Sunday, September 28, 2008

ಈ ಹೆಣ್ಣುಮಕ್ಕಳು ಪ್ರಾಣಿಗಿಂತ ಕಡೆಯಾಗಿ ಬದುಕಬೇಕೆ?






ತಿನ್ನುವ ಅನ್ನದಲ್ಲಿ ಹುಳುಗಳು, ಆಲೂಗೆಡ್ಡೆಯಲ್ಲಿ ಹುಳುಗಳು. ನೀರು ನೀರಾದ ಸಾರು. ಪಲ್ಯ ಇಲ್ಲ, ಮೊಟ್ಟೆ ಇಲ್ಲ, ಬಾಳೆಹಣ್ಣು ಇಲ್ಲ, ಹಾಲು ಮೊದಲೇ ಇಲ್ಲ. ಮನುಷ್ಯರು ತಿನ್ನಲು ಯೋಗ್ಯವಾದ ಆಹಾರವಂತೂ ಇಲ್ಲಿಲ್ಲ. ಇದು ಯಾವುದೋ ಜೈಲಿನ ಕತೆಯಲ್ಲ. ಜೈಲುಗಳಲ್ಲೂ ಈಗೀಗ ಒಳ್ಳೆಯ ವ್ಯವಸ್ಥೆಗಳು ಇವೆ. ಇಲ್ಲಿ ಪ್ರಸ್ತಾಪಿಸುತ್ತಿರುವುದು ಬೆಂಗಳೂರು ಮಹಾನಗರದ ಸರ್ಕಾರಿ ಹಾಸ್ಟೆಲ್ ಒಂದರ ಕತೆ.

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಡಾ.ಸಿ.ಎಸ್.ದ್ವಾರಕಾನಾಥ್ ಅವರು ರಾಜ್ಯದ ಹಲವು ಹಾಸ್ಟೆಲ್‌ಗಳನ್ನು ಭೇಟಿ ಮಾಡಿ ಆಗಾಗ ತಮ್ಮ ಅನುಭವಗಳನ್ನು ಹೇಳುತ್ತಿದ್ದರು. ನಿನ್ನೆ ದಿಢೀರನೆ ಬೆಂಗಳೂರಿನ ಒಂದು ಹಾಸ್ಟೆಲ್ ತೋರಿಸುತ್ತೇನೆ ಬನ್ನಿ ಎಂದರು. ಅದು ಅವರ ದಿಢೀರ್ ಭೇಟಿ. ಅವರೊಂದಿಗೆ ತೆರಳಿದ್ದ ನಮಗೆ (ಮಾಧ್ಯಮದವರಿಗೆ) ಸಹ ಯಾವ ಹಾಸ್ಟೆಲ್‌ಗೆ ಹೋಗುತ್ತಿದ್ದೇವೆ ಎಂಬುದು ಕಡೆ ಕ್ಷಣದವರೆಗೆ ಗೊತ್ತಿರಲಿಲ್ಲ. ಸಂಜೆ ಆರು ಗಂಟೆಯ ಸುಮಾರಿಗೆ ನಾವು ಹೋಗಿದ್ದು. ಕೆ.ಆರ್.ಪುರಂನ ಬಿಸಿಎಂ ಹಾಸ್ಟೆಲ್‌ಗೆ.

ಈಗಲೋ ಆಗಲೋ ಬಿದ್ದು ಹೋಗುವ ಕಟ್ಟಡವದು. ಸ್ವಾಗತಿಸಿದ್ದು ಮುರುಕಲು ಗೇಟು, ಈಗಲೋ ಆಗಲೋ ಸಾಯುವಂತಿರುವ, ಕನ್ನಡ ಬಾರದ ಒಬ್ಬ ಕಾವಲುಗಾರ.
ಅದು ಸರ್ಕಾರ ನಡೆಸುವ ಹೆಣ್ಣು ಮಕ್ಕಳ ಪ್ರೀ ಮೆಟ್ರಿಕ್ ಹಾಗು ಪೋಸ್ಟ್ ಮೆಟ್ರಿಕ್ ವಸತಿ ನಿಲಯ. ಆಶ್ಚರ್ಯವೆಂದರೆ ಬಿದ್ದು ಹೋಗಲು ತಯಾರಾಗಿರುವ ಆ ಕಟ್ಟಡಕ್ಕೆ ಸರ್ಕಾರ ಸುಮಾರು ೧೨ಸಾವಿರ ರೂ. ಬಾಡಿಗೆ ನೀಡುತ್ತದೆ.

