Tuesday, July 22, 2008

...ಅಂಥ ಹೋರಾಟಗಾರನಿಗೆ ಇಂಥ ಸಾವು ನ್ಯಾಯವೆ?


ಅದು ರೇವಣಸಿದ್ಧಯ್ಯ ಅವರು ಬೆಂಗಳೂರು ನಗರ ಕಮಿಷನರ್ ಆಗಿದ್ದ ಕಾಲ. ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಶಿವಾಸ್ ಎಂಬ ಬಾರ್ ಅಂಡ್ ರೆಸ್ಟೋರೆಂಟ್ ಸುತ್ತಮುತ್ತಲ ಜನರಿಗೆ ಕಿರಿಕಿರಿ ಹುಟ್ಟಿಸಿತ್ತು. ಶಿವಾಸ್‌ನಲ್ಲಿ ಲೈವ್ ಬ್ಯಾಂಡ್ ಸಹ ಇತ್ತು. ಬಾರ್ ಸುತ್ತ ಜನಸಾಮಾನ್ಯರು ಸಂಜೆಯ ನಂತರ ಓಡಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ. ವಿಶೇಷವಾಗಿ ಮಹಿಳೆಯರಂತೂ ಅಲ್ಲಿ ಸುಳಿದಾಡುವಂತೆಯೇ ಇರಲಿಲ್ಲ. ಇದ್ದಕ್ಕಿದ್ದಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಉಮಾಪತಿ ಎಂಬ ಯುವಕ ಕೊಲೆಯಾಗಿ ಹೋದ. ಬಾರ್ ನಡೆಸುತ್ತಿದ್ದವರೇ ಆ ಕೊಲೆ ಮಾಡಿದ್ದರು.

ಕೊಲೆಯಾದ ನಂತರ ಉಮಾಪತಿಯ ಶವ ಇಟ್ಟು ಅಲ್ಲಿನ ನಾಗರಿಕರು ಪ್ರತಿಭಟನೆ ನಡೆಸಿದರು. ಅಬಕಾರಿ ಲಾಬಿ ವಿರುದ್ಧ ಹೀಗೆ ರಸ್ತೆಯಲ್ಲಿ ಪ್ರತಿಭಟನೆ ಸಂಘಟಿಸಿದ್ದು ಎ.ಟಿ.ಬಾಬು ಎಂಬ ದಕ್ಷಿಣ ಕನ್ನಡ ಮೂಲದ ವ್ಯಕ್ತಿ. ಅವತ್ತಿಗೆ ಅವರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡವರಲ್ಲ. ಆದರೆ ಬಾಬು ಹೋರಾಟದ ಫಲವಾಗಿ ಸ್ವತಃ ರೇವಣಸಿದ್ಧಯ್ಯ ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಬೇಕಾಯಿತು. ಉಮಾಪತಿ ಹತ್ಯೆ ಪ್ರಕರಣ ನಿಷ್ಪಕ್ಷಪಾತ ತನಿಖೆ ನಡೆಸಿ, ಬಾರ್ ಲೈಸೆನ್ಸ್ ರದ್ದುಪಡಿಸಲು ಶಿಫಾರಸು ಮಾಡುವುದಾಗಿ ಭರವಸೆ ನೀಡಿದ ನಂತರವೇ ಪ್ರತಿಭಟನೆ ಅಂತ್ಯವಾಯಿತು. ರೇವಣಸಿದ್ಧಯ್ಯನವರು ಆಶ್ವಾಸನೆ ನೀಡಿದಂತೆಯೇ ಬಾರ್ ಪರವಾನಗಿ ರದ್ದಾಯಿತು.

