Tuesday, September 30, 2008

ಹೋಗುವುದಿದ್ದರೆ ಬೇಗ ತೊಲಗಿ ಪೀಡೆಗಳೆಇವುಗಳನ್ನು ಪೀಡೆಗಳೆನ್ನದೆ ಬೇರೆ ದಾರಿಯಿಲ್ಲ. ಇವು ಬೆಂಗಳೂರಿಗೆ ಅಂಟಿಕೊಂಡ ವಾಸಿಯಾಗದ ಖಾಯಿಲೆಗಳು. ದೇಶಭಕ್ತರ ವರಸೆಯಲ್ಲಿ ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳನ್ನು ಗೇಲಿ ಮಾಡುವ ಇವುಗಳ ಮೈಮನಸ್ಸು ತುಂಬಾ ವಿಕೃತಿಯೇ. ಬದುಕಿನ ಅನಿವಾರ್ಯತೆಗಾಗಿ ಬೆಂಗಳೂರಿಗೆ ಬಂದು ಕುಳಿತ ಈ ವಲಸಿಗರ ದುರಹಂಕಾರ ಮಿತಿಮೀರುತ್ತಿರುವ ಹಾಗಿದೆ.

ಒಂದು ಪೀಡೆ ಹೀಗೆನ್ನುತ್ತದೆ: Pathetic Infrastructure .. Most stupid road and footpath design .. Goon autowallas, highest fuel prices, highest road tax, almost zero business and service sense, No proper town planning, Farthest Airport .. and guys!! u know you will not find all these in any of the major Indian cities like Hyderabad, Chennai, Kochi, Noida, Gurgaon, Chandigarh, Jaipur, Ahemdabad, Delhi, Lucknow, Mumbai and Pune !!”

ಮತ್ತೊಂದು ಪೀಡೆ ಹೀಗೆನ್ನುತ್ತದೆ:“Yes ! I tool WILL LEAVE Bangalore ! I’ve been here for almost an year and Except my Job I cannot recall single thing in this city that I can relate myself too. As for some practical reasons, friends above have already posted dozens valid points (so avoiding duplicity). Just Adding my 1 thought: Bangalore, for you to become a true cosmopolitan city, first you need to open yourself to India and Indians. If you will continue paint your Busses, Route-maps, Area Layout maps in “Kannada” how will everyone understand and accept you ?”

ಇನ್ನೊಂದು ಪೀಡೆ ಹೀಗೆನ್ನುತ್ತದೆ: Yes...me also leaving soon. This the most over hyped city in India. The city with worst infrastructure should not be the IT hub of India. People are very rude and egoistic here. And auto driver behaves like a “Millionaire” here and we really need to beg them to board an auto. I am staying in so called posh area and we suffer power cut at least 2-3 hrs a day. Walking on the road at 9 pm is like a 2 am in Mumbai. I have read that some good for nothing kannadiga people said that outsider made bangalore worst. But they does not know that if outsider start leaving bangalore then kannadiga people has come one streets with their families begging for alms and this IT hub become “BAGGER HUB” of India. I am sure that sooner or later this IT hub should be shifted to a better place and it will.”

ಮಗದೊಂದು ಪೀಡೆ ಹೀಗೆನ್ನುತ್ತದೆ: “I want to leave Bangalore as soon as possible. Need the reasons;here they are - 1. There is so much hype about the city; people living in other cities consider it a heaven... but you know the reality when you live here. Bangalore sets false expectations...let the world know its reality. 2.The roads are pathetic...too bad to be called roads. 3.Public transport, so called auto and buses they govern the city. Running without meter and talking nonsense... 4.Kannada language,which people love to speak thinking as if it is India’s national language. 5.The city sleeps at 10 and the dogs wake... The reasons are uncountable; conclusion is just one; Bangalore is not a place to live in...”


ಇಂಥ ದುರಹಂಕಾರಿ, ದಾರ್ಷ್ಟ್ಯದ ಬರೆಹಗಳೆಲ್ಲಾ ದಾಖಲಾಗಿರುವುದು http://www.leavingbangalore.com/ ಎಂಬ ವೆಬ್‌ಸೈಟ್‌ನಲ್ಲಿ. ಈ ವೈಬ್‌ಸೈಟ್‌ಗೆ ಸದ್ಯಕ್ಕೆ ಅಪ್ಪ ಅಮ್ಮ ಯಾರೂ ಇಲ್ಲ.

ನಿನ್ನೆ ಮೆಜೆಸ್ಟಿಕ್ ಬಳಿ ಬರುತ್ತಿದ್ದಾಗ ದೊಡ್ಡ ಗಾತ್ರದ ವಿನೈಲ್ ಫಲಕವೊಂದನ್ನು ನೋಡಿದೆ. ಅದರಲ್ಲಿ ಒಬ್ಬ ಹೆಂಗಸು ತನ್ನ ಗಂಟುಮೂಟೆ ಕಟ್ಟಿಕೊಂಡು ಹೋಗುತ್ತಿರುವ ಚಿತ್ರವೊಂದನ್ನು ಮುದ್ರಿಸಲಾಗಿದೆ. ಕೆಳಗೆ ಈ ವೆಬ್‌ಸೈಟ್‌ನ ವಿಳಾಸ. ಈ ಫಲಕ ನೋಡಿದ ಕೂಡಲೇ ಬೆಂಗಳೂರನ್ನು ತಮ್ಮ ವೇಶ್ಯಾಗೃಹ ಮಾಡಿಕೊಳ್ಳಲು ಯತ್ನಿಸುತ್ತಿರುವ ಕೆಲ ಕಾರ್ಪರೇಟ್ ಸಂಸ್ಥೆಗಳ ಕುಮ್ಮಕ್ಕೇ ಕಣ್ಣಿಗೆ ರಾಚಿತು.

ಈ ವೆಬ್‌ಸೈಟ್‌ನ ಜಾಹೀರಾತು ಕೆಲ ಇಂಗ್ಲಿಷ್ ಪತ್ರಿಕೆಗಳಲ್ಲೂ ಪ್ರಕಟವಾಗಿದೆಯಂತೆ. ಕುತೂಹಲದಿಂದ ಈ ವೆಬ್‌ಸೈಟ್ ತೆರೆದುನೋಡಿದೆ. ‘ಯಾಕೆ ನೀವು ಬೆಂಗಳೂರು ತೊರೆಯಲು ನಿರ್ಧರಿಸಿದ್ದೀರಿ? ಇಲ್ಲಿನ ರಸ್ತೆಗಳಿಂದಲೇ? ಇಲ್ಲಿನ ಟ್ರಾಫಿಕ್ ಸಮಸ್ಯೆಯಿಂದಲೇ? ಇಲ್ಲಿನ ಜನರಿಂದಲೇ? ಏನಾಗುತ್ತಿದೆ ಇಲ್ಲಿ? ಎಂಬ ಪ್ರಶ್ನೆಗಳನ್ನು ಇಟ್ಟು ಪ್ರತಿಕ್ರಿಯೆ ಆಹ್ವಾನಿಸಲಾಗಿದೆ. ನೂರಾರು ಜನರ ಪ್ರತಿಕ್ರಿಯೆಯ ಹೊರತಾಗಿ ಇಲ್ಲಿ ಮಿಕ್ಕ ಏನೂ ಇಲ್ಲ. ಇದನ್ನು ಸೃಷ್ಟಿಸಿದ ಮುಖೇಡಿಯ ಹೆಸರು, ವಿಳಾಸವೂ ಇಲ್ಲ.

ಈ ಸೈಟ್ ಯಾಕೆ ಹುಟ್ಟಿಕೊಂಡಿದೆ, ಇದನ್ನು ಸೃಷ್ಟಿಸಿದವರ್‍ಯಾರು ಎಂಬುದರ ಬಗ್ಗೆ ಹೆಚ್ಚು ಚರ್ಚಿಸಬೇಕಾಗಿಲ್ಲವೆನಿಸುತ್ತದೆ. ಒಂದು ವೇಳೆ ಬೆಂಗಳೂರಿಗೆ ವಲಸೆ ಬಂದಿರುವವರು ಇಲ್ಲಿಂದ ಹೊರಟು ಹೋದರೆ ಕನ್ನಡಿಗರು ತಮ್ಮ ಹೆಂಡಿರು ಮಕ್ಕಳೊಂದಿಗೆ ಭಿಕ್ಷೆ ಬೇಡಬೇಕಾಗುತ್ತದೆ ಎಂಬ ಮಾತಿನಿಂದ ಹಿಡಿದು ಇಲ್ಲಿನ ಬಿಎಂಟಿಸಿ, ಆಟೋ ರಿಕ್ಷಾ ಡ್ರೈವರ್‌ಗಳನ್ನು ಗೂಂಡಾಗಳು ಎನ್ನುವವರೆಗೆ ಇಲ್ಲಿ ಬಗೆಬಗೆಯ ಅಭಿಪ್ರಾಯಗಳು ಹರಡಿಕೊಂಡಿವೆ. . ಕನ್ನಡಿಗರು ಕನ್ನಡವನ್ನೇ ರಾಷ್ಟ್ರೀಯ ಭಾಷೆ ಎಂದು ಭಾವಿಸಿದ್ದಾರೆ ಎಂದು ಮೂರ್ಖನೊಬ್ಬ ಪ್ರತಿಕ್ರಿಯಿಸಿದ್ದಾನೆ. ಬಹುಶಃ ಈ ಸೈಟ್ ಸೃಷ್ಟಿಸಿದವನ ಉದ್ದೇಶವೂ ಇದೇ ಆಗಿತ್ತು ಎಂದು ಊಹಿಸಬಹುದು. ಕನ್ನಡಿಗರನ್ನು ತೆಗಳುವುದು, ಅಪಮಾನಿಸುವುದೇ ಈ ವೆಬ್‌ಸೈಟ್‌ನ ಮೂಲೋದ್ದೇಶ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ಹೀಗೆ ಅಂತರ್ಜಾಲದಲ್ಲಿ ಕನ್ನಡಿಗರನ್ನು, ಕರ್ನಾಟಕವನ್ನು ಇಲ್ಲಿ ಬಂದು ಬದುಕುತ್ತಿರುವವರೇ ತೆಗಳುವ, ಗೇಲಿ ಮಾಡುವ ಕಾಯಕ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ತಮ್ಮ ಊರು-ಕೇರಿ ಬಿಟ್ಟು ಬದುಕು ಸಾಗಿಸಲು ಬೆಂಗಳೂರಿಗೆ ಬಂದು ಬಿದ್ದವರು ಕನಿಷ್ಠ ಇಲ್ಲಿನ ನೆಲ-ಸಂಸ್ಕೃತಿ-ಭಾಷೆಯ ಬಗ್ಗೆ ಗೌರವ ಇಟ್ಟುಕೊಳ್ಳಬೇಕು ಎಂದು ಇಲ್ಲಿನ ಜನ ಬಯಸುವುದು ಸಹಜ. ಆದರೆ ಈ ದುರಹಂಕಾರಿಗಳು ಕನ್ನಡಿಗರನ್ನು ನಿಂದಿಸುವ ಕಾಯಕವನ್ನು ಜಾರಿಯಲ್ಲೇ ಇಟ್ಟುಕೊಂಡಿದ್ದಾರೆ.

ಈ ರೀತಿಯ ಕನ್ನಡ ವಿರೋಧಿ ಚಟುವಟಿಕೆಗಳು ಒಂದಲ್ಲ ಒಂದು ಬಗೆಯಲ್ಲಿ ನಡೆಯುತ್ತಲೇ ಇದೆ. ಕೆಲವು ಹೊರಜಗತ್ತಿಗೆ ಗೊತ್ತಾಗುತ್ತದೆ, ಮತ್ತೆ ಕೆಲವು ಒಳಗಿಂದೊಳಗೇ ನಡೆಯುತ್ತವೆ.

ಈಗ ಈ ಕನ್ನಡ ವಿರೋಧಿ, ಕರ್ನಾಟಕ ವಿರೋಧಿ ಮಾಫಿಯಾ ಗುಂಪು ರಾಜಾರೋಷವಾಗಿ ಬೀದಿಪ್ರಚಾರಕ್ಕೆ ಇಳಿದ ಹಾಗೆ ಕಾಣುತ್ತದೆ. ಇಲ್ಲವಾದಲ್ಲಿ ಬೆಂಗಳೂರಿನ ಹೃದಯದಲ್ಲೇ ಇಂಥ ಜಾಹೀರಾತು ಪ್ರಕಟಿಸುವ ಧೈರ್ಯವನ್ನು ಇವರು ಮಾಡುತ್ತಿರಲಿಲ್ಲ.

ಒಂದು ವೇಳೆ ಈ ಮುಖೇಡಿಗಳಿಗೆ ಬೆಂಗಳೂರಿನಲ್ಲಿ ವಾಸ ಮಾಡುವುದು ಕಷ್ಟವೆನಿಸಿದರೆ ಅವರನ್ನು ಇಲ್ಲೇ ಇರಿ ಎಂದು ಮುದ್ದು ಮಾಡಿದವರು ಯಾರು. ಇವರನ್ನು ಕರೆದುಕೊಂಡು ಬಂದವರಾದರೂ ಯಾರು? ಬೆಂಗಳೂರಿನ ಹವಾಮಾನ, ಇಲ್ಲಿನ ಜನರ ಹೃದಯವೈಶಾಲ್ಯ, ಉದ್ಯೋಗದ ಅವಕಾಶಗಳಿಂದಲ್ಲವೇ ಈ ಪೀಡೆಗಳು ಬಂದು ಇಲ್ಲಿಗೆ ಒಕ್ಕರಿಸಿದ್ದು? ಇಲ್ಲಿ ವ್ಯವಸ್ಥೆ ಸರಿಯಿಲ್ಲವೆಂದರೆ ಅವರು ಇಲ್ಲಿ ಇರುವ ಅವಶ್ಯಕತೆಯೂ ಇಲ್ಲ.
ಬೆಂಗಳೂರು ಈ ಪೀಡೆಗಳು ಬರುವ ಮುನ್ನವೇ ಹೆಚ್ಚು ಸುಖ ಸಮೃದ್ಧಿಯಾಗಿತ್ತು. ಈ ಜನರು ಬಂದ ಮೇಲೆಯೇ ಇಲ್ಲಿ ಬಡವರ, ಮಧ್ಯಮವರ್ಗದವರ ಬದುಕು ದುಸ್ತರವಾಗಿದ್ದು, ಬೆಲೆಗಳು ಗಗನಕ್ಕೇರಿದ್ದು, ಕೊಳ್ಳುಬಾಕ ಸಂಸ್ಕೃತಿಗೆ ಸಮಾಜ ದಿಕ್ಕುಗೆಟ್ಟಿದ್ದು. ಈ ಪೀಡೆಗಳಿಂದಲೇ ಬೆಂಗಳೂರಿನಲ್ಲಿ ಸೈಟುಗಳ ಬೆಲೆ ಗಗನಕ್ಕೇರಿದ್ದು, ಮನೆಬಾಡಿಗೆ ಕೈಗೆ ಎಟುಕದಂತಾಗಿದ್ದು.

ಒಂದು ವೇಳೆ ಇವರು ಬೆಂಗಳೂರು ಬಿಟ್ಟು ಹೋದರೆ ಭಿಕ್ಷುಕರಾಗುವವರು ನಾವು ಕನ್ನಡಿಗರಲ್ಲ, ಈ ಮುಖೇಡಿಗಳೇ! ಬೆಂಗಳೂರು ನೆಮ್ಮದಿಯಾಗಿ ಉಸಿರಾಡುತ್ತದೆ.

ಒಂದು ವೇಳೆ ಇವರು ಬೆಂಗಳೂರು ಬಿಟ್ಟು ಹೊರಡುವ ಮನಸ್ಸು ಮಾಡಿದ್ದರೆ ಯಾಕಿನ್ನೂ ಯಾರೂ ಹೋಗುತ್ತಿಲ್ಲ? ಸುಮ್ಮನೆ ಹೊರಟು ಹೋಗುವ ಬದಲು ನಾವು ಬೆಂಗಳೂರು ಬಿಟ್ಟುಹೋಗುತ್ತಿದ್ದೇವೆ ಎಂದು ಯಾರನ್ನೋ ಬೆದರಿಸುವ ತಂತ್ರವೇಕೆ? ಹಾಗೆ ಬೆದರುವವರಾದರೂ ಯಾರು? ಇಂಥ ಕೊಳಕು ಬುದ್ಧಿಯವರು ಇಲ್ಲಿಂದ ತೊಲಗಲು ಲಾಯಕ್ಕಾದವರೇ ಸರಿ. ಹೀಗಾಗಿ ಈ ಬಗೆಯ ವೆಬ್ ಸೈಟ್ ಮಾಡಿಕೊಂಡು ಕರ್ನಾಟಕ, ಬೆಂಗಳೂರಿನ ವಿರುದ್ಧ ಅಪಪ್ರಚಾರ, ಗೇಲಿ ಮಾಡುವವರು ಆದಷ್ಟು ಬೇಗ ತೊಲಗಿಹೋಗಲಿ.

ಇದೇ ವೆಬ್‌ಸೈಟ್‌ನಲ್ಲಿ ಹಲವರು ಈ ದುರಹಂಕಾರಿಗಳ ಸೊಕ್ಕನ್ನು ಅಡಗಿಸುವ ಮಾತನ್ನೂ ದಾಖಲಿಸಿದ್ದಾರೆ. ಅದರಲ್ಲಿ ಒಂದು ಬರೆಹ ಹೀಗಿದೆ: Hello ppl.. I love Bangalore for what it is.. I am not a Kannadiga and I'm in Bangalore for 4 years now and i do have many reasons to say that I love this city. Bangalore is the place where many ppl realize their dreams.. First job, first salary, frenz at office.. and the list goes on... What if u have traffic? What if the city is expensive? Please stop complaining about the city. It's really a cool place to stay. However the city now is, it's because of us who stay here. People come here from all over India to earn a livelihood & after getting everything from this place, they say the city is sick. For those ppl I would rather say "it's U & Ur thots that are sick and not the city". Tell me one good city in India, for that matter in the world, that doesn't have any problems.. Finally i have a message for all those who want to leave Bangalore for what so ever reason they have... Please leave and make it a better place for ppl like us who love this place..
ಚಿತ್ರಗಳು: ಶರಣ್

Sunday, September 28, 2008

ಈ ಹೆಣ್ಣುಮಕ್ಕಳು ಪ್ರಾಣಿಗಿಂತ ಕಡೆಯಾಗಿ ಬದುಕಬೇಕೆ?


ತಿನ್ನುವ ಅನ್ನದಲ್ಲಿ ಹುಳುಗಳು, ಆಲೂಗೆಡ್ಡೆಯಲ್ಲಿ ಹುಳುಗಳು. ನೀರು ನೀರಾದ ಸಾರು. ಪಲ್ಯ ಇಲ್ಲ, ಮೊಟ್ಟೆ ಇಲ್ಲ, ಬಾಳೆಹಣ್ಣು ಇಲ್ಲ, ಹಾಲು ಮೊದಲೇ ಇಲ್ಲ. ಮನುಷ್ಯರು ತಿನ್ನಲು ಯೋಗ್ಯವಾದ ಆಹಾರವಂತೂ ಇಲ್ಲಿಲ್ಲ. ಇದು ಯಾವುದೋ ಜೈಲಿನ ಕತೆಯಲ್ಲ. ಜೈಲುಗಳಲ್ಲೂ ಈಗೀಗ ಒಳ್ಳೆಯ ವ್ಯವಸ್ಥೆಗಳು ಇವೆ. ಇಲ್ಲಿ ಪ್ರಸ್ತಾಪಿಸುತ್ತಿರುವುದು ಬೆಂಗಳೂರು ಮಹಾನಗರದ ಸರ್ಕಾರಿ ಹಾಸ್ಟೆಲ್ ಒಂದರ ಕತೆ.

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಡಾ.ಸಿ.ಎಸ್.ದ್ವಾರಕಾನಾಥ್ ಅವರು ರಾಜ್ಯದ ಹಲವು ಹಾಸ್ಟೆಲ್‌ಗಳನ್ನು ಭೇಟಿ ಮಾಡಿ ಆಗಾಗ ತಮ್ಮ ಅನುಭವಗಳನ್ನು ಹೇಳುತ್ತಿದ್ದರು. ನಿನ್ನೆ ದಿಢೀರನೆ ಬೆಂಗಳೂರಿನ ಒಂದು ಹಾಸ್ಟೆಲ್ ತೋರಿಸುತ್ತೇನೆ ಬನ್ನಿ ಎಂದರು. ಅದು ಅವರ ದಿಢೀರ್ ಭೇಟಿ. ಅವರೊಂದಿಗೆ ತೆರಳಿದ್ದ ನಮಗೆ (ಮಾಧ್ಯಮದವರಿಗೆ) ಸಹ ಯಾವ ಹಾಸ್ಟೆಲ್‌ಗೆ ಹೋಗುತ್ತಿದ್ದೇವೆ ಎಂಬುದು ಕಡೆ ಕ್ಷಣದವರೆಗೆ ಗೊತ್ತಿರಲಿಲ್ಲ. ಸಂಜೆ ಆರು ಗಂಟೆಯ ಸುಮಾರಿಗೆ ನಾವು ಹೋಗಿದ್ದು. ಕೆ.ಆರ್.ಪುರಂನ ಬಿಸಿಎಂ ಹಾಸ್ಟೆಲ್‌ಗೆ.

ಈಗಲೋ ಆಗಲೋ ಬಿದ್ದು ಹೋಗುವ ಕಟ್ಟಡವದು. ಸ್ವಾಗತಿಸಿದ್ದು ಮುರುಕಲು ಗೇಟು, ಈಗಲೋ ಆಗಲೋ ಸಾಯುವಂತಿರುವ, ಕನ್ನಡ ಬಾರದ ಒಬ್ಬ ಕಾವಲುಗಾರ.
ಅದು ಸರ್ಕಾರ ನಡೆಸುವ ಹೆಣ್ಣು ಮಕ್ಕಳ ಪ್ರೀ ಮೆಟ್ರಿಕ್ ಹಾಗು ಪೋಸ್ಟ್ ಮೆಟ್ರಿಕ್ ವಸತಿ ನಿಲಯ. ಆಶ್ಚರ್ಯವೆಂದರೆ ಬಿದ್ದು ಹೋಗಲು ತಯಾರಾಗಿರುವ ಆ ಕಟ್ಟಡಕ್ಕೆ ಸರ್ಕಾರ ಸುಮಾರು ೧೨ಸಾವಿರ ರೂ. ಬಾಡಿಗೆ ನೀಡುತ್ತದೆ.