ಬಾಗಿಲ ಬಳಿಯಲ್ಲೇ ನಮಗೆ ಕಂಡಿದ್ದು ಹತ್ತು ಹನ್ನೆರಡು ತುಂಬಿದ ಕೊಡಪಾನಗಳನ್ನು ಜೋಡಿಸಿಡಲಾಗಿದ್ದ ಕೋಣೆ, ದ್ವಾರಕಾನಾಥ್ ಹಾಗು ನಾವು ಆ ಕೊಠಡಿಯನ್ನು ಬಚ್ಚಲು ಕೋಣೆ ಎಂದೇ ಭಾವಿಸಿ ಒಳಗೆ ಹೋಗಲು ಹಿಂದುಮುಂದೆ ನೋಡಿದೆವು. ಆದರೆ ಅದು ಬಚ್ಚಲಾಗಿರಲಿಲ್ಲ, ವಿದ್ಯಾರ್ಥಿನಿಯರು ಮಲಗುವ ಕೊಠಡಿ ಎಂದು ಗೊತ್ತಾಗುತ್ತಿದ್ದಂತೆ ಗಾಬರಿಯಾಯಿತು. ಒಂದು ಪುಟ್ಟ ಕೊಠಡಿಯಲ್ಲಿ ಹತ್ತು ಹನ್ನೆರಡು ಹುಡುಗಿಯರು ಮಲಗುತ್ತಾರೆ. ಮೇಲೆ ಛಾವಣಿ ಒಡೆದುಹೋಗಿದೆ. ಮಳೆ ಬಂದರೆ ಕೊಠಡಿಯೊಳಗೆ ನೀರು ಹರಿಯುತ್ತದೆ. ಹಾಸ್ಟೆಲ್‌ಗೆ ನೀರು ಬರುವುದಿಲ್ಲ. ವಿದ್ಯಾರ್ಥಿನಿಯರೇ ಹೊರಗಿನಿಂದಲೇ ನೀರು ತರಬೇಕು. ತಮಗೆ ಇಡೀ ದಿನಕ್ಕೆ ಸ್ನಾನಕ್ಕೆ, ಕಕ್ಕಸ್ಸಿಗೆ, ಮುಖ ತೊಳೆಯಲು, ಬಟ್ಟೆ ಒಗೆಯಲು ಬೇಕಾಗುವ ನೀರನ್ನು ತಾವೇ ತಂದು, ತಮ್ಮ ಕೊಠಡಿಯಲ್ಲೇ ಇಟ್ಟುಕೊಳ್ಳಬೇಕು. ಹೀಗಾಗಿ ವಿದ್ಯಾರ್ಥಿನಿಯರ ಮಲಗುವ ಕೋಣೆಯಲ್ಲೇ ಕೊಡಪಾನಗಳು, ಕೈಕಾಲು ಆಡಿಸಲೂ ಅಲ್ಲಿ ಜಾಗವಿಲ್ಲ.

ಎಲ್ಲ ಕೊಠಡಿಗಳಲ್ಲೂ ಇದೇ ಕಥೆ. ಒಂದು ಕೋಣೆಯಲ್ಲಂತೂ ಛಾವಣಿ ಬಿರುಕುಬಿಟ್ಟು, ಸಿಮೆಂಟು ಆಗಾಗ ಉದುರುತ್ತಲೇ ಇರುತ್ತದೆ. ಛಾವಣಿಯೇ ಕುಸಿದು ಬಿದ್ದರೆ ಕೆಳಗೆ ಮಲಗಿದವರ ಪಾಡೇನು?

ಅಲ್ಲಿದ್ದ ವಿದ್ಯಾರ್ಥಿನಿಯರ ಮುಖಗಳನ್ನು ಗಮನಿಸಿದೆವು. ನಿರ್ಜೀವ ಕಣ್ಣುಗಳು, ಬಿಳುಚಿಕೊಂಡ ಮುಖಗಳು. ಕೈ ಕಾಲು ಅಸ್ಥಿಪಂಜರದಂತಿವೆ. ಅಪೌಷ್ಠಿಕತೆಯಿಂದ ಅವರೆಲ್ಲ ಬಳಲುತ್ತಿದ್ದಾರೆ ಎಂಬುದಕ್ಕೆ ಬೇರೆ ಸಾಕ್ಷಿಗಳು ಬೇಕಾಗಿರಲಿಲ್ಲ.

