Tuesday, August 19, 2008

ಜಾತಿವಾರು ಸಮೀಕ್ಷೆಗೆ ಯಥಾಸ್ಥಿತಿವಾದಿಗಳ ವಿರೋಧ, ಇತ್ಯಾದಿ...

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಲು ಉದ್ದೇಶಿಸಿರುವ ಬೃಹತ್ ಜಾತಿವಾರು ಜನಗಣತಿ ಹಾಗು ಸಮೀಕ್ಷೆ ಕುರಿತಂತೆ ಔಟ್‌ಲುಕ್‌ನ ಆಗಸ್ಟ್-೨೫ರ ಸಂಚಿಕೆಯಲ್ಲಿ ವಿಸ್ತ್ರತ ವರದಿಯೊಂದು ಪ್ರಕಟವಾಗಿದೆ. ಈ ಉದ್ದೇಶಿತ ಸಮೀಕ್ಷೆಯನ್ನು ಕಾರ್ಪರೇಟ್ ಸಂಸ್ಥೆಗಳು ಹಾಗು ರಾಜಕಾರಣಿಗಳು ಹೇಗೆ ವಿರೋಧಿಸುತ್ತಿದ್ದಾರೆ ಎಂಬುದರ ಕುರಿತು ಈ ವರದಿಯಲ್ಲಿ ಬೆಳಕು ಚೆಲ್ಲಲು ಯತ್ನಿಸಲಾಗಿದೆ. ಕಾರ್ಪರೇಟ್‌ಗಳು ಹಾಗು ರಾಜಕಾರಣಿಗಳಿಗೆ ಈ ಸಮೀಕ್ಷೆಯನ್ನು ವಿರೋಧಿಸಲು ಬೇರೆಬೇರೆಯಾದ ಕಾರಣಗಳಿವೆ. ಆದರೆ ಎರಡೂ ವಲಯದ ಅಂತಿಮ ಉದ್ದೇಶ ಒಂದೇ; ಅದು ಯಥಾಸ್ಥಿತಿವಾದ.

ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಜಾತಿವಾರು ಜನಗಣತಿಯೊಂದು ನಡೆಯುತ್ತಿದೆ. ೧೯೩೧ರಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಜಾತಿವಾರು ಜನಗಣತಿಯ ನಂತರ ಯಾವುದೇ ರೂಪದ ಜಾತಿವಾರು ಗಣತಿ ದೇಶದಲ್ಲಿ ನಡೆದಿಲ್ಲ. ಉದ್ದೇಶಿತ ಗಣತಿ ನಡೆದರೆ ಕರ್ನಾಟಕವೇ ಈ ಬಗೆಯ ಗಣತಿ ನಡೆಸಿದ ಮೊದಲ ರಾಜ್ಯವಾಗುತ್ತದೆ. ಬಹುಶಃ ಈ ಸಮೀಕ್ಷೆ ಇತರ ರಾಜ್ಯಗಳಿಗೆ ಮಾರ್ಗದರ್ಶಿಯೂ ಆಗುತ್ತದೆ. ಬದಲಾದ ಸಾಮಾಜಿಕ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ಜಾತಿವಾರು ಸ್ಥಿತಿಗತಿಗಳ ಕುರಿತು ಅವಲೋಕನ ಅನಿವಾರ್ಯ ಅಗತ್ಯ. ಅವಕಾಶ ವಂಚಿತರಿಗೆ ಉದ್ಯೋಗ, ಶಿಕ್ಷಣ, ರಾಜಕೀಯ ಇತ್ಯಾದಿ ವಲಯಗಳಲ್ಲಿ ಅವಕಾಶ ದೊರೆಯಲೇಬೇಕಾದ್ದು ಸಹಜನ್ಯಾಯ. ಹೀಗಾಗಿ ಈ ಗಣತಿ ಕಾರ್ಯ ಕರ್ನಾಟಕದಿಂದಲೇ ಆರಂಭವಾಗುತ್ತಿರುವುದು ಹೆಮ್ಮೆಯ ವಿಷಯ.

ಹೀಗಿದ್ದೂ ಈ ಬೃಹತ್ ಸಮೀಕ್ಷೆಗೆ ವಿರೋಧವೇಕೆ? ಇದು ಪ್ರಮುಖ ಪ್ರಶ್ನೆ. ಹಾಗೆ ನೋಡಿದರೆ ಮೇಲೆ ಉಲ್ಲೇಖಿಸಿದ ಎರಡೂ ವಲಯಗಳು ಸಮೀಕ್ಷೆಯನ್ನು ವಿರೋಧಿಸುತ್ತಿದ್ದರೂ, ಈ ವಿರೋಧಗಳು ನೇರವಾಗಿ ಎಲ್ಲೂ ದಾಖಲಾಗಿಲ್ಲ. ಸಮೀಕ್ಷೆ ವಿರೋಧಕ್ಕೆ ಯಾವುದೇ ಬಗೆಯ ನೈತಿಕ, ತಾಂತ್ರಿಕ ಕಾರಣಗಳಿಲ್ಲವಾದ್ದರಿಂದ ವಿರೋಧಿಗಳು ಬಹಿರಂಗವಾಗಿ ಅಖಾಡಕ್ಕೆ ಇಳಿದಿಲ್ಲ. ಆದರೆ ಸಮೀಕ್ಷೆ ಆರಂಭಗೊಂಡ ನಂತರ ಮೊಸರಲ್ಲಿ ಕಲ್ಲು ಹುಡುಕುವುದು ಕಷ್ಟವೇನಲ್ಲ. ಆಗ ಹೊಸ ಅಸ್ತ್ರಗಳು ವಿರೋಧಿಗಳ ಬತ್ತಳಿಕೆಯಲ್ಲಿ ಪ್ರತ್ಯಕ್ಷವಾಗುವುದು ಸಹಜ. ಹೀಗಾಗಿ ಇಂಥದ್ದೊಂದು ಐತಿಹಾಸಿಕ ಸಮೀಕ್ಷೆಗೆ ಪಟ್ಟಭದ್ರರು ಅವಕಾಶ ನೀಡುವರೆ ಎಂಬ ಅನುಮಾನ ಉದ್ಭವವಾಗಿದೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಹಿರಿಯ ವಕೀಲರು, ಜನಪರ ಚಿಂತಕರು ಆದ ಡಾ.ಸಿ.ಎಸ್.ದ್ವಾರಕಾನಾಥ್ ಅವರು ನೇಮಕಗೊಂಡ ನಂತರ ಸಾಕಷ್ಟು ಬೆಳವಣಿಗೆಗಳಾಗಿವೆ. ದ್ವಾರಕಾನಾಥ್ ಅವರು ಕುರ್ಚಿ ಬಿಸಿ ಮಾಡಿ ಹೋಗುವ ಜಾಯಮಾನದವರಲ್ಲ. ಆಯೋಗದಿಂದ ಆಗಬೇಕಿರುವ ಕೆಲಸಗಳನ್ನು ಆದ್ಯತೆ ಮೇರೆಗೆ ಪಟ್ಟಿ ಮಾಡಿಕೊಂಡು, ಕಿಂಚಿತ್ತೂ ಸಮಯ ಹಾಳು ಮಾಡದೆ ಕ್ರಿಯೆಗೆ ಇಳಿದವರು ಅವರು.