ಬಾಗಿಲ ಬಳಿಯಲ್ಲೇ ನಮಗೆ ಕಂಡಿದ್ದು ಹತ್ತು ಹನ್ನೆರಡು ತುಂಬಿದ ಕೊಡಪಾನಗಳನ್ನು ಜೋಡಿಸಿಡಲಾಗಿದ್ದ ಕೋಣೆ, ದ್ವಾರಕಾನಾಥ್ ಹಾಗು ನಾವು ಆ ಕೊಠಡಿಯನ್ನು ಬಚ್ಚಲು ಕೋಣೆ ಎಂದೇ ಭಾವಿಸಿ ಒಳಗೆ ಹೋಗಲು ಹಿಂದುಮುಂದೆ ನೋಡಿದೆವು. ಆದರೆ ಅದು ಬಚ್ಚಲಾಗಿರಲಿಲ್ಲ, ವಿದ್ಯಾರ್ಥಿನಿಯರು ಮಲಗುವ ಕೊಠಡಿ ಎಂದು ಗೊತ್ತಾಗುತ್ತಿದ್ದಂತೆ ಗಾಬರಿಯಾಯಿತು. ಒಂದು ಪುಟ್ಟ ಕೊಠಡಿಯಲ್ಲಿ ಹತ್ತು ಹನ್ನೆರಡು ಹುಡುಗಿಯರು ಮಲಗುತ್ತಾರೆ. ಮೇಲೆ ಛಾವಣಿ ಒಡೆದುಹೋಗಿದೆ. ಮಳೆ ಬಂದರೆ ಕೊಠಡಿಯೊಳಗೆ ನೀರು ಹರಿಯುತ್ತದೆ. ಹಾಸ್ಟೆಲ್‌ಗೆ ನೀರು ಬರುವುದಿಲ್ಲ. ವಿದ್ಯಾರ್ಥಿನಿಯರೇ ಹೊರಗಿನಿಂದಲೇ ನೀರು ತರಬೇಕು. ತಮಗೆ ಇಡೀ ದಿನಕ್ಕೆ ಸ್ನಾನಕ್ಕೆ, ಕಕ್ಕಸ್ಸಿಗೆ, ಮುಖ ತೊಳೆಯಲು, ಬಟ್ಟೆ ಒಗೆಯಲು ಬೇಕಾಗುವ ನೀರನ್ನು ತಾವೇ ತಂದು, ತಮ್ಮ ಕೊಠಡಿಯಲ್ಲೇ ಇಟ್ಟುಕೊಳ್ಳಬೇಕು. ಹೀಗಾಗಿ ವಿದ್ಯಾರ್ಥಿನಿಯರ ಮಲಗುವ ಕೋಣೆಯಲ್ಲೇ ಕೊಡಪಾನಗಳು, ಕೈಕಾಲು ಆಡಿಸಲೂ ಅಲ್ಲಿ ಜಾಗವಿಲ್ಲ.

ಎಲ್ಲ ಕೊಠಡಿಗಳಲ್ಲೂ ಇದೇ ಕಥೆ. ಒಂದು ಕೋಣೆಯಲ್ಲಂತೂ ಛಾವಣಿ ಬಿರುಕುಬಿಟ್ಟು, ಸಿಮೆಂಟು ಆಗಾಗ ಉದುರುತ್ತಲೇ ಇರುತ್ತದೆ. ಛಾವಣಿಯೇ ಕುಸಿದು ಬಿದ್ದರೆ ಕೆಳಗೆ ಮಲಗಿದವರ ಪಾಡೇನು?

ಅಲ್ಲಿದ್ದ ವಿದ್ಯಾರ್ಥಿನಿಯರ ಮುಖಗಳನ್ನು ಗಮನಿಸಿದೆವು. ನಿರ್ಜೀವ ಕಣ್ಣುಗಳು, ಬಿಳುಚಿಕೊಂಡ ಮುಖಗಳು. ಕೈ ಕಾಲು ಅಸ್ಥಿಪಂಜರದಂತಿವೆ. ಅಪೌಷ್ಠಿಕತೆಯಿಂದ ಅವರೆಲ್ಲ ಬಳಲುತ್ತಿದ್ದಾರೆ ಎಂಬುದಕ್ಕೆ ಬೇರೆ ಸಾಕ್ಷಿಗಳು ಬೇಕಾಗಿರಲಿಲ್ಲ.

ದ್ವಾರಕಾನಾಥ್ ವಿದ್ಯಾರ್ಥಿನಿಯರನ್ನು ಅಲ್ಲಿನ ವ್ಯವಸ್ಥೆಗಳ ಬಗ್ಗೆ ಕೇಳುತ್ತಿದ್ದಂತೆ ಒಂದೊಂದೇ ಕರ್ಮಕಾಂಡಗಳು ಹೊರಬರಲಾರಂಭಿಸಿದವು. ಆ ವಿದ್ಯಾರ್ಥಿನಿಯರು ದೂರದ ಊರುಗಳಿಂದ ಬಂದವರು. ಚಿಕ್ಕಮಗಳೂರು, ಕೋಲಾರ, ಹಾಸನ, ಬೆಳಗಾವಿ, ಬೀದರ್, ಶಿವಮೊಗ್ಗ ಇತ್ಯಾದಿ ಜಿಲ್ಲೆಗಳಿಂದ ಬಂದವರು. ವೀರಶೈವ, ಒಕ್ಕಲಿಗ, ಮಡಿವಾಳ, ಉಪ್ಪಾರ, ಗಾಣಿಗ, ಮುಸ್ಲಿಂ, ಪರಿಶಿಷ್ಟ ಜಾತಿ ಇತ್ಯಾದಿ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿನಿಯರು ಅಲ್ಲಿದ್ದಾರೆ. ಡಿಎಡ್ ಓದುತ್ತಿರುವವರ ಸಂಖ್ಯೆಯೇ ಹೆಚ್ಚು. ಬಿಎಡ್, ಫಾರ್ಮಸಿ ಇತ್ಯಾದಿ ಓದಲು ಬಂದವರೂ ಇದ್ದಾರೆ. ಒಬ್ಬ ಹೆಣ್ಣು ಮಗಳು ಪಿಯುಸಿಯಲ್ಲಿ ೮೦ ಶೇ. ಅಂಕ ಪಡೆದು ಈಗ ಎಂಜಿನಿಯರಿಂಗ್ ಓದುತ್ತಿದ್ದಾಳೆ. ಎಲ್ಲರೂ ತಂತಮ್ಮ ಕಾಲೇಜುಗಳಿಗೆ ಬಹುದೂರ ಹೋಗಬೇಕು. ಹೇಳಿ ಕೇಳಿ ಹಾಸ್ಟೆಲ್ ಇರುವುದು ಕೆ.ಆರ್.ಪುರದಲ್ಲಿ. ಅಲ್ಲಿಂದ ಬೆಂಗಳೂರಿನ ಇತರ ಭಾಗಗಳಿಗೆ ಹೋಗಬೇಕೆಂದರೆ ಗಂಟೆಗಟ್ಟಲೆ ಸಮಯ ಬೇಕು. ಕಾಲೇಜು ಮುಗಿಸಿ ವಾಪಾಸು ಬಂದ ವಿದ್ಯಾರ್ಥಿನಿಯರಿಗೆ ಓದುವ ವಾತಾವರಣ ಬೇಕಲ್ಲವೆ? ಹಾಸ್ಟೆಲ್‌ನಲ್ಲಿ ಓದುವ ವಾತಾವರಣವಿರಲಿ, ಪ್ರಾಣಿಗಳೂ ವಾಸ ಮಾಡಲು ಯೋಗ್ಯವಾದ ತಾಣದಂತೆ ಕಾಣಲಿಲ್ಲ.

ವಿದ್ಯಾರ್ಥಿನಿಯರಿಗೆ ನೀಡಬೇಕಾದ ಆಹಾರದ ಬಗ್ಗೆ ಅಡುಗೆ ಮನೆಯಲ್ಲಿ ಒಂದು ಚಾರ್ಟ್ ಬರೆದು ತೂಗುಹಾಕಲಾಗಿದೆ. ಆದರೆ ಆ ಚಾರ್ಟ್‌ನಂತೆ ಊಟ ನೀಡಲಾಗುತ್ತದೆಯೆ? ಕೇಳಿದರೆ ಬರೀ ಹಾರಿಕೆಯ ಉತ್ತರ. ನಾವೇನು ಮಾಡೋದು ಸಾರ್, ಅವರು(ನಿಲಯ ಮೇಲ್ವಿಚಾರಕರು) ಕೊಟ್ಟಿದ್ದನ್ನು ನಾವು ಬೇಯಿಸಿ ಹಾಕುತ್ತೇವೆ ಎನ್ನುತ್ತಾಳೆ ಅಡುಗೆ ಸಹಾಯಕಿ. ಯಾಕೆ ಹೀಗೆ ಎಂದು ನಿಲಯ ಮೇಲ್ವಿಚಾರಕಿ(ವಾರ್ಡನ್)ಯನ್ನು ಕೇಳೋಣವೆಂದರೆ ಆಕೆ ಆಗಲೇ ಮನೆಗೆ ಹೋಗಿಯಾಗಿತ್ತು. ಕರೆಯಿಸಲು ಯತ್ನಿಸಿದರೆ ಆಕೆ ಆಗಲೇ ವೈಟ್‌ಫೀಲ್ಡ್‌ನಲ್ಲಿರುವ ತನ್ನ ಮನೆಗೆ ಹೋಗಿಯಾಗಿತ್ತು. ನನ್ನ ಕಾಲಿಗೆ ಆಪರೇಷನ್ ಆಗಿದೆ, ಬರಲು ಸಾಧ್ಯವಿಲ್ಲ ಎಂಬ ಉತ್ತರ ಆಕೆಯಿಂದ.

ಅಡುಗೆ ಕೋಣೆಯಲ್ಲಿ ಮಧ್ಯಾಹ್ನವೇ ಬೇಯಿಸಿದ ಅನ್ನ ಒಂದು ದೊಡ್ಡ ಪಾತ್ರೆಯಲ್ಲಿತ್ತು. ಅನ್ನ ಅದಾಗಲೇ ನೀರಾಡುತ್ತಿತ್ತು. ರಾತ್ರಿ ಊಟಕ್ಕೆ ಅದೇ ಅನ್ನ. ಒಂದು ಬಕೆಟ್‌ನಲ್ಲಿ ಸಾರು ಕಾಯಿಸಿ ಇಡಲಾಗಿತ್ತು. ದ್ವಾರಕಾನಾಥ್ ಅವರು ಕೈಗೆ ಒಂದಷ್ಟು ಸಾರು ಹಾಕಿಕೊಂಡು ರುಚಿ ನೋಡಿದರು. ಅವರ ಮುಖಭಾವವೇ ಸಾರಿನ ರುಚಿ ಹೇಳಿತು. ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಕೆಟ್ ಒಂದರಲ್ಲಿ ಇಡಲಾಗಿತ್ತು. ಅದರ ಮುಚ್ಚಳ ತೆರೆದು ನೋಡಿದರೆ ನೀರಿನ ಮೇಲೆ ಬಿಳೀ ಬಣ್ಣದ ಪುಡಿಯ ಒಂದು ಪರದೆಯೇ ತೇಲುತ್ತಿತ್ತು. ಆಕ್ವಾಗಾರ್ಡ್‌ನಿಂದ ನೀರು ಶುದ್ಧ ಮಾಡಿ ಕೊಡೋದಿಲ್ಲವೇ ಎಂದರೆ ಕೇಳಿದರೆ ಕೊಡ್ತೀವಿ ಎಂಬ ಉತ್ತರ. ಆದರೆ ಅಡುಗೆ ಸಹಾಯಕಿಗೆ ಅಕ್ವಾಗಾರ್ಡ್ ಉಪಕರಣವನ್ನು ಬಳಸುವುದು ಹೇಗೆ ಎಂಬುದೇ ಗೊತ್ತಿದ್ದಂತೆ ಕಾಣಲಿಲ್ಲ.

ಒಮ್ಮೆ ಹಾಸ್ಟೆಲ್‌ನ ಟಾಯ್ಲೆಟ್ ನೋಡಿ ಬರೋಣ ಎಂದರು ದ್ವಾರಕಾನಾಥ್. ಅಲ್ಲಿಗೆ ಮಾತ್ರ ಹೋಗಬೇಡಿ ಸರ್ ಎಂದು ಬೇಡಿಕೊಂಡವು ಮಕ್ಕಳು. ನಾವು ಟಾಯ್ಲೆಟ್ ಎಂಬ ಆ ನರಕವನ್ನೂ ದರ್ಶನ ಮಾಡಿದೆವು. ಅರವತ್ತೈದು ವಿದ್ಯಾರ್ಥಿನಿಯರಿಗೆ ಇರುವುದು ಒಂದೇ ಕಕ್ಕಸ್ಸು, ನೀವು ನಂಬುತ್ತೀರಾ? ಅಷ್ಟೂ ವಿದ್ಯಾರ್ಥಿನಿಯರಿಗೆ ಇರುವುದು ಒಂದೇ ಸ್ನಾನದ ಮನೆ. ಸ್ನಾನದ ಮನೆಯ ಮೇಲ್ಭಾಗದ ಗೋಡೆಯಲ್ಲಿ ದೊಡ್ಡ ತೂತು ಇದೆ. ವಿದ್ಯಾರ್ಥಿನಿಯರು ಸ್ನಾನಕ್ಕೆ ನಿಂತಾಗ ಕಟ್ಟಡದ ಹೊರಭಾಗದಿಂದ ಯಾರು ಬೇಕಾದರೂ ಅಲ್ಲಿ ಇಣುಕಿ ನೋಡಬಹುದು! ಆ ತೂತು ಮುಚ್ಚಬೇಕು ಅಂತ ನಿಮಗನ್ನಿಸಲಿಲ್ಲವೆ ಎಂದರೆ ಅಲ್ಲಿಯ ಸಿಬ್ಬಂದಿಯ ಬಳಿ ಉತ್ತರವೇ ಇಲ್ಲ.

ಅಲ್ಲಿ ಪರಿಶೀಲನೆ ನಡೆಯುತ್ತಿದ್ದ ಸಮಯದಲ್ಲಿ ಒಂದು ಹುಡುಗಿ ಕುಸಿದು ಬಿದ್ದಿದ್ದಳು. ಆಕೆಗೆ ಸೌಖ್ಯವಿಲ್ಲ. ಕನಿಷ್ಠ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಸೌಜನ್ಯವೂ ಸಿಬ್ಬಂದಿಗಿಲ್ಲ. ವಾರಕ್ಕೊಮ್ಮೆ ನರ್ಸ್ ಬಂದು ಮಕ್ಕಳನ್ನು ನೋಡುವುದಿಲ್ಲವೆ? ಎಂದು ದ್ವಾರಕಾನಾಥ್ ಕೇಳಿದರೆ ಅಂಥದ್ದೊಂದು ವ್ಯವಸ್ಥೆ ಇಲ್ಲಿ ಇಲ್ಲವೇ ಇಲ್ಲ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.
ಬೆಳೆದ ಹೆಣ್ಣುಮಕ್ಕಳಿರುವ ಹಾಸ್ಟೆಲ್‌ಗೆ ವಾರಕ್ಕೊಮ್ಮೆ ಮಹಿಳಾ ಡಾಕ್ಟರ್ ಹಾಗು ನರ್ಸ್ ಬಂದು ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ಮಾಡಬೇಕು ಎಂದು ಸರ್ಕಾರದ ನಿಯಮಗಳು ಹೇಳುತ್ತವೆಯಂತೆ. ಆದರೆ ಇಲ್ಲಿ ಅದ್ಯಾವುದೂ ಇಲ್ಲ.

ತಿನ್ನುವ ಅನ್ನದಲ್ಲಿ ಪದೇ ಪದೇ ಹುಳುಗಳು ಕಾಣಿಸಿಕೊಂಡಾಗ ವಿದ್ಯಾರ್ಥಿನಿಯರು ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಸಣ್ಣಾನಾಯ್ಕ ಎಂಬುವವರಿಗೆ ದೂರು ನೀಡಿದ್ದಾರೆ. ಆ ಅಧಿಕಾರಿ ಬಂದವರು ಎಲ್ಲವನ್ನೂ ನೋಡಿದ ಮೇಲೆ ಏನು ಹೇಳಬೇಕು? ‘ನೋಡ್ರಮ್ಮ, ಜೀವನದಲ್ಲಿ ಕಷ್ಟ ಪಡಬೇಕು. ಇವತ್ತು ಕಷ್ಟ ಪಟ್ಟರೆ ನೀವು ದೊಡ್ಡ ಮನುಷ್ಯರಾಗಲು ಸಾಧ್ಯ. ವ್ಯವಸ್ಥೆ ಇರೋದೇ ಹೀಗೆ. ಅಡ್ಜಸ್ಟ್ ಮಾಡಿಕೊಂಡು ಹೋಗಿ ಎಂದು ಆ ಮನುಷ್ಯ ಹೇಳಿದರಂತೆ. ನಮ್ಮ ಸಮಸ್ಯೆ ಹೇಳಿಕೊಂಡರೆ ನಮಗೆ ಹೀಗೆ ನೈತಿಕ ಪಾಠ ಹೇಳುತ್ತಾರೆ ಸರ್ ಎನ್ನುತ್ತಾರೆ ಆ ಹೆಣ್ಣುಮಕ್ಕಳು.

ಎಲ್ಲ ಹೋಗಲಿ ವಯಸ್ಸಿನ ಹೆಣ್ಣುಮಕ್ಕಳಿರುವ ಹಾಸ್ಟೆಲ್‌ಗೆ ಒಬ್ಬ ಸರಿಯಾದ ಕಾವಲುಗಾರನಾದರೂ ಇದ್ದಾನಾ ಅಂದರೆ ಅದೂ ಸಹ ಇಲ್ಲ. ಕಾವಲುಗಾರನಿಗೆ ವಯಸ್ಸಾಗಿದೆ, ಖಾಯಿಲೆ ಬಿದ್ದಂತೆ ಕಾಣುತ್ತಾನೆ. ವಿದ್ಯಾರ್ಥಿನಿಯರು ಹೇಳುವ ಪ್ರಕಾರ ಆಗಾಗ ಅವನೇ ಕುಸಿದು ಬಿದ್ದು, ಮೂರ್ಛೆ ಹೋಗುತ್ತಾನೆ. ಅವನನ್ನೇ ವಿದ್ಯಾರ್ಥಿನಿಯರು ಉಪಚರಿಸಬೇಕು! ಯಾರಾದರೂ ಈ ಹೆಣ್ಣಮಕ್ಕಳ ಹಾಸ್ಟೆಲ್‌ಗೆ ಅನಧಿಕೃತ ಪ್ರವೇಶ ಮಾಡಿದರೆ ತಡೆಯುವವರ್‍ಯಾರು? ಯಾರ ಬಳಿಯೂ ಉತ್ತರವಿಲ್ಲ.

ದ್ವಾರಕಾನಾಥ್ ಆ ಹೆಣ್ಣುಮಕ್ಕಳನ್ನು ಎದುರಿಗೆ ನಿಲ್ಲಿಸಿಕೊಂಡೇ ರಾಮಕೃಷ್ಣ ಎಂಬ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘ಅಲ್ರೀ ಈ ಮಕ್ಕಳನ್ನು ನೋಡಿಕೊಳ್ಳಲೆಂದೇ ನಿಮಗೆ ಸಂಬಳ ಕೊಡೋದಲ್ವಾ? ಅದಕ್ಕಾಗಿಯೇ ನನಗೂ ಸಂಬಳ ಕೊಡೋದಲ್ವಾ? ಅಕ್ಕಿಯಲ್ಲಿ ಹುಳು ಇದೆ ಅಂತ ಗೊತ್ತಿದ್ರೂ ನಿಮ್ಮ ಮನೆಯಲ್ಲಿ ಮಕ್ಕಳಿಗೆ ಅದನ್ನೇ ಅನ್ನ ಮಾಡಿ ತಿನ್ನಿಸುತ್ತೀರಾ? ಈ ಮಕ್ಕಳಿಗೆ ಕೊಡಬೇಕಾದ್ದನ್ನು ಕೊಡದೆ ಕಷ್ಟ ಅನುಭವಿಸಿ ಅಂತ ಹೇಳೋದಕ್ಕೆ ನಿಮಗೆ ನಾಚಿಕೆ ಆಗೋದಿಲ್ವೆ? ಎಂದು ಅವರು ಹೇಳುತ್ತಿದ್ದರೆ ಆ ಅಧಿಕಾರಿ ಯಥಾಪ್ರಕಾರ ನಿರುತ್ತರ.

ಜಿಲ್ಲಾ ಅಧಿಕಾರಿ, ತಾಲ್ಲೂಕು ಅಧಿಕಾರಿ ಹಾಗು ಮೇಲ್ವಿಚಾರಕರಿಗೆ ಸಮನ್ಸ್ ಜಾರಿ ಮಾಡಿ ಎಂದು ದ್ವಾರಕಾನಾಥ್ ಆಯೋಗದ ಅಧಿಕಾರಿಗಳಿಗೆ ಆದೇಶ ನೀಡುತ್ತಲೇ, ಕೂಡಲೇ ಬೇರೆ ಕಟ್ಟಡವನ್ನು ನೋಡಿ ನನಗೆ ರಿಪೋರ್ಟ್ ಮಾಡಿ ಎಂದು ತಾಲ್ಲೂಕು ಅಧಿಕಾರಿಗೆ ಸೂಚನೆ ನೀಡಿದರು. ನನಗೆ ದೂರು ನೀಡಿದ ಕಾರಣಕ್ಕೆ ಯಾವ ಅಧಿಕಾರಿಯಾದರೂ ತೊಂದರೆ ಕೊಟ್ಟರೆ ತಕ್ಷಣ ನನಗೆ ಫೋನ್ ಮಾಡಿ ಎಂದು ತಮ್ಮ ನಂಬರ್ ಕೊಟ್ಟರು.

