Wednesday, July 23, 2008

ಐಟಿ-ಬಿಟಿಗಳು ಹಾಗು ನಮ್ಮ ಮುಖ್ಯಮಂತ್ರಿಗಳು....

ಇಂದು ಸಂಜೆ (೨೩-೭-೨೦೦೮) ಎಂಟು ಗಂಟೆಗೆ ಐಟಿ ಮತ್ತು ಬಿಟಿ ಕ್ಷೇತ್ರದ ದಿಗ್ಗಜರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚರ್ಚೆ ನಡೆಸಲಿದ್ದಾರೆ. ಓಬೆರಾಯ್ ಹೋಟೆಲ್‌ನಲ್ಲಿ ಈ ಸಭೆ ಏರ್ಪಾಟಾಗಿದೆ.

ನೂತನ ಮುಖ್ಯಮಂತ್ರಿಗಳು ಎಲ್ಲ ಕ್ಷೇತ್ರದ ನಾಯಕರೊಂದಿಗೆ ಹೀಗೆ ಔಪಚಾರಿಕವಾಗಿ ಚರ್ಚೆ ಮಾಡುವುದು ಪರಿಪಾಠ. ಇತ್ತೀಚಿನ ವರ್ಷಗಳಲ್ಲಿ ಐಟಿ-ಬಿಟಿ ಕ್ಷೇತ್ರದವರಿಗೆ ಸರ್ಕಾರಗಳು ಹೆಚ್ಚು ಎತ್ತರದ ಮಣೆ ಹಾಕುತ್ತವೆ. ಅದು ಕೂಡ ಸಹಜವೇ. ಐಟಿ-ಬಿಟಿ ಇವತ್ತಿನ ಓಡುತ್ತಿರುವ ಕುದುರೆ. ಅದು ಓಡುತ್ತಿರುವವರೆಗೆ ಅದನ್ನು ಮುದ್ದು ಮಾಡುವವರಿಗೆ ಬರವಿರುವುದಿಲ್ಲ. ಈ ಕುದುರೆ ಯಾವತ್ತು ಕಾಲು ಮುರಿದುಕೊಳ್ಳುತ್ತದೋ, ಯಾವತ್ತು ಕುಂಟುತ್ತದೋ, ಇನ್ನ್ಯಾವತ್ತು ಸುಸ್ತಾಗಿ ಮಲಗಿಬಿಡುತ್ತದೋ (ಹಾಗಾಗದಿರಲಿ) ಗೊತ್ತಿಲ್ಲ.

ಆದರೆ ಸಮಸ್ಯೆಯಿರುವುದು ಕುದುರೆಯ ಮನೋಧರ್ಮವೇನು ಎಂಬುದು. ಸಾಕು ಸಾಕೆನ್ನುವಷ್ಟು ಮೇವು, ಉದ್ದೀಪನ ಔಷಧಗಳು ದಕ್ಕಿರುವುದರಿಂದ ಈ ಕುದುರೆ ನಮ್ಮ ಕಣ್ಣಿಗೆ ಆಗಾಗ ಹುಚ್ಚುಕುದುರೆಯಂತೆ ಕಂಡಿದ್ದೇ ಹೆಚ್ಚು. ಕುದುರೆಯನ್ನು ಪ್ರೀತಿಸೋಣ, ಆದರೆ ಹುಚ್ಚುಕುದುರೆಯನ್ನು ಯಾರಾದರೂ, ಎಂದಾದರೂ ಕಟ್ಟಿ ಹಾಕಿ ಸರಿದಾರಿಗೆ ತರಲೇಬೇಕಲ್ಲವೆ?

