Tuesday, July 15, 2008

ಆಪ್ ಕೊ ಬಿಲ್‌ಕುಲ್ ಶರಮ್ ನಹೀ....

ಜು.೧೨ರಂದು ಬೆಳಿಗ್ಗೆ ಘಾಜಿಯಾಬಾದ್‌ನ ದಸ್ನಾ ಜೈಲಿನಿಂದ ಡಾ.ರಾಜೇಶ್ ತಲ್ವಾರ್ ಆರೋಪಮುಕ್ತರಾಗಿ ಹೊರಬೀಳುತ್ತಿದ್ದಂತೆ ಎಲೆಕ್ಟ್ರಾನಿಕ್ ಮಾಧ್ಯಮದ ವರದಿಗಾರರು ಮುತ್ತಿಕೊಂಡು ಮಾತನಾಡಿಸಲು ಯತ್ನಿಸುತ್ತಿದ್ದರು. ಅದು ಇತ್ತೀಚಿನ ದಿನಗಳಲ್ಲಿ ಮಾಮೂಲಿ ದೃಶ್ಯ. ನೂಕು-ನುಗ್ಗಲು, ಕೂಗಾಟ, ಚೀರಾಟ. ತನ್ನ ಚಾನೆಲ್‌ನ ಮೈಕನ್ನು ತೂರಿಸಲು ಹರಸಾಹಸ ಪಡುತ್ತಲೇ ಆಳಿಗೊಂದರಂತೆ ಪ್ರಶ್ನೆಗಳ ಬಾಣ ಎಸೆಯುವ ವರದಿಗಾರ-ಗಾರ್ತಿಯರು. ತಲ್ವಾರ್ ಮಾತ್ರ ಏನನ್ನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಮುತ್ತಿಕೊಂಡವರಿಂದ ತಪ್ಪಿಸಿಕೊಂಡು ಹೋಗಲು ಸಹ ಹರಸಾಹಸ ಮಾಡಬೇಕು. ಈ ಸಂದರ್ಭದಲ್ಲಿ ತಲ್ವಾರ್ ಕುಟುಂಬ ಸದಸ್ಯರೋರ್ವರು ಹಲವು ಬಾರಿ ಕೂಗಿ ಹೇಳಿದ್ದನ್ನು ನೀವು ಚಾನೆಲ್‌ಗಳಲ್ಲಿ ಕೇಳಿರಬಹುದು: ‘ಆಪ್ ಕೊ ಬಿಲ್‌ಕುಲ್ ಶರಮ್ ನಹೀ..ಅರುಷಿ, ಹೇಮರಾಜ್ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಇಡೀ ಮಾಧ್ಯಮ ಸಮೂಹಕ್ಕೆ ಅನ್ವಯಿಸಿ ಹೇಳಿದಂತೆ ಈ ಮಾತು ಸದ್ಯದ ದುಷ್ಟ ಪತ್ರಿಕೋದ್ಯಮದ ಹಣೆಯ ಮೇಲೆ ಗೀಚಿದ ಟಿಪ್ಪಣಿಯಂತಿದೆ.

ನಿಜ, ಈ ಜನರಿಗೆ ಸ್ವಲ್ಪವಾದರೂ ನಾಚಿಕೆಯೆಂಬುದಿಲ್ಲ.ಅರುಷಿ ಪ್ರಕರಣದಲ್ಲಿ ಡಾ.ರಾಜೇಶ್ ತಲ್ವಾರ್ ಅವರು ಪಾಲ್ಗೊಂಡಿಲ್ಲ. ಮಗಳನ್ನು ಕೊಂದದ್ದು ತಂದೆಯಲ್ಲ. ತಲ್ವಾರ್ ವಿರುದ್ಧ ನಮ್ಮ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಸಿಬಿಐ ಅಧಿಕಾರಿ ಜು.೧೧ರಂದು ಪತ್ರಿಕಾಗೋಷ್ಠಿಯಲ್ಲಿ ಹೇಳುವವರೆಗೂ ಈ ಗೋಷ್ಠಿಯ ನೇರಪ್ರಸಾರ ಮಾಡುತ್ತಿದ್ದ ಚಾನೆಲ್‌ಗಳು ತಮ್ಮ ಫ್ಲಾಷ್‌ನ್ಯೂಸ್ ಏನೆಂದು ಬಿತ್ತರಿಸುತ್ತಿದ್ದವು ಗೊತ್ತೆ? ತಲ್ವಾರ್ ಬಂಧನ ಅವಧಿ ವಿಸ್ತರಿಸಲು ಸಿಬಿಐ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ ಎಂದು! ಇವರಿಗೆ ನಾಚಿಕೆ ಹೋಗಲಿ, ಕನಿಷ್ಠ ಮಾನವೀಯತೆ ಇದೆಯೆಂದು ಹೇಳುವುದಾದರೂ ಹೇಗೆ?

