Tuesday, February 24, 2009

ಹುಸಿ ರಾಷ್ಟ್ರಭಕ್ತರಿಗೆ ಉತ್ತರ ಸಿಕ್ಕಿದೆಯೇ?

ಒಂದು ಚೆಂದನೆಯ ಕತೆ, ಅಷ್ಟೇ ಚೆಂದನೆಯ ಚಿತ್ರಕತೆ, ಮನಮುಟ್ಟವಂಥ ನಿರೂಪಣೆ, ಪಾತ್ರಗಳಿಗೆ ಜೀವ ತುಂಬುವಂಥ ಕಲಾವಿದರು, ಹಿತಾನುಭವ ನೀಡುವ ಸಂಗೀತ, ಎಲ್ಲವನ್ನೂ ಹದವಾಗಿ ಬೆರಸಿ, ಬೇಯಿಸಿ `ಪಾಕ'ಗೊಳಿಸಿದ ತಂತ್ರಜ್ಞರು...

ಇದು ಡ್ಯಾನಿ ಬಾಂi ನಿರ್ದೇಶನದ `ಸ್ಲಂಡಾಗ್ ಮಿಲಿಯನೇರ್' ಸಿನಿಮಾದ ಹಿನ್ನೆಲೆ. ಆದರೆ `ರಾಷ್ಟ್ರಭಕ್ತರು' ವಿವಾದ ಸೃಷ್ಟಿಸಿದರು. ಭಾರತದ ಬಡತನವನ್ನು ಹೀಯಾಳಿಸಲಾಗುತ್ತಿದೆ ಎಂದು ಆರೋಪಿಸಿದರು. ನಮ್ಮ ದಾರಿದ್ರ್ಯವನ್ನು ವೈಭವೀಕರಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ಹಪಹಪಿಸಿದರು.

ಅವರ ಉದ್ದೇಶಗಳು ಸ್ಪಷ್ಟ: ಕೊಳಗೇರಿಯ ಬಾಲಕನೊಬ್ಬ ಮುಖ್ಯವಾಹಿನಿಗೆ ಬರುವುದು `ಉನ್ನತ ವರ್ಗದ' ಜನಕ್ಕೆ ಅರಗದ ವಿಚಾರ. ಅದೂ ಕೊಳಗೇರಿಯಲ್ಲಿ ಹುಟ್ಟಿದ ಸಾಮಾನ್ಯ ಪೋರನೊಬ್ಬ ಬುದ್ಧಿವಂತ ಆಗುತ್ತಾನೆ ಎಂದರೆ ಅದು ಶತಶತಮಾನಗಳಿಂದ ವಿದ್ಯೆ ಕಲಿತವರಿಗೆ ಸಹಿಸಲಾಗದ ಸಂಗತಿ. ಕೊಳಗೇರಿಯಲ್ಲಿ ಹುಟ್ಟಿ ಕೊಳಕನ್ನೇ ಮೈವೆತ್ತಿ ಮೇಲೆದ್ದವನೊಬ್ಬ `ಮಡಿವಂತ'ರಾದ ತಮ್ಮೊಂದಿಗೆ ಸ್ಪರ್ಧಿಸುತ್ತಾನೆ ಎಂದರೆ ಸಹ್ಯವಾಗುವುದಾದರೂ ಹೇಗೆ?
ಅದಕ್ಕೆ ರಾಷ್ಟ್ರಭಕ್ತಿಯ ಸೋಗಿನಲ್ಲಿ ಸ್ಲೋಗನ್ ಹೊರಡಿಸಿದರು. ಇದು ಸ್ಲಂಡಾಗ್‌ಗೆ ದೇಶವಿರೋಧಿ ಎನ್ನುವ ಪಟ್ಟಕಟ್ಟಿದರು.

ಇಷ್ಟಕ್ಕೆ ಮುಗಿಯಲಿಲ್ಲ ಇವರ ಆತ್ಮವಂಚನೆ. ಸ್ಲಂಡಾಗ್ ಮಿಲಿಯನೇರ್ ಸಂಗೀತ ನಿರ್ದೇಶನಕ್ಕೆ `ಗೋಲ್ಡನ್ ಗ್ಲೋಬ್' ಪ್ರಶಸ್ತಿ ಬಂದಾಗ ಎ.ಆರ್. ರೆಹಮಾನ್ ಮೇಲೂ ಹರಿಹಾಯ್ದರು.

ಜನವರಿ ೨೩ರಂದು `ಪ್ರಜಾವಾಣಿ' ಪತ್ರಿಕೆಯ `ಸಿನಿಮಾ ರಂಜನೆ' ಪುರವಣಿಯಲ್ಲಿ ಗಂಗಾಧರ ಮೊದಲಿಯಾರ್ ತಮ್ಮ `ಫಿಲಂ ಡೈರಿ' ಅಂಕಣದಲ್ಲಿ `ಎ.ಆರ್. ರೆಹಮಾನ್ ಅವರ ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ವಿದೇಶದಲ್ಲಿ ತಮ್ಮ ಪ್ರದರ್ಶಿಸುವುದು ರೆಹಮಾನ್ ಅವರಿಗೆ ಇದು ಹೊಸದೇನಲ್ಲ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಏನು ಎಂಬುದೇ ತಮಗೆ ಮುಖ್ಯವಾಗುತ್ತದೆ' ಎಂದು ಕಾರಿಕೊಂಡರು.

ಭಾರತೀಯ ಚಿತ್ರರಂಗಕ್ಕೆ ಎ.ಆರ್. ರೆಹಮಾನ್ ಅವರ ಕೊಡುಗೆ ಏನು ಎನ್ನುವುದು ಯಾವತ್ತೋ ಸಾಬೀತಾಗಿದೆ. ರೆಹಮಾನ್ ತಮ್ಮ ಚೊಚ್ಚಲ ಸಿನಿಮಾ `ರೋಜಾ'ದಿಂದಲೇ ತಮ್ಮ ಕಸುವು ತೋರಿದ್ದಾರೆ. `ಕೆಲವರಿಗೆ' `ಕೆಲವರು' ಮಾಡಿದರೆ ಮಾತ್ರ ಸಾಧನೆ. ಉಳಿದವರ ಸಾಧನೆ ನಗಣ್ಯ. ಇದೇ ರೆಹಮಾನ್ `ವಂದೇಮಾತರಂ' ಗೀತೆಗೆ ಸಂಗೀತ ಸಂಯೋಜಿಸಿದಾಗಲೂ ಅವರ ವಿರುದ್ಧ ಹುನ್ನಾರ ನಡೆಸಲಾಗಿತ್ತು. ರೆಹಮಾನ್ ಉತರಿಸಲಿಲ್ಲ. ಮೊನ್ನೆ ಮೊನ್ನೆ ಮತ್ತೆ ಮೂದಲಿಸಿದಾಗಲೂ ಉತ್ತರಿಸಲಿಲ್ಲ. ಈಗಲೂ ಉತ್ತರಿಸಿಲ್ಲ.

ಆದರೆ ಉತ್ತರ ಸಿಕ್ಕಿದೆ. ಆದರೂ ಗಂಗಾಧರ ಮೊದಲಿಯಾರ್ನಂಥ `ಬುದ್ಧಿವಂತರು', ಹುಸಿ ರಾಷ್ಟ್ರಭಕ್ತರು, `ಇದು ಬಾಲಿವುಡ್ ಮೇಲೆ ನಿಯಂತ್ರಣ ಸಾಧಿಸಲು ಪಾಶ್ಚಾತ್ಯರು ಹೂಡಿದ ತಂತ್ರವೇ' ಎಂದು ಹುಳುಕು ಹುಡುಕುವ ಕನ್ನಡಪ್ರಭದ (ಫೆ. ೨೪, ೭ನೇ ಪುಟ) ಮಂದಿ ಯಾವತ್ತಿಗೂ ಅಂಥ ಸೂಕ್ತವಾದ ಉತ್ತರಗಳನ್ನು ಹುಡುಕಿಕೊಳ್ಳುವುದಿಲ್ಲ. ಅದು ಅವರಿಂದ ಸಾಧ್ಯವೂ ಇಲ್ಲ. ಹಾಗೆ ತೆರೆದುಕೊಳ್ಳಲು ಆರೋಗ್ಯಕರ ಮನಸ್ಸು ಬೇಕು! ರೆಹಮಾನ್ ಹೇಳಿದಂತೆ ಪ್ರೀತಿ, `ಆಯ್ಕೆ' ಆಗಬೇಕು!

(ಸ್ಲಂ ಡಾಗ್ ಸಿನಿಮಾ ಆಸ್ಕರ್ ಗೆದ್ದ ಹಿನ್ನೆಲೆಯಲ್ಲಿ ಗೆಳಯರೊಬ್ಬರು ಕಳಿಸಿದ ಮೇಲ್)

Thursday, February 19, 2009

ಮಠಾಧೀಶರು ಸಮಾಜದ ಶತ್ರುಗಳೇ?

ಆನೆಯನೇರಿಕೊಂಡು ಹೋದಿರಿ ನೀವು,
ಕುದುರೆಯನೇರಿಕೊಂಡು ಹೋದಿರಿ ನೀವು.
ಕುಂಕುಮ-ಕಸ್ತುರಿಯ ಪೂಸಿಕೊಂಡು ಹೋದಿರಿ ಅಣ್ಣಾ;
ಸತ್ಯದ ನಿಲುವನರಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಕೆಟ್ಟು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವನನರಿಯದೆ
ನರಕಕ್ಕೆ ಭಾಜನವಾದಿರಲ್ಲಾ!


ಚಿತ್ರದುರ್ಗದ ಸಮ್ಮೇಳನ ಮುಗಿದರೂ, ಸಮ್ಮೇಳನದಲ್ಲಿ ಹುಟ್ಟಿಕೊಂಡ ಕಿಚ್ಚು-ರೊಚ್ಚು ಇನ್ನೂ ಮುಂದುವರೆದಿದೆ. ಸಮ್ಮೇಳನ ಆರಂಭವಾಗುವುದಕ್ಕೆ ಮುನ್ನವೇ `ಮಠಾಧೀಶರು ನಮ್ಮ ಶತ್ರುಗಳು' ಎಂದು ಸಮ್ಮೇಳನಾಧ್ಯಕ್ಷ ಎಲ್.ಬಸವರಾಜು ಹೇಳಿದ್ದರು. ವಿಶೇಷವೆಂದರೆ ಈ ನಾಡಿನ ಸಾವಿರ ಸಾವಿರ ಮಠಾಧೀಶರ ಪೈಕಿ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾತ್ರ ಈ ಹೇಳಿಕೆಯಿಂದ ರೊಚ್ಚಿಗೆದ್ದರು. ಎಲ್.ಬಿಯವರು ಹೇಳಿದ ಮಾತು ತಮ್ಮನ್ನು ಕುರಿತೇ ಆಡಿದ್ದಿರಬೇಕು ಎಂದು ಶಿವಾಚಾರ್ಯರು ಭಾವಿಸಿದರೇನೋ? ಹೀಗಾಗಿ ಅವರು ಎಲ್.ಬಿಯವರ ವಿರುದ್ಧ ಹರಿಹಾಯ್ದರು. ಸಮ್ಮೇಳನ ನಿರ್ವಹಣೆಯಲ್ಲಿ ಮಠಾಧೀಶರ ಪಾತ್ರವೂ ಇದ್ದಿದ್ದರಿಂದಾಗಿ ಎಲ್.ಬಿಯವರು ಸಮ್ಮೇಳನಾಧ್ಯಕ್ಷ ಪದವಿ ತಿರಸ್ಕರಿಸಿ ಈ ಮಾತುಗಳನ್ನು ಆಡಬೇಕಿತ್ತು ಎಂದು ಅಪ್ಪಣೆ ಕೊಡಿಸಿದರು. ಇದಕ್ಕೆ ಪ್ರತಿಯಾಗಿ ಶಿವಾಚಾರ್ಯರ ಮಾತುಗಳನ್ನು ಸಮ್ಮೇಳನದ ವೇದಿಕೆಗಳಲ್ಲೇ ಕಿ.ರಂ.ನಾಗರಾಜ್ ಮತ್ತಿತರರು ಖಂಡಿಸಿದರು.

ಅಲ್ಲಿಗೆ ಎಲ್ಲವೂ ಮುಗಿಯಲಿಲ್ಲ. ಪ್ರಜಾವಾಣಿಗೆ ಬರೆದ ವಾಚಕರ ವಾಣಿಯಲ್ಲಿ ಪ್ರೊ. ಚಂದ್ರಶೇಖರ ಪಾಟೀಲರು ತಮ್ಮ ಎಂದಿನ ಶೈಲಿಯಲ್ಲಿ ಶಿವಾಚಾರ್ಯರನ್ನು ಕುಟುಕಿದರು. `ಶಿವಮೊಗ್ಗದಲ್ಲೂ ಧಮಕಿ ಇತ್ತು. ನಂತರದ ಸಮ್ಮೇಳನಗಳಲ್ಲಿ ಈ ಬಗೆಯ ನೇರ ಹಸ್ತಕ್ಷೇಪವನ್ನು ನಮ್ಮ ರಾಜಕೀಯ ವಲಯದ ಪ್ರಭುಗಳು ಕಡಿಮೆ ಮಾಡಿದ್ದಾರೆ. ಆದರೆ `ಸಿರಿಗರ' ಹೊಡೆಸಿಕೊಂಡ ಸ್ವಾಮಿಗಳ ಕಿತಾಪತಿ ಮಾತ್ರ ಮೊನ್ನೆಯ ಸಮ್ಮೇಳನದಲ್ಲಿ ಎದ್ದು ಕಾಣುವಂತಿತ್ತು. ಇಂಥವರನ್ನು ಕೂಡ ನಮ್ಮ ಪ್ರಜ್ಞಾವಂತ ಜನತೆ ರಿಪೇರಿ ಮಾಡುತ್ತಾರೆ' ಎಂದು ಚಂಪಾ ಬರೆದಿದ್ದರು.

ನಂತರ ಶಿವಾಚಾರ್ಯರ ಸರದಿ. ವಿಜಯಕರ್ನಾಟಕದ ತಮ್ಮ ಬಿಸಿಲು ಬೆಳದಿಂಗಳು ಅಂಕಣದಲ್ಲಿ (ಫೆ.೧೮) ಶಿವಾಚಾರ್ಯರು ಸಮ್ಮೇಳನ ಮತ್ತು ವೈಚಾರಿಕತೆಯ ಪ್ರಹಸನ ಎಂಬ ಲೇಖನವೊಂದನ್ನು ಬರೆದು, ಚಂಪಾ ಅವರನ್ನು ಹಂಗಿಸಿದ್ದಾರೆ. `ಪ್ರಗತಿಪರರು, ಚಿಂತಕರು ಎನಿಸಿಕೊಂಡ ಕೆಲವರು ಬಹಿರಂಗವಾಗಿ ಮಠಗಳೊಂದಿಗೆ ಗುರ್ತಿಸಿಕೊಳ್ಳಲು ಸಿದ್ಧರಿಲ್ಲ. ಆದರೆ ಅಂತರಂಗದಲ್ಲಿ ಮಾತ್ರ ಮಠಗಳ ಸಹಾಯ ಇವರಿಗೆ ಬೇಕೇ ಬೇಕು. ಎಂದು ಹೇಳುತ್ತ ಅದಕ್ಕೆ ಉದಾಹರಣೆಯೊಂದನ್ನು ಪೋಣಿಸಿದ್ದಾರೆ.

ಚಂಪಾ ಮತ್ತೆ ಉತ್ತರಿಸಿದ್ದಾರೆ; ಪ್ರಜಾವಾಣಿಯಲ್ಲಿ. `ತಮ್ಮ ವಿದ್ಯೆಯ ಬಗ್ಗೆ ನನಗೆ ಗೌರವ ಇದೆ. ಆದರೆ ನಿಮ್ಮಲ್ಲಿ ವಿದ್ಯೆಗೆ ತಕ್ಕ ವಿನಯ ಇಲ್ಲ. ನೀವು ಜರ್ಮನಿಯ ಬದಲಾಗಿ ಇಂಗ್ಲೆಂಡಿಗೆ ಹೋಗಿದ್ದರೆ ಚೆನ್ನಾಗಿತ್ತು. ಜರ್ಮನಿಯ ಜ್ಞಾನದೊಂದಿಗೆ ಅಲ್ಲಿಯ ಹಿಟ್ಲರ್ ಪ್ರಜ್ಞೆಯನ್ನೂ ತಂದ ಹಾಗಿದೆ.' ಎಂದು ಚಂಪಾ ನೇರವಾಗಿ ದಾಳಿ ನಡೆಸಿದ್ದಾರೆ.

ಈ ಚರ್ಚೆ ಇನ್ನಷ್ಟು ಮುಂದುವರೆಯುವ ಸಾಧ್ಯತೆಗಳೂ ಇವೆ, ಆಗಲಿ. ಎಲ್ಲ ವಿವಾದಗಳಿಗೆ ಮೂಲಧಾತುವಾಗಿರುವ ಎಲ್.ಬಿಯವರ ಮಾತಿನ ಬಗ್ಗೆ ನನಗನ್ನಿಸಿದ್ದನ್ನು ಇಲ್ಲಿ ಹೇಳಲು ಹೊರಟಿದ್ದೇನೆ.

******

ಚಂಪಾ ಬಳಸಿದ `ಸಿರಿಗರ' ಪದ ಇಂಟರೆಸ್ಟಿಂಗ್ ಅನಿಸಿತು. ಶಿವಾಚಾರ್ಯರು ಪ್ರತಿನಿಧಿಸುವ `ಸಿರಿಗೆರೆ ಪದದ ಹಾಗೆಯೇ ಧ್ವನಿಸುವ `ಸಿರಿಗರ' ಪದವನ್ನು ಚಂಪಾ ಬೇಕೆಂತಲೇ ಬಳಸಿದ್ದರು. ಬಸವಣ್ಣನವರ ವಚನವೊಂದರಲ್ಲೂ ಸಿರಿಗರ ಎಂಬ ಪದದ ಉಲ್ಲೇಖವಿದೆ; ಆ ವಚನ ಇಲ್ಲಿದೆ:

ಹಾವು ತಿಂದವರ ನುಡಿಸಬಹುದು!
ಗರ ಹೊಡೆದವರ ನುಡಿಸಬಹುದು!
ಸಿರಿಗರ ಹೊಡೆದವರ ನುಡಿಸಬಾರದು ನೋಡಯ್ಯ!
ಬಡತನವೆಂಬ ಮಂತ್ರವಾದಿ ಹೋಗಲು
ಒಡನೆ ನುಡಿವರಯ್ಯ ಕೂಡಲಸಂಗಮದೇವ.


ಶಿವಾಚಾರ್ಯರ ಮಾತು ಹಾಗಿರಲಿ, ಸಾವಿರಾರು ಧರ್ಮಗುರುಗಳಿಗೆ ಇಂದು ಹೊಡೆದಿರುವುದು `ಸಿರಿಗರ'ವೇ ಹೌದು. ಮಠಾಧೀಶರು ಇಂದು ಶ್ರೀಮಂತರಲ್ಲಿ ಶ್ರೀಮಂತರು. ಈ ಶ್ರೀಮಂತಿಕೆಯ ಗುಟ್ಟು ರಟ್ಟಾಗುವುದೇ ಇಲ್ಲ. ಯಾವ ಮಠದ ಮೇಲೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸುವುದಿಲ್ಲ. ವರ್ಷಕ್ಕೊಮ್ಮೆ ಲಾಭ-ನಷ್ಟದ ಲೆಕ್ಕಾಚಾರ ಕೊಡಿ ಎಂದು ನಮ್ಮ ಸರ್ಕಾರಗಳೂ ಕೇಳುವುದಿಲ್ಲ. ಯಾವ ಲೋಕಾಯುಕ್ತಕ್ಕೂ ಮಠದ ಆಸ್ತಿಪಾಸ್ತಿಯ ತನಿಖೆ ನಡೆಸುವ ಅಧಿಕಾರ ಇಲ್ಲ!

ಪ್ರಬಲ ಮಠಾಧೀಶರಂತೂ ತಮ್ಮ ಶಿಕ್ಷಣ ಸಂಸ್ಥೆಗಳದ್ದೂ ಸೇರಿದಂತೆ ಇತರ ಕೆಲಸಗಳಿಗಾಗಿ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದ ಬಾಗಿಲು ತುಳಿಯುವುದಿಲ್ಲ. ಕಾರ್‍ಯದರ್ಶಿ ಮಟ್ಟದ ಅಧಿಕಾರಿಗಳೇ ಮಠಕ್ಕೆ ಫೈಲುಗಳನ್ನು ಹಿಡಿದುಕೊಂಡು ಹೋಗುತ್ತಾರೆ. ಅರ್ಥಾತ್ ಸರ್ಕಾರವೇ ಮಠಗಳಿಗೆ ತೆರಳುತ್ತದೆ. ಮಠಗಳಲ್ಲೇ ಸರ್ಕಾರದ ಕೆಲಸಗಳು ನಡೆಯುತ್ತವೆ. ಹಿಂದೊಮ್ಮೆ ಮೈಸೂರಿನ ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್ ಮಠಗಳ ವಿರುದ್ಧ ಹರಿಹಾಯ್ದಿದ್ದರು. ಆಗಲೂ ಮಠಾಧೀಶರ ಪರವಾಗಿ ರಣಕೇಕೆ ಹಾಕಿದವರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳೇ! ಶಿವಾಚಾರ್ಯರು ತಮ್ಮ ಪ್ರಭಾವವನ್ನು ಎಷ್ಟು ನಿಖರವಾಗಿ ಬಳಸಿದರೆಂದರೆ ಮತ್ತೆ ವಿಶ್ವನಾಥ್ ಆ ಸ್ವಾಮಿಗಳ ವಿರುದ್ಧ ಬಾಯಿ ತೆರೆಯಲೇ ಇಲ್ಲ!

ಹಿಂದೆ ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ಹೆಲಿಕಾಪ್ಟರ್ ಒಂದನ್ನು ಕೊಂಡುಕೊಂಡರು. ಹಾಸನದ ಜವೇನಹಳ್ಳಿ ಮಠದಲ್ಲಿ ನಡೆದ ಬೃಹತ್ ಕಾರ್ಯಕ್ರಮವೊಂದರಲ್ಲಿ ನಿಡುಮಾಮಿಡಿ ಸ್ವಾಮೀಜಿ ಮಾತನಾಡುತ್ತ, `ಸ್ವಾಮಿಗಳಿಗೇಕೆ ಹೆಲಿಕಾಪ್ಟರ್, ಎಲ್ಲವನ್ನೂ ತ್ಯಾಗ ಮಾಡಿದವರು ಸ್ವಾಮಿಗಳಲ್ಲವೆ? ಯಾಕೆ ಐಷಾರಾಮಿ ಕಾರುಗಳು? ಯಾಕೀ ಐಷಾರಾಮಿ ಜೀವನ?' ಎಂದು ಪ್ರಶ್ನಿಸಿದ್ದರು. ನಂತರ ಹಾಸನಕ್ಕೆ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಚುಂಚನಗಿರಿ ಸ್ವಾಮೀಜಿ `ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ, `ನಾಯಿಗಳು ಬೊಗಳುತ್ತವೆ, ಅವುಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಹೇಳಿದ್ದರು. ಮಠಗಳ ಆಸ್ತಿಪಾಸ್ತಿ, ವೈಭವೋಪೇತ ಬದುಕಿನ ಬಗೆ ಯಾರಾದರೂ ಪ್ರಶ್ನಿಸಿದರೆ ಅವರು `ನಾಯಿ' ಎನ್ನಿಸಿಕೊಳ್ಳಬೇಕಾಗುತ್ತದೆ!

ಸಾಕಷ್ಟು ರಾಜಕಾರಣಿಗಳು ಪ್ರಬಲ ಮಠಾಧೀಶರ ಬಳಿ ತಮ್ಮ ಕಪ್ಪು ಹಣವನ್ನು ತೆಗೆದಿರಿಸಿರುತ್ತಾರೆ ಎಂಬ ಮಾತೂ ಇದೆ. ಹಿರಿಯ ರಾಜಕಾರಣಿಯೊಬ್ಬರು ಮಠವೊಂದರಲ್ಲಿ ಇಟ್ಟ ಹಣವನ್ನು ಆ ಮಠದ ಸ್ವಾಮಿ ಹಿಂದಿರುಗಿಸಲಿಲ್ಲ, ಅದಕ್ಕಾಗಿ ಆ ಸ್ವಾಮಿಗೂ-ರಾಜಕಾರಣಿಗೂ ಜಟಾಪಟಿ ನಡೆಯಿತು ಎಂಬ ಮಾತುಗಳೂ ಇವೆ. ಇದೆಲ್ಲ ಸತ್ಯವೋ ಸುಳ್ಳೋ, ಆದರೆ ಕಪ್ಪು ಹಣ ಇಡುವುದಕ್ಕೆ ಮಠಗಳಿಂತ ಹೆಚ್ಚು ಸೇಫ್ ಜಾಗ ಇನ್ನೊಂದಿಲ್ಲ ಎಂಬುದು ಮಾತ್ರ ನಿಜ. ಯಾಕೆಂದರೆ ಮಠಗಳಿಗೆ ಯಾವ ಪೊಲೀಸು, ಟ್ಯಾಕ್ಸಿನವರೂ ಹೋಗುವುದಿಲ್ಲ. ಕಳುಹಿಸುವ ಧೈರ್ಯ ಯಾವ ಸರ್ಕಾರಕ್ಕೂ ಇಲ್ಲ.

*****

ಕಾಮ ಒಂದನೇ ಭವಿ, ಕ್ರೋಧ ಎರಡನೇ ಭವಿ
ಲೋಭ ಮೂರನೇ ಭವಿ, ಮೋಹ ನಾಲ್ಕನೇ ಭವಿ
ಮದ ಐದನೇ ಭವಿ, ಮತ್ಸರ ಆರನೇ ಭವಿ
ಆಮಿಷ ಏಳನೇ ಭವಿ
ಇಂತೀ ಏಳು ಭವಿಗಳ ತಮ್ಮೊಳಗಿಟ್ಟುಕೊಂಡು
ಲಿಂಗವಿಲ್ಲದವರ ಭವಿ ಭವಿ ಎಂಬರು
ತಮ್ಮಂತರಂಗದಲ್ಲಿದ್ದ ಲಿಂಗಾಂಗದ ಸುದ್ದಿಯನ್ನರಿಯದೆ
ಅಚ್ಚಪ್ರಸಾದಿ-ನಿಚ್ಚಪ್ರಸಾದಿ-ಸಮಯಪ್ರಸಾದಿಗಳೆಂದು
ಜಲಕ್ಕೆ ಕನ್ನವನಿಕ್ಕಿ ಉದಕವ ತಂದು
ಲಿಂಗಮಜ್ಜನಕ್ಕೆರೆವ ಹಗಲುಗಳ್ಳರಿಗೆ ಮೆಚ್ಚುವನೆ
ಚೆನ್ನಮಲ್ಲಿಕಾರ್ಜುನ?


ಬಸವಣ್ಣನ ಪೂರ್ವದಿಂದಲೂ ಭವಿ-ಭಕ್ತ ಸಂಘರ್ಷ ನಡೆದುಬಂದಿದೆ. ಕೆಳಜಾತಿಗಳ ಜನರು ವೀರಶೈವಕ್ಕೆ ಸೇರ್ಪಡೆಯಾದಾಗ ಎದುರಾದ ವಿರೋಧಗಳ ಕುರಿತೇ ನೂರಾರು ವಚನಗಳು ಇವೆ. ಅಕ್ಕಮಹಾದೇವಿ ಸಹ ಈ ವಚನದಲ್ಲಿ ಹೊಸದಾಗಿ `ಭಕ್ತ'ರಾದವರ ವಿರುದ್ಧ ನಡೆದ ಮಸಲತ್ತಿನ ವಿರುದ್ಧ ಮಾತನಾಡಿದ್ದಾಳೆ. ಭವಿ ಎಂದರೆ ಯಾರು ಎಂಬುದಕ್ಕೆ ಅಕ್ಕ ತನ್ನದೇ ಆದ ವ್ಯಾಖ್ಯೆ ನೀಡುತ್ತಾಳೆ. ಆಕೆಯ ಪ್ರಕಾರ ಲಿಂಗವಿಲ್ಲದವರು ಭವಿಗಳಲ್ಲ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಆಮಿಷಗಳನ್ನು ತಮ್ಮ ಒಡಲಲ್ಲಿ ಇಟ್ಟುಕೊಂಡವರೇ ನಿಜವಾದ ಭವಿಗಳು. ಅವರು ಲಿಂಗವಂತರಾದರೂ ಭವಿಗಳು.

`ಸಿರಿಗರ' ಹೊಡೆಸಿಕೊಂಡ ನಮ್ಮ ಬಹುತೇಕ ಮಠಾಧೀಶರೆಲ್ಲರೂ ಅಕ್ಕ ವ್ಯಾಖ್ಯಾನಿಸುವ `ಭವಿ'ಗಳ ಪಟ್ಟಿಯಲ್ಲೇ ಬರುವಂಥವರು. ಇದನ್ನು ನಿರಾಕರಿಸುವ ಶಕ್ತಿಯೂ ಮಠಾಧೀಶರಿಗಿಲ್ಲ. ಈ ಎಲ್ಲ ಮಠಾಧೀಶರೂ ಆಸ್ತಿ ಸಂಗ್ರಹಣೆಯಲ್ಲೇ ಅತಿ ಹೆಚ್ಚು ತೃಪ್ತಿ ಕಾಣುವವರು. ಆಸ್ತಿ ಗಳಿಕೆಯ ಹಾದಿಯಲ್ಲಿ ಅವರು ಎಂಥ ಸಂಘರ್ಷದ ಮಾರ್ಗವನ್ನಾದರೂ ತುಳಿಯಬಲ್ಲರು. ಆಸ್ತಿ ಗಳಿಸಿದ ನಂತರ ಅದರ ಮದದಲ್ಲಿ ಏನು ಬೇಕಾದರೂ ಮಾಡಬಲ್ಲರು, ಮಾತಾಡಬಲ್ಲರು, ದಕ್ಕಿಸಿಕೊಳ್ಳಬಲ್ಲರು.

ಸ್ವಾಮಿಗಳು ಜಂಗಮವಾಗಲು ಬಯಸಲೊಲಲ್ಲರು. ಅವರು ಸ್ಥಾವರಗಳನ್ನು ನಿರ್ಮಿಸಿಕೊಂಡು ಕುಳಿತವರು. ಸ್ಥಾವರಗಳಲ್ಲಿ ಕುಳಿತವರು ಅರಿಷಡ್ವರ್ಗಗಳಿಂದ ದೂರವಿರುವುದು ಸಾಧ್ಯವೇ ಇಲ್ಲ. ದೂರವಿದ್ದೇವೆಂದು ತೋರಿಸಿಕೊಳ್ಳುವುದೂ ಸಾಧ್ಯವಿಲ್ಲ!

ಉಳ್ಳವರು ಶಿವಾಲಯವ ಮಾಡಿಹರು!
ನಾನೇನ ಮಾಡುವೆ? ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ!
ಕೂಡಲಸಂಗಮದೇವ ಕೇಳಯ್ಯ,
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!


ಬಸವಣ್ಣನವರ ಈ ವಚನವನ್ನು ಅದೆಷ್ಟು ಮಠಾಧೀಶರು ಅದೆಷ್ಟು ಸಾವಿರ ಬಾರಿ ತಮ್ಮ `ಆಶೀರ್ವಚನ'ಗಳಲ್ಲಿ ಹೇಳಿದ್ದಾರೋ? ಪಾಪ, ಅವರಿಗೆ ಸ್ಥಾವರ ಮತ್ತು ಜಂಗಮಕ್ಕಿರುವ ವ್ಯತ್ಯಾಸವೂ ಗೊತ್ತಿಲ್ಲ. ದೇಹವೇ ದೇಗುಲವಾಗುವ ಆತ್ಮ ಸಾಕ್ಷಾತ್ಕಾರ ಅವರ `ಕಾಣ್ಕೆ'ಗೆ ದಕ್ಕುವುದಿಲ್ಲ. ಹೀಗಾಗಿ ಮಠ ಕಟ್ಟಿಕೊಂಡು, ಗುಡಿ ಕಟ್ಟಿಕೊಂಡು ಕುಳಿತವರು ಈ ಮಠಾಧೀಶರು.

*****

ಬಸವಣ್ಣನೂ ಸೇರಿದಂತೆ ಯಾವ ವಚನಕಾರನೂ/ಳೂ ತನ್ನನ್ನು ತಾನು `ನಾವು' ಎಂದು ಸಂಬೋಧಿಸಿಕೊಂಡಿದ್ದಿಲ್ಲ. ಆದರೆ ಶಿವಾಚಾರ್ಯ ಸ್ವಾಮಿಗಳಂಥವರು ಯಾವ ಸಂಕೋಚವೂ ಇಲ್ಲದೆ ಈ ರೀತಿಯ ಆತ್ಮ ಪ್ರತ್ಯಯ ಬಳಸುತ್ತಾರೆ. ಇದು ಮಠದ ಭಕ್ತರಿಗಾಗಿ ಹೊರಡಿಸುವ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂದುಕೊಳ್ಳುವಂತೂ ಇಲ್ಲ. ಪ್ರಕಟವಾಗುವುದು `ವಿಜಯ ಕರ್ನಾಟಕ' ಎಂಬ ನಂ.೧ ಪತ್ರಿಕೆಯಲ್ಲಿ.

ಶಿವಾಚಾರ್ಯರ ಅಹಮಿಕೆಗಳು ಪ್ರದರ್ಶನವಾಗುವುದು ಕೇವಲ ಈ ಬಗೆಯ ಆತ್ಮಪ್ರತ್ಯಯದಿಂದ ಮಾತ್ರವಲ್ಲ. ಈ ಸಾಲುಗಳನ್ನು ಗಮನಿಸಿ: `ಸಮ್ಮೇಳನಾಧ್ಯಕ್ಷರು ಚಿತ್ರದುರ್ಗಕ್ಕೆ ಕಾಲಿಡುತ್ತಿದ್ದಂತೆಯೇ ಮಠಾಧೀಶರು ನಮ್ಮ ಶತ್ರುಗಳು ಎಂಬ ರಣಕಹಳೆಯನ್ನು ಊದಿದರು. ಮೆರವಣಿಗೆಯಲ್ಲಿ ಬಂದು ಸಾನ್ನಿಧ್ಯ ವಹಿಸಿ ವಧೂವರರನ್ನು ಹರಸಿ ಕಾಣಿಕೆ ಪಡೆಯಬೇಕಾಗಿದ್ದ ಸ್ವಾಮಿಗಳು ಸ್ವತಃ ಕಾಣಿಕೆ ಕೊಟ್ಟು ಮುಂದೆ ನಿಂತು ಸಾಹಿತ್ಯ ಕನ್ನಿಕೆಯ ಮದುವೆ ಮಾಡಿಸಿ ಮದುಮಕ್ಕಳ ಮೆರವಣಿಗೆ ಮಾಡಿಸಿದರೂ ಬೀಗರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಶತ್ರುಗಳೆಂದು ಗೊತ್ತಿದ್ದೂ ಬೀಗತನ ಮಾಡುವ ಉದ್ದೇಶ ಬೀಗರಿಗೆ ಏನಿತ್ತೋ ದೇವರೇ ಬಲ್ಲ!'

ಕೆಲವು ಪ್ರಶ್ನೆಗಳು:
ಮೆರವಣಿಗೆಯಲ್ಲಿ ಬಂದು ಶಿವಾಚಾರ್ಯರು ಸಾನ್ನಿಧ್ಯವನ್ನೇ ವಹಿಸಬೇಕೆ? ಎಲ್ಲ ಸಾಹಿತ್ಯ ಪ್ರೇಮಿಗಳಂತೆ ಸಹಜವಾಗಿ ಭಾಗವಹಿಸಲು ಆಗುವುದಿಲ್ಲವೆ? ಸಾಹಿತ್ಯ ಸಮ್ಮೇಳನದಲ್ಲಿ ಕಾಣಿಕೆ ವಸೂಲಿ ಮಾಡಲಾಗಲಿಲ್ಲವಲ್ಲ ಎಂಬ ಕೊರಗೇ ನಿಮಗೇ? ಬದಲಾಗಿ ನೀವೇ ಒಂದಿಷ್ಟು ಕಾಣಿಕೆ ಕೊಡಬೇಕಾಯಿತಲ್ಲ ಎಂಬ ಸಂಕಟವೆ? `ಬೀಗತನದ ಪ್ರಶ್ನೆಗೆ ಬರುವುದಾದರೆ ಸಮ್ಮೇಳನಕ್ಕೆ ಒಂದಿಷ್ಟು ಸಹಾಯ ಮಾಡಿದ ಮಾತ್ರಕ್ಕೆ ಇಡೀ ಸಮ್ಮೇಳನದ ವಾರಸುದಾರಿಕೆಯನ್ನು ನಿಮಗೆ ಕೊಟ್ಟವರ್‍ಯಾರು? ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನ ಮಠಾಧೀಶರ ಖಾಸಗಿ ಸ್ವತ್ತಾಗುವುದು ಸಾಧ್ಯವೆ? ಸಮ್ಮೇಳನಕ್ಕೆ ಸರ್ಕಾರವೂ ದುಡ್ಡು ಕೊಟ್ಟಿದೆ, ಚಿತ್ರದುರ್ಗದ ಸಾಮಾನ್ಯ ಜನರೂ ದೇಣಿಗೆ ಕೊಟ್ಟಿದ್ದಾರೆ, ಸರ್ಕಾರಿ ನೌಕರರೂ ಕಾಸು ಕೊಟ್ಟಿದ್ದಾರೆ. ಹೀಗಿರುವಾಗ `ಶತ್ರುಗಳೊಂದಿಗೆ ಬೀಗತನ ಪ್ರಶ್ನೆಯಾದರೂ ಎಲ್ಲಿಂದ ಉದ್ಭವಿಸುತ್ತದೆ? ಸಿರಿಗೆರೆ ಮಠವೇನಾದರೂ ಸಮ್ಮೇಳನ ಆಯೋಜಿಸಿದ್ದರೆ, ಈ ಮಾತು ಬರುತ್ತಿತ್ತು. ಆದರೆ ಇದು ಹಾಗಲ್ಲ ಎಂಬ ಸಾಮಾನ್ಯಪ್ರಜ್ಞೆ ನಿಮಗಿಲ್ಲವೆ?

******

`ಮಠಾಧೀಶರು ನಮ್ಮ ಶತ್ರುಗಳು ಎಂದು ಎಲ್.ಬಿಯವರು ಯಾವ ಅರ್ಥದಲ್ಲಿ ಹೇಳಿದರೋ? ಆದರೆ ನಾನಂತೂ ಬಹುತೇಕ ಮಠಾಧೀಶರು ಸಮಾಜದ ಶತ್ರುಗಳು ಎಂದೇ ಭಾವಿಸಿದ್ದೇನೆ. (ಮುಂದೆ ಮಠಾಧೀಶರು ಎಂಬ ಪದಬಳಕೆ ಇರುವೆಡೆಯೆಲ್ಲ ಬಹುತೇಕ ಎಂದು ಸೇರಿಸಿಕೊಂಡು ಓದುವುದು) ಯಾಕೆಂದರೆ;
ಇವರು ಅಪ್ಪಟ ಜಾತಿವಾದಿಗಳು, ಕೋಮುವಾದಿಗಳು ಮತ್ತು ಯಥಾಸ್ಥಿತಿವಾದಿಗಳು.
ಮನುಷ್ಯರ ಹೆಗಲ ಮೇಲೆ ಕುಳಿತು ಮೆರವಣಿಗೆ ಮಾಡಿಸಿಕೊಳ್ಳುವ ಜೀವವಿರೋಧಿಗಳು.
ಕಿರೀಟ, ಪಲ್ಲಕ್ಕಿ, ಸಿಂಹಾಸನಗಳನ್ನು ಬಳಸಿ ದರ್ಬಾರು ನಡೆಸುವ ಪ್ರಜಾಪ್ರಭುತ್ವ ವಿರೋಧಿಗಳು.
ಕ್ಯಾಪಿಟೇಷನ್ ಲಾಬಿಯ ಅಧಿಕೃತ ಯಜಮಾನರು, ಶಿಕ್ಷಣವನ್ನು ಬಿಕರಿಗಿಟ್ಟವರು.
ಕಾವಿಯ ನೆರಳಲ್ಲಿ ರಾಜಕಾರಣ ಮಾಡುವವರು, ಧರ್ಮ-ರಾಜಕಾರಣವನ್ನು ಕಲಬೆರಕೆ ಮಾಡಿದವರು.
ಎಲ್ಲಕ್ಕಿಂತ ಮಿಗಿಲಾಗಿ ಅಸ್ಪೃಶ್ಯತೆ, ಮೌಢ್ಯ, ಅಂಧಾನುಕರಣೆ, ಹೀನ ಆಚರಣೆಗಳ ಪೋಷಕರು, ಪ್ರತಿಪಾದಕರು.


ಮಠಾಧೀಶರು ಶಾಲೆ ಕಾಲೇಜು ತೆರೆದು ಜ್ಞಾನದಾಸೋಹ ನೀಡುತ್ತಿಲ್ಲವೆ? ಬಡಮಕ್ಕಳಿಗೆ ಶಿಕ್ಷಣ ನೀಡುತ್ತಿಲ್ಲವೆ? ಅನ್ನ ಕೊಡುತ್ತಿಲ್ಲವೆ? ಇಂಥ ಹಲವಾರು ಪ್ರಶ್ನೆಗಳು ಉದ್ಭವಿಸಬಹುದು. ಯಾರ ದುಡ್ಡಿನಲ್ಲಿ ಈ ಶಿಕ್ಷಣ? ಊಟ? ಅದೆಲ್ಲವನ್ನೂ ಅಮಾಯಕ ಭಕ್ತರು ಕೊಟ್ಟಿದ್ದಲ್ಲವೆ?

*****

ಎಲ್‌ಬಿಯವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಎರಡು ಪ್ರಧಾನ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ದಲಿತರಿಗೆ ವಸತಿ ಶಾಲೆಗಳನ್ನು ತೆರೆಯಬೇಕು ಎಂಬುದು ಅವರ ಒಂದು ಆಗ್ರಹವಾದರೆ, ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು ಎಂಬುದು ಮತ್ತೊಂದು ಆಗ್ರಹ. ಒಂದು ವೇಳೆ ಶಿಕ್ಷಣ ರಾಷ್ಟ್ರೀಕರಣಗೊಂಡರೆ ಮಠಾಧೀಶರು ನಿರುದ್ಯೋಗಿಗಳಾಗುತ್ತಾರೆ. ಆಗ ಅವರು ಪೂರ್ಣಕಾಲಿಕ ಧರ್ಮಗುರುಗಳಾಗಬಹುದು. ಆಗಲಾದರೂ ಪರಿಸ್ಥಿತಿ ಬದಲಾಗುವುದೆ?

೧೨ನೇ ಶತಮಾನದಲ್ಲೂ ಇದ್ದ ಇಂದಿನ ಮಠಾಧೀಶರಂಥವರನ್ನು ನೋಡಿಯೇ ಬಸವಣ್ಣ ಹೇಳಿದ್ದು:

ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಳವನು!
ಸಂಬೋಳಿಯೆನುತ್ತ, ಇಂಬಿನಲ್ಲಿದೇನೆ.
ಕೂಡಲಸಂಗಮದೇವ.
ನಿಮ್ಮ ನಾಮವಿಡಿದ ಅನಾಮಿಕ ನಾನು.


ಪೂರಕ ಓದಿಗೆ: ಹೌದು, ಮಠಾಧೀಶರೆಲ್ಲ ಸ್ವಜಾತಿ ಪ್ರೇಮಿಗಳು!

Thursday, February 12, 2009

ಕೊಳಗೇರಿ ಕೋಟ್ಯಧಿಪತಿ: ವಿಮರ್ಶೆಗಳಿಗೊಂದು ವಿಮರ್ಶೆ!

ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುವ ಹೊತ್ತಿನಲ್ಲೇ ಭಾರತದಲ್ಲಿ ಸ್ಲಂಡಾಗ್ ಮಿಲನಿಯೇರ್ ಬಿಡುಗಡೆಯಾಗಿತ್ತು. ಅಧಿವೇಶನ ಕವರೇಜ್‌ಗಾಗಿ ಬೆಳಗಾವಿಯಲ್ಲಿದ್ದ ನಾನು ಕುತೂಹಲ ತಡೆಯಲಾಗದೆ ಸಹೋದ್ಯೋಗಿ ಗೆಳೆಯರಾದ ಶರಣ ಬಸಪ್ಪ, ರಾಮಾಂಜನೇಯ ಅವರೊಂದಿಗೆ ಸಿನಿಮಾ ನೋಡಿದೆ. ಸಿನಿಮಾ ಕುರಿತು ಏನಾದರೂ ಬರೆಯೋಣ ಎಂದು ವಾಪಾಸು ಬರುವಷ್ಟರಲ್ಲಿ ಹತ್ತಾರು ಮಂದಿ ಬ್ಲಾಗರ್‌ಗಳು ಬರೆದಿದ್ದರು. ನಾನು ಅಂದುಕೊಂಡಿದ್ದನ್ನು ಸಾಕಷ್ಟು ಮಂದಿ ಬರೆದಾಗಿತ್ತಾದ್ದರಿಂದ ಸುಮ್ಮನಾದೆ.
ಸಾಂಗತ್ಯದಲ್ಲಿ ನಡೆದ ಚರ್ಚೆಯಂತೂ ಸಾಕಷ್ಟು ಕುತೂಹಲಕಾರಿಯಾಗಿತ್ತು. ಒಳಗೂ ಹೊರಗೂ ಬ್ಲಾಗ್‌ನ ಕುಮಾರ್, ನಗುವ ಬಣ್ಣಗಳು ಬ್ಲಾಗ್‌ನ ಹೇಮಶ್ರೀ ಬರೆದದ್ದು ಹೆಚ್ಚು ಆಪ್ತವೆನ್ನಿಸಿತು.

ಈ ನಡುವೆ ಗೆಳೆಯ, ಪತ್ರಕರ್ತ ಧರಣೀಶ್ ಬೂಕನಕೆರೆ ನನಗೊಂದು ಮೇಲ್ ಕಳಿಸಿದ್ದಾರೆ. ಎಲ್ಲೂ ಪ್ರಕಟವಾಗದ ಬರೆಹವಿದು. ಅವರ ಅನುಮತಿ ಪಡೆದು ಅದನ್ನು ಇಲ್ಲಿ ಪ್ರಕಟಿಸಿದ್ದೇನೆ.

ಪತ್ರಕರ್ತರಿಗೆ, ಬ್ಲಾಗರ್‌ಗಳಿಗೆ ಪರಿಚಿತರೇ ಆಗಿರುವ ಧರಣೀಶ್, ಸ್ಲಂ ಡಾಗ್ ಕುರಿತ ವಿಮರ್ಶೆಗಳನ್ನೇ ವಿಮರ್ಶಿಸಿದ್ದಾರೆ.

ಓವರ್ ಟು ಧರಣೀಶ್...


ಮೇರಾ ಭಾರತ್ ಮಹಾನ್!
ಈ ವಾಕ್ಯ ಇತ್ತೀಚೆಗೆ ಕುಹಕಕ್ಕೆ ಬಳಕೆ ಆಗುವುದೇ ಹೆಚ್ಚು: ಅನುಮಾನವೇ ಬೇಡ ಹಾಗೆ ಕುಹಕವಾಡುವ ಮಂದಿ ಸೋಕಾಲ್ಡ್ ವಿದ್ಯಾವಂತರು! `ಅಕ್ಷರ ಕಲಿತವರು'! ಅವರಲ್ಲಿ `ರಾಷ್ಟ್ರೀಯತೆ' `ಪ್ರಜ್ಞೆ'ಯೂ ಸಿಕ್ಕಾಪಟ್ಟೆ. ಅದರಲ್ಲೂ ಸರಿಯಾದ ರೀತಿಯಲ್ಲಿ ಸಾಹಿತ್ಯ, ಸಂಸ್ಕೃತಿ ಓದಿಕೊಳ್ಳದೆ ಇರುವ ಇವರು ತಮ್ಮದೇ ಆರ್ಕ್ಯೂಟ್ ಕಮ್ಯುನಿಟಿಗಳಲ್ಲಿ, ಬ್ಲಾಗುಗಳಲ್ಲಿ `ದೇಶಭಕ್ತಿ'ಯನ್ನು `ಉಕ್ಕಿ'ಸುತ್ತಾರೆ. ತಾವು ಮಾತ್ರ ಬೆಚ್ಚನೆಯ ಮನೆಯಲ್ಲಿ ಕುಳಿತು ಯುದ್ಧಮಾಡಿ ಎಂದು ಫರ್ಮಾನು ಹೊರಡಿಸುತ್ತಾರೆ. ಮತ ಚಲಾಯಿಸಲು ಸಮಯ ಮಾಡಿಕೊಳ್ಳದಿದ್ದರೂ ಮುಂದಿನ ಪ್ರಧಾನಿ ಯಾರಾಗಬೇಕೆಂದು ನಿರ್ದೇಶನ ಕೊಡುತ್ತಾರೆ. ಯಾರದೋ ಬಗ್ಗೆ ಬೈಯುತ್ತಾ, ಮತ್ಯಾರೋ ಬೈದದ್ದನ್ನೂ ದೊಡ್ಡದು ಮಾಡುತ್ತಾ, ಯಾವುದೋ ದೇವರಿಗೆ ಅವಮಾನವಾಗಿದೆ ಎಂದು ಗುಲ್ಲು ಹಬ್ಬಿಸುತ್ತಾ ಹೋರಾಟಕ್ಕೆ ಇಂಬುಕೊಡುತ್ತಾರೆ.

ಇಂಥ `ಹುಟ್ಟು ಹೋರಾಟಗಾರರು' ಈಗ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ. ಅದೇ `ಸ್ಲಮ್‌ಡಾಗ್ ಮಿಲಿಯನೇರ್ ಮಿಸ್ಟೇಕ್'! ಹಾಲಿವುಡ್ ನಿರ್ದೇಶಕ ಡ್ಯಾನಿ ಬಾಂi `ಸ್ಲಮ್‌ಡಾಗ್ ಮಿಲಿಯನೇರ್' ಸಿನಿಮಾದಲ್ಲಿ ಭಾರತದ ಬಡತನವನ್ನು ಬಂಡವಾಳ ಮಾಡಿಕೊಂಡಿದ್ದಾನೆ ಎನ್ನುವುದು ಇವರ ಆಕ್ರೋಶ. ಪಾಶ್ಚಿಮಾತ್ಯರ ಕಣ್ಣಲ್ಲಿ ಭಾರತ ಯಾವತ್ತೂ ದರಿದ್ರ ದೇಶ ಎನ್ನುವುದನ್ನು ಸ್ಲಮ್‌ಡಾಗ್ ಇನ್ನಷ್ಟು ಪುಷ್ಟೀಕರಿಸಲು ಹೊರಟಿದೆ. ತಮ್ಮ ಜೇಬು ತುಂಬಿಸಿಕೊಳ್ಳಲು ಪಶ್ಚಿಮದವರು ನಮ್ಮ ಕೊಳಕನ್ನು ಜಗತ್ತಿಗೆ ಸಾರಿ ಹೇಳುತ್ತಿದ್ದಾರೆ. ಅವರಿಗೆ ನಮ್ಮ ಕೊಳೆಗೇರಿಗಳಷ್ಟೇ ಕಾಣುತ್ತವೆ, ನಮ್ಮ ಸಾಮರ್ಥ್ಯ ಅರಿವಿಗೆ ಬರುವುದೇ ಇಲ್ಲ ಎನ್ನುವಂತಹ ಉದ್ದನೆಯ ಆರೋಪಗಳ ಪಟ್ಟಿ `ಅಕ್ಷರವಂತರದ್ದು'.

ಆರೋಪ ಮಾಡುವ ಮಂದಿ ಕ್ಷಣ ಮಾತ್ರಕ್ಕಾದರೂ ಮಹಾತ್ಮ ಗಾಂಧೀಜಿಯನ್ನು ಸ್ಮರಿಸಿಕೊಳ್ಳಲಿ. ಗಾಂಧಿ `ಈ ದೇಶದಲ್ಲಿರುವ ದರಿದ್ರ ತೊಲಗುವ ತನಕ ನನಗೆ ಸೂಟು-ಬೂಟು ಬೇಡ' ಎಂದು ಅರೆಬೆತ್ತಲಾದರು. ತುಂಡು ಬಟ್ಟೆಯಲ್ಲೇ ವಿದೇಶ ಸುತ್ತಿ ಬಂದರು. ರಾಷ್ಟ್ರವ್ಯಾಪಿ ಸಂಚರಿಸಿ ಸಂಚಲನ ಉಂಟು ಮಾಡಿದರು. ಗಾಂಧಿಜಿಯನ್ನು ಕೇಳಿ, ಅಥವಾ ನಿಮ್ಮನ್ನು ನೀವೇ ಕೇಳಿಕೊಳ್ಳಿ: ಆ ಮಹಾತ್ಮ ಪ್ರಪಂಚದಾದ್ಯಂತ ಸಾರಿಸಾರಿ ಹೇಳಿದ್ದು ಏನು? ನಮ್ಮ ಬಡತನವಾ? ದಾರಿದ್ರ್ಯವಾ? ಕೊಳಕಾ- ಹುಳುಕಾ? ಏನು?

ಇವು ಕಷ್ಟಕರ ಪ್ರಶ್ನೆಗಳೇನಲ್ಲ. ಉತ್ತರ ಬಲು ಸುಲಭ: ಗಾಂಧಿ ಹೇಳಿದ್ದು ಅವೆಲ್ಲವುಗಳನ್ನು ಮೀರಿದ ಸತ್ಯವನ್ನು. ವಾಸ್ಯವವನ್ನು. ಇಂಥ ಕಹಿ ಸತ್ಯ ಮತ್ತು ಕಟು ವಾಸ್ತವಗಳನ್ನು ಮುಕ್ತವಾಗಿ ಹೇಳಿದರೂ ಗಾಂಧಿ `ನಮ್ಮ ಗಾಂಧೀಜಿ'. ಇಂದಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರೇ `ನಮ್ಮ ಪ್ರತಿನಿಧಿ'. ಶಾಂತಿಗಾಗಿ, ಸರಳತೆಗಾಗಿ, ಭಕ್ತಿಗಾಗಿ, ಹೋರಾಟಕ್ಕಾಗಿ ಎಲ್ಲಕೂ ಅವರೇ `ಐಕಾನ್'!

ಗಾಂಧೀಜಿಯನ್ನು `ನಮ್ಮಗಾಂಧಿ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು ನಮ್ಮ ಇನ್ನಷ್ಟು ಕೊಳಕು- ಹುಳುಕುಗಳತ್ತ ಚರ್ಚೆಯಾದಾಗಲೂ ಅದನ್ನು ಆರೋಗ್ಯಕರವಾಗಿ ತೆಗೆದುಕೊಳ್ಳಬೇಕಲ್ಲವೇ?

*****

ಸ್ಲಮ್‌ಡಾಗ್ ಮಿಲಿಯನೇರ್ ಕೊಳೆಗೇರಿಯ `ಕೊಳಕು' ಬಾಲಕನೊಬ್ಬನ ಕತೆ. ಕೊಳಕು ಬಾಲಕನೊಬ್ಬ ಕುಬೇರನಾದ ಕತೆ. ಕೊಳೆಗೇರಿಯಲ್ಲೂ ಕೂಡ ದೇವರಿಗೆ ಅರ್ಪಿತವಾಗಲು ಅರ್ಹತೆ ಇರುವ ಸಾವಿರಸಾವಿರ ಹೂವುಗಳಿವೆ ಎನ್ನುವುದನ್ನು ಸ್ಪಷ್ಟೀಕರಿಸುವ ಕತೆ. ಪ್ರತಿಷ್ಠಿತ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಕಲಿತ ಪಂಡಿತರೇ ಗೆಲ್ಲಲಾಗದ ಸ್ಪರ್ಧೆಯನ್ನು ಅಕ್ಷರವನ್ನೇ ಕಲಿಯದ ಕೊಳೆಗೇರಿಯ ಪೋರನೊಬ್ಬ ಗೆಲ್ಲುವ ಕತೆ. ಕೊಳೆಗೇರಿಯ ಕೊಳಕರು, `ನಾವು ಕೂಡ ಅಕ್ಷರವಂತರನ್ನೂ ಮೀರಿಸಬಲ್ಲೆವು' ಎಂದು ಎದೆತಟ್ಟುವ ಕತೆ. ಪರಮದಾರಿದ್ರ್ಯವನ್ನೇ ಉಂಡು-ಹೊದೆಯುವ ಪೋರನೊಬ್ಬ `ಬುದ್ದಿವಂತರಿಗಾಗಿ ಮಾತ್ರ' ಇರುವ ಆಟಗಳಲ್ಲಿ ಮೇಜುಕುಟ್ಟಿ ಪಂಥಾಹ್ವಾನ ನೀಡುವ ಕತೆ. ಇಂಥ ಅನೇಕ ಸಂಗತಿಗಳಿಂದ ಸ್ಲಮ್‌ಡಾಗ್ ಬಂಡಾಯದ ಸಂಕೇತ.

`ನಾವೇ ಮೇಲು ಎಂದುಕೊಂಡಿರುವವರಿಗೆ' ಈ ಮೂಲಕ ಸ್ಲಮ್‌ಡಾಗ್ ಸವಾಲು ಹಾಕಿದ್ದು ಸುಳ್ಳಲ್ಲ. ಆದರೆ ಯಾವತ್ತೂ ನೇರವಾಗಿ ಏನನ್ನೂ ಹೇಳದ `ಬುದ್ಧಿವಂತರು' ಅದಕ್ಕೆ ಬೇರೆಯದೇ ರೂಪಕೊಟ್ಟು ಸಿನಿಮಾಕ್ಕೆ ಕಾಟ ಕೊಡಲು ಹೊರಟಿದ್ದಾರೆ. ಅದಕ್ಕೆ ಎಂದಿನಂತೆ ದೇಶಭಕ್ತಿಯೇ ಈ `ರಾಷ್ಟ್ರಭಕ್ತ'ರ `ಅಸ್ತ್ರ' ಆಗಿದೆ. `ಭಾರತವನ್ನು ಕೆಟ್ಟದಾಗಿ ಚಿತ್ರೀಕರಿಸಲಾಗಿದೆ' ಎಂದು ಓಳು ಬಿಡುತ್ತಿದ್ದಾರೆ.

ಈ ಉದ್ಧಾಮ ರಾಷ್ಟ್ರಭಕ್ತರಿಗೆ ಮತ್ತೊಂದಿಷ್ಟು ಪ್ರಶ್ನೆಗಳು: ಮುಂಬೈನಲ್ಲಿ ಕೊಳೆಗೇರಿಗಳು ಇಲ್ಲವೇ? ಆ ಕೊಳೆಗೇರಿಗಳಲ್ಲಿ ಸ್ಲಮ್‌ಡಾಗ್ ನಾಯಕ ಜಮಾಲ್‌ನಂಥ ಹುಡುಗರು ಇಲ್ಲವೇ? ಎಂದೂ ಶಾಲೆಗೆ ಹೋಗದ ಅವರ `ಜೀವನಾನುಭ' ದೊಡ್ಡದಲ್ಲವೇ? ಅವರ ಬದುಕು, ಬದುಕಲ್ಲವೇ? ಅವು ಕೂಡ ಕತೆಯಾಗಲು, ಸಿನಿಮಾ ಆಗಲು ಅರ್ಹ ಅಲ್ಲವೇ? ಮೇಲಾಗಿ ಕೊಳೆಗೇರಿಯ ಗಲೀಜಿನಲ್ಲೂ ಗುಲಾಬಿ ಅರಳಬಲ್ಲದು ಎನ್ನುವುದು ಸತ್ಯವಲ್ಲವೇ?

*****

ಸ್ಲಮ್‌ಡಾಗ್ ಮಿಲಿಯನೇರ್ ವಾಸ್ತವವನ್ನು ಹೇಳುವ ಚಿತ್ರ. ಇಲ್ಲಿ ಕೊಳೆಗೇರಿ ಒಂದು ವೇದಿಕೆ. ಕೊಳೆಗೇರಿಯ ಜಮಾಲ್, ಸಲೀಮ್, ಲತಿಕಾ ಪ್ರಮುಖ ಪಾತ್ರಧಾರಿಗಳು. ಮೂವರದು ಮೂರು ಹಾದಿ. ಅಮಿತಾಬ್ ಬಚನ್‌ನ ಅಪ್ಪಟ ಅಭಿಮಾನಿ ಜಮಾಲ್ ಎನ್ನುವ ಕೊಳಕು ಹುಡುಗ ಕ್ರಮೇಣ ಚಾಯ್‌ವಾಲಾ ಆಗಿ, ಮಿಲೇನಿಯರ್ ಆಗಿ ಹೊರಹೊಮ್ಮುತ್ತಾನೆ. ಕೊಳಕು ಮೆತ್ತಿದ ಬಟ್ಟೆಯೊಂದಿಗೆ, ಖಾಲಿ ತಟ್ಟೆಯೊಂದಿಗೆ ಜೊತೆಗಿದ್ದ ಲತಿಕಾಳನ್ನು ಮಿಲಿಯನೇರ್ ಆದ ನಂತರವೂ ಅಷ್ಟೇ ಪ್ರೀತಿಸುತ್ತಾನೆ. ಜಮಾಲ್‌ನ ಅಣ್ಣ ಸಲೀಮ್ ಕೊಳೆಗೇರಿಯ ಹುಡುಗರ ಇನ್ನೊಂದು ಮುಖದಂತೆ, ಇನ್ನೊಂದು ವಿಭಿನ್ನ ಮುಖದಂತೆ, ಖಳನಂತೆ, ಕೊನೆಗೆ ನಿಜವಾದ ಸಹೋದರನಂತೆ ಇದ್ದಾನೆ. ಕಾಡುವ ದೃಷ್ಟಿಯಲ್ಲಿ ಸಲೀಮ್ ಕೂಡ ಹಿಂದೆ ಬೀಳುವುದಿಲ್ಲ. ಲತಿಕಾ ಪಾತ್ರವೂ ಅಷ್ಟೇ. ಇವು ಸಿನಿಮಾದಲ್ಲಿ ಭಾವನಾತ್ಮಕವಾಗಿ ಸೆಳೆದಿಡುವ ಅಂಶಗಳು.

ಬಂಡಾಯವನ್ನು ಬದಿಗಿಟ್ಟು ನೋಡಿದರೂ ಈ ಭಾವನಾತ್ಮಕ ಸಂಗತಿಗಳು ಮನಮುಟ್ಟಬೇಕು. ಆದರೆ ನಮ್ಮ `ಸಿನಿಮಾ ನೋಡುವ' ದೃಷ್ಟಿಕೋನವೇ ಸರಿ ಇಲ್ಲದಿರುವುದರಿಂದ ಅಲ್ಲಿನ ಹುಳುಕು ಮಾತ್ರ ಕಾಣುತ್ತದೆ ಅಷ್ಟೇ. ಈಗ ಆಗಿರುವುದೂ ಅದೇ.


*****

ಸ್ಲಮ್‌ಡಾಗ್ ಮಿಲಿಯನೇರ್ ಸಿನಿಮಾಕ್ಕೆ ಭಾರತದ ದಾರಿದ್ರ್ಯವನ್ನು ಕಥಾವಸ್ತು ಮಾಡಿಕೊಂಡ ಕುರಿತು ಆಕ್ಷೇಪಿಸಲಾಗುತ್ತಿದೆ. ಅದರಲ್ಲಿ ತಪ್ಪೇನಿದೆ? ಎಲ್ಲಾ ಕತೆಗಳಂತೆ ಇದು ಒಂದು ಕತೆ ಮತ್ತು ಕಥಾವಸ್ತು. ಇಷ್ಟಕ್ಕೂ ಇದು ಭಾರತೀಯ ರಾಜತಾಂತ್ರಿಕ ಅಧಿಕಾರಿ ಬರೆದಿರುವ `ಕ್ಯೂ ಅಂಡ್ ಎ' ಕಾದಂಬರಿ ಆಧರಿಸಿ ಮಾಡಿರುವ ಚಿತ್ರ. ಇಲ್ಲಿ ಭಾರತದ ಮುಂಬೈ ಎನ್ನವ ಊರಿನ ಕೊಳೆಗೇರಿಯ ಪರಿಸ್ಥಿತಿಯನ್ನು ಹೇಳಲಾಗಿದೆ. ಈ ಮೂಲಕ ಭಾರತ ಈಗ ಹೇಗಿದೆ ಎನ್ನುವುದನ್ನು ಹೇಳಿದೆ.

ಅದೇ ಅಲ್ಲವೇ ಆಗಬೇಕಿರುವುದು. ಭಾರತ ಈಗ `ಹೀಗಿದೆ' ಎನ್ನುವುದರಿಂದಲೇ ನಾವು ಹೆಚ್ಚು `ಆಕರ್ಷಕ'ರಾಗುವುದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ನಾವು ಎಲ್ಲ ರೀತಿಯಲ್ಲೂ ಸಮರ್ಥರು, ಸಮೃದ್ಧರು ಎಂದೆಲ್ಲಾ ಫೋಜು ನೀಡುವ ಅಗತ್ಯವಾದರೂ ಏನು?

ಮುಂದೆ ಭಾರತಕ್ಕೆ ಉಜ್ವಲ ಭವಿಷ್ಯವಿದೆ ಎನ್ನುವುದನ್ನು ಭಾರತದ ಪ್ರಗತಿ ಗಮನಿಸಿದ ವಿದೇಶಗಳು, ಸ್ವದೇಶಿಯರು ಸಾಕಷ್ಟು ಬಾರಿ ಹೇಳಿದ್ದಾರೆ. ನಮ್ಮ ಮಾಜಿ ರಾಷ್ಟ್ರಪತಿಗಳೂ ಆದ ವಿಜ್ಞಾನಿ, ಚಿಂತಕ ಡಾ ಅಬ್ದುಲ್ ಕಲಾಂ ಕೂಡ ೨೦೨೦ನೇ ಇಸವಿಯಲ್ಲಿ ಭಾರತದ ಜಗತ್ತಿನ ಬಲಿಷ್ಠ ರಾಷ್ಟ್ರ ಆಗುತ್ತದೆ ಎನ್ನುವ ಭವಿಷ್ಯ ನುಡಿದಿದ್ದಾರೆ.

ಭಾರತಕ್ಕೆ ಉಜ್ವಲ ಭವಿಷ್ಯ ಇದೆ ಎನ್ನುವುದೇ ಆದರೆ ನಾವು ಈಗಿರುವ ಪರಿಸ್ಥಿತಿಯನ್ನು ಮರೆಮಾಚಿ ಮುಂದೊಂದು ದಿನ `ಶ್ರೀಮಂತ'ವಾಗಬೇಕೇ? ಎರಡನೇ ಮಹಾಯುದ್ಧದಲ್ಲಿ ಸಂಪೂರ್ಣ ನಾಶವಾಗಿದ್ದ ಜಪಾನ್ ನಂತರ ಮುಂಚೂಣಿ ರಾಷ್ಟ್ರವಾಯಿತು. ಈಗಲೂ ಜಪಾನ್ ದೇಶದ ಬಗ್ಗೆ ಮಾತನಾಡುವಾಗಲೆಲ್ಲಾ ಅದು ಹಿಂದೆ ಇದ್ದ ಪರಿಸ್ಥಿತಿಯೊಂದಿಗೆ ಹೇಳಲಾಗುತ್ತಿದೆ. ಅದೇ ಅಲ್ಲವಾ ವಾಸ್ತವ? ಏನೂ ಇಲ್ಲದವ ಏನನ್ನಾದರೂ ಮಾಡಿದರೆತಾನೇ ಸಾಧನೆ?

ಭಾರತದ ಕತೆಯೂ ಹಾಗೇ ಆದರೆ ತಪ್ಪೇನು? ಇದೇ ಡ್ಯಾನಿ ಬ್ಲಾಂi ಮುಂದೊಂದು ದಿನ ಭಾರತದ ಶ್ರೀಮಂತ ಸಂಸ್ಕೃತಿಯ ಕುರಿತು. ಸದೃಢ ಭಾರತದ ಬಗ್ಗೆ ಚಿತ್ರಮೊಂದನ್ನು ಮಾಡಬಹುದಲ್ಲವೇ? ಈಗ ಅವರು ವರ್ತಮಾನ ಹೇಳಲಿ, ಗೇಲಿ ಮಾಡಲಿ, ಆದರೆ ಅವುಗಳನ್ನು ತಿದ್ದುಕೊಂಡು, ವಾಸ್ತವವನ್ನು ಒಪ್ಪಿಕೊಂಡು ಭವಿಷ್ಯವವನ್ನು `ಭದ್ರ' ಮಾಡಿಕೊಳ್ಳುವುದು ನಮ್ಮ ಜಾಣತನವಾಗಲಿ.

ಇತಿಹಾಸ ಬಲ್ಲದವನು ಇತಿಹಾಸ ಸೃಷ್ಟಿಸಲಾರ ಎನ್ನುವ ಮಾತು ಮತ್ತೆ ನೆನಪಾಗಬೇಕು. ಜೊತೆಯಲ್ಲಿ ವರ್ತಮಾನವೂ. ಆಗ ಮಾತ್ರ ಭವಿಷ್ಯವೂ ನಿರ್ಮಾಣ ಆಗುತ್ತದೆ. ಇತಿಹಾಸವೂ ನಿರ್ಮಾಣ ಆಗುತ್ತದೆ.

- ಧರಣೀಶ್ ಬೂಕನಕೆರೆ