Wednesday, July 15, 2009

ಮಳೆ ಎಂದರೆ...

ಮಳೆ ಎಂದರೆ...
ಏನೋ ಪಿಸುಗುಡಲು ಬಂದಂತೆ ಮೋಡಗಳೊಡಲು
ಏನೋ ಗುನುಗುಡಲು ಬಂದಂತೆ ಗಾಳಿಯ ಕಡಲು
ಅಮ್ಮನ ಕಸೂತಿಯ ಸ್ವೆಟರು
ಕಾಡಿ ಬೇಡಿದ ಮೇಲೆ ಅಪ್ಪ ಕೊಡಿಸಿದ ಬಣ್ಣದ ಛತ್ರಿ
ಮಂಡಿಯವರೆಗಿನ ಕಡುಗಪ್ಪು ಬೂಟು
ತಲೆಕಾಲಿನವರೆಗೆ ಹೊದ್ದ ರೇನ್‌ಕೋಟು
ಗೊಪ್ಪೆ, ಗೊರಗ;
ಮಳೆಗನ್ನೆಯರು ತೊಟ್ಟ ಪ್ಯಾಶ್ಲಿಕ್ಕಿನ ಹೊದಿಕೆ


(ಮಳೆಯಲ್ಲಿ ನೆನೆದು ತೊಪ್ಪೆಯಾಗಿರುವ ಸಕಲೇಶಪುರದ ಚಿತ್ರವಿದು. ಹೇಮಾವತಿ ಇಡೀ ಊರನ್ನೇ ಬಳಸಿ ತಬ್ಬಿ ಕೇಕೆ ಹೊಡೆಯುತ್ತಿದ್ದಾಳೆ.)

ಮಳೆ ಎಂದರೆ,
ಕಪ್ಪೆಗಳ ವಟವಟ
ಹಾವುರಾಣಿಯರ ಸರಸರ
ತಾತ ಆರಿದ್ದನ್ನೆ ಉರಿಸಿ ಸೇದುವ ನಝರ್ ಬೀಡಿ
ಸುಡುಸುಡು ಬೆಲ್ಲದ ಕಾಫಿ
ಅಮ್ಮ ಕೆಂಡದಲ್ಲಿ ಸುಡುವ ಗೇರು, ಹಲಸಿನಗಾಳು
ಗದ್ದೆಯಲ್ಲಿ ಸಿಕ್ಕಿಬೀಳುವ ಏಡಿ
ಹೊಳೆಯಲ್ಲಿ ಹರಿದುಬರುವ ಮರಳಿ ಮೀನು

ಮಳೆ ಎಂದರೆ
ಹಸಿಮಣ್ಣಿನ ಘಮದೊಂದಿಗೆ ಅರಳುವ ನೆನಪು
ನೀರಮನೆಯಲ್ಲಿ ಕಾದು ಕುಳಿತ ಪುಳಕದ ಬಿಸಿನೀರು
ಒಲೆಯ ಮುಂದೆ ಬಿಸಿಕಾಯಿಸಿಕೊಳ್ಳಲು ಚಾಚಿ ಸುಟ್ಟುಕೊಂಡ ಬೆರಳು
ಕೆಂಡ ಸುರಿದು, ಬಿದರಿನ ಬುಟ್ಟಿ ಮುಚ್ಚಿ
ಅದರ ಮೇಲೆ ಯೂನಿಫಾರ್ಮ್ ಹರಡಿ ಒಣಗಿಸುವಾಗ
ಎದ್ದು ಬರುವ ಹಸಿಹಸಿ ವಾಸನೆ

ಮಳೆ ಎಂದರೆ
ಪ್ರೇಮಿಯ ಎದೆನಡುಕ
ವಿರಹಿಯ ಒಡಲ ಉರಿ
ಮೊನಾಲಿಸಾಳ ನಗೆ
ಜಗಜಿತ್‌ನ ಗಜಲ್ಲು
ರಫಿಯ ಕವ್ವಾಲಿ
ಮುಖೇಶನ ದರ್ದ್‌ಭರೆ ಹಾಡು
ಎಲಿಯಟ್ಟನ ಕಾವ್ಯ
ಶೇಕ್ಸ್‌ಪಿಯರನ ನಾಟಕ

ಮಳೆ ಎಂದರೆ
ನನ್ನ ಚಿನ್ಮಯ ಸಂಗಾತಿಯ ಮುಂಗೈ
ಅವಳ ತಲೆಗೆ ಮೆತ್ತಿದ ಸೇವಂತಿಗೆಯ ಸುವಾಸನೆ
ಅವಳ ಶ್ವಾಸ, ಮೈಗಂಧ
ಗಮ್ಮೆನ್ನುವ ಮಡಿಲು