****************

ಈ ಎಲ್ಲ ಹೆಣ್ಣುಮಕ್ಕಳು ಬದುಕಿನ ಅನಿವಾರ್ಯತೆಗಾಗಿ ಓದಲು ಬಂದವರು. ಎಲ್ಲರೂ ಬಡಕುಟುಂಬಗಳಿಂದ ಬಂದವರು. ಓದಿ, ಕೆಲಸ ಸೇರಿ ತಮ್ಮ ಕುಟುಂಬ ಸಾಕುವ ಹೊಣೆಗಾರಿಕೆ ಹೊತ್ತವರು.

ಕಾಲೇಜು ಮುಗಿಸಿ ಬಂದು ಈ ದರಿದ್ರ ಹಾಸ್ಟೆಲ್‌ನಲ್ಲಿ ಈ ಮಕ್ಕಳು ಹೇಗೆ ಓದುತ್ತವೆ? ಓದಿದ್ದು ತಲೆಗೆ ಹಿಡಿಯುತ್ತಾ? ಪರೀಕ್ಷೆಗಳಲ್ಲಿ ಒಳ್ಳೆ ಫಲಿತಾಂಶ ನಿರೀಕ್ಷೆ ಮಾಡುವುದು ಹೇಗೆ? ಫೇಲಾದರೆ ಈ ಮಕ್ಕಳ ಗತಿಯೇನು? ಅವರನ್ನು ನಂಬಿಕೊಂಡ ಅಸಹಾಯಕ ಪೋಷಕರ ಗತಿಯೇನು? ಫೇಲಾಗುವುದಿರಲಿ, ಒಂದು ವೇಳೆ ಪರೀಕ್ಷೆಗಳಲ್ಲಿ ಕಡಿಮೆ ಅಂಕ ತೆಗೆದುಕೊಂಡರೆ ನಮ್ಮ ಸರ್ಕಾರೀ ವ್ಯವಸ್ಥೆ ಇವರನ್ನು ನಿರ್ದಯವಾಗಿ ಹಾಸ್ಟೆಲ್‌ನಿಂದ ಹೊರಗಟ್ಟುತ್ತದೆ. ಇದು ಯಾವ ನಾಗರಿಕತೆ?

ಈ ಮಕ್ಕಳು ಈಗಲೇ ಅನೀಮಿಕ್ ಆಗಿವೆ. ೬೫ಜನ ಒಂದೇ ಟಾಯ್ಲೆಟ್ ಉಪಯೋಗಿಸಿದರೆ ಆಗುವ ಇನ್ಫೆಕ್ಷನ್ ಬಗ್ಗೆ ಹೇಳುವುದೇನು ಬೇಕಾಗಿಲ್ಲ. ಗರ್ಭಕೋಶದ ಟ್ಯುಬರ್‌ಕ್ಯುಲೋಸಿಸ್ (ಟಿಬಿ)ನಂಥ ಖಾಯಿಲೆ ಒಬ್ಬಳಿಗೆ ಒಕ್ಕರಿಸಿದರೂ ಎಲ್ಲ ಮಕ್ಕಳಿಗೂ ಅದು ಉಚಿತವಾಗಿ ಹರಿದು ಬರುತ್ತದೆ. ಹಾಗೇನಾದರೂ ಆದರೆ ಈ ಹೆಣ್ಣುಮಕ್ಕಳು ಮುಂದೆ ಮಕ್ಕಳನ್ನು ಹಡೆಯುವ ಶಕ್ತಿಯನ್ನೂ ಕಳೆದುಕೊಳ್ಳುತ್ತವೆ.

ಇದನ್ನೆಲ್ಲ ಯಾರಿಗೆ ಹೇಳುವುದು? ಯಾರು ಇವರ ಪರವಾಗಿ ಹೋರಾಟ ಮಾಡುತ್ತಾರೆ? ಯಾವ ತಪ್ಪಿಗಾಗಿ ಈ ಮಕ್ಕಳಿಗೆ ಈ ಶಿಕ್ಷೆ?

ನಿನ್ನೆ ಸಂಜೆ ಇದೆಲ್ಲವನ್ನೂ ನೋಡಿ ಬಂದ ನಂತರ ಮನಸ್ಸಿಗೆ ಒಂಥರಾ ಕಿರಿಕಿರಿ, ಸಂಕಟ. ಈ ಸಂಕಟದಲ್ಲೇ ಇಷ್ಟನ್ನು ಬರೆದಿದ್ದೇನೆ. ನಿಮಗೂ ಏನಾದರೂ ಅನ್ನಿಸಿದರೆ ಒಂದು ಪ್ರತಿಕ್ರಿಯೆ ಬರೆಯಿರಿ.

Friday, September 26, 2008

ಧರ್ಮ-ರಾಜಕಾರಣದ ಅನೈತಿಕ ಕೂಡಿಕೆ, ಇತ್ಯಾದಿ....

೧೯೫೩ರಲ್ಲಿ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಕಾಶಿ ದೇವಸ್ಥಾನದ ಆವರಣದಲ್ಲಿ, ಸಾರ್ವಜನಿಕವಾಗಿ ಇನ್ನೂರು ಮಂದಿ ಬ್ರಾಹ್ಮಣರ ಪಾದ ತೊಳೆದಿದ್ದರು. ಬಹುಶಃ ಈ ಘಟನೆಯನ್ನು ಡಾ.ರಾಮ್ ಮನೋಹರ್ ಲೋಹಿಯಾ ಅವರು ಟೀಕೆಗೆ ಒಳಪಡಿಸದೆ ಇದ್ದಿದ್ದರೆ ಇದೂ ಸಹ ಗೌರವಾನ್ವಿತ ರಾಷ್ಟ್ರಾಧ್ಯಕ್ಷರ ಕಾರ್ಯಕ್ರಮ ವೇಳಾಪಟ್ಟಿಯ ಒಂದು ಅಂಶವಾಗಿ ದಾಖಲಾಗಿರುತ್ತಿತ್ತು, ಅಷ್ಟೆ.

ಆದರೆ ಇಡೀ ದೇಶ ಸುಮ್ಮನಿದ್ದರೂ ಲೋಹಿಯಾ ಸುಮ್ಮನಿರಲಿಲ್ಲ. ಭಾರತದ ರಾಷ್ಟ್ರಾಧ್ಯಕ್ಷನೊಬ್ಬನು ಇನ್ನೂರು ಬ್ರಾಹ್ಮಣರ ಕಾಲುಗಳನ್ನು ಕಾಶಿ ಪುಣ್ಯ ಕ್ಷೇತ್ರದಲ್ಲಿ ತೊಳೆದನು. ಒಬ್ಬನ ಕಾಲನ್ನು ಇನ್ನೊಬ್ಬನು ಸಾರ್ವಜನಿಕವಾಗಿ ತೊಳೆಯುವುದು ನೀಚಕೆಲಸ ಮತ್ತು ಈ ಕಾಲು ತೊಳೆಸಿಕೊಳ್ಳುವ ನೀಚ ಸೌಲಭ್ಯವನ್ನು ಬ್ರಾಹ್ಮಣ ಜಾತಿಯೊಂದಕ್ಕೇ ಕೊಡುವುದು ಶಿಕ್ಷಾರ್ಹವಾದ ಅಪರಾಧ ಎಂದು ಲೋಹಿಯಾ ಅಬ್ಬರಿಸಿದ್ದರು.

ಲೋಹಿಯಾ ಅಷ್ಟಕ್ಕೆ ಸುಮ್ಮನಿರದೆ ಒಂದು ದೇಶದ ಅಧ್ಯಕ್ಷನು ಬ್ರಾಹ್ಮಣರ ಕಾಲುಗಳನ್ನು ತೊಳೆಯುತ್ತಿರಬೇಕಾದರೆ ಆ ದೇಶದ ಚಮ್ಮಾರನ, ಪೂಜಾರಿಯ, ಉಪಾಧ್ಯಾಯನ, ರೈತನ ನಡುವೆ ಸಹಜವಾದ ಸಂಭಾಷಣೆಯೇ ನಡೆಯಲಾಗದು. ದೇಶದ ಅಧ್ಯಕ್ಷ ಸ್ಥಾನದಲ್ಲಿರುವವನ ಬಗ್ಗೆ ಯಾರು ಬೇಕಾದರೂ ಭಿನ್ನಾಭಿಪ್ರಾಯ ಇಟ್ಟುಕೊಂಡಿರಬಹುದು. ಆದರೆ ಹಾಗೆ ಭಿನ್ನಾಭಿಪ್ರಾಯ ಇಟ್ಟುಕೊಂಡವನೂ ದೇಶದ ಅಧ್ಯಕ್ಷನನ್ನು ಗೌರವಿಸಬಯಸುತ್ತಾನೆ. ಆದರೆ ಅಂಥದೊಂದು ಗೌರವಕ್ಕೆ ಪಾತ್ರನಾಗಬೇಕಾದರೆ ಅಧ್ಯಕ್ಷನಾದವನು ಕನಿಷ್ಠ ನಾಗರಿಕ ನಡವಳಿಕೆಯನ್ನಾದರೂ ರೂಢಿಸಿಕೊಳ್ಳಬೇಕು ಎಂದು ಸಿಟ್ಟಿನಿಂದ ನುಡಿದಿದ್ದರು.

ತಮಾಶೆಯೆಂದರೆ ಈ ಕಾಲು ತೊಳೆಸಿಕೊಂಡ ಪುರಾಣವು ಲೋಹಿಯಾ ಅವರಿಗೆ ಗೊತ್ತಾಗಿದ್ದೇ ಒಬ್ಬ ಬ್ರಾಹ್ಮಣನಿಂದ. ಈ ಬ್ರಾಹ್ಮಣನೂ ರಾಜೇಂದ್ರ ಪ್ರಸಾದ್ ಅವರಿದ ಕಾಲು ತೊಳೆಸಿಕೊಳ್ಳಬೇಕಾದವನೇ ಆಗಿದ್ದು ಮತ್ತೊಂದು ವಿಶೇಷ. ರಾಷ್ಟ್ರಾಧ್ಯಕ್ಷನು ಕೆಲಕ್ಷಣಗಳಲ್ಲಿ ತನ್ನ ಪಾದವನ್ನು ತೊಳೆಯಲಿದ್ದಾನೆ ಎಂಬುದು ಗೊತ್ತಾಗುತ್ತಿದ್ದಂತೆ ಈ ಬ್ರಾಹ್ಮಣ ಅಲ್ಲಿಂದ ಪಲಾಯನ ಮಾಡಿದ್ದನು. ಆದರೆ ಆತನ ಸ್ಥಾನವನ್ನು ಮತ್ತೊಬ್ಬ ಬ್ರಾಹ್ಮಣನಿಂದ ಭರ್ತಿ ಮಾಡಲಾಗಿತ್ತು. ಲೋಹಿಯಾ ಪ್ರಕಾರ ಈ ನೀಚಕೃತ್ಯವು ಪಲಾಯನ ಮಾಡಿದ ಬ್ರಾಹ್ಮಣನಿಗೆ ಭೀಕರ, ಅಸಹನೀಯ ಅನಿಸಿದ್ದರಿಂದ ಆತ ಅಲ್ಲಿಂದ ಕಾಲ್ತೆಗೆದಿದ್ದ.

ಅದಕ್ಕಾಗಿ ಲೋಹಿಯಾ ಈ ಬ್ರಾಹ್ಮಣನ ಕುರಿತು ಹೀಗೆ ಬರೆಯುತ್ತಾರೆ: ನಾನು ಈ ಬಡ ಸಂಸ್ಕೃತ ಉಪಾಧ್ಯಾಯನನ್ನು ಎಂದೆಂದಿಗೂ ನೆನೆಯುತ್ತಿರುತ್ತೇನೆ. ಆ ವಿಕಟವಾದ ಪ್ರೇತ ಸಮಾರಂಭದಲ್ಲಿ ಈತನೊಬ್ಬನೇ ಮನುಷ್ಯ. ಇಂಥ ಒಂದೆರಡು ಸ್ತ್ರೀ ಪುರುಷರಿಂದಲೇ ಇಡೀ ದೇಶವೆಲ್ಲಾ ಈಗ ದಕ್ಷಿಣದಲ್ಲಿ ಉಲ್ಬಣಗೊಳ್ಳುತ್ತಿರುವ ಬ್ರಾಹ್ಮಣದ್ವೇಷ ಮನೋಭಾವ ಹಬ್ಬದಂತೆ ತಡೆದಿರುವುದು.

********************

ಒಬ್ಬನು ಮತ್ತೊಬ್ಬನ ಕಾಲನ್ನು ಅವನು ಬ್ರಾಹ್ಮಣ ಎನ್ನುವ ಆಧಾರದಿಂದ ತೊಳೆಯುವುದು ಜಾತಿಪದ್ಧತಿಯ ಮುಂದುವರಿಕೆಗೆ ಆಶ್ವಾಸನೆ ಕೊಟ್ಟಂತೆ. ದಾರಿದ್ರ್ಯವನ್ನು ದುಃಖವನ್ನು ಪುನರಾವೃತ್ತಿ ಮಾಡಿದಂತೆ. ಈ ರೀತಿಯ ನೀಚ ಕೆಲಸಗಳಲ್ಲಿ ತೊಡಗಿದವರ ಚೈತನ್ಯಗಳು ಎಂದೆಂದೂ ಈ ದೇಶದ ಒಳಿತನ್ನೇ ಆಗಲಿ, ಸಾಹಸದ ಆನಂದವನ್ನೇ ಆಗಲಿ ರೂಪಿಸಲಾರವು ಎಂದು ಲೋಹಿಯಾ ಭಾವಿಸಿದ್ದರು.

ಕರ್ನಾಟಕದ ರಾಜಕೀಯವು ಇಂದು ಮಠ-ಮಾನ್ಯಗಳ ಅಂಕೆಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಲೋಹಿಯಾ ಅವರ ಮಾತುಗಳನ್ನು ಚರ್ಚಿಸಬೇಕಾದ ಅಗತ್ಯವಿದೆ ಎಂದೆನಿಸುತ್ತದೆ. ಕರ್ನಾಟಕದ ಮಟ್ಟಿಗೆ ಬ್ರಾಹ್ಮಣರು ಮಾತ್ರ ಪುರೋಹಿತಶಾಹಿ ವ್ಯವಸ್ಥೆಯ ಪ್ರತಿರೂಪಗಳಾಗಿ ಕಾಣುತ್ತಿಲ್ಲ. ೧೨ನೇ ಶತಮಾನದ ಕ್ರಾಂತಿಪುರುಷ ಬಸವಣ್ಣನವರ ನೆರಳಿನಲ್ಲಿ ಮಠಮಾನ್ಯಗಳನ್ನು ರೂಪಿಸಿಕೊಂಡವರೂ ಸಹ ಇದೇ ವ್ಯವಸ್ಥೆಯ ಪ್ರತಿನಿಧಿಗಳಾಗಿ ಕಾಣುತ್ತಿದ್ದಾರೆ. ಕರ್ನಾಟಕದ ಚರ್ಚುಗಳ ಮೇಲೆ ಭಾರತೀಯ ಜನತಾ ಪಾರ್ಟಿ ಕೃಪಾಪೋಷಿತ ಭಜರಂಗಿಗಳು ದಾಳಿ ನಡೆಸುತ್ತಿದ್ದಂತೆ ಧರ್ಮ-ಜಾತಿಯ ಕುರಿತಾದ ಚರ್ಚೆಗಳು ಮತ್ತೆ ಆರಂಭವಾಗಿವೆ. ಲೋಹಿಯಾ ರೂಪಿಸಿಕೊಂಡ ಬಹುತೇಕ ವೀರಶೈವ ಮಠಾಧೀಶರಾದಿಯಾಗಿ ಪ್ರಬಲ ಕೋಮುಗಳ ಧರ್ಮಗುರುಗಳೆಲ್ಲ ‘ಕಾಲು ತೊಳೆಸಿಕೊಳ್ಳುವ ಪರಂಪರೆಗೆ ಸೇರಿದ್ದಾರೆ. ನಮ್ಮ ಅಧಿಕಾರಸ್ಥ ರಾಜಕಾರಣಿಗಳು ಈ ಮಠಾಧೀಶರ ಅಡಿದಾವರೆಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ.

ರಾಜ್ಯದಲ್ಲಿ ಇವತ್ತು ಬಿಜೆಪಿ ಅಧಿಕಾರದಲ್ಲಿದೆ. ಧರ್ಮ ಆಧಾರಿತ ರಾಜಕಾರಣ ನಡೆಸಿಯೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ವಿಫಲವಾಗಿತ್ತು. ನಂತರ ತನ್ನ ಧೋರಣೆಯಲ್ಲಿ ಮಾರ್ಪಾಡು ಮಾಡಿಕೊಂಡು ಜಾತಿ ಆಧಾರದ ರಾಜಕಾರಣವನ್ನು ನೆಚ್ಚಿಕೊಂಡ ಪರಿಣಾಮವಾಗಿಯೇ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬಂದಿದೆ. ಎಚ್.ಡಿ.ಕುಮಾರಸ್ವಾಮಿಯವರು ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದ ಪರಿಣಾಮವಾಗಿ ಇಡೀ ಲಿಂಗಾಯಿತ ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಲಾಯಿತು. ಈ ಕಾರ್ಯದ ನೇತೃತ್ವ ವಹಿಸಿಕೊಂಡವರು ವೀರಶೈವ ಮಠಾಧೀಶರು ಎಂಬುದು ರಹಸ್ಯವೇನಲ್ಲ. ಮಠಾಧೀಶರು ಎಲ್ಲೆಡೆ ಬೀದಿಗಿಳಿದು ಹೋರಾಟ ಮಾಡಿದರು. ಕೆಲವೆಡೆ ಮಠಾಧೀಶರು ಈ ಬೀದಿಹೋರಾಟದಲ್ಲಿ ಪಾಲ್ಗೊಳ್ಳದಿದ್ದರೂ, ಆ ಹೋರಾಟಗಳ ಪ್ರಾಯೋಜಕರು ಅವರೇ ಆಗಿದ್ದರು. ನಂತರ ಬಂದ ಚುನಾವಣೆಗಳಲ್ಲಿ ವೀರಶೈವರು ಬಿಜೆಪಿಯನ್ನು ಬೆಂಬಲಿಸಿದ್ದರಿಂದ ಆ ಪಕ್ಷ ಸುಲಭವಾಗಿ ಅಧಿಕಾರಗ್ರಹಣ ಮಾಡಿತು.

ಕಾಂಗ್ರೆಸ್ ಪಕ್ಷದಲ್ಲಿ ವೀರಶೈವ ಸಮುದಾಯದ ಪ್ರಬಲ ನಾಯಕರು ಇಲ್ಲವಾಗಿದ್ದರು. ಜೆಡಿಎಸ್ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡು ವೀರಶೈವರನ್ನು ಎದುರುಹಾಕಿಕೊಂಡಿತ್ತು. ಯಾವತ್ತೂ ಕೋಮುವಾದಿ ಶಕ್ತಿಗಳೊಂದಿಗೆ ಗುರುತಿಸಿಕೊಳ್ಳದ, ಬಸವಣ್ಣನ ಆದರ್ಶಗಳ ಬಗ್ಗೆ ಇವತ್ತಿಗೂ ಗೌರವ ಕಾಪಾಡಿಕೊಂಡಿರುವ ವೀರಶೈವ ಜನಸಮೂಹ ಬೇರೆ ಪರ್ಯಾಯಗಳಿಲ್ಲದೆ ಬಿಜೆಪಿಯನ್ನೇ ಬೆಂಬಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ಮತ್ತೊಂದು ದುರಂತ.

********************

ಸದ್ಯ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರ ಹಲವು ವೀರಶೈವ ಮಠಾಧೀಶರ ಸರ್ಕಾರ. ಮತ್ತೊಂದೆಡೆ ಬಿಜೆಪಿಯನ್ನು ನಿಯಂತ್ರಿಸುವ ಸಂಘ ಪರಿವಾರದ ಸರ್ಕಾರ. ಸಂಘಪರಿವಾರ ಎಂದರೆ ಅದರೊಳಗೆ ಪೇಜಾವರ ಶ್ರೀಗಳಂಥವರು, ರಾಘವೇಶ್ವರ ಭಾರತಿಯಂಥವರು, ರವಿಶಂಕರ ಗುರೂಜಿಯಂಥವರು ಸೇರುತ್ತಾರೆ. ಒಂದೆಡೆ ಬ್ರಾಹ್ಮಣ ಮಠಗಳು ಹಾಗು ಮನುವಾದಿ ಮನಸ್ಥಿತಿಯ ಒಂದು ವರ್ಗ ಮತ್ತೊಂದೆಡೆ ಬ್ರಾಹ್ಮಣ್ಯವನ್ನು ಆವಾಹಿಸಿಕೊಂಡಿರುವ ವೀರಶೈವ ಮಠಾಧೀಶರು ಇಂದಿನ ಸರ್ಕಾರವನ್ನು ನಿರ್ದೇಶಿಸುತ್ತಿದ್ದಾರೆ.

