೧೯೫೩ರಲ್ಲಿ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಕಾಶಿ ದೇವಸ್ಥಾನದ ಆವರಣದಲ್ಲಿ, ಸಾರ್ವಜನಿಕವಾಗಿ ಇನ್ನೂರು ಮಂದಿ ಬ್ರಾಹ್ಮಣರ ಪಾದ ತೊಳೆದಿದ್ದರು. ಬಹುಶಃ ಈ ಘಟನೆಯನ್ನು ಡಾ.ರಾಮ್ ಮನೋಹರ್ ಲೋಹಿಯಾ ಅವರು ಟೀಕೆಗೆ ಒಳಪಡಿಸದೆ ಇದ್ದಿದ್ದರೆ ಇದೂ ಸಹ ಗೌರವಾನ್ವಿತ ರಾಷ್ಟ್ರಾಧ್ಯಕ್ಷರ ಕಾರ್ಯಕ್ರಮ ವೇಳಾಪಟ್ಟಿಯ ಒಂದು ಅಂಶವಾಗಿ ದಾಖಲಾಗಿರುತ್ತಿತ್ತು, ಅಷ್ಟೆ.
ಆದರೆ ಇಡೀ ದೇಶ ಸುಮ್ಮನಿದ್ದರೂ ಲೋಹಿಯಾ ಸುಮ್ಮನಿರಲಿಲ್ಲ. ಭಾರತದ ರಾಷ್ಟ್ರಾಧ್ಯಕ್ಷನೊಬ್ಬನು ಇನ್ನೂರು ಬ್ರಾಹ್ಮಣರ ಕಾಲುಗಳನ್ನು ಕಾಶಿ ಪುಣ್ಯ ಕ್ಷೇತ್ರದಲ್ಲಿ ತೊಳೆದನು. ಒಬ್ಬನ ಕಾಲನ್ನು ಇನ್ನೊಬ್ಬನು ಸಾರ್ವಜನಿಕವಾಗಿ ತೊಳೆಯುವುದು ನೀಚಕೆಲಸ ಮತ್ತು ಈ ಕಾಲು ತೊಳೆಸಿಕೊಳ್ಳುವ ನೀಚ ಸೌಲಭ್ಯವನ್ನು ಬ್ರಾಹ್ಮಣ ಜಾತಿಯೊಂದಕ್ಕೇ ಕೊಡುವುದು ಶಿಕ್ಷಾರ್ಹವಾದ ಅಪರಾಧ ಎಂದು ಲೋಹಿಯಾ ಅಬ್ಬರಿಸಿದ್ದರು.
ಲೋಹಿಯಾ ಅಷ್ಟಕ್ಕೆ ಸುಮ್ಮನಿರದೆ ಒಂದು ದೇಶದ ಅಧ್ಯಕ್ಷನು ಬ್ರಾಹ್ಮಣರ ಕಾಲುಗಳನ್ನು ತೊಳೆಯುತ್ತಿರಬೇಕಾದರೆ ಆ ದೇಶದ ಚಮ್ಮಾರನ, ಪೂಜಾರಿಯ, ಉಪಾಧ್ಯಾಯನ, ರೈತನ ನಡುವೆ ಸಹಜವಾದ ಸಂಭಾಷಣೆಯೇ ನಡೆಯಲಾಗದು. ದೇಶದ ಅಧ್ಯಕ್ಷ ಸ್ಥಾನದಲ್ಲಿರುವವನ ಬಗ್ಗೆ ಯಾರು ಬೇಕಾದರೂ ಭಿನ್ನಾಭಿಪ್ರಾಯ ಇಟ್ಟುಕೊಂಡಿರಬಹುದು. ಆದರೆ ಹಾಗೆ ಭಿನ್ನಾಭಿಪ್ರಾಯ ಇಟ್ಟುಕೊಂಡವನೂ ದೇಶದ ಅಧ್ಯಕ್ಷನನ್ನು ಗೌರವಿಸಬಯಸುತ್ತಾನೆ. ಆದರೆ ಅಂಥದೊಂದು ಗೌರವಕ್ಕೆ ಪಾತ್ರನಾಗಬೇಕಾದರೆ ಅಧ್ಯಕ್ಷನಾದವನು ಕನಿಷ್ಠ ನಾಗರಿಕ ನಡವಳಿಕೆಯನ್ನಾದರೂ ರೂಢಿಸಿಕೊಳ್ಳಬೇಕು ಎಂದು ಸಿಟ್ಟಿನಿಂದ ನುಡಿದಿದ್ದರು.
ತಮಾಶೆಯೆಂದರೆ ಈ ಕಾಲು ತೊಳೆಸಿಕೊಂಡ ಪುರಾಣವು ಲೋಹಿಯಾ ಅವರಿಗೆ ಗೊತ್ತಾಗಿದ್ದೇ ಒಬ್ಬ ಬ್ರಾಹ್ಮಣನಿಂದ. ಈ ಬ್ರಾಹ್ಮಣನೂ ರಾಜೇಂದ್ರ ಪ್ರಸಾದ್ ಅವರಿದ ಕಾಲು ತೊಳೆಸಿಕೊಳ್ಳಬೇಕಾದವನೇ ಆಗಿದ್ದು ಮತ್ತೊಂದು ವಿಶೇಷ. ರಾಷ್ಟ್ರಾಧ್ಯಕ್ಷನು ಕೆಲಕ್ಷಣಗಳಲ್ಲಿ ತನ್ನ ಪಾದವನ್ನು ತೊಳೆಯಲಿದ್ದಾನೆ ಎಂಬುದು ಗೊತ್ತಾಗುತ್ತಿದ್ದಂತೆ ಈ ಬ್ರಾಹ್ಮಣ ಅಲ್ಲಿಂದ ಪಲಾಯನ ಮಾಡಿದ್ದನು. ಆದರೆ ಆತನ ಸ್ಥಾನವನ್ನು ಮತ್ತೊಬ್ಬ ಬ್ರಾಹ್ಮಣನಿಂದ ಭರ್ತಿ ಮಾಡಲಾಗಿತ್ತು. ಲೋಹಿಯಾ ಪ್ರಕಾರ ಈ ನೀಚಕೃತ್ಯವು ಪಲಾಯನ ಮಾಡಿದ ಬ್ರಾಹ್ಮಣನಿಗೆ ಭೀಕರ, ಅಸಹನೀಯ ಅನಿಸಿದ್ದರಿಂದ ಆತ ಅಲ್ಲಿಂದ ಕಾಲ್ತೆಗೆದಿದ್ದ.