ಜು.೧೧ರಂದು ಎನ್‌ಡಿಟಿವಿ ಇಡೀ ತಲ್ವಾರ್ ಕುಟುಂಬವನ್ನು ಸ್ಟೂಡಿಯೋದಲ್ಲಿ ಕೂರಿಸಿಕೊಂಡು ತಲ್ವಾರ್ ನಿರ್ದೋಷಿಯೆಂದು ಸಾಬೀತಾಗಿರುವ ಕುರಿತು ಚರ್ಚೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತೆ ನಳಿನಿ ಸಿಂಗ್ ಅವರು ಒಂದು ಮಾತನ್ನು ಹೇಳಿದರು. ‘ ನಮ್ಮದು (ಮಾಧ್ಯಮದವರು) ತೀರಾ ಅತಿರೇಕವಾಯಿತು. ಇಡೀ ಮಾಧ್ಯಮ ವರ್ಗ ತಲ್ವಾರ್ ಕುಟುಂಬ ಹಾಗು ದೇಶದ ಕ್ಷಮೆ ಯಾಚಿಸಬೇಕು.ನಿಜ, ಈಗ ಎಲ್ಲಾ ಚಾನೆಲ್‌ಗಳಲ್ಲೂ ಒಂದಷ್ಟು ಆತ್ಮವಿಮರ್ಶೆಯ ಮಾತುಗಳು ಕೇಳಿಬರುತ್ತಿವೆ. ಆದರೆ ಕಂಡಕಂಡವರ ಮೇಲೆ ಅನುಮಾನಪಡುವ ಪೊಲೀಸರು, ಸುದ್ದಿದಾಹಿ ಚಾನೆಲ್ ಮಾಲೀಕರು, ಕೊಡುವ ಕೂಲಿಗಾಗಿ ಸುದ್ದಿಯಲ್ಲದ್ದನ್ನು ಸುದ್ದಿ ಮಾಡುವ ವರದಿಗಾರರು, ಅವರು ಹೇಳಿದ್ದನ್ನೇ ವೇದವಾಕ್ಯ ಎಂದು ಪರಿಗಣಿಸಿ, ಉರಿಯುವ ಬೆಂಕಿಗೆ ತುಪ್ಪ ಸುರಿಯುವ ನಿರೂಪಕಮಣಿಗಳು... ಈ ಎಲ್ಲರೂ ಸೇರಿ ಮಾಡಿದ್ದಾದರೂ ಏನು?