ಮುಖ್ಯಮಂತ್ರಿಗಳ ಸಭೆಯ ವಿಷಯಕ್ಕೆ ಬರೋಣ. ಇವತ್ತು ಸಭೆಯಲ್ಲಿ ಐಟಿ-ಬಿಟಿ ಲೀಡರುಗಳು ಏನೇನು ಮಾತನಾಡಲಿದ್ದಾರೆ ಎಂಬುದನ್ನು ಈ ರಾಜ್ಯದ ಸಾಮಾನ್ಯ ಜನರೂ ಊಹಿಸಬಲ್ಲರು. ಅವರ ಬೇಡಿಕೆಗಳೇನು ಎಂಬುದು ಎಲ್ಲರಿಗೂ ಸುಸ್ಪಷ್ಟ.

ಅವರು ಕೇಳುತ್ತಾರೆ “ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಆರಂಭವೇನೋ ಆಯಿತು. ಆದರೆ ಅಲ್ಲಿಗೆ ಹೋಗುವುದಕ್ಕೆ ರಸ್ತೆ ಸರಿಯಿಲ್ಲವಲ್ಲ, ಅದೇನು ಮಾಡ್ತೀರೋ ಗೊತ್ತಿಲ್ಲ ಮೊದಲು ಸಿಟಿಯಿಂದ ಅರ್ಧ ಗಂಟೆಯಲ್ಲಿ ಅಲ್ಲಿಗೆ ಹೋಗುವಂತೆ ಒಂದು ರಸ್ತೆ ಮಾಡಿ. ಬೆಂಗಳೂರು ತುಂಬ ರಸ್ತೆಗಳು ಕಿರಿದಾಗಿದೆ. ನೀವು ಮೆಟ್ರೋ, ಮೊನೋ ಇತ್ಯಾದಿ ರೈಲುಗಳನ್ನು ಬಿಡುವ ಮೊದಲು ಫ್ಲೈ ಓವರ್‌ಗಳನ್ನು ಮಾಡಿ. ನಮಗೂ ಈ ಟ್ರಾಫಿಕ್‌ನಲ್ಲಿ ನಿಂತುನಿಂತು ರೋಸೊತ್ತು ಹೋಗಿದ್ದೇವೆ.

ನಮ್ಮ ಇಂಟರ್‌ನ್ಯಾಷನಲ್ ಗ್ರಾಹಕರು ಬೆಂಗಳೂರಿಗೆ ಬಂದರೆ ಎಂಥ ಪರದಾಟ ನಿಮಗೆ ಗೊತ್ತೆ? ಮೂರು-ನಾಲ್ಕು ಗಂಟೆ ಟ್ರಾಫಿಕ್‌ನಲ್ಲಿ ಅವರು ಸಿಕ್ಕಿ ಬಿದ್ದರೆ ಬ್ಯಾಂಗಲೂರ್‌ನ ಇಮೇಜ್‌ನ ಗತಿಯೇನು?

ನಾವು ನಮ್ಮ ಬಿಜಿನೆಸ್ ಬೆಳೆಸಲು ಯತ್ನಿಸುತ್ತಿದ್ದೇವೆ. ಆದರೆ ನಿಮ್ಮ ಕಡೆಯಿಂದ ಬೆಂಬಲ ಇಲ್ಲ. ನಮಗೆ ಭೂಮಿ ಬೇಕು. ನಾವೇ ತೆಗೆದುಕೊಳ್ಳೋಣ ಎಂದರೆ ಭೂಮಿ ಎಲ್ಲಿದೆ? ನೀವು ಸರ್ಕಾರದವರು ರೈತರ ಭೂಮಿ ನೋಟಿಫೈ ಮಾಡಿ ನಮಗೆ ಕೊಡಿ. ಆ ರೈತರಿಗೆ ಅದೇನು ಸರ್ಕಾರಿ ಲೆಕ್ಕದಲ್ಲಿ ಕೊಡಬೇಕೋ ಕೊಡಿ. ನಾವು ದೇಶಸೇವೆಯ ಕೆಲಸ ಮಾಡುತ್ತಿರುವುದರಿಂದ ಭೂಮಿಗೆ ನಮ್ಮಿಂದ ಬೆಲೆ ಪಡೆದುಕೊಳ್ಳಬೇಡಿ. ತೆಗೆದುಕೊಂಡರೂ ನಾಮಿನಲ್ ಆಗಿ ಅದೇನು ಆಗುತ್ತದೋ ಕೊಡ್ತೀವಿ ಬಿಡಿ.