ದ್ವಾರಕಾನಾಥ್ ವಿದ್ಯಾರ್ಥಿನಿಯರನ್ನು ಅಲ್ಲಿನ ವ್ಯವಸ್ಥೆಗಳ ಬಗ್ಗೆ ಕೇಳುತ್ತಿದ್ದಂತೆ ಒಂದೊಂದೇ ಕರ್ಮಕಾಂಡಗಳು ಹೊರಬರಲಾರಂಭಿಸಿದವು. ಆ ವಿದ್ಯಾರ್ಥಿನಿಯರು ದೂರದ ಊರುಗಳಿಂದ ಬಂದವರು. ಚಿಕ್ಕಮಗಳೂರು, ಕೋಲಾರ, ಹಾಸನ, ಬೆಳಗಾವಿ, ಬೀದರ್, ಶಿವಮೊಗ್ಗ ಇತ್ಯಾದಿ ಜಿಲ್ಲೆಗಳಿಂದ ಬಂದವರು. ವೀರಶೈವ, ಒಕ್ಕಲಿಗ, ಮಡಿವಾಳ, ಉಪ್ಪಾರ, ಗಾಣಿಗ, ಮುಸ್ಲಿಂ, ಪರಿಶಿಷ್ಟ ಜಾತಿ ಇತ್ಯಾದಿ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿನಿಯರು ಅಲ್ಲಿದ್ದಾರೆ. ಡಿಎಡ್ ಓದುತ್ತಿರುವವರ ಸಂಖ್ಯೆಯೇ ಹೆಚ್ಚು. ಬಿಎಡ್, ಫಾರ್ಮಸಿ ಇತ್ಯಾದಿ ಓದಲು ಬಂದವರೂ ಇದ್ದಾರೆ. ಒಬ್ಬ ಹೆಣ್ಣು ಮಗಳು ಪಿಯುಸಿಯಲ್ಲಿ ೮೦ ಶೇ. ಅಂಕ ಪಡೆದು ಈಗ ಎಂಜಿನಿಯರಿಂಗ್ ಓದುತ್ತಿದ್ದಾಳೆ. ಎಲ್ಲರೂ ತಂತಮ್ಮ ಕಾಲೇಜುಗಳಿಗೆ ಬಹುದೂರ ಹೋಗಬೇಕು. ಹೇಳಿ ಕೇಳಿ ಹಾಸ್ಟೆಲ್ ಇರುವುದು ಕೆ.ಆರ್.ಪುರದಲ್ಲಿ. ಅಲ್ಲಿಂದ ಬೆಂಗಳೂರಿನ ಇತರ ಭಾಗಗಳಿಗೆ ಹೋಗಬೇಕೆಂದರೆ ಗಂಟೆಗಟ್ಟಲೆ ಸಮಯ ಬೇಕು. ಕಾಲೇಜು ಮುಗಿಸಿ ವಾಪಾಸು ಬಂದ ವಿದ್ಯಾರ್ಥಿನಿಯರಿಗೆ ಓದುವ ವಾತಾವರಣ ಬೇಕಲ್ಲವೆ? ಹಾಸ್ಟೆಲ್‌ನಲ್ಲಿ ಓದುವ ವಾತಾವರಣವಿರಲಿ, ಪ್ರಾಣಿಗಳೂ ವಾಸ ಮಾಡಲು ಯೋಗ್ಯವಾದ ತಾಣದಂತೆ ಕಾಣಲಿಲ್ಲ.

ವಿದ್ಯಾರ್ಥಿನಿಯರಿಗೆ ನೀಡಬೇಕಾದ ಆಹಾರದ ಬಗ್ಗೆ ಅಡುಗೆ ಮನೆಯಲ್ಲಿ ಒಂದು ಚಾರ್ಟ್ ಬರೆದು ತೂಗುಹಾಕಲಾಗಿದೆ. ಆದರೆ ಆ ಚಾರ್ಟ್‌ನಂತೆ ಊಟ ನೀಡಲಾಗುತ್ತದೆಯೆ? ಕೇಳಿದರೆ ಬರೀ ಹಾರಿಕೆಯ ಉತ್ತರ. ನಾವೇನು ಮಾಡೋದು ಸಾರ್, ಅವರು(ನಿಲಯ ಮೇಲ್ವಿಚಾರಕರು) ಕೊಟ್ಟಿದ್ದನ್ನು ನಾವು ಬೇಯಿಸಿ ಹಾಕುತ್ತೇವೆ ಎನ್ನುತ್ತಾಳೆ ಅಡುಗೆ ಸಹಾಯಕಿ. ಯಾಕೆ ಹೀಗೆ ಎಂದು ನಿಲಯ ಮೇಲ್ವಿಚಾರಕಿ(ವಾರ್ಡನ್)ಯನ್ನು ಕೇಳೋಣವೆಂದರೆ ಆಕೆ ಆಗಲೇ ಮನೆಗೆ ಹೋಗಿಯಾಗಿತ್ತು. ಕರೆಯಿಸಲು ಯತ್ನಿಸಿದರೆ ಆಕೆ ಆಗಲೇ ವೈಟ್‌ಫೀಲ್ಡ್‌ನಲ್ಲಿರುವ ತನ್ನ ಮನೆಗೆ ಹೋಗಿಯಾಗಿತ್ತು. ನನ್ನ ಕಾಲಿಗೆ ಆಪರೇಷನ್ ಆಗಿದೆ, ಬರಲು ಸಾಧ್ಯವಿಲ್ಲ ಎಂಬ ಉತ್ತರ ಆಕೆಯಿಂದ.