ಅದಕ್ಕಾಗಿ ಲೋಹಿಯಾ ಈ ಬ್ರಾಹ್ಮಣನ ಕುರಿತು ಹೀಗೆ ಬರೆಯುತ್ತಾರೆ: ನಾನು ಈ ಬಡ ಸಂಸ್ಕೃತ ಉಪಾಧ್ಯಾಯನನ್ನು ಎಂದೆಂದಿಗೂ ನೆನೆಯುತ್ತಿರುತ್ತೇನೆ. ಆ ವಿಕಟವಾದ ಪ್ರೇತ ಸಮಾರಂಭದಲ್ಲಿ ಈತನೊಬ್ಬನೇ ಮನುಷ್ಯ. ಇಂಥ ಒಂದೆರಡು ಸ್ತ್ರೀ ಪುರುಷರಿಂದಲೇ ಇಡೀ ದೇಶವೆಲ್ಲಾ ಈಗ ದಕ್ಷಿಣದಲ್ಲಿ ಉಲ್ಬಣಗೊಳ್ಳುತ್ತಿರುವ ಬ್ರಾಹ್ಮಣದ್ವೇಷ ಮನೋಭಾವ ಹಬ್ಬದಂತೆ ತಡೆದಿರುವುದು.
********************
ಒಬ್ಬನು ಮತ್ತೊಬ್ಬನ ಕಾಲನ್ನು ಅವನು ಬ್ರಾಹ್ಮಣ ಎನ್ನುವ ಆಧಾರದಿಂದ ತೊಳೆಯುವುದು ಜಾತಿಪದ್ಧತಿಯ ಮುಂದುವರಿಕೆಗೆ ಆಶ್ವಾಸನೆ ಕೊಟ್ಟಂತೆ. ದಾರಿದ್ರ್ಯವನ್ನು ದುಃಖವನ್ನು ಪುನರಾವೃತ್ತಿ ಮಾಡಿದಂತೆ. ಈ ರೀತಿಯ ನೀಚ ಕೆಲಸಗಳಲ್ಲಿ ತೊಡಗಿದವರ ಚೈತನ್ಯಗಳು ಎಂದೆಂದೂ ಈ ದೇಶದ ಒಳಿತನ್ನೇ ಆಗಲಿ, ಸಾಹಸದ ಆನಂದವನ್ನೇ ಆಗಲಿ ರೂಪಿಸಲಾರವು ಎಂದು ಲೋಹಿಯಾ ಭಾವಿಸಿದ್ದರು.
ಕರ್ನಾಟಕದ ರಾಜಕೀಯವು ಇಂದು ಮಠ-ಮಾನ್ಯಗಳ ಅಂಕೆಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಲೋಹಿಯಾ ಅವರ ಮಾತುಗಳನ್ನು ಚರ್ಚಿಸಬೇಕಾದ ಅಗತ್ಯವಿದೆ ಎಂದೆನಿಸುತ್ತದೆ. ಕರ್ನಾಟಕದ ಮಟ್ಟಿಗೆ ಬ್ರಾಹ್ಮಣರು ಮಾತ್ರ ಪುರೋಹಿತಶಾಹಿ ವ್ಯವಸ್ಥೆಯ ಪ್ರತಿರೂಪಗಳಾಗಿ ಕಾಣುತ್ತಿಲ್ಲ. ೧೨ನೇ ಶತಮಾನದ ಕ್ರಾಂತಿಪುರುಷ ಬಸವಣ್ಣನವರ ನೆರಳಿನಲ್ಲಿ ಮಠಮಾನ್ಯಗಳನ್ನು ರೂಪಿಸಿಕೊಂಡವರೂ ಸಹ ಇದೇ ವ್ಯವಸ್ಥೆಯ ಪ್ರತಿನಿಧಿಗಳಾಗಿ ಕಾಣುತ್ತಿದ್ದಾರೆ. ಕರ್ನಾಟಕದ ಚರ್ಚುಗಳ ಮೇಲೆ ಭಾರತೀಯ ಜನತಾ ಪಾರ್ಟಿ ಕೃಪಾಪೋಷಿತ ಭಜರಂಗಿಗಳು ದಾಳಿ ನಡೆಸುತ್ತಿದ್ದಂತೆ ಧರ್ಮ-ಜಾತಿಯ ಕುರಿತಾದ ಚರ್ಚೆಗಳು ಮತ್ತೆ ಆರಂಭವಾಗಿವೆ. ಲೋಹಿಯಾ ರೂಪಿಸಿಕೊಂಡ ಬಹುತೇಕ ವೀರಶೈವ ಮಠಾಧೀಶರಾದಿಯಾಗಿ ಪ್ರಬಲ ಕೋಮುಗಳ ಧರ್ಮಗುರುಗಳೆಲ್ಲ ‘ಕಾಲು ತೊಳೆಸಿಕೊಳ್ಳುವ ಪರಂಪರೆಗೆ ಸೇರಿದ್ದಾರೆ. ನಮ್ಮ ಅಧಿಕಾರಸ್ಥ ರಾಜಕಾರಣಿಗಳು ಈ ಮಠಾಧೀಶರ ಅಡಿದಾವರೆಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ.
ರಾಜ್ಯದಲ್ಲಿ ಇವತ್ತು ಬಿಜೆಪಿ ಅಧಿಕಾರದಲ್ಲಿದೆ. ಧರ್ಮ ಆಧಾರಿತ ರಾಜಕಾರಣ ನಡೆಸಿಯೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ವಿಫಲವಾಗಿತ್ತು. ನಂತರ ತನ್ನ ಧೋರಣೆಯಲ್ಲಿ ಮಾರ್ಪಾಡು ಮಾಡಿಕೊಂಡು ಜಾತಿ ಆಧಾರದ ರಾಜಕಾರಣವನ್ನು ನೆಚ್ಚಿಕೊಂಡ ಪರಿಣಾಮವಾಗಿಯೇ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬಂದಿದೆ. ಎಚ್.ಡಿ.ಕುಮಾರಸ್ವಾಮಿಯವರು ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದ ಪರಿಣಾಮವಾಗಿ ಇಡೀ ಲಿಂಗಾಯಿತ ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಲಾಯಿತು. ಈ ಕಾರ್ಯದ ನೇತೃತ್ವ ವಹಿಸಿಕೊಂಡವರು ವೀರಶೈವ ಮಠಾಧೀಶರು ಎಂಬುದು ರಹಸ್ಯವೇನಲ್ಲ. ಮಠಾಧೀಶರು ಎಲ್ಲೆಡೆ ಬೀದಿಗಿಳಿದು ಹೋರಾಟ ಮಾಡಿದರು. ಕೆಲವೆಡೆ ಮಠಾಧೀಶರು ಈ ಬೀದಿಹೋರಾಟದಲ್ಲಿ ಪಾಲ್ಗೊಳ್ಳದಿದ್ದರೂ, ಆ ಹೋರಾಟಗಳ ಪ್ರಾಯೋಜಕರು ಅವರೇ ಆಗಿದ್ದರು. ನಂತರ ಬಂದ ಚುನಾವಣೆಗಳಲ್ಲಿ ವೀರಶೈವರು ಬಿಜೆಪಿಯನ್ನು ಬೆಂಬಲಿಸಿದ್ದರಿಂದ ಆ ಪಕ್ಷ ಸುಲಭವಾಗಿ ಅಧಿಕಾರಗ್ರಹಣ ಮಾಡಿತು.
ಕಾಂಗ್ರೆಸ್ ಪಕ್ಷದಲ್ಲಿ ವೀರಶೈವ ಸಮುದಾಯದ ಪ್ರಬಲ ನಾಯಕರು ಇಲ್ಲವಾಗಿದ್ದರು. ಜೆಡಿಎಸ್ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡು ವೀರಶೈವರನ್ನು ಎದುರುಹಾಕಿಕೊಂಡಿತ್ತು. ಯಾವತ್ತೂ ಕೋಮುವಾದಿ ಶಕ್ತಿಗಳೊಂದಿಗೆ ಗುರುತಿಸಿಕೊಳ್ಳದ, ಬಸವಣ್ಣನ ಆದರ್ಶಗಳ ಬಗ್ಗೆ ಇವತ್ತಿಗೂ ಗೌರವ ಕಾಪಾಡಿಕೊಂಡಿರುವ ವೀರಶೈವ ಜನಸಮೂಹ ಬೇರೆ ಪರ್ಯಾಯಗಳಿಲ್ಲದೆ ಬಿಜೆಪಿಯನ್ನೇ ಬೆಂಬಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ಮತ್ತೊಂದು ದುರಂತ.
********************
ಸದ್ಯ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರ ಹಲವು ವೀರಶೈವ ಮಠಾಧೀಶರ ಸರ್ಕಾರ. ಮತ್ತೊಂದೆಡೆ ಬಿಜೆಪಿಯನ್ನು ನಿಯಂತ್ರಿಸುವ ಸಂಘ ಪರಿವಾರದ ಸರ್ಕಾರ. ಸಂಘಪರಿವಾರ ಎಂದರೆ ಅದರೊಳಗೆ ಪೇಜಾವರ ಶ್ರೀಗಳಂಥವರು, ರಾಘವೇಶ್ವರ ಭಾರತಿಯಂಥವರು, ರವಿಶಂಕರ ಗುರೂಜಿಯಂಥವರು ಸೇರುತ್ತಾರೆ. ಒಂದೆಡೆ ಬ್ರಾಹ್ಮಣ ಮಠಗಳು ಹಾಗು ಮನುವಾದಿ ಮನಸ್ಥಿತಿಯ ಒಂದು ವರ್ಗ ಮತ್ತೊಂದೆಡೆ ಬ್ರಾಹ್ಮಣ್ಯವನ್ನು ಆವಾಹಿಸಿಕೊಂಡಿರುವ ವೀರಶೈವ ಮಠಾಧೀಶರು ಇಂದಿನ ಸರ್ಕಾರವನ್ನು ನಿರ್ದೇಶಿಸುತ್ತಿದ್ದಾರೆ.
ಆ ಕಾರಣದಿಂದಲೇ ಗೋಕರ್ಣ ಕ್ಷೇತ್ರವನ್ನು ರಾಜ್ಯ ಸರ್ಕಾರ ಸಾರಾಸಗಟಾಗಿ ‘ಆಧುನಿಕ ಗೋ ಸಂರಕ್ಷಕ ಅಬ್ರಾಹ್ಮಣರನ್ನು ಅಯೋಗ್ಯರೆಂದೇ ಭಾವಿಸುವ ರಾಘವೇಶ್ವರ ಭಾರತಿಯ ಅಡಿದಾವರೆಗೆ ಅರ್ಪಿಸುತ್ತದೆ. ಚರ್ಚ್‌ಗಳ ಮೇಲೆ ಮೇಲಿಂದ ಮೇಲೆ ಭಜರಂಗದಳದ ಭಯೋತ್ಪಾದಕರು ದಾಳಿ ನಡೆಸಿದರೂ ಮುಖ್ಯಮಂತ್ರಿ ಈ ದುಷ್ಕೃತ್ಯಗಳನ್ನು ಖಂಡಿಸುವ ಗೋಜಿಗೂ ಹೋಗುವುದಿಲ್ಲ. ಬದಲಾಗಿ ಮತಾಂತರದ ವಿರುದ್ಧ ಪುಂಖಾನುಪುಂಖ ಹೇಳಿಕೆ ನೀಡುತ್ತಾರೆ. ಎಲ್ಲಿ ‘ಕೇಶವಶಿಲ್ಪದವರು ಬೇಜಾರು ಮಾಡಿಕೊಂಡಾರೋ ಎಂಬ ಆತಂಕ ಯಡಿಯೂರಪ್ಪನವರದು. ತಾನು ಕುಳಿತಿರುವ ಜಾಗದಲ್ಲಿ ಸಾಂವಿಧಾನಿಕ ಕಟ್ಟಳೆಗಳನ್ನು ಪಾಲಿಸಬೇಕಾಗುತ್ತದೆ ಎಂಬುದನ್ನೂ ಯಡಿಯೂರಪ್ಪ ಮರೆತು ಕುಳಿತಿದ್ದರು.