ನೆನೆಗುದಿಗೆ ಬಿದ್ದಿರುವ ಜಾತಿವಾರು ಸಮೀಕ್ಷೆಯನ್ನು ತಮ್ಮ ಅವಧಿಯಲ್ಲಿ ಪೂರೈಸುವ ಕಠಿಣ ಸವಾಲನ್ನು ಅವರು ಮೈ ಮೇಲೆ ಎಳೆದುಕೊಂಡರು. ವಾಸ್ತವವಾಗಿ ಈ ಸಮೀಕ್ಷೆ ಇಷ್ಟೊತ್ತಿಗಾಗಲೇ ಮುಗಿದು ಹೋಗಿರಬೇಕಿತ್ತು. ಕೇಂದ್ರ ಸರ್ಕಾರ ಸಮೀಕ್ಷೆಗೆಂದು ೨೧.೫ ಕೋಟಿ ರೂ. ನೀಡಿದೆ. ಈ ಹಣ ಈಗಾಗಲೇ ಆಯೋಗಕ್ಕೆ ವರ್ಗಾವಣೆಯಾಗಿದೆ. ಈ ಬಗೆಯ ಸಮೀಕ್ಷೆಗಾಗಿ ಕೇಂದ್ರ ಸರ್ಕಾರ ಮೊಟ್ಟಮೊದಲ ಬಾರಿಗೆ ಹಣ ಬಿಡುಗಡೆ ಮಾಡಿದ್ದು, ಮೊದಲು ಈ ಸೌಲಭ್ಯವನ್ನು ಕರ್ನಾಟಕವೇ ಪಡೆದಿರುವುದು ಒಂದು ವಿಶೇಷ. ೨೦೦೫ರಲ್ಲಿ ರಾಜ್ಯ ಸರ್ಕಾರ ೨ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಸಮೀಕ್ಷೆ ಕಾರ್ಯ ಆರಂಭವಾದ ನಂತರ ಹೆಚ್ಚುವರಿ ೧೭.೫ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಈಗಿನ ಸರ್ಕಾರವೂ ಭರವಸೆ ನೀಡಿದೆ. ಸಮೀಕ್ಷಾ ಕಾರ್ಯ ಬಹುತೇಕ ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭಗೊಳ್ಳುವ ಸಾಧ್ಯತೆಗಳಿವೆ. ಇದಿಷ್ಟು ಸಮೀಕ್ಷೆ ಕುರಿತಂತೆ ನಡೆದಿರುವ ಬೆಳವಣಿಗೆಗಳು.

ಈ ಸಮೀಕ್ಷೆಗೆ ಎದ್ದಿರುವ ಹಿಂಬಾಗಿಲ ವಿರೋಧದ ಒಳಸುಳಿಗಳನ್ನು ಹುಡುಕುತ್ತ ಹೊರಟರೆ ಮುಂದೆ ಏಳಲಿರುವ ಭಾರೀ ವಿವಾದದ ಭೂತವೂ ಗೋಚರವಾಗುತ್ತದೆ.

ಆಯೋಗ ಕಳೆದ ಮಾರ್ಚ್‌ನಲ್ಲಿ ರಾಜ್ಯದ ೧೭೬ ಕಾರ್ಪರೇಟ್ ಸಂಸ್ಥೆಗಳಿಗೆ ನೋಟೀಸ್ ಒಂದನ್ನು ಜಾರಿ ಮಾಡಿತು. ಜಾತಿವಾರು ಸಮೀಕ್ಷಾ ಕಾರ್ಯ ನಡೆಯುತ್ತಿರುವುದರಿಂದ ತಮ್ಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಧರ್ಮ ಹಾಗು ಜಾತಿವಾರು ಮಾಹಿತಿಗಳನ್ನು ನೀಡಿ ಎಂಬುದು ಈ ನೋಟೀಸ್‌ನ ಸಾರಾಂಶ. ಈ ನೋಟೀಸ್ ನೋಡಿ ಕಾರ್ಪರೇಟ್ ಸಂಸ್ಥೆಗಳು ಬೆಚ್ಚಿ ಬಿದ್ದಿವೆ. ನೋಟಿಸ್ ಕಳಿಸಲಾಗಿರುವ ಕಂಪೆನಿಗಳ ಪಟ್ಟಿಯಲ್ಲಿ ಇನ್ಫೋಸಿಸ್, ವಿಪ್ರೋ, ಐಬಿಎಂ, ಎಚ್‌ಪಿ, ಬಯೋಕಾನ್, ಯಾಹೂಗಳಂಥ ದೈತ್ಯ ಐಟಿ-ಬಿಟಿ ಸಂಸ್ಥೆಗಳ ಹೆಸರೂ ಇದೆ.

ಔಟ್‌ಲುಕ್‌ನಲ್ಲಿ ವರದಿಯಾಗಿರುವಂತೆ ಮಾರ್ಚ್‌ನಲ್ಲಿ ಜಾರಿಯಾದ ನೋಟಿಸ್‌ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಮಾಹಿತಿ ಒದಗಿಸಿರುವುದು ಕೇವಲ ೧೧ ಸಂಸ್ಥೆಗಳು! ೧೮ ಪತ್ರಗಳು ಬಟವಾಡೆಯಾಗದೆ ವಾಪಾಸ್ ಬಂದಿವೆ. ಮೂರು ಸಂಸ್ಥೆಗಳು ಈ ಬಗೆಯ ಮಾಹಿತಿಯನ್ನು ಒದಗಿಸಲು ಸಾಧ್ಯವಿಲ್ಲ ಎಂದು ಬರೆದಿವೆ. ನೋಟೀಸ್‌ಗೆ ಉತ್ತರಿಸಲು ಮೇ.೧೫ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಪ್ರತಿಕ್ರಿಯೆ ಮಾತ್ರ ನೀರಸ. ಈಗಾಗಲೇ ಆಯೋಗ ೧೫೪ ಸಂಸ್ಥೆಗಳಿಗೆ ಮತ್ತೆ ನೆನಪಿನ ಓಲೆಗಳನ್ನು ಬರೆದಿದೆ.

ಕಾರ್ಪರೇಟ್ ಸಂಸ್ಥೆಗಳು ಯಾಕೆ ಮೀನಮೇಷ ಎಣಿಸುತ್ತಿವೆ? ಯಾಕೆ ಮಾಹಿತಿ ನೀಡಲು ಹಿಂಜರಿಯುತ್ತಿವೆ? ಇದಕ್ಕೆ ಉತ್ತರವೂ ಔಟ್‌ಲುಕ್‌ನ ವರದಿಯಲ್ಲಿದೆ. “ನಮ್ಮ ಉದ್ಯೋಗಿಗಳ ಧರ್ಮ, ಜಾತಿಯನ್ನು ವಿಚಾರಿಸುವುದು ಮುಜುಗರದ ವಿಷಯ. ನಮ್ಮಲ್ಲಿ ನೇಮಕಾತಿಗಳನ್ನು ಧರ್ಮ ಅಥವಾ ಜಾತಿ ಆಧಾರದ ಮೇಲೆ ಮಾಡಿಕೊಳ್ಳಲಾಗುವುದಿಲ್ಲ. ಹೆಸರು ಹೇಳಲು ಇಚ್ಛಿಸದ ಕಾರ್ಪರೇಟ್‌ಗಳು ಮಾತನಾಡುವ ಧಾಟಿ ಇದು.

