ಮತ್ತೆ ಈ ಅವಿಧೇಯ ದೇಹ
ನನ್ನ ಮಾತು ಕೇಳುತ್ತಿಲ್ಲ
ಅವಳೆನ್ನುತ್ತಾಳೆ:
ಮನಸ್ಸು-ದೇಹ ಕೂಡಿಸಬೇಕು ಕಣೋ
ಕೂಡುವ ಕ್ಷಣದಲ್ಲಿ
ಜಗತ್ತು ನಮ್ಮ ಕಣ್ಣಲ್ಲಿ
ಮತ್ತೆ ಹುಟ್ಟಬೇಕು
ವೀಣೆಯ ತಂತಿ ಬಿಗಿ ಮಾಡಿ
ನಾದ ಹೊಮ್ಮಿಸಬೇಕು
ರಾಗ ವೀಣೆಯಾಗಿ, ವೀಣೆ ರಾಗವಾಗಿ
ಬದಲಾಗಬೇಕು
ಇಲ್ಲ,
ಅದು ಸಾಧ್ಯವಿಲ್ಲವೆನ್ನುತ್ತಿದೆ ದೇಹ
ಅವಳ ನೀಳ ಬೆರಳ ಕಂಡಾಗಲೆಲ್ಲ
ಕೊರಳಸೆರೆ ಬಿಗಿಯುತ್ತದೆ
ತೊಡೆಗಳಲ್ಲಿ ಕಂಪನ
ದೇಹ ಬಯಲು
ಮನಸು ಬೆತ್ತಲು
ಲಯವಾಗಿದ್ದು ಒಳಗಿನ ಕತ್ತಲು
ಹೌದು
ದೇಹ-ಮನಸು ಕೂಡಬೇಕು
ಜಗತ್ತು ಹುಟ್ಟದಿದ್ದರೂ ಚಿಂತೆಯಿಲ್ಲ;
ನಮ್ಮ ಸಾವನ್ನಾದರೂ ನಾವು ಹೆರಬೇಕು
No comments:
Post a Comment