Tuesday, September 16, 2008

ಬ್ಯೂಟಿ ಪಾರ್ಲರ್‌ಗಳು ಹಾಗು ಸಂತೋಷ್ ಹೆಗಡೆಯವರು....


ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಸಂತೋಷ್ ಹೆಗಡೆಯವರೇ,

ತಾವು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಭ್ರಷ್ಟ ಅಧಿಕಾರಿಗಳ ಗುಂಡಿಗೆ ನಡುಗುತ್ತಿದೆ. ಹಿಂದಿನ ಲೋಕಾಯುಕ್ತರು ಲೋಕಾಯುಕ್ತ ಸಂಸ್ಥೆ ಎಂಬುದೊಂದು ಇದೆ ಎಂಬುದನ್ನು ತೋರಿಸಿಕೊಟ್ಟಿದ್ದರು. ಭ್ರಷ್ಟಾಚಾರದ ವಿರುದ್ಧ ತಮ್ಮದೇ ಆದ ವಿಧಾನದಲ್ಲಿ ಜನಜಾಗೃತಿ ಮೂಡಿಸಿದ್ದರು. ತಾವು ಇನ್ನೂ ಒಂದು ಹೆಜ್ಜೆ ಮುಂದು ಹೋಗಿದ್ದೀರಿ. ಸಣ್ಣ ಪುಟ್ಟ ಅಧಿಕಾರಿಗಳ ಜತೆಗೆ ದೊಡ್ಡ ತಿಮಿಂಗಲಗಳನ್ನೂ ನಿಮ್ಮ ಬಲೆಗೆ ಕೆಡವಿಕೊಂಡಿರಿ. ಪರಿಣಾಮವಾಗಿ ಐಎಎಸ್-ಐಪಿಎಸ್ ಅಧಿಕಾರಿಗಳೂ ಲೋಕಾಯುಕ್ತ ಸಿಂಡ್ರೋಮ್‌ಗೆ ಒಳಗಾಗಿದ್ದಾರೆ. ‘ನನ್ನ ಸರದಿ ಯಾವಾಗ? ಎಂಬುದೇ ಜನಸಾಮಾನ್ಯರ ದುಡ್ಡು ತಿಂದು ಕೊಬ್ಬಿರುವ ಅಧಿಕಾರಗಳ ಪ್ರಶ್ನೆಯಾಗಿದೆ. ರಾತ್ರಿ ಕನಸಿನಲ್ಲಿಯೂ ನೀವು ಅವರನ್ನು ಕಾಡುತ್ತಿದ್ದೀರಿ.

ಇದೆಲ್ಲವೂ ಸರಿ, ಈ ವಿಷಯ ಕುರಿತು ಇಲ್ಲಿ ನಾನು ಪ್ರಸ್ತಾಪಿಸುತ್ತಿಲ್ಲ. ನಾನು ಹೇಳಲು ಹೊರಟಿರುವುದು ನಿಮ್ಮ ಸಾಧನೆ, ವೃತ್ತಿಗೆ ಸಂಬಂಧಪಡದ ವಿಷಯ. ತಾಳ್ಮೆಯಿಂದ ಪರಾಂಬರಿಸಬೇಕು ಎಂಬುದು ನನ್ನ ವಿನಂತಿ.

ಸೆಪ್ಟೆಂಬರ್ ೧೨ರ ಪ್ರಜಾವಾಣಿ ಪತ್ರಿಕೆಯ ಮೂರನೇ ಪುಟದಲ್ಲಿ ತಮ್ಮ ಹೇಳಿಕೆಯೊಂದು ಪ್ರಕಟಗೊಂಡಿದೆ. ಅದರ ಮೊದಲ ಪ್ಯಾರಾ ಹೀಗಿದೆ: “ ಸರ್ಕಾರಿ ಅಧಿಕಾರಿಗಳ ವಿರುದ್ಧ ಉತ್ಪ್ರೇಕ್ಷಿತ ವರದಿಗಳನ್ನು ನಾವು ನೀಡುತ್ತಿಲ್ಲ. ನಾವು ಬ್ಯೂಟಿ ಪಾರ್ಲರ್ ಕೆಲಸವನ್ನೇನೂ ಮಾಡುವುದಿಲ್ಲ. ಭ್ರಷ್ಟರ ಪರ ವಹಿಸುವವರು ಎಚ್ಚರಿಕೆಯಿಂದ ಮಾತನಾಡಲಿ