ಆದರೆ ದ್ವಾರಕಾನಾಥ್ ಅವರು ಪಟ್ಟು ಸಡಿಲಿಸುವ ಲಕ್ಷಣಗಳು ಇಲ್ಲ. ಒಂದು ವೇಳೆ ಈ ಸಂಸ್ಥೆಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸದಿದ್ದಲ್ಲಿ ಅನಿವಾರ್ಯವಾಗಿ ಸಮನ್ಸ್ ಜಾರಿಗೊಳಿಸಬೇಕಾದೀತು ಎಂದು ಈಗಾಗಲೇ ಅವರು ಎಚ್ಚರಿಸಿದ್ದಾರೆ. ಒಂದು ವೇಳೆ ಸಮನ್ಸ್ ನೀಡಿದರೂ ಪ್ರತಿಕ್ರಿಯಿಸದಿದ್ದರೆ? ಹೈಕೋರ್ಟ್ ನ್ಯಾಯಾಧೀಶರ ಹುದ್ದೆಯ ಸ್ಥಾನಮಾನ ದ್ವಾರಕಾನಾಥ್ ಅವರಿಗಿದೆ. ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿರುವುದು ಸರ್ಕಾರವಲ್ಲ, ಸುಪ್ರೀಂ ಕೋರ್ಟ್. ಹೀಗಾಗಿ ತಮಗೆ ದತ್ತವಾದ ಅಧಿಕಾರವನ್ನು ಬಳಸಿ ಈ ಕಾರ್ಪರೇಟ್ ಧಣಿಗಳಿಗೆ ಅವರು ವಾರಂಟ್ ಜಾರಿಗೊಳಿಸುವರೆ? ಕಾದು ನೋಡಬೇಕು!

ಈ ಮೊದಲೇ ಹೇಳಿದಂತೆ ಕಾರ್ಪರೇಟ್ ಸಂಸ್ಥೆಗಳ ಧಣಿಗಳು ಯಥಾಸ್ಥಿತಿವಾದಿಗಳು. ಆರ್ಥಿಕ ಜಗತ್ತಿನಲ್ಲಿ ಅವರು ಊರ್ಧ್ವಮುಖಿಗಳಾಗಿದ್ದರೇನು; ಸಾಮಾಜಿಕ ಬದ್ಧತೆಗಳ ವಿಷಯದಲ್ಲಿ ಅವರಿಗೆ ಯಾವ ಕಾಳಜಿಯೂ ಇಲ್ಲ. ಜಾತಿಯ ವಿಷಯ ಕೇಳುವುದು ಅವರಿಗೆ ಮುಜುಗರದ ವಿಷಯ, ಆದರೆ ಶತಶತಮಾನಗಳಿಂದ ಜಾತಿಯ ಕಾರಣಕ್ಕೆ ನಿರ್ಲಕ್ಷ್ಯಕ್ಕೆ, ತುಳಿತಕ್ಕೆ ಒಳಗಾದ ಜನರು ಅನುಭವಿಸಿರುವ ಹಿಂಸೆಯ ಎದುರಿನಲ್ಲಿ ಈ ಮುಜುಗರ ಎಲ್ಲಿಯದು ಎಂಬುದನ್ನು ಅವರು ತಮಗೆ ತಾವೇ ಯಾವತ್ತಿಗೂ ಪ್ರಶ್ನಿಸಿಕೊಂಡ ಉದಾಹರಣೆ ಇಲ್ಲ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯ ಪ್ರಸ್ತಾಪ ಎದುರಾದಾಗಲೆಲ್ಲ ಆಕಾಶ ಬೊಬ್ಬಿರಿಯುವಂತೆ, ೨೪*೭ ನ್ಯೂಸ್ ಚಾನೆಲ್‌ಗಳ ಪರದೆ ಹರಿಯುವಂತೆ ಕೂಗಾಡುವುದು ಮಾತ್ರ ಅವರಿಗೆ ಗೊತ್ತು.

ಇದು ಕಾರ್ಪರೇಟ್ ಸಂಸ್ಥೆಗಳ ವಿರೋಧದ ಕತೆಯಾಯಿತು. ರಾಜಕೀಯ ವಲಯದಲ್ಲೂ ವಿಚಿತ್ರ ಸಂಚಲನ ಉಂಟಾಗಿದೆಯಲ್ಲ, ಅದೇಕೆ ಎಂದು ಹುಡುಕುತ್ತ ಹೊರಟರೆ ಮತ್ತಷ್ಟು ದಿಗ್ಭ್ರಮೆಗೊಳಿಸುವ ಮಾಹಿತಿಗಳಿವೆ. ಜಾತಿವಾರು ಸಮೀಕ್ಷೆಯನ್ನು ನಡೆಸಲು ಯಾವುದಾದರೂ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಬಹುದಲ್ಲವೆ ಎಂದು ಸರ್ಕಾರ ಈಗಾಗಲೇ ಆಯೋಗವನ್ನು ಕೇಳಿದೆಯಂತೆ. ಜನಗಣತಿಗೆ ಅಗತ್ಯವಿರುವ ೫೮,೦೦೦ ಶಾಲಾಶಿಕ್ಷಕರನ್ನು ನಿಯೋಜನೆ ಮಾಡಲು ಕಷ್ಟ ಸಾಧ್ಯ ಎಂದು ಈಗಾಗಲೇ ಕೊಂಕು ತೆಗೆದಿದೆಯಂತೆ. ಆದರೆ ದ್ವಾರಕಾನಾಥ್ ಇದನ್ನು ಒಪ್ಪುತ್ತಿಲ್ಲ. ಬೇರೆ ಸಂಸ್ಥೆಗಳಿಗೆ ಗುತ್ತಿಗೆ ನೀಡುವುದು ಎಂದರೆ ಪಾರದರ್ಶಕತೆ ಹಾಗು ಉತ್ತರದಾಯಿತ್ವದೊಂದಿಗೆ ರಾಜಿ ಮಾಡಿಕೊಳ್ಳುವುದು ಎಂದರ್ಥ. ಇದು ಸಾಕಷ್ಟು ಕಾನೂನು ಸಮಸ್ಯೆಗಳನ್ನು ಹುಟ್ಟುಹಾಕುವ ಸಾಧ್ಯತೆಗಳಿವೆ ಎನ್ನುತ್ತಾರೆ ಅವರು.

ಸರ್ಕಾರ ಅಥವಾ ಸರ್ಕಾರದ ಕೆಲ ಶಕ್ತಿಗಳು ಯಾಕೆ ಇಂಥ ಖ್ಯಾತೆಗಳನ್ನು ತೆಗೆಯುತ್ತಿವೆ? ಆಯೋಗದ ಸದಸ್ಯ ಕಾರ್ಯದರ್ಶಿ ಸ್ಥಾನದಿಂದ ಡಾ.ನಾಗಲಾಂಬಿಕಾ ದೇವಿ ಇದ್ದಕ್ಕಿದ್ದಂತೆ ವರ್ಗಾವಣೆಯಾಗಿದ್ದು ಯಾಕೆ? ಎಂಬ ಪ್ರಶ್ನೆಗಳ ಹಿಂದೆಯೂ ಅದೇ ರಾಜಕೀಯ ಕೈವಾಡದ ವಾಸನೆ ಹೊಡೆಯುತ್ತಿದೆ.
ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕೆಲ ಪ್ರಬಲ ಗುಂಪುಗಳು ಸೇರಿಕೊಂಡು, ದೊಡ್ಡಮೀನು ಸಣ್ಣ ಮೀನನ್ನು ತಿನ್ನುವಂತೆ ಎಲ್ಲ ಅನುಕೂಲಗಳನ್ನು ತಾವೇ ಕಬಳಿಸುತ್ತಿವೆ. ಈ ಸಮೀಕ್ಷೆ ಕೇವಲ ಜನಗಣತಿಯನ್ನಷ್ಟೆ ನಡೆಸದೆ ಹಿಂದುಳಿದ ವರ್ಗಗಳ ಸಮಾಜೋ-ಆರ್ಥಿಕ ಸ್ಥಿತಿಗತಿಗಳ ಅಧ್ಯಯನವನ್ನೂ ನಡೆಸುವುದರಿಂದ ಒಂದು ನೈಜ ಚಿತ್ರಣ ಹೊರಗೆ ಬರಲಿದೆ. ಜಾತಿವಾರು ಸಂಖ್ಯೆಯನ್ನು ವೈಭವೀಕರಿಸಿ, ಅವಕಾಶ ಕಬಳಿಸುವುದಕ್ಕೂ ಇನ್ನು ಅವಕಾಶವಿರುವುದಿಲ್ಲ. ಮೀಸಲಾತಿ ನೀಡಿಕೆಗೆ ಇಂಥ ವೈಜ್ಞಾನಿಕ ಸಮೀಕ್ಷೆಯ ಅಗತ್ಯ ಹಿಂದೆಯೂ ಇತ್ತು, ಇಂದೂ ಇದೆ. ಆದರೆ ಇದು ಇನ್ನೂ ಕಾರ್ಗತ್ತಲಲ್ಲಿ ಇರುವ ಸಮುದಾಯಗಳಿಗೆ ವರವಾದರೆ, ಲಾಭಗಳನ್ನು ಪಡೆದು ಮುಂದುವರೆದ ಸಮುದಾಯಗಳಿಗೆ ಶಾಪ!