ಅಡುಗೆ ಕೋಣೆಯಲ್ಲಿ ಮಧ್ಯಾಹ್ನವೇ ಬೇಯಿಸಿದ ಅನ್ನ ಒಂದು ದೊಡ್ಡ ಪಾತ್ರೆಯಲ್ಲಿತ್ತು. ಅನ್ನ ಅದಾಗಲೇ ನೀರಾಡುತ್ತಿತ್ತು. ರಾತ್ರಿ ಊಟಕ್ಕೆ ಅದೇ ಅನ್ನ. ಒಂದು ಬಕೆಟ್‌ನಲ್ಲಿ ಸಾರು ಕಾಯಿಸಿ ಇಡಲಾಗಿತ್ತು. ದ್ವಾರಕಾನಾಥ್ ಅವರು ಕೈಗೆ ಒಂದಷ್ಟು ಸಾರು ಹಾಕಿಕೊಂಡು ರುಚಿ ನೋಡಿದರು. ಅವರ ಮುಖಭಾವವೇ ಸಾರಿನ ರುಚಿ ಹೇಳಿತು. ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಕೆಟ್ ಒಂದರಲ್ಲಿ ಇಡಲಾಗಿತ್ತು. ಅದರ ಮುಚ್ಚಳ ತೆರೆದು ನೋಡಿದರೆ ನೀರಿನ ಮೇಲೆ ಬಿಳೀ ಬಣ್ಣದ ಪುಡಿಯ ಒಂದು ಪರದೆಯೇ ತೇಲುತ್ತಿತ್ತು. ಆಕ್ವಾಗಾರ್ಡ್‌ನಿಂದ ನೀರು ಶುದ್ಧ ಮಾಡಿ ಕೊಡೋದಿಲ್ಲವೇ ಎಂದರೆ ಕೇಳಿದರೆ ಕೊಡ್ತೀವಿ ಎಂಬ ಉತ್ತರ. ಆದರೆ ಅಡುಗೆ ಸಹಾಯಕಿಗೆ ಅಕ್ವಾಗಾರ್ಡ್ ಉಪಕರಣವನ್ನು ಬಳಸುವುದು ಹೇಗೆ ಎಂಬುದೇ ಗೊತ್ತಿದ್ದಂತೆ ಕಾಣಲಿಲ್ಲ.

ಒಮ್ಮೆ ಹಾಸ್ಟೆಲ್‌ನ ಟಾಯ್ಲೆಟ್ ನೋಡಿ ಬರೋಣ ಎಂದರು ದ್ವಾರಕಾನಾಥ್. ಅಲ್ಲಿಗೆ ಮಾತ್ರ ಹೋಗಬೇಡಿ ಸರ್ ಎಂದು ಬೇಡಿಕೊಂಡವು ಮಕ್ಕಳು. ನಾವು ಟಾಯ್ಲೆಟ್ ಎಂಬ ಆ ನರಕವನ್ನೂ ದರ್ಶನ ಮಾಡಿದೆವು. ಅರವತ್ತೈದು ವಿದ್ಯಾರ್ಥಿನಿಯರಿಗೆ ಇರುವುದು ಒಂದೇ ಕಕ್ಕಸ್ಸು, ನೀವು ನಂಬುತ್ತೀರಾ? ಅಷ್ಟೂ ವಿದ್ಯಾರ್ಥಿನಿಯರಿಗೆ ಇರುವುದು ಒಂದೇ ಸ್ನಾನದ ಮನೆ. ಸ್ನಾನದ ಮನೆಯ ಮೇಲ್ಭಾಗದ ಗೋಡೆಯಲ್ಲಿ ದೊಡ್ಡ ತೂತು ಇದೆ. ವಿದ್ಯಾರ್ಥಿನಿಯರು ಸ್ನಾನಕ್ಕೆ ನಿಂತಾಗ ಕಟ್ಟಡದ ಹೊರಭಾಗದಿಂದ ಯಾರು ಬೇಕಾದರೂ ಅಲ್ಲಿ ಇಣುಕಿ ನೋಡಬಹುದು! ಆ ತೂತು ಮುಚ್ಚಬೇಕು ಅಂತ ನಿಮಗನ್ನಿಸಲಿಲ್ಲವೆ ಎಂದರೆ ಅಲ್ಲಿಯ ಸಿಬ್ಬಂದಿಯ ಬಳಿ ಉತ್ತರವೇ ಇಲ್ಲ.