ಗೋಕರ್ಣವನ್ನು ರಾಘವೇಶ್ವರರಿಗೆ ಒಪ್ಪಿಸಿದ ಹಾಗೆ ಬೇರೆ ಮಠಾಧೀಶರಿಗೆ ಯಾವ ಯಾವ ಕೊಡುಗೆಗಳನ್ನು ಯಡಿಯೂರಪ್ಪ ಕೊಟ್ಟಿದ್ದಾರೋ ಅದೆಲ್ಲವೂ ಕಾಲ ಕಳೆದಂತೆ ಸಾರ್ವಜನಿಕವಾಗುತ್ತದೆ. ಅದಕ್ಕೆ ಹೆಚ್ಚು ಸಮಯ ಬೇಕಾಗಿಲ್ಲ.
ಚುನಾವಣೆ ಕಳೆದ ಮೇಲೆ ಯಡಿಯೂರಪ್ಪ ಮೇಲಿಂದ ಮೇಲೆ ದೇವಸ್ಥಾನ, ಮಠಗಳನ್ನು ಸುತ್ತಿ ಬಂದರು. ಎಲ್ಲೆಡೆ ಸಾರ್ವಜನಿಕವಾಗಿ ಮಠಾಧೀಶರ ಪಾದಗಳಿಗೆ ಎರಗಿದರು. ತಮ್ಮ ಮನೆಯಲ್ಲಷ್ಟೇ ಅಲ್ಲದೆ ಕಛೇರಿಯಲ್ಲೂ ಹೋಮ-ಹವನಗಳನ್ನು ನಡೆಸಿದರು. ವಿಧಾನಸೌಧದದಲ್ಲಿ ಹೋಮ-ಹವನದ ಘಾಟು ಹಿಂದೆಂದಿಗಿಂತಲೂ ಭೀಕರವಾಗಿ ಹಬ್ಬಿತು. ಎಲ್ಲೋ ಒಂದಷ್ಟು ಪ್ರಗತಿಪರರು ಇದನ್ನು ಟೀಕಿಸಿದರಾದರೂ ಈ ಧ್ವನಿ ಅಷ್ಟು ಪ್ರಬಲವಾಗಿರಲಿಲ್ಲ.
ದುರಂತವೆಂದರೆ ಸರ್ಕಾರದ ಅಧಿಕಾರಕೇಂದ್ರದಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಒಂದು ಧರ್ಮಕ್ಕೆ ಸೇರಿದ ಆಚರಣೆಗಳು ಸಾಂಗೋಪಾಂಗವಾಗಿ ನಡೆಯುತ್ತಿದ್ದರೂ ಅದನ್ನು ಟೀಕಿಸುವ ಧೈರ್ಯವೂ ಪ್ರತಿಪಕ್ಷಗಳಿಗೆ ಇರಲಿಲ್ಲ. ಯಾಕೆಂದರೆ ಅವರೆಲ್ಲರೂ ಸಹ ಈ ಮಠಾಧೀಶರ ಕಾಲುಗಳಿಗೆ ಕಾಲಕಾಲಕ್ಕೆ ಎರಗುತ್ತ ಬಂದವರೇ. ಮೊನ್ನೆ ಮೊನ್ನೆ ತಾನೇ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಕವಚವನ್ನು ಕೊಟ್ಟು ಬಂದಿದ್ದಾರೆ. ಅಲ್ಲಿನ ಪೂಜಾರಿಯ ಕಾಲುಗಳಿಗೆ ಆಗಾಗ ಬೀಳುವ ಧರ್ಮಸಿಂಗ್ ತಾವು ಅಧಿಕಾರದಲ್ಲಿದ್ದಾಗ ಈ ಯಕಶ್ಚಿತ್ ಪೂಜಾರಿಗೂ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಪುಣ್ಯ ಕಟ್ಟಿಕೊಂಡಿದ್ದರು.
ಈಗ ಮಠ-ಮಠಾಧೀಶರನ್ನು ತೀಕ್ಷ್ಣವಾಗಿ ಟೀಕಿಸುತ್ತಿರುವ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸಹ ತಮ್ಮ ಅಧಿಕಾರಾವಧಿಯಲ್ಲಿ ಸಿಕ್ಕ ಸಿಕ್ಕ ಮಠಗಳಿಗೂ ಹೋಗಿ ಧರ್ಮಗುರುಗಳ ಪಾದಕ್ಕೆ ಎರಗಿ ಬಂದವರೇ. ರಾಘವೇಶ್ವರ ಸ್ವಾಮಿಯ ಮಠದಲ್ಲಿ ಅಸಹ್ಯವಾಗಿ ಬಟ್ಟೆ ಬಿಚ್ಚಿಕೊಂಡು ಹೋಮ-ಹವನದಲ್ಲಿ ಪಾಲ್ಗೊಂಡಿದ್ದನ್ನು ಬಹಳ ಜನ ಮರೆತಿಲ್ಲವೆಂದು ಭಾವಿಸುತ್ತೇನೆ. ಇದೇ ಕುಮಾರಸ್ವಾಮಿಯವರು ಪಕ್ಷದ ಕಾರ್‍ಯಾಧ್ಯಕ್ಷರಾಗಿ ನೇಮಕವಾದಾಗ ಇವರ ‘ಜಾತ್ಯತೀತ ಪಕ್ಷದ ಕಛೇರಿಯಲ್ಲೂ ಹೋಮ-ಹವನದ ಘಾಟು ಸುತ್ತಿಕೊಂಡಿದ್ದನ್ನೂ ಸ್ಮರಿಸಿಕೊಳ್ಳಬೇಕಾಗುತ್ತದೆ. ಹಿಂದುಳಿದ ವರ್ಗಗಳ ಮುಖಂಡ ಸಿದ್ಧರಾಮಯ್ಯನವರೂ ಸಹ ಗಿಳಿ ಶಾಸ್ತ್ರ ಹೇಳುವ ಸೋಮಯಾಜಿ ಎಂಬ ಜ್ಯೋತಿಷಿಯ ಬಳಿಗೆ ಕದ್ದುಮುಚ್ಚಿ ಹೋಗಿ ಬಂದಿದ್ದರು.