ಆ ಕಾರಣದಿಂದಲೇ ಗೋಕರ್ಣ ಕ್ಷೇತ್ರವನ್ನು ರಾಜ್ಯ ಸರ್ಕಾರ ಸಾರಾಸಗಟಾಗಿ ‘ಆಧುನಿಕ ಗೋ ಸಂರಕ್ಷಕ ಅಬ್ರಾಹ್ಮಣರನ್ನು ಅಯೋಗ್ಯರೆಂದೇ ಭಾವಿಸುವ ರಾಘವೇಶ್ವರ ಭಾರತಿಯ ಅಡಿದಾವರೆಗೆ ಅರ್ಪಿಸುತ್ತದೆ. ಚರ್ಚ್‌ಗಳ ಮೇಲೆ ಮೇಲಿಂದ ಮೇಲೆ ಭಜರಂಗದಳದ ಭಯೋತ್ಪಾದಕರು ದಾಳಿ ನಡೆಸಿದರೂ ಮುಖ್ಯಮಂತ್ರಿ ಈ ದುಷ್ಕೃತ್ಯಗಳನ್ನು ಖಂಡಿಸುವ ಗೋಜಿಗೂ ಹೋಗುವುದಿಲ್ಲ. ಬದಲಾಗಿ ಮತಾಂತರದ ವಿರುದ್ಧ ಪುಂಖಾನುಪುಂಖ ಹೇಳಿಕೆ ನೀಡುತ್ತಾರೆ. ಎಲ್ಲಿ ‘ಕೇಶವಶಿಲ್ಪದವರು ಬೇಜಾರು ಮಾಡಿಕೊಂಡಾರೋ ಎಂಬ ಆತಂಕ ಯಡಿಯೂರಪ್ಪನವರದು. ತಾನು ಕುಳಿತಿರುವ ಜಾಗದಲ್ಲಿ ಸಾಂವಿಧಾನಿಕ ಕಟ್ಟಳೆಗಳನ್ನು ಪಾಲಿಸಬೇಕಾಗುತ್ತದೆ ಎಂಬುದನ್ನೂ ಯಡಿಯೂರಪ್ಪ ಮರೆತು ಕುಳಿತಿದ್ದರು.

ಗೋಕರ್ಣವನ್ನು ರಾಘವೇಶ್ವರರಿಗೆ ಒಪ್ಪಿಸಿದ ಹಾಗೆ ಬೇರೆ ಮಠಾಧೀಶರಿಗೆ ಯಾವ ಯಾವ ಕೊಡುಗೆಗಳನ್ನು ಯಡಿಯೂರಪ್ಪ ಕೊಟ್ಟಿದ್ದಾರೋ ಅದೆಲ್ಲವೂ ಕಾಲ ಕಳೆದಂತೆ ಸಾರ್ವಜನಿಕವಾಗುತ್ತದೆ. ಅದಕ್ಕೆ ಹೆಚ್ಚು ಸಮಯ ಬೇಕಾಗಿಲ್ಲ.

ಚುನಾವಣೆ ಕಳೆದ ಮೇಲೆ ಯಡಿಯೂರಪ್ಪ ಮೇಲಿಂದ ಮೇಲೆ ದೇವಸ್ಥಾನ, ಮಠಗಳನ್ನು ಸುತ್ತಿ ಬಂದರು. ಎಲ್ಲೆಡೆ ಸಾರ್ವಜನಿಕವಾಗಿ ಮಠಾಧೀಶರ ಪಾದಗಳಿಗೆ ಎರಗಿದರು. ತಮ್ಮ ಮನೆಯಲ್ಲಷ್ಟೇ ಅಲ್ಲದೆ ಕಛೇರಿಯಲ್ಲೂ ಹೋಮ-ಹವನಗಳನ್ನು ನಡೆಸಿದರು. ವಿಧಾನಸೌಧದದಲ್ಲಿ ಹೋಮ-ಹವನದ ಘಾಟು ಹಿಂದೆಂದಿಗಿಂತಲೂ ಭೀಕರವಾಗಿ ಹಬ್ಬಿತು. ಎಲ್ಲೋ ಒಂದಷ್ಟು ಪ್ರಗತಿಪರರು ಇದನ್ನು ಟೀಕಿಸಿದರಾದರೂ ಈ ಧ್ವನಿ ಅಷ್ಟು ಪ್ರಬಲವಾಗಿರಲಿಲ್ಲ.

ದುರಂತವೆಂದರೆ ಸರ್ಕಾರದ ಅಧಿಕಾರಕೇಂದ್ರದಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಒಂದು ಧರ್ಮಕ್ಕೆ ಸೇರಿದ ಆಚರಣೆಗಳು ಸಾಂಗೋಪಾಂಗವಾಗಿ ನಡೆಯುತ್ತಿದ್ದರೂ ಅದನ್ನು ಟೀಕಿಸುವ ಧೈರ್ಯವೂ ಪ್ರತಿಪಕ್ಷಗಳಿಗೆ ಇರಲಿಲ್ಲ. ಯಾಕೆಂದರೆ ಅವರೆಲ್ಲರೂ ಸಹ ಈ ಮಠಾಧೀಶರ ಕಾಲುಗಳಿಗೆ ಕಾಲಕಾಲಕ್ಕೆ ಎರಗುತ್ತ ಬಂದವರೇ. ಮೊನ್ನೆ ಮೊನ್ನೆ ತಾನೇ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಕವಚವನ್ನು ಕೊಟ್ಟು ಬಂದಿದ್ದಾರೆ. ಅಲ್ಲಿನ ಪೂಜಾರಿಯ ಕಾಲುಗಳಿಗೆ ಆಗಾಗ ಬೀಳುವ ಧರ್ಮಸಿಂಗ್ ತಾವು ಅಧಿಕಾರದಲ್ಲಿದ್ದಾಗ ಈ ಯಕಶ್ಚಿತ್ ಪೂಜಾರಿಗೂ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಪುಣ್ಯ ಕಟ್ಟಿಕೊಂಡಿದ್ದರು.

ಈಗ ಮಠ-ಮಠಾಧೀಶರನ್ನು ತೀಕ್ಷ್ಣವಾಗಿ ಟೀಕಿಸುತ್ತಿರುವ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸಹ ತಮ್ಮ ಅಧಿಕಾರಾವಧಿಯಲ್ಲಿ ಸಿಕ್ಕ ಸಿಕ್ಕ ಮಠಗಳಿಗೂ ಹೋಗಿ ಧರ್ಮಗುರುಗಳ ಪಾದಕ್ಕೆ ಎರಗಿ ಬಂದವರೇ. ರಾಘವೇಶ್ವರ ಸ್ವಾಮಿಯ ಮಠದಲ್ಲಿ ಅಸಹ್ಯವಾಗಿ ಬಟ್ಟೆ ಬಿಚ್ಚಿಕೊಂಡು ಹೋಮ-ಹವನದಲ್ಲಿ ಪಾಲ್ಗೊಂಡಿದ್ದನ್ನು ಬಹಳ ಜನ ಮರೆತಿಲ್ಲವೆಂದು ಭಾವಿಸುತ್ತೇನೆ. ಇದೇ ಕುಮಾರಸ್ವಾಮಿಯವರು ಪಕ್ಷದ ಕಾರ್‍ಯಾಧ್ಯಕ್ಷರಾಗಿ ನೇಮಕವಾದಾಗ ಇವರ ‘ಜಾತ್ಯತೀತ ಪಕ್ಷದ ಕಛೇರಿಯಲ್ಲೂ ಹೋಮ-ಹವನದ ಘಾಟು ಸುತ್ತಿಕೊಂಡಿದ್ದನ್ನೂ ಸ್ಮರಿಸಿಕೊಳ್ಳಬೇಕಾಗುತ್ತದೆ. ಹಿಂದುಳಿದ ವರ್ಗಗಳ ಮುಖಂಡ ಸಿದ್ಧರಾಮಯ್ಯನವರೂ ಸಹ ಗಿಳಿ ಶಾಸ್ತ್ರ ಹೇಳುವ ಸೋಮಯಾಜಿ ಎಂಬ ಜ್ಯೋತಿಷಿಯ ಬಳಿಗೆ ಕದ್ದುಮುಚ್ಚಿ ಹೋಗಿ ಬಂದಿದ್ದರು.

ಮಲ್ಲಿಕಾರ್ಜುನ ಖರ್ಗೆಯಂಥವರನ್ನು ಹೊರತುಪಡಿಸಿದರೆ ಬಹುತೇಕ ರಾಜಕಾರಣಿಗಳು ಮಠಾಧೀಶರ ಕಾಲುಗಳಿಗೆ ಸಾರ್ವಜನಿಕವಾಗಿ ಬಿದ್ದವರೇ ಹೌದು. ಹೀಗಾಗಿ ಬಿಜೆಪಿಯ ಮಠಭಕ್ತಿಯನ್ನು ಅಥವಾ ಮಠಾಧೀಶರ ರಾಜಕಾರಣವನ್ನು ವಿರೋಧಿಸುವ ನೈತಿಕತೆ ಬಹಳಷ್ಟು ಜನರಿಗೆ ಇಲ್ಲ.

****************

ಇತ್ತೀಚಿನ ದಿನಗಳಲ್ಲಿ ಮಠಗಳು ರಾಜ್ಯ ರಾಜಕಾರಣದಲ್ಲಿ ಆಡುತ್ತಿರುವ ಚದುರಂಗದಾಟ ಈಗ ಉತ್ತುಂಗ ತಲುಪಿದೆ. ಹಿಂದೆ ತಮ್ಮ ಮಠದ ಅಭಿವೃದ್ಧಿ, ಕಟ್ಟಡಕ್ಕೆ ಕಾಸು, ಇಂಜಿನಿಯರಿಂಗ್-ಮೆಡಿಕಲ್ ಕಾಲೇಜುಗಳಿಗೆ ಪರವಾನಿಗೆ ಇತ್ಯಾದಿಗಳಿಗೆ ಮಾತ್ರ ಮಠಗಳು ರಾಜಕಾರಣಿಗಳನ್ನು ಆಶ್ರಯಿಸುತ್ತಿದ್ದವು. ಆದರೆ ಈಗೀಗ ಮಠಗಳು ಈಗೀಗ ನೇರ ರಾಜಕಾರಣಕ್ಕೆ ಇಳಿದಿವೆ.

ಇವತ್ತು ಮಠಗಳು ಚುನಾವಣೆ ಸಂದರ್ಭದಲ್ಲಿ ತಮಗೂ ಇಂತಿಷ್ಟು ಸೀಟು ಕೊಡಿ ಎಂದು ನಿರ್ಲಜ್ಜವಾಗಿ ಕೇಳುವ ಹಂತ ತಲುಪಿವೆ. ಇಂಥವನನ್ನೇ ಮಂತ್ರಿ ಮಾಡಿ ಎಂದು ಮಠಗಳು ಹೇಳುತ್ತವೆ. ಇಂಥವನನ್ನು ಮಾಡಬೇಡಿ ಎಂದೂ ಸಹ ಹೇಳುತ್ತವೆ. ಅಧಿಕಾರಿಗಳು ವರ್ಗಾವಣೆಗಾಗಿ ಈಗೀಗ ರಾಜಕಾರಣಿಗಳನ್ನು ಆಶ್ರಯಿಸುವುದಕ್ಕಿಂತ ಮಠಗಳನ್ನು ಆಶ್ರಯಿಸುವುದು ಉಚಿತವೆಂದು ಭಾವಿಸುತ್ತಿದ್ದಾರೆ. ಯಾಕೆಂದರೆ ಮಠಾಧೀಶರ ಮೂಲಕ ಹೋದರೆ ಕೆಲಸ ಸಲೀಸಾಗಿ ಆಗುತ್ತವೆ ಎಂಬುದು ಅವರ ಅನುಭವಕ್ಕೆ ಬಂದಿದೆ.

‘ಇಂಥವರು ನಮ್ಮ ಮಠಕ್ಕೆ ತುಂಬಾ ಬೇಕಾದವರು. ಇವರ ಕೆಲಸ ಮಾಡಿಕೊಡಿ ಎಂಬ ಒಕ್ಕಣೆಯ ಪತ್ರಗಳು ಮುಖ್ಯಮಂತ್ರಿ ಆದಿಯಾಗಿ ಎಲ್ಲ ಮಂತ್ರಿಗಳ ಕಡತಗಳಲ್ಲೂ ತುಂಬಿ ತುಳುಕುತ್ತಿವೆ. ಸಹಜವಾಗಿಯೇ ಈ ಪತ್ರಗಳ ಮೇಲೂ ಮಂತ್ರಿ ಮಹೋದಯರ ಹಸಿರು ಶಾಹಿಯ ಹಸ್ತಾಕ್ಷರಗಳು ಬೀಳುತ್ತಿವೆ.

ಮೊನ್ನೆ ಸಿರಿಗೆರೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಸಿರಿಗೆರೆ ಶ್ರೀಗಳು ಮುಖ್ಯಮಂತ್ರಿಗಳನ್ನು ಪಕ್ಕದಲ್ಲೇ ಕೂರಿಸಿಕೊಂಡು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಎಚ್ಚರಿಸಿದ ವರದಿಗಳು ಬಂದಿವೆ. (ಸುದ್ದಿ ಮಾತು ಬ್ಲಾಗ್ ಗಮನಿಸಿ) ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಬೇಡ ಎಂಬುದು ಶ್ರೀಗಳ ಬಹಿರಂಗ ಎಚ್ಚರಿಕೆ. ಇಷ್ಟು ದಿನ ಮುಖ್ಯಮಂತ್ರಿಗಳ ಹಿಂದೆ ಮುಂದೆ ಇದ್ದ ರೇಣುಕಾಚಾರ್ಯ ಇತ್ತೀಚಿಗೆ ಮುನಿಸಿಕೊಂಡು ಆಗಾಗ ಸರ್ಕಾರದ ವಿರುದ್ಧ ಮಾತನಾಡಿದ್ದು ಶ್ರೀಗಳನ್ನು ಕೆರಳಿಸಿತ್ತು. ಹೀಗಾಗಿ ಈ ಧಮ್‌ಕಿ ನೀಡಲಾಗಿದೆ. ಘಟನೆಯನ್ನು ಅವಲೋಕಿಸಿದರೆ ಶ್ರೀಗಳು ಭಾರತೀಯ ಜನತಾ ಪಕ್ಷದ ಅಧ್ಯಕ್ಷನ ಕಾರ್ಯವನ್ನೂ ತಾವೇ ಮಾಡಲು ಹೊರಟಿದ್ದಾರೆ ಎಂಬುದು ವೇದ್ಯವಾಗುತ್ತದೆ.

ಧರ್ಮ ಮತ್ತು ರಾಜಕಾರಣ ಹೀಗೆ ಒಂದಕ್ಕೆ ಒಂದು ಬೆಸೆದುಕೊಂಡು, ಧರ್ಮವೇ ರಾಜಕಾರಣವಾಗಿ, ರಾಜಕಾರಣವೇ ಧರ್ಮವಾದರೆ ಏನೇನಾಗಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೆ.

********************

ಧರ್ಮ ಮತ್ತು ರಾಜಕಾರಣ ಹೀಗೆ ಅನೈತಿಕ ಕೂಡಿಕೆ ಮಾಡಿಕೊಂಡಿರುವ ಹೊತ್ತಿನಲ್ಲಿ ನಿಜವಾದ ಆತಂಕ ಎದುರಿಸುತ್ತಿರುವವರು ಈ ದೇಶದ ಹಿಂದುಳಿದವರು, ದಲಿತರು, ಆದಿವಾಸಿಗಳು ಹಾಗು ಅಲ್ಪಸಂಖ್ಯಾತರು.

ಹಿಂದುಳಿದವರಿಗೆ, ದಲಿತರಿಗೆ, ಆದಿವಾಸಿಗಳಿಗೆ ಯಾವುದೇ ಧರ್ಮವಿಲ್ಲ. ಇವರನ್ನು ಯಾವುದೋ ಒಂದು ಧರ್ಮಕ್ಕೆ ಕಟ್ಟುಬೀಳಿಸಿ ಅವರ ಮೂಲಕವೇ ಅಲ್ಪಸಂಖ್ಯಾತ ಧರ್ಮಗಳ ವಿರುದ್ಧ ಜಗಳಕ್ಕೆ ಹಚ್ಚುವ ಕೆಲಸವನ್ನು ಸ್ವಯಂಘೋಷಿತ ಹಿಂದೂ ಧರ್ಮ ರಕ್ಷಕರು ನಡೆಸುತ್ತಲೇ ಬಂದಿದ್ದಾರೆ.

ಹಿಂದುಳಿದವರಿಗೆ, ದಲಿತರಿಗೆ ಮಠಗಳಿಲ್ಲ, ಮಠಗಳಿದ್ದರೂ ಆ ಮಠಾಧೀಶರು ಆ ಸಮುದಾಯಗಳ ಜನರ ಹಾಗೆಯೇ ಶಕ್ತಿಹೀನರು. ಈ ಮಠಾಧೀಶರನ್ನು ಮೇಲ್ವರ್ಗ ಮಠಾಧೀಶರು ತಮ್ಮ ಸಮಾನವಾಗಿ ಕೂಡಿಸಿಕೊಳ್ಳಲೂ ಹಿಂಜರಿಯುತ್ತಾರೆ. ಇಂದಿನ ರಾಜಕಾರಣದ ಸಂದರ್ಭದಲ್ಲಿ ಈ ಮಠಾಧೀಶರು ತಮ್ಮ ಜಾತಿಗಳ ಪರವಾಗಿ, ಜಾತಿಜನರ ಪರವಾಗಿ ಲಾಬಿ ಮಾಡುವ ಶಕ್ತಿ ಇಲ್ಲದವರು.

ಹಿಂದುಳಿದ ಮಠಾಧೀಶರ ಮತ್ತೊಂದು ಸಮಸ್ಯೆಯೆಂದರೆ ಅವರ ಕೀಳರಮೆ. ಮಠಾಧೀಶರಾಗಲು ಅದ್ಭುತವಾದ ಸಂಸೃತ ಪಾಂಡಿತ್ಯ ಬೇಕು ಎಂದು ಇಂದಿನ ಮಠೀಯ ವ್ಯವಸ್ಥೆ ಬಯಸುತ್ತದೆ. ಸಂಸ್ಕೃತ ಪಾಂಡಿತ್ಯವಿಲ್ಲದ ಸ್ವಾಮಿಗಳು ಮೇಲ್ವರ್ಗದ ಮಠಾಧೀಶರ ಜತೆ ಸೆಣಸುವುದಿರಲಿ, ಅವರ ಸಮಕ್ಕೆ ಕುಳಿತುಕೊಳ್ಳಲೂ ಹಿಂಜರಿಯುತ್ತಾರೆ.

ಹೀಗಾಗಿ ಇಂದು ಈ ತಳಸಮುದಾಯಗಳ ಜನರು ರಾಜಕೀಯ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಒಂದೇ ಮೇಲ್ವರ್ಗದವರೊಂದಿಗೆ ರಾಜಿ ಮಾಡಿಕೊಂಡು, ಅವರು ಎಸೆಯುವ ಭಿಕ್ಷೆ ಪಡೆದು ಬದುಕಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಸೆಣೆಸಿ, ಸಾಮರ್ಥ್ಯ ಸಾಲದೆ ಸೋತು ಸುಮ್ಮನಿರಬೇಕು.

ಬಿಜೆಪಿ ಸರ್ಕಾರ ಎರಡು ಮೇಲ್ವರ್ಗದ ಶಕ್ತಿಕೇಂದ್ರಗಳ ಆಣತಿಗೆ ತಕ್ಕಂತೆ ನಡೆಯುತ್ತಿದೆ. ಕಳೆದಿರುವುದು ಕೇವಲ ನೂರು ಚಿಲ್ಲರೆ ದಿನಗಳು ಅಷ್ಟೆ. ಇನ್ನು ಐದು ವರ್ಷಗಳಲ್ಲಿ ಏನೇನು ಆಗುತ್ತದೋ ಯಾರು ಬಲ್ಲರು?

********************

ಮತ್ತೆ ಲೋಹಿಯಾ ಹೇಳಿದ ಮಾತುಗಳು ನೆನಪಾಗುತ್ತವೆ. ಜಾತಿಯಿಂದ ಕಲುಷಿತವಾದ ಈ ದೇಶದಲ್ಲಿ ಮುಂದುವರೆದ ಶಕ್ತ ವರ್ಗಗಳಿಗೆ ಹಿಂದುಳಿದ ಜನಾಂಗಗಳಿಗೆ ವಿಶೇಷ ಸವಲತ್ತು, ಅವಕಾಶಗಳನ್ನು ನೀಡುವಷ್ಟು ತಾಳ್ಮೆಯಾಗಲಿ, ದೊಡ್ಡತನವಾಗಲಿ ಉಳಿದಿಲ್ಲ. ಹಿಂದುಳಿದ ಜನಾಂಗಗಳು ತಮಗೆ ಸಲ್ಲಬೇಕಾದುದಕ್ಕೆ ಹೋರಾಡುವಷ್ಟು ಪ್ರಜ್ಞೆಯನ್ನಾಗಲಿ ಸಾಮರ್ಥ್ಯವನ್ನಾಗಲಿ ಹೊಂದಿಲ್ಲ. ಈ ಬಡತನದ, ಜಾತಿಯ ವಿಷವೃತ್ತವನ್ನು ಒಡೆಯಬೇಕಾದರೆ ನಮ್ಮ ಭರತಖಂಡದ ಚೈತನ್ಯದಲ್ಲಿಯೇ ಒಂದು ಮಹಾಕ್ರಾಂತಿ ಆಗಬೇಕು.

ರಾಜೇಂದ್ರ ಪ್ರಸಾದ್ ಇನ್ನೂರು ಬ್ರಾಹ್ಮಣರ ಪಾದ ತೊಳೆದ ಘಟನೆಯಿಂದ ಲೋಹಿಯಾ ಮನನೊಂದಿದ್ದರು. ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ಅಂದೇ ಸಮರ ಸಾರಿದ್ದರು. ಆದರೆ ಇದೇ ಪುರೋಹಿತಶಾಹಿ ವ್ಯವಸ್ಥೆ ಇಂದು ಕರ್ನಾಟಕದ ಒಟ್ಟು ರಾಜಕಾರಣವನ್ನೇ ನಿಯಂತ್ರಿಸುತ್ತಿದೆ. ಅಲ್ಲದೆ ನೇರವಾಗಿ ವಿಧಾನಸೌಧದಲ್ಲಿ ಅಧಿಕಾರ ಹಿಡಿದು ಕುಳಿತಿದೆ. ಒಂದು ವ್ಯತ್ಯಾಸವೆಂದರೆ ಈಗ ಕೇವಲ ಬ್ರಾಹ್ಮಣ ಮಠಾಧೀಶರು ಇಲ್ಲಿ ರಾಜ್ಯಭಾರ ಮಾಡುತ್ತಿಲ್ಲ. ವೀರಶೈವ ಮಠಾಧಿಪತಿಗಳೂ ಸಹ ಕೈಜೋಡಿಸಿದ್ದಾರೆ!