ಎ.ಟಿ.ಬಾಬು ಎಂಬ ಅಸಾಮಾನ್ಯ ಹೋರಾಟಗಾರನ ಜೀವನದ ತುಂಬೆಲ್ಲ ಇಂಥದ್ದೇ ಘಟನೆಗಳು. ಬಾಬು ಅವರು ಕುಂದಾಪುರದಿಂದ ಬದುಕನ್ನು ಅರಸಿಕೊಂಡು ದಶಕಗಳ ಹಿಂದೆ ಬೆಂಗಳೂರಿನ ಪ್ರಕಾಶನಗರಕ್ಕೆ ಬಂದು ನೆಲೆಸಿದಾಗ ಆರಂಭಿಸಿದ್ದು, ಟೈಲರಿಂಗ್ ವೃತ್ತಿಯನ್ನು. ನಂತರ ಹೋಟೆಲ್ ತೆರೆದರು.
ಆ ಕಾಲಕ್ಕೆ ಕ್ರಿಯಾಶೀಲವಾಗಿದ್ದ ಡಾ.ರಾಜ್ ಕುಮಾರ್ ಅಭಿಮಾನಿ ಸಂಘದಲ್ಲಿ ಬಾಬು ಗುರುತಿಸಿಕೊಂಡು ಹೋರಾಟದ ಜೀವನ ಆರಂಭಿಸಿದರು. ಸಾರ್ವಜನಿಕ ಜೀವನಕ್ಕೆ ತೆರೆದುಕೊಳ್ಳುತ್ತಿದ್ದಂತೆಯೇ ಅವರು ತಮ್ಮದೇ ಆದ ಸಂಘಟನೆಯೊಂದನ್ನು ಕಟ್ಟಿ ಅದಕ್ಕೆ ಕರ್ನಾಟಕ ಸರ್ವರ ಕ್ಷೇಮಾಭಿವೃದ್ಧಿ ಸಮಿತಿ ಎಂದು ಹೆಸರಿಟ್ಟರು.
ಪ್ರಕಾಶನಗರ, ಶ್ರೀರಾಮಪುರ, ಗಾಯತ್ರಿನಗರ ಪ್ರದೇಶಗಳಲ್ಲಿ ಆಗ ಬಾರ್, ವೈನ್ ಶಾಪ್ ಹಾಗು ಸಾರಾಯಿ ಅಂಗಡಿಗಳ ಕಾಟ ವಿಪರೀತವಾಗಿತ್ತು. ಅಕ್ಷರಶಃ ಇವೆಲ್ಲವೂ ಅಪರಾಧ ಚಟುವಟಿಕೆಗಳ ಕೇಂದ್ರ ಬಿಂದುಗಳಾಗಿದ್ದವು. ಬೆಂಗಳೂರಿನ ಸಮಸ್ತ ರೌಡಿ ಚಟುವಟಿಕೆಗಳ ತವರು ನೆಲವಾದ ಈ ಭಾಗದಲ್ಲಿ ಜನಸಾಮಾನ್ಯರು, ಮಹಿಳೆಯರು ಬದುಕುವುದೇ ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇತ್ತು.

ಬಾಬು ಇದೆಲ್ಲದರ ವಿರುದ್ಧ ಹೋರಾಡುವ ನಿರ್ಧಾರಕ್ಕೆ ಬಂದರು. ಸರ್ವರ ಕ್ಷೇಮಾಭಿವೃದ್ಧಿ ಸಂಘದ ಮೂಲಕವೇ ಹೋರಾಟ ನಡೆಸುತ್ತಿದ್ದ ಬಾಬು ಅಬಕಾರಿ ಲಾಬಿ ವಿರುದ್ಧ ಹೋರಾಡಲೆಂದು ಮದ್ಯಪಾನ ವಿರೋಧಿ ಆಂದೋಲನ ಸಮಿತಿಯನ್ನು ಸ್ಥಾಪಿಸಿದರು. ಇದು ಕಾಟಾಚಾರದ ಸಮಿತಿಯಾಗಲಿಲ್ಲ. ನೂರಾರು ಮಹಿಳೆಯರನ್ನು ಈ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿದರು. ಹಲವು ಮಹಿಳಾ ಸಮಾಜಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವುಗಳನ್ನೂ ಚಳವಳಿಯ ಭಾಗವಾಗಿಸಿದರು.

