ಮೊದಲ ತಕರಾರು: ಈ ಸಂಸ್ಕೃತ ವಿಶ್ವವಿದ್ಯಾಲಯ ಬೇಕಿತ್ತೆ? ದೇಶದ ತುಂಬೆಲ್ಲ ೧೨ ಸಂಸ್ಕೃತ ವಿಶ್ವವಿದ್ಯಾಲಯಗಳು ಇವೆಯಂತೆ. ಬೆಂಗಳೂರಿಗೆ ಮತ್ತೊಂದು ಅವಶ್ಯಕತೆಯಿತ್ತೆ? ಸತ್ತ ಭಾಷೆಗೆ ಜೀವ ಕೊಡುವ ಕಾರ್ಯ ನಮ್ಮ ನಾಡಿನಲ್ಲೇ ಆಗಬೇಕೆ? ಬಲ್ಲ ಮೂಲಗಳ ಪ್ರಕಾರ ಇದು ಆರ್‌ಎಸ್‌ಎಸ್ ಒತ್ತಡದಿಂದ ಆದ ಸೇರ್ಪಡೆಯಂತೆ. ಯಾರ ಪ್ರೇರಣೆಯೋ, ಚಿತಾವಣೆಯೋ ಈ ಘೋಷಣೆಗೆ ಕಾರಣಕರ್ತರಾದ ಎಲ್ಲರಿಗೂ ಈ ಕನ್ನಡಿಗನ ಧಿಕ್ಕಾರ.ಹಾಗೆ ಹೇಳುವುದಕ್ಕೂ ಕಾರಣಗಳಿವೆ. ರಾಜ್ಯದಲ್ಲಿರುವ ಇತರ ವಿಶ್ವವಿದ್ಯಾಲಯಗಳ ಸ್ಥಿತಿಗತಿಯೇ ನೆಟ್ಟಗಿಲ್ಲ. ಕನ್ನಡ ವಿಶ್ವವಿದ್ಯಾಲಯವನ್ನೇ ಸರಿಯಾಗಿ ಬೆಳೆಸಲು ನಮ್ಮಿಂದ ಆಗಿಲ್ಲ. ಇನ್ನು ಸಂಸ್ಕೃತ ವಿಶ್ವವಿದ್ಯಾಲಯ ಯಾವ ಪುರುಷಾರ್ಥಕ್ಕೆ? ಸಂಸ್ಕೃತ-ಹಿಂದಿಯಂಥ ಭಾಷೆಗಳನ್ನು ಕನ್ನಡಿಗರ ಮೇಲೆ ಹೇರಿಕೊಂಡು ಬಂದು ಬಹಳ ವರ್ಷಗಳೇ ಆದವು. ಹಿಂದಿಯನ್ನು ರಾಷ್ಟ್ರಭಾಷೆ ಎಂದು ಸುಳ್ಳೇ ಸುಳ್ಳು ಪ್ರಚಾರ ಮಾಡುವ ಮುಖೇಡಿಗಳಿಗೆ ನಮ್ಮಲ್ಲಿ ಬರವೇನಿಲ್ಲ. ನಾವು ಕನ್ನಡಿಗರೂ ಅಷ್ಟೆ. ಒಂದು ವೇಳೆ ಸಂಸ್ಕೃತ ವಿಶ್ವವಿದ್ಯಾಲಯದ ಬದಲಿಗೆ ತಮಿಳು ವಿಶ್ವವಿದ್ಯಾಲಯ ಸ್ಥಾಪನೆ ಮಾಡುತ್ತೇವೆ ಎಂದು ಸರ್ಕಾರದವರು ಹೇಳಿದ್ದರೆ ಸುಮ್ಮನಿರುತ್ತಿದ್ದೆವೆ? ರಾಷ್ಟ್ರಭಾಷೆಯ ಹೆಸರಿನಲ್ಲಿ ಹಿಂದಿ ಬಂದು ನಮ್ಮ ತಲೆಯ ಮೇಲೆ ಕುಳಿತಿದ್ದೂ ಹೀಗೆಯೇ.
ಸರ್ಕಾರದಿಂದಲೇ ರಿಯಲ್ ಎಸ್ಟೇಟ್: ಇದು ಮತ್ತೊಂದು ವಿಚಿತ್ರ. ಸರ್ಕಾರವೇ ರಿಯಲ್ ಎಸ್ಟೇಟ್ ನಡೆಸಲು ಹೊರಟಿದೆ. ಬಜೆಟ್ ಪುಸ್ತಿಕೆಯ ೫೫ನೇ ಪುಟದಲ್ಲಿ ಇದನ್ನು ಯಾವ ಎಗ್ಗಿಲ್ಲದೆ ಹೇಳಿಕೊಳ್ಳಲಾಗಿದೆ. “ಬೆಲೆ ಬಾಳುವ ಸರ್ಕಾರಿ ಜಮೀನುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ವಿಲೇ ಮಾಡಿ ಅದರಿಂದ ದೊರೆಯುವ ಸಂಪನ್ಮೂಲಗಳನ್ನು ಸಂಗ್ರಹಿಸಲು ‘ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ಸ್ಥಾಪಿಸಲಾಗುವುದು. ೨೦೦೮-೦೯ನೇ ಸಾಲಿನಲ್ಲಿ ಬೆಂಗಳೂರು ನಗರ ಹಾಗು ನಗರದ ಸುತ್ತಮುತ್ತ ಲಭ್ಯವಿರುವ ಸರ್ಕಾರಿ ಜಮೀನುಗಳ ವಿಲೇವಾರಿಯಿಂದ ಸುಮಾರು ೩೦೦೦ ಕೋಟಿ ರೂ.ಗಳನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆಇದು ಯಡಿಯೂರಪ್ಪ ಸ್ಪೆಷಲ್. ರಿಯಲ್ ಎಸ್ಟೇಟ್ ದಂಧೆಯಿಂದ ಸಾವಿರಾರು ಮಂದಿ ಕಾಸು ಮಾಡುತ್ತಿರುವುದನ್ನು ಕಂಡು ಸರ್ಕಾರವನ್ನೇ ಈ ದಂಧೆಗೆ ನೂಕಿದರೆ ಹೇಗೆ ಎಂಬುದು ಯಡಿಯೂರಪ್ಪನವರ ಚಿಂತನೆಯಾಗಿರಬೇಕು.ಯೋಜನೆಯ ಪ್ರಕಾರ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ಇನ್ನೇನು ರಚನೆಯಾಗುತ್ತದೆ. ಅದಕ್ಕೊಬ್ಬ ‘ಬೆಲೆಬಾಳುವ ಅಧ್ಯಕ್ಷ' (ಬೇರೆ ಪಕ್ಷದ ಶಾಸಕನಾಗಿದ್ದು ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದವರಿಗೆ ಮೊದಲ ಆದ್ಯತೆ) ಬೆಂಗಳೂರಿನಲ್ಲಿ ಅಳಿದು ಉಳಿದಿರುವ ಸರ್ಕಾರಿ ಜಮೀನನ್ನು ಆಂಧ್ರದ, ಬಂಗಾಳದ ಬಿಲ್ಡರ್‌ಗಳಿಗೆ, ಮಾರವಾಡಿಗಳಿಗೆ, ಗುಜರಾಥಿ-ಸಿಂಧಿಗಳಿಗೆ ಸರ್ಕಾರವೇ ಮಾರುತ್ತದೆ. ಮುಂದೊಂದು ದಿನ ಸರ್ಕಾರಕ್ಕೇ ಯಾವುದೋ ಉದ್ದೇಶಕ್ಕೆ ಜಮೀನು ಬೇಕು ಎಂದರೆ ಬಡ ರೈತರ ತಲೆ ಒಡೆಯಬೇಕು. (ರೈತರು ಜಮೀನು ಉಳಿಸಿಕೊಂಡಿದ್ದರೆ)ಒತ್ತುವರಿಯಾದ ಜಮೀನನ್ನು ಬಿಡಿಸಿಕೊಂಡು ಹರಾಜು ಹಾಕಿ ಆದಾಯ ಗಳಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದು ಕುಮಾರಸ್ವಾಮಿಯವರ ಸರ್ಕಾರ. ಈ ನಿರ್ಧಾರಕ್ಕೆ ಒಂದು ಅರ್ಥವಾದರೂ ಇತ್ತು. ಆದರೆ ಸರ್ಕಾರದ ಒಡೆತನದಲ್ಲೇ ಭದ್ರವಾಗಿರುವ ಜಮೀನಿಗೂ ಯಡಿಯೂರಪ್ಪ ಕೈ ಹಾಕಿದ್ದಾರೆ. ಅದರರ್ಥ ಸರ್ಕಾರವೇ ಮಾರಾಟಕ್ಕಿದೆ ಎಂದಾಗುವುದಿಲ್ಲವೆ?
1 comment:
ಹೌದು, ನಿಮ್ಮ ಅನಿಸಿಕೆ ಸರಿಯಾಗಿದೆ. ಈಗಾಗಲೇ ಕನ್ನಡದ ಮಕ್ಕಳು ಬಾಯಲ್ಲಿ ಉಲಿಯಲಾಗದ ಗುರುತ್ವಾಕರ್ಷಣ, ರಾಜ್ಯೋತ್ಸವ, ಸಂಕಲನ, ವ್ಯವಕಲನ, ದ್ಯುತಿಸಂಶ್ಲೇಷಣ ಕ್ರಿಯೆ, ವಿದ್ಯುದ್ವಿಶ್ಲೇಷಣೆ...ಗಳಂತಹ ಸಾವಿರಾರು ಸಂಸ್ಕೃತ ಪದಗಳ ತಿವಿತದಿಂದ ಕಂಗಾಲಾಗಿದ್ದಾರೆ. ಸಂಸ್ಕೃತ ಬೆರೆತ ಕನ್ನಡ ಶಿಷ್ಟವೆಂದೂ ಬರೀ ಕನ್ನಡ ಕೀಳೆಂಬ ಮನೋಭಾವನೆಗೆ ಈ ವಿಶ್ವವಿದ್ಯಾಲಯವೇ ಇನ್ನಷ್ಟು ಇಂಬು ಕೊಡುತ್ತದೆ ಅನ್ನುವುದರಲ್ಲಿ ಅನುಮಾನವಿಲ್ಲ.
ದೂರನೋಟವಿಲ್ಲದ ಜನನಾಯಕರಿಗೆ ಧಿಕ್ಕಾರ.
ಆನಂದ್
Post a Comment