ಮಲ್ಲಿಕಾರ್ಜುನ ಖರ್ಗೆಯಂಥವರನ್ನು ಹೊರತುಪಡಿಸಿದರೆ ಬಹುತೇಕ ರಾಜಕಾರಣಿಗಳು ಮಠಾಧೀಶರ ಕಾಲುಗಳಿಗೆ ಸಾರ್ವಜನಿಕವಾಗಿ ಬಿದ್ದವರೇ ಹೌದು. ಹೀಗಾಗಿ ಬಿಜೆಪಿಯ ಮಠಭಕ್ತಿಯನ್ನು ಅಥವಾ ಮಠಾಧೀಶರ ರಾಜಕಾರಣವನ್ನು ವಿರೋಧಿಸುವ ನೈತಿಕತೆ ಬಹಳಷ್ಟು ಜನರಿಗೆ ಇಲ್ಲ.
****************
ಇತ್ತೀಚಿನ ದಿನಗಳಲ್ಲಿ ಮಠಗಳು ರಾಜ್ಯ ರಾಜಕಾರಣದಲ್ಲಿ ಆಡುತ್ತಿರುವ ಚದುರಂಗದಾಟ ಈಗ ಉತ್ತುಂಗ ತಲುಪಿದೆ. ಹಿಂದೆ ತಮ್ಮ ಮಠದ ಅಭಿವೃದ್ಧಿ, ಕಟ್ಟಡಕ್ಕೆ ಕಾಸು, ಇಂಜಿನಿಯರಿಂಗ್-ಮೆಡಿಕಲ್ ಕಾಲೇಜುಗಳಿಗೆ ಪರವಾನಿಗೆ ಇತ್ಯಾದಿಗಳಿಗೆ ಮಾತ್ರ ಮಠಗಳು ರಾಜಕಾರಣಿಗಳನ್ನು ಆಶ್ರಯಿಸುತ್ತಿದ್ದವು. ಆದರೆ ಈಗೀಗ ಮಠಗಳು ಈಗೀಗ ನೇರ ರಾಜಕಾರಣಕ್ಕೆ ಇಳಿದಿವೆ.
ಇವತ್ತು ಮಠಗಳು ಚುನಾವಣೆ ಸಂದರ್ಭದಲ್ಲಿ ತಮಗೂ ಇಂತಿಷ್ಟು ಸೀಟು ಕೊಡಿ ಎಂದು ನಿರ್ಲಜ್ಜವಾಗಿ ಕೇಳುವ ಹಂತ ತಲುಪಿವೆ. ಇಂಥವನನ್ನೇ ಮಂತ್ರಿ ಮಾಡಿ ಎಂದು ಮಠಗಳು ಹೇಳುತ್ತವೆ. ಇಂಥವನನ್ನು ಮಾಡಬೇಡಿ ಎಂದೂ ಸಹ ಹೇಳುತ್ತವೆ. ಅಧಿಕಾರಿಗಳು ವರ್ಗಾವಣೆಗಾಗಿ ಈಗೀಗ ರಾಜಕಾರಣಿಗಳನ್ನು ಆಶ್ರಯಿಸುವುದಕ್ಕಿಂತ ಮಠಗಳನ್ನು ಆಶ್ರಯಿಸುವುದು ಉಚಿತವೆಂದು ಭಾವಿಸುತ್ತಿದ್ದಾರೆ. ಯಾಕೆಂದರೆ ಮಠಾಧೀಶರ ಮೂಲಕ ಹೋದರೆ ಕೆಲಸ ಸಲೀಸಾಗಿ ಆಗುತ್ತವೆ ಎಂಬುದು ಅವರ ಅನುಭವಕ್ಕೆ ಬಂದಿದೆ.
‘ಇಂಥವರು ನಮ್ಮ ಮಠಕ್ಕೆ ತುಂಬಾ ಬೇಕಾದವರು. ಇವರ ಕೆಲಸ ಮಾಡಿಕೊಡಿ ಎಂಬ ಒಕ್ಕಣೆಯ ಪತ್ರಗಳು ಮುಖ್ಯಮಂತ್ರಿ ಆದಿಯಾಗಿ ಎಲ್ಲ ಮಂತ್ರಿಗಳ ಕಡತಗಳಲ್ಲೂ ತುಂಬಿ ತುಳುಕುತ್ತಿವೆ. ಸಹಜವಾಗಿಯೇ ಈ ಪತ್ರಗಳ ಮೇಲೂ ಮಂತ್ರಿ ಮಹೋದಯರ ಹಸಿರು ಶಾಹಿಯ ಹಸ್ತಾಕ್ಷರಗಳು ಬೀಳುತ್ತಿವೆ.