ಬಸವಣ್ಣನವರಾಗಲಿ, ಇತರ ಪ್ರಮಥರಾಗಲೀ ಮಠಗಳನ್ನು ಕಟ್ಟಿದವರಲ್ಲ. ಇಷ್ಟಲಿಂಗ ಕಲ್ಪನೆ ಮೊಳೆತದ್ದೇ ಗುಡಿ-ಗುಂಡಾರಗಳ ವ್ಯವಸ್ಥೆಯ ವಿರುದ್ಧವಾಗಿ. ಸ್ಥಾವರಕ್ಕಳಿವುಂಟು, ಜಂಗಮಕ್ಕಿಲ್ಲ ಎಂದವರು ಬಸವಣ್ಣನವರು. ಆದರೆ ೧೫ನೇ ಶತಮಾನದಿಂದೀಚೆಗೆ ಬಸವಣ್ಣನವರ ಹೆಸರಿನಲ್ಲೇ ಆರಂಭವಾದ ಮಠಗಳು ಜಂಗಮಕ್ಕಳಿವುಂಟು, ಸ್ಥಾವರಕ್ಕಿಲ್ಲ ಎಂಬ ಭಾವದಲ್ಲಿ ಮಠ-ಮಂದಿರಗಳನ್ನು ಕಟ್ಟಿಕೊಂಡವು. ಬಸವಣ್ಣನವರನ್ನು ವಿರೋಧಿಸುತ್ತಲೇ ಬಂದ ಪಂಚಾಚಾರ್ಯ ಪೀಠಗಳು ಕಿರೀಟ, ಪಲ್ಲಕ್ಕಿ, ಸಿಂಹಾಸನಗಳ ದರ್ಬಾರು ನಡೆಸುತ್ತ ಇನ್ನೂ ರಾಜಶಾಹಿ ವ್ಯವಸ್ಥೆಯ ಪಳೆಯುಳಿಕೆಗಳನ್ನೇ ಇಟ್ಟುಕೊಂಡು ಪ್ರತಿಗಾಮಿಗಳಾಗಿವೆ.

ಎಲ್ಲೋ, ಅಲ್ಲೊಬ್ಬ, ಇಲ್ಲೊಬ್ಬ ಮಠಾಧೀಶರು ಬಸವಣ್ಣನ ಆದರ್ಶಗಳ ಬಗ್ಗೆ ಮಾತನಾಡುತ್ತಾರಾದರೂ ಅವರ ಧ್ವನಿ ಪಟ್ಟಭದ್ರ ಮಠಾಧೀಶರ ಎದುರಿನಲ್ಲಿ ಕರಗಿಹೋಗಿದೆ.

ಬಸವಣ್ಣನ ಪ್ರಗತಿಪರ ಧರ್ಮ ಇಂದು ಯಾವ ದಿಕ್ಕಿನಲ್ಲಿ ನಿಂತಿದೆ ಎಂಬುದಕ್ಕೆ ಇದು ಸಾಕ್ಷಿ. ಬಸವಣ್ಣ ಅಧಿಕಾರಕ್ಕೆ ಅಂಟಿಕೊಳ್ಳದೆ, ಜಾತಿರಹಿತ ಸಮಾಜ ನಿರ್ಮಾಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡರೆ, ಬಸವಣ್ಣನವರ ಹೆಸರಿನಲ್ಲಿ ಮಠಗಳನ್ನು ಕಟ್ಟಿಕೊಂಡವರು ಜಾತಿ-ಉಪಜಾತಿ ಸಮಾಜವನ್ನು ಭದ್ರಗೊಳಿಸುತ್ತ ರಾಜಕೀಯ ಅಧಿಕಾರಕ್ಕಾಗಿ ಬಿಜೆಪಿಯಂಥ ಕೋಮುವಾದಿ ಶಕ್ತಿಯ ಬೆನ್ನ ಹಿಂದೆ ನಿಂತಿದ್ದಾರೆ.

********************

ಮತ್ತೆ ಲೋಹಿಯಾ ಹೇಳಿದ ಮಾತುಗಳನ್ನು ಇಂದಿನ ಕರ್ನಾಟಕಕ್ಕೆ ಅನ್ವಯಿಸಿ ಹೇಳುವುದಾದರೆ ಇಡೀ ಸರ್ಕಾರ ಪದೇ ಪದೇ ಮೇಲ್ವರ್ಗದ ಮಠಾಧೀಶರ, ಪುರೋಹಿತಶಾಹಿಗಳ ಪಾದತಲದಲ್ಲಿ ಕುಳಿತುಕೊಂಡರೆ, ಅವರ ನಿರ್ದೇಶನದಂತೆಯೇ ಅಧಿಕಾರ ನಡೆಸುತ್ತಿದ್ದರೆ ಆ ರಾಜ್ಯದಲ್ಲಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ಸೌಖ್ಯವಾಗಿರಲು ಸಾಧ್ಯವೇ?

********************

Saturday, September 20, 2008

ಯಾರು ಮತಾಂತರಿಗಳು?

ಸುಮಾರು ಒಂದು ವರ್ಷದ ಕೆಳಗೆ ಟಿವಿ ಚಾನೆಲ್ ಒಂದರ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳನ್ನು ಸಂದರ್ಶಿಸಿದ್ದೆ. ಈ ಸಂದರ್ಭದಲ್ಲಿ ನಾನು ಕೇಳಿದ ಕೆಲ ಪ್ರಶ್ನೆಗಳಿಂದ ಶ್ರೀಗಳು ಇರಿಸುಮುರಿಸಿಗೆ ಒಳಗಾದಂತೆ ಕಂಡುಬಂತು. ಅವರಿಗೆ ಕಿರಿಕಿರಿಯೆನಿಸಿರಬಹುದಾದ ಒಂದು ಪ್ರಶ್ನೆ ಮತಾಂತರವನ್ನು ಕುರಿತಾಗಿತ್ತು. ಹಿಂದೂ ಧರ್ಮದ ಒಳಗಿನ ಅಸ್ಪೃಶ್ಯತೆ ನಿವಾರಿಸದೆ ಮತಾಂತರ ವಿರೋಧಿಸುವುದು ನೈತಿಕವಾಗಿ ಎಷ್ಟು ಸರಿ ಎಂಬುದು ನನ್ನ ಪ್ರಶ್ನೆಯಾಗಿತ್ತು. ಮತಾಂತರ ಚಲನಶೀಲ ಸಮಾಜದ ಸಹಜ ಪ್ರಕ್ರಿಯೆಯಲ್ಲವೆ ಎಂದು ಕೇಳಿದ್ದೆ.

ಈ ಪ್ರಶ್ನೆಗೆ ಆಧಾರವಾಗಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಒಡ್ಡಿದ್ದ ಸವಾಲೊಂದನ್ನು ಅವರಿಗೆ ನೆನಪಿಸುವ ಪ್ರಯತ್ನ ಮಾಡಿದ್ದೆ. ಅಂಬೇಡ್ಕರ್‌ರವರು ಬೌದ್ಧಧರ್ಮಕ್ಕೆ ಮತಾಂತರಗೊಳ್ಳುವ ಮುನ್ನ ದೇಶದ ಧಾರ್ಮಿಕ ಜಗತ್ತಿನ ಮೇರುಸ್ಥಾನದಲ್ಲಿರುವ ಶಂಕರಾಚಾರ್ಯ ಪೀಠಕ್ಕೆ ಒಂದು ಸವಾಲೆಸೆದಿದ್ದರು. ಒಂದು ವೇಳೆ ನಿಮ್ಮ ಶಂಕರಾಚಾರ್ಯ ಪೀಠವನ್ನು ಅಸ್ಪೃಶ್ಯರಿಗೆ ಬಿಟ್ಟುಕೊಡುವುದಾದರೆ ನಾನು ಮತಾಂತರಗೊಳ್ಳುವುದಿಲ್ಲ ಎಂದು ಅವರು ನೇರವಾಗಿ ಹೇಳಿದ್ದರು.

ಈ ಪ್ರಶ್ನೆ ಕೇಳುತ್ತಿದ್ದಂತೆ ಪೇಜಾವರರು ಜಾಣಮುಗ್ಧತೆ ಪ್ರದರ್ಶಿಸಿ, ಈ ಘಟನೆಯ ಬಗ್ಗೆ ತಮಗೇನೂ ತಿಳಿದಿಲ್ಲ ಎಂದರು. ಒಂದು ವೇಳೆ ಅಂಬೇಡ್ಕರ್ ಮತಾಂತರಗೊಳ್ಳುವ ಸಂದರ್ಭದಲ್ಲಿ ನಾನು ಪೀಠದಲ್ಲಿ ಇದ್ದಿದ್ದರೆ ಅವರ ಮನವೊಲಿಸಿ ಮತಾಂತರವಾಗದಂತೆ ನೋಡಿಕೊಳ್ಳುತ್ತಿದ್ದೆ ಎಂದು ಅವರು ಹೇಳಿದರು.

ಪೇಜಾವರರಿಗೆ ಮುಜುಗರ ತಂದ ಮತ್ತೊಂದು ಪ್ರಶ್ನೆ ಸಹಪಂಕ್ತಿ ಭೋಜನಕ್ಕೆ ಸಂಬಂಧಿಸಿದ್ದು, ಉಡುಪಿ ಕೃಷ್ಣಮಠವೂ ಸೇರಿದಂತೆ ಬಹುತೇಕ ಮಠಗಳಲ್ಲಿ (ವಿಶೇಷವಾಗಿ ಬ್ರಾಹ್ಮಣ ಮಠಗಳಲ್ಲಿ) ಸಹಪಂಕ್ತಿ ಭೋಜನದ ವ್ಯವಸ್ಥೆಯಿಲ್ಲವಲ್ಲ? ಬ್ರಾಹ್ಮಣರಿಗೆ ಬೇರೆ, ಬ್ರಾಹ್ಮಣೇತರರಿಗೆ ಬೇರೆ ಪಂಕ್ತಿ ಏರ್ಪಡಿಸುವುದರಿಂದ ಅಸಮಾನತೆ ಹೆಚ್ಚಾಗುವುದಿಲ್ಲವೆ? ಎಂದು ಕೇಳಿದಾಗ ಅವರು ನಾಜೂಕಿನ ಉತ್ತರ ನೀಡಿದ್ದರು.

ಕೃಷ್ಣ ಮಠದಲ್ಲಿ ಏಕಪಂಕ್ತಿ ಭೋಜನದ ವ್ಯವಸ್ಥೆ ಮೊದಲಿನಿಂದಲೂ ಇದೆ. ಆದರೆ ಸಂಪ್ರದಾಯಸ್ಥರು (ಬ್ರಾಹ್ಮಣರು) ತಮ್ಮ ಶ್ರದ್ಧೆಗೆ ಅನುಸಾರವಾಗಿ ಸಹಪಂಕ್ತಿ ಭೋಜನ ಮಾಡುವುದಿಲ್ಲ. ಅವರ ಮನಸ್ಸಿಗೆ ನೋವುಂಟುಮಾಡುವುದು ನಮಗಿಷ್ಟವಿಲ್ಲ. ಹೀಗಾಗಿ ಅವರಿಗೆ ಪ್ರತ್ಯೇಕ ಪಂಕ್ತಿಯಲ್ಲಿ ಭೋಜನ ನೀಡಲಾಗುತ್ತದೆ. ಇದು ಪೇಜಾವರರ ಅಡ್ಡಗೋಡೆಯ ಮೇಲೆ ದೀಪವಿಡುವ ಮಾತು. ಪಂಕ್ತಿಭೇದಕ್ಕೆ ಅವರು ಕೊಡುವ ಸಮರ್ಥನೆ ಶಾಕಾಹಾರ-ಮಾಂಸಾಹಾರದ ಭೇದ. ಮಾಂಸಾಹಾರಿಗಳ ಜತೆ ಶಾಕಾಹಾರಿಗಳು ಕುಳಿತು ಊಟ ಮಾಡಲು ಸಮಸ್ಯೆಯಾಗುತ್ತದೆ ಎಂಬುದು ಅವರ ವಾದ.

ಮತಾಂತರ ವಿವಾದ ಹೊತ್ತುರಿಯುವಾಗ ಇದೆಲ್ಲವೂ ನೆನಪಾಗುತ್ತ್ತಿದೆ. ಪೇಜಾವರರ ಮಠವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಚರ್ಚ್‌ಗಳ ಮೇಲೆ ಭಜರಂಗದಳದ ಗೂಂಡಾಗಳು ಮೇಲಿಂದ ಮೇಲೆ ದಾಳಿ ನಡೆಸಿದರೂ ಪೇಜಾವರರು ಒಂದೇ ಒಂದು ಖಂಡನೆಯ ಹೇಳಿಕೆ ನೀಡಿದ ಕುರಿತು ವರದಿಯಾಗಿಲ್ಲ. ಪೇಜಾವರರು ನಾನು ತಿಳಿದಂತೆ ಮಾಧ್ಯಮಮೋಹಿಗಳು. ದೇಶದ ಆಗುಹೋಗುಗಳ ಬಗ್ಗೆ ಕಾಲಾಕಾಲಕ್ಕೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ತಮ್ಮ ಅಭಿಪ್ರಾಯ ಹೇಳುವವರು. ಆದರೆ ಈ ಸಂದರ್ಭದಲ್ಲಿ ಪೇಜಾವರರ ದಿವ್ಯಮೌನಕ್ಕೆ ಅರ್ಥ ಹುಡುಕುವ ಅಗತ್ಯವೇನೂ ಇಲ್ಲ ಅನಿಸುತ್ತದೆ.

ಮತಾಂತರದ ವಿವಾದ ಭುಗಿಲೆದ್ದಿರುವಾಗ ನನ್ನ ಮೊಬೈಲ್‌ಗೆ ಬಂದ ಸಂದೇಶವೊಂದು ಹೀಗೆ ಹೇಳುತ್ತದೆ: ಈ ದೇಶದಲ್ಲಿ ಅತಿ ಹೆಚ್ಚು ಮತಾಂತರ ಮಾಡಿದ್ದು ಹಿಂದೂ ಧರ್ಮ. ಕಣಿವೆ ಮಾರಮ್ಮ, ಮಲೆ ಮಹದೇಶ್ವರ, ಚೌಡಮ್ಮ, ವೀರಭದ್ರ ಮತ್ತಿತರರನ್ನು ಆರಾಧಿಸುತ್ತ ಯಾವ ಧರ್ಮದ ಹಂಗೂ ಇಲ್ಲದೆ ಬಾಳುತ್ತಿದ್ದ ಜನರಿಗೆ ನೀನು ಹಿಂದೂ ಅಂತ ಬೊಗಳೆ ಬಿಟ್ಟು ಹಣೆಪಟ್ಟಿ ಕಟ್ಟಿದವರು ಇಂದು ಮತಾಂತರದ ಮಾತನಾಡುತ್ತಿದ್ದಾರೆ.

ಈ ಎಸ್‌ಎಂಎಸ್ ಸಂದೇಶದ ಒಳಗಿನ ಮಾತನ್ನು ವಿಸ್ತರಿಸುವ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ಕೃಣ್ವಂತೊ ವಿಶ್ವಮಾರ್ಯಂ (ವಿಶ್ವವನ್ನೆಲ್ಲ ಆರ್ಯಮಯವಾಗಿಸೋಣ) ಎಂದು ಹೇಳಿದ್ದು, ಮನುಧರ್ಮವನ್ನು ಜಗತ್ತಿನಾದ್ಯಂತ ಹರಡಲು ಯತ್ನಿಸಿದ್ದು ಯಾರು? ಕ್ರಿಶ್ಚಿಯನ್ನರೆ? ಮುಸಲ್ಮಾನರೆ? ಇವತ್ತು ಹಿಂದೂ ಧರ್ಮ ಎಂದು ಕರೆಯಲಾಗುವ ಮನುಧರ್ಮ ಯಾ ವೈದಿಕ ಧರ್ಮ ಯಾ ಬ್ರಾಹ್ಮಣ ಧರ್ಮವನ್ನು ಹರಡಲು ಯತ್ನಿಸಿದ, ಹೇರಲು ಯತ್ನಿಸಿದ ಸಾವಿರ ಉದಾಹರಣೆಗಳು ಇಲ್ಲವೆ?

ಹಾಗೆ ನೋಡಿದರೆ ಈ ದೇಶದ ಬಹುಸಂಖ್ಯಾತ ದಲಿತರು, ಹಿಂದುಳಿದವರು ಯಾವ ಧರ್ಮಕ್ಕೆ ಸೇರಿದವರು.? ಅವರಿಗೆ ಹಿಂದೂ ಎಂಬ ಹಣೆಪಟ್ಟಿ ಹಚ್ಚಿದವರು ಯಾರು? ವರ್ಣಾಶ್ರಮದ ಆಧಾರದಲ್ಲೇ ನಿಂತಿರುವ ಹಿಂದೂ ಧರ್ಮದಲ್ಲಿ ಇವತ್ತಿಗೂ ದಲಿತರ, ಹಿಂದುಳಿದವರ, ಶೂದ್ರರ ಸ್ಥಾನಮಾನ ಏನು ಎಂಬುದನ್ನು ಶಂಕರಾಚಾರ್ಯ ಪೀಠಗಳಾದಿಯಾಗಿ ಪೇಜಾವರರವರೆಗೆ ಯಾರೂ ಸ್ಪಷ್ಟಪಡಿಸುತ್ತಿಲ್ಲವಲ್ಲ ಯಾಕೆ?

ನಮ್ಮ ನಡುವಿನ ಅಪರೂಪದ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್ ನೇರವಾಗಿ ಪೇಜಾವರರಿಗೆ ಬಹಿರಂಗ ಸಭೆಯಲ್ಲಿ ಹೇಳಿದ ಮಾತು ನೆನಪಾಗುತ್ತದೆ: ಭಾರತದ ಎಲ್ಲ ಮಠಾಧೀಶರು ಒಂದೇ ಒಂದು ದಿನ ಅಸ್ಪೃಶ್ಯತೆ ನಿವಾರಿಸುವ ಸಲುವಾಗಿ ಉಪವಾಸ ಮಾಡಲಿ. ಮಠಾಧೀಶರ ಮಾತು ಕೇಳುವ ಭಕ್ತರಲ್ಲಾದರೂ ಬದಲಾವಣೆಯಾಗಬಹುದೋ ನೋಡೋಣ ಎಂದು ಅವರು ಹೇಳಿದ್ದರು. ಮಠಾಧೀಶರಿಗೆ ಜಾಣಕಿವುಡು. ಅವರಿಗೆ ಅಸ್ಪೃಶ್ಯತೆ ನಿವಾರಣೆಯಾಗುವುದು ಬೇಕಿಲ್ಲ.

ಮತಾಂತರಗಳ ಇತಿಹಾಸಕ್ಕೆ ಮತ್ತೆ ಹೋಗುವುದಾದರೆ ಈ ದೇಶವನ್ನು ಪ್ರವೇಶಿಸಿದ, ಈ ದೇಶದಲ್ಲೇ ಹುಟ್ಟಿದ ಹಲವು ಧರ್ಮಗಳಿಗೆ ಬ್ರಾಹ್ಮಣರೇ ಮತಾಂತರ ಹೊಂದಿದರಲ್ಲ? ಅವರ ಬಗ್ಗೆ ಮತಾಂತರ ವಿರೋಧಿಗಳ ನಿಲುವೇನು? ವೈದಿಕ ಧರ್ಮವನ್ನು ಧಿಕ್ಕರಿಸಿ ವೀರಶೈವವನ್ನು ಕಟ್ಟಿದ ಬಸವಣ್ಣನವರನ್ನು ಇವರು ಧರ್ಮದ್ರೋಹಿ ಎನ್ನುತ್ತಾರೆಯೆ? ಹುಟ್ಟಿನಿಂದ ಬ್ರಾಹ್ಮಣ ಎನ್ನಲಾದ ಬಸವಣ್ಣ (ಮಾದಿಗ ಇರಬಹುದು ಎಂಬ ಬಂಜಗೆರೆ ಜಯಪ್ರಕಾಶ್ ವಾದ ಇನ್ನೂ ಜೀವಂತವಾಗಿದೆ)ನವರ ಬಗ್ಗೆ ಇವರ ಬಹಿರಂಗದ ನಿಲುವು ಏನು? ಡಾ.ಚಿದಾನಂದ ಮೂರ್ತಿಯಂಥವರು ಎಷ್ಟೇ ಬಡಬಡಿಸಿದರೂ ವೀರಶೈವ ಎಂಬುದು ಹಿಂದೂ ಧರ್ಮದ ಭಾಗವಲ್ಲ, ಅದು ಪ್ರತ್ಯೇಕ ಧರ್ಮ ಎಂಬುದನ್ನು ಬಹುತೇಕ ವೀರಶೈವರು ಇವತ್ತು ಒಪ್ಪಿಕೊಂಡಿದ್ದಾರಲ್ಲವೆ?

ಇವತ್ತು ಯಾವುದನ್ನು ಹಿಂದೂ ಎಂದು ಗುರುತಿಸಲಾಗುತ್ತಿದೆಯೋ ಆ ಧರ್ಮದ ಒಳಗೆ ಎಷ್ಟು ಮತ-ಪಂಥಗಳಿವೆ? ಒಂದಕ್ಕೆ ಒಂದು ತಾಳೆ ಹೊಂದುತ್ತವೆಯೇ? ಬ್ರಾಹ್ಮಣರ ಪೈಕಿಯೇ ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳು; ಎಷ್ಟೊಂದು ಭಿನ್ನತೆಗಳಿಲ್ಲವೆ? ಈ ಎಲ್ಲ ಪಂಥಗಳು ಹಿಂದೂಗಳೆಲ್ಲ ಒಂದು ಎಂಬ ಮಾತನ್ನು ನಿಜ ಮಾಡಲು ಯತ್ನಿಸಿದ ಒಂದಾದರೂ ಉದಾಹರಣೆ ಇದೆಯೆ? ಮನುಸ್ಮೃತಿಯಿಂದ ಹಿಡಿದು ಭಗವದ್ಗೀತೆಯವರೆಗೆ ಎಲ್ಲವೂ ಶೂದ್ರರಿಗೆ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸಿದರೂ, ಹಿಂದೂ ಎಂಬ ಹೆಸರಿನಲ್ಲಿ ಅವರನ್ನು ಕಟ್ಟಿ ಹಾಕುವ ಯತ್ನಗಳು ಎಷ್ಟು ಕಾಲ ನಡೆದೀತು?

ಇವತ್ತು ಹಿಂದೂ ಧರ್ಮದ ದೇವರುಗಳೆಂದು ಪೂಜಿಸಲಾಗುವವರೆಲ್ಲ ಯಾವ ಸಮುದಾಯಗಳಿಗೆ ಸೇರಿದವರು? ಇವರನ್ನು ಹೈಜಾಕ್ ಮಾಡಿಕೊಂಡವರು ಯಾರು? ಶಿವನಿಗೆ, ಗಣಪತಿಗೆ ಜನಿವಾರ ತೊಡಿಸಿದವರು ಯಾರು? ಚೌಡಿ ಹೇಗೆ ಚಾಮುಂಡೇಶ್ವರಿಯಾದಳು? ಗಿರಿಜನ, ಆದಿವಾಸಿ ನಾಯಕರನ್ನೆಲ್ಲ ದೇವರನ್ನಾಗಿಸಿ, ಅವರನ್ನು ಗರ್ಭಗುಡಿಯಲ್ಲಿ ಕೂಡಿಹಾಕಿದವರು ಯಾರು? ಈ ತಳಸಮುದಾಯದ ದೇವರನ್ನು ಮುಟ್ಟಿ ಪೂಜಿಸಲು ಆ ಸಮುದಾಯವರಿಗೇ ಅವಕಾಶ ನಿರಾಕರಿಸಿದವರು ಯಾರು?

ದೇಶದ ಬಹುಸಂಖ್ಯಾತ ದಲಿತ-ಹಿಂದುಳಿದ-ಆದಿವಾಸಿಗಳಿಗೆ ಯಾವ ಧರ್ಮವೂ ಇರಲಿಲ್ಲ. ಅವರನ್ನು ರಾಜಕೀಯ ಕಾರಣಕ್ಕೆ ಹಿಂದೂ ಧರ್ಮಕ್ಕೆ ಕಟ್ಟಿಹಾಕುವ ಪ್ರಯತ್ನಗಳು ಸ್ವಾತಂತ್ರ್ಯಪೂರ್ವದಿಂದಲೂ ನಡೆದಿದೆ. ಕಳೆದ ಎರಡು ದಶಕಗಳಲ್ಲಿ ಇದು ತೀವ್ರವಾಗಿ ನಡೆದಿದೆ. ದಲಿತ-ಹಿಂದುಳಿದ ಜನರಿಗೆ ಇದ್ದ ಪರ್ಯಾಯವಾದರೂ ಯಾವುದು? ಡಾ,ಅಂಬೇಡ್ಕರ್ ಆಶ್ರಯಿಸಿದ ಬೌದ್ಧಧರ್ಮವೂ ಪುರೋಹಿತಶಾಹಿಗಳ ಹಿಡಿತದಲ್ಲಿ ಸಿಕ್ಕಿ ನಲುಗಿದ ಪರಿಣಾಮವಾಗಿ ದಲಿತರು ಅಲ್ಲಿ ಸಂಪೂರ್ಣ ತಮ್ಮನ್ನು ತಾವು ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೈನಧರ್ಮವು ಪುರೋಹಿತಶಾಹಿಗಳೊಂದಿಗೆ ಕೈಜೋಡಿಸಿ ತನ್ನ ಮೂಲನೆಲೆಯನ್ನು ಕಳೆದುಕೊಂಡಿತು. ಬಸವಣ್ಣನ ಧರ್ಮವನ್ನೂ ಸಹ ಅಲ್ಲಿನ ಮೂಲಭೂತವಾದಿಗಳು ಜಾತಿ ಆಧಾರದಲ್ಲಿ ಪುನರ್ನಿರ್ಮಿಸಿದ ಪರಿಣಾಮವಾಗಿ ಅಲ್ಲೂ ಸಹ ಸಮಾನತೆಯ ಆಶಯಗಳು ಭಗ್ನಗೊಂಡಿವೆ. ೧೫ನೇ ಶತಮಾನದ ನಂತರ ಜಂಗಮ ಸಂಸ್ಕೃತಿಯ ನೆಲೆವೀಡಾದ ವೀರಶೈವದೊಳಗೆ ಸ್ಥಾವರ ಸಂಸ್ಕೃತಿಯ ಪ್ರತಿಪಾದಕರು ಮಠಗಳನ್ನು ನಿರ್ಮಿಸಿ ಅದನ್ನೂ ಜಡಗೊಳಿಸಿದರು. ಹೀಗಾಗಿ ಪರ್ಯಾಯಗಳು ಇಲ್ಲದೆ ನರಳುತ್ತಿದ್ದ ದಲಿತ-ಹಿಂದುಳಿದವರನ್ನು ಹಿಂದೂ ಧರ್ಮದ ಹೆಸರಿನಲ್ಲಿ ಪುರೋಹಿತಶಾಹಿಗಳು ಒಂದೆಡೆ ಶೋಷಿಸುತ್ತ, ಮತ್ತೊಂದೆಡೆ ಹಿಂದೂ ಎಂಬ ಹಣೆಪಟ್ಟಿ ಅಂಟಿಸುತ್ತ ಬಂದವು.

ಇವತ್ತು ಹಿಂದೂ ಧರ್ಮದ ಧಾರ್ಮಿಕ ಕೇಂದ್ರಗಳಾದ ಮಠಗಳು ಚಲನಶೀಲವಾಗಿವೆಯೇ? ಅಲ್ಲಿ ದಲಿತರಿಗೆ, ಆದಿವಾಸಿಗಳಿಗೆ, ಹಿಂದುಳಿದವರಿಗೆ ಪ್ರವೇಶವಿದೆಯೆ? ಈ ಸಮುದಾಯಗಳ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತದೆಯೇ? ಎಲ್ಲ ವರ್ಗದವರನ್ನು ಒಟ್ಟಿಗೆ ಕೂಡಿಸಿ ಊಟ ಹಾಕುವ ಪರಂಪರೆ ಇದೆಯೆ?

ದೇಶದ ಎಲ್ಲ ಭಾಗಗಳಲ್ಲೂ ಈಗಲೂ ಅಸ್ಪೃಶ್ಯತೆ ಜಾರಿಯಲ್ಲೇ ಇದೆಯಲ್ಲವೆ? ಇನ್ನೂ ದಲಿತ ಕೇರಿಗಳು ಎಲ್ಲ ಊರುಗಳಲ್ಲೂ ಕಣ್ಣಿಗೆ ಹೊಡೆದಂತೆ ಕಾಣುವುದಿಲ್ಲವೆ? ದಲಿತರಿಗೆ ಸಾರ್ವಜನಿಕ ಕೆರೆ, ಕೊಳಾಯಿಗಳಲ್ಲಿ ನೀರು ಹಿಡಿಯಲು ಬಿಡುವುದಿಲ್ಲ ಎಂಬುದು ಹಿಂದೂ ಧರ್ಮದ ಉದ್ಧಾರಕರಿಗೆ ಗೊತ್ತಿಲ್ಲವೆ? ದಲಿತರ ಮೇಲೆ ದೌರ್ಜನ್ಯ ನಡೆಯದ ಒಂದೇ ಒಂದು ದಿನವಾದರೂ ಈ ದೇಶದ ಇತಿಹಾಸದಲ್ಲಿ ದಾಖಲಾಗಿದೆಯೆ?

ಹೀಗೆಲ್ಲ ಇರುವಾಗ ಹಿಂದೂ ಧರ್ಮ ಎಂಬುದೊಂದು ಅಸ್ತಿತ್ವದಲ್ಲಿದೆ, ಅದರಲ್ಲಿ ದಲಿತರು-ಹಿಂದುಳಿದವರು ಸಂತುಷ್ಟರಾಗಿ, ಸಮಾನತೆ ಅನುಭವಿಸುತ್ತ, ಸುಖ-ನೆಮ್ಮದಿಯಿಂದ ಇದ್ದಾರೆ ಎಂದು ಭಾವಿಸುವುದೇ ಮೂರ್ಖತನವಲ್ಲವೆ? ಎಲ್ಲ ಸರಿಯಿದ್ದಿದ್ದರೆ ಮನುಧರ್ಮದ ವಿರುದ್ಧ ಕಾಲಕಾಲಕ್ಕೆ ಹಲವು ಮಹಾತ್ಮರು ಹುಟ್ಟಿಕೊಂಡು ಹೋರಾಡುತ್ತಲೇ ಬರುವ ಅಗತ್ಯವಾದರೂ ಏನಿತ್ತು?

ಬುದ್ಧ, ಮಹಾವೀರ, ಗುರುನಾನಕ, ಕಬೀರ, ಬಸವಣ್ಣ, ನಾರಾಯಣ ಗುರು, ಜ್ಯೋತಿ ಬಾಪುಲೆ, ಅಂಬೇಡ್ಕರ್ ಮೊದಲಾದವರೆಲ್ಲ ಹೀಗೆ ವೈದಿಕ ಧರ್ಮದ ವಿರುದ್ಧ ಸಿಡಿದು ನಿಂತವರೇ ಆಗಿದ್ದಾರೆ.

ಮನುಧರ್ಮ ವಕ್ತಾರರು ಸ್ವಾಮಿ ವಿವೇಕಾನಂದರನ್ನು ಹಿಂದೂ ಧರ್ಮದ ಮಹಾನ್ ನಾಯಕರು ಎಂದೇ ಬಿಂಬಿಸುತ್ತಾರೆ. ಆದರೆ ಹಿಂದೂ ಧರ್ಮದ ಒಳಗಿನ ಕೊಳಕುಗಳ ವಿರುದ್ಧ ವಿವೇಕಾನಂದರು ಮಾತನಾಡಿದಷ್ಟು ತೀಕ್ಷ್ಣವಾಗಿ ಯಾರೂ ಮಾತನಾಡಿಲ್ಲ ಎಂಬುದನ್ನು ಅವರು ಮರೆಮಾಚುತ್ತಾರೆ. ಈ ದೇಶದ ಜನರ ಪ್ರಾಣ ಹಿಂಡುತ್ತಿರುವ ಪುರೋಹಿತಶಾಹಿಗಳನ್ನು ಇಲ್ಲಿಂದ ಓಡಿಸುವವರೆಗೆ ಹಿಂದೂ ಧರ್ಮಕ್ಕೆ ಮುಕ್ತಿ ಇಲ್ಲ ಎಂದು ವಿವೇಕಾನಂದರು ಆ ಕಾಲದಲ್ಲೇ ಹೇಳಿದ್ದರು.

ಧಾರ್ಮಿಕ ಸ್ವಾತಂತ್ರ್ಯವಿಲ್ಲದೆ, ತಾನು ಇಷ್ಟ ಪಟ್ಟ ದೇವರನ್ನು ಮುಟ್ಟಿ ಪೂಜಿಸುವ ಅವಕಾಶವಿಲ್ಲದೆ, ಸಾಮಾಜಿಕ ನಿಂದನೆ-ಅವಮಾನ-ದೂಷಣೆಗಳನ್ನು ಅಡಿಗಡಿಗೂ ಅನುಭವಿಸುತ್ತ, ಅಸ್ಪೃಶ್ಯತೆ-ಅಸಮಾನತೆಯ ನರಕದಲ್ಲಿ ಬದುಕುತ್ತಿರುವ ಜನರು ತಮಗೆ ಒಂದು ಧಾರ್ಮಿಕ ಐಡೆಂಟಿಟಿಯನ್ನು ಬಯಸಿದರೆ ತಪ್ಪೇನು? ಮತ್ತೊಂದು ಧರ್ಮ ತಮ್ಮನ್ನು ಕನಿಷ್ಠ ಮನುಷ್ಯರಂತೆ ನಡೆಸಿಕೊಳ್ಳುತ್ತದೆ ಎಂಬುದು ಅವರಿಗೆ ಮನವರಿಕೆ ಆದಲ್ಲಿ ಮತಾಂತರವಾಗುವುದರಲ್ಲಿ ತಪ್ಪೇನು?

ಇಡೀ ಜಗತ್ತು ಬೆಳೆದುಬಂದಿರುವುದೇ ಮತಾಂತರ, ಪಂಥಾಂತರ, ಧರ್ಮಾಂತರಗಳ ಪ್ರಕ್ರಿಯೆಗಳ ಜತೆಜತೆಗೆ. ಇದನ್ನು ನಿರಾಕರಿಸುವವರಿಗೆ ಇತಿಹಾಸ ಪ್ರಜ್ಞೆ ಇರುವ ಸಾಧ್ಯತೆ ಕಡಿಮೆ. ಹಿಂದೂ ಧರ್ಮವೂ ಸೇರಿದಂತೆ ಜಗತ್ತಿನ ಎಲ್ಲ ಧರ್ಮಗಳೂ ಮತಾಂತರ ಪ್ರಕ್ರಿಯೆಯಿಂದಲೇ ಬೆಳೆಯುತ್ತ ಬಂದಿವೆ. ಒಂದು ಧರ್ಮ ಉಸಿರುಗಟ್ಟಿಸಿದಾಗ, ಮತ್ತೊಂದು ಧರ್ಮವನ್ನು ಆಶ್ರಯಿಸುವ ಪರಂಪರೆ ಇಂದು ನಿನ್ನೆಯದಲ್ಲ. ಈ ಚಲನಶೀಲತೆ ತಮ್ಮ ಧರ್ಮಕ್ಕೆ ಮಾರಕವಾದೀತೆಂದು ಬೆದರಿ ಇದನ್ನು ವಿರೋಧಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂಬುದನ್ನು ಹಿಂದೂ ಧರ್ಮದ ಸ್ವಘೋಷಿತ ರಕ್ಷಕರು ಅರ್ಥಮಾಡಿಕೊಳ್ಳಬೇಕಾಗಿದೆ.

ದೇಶದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಚರ್ಚ್‌ಗಳ ಮೇಲೆ ನಡೆದಿರುವ ದಾಳಿ ಹಿಂದೂ ಧರ್ಮದ ಯಥಾಸ್ಥಿತಿವಾದಿಗಳ ಅಸಹನೆ, ಅಸಹಾಯಕತೆಗೆ ಹಿಡಿದ ಕನ್ನಡಿ. ಈ ಧರ್ಮರಕ್ಷಕರು ಭೀತಿಗೊಂಡಿದ್ದಾರೆ. ಹಿಂದುಳಿದವರ-ದಲಿತರ ಸಮಾಧಿಯ ಮೇಲೆ ಕಟ್ಟಿದ ವೈದಿಕ ಧರ್ಮ ಅನಾಥವಾಗುತ್ತದೆಯೆಂಬ ಭಯ ಅವರನ್ನು ಕಾಡುತ್ತಿದೆ.

ಕಡೆಗೊಂದು ಮಾತು. ಹಿಂದವಃ ಸೋದರಃ ಸರ್ವೆ ಎಂದು ಹೇಳುತ್ತಲೇ ತಳವರ್ಗದ ಜನರಿಗೆ ಮಂಕುಬೂದಿ ಎರಚುತ್ತ ಬಂದ ಜನರನ್ನು ಹಿಡಿದು ಅವರ ಮೂಲದ ಬಗ್ಗೆ ಪ್ರಶ್ನೆ ಕೇಳಿ ನೋಡಿ. ಹಿಂದೂ ಎಂಬ ಶಬ್ದ ಉದ್ಭವವಾಗಿದ್ದು ಯಾವಾಗ ಎಂದು ಕೇಳಿ ನೋಡಿ. ಅವರ ಬಳಿ ಉತ್ತರವಿರುವುದು ಸಾಧ್ಯವಿಲ್ಲ.

ಒಂದು ರಾಜಕೀಯ ಪಕ್ಷವನ್ನು ಆಸರೆಯಾಗಿಟ್ಟುಕೊಂಡು ಹಿಂದೂ ಧರ್ಮ ರಕ್ಷಕರು ನಡೆಸುತ್ತಿರುವ ಉಪಟಳಗಳನ್ನು ಈ ಸಮಾಜ ಸಹಿಸಿಕೊಳ್ಳುವಷ್ಟು ಕಾಲ ಸಹಿಸಿಕೊಳ್ಳುತ್ತದೆ. ತೀರಾ ಅಸಹನೀಯ ಎನಿಸಿದ ದಿನ ಇಡೀ ಸಮಾಜವೇ ಸಿಡಿದು ನಿಲ್ಲುತ್ತದೆ. ಸ್ವಘೋಷಿತ ಧರ್ಮರಕ್ಷಕರ ಆಕ್ರಮಣಶೀಲತೆ ಅವರಿಗೇ ಮುಳುವಾಗುವ ಸಾಧ್ಯತೆಗಳೇ ಹೆಚ್ಚು.

ಈಗಲೂ ಡಾ.ಅಂಬೇಡ್ಕರ್ ಒಡ್ಡಿದ ಸವಾಲನ್ನೇ ಪೇಜಾವರರು ಮತ್ತು ಅವರಂಥವರಿಗೆ ಕೇಳಿ ನೋಡೋಣ: ಈಗಲಾದರೂ ತಮ್ಮ ಮಠಪೀಠಗಳನ್ನು ದಲಿತರಿಗೆ-ಹಿಂದುಳಿದವರಿಗೆ ಬಿಟ್ಟುಕೊಡಲು ಅವರು ಸಿದ್ಧರಿದ್ದಾರೆಯೆ? ಎಲ್ಲ ದೇವಸ್ಥಾನಗಳನ್ನು ತಳಸಮುದಾಯವರಿಗೆ ಬಿಟ್ಟುಕೊಡುವರೆ? ಹೇಗಿದ್ದರೂ ಈ ಎಲ್ಲ ದೇವಸ್ಥಾನಗಳಲ್ಲಿ ಪೂಜೆಗೊಳ್ಳುವ ದೇವರೆಲ್ಲ ಈ ತಳಸಮುದಾಯಗಳಿಗೇ ಸೇರಿದವರಲ್ಲವೆ? ಇಂಥದ್ದೊಂದು ತ್ಯಾಗ ಮಾಡಿದರೆ ಇಡೀ ದೇಶದಲ್ಲಿ ನಡೆಯುವ ಎಲ್ಲ ಬಗೆಯ ಮತಾಂತರವೂ ಸ್ಥಗಿತಗೊಳ್ಳುತ್ತದೆ. ತನ್ಮೂಲಕ ಭಾರತೀಯ ಸಮಾಜಕ್ಕೆ ಪೇಜಾವರರಂಥವರು ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ.

ಈ ಸವಾಲನ್ನು ಅವರು ಒಪ್ಪಿಕೊಳ್ಳುವರೆ?

Tuesday, September 16, 2008

ಬ್ಯೂಟಿ ಪಾರ್ಲರ್‌ಗಳು ಹಾಗು ಸಂತೋಷ್ ಹೆಗಡೆಯವರು....


ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಸಂತೋಷ್ ಹೆಗಡೆಯವರೇ,

ತಾವು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಭ್ರಷ್ಟ ಅಧಿಕಾರಿಗಳ ಗುಂಡಿಗೆ ನಡುಗುತ್ತಿದೆ. ಹಿಂದಿನ ಲೋಕಾಯುಕ್ತರು ಲೋಕಾಯುಕ್ತ ಸಂಸ್ಥೆ ಎಂಬುದೊಂದು ಇದೆ ಎಂಬುದನ್ನು ತೋರಿಸಿಕೊಟ್ಟಿದ್ದರು. ಭ್ರಷ್ಟಾಚಾರದ ವಿರುದ್ಧ ತಮ್ಮದೇ ಆದ ವಿಧಾನದಲ್ಲಿ ಜನಜಾಗೃತಿ ಮೂಡಿಸಿದ್ದರು. ತಾವು ಇನ್ನೂ ಒಂದು ಹೆಜ್ಜೆ ಮುಂದು ಹೋಗಿದ್ದೀರಿ. ಸಣ್ಣ ಪುಟ್ಟ ಅಧಿಕಾರಿಗಳ ಜತೆಗೆ ದೊಡ್ಡ ತಿಮಿಂಗಲಗಳನ್ನೂ ನಿಮ್ಮ ಬಲೆಗೆ ಕೆಡವಿಕೊಂಡಿರಿ. ಪರಿಣಾಮವಾಗಿ ಐಎಎಸ್-ಐಪಿಎಸ್ ಅಧಿಕಾರಿಗಳೂ ಲೋಕಾಯುಕ್ತ ಸಿಂಡ್ರೋಮ್‌ಗೆ ಒಳಗಾಗಿದ್ದಾರೆ. ‘ನನ್ನ ಸರದಿ ಯಾವಾಗ? ಎಂಬುದೇ ಜನಸಾಮಾನ್ಯರ ದುಡ್ಡು ತಿಂದು ಕೊಬ್ಬಿರುವ ಅಧಿಕಾರಗಳ ಪ್ರಶ್ನೆಯಾಗಿದೆ. ರಾತ್ರಿ ಕನಸಿನಲ್ಲಿಯೂ ನೀವು ಅವರನ್ನು ಕಾಡುತ್ತಿದ್ದೀರಿ.

ಇದೆಲ್ಲವೂ ಸರಿ, ಈ ವಿಷಯ ಕುರಿತು ಇಲ್ಲಿ ನಾನು ಪ್ರಸ್ತಾಪಿಸುತ್ತಿಲ್ಲ. ನಾನು ಹೇಳಲು ಹೊರಟಿರುವುದು ನಿಮ್ಮ ಸಾಧನೆ, ವೃತ್ತಿಗೆ ಸಂಬಂಧಪಡದ ವಿಷಯ. ತಾಳ್ಮೆಯಿಂದ ಪರಾಂಬರಿಸಬೇಕು ಎಂಬುದು ನನ್ನ ವಿನಂತಿ.

ಸೆಪ್ಟೆಂಬರ್ ೧೨ರ ಪ್ರಜಾವಾಣಿ ಪತ್ರಿಕೆಯ ಮೂರನೇ ಪುಟದಲ್ಲಿ ತಮ್ಮ ಹೇಳಿಕೆಯೊಂದು ಪ್ರಕಟಗೊಂಡಿದೆ. ಅದರ ಮೊದಲ ಪ್ಯಾರಾ ಹೀಗಿದೆ: “ ಸರ್ಕಾರಿ ಅಧಿಕಾರಿಗಳ ವಿರುದ್ಧ ಉತ್ಪ್ರೇಕ್ಷಿತ ವರದಿಗಳನ್ನು ನಾವು ನೀಡುತ್ತಿಲ್ಲ. ನಾವು ಬ್ಯೂಟಿ ಪಾರ್ಲರ್ ಕೆಲಸವನ್ನೇನೂ ಮಾಡುವುದಿಲ್ಲ. ಭ್ರಷ್ಟರ ಪರ ವಹಿಸುವವರು ಎಚ್ಚರಿಕೆಯಿಂದ ಮಾತನಾಡಲಿ

ನಿಮ್ಮ ಬಲೆಗೆ ಬಿದ್ದ ಸರ್ಕಾರಿ ಅಧಿಕಾರಿಗಳ ಆಸ್ತಿ ಮೌಲ್ಯ ನಿಗದಿ ಮಾಡುವಾಗ ಬೇಕಾಬಿಟ್ಟಿ ವರದಿ ನೀಡುತ್ತಿದ್ದೀರಿ ಎಂದು ಸಚಿವರೊಬ್ಬರು ಆರೋಪಿಸಿದ ಹಿನ್ನೆಲೆಯಲ್ಲಿ ನೀವು ಈ ಸ್ಪಷ್ಟನೆ ನೀಡಿದ್ದೀರಿ.

ಸಚಿವರಿಗೆ ಸರಿಯಾದ ಉತ್ತರ ನೀಡಬೇಕಿತ್ತು, ನೀಡಿದ್ದೀರಿ. ಆ ಬಗ್ಗೆ ನನ್ನ ತಕರಾರಿಲ್ಲ. ಆದರೆ ವಿನಾಕಾರಣ ಬ್ಯೂಟಿ ಪಾರ್ಲರ್ ಕೆಲಸವನ್ನು ಯಾಕೆ ಎಳೆತಂದಿರಿ ಎಂಬುದು ನನ್ನ ಪ್ರಶ್ನೆ.

ಬ್ಯೂಟಿಪಾರ್ಲರ್ ಕೆಲಸವೆಂಬುದು ಬೇಕಾಬಿಟ್ಟಿ ಕೆಲಸವೇ? ಅದೇನು ಕೊಳಕು ಕಾರ್ಯವೇ? ಸಮಾಜ ಬಾಹಿರ ಉದ್ಯೋಗವೆ? ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಕೆಲಸವೇ? ಸುಳ್ಳು ದಗಲ್ಬಾಜಿಯ ಕೆಲಸವೇ? ಬ್ಯೂಟಿ ಪಾರ್ಲರ್ ಕೆಲಸ ಮಾಡುವವರು ವಂಚನೆ ಮಾಡುತ್ತಾರೆಯೇ? ಯಾಕೆ ನೀವು ಬ್ಯೂಟಿ ಪಾರ್ಲರ್ ಉದಾಹರಣೆ ನೀಡಿದಿರಿ?

ನಾವು ಬೀದಿಗಳಲ್ಲಿ ಆಗಾಗ ಒಂದು ಮಾತನ್ನು ಕೇಳುತ್ತಿರುತ್ತೇವೆ. ‘ನಾನೇನು ಹಜಾಮತಿ ಮಾಡ್ತಿದ್ದೀನಾ? ನಾನೇನು ಹಜಾಮನಾ? ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಕೆಲವರು ಇಂಥ ಪ್ರಯೋಗಗಳನ್ನು, ಉಪಮೆಗಳನ್ನು ಬಳಸುತ್ತಾರೆ. ನೀವು ಹೀಗೆ ಹೇಳುವ ಬದಲು ನಾವೇನು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದೀನಾ? ಎಂದು ಸಭ್ಯ ಭಾಷೆಯಲ್ಲಿ ಹೇಳಿದ್ದೀರಿ ಅಷ್ಟೆ.

ಅಷ್ಟಕ್ಕೂ ನನ್ನಂಥವರಿಗೆ ಅರ್ಥವಾಗದ ವಿಷಯವೇನೆಂದರೆ ಯಾವುದೇ ವೃತ್ತಿ ಕನಿಷ್ಠ, ಮೊತ್ತೊಂದು ಶ್ರೇಷ್ಠ ಆಗುವುದು ಹೇಗೆ? ದೇಶದ ಶ್ರಮಿಕ ಜನವರ್ಗ ಹಲವು ಬಗೆಯ ಕುಲಕಸುಬುಗಳನ್ನು ರೂಢಿಸಿಕೊಂಡಿದ್ದಾರೆ. ಚಪ್ಪಲಿ ಹೊಲೆಯುವವರು, ಬೀದಿ ಗುಡಿಸುವವರು, ಕಕ್ಕಸ್ಸು ತೆಗೆಯುವವರು, ಕ್ಷೌರ ಮಾಡುವವರು, ಬಟ್ಟೆ ಒಗೆಯುವವರು, ಬಟ್ಟೆ ನೇಯುವವರು, ಕುರಿ ಕಾಯುವವರು, ದನ ಮೇಯಿಸುವವರು, ಮರಗೆಲಸದವರು, ಮಡಿಕೆ ಮಾಡುವವರು... ಹೀಗೆ ಹಲವು ಬಗೆಯ ಕುಲಕಸುಬುಗಳನ್ನು ಮಾಡುವ ಜನವರ್ಗ ನಮ್ಮಲ್ಲಿದೆ. ಹೀಗೆ ಕುಲಕಸುಬುಗಳನ್ನು ಮಾಡುವವರು ಕನಿಷ್ಠರೇ. ಕೇವಲ ಸಾಫ್ಟ್‌ವೇರ್ ಇಂಜಿನಿಯರುಗಳು, ಡಾಕ್ಟರುಗಳು, ನ್ಯಾಯಮೂರ್ತಿಗಳು, ಐಎಎಸ್-ಐಪಿಎಸ್ ಅಧಿಕಾರಿಗಳು, ದೇವಸ್ಥಾನಗಳಲ್ಲಿ ಪೂಜೆ ಮಾಡುವವರು ಮಾತ್ರ ಶ್ರೇಷ್ಠರೇ?

ನಮ್ಮ ಸಾಮಾಜಿಕ ವ್ಯವಸ್ಥೆ ಹೇಗಿದೆಯೆಂದರೆ ಶ್ರೇಣೀಕೃತ ಜಾತಿವ್ಯವಸ್ಥೆಯ ತಳಭಾಗದಲ್ಲಿರುವ ಜಾತಿಗಳ ಹೆಸರನ್ನೇ ನಮ್ಮ ಸಮಾಜ ಬೈಗುಳಗಳನ್ನಾಗಿ ಬಳಸುತ್ತಿದೆ. ಹೊಲೆಯ, ಮಾದಿಗ, ಹಜಾಮ, ಕೊರಮ, ಕೊರಚ, ದೊಂಬಿದಾಸ, ಪಿಂಜಾರ, ಕುರುಬ, ಒಡ್ಡ, ಕಲ್ಲು ಒಡ್ಡ, ದರವೇಸಿ, ಸುಡುಗಾಡು ಸಿದ್ಧ, ಶಿಳ್ಳೇಕ್ಯಾತ ಹೀಗೆ ಹಲವು ಜಾತಿಗಳ ಹೆಸರುಗಳು ಬೈಗುಳಗಳಾಗಿ ಬಳಕೆಯಾಗುತ್ತಿವೆ. ಈ ಪೈಕಿ ಹೊಲೆಯ ಹಾಗು ಮಾದಿಗ ಸಮುದಾಯಕ್ಕೆ ಅಸ್ಪೃಶ್ಯತಾ ನಿಷೇಧ ಕಾಯ್ದೆಯಡಿ ರಕ್ಷಣೆ ನೀಡಲಾಗಿದೆ. ಹೀಗಿದ್ದೂ ಜಾತಿ ಹೆಸರು ಹೇಳಿ ನಿಂದಿಸುವ ‘ಪರಂಪರೆಯೇನು ಕೊನೆಯಾಗಿಲ್ಲ.

ಆದರೆ ಇನ್ನುಳಿದ ಜಾತಿಗಳಿಗೆ ಆ ರಕ್ಷಣೆಯೂ ಇಲ್ಲ. ಯಾವ ತಪ್ಪಿಗಾಗಿ ಈ ಸಮುದಾಯಗಳ ಜನರಿಗೆ ಶಿಕ್ಷೆ? ಈ ಸಮುದಾಯಗಳ ಪೈಕಿ ಕೆಲವು ದಲಿತ ವರ್ಗಕ್ಕೆ ಸೇರಿದವು. ಮತ್ತೆ ಕೆಲವು ಅಲೆಮಾರಿ ಬುಡಕಟ್ಟು ಜಾತಿಗಳು. ಇನ್ನುಳಿದವು ಹಿಂದುಳಿದ ಜಾತಿಗಳು. ಯಾಕೆ ಈ ಜನಸಮೂಹಗಳು ಮಾಡುತ್ತಿರುವ ಜೀವನಾಧಾರ ಕಸುಬುಗಳು ಕೀಳು ಎಂಬಂತೆ ಬಿಂಬಿತವಾದವು? ಈ ಸಮಾಜ ಎಷ್ಟು ಕೃತಘ್ನ ಎಂದರೆ ಇಡೀ ದೇಶದ ಜನರ ಶಾರೀರಿಕ ಹಾಗು ಮಾನಸಿಕ ಸ್ವಾಸ್ಥ್ಯ ಕಾಪಾಡುವ, ಊರು ತೊಳೆಯುವ, ಶುದ್ಧಗೊಳಿಸುವ ಕೆಲಸ ಮಾಡುವವರನ್ನೇ ನಿಂದಿಸುತ್ತದೆ, ಅವರಲ್ಲಿ ಕೀಳರಿಮೆ ತಂದೊಡ್ಡುತ್ತದೆ.

ದೇಶದ ಸಾಮಾಜಿಕ ಇತಿಹಾಸದ ದುರಂತವೇ ಇದು. ಯಾರು ಸಮಾಜದ ಕೊಳೆ-ಕೊಳಕುಗಳನ್ನು ಬಾಚಿ, ಬಳಿದು ಶುದ್ಧಗೊಳಿಸುತ್ತಾನೋ ಅವನು ಕನಿಷ್ಠ ಎನಿಸಿಕೊಂಡ. ಯಾರು ಸಮಾಜದ ಒಳಗೆ ಕೊಳೆ-ಕೊಳಕುಗಳನ್ನು ತುಂಬುತ್ತಾನೋ ಅವನು ಶ್ರೇಷ್ಠ ಎನಿಸಿಕೊಂಡ.

ಇನ್ನು ನೀವು ನಿಮ್ಮನ್ನು ಸಮರ್ಥಿಸಿಕೊಳ್ಳಲು ಬಳಸಿಕೊಂಡ ಉಪಮೆಯ ವಿಷಯಕ್ಕೆ ಬರೋಣ. ಬ್ಯೂಟಿಪಾರ್ಲರ್‌ಗಳನ್ನು ಅಥವಾ ಹೇರ್ ಕಟಿಂಗ್ ಸೆಲೂನ್‌ಗಳನ್ನು ನಡೆಸುತ್ತಿರುವವರು, ಆ ಕಾಯಕ ಮಾಡುತ್ತಿರುವವರು ಸವಿತಾ ಸಮಾಜದವರು. ಈ ಸಮಾಜಕ್ಕೆ ಹಜಾಮ, ನಯನಜ ಕ್ಷತ್ರಿಯ, ಭಂಡಾರಿ, ಹಡಪದ, ಕ್ಷೌರಿಕ ಇತ್ಯಾದಿ ಉಪನಾಮಗಳಿವೆ. ಈ ರಾಜ್ಯದಲ್ಲಿ ಅತಿ ಹೆಚ್ಚು ಬೈಗುಳವಾಗಿ ಬಳಕೆಯಾಗುವ ಶಬ್ದ ಎಂದರೆ ಅದು ಹಜಾಮ.

ಈ ಸಮುದಾಯವರು ಸಮಾಜ ಬಂಧುಗಳ ತಲೆ ಕೂದಲು, ಗಡ್ಡದ ಕೂದಲು ಬೆಳೆದಂತೆ ಅವುಗಳನ್ನು ಕತ್ತರಿಸಿ ಓರಣಗೊಳಿಸುತ್ತಾರೆ. ಗಬ್ಬುನಾರು ಕಂಕುಳ ಅಡಿಯ ಕೂದಲನ್ನು ತೆಗದು ಸ್ವಚ್ಛಗೊಳಿಸುತ್ತಾರೆ. ಇದಕ್ಕೆ ನಿಗದಿಪಡಿಸಿದ ಬೆಲೆಯನ್ನು ಪಡೆದುಕೊಳ್ಳುತ್ತಾರೆ. ಒಂದು ವೇಳೆ ಇವರು ಇಲ್ಲದೇ ಇದ್ದಿದ್ದರೆ ಎಲ್ಲರೂ ಕೆಜಿಗಟ್ಟಲೆ ತಲೆಕೂದಲು, ಜಟೆ, ಗಡ್ಡ ಬಿಟ್ಟುಕೊಂಡು ಅಸಹ್ಯವಾಗಿ ಕಾಣಬೇಕಾಗುತ್ತಿತ್ತು. ಇದು ಅಪ್ಪಟ ಶುದ್ಧಿಯ ಕಾಯಕ. ಕೊಳಕನ್ನು ತೊಳೆದುಕೊಂಡು ಶುಭ್ರಗೊಳ್ಳಲೆಂದೇ ಇವರ ಬಳಿ ನಾವು ಹೋಗುತ್ತೇವೆ.

ಈ ಶುದ್ಧಿಯ ಕಾಯಕವೇನು ವಂಚನೆಯೇ? ಸೂಳೆಗಾರಿಕೆಯೇ? ಕಳ್ಳತನವೇ? ದರೋಡೆಯೇ? ಅಥವಾ ತಲೆಹಿಡಿಯುವ ನೀಚ ಕಾಯಕವೇ? ಹೀಗಿರುವಾಗ ನಮ್ಮ ಸಮಾಜ ಈ ಕಾಯಕವನ್ನು ಕೆಟ್ಟದ್ದಕ್ಕೆ, ಕೊಳಕು ವಿಷಯಗಳಿಗೆ ಉಪಮೆಯನ್ನಾಗಿ ಬಳಸುವುದು ಯಾಕೆ? ಇದು ಅನ್ಯಾಯವಲ್ಲವೆ?

ಸಾಧಾರಣವಾಗಿ ಹೇರ್ ಕಟಿಂಗ್ ಸೆಲೂನ್ ಎಂದರೆ ಪುರುಷರ ಕೇಶ ವಿನ್ಯಾಸಕ್ಕೆ ನಿಗದಿಯಾದ ಸ್ಥಳಗಳು. ಬ್ಯೂಟಿ ಪಾರ್ಲರ್‌ಗಳು ಹೆಣ್ಣು ಮಕ್ಕಳ ಕೇಶ ಶೃಂಗಾರ ಮಾಡುತ್ತವೆ. ಈ ಬ್ಯೂಟಿ ಪಾರ್ಲರ್‌ಗಳನ್ನು ನಡೆಸುವ ಹೆಣ್ಣುಮಕ್ಕಳ ಬದುಕಿನಲ್ಲಿ ಸಾವಿರ ನೋವುಗಳಿರುತ್ತವೆ. ಅವರು ಬದುಕಿನ ಅನಿವಾರ್ಯತೆಗಳಿಂದ ನೊಂದವರು. ಕುಟುಂಬ ನಿರ್ವಹಣೆಯ ಹೊಣೆ ಹೊತ್ತುಕೊಂಡವರು. ಸಮಾಜದ ನಿಂದನೆಗಳಿಂದ ನೊಂದು, ಈ ಅಪಮಾನಗಳನ್ನು ಮೆಟ್ಟಿನಿಂತು ಕೆಲಸ ಮಾಡುವವರು. ಇವರ ಕಾಯಕ ಕನಿಷ್ಠವಾಗಲು ಸಾಧ್ಯವೆ? ಇವರು ಸಮಾಜ ಬಾಹಿರವಾದ ಕೆಲಸವನ್ನೇನಾದರೂ ಮಾಡುತ್ತಿದ್ದಾರೆಯೇ?

ಮಾನ್ಯ ಸಂತೋಷ್ ಹೆಗಡೆಯವರೆ,

ತಾವು ಬ್ಯೂಟಿ ಪಾರ್ಲರ್ ಹೋಲಿಕೆಯನ್ನು ಬಳಸುವಾಗ ಇದೆಲ್ಲವನ್ನು ಯೋಚಿಸಿರಲಾರಿರಿ. ಆಕಸ್ಮಿಕವಾಗಿ ನಿಮ್ಮ ಬಾಯಿಂದ ಈ ಮಾತು ಹೊರಬಂದಿರಬಹುದು. ಆದರೆ ನಿಮ್ಮಂಥ ಉನ್ನತ ಸ್ಥಾನದಲ್ಲಿ ಕುಳಿತ ವ್ಯಕ್ತಿಗಳು, ನಿಮ್ಮ ಹಾಗೆ ಜನಪ್ರಿಯರಾಗಿರುವ ಸಾರ್ವಜನಿಕ ವ್ಯಕ್ತಿಗಳು ಹೀಗೆ ಮಾತನಾಡಿದರೆ ಅದು ಆ ಸಮುದಾಯಕ್ಕೆ ಎಷ್ಟು ನೋವು ತರುತ್ತದೆ ಎಂಬುದನ್ನು ನೀವು ಅಂದಾಜು ಮಾಡಲಾರಿರಿ. ನೊಂದವರಿಗಷ್ಟೆ ನೋವಿನ ಆಳ-ಅಗಲ ಗೊತ್ತಾಗಲು ಸಾಧ್ಯ ಅಲ್ಲವೆ?

ಇದೆಲ್ಲವನ್ನು ತಮ್ಮ ಬಳಿ ಬಂದು ಖಾಸಗಿಯಾಗಿ ನಿವೇದಿಸಿಕೊಳ್ಳಬಹುದಿತ್ತು. ಆದರೆ ಇದು ನೀವು ಖಾಸಗಿಯಾಗಿ ಆಡಿದ ಮಾತಲ್ಲ. ನಿಮ್ಮ ಮಾತು ಪ್ರಜಾವಾಣಿಯಂಥ ಜನಪ್ರಿಯ ಪತ್ರಿಕೆಯಲ್ಲಿ ಪ್ರಕಟಗೊಂಡು ಲಕ್ಷಾಂತರ ಜನರು ಓದಿದ್ದಾರೆ. ಹಾಗಾಗಿ ಬಹಿರಂಗ ಪತ್ರವನ್ನೇ ಬರೆಯಬೇಕಾಯಿತು.

ಈ ಪತ್ರ ಓದಿದ ಮೇಲೆ ತಮಗೆ ತಾವು ಆಡಿದ ಮಾತಿನ ಬಗ್ಗೆ ವಿಷಾದವೆನ್ನಿಸಿದರೆ ಸಾಕು, ನನ್ನ ಶ್ರಮ ಸಾರ್ಥಕ.

ಲೋಕಾಯುಕ್ತ ಹುದ್ದೆಯಲ್ಲಿ ನಿಮ್ಮ ಸಾರ್ಥಕ ಸೇವೆಯ ಬಗ್ಗೆ ಒಂದೇ ಒಂದು ಕಳಂಕವೂ ಇರಲಾರದು. ಹುದ್ದೆಗೆ ಬರುವ ಮುನ್ನವೇ ನಿಮ್ಮ ಆಸ್ತಿ ವಿವರ ಘೋಷಿಸಿಕೊಂಡು ಇಡೀ ಇಲಾಖೆಗೆ ಮೇಲ್ಪಂಕ್ತಿ ಹಾಕಿಕೊಟ್ಟವರು ನೀವು. ನಿಮ್ಮ ಪ್ರಾಮಾಣಿಕತೆ, ಬದ್ಧತೆಯನ್ನು ಯಾರೂ ಶಂಕಿಸಲಾರರು.

ಈ ಗೌರವ ಆದರಗಳನ್ನು ಇಟ್ಟುಕೊಂಡೇ ನಿಮ್ಮ ಅನಪೇಕ್ಷಿತ ಪ್ರತಿಕ್ರಿಯೆಯ ಕುರಿತು ನನ್ನ ಆಕ್ಷೇಪಣೆ ದಾಖಲಿಸಿದ್ದೇನೆ. ಅದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಇಂಥ ಆಕ್ಷೇಪಣೆಯ ಯತ್ನಗಳು ನನಗೆ, ನನ್ನಂಥವರಿಗೆ ಸಂಕಷ್ಟಗಳನ್ನು ತಂದೊಡ್ಡಬಹುದು. ಆ ಕುರಿತು ನಾನು ಹೆಚ್ಚು ತಲೆಕೆಡಿಸಿಕೊಳ್ಳಲಾರೆ. ಅನ್ಯಥಾ ಭಾವಿಸಬೇಡಿ.

ಅಪಾರ ಗೌರವದೊಂದಿಗೆ,

ದಿನೇಶ್ ಕುಮಾರ್ ಎಸ್.ಸಿ.
e-mail: dinoosacham@gmail.com
blog: http://desimaatu.blogspot.com

Saturday, September 13, 2008

ಪ್ರಜಾವಾಣಿಯ ‘ಒರಿಸ್ಸಾ ಪ್ರಯೋಗ!

ವೀರಹೆಜ್ಜೆ ಹಾಕಿ ಮುನ್ನೆಡೆದಾಗ ಅನೇಕರಿಗೆ ತಿಳಿಯದು
ಪಂಕ್ತಿಯ ಮುಂತುದಿಯಲ್ಲಿ ನಡೆದವನು ಅವರ ಶತ್ರುವೆಂದು.
ಅವರಿಗೆ ಆಜ್ಞೆ ನೀಡುವ ಧ್ವನಿ
ಅವರ ಶತ್ರುವಿನದೆಂದು.
ಶತ್ರು ಶತ್ರು ಎಂದು ಅರಚುತ್ತಿರುವವನೇ
ಅವರ ಶತ್ರುವೆಂದು

-ಬೆರ್ಟೋಲ್ಟ್ ಬ್ರೆಷ್ಟ್

ಪ್ರಜಾವಾಣಿಗೆ ಏನಾಗಿಹೋಗಿದೆ?
ಒಂದು ಕಾಲದಲ್ಲಿ ಪ್ರಗತಿಪರ ಶಕ್ತಿಗಳ, ಜೀವಪರ ಮನಸ್ಸುಗಳ, ಮಾನವೀಯ ಮೌಲ್ಯಗಳ ಮುಖವಾಣಿಯಂತಿದ್ದ ಪ್ರಜಾವಾಣಿ ಸಂಘಪರಿವಾರದ ತೆಕ್ಕೆಗೆ ಸರಿದು ಹೋಗಿದ್ದು ಹೇಗೆ? ಅಂಥ ಅನಿವಾರ್ಯತೆಯಾದರೂ ಅವರಿಗೆ ಬಂದಿದ್ದೇಕೆ? ಯಾರಿಗಾದರೂ ಉತ್ತರ ಗೊತ್ತಿದ್ದರೆ ದಯವಿಟ್ಟು ಹೇಳಿ.

ಪ್ರಜಾವಾಣಿ ಕರ್ನಾಟಕದ ಜನಮನದ ಅಭಿವ್ಯಕ್ತಿಯಾಗಿಯೇ ಹರಿದು ಬಂದಿದೆ. ಸುದ್ದಿ-ವಿಶ್ಲೇಷಣೆಯಿಂದ ಹಿಡಿದು ಲೇಖನ-ಕವಿತೆ-ಕತೆಯವರೆಗೆ ಪ್ರಜಾವಾಣಿಯಲ್ಲಿ ಪ್ರಕಟವಾಗುವ ಎಲ್ಲ ಬರೆಹಕ್ಕೂ ಒಂದು ಮಾನದಂಡವಿತ್ತು. ಪ್ರಕಟವಾಗುವ ಪ್ರತಿ ಸಾಲಿಗೂ ಅರ್ಹತೆಯ ಅಗತ್ಯವಿತ್ತು.
ಈಗೇನಾಗಿದೆ?

ಸೆಪ್ಟೆಂಬರ್ ೮ರ ಪ್ರಜಾವಾಣಿ ಸಂಚಿಕೆಯನ್ನೊಮ್ಮೆ ಗಮನಿಸಿ. ಮುಖಪುಟದಲ್ಲಿ ಮತಾಂತರ ಯತ್ನ: ಇಬ್ಬರ ಬಂಧನ ಎಂಬ ಶೀರ್ಷಿಕೆಯಡಿಯಲ್ಲಿ ಜೋಗುಪಾಳ್ಯದಲ್ಲಿ ನಡೆದ ಗದ್ದಲದ ವರದಿಯಿದೆ.

ಇಡೀ ವರದಿಯನ್ನು ಪ್ರಮೋದ್ ಮುತಾಲಿಕನೇ (ಚಂಪಾ ಅವರು ಈತನನ್ನು ಆಗಾಗ ಪ್ರಮಾದ ಮುತಾಲಿಕ ಅನ್ನುವುದುಂಟು) ಬರೆದಿದ್ದಾನೇನೋ ಎಂಬಂತಿದೆ. ವರದಿಯ ಭಾಷೆ ಎಷ್ಟು ಅಗ್ರೆಸಿವ್ ಆಗಿದೆಯೆಂದರೆ ವರದಿಗಾರನೇ ಇಲ್ಲಿ ಆರೋಪಿಗಳ ವಿರುದ್ಧ ದೂರು ಸಲ್ಲಿಸಿದ ದೂರುದಾರ, ಆತನೇ ತನಿಖಾಧಿಕಾರಿ, ಆತನೇ ನ್ಯಾಯಾಧೀಶ ಆಗಿದ್ದಾನೆ.

ವರದಿಯ ಭಾಷೆಯನ್ನು ಒಮ್ಮೆ ಗಮನಿಸಿ:
ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಮತಾಂತರಕ್ಕೆ ಯತ್ನಿಸಿದ (ಯತ್ನಿಸಿದರು ಎಂಬ ಆರೋಪಕ್ಕೆ ಗುರಿಯಾಗಿರುವ ಎಂಬ ಪ್ರಯೋಗ ಬೇಕಿತ್ತಲ್ಲವೆ?) ವಿದೇಶಿ ಪ್ರಜೆ ಸೇರಿದಂತೆ ೬ ಮಂದಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಹಲಸೂರಿನ ಜೋಗುಪಾಳ್ಯದಲ್ಲಿ ಭಾನುವಾರ ನಡೆದಿದೆ.......................

ಆರೋಪಿಗಳನ್ನು ಹಿಡಿದುಕೊಟ್ಟರೂ ಪ್ರಕರಣ ದಾಖಲಿಸಲು ವಿಳಂಬ ಮಾಡಿದ (ವಿಳಂಬ ಮಾಡಿದರು ಎಂದು ಆರೋಪಿಸಿ ಎಂದಿರಬೇಕಿತ್ತಲ್ಲವೆ?) ಪೊಲೀಸರ ಕ್ರಮ ಖಂಡಿಸಿ ವಿಶ್ವ ಹಿಂದೂ ಪರಿಷತ್................. ಪ್ರತಿಭಟನೆ ನಡೆಸಿದರು.

ಘಟನೆಯನ್ನು ವರದಿ ಮಾಡಲು ಹೋದ ಟಿವಿ ಮಾಧ್ಯಮದವರ ಕ್ಯಾಮೆರಾವನ್ನೂ ಇನ್ಸ್‌ಪೆಕ್ಟರ್ ಎಂ.ಕೆ.ತಮ್ಮಯ್ಯ ಕಿತ್ತುಕೊಳ್ಳಲು ಯತ್ನಿಸಿದ ಘಟನೆಯೂ ನಡೆಯಿತು.

ಕೊನೆಗೆ ಪ್ರಕರಣ ದಾಖಲಿಸಿದ ಪೊಲೀಸರು ಅಮೆರಿಕಾ ಪ್ರಜೆ ಕ್ಯಾನನ್ ಮತ್ತು ಆಂಧ್ರಪ್ರದೇಶದ ವೆಲ್ಲೂರಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದರು. ವರದಿ ಹೀಗೆ ಪ್ರಾರಂಭವಾಗುತ್ತದೆ.

ಮುಂದಿನ ಸಾಲುಗಳೆಲ್ಲ ಪ್ರಮೋದ ಮುತಾಲಿಕನ ಭಾಷೆಯೇ. ಅದರಲ್ಲಿ ಯಾವುದೇ ಅನುಮಾನ ಬೇಡ. ಪ್ರಜಾವಾಣಿ ವರದಿ ಹೀಗೆ ಸಾಗುತ್ತದೆ:
ಜೋಗುಪಾಳ್ಯ ನಿವಾಸಿ ಗುಣಶೇಖರ್ ಎಂಬುವರ ಮನೆಗೆ ಬಂದ ಆರು ಮಂದಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೆ ಹಣ ಇನ್ನಿತರ ಸೌಲಭ್ಯ ನೀಡುವುದಾಗಿ ಆಮಿಷ ಒಡ್ಡಿದರು. ವಿಸಿಟಿಂಗ್ ಕಾರ್ಡ್ ನೀಡಿದ ಅವರು ಅದರಲ್ಲಿರುವ ವಿಳಾಸಕ್ಕೆ ಬಂದರೆ ಹಣ ನೀಡುವುದಾಗಿ ಹೇಳಿದರು.

ಕಾರ್ಡ್‌ನಲ್ಲಿರುವ ಇಂದಿರಾನಗರದ ಮೊದಲನೇ ಹಂತ, ಸಿಎಂಎಚ್ ರಸ್ತೆ ಎರಡನೇ ಕ್ರಾಸ್ (ಡೋರ್ ಸಂಖ್ಯೆ ೯೮) ಎಂದಿತ್ತು. ಇದರಿಂದ ಆಕ್ರೋಶಗೊಂಡ ಗುಣಶೇಖರ್, ಆರ್‌ಎಸ್‌ಎಸ್, ವಿಎಚ್‌ಪಿ ಮತ್ತು ರಕ್ಷಣಾ ವೇದಿಕೆ ಸದಸ್ಯರು ಹಾಗು ಸಾರ್ವಜನಿಕರ ಸಹಾಯದಿಂದ ಆರು ಮಂದಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಆದರೆ ರಾತ್ರಿ ೯ ಗಂಟೆಯಾದರೂ ಪೊಲೀಸರು ಪ್ರಕರಣ ದಾಖಲಿಸಲಿಲ್ಲ.

ಇದರಿಂದ ಕುಪಿತರಾದ ಸಾರ್ವಜನಿಕರು ಠಾಣೆಯ ಎದುರು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಇದಕ್ಕೂ ಪೊಲೀಸರು ಸ್ಪಂದಿಸದಿದ್ದಾಗ ರಸ್ತೆ ತಡೆಯನ್ನೂ ನಡೆಸಿದರು. ಈ ಎಲ್ಲ ಬೆಳವಣಿಗೆಗಳಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಪ್ರಕರಣ ದಾಖಲಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದರು. ಬಂಧಿತ ವಿದೇಶಿ ಪ್ರಜೆ ಕ್ಯಾನನ್ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಿಲಿಲ್ಲ. ಕ್ಯಾನನ್ ವೀಸಾ ಮತ್ತು ಪಾಸ್‌ಪೋರ್ಟ್ ಬಗ್ಗೆ ಮಾಹಿತಿ ನೀಡಿ ಎಂದು ಕೇಳಿದರೂ ಪ್ರಯೋಜನ ಆಗಲಿಲ್ಲ................
ವರದಿ ಹೀಗೆ ಸಾಗುತ್ತದೆ.

ಇಲ್ಲಿ ಗುಣಶೇಖರ್ ಹೇಳಿದ್ದೆಲ್ಲ ಪ್ರಜಾವಾಣಿಗೆ ಪರಮಸತ್ಯ. ಆತನ ಮನೆಯಲ್ಲಿ ನಡೆಯಿತು ಎನ್ನಲಾದ ಎಲ್ಲ ವಿಷಯಗಳನ್ನೂ ಪ್ರಜಾವಾಣಿ ತಂಡವೇ ಖುದ್ದಾಗಿ ಕಣ್ಣಿಂದ ನೋಡಿದಂತೆ ಬರೆಯಲಾಗಿದೆ. ಇರಬಹುದು, ಗುಣಶೇಖರ್ ದೂರು ಸಂಪೂರ್ಣ ಸತ್ಯವೇ ಇರಬಹುದು. ಆದರೆ ಅದನ್ನು ನಿರ್ಧರಿಸುವವರು ಯಾರು? ಗುಣಶೇಖರ್ ಆರೋಪಗಳನ್ನು ಪ್ರಜಾವಾಣಿಯೇ ಸಂಪೂರ್ಣ ಸತ್ಯ ಎಂದು ಘೋಷಿಸಿದರೆ ಪೊಲೀಸ್ ಠಾಣೆ ಯಾಕೆ ಬೇಕು? ನ್ಯಾಯಾಲಯಗಳು ಯಾಕೆ ಬೇಕು? ಇದು ಸಹ ಒಂದು ಬಗೆಯ ಗೂಂಡಾಗಿರಿಯಲ್ಲವೆ?

ಆರೋಪಿಗಳನ್ನು ಸಾರ್ವಜನಿಕರೇ ಹಿಡಿದುಕೊಟ್ಟರು ಎಂದು ಪ್ರಜಾವಾಣಿಯವರು ಒಂದು ಬಗೆಯ ಪ್ರಶಂಸಾಪೂರ್ವಕವಾಗಿ ಬರೆಯುತ್ತಾರೆ. ಹಾಗೆ ಹಿಡಿದುಕೊಡುವ ಅಧಿಕಾರ ಯಾರು ಕೊಟ್ಟರು? ಹಿಡಿದು ಕೊಡುವಾಗ ಆರೋಪಿಗಳ ಮಾನವಹಕ್ಕುಗಳ ಹರಣ ಆಗುವುದಿಲ್ಲವೆಂಬ ಖಾತ್ರಿಯಾದರೂ ಏನು? ಪೊಲೀಸರೇ ಆರೋಪಿಗಳನ್ನು ಬಂಧಿಸುವಾಗ ಹಲವು ಬಗೆಯ ರೀತಿ-ರಿವಾಜುಗಳನ್ನು ಪಾಲಿಸಬೇಕಾಗುತ್ತದೆ. ಹೀಗಿರುವಾಗ ಪ್ರಜಾವಾಣಿಯವರು ಉಲ್ಲೇಖಿಸುವ ಸೊ ಕಾಲ್ಡ್ ಸಾರ್ವಜನಿಕರು ಯಾವ ರೀತಿ-ನೀತಿ ಬಳಸುತ್ತಾರೆ? ಈ ಪ್ರಶ್ನೆಗಳಿಗೆ ಸಾರ್ವಜನಿಕರ ಉತ್ತರವೇನು? ಕಾಯ್ದೆ ಕಾನೂನು ರೀತಿ ನೀತಿಗಳು ಪ್ರಜಾವಾಣಿಗೆ ಗೊತ್ತಿಲ್ಲವೆ?

ಮತಾಂತರ ಆರೋಪಿಗಳು ಭಯೋತ್ಪಾದಕರಿಗಿಂತ ಅಪಾಯಕಾರಿ, ಭೂಗತ ಪಾತಕಿಗಳಿಗಿಂತ ಡೇಂಜರ್, ರೌಡಿಗಳಿಗಿಂತ ಮೋಸ್ಟ್ ವಾಟೆಂಡ್ ಅಪರಾಧಿಗಳು ಎಂದು ಪ್ರಜಾವಾಣಿಯವರು ಭಾವಿಸಿದಂತಿದೆ. ನಿಜ, ಬಲವಂತದ ಮತದಾನಗಳಿಂದ ಕೋಮುದ್ವೇಷ ಹರಡಬಹುದು ಎಂದುಕೊಳ್ಳೋಣ. ಆದರೆ ಮತಾಂತರಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಯಾರು ತಲೆಕೆಡಿಸಿಕೊಂಡಿದ್ದಾರೆ. ಮತಾಂತರ ವಿರೋಧಿ ಆಂದೋಲನ ಮಾಡುವ ವಿಹಿಂಪದವರು ಅಸ್ಪೃಶ್ಯತೆ ನಿವಾರಣೆಗೆ ಪ್ರಾಮಾಣಿಕ ಯತ್ನವನ್ನು ಎಂದಾದರೂ ನಡೆಸಿದ್ದಾರೆಯೇ? ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ಮಾತು ಬರಿಯ ಹೇಳಿಕೆಯಾಗಿಯೇ ಉಳಿದಿಲ್ಲವೆ? ಹಿಂದೂಗಳೆಲ್ಲ ಒಂದೇ ಎನ್ನುವ ಭಾವ ದೇಶದ ಯಾವುದೇ ಮೂಲೆಯಲ್ಲಾದರೂ ಇದೆಯೆ? ಸಾಮಾಜಿಕ ಅಸಮತೋಲನವನ್ನು ಸರಿಪಡಿಸದೆ ಮತಾಂತರ ವಿರೋಧ ಮಾಡುವುದು ನೈತಿಕವಾಗಿಯಾದರೂ ಎಷ್ಟು ಸರಿ?

ಗುಜರಾತ್ ರಾಜ್ಯವನ್ನು ಹಿಂದುತ್ವದ ಪ್ರಯೋಗಶಾಲೆ ಮಾಡಿ ಮುಸ್ಲಿಮರ ನರಮೇಧ ನಡೆಸಿದ ಸಂಘಪರಿವಾರ-ಬಿಜೆಪಿ ಈಗ ಒರಿಸ್ಸಾದಲ್ಲಿ ಕ್ರಿಶ್ಚಿಯನ್ನರ ಮೇಲೆ ಬಿದ್ದಿವೆ. ವಿಶ್ವಹಿಂದೂ ಪರಿಷತ್ತಿನ ಸ್ವಾಮೀಜಿಯೊಬ್ಬರನ್ನು ಕ್ರಿಶ್ಚಿಯನ್ನರೇ ಕೊಂದರೆಂದು ಆರೋಪಿಸಿ ಅಲ್ಲಿ ಹತ್ತಾರು ಕ್ರಿಶ್ಚಿಯನ್ನರನ್ನು ಜೀವಂತ ಸುಟ್ಟು ಹಾಕಲಾಗಿದೆ. ಇಂಥದೇ ಪ್ರಯೋಗಗಳನ್ನು ಕರ್ನಾಟಕದಲ್ಲೂ ನಡೆಸಲು ಸಂಘಪರಿವಾರಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನೂ ನಡೆಸಿ ಸಫಲರಾಗಿದ್ದಾರೆ. ಪಾಪ, ಪ್ರಜಾವಾಣಿಯವರಿಗೆ ಜಾಣ ಕುರುಡು. ಇದ್ಯಾವುದೂ ಗೊತ್ತಾಗುವುದಿಲ್ಲ.

ಬಲಪಂಥೀಯರನ್ನು ಒಲಿಸಿಕೊಳ್ಳಲು ಪ್ರಜಾವಾಣಿ ಈ ಸುದ್ದಿಯನ್ನು ಇಷ್ಟು ವೈಭವೀಕರಿಸಿದರೆ ಸಂಘಪರಿವಾರದ ಪರವಾಗೇ ಇರುವ ವಿಜಯ ಕರ್ನಾಟಕ ಅಷ್ಟು ಗಂಭೀರವಾಗಿ ಈ ಸುದ್ದಿಯನ್ನು ಪ್ರಕಟಿಸಲಿಲ್ಲ. ಆದರೆ ಇತ್ತೀಚಿಗೆ ತಾನೇ ಚೆಡ್ಡಿ ಧರಿಸಿರುವ ಪ್ರಜಾವಾಣಿಗೆ ಇದು ರಾಷ್ಟ್ತೀಯ ಮಹತ್ವದ ವಿಷಯವಾಯಿತು.
ಈ ವರದಿಯ ಕಡೆ ಸಾಲುಗಳು ಹೀಗಿವೆ ನೋಡಿ:

ಮತಾಂತರಕ್ಕೆ ಯತ್ನಿಸಿದವರಿಗೆ ಸಹಾಯ ಮಾಡಲು ಬಂದಿದ್ದ ವ್ಯಕ್ತಿಯೋರ್ವನನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದರು.ಠಾಣೆಗೆ ಸಮೀಪ ನಿಂತಿದ್ದ ಆ ವ್ಯಕ್ತಿಯನ್ನು ಹಿಡಿದುಕೊಂಡ ಸಾರ್ವಜನಿಕರು ಅವರ ಬಟ್ಟೆ ಹರಿದು ಹೊಡೆದರು.

ನಿಜವಾದ ಪತ್ರಕರ್ತ ಇದೇ ಸಾಲುಗಳನ್ನು ಹೇಗೆ ಬರೆಯುತ್ತಿದ್ದ ಗೊತ್ತೆ?
ಮತಾಂತರಕ್ಕೆ ಯತ್ನಿಸಿದವರಿಗೆ ಸಹಕರಿಸಿದ ಎಂಬ ಅನುಮಾನದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ವ್ಯಕ್ತಿಯೋರ್ವನನ್ನು ದಾರುಣವಾಗಿ ಹೊಡೆದು ಹಿಂಸಿಸಿದ ಘಟನೆಯೂ ಇದೇ ಸಂದರ್ಭದಲ್ಲಿ ನಡೆಯಿತು. ಠಾಣೆಗೆ ಸಮೀಪ ನಿಂತಿದ್ದ ಆ ವ್ಯಕ್ತಿಯನ್ನು ಕಿಡಿಗೇಡಿಗಳು ಬಟ್ಟೆ ಹರಿದು, ಹೊಡೆದು ದೌರ್ಜನ್ಯವೆಸಗಿದರು. ಈ ಬಗೆಯ ದುರಾಚಾರ ಮಾಧ್ಯಮದವರ ಸಮ್ಮುಖದಲ್ಲೇ ನಡೆಯಿತು (ಪ್ರಜಾವಾಣಿ ಸಮ್ಮುಖದಲ್ಲಿ)

ಕಡೆಯದಾಗಿ ಒಂದು ಮಾತು:
ದುರಂತವೆಂದರೆ ಪ್ರಜಾವಾಣಿಯಲ್ಲಿ ‘ಹೆಣ್ಣಿಗೆ ಹೆಣ್ಣೇ ಶತ್ರು ಎಂದು ಬಾಲಿಷವಾಗಿ ಬರೆಯುವ, ದೇಶದ ಸಾಮಾಜಿಕ ಬದುಕಿನ ಕನಿಷ್ಠ ಜ್ಞಾನವೂ ಇಲ್ಲದ ಹೆಣ್ಣುಮಗಳೊಬ್ಬಳು ಅಂಕಣ ಬರೆಯುತ್ತಾಳೆ. ಅದನ್ನು ಎಗ್ಗಿಲ್ಲದೆ ಕುಲದೀಪ್ ನಯ್ಯರ್ ಅವರ ಅಂಕಣ ಪ್ರಕಟವಾಗುತ್ತಿದ್ದ ಜಾಗದಲ್ಲೇ ಪ್ರಕಟಿಸಲಾಗುತ್ತದೆ.
ಪ್ರಜಾವಾಣಿ ತನ್ನ ಘನತೆಯನ್ನು ಹೀಗೆ ಹರಾಜಿಗಿಡಬಾರದಿತ್ತು.