ಅಲ್ಲಿ ಪರಿಶೀಲನೆ ನಡೆಯುತ್ತಿದ್ದ ಸಮಯದಲ್ಲಿ ಒಂದು ಹುಡುಗಿ ಕುಸಿದು ಬಿದ್ದಿದ್ದಳು. ಆಕೆಗೆ ಸೌಖ್ಯವಿಲ್ಲ. ಕನಿಷ್ಠ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಸೌಜನ್ಯವೂ ಸಿಬ್ಬಂದಿಗಿಲ್ಲ. ವಾರಕ್ಕೊಮ್ಮೆ ನರ್ಸ್ ಬಂದು ಮಕ್ಕಳನ್ನು ನೋಡುವುದಿಲ್ಲವೆ? ಎಂದು ದ್ವಾರಕಾನಾಥ್ ಕೇಳಿದರೆ ಅಂಥದ್ದೊಂದು ವ್ಯವಸ್ಥೆ ಇಲ್ಲಿ ಇಲ್ಲವೇ ಇಲ್ಲ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.
ಬೆಳೆದ ಹೆಣ್ಣುಮಕ್ಕಳಿರುವ ಹಾಸ್ಟೆಲ್‌ಗೆ ವಾರಕ್ಕೊಮ್ಮೆ ಮಹಿಳಾ ಡಾಕ್ಟರ್ ಹಾಗು ನರ್ಸ್ ಬಂದು ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ಮಾಡಬೇಕು ಎಂದು ಸರ್ಕಾರದ ನಿಯಮಗಳು ಹೇಳುತ್ತವೆಯಂತೆ. ಆದರೆ ಇಲ್ಲಿ ಅದ್ಯಾವುದೂ ಇಲ್ಲ.

ತಿನ್ನುವ ಅನ್ನದಲ್ಲಿ ಪದೇ ಪದೇ ಹುಳುಗಳು ಕಾಣಿಸಿಕೊಂಡಾಗ ವಿದ್ಯಾರ್ಥಿನಿಯರು ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಸಣ್ಣಾನಾಯ್ಕ ಎಂಬುವವರಿಗೆ ದೂರು ನೀಡಿದ್ದಾರೆ. ಆ ಅಧಿಕಾರಿ ಬಂದವರು ಎಲ್ಲವನ್ನೂ ನೋಡಿದ ಮೇಲೆ ಏನು ಹೇಳಬೇಕು? ‘ನೋಡ್ರಮ್ಮ, ಜೀವನದಲ್ಲಿ ಕಷ್ಟ ಪಡಬೇಕು. ಇವತ್ತು ಕಷ್ಟ ಪಟ್ಟರೆ ನೀವು ದೊಡ್ಡ ಮನುಷ್ಯರಾಗಲು ಸಾಧ್ಯ. ವ್ಯವಸ್ಥೆ ಇರೋದೇ ಹೀಗೆ. ಅಡ್ಜಸ್ಟ್ ಮಾಡಿಕೊಂಡು ಹೋಗಿ ಎಂದು ಆ ಮನುಷ್ಯ ಹೇಳಿದರಂತೆ. ನಮ್ಮ ಸಮಸ್ಯೆ ಹೇಳಿಕೊಂಡರೆ ನಮಗೆ ಹೀಗೆ ನೈತಿಕ ಪಾಠ ಹೇಳುತ್ತಾರೆ ಸರ್ ಎನ್ನುತ್ತಾರೆ ಆ ಹೆಣ್ಣುಮಕ್ಕಳು.

ಎಲ್ಲ ಹೋಗಲಿ ವಯಸ್ಸಿನ ಹೆಣ್ಣುಮಕ್ಕಳಿರುವ ಹಾಸ್ಟೆಲ್‌ಗೆ ಒಬ್ಬ ಸರಿಯಾದ ಕಾವಲುಗಾರನಾದರೂ ಇದ್ದಾನಾ ಅಂದರೆ ಅದೂ ಸಹ ಇಲ್ಲ. ಕಾವಲುಗಾರನಿಗೆ ವಯಸ್ಸಾಗಿದೆ, ಖಾಯಿಲೆ ಬಿದ್ದಂತೆ ಕಾಣುತ್ತಾನೆ. ವಿದ್ಯಾರ್ಥಿನಿಯರು ಹೇಳುವ ಪ್ರಕಾರ ಆಗಾಗ ಅವನೇ ಕುಸಿದು ಬಿದ್ದು, ಮೂರ್ಛೆ ಹೋಗುತ್ತಾನೆ. ಅವನನ್ನೇ ವಿದ್ಯಾರ್ಥಿನಿಯರು ಉಪಚರಿಸಬೇಕು! ಯಾರಾದರೂ ಈ ಹೆಣ್ಣಮಕ್ಕಳ ಹಾಸ್ಟೆಲ್‌ಗೆ ಅನಧಿಕೃತ ಪ್ರವೇಶ ಮಾಡಿದರೆ ತಡೆಯುವವರ್‍ಯಾರು? ಯಾರ ಬಳಿಯೂ ಉತ್ತರವಿಲ್ಲ.