ಆದರೆ ಸತ್ಯ ಎಂದಿದ್ದರೂ ಹೊರಗೆ ಬರಬೇಕಲ್ಲವೆ? ಮೀಸಲಾತಿ ಎಂಬುದು ಸತ್ಯದ ತಳಹದಿಯಲ್ಲಿ ರೂಪಿತವಾದ ಸಮೀಕ್ಷೆ, ಗಣತಿಗಳನ್ನು ಆಧರಿಸಿದ್ದರೆ ಮಾತ್ರ ಅದು ನ್ಯಾಯಯುತವಾಗಿ ಇರಲು ಸಾಧ್ಯವಲ್ಲವೆ? ಭಾರತದ ಜಾತಿವ್ಯವಸ್ಥೆಯಿಂದ ತೀರಾ ಸಂಕಷ್ಟಕ್ಕೆ ಸಿಲುಕಿದವರಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಬೇಕಲ್ಲವೆ?

ಸತ್ಯವನ್ನು ಎದುರಿಸುವುದಕ್ಕೆ ಎದೆಗಾರಿಕೆ ಬೇಕು. ಇಂಥ ಎದೆಗಾರಿಕೆಯನ್ನು ರಾಜ್ಯದ ಜನತೆ, ಜನಪ್ರತಿನಿಧಿಗಳು, ಸಾಮಾಜಿಕ ತಜ್ಞರು, ಬುದ್ಧಿಜೀವಿಗಳು ಪ್ರದರ್ಶಿಸಬೇಕು. ಈ ಸಮೀಕ್ಷೆ ರಾಜ್ಯದ ಸರ್ವಜನರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಒಂದು ದಿಟ್ಟ ಯತ್ನ ಎಂಬುದನ್ನು ಎಲ್ಲರೂ ಮನಗಾಣಬೇಕು. ಒಂದು ವೇಳೆ ರಾಜಕೀಯ ಲಾಭ-ಲೆಕ್ಕಾಚಾರಗಳಿಗೆ ಈ ಸಮೀಕ್ಷೆಯನ್ನು ಬಲಿಹಾಕಲು ಯಾರಾದರೂ ಪ್ರಯತ್ನಿಸಿದರೆ, ಸಾಮಾಜಿಕ ಉನ್ನತಿಯೆಡೆಗೆ ಕ್ರಮಿಸುವ ಹಾದಿಯಲ್ಲಿ ನಾವೇ ಕಲ್ಲುಮುಳ್ಳುಗಳನ್ನು ಹಾಕಿಕೊಂಡಂತಾಗುತ್ತದೆ.

ಇತಿಹಾಸ ಎಂದೂ ನಮ್ಮನ್ನು ಕ್ಷಮಿಸಲಾರದು.
ತಂತಮ್ಮ ಲಾಭಗಳಿಗಾಗಿ ಸಮೀಕ್ಷೆಯನ್ನು ವಿರೋಧಿಸುವವರು ಇದನ್ನು ಮನಗಾಣುವರೆ?

Tuesday, August 12, 2008

ಸಕಲೇಶಪುರ ಯಾಕೆ ಬೆಳೆಯಲಿಲ್ಲ?

ಗೆಳೆಯ ಮೆಹಬೂಬ ಸಕಲೇಶಪುರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ. ಮೊನ್ನೆ ಸಕಲೇಶಪುರದಲ್ಲಿ ಪತ್ರಿಕಾ ದಿನಾಚರಣೆ. ಅವನ ಸಂಭ್ರಮದಲ್ಲಿ ನಾನೂ ಪಾಲ್ಗೊಳ್ಳಬೇಕು ಎಂಬುದು ಅವನ ಆಸೆ.

ಮೆಹಬೂಬ್ ಎಂಥವನೆಂದರೆ ಮಾತಿನಲ್ಲೇ ಕೊಂದು ಹಾಕುತ್ತಾನೆ. ದಿನೇಶ, ನೀನು ಬಾರದೆ ಹೋದರೆ ನಿನ್ ಜತೆ ಠೂ ಎಂದ ಅವನು. ಜತೆಗೆ ಗೆಳೆಯರಾದ ವಿಶ್ವ, ಮಂಜು ಮೊದಲಾದವರ ಒತ್ತಡ. ಭಾನುವಾರ ಮಧ್ಯಾಹ್ನ ಕಾರ್ಯಕ್ರಮ ಸ್ಥಳ ತಲುಪಿಕೊಂಡಾಗ ಒಂದಿಬ್ಬರ ಭಾಷಣವಷ್ಟೆ ಬಾಕಿ ಇತ್ತು; ಜತೆಗೆ ತಡವಾಗಿ ಬಂದ ನನ್ನ ಮಾತು ಬೇರೆ ಉಳಿದಿತ್ತು.

ಅಲ್ಲಿ ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಬಿ.ಆರ್.ಗುರುದೇವ್ ಇದ್ದರು. ಪತ್ರಕರ್ತ ಮಿತ್ರರಾದ ಮಂಜುನಾಥ್, ಮದನ್‌ಗೌಡ, ಉದಯ ಕುಮಾರ್, ರಕ್ಷಿದಿ ಅರುಣ್, ಜಾನೆಕೆರೆ ಪರಮೇಶ್ ಮೊದಲಾದವರಿದ್ದರು. ಹಿರಿಯರಾದ ರಾಜಶೇಖರಯ್ಯ, ಬ್ಯಾಕರವಳ್ಳಿ ಜಯಣ್ಣ ಕೂಡ ಇದ್ದರು.

ಅಲ್ಲಿ ನಾನು ಮಾತನಾಡಬೇಕೆಂದುಕೊಂಡದ್ದು ಸಾಕಷ್ಟು. ಆದರೆ ಹೊರಗೆ ಜಿಟಿಜಿಟಿ ಮಳೆ. ಮಳೆಗೆ ಅಂಟಿಕೊಂಡೇ ಬರುವ ಚಳಿ. ಮಳೆಯಲ್ಲಿ, ಚಳಿಯಲ್ಲಿ ಹೊಟ್ಟೆ ಚುರುಗುಟ್ಟುವುದು ಮಾಮೂಲಿ. ಮೆಹಬೂಬ ಒಳ್ಳೆ ಅಡುಗೆ ಮಾಡಿಸಿದ್ದ. ಅಕ್ಕಿ ರೊಟ್ಟಿ, ನೆಂಚಲು ಕೆಸುವಿನ ಸೊಪ್ಪಿನ ದಂಟಿನ ಪಲ್ಯ, ಟೊಮೋಟೋ ಚಟ್ನಿ, ತರಕಾರಿ ಪಲಾವ್ ಜತೆಗೆ ಮಾಂಸಾಹಾರಿಗಳಿಗಾಗಿ ಬೊಂಬಾಟಾಗಿ ಚಿಕನ್ ಫ್ರೈ ರೆಡಿಯಾಗಿತ್ತು. ಈ ಎಲ್ಲ ಖಾದ್ಯಗಳು ಘಮಗುಡುವಾಗ ಯಾರಿಗೆ ತಾನೆ ಭಾಷಣ ಕೇಳುವ ತಾಳ್ಮೆ ಇದ್ದೀತು. ಆದರೂ ನಾನು ಒಂದಷ್ಟು ಮಾತನಾಡಿದೆ, ಮಾತನಾಡಿದ್ದು ಇಲ್ಲಿದೆ.