ಅದ್ಯಾಕೆ ನೀವು ಬ್ಯಾಂಗಲೂರನ್ನು ಬೆಂಗಳೂರು ಮಾಡಲು ಹೊರಟಿದ್ದೀರಿ. ಅದೆಲ್ಲ ಬೇಡ. ಬ್ಯಾಂಗಲೂರೇ ಚೆನ್ನಾಗಿದೆ. ಅದನ್ನೇ ಉಳಿಸಿಕೊಳ್ಳೋಣ. ಕನ್ನಡ, ಕನ್ನಡ ಅಂಥ ದಯಮಾಡಿ ತಲೆತಿನ್ನಬೇಡಿ. ಇದು ಇಂಗ್ಲಿಷ್ ಯುಗ. ಬೆಂಗಳೂರು ಸಂಪೂರ್ಣ ಇಂಗ್ಲಿಷ್ ಸಿಟಿಯಾಗಬೇಕು. ನಿಮ್ಮ ಸರ್ಕಾರಿ ಶಾಲೆಯಲ್ಲಿ ಕನ್ನಡ ಕಲಿಸುವ ಬದಲು ಇಂಗ್ಲಿಷ್ ಕಲಿಸಿ. ದೇಶ ಉದ್ಧಾರವಾಗುತ್ತದೆ.

ಕನ್ನಡಿಗರಿಗೆ ಉದ್ಯೋಗ ಅದೂ, ಇದೂ ಎಂದು ಹಿಂಸೆ ಕೊಡಬೇಡಿ. ನಾವು ಅರ್ಹತೆ, ಯೋಗ್ಯತೆ ಮೇಲೆ ಕೆಲಸ ಕೊಡುವವರು. ಕನ್ನಡಿಗರಿಗೆ ಅರ್ಹತೆ, ಯೋಗ್ಯತೆ ಇಲ್ಲದಿದ್ದರೆ ನಾವೇನು ಮಾಡೋದು? ಬೇರೆ ರಾಜ್ಯಗಳಿಂದ ಕರೆದುಕೊಂಡು ಬಂದು ಉದ್ಯೋಗ ಕೊಡ್ತೀವಿ.

ಸಣ್ಣ ಪುಟ್ಟ ಕೆಲಸಗಳು, ಉದಾಹರಣೆಗೆ ಕ್ಯಾಟರಿಂಗ್, ಸೆಕ್ಯುರಿಟಿ, ಮೇಟೇಂನೆನ್ಸ್ ಇತ್ಯಾದಿ ಕೆಲಸಗಳಿಗೆ ನಾವು ಹೊರರಾಜ್ಯದ ಸಂಸ್ಥೆಗಳಿಗೆ ಗುತ್ತಿಗೆ ಕೊಡ್ತಿವಿ. ಯಾಕೆಂದರೆ ಲೋಕಲ್‌ನವರಾದರೆ ಕಿರಿಕ್ಕು. ಹಾಗಾಗಿ ಡಿ ದರ್ಜೆಯ ನೌಕರಿಯೆಲ್ಲ ಬೇರೆ ರಾಜ್ಯದವರಿಗೆ ಸಿಗುತ್ತದೆ. ಬೇಜಾರು ಮಾಡಿಕೊಳ್ಳಬೇಡಿ, ಅಡ್ಜಸ್ಟ್ ಮಾಡ್ಕೊಳ್ಳಿ.

ಬೆಂಗಳೂರಿನಲ್ಲಿ ಆಗಾಗ ಕನ್ನಡ ಸಂಘದವರು, ದಲಿತರು ಪ್ರತಿಭಟನೆ, ಧರಣಿ ಮಾಡ್ತಾರೆ. ಅವರಿಗೆಲ್ಲ ಬೆಂಗಳೂರಿನ ಹೊರಗೆ ಸ್ವಲ್ಪ ಜಾಗ ಮಾಡಿಕೊಡಿ. ಅಲ್ಲಿ ಧರಣಿ ಮಾಡಿಕೊಂಡಿರಲಿ. ಈ ಪ್ರತಿಭಟನೆಗಳಿಂದ ಟ್ರಾಫಿಕ್ ಜಾಮ್ ಆದರೆ ಎಂಥ ಹಿಂಸೆ ಗೊತ್ತಾ? ಹಾಗೆ ಆಗಾಗ ಬಂದ್ ಕರೆ ಕೊಡುವವರನ್ನು ಜೈಲಿಗೆ ಹಾಕಿ. ನಮಗೆ ಒಂದು ದಿನ ಕೆಲಸ ನಿಲ್ಲಿಸಿದರೆ ಎಷ್ಟು ಕೋಟಿ ಡಾಲರ್ ಲಾಸ್ ಆಗುತ್ತೆ ಗೊತ್ತಾ?

ಹೌದಲ್ಲವೇ? ಈ ಐಟಿ-ಬಿಟಿಯವರು ಹೀಗೇ ಮಾತನಾಡುತ್ತಾರೆ ಅಲ್ಲವೆ? ಅಲ್ಲಿ ಮೀಸಲಾತಿ ಕೊಡೋದು ತಪ್ಪು, ಮಕ್ಕಳಿಗೆ ಕನ್ನಡ ಕಲಿಸೋದೇ ತಪ್ಪು ಎನ್ನುವ ನಾರಾಯಣಮೂರ್ತಿ ಥರದ ಪ್ರೆಸಿಡೆಂಟ್ ಆಫ್ ಇಂಡಿಯಾ ಕ್ಯಾಂಡಿಡೇಟುಗಳಿರುತ್ತಾರೆ. ಯು.ಆರ್.ಅನಂತಮೂರ್ತಿ ಯಾರು ಎಂದು ಪ್ರಶ್ನಿಸಿದ ತಲೆತಿರುಕ ಬಿಟಿ ದೊರೆಸಾನಿಯಂಥವರಿರುತ್ತಾರೆ. ನಿಲೇಕಣಿ, ಮೋಹನ ದಾಸ ಪೈ, ಫಣೀಶ್ ರಂಥ ಇಂಟರ್‌ನ್ಯಾಷನಲ್ ಫಿಗರ್‌ಗಳಿರುತ್ತಾರೆ. ಅವರೆಲ್ಲ ಮಾತನಾಡುವ ಧಾಟಿಯೇ ಇದು.

ನಮ್ಮ ಮುಖ್ಯಮಂತ್ರಿಗಳು ಹಳ್ಳಿಗಾಡಿನಿಂದ ಬಂದವರು. ಅವರಿಗೆ ಬಡವರ ಭಾಷೆ ಗೊತ್ತು, ರೈತರ ಭಾಷೆ ಗೊತ್ತು. ಅಮೆರಿಕನ್ ಅಕ್ಸೆಂಟ್‌ನಲ್ಲಿ ಇಂಗ್ಲಿಷ್ ಮಾತನಾಡಲು ಅವರಿಗೆ ಬರುವುದಿಲ್ಲ. ಐಟಿ-ಬಿಟಿಯವರ ಇಂಥ ಮಾತುಗಳಿಗೆ ಅವರೇನು ಹೇಳಬೇಕು ಎಂದು ನೀವು ನಾವು ಬಯಸುತ್ತೇವೆ ಗೊತ್ತೆ?

“ಅಮೆರಿಕದಿಂದ ಈಗಷ್ಟೆ ಎದ್ದು ಬಂದಿರುವ ನನ್ನ ಐಟಿ ಸ್ನೇಹಿತರೆ,

ನಿಮ್ಮ ಮಾತುಗಳನ್ನೆಲ್ಲ ಕೇಳಿದೆ. ಒಂದು ವಿಷಯ ನಿಮಗೆ ಗೊತ್ತಿರಲಿ ಕರ್ನಾಟಕ ಅಂದರೆ ಬೆಂಗಳೂರು ಮಾತ್ರವಲ್ಲ. ನಾನು ಇಡೀ ರಾಜ್ಯದ ಮುಖ್ಯಮಂತ್ರಿ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಎಂಬುದು ಗೊತ್ತು. ರಸ್ತೆಗಳ ಸಮಸ್ಯೆಯೂ ಗೊತ್ತು. ಹಾಗೆಂದ ಮಾತ್ರಕ್ಕೆ ರಾಜ್ಯದ ಪೂರ್ತಿ ಬಜೆಟ್ಟನ್ನು ಬೆಂಗಳೂರಿಗೆ ಸುರಿಯಲು ಸಾಧ್ಯವಿಲ್ಲ.

ಬೆಂಗಳೂರಿನಲ್ಲಿ ಬರೀ ಐಟಿ-ಬಿಟಿಯವರು, ಕಾರ್ಪೊರೇಟ್ ಕಂಪೆನಿಗಳ ಕೋಟ್ಯಧೀಶರಷ್ಟೆ ಇಲ್ಲ. ಇಲ್ಲಿ ಅಂದಿನ ಬದುಕನ್ನು ಸಾಗಿಸಲು ಒದ್ದಾಡುವ ಮಧ್ಯಮವರ್ಗದವರಿದ್ದಾರೆ. ಆಟೋ ಚಾಲಕರು, ತರಕಾರಿ ಮಾರುವವರು, ಕ್ಲರ್ಕುಗಳು, ಗಾರ್ಮೆಂಟ್ಸ್‌ಗಳು-ಖಾಸಗಿ ಕಂಪೆನಿಗಳಲ್ಲಿ ದುಡಿದು ಹೈರಾಣಾಗುವ ಹೆಣ್ಣುಮಕ್ಕಳು, ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಸರ್ಕಾರಿ ನೌಕರಿ ಮಾಡುವವರು, ಕೂಲಿ ಮಾಡುವವರು, ಸ್ಲಂಗಳಲ್ಲಿ ವಾಸ ಮಾಡುವವರು, ಭಿಕ್ಷೆ ಬೇಡುವವರು...ಹೀಗೆ ಎಲ್ಲ ತರಹದ ಜನರೂ ಇದ್ದಾರೆ. ಅವರ ಸಮಸ್ಯೆಗಳನ್ನೂ ನಾನು ಕೇಳಬೇಕಲ್ಲವೆ?
ಒಂದು ಹೊತ್ತಿನ ಊಟಕ್ಕೆ ಪರದಾಡುವವರ ಸಮಸ್ಯೆಯ ನಡುವೆ ನಿಮ್ಮ ಟ್ರಾಫಿಕ್ ಜಾಮ್ ಸಮಸ್ಯೆ ಎಷ್ಟು ಚಿಕ್ಕದು ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಬೇಕಲ್ಲವೆ? ಹಾಗೆ ನೋಡಿದರೆ ಬೆಂಗಳೂರಿನ ರಸ್ತೆಗಳು ನೀವು ಹೇಳುವಷ್ಟು ಹಾಳುಬಿದ್ದು ಹೋಗಿಲ್ಲ. ಒಮ್ಮೆ ದೇಶದ ಬೇರೆ ನಗರಗಳನ್ನು ಸುತ್ತಿ ಬನ್ನಿ. ಬೇರೇನೂ ಬೇಡ. ದೇಶದ ರಾಜಧಾನಿ ದೆಹಲಿಯೇ ಕೊಳಕು. ಬೆಂಗಳೂರಿಗೆ ನೀವೆಲ್ಲ ಯಾಕೆ ಮುತ್ತಿಕೊಂಡಿದ್ದೀರಿ ಎಂದರೆ ಈ ನಗರ ಒಂಥರಾ ಹವಾನಿಯಂತ್ರಿತ ಕೊಠಡಿ ಇದ್ದ ಹಾಗೆ ಇದೆ. ಇಲ್ಲಿನ ಪರಿಸರ, ಹವಾಮಾನ ಎಲ್ಲೂ ಸಿಗೋದಿಲ್ಲ. ಇಲ್ಲಿನ ಜನರೂ ಒಳ್ಳೆಯವರು. ನಿಮಗೆ ಇದುವರೆಗೆ ಕಾಟ ಕೊಟ್ಟವರಲ್ಲ.

ನೀವು ಬಳಸುತ್ತಿರುವ ಭೂಮಿ ಇಲ್ಲಿನ ರೈತರದ್ದು. ಅವರ ಬೆವರಿನ ಶ್ರಮವೂ ನಿಮ್ಮ ಕಂಪೆನಿಗಳಲ್ಲಿ ಸೇರಿ ಹೋಗಿದೆ. ಅವರಿಗೆ ಕೊಟ್ಟಿರುವುದು ಕವಡೆ ಕಿಮ್ಮತ್ತು ಅಷ್ಟೆ, ನೆನಪಿನಲ್ಲಿರಲಿ. ಮೊನ್ನೆ ಮೊನ್ನೆ ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಂಡರಲ್ಲ. ಆ ವಿಷಯ ನಿಮ್ಮ ಗಮನಕ್ಕೆ ಬರಲಿಲ್ಲವೆ? ದಿನಕ್ಕೆ ಕೋಟಿ ಡಾಲರ್‌ಗಳ ಲೆಕ್ಕದಲ್ಲಿ ದುಡಿಯುವ ನೀವು ರೈತರ ಒಳಿತಿಗೆ ಏನನ್ನಾದರೂ ಕೊಡಬಹುದಿತ್ತಲ್ಲವೆ? ಒಂದು ನೆನಪಿನಲ್ಲಿಟ್ಟುಕೊಳ್ಳಿ, ನಿಮಗೆ ಇನ್ನು ರೈತರ ಭೂಮಿ ಕಿತ್ತು ಕೊಡುವುದಿಲ್ಲ. ನಿಮಗೆ ಭೂಮಿ ಬೇಕೆಂದರೆ ಸ್ಪರ್ಧಾತ್ಪಕ ಮಾರುಕಟ್ಟೆಯಲ್ಲಿ ಏನು ಬೆಲೆಯಿದೆಯೋ ಅದನ್ನು ಕೊಟ್ಟು ಕೊಂಡುಕೊಳ್ಳಿ, ಅದೂ ಯಾವ ಬಲವಂತವೂ ಇಲ್ಲದೆ.

ನಿಮಗೆ ತೆರಿಗೆ ರಜೆ, ವಿನಾಯಿತಿ, ನಿರಂತರ ವಿದ್ಯುತ್... ಇತ್ಯಾದಿ ಏನನ್ನೂ ಕೇಳಬೇಡಿ. ಬೆಂಗಳೂರಿನಲ್ಲೇ ಬೆಳೆದಿದ್ದೀರಿ. ಇನ್ನು ಯಾವ ವಿನಾಯಿತಿಯೂ ಇಲ್ಲ. ಇನ್ನೇನಿದ್ದರೂ ಸರ್ಕಾರದ ಜತೆ ಕೈಜೋಡಿಸುವುದನ್ನು, ಸಂಕಷ್ಟಗಳ ಸಂದರ್ಭದಲ್ಲಿ ಸಹಾಯಕ್ಕೆ ಬರುವುದನ್ನು ಕಲಿಯಿರಿ.
ಮಕ್ಕಳಿಗೆ ಯಾವ ಭಾಷೆಯ ಮಾಧ್ಯಮದಲ್ಲಿ ಕಲಿಸಬೇಕು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಇದು ಕನ್ನಡ ನಾಡು. ಇಲ್ಲಿ ಕನ್ನಡವೇ ಕಡ್ಡಾಯ. ನಮ್ಮ ಮಕ್ಕಳು ಇಂಗ್ಲಿಷ್ ಕಲಿಯುವುದು ಹಾಗಿರಲಿ, ನೀವು ಮೊದಲು ಕನ್ನಡ ಕಲಿಯಿರಿ, ಕಲಿಯದಿದ್ದರೆ ಇಲ್ಲಿಂದ ತೊಲಗಿ ಹೋಗಿ.

ಕನ್ನಡ ಸಂಘದವರು, ದಲಿತ ಸಂಘದವರು ಪ್ರತಿಭಟನೆ ಮಾಡಿದರೆ ಮೂಗು ಮುರಿಯುವುದನ್ನು ಬಿಡಿ. ಅದು ಅವರ ಹಕ್ಕು. ಬಂದ್ ಆದಾಗ ಸಮಸ್ಯೆಯಾದರೆ ಭಾನುವಾರ ಕೆಲಸ ಮಾಡಿ ನಿಮ್ಮ ನಷ್ಟ ತುಂಬಿಸಿಕೊಳ್ಳಿ.

ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ ನಿಮ್ಮ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಕೆಲಸ ಕೊಡಿ, ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿ ಕೊಡಿ. ಇದು ನಿಮ್ಮ ಕರ್ತವ್ಯ. ಕನ್ನಡಿಗರ ಯೋಗ್ಯತೆ ಬಗ್ಗೆ ಮಾತನಾಡಿದರೆ ಕಪಾಳಕ್ಕೆ ಬಾರಿಸುವ ಜನರಿದ್ದಾರೆ ಎಚ್ಚರಿಕೆ. ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಹೊರರಾಜ್ಯಗಳಿಂದ ಜನರನ್ನು ಕರೆಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ.

ಈ ರಾಜ್ಯದ ನೆಲ, ಜಲ, ವಿದ್ಯುತ್, ಜನ ಎಲ್ಲವನ್ನೂ ಬಳಸಿಕೊಳ್ಳುತ್ತಿದ್ದೀರಿ. ಅನ್ನದ ಋಣ ನಿಮ್ಮ ಮೇಲಿದೆ. ಆ ಋಣ ತೀರಿಸಲಾದರೂ ಈ ರಾಜ್ಯಕ್ಕೆ ಏನನ್ನಾದರೂ ಮಾಡಿ. ರೈತರ ಹೆಸರಿನಲ್ಲಿ ಒಂದು ನಿಧಿ ಸ್ಥಾಪಿಸಿ, ಒಂದಷ್ಟು ಶಾಲೆಗಳನ್ನು ದತ್ತು ತೆಗೆದುಕೊಳ್ಳಿ. ಒಂದಷ್ಟು ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಿ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇಂತಿಷ್ಟು ಹಣ ಎತ್ತಿಡಲು ನಿರ್ಧಾರ ಮಾಡಿ.

ಇದ್ಯಾವುದನ್ನೂ ಮಾಡದೆ, ಬೆಂಗಳೂರನ್ನು ಹುಟ್ಟಿಸಿದವರೇ ನಾವು ಎಂದು ಫೋಜು ಕೊಡಬೇಡಿ.

ನಮ್ಮ ಮುಖ್ಯಮಂತ್ರಿಗಳು ಹೀಗೆಲ್ಲ ಮಾತನಾಡಬೇಕು, ಐಟಿ-ಬಿಟಿ ಧಣಿಗಳ ಕಿವಿ ಹಿಂಡಬೇಕು ಎಂಬ ಆಸೆ. ಯಡಿಯೂರಪ್ಪನವರು ಹೀಗೆಲ್ಲ ಮಾತನಾಡುವರೆ?

No comments: