Saturday, March 17, 2012

ಗಂಧ


ತೇಯುತ್ತಲೇ ಇದ್ದೇನೆ
ದೇಹಕ್ಕೆ ಆತ್ಮ...
ನುಣುಪು ನುಣುಪಾಗಿ
ಗಂಧದಂತೆ ಏನೋ ಹೊರಡುತ್ತಿದೆ
ಹಣೆಗೆ ಹಚ್ಚಿಕೊಳ್ಳಬೇಕು...

ನಿನ್ನ ಪಾದದ ಹೆಬ್ಬೆರಳು ಸ್ಪರ್ಶಿಸಬೇಕು
ಅಲ್ಲಿ ಚಕ್ರದಂತೆ ಸುಳಿಸುಳಿ ಸುತ್ತಬೇಕು
ಸಣ್ಣ ಬೆವರಿನ ಕಣವ ತಂದು ಎದೆಗಂಟಿಸಿಕೊಳ್ಳಬೇಕು
ಎದೆಯ ಸಾವಿರ ಕೋಗಿಲೆಗಳಿಗೆ ಗಂಟಲಾಗಬೇಕು

ಅರೆಕ್ಷಣವಾದರೂ ಸೈ
ಹೆಣ್ಣಾಗಬೇಕು
ಮುಡಿಯಲ್ಲಿ ನಿನ್ನ ಮುಖ ಹುದುಗಿಸಿ ಮಗುವಾಗಿಸಬೇಕು
ಮಡಿಲಲ್ಲಿ ಜಿನುಗಿಸಿ ನಿನ್ನ ಕಣ್ಣಾಗಬೇಕು
ಮೊಲೆಯೂಡಿಸಿ ನಿನ್ನ ಒಡಲಾಗಬೇಕು

ಬೆನ್ನ ಮೇಲೆಲ್ಲ
ನೀನು ಬರಸೆಳೆದು ಗೀರಿದ ಗುರುತು
ಪ್ರತಿ ಗಾಯದಲ್ಲೂ
ನಾನು ಮತ್ತೆ ಮತ್ತೆ ಹುಟ್ಟಿದ್ದೇನೆ

ತೇಯುತ್ತಲೇ ಇದ್ದೇನೆ
ದೇಹಕ್ಕೆ ಆತ್ಮ
ಗಂಧದಂತೆ ಹೊರಟಿದ್ದು ನೀನಾ?
ತೇಯ್ದು ತೇಯ್ದು ದೇಹವೂ ಆತ್ಮವೂ ಅಳಿದಾಗ
ಉಳಿಯುವುದು ಬರಿಯ ನೀನೇನಾ?
ಅಥವಾ ನೀನೆಂಬ ನಾನಾ?

ಅಗೋ,
ಮಿಂಚುಹುಳದ ಗರ್ಭದಲ್ಲಿ
ಚಂದಿರ ಹುಟ್ಟುತ್ತಿದ್ದಾನೆ
ಬಾ, ಅವನಿಗೊಂದು ಹೆಸರು ಇಡೋಣ

2 comments:

Sushrutha Dodderi said...

ಓದ್ತಿದ್ದೇನೆ ಸ್ವಾಮಿ.. ಕಮೆಂಟಿಸಲಿಕ್ಕೆ ಆಗ್ತಿಲ್ಲ. ಚೆನ್ನಾಗಿವೆ ಎಲ್ಲ ಕವಿತೆಗಳೂ.

shivu.k said...

ಕವನ ಅರ್ಥಗರ್ಭಿತವಾಗಿ ತುಂಬಾ ಚೆನ್ನಾಗಿದೆ.