ನಾನು ಇದೇ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷನಾಗಿ ಸುಮಾರು ೧೦ ವರ್ಷಗಳ ಹಿಂದೆ ಕೆಲಸ ಮಾಡಿದ್ದೆ. ಆ ಕಾರಣಕ್ಕೆ ನನ್ನನ್ನು ಇಲ್ಲಿಗೆ ಕರೆಸಿರಬಹುದು ಎಂದುಕೊಂಡಿದ್ದೇನೆ.

ಇವತ್ತು ಇಲ್ಲಿ ಪತ್ರಿಕಾ ದಿನವನ್ನು ಆಚರಿಸಲಾಗುತ್ತಿದೆ. ೧೬೫ ವರ್ಷಗಳ ಹಿಂದೆ ಆರಂಭವಾದ ಮಂಗಳೂರು ಸಮಾಚಾರ ಪತ್ರಿಕೆ ಹುಟ್ಟಿದ ದಿನವನ್ನೇ ನಾವು ಪತ್ರಿಕಾ ದಿನಾಚರಣೆ ಎಂದು ಆಚರಿಸುತ್ತೇವೆ.

ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ಇತ್ಯಾದಿ ಎಂದೆಲ್ಲ ನಾವು ಮಾತನಾಡುತ್ತೇವೆ. ಇವೆಲ್ಲ ಒಂದೊಂದು ಸಲ ಕ್ಲೀಷೆ ಎನಿಸುವುದುಂಟು.

ಕಾಲ ಬದಲಾದಂತೆ ಪತ್ರಿಕೋದ್ಯಮವೂ ಬದಲಾಗಿದೆ, ಆದ್ಯತೆಗಳು ಬದಲಾಗಿವೆ. ಆ ವಿಷಯ ನಾನಿಲ್ಲಿ ಮಾತನಾಡುವುದಿಲ್ಲ.

ಮುಖ್ಯವಾಗಿ ಸಕಲೇಶಪುರದ ಕುರಿತೇ ಒಂದಷ್ಟು ಮಾತನಾಡಬೇಕು ಎನಿಸುತ್ತಿದೆ. ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಇತ್ಯಾದಿಗಳ ನಂತರ ಇಡೀ ಜಗತ್ತು ಬದಲಾಗಿದೆ, ಬದಲಾಗುತ್ತಿದೆ. ಆದರೆ ಸಕಲೇಶಪುರ ಯಾಕೆ ಬದಲಾಗಲಿಲ್ಲ? ಇದು ನನ್ನ ಪ್ರಶ್ನೆ.

ನಿಜ, ಜಾಗತೀಕರಣದ ಅಬ್ಬರದಲ್ಲಿ ನಗರಗಳು ಬೆಳೆಯುತ್ತವೆ, ಸಣ್ಣ ಪಟ್ಟಣಗಳು-ಹಳ್ಳಿಗಳು ಸರ್ವನಾಶವಾಗುತ್ತವೆ. ಆದರೆ ಅದ್ಭುತವಾದ ನಿಸರ್ಗ ಸಂಪತ್ತನ್ನು ಹೊಂದಿರುವ ಸಕಲೇಶಪುರಕ್ಕೂ ಈ ದುರ್ಗತಿ ಯಾಕೆ ಬಂತು? ಈ ಊರು ೮ ವರ್ಷಗಳ ಕೆಳಗೆ ನಾನು ಬೆಂಗಳೂರಿಗೆ ಹೋಗುವಾಗ ಹೇಗಿತ್ತೋ ಈಗಲೂ ಹಾಗೇ ಇದೆ. ಒಂದಿಷ್ಟೂ ಬೆಳೆದ ಹಾಗೆ ಕಾಣುತ್ತಿಲ್ಲ.

ಇಲ್ಲಿ ಬೆಳೆದಿರುವುದಾದರೂ ಏನು? ದಂಧೆಗಳು ಬೆಳೆದಿವೆ, ಲಾಬಿಗಳು ಬೆಳೆದಿವೆ.
ಇಲ್ಲಿನ ಐದು ಹೋಬಳಿಗಳಲ್ಲೂ ಗ್ರಾನೈಟ್ ಲಾಬಿ, ಮರಳು ಮಾಫಿಯಾ, ಲಿಕ್ಕರ್ ಮಾಫಿಯಾ, ಮರ ಕಳ್ಳಸಾಗಣೆ, ಮಟ್ಕಾ ದಂಧೆ, ಅನಧಿಕೃತ ಕ್ಲಬ್ ದಂಧೆ, ಕಳ್ಳಭಟ್ಟಿ ದಂಧೆ ಬೆಳೆದು ನಿಂತಿದೆ. ಇವನ್ನೆಲ್ಲ ಮಾಡಿಸುವವರು ಯಾರು? ಒಂದಲ್ಲ ಎರಡು ಬಾರಿ ಇಲ್ಲಿ ಕಳ್ಳಭಟ್ಟಿ ಕುಡಿದು ಜನರು ಸತ್ತರಲ್ಲ?ಯಾಕೆ ಇಲ್ಲಿನ ಪ್ರಜ್ಞಾವಂತ ಜನ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ?

ನಾವೆಲ್ಲ ಓದುತ್ತಿದ್ದ ಕಾಲಕ್ಕೆ ಇಲ್ಲಿನ ಶಾಲೆ-ಕಾಲೇಜುಗಳು ದನದ ದೊಡ್ಡಿಗಳ ಹಾಗಿದ್ದವು. ನಾನು ಓದಿದ ಹೈಸ್ಕೂಲ್‌ನಲ್ಲಿ ಬಯಲಾಜಿ, ಗಣಿತಕ್ಕೆ ಮೇಷ್ಟ್ರೇ ಇಲ್ಲ. ಹಾಗೂ ಟೆಕ್ಸ್ಟ್ ಬುಕ್ ಓದಿಕೊಂಡೇ ಪಾಸು ಮಾಡಿದೆವು. ಮತ್ತೆ ಕಾಲೇಜು ಸೇರಿದರೆ ಫಿಜಿಕ್ಸ್‌ಗೆ ಲೆಕ್ಚರರ್ ಇಲ್ಲ.

ಶಿಕ್ಷಣ ನಮ್ಮ ಹಕ್ಕು ಅಂತ ನಮ್ಮ ಅರಿವಿಗೇ ಬಂದಿರಲಿಲ್ಲ. ನಮಗೆ ನೀಡುತ್ತಿದ್ದ ಶಿಕ್ಷಣವನ್ನೂ ಭಿಕ್ಷೆ ಎಂಬಂತೆ ಕೊಡಲಾಯಿತು. ನಾವು ಕೊಡೋದೇ ಇಷ್ಟು, ಬೇಕಾದರೆ ತಗೋ, ಇಲ್ಲದಿದ್ದರೆ ಎದ್ದು ನಡಿ ಎಂಬಂತೆ. ಕಾಲೇಜಿನ ರೌಡಿಗಳು ಬಂದು ನೇರವಾಗಿ ಬೆಲ್ ಬಾರಿಸಿ ನಮ್ಮನ್ನು ಚಳವಳಿಗೆ ಕರೆದುಕೊಂಡು ಹೋಗುತ್ತಿದ್ದರು. ಯಾಕಾಗಿ ಆ ಚಳವಳಿ ಏನೊಂದೂ ನಮಗೆ ಗೊತ್ತಿರಲಿಲ್ಲ. ನಮ್ಮ ಶಾಲೆಯಲ್ಲಿ ಮೇಷ್ಟ್ರೇ ಇರಲಿಲ್ಲವಲ್ಲ, ಅದಕ್ಕಾಗಿ ಯಾರಾದರೂ ನಮ್ಮಿಂದ ಚಳವಳಿ ಹೂಡಿಸಿದ್ದರಾ? ಖಂಡಿತ ಇಲ್ಲ.