ನಿಮ್ಮ ಬಲೆಗೆ ಬಿದ್ದ ಸರ್ಕಾರಿ ಅಧಿಕಾರಿಗಳ ಆಸ್ತಿ ಮೌಲ್ಯ ನಿಗದಿ ಮಾಡುವಾಗ ಬೇಕಾಬಿಟ್ಟಿ ವರದಿ ನೀಡುತ್ತಿದ್ದೀರಿ ಎಂದು ಸಚಿವರೊಬ್ಬರು ಆರೋಪಿಸಿದ ಹಿನ್ನೆಲೆಯಲ್ಲಿ ನೀವು ಈ ಸ್ಪಷ್ಟನೆ ನೀಡಿದ್ದೀರಿ.

ಸಚಿವರಿಗೆ ಸರಿಯಾದ ಉತ್ತರ ನೀಡಬೇಕಿತ್ತು, ನೀಡಿದ್ದೀರಿ. ಆ ಬಗ್ಗೆ ನನ್ನ ತಕರಾರಿಲ್ಲ. ಆದರೆ ವಿನಾಕಾರಣ ಬ್ಯೂಟಿ ಪಾರ್ಲರ್ ಕೆಲಸವನ್ನು ಯಾಕೆ ಎಳೆತಂದಿರಿ ಎಂಬುದು ನನ್ನ ಪ್ರಶ್ನೆ.

ಬ್ಯೂಟಿಪಾರ್ಲರ್ ಕೆಲಸವೆಂಬುದು ಬೇಕಾಬಿಟ್ಟಿ ಕೆಲಸವೇ? ಅದೇನು ಕೊಳಕು ಕಾರ್ಯವೇ? ಸಮಾಜ ಬಾಹಿರ ಉದ್ಯೋಗವೆ? ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಕೆಲಸವೇ? ಸುಳ್ಳು ದಗಲ್ಬಾಜಿಯ ಕೆಲಸವೇ? ಬ್ಯೂಟಿ ಪಾರ್ಲರ್ ಕೆಲಸ ಮಾಡುವವರು ವಂಚನೆ ಮಾಡುತ್ತಾರೆಯೇ? ಯಾಕೆ ನೀವು ಬ್ಯೂಟಿ ಪಾರ್ಲರ್ ಉದಾಹರಣೆ ನೀಡಿದಿರಿ?

ನಾವು ಬೀದಿಗಳಲ್ಲಿ ಆಗಾಗ ಒಂದು ಮಾತನ್ನು ಕೇಳುತ್ತಿರುತ್ತೇವೆ. ‘ನಾನೇನು ಹಜಾಮತಿ ಮಾಡ್ತಿದ್ದೀನಾ? ನಾನೇನು ಹಜಾಮನಾ? ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಕೆಲವರು ಇಂಥ ಪ್ರಯೋಗಗಳನ್ನು, ಉಪಮೆಗಳನ್ನು ಬಳಸುತ್ತಾರೆ. ನೀವು ಹೀಗೆ ಹೇಳುವ ಬದಲು ನಾವೇನು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದೀನಾ? ಎಂದು ಸಭ್ಯ ಭಾಷೆಯಲ್ಲಿ ಹೇಳಿದ್ದೀರಿ ಅಷ್ಟೆ.