ಪ್ರಕಾಶನಗರದಲ್ಲಿ ಕುಖ್ಯಾತ ಸಾರಾಯಿ ಅಂಗಡಿಯೊಂದಿತ್ತು. ಅದು ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದಕ್ಕೆ ಅಂಟಿಕೊಂಡೇ ಇತ್ತು. ಹೀಗಾಗಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರು ಜೀವ ಕೈಯಲ್ಲಿ ಹಿಡಿದುಕೊಂಡೇ ಓಡಾಡಬೇಕಿತ್ತು. ಎ.ಟಿ.ಬಾಬು ಈ ಸಾರಾಯಿ ಅಂಗಡಿಯನ್ನು ಕಿತ್ತು ಹಾಕಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಆದರೆ ಅದು ಯಾವ ಅಡೆತಡೆಯೂ ಇಲ್ಲದೆ ದಂಧೆ ನಡೆಸುತ್ತಿತ್ತು. ಅಲ್ಲಿ ಅಡ್ಡ ಹಾಕುತ್ತಿದ್ದ ಪುಡಿ ರೌಡಿಗಳು ಓಡಾಡುವ ಹೆಣ್ಣುಮಕ್ಕಳನ್ನು ಕಣ್ಣುಕೆಕ್ಕರಿಸಿ ನೋಡುತ್ತಿದ್ದರು. ಆಗಾಗ ಹೊಡೆದಾಟ, ಬಡಿದಾಟ, ಕಡಿದಾಟಗಳಿಗೂ ಬರವಿರಲಿಲ್ಲ.

ಬಾಬು ಚಳವಳಿಯ ಮಾರ್ಗವನ್ನು ತುಳಿದರು. ಸಾರಾಯಿ ಅಂಗಡಿ ಮುಂದೆಯೇ ಮಹಿಳೆಯರನ್ನು ಕರೆತಂದು ಧರಣಿ ಕೂರಿಸಿದರು. ಸಾರಾಯಿ ಅಂಗಡಿಯವನ ಪ್ರಭಾವ ಎಷ್ಟಿತ್ತೆಂದರೆ ಸರ್ಕಾರ ಕ್ಯಾರೇ ಎನ್ನಲಿಲ್ಲ. ಆದರೆ ಬಾಬು ಪಟ್ಟು ಬಿಡಲಿಲ್ಲ. ದಿನದಿಂದ ದಿನಕ್ಕೆ ಚಳವಳಿ ತೀವ್ರವಾಗುತ್ತ ಹೋಯಿತು. ಸತತ ಒಂದು ತಿಂಗಳಾದರೂ ಧರಣಿ ನಿಂತಿರಲಿಲ್ಲ. ರಾಜಿಕಬೂಲಿ, ಡೀಲಿಂಗ್, ಮ್ಯಾಚ್‌ಫಿಕ್ಸಿಂಗ್‌ಗೆ ಬಾಬು ತಲೆಬಾಗಿರಲಿಲ್ಲ. ಕಡೆಗೆ ಈ ವಿಷಯ ರಾಜ್ಯಾದ್ಯಂತ ಚರ್ಚೆಯ ವಿಷಯವಾಗುತ್ತಿದ್ದಂತೆ ಸರ್ಕಾರ ಅನಿವಾರ್ಯವಾಗಿ ತೀರ್ಮಾನ ಕೈಗೊಂಡು ಸಾರಾಯಿ ಅಂಗಡಿ ಮುಚ್ಚಿತು. ಅಲ್ಲಿ ಮತ್ತೆಂದೂ ಅದು ತೆರೆಯಲಿಲ್ಲ.

ಮದ್ಯಪಾನ ವಿರೋಧದ ಚಳವಳಿಯನ್ನೇ ಪ್ರಧಾನವಾಗಿಟ್ಟುಕೊಂಡಿದ್ದ ಬಾಬು ಇತರ ಜನಪರ, ಕನ್ನಡಪರ ಚಳವಳಿಗಳಲ್ಲೂ ಭಾಗವಹಿಸುತ್ತಿದ್ದರು. ತಮ್ಮ ಕಾರ್ಯಕರ್ತರನ್ನು ತೊಡಗಿಸುತ್ತಿದ್ದರು. ಆದರೆ ಮದ್ಯಪಾನ ವಿರೋಧಿ ಚಳವಳಿ ಎಲ್ಲೇ ನಡೆಯಲಿ, ಅವರು ಅಲ್ಲಿಗೆ ದಾಪುಗಾಲು ಹಾಕಿಕೊಂಡು ಹೋಗುತ್ತಿದ್ದರು. ಬಾಬು ಅವರ ಈ ಚಟುವಟಿಕೆಗಳು ಪ್ರಕಾಶನಗರವನ್ನು ದಾಟಿ ಇಡೀ ರಾಜ್ಯಕ್ಕೆ ವಿಸ್ತರಿಸಿಕೊಂಡಿತು. ರಾಜ್ಯದ ವಿವಿಧೆಡೆ ಸಾರಾಯಿ ಅಂಗಡಿಗಳ ವಿರುದ್ಧ ಚಳವಳಿ ನಡೆಸುತ್ತಿದ್ದ ಮಹಿಳೆಯರು ಮೊದಲು ಫೋನಾಯಿಸುತ್ತಿದ್ದದ್ದು ಎ.ಟಿ.ಬಾಬು ಅವರಿಗೇ. ಬಾಬು ಸಹ ಹಿಂದೆಮುಂದೆ ನೋಡದೆ ಚಳವಳಿ ನಡೆಯುತ್ತಿದ್ದ ಸ್ಥಳಕ್ಕೆ ಓಡುತ್ತಿದ್ದರು. ಚಳವಳಿಗಾರರಿಗೆ ಮನೋಸ್ಥೈರ್ಯ, ಸಹಕಾರ ನೀಡುತ್ತಿದ್ದರು. ಚಳವಳಿಯನ್ನು ಉದ್ದೀಪನಗೊಳಿಸಿ, ಸರ್ಕಾರವನ್ನು, ಸ್ಥಳೀಯ ಆಡಳಿತವನ್ನು ಬಗ್ಗಿಸುತ್ತಿದ್ದರು.