ದ್ವಾರಕಾನಾಥ್ ಆ ಹೆಣ್ಣುಮಕ್ಕಳನ್ನು ಎದುರಿಗೆ ನಿಲ್ಲಿಸಿಕೊಂಡೇ ರಾಮಕೃಷ್ಣ ಎಂಬ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘ಅಲ್ರೀ ಈ ಮಕ್ಕಳನ್ನು ನೋಡಿಕೊಳ್ಳಲೆಂದೇ ನಿಮಗೆ ಸಂಬಳ ಕೊಡೋದಲ್ವಾ? ಅದಕ್ಕಾಗಿಯೇ ನನಗೂ ಸಂಬಳ ಕೊಡೋದಲ್ವಾ? ಅಕ್ಕಿಯಲ್ಲಿ ಹುಳು ಇದೆ ಅಂತ ಗೊತ್ತಿದ್ರೂ ನಿಮ್ಮ ಮನೆಯಲ್ಲಿ ಮಕ್ಕಳಿಗೆ ಅದನ್ನೇ ಅನ್ನ ಮಾಡಿ ತಿನ್ನಿಸುತ್ತೀರಾ? ಈ ಮಕ್ಕಳಿಗೆ ಕೊಡಬೇಕಾದ್ದನ್ನು ಕೊಡದೆ ಕಷ್ಟ ಅನುಭವಿಸಿ ಅಂತ ಹೇಳೋದಕ್ಕೆ ನಿಮಗೆ ನಾಚಿಕೆ ಆಗೋದಿಲ್ವೆ? ಎಂದು ಅವರು ಹೇಳುತ್ತಿದ್ದರೆ ಆ ಅಧಿಕಾರಿ ಯಥಾಪ್ರಕಾರ ನಿರುತ್ತರ.

ಜಿಲ್ಲಾ ಅಧಿಕಾರಿ, ತಾಲ್ಲೂಕು ಅಧಿಕಾರಿ ಹಾಗು ಮೇಲ್ವಿಚಾರಕರಿಗೆ ಸಮನ್ಸ್ ಜಾರಿ ಮಾಡಿ ಎಂದು ದ್ವಾರಕಾನಾಥ್ ಆಯೋಗದ ಅಧಿಕಾರಿಗಳಿಗೆ ಆದೇಶ ನೀಡುತ್ತಲೇ, ಕೂಡಲೇ ಬೇರೆ ಕಟ್ಟಡವನ್ನು ನೋಡಿ ನನಗೆ ರಿಪೋರ್ಟ್ ಮಾಡಿ ಎಂದು ತಾಲ್ಲೂಕು ಅಧಿಕಾರಿಗೆ ಸೂಚನೆ ನೀಡಿದರು. ನನಗೆ ದೂರು ನೀಡಿದ ಕಾರಣಕ್ಕೆ ಯಾವ ಅಧಿಕಾರಿಯಾದರೂ ತೊಂದರೆ ಕೊಟ್ಟರೆ ತಕ್ಷಣ ನನಗೆ ಫೋನ್ ಮಾಡಿ ಎಂದು ತಮ್ಮ ನಂಬರ್ ಕೊಟ್ಟರು.

****************

ಈ ಎಲ್ಲ ಹೆಣ್ಣುಮಕ್ಕಳು ಬದುಕಿನ ಅನಿವಾರ್ಯತೆಗಾಗಿ ಓದಲು ಬಂದವರು. ಎಲ್ಲರೂ ಬಡಕುಟುಂಬಗಳಿಂದ ಬಂದವರು. ಓದಿ, ಕೆಲಸ ಸೇರಿ ತಮ್ಮ ಕುಟುಂಬ ಸಾಕುವ ಹೊಣೆಗಾರಿಕೆ ಹೊತ್ತವರು.

ಕಾಲೇಜು ಮುಗಿಸಿ ಬಂದು ಈ ದರಿದ್ರ ಹಾಸ್ಟೆಲ್‌ನಲ್ಲಿ ಈ ಮಕ್ಕಳು ಹೇಗೆ ಓದುತ್ತವೆ? ಓದಿದ್ದು ತಲೆಗೆ ಹಿಡಿಯುತ್ತಾ? ಪರೀಕ್ಷೆಗಳಲ್ಲಿ ಒಳ್ಳೆ ಫಲಿತಾಂಶ ನಿರೀಕ್ಷೆ ಮಾಡುವುದು ಹೇಗೆ? ಫೇಲಾದರೆ ಈ ಮಕ್ಕಳ ಗತಿಯೇನು? ಅವರನ್ನು ನಂಬಿಕೊಂಡ ಅಸಹಾಯಕ ಪೋಷಕರ ಗತಿಯೇನು? ಫೇಲಾಗುವುದಿರಲಿ, ಒಂದು ವೇಳೆ ಪರೀಕ್ಷೆಗಳಲ್ಲಿ ಕಡಿಮೆ ಅಂಕ ತೆಗೆದುಕೊಂಡರೆ ನಮ್ಮ ಸರ್ಕಾರೀ ವ್ಯವಸ್ಥೆ ಇವರನ್ನು ನಿರ್ದಯವಾಗಿ ಹಾಸ್ಟೆಲ್‌ನಿಂದ ಹೊರಗಟ್ಟುತ್ತದೆ. ಇದು ಯಾವ ನಾಗರಿಕತೆ?

ಈ ಮಕ್ಕಳು ಈಗಲೇ ಅನೀಮಿಕ್ ಆಗಿವೆ. ೬೫ಜನ ಒಂದೇ ಟಾಯ್ಲೆಟ್ ಉಪಯೋಗಿಸಿದರೆ ಆಗುವ ಇನ್ಫೆಕ್ಷನ್ ಬಗ್ಗೆ ಹೇಳುವುದೇನು ಬೇಕಾಗಿಲ್ಲ. ಗರ್ಭಕೋಶದ ಟ್ಯುಬರ್‌ಕ್ಯುಲೋಸಿಸ್ (ಟಿಬಿ)ನಂಥ ಖಾಯಿಲೆ ಒಬ್ಬಳಿಗೆ ಒಕ್ಕರಿಸಿದರೂ ಎಲ್ಲ ಮಕ್ಕಳಿಗೂ ಅದು ಉಚಿತವಾಗಿ ಹರಿದು ಬರುತ್ತದೆ. ಹಾಗೇನಾದರೂ ಆದರೆ ಈ ಹೆಣ್ಣುಮಕ್ಕಳು ಮುಂದೆ ಮಕ್ಕಳನ್ನು ಹಡೆಯುವ ಶಕ್ತಿಯನ್ನೂ ಕಳೆದುಕೊಳ್ಳುತ್ತವೆ.

ಇದನ್ನೆಲ್ಲ ಯಾರಿಗೆ ಹೇಳುವುದು? ಯಾರು ಇವರ ಪರವಾಗಿ ಹೋರಾಟ ಮಾಡುತ್ತಾರೆ? ಯಾವ ತಪ್ಪಿಗಾಗಿ ಈ ಮಕ್ಕಳಿಗೆ ಈ ಶಿಕ್ಷೆ?

ನಿನ್ನೆ ಸಂಜೆ ಇದೆಲ್ಲವನ್ನೂ ನೋಡಿ ಬಂದ ನಂತರ ಮನಸ್ಸಿಗೆ ಒಂಥರಾ ಕಿರಿಕಿರಿ, ಸಂಕಟ. ಈ ಸಂಕಟದಲ್ಲೇ ಇಷ್ಟನ್ನು ಬರೆದಿದ್ದೇನೆ. ನಿಮಗೂ ಏನಾದರೂ ಅನ್ನಿಸಿದರೆ ಒಂದು ಪ್ರತಿಕ್ರಿಯೆ ಬರೆಯಿರಿ.

8 comments:

Anonymous said...

dinesh,
i felt too bad after reading this. hundreds of hostesl across the state are under similar condition. it is difficult to imagine how 65 girls manage to get prepared to their classes in the morning with only one toilet and bathroom.
i don't know when Social Welfare Department will have prompt, committee staff. Taking action against a few will no way solve the problem.
when many blogs are concentrating on poetry, colourful life, modern life style, you have touched upon a different subject.
- Akram

Anonymous said...

Dinesh Thanks

Odi bejaraytu. en helbeko tilittilla. nimma kalajige krtajnategalu...

nimma abHimani

nagendra said...

Dinesh sir,

Hostelgalallina karmakandvannu lekhnadalli thumbha chennagi bimbisiddiri,thanks.

Nagendra.Trasi

Pls sea my bahumukhi.blogspot.com

ಹಳ್ಳಿಕನ್ನಡ said...

ಅಕ್ರಮ್ ಹೇಳಿದಂತೆ ಈಗಿನ ಸಾವಿರಾರು ಬ್ಲಾಗಿಗಳು ತಮ್ಮ ರಮ್ಯ ಜೀವನದಲ್ಲಿ ಎಲ್ಲೋ ಎಡತಾಕುವ ಸಣ್ಣಪುಟ್ಟ ತೊಂದರೆಗಳನ್ನೇ ದೊಡ್ಡ ಸುದ್ದಿಮಾಡಿ ನೂರಾರು ಅವರಂತದೇ ಓದುಗರಿಂದ ಕರುಣೆಗಿಟ್ಟಿಸಿ ರಮಿಸುತ್ತಾರೆ. ಆದರೆ ನಿಮ್ಮಂತೆ ಕೆಲವರು ಇಂತಹ ನೂರಾರು ಹೆಣ್ಣುಗಳು ಗೋಳುಗನ್ನು ಅರ್ಥಮಾಡಿಕೊಂಡು ಕೆಲವರಲ್ಲಿಯಾದರೂ ಜಾಗೃತಿ ಮೂಡಿಸುವ ಕೆಲಸ ಮಾಡುತೀರಿ ಧನ್ಯವಾದಗಳು.
- ಮಂಜುನಾಥಸ್ವಾಮಿ

Anonymous said...

ಸಮಾಜ ಕಲ್ಯಾಣ ಇಲಾಖೆಯಲ್ಲಿರುವವರು ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡುವುದನ್ನು ಬಿಟ್ಟು, ತಮಗೆ ಒಳ್ಳೆಯದನ್ನು ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ ಎಂಬ ಆರೋಪ ಹಿಂದಿನಿಂದಲೂ ಇದೆ. ವಿದ್ಯಾರ್ಥಿಗಳ ಹಾಸ್ಟೆಲ್ ಗಳಲ್ಲಿ ತಿಮಿಂಗಲಗಳು ಸೇರಿಕೊಂಡಿವೆ. ಹಾಗಾಗಿ ವಿದ್ಯಾರ್ಥಿಗಳು ಸಣಕಲಾಗುತ್ತಿದ್ದಾರೆ. ಅವರನ್ನು ನೋಡಿಕೊಳ್ಳುವವರು ಅಂತಸ್ತುಗಳನ್ನು ಕಟ್ಟಿಸುತ್ತಿದ್ದಾರೆ. ಬೆಂಗಳೂರಿನಲ್ಲೇ ಇರುವ ಕೆ.ಆರ್. ಪುರದಲ್ಲೇ ಈ ಕತೆಯಾದರೆ, ಸರ್ಕಾರ ಮರೆತೇಬಿಟ್ಟಿರುವ ಬೀದರ್, ಬಾಗಲಕೋಟೆ ಮತ್ತಿತರ ಹಿಂದುಳಿದ ಜಿಲ್ಲೆಗಳ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಹೇಗೆ?
-ಎಂ.ಎಲ್. ಲಕ್ಷ್ಮೀಕಾಂತ್,
ಮಂಡ್ಯ.

dinesh said...

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ಎಲ್ಲಾ ಕಡೆಯಲ್ಲೂ ಇದೇ ರೀತಿಯ ದುರವಸ್ಥೆ ಇರುತ್ತದೆ. ಎಲ್ಲಾ ಹಾಸ್ಟೆಲ್ಗಳ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರೂ ಪ್ರತಿಭಟನೆ ಮಾಡಿ ಸುಸ್ತಾಗಿದ್ದಾರೆ. ಅವರ ಪ್ರತಿಭಟನೆ ಅರಣ್ಯರೋಧನವಾಗುತ್ತಿದೆ. ಅಲ್ಲಿ ಸೇರಿಕೊಂಡಿರುವ ಹೆಗ್ಗಣಗಳನ್ನು ಹೊರಗೆಳೆದು ಚಚ್ಚುವ ತನಕ ಇದು ಮುಂದುವರೆಯುತ್ತಲೇ ಇರುತ್ತದೆ.

mhonaga said...

enta anyaya

Anonymous said...

NANGE GOTTIRO HAAGE ABVP IDAR BAGGE TUMBA HORATA MADITTU....ABVP STATE ORG SECRETRY RAVIKUMAR TUMBA KALAJIYINDA IDAR BAGGE SARKARI HOSTELGAL AVANTARAD BAGGE HORATA RUPISIDRU.....AVAR NUMBER KODTINI OND SALA MATADI9448065412