ಮೊನ್ನೆ ಸಿರಿಗೆರೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಸಿರಿಗೆರೆ ಶ್ರೀಗಳು ಮುಖ್ಯಮಂತ್ರಿಗಳನ್ನು ಪಕ್ಕದಲ್ಲೇ ಕೂರಿಸಿಕೊಂಡು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಎಚ್ಚರಿಸಿದ ವರದಿಗಳು ಬಂದಿವೆ. (ಸುದ್ದಿ ಮಾತು ಬ್ಲಾಗ್ ಗಮನಿಸಿ) ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಬೇಡ ಎಂಬುದು ಶ್ರೀಗಳ ಬಹಿರಂಗ ಎಚ್ಚರಿಕೆ. ಇಷ್ಟು ದಿನ ಮುಖ್ಯಮಂತ್ರಿಗಳ ಹಿಂದೆ ಮುಂದೆ ಇದ್ದ ರೇಣುಕಾಚಾರ್ಯ ಇತ್ತೀಚಿಗೆ ಮುನಿಸಿಕೊಂಡು ಆಗಾಗ ಸರ್ಕಾರದ ವಿರುದ್ಧ ಮಾತನಾಡಿದ್ದು ಶ್ರೀಗಳನ್ನು ಕೆರಳಿಸಿತ್ತು. ಹೀಗಾಗಿ ಈ ಧಮ್‌ಕಿ ನೀಡಲಾಗಿದೆ. ಘಟನೆಯನ್ನು ಅವಲೋಕಿಸಿದರೆ ಶ್ರೀಗಳು ಭಾರತೀಯ ಜನತಾ ಪಕ್ಷದ ಅಧ್ಯಕ್ಷನ ಕಾರ್ಯವನ್ನೂ ತಾವೇ ಮಾಡಲು ಹೊರಟಿದ್ದಾರೆ ಎಂಬುದು ವೇದ್ಯವಾಗುತ್ತದೆ.
ಧರ್ಮ ಮತ್ತು ರಾಜಕಾರಣ ಹೀಗೆ ಒಂದಕ್ಕೆ ಒಂದು ಬೆಸೆದುಕೊಂಡು, ಧರ್ಮವೇ ರಾಜಕಾರಣವಾಗಿ, ರಾಜಕಾರಣವೇ ಧರ್ಮವಾದರೆ ಏನೇನಾಗಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೆ.
********************
ಧರ್ಮ ಮತ್ತು ರಾಜಕಾರಣ ಹೀಗೆ ಅನೈತಿಕ ಕೂಡಿಕೆ ಮಾಡಿಕೊಂಡಿರುವ ಹೊತ್ತಿನಲ್ಲಿ ನಿಜವಾದ ಆತಂಕ ಎದುರಿಸುತ್ತಿರುವವರು ಈ ದೇಶದ ಹಿಂದುಳಿದವರು, ದಲಿತರು, ಆದಿವಾಸಿಗಳು ಹಾಗು ಅಲ್ಪಸಂಖ್ಯಾತರು.
ಹಿಂದುಳಿದವರಿಗೆ, ದಲಿತರಿಗೆ, ಆದಿವಾಸಿಗಳಿಗೆ ಯಾವುದೇ ಧರ್ಮವಿಲ್ಲ. ಇವರನ್ನು ಯಾವುದೋ ಒಂದು ಧರ್ಮಕ್ಕೆ ಕಟ್ಟುಬೀಳಿಸಿ ಅವರ ಮೂಲಕವೇ ಅಲ್ಪಸಂಖ್ಯಾತ ಧರ್ಮಗಳ ವಿರುದ್ಧ ಜಗಳಕ್ಕೆ ಹಚ್ಚುವ ಕೆಲಸವನ್ನು ಸ್ವಯಂಘೋಷಿತ ಹಿಂದೂ ಧರ್ಮ ರಕ್ಷಕರು ನಡೆಸುತ್ತಲೇ ಬಂದಿದ್ದಾರೆ.
ಹಿಂದುಳಿದವರಿಗೆ, ದಲಿತರಿಗೆ ಮಠಗಳಿಲ್ಲ, ಮಠಗಳಿದ್ದರೂ ಆ ಮಠಾಧೀಶರು ಆ ಸಮುದಾಯಗಳ ಜನರ ಹಾಗೆಯೇ ಶಕ್ತಿಹೀನರು. ಈ ಮಠಾಧೀಶರನ್ನು ಮೇಲ್ವರ್ಗ ಮಠಾಧೀಶರು ತಮ್ಮ ಸಮಾನವಾಗಿ ಕೂಡಿಸಿಕೊಳ್ಳಲೂ ಹಿಂಜರಿಯುತ್ತಾರೆ. ಇಂದಿನ ರಾಜಕಾರಣದ ಸಂದರ್ಭದಲ್ಲಿ ಈ ಮಠಾಧೀಶರು ತಮ್ಮ ಜಾತಿಗಳ ಪರವಾಗಿ, ಜಾತಿಜನರ ಪರವಾಗಿ ಲಾಬಿ ಮಾಡುವ ಶಕ್ತಿ ಇಲ್ಲದವರು.
ಹಿಂದುಳಿದ ಮಠಾಧೀಶರ ಮತ್ತೊಂದು ಸಮಸ್ಯೆಯೆಂದರೆ ಅವರ ಕೀಳರಮೆ. ಮಠಾಧೀಶರಾಗಲು ಅದ್ಭುತವಾದ ಸಂಸೃತ ಪಾಂಡಿತ್ಯ ಬೇಕು ಎಂದು ಇಂದಿನ ಮಠೀಯ ವ್ಯವಸ್ಥೆ ಬಯಸುತ್ತದೆ. ಸಂಸ್ಕೃತ ಪಾಂಡಿತ್ಯವಿಲ್ಲದ ಸ್ವಾಮಿಗಳು ಮೇಲ್ವರ್ಗದ ಮಠಾಧೀಶರ ಜತೆ ಸೆಣಸುವುದಿರಲಿ, ಅವರ ಸಮಕ್ಕೆ ಕುಳಿತುಕೊಳ್ಳಲೂ ಹಿಂಜರಿಯುತ್ತಾರೆ.
ಹೀಗಾಗಿ ಇಂದು ಈ ತಳಸಮುದಾಯಗಳ ಜನರು ರಾಜಕೀಯ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಒಂದೇ ಮೇಲ್ವರ್ಗದವರೊಂದಿಗೆ ರಾಜಿ ಮಾಡಿಕೊಂಡು, ಅವರು ಎಸೆಯುವ ಭಿಕ್ಷೆ ಪಡೆದು ಬದುಕಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಸೆಣೆಸಿ, ಸಾಮರ್ಥ್ಯ ಸಾಲದೆ ಸೋತು ಸುಮ್ಮನಿರಬೇಕು.
ಬಿಜೆಪಿ ಸರ್ಕಾರ ಎರಡು ಮೇಲ್ವರ್ಗದ ಶಕ್ತಿಕೇಂದ್ರಗಳ ಆಣತಿಗೆ ತಕ್ಕಂತೆ ನಡೆಯುತ್ತಿದೆ. ಕಳೆದಿರುವುದು ಕೇವಲ ನೂರು ಚಿಲ್ಲರೆ ದಿನಗಳು ಅಷ್ಟೆ. ಇನ್ನು ಐದು ವರ್ಷಗಳಲ್ಲಿ ಏನೇನು ಆಗುತ್ತದೋ ಯಾರು ಬಲ್ಲರು?
********************
ಮತ್ತೆ ಲೋಹಿಯಾ ಹೇಳಿದ ಮಾತುಗಳು ನೆನಪಾಗುತ್ತವೆ. ಜಾತಿಯಿಂದ ಕಲುಷಿತವಾದ ಈ ದೇಶದಲ್ಲಿ ಮುಂದುವರೆದ ಶಕ್ತ ವರ್ಗಗಳಿಗೆ ಹಿಂದುಳಿದ ಜನಾಂಗಗಳಿಗೆ ವಿಶೇಷ ಸವಲತ್ತು, ಅವಕಾಶಗಳನ್ನು ನೀಡುವಷ್ಟು ತಾಳ್ಮೆಯಾಗಲಿ, ದೊಡ್ಡತನವಾಗಲಿ ಉಳಿದಿಲ್ಲ. ಹಿಂದುಳಿದ ಜನಾಂಗಗಳು ತಮಗೆ ಸಲ್ಲಬೇಕಾದುದಕ್ಕೆ ಹೋರಾಡುವಷ್ಟು ಪ್ರಜ್ಞೆಯನ್ನಾಗಲಿ ಸಾಮರ್ಥ್ಯವನ್ನಾಗಲಿ ಹೊಂದಿಲ್ಲ. ಈ ಬಡತನದ, ಜಾತಿಯ ವಿಷವೃತ್ತವನ್ನು ಒಡೆಯಬೇಕಾದರೆ ನಮ್ಮ ಭರತಖಂಡದ ಚೈತನ್ಯದಲ್ಲಿಯೇ ಒಂದು ಮಹಾಕ್ರಾಂತಿ ಆಗಬೇಕು.
ರಾಜೇಂದ್ರ ಪ್ರಸಾದ್ ಇನ್ನೂರು ಬ್ರಾಹ್ಮಣರ ಪಾದ ತೊಳೆದ ಘಟನೆಯಿಂದ ಲೋಹಿಯಾ ಮನನೊಂದಿದ್ದರು. ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ಅಂದೇ ಸಮರ ಸಾರಿದ್ದರು. ಆದರೆ ಇದೇ ಪುರೋಹಿತಶಾಹಿ ವ್ಯವಸ್ಥೆ ಇಂದು ಕರ್ನಾಟಕದ ಒಟ್ಟು ರಾಜಕಾರಣವನ್ನೇ ನಿಯಂತ್ರಿಸುತ್ತಿದೆ. ಅಲ್ಲದೆ ನೇರವಾಗಿ ವಿಧಾನಸೌಧದಲ್ಲಿ ಅಧಿಕಾರ ಹಿಡಿದು ಕುಳಿತಿದೆ. ಒಂದು ವ್ಯತ್ಯಾಸವೆಂದರೆ ಈಗ ಕೇವಲ ಬ್ರಾಹ್ಮಣ ಮಠಾಧೀಶರು ಇಲ್ಲಿ ರಾಜ್ಯಭಾರ ಮಾಡುತ್ತಿಲ್ಲ. ವೀರಶೈವ ಮಠಾಧಿಪತಿಗಳೂ ಸಹ ಕೈಜೋಡಿಸಿದ್ದಾರೆ!
ಬಸವಣ್ಣನವರಾಗಲಿ, ಇತರ ಪ್ರಮಥರಾಗಲೀ ಮಠಗಳನ್ನು ಕಟ್ಟಿದವರಲ್ಲ. ಇಷ್ಟಲಿಂಗ ಕಲ್ಪನೆ ಮೊಳೆತದ್ದೇ ಗುಡಿ-ಗುಂಡಾರಗಳ ವ್ಯವಸ್ಥೆಯ ವಿರುದ್ಧವಾಗಿ. ಸ್ಥಾವರಕ್ಕಳಿವುಂಟು, ಜಂಗಮಕ್ಕಿಲ್ಲ ಎಂದವರು ಬಸವಣ್ಣನವರು. ಆದರೆ ೧೫ನೇ ಶತಮಾನದಿಂದೀಚೆಗೆ ಬಸವಣ್ಣನವರ ಹೆಸರಿನಲ್ಲೇ ಆರಂಭವಾದ ಮಠಗಳು ಜಂಗಮಕ್ಕಳಿವುಂಟು, ಸ್ಥಾವರಕ್ಕಿಲ್ಲ ಎಂಬ ಭಾವದಲ್ಲಿ ಮಠ-ಮಂದಿರಗಳನ್ನು ಕಟ್ಟಿಕೊಂಡವು. ಬಸವಣ್ಣನವರನ್ನು ವಿರೋಧಿಸುತ್ತಲೇ ಬಂದ ಪಂಚಾಚಾರ್ಯ ಪೀಠಗಳು ಕಿರೀಟ, ಪಲ್ಲಕ್ಕಿ, ಸಿಂಹಾಸನಗಳ ದರ್ಬಾರು ನಡೆಸುತ್ತ ಇನ್ನೂ ರಾಜಶಾಹಿ ವ್ಯವಸ್ಥೆಯ ಪಳೆಯುಳಿಕೆಗಳನ್ನೇ ಇಟ್ಟುಕೊಂಡು ಪ್ರತಿಗಾಮಿಗಳಾಗಿವೆ.
ಎಲ್ಲೋ, ಅಲ್ಲೊಬ್ಬ, ಇಲ್ಲೊಬ್ಬ ಮಠಾಧೀಶರು ಬಸವಣ್ಣನ ಆದರ್ಶಗಳ ಬಗ್ಗೆ ಮಾತನಾಡುತ್ತಾರಾದರೂ ಅವರ ಧ್ವನಿ ಪಟ್ಟಭದ್ರ ಮಠಾಧೀಶರ ಎದುರಿನಲ್ಲಿ ಕರಗಿಹೋಗಿದೆ.
ಬಸವಣ್ಣನ ಪ್ರಗತಿಪರ ಧರ್ಮ ಇಂದು ಯಾವ ದಿಕ್ಕಿನಲ್ಲಿ ನಿಂತಿದೆ ಎಂಬುದಕ್ಕೆ ಇದು ಸಾಕ್ಷಿ. ಬಸವಣ್ಣ ಅಧಿಕಾರಕ್ಕೆ ಅಂಟಿಕೊಳ್ಳದೆ, ಜಾತಿರಹಿತ ಸಮಾಜ ನಿರ್ಮಾಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡರೆ, ಬಸವಣ್ಣನವರ ಹೆಸರಿನಲ್ಲಿ ಮಠಗಳನ್ನು ಕಟ್ಟಿಕೊಂಡವರು ಜಾತಿ-ಉಪಜಾತಿ ಸಮಾಜವನ್ನು ಭದ್ರಗೊಳಿಸುತ್ತ ರಾಜಕೀಯ ಅಧಿಕಾರಕ್ಕಾಗಿ ಬಿಜೆಪಿಯಂಥ ಕೋಮುವಾದಿ ಶಕ್ತಿಯ ಬೆನ್ನ ಹಿಂದೆ ನಿಂತಿದ್ದಾರೆ.
********************
ಮತ್ತೆ ಲೋಹಿಯಾ ಹೇಳಿದ ಮಾತುಗಳನ್ನು ಇಂದಿನ ಕರ್ನಾಟಕಕ್ಕೆ ಅನ್ವಯಿಸಿ ಹೇಳುವುದಾದರೆ ಇಡೀ ಸರ್ಕಾರ ಪದೇ ಪದೇ ಮೇಲ್ವರ್ಗದ ಮಠಾಧೀಶರ, ಪುರೋಹಿತಶಾಹಿಗಳ ಪಾದತಲದಲ್ಲಿ ಕುಳಿತುಕೊಂಡರೆ, ಅವರ ನಿರ್ದೇಶನದಂತೆಯೇ ಅಧಿಕಾರ ನಡೆಸುತ್ತಿದ್ದರೆ ಆ ರಾಜ್ಯದಲ್ಲಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ಸೌಖ್ಯವಾಗಿರಲು ಸಾಧ್ಯವೇ?
********************
3 comments:
ದೇಸೀಮಾತಾಡಿದ್ದೀರಿ ಸರ್.
ಚಿತ್ರದುರ್ಗ ಮುರುಘರಾಜೇಂದ್ರ ಶರಣರು ಒಮ್ಮೆ ಹೀಗೆ ಹೆಳಿದ್ದರು 'ಲಿಂಗಾಯತರೆಲ್ಲ ಬ್ರಾಹ್ಮಣರಾಗಲು ಹೊರಟಿದ್ದಾರೆ, ಪ್ರಗತಿ ಮನುಷ್ಯನನ್ನು ಕಂದಾಚಾರಗಳಿಂದ ವೈಚಾರಿಕತೆಗೆ ಕರೆದುಕೊಂಡು ಹೋಗಬೇಕು ಆದರೆ ಮೌಢ್ಯಕ್ಕೆ ನೂಕುತ್ತಿದೆ' ಎಂದು ಬೇಸರಿಸಿದ್ದರು. ಸದ್ಯದ ಸಂದರ್ಭದಲ್ಲಿ ನನ್ನ ಗ್ರಹಿಕೆಗೆ ಬಂದಂತೆ ಶಿವಮೂರ್ತಿ ಶರಣರು ಪ್ರಗತಿಪರರಂತೆ ಕಾಣುತ್ತಾರೆ.
- ಮಂಜುನಾಥ ಸ್ವಾಮಿ
dinesh,
a timely write-up. at least during the rule of J H Patel, SM Krishna we had people in the state governmet, who claimed to be followers of Lohia. Nowadays you can't find a single soul with Lohia's influence.
your comment on seers of smaller communities is absolutely right. despite being representatives of oppressed classes they try to imitate seers of major communities. that alone will remain stumbling block for the growth of the communities they represent.
recently a swamiji, representing Banjaras (he was coronated by Murugha math seer Shivamurthy Sharana, a progressive thinker) passed comments that churhces are luring people of his community. He also said he would take out a state-wide campaign against this. i felt sorry for Shivamurthy Sharana for appointing such a man to represent the community. Banjaras do not have a permanent place to live. they keep on moving. instead of making efforts to provide them shelter, education the swamiji wants to drive a campaign against conversion. they do not understand what is need of the hour.
- Sufi Sanganna
dinesh,
e lekhana oduvaga 4-5 varshagala hinde davanagereyalli nadeda samavesha nenpayitu.
gowri lankesh komu souhardate kurita vichara sankiranadalli ondu vishaya prastapisiddaru. vastavavagi avaru vedike moolaka idi veerashairavag baiddidaru. yava purohita vyavasteyannu dikkarisidano antha maha manavatavadiyada basavannana anuyayigala neevu komuvadigala jate kaijodisuttiddara nachikeyagolve emba arthada matugallannu adiddaru. adu veerashaivar samaveshadalli. avattu avara matige addi kooda untayitu endu patrikeyalli odide....
heege rajyad doddadondu komu, komuvadada vyadige tuttagiddu ee tharada vicharagalu gattiyagi helutta avarannu echcharisabekide..
vichara poorna lekhanakke thanks.
-rajesh.
Post a Comment