೧೪ರ ಬಾಲೆ ಅರುಷಿ ಕೊಲೆಯಾಗಿದ್ದು ಮೇ.೧೬ರಂದು. ಆಕೆಯ ಕೊಲೆಯಾಗಿದ್ದು, ಉತ್ತರಪ್ರದೇಶದ ನೊಯ್ಡಾದಲ್ಲಿ. ಸಣ್ಣ ಮಕ್ಕಳ ಸರಣಿ ಹತ್ಯೆಗೆ ಆಗಲೇ ಕುಖ್ಯಾತಿ ಪಡೆದಿದ್ದ ನೊಯ್ಡಾದಲ್ಲಿ ಈ ಪ್ರಕರಣ ನಡೆದಿದ್ದರಿಂದ ಸಹಜವಾಗಿಯೇ ಮಾಧ್ಯಮಗಳ ಆಸಕ್ತಿಗೆ ಕಾರಣವಾಗಿತ್ತು.ವಿಚಿತ್ರವೆಂದರೆ ನೋಯ್ಡಾ ಸರಣಿ ಹತ್ಯಾಕಾಂಡ ಪ್ರಕರಣವನ್ನು ಬಲು ಬೇಜವಾಬ್ದಾರಿಯಿಂದ ನಿಭಾಯಿಸಿದ್ದ ಇಲ್ಲಿನ ಪೊಲೀಸರು ಅರುಷಿ ಪ್ರಕರಣದಲ್ಲಿ ಅದನ್ನೇ ಮಾಡಿದರು.ಅರುಷಿ ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖೆ ನಡೆಸಿದ ಪೊಲೀಸರು ಮನೆಯಲ್ಲಿ ಕೆಲಸದ ಆಳು ಹೇಮರಾಜ್ ಇಲ್ಲದ್ದನ್ನು ಗಮನಿಸಿದರು. ದಿಡೀರನೆ ಹೇಮರಾಜನೇ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ತನಿಖೆ ಭೇದಿಸಿದವರಂತೆ ಪೋಜು ನೀಡಿದರು. ಆದರೆ ಮಾರನೇ ದಿನವೇ ತಲ್ವಾರ್ ಮನೆಯ ತಾರಸಿ ಮೇಲೆ ಹೇಮರಾಜನ ಶವವೂ ಪತ್ತೆಯಾಯಿತು. ಅರುಷಿ ಹಾಗು ಹೇಮರಾಜ್ ಇಬ್ಬರೂ ಕೊಲೆಯಾಗಿದ್ದರಿಂದ ಕೊಲೆ ಮಾಡಿದವರಿಗಾಗಿ ಹುಡುಕಾಟ ಆರಂಭ.ಈ ವೇಳೆಗಾಗಲೇ ಮೀಡಿಯಾಗಳ ಒತ್ತಡ ವಿಪರೀತವಾಗಿತ್ತು. ನೋಯ್ಡಾ ಪೊಲೀಸರಿಗೆ ಯಾರನ್ನಾದರೂ ಕೇಸಿಗೆ ಫಿಟ್ ಮಾಡಿ ತಲೆ ತೊಳೆದುಕೊಳ್ಳುವ ಧಾವಂತ. ಅಷ್ಟು ಹೊತ್ತಿಗಾಗಲೇ ಮೀಡಿಯಾಗಳು ಅರುಷಿ ಮನೆಯ ಸುತ್ತಮುತ್ತಲಿನವರನ್ನು ಮಾತನಾಡಿಸಿ ಚಿತ್ರವಿಚಿತ್ರ ಸುದ್ದಿಗಳನ್ನು ಪ್ಲಾಂಟ್ ಮಾಡತೊಡಗಿದ್ದರು.

ಮೇ.೨೩ರಂದು ನೋಯ್ಡಾ ಪೊಲೀಸರು ಮಗಳ ಕೊಲೆ ಆರೋಪದ ಮೇರೆಗೆ ತಂದೆ ರಾಜೇಶ್ ತಲ್ವಾರ್‌ರನ್ನೇ ಬಂಧಿಸಿದರು.ಈ ಸಂದರ್ಭದಲ್ಲಿ ಪೊಲೀಸರು ಹಾಗು ಮೀಡಿಯಾಗಳು ಹರಡಿದ ಸುದ್ದಿಗಳನ್ನು ಒಮ್ಮೆ ಗಮನಿಸಿ ನೋಡಿ. ಅವರು ಕಟ್ಟಿಕೊಟ್ಟ ಥಿಯರಿಗಳನ್ನು ನೋಡಿ. ಇವರನ್ನು ಮನುಷ್ಯರು ಎನ್ನಲು ಸಾಧ್ಯವೇ ಎಂಬ ಅನುಮಾನ ಬಾರದೇ ಇರದು.ಮೊದಲನೇ ಥಿಯರಿ ಹೀಗೆ ಇತ್ತು:೧೪ರ ಹರೆಯದ ಅರುಷಿ ಹಾಗು ನಡುವಯಸ್ಸಿನ ಹೇಮರಾಜ್ ನಡುವೆ ಅನ್ಯೋನ್ಯ ಸಂಬಂಧವಿತ್ತು. ಅರ್ಥಾತ್ ಲೈಂಗಿಕ ಸಂಬಂಧವಿತ್ತು. ಇದರಿಂದಾಗಿ ರಾಜೇಶ್ ತಲ್ವಾರ್ ಸಿಟ್ಟಿಗೆದ್ದಿದ್ದರು. ಈ ಕಾರಣದಿಂದಲೇ ಅವರು ಮಗಳು ಹಾಗು ಆಕೆಯ ‘ಪ್ರಿಯಕರನನ್ನು ಕೊಂದು ಹಾಕಿದರು.ಈ ಮೊದಲನೇ ಥಿಯರಿ ಎಷ್ಟು ಅಸಹ್ಯಕರವೆಂದರೆ ಕಡೇ ಪಕ್ಷ ತನ್ನನ್ನು ತಾನು ನಿಷ್ಕಳಂಕೆ ಎಂದು ಸಾಬೀತುಪಡಿಸಿಕೊಳ್ಳಲು ಅರುಷಿಗೂ ಅವಕಾಶವಿರಲಿಲ್ಲ, ಹೇಮರಾಜ್‌ಗೂ ಅವಕಾಶವಿರಲಿಲ್ಲ. ಏಕೆಂದರೆ ಇಬ್ಬರೂ ಸತ್ತು ಹೋಗಿದ್ದರು.