ಅಷ್ಟಕ್ಕೂ ನನ್ನಂಥವರಿಗೆ ಅರ್ಥವಾಗದ ವಿಷಯವೇನೆಂದರೆ ಯಾವುದೇ ವೃತ್ತಿ ಕನಿಷ್ಠ, ಮೊತ್ತೊಂದು ಶ್ರೇಷ್ಠ ಆಗುವುದು ಹೇಗೆ? ದೇಶದ ಶ್ರಮಿಕ ಜನವರ್ಗ ಹಲವು ಬಗೆಯ ಕುಲಕಸುಬುಗಳನ್ನು ರೂಢಿಸಿಕೊಂಡಿದ್ದಾರೆ. ಚಪ್ಪಲಿ ಹೊಲೆಯುವವರು, ಬೀದಿ ಗುಡಿಸುವವರು, ಕಕ್ಕಸ್ಸು ತೆಗೆಯುವವರು, ಕ್ಷೌರ ಮಾಡುವವರು, ಬಟ್ಟೆ ಒಗೆಯುವವರು, ಬಟ್ಟೆ ನೇಯುವವರು, ಕುರಿ ಕಾಯುವವರು, ದನ ಮೇಯಿಸುವವರು, ಮರಗೆಲಸದವರು, ಮಡಿಕೆ ಮಾಡುವವರು... ಹೀಗೆ ಹಲವು ಬಗೆಯ ಕುಲಕಸುಬುಗಳನ್ನು ಮಾಡುವ ಜನವರ್ಗ ನಮ್ಮಲ್ಲಿದೆ. ಹೀಗೆ ಕುಲಕಸುಬುಗಳನ್ನು ಮಾಡುವವರು ಕನಿಷ್ಠರೇ. ಕೇವಲ ಸಾಫ್ಟ್‌ವೇರ್ ಇಂಜಿನಿಯರುಗಳು, ಡಾಕ್ಟರುಗಳು, ನ್ಯಾಯಮೂರ್ತಿಗಳು, ಐಎಎಸ್-ಐಪಿಎಸ್ ಅಧಿಕಾರಿಗಳು, ದೇವಸ್ಥಾನಗಳಲ್ಲಿ ಪೂಜೆ ಮಾಡುವವರು ಮಾತ್ರ ಶ್ರೇಷ್ಠರೇ?

ನಮ್ಮ ಸಾಮಾಜಿಕ ವ್ಯವಸ್ಥೆ ಹೇಗಿದೆಯೆಂದರೆ ಶ್ರೇಣೀಕೃತ ಜಾತಿವ್ಯವಸ್ಥೆಯ ತಳಭಾಗದಲ್ಲಿರುವ ಜಾತಿಗಳ ಹೆಸರನ್ನೇ ನಮ್ಮ ಸಮಾಜ ಬೈಗುಳಗಳನ್ನಾಗಿ ಬಳಸುತ್ತಿದೆ. ಹೊಲೆಯ, ಮಾದಿಗ, ಹಜಾಮ, ಕೊರಮ, ಕೊರಚ, ದೊಂಬಿದಾಸ, ಪಿಂಜಾರ, ಕುರುಬ, ಒಡ್ಡ, ಕಲ್ಲು ಒಡ್ಡ, ದರವೇಸಿ, ಸುಡುಗಾಡು ಸಿದ್ಧ, ಶಿಳ್ಳೇಕ್ಯಾತ ಹೀಗೆ ಹಲವು ಜಾತಿಗಳ ಹೆಸರುಗಳು ಬೈಗುಳಗಳಾಗಿ ಬಳಕೆಯಾಗುತ್ತಿವೆ. ಈ ಪೈಕಿ ಹೊಲೆಯ ಹಾಗು ಮಾದಿಗ ಸಮುದಾಯಕ್ಕೆ ಅಸ್ಪೃಶ್ಯತಾ ನಿಷೇಧ ಕಾಯ್ದೆಯಡಿ ರಕ್ಷಣೆ ನೀಡಲಾಗಿದೆ. ಹೀಗಿದ್ದೂ ಜಾತಿ ಹೆಸರು ಹೇಳಿ ನಿಂದಿಸುವ ‘ಪರಂಪರೆಯೇನು ಕೊನೆಯಾಗಿಲ್ಲ.

ಆದರೆ ಇನ್ನುಳಿದ ಜಾತಿಗಳಿಗೆ ಆ ರಕ್ಷಣೆಯೂ ಇಲ್ಲ. ಯಾವ ತಪ್ಪಿಗಾಗಿ ಈ ಸಮುದಾಯಗಳ ಜನರಿಗೆ ಶಿಕ್ಷೆ? ಈ ಸಮುದಾಯಗಳ ಪೈಕಿ ಕೆಲವು ದಲಿತ ವರ್ಗಕ್ಕೆ ಸೇರಿದವು. ಮತ್ತೆ ಕೆಲವು ಅಲೆಮಾರಿ ಬುಡಕಟ್ಟು ಜಾತಿಗಳು. ಇನ್ನುಳಿದವು ಹಿಂದುಳಿದ ಜಾತಿಗಳು. ಯಾಕೆ ಈ ಜನಸಮೂಹಗಳು ಮಾಡುತ್ತಿರುವ ಜೀವನಾಧಾರ ಕಸುಬುಗಳು ಕೀಳು ಎಂಬಂತೆ ಬಿಂಬಿತವಾದವು? ಈ ಸಮಾಜ ಎಷ್ಟು ಕೃತಘ್ನ ಎಂದರೆ ಇಡೀ ದೇಶದ ಜನರ ಶಾರೀರಿಕ ಹಾಗು ಮಾನಸಿಕ ಸ್ವಾಸ್ಥ್ಯ ಕಾಪಾಡುವ, ಊರು ತೊಳೆಯುವ, ಶುದ್ಧಗೊಳಿಸುವ ಕೆಲಸ ಮಾಡುವವರನ್ನೇ ನಿಂದಿಸುತ್ತದೆ, ಅವರಲ್ಲಿ ಕೀಳರಿಮೆ ತಂದೊಡ್ಡುತ್ತದೆ.

ದೇಶದ ಸಾಮಾಜಿಕ ಇತಿಹಾಸದ ದುರಂತವೇ ಇದು. ಯಾರು ಸಮಾಜದ ಕೊಳೆ-ಕೊಳಕುಗಳನ್ನು ಬಾಚಿ, ಬಳಿದು ಶುದ್ಧಗೊಳಿಸುತ್ತಾನೋ ಅವನು ಕನಿಷ್ಠ ಎನಿಸಿಕೊಂಡ. ಯಾರು ಸಮಾಜದ ಒಳಗೆ ಕೊಳೆ-ಕೊಳಕುಗಳನ್ನು ತುಂಬುತ್ತಾನೋ ಅವನು ಶ್ರೇಷ್ಠ ಎನಿಸಿಕೊಂಡ.

ಇನ್ನು ನೀವು ನಿಮ್ಮನ್ನು ಸಮರ್ಥಿಸಿಕೊಳ್ಳಲು ಬಳಸಿಕೊಂಡ ಉಪಮೆಯ ವಿಷಯಕ್ಕೆ ಬರೋಣ. ಬ್ಯೂಟಿಪಾರ್ಲರ್‌ಗಳನ್ನು ಅಥವಾ ಹೇರ್ ಕಟಿಂಗ್ ಸೆಲೂನ್‌ಗಳನ್ನು ನಡೆಸುತ್ತಿರುವವರು, ಆ ಕಾಯಕ ಮಾಡುತ್ತಿರುವವರು ಸವಿತಾ ಸಮಾಜದವರು. ಈ ಸಮಾಜಕ್ಕೆ ಹಜಾಮ, ನಯನಜ ಕ್ಷತ್ರಿಯ, ಭಂಡಾರಿ, ಹಡಪದ, ಕ್ಷೌರಿಕ ಇತ್ಯಾದಿ ಉಪನಾಮಗಳಿವೆ. ಈ ರಾಜ್ಯದಲ್ಲಿ ಅತಿ ಹೆಚ್ಚು ಬೈಗುಳವಾಗಿ ಬಳಕೆಯಾಗುವ ಶಬ್ದ ಎಂದರೆ ಅದು ಹಜಾಮ.

ಈ ಸಮುದಾಯವರು ಸಮಾಜ ಬಂಧುಗಳ ತಲೆ ಕೂದಲು, ಗಡ್ಡದ ಕೂದಲು ಬೆಳೆದಂತೆ ಅವುಗಳನ್ನು ಕತ್ತರಿಸಿ ಓರಣಗೊಳಿಸುತ್ತಾರೆ. ಗಬ್ಬುನಾರು ಕಂಕುಳ ಅಡಿಯ ಕೂದಲನ್ನು ತೆಗದು ಸ್ವಚ್ಛಗೊಳಿಸುತ್ತಾರೆ. ಇದಕ್ಕೆ ನಿಗದಿಪಡಿಸಿದ ಬೆಲೆಯನ್ನು ಪಡೆದುಕೊಳ್ಳುತ್ತಾರೆ. ಒಂದು ವೇಳೆ ಇವರು ಇಲ್ಲದೇ ಇದ್ದಿದ್ದರೆ ಎಲ್ಲರೂ ಕೆಜಿಗಟ್ಟಲೆ ತಲೆಕೂದಲು, ಜಟೆ, ಗಡ್ಡ ಬಿಟ್ಟುಕೊಂಡು ಅಸಹ್ಯವಾಗಿ ಕಾಣಬೇಕಾಗುತ್ತಿತ್ತು. ಇದು ಅಪ್ಪಟ ಶುದ್ಧಿಯ ಕಾಯಕ. ಕೊಳಕನ್ನು ತೊಳೆದುಕೊಂಡು ಶುಭ್ರಗೊಳ್ಳಲೆಂದೇ ಇವರ ಬಳಿ ನಾವು ಹೋಗುತ್ತೇವೆ.

ಈ ಶುದ್ಧಿಯ ಕಾಯಕವೇನು ವಂಚನೆಯೇ? ಸೂಳೆಗಾರಿಕೆಯೇ? ಕಳ್ಳತನವೇ? ದರೋಡೆಯೇ? ಅಥವಾ ತಲೆಹಿಡಿಯುವ ನೀಚ ಕಾಯಕವೇ? ಹೀಗಿರುವಾಗ ನಮ್ಮ ಸಮಾಜ ಈ ಕಾಯಕವನ್ನು ಕೆಟ್ಟದ್ದಕ್ಕೆ, ಕೊಳಕು ವಿಷಯಗಳಿಗೆ ಉಪಮೆಯನ್ನಾಗಿ ಬಳಸುವುದು ಯಾಕೆ? ಇದು ಅನ್ಯಾಯವಲ್ಲವೆ?

ಸಾಧಾರಣವಾಗಿ ಹೇರ್ ಕಟಿಂಗ್ ಸೆಲೂನ್ ಎಂದರೆ ಪುರುಷರ ಕೇಶ ವಿನ್ಯಾಸಕ್ಕೆ ನಿಗದಿಯಾದ ಸ್ಥಳಗಳು. ಬ್ಯೂಟಿ ಪಾರ್ಲರ್‌ಗಳು ಹೆಣ್ಣು ಮಕ್ಕಳ ಕೇಶ ಶೃಂಗಾರ ಮಾಡುತ್ತವೆ. ಈ ಬ್ಯೂಟಿ ಪಾರ್ಲರ್‌ಗಳನ್ನು ನಡೆಸುವ ಹೆಣ್ಣುಮಕ್ಕಳ ಬದುಕಿನಲ್ಲಿ ಸಾವಿರ ನೋವುಗಳಿರುತ್ತವೆ. ಅವರು ಬದುಕಿನ ಅನಿವಾರ್ಯತೆಗಳಿಂದ ನೊಂದವರು. ಕುಟುಂಬ ನಿರ್ವಹಣೆಯ ಹೊಣೆ ಹೊತ್ತುಕೊಂಡವರು. ಸಮಾಜದ ನಿಂದನೆಗಳಿಂದ ನೊಂದು, ಈ ಅಪಮಾನಗಳನ್ನು ಮೆಟ್ಟಿನಿಂತು ಕೆಲಸ ಮಾಡುವವರು. ಇವರ ಕಾಯಕ ಕನಿಷ್ಠವಾಗಲು ಸಾಧ್ಯವೆ? ಇವರು ಸಮಾಜ ಬಾಹಿರವಾದ ಕೆಲಸವನ್ನೇನಾದರೂ ಮಾಡುತ್ತಿದ್ದಾರೆಯೇ?

ಮಾನ್ಯ ಸಂತೋಷ್ ಹೆಗಡೆಯವರೆ,

ತಾವು ಬ್ಯೂಟಿ ಪಾರ್ಲರ್ ಹೋಲಿಕೆಯನ್ನು ಬಳಸುವಾಗ ಇದೆಲ್ಲವನ್ನು ಯೋಚಿಸಿರಲಾರಿರಿ. ಆಕಸ್ಮಿಕವಾಗಿ ನಿಮ್ಮ ಬಾಯಿಂದ ಈ ಮಾತು ಹೊರಬಂದಿರಬಹುದು. ಆದರೆ ನಿಮ್ಮಂಥ ಉನ್ನತ ಸ್ಥಾನದಲ್ಲಿ ಕುಳಿತ ವ್ಯಕ್ತಿಗಳು, ನಿಮ್ಮ ಹಾಗೆ ಜನಪ್ರಿಯರಾಗಿರುವ ಸಾರ್ವಜನಿಕ ವ್ಯಕ್ತಿಗಳು ಹೀಗೆ ಮಾತನಾಡಿದರೆ ಅದು ಆ ಸಮುದಾಯಕ್ಕೆ ಎಷ್ಟು ನೋವು ತರುತ್ತದೆ ಎಂಬುದನ್ನು ನೀವು ಅಂದಾಜು ಮಾಡಲಾರಿರಿ. ನೊಂದವರಿಗಷ್ಟೆ ನೋವಿನ ಆಳ-ಅಗಲ ಗೊತ್ತಾಗಲು ಸಾಧ್ಯ ಅಲ್ಲವೆ?

ಇದೆಲ್ಲವನ್ನು ತಮ್ಮ ಬಳಿ ಬಂದು ಖಾಸಗಿಯಾಗಿ ನಿವೇದಿಸಿಕೊಳ್ಳಬಹುದಿತ್ತು. ಆದರೆ ಇದು ನೀವು ಖಾಸಗಿಯಾಗಿ ಆಡಿದ ಮಾತಲ್ಲ. ನಿಮ್ಮ ಮಾತು ಪ್ರಜಾವಾಣಿಯಂಥ ಜನಪ್ರಿಯ ಪತ್ರಿಕೆಯಲ್ಲಿ ಪ್ರಕಟಗೊಂಡು ಲಕ್ಷಾಂತರ ಜನರು ಓದಿದ್ದಾರೆ. ಹಾಗಾಗಿ ಬಹಿರಂಗ ಪತ್ರವನ್ನೇ ಬರೆಯಬೇಕಾಯಿತು.

ಈ ಪತ್ರ ಓದಿದ ಮೇಲೆ ತಮಗೆ ತಾವು ಆಡಿದ ಮಾತಿನ ಬಗ್ಗೆ ವಿಷಾದವೆನ್ನಿಸಿದರೆ ಸಾಕು, ನನ್ನ ಶ್ರಮ ಸಾರ್ಥಕ.

ಲೋಕಾಯುಕ್ತ ಹುದ್ದೆಯಲ್ಲಿ ನಿಮ್ಮ ಸಾರ್ಥಕ ಸೇವೆಯ ಬಗ್ಗೆ ಒಂದೇ ಒಂದು ಕಳಂಕವೂ ಇರಲಾರದು. ಹುದ್ದೆಗೆ ಬರುವ ಮುನ್ನವೇ ನಿಮ್ಮ ಆಸ್ತಿ ವಿವರ ಘೋಷಿಸಿಕೊಂಡು ಇಡೀ ಇಲಾಖೆಗೆ ಮೇಲ್ಪಂಕ್ತಿ ಹಾಕಿಕೊಟ್ಟವರು ನೀವು. ನಿಮ್ಮ ಪ್ರಾಮಾಣಿಕತೆ, ಬದ್ಧತೆಯನ್ನು ಯಾರೂ ಶಂಕಿಸಲಾರರು.

ಈ ಗೌರವ ಆದರಗಳನ್ನು ಇಟ್ಟುಕೊಂಡೇ ನಿಮ್ಮ ಅನಪೇಕ್ಷಿತ ಪ್ರತಿಕ್ರಿಯೆಯ ಕುರಿತು ನನ್ನ ಆಕ್ಷೇಪಣೆ ದಾಖಲಿಸಿದ್ದೇನೆ. ಅದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಇಂಥ ಆಕ್ಷೇಪಣೆಯ ಯತ್ನಗಳು ನನಗೆ, ನನ್ನಂಥವರಿಗೆ ಸಂಕಷ್ಟಗಳನ್ನು ತಂದೊಡ್ಡಬಹುದು. ಆ ಕುರಿತು ನಾನು ಹೆಚ್ಚು ತಲೆಕೆಡಿಸಿಕೊಳ್ಳಲಾರೆ. ಅನ್ಯಥಾ ಭಾವಿಸಬೇಡಿ.

ಅಪಾರ ಗೌರವದೊಂದಿಗೆ,

ದಿನೇಶ್ ಕುಮಾರ್ ಎಸ್.ಸಿ.
e-mail: dinoosacham@gmail.com
blog: http://desimaatu.blogspot.com

4 comments:

Anonymous said...

dinesh,
you have very well presented a serious issue. when a read that item in Prajavani, for a minute I was confused on what grounds Mr Hegde was taking the profession of beauty parlours. No matter however politicians comment, Lokayukta need not get irritated as long as he is confident of what he has been doing is and as per the duties assigned to his institution.
As you mentioned in the article, Hegde might not have put his brain before making a reference to beauty parlours. I hope if the Lokayukta visits the blogs he will definitely feel sorry for his reference.
- aloka

akshara said...

yaru yavude kelasa maduttirali adu avara palige dodda kelasave sari. lokayuktara intaha helike kilarime untu maduvantirara baradu. lokayuktare ee riti matanadidare, bere janaru inneshtu matanadabhudu. nimma e lekhanavannu lokayuktaru oodalebeku.

ಹಳ್ಳಿಕನ್ನಡ said...

ಇಂತದ್ದೆಲ್ಲ ಉಪಮೇಯಗಳು ಹೆಗಡೆಯಂತವರಿಗೆ ಸಹಜವಾಗಿ ಬರುವಂತದ್ದು ಬಿಡಿ.

chandrashekhar aijoor said...

ಡಿಯರ್ ದಿನೇಶ್,
ಸಂತೋಷ್ ಹೆಗ್ಡೆಯವರ 'ಬ್ಯೂಟಿಪಾರ್ಲರ್' ಪದ ಬಳಕೆಯ ಬಗ್ಗೆ ನೀವು ಎತ್ತಿರುವ ಆಕ್ಷೇಪ ಮೆಚ್ಚಬಹುದಾದರು, ನೀವು ಅಗ್ರಹಾರದ ಗೊಂಡಾರಣ್ಯದಲ್ಲಿ ಬಿದ್ದು ಸಾಮಾಜಿಕ ನ್ಯಾಯಕ್ಕಾಗಿ ಚೀರುತ್ತಿರುವಂತೆ ನನಗೆ ಕಾಣಿಸುತ್ತಿದೆ. ಭಯೋತ್ಪಾದನೆ ನಿಗ್ರಹಕ್ಕಾಗಿ ಬ್ಲಾಗ್, SMS, ಇಮೇಲ್, ಟೀಶರ್ಟ್ ಗಳಲ್ಲಿ ಪ್ರಾಣಕೊಡಲು ಸಿದ್ಧರಿರುವ ಸನಾತನಿಗಳ ಸಂಖ್ಯೆ ನಮ್ಮ ಸುತ್ತಲು ಕೋಟಿಯ ಲೆಕ್ಕದಲ್ಲಿ ಸಿಗುತ್ತದೆ. ಅದೇ ಅಸ್ಪೃಶ್ಯತೆ ನಿಗ್ರಹಕ್ಕಾಗಿ ನಿಮ್ಮಲ್ಲೇನಾದರೂ ಒನ್ ಪಾಯಿಂಟ್ ಪ್ರೊಗ್ರಾಮ್ ಇದೆಯಾ ಅಂತ ಸನಾತನ ಮಠಗಳಿಗೆ, ಸನಾತನ ಸರ್ಕಾರಗಳಿಗೆ, ಅಷ್ಟೇಕೆ ಖುದ್ದು ಸನಾತನಿಗಳಿಗೆ ಕೇಳಿ ನೋಡಿ, ತಕ್ಷಣವೇ ಅವರೆಲ್ಲ ತಮ್ಮ ಕಣ್ಣು ಕಿವಿ ಮೂಗು ಬಾಯಿಗಳನ್ನು ಕಳೆದುಕೊಂಡು ಶಿಲಾಯುಗವಾಸಿಗಳಾಗುತ್ತಾರೆ.

ಪುಡಿಗಾಸಿಗೆ ಗಡಿಗಳಲ್ಲಿ ಜೀತಕ್ಕಿರುವ ನಮ್ಮ ಸೈನಿಕರನ್ನು ಕಂಡು ನನಗೆ ಅಯ್ಯೋ ಅನ್ನಿಸುತ್ತದೆ. ಈ ಮಹಾನ್ ದೇಶದ ದೇಶಪ್ರೇಮ ಅವರನ್ನು ಅಲ್ಲಿ ದುಡಿಯುವಂತೆ ಮಾಡಿದೆ ಎಂದುಕೊಂಡಿರುವ ಸನಾತನಿಗಳಿಗೆ, ಆ ಅಮಾಯಕರ ಮನೆಯೊಳಗಿನ ಬಡತನ ಯಾವತ್ತು ಕಾಣುವುದಿಲ್ಲ. ನನಗೆ ಆ ಸೈನಿಕರು ಬರಿ ಗಡಿಗಳನ್ನು ಕಾಯುತ್ತಿಲ್ಲ, ಈ ದೇಶದ ಮಡಿ ಮೈಲಿಗೆಯ ವಿಕಾರಗಳನ್ನು, ಮತಾಂಧರ, ಧರ್ಮದ ತಲೆಹಿಡುಕರ, communal butcherಗಳ ಸೈತಾನಿ ತೆವಲುಗಳನ್ನು ತಮ್ಮ ಪ್ರಾಣ ಒತ್ತೆ ಇಟ್ಟು ಕಾಯುತ್ತಿದ್ದಾರೆನಿಸುತ್ತದೆ. ದಲಿತರು ಮನುಷ್ಯರಲ್ಲ, ಆದರೆ ಅವರು ಹಿಂದೂಗಳು ಎಂದು ಹೇಳುವಷ್ಟು ದೊಡ್ಡಗುಣ ಸನಾತನಿಗಳ ನಾಲಿಗೆಗಿದೆ. ಇಂಥ ನಾಲಿಗೆಯೇ ಇವತ್ತು ಕೊರಮರನ್ನು ಕಳ್ಳಖದೀಮರನ್ನು ಒಂದೇ ಪಟ್ಟಿಗೆ ಸಲೀಸಾಗಿ ಸೇರಿಸುತ್ತದೆ. ಇನ್ನು ಇಂಥವರ ಪಟ್ಟಿಗಳಲ್ಲಿ ಮುಸ್ಲಿಮರ ಶ್ರಮಜೀವಿಗಳ ಸ್ಥಾನಮಾನ ಎಂಥದ್ದು ಎಂಬುದನ್ನು ಈ ದೇಶದ ಯಾರು ಬೇಕಾದರೂ ಸುಲಭವಾಗಿ ಗ್ರಹಿಸಬಹುದು.

ಈ ದೇಶದ ಸಾಮಾಜಿಕ ನ್ಯಾಯದ ಬಗ್ಗೆಯೇ ನನಗೆ ಅನೇಕ ಗುಮಾನಿಗಳಿವೆ. ಲೋಕಾಯುಕ್ತ ಅನ್ನುವುದು ಕೂಡ ಸಂಪೂರ್ಣ ಸಾಚಾ ಇಲಾಖೆಯೇನಲ್ಲ. ಅದು ಆಯಾ ಸರ್ಕಾರದ ಕೃಪಾಪೋಷಿತ ನಾಟಕ ಶಾಲೆ. ಸಂತೋಷ್ ಹೆಗ್ಡೆಯವರು ರಾಶಿಗಟ್ಟಲೆ ಕಾನೂನು ಪುಸ್ತಕಗಳನ್ನೇ ಓದಿರಬಹುದು, ಆದರೆ ಅವರ ತಲೆ ಮಿದುಳುಗಳಲ್ಲಿ 'ಮನು'ವಿನಂಥ ಒಬ್ಬ ಕ್ರಿಮಿಯಿದ್ದರೆ ಸಾಕಲ್ಲವೇ ಸಾಮಾಜಿಕ ನ್ಯಾಯ ಅನ್ನುವುದು ತಬ್ಬಲಿಯಾಗಲು.

ಹುಟ್ಟಿಗೂ-ಪ್ರತಿಭೆಗೂ, ಜಾತಿಗೂ-ಪ್ರತಿಭೆಗೂ ಏನೇನೂ ಸಂಬಂಧ ಇಲ್ಲದಿರುವುದನ್ನೂ ಕಾಣುವಷ್ಟಾದರೂ 'ಪ್ರತಿಭೆ' ಈ ದೊಡ್ಡ ದೇಶಕ್ಕಿನ್ನು ಬಂದಿಲ್ಲ. ದಲಿತರು, ಹಿಂದುಳಿದವರು, ಹಳ್ಳಿಗರು, ಶ್ರಮಿಕರನ್ನು ವಂಚಿಸುವ ಬುದ್ಧಿಯೇ ಭಾರತದಲ್ಲಿ ಪ್ರತಿಭೆ ಎನಿಸಿಕೊಂಡಿದೆ. ಅಗ್ರಹಾರದ ಬೀದಿಗಳಿಂದ ದೇಶಕಾಯಲು ಹೋರಾಟ ಸನಾತನಿಗಳ ಅಂಕಿ ಸಂಖ್ಯೆಯ ಲೆಕ್ಕಾಚಾರದ ಅಂಶಗಳ ಬಗ್ಗೆ ಯಾರಾದರೂ ಬ್ಲಾಗ್ ನ ವೀರಾಧಿವೀರರು ಮಾಹಿತಿ ಕೊಟ್ಟರೆ ನಾನವರಿಗೆ ಋಣಿ.