ಸಕಲೇಶಪುರದಲ್ಲಿ ಸಾಕಷ್ಟು ಶ್ರೀಮಂತರು, ಕೋಟ್ಯಧೀಶರು ಇದ್ದರು, ಈಗಲೂ ಇದ್ದಾರೆ. ಅವರೆಲ್ಲರೂ ತಮ್ಮ ಮಕ್ಕಳನ್ನು ಊಟಿ, ಮಂಗಳೂರು, ಬೆಂಗಳೂರು, ಮಣಿಪಾಲದ ಶಾಲೆಗಳಿಗೆ ಕಳುಹಿಸಿದರು. ಊಟಿಯಲ್ಲಿ ಆ ಮಕ್ಕಳು ಓದುವ ಜತೆ ಹಾರ್ಸ್ ರೈಡಿಂಗ್, ಸ್ವಿಮ್ಮಿಂಗ್, ಚೆಸ್ ಕಲಿತರು. ನಾವು ಮಧ್ಯಮವರ್ಗದವರು, ಬಡವರು ಪಾಠ ಮಾಡುವ ಮೇಷ್ಟ್ರು ಇಲ್ಲದೆ ಗೋಲಿ, ಲಗೋರಿ, ಬುಗುರಿಯಾಡುತ್ತ ಸಮಯ ಹಾಳುಮಾಡಿಕೊಂಡೆವು.

ನನಗೆ ಈಗಲೂ ಆಶ್ಚರ್ಯವಾಗೋದು ಏನೆಂದರೆ, ಇಲ್ಲಿ ಒಂದು ಒಳ್ಳೆಯ ಶಿಕ್ಷಣ ಸಂಸ್ಥೆ ಕಟ್ಟಲು ಯಾವ ಶ್ರೀಮಂತನೂ ಯಾಕೆ ಯೋಚನೆ ಮಾಡಲಿಲ್ಲ? ಇಲ್ಲಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಲು ಯಾವ ಕಾಫಿ ಪ್ಲಾಂಟರ್ ಸಹ ಮುಂದೆ ಬರಲಿಲ್ಲವೇಕೆ? ಒಂದು ವೇಳೆ ಇಲ್ಲಿನ ಸಂತ ಜೋಸೆಫರ ಶಾಲೆಯೊಂದು ಇಲ್ಲದೆ ಹೋಗಿದ್ದರೆ ಸಕಲೇಶಪುರ ಮಕ್ಕಳೆಲ್ಲ ಏನಾಗಿ ಹೋಗುತ್ತಿದ್ದರೋ, ನೆನಪಿಸಿಕೊಂಡರೆ ಭಯವಾಗುತ್ತೆ.

ಈಗಲೂ ಸಹ ಯಾವ ಬದಲಾವಣೆಯಾಗಿದೆ? ಹಳ್ಳಿ ಜನರಿಗೆ ಸಮೀಪದಲ್ಲಿ ಶಾಲೆ, ಕಾಲೇಜು ಇಲ್ಲ. ಇರುವ ಶಾಲೆ-ಕಾಲೇಜುಗಳಲ್ಲಿ ಅಧ್ಯಾಪಕರ ಕೊರತೆ. ಮೇಷ್ಟ್ರು ಇದ್ದರೂ ಕೊಠಡಿ ಇಲ್ಲದ ಶಾಲೆಗಳಿವೆ. ಹೆಣ್ಣು ಮಕ್ಕಳಿಗೆ ಒಂದು ಸಣ್ಣ ಟಾಯ್ಲೆಟ್ ಕೂಡ ಗತಿಯಿಲ್ಲ. ಮಳೆಯಲ್ಲಿ ಮಕ್ಕಳು ಬಸ್‌ಗಾಗಿ ನೆನೆದುಕೊಂಡೇ ಕಾಯಬೇಕು-ಬಸ್ ಶೆಲ್ಟರ್‌ಗಳೂ ಇಲ್ಲ.

ಸಕಲೇಶಪುರದ ಮೂಲ ನಿವಾಸಿಗಳ ಕಥೆ ಏನಾಗಿದೆ. ಇಲ್ಲಿ ಹುಟ್ಟಿ ಬೆಳೆದವರೆಲ್ಲ ಬದುಕಲು ಸಾಧ್ಯವಿಲ್ಲದೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಚಾಪೆ ಸುತ್ತಿಕೊಂಡು ಇಲ್ಲಿಗೆ ಬಂದ ಹೊರರಾಜ್ಯದವರು ಇಲ್ಲಿ ಯಜಮಾನಿಕೆ ಮಾಡುತ್ತಿದ್ದಾರೆ. ನೂರು ಎಕರೆ ಮೇಲ್ಪಟ್ಟ ಕಾಫಿ ತೋಟಗಳೆಲ್ಲ ಇವತ್ತು ಯಾರ ಕೈಯಲ್ಲಿದೆ? ರಾಜಸ್ತಾನದಿಂದ ಬಂದ ಮಾರವಾಡಿಗಳು, ಕೇರಳದವರು, ಮಲ್ಟಿನ್ಯಾಷನಲ್ ಕಂಪೆನಿಯವರು, ಐಟಿ-ಬಿಟಿಯವರು, ಗಣಿ ದೊರೆಗಳು ಇವತ್ತು ಸಕಲೇಶಪುರ ತಾಲ್ಲೂಕಿನ ಎಲ್ಲ ಕಾಫಿ ತೋಟಗಳನ್ನು ಕೊಂಡುಕೊಂಡಿದ್ದಾರಲ್ಲವೆ?

ಅವರಿಗೆ ಟ್ಯಾಕ್ಸು ಉಳಿಸಬೇಕು, ಇನ್ವೆಸ್ಟ್‌ಮೆಂಟೂ ಆಗಬೇಕು.
ಸಣ್ಣ ಕಾಫಿ ಬೆಳೆಗಾರರ ಕೂಗು ಯಾರು ಕೇಳುತ್ತಿದ್ದಾರೆ? ಬೆಳೆ ಇಲ್ಲ, ಬೆಲೆ ಇಲ್ಲ ಎಂದರೂ ದೊಡ್ಡ ಮಾರ್‍ವಾಡಿಗಳು ತಲೆ ಕೆಡಿಸಿಕೊಳ್ಳೋದಿಲ್ಲ. ಆದರೆ ಸಣ್ಣ ಬೆಳೆಗಾರರ ಗತಿ? ಅವರು ಕೂಗಿದ್ದೆಲ್ಲ ಇಲ್ಲಿನ ಬೆಟ್ಟಗುಡ್ಡಗಳಿಗೆ ಅಪ್ಪಳಿಸಿ ವಾಪಾಸು ಬಂದಿದೆ ಅಲ್ಲವೆ?

ಸಕಲೇಶಪುರದ ಚಳವಳಿಗಳು ಏನಾದವು? ರೈತ ಚಳವಳಿ ಏನಾಯ್ತು. ವಿಶ್ವನಾಥ್ ಅಂಥವರು ರಾಜಕಾರಣಕ್ಕೆ ಹೋದ ಮೇಲೆ, ಕೆರೋಡಿ ಶಿವು ಸತ್ತ ಮೇಲೆ ಹಸಿರು ಶಾಲು ಹಾಕಿದವರನ್ನು ಈ ತಾಲ್ಲೂಕಿನಲ್ಲಿ ಯಾರಾದರೂ ನೋಡಿದ್ದೀರಾ?