ಎರಡನೇ ಥಿಯರಿ ಹೀಗೆ ಇತ್ತು.ದಂತವೈದ್ಯರಾಗಿರುವ ಡಾ.ರಾಜೇಶ್ ತಲ್ವಾರ್‌ಗೆ ತಮ್ಮ ಸಹೋದ್ಯೋಗಿ ವೈದ್ಯೆಯರ ಜತೆ ಲೈಂಗಿಕ ಸಂಬಂಧಗಳಿದ್ದವು. ಇದನ್ನು ಸ್ವತಃ ಅರುಷಿ ನೋಡಿದ್ದರು. ಈ ಸಂಬಂಧಗಳ ವಿಷಯ ಹೇಮರಾಜ್‌ಗೂ ಗೊತ್ತಿತ್ತು. ಈ ವಿಷಯವನ್ನು ನೂಪುರ್ ತಲ್ವಾರ್ (ರಾಜೇಶ್ ಪತ್ನಿ) ಅವರಿಗೆ ಹೇಳುವುದಾಗಿ ಇಬ್ಬರೂ ಬ್ಲಾಕ್‌ಮೇಲ್ ಮಾಡುತ್ತಿದ್ದರು. ಹೀಗಾಗಿ ತಲ್ವಾರ್ ತಮ್ಮ ಮಗಳನ್ನು ಕೊಂದು ಹಾಕಿದರು.ಈ ವಿಚಿತ್ರ ಥಿಯರಿ ಹರಡುತ್ತಿದ್ದಂತೆ ಇದನ್ನೇ ಸತ್ಯ ಎಂದು ಮೀಡಿಯಾಗಳು ಅಬ್ಬರಿಸಿದವು. ಇಡೀ ದೇಶದ ತುಂಬ ಇದೇ ಚರ್ಚೆ. ಅಣುಬಂಧ, ಹಣದುಬ್ಬರದಂತಹ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಿಗಿಂತ ಅರುಷಿ ಕೊಲೆ ಪ್ರಕರಣದ ಸಿಕ್ಕುಬಿಡಿಸುವುದೇ ಚಾನೆಲ್‌ಗಗಳಿಗೆ ಮಹತ್ವದ ವಿಷಯವಾಯಿತು. ಪ್ರತಿದಿನವೂ ಗಂಟೆಗಟ್ಟಲೇ ಇಂಥದೇ ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳು ತಲ್ವಾರ್‌ಗೆ ಕೊಡಬಹುದಾದ ಶಿಕ್ಷೆಯ ಬಗ್ಗೆ ತಲೆ ಕೆಡಿಸಿಕೊಳ್ಳಲು ಆರಂಭಿಸಿದವು. ಈ ನಡುವೆ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು.

ಸಿಬಿಐ ತಂಡ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ತನಿಖೆ ಆರಂಭಿಸಿತು. ನೋಯ್ಡಾ ಪೊಲೀಸರು ಅರುಷಿ ಪ್ರಕರಣದಲ್ಲಿ ಸರಿಯಾಗಿ ಕೇಸ್ ಡೈರಿಯನ್ನು ಸಹ ನಿರ್ವಹಿಸಿರಲಿಲ್ಲ. ಸಿಬಿಐ ಮೊದಲು ತಲ್ವಾರ್ ಅವರನ್ನು ವಿಚಾರಣೆಗೆ ಒಳಪಡಿಸಿದರು. ತಲ್ವಾರ್ ಪತ್ನಿ ನೂಪುರ್ ತಲ್ವಾರ್ ಅವರನ್ನೂ ವಿಚಾರಣೆ ಮಾಡಿದರು.ದೆಹಲಿ, ಮುಂಬೈ, ಬೆಂಗಳೂರಿನ ವಿವಿಧ ವೈಜ್ಞಾನಿಕ ಪ್ರಯೋಗಾಲಯಗಳಲ್ಲಿ ಈ ಪರೀಕ್ಷೆಗಳು ನಡೆದವು. ಮನೋವೈಜ್ಞಾನಿಕ ಪರೀಕ್ಷೆ, ಮಂಪರು ಪರೀಕ್ಷೆ, ಸುಳ್ಳು ಪತ್ತೆಗಾಗಿ ನಡೆಸುವ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳೆಲ್ಲ ಆದವು. ಆದರೆ ತಲ್ವಾರ್ ದಂಪತಿಗಳ ಬಳಿ ಕೊಲೆ ಸಂಬಂಧ ಹೇಳುವುದು ಏನೂ ಇರಲಿಲ್ಲ. ಯಾಕೆಂದರೆ ಅವರಿಗೆ ಏನೇನೂ ಗೊತ್ತಿರಲಿಲ್ಲ.ಪಕ್ಕದ ಕೋಣೆಯಲ್ಲಿದ್ದ ಅರುಷಿ ಕೊಲೆಯಾದರೂ, ತಲ್ವಾರ್ ದಂಪತಿಗಳಿಗೆ ಗೊತ್ತಾಗದೇ ಹೋಗಲು ಸಾಧ್ಯವಿರಲಿಲ್ಲ ಎಂಬುದು ನೋಯ್ಡಾ ಪೊಲೀಸರ ತರ್ಕವಾಗಿತ್ತು. ಅದನ್ನು ಪರಿಹರಿಸಲೆಂದೇ ಸಿಬಿಐ ಪೊಲೀಸರು ಕೋಣೆಗಳಲ್ಲಿದ್ದ ಎಸಿಗಳನ್ನು ರಾತ್ರಿ ವೇಳೆ ಚಾಲೂ ಮಾಡಿ, ಪಕ್ಕದ ಕೋಣೆಯಲ್ಲಿ ಅಪರಾಧ ಪ್ರಕರಣದ ನಕಲಿ ಪ್ರಹಸನ ಸೃಷ್ಟಿಸಿ, ತಲ್ವಾರ್ ದಂಪತಿಗಳಿಗೆ ಯಾವ ಶಬ್ದವೂ ಕೇಳಿಸದೇ ಇರುವ ಸಾಧ್ಯತೆ ಇದೆ ಎಂಬುದನ್ನು ಮನದಟ್ಟು ಮಾಡಿಕೊಂಡಿತು.

ಸಿಬಿಐ ಪೊಲೀಸರು ನಂತರ ಬೆನ್ನುಬಿದ್ದಿದ್ದು ಆಸ್ಪತ್ರೆಯ ನೌಕರ ಕೃಷ್ಣನ ಹಿಂದೆ. ವಿಚಿತ್ರವೆಂದರೆ ಇದೇ ಕೃಷ್ಣ ಹೇಳುತ್ತಿದ್ದ ವಿಷಯಗಳನ್ನೇ ತಮ್ಮ ಚಾನೆಲ್‌ಗಳಲ್ಲಿ ಬ್ರೇಕಿಂಗ್ ನ್ಯೂಸ್ ಮಾಡಿ ತಲ್ವಾರ್ ಕುಟುಂಬಕ್ಕೆ ಅನೈತಿಕ ಸಂಬಂಧಗಳನ್ನು ಹೆಣೆಯುತ್ತಿದ್ದ ಮೀಡಿಯಾಗಳು ಕೃಷ್ಣ ಬಂಧನಕ್ಕೊಳಗಾದಾಗ ಆತ ನಿರಪರಾಧಿ ಇರಬೇಕು ಎಂಬ ವರದಿಗಳನ್ನು ಪ್ರಕಟಿಸಿದವು. ಹಾಗೆಯೇ ವಾದಿಸಿದವು. ಆದರೆ ಸಿಬಿಐ ಪೊಲೀಸರು ಕೃಷ್ಣನ ಜತೆಯಲ್ಲಿ ಪಕ್ಕದ ಮನೆಯ ಕೆಲಸದ ಆಳು ರಾಜಕುಮಾರ್ ಎಂಬಾತನನ್ನೂ ಬಂಧಿಸಿದರು. ಇಬ್ಬರಿಗೂ ಎಲ್ಲ ರೀತಿಯ ವೈಜ್ಞಾನಿಕ ಪರೀಕ್ಷೆಗಳಾದವು. ಕಡೆಗೂ ಇಬ್ಬರೂ ಮತ್ತೊಬ್ಬನೊಂದಿಗೆ ಸೇರಿ ಅರುಷಿ ಹಾಗು ಹೇಮರಾಜ್ ಅವರನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡರು.

ಕೃಷ್ಣನಿಗೆ ತಲ್ವಾರ್ ಮೇಲೆ ಸಿಟ್ಟಿತ್ತು. ಈ ಸಂಬಂಧ ಅವರು ಆತನಿಗೆ ಆಗಾಗ ಗದರಿಸಿದ್ದರು. ಸಿಟ್ಟಿನಲ್ಲಿದ್ದ ಕೃಷ್ಣ ಸೇಡು ತೀರಿಸಿಕೊಳ್ಳಲು ಆರಿಸಿಕೊಂಡಿದ್ದು ೧೪ರ ಹರೆಯದ ಬಾಲೆ ಅರುಷಿಯನ್ನು. ಮೇ.೧೬ರಂದು ಹೇಮರಾಜ್‌ನ ಕೊಠಡಿಯಲ್ಲಿ ಸೇರಿಕೊಂಡ ಕೃಷ್ಣ, ರಾಜಕುಮಾರ್ ಹಾಗು ವಿಜಯ ಮಂಡಲ್ ಒಟ್ಟಿಗೆ ಕುಡಿದರು. ಕುಡಿದ ಮತ್ತಿನಲ್ಲಿ ಅರುಷಿ ಕೊಠಡಿಗೆ ನುಗ್ಗಿದರು. ಪಕ್ಕದ ಕೊಠಡಿಯಲ್ಲೇ ತಲ್ವಾರ್ ದಂಪತಿಗಳು ಗಾಢ ನಿದ್ರೆಯಲ್ಲಿದ್ದರು.ಕೃಷ್ಣ ಹಾಗು ರಾಜ ಕುಮಾರ್ ಅರುಷಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು. ಆಕೆ ಪ್ರತಿರೋಧ ತೋರಿದಾಗ ಆಕೆಯ ಮೇಲೆ ಮಾರಕ ಆಯುಧದಿಂದ ಹೊಡೆದರು. ಈ ಸಂದರ್ಭದಲ್ಲಿ ಹೇಮರಾಜ್ ಪ್ರವೇಶವಾಗಿ ಕೃಷ್ಣನ ವಿರುದ್ಧ ತಿರುಗಿ ಬಿದ್ದ. ಹೇಮರಾಜ್‌ನನ್ನು ತಾರಸಿ ಮೇಲೆ ಎಳೆದೊಯ್ದು ಆತನನ್ನು ಕೊಂದು ಹಾಕಲಾಯಿತು. ಮತ್ತೆ ಅರುಷಿ ಕೊಠಡಿಗೆ ವಾಪಾಸು ಬಂದ ರಕ್ಕಸರು ಆಕೆ ಗಂಟಲು ಕೊಯ್ದು ಕೊಂದು ಹಾಕಿದರು.

ಇದು ವೈಜ್ಞಾನಿಕ ಪ್ರಯೋಗಗಳ ಸಂದರ್ಭದಲ್ಲಿ ಹೊರಗೆ ಬಂದಿರುವ ಸತ್ಯಗಳು. ಮಂಪರು ಪರೀಕ್ಷೆಯಲ್ಲಿ ಹೇಳಿದ ವಿಷಯಗಳನ್ನು ನ್ಯಾಯಾಲಯಗಳು ಸಾಕ್ಷ್ಯವನ್ನಾಗಿ ಪರಿಗಣಿಸುವುದಿಲ್ಲವಾದ್ದರಿಂದ ಸಿಬಿಐ ಪೊಲೀಸರು ಅನಿವಾರ್ಯವಾಗಿ ಈಗ ಇತರ ಸಾಕ್ಷ್ಯಗಳನ್ನು ಕಂಡುಹಿಡಿದು ಆರೋಪ ರುಜುವಾತುಪಡಿಸಬೇಕಾಗಿದೆ. ಈಗಾಗಲೇ ಹಲವು ಸಾಂದರ್ಭಿಕ ಸಾಕ್ಷ್ಯಗಳನ್ನು ಸಿಬಿಐ ಸಿದ್ಧಪಡಿಸಿಕೊಂಡಿರುವುದರಿಂದ ಆರೋಪ ಸಾಬೀತುಪಡಿಸುವುದು ಅಷ್ಟು ಕಷ್ಟದ ಕೆಲಸವೇನಲ್ಲ.

ಆದರೆ ಈಗ ನಿರ್ದೋಷಿ ಎಂದು ಸಾಬೀತಾಗಿರುವ ಡಾ. ರಾಜೇಶ್ ತಲ್ವಾರ್ ಕಥೆ ಏನು? ಮೇ.೧೬ರಂದು ಅರುಷಿ ಕೊಲೆಯಾದಳು. ಅದಾದ ಒಂದೇ ವಾರಕ್ಕೆ, ಮಗಳ ಸಾವಿನ ನೋವಿನಲ್ಲಿ ಪ್ರಪಾತಕ್ಕೆ ಕುಸಿದಿದ್ದ ತಲ್ವಾರ್ ಅವರನ್ನು ನೊಯ್ಡಾ ಪೊಲೀಸರು ಬಂಧಿಸಿದರು. ಮಗಳ ಸಾವಿನ ನೋವಿನ ನಡುವೆ ಕೊಲೆ ಆರೋಪಿಯ ಪಟ್ಟ. ಅದೂ ಸ್ವತಃ ಮಗಳನ್ನೇ ಕೊಂದ ಆರೋಪಿಯೆಂಬ ಬಿರುದು.ಇದು ಸಾಲದೆಂಬಂತೆ ಇಡೀ ಕುಟುಂಬದ ವೈಯಕ್ತಿಕ ಶೀಲಹರಣ. ಮಗಳಿಗೂ ಕೆಲಸದಾಳಿಗೂ ಸಂಬಂಧ ಕಲ್ಪಿಸಿದ ಚಾನೆಲ್‌ಗಳು. ಸಹವೈದ್ಯೆಯರೊಂದಿಗೆ ತಮ್ಮ ಹೆಸರು ಥಳುಕು ಹಾಕಿದ ನಂತರ ಚಾರಿತ್ರ್ಯವೇ ನಾಶವಾದ ಅನುಭವಿ.ಸಹ ವೈದ್ಯೆಯರು ಸಹ ಬೀದಿಯಲ್ಲಿ ತಿರುಗಾಡದಂತಾಯಿತು. ಎಲ್ಲರ ಮೇಲೂ ಅನುಮಾನದ ಕಣ್ಣು. ಸ್ವತಃ ತಲ್ವಾರ್ ಪತ್ನಿ ನೂಪುರ್‌ಗೆ ಪ್ರಪಂಚವೇ ತಲೆಯ ಮೇಲೆ ಬಿದ್ದ ಅನುಭವ. ಒಂದೆಡೆ ಮಗಳ ಸಾವು. ಪತಿಯೇ ಕೊಲೆಗಡುಕ. ಆತನ ಚಾರಿತ್ರ್ಯವೂ ಶುದ್ಧವಿಲ್ಲ. ಕಂಡಕಂಡವರ ಜತೆ ಸಂಬಂಧ. ೧೪ರ ಮಗಳೂ ದಾರಿ ತಪ್ಪಿದ್ದಳು. ಕೆಲಸದವನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು..... ಇಂಥವೆಲ್ಲ ಆರೋಪಗಳನ್ನು, ಆಘಾತಗಳನ್ನು ಆ ಹೆಣ್ಣು ಮಗಳಾದರೂ ಹೇಗೆ ಸಹಿಸಿಕೊಂಡಳು. ನೂಪುರ್ ತನ್ನ ಪತಿಯ ಪರವಾಗಿ ಗಟ್ಟಿಯಾಗಿ ನಿಂತರು. ಎಲ್ಲ ಅವಮಾನಗಳನ್ನು ಸಹಿಸಿಕೊಂಡರು. ತನ್ನ ಪತಿ ನಿರ್ದೋಷಿ ನಿರಪರಾಧಿ ಎಂದು ಸಾರಿ ಸಾರಿ ಹೇಳಿದರು. ಆತನಿಗೆ ಯಾವುದೇ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿರಲಿಲ್ಲ ಎಂದು ಪದೇಪದೇ ಹೇಳಿದರು. ಆದರೆ ನಂಬುವ ಸ್ಥಿತಿಯಲ್ಲಿ ನಮ್ಮ ಮೀಡಿಯಾಗಳು ಇರಲಿಲ್ಲ. ಅಸಹಾಯಕ ಭಾರತೀಯ ಹೆಣ್ಣುಮಗಳ ಬಡಬಡಿಕೆ ಇದು ಎಂದು ಮೂಗುಮುರಿದವು.ಇಡೀ ಪ್ರಕರಣದ ಕುರಿತಾದ ರಂಜಿತ ಸುದ್ದಿಗಳನ್ನು ದಿನವೂ ಟೆಲಿವಿಷನ್‌ನಲ್ಲಿ ನೋಡುತ್ತಿದ್ದ ಲಕ್ಷಾಂತರ ಎಳೆಯ ಹೆಣ್ಣುಮಕ್ಕಳ ಕಥೆ ಏನಾಗಿರಬೇಕು. ಆ ಮಕ್ಕಳ ಮನಸ್ಸಿನಲ್ಲಿ ಎಂಥ ಭಾವನೆಗಳು ಮೂಡಿರಬೇಕು.

ಸಾಧಾರಣವಾಗಿ ಭಾರತೀಯ ಹೆಣ್ಣುಮಕ್ಕಳು ತಮ್ಮ ತಂದೆಯ ಜತೆಯೇ ಹೆಚ್ಚು ಅನುಬಂಧ ಹೊಂದಿರುತ್ತಾರೆ. ಹೆಚ್ಚು ಭದ್ರತಾಭಾವ ಅನುಭವಿಸುತ್ತಾರೆ. ಆದರೆ ಇದೆಲ್ಲದರ ಬುಡವೇ ಕಿತ್ತುಬರುವಂತೆ ಮೀಡಿಯಾಗಳು ಅಬ್ಬರಿಸುತ್ತಿದ್ದವು.ಇಡೀ ಒಂದು ಕುಟುಂಬವನ್ನು ಅನೈತಿಕವೆಂದು ಜರಿದು, ಅಮಾಯಕರಿಗೆ ಕೊಲೆಗಾರರ ಪಟ್ಟ ಹೊರೆಸಿದ, ಇಡೀ ದೇಶವನ್ನು ತಿಂಗಳುಗಳ ಕಾಲ ದಿಕ್ಕುತಪ್ಪಿಸಿದ, ಲಕ್ಷಾಂತರ ಅಪ್ರಾಪ್ತ ಹೆಣ್ಣುಮಕ್ಕಳ ಭಾವನೆಗಳೊಂದಿಗೆ ಚೆಲ್ಲಾಟವಾಡಿದ- ಆ ಹೆಣ್ಣು ಮಕ್ಕಳಲ್ಲಿ ತಮ್ಮ ತಂದೆಯರ ಜತೆಯೆ ಅಭದ್ರತಾ ಭಾವ ಮೂಡಿಸಿದ ಈ ಎಲೆಕ್ಟ್ರಾನಿಕ್ ಮಾಧ್ಯಮದ ತಥಾಕಥಿಕ ಪತ್ರಕರ್ತರು, ಅವರನ್ನು ಪೊರೆಯುವ ಬಂಡವಾಳಶಾಹಿ ಮಾಲೀಕರಿಗೆ ಈಗ ಏನೆನ್ನುವುದು?ಈ ಕೊಳಕು ಕಾರ್ಯ ಮಾಡಿದವರು ದೇಶದ ಕ್ಷಮೆ ಯಾಚಿಸಬೇಕು ಅಲ್ಲವೆ? ದೇಶದ ಸಣ್ಣ ವಯಸ್ಸಿನ ಎಲ್ಲ ಹೆಣ್ಣು ಮಕ್ಕಳ ಕ್ಷಮೆ ಯಾಚಿಸಬೇಕು ಅಲ್ಲವೇ? ಮುಗ್ದ ಅರುಷಿಯನ್ನು ಯಾರೋ ಪಾಪಿಗಳು ಕೊಂದು ಹಾಕಿದರು. ಅವರಿಗೇನೋ ಶಿಕ್ಷೆಯಾಗುತ್ತದೆ. ಆದರೆ ದೇಶದ ಲಕ್ಷಾಂತರ ಹೆಣ್ಣುಮಕ್ಕಳ ಕೋಮಲ ಮನಸ್ಸನ್ನು ಕೊಂದವರಿಗೆ ಶಿಕ್ಷೆ ಕೊಡುವವರು ಯಾರು?

2 comments:

Anonymous said...

ಮೀಡಿಯಾಗಳ ಈ ರೀತಿಯ ದುರ್ನಡತೆ ತಡೆಯಲು ಯಾವ ಕಾಯ್ದೆಯೂ ಇಲ್ಲವೇ? ಲೇಖನ ಚೆನ್ನಾಗಿದೆ.

Anonymous said...

write-up on arushi murder is timely. media should have little bit decensy.
the whole electronic media went on putting up concocted stories on aurshi murder. but in case of gang rape and murder of 13-year old Lakshmi, daughter of poor parents in Jalahalli, the media behaved as if it is not at all concerned. If Arushi and Lakshmi had born in same place, they would have been studying in a same school. Newspapers dismissed the story as a routine crime report, while electronic media remained mum. Just because Lakshmi's is not a high-profile case. You don't have doctor-father for Lakshmi to drag him to the incident.
It is true hamko bilkul sharam nahi...
satish shile, reporter, deccan herald, - satishshile@gmail.com