಕಲಿತವರು, ಅಲ್ಪಸ್ವಲ್ಪ ಓದಿಕೊಂಡವರಿಗೆ ಒಗ್ಗಿಸುವುದು ಅಷ್ಟು ಸುಲಭದ್ದೇನೂ ಅಲ್ಲ. ಅದೂ ಹೇಳಿಕೇಳಿ ಬೆಳ್ಳೇಕರೆಯಂಥ ವರ್ಷದ ಆರು ತಿಂಗಳು ಮಳೆಯಲ್ಲಿ ಮುಳುಗಿಹೋಗುವ ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ, ಕೂಲಿಕಾರ್ಮಿಕರ ನಡುವೆ ಇಂಥದ್ದೊಂದು ತಂಡ ಅರಳುವುದು ನಿಜಕ್ಕೂ ಪವಾಡವೇ.

ಇಡೀ ಕಥನದುದ್ದಕ್ಕೂ ಪ್ರಸಾದ್ ಮತ್ತು ಅವರ ತಂಡ ಎದುರಿಸಿದ ಸವಾಲುಗಳನ್ನು ಕಾಣಬಹುದು. ಐದು ರೂಪಾಯಿ ದಿನಗೂಲಿ ಪಡೆಯುವವರಿಂದ ನಾಲ್ಕಾಣೆ ಚಂದಾ ಪಡೆದು ರಂಗಚಟುವಟಿಕೆ ನಡೆಸಿಕೊಂಡು ಬರುವುದನ್ನು ಬೆಂಗಳೂರು-ಮೈಸೂರಿನ ಹವ್ಯಾಸಿ ರಂಗತಂಡಗಳು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲವೇನೋ?

ಅಪಾರ ಬಡತನ, ಹಳ್ಳಿ ರಾಜಕೀಯ, ಅನಕ್ಷರತೆ, ಮೌಢ್ಯ, ಕುಡಿತ, ಜಾತಿ ಜಗಳಗಳ ನಡುವೆ ಇದೊಂದು ತಂಡ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸುವುದು, ರಂಗಾಯಣದಲ್ಲಿ ಪ್ರದರ್ಶನ ನೀಡುವುದು ಒಂದೊಳ್ಳೆ ಕಮರ್ಷಿಯಲ್ ಸಿನಿಮಾಗೆ ಅರ್ಥಪೂರ್ಣ ಕ್ಲೈಮ್ಯಾಕ್ಸ್ ಕೂಡ ಆಗಿಬಿಡಬಹುದು. ಹಾಗೆಯೇ ಜಾಗತೀಕರಣದ ಕಾಲಘಟ್ಟದಲ್ಲಿ ದೇಸೀ ಸಂಸ್ಕೃತಿಯ ಪರ್ಯಾಯ ಹುಡುಕಾಟಗಳಿಗೆ ಅರ್ಥಪೂರ್ಣ ರೂಪಕವೂ ಆಗಬಹುದು.

****

ಹಳ್ಳಿ ಥೇಟರ್ ಕೇವಲ ಬೆಳ್ಳೇಕರೆಯಲ್ಲಿ ಅರಳಿದ ರಂಗಚಟುವಟಿಕೆಗಳ ಕುರಿತ ಕೃತಿಯೇನಲ್ಲ. ತಮ್ಮ ಸಮಕಾಲೀನ ರಾಜಕೀಯ, ಸಾಮಾಜಿಕ ಸ್ಥಿತಿಗತಿಗಳನ್ನೆಲ್ಲ ಪ್ರಸಾದ್ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ದ್ವಿತೀಯಾರ್ಧದ ಕಥನಗಳಿಗೆ ನಾನೂ ಸಹ ಪ್ರತ್ಯಕ್ಷ ಸಾಕ್ಷಿಯೇ. ಒಂದೆರಡು ಕಡೆ ನನ್ನನ್ನೂ ಪ್ರಸಾದ್ ಉಲ್ಲೇಖಿಸಿದ್ದಾರೆ.

ಆರು ತಿಂಗಳು ಮಳೆಯಲ್ಲಿ ಮುಳುಗಿ ಹೊರಜಗತ್ತಿನಿಂದ ಸಂಪರ್ಕವನ್ನೇ ಕಡಿದುಕೊಳ್ಳುವ (ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆ.) ಮಲೆನಾಡಿನ ಜನರ ರಾಜಕೀಯ ಪ್ರಜ್ಞೆ ನಿಬ್ಬೆರಗಾಗಿಸುವಂಥದ್ದು. ಇಂದಿರಾಗಾಂಧಿ, ದೇವರಾಜ ಅರಸು ಅವರನ್ನು ಜನರು ಸ್ವೀಕರಿಸಿದ ರೀತಿ ವಿಸ್ಮಯಕಾರಿ.

ರೈತ ಸಂಘದ ನಾಟಕೀಯ ಪ್ರವೇಶ, ತದನಂತರದ ಬೆಳವಣಿಗೆಗಳನ್ನೂ ಪ್ರಸಾದ್ ಆ ಸಂಘದಲ್ಲಿ ತೊಡಗಿಕೊಂಡವರಾದ್ದರಿಂದ ಅಧಿಕೃತವಾಗಿ ಉಲ್ಲೇಖಿಸಿದ್ದಾರೆ. ತುರ್ತು ಪರಿಸ್ಥಿತಿ, ಜೆಪಿ ಚಳವಳಿಯೂ ಸೇರಿದಂತೆ ಇನ್ನಿತರ ಚಳವಳಿಗಳೂ ಇಲ್ಲಿ ಪ್ರಾಸಂಗಿಕವಾಗಿ ಬಂದುಹೋಗಿವೆ.

ಪ್ರಸಾದ್ ರೈತ ಸಂಘದಂಥ ಚಳವಳಿಗಳಲ್ಲಿ ಕ್ರಿಯಾಶೀಲರಾಗಿದ್ದವರಾದರೂ ರಾಜಕಾರಣದ ಬಗ್ಗೆ ಸಿನಿಕತನ ಇಟ್ಟುಕೊಂಡವರಲ್ಲ. ಬೆಳ್ಳೇಕೆರೆಯ ಶಾಲೆಗೆ ಒಂದೆಕರೆ ಜಾಗ ಕೊಡಲು ಅರಣ್ಯ ಇಲಾಖೆಯವರು ಕಿರಿಕಿರಿ ಮಾಡುತ್ತಿದ್ದಾಗ ಆಗಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರು ಸಹಾಯ ಮಾಡಿದ್ದು, ಕೇವಲ ಪತ್ರವೊಂದನ್ನು ಬರೆದದಕ್ಕೆ ರಂಗಮಂದಿರ ನಿರ್ಮಾಣಕ್ಕೆ ಬಂಗಾರಪ್ಪ ತಾವು ಮುಖ್ಯಮಂತ್ರಿಯಾಗಿದ್ದಾಗ ಜಾಗ ನೀಡಿದ್ದನ್ನು ಅವರು ಇಲ್ಲಿ ಸ್ಮರಿಸಿಕೊಂಡಿದ್ದಾರೆ. ಚಳವಳಿ, ಹೋರಾಟಗಳಲ್ಲಿ ಮುಳುಗಿದವರಿಗೆ ಅಧಿಕಾರ ರಾಜಕಾರಣದಿಂದ ಏನೂ ಸಾಧ್ಯವಿಲ್ಲ ಎಂಬ ಸಿನಿಕತನ ಆವರಿಸಿರುತ್ತದೆ. ಈ ಎರಡು ಘಟನೆಗಳಲ್ಲದೆ, ತಮ್ಮೂರಿನ ಶಾಲೆ, ರಸ್ತೆ, ನೀರು, ಬಸ್‌ನಿಲ್ದಾಣ ಇತ್ಯಾದಿಗಳಿಗಾಗಿ ಪ್ರಸಾದ್ ಮತ್ತು ಗೆಳೆಯರು ಪೊಲಿಟಿಕಲ್ ಆಕ್ಟಿವಿಸಮ್‌ಗೆ ಮೊರೆ ಹೋಗುತ್ತಾರೆ; ಯಶಸ್ವಿಯೂ ಆಗುತ್ತಾರೆ.

****

ಹಳ್ಳಿ ಥೇಟರ್ ಕೇವಲ ಬೆಳ್ಳೇಕೆರೆಯ ಕಥನವೂ ಅಲ್ಲದೆ, ಇಡೀ ಸಕಲೇಶಪುರ ತಾಲ್ಲೂಕಿನ, ಇನ್ನೂ ಮುಂದುವರೆದು ಚಿಕ್ಕಮಗಳೂರು, ಸಕಲೇಶಪುರ, ಕೊಡುಗು ಜಿಲ್ಲೆಗಳಲ್ಲಿ ಹರಡಿಕೊಂಡ ಮಲೆನಾಡಿನ ಚಿತ್ರಣಗಳನ್ನೂ ನೀಡುತ್ತದೆ. ಮಲೆನಾಡಿನ ರೈತರ, ಕೂಲಿಕಾರ್ಮಿಕರ ಸಮಸ್ಯೆಗಳನ್ನು ಕೃತಿ ಎಳೆಎಳೆಯಾಗಿ ಬಿಡಿಸಿಡುತ್ತದೆ. ಮಲೆನಾಡಿನ ವೈವಿಧ್ಯಮಯ ಬದುಕಿನ ರಂಜನೀಯ ದೃಶ್ಯಗಳೂ ಇಲ್ಲಿವೆ (ಥೇಟ್ ತೇಜಸ್ವಿಯವರ ಕಾದಂಬರಿಗಳಲ್ಲಿ ಕಾಣುವಂತೆ)

ಹೇಳಿಕೇಳಿ ಮಲೆನಾಡಿನ ಜನರು ಜೀವನ್ಮುಖಿಗಳು. ಕಡುಕಷ್ಟದಲ್ಲೂ ಸುಖವನ್ನು ಹುಡುಕಿಕೊಳ್ಳುವವರು. ವಿಪರೀತ ಹಾಸ್ಯಪ್ರಿಯರು. ಇದೆಲ್ಲದರ ನಡುವೆಯೂ ಈ ಜನರು ಜಿದ್ದಿಗೆ ಬಿದ್ದರೆ, ಕುಡುಗೋಲು-ಕತ್ತಿಗಳಿಂದ ಮಾತನಾಡುವವರು. ಇದಕ್ಕೆ ಸಾಕಷ್ಟು ಉದಾಹರಣೆಗಳು ಹಳ್ಳಿಥೇಟರ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಜಗಳ, ಹಲ್ಲೆ, ಕೊಲೆ ಇತ್ಯಾದಿಗಳ ವಿವರಗಳ ಮಧ್ಯೆಯೂ ಇದೆಲ್ಲವನ್ನೂ ಮೀರಿ ನಿಲ್ಲುವುದು ಇಲ್ಲಿನ ಜನರ ಸಾಂಸ್ಕೃತಿಕ ಕ್ರಿಯಾಶೀಲತೆ. ಅದನ್ನು ಪ್ರಸಾದ್ ಇಲ್ಲಿ ಚೆನ್ನಾಗಿ ಹಿಡಿದಿಟ್ಟಿದ್ದಾರೆ.

****

ಕರ್ನಾಟಕ ನಾಟಕ ಅಕಾಡೆಮಿ ಏರ್ಪಡಿಸಿದ್ದ ಗ್ರಾಮೀಣ ರಂಗೋತ್ಸವದಲ್ಲಿ ಪ್ರಸಾದ್ ಬರೆದ ಮಾಯಾಮೃಗ ನಾಟಕವನ್ನು ಬೆಳ್ಳೇಕರೆಯ ಜೈ ಕರ್ನಾಟಕ ಸಂಘದವರು ಆಡಿ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸುತ್ತಾರೆ.

ವಿಶೇಷವೆಂದರೆ ನಾಟಕ ತಂಡದಲ್ಲಿ ಇದ್ದವರ ಪೈಕಿ ಮೂವರು ಬಡಗಿಗಳು, ಇಬ್ಬರು ಗಾರೆಯವರು, ನಾಲ್ಕು ಜನ ಕೂಲಿಕಾರ್ಮಿಕರು. ಒಬ್ಬ ಟೈಲರ್, ಇಬ್ಬರು ಡ್ರೈವರ್‌ಗಳು, ಒಬ್ಬರು ಶಾಲಾ ಶಿಕ್ಷಕರು-ಉಳಿದವರು ಇಂಥದೇ ಬೇರೆ ಬೇರೆ ವೃತ್ತಿಗಳಲ್ಲಿ ಇದ್ದವರು, ಜತೆಯಲ್ಲಿ ಒಂದಿಬ್ಬರು ಶಾಲಾ ಮಕ್ಕಳು!

ಇಂಥದ್ದೊಂದು ರಂಗತಂಡ ರಾಜ್ಯದ ಇನ್ಯಾವ ಮೂಲೆಯಲ್ಲಾದರೂ ಇರಬಹುದೇ? ಇದ್ದರೂ ಹತ್ತಾರು ವರ್ಷಗಳಿಂದ ಹೀಗೆ ಕ್ರಿಯಾಶೀಲವಾಗಿ ಇದ್ದಿರಲು ಸಾಧ್ಯವೇ?

ಪ್ರಸಾದ್ ಅವರ ಹಳ್ಳಿಥೇಟರ್‌ನ ಕೆಲವು ಅಧ್ಯಾಯಗಳನ್ನು ಚಂಪಕಾವತಿ ಬ್ಲಾಗ್‌ನಲ್ಲಿ ಸುಧನ್ವಾ ದೇರಾಜೆ ಪುಸ್ತಕ ಬಿಡುಗಡೆಗೂ ಮುನ್ನವೇ ಕಾಣಿಸಿದ್ದರು. ಕುತೂಹಲವಿರುವವರು ಚಂಪಕಾವತಿಗೊಮ್ಮೆ ಭೇಟಿ ಕೊಡಿ.

ಬೆಳ್ಳೇಕರೆಯಲ್ಲಿ ಎದ್ದು ನಿಂತಿರುವ ಪ್ರಕೃತಿ ರಂಗಮಂಚವೂ ಸೇರಿದಂತೆ ಆ ಊರಿನ ಸಾಂಸ್ಕೃತಿಕ ವೈಭವ ನೋಡಲು ಹೋಗುವವರಿಗೆ ಅಲ್ಲಿ ಸ್ವಾಗತ ಇದ್ದೇ ಇರುತ್ತದೆ. ಪ್ರಸಾದ್ ಜತೆ ಮಾತನಾಡಲು ಬಯಸುವವರು ೯೪೪೮೮ ೨೫೭೦೧ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು.

ಸದ್ಯಕ್ಕೆ ಪ್ರಸಾದ್ ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಹೌದು. ಕಸಾಪಗೆ ಅಧ್ಯಕ್ಷರಾದಾಗ ನಾನು ಅವರಿಗೆ ಬರೆದ ಪತ್ರ ಇಲ್ಲಿದೆ.

****

ಆತ್ಮೀಯರಾದ ಶ್ರೀ ರಕ್ಷಿದಿ ಪ್ರಸಾದ್‌ರವರಿಗೆ,

ಅಭಿನಂದನೆಗಳು ಹಾಗು ಕೃತಜ್ಞತೆಗಳು.

ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಸಕಲೇಶಪುರದಲ್ಲಿ ಸಾಹಿತ್ಯದ ಹೊಸ ಅಲೆ ಎಬ್ಬಿಸಲು ಹೊರಟಿದ್ದೀರಿ. ಬೆಳ್ಳೆಕೆರೆ ನಾಟಕ ಸಂಘದ ಮೂಲಕ ಇಡೀ ಜಗತ್ತಿನ ತಲ್ಲಣಗಳಿಗೆ ಮುಖಾಮುಖಿಯಾಗಿ, ಹಳ್ಳಿಹುಡುಗರ ಅಭಿವ್ಯಕ್ತಿಗಳಿಗೆ ದನಿಯಾದವರು ನೀವು. ಒಂದು ಪುಟ್ಟ ಹಳ್ಳಿಯನ್ನು ಅಲ್ಲಿಯ ಎಲ್ಲ ಸಂವೇದನೆಗಳು ಹಾಗು ಜೀವದ್ರವ್ಯದ ಮೂಲಕವೇ ಹೊರಜಗತ್ತಿಗೆ ತೆರೆದು ಯಾರೂ ತುಳಿಯದ ಮಾರ್ಗವನ್ನು ಹುಟ್ಟುಹಾಕಿದವರು ನೀವು. ಈ ದೃಷ್ಟಿಯಲ್ಲಿ ಹೇಳುವುದಾದರೆ ಹೆಗ್ಗೋಡು ಮತ್ತು ಬೆಳ್ಳೇಕರೆ ಬೇರೆ ಬೇರೆಯಲ್ಲ. ನೀವು ಹಾಗು ಸುಬ್ಬಣ್ಣ ಬೇರೆಯಲ್ಲ.

ಹಾಗೆ ನೋಡಿದರೆ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರ ಹುದ್ದೆ ನಿಮಗೆ ನಿಮಿತ್ತ ಮಾತ್ರ. ಅದರ ಮೂಲಕ ತಾಲ್ಲೂಕಿನಲ್ಲಿ ಏನನ್ನೋ ಮಾಡಲು ಹೊರಟಿದ್ದೀರಿ ಎಂಬುದು ನನ್ನ ಸಂಭ್ರಮದ ಗುಮಾನಿ! ಬೆಳ್ಳೆಕೆರೆಯನ್ನು ಸಾಂಸ್ಕೃತಿಕ ಜಗತ್ತಿನ ಭೂಪಟದಲ್ಲಿ ತಂದು ನಿಲ್ಲಿಸಿದವರು ನೀವು. ಈಗ ಇಡೀ ಸಕಲೇಶಪುರವನ್ನು ಎಲ್ಲಿಗೆ ಕರೆದೊಯ್ಯುವಿರೋ ಎಂಬ ಸಂತಸದ ಪ್ರಶ್ನೆಯೂ ನನ್ನದು.

ಸಕಲೇಶಪುರದಿಂದ ಒಂದು ಸಣ್ಣ ಕಲರವ ಕೇಳಿದರೂ ಅಲ್ಲಿಂದ ಇನ್ನೂರ ಇಪ್ಪತ್ತು ಕಿ.ಮೀ. ದೂರದಲ್ಲಿ ಕುಳಿತ ನನಗೆ, ನನ್ನಂಥವರಿಗೆ ರೋಮಾಂಚನವಾಗುತ್ತದೆ. ಕರಳು ಬಳ್ಳಿಯ ಸಂಬಂಧ ಎಂದರೆ ಇದೇ ಇರಬೇಕು. ಮುಗಿಯದ ವಾಂಚ್ಯೆ, ತೀರದ ದಾಹ, ಉಳಿದೇ ಉಳಿದ ಅತೃಪ್ತ ಕನಸುಗಳು.

ನಿಮ್ಮ ನೇತೃತ್ವದ ಸಾಹಿತ್ಯ ಪರಿಷತ್ತು ಕಾಫಿಯ ನಾಡಿನಿಂದ ಎಂಬ ಪುಟ್ಟ ಖಾಸಗಿ ಪತ್ರಿಕೆ ತಂದಿರುವುದು ವಿಶೇಷವಾಗಿ ನನಗೆ ಖುಷಿ ತಂದಿದೆ. ಹಿಂದೆ ನಾವು, ಸಕಲೇಶಪುರದಲ್ಲಿ ಕ್ರಿಯಾಶೀಲರಾಗಿದ್ದ ಗೆಳೆಯರೆಲ್ಲ ಸೇರಿ ತಂದಿದ್ದ ಕೈಬರಹದ ಪತ್ರಿಕೆ (ನಂತರ ಅದು ಡಿಟಿಪಿ ಪತ್ರಿಕೆಯಾಗಿ ರೂಪಾಂತರವಾಯಿತು) `ಸಂವಹನವನ್ನು ನೆನಪಿಸಿಕೊಂಡಿರುವುದು ಸಂತೋಷವನ್ನು ಇಮ್ಮಡಿಗೊಳಿಸಿತು. ಸಂವಹನ ವೇದಿಕೆ ಒಂದು ನೆನಪಾಗಿ ಉಳಿಯಿತಲ್ಲ ಎಂಬ ಸಂಕಟದ ಜತೆಯೇ ವೇದಿಕೆಯ ದಿನಗಳ ಹಳೆಯ ನೆನಪುಗಳೆಲ್ಲ ಸಾಲುಸಾಲಾಗಿ ಬಂದುನಿಂತು ಸಂತಸವಾಯಿತು. ಸಂವಹನವನ್ನು ನೆನಪಿಸಿಕೊಂಡು ಬರೆದ ಗೆಳೆಯ ಸ.ಸು.ವಿಶ್ವನಾಥ್‌ಗೂ, ನಿಮಗೂ ಮತ್ತೊಮ್ಮೆ ಧನ್ಯವಾದಗಳು.

ನಿಮ್ಮ ಜತೆ ದೂರವಾಣಿಯಲ್ಲಿ ಮಾತನಾಡಿದಾಗ ಹೇಳಿದಂತೆ `ಕಾಫಿಯ ನಾಡಿನಿಂದ ಪತ್ರಿಕೆ ಹಾಗು ನಿಮ್ಮ ನೇತೃತ್ವದ ಕನ್ನಡ ಸಾಹಿತ್ಯ ಪರಿಷತ್ ಸಕಲೇಶಪುರವನ್ನು ಕಾಡುತ್ತಿರುವ, ತಿಂದು ತೇಗುತ್ತಿರುವ ಎಲ್ಲ ಸಮಸ್ಯೆಗಳಿಗೆ ಎದುರು ನಿಲ್ಲಬೇಕಾಗಿದೆ. ತಾಲ್ಲೂಕು ಎದುರಿಸುತ್ತಿರುವ ಎಲ್ಲ ಸವಾಲುಗಳಿಗೆ ಉತ್ತರ ಹುಡುಕುವ ಯತ್ನ ನಡೆಸಬೇಕಾಗಿದೆ. ಸಾಂಸ್ಕೃತಿಕ ಪರಿಸರ ಜಡವಾಗಿದ್ದಾಗ ಸಮಾಜವೂ ಜಡವಾಗಿರುತ್ತದೆ. ಈ ಜಡತ್ವವನ್ನು ಕೊಡವಿಕೊಂಡು ಎದ್ದೇಳಲು ನಿಮ್ಮಂಥವರ ಪ್ರೇರಣೆ, ಮಾರ್ಗದರ್ಶನ ಅತ್ಯಗತ್ಯ. ಅದು ಈಗ ಸಾಧ್ಯವಾಗಿರುವುದು ನೆಮ್ಮದಿಯ ವಿಷಯ.

ಕಸಾಪ ಹೆಚ್ಚು ಹೆಚ್ಚು ತಲುಪಬೇಕಾಗಿರುವುದು ಶಾಲೆ, ಕಾಲೇಜುಗಳನ್ನು. ಆಧುನಿಕ ಜಗತ್ತು ಹೇರಿರುವ ಲೋಭಕೇಂದ್ರಿತ ಶಿಕ್ಷಣ ವ್ಯವಸ್ಥೆ ಹೊಸಹುಡುಗರಲ್ಲಿ ಚೈತನ್ಯ ಮೂಡಿಸುವ ಬದಲು ಧನದಾಹವನ್ನು ಮೂಡಿಸುತ್ತಿದೆ. ಕೇವಲ ಉದ್ಯೋಗಕ್ಕಾಗಿ, ಆರ್ಥಿಕ ವ್ಯವಸ್ಥೆಯ ಜಾಣ್ಮೆಗಾಗಿ ಕೊಡುವ ಶಿಕ್ಷಣ ಅದು ಶಿಕ್ಷಣವೇ ಅಲ್ಲ. ಶಿಕ್ಷಣ ಮಾನವೀಯವಾಗಿ ಬದುಕುವುದನ್ನು ಕಲಿಸಬೇಕು. ಕಸಾಪ ನಮ್ಮ ಶಾಲೆಗಳಲ್ಲಿ ಓದುವ ಮಕ್ಕಳಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸುವ ಕೆಲಸ ಮಾಡಲಿ ಎಂಬುದು ನನ್ನ ಆಸೆ.

`ಕಸಾಪ ಹಾಗು `ಕಾಫಿಯ ನಾಡಿನಲಿ ಎರಡೂ ಬೆಳೆಯಲಿ, ಕಾಫಿಯ ನಾಡು ಹಿಂದೆಂದಿಗಿಂತಲೂ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಲಿ, ಮಾನವೀಯತೆಯ ಜೀವಸೆಲೆ ಎಂದೂ ಬತ್ತದಿರಲಿ ಎಂದು ಎಲ್ಲ `ಅನಿವಾಸಿ ಸಕಲೇಶಪುರಿಗರ ಪರವಾಗಿ ಹಾರೈಸುತ್ತೇನೆ.

ಎಲ್ಲ ಗೆಳೆಯರಿಗೂ, ಹಿರಿಯರಿಗೂ ನನ್ನ ನೆನಕೆಗಳು.

ಪ್ರೀತಿಯಿಂದ
ದಿನೂ ಸ.ಚಂ. (ದಿನೇಶ್ ಕುಮಾರ್ ಎಸ್.ಸಿ.)

Wednesday, July 15, 2009

ಮಳೆ ಎಂದರೆ...

ಮಳೆ ಎಂದರೆ...
ಏನೋ ಪಿಸುಗುಡಲು ಬಂದಂತೆ ಮೋಡಗಳೊಡಲು
ಏನೋ ಗುನುಗುಡಲು ಬಂದಂತೆ ಗಾಳಿಯ ಕಡಲು
ಅಮ್ಮನ ಕಸೂತಿಯ ಸ್ವೆಟರು
ಕಾಡಿ ಬೇಡಿದ ಮೇಲೆ ಅಪ್ಪ ಕೊಡಿಸಿದ ಬಣ್ಣದ ಛತ್ರಿ
ಮಂಡಿಯವರೆಗಿನ ಕಡುಗಪ್ಪು ಬೂಟು
ತಲೆಕಾಲಿನವರೆಗೆ ಹೊದ್ದ ರೇನ್‌ಕೋಟು
ಗೊಪ್ಪೆ, ಗೊರಗ;
ಮಳೆಗನ್ನೆಯರು ತೊಟ್ಟ ಪ್ಯಾಶ್ಲಿಕ್ಕಿನ ಹೊದಿಕೆ


(ಮಳೆಯಲ್ಲಿ ನೆನೆದು ತೊಪ್ಪೆಯಾಗಿರುವ ಸಕಲೇಶಪುರದ ಚಿತ್ರವಿದು. ಹೇಮಾವತಿ ಇಡೀ ಊರನ್ನೇ ಬಳಸಿ ತಬ್ಬಿ ಕೇಕೆ ಹೊಡೆಯುತ್ತಿದ್ದಾಳೆ.)

ಮಳೆ ಎಂದರೆ,
ಕಪ್ಪೆಗಳ ವಟವಟ
ಹಾವುರಾಣಿಯರ ಸರಸರ
ತಾತ ಆರಿದ್ದನ್ನೆ ಉರಿಸಿ ಸೇದುವ ನಝರ್ ಬೀಡಿ
ಸುಡುಸುಡು ಬೆಲ್ಲದ ಕಾಫಿ
ಅಮ್ಮ ಕೆಂಡದಲ್ಲಿ ಸುಡುವ ಗೇರು, ಹಲಸಿನಗಾಳು
ಗದ್ದೆಯಲ್ಲಿ ಸಿಕ್ಕಿಬೀಳುವ ಏಡಿ
ಹೊಳೆಯಲ್ಲಿ ಹರಿದುಬರುವ ಮರಳಿ ಮೀನು

ಮಳೆ ಎಂದರೆ
ಹಸಿಮಣ್ಣಿನ ಘಮದೊಂದಿಗೆ ಅರಳುವ ನೆನಪು
ನೀರಮನೆಯಲ್ಲಿ ಕಾದು ಕುಳಿತ ಪುಳಕದ ಬಿಸಿನೀರು
ಒಲೆಯ ಮುಂದೆ ಬಿಸಿಕಾಯಿಸಿಕೊಳ್ಳಲು ಚಾಚಿ ಸುಟ್ಟುಕೊಂಡ ಬೆರಳು
ಕೆಂಡ ಸುರಿದು, ಬಿದರಿನ ಬುಟ್ಟಿ ಮುಚ್ಚಿ
ಅದರ ಮೇಲೆ ಯೂನಿಫಾರ್ಮ್ ಹರಡಿ ಒಣಗಿಸುವಾಗ
ಎದ್ದು ಬರುವ ಹಸಿಹಸಿ ವಾಸನೆ

ಮಳೆ ಎಂದರೆ
ಪ್ರೇಮಿಯ ಎದೆನಡುಕ
ವಿರಹಿಯ ಒಡಲ ಉರಿ
ಮೊನಾಲಿಸಾಳ ನಗೆ
ಜಗಜಿತ್‌ನ ಗಜಲ್ಲು
ರಫಿಯ ಕವ್ವಾಲಿ
ಮುಖೇಶನ ದರ್ದ್‌ಭರೆ ಹಾಡು
ಎಲಿಯಟ್ಟನ ಕಾವ್ಯ
ಶೇಕ್ಸ್‌ಪಿಯರನ ನಾಟಕ

ಮಳೆ ಎಂದರೆ
ನನ್ನ ಚಿನ್ಮಯ ಸಂಗಾತಿಯ ಮುಂಗೈ
ಅವಳ ತಲೆಗೆ ಮೆತ್ತಿದ ಸೇವಂತಿಗೆಯ ಸುವಾಸನೆ
ಅವಳ ಶ್ವಾಸ, ಮೈಗಂಧ
ಗಮ್ಮೆನ್ನುವ ಮಡಿಲು

ಮಳೆ ಎಂದರೆ
ತುಡಿತ, ಜೀವ ಮಿಡಿತ
ರಾಗಸೆಳೆತ
ಮೋಹ, ಪ್ರೇಮ-ಕಾಮಗಳ ದಾಹ
ದೇಹಾತ್ಮಗಳ ಬಿಸಿಬಿಸಿ ಮಿಲನ
ನಿಟ್ಟುಸಿರ ವಿರಹ

ಮಳೆ ಎಂದರೆ
ಸುಖ
ಅದಮ್ಯ ಚೇತರಿಕೆಯ ಧನ್ವಂತರಿ

ಮಳೆ ಎಂದರೆ
ದುಃಖ
ಒಡಲ ಮೀಟುವ ವೇದನೆ
ಮಳೆ ಎಂದರೆ
ನೂರು ಮಕ್ಕಳ ಹೆತ್ತ ಗಾಂಧಾರಿಯ ಸ್ವಗತ
ಆಕಾಶದ ರವಿಕೆ
ಭುವಿಯು ಧರಿಸಿದ ನಿಲುವಂಗಿ
ಹಸಿರ ಜಾಥಾ


ಮಳೆ ಎಂದರೆ
ತ್ಯಾಗ
ಮಮಕಾರ
ಪ್ರಾಯ
ವಿಸ್ಮಯ
ಶೃಂಗಾರ

ಮಳೆ ಎಂದರೆ
ಭೂತ, ವರ್ತಮಾನ, ಭವಿಷ್ಯ

ಮಳೆ ಎಂದರೆ
ಅಧ್ಯಾತ್ಮ, ಜಗತ್ತು, ಬ್ರಹ್ಮಾಂಡ

ಮಳೆ ಎಂದರೆ ಮಳೆ
ನಾನು ಪ್ರೀತಿಸುವ ಮಳೆ
ನನ್ನ ದೇಹಾತ್ಮಗಳ ಹಣತೆಯಾದ ಮಳೆ
ನನ್ನ ಬದುಕಿನ ಮಳೆ
ನನ್ನ ಸಾವಿನ ಮಳೆ

ಮಳೆ ಎಂದರೆ
ನನ್ನ ಸಂಗಾತಿಯ ಬೆಚ್ಚನೆ ಮಡಿಲು.

(ನಮ್ಮೂರಲ್ಲಿ ಭರ್ಜರಿ ಮಳೆ. ಆಕಾಶ ಭೂಮಿ ಒಂದಾದ ಹಾಗೆ ಮಳೆ ಸುರಿಯುತ್ತಿದೆ ಎಂದು ಗೆಳೆಯರು ಹೇಳುತ್ತಿದ್ದಾರೆ. ಮಳೆ ಕುರಿತು ಹಿಂದೆ ಒಮ್ಮೆ ಬರೆದಿದ್ದ ಹರುಕು ಮುರುಕು ಬರೆಹ ಇಲ್ಲಿದೆ. ಇದು ಕವಿತೆಯಲ್ಲ; ಹೀಗಾಗಿ ತುಂಬಾ ವಾಚ್ಯವಾಯಿತು ಎಂದು ಗೆಳೆಯರು ಆರೋಪಿಸುವಂತಿಲ್ಲ.
ಮತ್ತೊಂದು ವಿಷಯ: ದೇಸೀಮಾತು ಬ್ಲಾಗ್‌ಗೆ ಇವತ್ತಿಗೆ (ಜು.೧೫) ಸರಿಯಾಗಿ ಒಂದು ವರ್ಷ. ಹಲವು ತಿಂಗಳ ಸೋಮಾರಿತನ, ಜಡತ್ವವನ್ನು ಕೊಡವಿಕೊಂಡು ಇನ್ನು ರೆಗ್ಯುಲರ್ ಆಗಿ ಬರೆಯುತ್ತೇನೆ ಎಂದು ನಿಮ್ಮೆಲ್ಲರನ್ನು ಬೆದರಿಸುತ್ತ, ನಮ್ಮೂರಿನ ಮಳೆಯಲ್ಲಿ ಮಳೆಯಾಗುವ ಕನಸಿನಲ್ಲಿ ಜಾರುತ್ತಿದ್ದೇನೆ.)

Monday, July 13, 2009

ಹಂದಿ, ಹಿಂಸೆ ಮತ್ತು ಮುಸ್ಲಿಮರು

ಗೆಳೆಯ ಮಲ್ನಾಡ್ ಮೆಹಬೂಬ್ ಬರೆದಿರುವ ಲೇಖನ ಇಲ್ಲಿದೆ. ನನ್ನನ್ನು ತೀವ್ರವಾಗಿ ಕಾಡಿದ್ದು`ಇವರ ಮುಂದೆ ಪ್ರಾಮಾಣಿಕವಾಗಿ ನಮ್ಮ ತಲೆ ಕಡಿದು ಅವರ ಪಾದದ ಮೇಲಿಟ್ಟರೂ, ಇದು ಎಳನೀರು ಚಿಪ್ಪು' ಎಂದು ವಾದಿಸುವವರ ಮುಂದೆ ಜಾಗೃತರಾಗಿ ಬದುಕುವುದನ್ನು ಅರ್ಥಮಾಡಿಕೊಳ್ಳಬೇಕು. ಎಂಬ ಸಾಲುಗಳು.

ಇಂಥ ಸಂದರ್ಭಗಳಲ್ಲಿ ಹಿಂದೆಮುಂದೆ ನೋಡದೆ ಬೀದಿಗಳಿಯುವ
ಮುಸ್ಲಿಂ ಗೆಳೆಯರಲ್ಲಿ ಈ ಲೇಖನ ಒಂದಷ್ಟು ವಿವೇಚನೆಯನ್ನೂ, ಕೋಮುವಾದಿ ಕೊಳಕರಲ್ಲಿ ನಾಚಿಕೆಯನ್ನೂ ಮೂಡಿಸಲಿ ಎಂಬುದು ನನ್ನ ಆಶಯ.


ಥಮಸ್......

ಪ್ರಖ್ಯಾತ ಕಾದಂಬರಿ ಥಮಸ್ ಜಗತ್ತಿಗೆ, ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮಾಜಕ್ಕೆ ಗಮನಾರ್ಹವಾದ ಸಂದೇಶವನ್ನು ನೀಡಿದೆ. ಹಂದಿಯ ದೇಹ ನಿಮ್ಮ ಮಸೀದಿಗೆ ಯಾರಾದರೂ ಹಾಕಿದರೆ ಇದು ಕೋಮು ಹಿಂಸೆಗೆ ಬಳಸಲಾಗಿರುವ ತಂತ್ರ ಎಂಬುದನ್ನು ಅರ್ಥಮಾಡಿಕೊಳ್ಳಿ. ಒಂದು ಪ್ರಾಣಿಯ ದೇಹದಿಂದ ಯಾವುದೆ ಧರ್ಮವು ಅಧರ್ಮವಾಗುವುದಿಲ್ಲ. ಧರ್ಮದ ಹೆಸರಿನಲ್ಲಿ ಜನರು ಸಮಾಜದಲ್ಲಿ ನೀಚ ಕೆಲಸ ಮಾಡಿದರೆ ಆಗ ಮಾತ್ರ ಧರ್ಮ ಮಲಿನವಾಗುತ್ತದೆ ಎಂದು ಅದು ವಿವರಿಸುತ್ತದೆ.

ಇಸ್ಲಾಂ ಏನು ಹೇಳುತ್ತೆ?

ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರರವರ ಅನುಮತಿ ಪಡೆದು ಅನ್ಯ ಧರ್ಮದ ವ್ಯಕ್ತಿಯೊಬ್ಬ, ರಾತ್ರಿ ಮಸೀದಿಯಲ್ಲಿ ತಂಗುತ್ತಾನೆ. ಬೆಳಿಗ್ಗೆ ಆತ ಮಸೀದಿಯಲ್ಲಿ ಹೇಸಿಗೆ ಮಾಡಿ ಹೋಗಿರುತ್ತಾನೆ. ಇದನ್ನು ಕಂಡ ಪ್ರವಾದಿಗಳು ತಮ್ಮ ಕೈಗಳಿಂದ ಹೇಸಿಗೆಯನ್ನು ಸ್ವಚ್ಛ ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ಹೀಗೆ ಮಾಡಬೇಕು ಎಂದು ಪ್ರವಾದಿಯವರು ಸೂಚಿಸಿರುವ ಧರ್ಮಬದ್ಧ ಪರಿಹಾರ ಇದೆಂದು ಧರ್ಮಕ್ಕೆ ಸಂಬಂಧಿಸಿದ ಗ್ರಂಥಗಳು ಹೇಳುತ್ತವೆ.
ಸ್ವಘೋಷಿತ ಧರ್ಮಪಾಲಕರು ಮಾಡುತ್ತಿರುವುದೇನು?

ಕೋಮು ಹಿಂಸಾಚಾರ ನಡಸಲು ಹಿಂದಿನಿಂದಲೂ ಬಳಸುತ್ತಿರುವ ಹಳಸಲು, ಸವಕಲು ತಂತ್ರಗಳಲ್ಲಿ ಒಂದು, ಹಂದಿ ದೇಹವನ್ನು ಮುಸ್ಲಿಂ ಪ್ರಾರ್ಥನಾ ಸ್ಥಳಗಳಲ್ಲಿ ಹಾಕುವುದು! ಇದನ್ನು ಕಂಡ ಮುಸ್ಲಿಮರು ರೊಚ್ಚಿಗೆದ್ದು ಬೀದಿಗಿಳಿದರೆ ಕೋಮುವಾದಿಗಳ ಯೋಜನೆಯನ್ನು ಸಫಲಗೊಳಿಸುವುದು. ಪ್ರಾಣ, ಆಸ್ತಿ-ಪಾಸ್ತಿ ಹಾಗು ನೆಮ್ಮದಿ ತಂತಾನೆ ಹಾಳಾಗುವುದು.

ದನ ತಿನ್ನೋರಿಗೆ ದನದ ಬುದ್ದಿ!

ವೇದ ಸುಳ್ಳಾದರು, ಗಾದೆ ಸುಳ್ಳಾಗದು ಎಂಬಂತೆ ಹಂದಿ ದೇಹ ಮಸೀದಿಗೆ ಹಾಕಿದ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಅನೇಕರು ದನದ ಬುದ್ಧಿ ತೋರಿಸುತ್ತಿರುವುದು ವಿಷಾಧಕರ. ಹಾಲು, ಮೊಸರು, ಬೆಣ್ಣೆಯನ್ನು ಮಾತ್ರ ತಿನ್ನುವರಿಗಿಂತ, ದನದ ಮಾಂಸ ತಿನ್ನುವರೆ ಹೆಚ್ಚು ಸಾಧನೆಗಳನ್ನು ಮಾಡಿರುವುದಕ್ಕೆ ಜಗತ್ತಿನ ಬಹುತೇಕ ವಿಜ್ಞಾನಿಗಳು, ಉದ್ಯಮಿಗಳು, ಚಿಂತಕರು ಉದಾಹರಣೆಯಾಗಿ ನಿಂತಿದ್ದಾರೆ. ಆದರೆ ಪ್ರಾರ್ಥನಾ ಸ್ಥಳಕ್ಕೆ ಮಲಿನ ಪ್ರಾಣಿಯನ್ನು ಕೋಮುವಾದಿಗಳು ದುರುದ್ದೇಶದಿಂದ ಹಾಕಿದಾಗ ಕೆಲವು ಮುಸ್ಲಿಂಮರು ದನಗಳಂತೆ ತಮ್ಮ ಬುದ್ಧಿಯನ್ನು ಶಾಂತಿ ವಿರೋಧಿಗಳಿಗೆ ಒಪ್ಪಿಸಿ ಅವರ ಷಡ್ಯಂತ್ರಕ್ಕೆ ತಕ್ಕಂತೆ ವರ್ತಿಸುವುದರ ಮೂಲಕ ದನ ತಿನ್ನುವವರಿಗೆ ದನದ ಬುದ್ಧಿ ಯೆಂಬ ಗಾದೆ ಮಾತನ್ನು ಎತ್ತಿ ಹಿಡಿಯುತ್ತಿದ್ದಾರೆ.

ಅರ್ಥವಾಗದ್ದು........

ಸಮಾಜದ ಶಾಂತಿಯನ್ನು ಕದಡುವ ಉದ್ದೇಶದಿಂದಲೇ ಮುಸ್ಲಿಮರನ್ನು ಪ್ರಚೋದಿಸಲು, ಕೋಮುಗಲಭೆ ಸೃಷ್ಟಿಸಿ, ಶಾಂತಿ ಪ್ರಿಯರ ಪ್ರಾಣ, ಆಸ್ತಿ, ಪಾಸ್ತಿ ನಷ್ಟ ಮಾಡಲು ಕಾರ್ಯತಂತ್ರ ರೂಪಿಸಿ ಪ್ರಾರ್ಥನಾ ಸ್ಥಳಗಳಲ್ಲಿ ಹಂದಿ ದೇಹ ಹಾಕಲಾಗುತ್ತದೆ ಎಂಬ ಈ ಸತ್ಯ ಇಡಿ ಸಮಾಜಕ್ಕೆ ತಿಳಿದಿದ್ದರೂ, ಇಂಥ ಸಂದರ್ಭದಲ್ಲಿ ಕಿಡಿಗೇಡಿಗಳ ಕಾರ್ಯ ತಂತ್ರಕ್ಕೆ ತಕ್ಕಂತೆ, ಮುಸ್ಲಿಂ ಜನಾಂಗದ ಕೆಲವರು ವರ್ತಿಸುವುದು ಏಕೆ? ಎಂಬುದು ಅರ್ಥವಾಗುವುದಿಲ್ಲ.

ಗಮನಿಸಬೇಕಾದ ಅಂಶ......

ದೇವನನ್ನು ನಂಬುವ, ಮಹಮ್ಮದ್ ಪೈಗಂಬರ್‌ರವರ ಜೀವನ ಕ್ರಮವನ್ನು ತಮ್ಮ ಜೀವನದ ದಿನನಿತ್ಯದ ಬದುಕಿನಲ್ಲಿ ಆಳವಡಿಸಿಕೊಂಡು ಬದುಕಿ, ಮುಕ್ತಿಕಾಣಲು ಬಯಸುವ ಮುಸ್ಲಿಮರು ಮಸೀದಿಗೆ ಮಲಿನ ಪ್ರಾಣಿಯ ದೇಹ ಹಾಕಿದಾಗ ಪ್ರವಾದಿಯ ನಡೆ ನುಡಿಯನ್ನು ಏಕೆ ಪಾಲಿಸುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದ್ದು ಇದು ತರ್ಕಕ್ಕೆ ಸಿಗುವಂಥದ್ದಲ್ಲ.

ಅರ್ಥಮಾಡಿಕೊಳ್ಳಬೇಕಾಗಿರುವುದು.......

ಇಲ್ಲಿ ಓಟಿಗಾಗಿ ದೇವರು ಧರ್ಮವನ್ನು ಬೀದಿಗೆ ತಂದು ಬೆತ್ತಲೆಗೊಳಿಸುವ ಖಾದಿಧಾರಿಗಳಿದ್ದಾರೆ. ಖಾದಿಯೂಳಗೆ ಬಚ್ಚಿಟ್ಟುಕೊಂಡಿರುವ ಕೋಮುವಾದಿಗಳಿದ್ದಾರೆ. ಒಂದು ಕೋಮಿನ ಕರಿ ಕೋಟು ಧರಿಸಿರುವ ಕಾನೂನು ಪಾಲಕರಿದ್ದಾರೆ. ಕೋಮುವಾದಿ ವ್ಯವಸ್ಥೆಯನ್ನು ಪ್ರತಿನಿಧಿಸುವ ಆಡಳಿತ ರಾಜ್ಯದಲ್ಲಿ ಜಾರಿಯಲ್ಲಿದೆ. ಇವರ ಮುಂದೆ ಪ್ರಾಮಾಣಿಕವಾಗಿ ನಮ್ಮ ತಲೆ ಕಡಿದು ಅವರ ಪಾದದ ಮೇಲಿಟ್ಟರೂ, ಇದು ಎಳನೀರು ಚಿಪ್ಪು ಎಂದು ವಾದಿಸುವವರ ಮುಂದೆ ಜಾಗೃತರಾಗಿ ಬದುಕುವುದನ್ನು ಅರ್ಥಮಾಡಿಕೊಳ್ಳಬೇಕು.

ಏನು ಮಾಡಬೇಕು?

ಮಲೀನ ಪ್ರಾಣಿಯ ದೇಹವನ್ನು ಮಸೀದಿಗೆ ಹಾಕಿದಾಗ ಪೋಲಿಸರಿಗೆ ವಿಷಯ ತಿಳಿಸಬೇಕು. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳ ಪರಿಶೀಲಿಸುವವರೆಗೆ ಯಾರು ಹತ್ತಿರಕ್ಕೆ ಹೋಗಬಾರದು. ಪೋಲಿಸರ ಮಾರ್ಗದರ್ಶನದಂತೆ ನಡೆದುಕೊಂಡು ಮಸೀದಿ ಸ್ವಚ್ಚಗೊಳಿಸುವುದು. ಮಾದ್ಯಮದವರಿಗೆ ವಿಷಯ ತಿಳಿಸುವುದು. ಇಂಥಹ ವಿಷಯಗಳಿಂದ ಏನೂ ಸಾಧಿಸಲು ಸಾದ್ಯವಾಗುವುದಿಲ್ಲ ಎಂಬುದನ್ನು ತಮ್ಮ ಮಾನಸಿಕ ಸ್ಥೈರ್ಯ ಹಾಗು ಧಾರ್ಮಿಕ ವಿಚಾರಧಾರೆಗಳ ಮೂಲಕ ಸಾಬೀತುಪಡಿಸುವುದು. ಪೊಲೀಸರ ಆಶ್ರಯದಲ್ಲಿ ಸೌಹಾರ್ದ ಸಭೆಯನ್ನು ವಿಶಾಲವಾದ ಸಭಾಂಗಣದಲ್ಲಿ ನಡೆಸುವುದು. ಘಟನೆಯ ಬಗ್ಗೆ ಉರಿನ ಎಲ್ಲ ವರ್ಗದ ಜನರು ಸೇರಿ ಖಂಡಿಸುವಂಥ ವಿಶ್ವಾಸಾರ್ಹ ವಾತಾವರಣ ನಿರ್ಮಿಸುವುದು. ಪ್ರ್ರಾಮಾಣಿಕವಾದ ಚರ್ಚೆಗಳ ಮೂಲಕ ಎಲ್ಲ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದು.

ಈ ಎಲ್ಲ ಕ್ರಿಯೆಗಳ ಮೂಲಕ ದುಷ್ಟಶಕ್ತಿಗಳ ಷಡ್ಯಂತ್ರ ವಿಫಲಗೊಳಿಸುವುದು ಹಾಗು ಜಾತ್ಯತೀತ ಶಕ್ತಿಗಳ ಧ್ವನಿಯನ್ನು ಗಟ್ಟಿಗೊಳಿಸುವುದು. ಬದುಕಿಗೆ ಶಾಂತಿ ಸೌಹಾರ್ದತೆ ಎಷ್ಟು ಮುಖ್ಯ ಎಂಬುದನ್ನು ಸಮಾಜಕ್ಕೆ ಸಾರುವುದು. ಕಿಡಿಗೇಡಿಗಳು ಯಾವುದೆ ಧರ್ಮದವರಾಗಲಿ, ಅವರ ಕುತಂತ್ರಕ್ಕೆ ಬಲಿಯಾಗದಂತಹ ವಾತಾವರಣ ನಿರ್ಮಿಸುವುದು ಅತಿ ಜರೂರಿನ ಕರ್ತವ್ಯಗಳಾಗಬೇಕು.

ಧಾರ್ಮಿಕ ಮುಖಂಡರು ಚರ್ಚೆ, ಸಂವಾದ ನಡೆಸಿ ಅರಿವು ಮೂಡಿಸಲು ಯತ್ನಿಸಬೇಕು. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕ ಹಾದಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು. ಯುವಕರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಹಿಂಸೆಗೆ ಯಾರು ಬಲಿಯಾಗದಂತೆ ಎಚ್ಚರವಹಿಸಬೇಕು .
ಹಂದಿ ಮುಸ್ಲಿಂರಿಗೆ ಹರಮ್ (ದೇವ ನಿಷೇಧ) ಆಗಿದೆ. ಆಹಾರವಾಗಿ ಸೇವಿಸುವಂತಿಲ್ಲ. ಹರಮ್ ಹಂದಿಗೆ ಮಾತ್ರ ಸೀಮಿತವಾಗಿಲ್ಲ. ಬಡ್ಡಿ ವ್ಯವಹಾರ, ಅನೈತಿಕ ಸಂಬಂಧ, ವ್ಯಭಿಚಾರ, ಮದ್ಯ ಸೇವನೆ, ಕೊಲೆ, ಸುಲಿಗೆ ಇತ್ಯಾದಿಗಳು ಕೂಡ ಹರಮ್. ಹರಮ್‌ನಲ್ಲಿ ಹಂದಿಗೆ ಹೆಚ್ಚು ಮಾನ್ಯತೆ ನೀಡಿ ಇತರೆ ವಿಷಯಗಳಿಗೇನು ಕಡಿಮೆ ಆದ್ಯತೆ ನೀಡಿಲ್ಲ. ಅರ್ಥಾತ್ ಧರ್ಮದ ದೃಷ್ಟಿಯಲ್ಲಿ ಈ ಎಲ್ಲವೂ ಒಂದೇ.

ಶೋಷಿತರು, ದೌರ್ಜನ್ಯಕ್ಕೆ ಒಳಗಾದವರು ತಮ್ಮ ಹನಿ ಹನಿ ಕಣ್ಣೀರನ್ನು, ದುಃಖವನ್ನು, ಆಕ್ರೋಶವನ್ನು ಶೇಖರಿಸಿ ಸಾಗರದ ಸುನಾಮಿ ಅಲೆಯಾಗಿಸಿಕೊಳ್ಳಬೇಕು. ಹೆದರಿಕೆಯ ಎದೆ ಬಡಿತದ ಸದ್ದನ್ನು ಅದುಮಿ ಕೂಡಿಟ್ಟು, ಗುಡುಗಾಗಿಸಿ ಮುಂದಿನ ಚುನಾವಣೆಯಲ್ಲಿ ಬ್ಯಾಲೆಟ್ ಮೇಲೆ ಪ್ರಯೋಗಿಸಬೇಕು. ಈ ವ್ಯವಸ್ಥೆಯನ್ನು ಬದಲಾಯಿಸಿ ಪ್ರ್ರಾಮಾಣಿಕ ವ್ಯಕ್ತಿಗಳಿಂದ ಕೂಡಿದ ಜನತಂತ್ರ ವ್ಯವಸ್ಥೆ ಆಡಳಿತಕ್ಕೆ ಬರುವಂತೆ ಮಾಡಿದಾಗ ಮಾತ್ರ ನ್ಯಾಯ ಪಡೆಯಲು ಸಾಧ್ಯ ಬೀದಿಯಲ್ಲಿ ಕೂಗಾಡುವುದರಿಂದ, ಕಲ್ಲೆಸೆಯುವುದರಿಂದ, ಅಮಾಯಕರನ್ನು ಇರಿಯುವುದರಿಂದ ಏನೂ ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸಮಾಜವನ್ನು ಹಂದಿಯ ಸುತ್ತ ಗಿರಕಿ ಹೊಡೆಯಲು ಬಿಡಬಾರದು.

-ಮಲ್ನಾಡ್ ಮೆಹಬೂಬ್ ಸಕಲೇಶಪುರ

Thursday, May 21, 2009

ಇಲ್ಲೇ ಇದ್ದಾರೆ ಭಯೋತ್ಪಾದಕರು!

ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಹತ್ಯೆಯಾದ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಚಾನೆಲ್‌ಗೆ ಪತ್ರಕರ್ತ ಇಸ್ಮಾಯಿಲ್ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದರು. `ಆಯುಧ ಕೈಯಲ್ಲಿ ಬಂದ ಮೇಲೆ ಯಾರ ಕೈಗೆ ಸಿಕ್ಕರೂ ಅದು ಅಪಾಯಕಾರಿ. ಒಳ್ಳೆಯ ಕೊಲೆ, ಕೆಟ್ಟ ಕೊಲೆ ಎಂಬ ವಿಭಾಗಗಳಿರಲು ಸಾಧ್ಯವಿಲ್ಲ. ಎಲ್ಲ ಕೊಲೆ, ಹಿಂಸೆಯಲ್ಲೂ ಕೆಟ್ಟದ್ದೇ ಇರುತ್ತದೆ.

ಪ್ರಭಾಕರನ್ ಸಾಯಿಸಿದ್ದು ಅಥವಾ ಅವನ ನಿರ್ದೇಶನದಂತೆ ಸಾಯಿಸಲ್ಪಟ್ಟವರು ಸುಮಾರು ೭೦,೦೦೦ ಜನರು ಎಂಬ ಮಾಹಿತಿಗಳಿವೆ. ಈ ಪೈಕಿ ಅತಿಹೆಚ್ಚು ಮಂದಿ ಅಮಾಯಕ ನಾಗರಿಕರೇ ಆಗಿದ್ದರು. ತಮಿಳರ ಸ್ವಾತಂತ್ರ್ಯದ ಹೋರಾಟವನ್ನು ತಾನು ಕೈಗೆತ್ತಿಕೊಂಡಿರುವುದಾಗಿ ಅವನು ಹೇಳುತ್ತ ಬಂದರೂ, ಪ್ರಭಾಕರನ್‌ನಿಂದ ಅತಿಹೆಚ್ಚು ಅನ್ಯಾಯಕ್ಕೊಳಗಾದವರು, ಹಿಂಸೆಗೊಳಗಾದವರು, ಸತ್ತವರು ತಮಿಳರೇ ಎಂಬುದು ದೊಡ್ಡ ವ್ಯಂಗ್ಯ,

ಪ್ರಭಾಕರನ್ ಪ್ರಜಾಪ್ರಭುತ್ವವಾದಿ ಮಾರ್ಗವನ್ನು ತ್ಯಜಿಸಿದ್ದ; ಆಯುಧದ ಮೂಲಕವೇ ತನ್ನ ಕನಸಿನ ತಮಿಳು ರಾಷ್ಟ್ರ ಕಟ್ಟಲು ಬಯಸಿದ್ದ. ಅದು ಅವನ ಕರ್ಮ. ಆದರೆ ಪ್ರಜಾಪ್ರಭುತ್ವವಾದಿ ಮಾರ್ಗದಲ್ಲಿ ನಡೆಯುವವರ ವಿರುದ್ಧ ಇದ್ದ ಅವನ ಅಸಹನೆಯ ಮಟ್ಟವಾದರೂ ಎಂಥದ್ದು? ಶ್ರೀಲಂಕಾದ ರಾಜಕಾರಣದಲ್ಲಿ ತೊಡಗಲು ಬಯಸಿದ, ತಮಿಳರ ಹೋರಾಟವನ್ನು ಅಹಿಂಸಾತ್ಮಕವಾಗಿ ಮುನ್ನಡೆಸಿದ ಸಾಕಷ್ಟು ತಮಿಳು ನಾಯಕರನ್ನೇ ಆತ ಆಹುತಿ ತೆಗೆದುಕೊಂಡಿದ್ದ.

ಮೂಲತಃ ಶ್ರೀಲಂಕ ದೇಶವು ಹೋರಾಟದ ಮೂಲಕ ಸ್ವಾತಂತ್ರ್ಯ ಗಳಿಸಿಕೊಂಡಿದ್ದಲ್ಲ. ಬ್ರಿಟಿಷರು ಭಾರತವನ್ನು ಬಿಟ್ಟು ಹೋದ ನಂತರ ಶ್ರೀಲಂಕಾವನ್ನೂ ಬಿಟ್ಟು ಹೋದರು. ಆದರೆ ಶ್ರೀಲಂಕ ಆಯ್ದುಕೊಂಡ ಪ್ರಜಾಪ್ರಭುತ್ವ ಎಲ್ಲರನ್ನು ಒಳಗೊಳ್ಳುವಂಥ ಅಂಶಗಳನ್ನು ಹೊಂದಿರಲಿಲ್ಲ. ಅಲ್ಲಿನ ತಮಿಳರಿಗೆ ಹಕ್ಕುಗಳನ್ನು ನಿರಾಕರಿಸಲಾಯಿತು. ಬಹುಸಂಖ್ಯಾತ ಸಿಂಹಳೀಯರ ಆರ್ಭಟದಲ್ಲಿ ಅಲ್ಪಸಂಖ್ಯಾತ ತಮಿಳರು ಸಾಕಷ್ಟು ಶೋಷಣೆಗಳಿಗೆ ಒಳಗಾಗಬೇಕಾಯಿತು. ಇದರ ವಿರುದ್ಧ ಹುಟ್ಟಿಕೊಂಡ ಎಲ್‌ಟಿಟಿಇಗೆ ತಮಿಳು ಸಮುದಾಯದಲ್ಲಿ ಸಹಾನುಭೂತಿ ಇದ್ದದ್ದು ನಿಜ. ಆದರೆ ಪ್ರಭಾಕರನ್ ತುಳಿದ ಹಾದಿ ಈ ಸಹಾನುಭೂತಿಯನ್ನು ನಾಶಪಡಿಸುತ್ತ ಬಂತು.

ಪ್ರಭಾಕರನ್ ತನ್ನ ಅರ್ಹತೆಗೆ ತಕ್ಕನಾದ ಸಾವನ್ನೇ ತಂದುಕೊಂಡಿದ್ದಾನೆ. ಹಿಂಸೆಯ ಹಾದಿಯಲ್ಲಿ ಸಾಗುವವರ ಬದುಕು ಹೀಗೇ ಅಂತ್ಯವಾಗುತ್ತದೆ ಎಂಬುದು ಜಾಗತಿಕ ಸತ್ಯ. ಅದಕ್ಕಾಗಿ ಮರುಗುವುದು ಕೊರಗುವುದು ಅನಗತ್ಯ. ಇದನ್ನು ತಮಿಳರೂ ಅರ್ಥಮಾಡಿಕೊಂಡ ಹಾಗಿದೆ.

ಪ್ರಭಾಕರನ್ ಸತ್ತರೆ ಮರುಕ ಪಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಕೆಲವು ದಿನಗಳ ಹಿಂದಷ್ಟೆ ಎನ್‌ಡಿಟಿವಿ ಜತೆಯಲ್ಲಿ ಮಾತನಾಡುತ್ತ ಹೇಳಿದ್ದರು. ಆದರೆ ಪ್ರಭಾಕರನ್ ಸತ್ತ ನಂತರ ಕರುಣಾನಿಧಿ ಆ ಕುರಿತು ಏನನ್ನೂ ಹೇಳುತ್ತಿಲ್ಲ. ಅವರು ಲಂಕಾ ತಮಿಳರ ಕುರಿತಷ್ಟೇ ಮಾತನಾಡುತ್ತಿದ್ದಾರೆ. ಎಲ್‌ಟಿಟಿಇ ಸಂಘಟನೆಯ ಉಗ್ರ ಬೆಂಬಲಿಗ ವೈಕೋ ಇತ್ತೀಚಿಗೆ ಮಾತನಾಡುತ್ತ, ಒಂದೊಮ್ಮೆ ಪ್ರಭಾಕರನ್ ಸತ್ತರೆ ತಮಿಳುನಾಡು ಹೊತ್ತುರಿಯುತ್ತದೆ ಎಂದಿದ್ದರು. ತಮಿಳುನಾಡು ಸ್ಥಬ್ದವಾಗಿದೆ. ರಕ್ತಪಾತವಿರಲಿ, ಒಂದು ಹೆದ್ದಾರಿ ಬಂದ್ ಆದ ವರದಿಗಳೂ ಕಾಣಿಸುತ್ತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಎಲ್‌ಟಿಟಿಇ ಬೆಂಬಲಿಗ ಪಕ್ಷಗಳನ್ನು ತಮಿಳುನಾಡಿನ ಜನರು ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸಿದ್ದಾರೆ.

ತಮಿಳರು ಸ್ವಾಭಾವತಃ ಭಾವುಕರು. ಆದರೆ ಪ್ರಭಾಕರನ್ ಸಾವು ಅವರನ್ನು ಅಷ್ಟಾಗಿ ಕಾಡಿಲ್ಲದೇ ಇರುವುದಕ್ಕೂ ಕಾರಣಗಳಿವೆ. ಎಲ್‌ಟಿಟಿಇ ಮತ್ತು ಪ್ರಭಾಕರನ್ ಕುರಿತಾದ ಮೋಹವನ್ನು ಬಹಳಷ್ಟು ತಮಿಳರು ತೊರೆದು ಬಹಳ ಕಾಲವೇ ಆಗಿದೆ. ರಾಜೀವ್ ಗಾಂಧಿ ಕೊಲೆ ತಮಿಳರ ಪಾಲಿಗೆ ದೊಡ್ಡ ಆಘಾತ. ಭಾಷಾ ದುರಾಂಧರನ್ನು ಹೊರತುಪಡಿಸಿದರೆ, ಸಾಮಾನ್ಯ ತಮಿಳರಿಗೆ ದೇಶದ ಮಾಜಿ ಪ್ರಧಾನಿಯ ಕೊಲೆ ಅತ್ಯಂತ ಹೀನ ಕೃತ್ಯ. ಹೀಗಾಗಿ ಪ್ರಭಾಕರನ್ ಸತ್ತಾಗ ತಮಿಳುನಾಡು ಅಲುಗಾಡದಂತೆ ಸುಮ್ಮನಿದೆ.

ಈ ಚಿತ್ರವನ್ನೊಮ್ಮೆ ನೋಡಿ.
ತಮಿಳುನಾಡಿನ ತಮಿಳರೇ ಸುಮ್ಮನಿರುವಾಗ ಬೆಂಗಳೂರಿನಲ್ಲಿ ಸಮಾನ ಮನಸ್ಕರ ವೇದಿಕೆ ಎಂಬ ಹೆಸರಿನ ಹುಸಿ ಸಂಘಟನೆಯೊಂದನ್ನು ಮಂಗಳವಾರ ಪ್ರತಿಭಟನೆ ನಡೆಸಿದೆ. ಪ್ರತಿಭಟನಾಕಾರರ ಕೈಯಲ್ಲಿ ೭೦ ಸಾವಿರ ಜನರನ್ನು ಕೊಂದ ದುಷ್ಟನ ಭಾವಚಿತ್ರ! ದೇಶದ ಮಾಜಿ ಪ್ರಧಾನಿಯನ್ನು ಕೊಂದವನ ಭಾವಚಿತ್ರವನ್ನು ಈ ಜನರು ಎಗ್ಗಿಲ್ಲದೆ, ನಾಚಿಕೆಯಿಲ್ಲದೆ ಹಿಡಿದು ನಿಂತಿದ್ದಾರೆ. ಇವರನ್ನೇನನ್ನುವುದು?

ಈ ಪ್ರತಿಭಟನೆಯನ್ನು ಆಯೋಜಿಸಿದ ಮಹಾಶಯ ಜೆಡಿಎಸ್ ಪಕ್ಷಕ್ಕೆ ಸೇರಿದವನು. ಕೆ.ಆರ್.ಪುರಂ ಜೆಡಿಎಸ್ ಘಟಕದ ಅಧ್ಯಕ್ಷ. ಆತ ಕರೆತಂದಿರುವ ಸ್ಲಮ್ಮಿನ ತಮಿಳರಿಗೆ ಪ್ರಭಾಕರನ್ ಯಾರೆಂದು ಗೊತ್ತಿದೆಯೋ ಇಲ್ಲವೋ? ತಮಿಳರ ಓಟಿಗಾಗಿ ರಾಜಕೀಯ ಪಕ್ಷಗಳು ಎಂಥ ಕೊಳಕು ಕಾರ್ಯಗಳಿಗೂ ಕೈ ಹಾಕಬಲ್ಲರು ಎಂಬುದಕ್ಕೆ ಈ ಪ್ರತಿಭಟನೆ ಸಾಕ್ಷಿ.

ದೇಶದ ಮಾಜಿ ಪ್ರಧಾನಿಯ ಕೊಲೆಗಡುಕನ ಫೋಟೋ ಹಿಡಿದು ಪ್ರತಿಭಟಿಸಲು ಬೆಂಗಳೂರು ಪೊಲೀಸರು ಅನುಮತಿ ನೀಡಿದ್ದಾದರೂ ಹೇಗೆ? ಒಂದೊಮ್ಮೆ ಗೊತ್ತಿಲ್ಲದೆ ಅನುಮತಿ ನೀಡಿದ್ದರೂ, ಇಂಥದ್ದೊಂದು ದೇಶದ್ರೋಹದ ಕೃತ್ಯವೆಸಗಿದ್ದಕ್ಕೆ ಅವರೇನು ಕ್ರಮ ಕೈಗೊಂಡರು? ಕಿಟಕಿ ಗಾಜು ಒಡೆದ ಕನ್ನಡ ಹೋರಾಟಗಾರರ ಮೇಲೆ ಗೂಂಡಾ ಕಾಯ್ದೆ ಹೇರುವ ಪೊಲೀಸರು, ಒಬ್ಬ ಜಾಗತಿಕ ಭಯೋತ್ಪಾದಕನ ಭಾವಚಿತ್ರ ಹಿಡಿದು ಪ್ರತಿಭಟಿಸುವವರನ್ನು ಹೇಗೆ ಬಿಟ್ಟು ಬಿಡುತ್ತಾರೆ?

ಮುಂಬೈ ದಾಳಿಕೋರ ಅಜ್ಮಲ್ ಅಮೀರ್ ಕಸಬ್‌ನ ಪೋಟೋ ಹಿಡಿದು ನಾಳೆ ಯಾವುದೋ ಸಂಘಟನೆಯವರು ಪ್ರತಿಭಟನೆ ಮಾಡಿದರೆ? ಆಗ ನಮ್ಮ ಸಮಾಜ ಹೇಗೆ ಸ್ವೀಕರಿಸುತ್ತದೆ? ಅಥವಾ ಒಸಾಮ ಬಿನ್ ಲ್ಯಾಡೆನ್ ಫೋಟೋ ಹಿಡಿದು ಮತ್ತಾರೋ ಧರ್ಮ ದುರಾಂಧರು ಪ್ರತಿಭಟಿಸಬಹುದು. ಮಾಲೆಗಾಂವ್ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಭಾವಚಿತ್ರ ಹಿಡಿದು ಇನ್ನ್ಯಾರೋ ಭಿಕಾರಿಗಳು ಬೀದಿಯಲ್ಲಿ ನಿಲ್ಲಬಹುದು. ಅವರನ್ನೂ ಸಹಿಸಿಕೊಳ್ಳಬೇಕೆ?

ಬೆಂಗಳೂರಿನಲ್ಲಿ ಎಲ್‌ಟಿಟಿಇ ಪರವಾದ ಒಂದು ಗುಂಪು ಮೊದಲಿನಿಂದಲೂ ಸಕ್ರಿಯವಾಗಿದೆ. ಎಲ್‌ಟಿಟಿಇ ಜತೆ ನೇರ ಸಂಪರ್ಕ ಇಟ್ಟುಕೊಂಡ ಸಾಕಷ್ಟು ಜನ ಇಲ್ಲಿದ್ದಾರೆ. ಈ ಕಾರಣಕ್ಕೇ ರಾಜೀವ್ ಹತ್ಯೆ ಆರೋಪಿಗಳು ತಮ್ಮ ಪರವಾದ ಸಹಾನುಭೂತಿ ಇರುವ ಜನರನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದು, ಇಲ್ಲಿ ಸಾವನ್ನಪ್ಪಿದ್ದರು. ಡಾ.ರಾಜಕುಮಾರ್ ಅಪಹರಣ ಸಂದರ್ಭದಲ್ಲಿ ಎಲ್‌ಟಿಟಿಇ ಬೇಡಿಕೆಗಳನ್ನೇ ವೀರಪ್ಪನ್ ಮುಂದಿಟ್ಟಿದ್ದರ ಹಿಂದೆಯೂ ಬೆಂಗಳೂರಿನ ಎಲ್‌ಟಿಟಿಇ ಭಕ್ತರ ಚಿತಾವಣೆ ಇತ್ತು. ವೀರಪ್ಪನ್‌ಗೆಂದು ಕಳುಹಿಸಲಾದ ಹಣದಲ್ಲಿ ಒಂದು ಭಾಗ ಈ ಜನರ ಕೈಗೂ ಸೇರಿತು ಎಂಬುದು ರಹಸ್ಯವೇನೂ ಅಲ್ಲ.

ಸದ್ಯಕ್ಕೆ ಶ್ರೀಲಂಕದಲ್ಲಿ ಸರ್ವನಾಶವಾಗಿರುವ ಎಲ್‌ಟಿಟಿಇ, ಹೊಸ ನೆಲೆಗಳನ್ನು ಹುಡುಕಿಕೊಳ್ಳಲು ಯತ್ನಿಸುವುದು ಸಹಜ. ಈಗಾಗಲೇ ಸಾಕಷ್ಟು ಮಂದಿ ಎಲ್‌ಟಿಟಿಇ ಉಗ್ರರು ತಮಿಳುನಾಡು, ಆಂಧ್ರ, ಕರ್ನಾಟಕವನ್ನು ಸೇರಿಕೊಂಡಿರುವ ಸಾಧ್ಯತೆಗಳಿವೆ ಎಂದು ಗುಪ್ತಚರ ವರದಿಗಳು ಹೇಳುತ್ತಲೇ ಬಂದಿವೆ. ಬಂದವರಿಗೆ ಬೆಂಗಳೂರಿನ ಎಲ್‌ಟಿಟಿಇ ಭಕ್ತರು ಆಶ್ರಯ ನೀಡದೇ ಇರುತ್ತಾರೆಯೇ? ಪ್ರಭಾಕರನ್ ಭಾವಚಿತ್ರ ಹಿಡಿದು ಬೀದಿಯಲ್ಲಿ ನಿಲ್ಲುವ ಧೈರ್ಯವಿರುವ ಮಂದಿ, ತಮ್ಮ ತಮ್ಮ ಮನೆಯಲ್ಲಿ ಬಂದೂಕು ಹಿಡಿದ ಉಗ್ರರನ್ನು ಇಟ್ಟುಕೊಳ್ಳಲಾರರು ಎಂದು ನಂಬುವುದಾದರೂ ಹೇಗೆ?

ಮೊನ್ನೆ ಪ್ರತಿಭಟನೆ ನಡೆಸಿ ಪೌರುಷ ತೋರಿದ ಬೆಂಗಳೂರಿನ ಹುಲಿಗಳನ್ನೆಲ್ಲ ಠಾಣೆಗೆ ಕರೆತಂದು ಪೊಲೀಸರು ಇದೆಲ್ಲ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಒಂದೊಮ್ಮೆ ಅವರು ನಿಜವಾದ ಪ್ರಭಾಕರನ್ ಭಕ್ತರೇ ಆಗಿದ್ದರೆ, ಶ್ರೀಲಂಕ ಪೊಲೀಸರಿಗೆ ಕೊಟ್ಟು ಕೈ ತೊಳೆದುಕೊಳ್ಳುವುದು ಒಳ್ಳೆಯದು.

ಇಲ್ಲವಾದಲ್ಲಿ ಬೆಂಗಳೂರು ಮುಂದಿನ ದಿನಗಳಲ್ಲಿ ನೆಮ್ಮದಿಯಾಗಿರಲು ಸಾಧ್ಯವಿಲ್ಲ.

Tuesday, May 12, 2009

ಎರಡು ಪ್ರತಿಕ್ರಿಯೆಗಳಿಗೆ ಒಂದು ಪ್ರತಿಕ್ರಿಯೆ

ಅಮಾಯಕರ ಮನೆಯೊಳಗಿನ ಬಡತನ ಯಾವತ್ತು ಕಾಣುವುದಿಲ್ಲ.

ಡಿಯರ್ ದಿನೇಶ್,
ಸಂತೋಷ್ ಹೆಗ್ಡೆಯವರ ‘ಬ್ಯೂಟಿಪಾರ್ಲರ್’ ಪದ ಬಳಕೆಯ ಬಗ್ಗೆ ನೀವು ಎತ್ತಿರುವ ಆಕ್ಷೇಪ ಮೆಚ್ಚಬಹುದಾದರು, ನೀವು ಅಗ್ರಹಾರದ ಗೊಂಡಾರಣ್ಯದಲ್ಲಿ ಬಿದ್ದು ಸಾಮಾಜಿಕ ನ್ಯಾಯಕ್ಕಾಗಿ ಚೀರುತ್ತಿರುವಂತೆ ನನಗೆ ಕಾಣಿಸುತ್ತಿದೆ. ಭಯೋತ್ಪಾದನೆ ನಿಗ್ರಹಕ್ಕಾಗಿ ಬ್ಲಾಗ್, SMS, ಇಮೇಲ್, ಟೀಶರ್ಟ್ ಗಳಲ್ಲಿ ಪ್ರಾಣಕೊಡಲು ಸಿದ್ಧರಿರುವ ಸನಾತನಿಗಳ ಸಂಖ್ಯೆ ನಮ್ಮ ಸುತ್ತಲು ಕೋಟಿಯ ಲೆಕ್ಕದಲ್ಲಿ ಸಿಗುತ್ತದೆ. ಅದೇ ಅಸ್ಪೃಶ್ಯತೆ ನಿಗ್ರಹಕ್ಕಾಗಿ ನಿಮ್ಮಲ್ಲೇನಾದರೂ ಒನ್ ಪಾಯಿಂಟ್ ಪ್ರೊಗ್ರಾಮ್ ಇದೆಯಾ ಅಂತ ಸನಾತನ ಮಠಗಳಿಗೆ, ಸನಾತನ ಸರ್ಕಾರಗಳಿಗೆ, ಅಷ್ಟೇಕೆ ಖುದ್ದು ಸನಾತನಿಗಳಿಗೆ ಕೇಳಿ ನೋಡಿ, ತಕ್ಷಣವೇ ಅವರೆಲ್ಲ ತಮ್ಮ ಕಣ್ಣು ಕಿವಿ ಮೂಗು ಬಾಯಿಗಳನ್ನು ಕಳೆದುಕೊಂಡು ಶಿಲಾಯುಗವಾಸಿಗಳಾಗುತ್ತಾರೆ.

ಪುಡಿಗಾಸಿಗೆ ಗಡಿಗಳಲ್ಲಿ ಜೀತಕ್ಕಿರುವ ನಮ್ಮ ಸೈನಿಕರನ್ನು ಕಂಡು ನನಗೆ ಅಯ್ಯೋ ಅನ್ನಿಸುತ್ತದೆ. ಈ ಮಹಾನ್ ದೇಶದ ದೇಶಪ್ರೇಮ ಅವರನ್ನು ಅಲ್ಲಿ ದುಡಿಯುವಂತೆ ಮಾಡಿದೆ ಎಂದುಕೊಂಡಿರುವ ಸನಾತನಿಗಳಿಗೆ, ಆ ಅಮಾಯಕರ ಮನೆಯೊಳಗಿನ ಬಡತನ ಯಾವತ್ತು ಕಾಣುವುದಿಲ್ಲ. ನನಗೆ ಆ ಸೈನಿಕರು ಬರಿ ಗಡಿಗಳನ್ನು ಕಾಯುತ್ತಿಲ್ಲ, ಈ ದೇಶದ ಮಡಿ ಮೈಲಿಗೆಯ ವಿಕಾರಗಳನ್ನು, ಮತಾಂಧರ, ಧರ್ಮದ ತಲೆಹಿಡುಕರ, communal butcherಗಳ ಸೈತಾನಿ ತೆವಲುಗಳನ್ನು ತಮ್ಮ ಪ್ರಾಣ ಒತ್ತೆ ಇಟ್ಟು ಕಾಯುತ್ತಿದ್ದಾರೆನಿಸುತ್ತದೆ. ದಲಿತರು ಮನುಷ್ಯರಲ್ಲ, ಆದರೆ ಅವರು ಹಿಂದೂಗಳು ಎಂದು ಹೇಳುವಷ್ಟು ದೊಡ್ಡಗುಣ ಸನಾತನಿಗಳ ನಾಲಿಗೆಗಿದೆ. ಇಂಥ ನಾಲಿಗೆಯೇ ಇವತ್ತು ಕೊರಮರನ್ನು ಕಳ್ಳಖದೀಮರನ್ನು ಒಂದೇ ಪಟ್ಟಿಗೆ ಸಲೀಸಾಗಿ ಸೇರಿಸುತ್ತದೆ. ಇನ್ನು ಇಂಥವರ ಪಟ್ಟಿಗಳಲ್ಲಿ ಮುಸ್ಲಿಮರ ಶ್ರಮಜೀವಿಗಳ ಸ್ಥಾನಮಾನ ಎಂಥದ್ದು ಎಂಬುದನ್ನು ಈ ದೇಶದ ಯಾರು ಬೇಕಾದರೂ ಸುಲಭವಾಗಿ ಗ್ರಹಿಸಬಹುದು.

ಈ ದೇಶದ ಸಾಮಾಜಿಕ ನ್ಯಾಯದ ಬಗ್ಗೆಯೇ ನನಗೆ ಅನೇಕ ಗುಮಾನಿಗಳಿವೆ. ಲೋಕಾಯುಕ್ತ ಅನ್ನುವುದು ಕೂಡ ಸಂಪೂರ್ಣ ಸಾಚಾ ಇಲಾಖೆಯೇನಲ್ಲ. ಅದು ಆಯಾ ಸರ್ಕಾರದ ಕೃಪಾಪೋಷಿತ ನಾಟಕ ಶಾಲೆ. ಸಂತೋಷ್ ಹೆಗ್ಡೆಯವರು ರಾಶಿಗಟ್ಟಲೆ ಕಾನೂನು ಪುಸ್ತಕಗಳನ್ನೇ ಓದಿರಬಹುದು, ಆದರೆ ಅವರ ತಲೆ ಮಿದುಳುಗಳಲ್ಲಿ ‘ಮನು’ವಿನಂಥ ಒಬ್ಬ ಕ್ರಿಮಿಯಿದ್ದರೆ ಸಾಕಲ್ಲವೇ ಸಾಮಾಜಿಕ ನ್ಯಾಯ ಅನ್ನುವುದು ತಬ್ಬಲಿಯಾಗಲು.

ಹುಟ್ಟಿಗೂ-ಪ್ರತಿಭೆಗೂ, ಜಾತಿಗೂ-ಪ್ರತಿಭೆಗೂ ಏನೇನೂ ಸಂಬಂಧ ಇಲ್ಲದಿರುವುದನ್ನೂ ಕಾಣುವಷ್ಟಾದರೂ ‘ಪ್ರತಿಭೆ’ ಈ ದೊಡ್ಡ ದೇಶಕ್ಕಿನ್ನು ಬಂದಿಲ್ಲ. ದಲಿತರು, ಹಿಂದುಳಿದವರು, ಹಳ್ಳಿಗರು, ಶ್ರಮಿಕರನ್ನು ವಂಚಿಸುವ ಬುದ್ಧಿಯೇ ಭಾರತದಲ್ಲಿ ಪ್ರತಿಭೆ ಎನಿಸಿಕೊಂಡಿದೆ. ಅಗ್ರಹಾರದ ಬೀದಿಗಳಿಂದ ದೇಶಕಾಯಲು ಹೋರಾಟ ಸನಾತನಿಗಳ ಅಂಕಿ ಸಂಖ್ಯೆಯ ಲೆಕ್ಕಾಚಾರದ ಅಂಶಗಳ ಬಗ್ಗೆ ಯಾರಾದರೂ ಬ್ಲಾಗ್ ನ ವೀರಾಧಿವೀರರು ಮಾಹಿತಿ ಕೊಟ್ಟರೆ ನಾನವರಿಗೆ ಋಣಿ.

chandrashekhar aijoor
May 9, 2009


ಸೂಳೆಗಾರಿಕೆ ಹೋಲಿಕೆ ಬೇಕಿತ್ತೆ?

ಶ್ರೀ. ದಿನೇಶ್ ,

ನಿಮ್ಮ ಸಾಮಾಜಿಕ ವಿನ್ಯಾಸದ ಕುರಿತಾಗಿನ ಕಳಕಳಿ ಮತ್ತು ಬದ್ದತೆಗೆ ಧನ್ಯವಾದಗಳು. ಬಳಸುವ ಪದ ಅಥವಾ ವಾಕ್ಯಗಳು ಅಪ್ರಜ್ನ್ಯಾಪೂರ್ವಕವಾಗಿಯಾದರೂ ಸರಿಯೆ ಅದರ ಹಿ೦ದಿನ ರಾಜಕಾರಣ ಮಾತ್ರ ಒ೦ದಷ್ಟು ಸಮುದಾಯಗಳ ಅನನ್ಯತೆಯನ್ನು ಅವರ ಬದುಕಿನ ಕ್ರಮಗಳನ್ನು ಅವಹೇಳನ ಮಾಡುವ ಪರಿಯಲ್ಲಿರುತ್ತದೆ ಎ೦ಬುದಕ್ಕೆ ನೀವೇ ಕೊಟ್ಟಿರುವ ಅನೇಕ ಉದಾಹರಣೆಗಳೇ ಜ್ವಲ೦ತ ಸಾಕ್ಶಿ.

ಬಹುಷ: ಶ್ರೀ. ಸ೦ತೋಷ ಹೆಗಡೆಯವರ ಮಾತನ್ನು ಪ್ರಸ್ತುತ ಸಮಾಜದಲ್ಲಿ ಸೌ೦ದರ್ಯ ಮತ್ತು ಸೌ೦ದರ್ಯವರ್ಧಕಗಳ ಲಾಬಿ ಹೆಸರಲ್ಲಿ ನಡೆಯುತ್ತಿರುವ ದ೦ದೆಯನ್ನು ವಿವರಿಸಿರಬಹುದೇ ಅಥವಾ ಸ್ತ್ರೀ ಪುರುಷರಿಬ್ಬರೂ ಸು೦ದರವಾಗಿರಲೇಬೇಕೆ೦ಬ ಪುರುಷಾಧಿಪತ್ಯ ಮೌಲ್ಯ ಮತ್ತು ಸರಕು-ಗ್ರಾಹಕ ಸ೦ಸ್ಕೃತಿಯ ಹಿನ್ನಲೆಯಲ್ಲಿ ಪ್ರಸ್ತಾಪಿಸಿರಲೂಬಹುದು. [ ಸ್ವಚ್ಚತೆ ಬೇರೆ..ಸೌ೦ದರ್ಯದ ಕುರಿತಾಗಿನ ಮೀಮಾ೦ಸೆ ಬೇರೆ ಎನ್ನು ವುದು ತಮಗೂ ತಿಳಿದಿರಬಹುದು.] ಆದರೆ ಮಾತ್ರ ದುಡಿಮೆ ಹಿ೦ದಿರುವ ಜನವರ್ಗಗಳ ಪರಿಸ್ಥಿತಿ ಮಾತ್ರ ಅರ್ಥವಾಗಬೇಕು ಎ೦ಬ ನಿಮ್ಮ ನಿಲುವು ಸರಿಯಾಗಿಯೇ ಇದೆ.

ನನಗೆ ಆಶ್ಚರ್ಯವೆನ್ನಿಸಿದ್ದು..ಭಾಷೆ ಬಗ್ಗೆ ಮಾತನಾಡುವಾಗ..ಸಹಜವಾಗಿಯೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ.. ನೀವು ಬಳಸಿರುವ ಬಾಷೆ ಚರ್ಚೆಗೆ ಗ್ರಾಸವಾಗುತ್ತದೆ. ನಮ್ಮ ಸಮಾಜ ಶ್ರೇಣೀಕೃತ ವ್ಯವಸ್ಥೆ ನಿರ್ಮಿಸಿಕೊಟ್ಟ ಹಾಗೆ ಲಿ೦ಗ ವ್ಯವಸ್ಥೆಯನ್ನೂ ಬಹಳ ಥಳುಕಿನಿ೦ದ ಅಥವಾ ಅಮೂರ್ತ ಸ್ವರೂಪದಲ್ಲಿ ನಿರೂಪಿಸುತ್ತಾ ಬ೦ದಿದ್ದು ಅದರ ಪರಿಣಾಮವಾಗಿ ತಾವು ಕೆಟ್ಟ-ಅಶುದ್ದ ಎ೦ಬ ಪರಿಕಲ್ಪನೆಯಲ್ಲಿ ಮಹಿಳೆಯರ ನ್ನು “ಸೂಳೆಗಾರಿಕೆ-ವೇಶ್ಯಾವಾಟಿಕೆ ” ಪದ ಪ್ರಯೋಗ ಮಾಡಿದ್ದೀರೀ. ಇಲ್ಲೂ ಕೂಡಾ ವ್ಯವಸ್ಥೆಯ ಬಲಿಪಶುಗಳೇ , ವ೦ಚನೆಗಾರರು, ಕೊಲೆಗಡುಕರು ,ದರೋಡೆಕೋರರು. ವೇಶೇಯರು.. ತಲೆ ಹಿಡುಕರ- ವಿಟ ಪುರುಷರು. ಎ೦ಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದರರ್ಥ ಇವೆಲ್ಲವೂ ಸರಿ ಅಥವಾ ತಪ್ಪು ಎ೦ಬ ನಿರ್ಣಯಕ್ಕೆ ನಾನು ಬರುತ್ತಿಲ್ಲ. ಬದಲಿಗೆ ಸಾಮಾಜಿಕ ಸ್ತರವಿನ್ಯಾಸದಲ್ಲಿ ಕಾಯಕವನ್ನು ಕ೦ಡ ಬಗೆಯ ಹಿ೦ದಿರುವ ದೃಷ್ಟಿಕೋನವನ್ನು ಮರುಚಿ೦ತಿಸಬೇಕೇನೋ ಎ೦ದೆನ್ನಿಸಿದೆ.

ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಯೋಚಿಸುವ ಪ್ರತಿಯೊಬ್ಬರೂ ಇ೦ಥ ವ್ಯವಸ್ಥೆಯಲ್ಲಿ ನಲುಗುವ ಅನೇಕ ಅನನ್ಯತೆಗಳ..ಕುರಿತೂ ಕಾಳಜಿಯನ್ನುವ್ಯಕ್ತಪಡಿಸಿದರೆ ..ನಿಜವಾಗಿಯೂ ನಮ್ಮ ವೈಚಾರಿಕತೆಗೆ ನ್ಯಾಯ ಒದಗಿಸಿದ೦ತಾಗುತ್ತದೆ.

ದೇಸೀ ಮಾತು ಮೂಲಕ ಬ್ಲಾಗ್ ತೆರೆದು ಮಾತುಕತೆ ಮೂಲಕ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದೀರಿ. ಧನ್ಯವಾದಗಳು.

Kirankumari
May 6, 2009


ನಾನು ಹಿಂದೆ ಬರೆದಿದ್ದ ಲೇಖನವೊಂದಕ್ಕೆ ಚಂದ್ರಶೇಖರ್ ಐಜೂರ್ ಹಾಗು ಕಿರಣ ಕುಮಾರಿಯವರು ಅವಧಿಯಲ್ಲಿ ಕಳೆದ ವಾರ ಪ್ರತಿಕ್ರಿಯಿಸಿರುವುದನ್ನು ಗಮನಿಸಿದೆ. ಈ ಎರಡೂ ಪ್ರತಿಕ್ರಿಯೆಗಳು ತುಂಬ ತೀಕ್ಷ್ಣವಾಗಿ ಕಾಡುವಂಥವುಗಳಾದ್ದರಿಂದ ಅವೆರಡನ್ನೂ ಇಲ್ಲಿ ನೀಡಿದ್ದೇನೆ.

ಐಜೂರ್ ಅವರಿಗೆ ನಾನು ಅಗ್ರಹಾರದ ಗೊಂಡಾರಣ್ಯದಲ್ಲಿ ಬಿದ್ದು ಸಾಮಾಜಿಕ ನ್ಯಾಯಕ್ಕಾಗಿ ಚೀರುತ್ತಿರುವಂತೆ ಕಾಣುತ್ತಿದ್ದೇನೆ! ಸಾಮಾಜಿಕ ನ್ಯಾಯಕ್ಕಾಗಿ ಚೀರುತ್ತಿರುವುದಂತೂ ನಿಜ; ಆದರೆ ಅಗ್ರಹಾರದ ಗೊಂಡಾರಣ್ಯದಲ್ಲಿ ಬಿದ್ದು ಅಲ್ಲ ಎಂದು ಅವರಿಗೆ ಸ್ಪಷ್ಟಪಡಿಸುತ್ತೇನೆ. ಇನ್ನುಳಿದಂತೆ ಅವರು ಹೇಳಿರುವ ಬಹುತೇಕ ಎಲ್ಲ ಮಾತುಗಳಿಗೆ ನನ್ನ ಸಮ್ಮತಿಯಿದೆ.

ಸೂಳೆಗಾರಿಕೆ ಎಂಬ ಪದವನ್ನು ನಾನು ಹೋಲಿಕೆಗಾಗಿ ಬಳಸಿರುವುದನ್ನು ಕಿರಣ್ ಕುಮಾರಿ ಅವರು ಆಕ್ಷೇಪಿಸಿದ್ದಾರೆ. ಈ ಹಿಂದೆಯೂ ಅವಧಿಯಲ್ಲಿ ವಸಂತ ಕಾಜೆ ಎಂಬ ಓದುಗರೊಬ್ಬರು ಈ ಆಕ್ಷೇಪ ಎತ್ತಿದ್ದರು. ಸೂಳೆಗಾರಿಕೆ ಕುರಿತಂತೆ ನಾನು ಹಿಂದಿನಿಂದಲೂ ಹೊಂದಿದ್ದ ಕೊಳಕುಭಾವ ಇದಕ್ಕೆ ಕಾರಣವಾಗಿರಬಹುದು. ಆದರೆ, ವಸಂತ್ ಅವರ ಈ ಆಕ್ಷೇಪವೂ ನನಗೆ ಸರಿಯೆನ್ನಿಸಿದರಿಂದ ನನ್ನ `ದೇಸೀಮಾತು' ಪುಸ್ತಕದಲ್ಲಿ ಆ ಹೋಲಿಕೆಯನ್ನು ಕೈ ಬಿಟ್ಟಿದ್ದೇನೆ.

ಕಿರಣ್ ಕುಮಾರಿ, ಚಂದ್ರಶೇಖರ ಐಜೂರ್ ಹಾಗು ಈ ಹಿಂದೆಯೇ ಅವಧಿಯಲ್ಲಿ ಈ ಲೇಖನ ಕುರಿತು ಚರ್ಚೆ ನಡೆಸಿದ್ದ ಅವಧಿ ಓದುಗರಿಗೆ ಧನ್ಯವಾದಗಳು.

Friday, April 10, 2009

ದೇಸೀಮಾತು: ಇಸ್ಮಾಯಿಲ್ ಬರೆದ ಮುನ್ನುಡಿ

ಪತ್ರಕರ್ತ ನಿಷ್ಪಕ್ಷಪಾತಿಯಾಗಿರಬೇಕು ಎಂಬ ಸವಕಲು ಕ್ಲೀಷೆಯೊಂದಿದೆ. ಪತ್ರಿಕೋದ್ಯಮವನ್ನು ಅಥವಾ ಈಗಿನ ಭಾಷೆಯಲ್ಲಿ ಹೇಳುವುದಾದರೆ ಸಮೂಹ ಸಂವಹನವನ್ನು ಬೋಧಿಸುವ ಎಲ್ಲಾ ಪಠ್ಯ ಕ್ರಮಗಳಲ್ಲಿಯೂ ನಿಷ್ಪಕ್ಷಪಾತ ಧೋರಣೆಗೆ ಒತ್ತು ನೀಡಲಾಗಿದೆ. ಅರೆಕ್ಷಣ ಯೋಚಿಸಿದರೆ ಇಂಥದ್ದೊಂದು ಧೋರಣೆ ಪ್ರಾಯೋಗಿಕವಾಗಿ ಅಸಾಧ್ಯ ಎಂಬುದು ಎಲ್ಲರಿಗೂ ತಿಳಿಯುತ್ತದೆ. ಆದರೆ ಪತ್ರಿಕಾವೃತ್ತಿಯಲ್ಲಿರುವವರೂ ಸೇರಿದಂತೆ ಎಲ್ಲರೂ ಈ ವಿಷಯವನ್ನು ಸ್ಪಷ್ಟವಾಗಿ ಬಿಡಿಸಿ ಹೇಳಲು ಇಷ್ಟಪಡುವುದಿಲ್ಲ.

ನಿಷ್ಪಕ್ಷಪಾತಿಯಾಗಿರುವುದು ಎಂದರೆ ನಿರ್ಗುಣಿಯಾಗಿರುವುದೂ ಎಂದರ್ಥ. ಪತ್ರಕರ್ತನೊಬ್ಬ ಹೀಗೆ ನಿರ್ಗುಣಿಯಾಗಿ ತನ್ನ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳನ್ನು ದಾಖಲಿಸಲು ಸಾಧ್ಯವಿದೆಯೇ? ಪತ್ರಕರ್ತನೂ ಒಬ್ಬ ಮನುಷ್ಯನೇ. ಅವನಿಗೂ ಅವನದ್ದೇ ಆದ ಭಾವನೆಗಳು, ಇಷ್ಟಾನಿಷ್ಟಗಳಿರುತ್ತವೆ. ತನ್ನ ವರದಿಗಳಲ್ಲಿ ಆತ ಇವನ್ನೆಲ್ಲಾ ಮೀರಲು ಪ್ರಯತ್ನಿಸಬೇಕು ಎಂದು ವಾದಿಸಬಹುದು. ಹಾಗೆ ಮೀರಲು ಸಾಧ್ಯವಿದೆಯೇ? ತೋರಿಕೆಗೆ ನಿಷ್ಪಕ್ಷಪಾತಿ ಎನಿಸುವಂಥ ವರದಿಗಳನ್ನು ಬರೆಯಬಹುದೇ ಹೊರತು ಸಂಪೂರ್ಣ ನಿಷ್ಪಕ್ಷಪಾತಿ ಧೋರಣೆಯ ವರದಿಯೊಂದನ್ನು ಪ್ರಪಂಚದ ಯಾವ ಮಾಧ್ಯಮವೂ ಇಲ್ಲಿಯ ತನಕ ಪ್ರಕಟಿಸಿಲ್ಲ.

ವರದಿಯನ್ನು ಮಂಡಿಸುವ ಕ್ರಮದಲ್ಲೇ ಒಂದು ಧೋರಣೆಯಿರುತ್ತದೆ. ಈ ಧೋರಣೆ ಸುದ್ದಿಯ ಗ್ರಹಿಕೆಯ ಕ್ಷಣದಲ್ಲೇ ಆರಂಭವಾಗುತ್ತದೆ. ಹಾಗಿರುವುದರಿಂದ ನಿಷ್ಪಕ್ಷಪಾತ ಧೋರಣೆಯೆಂಬುದು ಕಾರ್ಯರೂಪಕ್ಕೆ ಬರಲಾರದ ಒಂದು ಆದರ್ಶ ಮಾತ್ರ. ಹಾಗಿದ್ದರೆ ಪತ್ರಕರ್ತ ಏನು ಮಾಡಬಹುದು ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಭಾರತೀಯ ಪತ್ರಿಕೋದ್ಯಮದ ಇತಿಹಾಸವೇ ಒಂದು ಮಾದರಿಯನ್ನು ನಮ್ಮ ಮುಂದಿಟ್ಟಿದೆ-ಜನಪರ ಧೋರಣೆ. ವರದಿಗಳು, ವಿಶ್ಲೇಷಣೆಗಳು ಜನಪರವಾಗಿದ್ದರೆ ಅವು ನಿಜ ಅರ್ಥದ ಪತ್ರಿಕೋದ್ಯಮದ ಉದಾಹರಣೆಗಳಾಗುತ್ತವೆ.
ಮಾಧ್ಯಮವೆಂಬುದು ಮಾರುಕಟ್ಟೆಯ ಸರಕಾಗುತ್ತಿರುವ ಈ ಹೊತ್ತಿನಲ್ಲಿ ಪತ್ರಕರ್ತ ಜನಪರವಾಗಿರುವುದು ಸುಲಭದ ಕೆಲಸವೇನೂ ಅಲ್ಲ. ವರ್ತಮಾನದ ಪತ್ರಕರ್ತ ತನಗೆ ತಿಳಿದ ಅಥವಾ ತಾನು ಗ್ರಹಿಸಿದ ಸತ್ಯವನ್ನು ಮಾತ್ರ ಜನರ ಮುಂದಿಡುವುದು ತನ್ನ ಕೆಲಸವೆಂದು ಭಾವಿಸುವಂತಿಲ್ಲ. ಜನರು ಏನು ಬಯಸುತ್ತಾರೋ ಆ ಸತ್ಯಗಳನ್ನು, ಕೆಲವೊಮ್ಮೆ ಜನರಿಗಿಷ್ಟವಾಗುತ್ತದೆ ಎಂಬ ಕಾರಣಕ್ಕೆ ಅರ್ಧ ಸತ್ಯಗಳನ್ನಷ್ಟೇ ಜನರಿಗೆ ತಿಳಿಸುವ ಕೆಲಸವನ್ನು ಅವನು ಮಾಡಬೇಕಾಗುತ್ತದೆ. ಈ ಸವಾಲನ್ನು ಮೀರಿ ನಿಲ್ಲುವ ಬರೆವಣಿಗೆಯನ್ನು ಸಾಧ್ಯ ಮಾಡಿ ತೋರಿಸುತ್ತಿರುವ ಕೆಲವರಲ್ಲಿ ದಿನೇಶ್ ಕೂಡಾ ಒಬ್ಬರು. ದೇಸಿ ಮಾತುವಿನಲ್ಲಿರುವ ಅವರ ಬರೆಹಗಳು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಚರ್ಚೆಯಾಗದ/ಚರ್ಚಿಸಲು ಸಾಧ್ಯವಿಲ್ಲದ ಅನೇಕ ಅಂಶಗಳನ್ನು ಚರ್ಚಿಸುತ್ತವೆ. ಈ ಚರ್ಚೆಗಳನ್ನವರು ತಾಂತ್ರಿಕವಾಗಿ ಮುಖ್ಯವಾಹಿನಿಯದ್ದು ಎಂದು ಹೇಳಬಹುದಾದ ಪತ್ರಿಕೆಯೊಂದರಲ್ಲೇ ಪ್ರಕಟಿಸಿದ್ದಾರೆ.

ದಿನೇಶ್ ಅವರ ಬರೆಹಗಳು ಸೂಚಿಸುತ್ತಿರುವಂತೆ ಅವರು ನಿಷ್ಪಕ್ಷಪಾತಿ ಪತ್ರಕರ್ತನಲ್ಲ. ಅವರು ಜನಪರ ಧೋರಣೆಗಳುಳ್ಳ ಪತ್ರಕರ್ತ. ಅವರಿಗೆ ನಿರ್ದಿಷ್ಟ ರಾಜಕೀಯ ಬೆಳವಣಿಗೆ ಅಥವಾ ವಿದ್ಯಮಾನ ಕೇವಲ ಒಂದು ಘಟನೆಯಲ್ಲ. ಆದ್ದರಿಂದಲೇ ಅವರ ವಿಶ್ಲೇಷಣೆಗಳು ಘಟನೆಯ ಭಿನ್ನ ಆಯಾಮಗಳನ್ನು ಶೋಧಿಸುತ್ತವೆ. ಮಿರಾಜುದ್ದೀನ್ ಪಟೇಲ್ ಅವರ ಸಾವು ಸೃಷ್ಟಿಸಿದ ಶೂನ್ಯತೆ ಕರ್ನಾಟಕದ ಮುಸ್ಲಿಂ ರಾಜಕಾರಣದ ವಿಶ್ಲೇಷಣೆಗೆ ಒಂದು ನೆಪವಾಗುತ್ತದೆ. ಮುಸ್ಲಿಂ ರಾಜಕಾರಣವನ್ನು ಚಾರಿತ್ರಿಕವಾಗಿ ನೋಡುತ್ತಲೇ ವರ್ತಮಾನದ ಸವಾಲುಗಳನ್ನು ದಿನೇಶ್ ಚರ್ಚಿಸುತ್ತಾರೆ. ಮತಾಂತರಕ್ಕೆ ಸಂಬಂಧಿಸಿದ ಅವರ ಬರೆಹವೂ ಅಷ್ಟೇ. ಮತಾಂತರದ ಸಾಮಾಜಿಕ ಆರ್ಥಿಕ ಆಯಾಮಗಳನ್ನು ಭಾರತದ ಜಾತಿ ಪದ್ಧತಿಯ ಹಿನ್ನೆಲೆಯಲ್ಲಿ ಅವರು ವಿಶ್ಲೇಷಣೆಗೆ ಒಳಪಡಿಸುತ್ತಾರೆ.

ದಿನೇಶ್ ಅವರ ಬರೆಹಗಳ ಒಂದು ವಿಶೇಷತೆಯೆಂದರೆ ಅವುಗಳ ರಾಜಕೀಯ ನಿಲುವು. ಇಲ್ಲಿ ಅವರು ಪಕ್ಷಪಾತಿಯಲ್ಲ. ಅವರು ಪ್ರತಿಪಾದಿಸುವ ರಾಜಕೀಯ ನಿಲುವನ್ನು ಸಬಲೀಕರಣದ ರಾಜಕೀಯ ಎಂದು ಕರೆಯಬಹುದೇನೋ. ಹಿಂದುಳಿದವರ ಅನನ್ಯತೆ, ಕನ್ನಡವೆಂಬ ಅನನ್ಯತೆಯ ಪ್ರಶ್ನೆಗಳನ್ನು ದಿನೇಶ್ ಚರ್ಚಿಸುವಾಗ ಅವರ ಸಬಲೀಕರಣ ರಾಜಕಾರಣದ ಒಲವು ಸ್ಪಷ್ಟವಾಗಿ ಕಾಣಿಸುತ್ತದೆ. ಕನ್ನಡಕ್ಕೆ ದೊರೆಯಬೇಕಾದ ಮಾನ್ಯತೆಯಾಗಲೀ ಹಿಂದುಳಿದವರಿಗೆ ಸಿಗಬೇಕಾದ ಸ್ಥಾನಗಳಾಗಲೀ ಕೇವಲ ಸಂಖ್ಯಾಬಲಕ್ಕೆ ದೊರೆಯಬೇಕಾದ ಮನ್ನಣೆಯೆಂಬಂತೆ ಪ್ರತಿಪಾದಿಸುವುದರ ಬದಲಿಗೆ ಅದನ್ನೊಂದು ನಾಗರಿಕ ಹಕ್ಕಿನ ಪ್ರಶ್ನೆಯನ್ನಾಗಿ ಚರ್ಚಿಸಬೇಕಿರುವುದು ಈ ಕೋಮುಸೂಕ್ಷ್ಮ ಪರಿಸ್ಥಿತಿಯ ದಿನಗಳ ಅಗತ್ಯವೂ ಹೌದು. ಸಂಖ್ಯಾಬಲದ ಮೇಲೆ ರೂಪುಗೊಳ್ಳುವ ಹಿಂದುಳಿದ ವರ್ಗಗಳ ರಾಜಕಾರಣ ಹೇಗಿರುತ್ತದೆ ಎಂಬುದಕ್ಕೆ ಕರ್ನಾಟಕದ ವರ್ತಮಾನದ ರಾಜಕಾರಣವೇ ಒಂದು ಸಾಕ್ಷಿಯಾಗುತ್ತದೆ.

ಕರ್ನಾಟಕದ ಎಲ್ಲ ಪಕ್ಷಗಳಲ್ಲೂ ಒಂದಷ್ಟು ಹಿಂದುಳಿದ ವರ್ಗಗಳ ರಾಜಕಾರಣಿಗಳಿದ್ದಾರೆ. ಇವರೆಲ್ಲರೂ ತಮ್ಮ ಪಕ್ಷಗಳಿಗೆ ಒಂದಷ್ಟು ಹಿಂದುಳಿದ ವರ್ಗಗಳ ಮತಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತಾರೆಯೇ ಹೊರತು ಹಿಂದುಳಿದ ವರ್ಗಗಳನ್ನು ಒಟ್ಟಾಗಿ ಪರಿಗಣಿಸಿ ಒಂದು ರಾಜಕೀಯ ಮಾರ್ಗವನ್ನು ಮುಂದಿಡುವುದಿಲ್ಲ. ದೇವರಾಜ ಅರಸು ಅವರ ಅವಧಿಯಲ್ಲಿ ಹಿಂದುಳಿದ ವರ್ಗಗಳ ರಾಜಕಾರಣವೊಂದು ಯಶಸ್ವಿಯಾಯಿತು ಎಂದು ನಾವು ಮತ್ತೆ ಮತ್ತೆ ಹೇಳುವಾಗಲೆಲ್ಲಾ ಆಗಿನ ಚಾರಿತ್ರಿಕ ಸಂದರ್ಭವೂ ಇದಕ್ಕೆ ಕಾರಣವಾಗಿತ್ತೆಂಬ ಅಂಶವನ್ನು ನಾವು ಮರೆತಿರುತ್ತೇವೆ. ರಾಜಕೀಯವಾಗಿ ಕಾಂಗ್ರೆಸ್ ಉಳಿದುಕೊಳ್ಳುವುದಕ್ಕೆ ಹಿಂದುಳಿದ ವರ್ಗಗಳನ್ನು ಗಂಭೀರವಾಗಿ ಪರಿಗಣಿಸುವುದು ಅಂದಿನ ಅಗತ್ಯವಾಗಿತ್ತು. ವಿ.ಪಿ.ಸಿಂಗ್ ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವುದರ ಮೂಲಕ ಹಿಂದುಳಿದ ವರ್ಗಗಳ ರಾಜಕಾರಣಕ್ಕೆ ಒಂದು ಸ್ಪಷ್ಟ ರೂಪವನ್ನೇ ಕೊಟ್ಟರು.

ವಿ.ಪಿ.ಸಿಂಗ್ ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಹೊರಟಾಗ ಅದನ್ನು ವಿರೋಧಿಸಿದ್ದ ಬಿಜೆಪಿ ಕೂಡಾ ಈಗ ಹಿಂದುಳಿದ ವರ್ಗಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಳ್ಳಲು ಬಗೆ ಬಗೆಯ ಪ್ರಯತ್ನ ನಡೆಸುತ್ತಿದೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಇತರ ಎಲ್ಲ ಪಕ್ಷಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಯಲ್ಲೇ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಶಾಸಕರಿದ್ದಾರೆ. ಆದರೆ ಬಿಜೆಪಿಯಲ್ಲಿ ರೂಪುಗೊಂಡಿರುವ ಹಿಂದುಳಿದ ವರ್ಗಗಳ ನಾಯಕತ್ವವೆಂಬುದು ಹಿಂದುತ್ವದ ಪರಿಧಿಯೊಳಗೇ ಇರುವಂಥದ್ದು. ಇದು ಹಿಂದುಳಿದ ವರ್ಗಗಳ ರಾಜಕೀಯ ಅಭೀಪ್ಸೆಯನ್ನು ಒಂದು ಇತ್ಯಾತ್ಮಕ ಬಲವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲದಂಥ ನಾಯಕತ್ವ. ಹೆಚ್ಚೆಂದರೆ ಸಂಘಪರಿವಾರದ ತೋಳ್ಬಲದ ಘಟಕಗಳಲ್ಲಿ ಇವರಿಗೆ ಮಹತ್ವದ ಸ್ಥಾನವಿರಬಹುದು. ಇದೇ ಕಾರಣಕ್ಕೆ ಶಾಸಕ ಹುದ್ದೆಯೇ ಸಚಿವ ಸ್ಥಾನವೋ ದೊರೆಯಬಹುದು. ಆದರೆ ಎಂದೆಂದಿಗೂ ಇವರನ್ನು ಪಕ್ಷದ ನೀತಿಗಳನ್ನು ರೂಪಿಸುವ ಸ್ಥಾನಕ್ಕೇರಲು ಬಿಡುವುದಿಲ್ಲ.

ಇದು ಮಂಡಲ್ ಪ್ರಯೋಗದ ನಂತರ ಬಿಜೆಪಿ ಅಳವಡಿಸಿಕೊಂಡಿರುವ ಸೂತ್ರವೇನೂ ಅಲ್ಲ. ಆರ್‌ಎಸ್‌ಎಸ್‌ನ ತಾತ್ವಿಕತೆಯನ್ನು ರೂಪಿಸಿದ ಗೋಲ್ವಾಳ್ಕರ್ ಈ ವಿಷಯದ ಬಗ್ಗೆ ಬಹಳ ಹಿಂದೆಯೇ ಹೇಳಿದ್ದರು. ಹಿಟ್ಲರ್ ರಾಜಕೀಯ ಅಧಿಕಾರ ಪಡೆದರೆ ಉಳಿದೆಲ್ಲವನ್ನೂ ಸಾಧಿಸಬಹುದು ಎಂಬ ಭ್ರಮೆಯಲ್ಲಿದ್ದ. ಪರಿಣಾಮವಾಗಿಯೇ ಅವನು ಸೋತ. ಇದಾಗದಿರಲು ಸಾಮಾಜಿಕ ಅಧಿಕಾರವನ್ನು ನಮ್ಮ ಕೈಯಲ್ಲಿಟ್ಟುಕೊಳ್ಳಬೇಕು ಎಂಬುದು ಗೋಲ್ವಾಳ್ಕರ್ ಅವರ ವಾದದ ಸಾರ. ಬಿಜೆಪಿ ಈಗ ಪ್ರಯೋಗಿಸುತ್ತಿರುವ ತಂತ್ರವೂ ಇದುವೇ. ಹಿಂದುತ್ವ ಎಂಬುದನ್ನು ಸಾಮಾಜಿಕ ಅಧಿಕಾರವನ್ನಾಗಿ ಸ್ಥಾಪಿಸುವ ಕೆಲಸ ಈಗಾಗಲೇ ಮುಗಿದಿದೆ. ಇನ್ನು ರಾಜಕೀಯ ಅಧಿಕಾರ ಯಾರ ಕೈಯ್ಯಲ್ಲಿದ್ದರೇನು?

ದಿನೇಶ್ ತಮ್ಮ ಬರೆಹಗಳಲ್ಲಿ ಈ ಸೂಕ್ಷ್ಮವನ್ನು ವರ್ತಮಾನದ ಉದಾಹರಣೆಗಳ ಮೂಲಕ ವಿಶ್ಲೇಷಿಸಲು ಪ್ರಯತ್ನಿಸುತ್ತಾರೆ. ಧರ್ಮ ಮತ್ತು ರಾಜಕಾರಣದ ಬಗೆಗಿನ ಅವರ ಎಲ್ಲಾ ಬರೆಹಗಳೂ ಹಿಂದುಳಿದ ವರ್ಗಗಳು ತಮಗೆ ಅರಿವಿಲ್ಲದೆಯೇ ಹೇಗೆ ಹಿಂದುತ್ವದ ಕಪಿಮುಷ್ಠಿಯೊಳಕ್ಕೆ ಸಿಕ್ಕಿಬೀಳುತ್ತಿವೆ ಎಂಬುದನ್ನು ವಿವರಿಸುತ್ತವೆ.

***

ಪ್ರಖ್ಯಾತ ಮಾಧ್ಯಮ ತಜ್ಞ ಮಾರ್ಷಲ್ ಮ್ಯಾಕ್ಲೂಹಾನ್ ಮೀಡಿಯಂ ಈಸ್ ದ ಮೆಸೇಜ್ ಎಂದಿದ್ದಾನೆ. ಪತ್ರಿಕೆಯಲ್ಲಿ ಬರುವುದೆಲ್ಲವೂ ಮುಖ್ಯವಾದುದು ಎಂದು ನಂಬುವ ಬಹುದೊಡ್ಡ ವರ್ಗ ಈಗಲೂ ಇದೆ. ಈ ವರ್ಗವನ್ನು ದುರುಪಯೋಗ ಪಡಿಸಿಕೊಳ್ಳುವ ಪತ್ರಿಕೋದ್ಯಮದ ಮಾದರಿಯೇ ಈಗಿನ ಯಶಸ್ವೀ ಪತ್ರಿಕೋದ್ಯಮ. ಈ ಸವಾಲನ್ನು ಮೀರಿ ಜನಪರವಾಗಿರುವುದನ್ನು, ಜನರು ಬಯಸದೇ ಇರುವ ಸತ್ಯಗಳನ್ನು ಪತ್ರಿಕೆಯಲ್ಲಿ ಬರೆಯುವುದು ಸುಲಭದ ವಿಷಯವೇನೂ ಅಲ್ಲ. ದಿನೇಶ್ ಅಂಥದ್ದೊಂದು ಸಾಹಸ ಮಾಡಿದ್ದಾರೆ. ಅವರ ಸಾಹಸ ಕೇವಲ ಮುದ್ರಣ ಮಾಧ್ಯಮಕ್ಕಷ್ಟೇ ಸೀಮಿತವಾಗದೇ ವೆಬ್ ಜಗತ್ತಿಗೂ ವ್ಯಾಪಿಸಿದೆ. ಈ ಉತ್ಸಾಹ ಅವರಲ್ಲಿ ಸದಾ ಉಳಿದಿರಲಿ.

-ಎನ್.ಎ.ಎಂ.ಇಸ್ಮಾಯಿಲ್

Monday, April 6, 2009

ದೇಸೀಮಾತು ಬಿಡುಗಡೆ

ಕಡೆಗೂ ದೇಸೀಮಾತು ಕೃತಿ ಬಿಡುಗಡೆಯಾಗಿದೆ. ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ನನ್ನದೂ ಸೇರಿ ಒಟ್ಟು ಐವರು ಪತ್ರಕರ್ತರ ಪುಸ್ತಕಗಳು ಬಿಡುಗಡೆಯಾದವು.
ಅರ್ಜುನ ದೇವ ಅವರ ``ಸ್ಕೂಪು ತೋಪಾಯಿತು'', ಲಕ್ಷ್ಮಣ ಕೊಡಸೆಯವರ ``ಅಜಲು'', ಗುಡಿಹಳ್ಳಿ ನಾಗರಾಜು ಅವರ ``ರಂಗಸೆಲೆ'', ಪುಟ್ಟಸೋಮಾರಾಧ್ಯ ಅವರ ``ಅಕ್ಕ-ಮೀರಾ'' ಲೋಕಾರ್ಪಣೆಗೊಂಡ ಇನ್ನಿತರ ಕೃತಿಗಳು.
ಕಾರ್ಯಕ್ರಮದಲ್ಲಿ ಲೇಖಕರಲ್ಲದೆ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ, ಚಲನಚಿತ್ರ ನಟ ಶಿವರಾಜ ಕುಮಾರ್, ಸಾಹಿತಿ ಹರಿಹರಪ್ರಿಯ, ಪ್ರೆಸ್ ಕ್ಲಬ್ ಅಧ್ಯಕ್ಷ ಇ.ವಿ.ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ, ಉಪಾಧ್ಯಕ್ಷ ಕೃಷ್ಣಪ್ಪ, ಖಜಾಂಚಿ ಕೆ.ಎಸ್.ಸೋಮಶೇಖರ್, ಗ್ರಂಥಾಲಯ ಇಲಾಖೆ ನಿರ್ದೇಶಕ ಶಿವಾನಂದ ಬಿ.ಹೊಂಡದಕೇರಿ ಮತ್ತಿತರರು ಪಾಲ್ಗೊಂಡಿದ್ದರು.

Monday, March 30, 2009

ಸಾಮಾಜಿಕ ನ್ಯಾಯ ಮತ್ತು ಶಿಕ್ಷಣ

ಸಂವಹನ ಸಂಘಟನೆ ಏರ್ಪಡಿಸಿರುವ ಮೊದಲ ಚಿಂತನಾ ಗೋಷ್ಠಿ ಏ.೫ ರಂದು ಬೆಳಿಗ್ಗೆ ೧೦-೩೦ರಿಂದ ಬೆಂಗಳೂರಿನ ಯವನಿಕ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದೆ.
ಸಾಮಾಜಿಕ ನ್ಯಾಯ ಮತ್ತು ಶಿಕ್ಷಣ ಎಂಬುದು ಗೋಷ್ಠಿಯ ವಿಷಯ. ಗೋಷ್ಠಿಯಲ್ಲಿ ಶಿಕ್ಷಣ ತಜ್ಞರು, ವಿಚಾರವಾದಿಗಳು, ಸಾಹಿತಿಗಳು, ಕಲಾವಿದರು ಪಾಲ್ಗೊಳ್ಳಲಿದ್ದಾರೆ. ನಿಮ್ಮೆಲ್ಲರಿಗೂ ಕಾರ್ಯಕ್ರಮಕ್ಕೆ ಆತ್ಮೀಯ ಸ್ವಾಗತ.


Wednesday, March 25, 2009

`ಇಂದು ಸಂಜೆ' ಮೂರನೇ ವಾರ್ಷಿಕೋತ್ಸವದ ಸಡಗರ, ಸಂಭ್ರಮ

ಇಂದು ಸಂಜೆ ಪತ್ರಿಕೆಯ ಮೂರನೇ ವಾರ್ಷಿಕೋತ್ಸವ ಹಾಗು ಸಮಾಜವಾದಿ ನಾಯಕ ಡಾ.ರಾಮಮನೋಹರ ಲೋಹಿಯಾ ಅವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಬಂದು, ನಮ್ಮನ್ನು ಹರಸಿದ ಎಲ್ಲ ಗಣ್ಯರಿಗೆ ಗೆಳೆಯರಿಗೆ, ಹಿತೈಶಿಗಳಿಗೆ ನನ್ನ ಕೃತಜ್ಞತೆಗಳು. ಕಾರ್ಯಕ್ರಮದ ಕೆಲವು ಚಿತ್ರಗಳು ಇಲ್ಲಿವೆ.
Sunday, March 22, 2009

ಲೋಹಿಯಾ ಮತ್ತೆ ಮತ್ತೆ ನೆನಪಾಗುತ್ತಾರೆ...


ಮೊನ್ನೆ ಮೊನ್ನೆ ತಾನೇ ವರುಣ್ ಗಾಂಧಿ `ಮುಸ್ಲಿಮರ ಕೈಗಳನ್ನು ಕಡಿಯುವ ಮಾತನ್ನಾಡಿದ್ದಾನೆ. ಇದು ವರುಣ್ ಒಬ್ಬನ ಮಾತು ಆಗಿರಲು ಸಾಧ್ಯವೇ ಇಲ್ಲ. ಆತ ಒಂದು ವರ್ಗದ ಜನರ ಹೊಟ್ಟೆಯ ಮಾತನ್ನು ಹೇಳಿದ್ದಾನೆ. ಹೀಗಾಗಿ ವರುಣ್ ಕುರಿತು ಸಹಾನುಭೂತಿಯ ಮಾತುಗಳೂ ಅಲ್ಲಲ್ಲಿ ಕೇಳುಬರುತ್ತಿವೆ ಹಾಗು ಆತನ ಮಾತುಗಳನ್ನು ಎಲ್ಲರೂ ಟೀಕಿಸುವ ಮನಸ್ಸು ಮಾಡುತ್ತಿಲ್ಲ. ಇದು ಭಾರತದ ರಾಜಕಾರಣ ಹಿಡಿದಿರುವ ದುಷ್ಟಮಾರ್ಗದ ಒಂದು ಸ್ಯಾಂಪಲ್ ಅಷ್ಟೆ. ಇಂಥ ಮಾತುಗಳನ್ನು ಈ ಹಿಂದೆಯೂ ಹಲವರು ಆಡಿದ್ದಾರೆ. ಶಿವಸೇನೆಯ ಬಾಳಠಾಕ್ರೆಯಿಂದ ಹಿಡಿದು ಪ್ರವೀಣ್ ತೊಗಾಡಿಯಾವರೆಗೆ ಇಂಥ ಮಾತುಗಳನ್ನು ಆಡಿ ದಕ್ಕಿಸಿಕೊಂಡವರ ಪಟ್ಟಿಯೇ ದೊಡ್ಡದಿದೆ. `ಮನುಸ್ಮೃತಿಯನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಹೇಳುವ ನಮ್ಮವರೇ ಆದ ರಾಮಜೋಯಿಸರ ಮಾತಿನಲ್ಲೂ ಇದೇ ಕ್ರೌರ್ಯವೇ ಒಳಗುಟ್ಟಾಗಿ ಕಾಣಿಸುತ್ತದೆ.

ಡಾ.ರಾಮಮನೋಹರ ಲೋಹಿಯಾ ಅವರು ಸಕಾರಣವಾಗಿ ಪದೇ ಪದೇ ನೆನಪಾಗುತ್ತಾರೆ. ಗಾಂಧೀಜಿಯವರ ನಂತರ ದೇಶದ ರಾಜಕೀಯದಲ್ಲಿ ಒಂದು ಹೊಸ ಆದರ್ಶವನ್ನು ಹುಟ್ಟುಹಾಕಿದವರು ಲೋಹಿಯಾ. ಇವತ್ತಿನ ರಾಜಕಾರಣವು ಧರ್ಮದ ಕುತ್ತಿಗೆಗೆ ನೇಣುಬಿದ್ದಿರುವ ಸಂದರ್ಭದಲ್ಲಿ, ಹಣದ ಥೈಲಿಯಲ್ಲೇ ಉಸಿರುಗಟ್ಟಿರುವ ಸಂದರ್ಭದಲ್ಲಿ, ಜಾಗತೀಕರಣದ ಬಣ್ಣದ ಲೋಕದಲ್ಲಿ ತನ್ನನ್ನು ತಾನು ಮಾರಿಕೊಂಡಿರುವ ಸಂದರ್ಭದಲ್ಲಿ ಲೋಹಿಯಾ ನೆನಪಾಗುತ್ತಾರೆ.

ದೇಶದ ಸಾಮಾನ್ಯ ಜನರು ದಿನಕ್ಕೆ ಮೂರು ಆಣೆಯಷ್ಟು ಖರ್ಚು ಮಾಡುವ ಯೋಗ್ಯತೆ ಇಲ್ಲದಿದ್ದಾಗ ಪ್ರಧಾನ ಮಂತ್ರಿಗೆ ೨೫,೦೦೦ ರೂ. ಖರ್ಚು ಮಾಡುವುದು ಎಷ್ಟು ಸರಿ ಎಂದು ಜಗಳಕ್ಕೆ ನಿಂತವರು ಲೋಹಿಯಾ. ಈ ಲೆಕ್ಕಾಚಾರದಿಂದ ಪ್ರಧಾನಿ ಜವಹರಲಾಲ್ ನೆಹರೂ ಕಂಗೆಟ್ಟರು. ಆದರೆ ಲೋಹಿಯಾ ವಾದ ಎಷ್ಟು ಸಮರ್ಥವಾಗಿತ್ತೆಂದರೆ, ಯೋಜನಾ ಆಯೋಗ ನೀಡಿದ ಲೆಕ್ಕಾಚಾರದ ಪ್ರಕಾರ ಜನರ ತಲಾದಾಯ ೧೫ ಆಣೆ ಎಂಬುದನ್ನು ಸುಳ್ಳು ಎಂದು ನಿರೂಪಿಸಲಾಯಿತು.

ನೆಹರೂ ವಿಷಯದಲ್ಲಿ ಮಾತ್ರ ಲೋಹಿಯಾ ಹೀಗೆ ಮಾತನಾಡಿದ್ದಾರೆ ಎನ್ನುವಂತೆಯೇ ಇಲ್ಲ. ತಮ್ಮ ಅಂತಿಮ ದಿನಗಳಲ್ಲಿ ಅನಾರೋಗ್ಯಪೀಡಿತರಾದಾಗ ಲೋಹಿಯಾ ಗಣ್ಯ ವ್ಯಕ್ತಿಗಳಿಗೆ ಲಭ್ಯವಾಗುವ ಚಿಕಿತ್ಸೆಯನ್ನು ಪಡೆಯಲಿಲ್ಲ. ಸಾಮಾನ್ಯ ವ್ಯಕ್ತಿಯೊಬ್ಬನಿಗೆ ಎಂಥ ಚಿಕಿತ್ಸೆ ಲಭ್ಯವೋ ಅಷ್ಟನ್ನೇ ಪಡೆದರು. ಸರಿಯಾದ ಚಿಕಿತ್ಸೆಯಿಲ್ಲದೆ ಬಹುಬೇಗನೆ ತೀರಿ ಹೋದರು.

ಲೋಹಿಯಾ ಅವರಿಗೆ ಜವಹರಲಾಲ್ ನೆಹರೂ ಆತ್ಮೀಯ ಗೆಳೆಯರಾಗಿದ್ದರು. ಆದರೆ ನೆಹರೂ ಪ್ರಧಾನಿಯಾಗಿದ್ದಾಗ ಅವರ ದೇಶಕಟ್ಟುವ ಪರಿಯನ್ನು ಲೋಹಿಯಾ ಅವರಷ್ಟು ಟೀಕಿಸಿದವರು ಮತ್ತೊಬ್ಬರಿರಲಿಲ್ಲ. ಲೋಹಿಯಾ ನಿಜ ಅರ್ಥದಲ್ಲಿ ನೆಹರೂ ಅವರಿಗೆ ಒಂದು ವಿರೋಧಪಕ್ಷವಾಗಿದ್ದರು. ಹೀಗಾಗಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನುಭವಿಸದಷ್ಟು ಹಿಂಸೆ, ನೋವನ್ನು ಅವರು ಸ್ವಾತಂತ್ರ್ಯೋತ್ತರದಲ್ಲಿ ಅನುಭವಿಸಬೇಕಾಯಿತು.

ಲೋಹಿಯಾ ಪ್ರತಿಪಾದಿಸಿದ್ದು ಸಮಾಜವಾದ. ಅವರಿಗೆ ಬಂಡವಾಳಶಾಹಿ ವ್ಯವಸ್ಥೆ ಹಾಗು ಮಾರ್ಕಿಸಂ ಎರಡೂ ಏಕಕಾಲಕ್ಕೆ ಅಪಥ್ಯವಾಗಿತ್ತು. ಐರೋಪ್ಯ ಸಮುದಾಯ ಏಷಿಯಾ ವಿರುದ್ಧ ಬಳಸುತ್ತಿರುವ ಕಡೆಯ ಅಸ್ತ್ರವೇ ಮಾರ್ಕಿಸಂ ಎಂದು ಅವರು ಭಾವಿಸಿದ್ದರು. ಭಾರತದ ಸಮಾಜದ ಸಂರಚನೆಯು ವರ್ಗದಿಂದಾಗಿಲ್ಲ, ಜಾತಿಯಿಂದಾಗಿದೆ ಎಂದು ಅವರು ನಂಬಿದ್ದರು, ಹಾಗೆಯೇ ಪ್ರತಿಪಾದಿಸಿದ್ದರು. ಭಾರತದ ಪ್ರಗತಿಗೆ ಜಾತಿಯೇ ಬಹುದೊಡ್ಡ ಅಡ್ಡಿ ಎಂದು ಅವರು ಸರಿಯಾಗಿಯೇ ಗುರುತಿಸಿದ್ದರು.

`ಜಾತಿ ಅವಕಾಶಗಳನ್ನು ಮಿತಿಗೊಳಿಸುತ್ತದೆ. ಅವಕಾಶಗಳ ಮಿತಿಯು ವ್ಯಕ್ತಿಯ ಸಾಮರ್ಥ್ಯವನ್ನು ಹಾಳುಗೆಡವುತ್ತದೆ. ಸಾಮರ್ಥ್ಯದ ಕೊರತೆಯು ಮತ್ತೆ ಅವಕಾಶಗಳನ್ನು ಇಲ್ಲವಾಗಿಸುತ್ತದೆ ಎಂದ ಲೋಹಿಯಾ `ರೋಟಿ ಮತ್ತು ಬೇಟಿ ಎಂಬ ಘೋಷಣೆಯನ್ನು ಹೊರಡಿಸಿದ್ದರು. ರೋಟಿ ಎಂದರೆ ಎಲ್ಲ ಜಾತಿಯವರು ಒಟ್ಟಿಗೆ ಕುಳಿತು ಊಟ ಮಾಡುವಂಥ ವ್ಯವಸ್ಥೆ ನಿರ್ಮಾಣವಾಗುವುದು ಹಾಗು ಬೇಟಿ ಎಂದರೆ ಎಲ್ಲ ಜಾತಿಯವರು ಪರಸ್ಪರ ವೈವಾಹಿಕ ಸಂಬಂಧಗಳನ್ನು ಬೆಳೆಸುವುದು.

ದೇಶದ ನಾಗರಿಕರು ತಮ್ಮನ್ನು ತಾವು ಭಾರತೀಯರು ಎಂದು ಗುರುತಿಸಿಕೊಳ್ಳುವುದಕ್ಕಿಂತ ಹೆಚ್ಚು ಇಂಥ ಜಾತಿಯವರು ಎಂದು ಗುರುತಿಸಿಕೊಳ್ಳಲು ಇಷ್ಟ ಪಡುತ್ತಾರೆ ಎಂಬುದನ್ನು ಲೋಹಿಯಾ ಗಮನಿಸಿದ್ದರು. ಜಾತಿಯ ಕೊಳಕನ್ನು ನಿವಾರಿಸುವ ಉದ್ದೇಶದಿಂದಲೇ ಲೋಹಿಯಾ ತಮ್ಮ ಸೋಷಿಯಲಿಸ್ಟ್ ಪಕ್ಷದಲ್ಲಿ ಕೆಳ ಜಾತಿಗಳ ನಾಯಕರಿಗೆ ಅವಕಾಶ ನೀಡಿದ್ದರು. ತಮ್ಮ ಪಕ್ಷದಿಂದ ಸ್ಪರ್ಧಿಸಲು ಈ ಸಮುದಾಯಗಳ ಅಭ್ಯರ್ಥಿಗಳಿಗೇ ಹೆಚ್ಚು ಟಿಕೆಟ್ ನೀಡಿದ್ದರು. ದೇಶವನ್ನು ಪ್ರಬಲವಾಗಿ ಕಟ್ಟಬೇಕೆಂದರೆ ಈ ಕಟ್ಟುವ ಕಾರ್ಯದಲ್ಲಿ ಎಲ್ಲ ಜಾತಿಯ ಜನರೂ ಭಾಗವಹಿಸಬೇಕು ಎಂದು ಅವರು ಬಲವಾಗಿ ನಂಬಿದ್ದರು.

ಲೋಹಿಯಾ ಇಂಗ್ಲಿಷ್ ಬಳಕೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಹಿಂದಿ ಭಾಷಿಕ ಪ್ರದೇಶಗಳಲ್ಲಿ ಹಿಂದಿ ಹಾಗು ಇತರ ಭಾಷೆಗಳು ಆಡುಮಾತಿರುವ ಪ್ರದೇಶಗಳಲ್ಲಿ ಅದೇ ಭಾಷೆಗಳನ್ನು ಬೆಳೆಸಬೇಕು ಎಂದು ಅವರು ಹೇಳುತ್ತಿದ್ದರು. ಇಂಗ್ಲಿಷ್‌ನಿಂದಾಗಿ ಶಿಕ್ಷಿತರು ಹಾಗು ನಿರಕ್ಷರಿಗಳ ನಡುವೆ ಕಂದರ ಉಂಟಾಗುತ್ತದೆ. ಇದು ಮೇಲರಿಮೆ, ಕೀಳರಿಮೆಗಳಿಗೆ ದಾರಿ ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಭಾಷೆಗಳನ್ನೇ ಬೆಳಸಬೇಕು, ಬಳಸಬೇಕು ಎಂದು ಲೋಹಿಯಾ ಅಭಿಪ್ರಾಯಪಡುತ್ತಿದ್ದರು.

ದೇಶ ಕಟ್ಟುವ ನೆಹರೂ ಮಾದರಿಯನ್ನು ಲೋಹಿಯಾ ಪ್ರಬಲವಾಗಿ ವಿರೋಧಿಸುತ್ತಿದ್ದರು. ದೇಶಕಟ್ಟುವ ಕೆಲಸದಲ್ಲಿ ಜನಸಾಮಾನ್ಯರೂ ಪಾಲ್ಗೊಳ್ಳುವಂತಾಗಬೇಕು ಎಂದು ಅವರು ಭಾವಿಸಿದ್ದರು. ತಮ್ಮ ನೆರೆಯ ರಸ್ತೆ, ಬಾವಿ, ಕಾಲುವೆಗಳನ್ನು ನಿರ್ಮಿಸುವ ಕೆಲಸಗಳಲ್ಲಿ ಜನರೇ ತೊಡಗಿಕೊಳ್ಳುವಂತಾಗಬೇಕು ಎಂದು ಅವರು ಹೇಳುತ್ತಿದ್ದರು. ತಮ್ಮ ಈ ಆಲೋಚನೆಯನ್ನು ಅವರು ಕ್ರಿಯೆಗೂ ಇಳಿಸಿ ಪನಿಯಾರಿ ಎಂಬ ನದಿಗೆ ಅಣೆಕಟ್ಟು ಕೆಲಸವನ್ನು ಜನರೊಂದಿಗೆ ಪ್ರಾರಂಭಿಸಿದರು. ಅಣೆಕಟ್ಟು ಇವತ್ತಿಗೂ ಲೋಹಿಯಾ ಸಾಗರ್ ಡ್ಯಾಮ್ ಎಂದೇ ಹೆಸರಾಗಿದೆ. ಕ್ರಿಯಾತ್ಮಕ ಚಟುವಟಿಕೆಗಳಿಲ್ಲ ಸತ್ಯಾಗ್ರಹ, ಕ್ರಿಯಾಪದವಿಲ್ಲದ ವಾಕ್ಯದಂತೆ ಎಂದು ಲೋಹಿಯಾ ಈ ಹಿನ್ನೆಲೆಯಲ್ಲೇ ಹೇಳಿದ್ದರು.

ಲೋಹಿಯಾ ತಾವು ಬದುಕಿದ್ದ ಕಾಲಘಟ್ಟದ ಎಲ್ಲ ಸಮಸ್ಯೆಗಳನ್ನೂ ಎದುರಿಸಿದ್ದರು, ಅವುಗಳಿಗೆ ಸಮಾಜವಾದಿ ನೆಲೆಯಲ್ಲಿ ಉತ್ತರ ಕಂಡುಕೊಳ್ಳಲು ಯತ್ನಿಸಿದ್ದರು. ಆಶ್ಚರ್ಯವೆಂದರೆ ಅವರು ಗತಿಸಿ ೪೨ ವರ್ಷಗಳು ಕಳೆಯುತ್ತ ಬಂದರೂ ಇವತ್ತಿನ ಎಲ್ಲ ಸಮಸ್ಯೆಗಳಿಗೂ ಲೋಹಿಯಾ ಅವರ ಮಾತುಗಳಲ್ಲಿ ಉತ್ತರವಿದೆ.

ಜಾಗತಿಕ ಸಮುದಾಯ ಆರ್ಥಿಕ ಹಿಂಜರಿತದ ಸಂಕಷ್ಟದಲ್ಲಿ ಮುಳುಗಿರುವಾಗ, ಭಾರತದ ರಾಜಕಾರಣ ಧರ್ಮ-ಜಾತಿಯ ನೆಲೆಯಲ್ಲಿ ಛಿದ್ರಗೊಂಡಿರುವಾಗ ಲೋಹಿಯಾ ಅವರಲ್ಲಿ ಉತ್ತರ ಹುಡುಕಿಕೊಳ್ಳುವ ಪ್ರಯತ್ನಗಳಾದರೂ ಆಗಬಾರದೆ ಎಂಬ ಆಶೆ ಲೋಹಿಯಾವಾದಿಗಳದ್ದು. ಆದರೆ ಲೋಹಿಯಾವಾದಿಗಳೇ ಅಧಿಕಾರ ರಾಜಕಾರಣದ ಬೆನ್ನು ಬಿದ್ದು ಭ್ರಷ್ಟರಾಗಿರುವ, ಕೋಮುವಾದಿಗಳ ತೆಕ್ಕೆಗೆ ಸರಿದಿರುವ ಈ ಕಾಲದಲ್ಲಿ ಹೊಸ ಪೀಳಿಗೆಯೇ `ಸಮಾಜವಾದದ ಕನಸುಗಳನ್ನು ನನಸಾಗಿಸಬಲ್ಲದೇನೋ?

ಮಾರ್ಚ್ ೨೩ ಲೋಹಿಯಾ ಜನ್ಮದಿನ. ಇಡೀ ಜಗತ್ತೇ ಸಂಕಟದಲ್ಲಿ ಮುಳುಗಿರುವಾಗ ಲೋಹಿಯಾ ಸಕಾರಣವಾಗಿ ನೆನಪಾಗುತ್ತಾರೆ. ಎಲ್ಲ ಪ್ರಶ್ನೆಗಳಿಗೆ ಲೋಹಿಯಾ ಉತ್ತರವಾಗಬಲ್ಲರಾದರೂ ಆ ಉತ್ತರಗಳಾದರೂ ಯಾರಿಗೆ ಬೇಕಿದೆ?

ಮುಸ್ಲಿಮರ ವಿರುದ್ಧವೋ, ಕ್ರಿಶ್ಚಿಯನ್ನರ ವಿರುದ್ಧವೋ ದ್ವೇಷಕಾರುವ ಒಂದು ಭಾಷಣ ಮಾಡಿ ರಾತ್ರೋರಾತ್ರಿ ಒಬ್ಬ ರಾಜಕಾರಣಿ ಸೃಷ್ಟಿಯಾಗುವ ಈ ಕಾಲದಲ್ಲಿ ಲೋಹಿಯಾ ಕಾಣಿಸಿದ ಬೆಳಕಿನ ದಾರಿ ಯಾರಿಗೆ ಬೇಕಾಗಿದೆ?

Wednesday, March 11, 2009

ಸಮಾನತೆಯ ಬೆಳಕಿಗಾಗಿ ಹಂಬಲಿಸುತ್ತ...

ಮಠಾಧೀಶರು ಸಮಾಜದ ಶತ್ರುಗಳೇ? ಎಂಬ ನನ್ನ ಲೇಖನಕ್ಕೆ ಅಮೆರಿಕದ ರವಿಕೃಷ್ಣಾರೆಡ್ಡಿಯವರು ಪ್ರತಿಕ್ರಿಯಿಸಿ ಶಿಕ್ಷಣದ ರಾಷ್ಟ್ರೀಕರಣ ಕುರಿತಂತೆ ವಿಚಾರ ಸಂಕಿರಣ ಏರ್ಪಡಿಸಲು ಸಾಧ್ಯವೇ, ನೋಡಿ ಎಂದು ಸೂಚಿಸಿದ್ದರು. ಈ ಬಗ್ಗೆ ಗೆಳೆಯರ ಜತೆ ಮಾತನಾಡಿದೆ. ಅವರೂ ಆಸಕ್ತಿ ತೋರಿಸಿದರು.

ಏ.೫ರಂದು `ಸಾಮಾಜಿಕ ನ್ಯಾಯ ಮತ್ತು ಶಿಕ್ಷಣ ಎಂಬ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ವಿಚಾರಸಂಕಿರಣ ಆಯೋಜಿಸಿದ್ದೇವೆ. ಇದು ಇಡೀ ಒಂದು ದಿನದ ಕಾರ್ಯಕ್ರಮ. ಶಿಕ್ಷಣ ತಜ್ಞರು, ಗಣ್ಯರು, ಸಾಹಿತಿಗಳು ಈ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.ಕಾರ್ಯಕ್ರಮವನ್ನು ಸಂಯೋಜಿಸುತ್ತಿರುವುದು `ಸಂವಹನ ಸಂಘಟನೆ. ಬಹುತೇಕ ಮೀಡಿಯಾ ಮಿತ್ರರೇ ತಮ್ಮೊಳಗಿನ ಸಂವಹನಕ್ಕಾಗಿ ಆರಂಭಿಸಿದ ಸಂಘಟನೆ ಇದು. ಸಂಘಟನೆಯಲ್ಲಿ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಇತ್ಯಾದಿ ಸಾಂಪ್ರದಾಯಿಕ ಹುದ್ದೆಗಳು ಇರುವುದಿಲ್ಲ. ಇದರಲ್ಲಿ ತೊಡಗಿಸಿಕೊಂಡವರ ಐಡೆಂಟಿಟಿಗಳೂ ಅನಗತ್ಯ ಎಂದೇ ಭಾವಿಸಿದ್ದೇವೆ.

ಸಂವಹನದ ಚಟುವಟಿಕೆಗಳಿಗೆ ಸಂಬಂಧಿಸಿದ ಎಲ್ಲ ವಿವರಗಳು ಸಂವಹನ ಬ್ಲಾಗ್‌ನಲ್ಲಿ ಲಭ್ಯ. ನಾವು ಎತ್ತಿಕೊಂಡಿರುವ ವಿಷಯದ ಕುರಿತೂ ಇಲ್ಲಿ ಚರ್ಚೆ ನಡೆಯುತ್ತದೆ. ಆಸಕ್ತರು ಇದರಲ್ಲಿ ಪಾಲ್ಗೊಳ್ಳಬಹುದು. `ಸಂವಹನದಲ್ಲಿ ತೊಡಗಿಕೊಳ್ಳಬಯಸುವವರಿಗೂ ಸ್ವಾಗತ. ಸಮಾನತೆ ಹಾಗು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಎಲ್ಲರೂ ನಮ್ಮೊಂದಿಗೆ ಕೈಜೋಡಿಸಬಹುದು. ಇದಕ್ಕಾಗಿ samvahanablr@gmail.com ಸಂಪರ್ಕಿಸಬಹುದು.

Friday, March 6, 2009

ಮಠಗಳೇ, ಮಠಗಳಿಂದ, ಮಠಗಳಿಗಾಗಿ...

ಮಠಾಧೀಶರ ಕುರಿತಾದ ಚರ್ಚೆ ಅವಧಿಯಲ್ಲಿ ಮುಂದುವರೆದಿದೆ. ಈ ನಡುವೆ ಮೈಸೂರಿನ ಗೆಳೆಯ ಹೆಗ್ಗೆರೆ ರೇಣುಕಾರಾಧ್ಯ ತಮ್ಮ ಮೈಸೂರ್ ಮೇಲ್‌ನಲ್ಲಿ ಈ ಚರ್ಚೆಯನ್ನು ಮುಂದುವರೆಸಿದ್ದಾರೆ. ಬಜೆಟ್‌ನಲ್ಲಿ ಈ ಬಾರಿಯೂ ಮಠ ಮಾನ್ಯಗಳಿಗೆ ಹಣ ಸುರಿದಿರುವುದನ್ನು ಅವರು ತೀಕ್ಷ್ಣವಾಗಿ ವಿಶ್ಲೇಷಿಸಿದ್ದಾರೆ. ಓವರ್ ಟು ರೇಣುಕಾರಾಧ್ಯ...

***

ನಮ್ಮ ಪವಿತ್ರ ಸಂವಿಧಾನದಲ್ಲಿ ಉಲ್ಲೇಖಿಸಿರುವ ಸರಕಾರದ ಕರ್ತವ್ಯಗಳನ್ನು ಮಠ ಮಾನ್ಯಗಳ ಪದತಲದಲ್ಲಿ ಅಡವಿಟ್ಟು ಉದ್ದುದ್ದ ಮಲಗಿ ಪ್ರಜಾತಂತ್ರ ಎಂದರೆ, ಮಠಗಳಿಂದ, ಮಠಗಳಿಗಾಗಿ, ಮಠಗಳಿಗೋಸ್ಕರ ಎಂಬ ನೂತನ ಘೋಷಣೆ ಮಾಡುವುದನ್ನು ರಾಜ್ಯದ ಬಿಜೆಪಿ ಸರಕಾರ ಬಾಕಿ ಉಳಿಸಿಕೊಂಡಿದೆ.ಇನ್ನಾರು ತಿಂಗಳಲ್ಲಿ ಅದು ಆಗಬಹುದು ಯಾರಿಗೆ ಗೊತ್ತು?

ಈ ಕೆಳಗಿನ ಎರಡು ಘಟನೆಗಳನ್ನು ಓದಿ.

ನಿಮ್ಮ ೧೨ ವರ್ಷದ ಹುಡುಗನೊಬ್ಬ ತನ್ನದೇ ಊರಿನ ದಲಿತರ ಕೇರಿಯ ೬೦ ವರ್ಷದ ವ್ಯಕ್ತಿಯೊಬ್ಬನನ್ನು ಲೋ ಮಾರ, ಲೋ ಸಿದ್ಧ ಎಂದು ಏಕವಚನದಲ್ಲಿ ಅತ್ಯಂತ ವ್ಯಂಗ್ಯವಾಗಿ ಮಾತನಾಡಿಸುತ್ತಾನೆ. ಆದರೆ, ಆ ಹಿರಿಯ ವ್ಯಕ್ತಿಯನ್ನು ಹಾಗೆ ಏಕವಚನದಲ್ಲಿ ಸಂಬೋಧಿಸಬಾರದು ಎಂದು ನೀವು ಎಲ್ಲೂ ನಿಮ್ಮ ಮಕ್ಕಳಿಗೆ ಹೇಳಿ ಕೊಡಲಿಲ್ಲ. ಅದನ್ನೇ ಈ ನಾಡಿನ ಸವರ್ಣೀಯರು ಸಂಸ್ಕಾರವೆಂಬಂತೆ ನಡೆದುಕೊಂಡು ಬಂದರು. ನಿಮ್ಮ ಎದೆ ಮುಟ್ಟಿಕೊಂಡು ಹೇಳಿ, ಲೋ ಮಾರ, ಲೋ ಸಿದ್ಧ, ಲೋ ಕೆಂಚ ಎಂದು ಆ ದಲಿತ ವರ್ಗದ ಹಿರೀಕರನ್ನು ಕರೆವ ನಿಮ್ಮ ಮಕ್ಕಳಿಗೆ ಅದು ತಪ್ಪು ಎಂದು ಎಂದಾದರೂ ಹೇಳಿಕೊಟ್ಟಿದ್ದೀರಾ..? ಎಲ್ಲ ಜಾತಿಯವರನ್ನು ಒಳಗೊಂಡ ಅನುಭವ ಮಂಟಪ ಕಟ್ಟಿದ ಆ ಬಸವಣ್ಣ ಎದುರಿಗೆ ಬಂದವರು ಯಾರೇ ಆದರೂ, ಶರಣು ಎಂದರೆ, ಶರಣು ಶರಣಾರ್ಥಿ ಎಂದು ಎರಡು ಬಾರಿ ಹೇಳುತ್ತಿದ್ದರಂತೆ. ಅಂತಹ ಬಸವಣ್ಣನವರ ಲಿಂಗಾಯಿತ ಧರ್ಮವನ್ನು ನೀವು ಜಾತಿ ಎಂಬ ಪಟ್ಟ ಕಟ್ಟಿ ಕರ್ನಾಟಕದೊಳಕ್ಕೆ ಕಟ್ಟಿ ಹಾಕಿದಿರಿ. ಲಿಂಗಾಯಿತ ಅಥವಾ ವೀರಶೈವ ಎನ್ನುವುದನ್ನು ಎಂದೂ ಧರ್ಮವನ್ನಾಗಿಸಲು ನೀವು ಬಿಡಲೇ ಇಲ್ಲ. ಹಾಗೊಂದು ಪಕ್ಷ ಬಸವಣ್ಣನ ನಡೆಗಳು ನಿಮ್ಮ ಎದೆಯೊಳಗೆ ಮೂಡಿದ್ದರೇ ಅದು ಇವತ್ತು ವಿಶ್ವಧರ್ಮವಾಗಿರುತ್ತಿತ್ತು

೧೯೯೬ರಲ್ಲಿ ನಂಜನಗೂಡಿನ ಸಮಾರಂಭವೊಂದರಲ್ಲಿ ಸಂವೇದನಾಶೀಲ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್ ಹೇಳಿದ ಮಾತುಗಳಿವು. ಬಹುಶಃ ಅವತ್ತಿನ ಸಮಾರಂಭದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಮಂದಿ ನೆರೆದಿದ್ದರು. ಅದರಲ್ಲಿ ಸವರ್ಣೀಯರೇ ಹೆಚ್ಚಿದ್ದರು. ಎಲ್ಲದಕ್ಕಿಂತ ಮುಖ್ಯವಾಗಿ ಕರಾಳ ನೆನಪು ಎನಿಸಿದ ಬದನವಾಳು ಘಟನೆ ನಡೆದು ಮೂರು ವರ್ಷ ಕಳೆದಿತ್ತು. ಹಗೆಯ ಹಸಿ ಹಸಿ ವಾಸನೆ ಅಲ್ಲಲ್ಲಿ ಉಳಿದಿತ್ತು. ಅಂತಹ ಸಂದರ್ಭದಲ್ಲಿ ಶ್ರೀನಿವಾಸ್ ಪ್ರಸಾದ್ ಬಸವಣ್ಣನವರ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಲೇ ದಲಿತರನ್ನು ಕಡೆಗಣನೆಯಿಂದ ನೋಡುವವರ ಆತ್ಮಭಿಮಾನವನ್ನು ಪ್ರಶ್ನೆ ಮಾಡುತ್ತಾ ಹೋದರು. ಅದು ಇಂದಿಗೂ ನೆನಪಿನಲ್ಲಿ ಉಳಿಯುವ ಭಾಷಣ.

***

ಮೈಸೂರಿನ ಪ್ರಸಿದ್ಧ ಮಠವೊಂದಕ್ಕೆ ಹೋದಾಗ ಅಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ಮಂದಿ ಸ್ವಾಮಿಗಳನ್ನು ನೋಡಲು ಕಾಯುತ್ತಿದ್ದಾರೆ. ಮಠದ ಸಹಾಯಕರು ಒಬ್ಬೊಬ್ಬರಂತೆ ಎಲ್ಲರನ್ನು ಒಳಬಿಡುತ್ತಿದ್ದಾರೆ. ಇದು ಮಧ್ಯಾಹ್ನ ಮೂರು ಗಂಟೆಯವರೆಗೆ ನಡೆಯುತ್ತಲೇ ಇತ್ತು. ಹಾಗೆ ಜನರು ಸ್ವಾಮಿಗಳನ್ನು ನೋಡಲು ಬರುತ್ತಲೇ ಇದ್ದರು. ಬಂದವರಲ್ಲಿ ಕೆಲವರು ಅವರ ಮಕ್ಕಳಿಗೆ ಮಠದ ಶಾಲೆಯಲ್ಲಿ ಸೀಟು ಕೊಡಿಸಲು, ಕೆಲಸ ಕೇಳಲು ಬಂದಿದ್ದರು. ಅವರವರ ಭಕುತಿಗೆ ತಕ್ಕಂತೆ ಸ್ವಾಮೀಜಿಗಳಿಂದ ಆಶೀರ್ವಾದವು ದೊರೆಯುತ್ತಿತ್ತು. ಇದನ್ನು ನೋಡಿದಾಗ, ಸರಕಾರದ ಆಡಳಿತ ಯಂತ್ರವೊಂದು ಮಾಡಬೇಕಾದ ಕೆಲಸವನ್ನು ಸ್ವಾಮೀಜಿಯವರ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸದೆ ಇರಲಾರದು. ಆದರೆ, ಅಲ್ಲಿ ಆಗಿರುವುದೇನು ಎಂಬುದನ್ನು ಹುಡುಕುತ್ತಾ ಹೋದರೆ, ಬಹುಶಃ ಅದು ಈ ನಾಡಿನ ಪ್ರಜಾತಂತ್ರ ವ್ಯವಸ್ಥೆಗೆ ಬಂದಿರುವ ಗಂಡಾಂತಾರ ಎನ್ನುವುದು ನೀವು ಸೂಕ್ಷ್ಮ ಮತಿಗಳಾಗಿದ್ದರೆ ತಿಳಿದು ಹೋಗುತ್ತದೆ.

***

ಮೇಲಿನ ಎರಡು ವಿಚಾರಗಳು ಬೇರೆ ಬೇರೆಯಾಗಿದ್ದರೂ, ಸಾರಾಂಶ ಒಂದೇ. ಎಲ್ಲರಿಗೂ ಶಿಕ್ಷಣ, ಆರೋಗ್ಯ, ವಸತಿ ಮತ್ತು ಬದುಕಲು ಆಹಾರ ನೀಡಬೇಕೆಂಬುದು ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಆಶಯಗಳಲ್ಲಿ ಪ್ರಮುಖ. ಆದರೆ, ಶಿಕ್ಷಣ ಮತ್ತು ಆರೋಗ್ಯ ಮಠ ಮಾನ್ಯಗಳು ಮತ್ತು ಹಣವಂತರ ಕೈಗೆ ಸಿಲುಕಿ ಹೋಗಿದೆ. ಈ ನಾಡಿನ ದಲಿತನೊಬ್ಬ ಸುಲಭವಾಗಿ ಶಿಕ್ಷಣ ಪಡೆಯಲು ಇನ್ನೂ ಸಾಧ್ಯವಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಅಂತಹದರಲ್ಲಿ ಎಲ್ಲ ಜಾತಿ ಜನಾಂಗದ ಪ್ರಜೆಗಳಿಂದ ಆರಿಸಿದ ಹೋದ ನೀವು ಸಮಾನತೆಯ ತತ್ವ ಬೋಧಿಸುವ ಸಂವಿಧಾನದ ನೀತಿ ನಿಯಮಾವಳಿಗಳನ್ನು ಹೇಗೆ ಪಾಲಿಸುತ್ತಿದ್ದೀರಿ? ಆಯವ್ಯಯದಲ್ಲಿ ಮಠ ಮಾನ್ಯಗಳೇ ತಮ್ಮ ಆಯ್ಕೆಗೆ ಕಾರಣ ಎಂಬಂತೆ ಮುಖ್ಯಮಂತ್ರಿ ಯಡಿಯೂರಪ್ಪ ತೆರಿಗೆ ಹಣವನ್ನು ಪುಕ್ಕಟ್ಟೆ ಹಂಚಿದ್ದಾರೆ. ಹಾಗಾದರೆ, ಮತದಾರ ಮಹಾಪ್ರಭು ಎಂಬ ಮಾತು ಈ ರಾಜಕಾರಣಿಗಳಿಗೆ ಇಷ್ಟು ಬೇಗ ಮರೆತು ಹೋಯಿತೇ? ಅಥವಾ ಮರೆಗುಳಿಗಳು ಮಾತ್ರ ರಾಜಕಾರಣಿಗಳಾಗಲು ಸಾಧ್ಯವೇ?

***

ಮಠಗಳ ಬಗ್ಗೆ ಹಿರಿಯ ಸಾಹಿತಿ ಡಾ.ಎಲ್.ಬಸವರಾಜು ಅವರು ಆಡಿದ ಮಾತುಗಳು ಎಷ್ಟು ಪ್ರಸ್ತುತವಾಗಿದೆ ಎಂಬುದು ಈ ಬಾರಿ ಆಯವ್ಯಯವನ್ನು ನೋಡಿದರೆ ತಿಳಿದು ಹೋಗುತ್ತದೆ. ಯಡಿಯೂರಪ್ಪ ಅದರಲ್ಲಿಯೂ ಜಾಣರು, ತಾವು ಯಾವ ಜಾತಿ ಜನಾಂಗವನ್ನು ಎದುರು ಹಾಕಿಕೊಳ್ಳದೆ ಎಲ್ಲರಿಗೂ ಹಣವನ್ನು ಕೋಟಿಗಳ ಲೆಕ್ಕದಲ್ಲಿ ಹಂಚಿದ್ದಾರೆ. ಮಠಗಳು ತೃಪ್ತಿಯಾದರೆ, ಇಡಿ ನಾಡಿನ ಜನತೆ ತೃಪ್ತರಾದಂತೆ ಎಂಬುದು ಅವರ ಸಾದಾ ಲೆಕ್ಕಾಚಾರ. ಆದರೆ, ಅವರಿಗೆ ತಿಳಿಯದೇ ಇರುವ ಒಂದು ಸತ್ಯವೆಂದರೆ ಹೀಗೆ ಹಣ ಪಡೆಯುವ ಮಠಗಳ್ಯಾವುವೂ ನಾಡಿನ ಜನತೆಗೆ ಪುಕ್ಕಟ್ಟೆಯಾಗಿ ಸೇವೆ ಮಾಡುವುದಿಲ್ಲ. ಅಥವಾ ಜನಸೇವೆ ಎಂಬುದನ್ನು ಎಂದೋ ಮರೆತು ಹೋಗಿವೆ. ಅಷ್ಟಕ್ಕೂ ಮಠಗಳ ಹಾಗೂ ಹಣವಂತರ ಸುರ್ಪದಿಯಲ್ಲಿಯೇ ಮೆಡಿಕಲ್ ಕಾಲೇಜುಗಳು, ಎಂಜನಿಯರಿಂಗ್ ಕಾಲೇಜುಗಳು ಇರಬೇಕು ಯಾಕೆ? ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಸರಕಾರದ ಕರ್ತವ್ಯಗಳಾದರೂ ಏನು? ಈ ಪ್ರಶ್ನೆ ಕೇಳುವ ಧ್ವನಿಯನ್ನು ನಮ್ಮ ನಾಡಿನ ಚಳವಳಿಗಳು ಕಳೆದುಕೊಂಡಿವೆ ಅಥವಾ ಚದುರಿ ಹೋಗಿವೆ..!

***

ಎಲ್ಲವನ್ನು ಸರಕಾರವೇ ಮಾಡಲು ಸಾಧ್ಯವಿಲ್ಲ, ಈ ಮಠ ಮಾನ್ಯಗಳು ಇರುವುದರಿಂದಲೇ ನಾವಿಷ್ಟು ಸುಭಿಕ್ಷವಾಗಿದ್ದೇವೆ. ಹೀಗೆಂದು ಭಾಷಣ ಬಿಗಿಯುತ್ತಲೇ ದುಂಡಗಾಗುವ ರಾಜಕಾರಣಿಗಳು ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕುವ ಕೆಲಸವನ್ನು ಮಾಡುತ್ತಿದ್ದಾರೆ. ಅದನ್ನು ಬಿಜೆಪಿ ಇನ್ನಷ್ಟು ಪ್ರಭಾವಶಾಲಿಯಾಗಿ ತೋರಿಸುತ್ತಿದೆಯಷ್ಟೇ. ವಿಷಾದವೆಂದರೆ ಕರ್ನಾಟಕದಲ್ಲಿ ಜಾತಿಯ ಮಠಗಳು ಶ್ರೀಮಂತ. ಆ ಜಾತಿಯ ಜನರು ಮಾತ್ರ ಬಡವರು. ವಿಷಯವನ್ನು ಇನ್ನೂ ನೇರವಾಗಿ ಹೇಳುವುದಾದರೆ, ನಾಡನ್ನು ಆಳುತ್ತಿರುವುದು ಪ್ರಬಲ ಜಾತಿಯ ಮಠಗಳು, ನಮ್ಮದು ಪ್ರಜಾತಂತ್ರ ವ್ಯವಸ್ಥೆಯ ಸರಕಾರವಲ್ಲ. ಇದು ನಿಜವಾದ ವೈರುಧ್ಯ.

***

ಬಸವಣ್ಣನವರು ಅನುಭವ ಮಂಟಪ ಕಟ್ಟಿದಾಗ ಅಲ್ಲಿ ಜಾತಿಯ ಗೌಜುಗಳಿರಲಿಲ್ಲ, ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ ಹೀಗೆ ಎಲ್ಲರು ಶರಣರಾಗಿದ್ದರು. ಆದರೆ, ಆ ಶರಣ ಎಂಬ ಸಂಸ್ಕೃತಿ ಒಂದೊಂದು ಮಠದ ವ್ಯಾಪ್ತಿಗೆ ಸೀಮಿತವಾಗಿ ಸರಕಾರವನ್ನು ಶರಣು ಮಾಡಿಸಿಕೊಂಡಿದೆ. ಲಿಂಗಾಯಿತರು ಎಂಬ ಕಾರಣಕ್ಕಾಗಿ ಯಡಿಯೂರಪ್ಪನವರ ಆಪ್ತ ವ್ಯಾಪ್ತಿಯ ಅಧಿಕಾರಿಗಳೆಲ್ಲಾ ಅದೇ ಜಾತಿಯವರಾಗಿರುತ್ತಾರೆ. ದೇಶಪ್ರೇಮ ಹೇಳುವ ಬಿಜೆಪಿಯವರು ಜಾತಿ ಮೀರಿದ ರಾಜಕಾರಣವನ್ನು ಮಾಡಿ ತೋರಿಸಬಹುದಿತ್ತು. ಅದಕ್ಕೊಂದು ಸದಾವಕಾಶವೂ ಇತ್ತು. ಆದರೆ, ಅವರೂ ಮಾಡಿದ್ದು ಕಾಂಗ್ರೆಸ್ ಹಾಗೂ ಜನತಾದಳಗಳ ಕೆಲಸವನ್ನೆ.

ಈ ಹಿಂದೆ ಕಾಂಗ್ರೆಸ್ ಹಾಗೂ ದಳ ಮಠ ಮಾನ್ಯಗಳನ್ನು ಹಚ್ಚಿಕೊಂಡಿದ್ದವಾದರೂ, ನೆಚ್ಚಿಕೊಂಡಿರಲಿಲ್ಲ. ಹೀಗೆ ಮನಸೋ ಇಚ್ಛೆ ಬೊಕ್ಕಸದ ಹಣವನ್ನು ಧಾರೆಯೆರದಿರಲಿಲ್ಲ. ಯಡಿಯೂರಪ್ಪನವರು ಮುಂದಿನ ದಿನಗಳಲ್ಲಿ ಮಠ, ಮಂದಿರಗಳನ್ನು ಇನ್ನಷ್ಟು ಉದ್ಧಾರ ಮಾಡುವ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಅದು ಅವರ ಲೋಕಸಭೆ ಎಲೆಕ್ಷನ್ ಲೆಕ್ಕಾಚಾರ ಆಗಿರಬಹುದು. ಆದರೆ, ಮುಂದೊಂದು ದಿನ ಇದೇ ಮಠಗಳ ಯಜಮಾನರು ಪಾಳೆಗಾರರಂತೆ ನಾಡನ್ನು ಆಳುವಾಗ ಪರಿತಪಿಸುವ ಜನ ಶಪಿಸುವುದು ರಾಜಕಾರಣಿಗಳನ್ನೆ ಎಂಬುದನ್ನು ಅವರು ಮರೆತಂತಿದೆ.

***

ಮೇಲ್ವರ್ಗದ ಮಠವೊಂದರ ಶಿಕ್ಷಣ ಸಂಸ್ಥೆಯಲ್ಲಿ ದಲಿತನೊಬ್ಬ ಅತ್ಯಂತ ಸುಲಭವಾಗಿ ಕೆಲಸ ಪಡೆಯಲು ಸಾಧ್ಯವೇ? ಅಂತಹ ಸಾಧ್ಯತೆಗಳು ಶೇ ೨ ರಷ್ಟ್ಟೂ ಇರಲಾರದು. ಹಾಗೆಂದು ಸರಕಾರಿ ಕೆಲಸಕ್ಕೆ ಪ್ರಯತ್ನ ಮಾಡಲು ಹೊರಟರೆ, ಕೆಪಿಎಸ್‌ಸಿ ಎಂಬ ಕಿತ್ತುತಿನ್ನುವ ನರರಾಕ್ಷಸ ಸೌಧದಲ್ಲಿ ಗರಿಗರಿಯ ನೋಟುಗಳನ್ನು ಎಣಿಸಿಕೊಳ್ಳಲು ಹರಿವಾಣ ಮುಂದಿಟ್ಟು ಕುಳಿತುಕೊಂಡಿದೆ ವ್ಯವಸ್ಥೆ. ಶಿಕ್ಷಣ ಸಂಸ್ಥೆಗಳನ್ನೆಲ್ಲಾ ಸರಕಾರ ಹೀಗೆ ಮಠಗಳಿಗೆ ಧಾರೆಯೆರೆದಿರುವಾಗ ಆದೇ ದಲಿತ ತನ್ನ ಹೊಟ್ಟೆಗಾಗಿ ಸನಾತನ ಧರ್ಮಕ್ಕೆ ತಲೆಬಾಗಲೇಬೇಕು. ಸವರ್ಣೀಯ ವ್ಯವಸ್ಥೆಗೆ ತಲೆಬಾಗುವ ಪದ್ಧತಿ ಅನೂಚಾನವಾಗಿ ಅವರ ಮುಂದಿನ ಪೀಳಿಗೆಗೆ ಮುಂದುವರಿಯಬೇಕು. ಹಾಗಾಗಿ ಮಠಗಳು ಹಾಗೂ ಸ್ವಾಮೀಜಿಗಳು ಜಗದ್ಗುರುಗಳಾಗಿ ಈ ಸರಕಾರದ ನೀತಿ ನಿಯಮಗಳನ್ನು ರೂಪಿಸುವವವರಾಗುತ್ತಾರೆ. ಅದನ್ನು ಈ ನಾಡಿನ ಎಲ್ಲ ಶ್ರೀಸಾಮಾನ್ಯರು ಪಾಲಿಸಬೇಕಾಗುತ್ತದೆ.

ನಾಡಿನ ಮಠಮಂದಿರಗಳಲ್ಲಿ sಸ್ವಾಮೀಜಿ ಆನಂತರ ಇರುವ ಪ್ರಮುಖ ಸ್ಥಾನಗಳಲ್ಲಿ ಅನ್ಯ ಜಾತಿಯವರು ಇದ್ದಾರಾ..ಅಥವಾ ಭಕ್ತರು ಇದ್ದಾರಾ ಎಂದು ನೋಡಿದರೆ, ಊಹೂಂ ಇಲ್ಲ. ಯಾರು ಸ್ವಾಮೀಜಿಗಳಾಗಿದ್ದರೂ, ಅವರ ಕುಟುಂಬದ ಪರಂಪರಾಗತ ಸ್ವತ್ತಾಗಿ ಮಠದ ಪ್ರಮುಖ ಸ್ಥಾನಗಳು ಪರಿಗಣಿತವಾಗಿರುತ್ತದೆ. ಆ ಸ್ವಾಮೀಜಿಯ ಇಡೀ ಕುಟುಂಬದ ಸದಸ್ಯರೇ ಮಠದ ಒಂದೊಂದು ಜವಾಬ್ದಾರಿಯನ್ನು ತೆಗೆದುಕೊಂಡಿರುತ್ತಾರೆ!

***

ನೈತಿಕತೆಯ ಬಗ್ಗೆ ಜನರಲ್ಲಿ ಪ್ರಜ್ಞೆ ಮೂಡಿಸಬೇಕಾದ ಮಠಗಳೆಲ್ಲಾ ಇಂದು ಜಾಗತೀಕರಣದ ನೆಪದಲ್ಲಿ ಹಣ ವಸೂಲಿ ಮಾಡುವ ಸೇವಾ ಕೇಂದ್ರಗಳಾಗಿ ಪರಿವರ್ತನೆಯಾಗಿವೆ. ಸ್ನೇಹಿತರೊಬ್ಬರು ಹೇಳುತ್ತಿದ್ದು ಈಗಲೂ ಪ್ರಸ್ತುತವೆನಿಸುತ್ತದೆ. ಕರ್ನಾಟಕವೂ ಸೇರಿದಂತೆ ಭಾರತದಲ್ಲಿನ ಕೆಲವು ಶ್ರೀಮಂತ ಮಠಗಳ ಸ್ವಾಮೀಜಿಗಳು ಜಗತ್ತಿನ ಅತ್ಯುತ್ತಮ ಸಿಇಓಗಳು ಎಂದು. ಹೌದು, ಅಧ್ಯಾತ್ಮಿಕ ಅನುಭವಗಳ ಶ್ರೀಮಂತಿಕೆಯನ್ನು ಕಟ್ಟಿಕೊಡುವ ಬದಲು, ಎಂಜನಿಯರಿಂಗ್, ಮೆಡಿಕಲ್ ಕಾಲೇಜುಗಳ ವ್ಯವಹಾರವೇ ಪ್ರಸ್ತುತ ಎನಿಸುವ ಅವರ ಕಾರ್ಯವೈಖರಿ, ಶಿಕ್ಷಣ ಕ್ಷೇತ್ರದ ಅಷ್ಟೂ ವ್ಯವಸ್ಥೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎನ್ನುವ ಅವರ ಹಪಾಪಿತನದ ಬಗ್ಗೆ ಖೇದವೆನಿಸುತ್ತದೆ. ಇದಕ್ಕೆ ಅವಕಾಶ ಮಾಡಿಕೊಡುವ ಸರಕಾರ ಇನ್ನಾವ ಜನಕಲ್ಯಾಣ ಮಾಡಲು ಸಾಧ್ಯ ಎನ್ನುವುದನ್ನು ನಾವು ಆಲೋಚನೆ ಮಾಡುವ ಕಾಲ ಹತ್ತಿರ ಬಂದಿದೆ.

ಇಂತಹ ಸಂದರ್ಭದಲ್ಲಿ ನನಗೆ ನನ್ನ ಗುರುಗಳಾದ ಪ್ರೊ.ಕೆ.ರಾಮದಾಸ್ ನೆನಪಾಗುತ್ತಾರೆ. ಯಡಿಯೂರಪ್ಪನವರ ಆಯವ್ಯಯ ನೋಡಿದ್ದರೆ, ಅವರೊಬ್ಬರಾದರೂ ಧ್ವನಿಯೆತ್ತಿ ಸರಕಾರದ ಮಠಗಳ ಓಲೈಕೆ ಕ್ರಮವನ್ನು ಬಹಿರಂಗವಾಗಿ ಖಂಡಿಸುತ್ತಿದ್ದರು. ಸರಕಾರದ ನೈತಿಕತೆಯನ್ನು ಪ್ರಶ್ನೆ ಮಾಡುತ್ತಿದ್ದರು. ಜನರ ತೆರಿಗೆ ಹಣವನ್ನು ಬಿಜೆಪಿ ತನ್ನ ಪಕ್ಷದ ಸ್ವತ್ತು ಎಂಬ ಧಾಟಿಯಲ್ಲಿ ಹಂಚಿಕೆ ಮಾಡಲು ಹೋರಟಿರುವುದನ್ನು ವಿರೋಧಿಸಿ ಹೋರಾಟವನ್ನಾದರೂ ಮಾಡುತ್ತಿದ್ದರು. ಈಗ ಅಂತಹ ಧ್ವನಿಯೆತ್ತಲು ನಮ್ಮಲ್ಲಿ ಯಾರೂ ಇಲ್ಲವೇ ಎಂಬ ಪ್ರಶ್ನೆ ಎದುರಾಗುತ್ತದೆ. ಕನಿಷ್ಟ ಪಕ್ಷ ಅದನ್ನು ಉಗ್ರವಾಗಿ ವಿರೋಧಿಸುವ ತಾಕತ್ತು ಕಾಂಗ್ರೆಸ್ ಹಾಗೂ ಜಾ.ದಳ ಪಕ್ಷಗಳು ಕಳೆದುಕೊಂಡಿವೆಯಲ್ಲ ಎಂಬ ನೋವು ಕಾಡುತ್ತದೆ.

***

ದಲಿತರು,ಹಿಂದುಳಿದವರ ಹೆಸರನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದ ಯಾವ ಸರಕಾರಗಳೂ ಅವರಿಗೆ ಕಿಂಚಿತ್ತ್ತೂ ಒಳ್ಳೆಯದನ್ನು ಮಾಡಲು ಪ್ರಯತ್ನ ಮಾಡಿಲ್ಲ, ಮಾಡಿದ್ದರೂ, ಅದು ಮಧ್ಯವರ್ತಿಗಳ ಪಾಲಾಗಿದೆ. ಅದನ್ನು ಗಮನಿಸಿಯಾದರೂ, ಯಡಿಯೂರಪ್ಪನವರು ಇನ್ನೂ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಬಹುದಿತ್ತು. ಮಠಗಳಿಗೆ ಕೊಡುವ ಹಣವನ್ನೆ ಜಿಲ್ಲೆಗೊಂದರಂತೆ ಗುಡಿಕೈಗಾರಿಕೆಗಳ ಅಭಿವೃದ್ಧಿಗೆ ಬಳಸಬಹುದಿತ್ತು. ಅಥವಾ ನಿರುದ್ಯೋಗಿಗಳ ನೆರವಿಗೆ ಹೊಸ ಕಾರ್ಯಕ್ರಮ ರೂಪಿಸಬಹುದಿತ್ತು. ಎಲ್ಲರಂತೆ ತಮ್ಮ ಜಾತಿಯ ಅಂಧಾನುಕರಣೆಯಲ್ಲಿ ಮುಳುಗಿ ಹೋಗಿರುವ ಅವರು ಮತ್ತು ಅವರ ಪಕ್ಷ ಜನರನ್ನು ವಂಚಿಸುವ ಇನ್ನೊಂದು ಸರಕಾರವಾಗಿ ಇತಿಹಾಸದಲ್ಲಿ ದಾಖಲಾಗಿ ಹೋಗುತ್ತದೆ ಎನ್ನುವುದಂತೂ ದಿಟ.

-ಹೆಗ್ಗೆರೆ ರೇಣುಕಾರಾಧ್ಯ

Tuesday, February 24, 2009

ಹುಸಿ ರಾಷ್ಟ್ರಭಕ್ತರಿಗೆ ಉತ್ತರ ಸಿಕ್ಕಿದೆಯೇ?

ಒಂದು ಚೆಂದನೆಯ ಕತೆ, ಅಷ್ಟೇ ಚೆಂದನೆಯ ಚಿತ್ರಕತೆ, ಮನಮುಟ್ಟವಂಥ ನಿರೂಪಣೆ, ಪಾತ್ರಗಳಿಗೆ ಜೀವ ತುಂಬುವಂಥ ಕಲಾವಿದರು, ಹಿತಾನುಭವ ನೀಡುವ ಸಂಗೀತ, ಎಲ್ಲವನ್ನೂ ಹದವಾಗಿ ಬೆರಸಿ, ಬೇಯಿಸಿ `ಪಾಕ'ಗೊಳಿಸಿದ ತಂತ್ರಜ್ಞರು...

ಇದು ಡ್ಯಾನಿ ಬಾಂi ನಿರ್ದೇಶನದ `ಸ್ಲಂಡಾಗ್ ಮಿಲಿಯನೇರ್' ಸಿನಿಮಾದ ಹಿನ್ನೆಲೆ. ಆದರೆ `ರಾಷ್ಟ್ರಭಕ್ತರು' ವಿವಾದ ಸೃಷ್ಟಿಸಿದರು. ಭಾರತದ ಬಡತನವನ್ನು ಹೀಯಾಳಿಸಲಾಗುತ್ತಿದೆ ಎಂದು ಆರೋಪಿಸಿದರು. ನಮ್ಮ ದಾರಿದ್ರ್ಯವನ್ನು ವೈಭವೀಕರಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ಹಪಹಪಿಸಿದರು.

ಅವರ ಉದ್ದೇಶಗಳು ಸ್ಪಷ್ಟ: ಕೊಳಗೇರಿಯ ಬಾಲಕನೊಬ್ಬ ಮುಖ್ಯವಾಹಿನಿಗೆ ಬರುವುದು `ಉನ್ನತ ವರ್ಗದ' ಜನಕ್ಕೆ ಅರಗದ ವಿಚಾರ. ಅದೂ ಕೊಳಗೇರಿಯಲ್ಲಿ ಹುಟ್ಟಿದ ಸಾಮಾನ್ಯ ಪೋರನೊಬ್ಬ ಬುದ್ಧಿವಂತ ಆಗುತ್ತಾನೆ ಎಂದರೆ ಅದು ಶತಶತಮಾನಗಳಿಂದ ವಿದ್ಯೆ ಕಲಿತವರಿಗೆ ಸಹಿಸಲಾಗದ ಸಂಗತಿ. ಕೊಳಗೇರಿಯಲ್ಲಿ ಹುಟ್ಟಿ ಕೊಳಕನ್ನೇ ಮೈವೆತ್ತಿ ಮೇಲೆದ್ದವನೊಬ್ಬ `ಮಡಿವಂತ'ರಾದ ತಮ್ಮೊಂದಿಗೆ ಸ್ಪರ್ಧಿಸುತ್ತಾನೆ ಎಂದರೆ ಸಹ್ಯವಾಗುವುದಾದರೂ ಹೇಗೆ?
ಅದಕ್ಕೆ ರಾಷ್ಟ್ರಭಕ್ತಿಯ ಸೋಗಿನಲ್ಲಿ ಸ್ಲೋಗನ್ ಹೊರಡಿಸಿದರು. ಇದು ಸ್ಲಂಡಾಗ್‌ಗೆ ದೇಶವಿರೋಧಿ ಎನ್ನುವ ಪಟ್ಟಕಟ್ಟಿದರು.

ಇಷ್ಟಕ್ಕೆ ಮುಗಿಯಲಿಲ್ಲ ಇವರ ಆತ್ಮವಂಚನೆ. ಸ್ಲಂಡಾಗ್ ಮಿಲಿಯನೇರ್ ಸಂಗೀತ ನಿರ್ದೇಶನಕ್ಕೆ `ಗೋಲ್ಡನ್ ಗ್ಲೋಬ್' ಪ್ರಶಸ್ತಿ ಬಂದಾಗ ಎ.ಆರ್. ರೆಹಮಾನ್ ಮೇಲೂ ಹರಿಹಾಯ್ದರು.

ಜನವರಿ ೨೩ರಂದು `ಪ್ರಜಾವಾಣಿ' ಪತ್ರಿಕೆಯ `ಸಿನಿಮಾ ರಂಜನೆ' ಪುರವಣಿಯಲ್ಲಿ ಗಂಗಾಧರ ಮೊದಲಿಯಾರ್ ತಮ್ಮ `ಫಿಲಂ ಡೈರಿ' ಅಂಕಣದಲ್ಲಿ `ಎ.ಆರ್. ರೆಹಮಾನ್ ಅವರ ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ವಿದೇಶದಲ್ಲಿ ತಮ್ಮ ಪ್ರದರ್ಶಿಸುವುದು ರೆಹಮಾನ್ ಅವರಿಗೆ ಇದು ಹೊಸದೇನಲ್ಲ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಏನು ಎಂಬುದೇ ತಮಗೆ ಮುಖ್ಯವಾಗುತ್ತದೆ' ಎಂದು ಕಾರಿಕೊಂಡರು.

ಭಾರತೀಯ ಚಿತ್ರರಂಗಕ್ಕೆ ಎ.ಆರ್. ರೆಹಮಾನ್ ಅವರ ಕೊಡುಗೆ ಏನು ಎನ್ನುವುದು ಯಾವತ್ತೋ ಸಾಬೀತಾಗಿದೆ. ರೆಹಮಾನ್ ತಮ್ಮ ಚೊಚ್ಚಲ ಸಿನಿಮಾ `ರೋಜಾ'ದಿಂದಲೇ ತಮ್ಮ ಕಸುವು ತೋರಿದ್ದಾರೆ. `ಕೆಲವರಿಗೆ' `ಕೆಲವರು' ಮಾಡಿದರೆ ಮಾತ್ರ ಸಾಧನೆ. ಉಳಿದವರ ಸಾಧನೆ ನಗಣ್ಯ. ಇದೇ ರೆಹಮಾನ್ `ವಂದೇಮಾತರಂ' ಗೀತೆಗೆ ಸಂಗೀತ ಸಂಯೋಜಿಸಿದಾಗಲೂ ಅವರ ವಿರುದ್ಧ ಹುನ್ನಾರ ನಡೆಸಲಾಗಿತ್ತು. ರೆಹಮಾನ್ ಉತರಿಸಲಿಲ್ಲ. ಮೊನ್ನೆ ಮೊನ್ನೆ ಮತ್ತೆ ಮೂದಲಿಸಿದಾಗಲೂ ಉತ್ತರಿಸಲಿಲ್ಲ. ಈಗಲೂ ಉತ್ತರಿಸಿಲ್ಲ.

ಆದರೆ ಉತ್ತರ ಸಿಕ್ಕಿದೆ. ಆದರೂ ಗಂಗಾಧರ ಮೊದಲಿಯಾರ್ನಂಥ `ಬುದ್ಧಿವಂತರು', ಹುಸಿ ರಾಷ್ಟ್ರಭಕ್ತರು, `ಇದು ಬಾಲಿವುಡ್ ಮೇಲೆ ನಿಯಂತ್ರಣ ಸಾಧಿಸಲು ಪಾಶ್ಚಾತ್ಯರು ಹೂಡಿದ ತಂತ್ರವೇ' ಎಂದು ಹುಳುಕು ಹುಡುಕುವ ಕನ್ನಡಪ್ರಭದ (ಫೆ. ೨೪, ೭ನೇ ಪುಟ) ಮಂದಿ ಯಾವತ್ತಿಗೂ ಅಂಥ ಸೂಕ್ತವಾದ ಉತ್ತರಗಳನ್ನು ಹುಡುಕಿಕೊಳ್ಳುವುದಿಲ್ಲ. ಅದು ಅವರಿಂದ ಸಾಧ್ಯವೂ ಇಲ್ಲ. ಹಾಗೆ ತೆರೆದುಕೊಳ್ಳಲು ಆರೋಗ್ಯಕರ ಮನಸ್ಸು ಬೇಕು! ರೆಹಮಾನ್ ಹೇಳಿದಂತೆ ಪ್ರೀತಿ, `ಆಯ್ಕೆ' ಆಗಬೇಕು!

(ಸ್ಲಂ ಡಾಗ್ ಸಿನಿಮಾ ಆಸ್ಕರ್ ಗೆದ್ದ ಹಿನ್ನೆಲೆಯಲ್ಲಿ ಗೆಳಯರೊಬ್ಬರು ಕಳಿಸಿದ ಮೇಲ್)

Thursday, February 19, 2009

ಮಠಾಧೀಶರು ಸಮಾಜದ ಶತ್ರುಗಳೇ?

ಆನೆಯನೇರಿಕೊಂಡು ಹೋದಿರಿ ನೀವು,
ಕುದುರೆಯನೇರಿಕೊಂಡು ಹೋದಿರಿ ನೀವು.
ಕುಂಕುಮ-ಕಸ್ತುರಿಯ ಪೂಸಿಕೊಂಡು ಹೋದಿರಿ ಅಣ್ಣಾ;
ಸತ್ಯದ ನಿಲುವನರಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಕೆಟ್ಟು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವನನರಿಯದೆ
ನರಕಕ್ಕೆ ಭಾಜನವಾದಿರಲ್ಲಾ!


ಚಿತ್ರದುರ್ಗದ ಸಮ್ಮೇಳನ ಮುಗಿದರೂ, ಸಮ್ಮೇಳನದಲ್ಲಿ ಹುಟ್ಟಿಕೊಂಡ ಕಿಚ್ಚು-ರೊಚ್ಚು ಇನ್ನೂ ಮುಂದುವರೆದಿದೆ. ಸಮ್ಮೇಳನ ಆರಂಭವಾಗುವುದಕ್ಕೆ ಮುನ್ನವೇ `ಮಠಾಧೀಶರು ನಮ್ಮ ಶತ್ರುಗಳು' ಎಂದು ಸಮ್ಮೇಳನಾಧ್ಯಕ್ಷ ಎಲ್.ಬಸವರಾಜು ಹೇಳಿದ್ದರು. ವಿಶೇಷವೆಂದರೆ ಈ ನಾಡಿನ ಸಾವಿರ ಸಾವಿರ ಮಠಾಧೀಶರ ಪೈಕಿ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾತ್ರ ಈ ಹೇಳಿಕೆಯಿಂದ ರೊಚ್ಚಿಗೆದ್ದರು. ಎಲ್.ಬಿಯವರು ಹೇಳಿದ ಮಾತು ತಮ್ಮನ್ನು ಕುರಿತೇ ಆಡಿದ್ದಿರಬೇಕು ಎಂದು ಶಿವಾಚಾರ್ಯರು ಭಾವಿಸಿದರೇನೋ? ಹೀಗಾಗಿ ಅವರು ಎಲ್.ಬಿಯವರ ವಿರುದ್ಧ ಹರಿಹಾಯ್ದರು. ಸಮ್ಮೇಳನ ನಿರ್ವಹಣೆಯಲ್ಲಿ ಮಠಾಧೀಶರ ಪಾತ್ರವೂ ಇದ್ದಿದ್ದರಿಂದಾಗಿ ಎಲ್.ಬಿಯವರು ಸಮ್ಮೇಳನಾಧ್ಯಕ್ಷ ಪದವಿ ತಿರಸ್ಕರಿಸಿ ಈ ಮಾತುಗಳನ್ನು ಆಡಬೇಕಿತ್ತು ಎಂದು ಅಪ್ಪಣೆ ಕೊಡಿಸಿದರು. ಇದಕ್ಕೆ ಪ್ರತಿಯಾಗಿ ಶಿವಾಚಾರ್ಯರ ಮಾತುಗಳನ್ನು ಸಮ್ಮೇಳನದ ವೇದಿಕೆಗಳಲ್ಲೇ ಕಿ.ರಂ.ನಾಗರಾಜ್ ಮತ್ತಿತರರು ಖಂಡಿಸಿದರು.

ಅಲ್ಲಿಗೆ ಎಲ್ಲವೂ ಮುಗಿಯಲಿಲ್ಲ. ಪ್ರಜಾವಾಣಿಗೆ ಬರೆದ ವಾಚಕರ ವಾಣಿಯಲ್ಲಿ ಪ್ರೊ. ಚಂದ್ರಶೇಖರ ಪಾಟೀಲರು ತಮ್ಮ ಎಂದಿನ ಶೈಲಿಯಲ್ಲಿ ಶಿವಾಚಾರ್ಯರನ್ನು ಕುಟುಕಿದರು. `ಶಿವಮೊಗ್ಗದಲ್ಲೂ ಧಮಕಿ ಇತ್ತು. ನಂತರದ ಸಮ್ಮೇಳನಗಳಲ್ಲಿ ಈ ಬಗೆಯ ನೇರ ಹಸ್ತಕ್ಷೇಪವನ್ನು ನಮ್ಮ ರಾಜಕೀಯ ವಲಯದ ಪ್ರಭುಗಳು ಕಡಿಮೆ ಮಾಡಿದ್ದಾರೆ. ಆದರೆ `ಸಿರಿಗರ' ಹೊಡೆಸಿಕೊಂಡ ಸ್ವಾಮಿಗಳ ಕಿತಾಪತಿ ಮಾತ್ರ ಮೊನ್ನೆಯ ಸಮ್ಮೇಳನದಲ್ಲಿ ಎದ್ದು ಕಾಣುವಂತಿತ್ತು. ಇಂಥವರನ್ನು ಕೂಡ ನಮ್ಮ ಪ್ರಜ್ಞಾವಂತ ಜನತೆ ರಿಪೇರಿ ಮಾಡುತ್ತಾರೆ' ಎಂದು ಚಂಪಾ ಬರೆದಿದ್ದರು.

ನಂತರ ಶಿವಾಚಾರ್ಯರ ಸರದಿ. ವಿಜಯಕರ್ನಾಟಕದ ತಮ್ಮ ಬಿಸಿಲು ಬೆಳದಿಂಗಳು ಅಂಕಣದಲ್ಲಿ (ಫೆ.೧೮) ಶಿವಾಚಾರ್ಯರು ಸಮ್ಮೇಳನ ಮತ್ತು ವೈಚಾರಿಕತೆಯ ಪ್ರಹಸನ ಎಂಬ ಲೇಖನವೊಂದನ್ನು ಬರೆದು, ಚಂಪಾ ಅವರನ್ನು ಹಂಗಿಸಿದ್ದಾರೆ. `ಪ್ರಗತಿಪರರು, ಚಿಂತಕರು ಎನಿಸಿಕೊಂಡ ಕೆಲವರು ಬಹಿರಂಗವಾಗಿ ಮಠಗಳೊಂದಿಗೆ ಗುರ್ತಿಸಿಕೊಳ್ಳಲು ಸಿದ್ಧರಿಲ್ಲ. ಆದರೆ ಅಂತರಂಗದಲ್ಲಿ ಮಾತ್ರ ಮಠಗಳ ಸಹಾಯ ಇವರಿಗೆ ಬೇಕೇ ಬೇಕು. ಎಂದು ಹೇಳುತ್ತ ಅದಕ್ಕೆ ಉದಾಹರಣೆಯೊಂದನ್ನು ಪೋಣಿಸಿದ್ದಾರೆ.

ಚಂಪಾ ಮತ್ತೆ ಉತ್ತರಿಸಿದ್ದಾರೆ; ಪ್ರಜಾವಾಣಿಯಲ್ಲಿ. `ತಮ್ಮ ವಿದ್ಯೆಯ ಬಗ್ಗೆ ನನಗೆ ಗೌರವ ಇದೆ. ಆದರೆ ನಿಮ್ಮಲ್ಲಿ ವಿದ್ಯೆಗೆ ತಕ್ಕ ವಿನಯ ಇಲ್ಲ. ನೀವು ಜರ್ಮನಿಯ ಬದಲಾಗಿ ಇಂಗ್ಲೆಂಡಿಗೆ ಹೋಗಿದ್ದರೆ ಚೆನ್ನಾಗಿತ್ತು. ಜರ್ಮನಿಯ ಜ್ಞಾನದೊಂದಿಗೆ ಅಲ್ಲಿಯ ಹಿಟ್ಲರ್ ಪ್ರಜ್ಞೆಯನ್ನೂ ತಂದ ಹಾಗಿದೆ.' ಎಂದು ಚಂಪಾ ನೇರವಾಗಿ ದಾಳಿ ನಡೆಸಿದ್ದಾರೆ.

ಈ ಚರ್ಚೆ ಇನ್ನಷ್ಟು ಮುಂದುವರೆಯುವ ಸಾಧ್ಯತೆಗಳೂ ಇವೆ, ಆಗಲಿ. ಎಲ್ಲ ವಿವಾದಗಳಿಗೆ ಮೂಲಧಾತುವಾಗಿರುವ ಎಲ್.ಬಿಯವರ ಮಾತಿನ ಬಗ್ಗೆ ನನಗನ್ನಿಸಿದ್ದನ್ನು ಇಲ್ಲಿ ಹೇಳಲು ಹೊರಟಿದ್ದೇನೆ.

******

ಚಂಪಾ ಬಳಸಿದ `ಸಿರಿಗರ' ಪದ ಇಂಟರೆಸ್ಟಿಂಗ್ ಅನಿಸಿತು. ಶಿವಾಚಾರ್ಯರು ಪ್ರತಿನಿಧಿಸುವ `ಸಿರಿಗೆರೆ ಪದದ ಹಾಗೆಯೇ ಧ್ವನಿಸುವ `ಸಿರಿಗರ' ಪದವನ್ನು ಚಂಪಾ ಬೇಕೆಂತಲೇ ಬಳಸಿದ್ದರು. ಬಸವಣ್ಣನವರ ವಚನವೊಂದರಲ್ಲೂ ಸಿರಿಗರ ಎಂಬ ಪದದ ಉಲ್ಲೇಖವಿದೆ; ಆ ವಚನ ಇಲ್ಲಿದೆ:

ಹಾವು ತಿಂದವರ ನುಡಿಸಬಹುದು!
ಗರ ಹೊಡೆದವರ ನುಡಿಸಬಹುದು!
ಸಿರಿಗರ ಹೊಡೆದವರ ನುಡಿಸಬಾರದು ನೋಡಯ್ಯ!
ಬಡತನವೆಂಬ ಮಂತ್ರವಾದಿ ಹೋಗಲು
ಒಡನೆ ನುಡಿವರಯ್ಯ ಕೂಡಲಸಂಗಮದೇವ.


ಶಿವಾಚಾರ್ಯರ ಮಾತು ಹಾಗಿರಲಿ, ಸಾವಿರಾರು ಧರ್ಮಗುರುಗಳಿಗೆ ಇಂದು ಹೊಡೆದಿರುವುದು `ಸಿರಿಗರ'ವೇ ಹೌದು. ಮಠಾಧೀಶರು ಇಂದು ಶ್ರೀಮಂತರಲ್ಲಿ ಶ್ರೀಮಂತರು. ಈ ಶ್ರೀಮಂತಿಕೆಯ ಗುಟ್ಟು ರಟ್ಟಾಗುವುದೇ ಇಲ್ಲ. ಯಾವ ಮಠದ ಮೇಲೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸುವುದಿಲ್ಲ. ವರ್ಷಕ್ಕೊಮ್ಮೆ ಲಾಭ-ನಷ್ಟದ ಲೆಕ್ಕಾಚಾರ ಕೊಡಿ ಎಂದು ನಮ್ಮ ಸರ್ಕಾರಗಳೂ ಕೇಳುವುದಿಲ್ಲ. ಯಾವ ಲೋಕಾಯುಕ್ತಕ್ಕೂ ಮಠದ ಆಸ್ತಿಪಾಸ್ತಿಯ ತನಿಖೆ ನಡೆಸುವ ಅಧಿಕಾರ ಇಲ್ಲ!

ಪ್ರಬಲ ಮಠಾಧೀಶರಂತೂ ತಮ್ಮ ಶಿಕ್ಷಣ ಸಂಸ್ಥೆಗಳದ್ದೂ ಸೇರಿದಂತೆ ಇತರ ಕೆಲಸಗಳಿಗಾಗಿ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದ ಬಾಗಿಲು ತುಳಿಯುವುದಿಲ್ಲ. ಕಾರ್‍ಯದರ್ಶಿ ಮಟ್ಟದ ಅಧಿಕಾರಿಗಳೇ ಮಠಕ್ಕೆ ಫೈಲುಗಳನ್ನು ಹಿಡಿದುಕೊಂಡು ಹೋಗುತ್ತಾರೆ. ಅರ್ಥಾತ್ ಸರ್ಕಾರವೇ ಮಠಗಳಿಗೆ ತೆರಳುತ್ತದೆ. ಮಠಗಳಲ್ಲೇ ಸರ್ಕಾರದ ಕೆಲಸಗಳು ನಡೆಯುತ್ತವೆ. ಹಿಂದೊಮ್ಮೆ ಮೈಸೂರಿನ ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್ ಮಠಗಳ ವಿರುದ್ಧ ಹರಿಹಾಯ್ದಿದ್ದರು. ಆಗಲೂ ಮಠಾಧೀಶರ ಪರವಾಗಿ ರಣಕೇಕೆ ಹಾಕಿದವರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳೇ! ಶಿವಾಚಾರ್ಯರು ತಮ್ಮ ಪ್ರಭಾವವನ್ನು ಎಷ್ಟು ನಿಖರವಾಗಿ ಬಳಸಿದರೆಂದರೆ ಮತ್ತೆ ವಿಶ್ವನಾಥ್ ಆ ಸ್ವಾಮಿಗಳ ವಿರುದ್ಧ ಬಾಯಿ ತೆರೆಯಲೇ ಇಲ್ಲ!

ಹಿಂದೆ ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ಹೆಲಿಕಾಪ್ಟರ್ ಒಂದನ್ನು ಕೊಂಡುಕೊಂಡರು. ಹಾಸನದ ಜವೇನಹಳ್ಳಿ ಮಠದಲ್ಲಿ ನಡೆದ ಬೃಹತ್ ಕಾರ್ಯಕ್ರಮವೊಂದರಲ್ಲಿ ನಿಡುಮಾಮಿಡಿ ಸ್ವಾಮೀಜಿ ಮಾತನಾಡುತ್ತ, `ಸ್ವಾಮಿಗಳಿಗೇಕೆ ಹೆಲಿಕಾಪ್ಟರ್, ಎಲ್ಲವನ್ನೂ ತ್ಯಾಗ ಮಾಡಿದವರು ಸ್ವಾಮಿಗಳಲ್ಲವೆ? ಯಾಕೆ ಐಷಾರಾಮಿ ಕಾರುಗಳು? ಯಾಕೀ ಐಷಾರಾಮಿ ಜೀವನ?' ಎಂದು ಪ್ರಶ್ನಿಸಿದ್ದರು. ನಂತರ ಹಾಸನಕ್ಕೆ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಚುಂಚನಗಿರಿ ಸ್ವಾಮೀಜಿ `ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ, `ನಾಯಿಗಳು ಬೊಗಳುತ್ತವೆ, ಅವುಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಹೇಳಿದ್ದರು. ಮಠಗಳ ಆಸ್ತಿಪಾಸ್ತಿ, ವೈಭವೋಪೇತ ಬದುಕಿನ ಬಗೆ ಯಾರಾದರೂ ಪ್ರಶ್ನಿಸಿದರೆ ಅವರು `ನಾಯಿ' ಎನ್ನಿಸಿಕೊಳ್ಳಬೇಕಾಗುತ್ತದೆ!

ಸಾಕಷ್ಟು ರಾಜಕಾರಣಿಗಳು ಪ್ರಬಲ ಮಠಾಧೀಶರ ಬಳಿ ತಮ್ಮ ಕಪ್ಪು ಹಣವನ್ನು ತೆಗೆದಿರಿಸಿರುತ್ತಾರೆ ಎಂಬ ಮಾತೂ ಇದೆ. ಹಿರಿಯ ರಾಜಕಾರಣಿಯೊಬ್ಬರು ಮಠವೊಂದರಲ್ಲಿ ಇಟ್ಟ ಹಣವನ್ನು ಆ ಮಠದ ಸ್ವಾಮಿ ಹಿಂದಿರುಗಿಸಲಿಲ್ಲ, ಅದಕ್ಕಾಗಿ ಆ ಸ್ವಾಮಿಗೂ-ರಾಜಕಾರಣಿಗೂ ಜಟಾಪಟಿ ನಡೆಯಿತು ಎಂಬ ಮಾತುಗಳೂ ಇವೆ. ಇದೆಲ್ಲ ಸತ್ಯವೋ ಸುಳ್ಳೋ, ಆದರೆ ಕಪ್ಪು ಹಣ ಇಡುವುದಕ್ಕೆ ಮಠಗಳಿಂತ ಹೆಚ್ಚು ಸೇಫ್ ಜಾಗ ಇನ್ನೊಂದಿಲ್ಲ ಎಂಬುದು ಮಾತ್ರ ನಿಜ. ಯಾಕೆಂದರೆ ಮಠಗಳಿಗೆ ಯಾವ ಪೊಲೀಸು, ಟ್ಯಾಕ್ಸಿನವರೂ ಹೋಗುವುದಿಲ್ಲ. ಕಳುಹಿಸುವ ಧೈರ್ಯ ಯಾವ ಸರ್ಕಾರಕ್ಕೂ ಇಲ್ಲ.

*****

ಕಾಮ ಒಂದನೇ ಭವಿ, ಕ್ರೋಧ ಎರಡನೇ ಭವಿ
ಲೋಭ ಮೂರನೇ ಭವಿ, ಮೋಹ ನಾಲ್ಕನೇ ಭವಿ
ಮದ ಐದನೇ ಭವಿ, ಮತ್ಸರ ಆರನೇ ಭವಿ
ಆಮಿಷ ಏಳನೇ ಭವಿ
ಇಂತೀ ಏಳು ಭವಿಗಳ ತಮ್ಮೊಳಗಿಟ್ಟುಕೊಂಡು
ಲಿಂಗವಿಲ್ಲದವರ ಭವಿ ಭವಿ ಎಂಬರು
ತಮ್ಮಂತರಂಗದಲ್ಲಿದ್ದ ಲಿಂಗಾಂಗದ ಸುದ್ದಿಯನ್ನರಿಯದೆ
ಅಚ್ಚಪ್ರಸಾದಿ-ನಿಚ್ಚಪ್ರಸಾದಿ-ಸಮಯಪ್ರಸಾದಿಗಳೆಂದು
ಜಲಕ್ಕೆ ಕನ್ನವನಿಕ್ಕಿ ಉದಕವ ತಂದು
ಲಿಂಗಮಜ್ಜನಕ್ಕೆರೆವ ಹಗಲುಗಳ್ಳರಿಗೆ ಮೆಚ್ಚುವನೆ
ಚೆನ್ನಮಲ್ಲಿಕಾರ್ಜುನ?


ಬಸವಣ್ಣನ ಪೂರ್ವದಿಂದಲೂ ಭವಿ-ಭಕ್ತ ಸಂಘರ್ಷ ನಡೆದುಬಂದಿದೆ. ಕೆಳಜಾತಿಗಳ ಜನರು ವೀರಶೈವಕ್ಕೆ ಸೇರ್ಪಡೆಯಾದಾಗ ಎದುರಾದ ವಿರೋಧಗಳ ಕುರಿತೇ ನೂರಾರು ವಚನಗಳು ಇವೆ. ಅಕ್ಕಮಹಾದೇವಿ ಸಹ ಈ ವಚನದಲ್ಲಿ ಹೊಸದಾಗಿ `ಭಕ್ತ'ರಾದವರ ವಿರುದ್ಧ ನಡೆದ ಮಸಲತ್ತಿನ ವಿರುದ್ಧ ಮಾತನಾಡಿದ್ದಾಳೆ. ಭವಿ ಎಂದರೆ ಯಾರು ಎಂಬುದಕ್ಕೆ ಅಕ್ಕ ತನ್ನದೇ ಆದ ವ್ಯಾಖ್ಯೆ ನೀಡುತ್ತಾಳೆ. ಆಕೆಯ ಪ್ರಕಾರ ಲಿಂಗವಿಲ್ಲದವರು ಭವಿಗಳಲ್ಲ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಆಮಿಷಗಳನ್ನು ತಮ್ಮ ಒಡಲಲ್ಲಿ ಇಟ್ಟುಕೊಂಡವರೇ ನಿಜವಾದ ಭವಿಗಳು. ಅವರು ಲಿಂಗವಂತರಾದರೂ ಭವಿಗಳು.

`ಸಿರಿಗರ' ಹೊಡೆಸಿಕೊಂಡ ನಮ್ಮ ಬಹುತೇಕ ಮಠಾಧೀಶರೆಲ್ಲರೂ ಅಕ್ಕ ವ್ಯಾಖ್ಯಾನಿಸುವ `ಭವಿ'ಗಳ ಪಟ್ಟಿಯಲ್ಲೇ ಬರುವಂಥವರು. ಇದನ್ನು ನಿರಾಕರಿಸುವ ಶಕ್ತಿಯೂ ಮಠಾಧೀಶರಿಗಿಲ್ಲ. ಈ ಎಲ್ಲ ಮಠಾಧೀಶರೂ ಆಸ್ತಿ ಸಂಗ್ರಹಣೆಯಲ್ಲೇ ಅತಿ ಹೆಚ್ಚು ತೃಪ್ತಿ ಕಾಣುವವರು. ಆಸ್ತಿ ಗಳಿಕೆಯ ಹಾದಿಯಲ್ಲಿ ಅವರು ಎಂಥ ಸಂಘರ್ಷದ ಮಾರ್ಗವನ್ನಾದರೂ ತುಳಿಯಬಲ್ಲರು. ಆಸ್ತಿ ಗಳಿಸಿದ ನಂತರ ಅದರ ಮದದಲ್ಲಿ ಏನು ಬೇಕಾದರೂ ಮಾಡಬಲ್ಲರು, ಮಾತಾಡಬಲ್ಲರು, ದಕ್ಕಿಸಿಕೊಳ್ಳಬಲ್ಲರು.

ಸ್ವಾಮಿಗಳು ಜಂಗಮವಾಗಲು ಬಯಸಲೊಲಲ್ಲರು. ಅವರು ಸ್ಥಾವರಗಳನ್ನು ನಿರ್ಮಿಸಿಕೊಂಡು ಕುಳಿತವರು. ಸ್ಥಾವರಗಳಲ್ಲಿ ಕುಳಿತವರು ಅರಿಷಡ್ವರ್ಗಗಳಿಂದ ದೂರವಿರುವುದು ಸಾಧ್ಯವೇ ಇಲ್ಲ. ದೂರವಿದ್ದೇವೆಂದು ತೋರಿಸಿಕೊಳ್ಳುವುದೂ ಸಾಧ್ಯವಿಲ್ಲ!

ಉಳ್ಳವರು ಶಿವಾಲಯವ ಮಾಡಿಹರು!
ನಾನೇನ ಮಾಡುವೆ? ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ!
ಕೂಡಲಸಂಗಮದೇವ ಕೇಳಯ್ಯ,
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!


ಬಸವಣ್ಣನವರ ಈ ವಚನವನ್ನು ಅದೆಷ್ಟು ಮಠಾಧೀಶರು ಅದೆಷ್ಟು ಸಾವಿರ ಬಾರಿ ತಮ್ಮ `ಆಶೀರ್ವಚನ'ಗಳಲ್ಲಿ ಹೇಳಿದ್ದಾರೋ? ಪಾಪ, ಅವರಿಗೆ ಸ್ಥಾವರ ಮತ್ತು ಜಂಗಮಕ್ಕಿರುವ ವ್ಯತ್ಯಾಸವೂ ಗೊತ್ತಿಲ್ಲ. ದೇಹವೇ ದೇಗುಲವಾಗುವ ಆತ್ಮ ಸಾಕ್ಷಾತ್ಕಾರ ಅವರ `ಕಾಣ್ಕೆ'ಗೆ ದಕ್ಕುವುದಿಲ್ಲ. ಹೀಗಾಗಿ ಮಠ ಕಟ್ಟಿಕೊಂಡು, ಗುಡಿ ಕಟ್ಟಿಕೊಂಡು ಕುಳಿತವರು ಈ ಮಠಾಧೀಶರು.

*****

ಬಸವಣ್ಣನೂ ಸೇರಿದಂತೆ ಯಾವ ವಚನಕಾರನೂ/ಳೂ ತನ್ನನ್ನು ತಾನು `ನಾವು' ಎಂದು ಸಂಬೋಧಿಸಿಕೊಂಡಿದ್ದಿಲ್ಲ. ಆದರೆ ಶಿವಾಚಾರ್ಯ ಸ್ವಾಮಿಗಳಂಥವರು ಯಾವ ಸಂಕೋಚವೂ ಇಲ್ಲದೆ ಈ ರೀತಿಯ ಆತ್ಮ ಪ್ರತ್ಯಯ ಬಳಸುತ್ತಾರೆ. ಇದು ಮಠದ ಭಕ್ತರಿಗಾಗಿ ಹೊರಡಿಸುವ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂದುಕೊಳ್ಳುವಂತೂ ಇಲ್ಲ. ಪ್ರಕಟವಾಗುವುದು `ವಿಜಯ ಕರ್ನಾಟಕ' ಎಂಬ ನಂ.೧ ಪತ್ರಿಕೆಯಲ್ಲಿ.

ಶಿವಾಚಾರ್ಯರ ಅಹಮಿಕೆಗಳು ಪ್ರದರ್ಶನವಾಗುವುದು ಕೇವಲ ಈ ಬಗೆಯ ಆತ್ಮಪ್ರತ್ಯಯದಿಂದ ಮಾತ್ರವಲ್ಲ. ಈ ಸಾಲುಗಳನ್ನು ಗಮನಿಸಿ: `ಸಮ್ಮೇಳನಾಧ್ಯಕ್ಷರು ಚಿತ್ರದುರ್ಗಕ್ಕೆ ಕಾಲಿಡುತ್ತಿದ್ದಂತೆಯೇ ಮಠಾಧೀಶರು ನಮ್ಮ ಶತ್ರುಗಳು ಎಂಬ ರಣಕಹಳೆಯನ್ನು ಊದಿದರು. ಮೆರವಣಿಗೆಯಲ್ಲಿ ಬಂದು ಸಾನ್ನಿಧ್ಯ ವಹಿಸಿ ವಧೂವರರನ್ನು ಹರಸಿ ಕಾಣಿಕೆ ಪಡೆಯಬೇಕಾಗಿದ್ದ ಸ್ವಾಮಿಗಳು ಸ್ವತಃ ಕಾಣಿಕೆ ಕೊಟ್ಟು ಮುಂದೆ ನಿಂತು ಸಾಹಿತ್ಯ ಕನ್ನಿಕೆಯ ಮದುವೆ ಮಾಡಿಸಿ ಮದುಮಕ್ಕಳ ಮೆರವಣಿಗೆ ಮಾಡಿಸಿದರೂ ಬೀಗರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಶತ್ರುಗಳೆಂದು ಗೊತ್ತಿದ್ದೂ ಬೀಗತನ ಮಾಡುವ ಉದ್ದೇಶ ಬೀಗರಿಗೆ ಏನಿತ್ತೋ ದೇವರೇ ಬಲ್ಲ!'

ಕೆಲವು ಪ್ರಶ್ನೆಗಳು:
ಮೆರವಣಿಗೆಯಲ್ಲಿ ಬಂದು ಶಿವಾಚಾರ್ಯರು ಸಾನ್ನಿಧ್ಯವನ್ನೇ ವಹಿಸಬೇಕೆ? ಎಲ್ಲ ಸಾಹಿತ್ಯ ಪ್ರೇಮಿಗಳಂತೆ ಸಹಜವಾಗಿ ಭಾಗವಹಿಸಲು ಆಗುವುದಿಲ್ಲವೆ? ಸಾಹಿತ್ಯ ಸಮ್ಮೇಳನದಲ್ಲಿ ಕಾಣಿಕೆ ವಸೂಲಿ ಮಾಡಲಾಗಲಿಲ್ಲವಲ್ಲ ಎಂಬ ಕೊರಗೇ ನಿಮಗೇ? ಬದಲಾಗಿ ನೀವೇ ಒಂದಿಷ್ಟು ಕಾಣಿಕೆ ಕೊಡಬೇಕಾಯಿತಲ್ಲ ಎಂಬ ಸಂಕಟವೆ? `ಬೀಗತನದ ಪ್ರಶ್ನೆಗೆ ಬರುವುದಾದರೆ ಸಮ್ಮೇಳನಕ್ಕೆ ಒಂದಿಷ್ಟು ಸಹಾಯ ಮಾಡಿದ ಮಾತ್ರಕ್ಕೆ ಇಡೀ ಸಮ್ಮೇಳನದ ವಾರಸುದಾರಿಕೆಯನ್ನು ನಿಮಗೆ ಕೊಟ್ಟವರ್‍ಯಾರು? ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನ ಮಠಾಧೀಶರ ಖಾಸಗಿ ಸ್ವತ್ತಾಗುವುದು ಸಾಧ್ಯವೆ? ಸಮ್ಮೇಳನಕ್ಕೆ ಸರ್ಕಾರವೂ ದುಡ್ಡು ಕೊಟ್ಟಿದೆ, ಚಿತ್ರದುರ್ಗದ ಸಾಮಾನ್ಯ ಜನರೂ ದೇಣಿಗೆ ಕೊಟ್ಟಿದ್ದಾರೆ, ಸರ್ಕಾರಿ ನೌಕರರೂ ಕಾಸು ಕೊಟ್ಟಿದ್ದಾರೆ. ಹೀಗಿರುವಾಗ `ಶತ್ರುಗಳೊಂದಿಗೆ ಬೀಗತನ ಪ್ರಶ್ನೆಯಾದರೂ ಎಲ್ಲಿಂದ ಉದ್ಭವಿಸುತ್ತದೆ? ಸಿರಿಗೆರೆ ಮಠವೇನಾದರೂ ಸಮ್ಮೇಳನ ಆಯೋಜಿಸಿದ್ದರೆ, ಈ ಮಾತು ಬರುತ್ತಿತ್ತು. ಆದರೆ ಇದು ಹಾಗಲ್ಲ ಎಂಬ ಸಾಮಾನ್ಯಪ್ರಜ್ಞೆ ನಿಮಗಿಲ್ಲವೆ?

******

`ಮಠಾಧೀಶರು ನಮ್ಮ ಶತ್ರುಗಳು ಎಂದು ಎಲ್.ಬಿಯವರು ಯಾವ ಅರ್ಥದಲ್ಲಿ ಹೇಳಿದರೋ? ಆದರೆ ನಾನಂತೂ ಬಹುತೇಕ ಮಠಾಧೀಶರು ಸಮಾಜದ ಶತ್ರುಗಳು ಎಂದೇ ಭಾವಿಸಿದ್ದೇನೆ. (ಮುಂದೆ ಮಠಾಧೀಶರು ಎಂಬ ಪದಬಳಕೆ ಇರುವೆಡೆಯೆಲ್ಲ ಬಹುತೇಕ ಎಂದು ಸೇರಿಸಿಕೊಂಡು ಓದುವುದು) ಯಾಕೆಂದರೆ;
ಇವರು ಅಪ್ಪಟ ಜಾತಿವಾದಿಗಳು, ಕೋಮುವಾದಿಗಳು ಮತ್ತು ಯಥಾಸ್ಥಿತಿವಾದಿಗಳು.
ಮನುಷ್ಯರ ಹೆಗಲ ಮೇಲೆ ಕುಳಿತು ಮೆರವಣಿಗೆ ಮಾಡಿಸಿಕೊಳ್ಳುವ ಜೀವವಿರೋಧಿಗಳು.
ಕಿರೀಟ, ಪಲ್ಲಕ್ಕಿ, ಸಿಂಹಾಸನಗಳನ್ನು ಬಳಸಿ ದರ್ಬಾರು ನಡೆಸುವ ಪ್ರಜಾಪ್ರಭುತ್ವ ವಿರೋಧಿಗಳು.
ಕ್ಯಾಪಿಟೇಷನ್ ಲಾಬಿಯ ಅಧಿಕೃತ ಯಜಮಾನರು, ಶಿಕ್ಷಣವನ್ನು ಬಿಕರಿಗಿಟ್ಟವರು.
ಕಾವಿಯ ನೆರಳಲ್ಲಿ ರಾಜಕಾರಣ ಮಾಡುವವರು, ಧರ್ಮ-ರಾಜಕಾರಣವನ್ನು ಕಲಬೆರಕೆ ಮಾಡಿದವರು.
ಎಲ್ಲಕ್ಕಿಂತ ಮಿಗಿಲಾಗಿ ಅಸ್ಪೃಶ್ಯತೆ, ಮೌಢ್ಯ, ಅಂಧಾನುಕರಣೆ, ಹೀನ ಆಚರಣೆಗಳ ಪೋಷಕರು, ಪ್ರತಿಪಾದಕರು.


ಮಠಾಧೀಶರು ಶಾಲೆ ಕಾಲೇಜು ತೆರೆದು ಜ್ಞಾನದಾಸೋಹ ನೀಡುತ್ತಿಲ್ಲವೆ? ಬಡಮಕ್ಕಳಿಗೆ ಶಿಕ್ಷಣ ನೀಡುತ್ತಿಲ್ಲವೆ? ಅನ್ನ ಕೊಡುತ್ತಿಲ್ಲವೆ? ಇಂಥ ಹಲವಾರು ಪ್ರಶ್ನೆಗಳು ಉದ್ಭವಿಸಬಹುದು. ಯಾರ ದುಡ್ಡಿನಲ್ಲಿ ಈ ಶಿಕ್ಷಣ? ಊಟ? ಅದೆಲ್ಲವನ್ನೂ ಅಮಾಯಕ ಭಕ್ತರು ಕೊಟ್ಟಿದ್ದಲ್ಲವೆ?

*****

ಎಲ್‌ಬಿಯವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಎರಡು ಪ್ರಧಾನ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ದಲಿತರಿಗೆ ವಸತಿ ಶಾಲೆಗಳನ್ನು ತೆರೆಯಬೇಕು ಎಂಬುದು ಅವರ ಒಂದು ಆಗ್ರಹವಾದರೆ, ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು ಎಂಬುದು ಮತ್ತೊಂದು ಆಗ್ರಹ. ಒಂದು ವೇಳೆ ಶಿಕ್ಷಣ ರಾಷ್ಟ್ರೀಕರಣಗೊಂಡರೆ ಮಠಾಧೀಶರು ನಿರುದ್ಯೋಗಿಗಳಾಗುತ್ತಾರೆ. ಆಗ ಅವರು ಪೂರ್ಣಕಾಲಿಕ ಧರ್ಮಗುರುಗಳಾಗಬಹುದು. ಆಗಲಾದರೂ ಪರಿಸ್ಥಿತಿ ಬದಲಾಗುವುದೆ?

೧೨ನೇ ಶತಮಾನದಲ್ಲೂ ಇದ್ದ ಇಂದಿನ ಮಠಾಧೀಶರಂಥವರನ್ನು ನೋಡಿಯೇ ಬಸವಣ್ಣ ಹೇಳಿದ್ದು:

ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಳವನು!
ಸಂಬೋಳಿಯೆನುತ್ತ, ಇಂಬಿನಲ್ಲಿದೇನೆ.
ಕೂಡಲಸಂಗಮದೇವ.
ನಿಮ್ಮ ನಾಮವಿಡಿದ ಅನಾಮಿಕ ನಾನು.


ಪೂರಕ ಓದಿಗೆ: ಹೌದು, ಮಠಾಧೀಶರೆಲ್ಲ ಸ್ವಜಾತಿ ಪ್ರೇಮಿಗಳು!

Thursday, February 12, 2009

ಕೊಳಗೇರಿ ಕೋಟ್ಯಧಿಪತಿ: ವಿಮರ್ಶೆಗಳಿಗೊಂದು ವಿಮರ್ಶೆ!

ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುವ ಹೊತ್ತಿನಲ್ಲೇ ಭಾರತದಲ್ಲಿ ಸ್ಲಂಡಾಗ್ ಮಿಲನಿಯೇರ್ ಬಿಡುಗಡೆಯಾಗಿತ್ತು. ಅಧಿವೇಶನ ಕವರೇಜ್‌ಗಾಗಿ ಬೆಳಗಾವಿಯಲ್ಲಿದ್ದ ನಾನು ಕುತೂಹಲ ತಡೆಯಲಾಗದೆ ಸಹೋದ್ಯೋಗಿ ಗೆಳೆಯರಾದ ಶರಣ ಬಸಪ್ಪ, ರಾಮಾಂಜನೇಯ ಅವರೊಂದಿಗೆ ಸಿನಿಮಾ ನೋಡಿದೆ. ಸಿನಿಮಾ ಕುರಿತು ಏನಾದರೂ ಬರೆಯೋಣ ಎಂದು ವಾಪಾಸು ಬರುವಷ್ಟರಲ್ಲಿ ಹತ್ತಾರು ಮಂದಿ ಬ್ಲಾಗರ್‌ಗಳು ಬರೆದಿದ್ದರು. ನಾನು ಅಂದುಕೊಂಡಿದ್ದನ್ನು ಸಾಕಷ್ಟು ಮಂದಿ ಬರೆದಾಗಿತ್ತಾದ್ದರಿಂದ ಸುಮ್ಮನಾದೆ.
ಸಾಂಗತ್ಯದಲ್ಲಿ ನಡೆದ ಚರ್ಚೆಯಂತೂ ಸಾಕಷ್ಟು ಕುತೂಹಲಕಾರಿಯಾಗಿತ್ತು. ಒಳಗೂ ಹೊರಗೂ ಬ್ಲಾಗ್‌ನ ಕುಮಾರ್, ನಗುವ ಬಣ್ಣಗಳು ಬ್ಲಾಗ್‌ನ ಹೇಮಶ್ರೀ ಬರೆದದ್ದು ಹೆಚ್ಚು ಆಪ್ತವೆನ್ನಿಸಿತು.

ಈ ನಡುವೆ ಗೆಳೆಯ, ಪತ್ರಕರ್ತ ಧರಣೀಶ್ ಬೂಕನಕೆರೆ ನನಗೊಂದು ಮೇಲ್ ಕಳಿಸಿದ್ದಾರೆ. ಎಲ್ಲೂ ಪ್ರಕಟವಾಗದ ಬರೆಹವಿದು. ಅವರ ಅನುಮತಿ ಪಡೆದು ಅದನ್ನು ಇಲ್ಲಿ ಪ್ರಕಟಿಸಿದ್ದೇನೆ.

ಪತ್ರಕರ್ತರಿಗೆ, ಬ್ಲಾಗರ್‌ಗಳಿಗೆ ಪರಿಚಿತರೇ ಆಗಿರುವ ಧರಣೀಶ್, ಸ್ಲಂ ಡಾಗ್ ಕುರಿತ ವಿಮರ್ಶೆಗಳನ್ನೇ ವಿಮರ್ಶಿಸಿದ್ದಾರೆ.

ಓವರ್ ಟು ಧರಣೀಶ್...


ಮೇರಾ ಭಾರತ್ ಮಹಾನ್!
ಈ ವಾಕ್ಯ ಇತ್ತೀಚೆಗೆ ಕುಹಕಕ್ಕೆ ಬಳಕೆ ಆಗುವುದೇ ಹೆಚ್ಚು: ಅನುಮಾನವೇ ಬೇಡ ಹಾಗೆ ಕುಹಕವಾಡುವ ಮಂದಿ ಸೋಕಾಲ್ಡ್ ವಿದ್ಯಾವಂತರು! `ಅಕ್ಷರ ಕಲಿತವರು'! ಅವರಲ್ಲಿ `ರಾಷ್ಟ್ರೀಯತೆ' `ಪ್ರಜ್ಞೆ'ಯೂ ಸಿಕ್ಕಾಪಟ್ಟೆ. ಅದರಲ್ಲೂ ಸರಿಯಾದ ರೀತಿಯಲ್ಲಿ ಸಾಹಿತ್ಯ, ಸಂಸ್ಕೃತಿ ಓದಿಕೊಳ್ಳದೆ ಇರುವ ಇವರು ತಮ್ಮದೇ ಆರ್ಕ್ಯೂಟ್ ಕಮ್ಯುನಿಟಿಗಳಲ್ಲಿ, ಬ್ಲಾಗುಗಳಲ್ಲಿ `ದೇಶಭಕ್ತಿ'ಯನ್ನು `ಉಕ್ಕಿ'ಸುತ್ತಾರೆ. ತಾವು ಮಾತ್ರ ಬೆಚ್ಚನೆಯ ಮನೆಯಲ್ಲಿ ಕುಳಿತು ಯುದ್ಧಮಾಡಿ ಎಂದು ಫರ್ಮಾನು ಹೊರಡಿಸುತ್ತಾರೆ. ಮತ ಚಲಾಯಿಸಲು ಸಮಯ ಮಾಡಿಕೊಳ್ಳದಿದ್ದರೂ ಮುಂದಿನ ಪ್ರಧಾನಿ ಯಾರಾಗಬೇಕೆಂದು ನಿರ್ದೇಶನ ಕೊಡುತ್ತಾರೆ. ಯಾರದೋ ಬಗ್ಗೆ ಬೈಯುತ್ತಾ, ಮತ್ಯಾರೋ ಬೈದದ್ದನ್ನೂ ದೊಡ್ಡದು ಮಾಡುತ್ತಾ, ಯಾವುದೋ ದೇವರಿಗೆ ಅವಮಾನವಾಗಿದೆ ಎಂದು ಗುಲ್ಲು ಹಬ್ಬಿಸುತ್ತಾ ಹೋರಾಟಕ್ಕೆ ಇಂಬುಕೊಡುತ್ತಾರೆ.

ಇಂಥ `ಹುಟ್ಟು ಹೋರಾಟಗಾರರು' ಈಗ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ. ಅದೇ `ಸ್ಲಮ್‌ಡಾಗ್ ಮಿಲಿಯನೇರ್ ಮಿಸ್ಟೇಕ್'! ಹಾಲಿವುಡ್ ನಿರ್ದೇಶಕ ಡ್ಯಾನಿ ಬಾಂi `ಸ್ಲಮ್‌ಡಾಗ್ ಮಿಲಿಯನೇರ್' ಸಿನಿಮಾದಲ್ಲಿ ಭಾರತದ ಬಡತನವನ್ನು ಬಂಡವಾಳ ಮಾಡಿಕೊಂಡಿದ್ದಾನೆ ಎನ್ನುವುದು ಇವರ ಆಕ್ರೋಶ. ಪಾಶ್ಚಿಮಾತ್ಯರ ಕಣ್ಣಲ್ಲಿ ಭಾರತ ಯಾವತ್ತೂ ದರಿದ್ರ ದೇಶ ಎನ್ನುವುದನ್ನು ಸ್ಲಮ್‌ಡಾಗ್ ಇನ್ನಷ್ಟು ಪುಷ್ಟೀಕರಿಸಲು ಹೊರಟಿದೆ. ತಮ್ಮ ಜೇಬು ತುಂಬಿಸಿಕೊಳ್ಳಲು ಪಶ್ಚಿಮದವರು ನಮ್ಮ ಕೊಳಕನ್ನು ಜಗತ್ತಿಗೆ ಸಾರಿ ಹೇಳುತ್ತಿದ್ದಾರೆ. ಅವರಿಗೆ ನಮ್ಮ ಕೊಳೆಗೇರಿಗಳಷ್ಟೇ ಕಾಣುತ್ತವೆ, ನಮ್ಮ ಸಾಮರ್ಥ್ಯ ಅರಿವಿಗೆ ಬರುವುದೇ ಇಲ್ಲ ಎನ್ನುವಂತಹ ಉದ್ದನೆಯ ಆರೋಪಗಳ ಪಟ್ಟಿ `ಅಕ್ಷರವಂತರದ್ದು'.

ಆರೋಪ ಮಾಡುವ ಮಂದಿ ಕ್ಷಣ ಮಾತ್ರಕ್ಕಾದರೂ ಮಹಾತ್ಮ ಗಾಂಧೀಜಿಯನ್ನು ಸ್ಮರಿಸಿಕೊಳ್ಳಲಿ. ಗಾಂಧಿ `ಈ ದೇಶದಲ್ಲಿರುವ ದರಿದ್ರ ತೊಲಗುವ ತನಕ ನನಗೆ ಸೂಟು-ಬೂಟು ಬೇಡ' ಎಂದು ಅರೆಬೆತ್ತಲಾದರು. ತುಂಡು ಬಟ್ಟೆಯಲ್ಲೇ ವಿದೇಶ ಸುತ್ತಿ ಬಂದರು. ರಾಷ್ಟ್ರವ್ಯಾಪಿ ಸಂಚರಿಸಿ ಸಂಚಲನ ಉಂಟು ಮಾಡಿದರು. ಗಾಂಧಿಜಿಯನ್ನು ಕೇಳಿ, ಅಥವಾ ನಿಮ್ಮನ್ನು ನೀವೇ ಕೇಳಿಕೊಳ್ಳಿ: ಆ ಮಹಾತ್ಮ ಪ್ರಪಂಚದಾದ್ಯಂತ ಸಾರಿಸಾರಿ ಹೇಳಿದ್ದು ಏನು? ನಮ್ಮ ಬಡತನವಾ? ದಾರಿದ್ರ್ಯವಾ? ಕೊಳಕಾ- ಹುಳುಕಾ? ಏನು?

ಇವು ಕಷ್ಟಕರ ಪ್ರಶ್ನೆಗಳೇನಲ್ಲ. ಉತ್ತರ ಬಲು ಸುಲಭ: ಗಾಂಧಿ ಹೇಳಿದ್ದು ಅವೆಲ್ಲವುಗಳನ್ನು ಮೀರಿದ ಸತ್ಯವನ್ನು. ವಾಸ್ಯವವನ್ನು. ಇಂಥ ಕಹಿ ಸತ್ಯ ಮತ್ತು ಕಟು ವಾಸ್ತವಗಳನ್ನು ಮುಕ್ತವಾಗಿ ಹೇಳಿದರೂ ಗಾಂಧಿ `ನಮ್ಮ ಗಾಂಧೀಜಿ'. ಇಂದಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರೇ `ನಮ್ಮ ಪ್ರತಿನಿಧಿ'. ಶಾಂತಿಗಾಗಿ, ಸರಳತೆಗಾಗಿ, ಭಕ್ತಿಗಾಗಿ, ಹೋರಾಟಕ್ಕಾಗಿ ಎಲ್ಲಕೂ ಅವರೇ `ಐಕಾನ್'!

ಗಾಂಧೀಜಿಯನ್ನು `ನಮ್ಮಗಾಂಧಿ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು ನಮ್ಮ ಇನ್ನಷ್ಟು ಕೊಳಕು- ಹುಳುಕುಗಳತ್ತ ಚರ್ಚೆಯಾದಾಗಲೂ ಅದನ್ನು ಆರೋಗ್ಯಕರವಾಗಿ ತೆಗೆದುಕೊಳ್ಳಬೇಕಲ್ಲವೇ?

*****

ಸ್ಲಮ್‌ಡಾಗ್ ಮಿಲಿಯನೇರ್ ಕೊಳೆಗೇರಿಯ `ಕೊಳಕು' ಬಾಲಕನೊಬ್ಬನ ಕತೆ. ಕೊಳಕು ಬಾಲಕನೊಬ್ಬ ಕುಬೇರನಾದ ಕತೆ. ಕೊಳೆಗೇರಿಯಲ್ಲೂ ಕೂಡ ದೇವರಿಗೆ ಅರ್ಪಿತವಾಗಲು ಅರ್ಹತೆ ಇರುವ ಸಾವಿರಸಾವಿರ ಹೂವುಗಳಿವೆ ಎನ್ನುವುದನ್ನು ಸ್ಪಷ್ಟೀಕರಿಸುವ ಕತೆ. ಪ್ರತಿಷ್ಠಿತ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಕಲಿತ ಪಂಡಿತರೇ ಗೆಲ್ಲಲಾಗದ ಸ್ಪರ್ಧೆಯನ್ನು ಅಕ್ಷರವನ್ನೇ ಕಲಿಯದ ಕೊಳೆಗೇರಿಯ ಪೋರನೊಬ್ಬ ಗೆಲ್ಲುವ ಕತೆ. ಕೊಳೆಗೇರಿಯ ಕೊಳಕರು, `ನಾವು ಕೂಡ ಅಕ್ಷರವಂತರನ್ನೂ ಮೀರಿಸಬಲ್ಲೆವು' ಎಂದು ಎದೆತಟ್ಟುವ ಕತೆ. ಪರಮದಾರಿದ್ರ್ಯವನ್ನೇ ಉಂಡು-ಹೊದೆಯುವ ಪೋರನೊಬ್ಬ `ಬುದ್ದಿವಂತರಿಗಾಗಿ ಮಾತ್ರ' ಇರುವ ಆಟಗಳಲ್ಲಿ ಮೇಜುಕುಟ್ಟಿ ಪಂಥಾಹ್ವಾನ ನೀಡುವ ಕತೆ. ಇಂಥ ಅನೇಕ ಸಂಗತಿಗಳಿಂದ ಸ್ಲಮ್‌ಡಾಗ್ ಬಂಡಾಯದ ಸಂಕೇತ.

`ನಾವೇ ಮೇಲು ಎಂದುಕೊಂಡಿರುವವರಿಗೆ' ಈ ಮೂಲಕ ಸ್ಲಮ್‌ಡಾಗ್ ಸವಾಲು ಹಾಕಿದ್ದು ಸುಳ್ಳಲ್ಲ. ಆದರೆ ಯಾವತ್ತೂ ನೇರವಾಗಿ ಏನನ್ನೂ ಹೇಳದ `ಬುದ್ಧಿವಂತರು' ಅದಕ್ಕೆ ಬೇರೆಯದೇ ರೂಪಕೊಟ್ಟು ಸಿನಿಮಾಕ್ಕೆ ಕಾಟ ಕೊಡಲು ಹೊರಟಿದ್ದಾರೆ. ಅದಕ್ಕೆ ಎಂದಿನಂತೆ ದೇಶಭಕ್ತಿಯೇ ಈ `ರಾಷ್ಟ್ರಭಕ್ತ'ರ `ಅಸ್ತ್ರ' ಆಗಿದೆ. `ಭಾರತವನ್ನು ಕೆಟ್ಟದಾಗಿ ಚಿತ್ರೀಕರಿಸಲಾಗಿದೆ' ಎಂದು ಓಳು ಬಿಡುತ್ತಿದ್ದಾರೆ.

ಈ ಉದ್ಧಾಮ ರಾಷ್ಟ್ರಭಕ್ತರಿಗೆ ಮತ್ತೊಂದಿಷ್ಟು ಪ್ರಶ್ನೆಗಳು: ಮುಂಬೈನಲ್ಲಿ ಕೊಳೆಗೇರಿಗಳು ಇಲ್ಲವೇ? ಆ ಕೊಳೆಗೇರಿಗಳಲ್ಲಿ ಸ್ಲಮ್‌ಡಾಗ್ ನಾಯಕ ಜಮಾಲ್‌ನಂಥ ಹುಡುಗರು ಇಲ್ಲವೇ? ಎಂದೂ ಶಾಲೆಗೆ ಹೋಗದ ಅವರ `ಜೀವನಾನುಭ' ದೊಡ್ಡದಲ್ಲವೇ? ಅವರ ಬದುಕು, ಬದುಕಲ್ಲವೇ? ಅವು ಕೂಡ ಕತೆಯಾಗಲು, ಸಿನಿಮಾ ಆಗಲು ಅರ್ಹ ಅಲ್ಲವೇ? ಮೇಲಾಗಿ ಕೊಳೆಗೇರಿಯ ಗಲೀಜಿನಲ್ಲೂ ಗುಲಾಬಿ ಅರಳಬಲ್ಲದು ಎನ್ನುವುದು ಸತ್ಯವಲ್ಲವೇ?

*****

ಸ್ಲಮ್‌ಡಾಗ್ ಮಿಲಿಯನೇರ್ ವಾಸ್ತವವನ್ನು ಹೇಳುವ ಚಿತ್ರ. ಇಲ್ಲಿ ಕೊಳೆಗೇರಿ ಒಂದು ವೇದಿಕೆ. ಕೊಳೆಗೇರಿಯ ಜಮಾಲ್, ಸಲೀಮ್, ಲತಿಕಾ ಪ್ರಮುಖ ಪಾತ್ರಧಾರಿಗಳು. ಮೂವರದು ಮೂರು ಹಾದಿ. ಅಮಿತಾಬ್ ಬಚನ್‌ನ ಅಪ್ಪಟ ಅಭಿಮಾನಿ ಜಮಾಲ್ ಎನ್ನುವ ಕೊಳಕು ಹುಡುಗ ಕ್ರಮೇಣ ಚಾಯ್‌ವಾಲಾ ಆಗಿ, ಮಿಲೇನಿಯರ್ ಆಗಿ ಹೊರಹೊಮ್ಮುತ್ತಾನೆ. ಕೊಳಕು ಮೆತ್ತಿದ ಬಟ್ಟೆಯೊಂದಿಗೆ, ಖಾಲಿ ತಟ್ಟೆಯೊಂದಿಗೆ ಜೊತೆಗಿದ್ದ ಲತಿಕಾಳನ್ನು ಮಿಲಿಯನೇರ್ ಆದ ನಂತರವೂ ಅಷ್ಟೇ ಪ್ರೀತಿಸುತ್ತಾನೆ. ಜಮಾಲ್‌ನ ಅಣ್ಣ ಸಲೀಮ್ ಕೊಳೆಗೇರಿಯ ಹುಡುಗರ ಇನ್ನೊಂದು ಮುಖದಂತೆ, ಇನ್ನೊಂದು ವಿಭಿನ್ನ ಮುಖದಂತೆ, ಖಳನಂತೆ, ಕೊನೆಗೆ ನಿಜವಾದ ಸಹೋದರನಂತೆ ಇದ್ದಾನೆ. ಕಾಡುವ ದೃಷ್ಟಿಯಲ್ಲಿ ಸಲೀಮ್ ಕೂಡ ಹಿಂದೆ ಬೀಳುವುದಿಲ್ಲ. ಲತಿಕಾ ಪಾತ್ರವೂ ಅಷ್ಟೇ. ಇವು ಸಿನಿಮಾದಲ್ಲಿ ಭಾವನಾತ್ಮಕವಾಗಿ ಸೆಳೆದಿಡುವ ಅಂಶಗಳು.

ಬಂಡಾಯವನ್ನು ಬದಿಗಿಟ್ಟು ನೋಡಿದರೂ ಈ ಭಾವನಾತ್ಮಕ ಸಂಗತಿಗಳು ಮನಮುಟ್ಟಬೇಕು. ಆದರೆ ನಮ್ಮ `ಸಿನಿಮಾ ನೋಡುವ' ದೃಷ್ಟಿಕೋನವೇ ಸರಿ ಇಲ್ಲದಿರುವುದರಿಂದ ಅಲ್ಲಿನ ಹುಳುಕು ಮಾತ್ರ ಕಾಣುತ್ತದೆ ಅಷ್ಟೇ. ಈಗ ಆಗಿರುವುದೂ ಅದೇ.


*****

ಸ್ಲಮ್‌ಡಾಗ್ ಮಿಲಿಯನೇರ್ ಸಿನಿಮಾಕ್ಕೆ ಭಾರತದ ದಾರಿದ್ರ್ಯವನ್ನು ಕಥಾವಸ್ತು ಮಾಡಿಕೊಂಡ ಕುರಿತು ಆಕ್ಷೇಪಿಸಲಾಗುತ್ತಿದೆ. ಅದರಲ್ಲಿ ತಪ್ಪೇನಿದೆ? ಎಲ್ಲಾ ಕತೆಗಳಂತೆ ಇದು ಒಂದು ಕತೆ ಮತ್ತು ಕಥಾವಸ್ತು. ಇಷ್ಟಕ್ಕೂ ಇದು ಭಾರತೀಯ ರಾಜತಾಂತ್ರಿಕ ಅಧಿಕಾರಿ ಬರೆದಿರುವ `ಕ್ಯೂ ಅಂಡ್ ಎ' ಕಾದಂಬರಿ ಆಧರಿಸಿ ಮಾಡಿರುವ ಚಿತ್ರ. ಇಲ್ಲಿ ಭಾರತದ ಮುಂಬೈ ಎನ್ನವ ಊರಿನ ಕೊಳೆಗೇರಿಯ ಪರಿಸ್ಥಿತಿಯನ್ನು ಹೇಳಲಾಗಿದೆ. ಈ ಮೂಲಕ ಭಾರತ ಈಗ ಹೇಗಿದೆ ಎನ್ನುವುದನ್ನು ಹೇಳಿದೆ.

ಅದೇ ಅಲ್ಲವೇ ಆಗಬೇಕಿರುವುದು. ಭಾರತ ಈಗ `ಹೀಗಿದೆ' ಎನ್ನುವುದರಿಂದಲೇ ನಾವು ಹೆಚ್ಚು `ಆಕರ್ಷಕ'ರಾಗುವುದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ನಾವು ಎಲ್ಲ ರೀತಿಯಲ್ಲೂ ಸಮರ್ಥರು, ಸಮೃದ್ಧರು ಎಂದೆಲ್ಲಾ ಫೋಜು ನೀಡುವ ಅಗತ್ಯವಾದರೂ ಏನು?

ಮುಂದೆ ಭಾರತಕ್ಕೆ ಉಜ್ವಲ ಭವಿಷ್ಯವಿದೆ ಎನ್ನುವುದನ್ನು ಭಾರತದ ಪ್ರಗತಿ ಗಮನಿಸಿದ ವಿದೇಶಗಳು, ಸ್ವದೇಶಿಯರು ಸಾಕಷ್ಟು ಬಾರಿ ಹೇಳಿದ್ದಾರೆ. ನಮ್ಮ ಮಾಜಿ ರಾಷ್ಟ್ರಪತಿಗಳೂ ಆದ ವಿಜ್ಞಾನಿ, ಚಿಂತಕ ಡಾ ಅಬ್ದುಲ್ ಕಲಾಂ ಕೂಡ ೨೦೨೦ನೇ ಇಸವಿಯಲ್ಲಿ ಭಾರತದ ಜಗತ್ತಿನ ಬಲಿಷ್ಠ ರಾಷ್ಟ್ರ ಆಗುತ್ತದೆ ಎನ್ನುವ ಭವಿಷ್ಯ ನುಡಿದಿದ್ದಾರೆ.

ಭಾರತಕ್ಕೆ ಉಜ್ವಲ ಭವಿಷ್ಯ ಇದೆ ಎನ್ನುವುದೇ ಆದರೆ ನಾವು ಈಗಿರುವ ಪರಿಸ್ಥಿತಿಯನ್ನು ಮರೆಮಾಚಿ ಮುಂದೊಂದು ದಿನ `ಶ್ರೀಮಂತ'ವಾಗಬೇಕೇ? ಎರಡನೇ ಮಹಾಯುದ್ಧದಲ್ಲಿ ಸಂಪೂರ್ಣ ನಾಶವಾಗಿದ್ದ ಜಪಾನ್ ನಂತರ ಮುಂಚೂಣಿ ರಾಷ್ಟ್ರವಾಯಿತು. ಈಗಲೂ ಜಪಾನ್ ದೇಶದ ಬಗ್ಗೆ ಮಾತನಾಡುವಾಗಲೆಲ್ಲಾ ಅದು ಹಿಂದೆ ಇದ್ದ ಪರಿಸ್ಥಿತಿಯೊಂದಿಗೆ ಹೇಳಲಾಗುತ್ತಿದೆ. ಅದೇ ಅಲ್ಲವಾ ವಾಸ್ತವ? ಏನೂ ಇಲ್ಲದವ ಏನನ್ನಾದರೂ ಮಾಡಿದರೆತಾನೇ ಸಾಧನೆ?

ಭಾರತದ ಕತೆಯೂ ಹಾಗೇ ಆದರೆ ತಪ್ಪೇನು? ಇದೇ ಡ್ಯಾನಿ ಬ್ಲಾಂi ಮುಂದೊಂದು ದಿನ ಭಾರತದ ಶ್ರೀಮಂತ ಸಂಸ್ಕೃತಿಯ ಕುರಿತು. ಸದೃಢ ಭಾರತದ ಬಗ್ಗೆ ಚಿತ್ರಮೊಂದನ್ನು ಮಾಡಬಹುದಲ್ಲವೇ? ಈಗ ಅವರು ವರ್ತಮಾನ ಹೇಳಲಿ, ಗೇಲಿ ಮಾಡಲಿ, ಆದರೆ ಅವುಗಳನ್ನು ತಿದ್ದುಕೊಂಡು, ವಾಸ್ತವವನ್ನು ಒಪ್ಪಿಕೊಂಡು ಭವಿಷ್ಯವವನ್ನು `ಭದ್ರ' ಮಾಡಿಕೊಳ್ಳುವುದು ನಮ್ಮ ಜಾಣತನವಾಗಲಿ.

ಇತಿಹಾಸ ಬಲ್ಲದವನು ಇತಿಹಾಸ ಸೃಷ್ಟಿಸಲಾರ ಎನ್ನುವ ಮಾತು ಮತ್ತೆ ನೆನಪಾಗಬೇಕು. ಜೊತೆಯಲ್ಲಿ ವರ್ತಮಾನವೂ. ಆಗ ಮಾತ್ರ ಭವಿಷ್ಯವೂ ನಿರ್ಮಾಣ ಆಗುತ್ತದೆ. ಇತಿಹಾಸವೂ ನಿರ್ಮಾಣ ಆಗುತ್ತದೆ.

- ಧರಣೀಶ್ ಬೂಕನಕೆರೆ

Wednesday, January 28, 2009

ದೇಸೀಮಾತು ಪುಸ್ತಕವಾಗಿದೆ, ಬಿಡುಗಡೆಗೆ ನೀವೂ ಬನ್ನಿ

ಗೆಳೆಯರೆ,

ಬೆಳಗಾವಿಯಲ್ಲಿ ಎಂಟು ದಿನ ಕಳೆದು, ಬೆಂಗಳೂರು ತಲುಪಿಕೊಂಡರೆ ಬಾಕಿ ಉಳಿದ ಕೆಲಸಗಳ ಸಾಲುಸಾಲು. ಅದರ ನಡುವೆ ಬ್ಲಾಗ್ ಅಪಡೇಟ್ ಮಾಡಲು ಸಾಧ್ಯವಾಗಲಿಲ್ಲ. ಬರೆದರೆ ಬೆಳಗಾವಿ ಅನುಭವಗಳದ್ದೇ ಒಂದು ರಾಶಿ ಬರೆಯಬಹುದಿತ್ತು. ಈಗ ಬರೆಯಲು ಹೊರಟರೆ ಎಲ್ಲವೂ ಔಟ್‌ಡೇಟೆಡ್ ಅನ್ನಿಸುತ್ತಿದೆ. ಬೆಳಗಾವಿಯಿಂದ ತಂದ ಕುಂದ, ಕರದಂಟೂ ಖಾಲಿಯಾಗಿದೆ.

ಒಂದು ಖುಷಿಯ ವಿಚಾರ: ದೇಸೀಮಾತು ಪುಸ್ತಕ ರೂಪದಲ್ಲಿ ಹೊರಬಂದಿದೆ. ಈ ಬ್ಲಾಗ್‌ನಿಂದ ಕೆಲವು ಲೇಖನಗಳನ್ನು ಹೆಕ್ಕಿ, ಮತ್ತಷ್ಟನ್ನು ಸೇರಿಸಿ ಈ ಪುಸ್ತಕ ಪೂರೈಸಿದ್ದೇನೆ. ಪುಸ್ತಕವನ್ನು ಪ್ರಕಾಶಿಸಿರುವುದು ಬೆಂಗಳೂರು ಪ್ರೆಸ್ ಕ್ಲಬ್ ಪ್ರಕಾಶನ. ಬಿಡುಗಡೆಯೂ ಪ್ರೆಸ್ ಕ್ಲಬ್‌ನಲ್ಲೇ, ಜ.೩೧ರಂದು ಶನಿವಾರ ಸಂಜೆ ೬ ಗಂಟೆಗೆ.

ಬಿಡುವು ಮಾಡಿಕೊಂಡು ಖಂಡಿತ ಬನ್ನಿ.

ಅಂದಹಾಗೆ ಕೃತಿಗೆ ಮುನ್ನುಡಿ ಬರೆದಿರುವುದು ಜನಪರ ಪತ್ರಕರ್ತ ಎನ್.ಎ.ಎಂ.ಇಸ್ಮಾಯಿಲ್ ಅವರು. ಕೃತಿಯ ಬೆನ್ನುಡಿಯಲ್ಲಿ ಗೆಳೆಯ ಡಾ.ಶತೇಂದ್ರ ಕುಮಾರ್ ಹೀಗೆ ಬರೆದಿದ್ದಾರೆ:

ಪತ್ರಕರ್ತ ಎಸ್.ಸಿ.ದಿನೇಶ್ ಕುಮಾರ್ ಅವರ ದೇಸೀಮಾತು ಕೃತಿ ಹಲವು ದೃಷ್ಟಿಯಲ್ಲಿ ಮಹತ್ವದ ಕೃತಿ. ವ್ಯವಸ್ಥೆಯ ಸೋಗಲಾಡಿತನವನ್ನು ಬಯಲಾಗಿಸುವ ಇಲ್ಲಿನ ಲೇಖನಗಳು ನಮ್ಮ ವರ್ತಮಾನದ ತಲ್ಲಣಗಳನ್ನು ಹಸಿಹಸಿಯಾಗಿ ಧ್ವನಿಸುತ್ತವೆ. ಮತಾಂಧತೆ, ಮಠಾಧೀಶರ ಕಪಟಗಳು, ಕಾರ್ಪರೇಟ್ ಸಂಸ್ಕೃತಿಯ ವೈರುಧ್ಯಗಳು, ಹಿಂದುಳಿದವರ ಸಮಸ್ಯೆಗಳು, ಸಮೂಹಮಾಧ್ಯಮಗಳ ಗೋಸುಂಬೆತನ, ಕನ್ನಡತನದ ಪ್ರಶ್ನೆಗಳು ಇಲ್ಲಿನ ಲೇಖನಗಳಲ್ಲಿ ಚರ್ಚೆಗೆ ಒಳಗಾಗಿವೆ.

ದಿನೇಶ್ ಅವರು ಮೂಲತಃ ಕವಿ, ಭಾವಜೀವಿ. ಪತ್ರಿಕಾರಂಗದ ಚೌಕಟ್ಟಿಗೆ ಒಳಪಟ್ಟು ಅವರೊಳಗಿನ ಕವಿ ತನ್ನ ವ್ಯಾಪ್ತಿಯನ್ನು ವಿಶಾಲಗೊಳಿಸಿಕೊಂಡಂತೆ ಕಾಣುತ್ತಾನೆ. ಅವರ ಗದ್ಯ ಬರವಣಿಗೆ ಸರಳ, ಸ್ಪಷ್ಟ ಹಾಗು ನೇರವಾಗಿ ಎದೆಗೆ ತಾಕುವಂಥದ್ದು. ಇಲ್ಲಿ ಅತಿರಂಜಕತೆ, ಜಟಿಲ ವಾಕ್ಯಸಂಯೋಜನೆ, ಅಸ್ಪಷ್ಟ ಅಭಿವ್ಯಕ್ತಿಗಳನ್ನು ಹುಡುಕಿದರೂ ಸಿಗುವುದಿಲ್ಲ. ತನಗೆ ಅನಿಸಿದ್ದನ್ನು ನೇರವಾಗಿ, ರಮ್ಯ ಉಪಮೆಗಳ ನೆರವಿಲ್ಲದೆ ಹೇಳುವ ಕಲೆಗಾರಿಕೆ ಅವರಿಗೆ ಸಿದ್ಧಿಸಿದೆ. ಹೀಗಾಗಿ ಇಲ್ಲಿನ ಲೇಖನಗಳು ಪಂಡಿತರಿಗಷ್ಟೇ ಅಲ್ಲದೆ ಸಾಮಾನ್ಯ ಓದುಗನಿಗೂ ಸುಲಭವಾಗಿ ತಲುಪುತ್ತವೆ.

ಕಳೆದ ಆರೇಳು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆ ನಿಂತಿರುವ ಮಲೆನಾಡ ಪ್ರತಿಭೆ ದಿನೇಶ್ ಕುಮಾರ್ ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಸವಾಲನ್ನು ಯಶಸ್ವಿಯಾಗಿ ಎದುರಿಸಿದವರು. ಲೇಖಕನ-ಪತ್ರಕರ್ತನ ವ್ಯಾಪ್ತಿಯನ್ನು ಮೀರಿ ಸಾಮಾಜಿಕ ಚಳವಳಿಯಲ್ಲಿ ಗುರುತಿಸಿಕೊಂಡಿರುವ ಅವರಿಗೆ ಬರವಣಿಗೆ ಸಹ ಚಳವಳಿಯ ಒಂದು ಭಾಗ ಎನಿಸಿದೆ.

ತಮ್ಮ ದೇಸೀಮಾತು ಬ್ಲಾಗ್ ಮೂಲಕ ಅಂತರ್ಜಾಲ ಜಗತ್ತಿನಲ್ಲೂ ಬಹುಬೇಗ ಓದುಗರನ್ನು ಸಂಪಾದಿಸಿರುವ ದಿನೇಶ್ ‘ಇಂದು ಸಂಜೆ‘ ಪತ್ರಿಕೆಯ ಸಂಪಾದಕರಾಗಿ ಹೊಸಸಾಧ್ಯತೆಗಳ ಕಡೆ ತೆರೆದುಕೊಳ್ಳಲು ಯತ್ನಿಸುತ್ತಲೇ ಇದ್ದಾರೆ. ‘ದೇಸೀಮಾತು ಅಪ್ಪಟ ದೇಸೀಪ್ರತಿಭೆಯ ಸಹಜ ಅಭಿವ್ಯಕ್ತಿಯ ಅನಾವರಣ. ಜನಪರ ಪತ್ರಿಕಾವೃತ್ತಿಯ ಹೊಸ ಪರಿಭಾಷೆಯನ್ನು ಕಟ್ಟಿಕೊಟ್ಟಿರುವ ಈ ಕೃತಿ ಹೆಚ್ಚು ಹೆಚ್ಚು ಜನರನ್ನು ತಲುಪಬೇಕಾಗಿದೆ.
-ಡಾ. ಶತೇಂದ್ರ ಕುಮಾರ್

ಕಾರ್ಯಕ್ರಮಕ್ಕೆ ಬನ್ನಿ ಎಂದು ಮತ್ತೊಮ್ಮೆ ನಿಮ್ಮೆಲ್ಲರನ್ನು ಆಹ್ವಾನಿಸುತ್ತ
ಪ್ರೀತಿಯಿಂದ
ದಿನೇಶ್ ಕುಮಾರ್ ಎಸ್.ಸಿ.
(ದಿನೂ ಸ.ಚಂ.)

Thursday, January 15, 2009

‘ನಿಜ ಮನುಷ್ಯ’ರ ಹುಡುಕಾಟದಲ್ಲಿ ‘ಮುತ್ತಾಗದ ಮಳೆಹನಿ’

ಶೃಂಗೇರಿ ಹತ್ತಿರದ ದಟ್ಟ ಕಾನನದ ಪುಟ್ಟ ಮಲೆನಾಡು ತೊರೆದು ಅಕ್ಷರಗಳನ್ನು ಜತೆ ಕಟ್ಟಿಕೊಂಡು ಹೊಟ್ಟೆಪಾಡಿಗಾಗಿ ಶಿವಮೊಗ್ಗೆ, ಬೆಂಗಳೂರಂಥ ನಿರ್ಜನ ನಗರಿಗಳಲ್ಲಿ ಗೂಡು ಕಟ್ಟಲಾರಂಭಿಸಿದಾಗ ನನ್ನೊಳಗೆ ತೆರೆದುಕೊಂಡ ಅಕ್ಷರ ರೂಪಗಳಿವು... ಎನ್ನುತ್ತ ತಮ್ಮ ಕಥಾಸಂಕಲನವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವ ವೈ.ಗ.ಜಗದೀಶ್ ಕನ್ನಡದ ಹೊಸ ತಲೆಮಾರಿನ ಸಮರ್ಥ, ಶಕ್ತಿಶಾಲಿ ಕಥೆಗಾರನಾಗಿ ಹೊರಹೊಮ್ಮಿದ್ದಾರೆ.

‘ಮುತ್ತಾಗದ ಮಳೆ ಹನಿ ಜಗದೀಶ್ ಅವರ ಕಥಾ ಸಂಕಲನ ಶೀರ್ಷಿಕೆ. ಇದು ಇದೇ ಶೀರ್ಷಿಕೆಯ ಕಥೆಯೊಂದು ಸಂಕಲನದಲ್ಲಿದೆ. ಹೊಸ ಸಂಕ್ರಮಣಗಳಿಗೆ ತೆರೆದುಕೊಂಡಿರುವ ಮಲೆನಾಡಿನ ಸಂಕೀರ್ಣ ಬದುಕನ್ನು ಅನಾವರಣಗೊಳಿಸುವ ಇಲ್ಲಿನ ಕಥೆಗಳು ಒಂದೊಂದೂ ಒಂದೊಂದು ಮುತ್ತುಗಳೇ.

ಜಗದೀಶ್ ಅವರ ಒಳಕಾಣ್ಕೆಗಳು ಇಲ್ಲಿ ವಿಸ್ತಾರವಾಗಿ ಹರಡಿಕೊಂಡಿವೆ. ಹೀಗಾಗಿಯೇ ಅವರಿಗೆ ಬೆಂಗಳೂರು, ಶಿವಮೊಗ್ಗದಂಥ ನಗರಗಳು ಅವರಿಗೆ ನಿರ್ಜನ ನಗರಿಗಳಂತೆ ಕಾಣಿಸುತ್ತವೆ. ಇಂಥ ನಿರ್ಜನ ನಗರಿಗಳ ಕಥೆಗಳನ್ನು ಬಿಟ್ಟು, ಜಗದೀಶ್ ನೇರವಾಗಿ ತಮ್ಮ ಕರುಳು ಬಳ್ಳಿ ತೊಡರಿಕೊಂಡಿರುವ ಮಲೆನಾಡಿನ ಗರ್ಭಕ್ಕೇ ಇಳಿದು ಕಥೆಗಳನ್ನು ಹೆಕ್ಕಿ ತಂದು ಇಲ್ಲಿ ಹರವಿದ್ದಾರೆ.ಜಗದೀಶ್ ತಮ್ಮ ಕಥೆಗಳ ಕುರಿತು ತಾವೇ ಬರೆದುಕೊಳ್ಳುವುದು ಹೀಗೆ: “ಸಂಬಂಧ, ವೈವಿಧ್ಯತೆ, ಬಣ್ಣಗಳೇ ಇಲ್ಲದ ಏಕಾಕೃತಿಯ ಮನುಷ್ಯರನ್ನು ಕಂಡು ನಿರ್ವಿಣ್ಣನಾದಾಗಲೆಲ್ಲ ನನ್ನ ಮನಸ್ಸು ಏಕಾಂತಕ್ಕೆ ಸರಿದು, ಬಾಲ್ಯದಲ್ಲಿ ಕಂಡ ಸೊಬಗು, ಚಿತ್ರ ಚಿತ್ತಾರದ ಗಮ್ಯದ ಕಡೆಗೆ ಹೋಗಿಬಿಡುತ್ತದೆ. ಏರಿಳಿತ, ಸಿಟ್ಟು ಸೆಡವಿರದ ಟಿವಿ ಜಾಹೀರಾತಿನ ಲಲನೆಯರಂತೆ ಸದಾ ಹುಸಿನಗುವ ನಿರ್ಭಾವದ ನಗರದ ಬೊಂಬೆಗಳನ್ನು ಕಂಡಾಗಲೆಲ್ಲ ಎಳೆವೆಯಲ್ಲಿ ಕಂಡ ನಡೆದಾಡುವ, ಜಗಳಾಡುವ, ಮುನಿಸು ತೋರುವ, ಅಕ್ಕರೆ-ಕಕ್ಕುಲಾತಿಯಿಂದ ಪ್ರೀತಿಸುವ ನಿಜ ಮನುಷ್ಯರು ಕಣ್ಮುಂದೆ ಸುಳಿದಾಡುತ್ತಾರೆ. ಅಬ್ಬಾ, ಅಂತೂ ಮನುಷ್ಯರು ಸಿಕ್ಕರಲ್ಲ ಎಂದು ಹಿಡಿದುಕೊಳ್ಳುವಷ್ಟರಲ್ಲಿ ಅದು ಭ್ರಮೆಯೆನ್ನಿಸಿ ಸತ್ಯ ಗೋಚರವಾಗಿಬಿಡುತ್ತದೆ.’’

ಒಂದರ್ಥದಲ್ಲಿ ಇಡೀ ಸಂಕಲನದಲ್ಲಿ ಜಗದೀಶ್ ‘ನಿಜ ಮನುಷ್ಯ’ರನ್ನು ಹುಡುಕಿಕೊಂಡು ಹೋಗಿದ್ದಾರೆ. ಈ ಹುಡುಕಾಟದ ದಾರಿಯ ತೇವಗೊಂಡ ನೆನಪುಗಳು, ಪುಳಕ, ರೋಮಾಂಚನ, ನಿರಾಸೆ, ನೋವು ಎಲ್ಲವೂ ಇಲ್ಲಿ ಹರಳುಗಟ್ಟಿವೆ.

ವೈ.ಗ.ಜಗದೀಶ್ ಹೊಸ ತಲೆಮಾರಿನ ಕಥೆಗಾರರು. ಅವರಿಗೆ ಈ ತಲೆಮಾರಿನ ಸಂಕಟಗಳೆಲ್ಲವೂ ಕಾಡಿವೆ. ಜಾಗತೀಕರಣ ಹಾಗು ಕೋಮುವಾದದ ಬಾಹುಗಳು ಮನುಷ್ಯರ ಮೈ ಮನಸ್ಸುಗಳನ್ನು ಆವರಿಸಿಕೊಳ್ಳುತ್ತಿರುವುದನ್ನು ಅವರು ಬಲ್ಲರು. ಅದರಲ್ಲೂ ಮಲೆನಾಡಿನಲ್ಲಿ ಉದ್ಭವವಾಗಿರುವ ಹಳೇ ಸಮಸ್ಯೆಗಳ ಹೊಸ ಮುಖಗಳು, ಹೊಸ ಸಮಸ್ಯೆಗಳ ಹಳೆ ಮುಖಗಳನ್ನು ಅವರು ಸ್ಪಷ್ಟವಾಗಿ ಗುರುತಿಸಿಕೊಂಡಿದ್ದಾರೆ. ಈ ಸಮಸ್ಯೆಗಳು ಅವರನ್ನು ಕಾಡಿವೆ, ಕೆಣಕಿವೆ. ಹೀಗಾಗಿ ಜಗದೀಶ್ ಅವರ ಕಥೆಗಳಲ್ಲಿ ಕಾಣಿಸಿಕೊಳ್ಳುವುದು ಹೊಸ ಮಲೆನಾಡು.

ಸಂಕಲನಕ್ಕೆ ಮುನ್ನುಡಿ ಬರೆಯುತ್ತ ಡಾ.ಕೇಶವ ಶರ್ಮ ಅವರು ಇದನ್ನು ಗುರುತಿಸಿದ್ದಾರೆ. ‘ಮಲೆನಾಡು ನಾವು ಗ್ರಹಿಸಿದಷ್ಟು ಸುಂದರವಾಗಿಲ್ಲ. ಮಲೆನಾಡಿನ ಹೃದಯದ ಆಳದಲ್ಲಿ ಒಂದು ಕ್ರೌರ್‍ಯವಿದೆ. ಈ ವಾಸ್ತವವನ್ನು ಎಲ್ಲೂ ವಾಚ್ಯಗೊಳಿಸದೆ ಈ ಕತೆಗಳಲ್ಲಿ ಹೇಳಿರುವುದು ಗಮನಾರ್ಹ.

ಲೇಖಕ ತನ್ನ ಬದ್ಧತೆಯನ್ನು ಇಟ್ಟುಕೊಂಡರೂ ಅದನ್ನು ಕರಪತ್ರವಾಗಿಸದೇ ಬರೆಯುವುದು ಅಗತ್ಯ. ಈ ಕಲೆಯು ಜಗದೀಶರಿಗೆ ಸಿದ್ಧಿಸಿದೆ. ಏಕೆಂದರೆ ಎಲ್ಲವನ್ನೂ ಕತೆಯೊಳಗೆ ತಂದು ಹಾಕಬೇಕೆಂಬ ತುರಾತುರಿಯೂ ಅವರಿಗಿಲ್ಲ.’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಜಗದೀಶ್ ಸಮಕಾಲೀನ ಸಮಸ್ಯೆಗಳನ್ನು ಅನಾವರಣಗೊಳಿಸುತ್ತಲೇ, ಸಮಸ್ಯೆಗಳ ಹಿನ್ನೆಲೆಯಲ್ಲೇ ಜಟಿಲಗೊಳ್ಳುತ್ತಿರುವ ಮನುಷ್ಯ ಸಂಬಂಧಗಳ ಕುರಿತು ಮಾತನಾಡುತ್ತಾರೆ. ತನ್ನ ಅಭಿಪ್ರಾಯವನ್ನು ಓದುಗರ ಮೇಲೆ ಹೇರುವ ಸಾಹಸಕ್ಕೆ ಕೈಹಾಕದೆ, ಓದುಗರಲ್ಲೇ ಹೊಸಹೊಸ ಅಭಿವ್ಯಕ್ತಿಗಳನ್ನು ಚಿಮ್ಮಿಸುವಷ್ಟು ಶಕ್ತಿಶಾಲಿಯಾಗಿ ಈ ಕಥೆಗಳು ಹೆಣೆದುಕೊಂಡಿವೆ.

ವೈ.ಗ.ಜಗದೀಶ್ ವೃತ್ತಿಯಿಂದ ಪತ್ರಕರ್ತರು. ಹೀಗಾಗಿ ಇಲ್ಲಿನ ಕೆಲವು ಕಥೆಗಳಲ್ಲಿ ಪತ್ರಕರ್ತನ ಕುತೂಹಲಗಳೂ ಅಲ್ಲಲ್ಲಿ ಕಾಣಿಸುತ್ತವೆ. ಆದರೆ ಕಥೆಗಾರ, ಪತ್ರಕರ್ತನ ವ್ಯಾಪ್ತಿಗಳನ್ನು ಮೀರಿ ಜಗದೀಶ್ ‘ಸಹಜ ಮನುಷ್ಯ’ರನ್ನು ಹುಡುಕಿಕೊಂಡು ಹೋಗುವ ಮೂಲಕ ಅಸಹಜ ವ್ಯಕ್ತಿ-ಭಾವನೆಗಳ ಜಗತ್ತಿಗೆ ಸವಾಲೊಡ್ಡುತ್ತಾರೆ.

ಜಗದೀಶ್ ಭಾಷೆಯನ್ನು ತಮ್ಮ ಕಥಾನಕಗಳ ಸೃಷ್ಟಿಗೆ ಒಗ್ಗುವಂತೆ ಬಳಸಿಕೊಳ್ಳುವುದನ್ನು ರೂಡಿಸಿಕೊಂಡಿದ್ದಾರೆ. ಸಂಕಲನದ ಕಡೆಯ ಕಥೆ ‘ಉರಿಯ ಬೆಂಕಿಗೆ ಮೈಯೆಲ್ಲಾ ನಾಲಿಗೆಯಲ್ಲಿನ ಕೆಲವು ಸಾಲುಗಳು ಹೀಗಿವೆ:

“..ಚಣಹೊತ್ತು ಸುಮ್ಮನಿದ್ದ ಜ್ಯೋತಿಯು ಒಳಗಣ್ಣ ತೆರೆಯಿತು. ಬೆಳ್ಳಂಬೆಳಕಿನಲ್ಲಿ ಕತ್ತಲೆಯಾಯಿತು. ಗವ್ವಗತ್ತಲೆಯಲ್ಲಿ ದೀಪವಾಯಿತು. ಗಾಳಿಯಲ್ಲಿ ಉಸಿರಾಯಿತು. ನೀರಲ್ಲಿ ಆವಿಯಾಯಿತು. ಕೊನೆಯರಿಯದ ಸಮುದ್ರವಾಯಿತು. ಗಿಡದೆಲೆಯ ಹಸಿರಾಯಿತು. ಅಳತೆಗೆ ನಿಲುಕದ ಆಗಸವಾಯಿತು. ಎಣಿಸಲಾರದ ನಕ್ಷತ್ರವಾಯಿತು. ಜಗದಗಲ ಮುಗಿಲಗಲ ಕಣ್ಣು ಗೆಜ್ಜೆಗಳ ಸಪ್ಪಳವಾಯಿತು. ಹಕ್ಕಿಯ ಉಲಿಯಾಯಿತು. ಅಮ್ಮನ ಎದೆಹಾಲಾಯಿತು. ಅಳುವ ಕಂದನ ಕೊರಳ ದನಿಯಾಯಿತು. ಮೌನದೊಳಗಿನ ನಿಶ್ಯಬ್ದವಾಯಿತು. ಶಬ್ದದೊಳಗಣ ಗದ್ದಲವಾಯಿತು... ಜ್ಯೋತಿಯು.....’’

ಅಂದ ಹಾಗೆ ಜಗದೀಶ್ ಅವರ ಕೃತಿಯನ್ನು ಪ್ರಕಟಿಸಿರುವುದು ಬೆಂಗಳೂರಿನ ಅನು ಪ್ರಕಾಶನ. ಪುಸ್ತಕದ ಬೆಲೆ ೬೦ ರುಪಾಯಿ.

Sunday, January 11, 2009

ಈ ಹೆಣ್ಣುಮಗಳ ಜೀವ ಉಳಿಸುವಿರಾ ಪ್ರಿಯ ದೇಶಭಕ್ತ ಬಂಧುಗಳೇ?ಪ್ರಿಯ ದೇಶಭಕ್ತರೇ, ರಾಜಕೀಯ ನಾಯಕರುಗಳೇ, ಮೀಡಿಯಾ ಮೇಧಾವಿಗಳೇ, ಸಾಹಿತಿಗಳೇ, ಕಲಾವಿದರೇ, ಕ್ರೀಡಾಪಟುಗಳೇ, ಬುದ್ಧಿಜೀವಿಗಳೇ, ಸಮಾಜವಿಜ್ಞಾನಿಗಳೇ, ಮಾನವಹಕ್ಕು ಹೋರಾಟಗಾರರೇ, ಸ್ತ್ರೀವಾದಿ ಚಿಂತಕರೇ, ಎಲ್ಲ ಬಗೆಯ ಸಂಘಟನೆಗಳ ಮುಖಂಡರೇ, ಕ್ರಿಯಾಶೀಲ ಬ್ಲಾಗರ್‌ಗಳೇ, ಅನಿವಾಸಿ ಭಾರತೀಯರೆ, ಸಾಮಾನ್ಯ ನಾಗರಿಕರೇ, ಮಾನವತೆಯಲ್ಲಿ ವಿಶ್ವಾಸವಿಟ್ಟ ಎಲ್ಲ ಜೀವಗಳೇ ನಿಮ್ಮೆಲ್ಲರಲ್ಲಿ ಒಂದು ಮನವಿ: ಈ ಹೆಣ್ಣುಮಗಳ ಜೀವ ಉಳಿಸಿ.

ಈಕೆಯ ಪ್ರಾಣ ಉಳಿಯಬೇಕು. ಉಳಿಸುವ ಹೊಣೆ ಎಲ್ಲ ಭಾರತೀಯರದು. ಆಕೆ ಉಳಿಯುವ ಮೂಲಕ ಮಾನವೀಯತೆ ಉಳಿಯಬೇಕು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಒಂದಾಗಿರುವ ಇಂಡಿಯಾದ ಮಾನ ಉಳಿಯಬೇಕು. ಮಾನವ ಹಕ್ಕು ಎಂಬ ಶಬ್ದಕ್ಕೆ ಅರ್ಥವಾದರೂ ಉಳಿಯಬೇಕು.

ಈಕೆ ಆತಂಕವಾದಿಯಲ್ಲ, ಬಂಡುಕೋರಳಲ್ಲ, ಕೋಮುವಾದಿಯಲ್ಲ, ಸಮಾಜಘಾತಕಳಲ್ಲ. ಈಕೆಯ ಹೆಸರು ಐರೋಮ್ ಶರ್ಮಿಳಾ ಚಾನು. ನಮ್ಮ- ನಿಮ್ಮ ಮನೆಯ ಹೆಣ್ಣು ಮಕ್ಕಳಂಥವಳು. ಭಾರತೀಯಳು. ಇಂಡಿಯಾದ ಆಭರಣ ಎಂದು ಕರೆಯಲ್ಪಡುವ (ಈ ವಿಶೇಷಣ ಮಣಿಪುರಿಗಳ ಪಾಲಿಗೆ ಎಂಥ ಕ್ಲೀಷೆ ಎನ್ನುವುದು ಬೇರೆ ವಿಷಯ) ಮಣಿಪುರ ರಾಜ್ಯದವಳು.

ಶರ್ಮಿಳಾಗೆ ಆಗಿರುವುದು ಏನೆಂದರೆ ಈಕೆ ಆಹಾರ ಸೇವಿಸುತ್ತಿಲ್ಲ. ಅರ್ಥಾತ್ ಉಪವಾಸ ಸತ್ಯಾಗ್ರಹ ನಿರತಳಾಗಿದ್ದಾಳೆ. ಒಂದೆರಡು ದಿನಗಳ ಉಪವಾಸವಲ್ಲ ಇದು, ತಿಂಗಳುಗಳ ಉಪವಾಸವೂ ಅಲ್ಲ. ಸುದೀರ್ಘ ಎಂಟು ವರ್ಷಗಳಿಂದ ಈಕೆ ಏನನ್ನೂ ಸೇವಿಸಿಲ್ಲ ಎಂದರೆ ನೀವು ನಂಬಲೇಬೇಕು. ಆಕೆ ಆಮರಣಾಂತ ಉಪವಾಸಕ್ಕೆ ಕುಳಿತಿದ್ದು ೨೦೦೦ನೇ ಇಸವಿಯ ನವೆಂಬರ್ ತಿಂಗಳಿನಲ್ಲಿ. ಅಲ್ಲಿಂದ ಈಚೆಗೆ ಸತ್ಯಾಗ್ರಹ ಮುಂದುವರೆದೇ ಇದೆ.

ಸದ್ಯಕ್ಕೆ ಈಕೆಗೆ ಇಂಫಾಲದ ಜವಹರಲಾಲ್ ನೆಹರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಲವಂತವಾಗಿ ಮೂಗಿನ ಮೂಲಕ ದ್ರವಾಹಾರಗಳನ್ನು ನೀಡಲಾಗುತ್ತಿದೆ. ಎಷ್ಟು ಒತ್ತಾಯಿಸಿದರೂ ಬಾಯಿ ತೆರೆಯದ ಕಾರಣಕ್ಕಾಗಿ ಈ ವ್ಯವಸ್ಥೆ. ವೈದ್ಯರ ಪ್ರಕಾರ ಅವಳ ಬದುಕು ಇನ್ನು ತೀರಾ ಕಷ್ಟ. ಆಹಾರ ಸೇವಿಸದ ಹಿನ್ನೆಲೆಯಲ್ಲಿ ಆಕೆಯ ದೇಹದ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಬೇರೆ ಬೇರೆ ಖಾಯಿಲೆಗಳಿಗೆ ದಾರಿಮಾಡಿಕೊಟ್ಟಿದೆ. ಬಹುಶಃ ಇದೇ ವ್ಯವಸ್ಥೆ ಮುಂದುವರೆದರೆ ಆಕೆ ಇನ್ನು ಬದುಕುವುದು ಸಾಧ್ಯವಿಲ್ಲ.

ಅದಕ್ಕಾಗಿ ಕಳೆದ ಡಿಸೆಂಬರ್‌ನಿಂದ ಆಕೆಯ ಅಭಿಮಾನಿಗಳು ‘ಶರ್ಮಿಳಾ ಉಳಿಸಿ ಎಂಬ ಮ್ಯಾರಥಾನ್ ಧರಣಿ ಆರಂಭಿಸಿದ್ದಾರೆ. ದಿನವೂ ಒಂದಷ್ಟು ಸಂಘಟನೆಗಳು ಆಕೆಯ ಜೀವ ಉಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಸರಣಿ ಧರಣಿ ನಡೆಸುತ್ತಿವೆ.

ಇಡೀ ಜಗತ್ತಿನ ಇತಿಹಾಸದಲ್ಲಿ ಸರ್ಕಾರದ ಮುಂದೆ ಒಂದೇ ಒಂದು ಬೇಡಿಕೆ ಇರಿಸಿ ಎಂಟು ವರ್ಷಗಳ ಕಾಲ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಿರುವ ಉದಾಹರಣೆಯೇ ಇಲ್ಲ. ಅಹಿಂಸಾತ್ಮಕ ಹೋರಾಟದ ಹಾದಿಯಲ್ಲಿ ಯಾರೂ ಮುಟ್ಟಲಾಗದ ಎತ್ತರವನ್ನು ಶರ್ಮಿಳಾ ಏರಿದ್ದಾಳೆ. ಬಹುಶಃ ಇನ್ನೊಬ್ಬ ಶರ್ಮಿಳಾ ಜಗತ್ತಿನಲ್ಲಿರಲು ಸಾಧ್ಯವೇ ಇಲ್ಲ, ಮುಂದೆ ಹುಟ್ಟಲೂ ಸಾಧ್ಯವಿಲ್ಲ. ಹಾಗಾಗಿ ಇಡೀ ಮಣಿಪುರವೇ ಶರ್ಮಿಳಾ ಬದುಕುವಂತಾಗಲಿ ಎಂದು ಹಾರೈಸುತ್ತಿದೆ.

*****

ಶರ್ಮಿಳಾ ಕಥಾನಕ ಕೇಳುವ ಮುನ್ನ ಮಣಿಪುರದ ಹಿನ್ನೆಲೆ ಕೇಳಬೇಕು. ಮಾಯನ್ಮಾರ್ ಗಡಿಗೆ ಹೊಂದಿಕೊಂಡಿರುವ ಮಣಿಪುರ ೨೨,೩೨೭ ಚದರ ಕಿ.ಮೀ ವ್ಯಾಪ್ತಿಯ ಪುಟ್ಟ ರಾಜ್ಯ. ೨೦೦೧ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ ೨೨ ಲಕ್ಷ. ಮಣಿಪುರಿ ಇಲ್ಲಿನ ರಾಜ್ಯಭಾಷೆ. ಶೇ.೬೦ರಷ್ಟು ಸಾಕ್ಷರತೆ ಪ್ರಮಾಣವಿದೆ.

ನೀಲಿಬಣ್ಣದ ಪರ್ವತ ಶ್ರೇಣಿಗಳ ನಡುವೆ ಇರುವ ಮಣಿಪುರ ನಿಸರ್ಗ ರಮಣೀಯತೆಯ ಅದ್ಭುತ ಪ್ರದೇಶ. ಹಾಗೆಂದೇ ಪಂಡಿತ್ ಜವಹರಲಾಲ್ ನೆಹರೂ ಮಣಿಪುರವನ್ನು ‘ಭಾರತದ ಆಭರಣ ಎಂದು ಬಣ್ಣಿಸಿದ್ದರು.

೧೮೯೧ರದಲ್ಲಿ ಮಣಿಪುರವನ್ನು ಬ್ರಿಟಿಷರು ಯುದ್ಧದ ಮೂಲಕ ವಶಪಡಿಸಿಕೊಂಡಿದ್ದರು. ಭಾರತ ಗಣರಾಜ್ಯಕ್ಕೆ ಮಣಿಪುರ ಸೇರ್ಪಡೆಯಾಗಿದ್ದು ೧೯೪೯ರ ಅಕ್ಟೋಬರ್ ೧೫ರಂದು. ೧೯೭೨ರ ಜನವರಿ ೨೧ರಂದು ಮಣಿಪುರಕ್ಕೆ ಪೂರ್ಣಪ್ರಮಾಣದ ರಾಜ್ಯದ ಸ್ಥಾನಮಾನ ದೊರೆಯಿತು.

ಮಣಿಪುರದಲ್ಲಿ ಮೀಟೀ, ನಾಗ, ಕುಕಿ, ಪಂಗಾಲ್ ಮತ್ತಿತರ ಹಲವು ಸಮುದಾಯಗಳು ಶತಮಾನಗಳಿಂದ ಬದುಕುತ್ತ ಬಂದಿವೆ. ಎಲ್ಲ ಸಮುದಾಯಗಳೂ ತಮ್ಮದೇ ಆದ ಸಂಸ್ಕೃತಿ, ಆಚರಣೆಗಳನ್ನು ಹೊಂದಿವೆ. ಇಲ್ಲಿನ ಜನ ಸಾಂಸ್ಕೃತಿಕವಾಗಿ ಶ್ರೀಮಂತರು. ಜಾನಪದ ನೃತ್ಯ, ಹಾಡು, ಕಲೆ ಎಲ್ಲವೂ ಇಲ್ಲಿವೆ. ಜನ ಕರಕುಶಲ ವಸ್ತುಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರು.

ಮಣಿಪುರ ಹಬ್ಬಗಳ ನಾಡು. ವರ್ಷಪೂರ್ತಿ ಒಂದಲ್ಲ ಒಂದು ಹಬ್ಬ ಇಲ್ಲಿ ಆಚರಣೆಯಾಗುತ್ತವೆ. ಮಣಿಪುರಿಗಳ ಸಾಂಸ್ಕೃತಿಕ ವೈಭವಕ್ಕೆ ಈ ಹಬ್ಬಗಳು ಸಾಕ್ಷಿ. ಮಣಿಪುರದಲ್ಲಿರುವ ಬುಡಕಟ್ಟು ಸಮುದಾಯಗಳು ಹಾಡು, ನೃತ್ಯಗಳ ಮೂಲಕವೇ ಹಬ್ಬಗಳನ್ನು ಆಚರಿಸಿಕೊಳ್ಳುತ್ತವೆ.

ಇಂಥ ಮಣಿಪುರ ಸ್ವಾತಂತ್ರ್ಯ ಬಂದಾಗಿನಿಂದಲೂ ನೆಮ್ಮದಿಯಾಗಿಲ್ಲ. ಸ್ವಾತಂತ್ರ್ಯ ಎಂಬ ಪದದ ಅರ್ಥವೇ ಗೊತ್ತಿಲ್ಲದಷ್ಟು ಅಲ್ಲಿನ ಜನರು ಅಭದ್ರತೆಯಿಂದ ನರಳುತ್ತಿದ್ದಾರೆ. ನಮ್ಮ ಕೇಂದ್ರ ಸರ್ಕಾರದ ಪ್ರಕಾರ ಮಣಿಪುರ ಗಲಭೆಗ್ರಸ್ಥ ಪ್ರದೇಶ. ಹಾಗಾಗಿ ಅಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(೧೯೫೮) ಜಾರಿಯಲ್ಲಿದೆ. ಈ ಕಾಯ್ದೆ ಜಾರಿಯಾಗಿದ್ದು ೧೯೮೦ರಲ್ಲಿ. ಅಲ್ಲಿಂದ ಈಚೆಗೆ ನಮ್ಮ ಸೇನಾಪಡೆಯ ತುಕಡಿಗಳು ಮಣಿಪುರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಜನರ ಬದುಕು ಮೂರಾಬಟ್ಟೆಯಾಗಿ ಹೋಗಿದೆ.

ಇದೇ ಕಾಯ್ದೆಯನ್ನು ಹಿಂತೆಗೆದುಕೊಳ್ಳಿ ಎಂದು ಒತ್ತಾಯಿಸಿ, ಶರ್ಮಿಳಾ ೨೦೦೦ನೇ ಇಸವಿಯ ಡಿಸೆಂಬರ್‌ನಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತ ಬಂದಿದ್ದಾಳೆ. ಉಪವಾಸ ಮುಂದುವರೆಸಿದರೆ ಆಕೆ ಬಹುಶಃ ಈ ವರ್ಷವೇ ಸತ್ತುಹೋಗಲಿದ್ದಾಳೆ!

****

ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆ (೧೯೫೮) (ಸವಿಕಾ) ದೇಶದ ಕ್ರೂರ ಕಾಯ್ದೆಗಳಿಗೆ ತಾಯಿಯಿದ್ದಂತೆ. ಈಶಾನ್ಯ ರಾಜ್ಯಗಳಲ್ಲಿ ನಾಗಾ ಬುಡಕಟ್ಟು ಜನರ ಹೋರಾಟದ ಹಿನ್ನೆಲೆಯಲ್ಲಿ ೧೯೫೮ರಲ್ಲಿ ಜಾರಿಗೆ ತಂದ ಕಾಯ್ದೆ ಇದು. ಸರಳವಾಗಿ ಹೇಳುವುದಾದರೆ ಈ ಕಾಯ್ದೆ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಮಿಲಿಟರಿ ಆಡಳಿತಕ್ಕೆ ಅವಕಾಶ ಕಲ್ಪಿಸುತ್ತದೆ. ಯಾವ ದಿಕ್ಕಿನಿಂದ ನೋಡಿದರೂ ಪೋಟಾ, ಟಾಡಾ ಇತ್ಯಾದಿಗಳಿಗಿಂತ ಸವಿಕಾ ಭೀಕರ ಕಾಯ್ದೆ.

ಕಾಯ್ದೆಯ ಪ್ರಕಾರ ಅಪರಾಧ ಚಟುವಟಿಕೆ ನಡೆಸಿದ ವ್ಯಕ್ತಿ ಅಥವಾ ಅಪರಾಧಕ್ಕೆ ಹೊಂಚು ಹಾಕಿರುವ ವ್ಯಕ್ತಿಯನ್ನು ಯಾವುದೇ ವಾರೆಂಟ್ ಇಲ್ಲದೆ ಬಂಧಿಸಲು ಸೇನೆಗೆ ಅವಕಾಶವಿರುತ್ತದೆ. ಯಾವುದೇ ಪ್ರದೇಶಕ್ಕೆ, ಮನೆಗೆ, ಕಛೇರಿಗೆ ವಾರೆಂಟ್ ಇಲ್ಲದೆ ಪ್ರವೇಶಿಸುವ ಅಧಿಕಾರವೂ ಲಭ್ಯವಾಗಿರುತ್ತದೆ.

ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಗಲಭೆಗ್ರಸ್ಥರ ಮೇಲೆ ದಾಳಿ ನಡೆಸಿ, ಗಾಯಗೊಳಿಸುವ ಅಥವಾ ಸಾಯಿಸುವ ಅಧಿಕಾರವನ್ನೂ ಹೊಂದಿರುತ್ತವೆ. ಸಶಸ್ತ್ರ ಬಂಡುಕೋರರ ನೆಲೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಯಾವುದೇ ಕಟ್ಟಡವನ್ನು ಧ್ವಂಸಗೊಳಿಸುವ ಸ್ವಾತಂತ್ರ್ಯವನ್ನೂ ಈ ಕಾಯ್ದೆಯಡಿ ನೀಡಲಾಗಿದೆ.

ಒಂದು ವೇಳೆ ಸೇನಾಪಡೆಗಳಿಂದ ಅಮಾಯಕರ ಮೇಲೆ ದೌರ್ಜನ್ಯ ನಡೆದರೆ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ಅಥವಾ ಇತರ ಯಾವುದೇ ವಿಚಾರಣಾ ಸಮಿತಿ, ಆಯೋಗಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಕಡ್ಡಾಯ.

ಮಣಿಪುರದ ಮೇಲೆ ಸವಿಕಾ ಹೇರಲಾಗಿದ್ದು ೧೯೮೦ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಒಟ್ಟು ೨೮ ವರ್ಷಗಳು ಕಳೆದು ಹೋಗಿವೆ. ಈ ೨೮ ವರ್ಷಗಳಲ್ಲಿ ಮಣಿಪುರದಲ್ಲಿ ನಡೆದ ಸಂಘರ್ಷಗಳಲ್ಲಿ ಒಟ್ಟು ೨೦,೦೦೦ ಮಂದಿ ಬಲಿಯಾಗಿದ್ದಾರೆ. ಈ ಪೈಕಿ ೧೨,೦೦೦ ಮಂದಿ ಬಂಡುಕೋರ ಸಂಘಟನೆಗಳ ಕಾರ್ಯಕರ್ತರು ಹಾಗು ಭದ್ರತಾ ಪಡೆಗಳ ಸಿಬ್ಬಂದಿಗಳು. ಇವರಲ್ಲದೆ ವಿನಾಕಾರಣ ಪ್ರಾಣತೆತ್ತ ಸಾಮಾನ್ಯ, ಅಮಾಯಕ ನಾಗರಿಕರ ಸಂಖ್ಯೆ ಎಂಟು ಸಾವಿರ. ಇದು ಸರ್ಕಾರಿ ಲೆಕ್ಕ. ಮಣಿಪುರ ಮುಖ್ಯಮಂತ್ರಿ ಐಬೋಬಿ ಸಿಂಗ್ ನೀಡಿರುವ ಅಧಿಕೃತ ಹೇಳಿಕೆ.

೧೯೮೦ರ ಸೆ.೮ರಂದು ಸವಿಕಾ ಮಣಿಪುರದಲ್ಲಿ ಜಾರಿಯಾದಾಗ ಆ ರಾಜ್ಯದಲ್ಲಿ ಇದ್ದದ್ದು ನಾಲ್ಕು ಬಂಡುಕೋರ ಗುಂಪುಗಳು. ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್, ಪೀಪಲ್ಸ್ ರೆವಲೂಷನರಿ ಪಾರ್ಟಿ, ಪೀಪಲ್ಸ್ ಲಿಬರೇಷನ್ ಆರ್ಮಿ ಹಾಗು ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ ಎಂಬ ನಾಲ್ಕು ಬಂಡುಕೋರ ಗುಂಪುಗಳು ಮಣಿಪುರದಲ್ಲಿ ಸಕ್ರಿಯವಾಗಿದ್ದವು. ೨೮ ವರ್ಷಗಳ ಬಳಿಕ ಮಣಿಪುರದಲ್ಲಿ ಇರುವ ಬಂಡುಕೋರ ಗುಂಪುಗಳ ಸಂಖ್ಯೆ ಸರ್ಕಾರಿ ಮಾಹಿತಿಯ ಪ್ರಕಾರವೇ ಕನಿಷ್ಠ ೨೪. ಅದರರ್ಥ ಕಾಯ್ದೆ ಜಾರಿಯಾದ ಬಳಿಕ ಬಂಡುಕೋರರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಲೇ ಹೋಗಿದೆ. ಕಾಯ್ದೆ ಜಾರಿಯಾಗಿ ೨೮ ವರ್ಷಗಳಾದರೂ ೨೦ ಲಕ್ಷ ಜನಸಂಖ್ಯೆಯ ರಾಜ್ಯವೊಂದರಲ್ಲಿ ನೆಮ್ಮದಿ ಸಾಧ್ಯವಾಗಿಲ್ಲ, ಬದಲಾಗಿ ಸಮಸ್ಯೆಯನ್ನು ಇನ್ನೂ ಹತ್ತು ಪಟ್ಟು ಹೆಚ್ಚಿಸಿದೆ.

******

ಸ್ವಾತಂತ್ರ್ಯಾನಂತರ ಇತರ ಭಾಗಗಳು ಭಾರತ ಒಕ್ಕೂಟಕ್ಕೆ ಸೇರ್ಪಡೆಯಾದಷ್ಟು ಸಲೀಸಾಗಿ, ತನ್ನ ಅಸ್ತಿತ್ವವನ್ನು ರೂಪಿಸಿಕೊಂಡಷ್ಟು ವೇಗವಾಗಿ ಈಶಾನ್ಯ ರಾಜ್ಯಗಳ ವಿಲೀನ ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣಗಳು ಹಲವಾರು. ಈ ಸಪ್ತಸೋದರಿ ರಾಜ್ಯಗಳ ಸಂಸ್ಕೃತಿ, ಆಚರಣೆ, ಭಾಷೆ ಎಲ್ಲವೂ ಭಿನ್ನ. ಭಾವೈಕ್ಯತೆಯ ಸಂಭ್ರಮದಲ್ಲಿ ಏಕಭಾಷೆ, ಏಕಧರ್ಮ, ಏಕಸಂಸ್ಕೃತಿಗಳ ಹೇರಿಕೆ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ನಡೆಯುತ್ತಲೇ ಬಂದಿದೆ. ಅದರಲ್ಲೂ ಈ ಬಲವಂತದ ಹೇರಿಕೆಗೆ ಬಲಿಯಾಗಿದ್ದು ಈಶಾನ್ಯ ರಾಜ್ಯಗಳು.

ಈ ರಾಜ್ಯಗಳ ಬುಡಕಟ್ಟು ಜನರ ಸಾಂಸ್ಕೃತಿಕ ಅನನ್ಯತೆಗಳು ದೇಶದ ‘ಮುಖ್ಯವಾಹಿನಿಯ ಪರಿಭಾಷೆಯಿಂದ ಹೊರಗೇ ಇದ್ದವು. ವಿಚಿತ್ರವೆಂದರೆ ಬುಡಕಟ್ಟು ಸಮುದಾಯಗಳೆಲ್ಲವೂ ಸ್ವಾತಂತ್ರ್ಯೋತ್ತರದಲ್ಲಿ ಒಂದೊಂದು ಧರ್ಮವನ್ನು ಆಶ್ರಯಿಸಿ ನಿಂತಿವೆ. ಈ ಬುಡಕಟ್ಟುಗಳೂ ಸಹ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಆಗಿ ವಿಂಗಡಣೆಯಾಗಿವೆ. ಸ್ವಾತಂತ್ರ್ಯಪೂರ್ವದಲ್ಲಿ ಪರಸ್ಪರ ಸಹಿಷ್ಣುತೆ, ಸಹಬಾಳ್ವೆಯಲ್ಲೇ ಇದ್ದ ಸಮುದಾಯಗಳು ಸ್ವಾತಂತ್ರ್ಯಾನಂತರ ಕಾದಾಟಕ್ಕೆ ಇಳಿದಿವೆ.

ಭಾರತ ಒಕ್ಕೂಟದಿಂದ ಮಣಿಪುರವನ್ನು ಬೇರ್ಪಡೆಗೊಳಿಸಿ ಪ್ರತ್ಯೇಕ ರಾಷ್ಟ್ರ ಸ್ಥಾಪಿಸಬೇಕು ಎಂಬ ಉದ್ದೇಶದಿಂದ ೧೯೬೪ರ ನವೆಂಬರ್ ೨೪ರಂದು ಸಮರೇಂದ್ರ ಸಿಂಗ್ ಎಂಬಾತ ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ ಎಂಬ ಬಂಡುಕೋರ ಗುಂಪೊಂದನ್ನು ಸ್ಥಾಪಿಸಿದ. ಇದರ ಬೆನ್ನಲ್ಲೇ ಒಂದಾದ ಮೇಲೊಂದರಂತೆ ಮೂರು ಬಂಡುಕೋರ ಸಂಘಟನೆಗಳು ಇದೇ ಉದ್ದೇಶದಿಂದ ಸ್ಥಾಪನೆಯಾದವು.

ಈ ಗುಂಪುಗಳನ್ನು ಹತ್ತಿಕ್ಕಲೆಂದೇ ೧೯೮೦ರಲ್ಲಿ ಸವಿಕಾ ಜಾರಿಯಾಯಿತು. ಆದರೆ ಕಾಯ್ದೆ ಜಾರಿಯಾದ ಮೇಲೆ ಬಂಡುಕೋರ ಗುಂಪುಗಳು ಕಡಿಮೆಯಾಗುವ ಬದಲಾಗಿ ಹೆಚ್ಚುತ್ತಲೇ ಬಂದಿವೆ.

ಮೊದಲು ಬಂಡುಕೋರ ಗುಂಪುಗಳನ್ನು ರಚಿಸಿದ್ದು ಮೀಟಿ ಸಮುದಾಯದವರು. ಆದರೆ ಪಂಗಾಲರೆಂದು ಕರೆಯಲ್ಪಡುವ ಮಣಿಪುರ ಮುಸ್ಲಿಮರು ಹಾಗು ಹಿಂದೂ ವೈಷ್ಣವರ ಗುಂಪಾದ ಮೀಟೀಗಳ ನಡುವೆ ಸಂಘರ್ಷಗಳು ನಡೆದ ಪರಿಣಾಮ ಹೊಸ ಗುಂಪುಗಳು ಸೃಷ್ಟಿಯಾದವು. ಪಂಗಾಲರು ವಿವಿಧ ಹೆಸರುಗಳಲ್ಲಿ ತಮ್ಮದೇ ಆದ ಬಂಡುಕೋರ ಸಶಸ್ತ್ರ ಪಡೆಗಳನ್ನು ಕಟ್ಟಿಕೊಂಡರು. ನಾಗಾ ಸಮುದಾಯದ ಸುಮಾರು ೨೦ ವಿವಿಧ ಹೆಸರಿನ ಬುಡಕಟ್ಟುಗಳು ಮಣಿಪುರದಲ್ಲಿವೆ. ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಹಾಗು ನಾಗಾಲ್ಯಾಂಡ್‌ನ ನಾಗಾ ಪ್ರಾಬಲ್ಯದ ಪ್ರದೇಶಗಳನ್ನು ಸೇರಿಸಿ ಗ್ರೇಟರ್ ನಾಗಾಲ್ಯಾಂಡ್ ರಚಿಸಬೇಕೆಂಬ ಬೇಡಿಕೆ ಮುಂದಿಟ್ಟು ನಾಗಾ ಸಮುದಾಯದ ಕೆಲ ಬಂಡುಕೋರ ಗುಂಪುಗಳೂ ಇಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ನಾಗಾ ಸಮುದಾಯದ ಈ ಬೇಡಿಕೆಯನ್ನು ಸುತಾರಾಂ ಒಪ್ಪಲು ತಯಾರಿಲ್ಲದ ಕುಕಿ ಸಮುದಾಯದ ಕೆಲ ಬಂಡುಕೋರ ಗುಂಪುಗಳು ೧೯೯೦ರ ನಂತರ ರಚನೆಯಾದವು.

ಇವುಗಳಲ್ಲದೆ ಸುಮಾರು ಮೂವತ್ತಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳನ್ನು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿವೆ. ಮೀಟಿ, ನಾಗ, ಕುಮಿ ಸಮುದಾಯಗಳಲ್ಲದೆ ಪೇಟ್ಸ್, ಥಾಡೋಸ್, ಸಿಮ್ಟಿಸ್, ವೈಪೀಸ್, ರಾಲ್ಟೇಸ್, ಗಾಂಗ್ಟೇಸ್ ಮತ್ತಿತರ ಸಮುದಾಯಗಳೂ ಇಲ್ಲಿವೆ.

ಸ್ವಾತಂತ್ರ್ಯಾನಂತರ ಆದ ಬದಲಾವಣೆಯೆಂದರೆ ಎಲ್ಲ ಬುಡಕಟ್ಟು ಸಮುದಾಯಗಳು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪ್ರಭುತ್ವದೊಂದಿಗೆ ಹೋರಾಡುತ್ತಲೇ ತಮ್ಮೊಳಗೇ ಕದನ ಆರಂಭಿಸಿದ್ದು. ತತ್ಪರಿಣಾಮವಾಗಿ ಭಾರತ ಸರ್ಕಾರದ ಕೆಂಗಣ್ಣಿಗೆ ಮಣಿಪುರ ಗುರಿಯಾಯಿತು. ಈ ಬೆಳವಣಿಗೆಗಳಿಂದಾಗಿ ಪ್ರತ್ಯೇಕ ರಾಷ್ಟ್ರದ ಹೋರಾಟಗಳು ಆರಂಭಗೊಂಡು ಬಂಡುಕೋರ ಸಂಘಟನೆಗಳು ಒಂದಕ್ಕೆ ಒಂದಂತೆ ಒಡೆದು, ಹಲವು ಗುಂಪುಗಳಾಗಿ ಇಡೀ ರಾಜ್ಯದ ನೆಮ್ಮದಿಯೇ ಹಾಳಾಗಿ ಹೋಯಿತು.

ಒಂದೆಡೆ ಪರಮಾಧಿಕಾರ ಪಡೆದು ಬಂದು ಕುಳಿತಿರುವ ಸೇನಾಪಡೆ ಇನ್ನೊಂದೆಡೆ ಸ್ವಾತಂತ್ರ್ಯ ಕೊಡಿಸುತ್ತೇವೆ ಎಂದು ಬಂದೂಕು-ಬಾಂಬು ಹಿಡಿದು ಅಬ್ಬರಿಸುವ ಬಂಡುಕೋರರು. ಇಬ್ಬರ ನಡುವೆ ಜೀವಚ್ಛವವಾದವರು ಮಣಿಪುರಿ ಸಾಮಾನ್ಯ ಜನರು. ಸ್ಟೇಟ್ ಆಕ್ಟರ್‌ಗಳು ಹಾಗು ನಾನ್ ಸ್ಟೇಟ್ ಆಕ್ಟರ್‌ಗಳ ನಡುವೆ ಇಲ್ಲಿ ಅಂಥ ವ್ಯತ್ಯಾಸವೇನಿಲ್ಲ. ಎರಡೂ ಗುಂಪು ಅಮಾಯಕ ಜನರನ್ನು ಕೊಲ್ಲುತ್ತಲೇ ಬಂದಿವೆ.

******

ಮಣಿಪುರದಲ್ಲಿ ಆರಂಭಗೊಂಡಿದ್ದ ನಾಲ್ಕು ಬಂಡುಕೋರ ಗುಂಪುಗಳನ್ನು ದಮನ ಮಾಡಲು, ಅಥವಾ ಅವುಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವೇ ಇರಲಿಲ್ಲವೆ? ಸಮಸ್ಯೆ ಬಗೆಹರಿಸಲು ಕ್ರೂರಾತಿಕ್ರೂರ ಸವಿಕಾ ಜಾರಿಗೊಳಿಸುವುದು ಅನಿವಾರ್ಯವಾಗಿತ್ತೆ? ಕೇವಲ ಒಂದು ವರ್ಷದ ಮಟ್ಟಿಗೆ ಎಂದು ಹೇರಲಾದ ಕಾಯ್ದೆ ಇಪ್ಪತ್ತೆಂಟು ಸುದೀರ್ಘ ವರ್ಷಗಳು ಕಳೆದರೂ ಜಾರಿಯಲ್ಲಿರುವುದು ಏಕೆ? ಹಾಗೆ ಜಾರಿಯಲ್ಲಿದ್ದರೂ ಮಣಿಪುರದಲ್ಲಿ ಬಂಡುಕೋರ ಹುಟ್ಟಡಗಿಲ್ಲವೇಕೆ? ಬದಲಾಗಿ ಕಾಯ್ದೆ ಜಾರಿಯಾದ ಮೇಲೆ ಬಂಡುಕೋರರ ಸಂಖ್ಯೆ ಜಾಸ್ತಿಯಾಗಿದ್ದು ಯಾಕೆ? ಇಂಥ ಪ್ರಶ್ನೆಗಳ ಸುಳಿಯಲ್ಲೇ ಮಣಿಪುರದ ನಾಗರಿಕರು ಸಿಲುಕಿದ್ದಾರೆ.

ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಶರ್ಮಿಳಾ ಯತ್ನಿಸಿದಳು. ಸೊಳ್ಳೆ, ತಿಗಣೆಗಳಂತೆ ತನ್ನ ನಾಡಿನ ಅಮಾಯಕ ಜನರನ್ನು ಹೊಸಕಿ ಹಾಕುವಂತೆ ಕೊಲ್ಲುವುದನ್ನು ನೋಡಿ ಆಕೆ ನೊಂದಿದ್ದಳು.

೨೦೦೦ನೇ ಇಸವಿಯ ನವೆಂಬರ್ ಎರಡನೇ ತಾರೀಖು ಮಣಿಪುರದ ಪಾಲಿಗೆ ಮತ್ತೊಂದು ದುರಂತದ ದಿನ. ಅಂದು ರಾಜಧಾನಿ ಇಂಫಾಲದಿಂದ ಸುಮಾರು ೧೫ ಕಿ.ಮೀ ದೂರದಲ್ಲಿರುವ ಮಾಲೋಮ್ ಎಂಬ ಊರಿನ ಬಸ್ ನಿಲ್ದಾಣದಲ್ಲಿ ಸೇನಾಪಡೆ ಸಿಬ್ಬಂದಿ ಗುಂಡಿನ ದಾಳಿ ನಡೆಸಿದರು. ಸತ್ತು ಹೋಗಿದ್ದು ಹತ್ತು ಮಂದಿ ಅಮಾಯಕ ನಾಗರಿಕರು. ಮಾಲೋಮ್‌ನ ರಸ್ತೆಗಳು ರಕ್ತದೋಕುಳಿಯಿಂದ ತುಂಬಿಹೋಗಿತ್ತು. ಮಣಿಪುರದಲ್ಲಿ ಇದು ಸಾಮಾನ್ಯ ಘಟನೆ. ಭಯೋತ್ಪಾದಕರೆಂಬ ಶಂಕೆಯ ಮೇಲೆ ಸೇನಾಪಡೆ ಯಾರ ಮೇಲೆ ಬೇಕಾದರೂ ಗುಂಡಿಟ್ಟು ಕೊಲ್ಲಬಹುದು. ಅದನ್ನು ಯಾರೂ ಪ್ರಶ್ನಿಸುವಂತೆಯೂ ಇಲ್ಲ.

ಆದರೆ ಶರ್ಮಿಳಾ ಸುಮ್ಮನಿರಲಿಲ್ಲ. ತನ್ನವರು ಹೀಗೆ ಸಾಯುತ್ತಿರುವಾಗ ಸುಮ್ಮನಿರುವುದು ಆಕೆಗೆ ಸಾಧ್ಯವಾಗಲಿಲ್ಲ. ಅವಳು ಬಂಡುಕೋರ ಗುಂಪನ್ನು ಸೇರಿ ಸೈನ್ಯದ ವಿರುದ್ಧ ಸೇಡು ತೀರಿಸಿಕೊಳ್ಳಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಆಕೆ ಆಯ್ದುಕೊಂಡಿದ್ದು ಮಣಿಪುರದ ಜನರಿಗೆ ಬಹುತೇಕ ಅಪರಿಚಿತವಾಗಿದ್ದ ಗಾಂಧಿ ಮಾರ್ಗವನ್ನು.

‘ಅಮ್ಮಾ, ಮನುಷ್ಯತ್ವವನ್ನು ಉಳಿಸುವ ಕಾರ್ಯಕ್ಕಾಗಿ ಹೊರಡುತ್ತಿದ್ದೇನೆ, ಆಶೀರ್ವಾದ ಮಾಡು ಎಂದು ತಾಯಿ ಐರೋಮ್ ಸಾಖಿ ದೇವಿಗೆ ಹೇಳಿದ ಶರ್ಮಿಳಾ ಎಲ್ಲಿ ರಕ್ತಪಾತವಾಗಿ, ಅಮಾಯಕ ಜನರು ವಿನಾಕಾರಣ ಪ್ರಾಣ ಕಳೆದುಕೊಂಡಿದ್ದರೋ ಅದೇ ಪ್ರದೇಶಕ್ಕೆ ಹೋಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿಬಿಟ್ಟಳು.ಜನರನ್ನು ಕ್ರೂರವಾಗಿ ಕೊಲ್ಲುತ್ತಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂಬುದು ಆಕೆಯ ಬೇಡಿಕೆ. ಅದು ಸರಳ ಮತ್ತು ಸ್ಪಷ್ಟ. ಆದರೆ ಆಕೆಯ ಬೇಡಿಕೆಯನ್ನು ಈಡೇರಿಸುವುದು ಕೇಂದ್ರ ಸರ್ಕಾರಕ್ಕೆ ಅಷ್ಟು ಸರಳವಾಗಿರಲಿಲ್ಲ.

ಶರ್ಮಿಳಾ ಉಪವಾಸಕ್ಕೆ ಕುಳಿತಾಗ ಜನ ಇದು ಹೆಚ್ಚು ದಿನ ನಡೆಯುವುದಿಲ್ಲ ಎಂದುಕೊಂಡಿದ್ದರು. ಅಂಥ ಪರಿಸ್ಥಿತಿಯಲ್ಲಿ ಅಹಿಂಸಾತ್ಮಕ ಹೋರಾಟಕ್ಕೆ ಅರ್ಥವಿಲ್ಲ ಎಂದೇ ಬಗೆದಿದ್ದರು. ದಿನ ಕಳೆದಂತೆ ಶರ್ಮಿಳಾ ಅಲ್ಲೇ ತಳವೂರಿದಳು. ಆಕೆಯ ದೇಹಸ್ಥಿತಿ ಹದಗೆಡತೊಡಗಿತು. ಮಣಿಪುರ ಸರ್ಕಾರ ನಿಧಾನವಾಗಿ ತಲೆಕೆಡಿಸಿಕೊಳ್ಳಲು ಆರಂಭಿಸಿತು.

ಇನ್ನೇನು ಶರ್ಮಿಳಾ ಸತ್ತೇ ಹೋಗುತ್ತಾಳೆ ಅನಿಸಿದ ನಂತರ ನ.೨೧ರಂದು ಆಕೆಯನ್ನು ಸ್ಥಳೀಯ ಆಡಳಿತ ಇಂಫಾಲದ ಆಸ್ಪತ್ರೆಗೆ ದಾಖಲಿಸಿತು. ಶರ್ಮಿಳಾ ಆಹಾರ ಸೇವಿಸಲು ನಿರಾಕರಿಸಿದಳು. ಬಲವಂತವಾಗಿ ಆಕೆಗೆ ಮೂಗಿನ ಮೂಲಕ ದ್ರವಾಹಾರ ಕೊಡಲಾಯಿತು.

ಶರ್ಮಿಳಾ ವಿರುದ್ಧ ‘ಆತ್ಮಹತ್ಯೆ ಯತ್ನದ ಕೇಸು ಜಡಿಯಲಾಯಿತು. ಈ ಕೇಸಿನಡಿ ವ್ಯಕ್ತಿಯೊಬ್ಬನಿಗೆ ಗರಿಷ್ಠ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಬಹುದು. ಶರ್ಮಿಳಾಗೆ ಒಂದು ವರ್ಷದ ಜೈಲು ಶಿಕ್ಷೆಯಾಯಿತು. ಅವಳಿದ್ದ ಆಸ್ಪತ್ರೆಯೇ ಅವಳಿಗೆ ಜೈಲು. ಕಳೆದ ಎಂಟು ವರ್ಷಗಳಲ್ಲಿ ಇಂಥ ಒಂದು ವರ್ಷದ ಜೈಲು ಶಿಕ್ಷೆಗಳನ್ನು ಆಕೆಗೆ ಎಂಟು ಬಾರಿ ನೀಡಲಾಗಿದೆ!

*****

ಶರ್ಮಿಳಾ ಉಪವಾಸ ಸತ್ಯಾಗ್ರಹ ಆರಂಭಿಸಿ ನಾಲ್ಕು ವರ್ಷ ಕಳೆದ ಬಳಿಕ ಮಣಿಪುರದಲ್ಲಿ ಮತ್ತೊಂದು ಭಯಾನಕ ಘಟನೆ ಸಂಭವಿಸಿತು. ಈ ಘಟನೆಯ ಕೇಂದ್ರಬಿಂದು ಆಗಿದ್ದವಳು ತಂಗ್‌ಜಮ್ ಮನೋರಮಾ ದೇವಿ. ಮಣಿಪುರಿ ಜನರ ಪಾಲಿಗೆ ಶರ್ಮಿಳಾ ಒಬ್ಬ ದೇವತೆಯಾದರೆ ಮನೋರಮಾ ಮತ್ತೊಬ್ಬ ದೇವತೆ. ಇದಕ್ಕೆ ಸಾಕ್ಷಿಯಾಗಿ ಮನೋರಮಾಳ ಮನೆಯ ಎದುರಿಗೇ ಅವಳ ದೇವಸ್ಥಾನವೊಂದು ನಿರ್ಮಾಣಗೊಂಡಿದೆ. ಈ ಇಬ್ಬರು ಹೆಣ್ಣುಮಕ್ಕಳು ಮಣಿಪುರದ ಸಮಸ್ಯೆಗಳಿಗೆ ಸಂಕೇತ. ಇಡೀ ಜಗತ್ತು ಇಂದು ಮಣಿಪುರದ ಸಮಸ್ಯೆಗಳನ್ನು ಈ ಇಬ್ಬರು ಹೆಣ್ಣುಮಕ್ಕಳ ಮೂಲಕವೇ ಗಮನಿಸುತ್ತಿದೆ.

೨೦೦೪ರ ಜುಲೈ ೧೫ರಂದು ಭಾರತೀಯ ಭೂಸೇನೆಯ ಭಾಗವಾಗಿರುವ ಅಸ್ಸಾಂ ರೈಫಲ್ಸ್‌ನ ೧೭ನೇ ಬೆಟಾಲಿಯನ್ ಕೇಂದ್ರ ಸ್ಥಾನದ ಎದುರು ಸುಮಾರು ೧೨ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಸಾಮಾನ್ಯದ್ದಾಗಿರಲಿಲ್ಲ. ಸ್ತ್ರೀಯನ್ನು ದೇವತೆಯೆಂದು ಪೂಜಿಸುವ ಭಾರತದ ಭೂಭಾಗದಲ್ಲಿ ಈ ಹೆಣ್ಣುಮಕ್ಕಳು ಸಂಪೂರ್ಣ ಬೆತ್ತಲಾಗಿ ನಿಂತು ಪ್ರತಿಭಟನೆ ನಡೆಸಿದರು. ಅವರ ಮೈಮೇಲೆ ಒಂದು ಎಳೆ ದಾರವೂ ಇರಲಿಲ್ಲ.ಅವರ ಕೈಯಲ್ಲಿದ್ದ ಬ್ಯಾನರ್‌ಗಳಲ್ಲಿ ‘ಇಂಡಿಯನ್ ಆರ್ಮಿ ರೇಪ್ ಅಸ್, ‘ಇಂಡಿಯನ್ ಆರ್ಮಿ ಟೇಕ್ ಅವರ್ ಫ್ಲೆಷ್ ಎಂದು ಬರೆಯಲಾಗಿತ್ತು.

ಇಂಥ ಹೃದಯ ತಲ್ಲಣಿಸುವ ಪ್ರತಿಭಟನೆ ನಡೆಯಲು ಕಾರಣವಾಗಿದ್ದು ಅದೇ ಅಸ್ಸಾಂ ರೈಫಲ್ಸ್ ಪಡೆ. ಜುಲೈ ೧೦ರಂದು ಇದೇ ಪಡೆ ತಂಗ್‌ಜಮ್ ಮನೋರಮಾ ದೇವಿ ಎಂಬ ೩೨ ವರ್ಷದ ಹೆಣ್ಣುಮಗಳನ್ನು ಅಮಾನುಷವಾಗಿ ಕೊಂದು ಹಾಕಿದೆ ಎಂಬುದು ಅವರ ಆರೋಪವಾಗಿತ್ತು.

ಮನೋರಮಾ ಅವರ ಕಿರಿಯ ಸೋದರ ದೊಲೇಂದ್ರೋ ಸಿಂಗ್ ಹೇಳುವ ಪ್ರಕಾರ ಅಸ್ಸಾಂ ರೈಫಲ್ಸ್‌ನ ಹಲವು ಯೋಧರು ಮಧ್ಯರಾತ್ರಿ ಮನೆಯೊಳಗೆ ಪ್ರವೇಶಿಸಿದರು. ಮನೋರಮಾ ತಾಯಿ ತಂಗ್‌ಜಮ್ ಖುಮಾನ್ಲೇಮಾಯಿ ದೇವಿಯ ಹಣೆಗೆ ಬಂದೂಕು ಇಟ್ಟು ನಿಮ್ಮ ಮಗಳು ಎಲ್ಲಿ ಎಂದು ಪ್ರಶ್ನಿಸಿದರು. ಮನೋರಮಾ ಎದ್ದು ಬಂದಳು. ಮನೋರಮಾಳನ್ನು ಎಳೆದು ಮನೆಯಿಂದ ಹೊರಗೆ ತರಲು ಯತ್ನಿಸಿದರು. ಈ ಸಂದರ್ಭದಲ್ಲಿ ಪ್ರಶ್ನಿಸಿದ ಸೋದರರನ್ನು ಥಳಿಸಲಾಯಿತು. ತಾಯಿ ಹಾಗು ಪುತ್ರರನ್ನು ಹೊರಗೆ ಕಳುಹಿಸಿ ಮನೋರಮಾ ವಿಚಾರಣೆ ಆರಂಭಿಸಲಾಯಿತು. ಹೊರಗಿದ್ದ ನಮಗೆ ನನ್ನ ಸೋದರಿಯ ಚೀತ್ಕಾರ ಕೇಳಿಸುತ್ತಿತ್ತು. ಅವರು ಆಕೆಗೆ ವಿಪರೀತ ಹಿಂಸೆ ನೀಡುತ್ತಿದ್ದರು ಎನ್ನುತ್ತಾರೆ ದೊಲೇಂದ್ರೋ ಸಿಂಗ್.

ಬೆಳಗಿನ ಜಾವ ೩-೩೦ರ ಸುಮಾರಿಗೆ ಮನೆಯಿಂದ ಹೊರ ಬಂದ ಸೈನಿಕರು ಮನೋರಮಾಳನ್ನು ವಿಚಾರಣೆಗಾಗಿ ಹೊರಗೆ ಕರೆದೊಯ್ಯುತ್ತಿರುವುದಾಗಿ ಹೇಳಿದರು. ಹವಾಲ್ದಾರ್ ಸುರೇಶ್ ಕುಮಾರ್ ಬಂಧನ ನೋಟಿಸ್‌ಗೆ ಸಹಿ ಮಾಡಿದರು. ರೈಫಲ್‌ಮ್ಯಾನ್‌ಗಳಾದ ಟಿ.ಲೋಥಾ ಹಾಗು ಅಜಿತ್ ಸಿಂಗ್ ಸಾಕ್ಷಿಗಳಾಗಿ ಸಹಿ ಹಾಕಿದರು.

ಮನೋರಮಾಳನ್ನು ಅಲ್ಲಿಂದ ಕರೆದೊಯ್ಯುವಾಗ ಆಕೆ ಜೀವಂತವಾಗಿಯೇ ಇದ್ದಳು. ಆದರೆ ಬೆಳಿಗ್ಗೆ ೫-೩೦ರ ಹೊತ್ತಿಗೆ ಆಕೆಯ ಮನೆಯಿಂದ ಸುಮಾರು ನಾಲ್ಕು ಕಿ.ಮೀ. ದೂರದ ಎನ್. ಮಾರಿಂಗ್ ಎಂಬ ಹಳ್ಳಿಯ ಬಳಿ ಆಕೆ ಶವವಾಗಿ ಪತ್ತೆಯಾಗಿದ್ದಳು. ಆಕೆಯ ದೇಹದ ಮೇಲೆ ಗುಂಡುಗಳ ಮಳೆಯನ್ನೇ ಸುರಿಸಲಾಗಿತ್ತು. ಚಾಕುವಿನಿಂದ ಆಕೆಯ ಎದೆಗೆ ಚುಚ್ಚಲಾಗಿತ್ತು. ತೀರಾ ಅಮಾನವೀಯವೆಂದರೆ ಆಕೆಯ ಖಾಸಗಿ ಅಂಗವನ್ನು ಗುಂಡಿನ ದಾಳಿಯಿಂದ ಛಿದ್ರಗೊಳಿಸಲಾಗಿತ್ತು. ಆಕೆಯ ಮೇಲೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ನಡೆದ ಹಿನ್ನೆಲೆಯಲ್ಲಿ ಸಾಕ್ಷ್ಯ ದೊರೆಯದಂತೆ ಆಕೆಯ ಮರ್ಮಾಂಗವನ್ನೇ ಗುಂಡಿನಿಂದ ಸುಡಲಾಗಿತ್ತು.

ಜು.೧೫ರಂದು ಬೆತ್ತಲೆ ಪ್ರತಿಭಟನೆ ನಡೆಸಿದ ಮಹಿಳೆಯರಲ್ಲಿ ಒಬ್ಬರಾದ ಎಲ್.ಗ್ಯಾನೇಶ್ವರಿ ಹೇಳುವುದು ಹೀಗೆ: “ಮನೋರಮಾ ಕಗ್ಗೊಲೆ ನಮ್ಮ ಹೃದಯಗಳನ್ನು ಒಡೆದು ಹಾಕಿದೆ. ಬಂಧಿಸುವಾಗ ಬಂಧನ ನೋಟಿಸ್ ನೀಡಬೇಕು ಎಂದು ಒತ್ತಾಯಿಸಿ ನಾವು ಹಿಂದೆ ಪ್ರತಿಭಟನೆ ನಡೆಸಿದ್ದೆವು. ಆದರೆ ಬಂಧನ ನೋಟಿಸ್ ನೀಡಿಯೂ ಮನೋರಮಾ ಅತ್ಯಾಚಾರ, ಕೊಲೆಗೆ ಈಡಾದಳು. ಅವರು ಆಕೆಯ ದೇಹವನ್ನು ಛಿದ್ರಗೊಳಿಸಿದ್ದಲ್ಲದೆ, ಆಕೆಯ ಖಾಸಗಿ ಅಂಗಕ್ಕೂ ಗುಂಡಿಟ್ಟರು.

ನಾವು, ತಾಯಂದಿರು ಅಳುತ್ತಿದ್ದೇವೆ. ಈಗ ನಮ್ಮ ಹೆಣ್ಣುಮಕ್ಕಳೂ ಸಹ ಮಾನಭಂಗಕ್ಕೆ ಒಳಗಾಗಬಹುದು. ಅವರನ್ನು ಯಾವುದೇ ಪ್ರಮಾಣದಲ್ಲೂ ಹಿಂಸೆಗೆ ಈಡು ಮಾಡಬಹುದು. ಮಣಿಪುರದ ಎಲ್ಲ ಹೆಣ್ಣುಮಕ್ಕಳ ಬದುಕೂ ಅಭದ್ರಗೊಂಡಿದೆ. ನಾವು ನಮ್ಮ ಬಟ್ಟೆಯನ್ನೆಲ್ಲ ಕಳಚಿ ಸೇನಾಕಛೇರಿ ಎದುರು ನಿಂತೆವು. ನಾವು ಹೇಳಿದೆವು: ನಾವು, ತಾಯಂದಿರು ಬಂದಿದ್ದೇವೆ. ನಮ್ಮ ರಕ್ತವನ್ನು ಕುಡಿಯಿರಿ. ನಮ್ಮ ಮಾಂಸವನ್ನು ತಿನ್ನಿ. ಬಹುಶಃ ಇದನ್ನು ಮಾಡಿದರೆ ನೀವು ನಮ್ಮ ಹೆಣ್ಣುಮಕ್ಕಳನ್ನು ಬಿಡಬಹುದೇನೋ?

ಮನೋರಮಾ ಸತ್ತು ನಾಲ್ಕೂವರೆ ವರ್ಷಗಳಾಗಿ ಹೋಗಿದೆ. ಆದರೆ ಆಕೆಗೆ ಇನ್ನೂ ನ್ಯಾಯ ದೊರೆತಿಲ್ಲ. ಆಕೆಯನ್ನು ಕೊಂದವರಿಗೆ ಶಿಕ್ಷೆಯಾಗಿಲ್ಲ. ಗ್ಯಾನೇಶ್ವರಿ ಇದನ್ನು ನೆನಪಿಸಿಕೊಂಡು ಹೇಳುತ್ತಾರೆ: “ ಆ ಸೈನಿಕರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯಿಂದ ಮಣಿಪುರ ಮಹಿಳೆಯರು ಬಿಡುಗಡೆ ಹೊಂದಿಲ್ಲ. ನಾವು ಇನ್ನೂ ಬೆತ್ತಲಾಗೇ ಇದ್ದೇವೆ!ಮನೋರಮಾ ದೇಹ ಪತ್ತೆಯಾದ ನಂತರ ಆಕೆಯ ಸಹೋದರ ದೋಲೇಂದ್ರೋ ಸಿಂಗ್ ಇರಿಲ್‌ಬಂಗ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದರು. ತನ್ನ ಸೋದರಿಯ ಮೇಲೆ ಅತ್ಯಾಚಾರ ನಡೆಸಿ ಕೊಲ್ಲಲಾಗಿದೆ ಎಂದು ಆರೋಪಿಸಿದರು. ಆತನ ದೂರಿನ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದರು. ಆಕೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆಯೂ ಸೇರಿದಂತೆ ವೈಜ್ಞಾನಿಕ ಪರೀಕ್ಷೆಗಳಿಗೆ ಮುಂದಾದರು.

ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯವು ಮನೋರಮಾ ಪೆಟಿಕೋಟ್ ಮೇಲೆ ಇದ್ದ ವೀರ್‍ಯದ ಕಲೆಗಳನ್ನು ಪರಿಶೀಲಿಸಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಸಾಧ್ಯತೆಯನ್ನು ಒಪ್ಪಿಕೊಂಡಿತು. ಮರಣೋತ್ತರ ಪರೀಕ್ಷೆಯ ನಂತರ ಮನೋರಮಾ ಶವವನ್ನು ಮನೆಯವರಿಗೆ ನೀಡಲು ಪೊಲೀಸರು ಯತ್ನಿಸಿದರು. ಆದರೆ ಆಕೆಯ ಮನೆಯವರು ಶವವನ್ನು ಪಡೆಯಲಿಲ್ಲ. ಪೊಲೀಸರೇ ಆಕೆಯ ಅಂತ್ಯಸಂಸ್ಕಾರ ನಡೆಸಿದರು.

ಮನೋರಮಾ ಬಂಡುಕೋರರ ಜತೆ ಸಖ್ಯ ಬೆಳೆಸಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ವಿಚಾರಣೆ ನಡೆಸುತ್ತಿದ್ದೆವು. ಆಕೆ ಓಡಿಹೋಗಲು ಯತ್ನಿಸಿದಾಗ ಗುಂಡು ಹಾರಿಸಲಾಯಿತು. ಏನೇ ಆದರೂ ಮನೋರಮಾ ಹತ್ಯೆ ಪ್ರಕರಣ ದುರದೃಷ್ಟಕರ ಎಂದು ಸೇನಾಧಿಕಾರಿಗಳು ತಿಪ್ಪೆ ಸಾರಿಸಿದರು.

*****

ಮನೋರಮಾ ಹತ್ಯೆ ನಡೆದು, ಅದನ್ನು ಖಂಡಿಸಿ ಮಣಿಪುರದ ತಾಯಂದಿರು ನಗ್ನರಾಗಿ ಪ್ರತಿಭಟಿಸಿದ ನಂತರ ಇಡೀ ಮಣಿಪುರದಲ್ಲಿ ಜನ ಬಂಡೆದ್ದರು. ಬೀದಿಬೀದಿಗಳಲ್ಲಿ ಪ್ರತಿಭಟನೆಗಳಾದವು. ಕಾಯ್ದೆಯನ್ನು ವಾಪಾಸ್ ತೆಗೆದುಕೊಳ್ಳಲು ಒತ್ತಾಯಿಸಿ ಉಗ್ರಸ್ವರೂಪದ ಹೋರಾಟಗಳು ನಡೆದವು.

ತಾಯಂದಿರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಂಗ್ಲಾ ಕೋಟೆಯಲ್ಲಿದ್ದ ಅಸ್ಸಾಂ ರೈಫಲ್ಸ್‌ನ ೧೭ನೇ ತುಕಡಿಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆಯಿತು. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಕುರಿತು ಮರುಪರಿಶೀಲನೆ ನಡೆಸಲು ಜೀವನ್ ರೆಡ್ಡಿ ಆಯೋಗವನ್ನು ನೇಮಿಸಿತು.

ರಾಜ್ಯ ಸರ್ಕಾರ ಆದೇಶವೊಂದನ್ನು ಹೊರಡಿಸಿ ಮನೋರಮಾ ಹತ್ಯೆ ಪ್ರಕರಣ ನಿವೃತ್ತ ನ್ಯಾಯಾಧೀಶ ಸಿ.ಉಪೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ತನಿಖಾ ಆಯೋಗವೊಂದನ್ನು ರಚಿಸಿತು. ಆದರೆ ಆಯೋಗಕ್ಕೆ ಅಸ್ಸಾಂ ರೈಫಲ್ಸ್ ಸಹಕರಿಸಲಿಲ್ಲ. ಸಮನ್ಸ್ ಕಳುಹಿಸಿದರೂ ಆರೋಪಿಗಳು ನ್ಯಾಯಾಧೀಶರ ಮುಂದೆ ಹಾಜರಾಗಲಿಲ್ಲ. ನ್ಯಾಯಾಧೀಶರು ಬೇರೆ ವಿಧಿಯಿಲ್ಲದೆ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿದರು. ಆದರೆ ಅದೂ ಪ್ರಯೋಜನವಾಗಲಿಲ್ಲ.

ಅಸ್ಸಾಂ ರೈಫಲ್ಸ್ ಗುವಾಹಟಿ ಹೈಕೋರ್ಟ್‌ನಲ್ಲಿ ದಾವೆ ಹೂಡಿ ವಿಚಾರಣಾ ಆಯೋಗವೇ ಅಸಿಂಧು ಎಂದು ವಾದಿಸಿತು. ಸವಿಕಾ ಪ್ರಕಾರ ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ನಮ್ಮ ವಿರುದ್ಧ ತನಿಖೆ ನಡೆಸುವಂತಿಲ್ಲ ಎಂದು ಕಾಯ್ದೆಯನ್ನೇ ಗುರಾಣಿಯಾಗಿ ಬಳಸಿತು. ಹೈಕೋರ್ಟ್ ಪ್ರಕರಣದ ತನಿಖೆ ನಡೆಸಲು ಆಯೋಗಕ್ಕೆ ಅನುಮತಿ ನೀಡಿತಾದರೂ ವರದಿಯನ್ನು ಅಂತಿಮ ಆದೇಶದವರೆಗೆ ಬಹಿರಂಗಗೊಳಿಸದಿರಲು ಹೇಳಿತು.

ಪ್ರಕರಣ ಇನ್ನೂ ಬಗೆಹರಿದಿಲ್ಲ. ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸವಿಕಾ ಕಟ್ಟುಪಾಡುಗಳ ಹಿನ್ನೆಲೆಯಲ್ಲಿ ಅದಕ್ಕೆ ಮೋಕ್ಷ ಸಿಕ್ಕೀತೆಂಬ ನಂಬಿಕೆ ಯಾರಲ್ಲೂ ಇಲ್ಲ.

ಮನೋರಮಾ ಹತ್ಯೆಯ ನಂತರ ಸವಿಕಾ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಮಣಿಪುರಿಗಳು ಹೋರಾಟ ತೀವ್ರಗೊಳಿಸಿದರು. ಆಗಸ್ಟ್ ೧೫ರಂದು ಮಣಿಪುರ ವಿದ್ಯಾರ್ಥಿ ಫೆಡರೇಷನ್‌ನ ಚಿತ್ತರಂಜನ್ ಎಂಬ ಯುವಕ ಮೈಮೇಲೆ ಬೆಂಕಿ ಹಾಕಿಕೊಂಡು ಪ್ರಾಣತೆತ್ತ. ಆತ ಹಾಗೆ ಪ್ರಾಣ ಕಳೆದುಕೊಳ್ಳುವುದನ್ನು ಪೊಲೀಸರು, ಮಾಧ್ಯಮದವರು ಯಾವುದೋ ಸಿನಿಮಾ ದೃಶ್ಯ ನೋಡುವಂತೆ ನೋಡಿ ಸುಮ್ಮನಿದ್ದರು.ಒತ್ತಡಗಳು ಹೆಚ್ಚಿದ ನಂತರ ಮುಖ್ಯಮಂತ್ರಿ ಐಬೋಬಿ ಸಿಂಗ್ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಇಂಫಾಲ ನಗರದ ಮಟ್ಟಿಗೆ ಹಿಂದಕ್ಕೆ ಪಡೆಯಲು ನಿರ್ಧರಿಸಿದರು. ಆದರೆ ಕಾಯ್ದೆ ರಾಜ್ಯದಿಂದ ಸಂಪೂರ್ಣ ತೊಲಗಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.

ನವೆಂಬರ್ ಹೊತ್ತಿಗೆ ಪ್ರಧಾನಿ ಡಾ.ಮನಮೋಹನ ಸಿಂಗ್ ಮಣಿಪುರಕ್ಕೆ ಭೇಟಿ ನೀಡಿದರು. ಮನೋರಮಾ ಹತ್ಯೆ, ಚಿತ್ತರಂಜನ್ ಆತ್ಮಾಹುತಿಯ ಕಾವು ಮಣಿಪುರದಲ್ಲಿ ಇನ್ನೂ ಆರಿರಲಿಲ್ಲ. ಆಗಲೂ ದಿನನಿತ್ಯ ಪ್ರತಿಭಟನೆಗಳು ನಡೆಯುತ್ತಲೇ ಇದ್ದವು. ಪ್ರಧಾನಿ ಈ ಸಂದರ್ಭದಲ್ಲಿ ಮಹತ್ವದ ಘೋಷಣೆ ಮಾಡಿ, ಕಾಯ್ದೆಯ ಮರುಪರಿಶೀಲನೆ ನಡೆಸಿ, ಮಾನವ ಹಕ್ಕುಗಳನ್ನು ರಕ್ಷಿಸುವ ಅಂಶಗಳನ್ನು ಅಳವಡಿಸಲಾಗುವುದು ಎಂದು ಹೇಳಿ ಹೋದರು.

*****

ಇದೆಲ್ಲದರ ನಡುವೆ ಶರ್ಮಿಳಾ ಮೌನವಾಗಿ ತನ್ನ ಪ್ರತಿಭಟನೆ ಮುಂದುವರೆಸಿದಳು. ಆಕೆಯ ಹೋರಾಟಕ್ಕೆ ಕೊನೆಯೇ ಇರಲಿಲ್ಲ. ಮನೋರಮಾ ಹತ್ಯೆ ಶರ್ಮಿಳಾಳನ್ನು ಇನ್ನಿಲ್ಲದಂತೆ ಕಾಡಿತು. ಮಾತ್ರವಲ್ಲದೆ ಆಕೆಯ ಹೋರಾಟಕ್ಕೆ ಇನ್ನಷ್ಟು ತೀವ್ರತೆಯನ್ನೂ ನೀಡಿತು.

ಮನೋರಮಾ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದ ತಾಯಂದಿರು ನಿಧಾನವಾಗಿ ಶರ್ಮಿಳಾ ಹೋರಾಟದಲ್ಲಿ ಧ್ವನಿಗೂಡಿಸಿದರು. ಆಲ್ ಮಣಿಪುರ ವಿಮೆನ್ ಸೋಷಿಯಲ್ ರಿಫಾರ್‍ಮೇಷನ್ ಅಂಡ್ ಡೆವೆಲಪ್‌ಮೆಂಟ್ ಸಮಾಜ ಎಂಬ ಸಂಘಟನೆಯಡಿ ಈ ತಾಯಂದಿರು ಕೆಲಸ ಮಾಡುತ್ತಿದ್ದರು. ಕುಡಿತ ಬಿಡಿಸುವುದೂ ಸೇರಿದಂತೆ ಹಲವು ಸಾಮಾಜಿಕ ಅನಿಷ್ಠಗಳ ವಿರುದ್ಧ ಹೋರಾಡುತ್ತಿದ್ದ ಸಂಘಟನೆ ಇದು. ಐತಿಹಾಸಿಕ ಪ್ರತಿಭಟನೆಯ ನಂತರ ಈ ಸಂಘಟನೆಯನ್ನು ಮದರ್‍ಸ್ ಫ್ರಂಟ್ ಎಂದೇ ಕರೆಯಲಾಗುತ್ತಿದೆ.

ತಮಾಶೆ ಎಂದರೆ ಈ ಎಲ್ಲ ಹೆಣ್ಣುಮಕ್ಕಳನ್ನು ಬೆತ್ತಲೆ ಪ್ರತಿಭಟನೆ ನಡೆಸಿದ ತಪ್ಪಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ತಳ್ಳಲಾಗಿತ್ತು. ಭಯೋತ್ಪಾದಕರ ಮೇಲೆ ಹೂಡುವ ಕೇಸುಗಳನ್ನು ಇವರ ಮೇಲೆ ಹೂಡಲಾಗಿತ್ತು. ತಾಯಂದಿರು ಅಂಜಲಿಲ್ಲ, ಅಳುಕಲಿಲ್ಲ. ಜಾಮೀನಿಗೆ ಅರ್ಜಿಯನ್ನೂ ಹಾಕಲಿಲ್ಲ.

ನ್ಯಾಯಾಲಯದ ಮುಂದೆ ಪ್ರಕರಣ ಬಂದಾಗ ಇವರ ವಿರುದ್ಧದ ಆರೋಪಗಳನ್ನು ರುಜುವಾತು ಮಾಡಲು ಪೊಲೀಸರ ಬಳಿ ಯಾವ ಸಾಕ್ಷ್ಯವೂ ಇರಲಿಲ್ಲ. ನ್ಯಾಯಾಲಯ ಎಲ್ಲರನ್ನೂ ಬಿಡುಗಡೆ ಮಾಡಿತು.

ಶರ್ಮಿಳಾ ಬೆನ್ನಿಗೆ ನಿಂತಿರುವ ಈ ತಾಯಂದಿರು ತಮ್ಮ ಎಂದಿನ ದಿಟ್ಟನುಡಿಗಳಲ್ಲಿ ವ್ಯವಸ್ಥೆಯನ್ನು ಟೀಕಿಸುತ್ತಾರೆ. ತಾಯಂದಿರ ಸಂಘಟನೆಯ ಮುಖ್ಯಸ್ಥೆ ರಮಣಿ ದೇವಿ ಹೀಗೆನ್ನುತ್ತಾರೆ: “ಜನರಿಗಾಗಿ ಶರ್ಮಿಳಾ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾಳೆ. ಒಬ್ಬ ಮನುಷ್ಯ ಆಹಾರವಿಲ್ಲದೆ ಎಷ್ಟು ದಿನಗಳ ಕಾಲ ಬದುಕಬಲ್ಲ ಎಂಬ ಸಂಶೋಧನೆ ನಡೆಸಲು ಆಕೆಯನ್ನು ಆಸ್ಪತ್ರೆಯಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ನಮಗನ್ನಿಸುತ್ತಿದೆ. ಆದರೂ ಸರ್ಕಾರ ಕಾಯ್ದೆಯನ್ನು ಕಿತ್ತುಹಾಕುತ್ತದೆ, ಶರ್ಮಿಳಾ ಸಹಜ ಸ್ಥಿತಿಗೆ ಮರಳುತ್ತಾರೆ ಎಂಬ ಆಶಾವಾದ ಇನ್ನೂ ನಮಗಿದೆ

*****

ಐರೋಮ್ ನಂದಾ ಹಾಗು ಐರೋಮ್ ಸಾಖಿ ದೇವಿ ದಂಪತಿಗಳ ಕಿರಿಯ ಪುತ್ರಿ ಶರ್ಮಿಳಾ. ಅಕ್ಕ ವೈಜಯಂತಿ ಹಾಗು ಅಣ್ಣ ಸಿಂಘಜಿತ್‌ಗೆ ಈಕೆ ನೆಚ್ಚಿನ ತಂಗಿ. ಚಿಕ್ಕಂದಿನಿಂದಲೂ ಆಕೆ ಸಾಹಸಪ್ರಿಯೆ. ಬಹುಮುಖ ವ್ಯಕ್ತಿತ್ವದ ಪ್ರತಿಭೆ. ಶರ್ಮಿಳಾಗೆ ಯೋಗದಲ್ಲಿ ಆಸಕ್ತಿ. ಮಣಿಪುರದ ಸಾಹಿತಿಗಳಿಗೆ ಗೊತ್ತಿರುವ ವಿಷಯವೇನೆಂದರೆ ಆಕೆ ಉದಯೋನ್ಮುಖ ಕವಯಿತ್ರಿ. ಆಕೆ ನೂರಾರು ಕವಿತೆಗಳನ್ನು ಬರೆದಿದ್ದಾಳಾದರೂ ಒಂದೇ ಒಂದು ಕವನ ಸಂಕಲನ ಮಾತ್ರ ಬಿಡುಗಡೆಯಾಗಿದೆ.

ಮಣಿಪುರಿಗಳ ಪಾಲಿಗೆ ಆಕೆ ಕೇವಲ ಐರೋಮ್ ಶರ್ಮಿಳಾ ಚಾನು ಅಲ್ಲ, ಆಕೆ ಮಣಿಪುರದ ಉಕ್ಕಿನ ಮಹಿಳೆ. ಈಶಾನ್ಯ ರಾಜ್ಯಗಳ ಸಮಸ್ಯೆ ಗೊತ್ತಿಲ್ಲದ ಇತರ ದೇಶವಾಸಿಗಳಿಗೆ ಶರ್ಮಿಳಾ ಒಂದೇ ಗುಕ್ಕಿಗೆ ಅರ್ಥವಾಗುವಂಥವಳೂ ಅಲ್ಲ. ಶರ್ಮಿಳಾ ಇಂಥ ದೊಡ್ಡ ಸಾಹಸಕ್ಕೆ ಕೈಹಾಕಿದ್ದು ಹೇಗೆ ಎನ್ನುವ ಕುರಿತು ಒಂದೇ ಒಂದು ನ್ಯಾಷನಲ್ ಮೀಡಿಯಾ ಕೂಡ ಇದುವರೆಗೆ ಒಂದು ವರದಿ ಪ್ರಕಟಿಸುವ ಸಾಹಸ ಮಾಡಿಲ್ಲ.

ಶರ್ಮಿಳಾ ದೇಹಸ್ಥಿತಿ ವಿಷಮಸ್ಥಿತಿ ತಲುಪಿದಾಗ ಆಕೆಯನ್ನು ದೇಶದ ಅತಿಶ್ರೇಷ್ಠ ವೈದ್ಯಕೀಯ ವಿಜ್ಞಾನ ಸಂಸ್ಥೆ ನವದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಆಕೆ ರಾಜಘಾಟ್‌ಗೆ (೨೦೦೬ ಅಕ್ಟೋಬರ್ ೪) ಭೇಟಿ ನೀಡಿದಳು. ಅದು ಪೂರ್ವನಿಯೋಜಿತ ಕಾರ್ಯಕ್ರಮವೇನೂ ಆಗಿರಲಿಲ್ಲ. ಈ ಸಂದರ್ಭದಲ್ಲಿ ಶರ್ಮಿಳಾ ಹೇಳಿದ್ದು ಹೀಗೆ: “ಒಂದು ವೇಳೆ ಮಹಾತ್ಮ ಗಾಂಧೀಜಿ ಬದುಕಿದ್ದರೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಹಿಂದಕ್ಕೆ ಪಡೆಯಲು ಆಗ್ರಹಿಸಿ ಹೋರಾಟ ಆರಂಭಿಸಿರುತ್ತಿದ್ದರು. ಈ ಕ್ರೂರ ಕಾಯ್ದೆ ವಿರುದ್ಧ ದೇಶದ ಎಲ್ಲ ನಾಗರಿಕರು ಒಂದು ಅಭಿಯಾನ ಆರಂಭಿಸಲಿ ಎಂದು ಮನವಿ ಮಾಡುತ್ತೇನೆ

*****

ಶರ್ಮಿಳಾ ಹೋರಾಟ ನಿರ್ಣಾಯಕ ಹಂತ ತಲುಪಿದೆ. ಆಕೆಯ ಮನೋಧೈರ್ಯವೇ ಆಕೆಯನ್ನು ಇಷ್ಟು ವರ್ಷಗಳ ಕಾಲ ಕಾಪಾಡಿದೆ. ಆದರೆ ಆಕೆಯ ದೇಹ ಸಹಕರಿಸುತ್ತಿಲ್ಲ. ವೈದ್ಯರ ಪ್ರಕಾರ ಇನ್ನು ಉಪವಾಸವನ್ನು ನಿಭಾಯಿಸುವುದು ಆಕೆಯಿಂದ ಸಾಧ್ಯವಿಲ್ಲ. ಅರ್ಥಾತ್ ಸತ್ಯಾಗ್ರಹ ಮುಂದುವರೆದರೆ ಆಕೆ ಬದುಕುವ ಸಾಧ್ಯತೆ ತೀರಾ ಕಡಿಮೆ.

ಹೀಗಾಗಿ ಮಣಿಪುರದ ಜನರು ಮತ್ತೆ ಚಳವಳಿಗೆ ಇಳಿದಿದ್ದಾರೆ. ಶರ್ಮಿಳಾ ಪ್ರಾಣ ಉಳಿಸಿ ಎಂಬ ಕಳೆದ ಡಿಸೆಂಬರ್‌ನಿಂದ ಆರಂಭಗೊಂಡಿದೆ. ದಿನಕ್ಕೊಂದು ಸಂಘಟನೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಶರ್ಮಿಳಾಗೆ ಬೆಂಬಲ ಸೂಚಿಸುತ್ತಿದೆ.

ಇತ್ತ ಸರ್ಕಾರ ರಚಿಸಿದ್ದ ಜೀವನ್ ರೆಡ್ಡಿ ಆಯೋಗ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಕಾಯ್ದೆಯ ಕ್ರೂರ ಅಂಶಗಳನ್ನು ಆಯೋಗ ಎತ್ತಿತೋರಿಸಿದೆ ಎಂದು ಮಾಧ್ಯಮವರದಿಗಳು ಹೇಳುತ್ತವೆ. ಡಾ.ಮನಮೋಹನ ಸಿಂಗ್ ಅವರ ಸರ್ಕಾರ ಏನು ಮಾಡುತ್ತದೆ ಎಂಬ ಕುತೂಹಲ ಮಾತ್ರ ಉಳಿದಿದೆ.

ಶರ್ಮಿಳಾ ಉಳಿಯಬೇಕು, ಉಳಿಯಲೇಬೇಕು. ಯಾಕೆಂದರೆ ಆಕೆ ಸತ್ತರೆ ಮಾನವೀಯತೆ ಸತ್ತಂತೆ, ಮಾನವ ಹಕ್ಕುಗಳು ಸತ್ತಂತೆ. ಆಕೆ ಉಳಿಯದಿದ್ದರೆ ನಮ್ಮದು ಪ್ರಜಾಪ್ರಭುತ್ವ ದೇಶ ಎಂದು ಹೇಳಿಕೊಳ್ಳುವ ಹೆಮ್ಮೆಯೂ ನಮ್ಮದಲ್ಲವಾಗುತ್ತದೆ.

ಕಾಕತಾಳೀಯ ನೋಡಿ, ಮಣಿಪುರಿ ಹೆಣ್ಣುಮಕ್ಕಳ ಹೆಸರುಗಳೆಲ್ಲ ಹೆಚ್ಚಾಗಿ ದೇವಿ ಎಂದೇ ಕೊನೆಗೊಳ್ಳುತ್ತದೆ. ಹೆಂಗಸರನ್ನು ದೇವಿಯರೆಂದು ಪೂಜಿಸುವ ದೇಶ ಇದು. ಮನೋರಮಾ ದೇವಿ ನಮ್ಮದೇ ಸೈನ್ಯಕ್ಕೆ ಬಲಿಯಾದಳು. ಇನ್ನೊಬ್ಬ ಶರ್ಮಿಳಾ ದೇವಿ ಸಾವಿನ ಅಂಚಿಗೆ ತಲುಪಿದ್ದಾಳೆ. ಇಬ್ಬರೂ ಸಹಸ್ರಾರು ಮಣಿಪುರಿಗಳ ಸಾವಿಗೆ, ನೋವಿಗೆ ಸಂಕೇತ ಅಷ್ಟೆ. ಮಣಿಪುರದ ದೇವಿಯರು ಸಾರ್ವಜನಿಕವಾಗಿ ಬೆತ್ತಲಾಗಿದ್ದಾರೆ. ನಾವು ನಿರ್ಲಜ್ಜರಾಗಿ ಅದನ್ನು ನೋಡುತ್ತಿದ್ದೇವೆ.

ಇಂಡಿಯಾವೆಂದರೆ ಕೇವಲ ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ ದೆಹಲಿ, ಮಹಾರಾಷ್ಟ್ರ ಎಂಬ ಭ್ರಮೆ ನಮ್ಮ ಕೇಂದ್ರ ಸರ್ಕಾರಕ್ಕಿದೆ. ದೊಡ್ಡ ರಾಜ್ಯಗಳು ತಮ್ಮ ಪಾಲು ದಕ್ಕಿಸಿಕೊಳ್ಳಲು ವಶೀಲಿಬಾಜಿ ನಡೆಸುತ್ತವೆ. ಪ್ರಜಾಪ್ರಭುತ್ವವೆಂದರೆ ಸಂಖ್ಯೆಯ ಆಟವಲ್ಲವೆ? ಮಣಿಪುರಿಗಳ ಕೈಯಲ್ಲಿ ಸಂಖ್ಯೆ ಇಲ್ಲ. ಅವರು ಇಬ್ಬರು ಸಂಸದರನ್ನು ಮಾತ್ರ ಆರಿಸಿಕಳಿಸಬಲ್ಲರು. ಆ ಇಬ್ಬರು ಕೇಂದ್ರ ಸರ್ಕಾರವನ್ನು ಉರುಳಿಸುವ ಅಥವಾ ಉಳಿಸುವ ಆಟದಲ್ಲಿ ಮಹತ್ವದ ಪಾತ್ರ ವಹಿಸಲು ಸಾಧ್ಯವೇ ಇಲ್ಲ. ತಮಿಳುನಾಡಿನಂಥ, ಬಿಹಾರದಂಥ ರಾಜ್ಯಗಳು ಇಂಥ ಆಟಗಳನ್ನು ಆಡಿ ಗೆಲ್ಲುತ್ತ ಬಂದಿವೆ.

ಮಣಿಪುರದಲ್ಲಿ ಹಿಂದಿ ಭಾಷೆ ಇಲ್ಲ. ಮಣಿಪುರಿ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಅಲ್ಲಿನ ಜನರು ಭಾರೀ ಸ್ವರೂಪದ ಚಳವಳಿ ನಡೆಸಬೇಕಾಯಿತು. ಹೀಗಾಗಿ ಮಣಿಪುರದ ಜನರು ರಾಜಕೀಯವಾಗಿ ದುರ್ಬಲರು. ಕೆಂಪುಕೋಟೆಯ ಮೇಲೆ ಪ್ರಭಾವ ಬೀರುವ ಶಕ್ತಿ ಅವರಲ್ಲಿ ಇಲ್ಲ.

ದೇಶವಾಸಿಗಳ ಲೆಕ್ಕದಲ್ಲಿ ಮಣಿಪುರ ಈ ದೇಶದ ಅಂಗವೇ ಅಲ್ಲ. ಒಂದು ವೇಳೆ ತಾಯಂದಿರ ಪ್ರತಿಭಟನೆ ಮುಂಬೈನಲ್ಲೋ, ದೆಹಲಿಯಲ್ಲೋ, ಕೋಲ್ಕತ್ತಾದಲ್ಲೋ ನಡೆದಿದ್ದರೆ ಅದರ ಪರಿಣಾಮಗಳೇ ಬೇರೆಯಾಗಿರುತ್ತಿತ್ತು. ಆದರೆ ಬಡಪಾಯಿ ಮಣಿಪುರಿ ಹೆಣ್ಣುಮಕ್ಕಳ ಧ್ವನಿ ಕೇಳುವವರ್‍ಯಾರು?

ಬೆಂಗಳೂರಿನಲ್ಲಿ ಓದುವ ಮಣಿಪುರಿ ಹೆಣ್ಣುಮಗಳೊಬ್ಬಳು ತನ್ನ ಬ್ಲಾಗ್‌ನಲ್ಲಿ ಹೀಗೆ ಬರೆಯುತ್ತಾಳೆ: ರಸ್ತೆಯಲ್ಲಿ ನಡೆಯುವಾಗ ನನ್ನನ್ನು ವಿಚಿತ್ರ ಪ್ರಾಣಿಯಂತೆ ನೋಡಲಾಗುತ್ತದೆ. ಬೇರೆಯವರು ಸ್ಕರ್ಟ್ ಧರಿಸಿ ಓಡಾಡಿದರೆ ಅವರನ್ನು ಗೌರವದಿಂದ ನೋಡಲಾಗುತ್ತದೆ. ಆದರೆ ನಾವು, ಮಣಿಪುರದ ಹುಡುಗಿಯರು ಸ್ಕರ್ಟ್ ಧರಿಸಿ ಓಡಾಡಿದರೆ ಕಿತ್ತು ತಿನ್ನುವಂತೆ ನೋಡುತ್ತಾರೆ.
ನಾನು ಓದುವ ಕಾಲೇಜಿನ ಉಪನ್ಯಾಸಕಿ ನನ್ನ ಬಗ್ಗೆ ವಿಚಾರಿಸುವಾಗ ಎಲ್ಲಿಂದ ಬಂದಿದ್ದೀ ಎಂದು ಪ್ರಶ್ನಿಸಿದರು. ಮಣಿಪುರ ಎಂದು ಉತ್ತರಿಸಿದೆ. ಅದೆಲ್ಲಿದೆ? ಎಂದು ಮರುಪ್ರಶ್ನಿಸಿದರು. ಕಾಲೇಜು ಉಪನ್ಯಾಸಕರಿಗೇ ಮಣಿಪುರ ಎಲ್ಲಿದೆ ಎಂಬುದು ಗೊತ್ತಿಲ್ಲ. ನಾವು ಭಾರತೀಯರೆ ಎಂಬ ಅನುಮಾನ ನಮಗೇ ಮೂಡುವಂತಾಗಿದೆ.

ಮಣಿಪುರವೂ ಒಂದು ರಾಜ್ಯ. ಅದೂ ಸಹ ಭಾರತ ಒಕ್ಕೂಟದ ಭಾಗ. ಅಲ್ಲಿನ ಜನರು ಸಾಂಸ್ಕೃತಿಕವಾಗಿ ಶ್ರೀಮಂತರು. ಅವರಿಗೆ ಅವರದೇ ಆದ ಭಾಷೆ, ಸಂಪ್ರದಾಯ, ಸಂಸ್ಕೃತಿಗಳಿವೆ. ಅವುಗಳನ್ನು ನಾವು ಗೌರವಿಸಬೇಕು. ತಮ್ಮ ಎಲ್ಲ ಅನನ್ಯತೆಗಳ ಜತೆಗೇ ಅವರು ಭಾರತೀಯ ಒಕ್ಕೂಟದಲ್ಲಿ ಗುರುತಿಸಿಕೊಳ್ಳಬೇಕು ಎಂಬುದನ್ನು ನಾವೇಕೆ ಅರ್ಥಮಾಡಿಕೊಳ್ಳುವುದಿಲ್ಲ?

*****ಈ ಸುದೀರ್ಘ ಬರೆಹದ ಆರಂಭದಲ್ಲೇ ಎಲ್ಲ ದೇಶಭಕ್ತರಿಗೂ ನನ್ನ ಮನವಿಯನ್ನು ಸಲ್ಲಿಸಿದ್ದೆ. ಅಂತ್ಯದಲ್ಲೂ ಅದನ್ನೇ ಹೇಳುತ್ತಿದ್ದೇನೆ. ಶರ್ಮಿಳಾ ಎಂಬ ಹುಡುಗಿಯ ಪ್ರಾಣ ಉಳಿಸುವ ಹೊಣೆ ನಮ್ಮೆಲ್ಲರದು. ಅದು ಅಸಾಧ್ಯವೇನೂ ಅಲ್ಲ.

ವಿವಿಧತೆಯಲ್ಲಿ ಏಕತೆ ಎಂದು ಕಾಟಾಚಾರಕ್ಕೆ ಹೇಳುತ್ತ ಭಾವೈಕ್ಯತೆಯ ಬೊಗಳೆಯಲ್ಲಿ ಕಾಲ ಕಳೆಯುವ ಮುನ್ನ ನಮ್ಮದೇ ದೇಶದ, ನಮ್ಮ ಅಕ್ಕ-ತಂಗಿಯಂಥ ಹುಡುಗಿಯ ಪ್ರಾಣರಕ್ಷಣೆಗೆ ಮಾನವೀಯತೆಯಲ್ಲಿ ನಂಬಿಕೆ ಇಟ್ಟ ಒಂದಷ್ಟು ಮಂದಿಯಾದರೂ ಧ್ವನಿಯೆತ್ತಲಿ ಎಂಬುದು ನನ್ನ ಬಯಕೆ.

ನಮ್ಮ ಎಲೆಕ್ಟ್ರಾನಿಕ್ ಮಾಧ್ಯಮಗಳು ಅರುಷಿ ಎಂಬ ಬಾಲಕಿಯ ಮರ್ಡರ್ ಕೇಸ್‌ನಲ್ಲಿ ತೋರಿಸಿದ ನೂರನೇ ಒಂದು ಭಾಗದ ಆಸಕ್ತಿಯನ್ನು ಶರ್ಮಿಳಾ ಸತ್ಯಾಗ್ರಹದ ವಿಷಯದಲ್ಲಿ ತೋರಿದರೆ ಸಮಸ್ಯೆ ಪರಿಹಾರವಾಗಬಹುದೇನೋ?

ಮನೋರಮಾ ದೇವಿಯ ಶವವನ್ನು ನೋಡಿದ ಮಣಿಪುರದ ಮಹಿಳೆಯೊಬ್ಬರು ಅದನ್ನು ಬಣ್ಣಿಸಿದ್ದು ಹೀಗೆ: ‘ಆಕೆಯ ಮೃತದೇಹ ರಕ್ತಸಿಕ್ತ ಯುದ್ಧಭೂಮಿಯಂತಿತ್ತು.

ಮತ, ಧರ್ಮ, ಸಿದ್ಧಾಂತಗಳ ಕಿತ್ತಾಟದಲ್ಲಿ ದೇಶವೇ ಒಂದುಬಗೆಯ ಯುದ್ಧಭೂಮಿಯಂತೆ ಕಾಣುತ್ತಿರುವ ಹೊತ್ತು ಇದು. ಈ ಸಂದರ್ಭದಲ್ಲಿ ಶರ್ಮಿಳಾಳನ್ನು ಉಳಿಸಿಕೊಳ್ಳುವಂತಾದರೆ, ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಎಂಬ ಕ್ರೂರ ಕಾನೂನು ನಾಶವಾದರೆ ಮನುಷ್ಯತ್ವ ಗೆಲುವು ಸಾಧಿಸಿದಂತಾಗುತ್ತದೆ.

ನೀವೇನು ಹೇಳುತ್ತೀರಿ?