ಅತಿ ಹೆಚ್ಚು ಕೂಲಿ ಕಾರ್ಮಿಕರು ಇರುವ ತಾಲ್ಲೂಕು ಇದು. ತೋಟ ಕಾರ್ಮಿಕರ ಶೋಷಣೆಗೆ ಯಾವ ಅಂಕೆಯೂ ಇಲ್ಲ. ಆದರೆ ಕಾರ್ಮಿಕ ಸಂಘಟನೆಗಳು ಎಲ್ಲಿವೆ? ಅವುಗಳು ನಾಯಕರಾದರೂ ಯಾರು? ಇದ್ದಿದ್ದರಲ್ಲಿ ದಲಿತ ಸಂಘಟನೆಗಳು ಅಷ್ಟೋ ಇಷ್ಟು ಕ್ರಿಯಾಶೀಲವಾಗಿದ್ದರೂ, ರಾಜಕಾರಣದ ಜತೆ ಥಳುಕು ಹಾಕಿಕೊಂಡು ಅವುಗಳೂ ಕುಂಟುತ್ತಿವೆಯಲ್ಲವೆ?

ಬಲಪಂಥೀಯ ಚಳವಳಿಯನ್ನು ಹೊರತುಪಡಿಸಿ ಸಕಲೇಶಪುರದಲ್ಲಿ ಜನಪರ ಧ್ವನಿಗಳೆಲ್ಲ ಯಾಕೆ ಉಡುಗಿ ಹೋಗುತ್ತಿವೆ. ಸಕಲೇಶಪುರದ ಅನಧಿಕೃತ ಕ್ಲಬ್ ದಂಧೆಯ ಬಗ್ಗೆ ಪತ್ರಿಕೆಗಳಲ್ಲಿ ಬರೆದು, ಜಾಗೃತಿ ಮೂಡಿಸಿದ್ದಕ್ಕಾಗಿ ಇಲ್ಲಿನ ಪತ್ರಕರ್ತ ಗೆಳೆಯರಿಗೆ ದಕ್ಕಿದ್ದೇನು? ಅವರ ಮುಖಕ್ಕೆ ಮಸಿ ಬಳಿಯುವ ಕೆಲಸವನ್ನು ಇಲ್ಲಿನ ಪಟ್ಟಭದ್ರರು ಮಾಡಿದರಲ್ಲವೆ?

ಇಡೀ ಜಗತ್ತು ಆಧುನೀಕರಣಗೊಳ್ಳುತ್ತಿದ್ದರೆ ನಾವು ಇಸ್ಪೀಟು ಆಡುತ್ತ ಕಾಲಹರಣ ಮಾಡಿದೆವು. ಇಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಶಿಕ್ಷಣ ಸಿಗಲಿಲ್ಲ, ಅವರು ಇಸ್ಪೀಟು ಕಲಿಯದೆ ಇನ್ನೇನು ಮಾಡುತ್ತಾರೆ?

ಯಾಕೆ ಇಲ್ಲಿ ಇದುವರೆಗೆ ಒಂದೇ ಒಂದು ಕೈಗಾರಿಕೆ ಸ್ಥಾಪನೆಯಾಗಲಿಲ್ಲ. ಇಲ್ಲಿನ ಮಕ್ಕಳಿಗೆ ಉದ್ಯೋಗ ನೀಡುವಂಥ ಒಂದೇ ಒಂದು ಉದ್ಯಮ ಸ್ಥಾಪನೆಯಾಗಲಿಲ್ಲವೇಕೆ? ಇಲ್ಲಿನ ನಿರುದ್ಯೋಗಿಗಳ ಪರವಾಗಿ ಯಾರೂ ಯಾಕೆ ಮಾತನಾಡಲಿಲ್ಲ?

ರಾಜಸ್ತಾನದಿಂದ ಬಂದವರು ಬಡ್ಡಿಗೆ ದುಡ್ಡು ಕೊಟ್ಟರು. ಇಲ್ಲಿನ ಜನ ಸಾಲ ತೀರಿಸಲಾಗದೆ ಮನೆ-ಮಠ ಮಾರಿಕೊಂಡರು. ಅವರು ಇಲ್ಲಿ ದುಡಿದ ದುಡ್ಡನ್ನು ಮತ್ತೆ ರಾಜಸ್ತಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಬಂಡವಾಳ ಹೂಡಿದರು. ನಾವೆಲ್ಲ ಮಾಡಿದ್ದೇನು?

ಸಕಲೇಶಪುರದಲ್ಲಿ ಏನನ್ನು ಬೆಳೆಯೋದಿಲ್ಲ ಹೇಳಿ? ನಾವಿಲ್ಲಿ ಭತ್ತದಿಂದ ಹಿಡಿದು ಎಲ್ಲವನ್ನೂ ಬೆಳೆಯುತ್ತೇವೆ. ಕಾಫಿ, ಏಲಕ್ಕಿ, ಮೆಣಸು, ಟೀ, ಮೆಣಸಿನ ಕಾಯಿ, ಶುಂಠಿ.... ಯಾವತ್ತಾದರೂ ಬೆಲೆ ಕುಸಿದಾಗ ಬೆಳೆಗಾರರು ಧರಣಿ ಮಾಡಿ ಪ್ರತಿಭಟಿಸಿದ್ದು ಉಂಟೆ. ಬದುಕು ಮೂರಾಬಟ್ಟೆಯಾದರೂ ನಾವು ಯಾಕೆ ಪ್ರತಿರೋಧ ತೋರಲಿಲ್ಲ. ನಮ್ಮ ಪ್ರತಿಭಟನೆಯ ಶಕ್ತಿಯನ್ನು ಕಿತ್ತುಕೊಂಡವರು ಯಾರು?

ಇಲ್ಲಿನ ಕಾಡು ಏನಾಯಿತು? ಕಿರು ಜಲವಿದ್ಯುತ್ ಯೋಜನೆಗಳ ಹೆಸರಿನಲ್ಲಿ ಕಾಡನ್ನೆಲ್ಲ ಕಡಿದು ಹಾಕಿದರಲ್ಲ? ಆಗ ಹುಟ್ಟಿಕೊಂಡ ಚಳವಳಿ ಏನಾಯಿತು? ಹಿಂದೆ ನಾವು ಬಿಸಲೆ ಅರಣ್ಯದಲ್ಲಿ ಚಾರಣಿಗರಿಗಾಗಿ ತಾತ್ಕಾಲಿಕ ಶಿಬಿರ ಮಾಡಿದಾಗ ಪ್ರತಿಭಟಿಸಿದ್ದೆವು. ಕಾಡಿನೊಳಗೆ ಕಾಂಕ್ರೀಟ್ ಬರುವುದು ಬೇಡ ಎಂದು ಅಂದಿನ ಅರಣ್ಯಾಧಿಕಾರಿ ಅಣ್ಣಯ್ಯ ಅವರಿಗೆ ಒತ್ತಡ ತಂದಿದ್ದೆವು. ಇವತ್ತು ಕಾಡಿನೊಳಗೆ ಸರ್ಕಾರದವರೇ ನುಗ್ಗಿದರಲ್ಲ? ಮರಗಿಡ ಕಡಿದರಲ್ಲ? ಹೋಗಲಿ ಅಲ್ಲಿ ಆ ಯೋಜನೆಗಳಲ್ಲಿ ಸಕಲೇಶಪುರದಲ್ಲಿ ಹುಟ್ಟಿ ಬೆಳೆದವರಿಗೆ ಕೆಲಸ ಕೊಟ್ಟಿದ್ದಾರಾ?

ಸಕಲೇಶಪುರವೇನಾದರೂ ಕೇರಳದವರ ಕೈಗೆ ಸಿಕ್ಕಿದ್ದರೆ ಇದನ್ನು ಅದ್ಭುತ ಪ್ರವಾಸಿ ತಾಣ ಮಾಡುತ್ತಿದ್ದರಲ್ಲವೆ? ಹಾಗೇನಾದರೂ ಆಗಿದ್ದರೆ ಇಲ್ಲಿನ ನಿರುದ್ಯೋಗಿಗಳಿಗೆ ಒಂದಷ್ಟು ಕೆಲಸ ದೊರೆಯುತ್ತಿತ್ತಲ್ಲವೆ? ಸಕಲೇಶಪುರದಲ್ಲಿ ಬದುಕಲಾಗದೆ ಬೆಂಗಳೂರಿನ ಫ್ಯಾಕ್ಟರಿಗಳು, ಗಾರ್ಮೆಂಟ್ಸ್‌ಗಳಲ್ಲಿ ಕೇವಲ ೨, ೩ ಸಾವಿರ ರೂಪಾಯಿ ಸಂಬಳಕ್ಕೆ ಕೆಲಸ ಮಾಡುವ ಗತಿ ಬರುತ್ತಿರಲಿಲ್ಲ ಅಲ್ಲವೆ?

ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಇರುವ ವೈದ್ಯರ ಮೇಲೆ ಭ್ರಷ್ಟಾಚಾರದ ಆರೋಪ. ಲಂಚ ಸಿಗುವ ಇಲಾಖೆಗಳೆಲ್ಲ ತುಂಬಿ ತುಳುಕುತ್ತವೆ. ಆರೋಗ್ಯ, ಶಿಕ್ಷಣ ಇಲಾಖೆಗಳಲ್ಲಿ ಮಾತ್ರ ಖಾಲಿಖಾಲಿ.

ಇದನ್ನೆಲ್ಲ ಸರಿಪಡಿಸಬೇಕಲ್ಲವೆ? ಇಲ್ಲಿನ ನಾಗರಿಕರೆಲ್ಲ ಪಕ್ಷ, ಜಾತಿ, ಧರ್ಮಭೇದಗಳನ್ನು ಮರೆತು ಒಮ್ಮೆ ಊರಿನ ಅಭಿವೃದ್ಧಿಯ ಬಗ್ಗೆ ಯೋಚಿಸಬೇಕಲ್ಲವೆ?

ಇಷ್ಟೆಲ್ಲ ಹೇಳುತ್ತಿರುವ ನೀನು ಬೆಂಗಳೂರಿನಲ್ಲಿ ಕುಳಿತು ಮಾಡುತ್ತಿರುವುದೇನು ಎಂದು ನೀವು ಪ್ರಶ್ನಿಸಬಹುದು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಮಲೆನಾಡು ಭಾಗದ ಪತ್ರಕರ್ತರೆಲ್ಲ ಒಂದು ವೇದಿಕೆಯಲ್ಲಿ ಕೆಲಸ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಮಲೆನಾಡನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳ ಬಗ್ಗೆ ಎಲ್ಲರ ಗಮನ ಸೆಳೆಯುವುದು ನಮ್ಮ ಉದ್ದೇಶ. ಜತೆಗೆ ಮಲೆನಾಡಿಗರು ಹಾಗು ವಿಧಾನಸೌಧದ ಅಧಿಕಾರಸ್ಥರ ನಡುವೆ ಸೇತುವೆಯಾಗುವ ಉದ್ದೇಶವೂ ಇದೆ. ಪತ್ರಿಕೆ, ಮಾಧ್ಯಮಗಳಲ್ಲಿ ಮಲೆನಾಡ ಸಮಸ್ಯೆಗಳಿಗೆ ಅರ್ಥ ಹುಡುಕುವ ಪ್ರಯತ್ನವೂ ನಮ್ಮಿಂದಾಗಲಿದೆ. ಈ ಪ್ರಯತ್ನಕ್ಕೆ ಹಾಸನ ಜಿಲ್ಲೆಯ ಎಲ್ಲ ಪತ್ರಕರ್ತರ ಬೆಂಬಲವನ್ನೂ ಕೋರುತ್ತೇವೆ. ವೇದಿಕೆಯಲ್ಲಿರುವ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಂಜುನಾಥ್ ಅವರ ಬೆಂಬಲವನ್ನೂ ಕೋರುತ್ತೇನೆ.

ಇಲ್ಲಿ ಶಾಸಕರಾದ ಎಚ್.ಕೆ.ಕುಮಾರ ಸ್ವಾಮಿಯವರಿದ್ದಾರೆ. ಅವರು ಹೃದಯವಂತರು. ಜನರ ಪರವಾಗಿ ಹಗಲುರಾತ್ರಿ ಕೆಲಸ ಮಾಡುವ ಉತ್ಸಾಹ ಅವರಿಗಿದೆ. ಸಕಲೇಶಪುರದ ಸಮಸ್ಯೆಗಳ ಅರಿವೂ ಅವರಿಗಿದೆ. ಅವರು ಇಲ್ಲಿನ ಚಿತ್ರಣವನ್ನು ಬದಲಿಸುವ ಕೆಲಸಕ್ಕೆ ಸಾರಥ್ಯ ವಹಿಸಲಿ ಎಂದು ವಿನಂತಿಸುತ್ತೇನೆ.

ಸಕಲೇಶಪುರ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾದ ಪಟ್ಟಣ. ನಾನು ಹಿಂದೆ ಇಲ್ಲಿದ್ದಾಗ ಸಂವಹನ ವೇದಿಕೆಯ ಮೂಲಕ ನೂರಾರು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದೆವು. ಸಾಹಿತ್ಯ ಪರಿಷತ್ತೂ ಸಹ ಇಲ್ಲಿ ಕ್ರಿಯಾಶೀಲವಾಗಿತ್ತು. ನಾನು ಪರಿಷತ್ತಿನ ಕಾರ್ಯದರ್ಶಿಯಾಗಿಯೂ ಇಲ್ಲಿ ಕೆಲಸ ಮಾಡಿದ್ದೆ ಆದರೆ ಯಾಕೋ ಏನೋ ಇಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳೂ ಕಡಿಮೆಯಾದಂತಿದೆ.

ಎಲ್ಲಿ ಸಾಂಸ್ಕೃತಿಕ-ಸಾಹಿತ್ಯಿಕ ವಾತಾವರಣ ಇರುವುದಿಲ್ಲವೋ ಅಲ್ಲಿ ಎಲ್ಲ ಬಗೆಯ ಅನಾರೋಗ್ಯಕರ ದಂಧೆಗಳೂ ನಿರಾತಂಕವಾಗಿ ನಡೆಯುತ್ತವೆ. ಮತ್ತೆ ಇಲ್ಲಿ ಜೀವಪರ ಚಟುವಟಿಕೆಗಳನ್ನು ಕ್ರಿಯಾಶೀಲಗೊಳಿಸಬೇಕಾದ ಅನಿವಾರ್ಯತೆ ಇದೆ.

ಇನ್ನು ಸಕಲೇಶಪುರದ ಪತ್ರಕರ್ತ ಮಿತ್ರರು ಯಾರಿಗೂ ಅಂಜದೆ, ಅಳುಕದೆ ತಮ್ಮ ಪತ್ರಿಕಾವೃತ್ತಿಯನ್ನೇ ಒಂದು ಜನರ ಚಳವಳಿ ಎಂಬಂತೆ ಪರಿಭಾವಿಸಿ, ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಅದನ್ನವರು ಮಾಡಲಿ ಎಂದು ಹೇಳುತ್ತ ನನ್ನ ಮಾತುಗಳನ್ನು ಮುಗಿಸುತ್ತೇನೆ.