ಮಳೆ ಎಂದರೆ
ತುಡಿತ, ಜೀವ ಮಿಡಿತ
ರಾಗಸೆಳೆತ
ಮೋಹ, ಪ್ರೇಮ-ಕಾಮಗಳ ದಾಹ
ದೇಹಾತ್ಮಗಳ ಬಿಸಿಬಿಸಿ ಮಿಲನ
ನಿಟ್ಟುಸಿರ ವಿರಹ

ಮಳೆ ಎಂದರೆ
ಸುಖ
ಅದಮ್ಯ ಚೇತರಿಕೆಯ ಧನ್ವಂತರಿ

ಮಳೆ ಎಂದರೆ
ದುಃಖ
ಒಡಲ ಮೀಟುವ ವೇದನೆ
ಮಳೆ ಎಂದರೆ
ನೂರು ಮಕ್ಕಳ ಹೆತ್ತ ಗಾಂಧಾರಿಯ ಸ್ವಗತ
ಆಕಾಶದ ರವಿಕೆ
ಭುವಿಯು ಧರಿಸಿದ ನಿಲುವಂಗಿ
ಹಸಿರ ಜಾಥಾ


ಮಳೆ ಎಂದರೆ
ತ್ಯಾಗ
ಮಮಕಾರ
ಪ್ರಾಯ
ವಿಸ್ಮಯ
ಶೃಂಗಾರ

ಮಳೆ ಎಂದರೆ
ಭೂತ, ವರ್ತಮಾನ, ಭವಿಷ್ಯ

ಮಳೆ ಎಂದರೆ
ಅಧ್ಯಾತ್ಮ, ಜಗತ್ತು, ಬ್ರಹ್ಮಾಂಡ

ಮಳೆ ಎಂದರೆ ಮಳೆ
ನಾನು ಪ್ರೀತಿಸುವ ಮಳೆ
ನನ್ನ ದೇಹಾತ್ಮಗಳ ಹಣತೆಯಾದ ಮಳೆ
ನನ್ನ ಬದುಕಿನ ಮಳೆ
ನನ್ನ ಸಾವಿನ ಮಳೆ

ಮಳೆ ಎಂದರೆ
ನನ್ನ ಸಂಗಾತಿಯ ಬೆಚ್ಚನೆ ಮಡಿಲು.

(ನಮ್ಮೂರಲ್ಲಿ ಭರ್ಜರಿ ಮಳೆ. ಆಕಾಶ ಭೂಮಿ ಒಂದಾದ ಹಾಗೆ ಮಳೆ ಸುರಿಯುತ್ತಿದೆ ಎಂದು ಗೆಳೆಯರು ಹೇಳುತ್ತಿದ್ದಾರೆ. ಮಳೆ ಕುರಿತು ಹಿಂದೆ ಒಮ್ಮೆ ಬರೆದಿದ್ದ ಹರುಕು ಮುರುಕು ಬರೆಹ ಇಲ್ಲಿದೆ. ಇದು ಕವಿತೆಯಲ್ಲ; ಹೀಗಾಗಿ ತುಂಬಾ ವಾಚ್ಯವಾಯಿತು ಎಂದು ಗೆಳೆಯರು ಆರೋಪಿಸುವಂತಿಲ್ಲ.
ಮತ್ತೊಂದು ವಿಷಯ: ದೇಸೀಮಾತು ಬ್ಲಾಗ್‌ಗೆ ಇವತ್ತಿಗೆ (ಜು.೧೫) ಸರಿಯಾಗಿ ಒಂದು ವರ್ಷ. ಹಲವು ತಿಂಗಳ ಸೋಮಾರಿತನ, ಜಡತ್ವವನ್ನು ಕೊಡವಿಕೊಂಡು ಇನ್ನು ರೆಗ್ಯುಲರ್ ಆಗಿ ಬರೆಯುತ್ತೇನೆ ಎಂದು ನಿಮ್ಮೆಲ್ಲರನ್ನು ಬೆದರಿಸುತ್ತ, ನಮ್ಮೂರಿನ ಮಳೆಯಲ್ಲಿ ಮಳೆಯಾಗುವ ಕನಸಿನಲ್ಲಿ ಜಾರುತ್ತಿದ್ದೇನೆ.)

6 comments:

ಶ್ರೀನಿವಾಸಗೌಡ said...

ha haa.., alli male illi delhi yalli Seke, thumbaa hotte uritaaa ide dinesh...
kavete chenaagide....

booma said...

varshada kusu desimattige shubhashayagalu. e nimittha nevu barediruva ಮಳೆ ಎಂದರೆ padya kusina todalu nudiyanthide.hageye desimattu saha ಭೂತ, ವರ್ತಮಾನ, ಭವಿಷ್ಯ galanthirali

Anonymous said...

ವರ್ಷ ತುಂಬಿದ 'ದೇಸಿಮಾತು'ವಿಗೆ ಅಭಿನಂದನೆಗಳು. ದೇಸಿಮಾತುವನ್ನು ಮೆಚ್ಚಲಿಕ್ಕೆ ಅನೇಕ ಕಾರಣಗಳಿವೆ, ಕನ್ನಡದ ಉಳಿದ ಬ್ಲಾಗುಗಳಂತೆ ಅಡ್ಡಗೋಡೆಯ ಮೇಲೆ ದೀಪವಿಡುವ ಬರಹಗಳು ಇಲ್ಲಿ ಪ್ರಕಟಗೊಂಡಿದ್ದನ್ನು ನಾನು ಕಾಣೆ. ಸನಾತನಿಗಳ ನಾಲಿಗೆ ಪ್ರದರ್ಶನ ಮತ್ತವರ ವಿಕೃತ ತೆವಲುಗಳಿಗೆ ಕನ್ನಡದ ಅನೇಕ ಬ್ಲಾಗುಗಳು ಸಿಕ್ಕಿ ಚಿಂದಿಯಾಗಿವೆ. ವಸ್ತುನಿಷ್ಠ ಸತ್ಯ ಹೇಳುವಲ್ಲಿ 'ದೇಸಿಮಾತು' ಯಾವತ್ತೂ ಮುಂದಿದೆ. ಇವತ್ತೂ ಒಂದು ಹೊಸ ತಂತ್ರಜ್ಞಾನ, ಒಂದು ಮಾಧ್ಯಮ, ಒಂದು ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿರುವ ವರ್ಗ ಹೇಗೆ ವರ್ತಿಸುತ್ತದೆ ಅನ್ನುವುದಕ್ಕೆ ಕನ್ನಡದ ಅಗ್ರಹಾರದ ಸನಾತನ ಪಿಂಡಗಳ ಬ್ಲಾಗುಗಳಿಗಿಂತ ದೊಡ್ಡ ಉದಾಹರಣೆ ಬೇಕೇ? ಸೋಗಲಾಡಿಗಳಿಗಿಂತ ಇವತ್ತೂ ಪ್ರಾಮಾಣಿಕರು ಚೀರಬೇಕಾದ ಅನಿವಾರ್ಯವಿದೆ. ಅನೇಕ ಸಲ ದಿನೇಶ್ ನನ್ನಂಥ ಅನೇಕರ ಕೂಗುಗಳ ಪ್ರತಿನಿಧಿಯಂತೆ ತಮ್ಮ ಲೇಖನಗಳನ್ನು ಬರೆದಿದ್ದಾರೆ. ಮಲ್ನಾಡ್ ಮೆಹಬೂಬ್ರಂತಹ ಮನಸ್ಸುಗಳನ್ನು 'ದೇಸಿಮಾತು'ವಿನಲ್ಲಿ ಮಾತ್ರ ಕಾಣಲು ಸಾಧ್ಯ, ಇಂಥವರ ಸಂಖ್ಯೆಗಳನ್ನು ಹೆಚ್ಚಿನ ಮಟ್ಟದಲ್ಲಿ ಕಲೆಹಾಕುವ ಕೆಲಸಗಳನ್ನು ದಿನೇಶ್ ಇನ್ನೂ ತೀವ್ರಗೊಳಿಸಲಿ. ನಮ್ಮ ಅಂತಃಕರಣದ ಸಂವೇದನೆಗಳನ್ನು ಇನ್ನಷ್ಟು ಚೂಪುಗೊಳಿಸುವ ಬರೆಹಗಳು ದೇಸಿಮಾತುವಿನಲ್ಲಿ ಹೆಚ್ಚು ಪ್ರಕಟಗೊಳ್ಳಲಿ.

K.L.Chandrashekhar aijoor

sunaath said...

ಇದು ನೆನಪುಗಳ ಮಳೆಯೂ ಹೌದು. ಬೇಂದ್ರೆ ಮಾತಿನಲ್ಲಿ ಹೇಳುವದಾದರೆ, ’ಇದು ಬರಿ ಮಳೆಯಲ್ಲೊ ಅಣ್ಣಾ!’
ಹೇಮಾವತಿಯ ಫೋಟೋ ತುಂಬಾ ಚೆನ್ನಾಗಿದೆ.

ದಿನೇಶ್ ಕುಮಾರ್ ಎಸ್.ಸಿ. said...

ಗೌಡ್ರೆ,
ಥ್ಯಾಂಕ್ಸ್, ನಿಜ ಹೇಳ್ಬೇಕು ಅಂದ್ರೆ ನಾನೂ ಸಹ ಈ ಬಾರಿಯ ಮಳೆ ಮಿಸ್ ಮಾಡಿಕೊಂಡೆ.
ಇಲ್ಲಿ ಬೆಂಗಳೂರಿನಲ್ಲಿ ಆಗಾಗ ತುಂತುರು ಅಷ್ಟೆ. ಊರಿನಲ್ಲಿ ಜಡಿಮಳೆ. ಹೋಗೋಣೆ ಅಂದರೆ ಒಂದು ಸಣ್ಣ ಆಕ್ಸಿಡೆಂಟ್, ಒಂದು ಸಣ್ಣ ಗಾಯ.
ಅದು ಮಾಯುವ ಹಾಗೆ ಕಾಣುತ್ತಿಲ್ಲ. ಹುಡುಗರು ಊರಿಂದಲೇ ವರದಿ ಕೊಡ್ತಿದ್ದಾರೆ.
ಇವತ್ತು ಆಜಾದ್ ರೋಡಿಗೆ ನೀರು ಬಂತು, ಬೆಳಿಗ್ಗೆ ಹೊಳೆ ಮಲ್ಲೇಶ್ವರನ ದೇವಸ್ಥಾನ ಮುಳುಗಿತು, ಸ್ಕೂಲಿಗೆ ರಜೆ.. ಇತ್ಯಾದಿ ಇತ್ಯಾದಿ
ಮಳೆ ಅಂದರೆ ಎಂಥ ವಿಸ್ಮಯ ಅಲ್ವಾ?

ಬೂಮ,
ಧನ್ಯವಾದಗಳು. ನಿಮ್ಮ ಜತೆಗಾರಿಕೆ ಹೀಗೇ ಇರಲಿ.

ದಿನೇಶ್ ಕುಮಾರ್ ಎಸ್.ಸಿ. said...

ಚಂದ್ರಶೇಖರ್,
ನಿಮ್ಮ ಅಭಿಪ್ರಾಯಗಳಿಗೆ ಥ್ಯಾಂಕ್ಸ್.
ಈ ಬ್ಲಾಗ್ ಆರಂಭಿಸಿದಾಗಿನಿಂದ ಹೊಸಮಿತ್ರರು, ಹೊಸ ಶತ್ರುಗಳು ಹುಟ್ಟಿಕೊಂಡರು.
ಅದು ಅನಿವಾರ್ಯ ಕೂಡ ಅಂತ ಈಗ ಅನಿಸಿದೆ. ಆ ಬಗ್ಗೆ ಬರೆದರೆ ಅದೇ ಒಂದು ಕತೆ.
ಪ್ರತಿರೋಧಗಳಿದ್ದಾಗಲೇ ಹೆಚ್ಚು ಬರೆಯಲು ಸಾಧ್ಯವೇನೋ?
ಹಾಗೆಯೇ ನಿಮ್ಮಂಥವರು ಹೀಗೆ ಪ್ರೋತ್ಸಾಹದಾಯಕವಾಗಿ ಬರೆದರೆ ನಿಜಕ್ಕೂ ಹೊಸ ಹುಮ್ಮಸ್ಸು ಮೂಡುತ್ತದೆ.
ಮತ್ತೊಮ್ಮೆ ಥ್ಯಾಂಕ್ಸ್.

ಸುನಾಥ್,
ಥ್ಯಾಂಕ್ಸ್,
ಹೇಮಾವತಿಯ ಫೋಟೋ ನಿನ್ನೆ ಬೆಳಿಗ್ಗೆ ತೆಗೆದದ್ದು.
ಒಂದು ವಿಶೇಷ ಅಂದ್ರೆ ಸಕಲೇಶಪುರವನ್ನು ಹೇಮಾವತಿ ಮುಕ್ಕಾಲು ಭಾಗ ಸುತ್ತುವರಿದಿದ್ದಾಳೆ. ನೆರೆ ಬಂದರೆ ಇನ್ನೇನು ಊರೇ ಮುಳುಗುತ್ತೇನೋ ಅಂಥ ಭಯವಾಗ್ತಿತ್ತು ಚಿಕ್ಕವನಿದ್ದಾಗ.