Friday, April 10, 2009

ದೇಸೀಮಾತು: ಇಸ್ಮಾಯಿಲ್ ಬರೆದ ಮುನ್ನುಡಿ

ಪತ್ರಕರ್ತ ನಿಷ್ಪಕ್ಷಪಾತಿಯಾಗಿರಬೇಕು ಎಂಬ ಸವಕಲು ಕ್ಲೀಷೆಯೊಂದಿದೆ. ಪತ್ರಿಕೋದ್ಯಮವನ್ನು ಅಥವಾ ಈಗಿನ ಭಾಷೆಯಲ್ಲಿ ಹೇಳುವುದಾದರೆ ಸಮೂಹ ಸಂವಹನವನ್ನು ಬೋಧಿಸುವ ಎಲ್ಲಾ ಪಠ್ಯ ಕ್ರಮಗಳಲ್ಲಿಯೂ ನಿಷ್ಪಕ್ಷಪಾತ ಧೋರಣೆಗೆ ಒತ್ತು ನೀಡಲಾಗಿದೆ. ಅರೆಕ್ಷಣ ಯೋಚಿಸಿದರೆ ಇಂಥದ್ದೊಂದು ಧೋರಣೆ ಪ್ರಾಯೋಗಿಕವಾಗಿ ಅಸಾಧ್ಯ ಎಂಬುದು ಎಲ್ಲರಿಗೂ ತಿಳಿಯುತ್ತದೆ. ಆದರೆ ಪತ್ರಿಕಾವೃತ್ತಿಯಲ್ಲಿರುವವರೂ ಸೇರಿದಂತೆ ಎಲ್ಲರೂ ಈ ವಿಷಯವನ್ನು ಸ್ಪಷ್ಟವಾಗಿ ಬಿಡಿಸಿ ಹೇಳಲು ಇಷ್ಟಪಡುವುದಿಲ್ಲ.

ನಿಷ್ಪಕ್ಷಪಾತಿಯಾಗಿರುವುದು ಎಂದರೆ ನಿರ್ಗುಣಿಯಾಗಿರುವುದೂ ಎಂದರ್ಥ. ಪತ್ರಕರ್ತನೊಬ್ಬ ಹೀಗೆ ನಿರ್ಗುಣಿಯಾಗಿ ತನ್ನ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳನ್ನು ದಾಖಲಿಸಲು ಸಾಧ್ಯವಿದೆಯೇ? ಪತ್ರಕರ್ತನೂ ಒಬ್ಬ ಮನುಷ್ಯನೇ. ಅವನಿಗೂ ಅವನದ್ದೇ ಆದ ಭಾವನೆಗಳು, ಇಷ್ಟಾನಿಷ್ಟಗಳಿರುತ್ತವೆ. ತನ್ನ ವರದಿಗಳಲ್ಲಿ ಆತ ಇವನ್ನೆಲ್ಲಾ ಮೀರಲು ಪ್ರಯತ್ನಿಸಬೇಕು ಎಂದು ವಾದಿಸಬಹುದು. ಹಾಗೆ ಮೀರಲು ಸಾಧ್ಯವಿದೆಯೇ? ತೋರಿಕೆಗೆ ನಿಷ್ಪಕ್ಷಪಾತಿ ಎನಿಸುವಂಥ ವರದಿಗಳನ್ನು ಬರೆಯಬಹುದೇ ಹೊರತು ಸಂಪೂರ್ಣ ನಿಷ್ಪಕ್ಷಪಾತಿ ಧೋರಣೆಯ ವರದಿಯೊಂದನ್ನು ಪ್ರಪಂಚದ ಯಾವ ಮಾಧ್ಯಮವೂ ಇಲ್ಲಿಯ ತನಕ ಪ್ರಕಟಿಸಿಲ್ಲ.

ವರದಿಯನ್ನು ಮಂಡಿಸುವ ಕ್ರಮದಲ್ಲೇ ಒಂದು ಧೋರಣೆಯಿರುತ್ತದೆ. ಈ ಧೋರಣೆ ಸುದ್ದಿಯ ಗ್ರಹಿಕೆಯ ಕ್ಷಣದಲ್ಲೇ ಆರಂಭವಾಗುತ್ತದೆ. ಹಾಗಿರುವುದರಿಂದ ನಿಷ್ಪಕ್ಷಪಾತ ಧೋರಣೆಯೆಂಬುದು ಕಾರ್ಯರೂಪಕ್ಕೆ ಬರಲಾರದ ಒಂದು ಆದರ್ಶ ಮಾತ್ರ. ಹಾಗಿದ್ದರೆ ಪತ್ರಕರ್ತ ಏನು ಮಾಡಬಹುದು ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಭಾರತೀಯ ಪತ್ರಿಕೋದ್ಯಮದ ಇತಿಹಾಸವೇ ಒಂದು ಮಾದರಿಯನ್ನು ನಮ್ಮ ಮುಂದಿಟ್ಟಿದೆ-ಜನಪರ ಧೋರಣೆ. ವರದಿಗಳು, ವಿಶ್ಲೇಷಣೆಗಳು ಜನಪರವಾಗಿದ್ದರೆ ಅವು ನಿಜ ಅರ್ಥದ ಪತ್ರಿಕೋದ್ಯಮದ ಉದಾಹರಣೆಗಳಾಗುತ್ತವೆ.
ಮಾಧ್ಯಮವೆಂಬುದು ಮಾರುಕಟ್ಟೆಯ ಸರಕಾಗುತ್ತಿರುವ ಈ ಹೊತ್ತಿನಲ್ಲಿ ಪತ್ರಕರ್ತ ಜನಪರವಾಗಿರುವುದು ಸುಲಭದ ಕೆಲಸವೇನೂ ಅಲ್ಲ. ವರ್ತಮಾನದ ಪತ್ರಕರ್ತ ತನಗೆ ತಿಳಿದ ಅಥವಾ ತಾನು ಗ್ರಹಿಸಿದ ಸತ್ಯವನ್ನು ಮಾತ್ರ ಜನರ ಮುಂದಿಡುವುದು ತನ್ನ ಕೆಲಸವೆಂದು ಭಾವಿಸುವಂತಿಲ್ಲ. ಜನರು ಏನು ಬಯಸುತ್ತಾರೋ ಆ ಸತ್ಯಗಳನ್ನು, ಕೆಲವೊಮ್ಮೆ ಜನರಿಗಿಷ್ಟವಾಗುತ್ತದೆ ಎಂಬ ಕಾರಣಕ್ಕೆ ಅರ್ಧ ಸತ್ಯಗಳನ್ನಷ್ಟೇ ಜನರಿಗೆ ತಿಳಿಸುವ ಕೆಲಸವನ್ನು ಅವನು ಮಾಡಬೇಕಾಗುತ್ತದೆ. ಈ ಸವಾಲನ್ನು ಮೀರಿ ನಿಲ್ಲುವ ಬರೆವಣಿಗೆಯನ್ನು ಸಾಧ್ಯ ಮಾಡಿ ತೋರಿಸುತ್ತಿರುವ ಕೆಲವರಲ್ಲಿ ದಿನೇಶ್ ಕೂಡಾ ಒಬ್ಬರು. ದೇಸಿ ಮಾತುವಿನಲ್ಲಿರುವ ಅವರ ಬರೆಹಗಳು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಚರ್ಚೆಯಾಗದ/ಚರ್ಚಿಸಲು ಸಾಧ್ಯವಿಲ್ಲದ ಅನೇಕ ಅಂಶಗಳನ್ನು ಚರ್ಚಿಸುತ್ತವೆ. ಈ ಚರ್ಚೆಗಳನ್ನವರು ತಾಂತ್ರಿಕವಾಗಿ ಮುಖ್ಯವಾಹಿನಿಯದ್ದು ಎಂದು ಹೇಳಬಹುದಾದ ಪತ್ರಿಕೆಯೊಂದರಲ್ಲೇ ಪ್ರಕಟಿಸಿದ್ದಾರೆ.

ದಿನೇಶ್ ಅವರ ಬರೆಹಗಳು ಸೂಚಿಸುತ್ತಿರುವಂತೆ ಅವರು ನಿಷ್ಪಕ್ಷಪಾತಿ ಪತ್ರಕರ್ತನಲ್ಲ. ಅವರು ಜನಪರ ಧೋರಣೆಗಳುಳ್ಳ ಪತ್ರಕರ್ತ. ಅವರಿಗೆ ನಿರ್ದಿಷ್ಟ ರಾಜಕೀಯ ಬೆಳವಣಿಗೆ ಅಥವಾ ವಿದ್ಯಮಾನ ಕೇವಲ ಒಂದು ಘಟನೆಯಲ್ಲ. ಆದ್ದರಿಂದಲೇ ಅವರ ವಿಶ್ಲೇಷಣೆಗಳು ಘಟನೆಯ ಭಿನ್ನ ಆಯಾಮಗಳನ್ನು ಶೋಧಿಸುತ್ತವೆ. ಮಿರಾಜುದ್ದೀನ್ ಪಟೇಲ್ ಅವರ ಸಾವು ಸೃಷ್ಟಿಸಿದ ಶೂನ್ಯತೆ ಕರ್ನಾಟಕದ ಮುಸ್ಲಿಂ ರಾಜಕಾರಣದ ವಿಶ್ಲೇಷಣೆಗೆ ಒಂದು ನೆಪವಾಗುತ್ತದೆ. ಮುಸ್ಲಿಂ ರಾಜಕಾರಣವನ್ನು ಚಾರಿತ್ರಿಕವಾಗಿ ನೋಡುತ್ತಲೇ ವರ್ತಮಾನದ ಸವಾಲುಗಳನ್ನು ದಿನೇಶ್ ಚರ್ಚಿಸುತ್ತಾರೆ. ಮತಾಂತರಕ್ಕೆ ಸಂಬಂಧಿಸಿದ ಅವರ ಬರೆಹವೂ ಅಷ್ಟೇ. ಮತಾಂತರದ ಸಾಮಾಜಿಕ ಆರ್ಥಿಕ ಆಯಾಮಗಳನ್ನು ಭಾರತದ ಜಾತಿ ಪದ್ಧತಿಯ ಹಿನ್ನೆಲೆಯಲ್ಲಿ ಅವರು ವಿಶ್ಲೇಷಣೆಗೆ ಒಳಪಡಿಸುತ್ತಾರೆ.

ದಿನೇಶ್ ಅವರ ಬರೆಹಗಳ ಒಂದು ವಿಶೇಷತೆಯೆಂದರೆ ಅವುಗಳ ರಾಜಕೀಯ ನಿಲುವು. ಇಲ್ಲಿ ಅವರು ಪಕ್ಷಪಾತಿಯಲ್ಲ. ಅವರು ಪ್ರತಿಪಾದಿಸುವ ರಾಜಕೀಯ ನಿಲುವನ್ನು ಸಬಲೀಕರಣದ ರಾಜಕೀಯ ಎಂದು ಕರೆಯಬಹುದೇನೋ. ಹಿಂದುಳಿದವರ ಅನನ್ಯತೆ, ಕನ್ನಡವೆಂಬ ಅನನ್ಯತೆಯ ಪ್ರಶ್ನೆಗಳನ್ನು ದಿನೇಶ್ ಚರ್ಚಿಸುವಾಗ ಅವರ ಸಬಲೀಕರಣ ರಾಜಕಾರಣದ ಒಲವು ಸ್ಪಷ್ಟವಾಗಿ ಕಾಣಿಸುತ್ತದೆ. ಕನ್ನಡಕ್ಕೆ ದೊರೆಯಬೇಕಾದ ಮಾನ್ಯತೆಯಾಗಲೀ ಹಿಂದುಳಿದವರಿಗೆ ಸಿಗಬೇಕಾದ ಸ್ಥಾನಗಳಾಗಲೀ ಕೇವಲ ಸಂಖ್ಯಾಬಲಕ್ಕೆ ದೊರೆಯಬೇಕಾದ ಮನ್ನಣೆಯೆಂಬಂತೆ ಪ್ರತಿಪಾದಿಸುವುದರ ಬದಲಿಗೆ ಅದನ್ನೊಂದು ನಾಗರಿಕ ಹಕ್ಕಿನ ಪ್ರಶ್ನೆಯನ್ನಾಗಿ ಚರ್ಚಿಸಬೇಕಿರುವುದು ಈ ಕೋಮುಸೂಕ್ಷ್ಮ ಪರಿಸ್ಥಿತಿಯ ದಿನಗಳ ಅಗತ್ಯವೂ ಹೌದು. ಸಂಖ್ಯಾಬಲದ ಮೇಲೆ ರೂಪುಗೊಳ್ಳುವ ಹಿಂದುಳಿದ ವರ್ಗಗಳ ರಾಜಕಾರಣ ಹೇಗಿರುತ್ತದೆ ಎಂಬುದಕ್ಕೆ ಕರ್ನಾಟಕದ ವರ್ತಮಾನದ ರಾಜಕಾರಣವೇ ಒಂದು ಸಾಕ್ಷಿಯಾಗುತ್ತದೆ.

ಕರ್ನಾಟಕದ ಎಲ್ಲ ಪಕ್ಷಗಳಲ್ಲೂ ಒಂದಷ್ಟು ಹಿಂದುಳಿದ ವರ್ಗಗಳ ರಾಜಕಾರಣಿಗಳಿದ್ದಾರೆ. ಇವರೆಲ್ಲರೂ ತಮ್ಮ ಪಕ್ಷಗಳಿಗೆ ಒಂದಷ್ಟು ಹಿಂದುಳಿದ ವರ್ಗಗಳ ಮತಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತಾರೆಯೇ ಹೊರತು ಹಿಂದುಳಿದ ವರ್ಗಗಳನ್ನು ಒಟ್ಟಾಗಿ ಪರಿಗಣಿಸಿ ಒಂದು ರಾಜಕೀಯ ಮಾರ್ಗವನ್ನು ಮುಂದಿಡುವುದಿಲ್ಲ. ದೇವರಾಜ ಅರಸು ಅವರ ಅವಧಿಯಲ್ಲಿ ಹಿಂದುಳಿದ ವರ್ಗಗಳ ರಾಜಕಾರಣವೊಂದು ಯಶಸ್ವಿಯಾಯಿತು ಎಂದು ನಾವು ಮತ್ತೆ ಮತ್ತೆ ಹೇಳುವಾಗಲೆಲ್ಲಾ ಆಗಿನ ಚಾರಿತ್ರಿಕ ಸಂದರ್ಭವೂ ಇದಕ್ಕೆ ಕಾರಣವಾಗಿತ್ತೆಂಬ ಅಂಶವನ್ನು ನಾವು ಮರೆತಿರುತ್ತೇವೆ. ರಾಜಕೀಯವಾಗಿ ಕಾಂಗ್ರೆಸ್ ಉಳಿದುಕೊಳ್ಳುವುದಕ್ಕೆ ಹಿಂದುಳಿದ ವರ್ಗಗಳನ್ನು ಗಂಭೀರವಾಗಿ ಪರಿಗಣಿಸುವುದು ಅಂದಿನ ಅಗತ್ಯವಾಗಿತ್ತು. ವಿ.ಪಿ.ಸಿಂಗ್ ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವುದರ ಮೂಲಕ ಹಿಂದುಳಿದ ವರ್ಗಗಳ ರಾಜಕಾರಣಕ್ಕೆ ಒಂದು ಸ್ಪಷ್ಟ ರೂಪವನ್ನೇ ಕೊಟ್ಟರು.

ವಿ.ಪಿ.ಸಿಂಗ್ ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಹೊರಟಾಗ ಅದನ್ನು ವಿರೋಧಿಸಿದ್ದ ಬಿಜೆಪಿ ಕೂಡಾ ಈಗ ಹಿಂದುಳಿದ ವರ್ಗಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಳ್ಳಲು ಬಗೆ ಬಗೆಯ ಪ್ರಯತ್ನ ನಡೆಸುತ್ತಿದೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಇತರ ಎಲ್ಲ ಪಕ್ಷಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಯಲ್ಲೇ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಶಾಸಕರಿದ್ದಾರೆ. ಆದರೆ ಬಿಜೆಪಿಯಲ್ಲಿ ರೂಪುಗೊಂಡಿರುವ ಹಿಂದುಳಿದ ವರ್ಗಗಳ ನಾಯಕತ್ವವೆಂಬುದು ಹಿಂದುತ್ವದ ಪರಿಧಿಯೊಳಗೇ ಇರುವಂಥದ್ದು. ಇದು ಹಿಂದುಳಿದ ವರ್ಗಗಳ ರಾಜಕೀಯ ಅಭೀಪ್ಸೆಯನ್ನು ಒಂದು ಇತ್ಯಾತ್ಮಕ ಬಲವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲದಂಥ ನಾಯಕತ್ವ. ಹೆಚ್ಚೆಂದರೆ ಸಂಘಪರಿವಾರದ ತೋಳ್ಬಲದ ಘಟಕಗಳಲ್ಲಿ ಇವರಿಗೆ ಮಹತ್ವದ ಸ್ಥಾನವಿರಬಹುದು. ಇದೇ ಕಾರಣಕ್ಕೆ ಶಾಸಕ ಹುದ್ದೆಯೇ ಸಚಿವ ಸ್ಥಾನವೋ ದೊರೆಯಬಹುದು. ಆದರೆ ಎಂದೆಂದಿಗೂ ಇವರನ್ನು ಪಕ್ಷದ ನೀತಿಗಳನ್ನು ರೂಪಿಸುವ ಸ್ಥಾನಕ್ಕೇರಲು ಬಿಡುವುದಿಲ್ಲ.

ಇದು ಮಂಡಲ್ ಪ್ರಯೋಗದ ನಂತರ ಬಿಜೆಪಿ ಅಳವಡಿಸಿಕೊಂಡಿರುವ ಸೂತ್ರವೇನೂ ಅಲ್ಲ. ಆರ್‌ಎಸ್‌ಎಸ್‌ನ ತಾತ್ವಿಕತೆಯನ್ನು ರೂಪಿಸಿದ ಗೋಲ್ವಾಳ್ಕರ್ ಈ ವಿಷಯದ ಬಗ್ಗೆ ಬಹಳ ಹಿಂದೆಯೇ ಹೇಳಿದ್ದರು. ಹಿಟ್ಲರ್ ರಾಜಕೀಯ ಅಧಿಕಾರ ಪಡೆದರೆ ಉಳಿದೆಲ್ಲವನ್ನೂ ಸಾಧಿಸಬಹುದು ಎಂಬ ಭ್ರಮೆಯಲ್ಲಿದ್ದ. ಪರಿಣಾಮವಾಗಿಯೇ ಅವನು ಸೋತ. ಇದಾಗದಿರಲು ಸಾಮಾಜಿಕ ಅಧಿಕಾರವನ್ನು ನಮ್ಮ ಕೈಯಲ್ಲಿಟ್ಟುಕೊಳ್ಳಬೇಕು ಎಂಬುದು ಗೋಲ್ವಾಳ್ಕರ್ ಅವರ ವಾದದ ಸಾರ. ಬಿಜೆಪಿ ಈಗ ಪ್ರಯೋಗಿಸುತ್ತಿರುವ ತಂತ್ರವೂ ಇದುವೇ. ಹಿಂದುತ್ವ ಎಂಬುದನ್ನು ಸಾಮಾಜಿಕ ಅಧಿಕಾರವನ್ನಾಗಿ ಸ್ಥಾಪಿಸುವ ಕೆಲಸ ಈಗಾಗಲೇ ಮುಗಿದಿದೆ. ಇನ್ನು ರಾಜಕೀಯ ಅಧಿಕಾರ ಯಾರ ಕೈಯ್ಯಲ್ಲಿದ್ದರೇನು?

ದಿನೇಶ್ ತಮ್ಮ ಬರೆಹಗಳಲ್ಲಿ ಈ ಸೂಕ್ಷ್ಮವನ್ನು ವರ್ತಮಾನದ ಉದಾಹರಣೆಗಳ ಮೂಲಕ ವಿಶ್ಲೇಷಿಸಲು ಪ್ರಯತ್ನಿಸುತ್ತಾರೆ. ಧರ್ಮ ಮತ್ತು ರಾಜಕಾರಣದ ಬಗೆಗಿನ ಅವರ ಎಲ್ಲಾ ಬರೆಹಗಳೂ ಹಿಂದುಳಿದ ವರ್ಗಗಳು ತಮಗೆ ಅರಿವಿಲ್ಲದೆಯೇ ಹೇಗೆ ಹಿಂದುತ್ವದ ಕಪಿಮುಷ್ಠಿಯೊಳಕ್ಕೆ ಸಿಕ್ಕಿಬೀಳುತ್ತಿವೆ ಎಂಬುದನ್ನು ವಿವರಿಸುತ್ತವೆ.

***

ಪ್ರಖ್ಯಾತ ಮಾಧ್ಯಮ ತಜ್ಞ ಮಾರ್ಷಲ್ ಮ್ಯಾಕ್ಲೂಹಾನ್ ಮೀಡಿಯಂ ಈಸ್ ದ ಮೆಸೇಜ್ ಎಂದಿದ್ದಾನೆ. ಪತ್ರಿಕೆಯಲ್ಲಿ ಬರುವುದೆಲ್ಲವೂ ಮುಖ್ಯವಾದುದು ಎಂದು ನಂಬುವ ಬಹುದೊಡ್ಡ ವರ್ಗ ಈಗಲೂ ಇದೆ. ಈ ವರ್ಗವನ್ನು ದುರುಪಯೋಗ ಪಡಿಸಿಕೊಳ್ಳುವ ಪತ್ರಿಕೋದ್ಯಮದ ಮಾದರಿಯೇ ಈಗಿನ ಯಶಸ್ವೀ ಪತ್ರಿಕೋದ್ಯಮ. ಈ ಸವಾಲನ್ನು ಮೀರಿ ಜನಪರವಾಗಿರುವುದನ್ನು, ಜನರು ಬಯಸದೇ ಇರುವ ಸತ್ಯಗಳನ್ನು ಪತ್ರಿಕೆಯಲ್ಲಿ ಬರೆಯುವುದು ಸುಲಭದ ವಿಷಯವೇನೂ ಅಲ್ಲ. ದಿನೇಶ್ ಅಂಥದ್ದೊಂದು ಸಾಹಸ ಮಾಡಿದ್ದಾರೆ. ಅವರ ಸಾಹಸ ಕೇವಲ ಮುದ್ರಣ ಮಾಧ್ಯಮಕ್ಕಷ್ಟೇ ಸೀಮಿತವಾಗದೇ ವೆಬ್ ಜಗತ್ತಿಗೂ ವ್ಯಾಪಿಸಿದೆ. ಈ ಉತ್ಸಾಹ ಅವರಲ್ಲಿ ಸದಾ ಉಳಿದಿರಲಿ.

-ಎನ್.ಎ.ಎಂ.ಇಸ್ಮಾಯಿಲ್

2 comments:

Anonymous said...

ತಾವು ಬರೆದದ್ದೆಲ್ಲಾ ಅಚ್ಚಾಗುತ್ತೆ ಅಂತ ಭಾವಿಸಿರುವ ಕೆಲವರು ಸದಾ ಮತ್ತೊಬ್ಬರನ್ನು ಬಯ್ಯುವುದೇ ಪತ್ರಿಕೋದ್ಯಮ ಅಂತ ತೀಲಿದುಕೊಂಡವರು ಈ ಇಪ್ಪತ್ತೊಂದನೆಯ ಶತಮಾನದಲ್ಲೂ ಇದ್ದಾರೆ!

ashraf manzarabad said...

ಮಾನ್ಯ ಇಸ್ಮಾಯಿಲ್ ರವರೇ ತಮ್ಮ ಲೇಖನ ಉತ್ತಮವಾಗಿದೆ. "ಪತ್ರಿಕೆಯಲ್ಲಿ ಬರುವುದೆಲ್ಲವೂ ಮುಖ್ಯವಾದುದು ಎಂದು ನಂಬುವ ಬಹುದೊಡ್ಡ ವರ್ಗ ಈಗಲೂ ಇದೆ. ಈ ವರ್ಗವನ್ನು ದುರುಪಯೋಗ ಪಡಿಸಿಕೊಳ್ಳುವ ಪತ್ರಿಕೋದ್ಯಮದ ಮಾದರಿಯೇ ಈಗಿನ ಯಶಸ್ವೀ ಪತ್ರಿಕೋದ್ಯಮ" ಎಂಬ ತಮ್ಮ ಮಾತು ಸಂಪೂರ್ಣವಾಗಿ ನಿಜ. ಆದ ಕಾರಣವೇ ಇಂದು ಕೆಲವು ಮಾಧ್ಯಮಗಳು ಪಟ್ಟಭದ್ರರ ಕೈಯಲ್ಲಿ ಸಿಲುಕಿ ಅವರ ಹಿತಾಸಕ್ತಿಗಳನ್ನು ಕಾಪಾಡುತ್ತಾ ಮುಗ್ಧ ಓದುಗರನ್ನು ದಾರಿ ತಪ್ಪಿಸುತ್ತಿರುವುದನ್ನು ಕಾಣಬಹುದು. ದಿನೇಶ್ ಅವರು ನಿಷ್ಪಕ್ಷಪಾತಿ ಪತ್ರಕರ್ತನಲ್ಲ. ಅವರು ಜನಪರ ಧೋರಣೆಗಳುಳ್ಳ ಪತ್ರಕರ್ತ ಎಂಬ ತಮ್ಮ ಮಾತಿಗೆ ಅವರು ಬರೆದಿರುವ ಅಸಂಖ್ಯಾತ ಲೇಖನಗಳು ಮತ್ತು ಪುಸ್ತಕಗಳೇ ಸಾಕ್ಷಿ.
-ಅಶ್ರಫ್ ಮಂಜ್ರಾಬಾದ್.