ಅಪ್ಪಟ ಗಾಂಧಿವಾದಿಯಾದ ಎ.ಟಿ.ಬಾಬು ಎಲ್ಲರನ್ನೂ ಅಣ್ಣ, ಅಕ್ಕ ಎಂದೇ ಮಾತನಾಡಿಸುತ್ತಿದ್ದರು. ಸೌಜನ್ಯ, ವಿನಯವಂತಿಕೆ ಅವರ ರಕ್ತಗುಣ. ಅಪ್ಪಟ ಹೋರಾಟಗಾರರಾದರೂ ಕೂಗಾಡಿ, ಗದ್ದಲ ಮಾಡುವುದು ಅವರ ಸ್ವಭಾವವಾಗಿರಲಿಲ್ಲ. ಯಾರ ಜತೆಯೂ ವೈಯಕ್ತಿಕ ಸಂಘರ್ಷಕ್ಕೂ ಇಳಿದವರಲ್ಲ. ಒಂದೆರಡು ಬಾರಿ ಮಹಾನಗರ ಪಾಲಿಕೆ ಚುನಾವಣೆಗೂ ನಿಂತು ಸೋತಿದ್ದರು. ರಾಜಕಾರಣ ಚಳವಳಿಯ ಹಾಗಲ್ಲ ಎಂಬುದು ಅವರ ಅರಿವಿಗೆ ಬಂದಿತ್ತು. ಹಿಂದೆ ಕಾಂಗ್ರೆಸ್‌ನಲ್ಲಿದ್ದ ಬಾಬು ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ರಾಜಾಜಿನಗರ ಕ್ಷೇತ್ರದ ಅಭ್ಯರ್ಥಿ ಸುರೇಶ್ ಕುಮಾರ್, ಮಹಾಲಕ್ಷ್ಮಿಲೇಔಟ್ ಅಭ್ಯರ್ಥಿ ಆರ್.ವಿ.ಹರೀಶ್ ಪರವಾಗಿ ಕೆಲಸ ಮಾಡಿದ್ದರು.
ಬಾರ್, ವೈನ್‌ಶಾಪ್, ಸಾರಾಯಿ ವಿರುದ್ಧ ರಾಜಿರಹಿತ ಹೋರಾಟ ನಡೆಸುತ್ತಿದ್ದ ಬಾಬು ಅವರನ್ನು ದ್ವೇಷಿಸುವವರಿಗೇನು ಕೊರತೆಯಿರಲಿಲ್ಲ. ಬಾಬು ಸ್ಥಳೀಯ ಕೆಲವು ರೌಡಿಗಳನ್ನು ಮನವೊಲಿಸಿ ಅವರನ್ನು ಬದಲಾಯಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದರು. ಹೀಗೆ ಇವರ ಜತೆ ಓಡಾಡಿಕೊಂಡಿದ್ದ ದಾಸ ಎಂಬ ರೌಡಿ ಕೊಲೆಯಾಗಿ ಹೋದ. ಟಪ್ಪು ಎಂಬ ರೌಡಿ ಇವರ ಜತೆಯಿದ್ದವನು ಮತ್ತೆ ಬೇರೆಯಾಗಿ ಅಪರಾಧ ಚಟುವಟಿಕೆ ಮುಂದುವರೆಸಿದ್ದ.

ಇದೆಲ್ಲವೂ ಮುಂದೊಂದು ದಿನ ಪ್ರಾಣಕ್ಕೇ ಸಂಚಕಾರ ತಂದೀತೆಂದು ಬಾಬು ಭಾವಿಸಿರಲಿಲ್ಲ. ಅಬಕಾರಿ ಮಾಫಿಯಾ ಹಾಗು ರೌಡಿ ಸಾಮ್ರಾಜ್ಯ ಒಂದಾಗಿ ಬಾಬು ಮುಗಿಸಿಬಿಡಲೆಂದು ಸಂಚು ನಡೆಸಿದ್ದು ಅವರ ಗಮನಕ್ಕೇ ಬಂದಿರಲಿಲ್ಲವೆನ್ನಿಸುತ್ತದೆ. ಬಂದಿದ್ದರೂ ಅದನ್ನು ಅವರು ಲಘುವಾಗಿ ಪರಿಗಣಿಸಿದ್ದಿರಬಹುದು.
ತೀರಾ ಇತ್ತೀಚೆಗೆ ಬಾಬು ಕೆಲ ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮೇಲೆ ಯುದ್ಧ ಆರಂಭಿಸಿದ್ದರು.

ನಿನ್ನೆ ಜು.೨೧ ಮಧ್ಯಾಹ್ನ ಬಾಬು ಮಂಡ್ಯಕ್ಕೆ ತಮ್ಮ ಮಾರುಕಿ ಓಮ್ನಿಯಲ್ಲಿ ಹೊರಟಿದ್ದರು. ರಾಮನಗರಕ್ಕೆ ಆರು-ಏಳು ಕಿ.ಮೀ ಹಿಂದೆ ಮಾಯಗಾನಹಳ್ಳಿ ಎಂಬಲ್ಲಿ ಎರಡು ದ್ವಿಚಕ್ರ ವಾಹನಗಳು ಬಾಬು ಅವರ ವಾಹನಕ್ಕೆ ಅಡ್ಡಲಾಗಿ ಬಂದಿವೆ. ಕೊಲೆಗಡುಕರು ಅತ್ಯಂತ ಪ್ರೊಫೆಷನಲ್ ಆದ ಶೈಲಿಯಲ್ಲೇ ಬಾಬು ವಿರುದ್ಧ ಜಗಳ ತೆಗೆದಿದ್ದಾರೆ. ಹೀಗೆ ಜಗಳ ನಡೆಯುತ್ತಿರುವಾಗಲೇ ಯೋಜನೆಯಂತೆ ನೀಲಿ ಬಣ್ಣದ ಸ್ಕಾರ್ಪಿಯೊದಿಂದ ಬಂದಿಳಿದ ಏಳೆಂಟು ಮಂದಿ ಬಾಬು ಅವರನ್ನು ಕೊಚ್ಚಿ ಕೊಂದು ಹೋಗಿದ್ದಾರೆ. ಬಾಬು ಜತೆಗಿದ್ದ ಮದ್ಯಪಾನ ವಿರೋಧಿ ಆಂದೋಲನ ಸಮಿತಿಯ ಇಬ್ಬರು ಮಹಿಳಾ ಸದಸ್ಯರು ಇದೆಲ್ಲಕ್ಕೂ ಮೂಕಸಾಕ್ಷಿಯಾಗಿದ್ದಾರೆ.

ಅಲ್ಲಿಗೆ ಒಂದು ಅಧ್ಯಾಯ ಮುಗಿದಿದೆ. ಬಾಬು ಅವರ ಅಸಂಖ್ಯ ವಿರೋಧಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ದುಷ್ಟರು, ನಿರ್ಲಜ್ಜರು, ಸಮಾಜಘಾತಕರಿಗೆ ಈ ಸಾವು ಅನಿವಾರ್ಯವಾಗಿ ಬೇಕಾಗಿತ್ತು. ಅದು ಒಂದೇ ನಿಮಿಷದಲ್ಲಿ ನಡೆದುಹೋಗಿದೆ.

ನಗರಕ್ಕೀಗ ಖಡಕ್ ಪೊಲೀಸ್ ಅಧಿಕಾರಿ ಶಂಕರ್ ಬಿದರಿಯವರೇ ಪೊಲೀಸ್ ಕಮಿಷನರ್. ಕೊಲೆಯಾಗಿರುವುದು ಒಬ್ಬ ಪುಡಿ ರೌಡಿಯಲ್ಲ. ಗಾಂಧಿಮಾರ್ಗದಲ್ಲಿ ಹೋರಾಟ ನಡೆಸುತ್ತಿದ್ದ ಚಳವಳಿಗಾರ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಇಂಥ ಪ್ರಕರಣಗಳು ಮರುಕಳಿಸಿದರೆ ಇದನ್ನು ನಾಗರಿಕ ಸಮಾಜ ಎನ್ನಲು ಸಾಧ್ಯವಿಲ್ಲ.
ಅನ್ಯಾಯಗಳ ವಿರುದ್ಧ, ಅಕ್ರಮಗಳ ವಿರುದ್ಧ ಹೋರಾಡುವವರನ್ನು ಹಾಡುಹಗಲೇ ಕತ್ತರಿಸಿ ಕೊಲ್ಲುವ ಬೆಳವಣಿಗೆಗೆ ಪೊಲೀಸ್ ಇಲಾಖೆ ಮಾತ್ರವಲ್ಲ, ಸರ್ಕಾರವೇ ತಲೆತಗ್ಗಿಸಬೇಕಾಗುತ್ತದೆ.

ಎ.ಟಿ.ಬಾಬು ಸಮಾಜಕ್ಕೆ ಕಂಟಕವಾಗಿರುವವರ ವಿರುದ್ಧ ಬೀಳುತ್ತಿದ್ದರೇ ವಿನಃ ಯಾರನ್ನೂ ವಿನಾಕಾರಣ ನೋಯಿಸಿದವರಲ್ಲ. ಅವರ ಪಾರ್ಥಿವ ಶರೀರ ಬರುವ ಮುನ್ನವೇ ಅವರ ಮನೆಯ ಬಳಿ ಸಾವಿರಾರು ಮಂದಿ ನೆರೆದಿದ್ದರು. ಎಲ್ಲರದ್ದೂ ಒಂದೇ ಕೂಗು. ಕೊಲೆಗಡುಕರಿಗೆ ಗಲ್ಲು ಶಿಕ್ಷೆಯನ್ನೇ ಕೊಡಿ.

ಬಿದರಿಯವರಿಗೊಂದು ಮನವಿ: ಇದು ನಾಗರಿಕ ಸಮಾಜದ ಬುಡಕ್ಕೆ ಬೀಸಿದ ಕೊಡಲಿಪೆಟ್ಟು. ಬಾಬು ಹಂತಕರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸುವುದರ ಜತೆಗೆ ಸುಪಾರಿ ಕೊಟ್ಟವರನ್ನು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟುವ ಕೆಲಸ ಆಗಬೇಕು. ಇದು ನಿಮ್ಮಿಂದ ಖಂಡಿತ ಸಾಧ್ಯ. ಅದಾಗದಿದ್ದರೆ ಜನಸಾಮಾನ್ಯರಿಗೆ ಪೊಲೀಸರು, ಸರ್ಕಾರ ಯಾವುದರ ಮೇಲೂ ವಿಶ್ವಾಸ ಉಳಿಯಲು ಸಾಧ್ಯವಿಲ್ಲ.

ಬಾಬು ಅವರನ್ನು ಹತ್ತಿರದಿಂದ ಬಲ್ಲ ನನ್ನಂಥವರಿಗೆ ಇನ್ನೂ ಅರ್ಥವಾಗದ ವಿಷಯವೆಂದರೆ ಅವರು ಕೊಲೆಯಾಗುವಂಥದ್ದೇನು ಮಾಡಿದ್ದರು? ಸಿಟ್ಟಿದ್ದರೆ ಬೇರೆ ರೀತಿಯಲ್ಲಿ ಬಡಿದಾಡಬಹುದಿತ್ತಲ್ಲವೇ? ಕೊಲ್ಲುವಂಥ ಜೀವವೇ ಅದು?
ಈ ಸಾವು ನ್ಯಾಯವೆ?

No comments: