ಗೆಳೆಯ ಮಲ್ನಾಡ್ ಮೆಹಬೂಬ್ ಬರೆದಿರುವ ಲೇಖನ ಇಲ್ಲಿದೆ. ನನ್ನನ್ನು ತೀವ್ರವಾಗಿ ಕಾಡಿದ್ದು`ಇವರ ಮುಂದೆ ಪ್ರಾಮಾಣಿಕವಾಗಿ ನಮ್ಮ ತಲೆ ಕಡಿದು ಅವರ ಪಾದದ ಮೇಲಿಟ್ಟರೂ, ಇದು ಎಳನೀರು ಚಿಪ್ಪು' ಎಂದು ವಾದಿಸುವವರ ಮುಂದೆ ಜಾಗೃತರಾಗಿ ಬದುಕುವುದನ್ನು ಅರ್ಥಮಾಡಿಕೊಳ್ಳಬೇಕು. ಎಂಬ ಸಾಲುಗಳು.
ಇಂಥ ಸಂದರ್ಭಗಳಲ್ಲಿ ಹಿಂದೆಮುಂದೆ ನೋಡದೆ ಬೀದಿಗಳಿಯುವ
ಮುಸ್ಲಿಂ ಗೆಳೆಯರಲ್ಲಿ ಈ ಲೇಖನ ಒಂದಷ್ಟು ವಿವೇಚನೆಯನ್ನೂ, ಕೋಮುವಾದಿ ಕೊಳಕರಲ್ಲಿ ನಾಚಿಕೆಯನ್ನೂ ಮೂಡಿಸಲಿ ಎಂಬುದು ನನ್ನ ಆಶಯ.
ಥಮಸ್......
ಪ್ರಖ್ಯಾತ ಕಾದಂಬರಿ ಥಮಸ್ ಜಗತ್ತಿಗೆ, ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮಾಜಕ್ಕೆ ಗಮನಾರ್ಹವಾದ ಸಂದೇಶವನ್ನು ನೀಡಿದೆ. ಹಂದಿಯ ದೇಹ ನಿಮ್ಮ ಮಸೀದಿಗೆ ಯಾರಾದರೂ ಹಾಕಿದರೆ ಇದು ಕೋಮು ಹಿಂಸೆಗೆ ಬಳಸಲಾಗಿರುವ ತಂತ್ರ ಎಂಬುದನ್ನು ಅರ್ಥಮಾಡಿಕೊಳ್ಳಿ. ಒಂದು ಪ್ರಾಣಿಯ ದೇಹದಿಂದ ಯಾವುದೆ ಧರ್ಮವು ಅಧರ್ಮವಾಗುವುದಿಲ್ಲ. ಧರ್ಮದ ಹೆಸರಿನಲ್ಲಿ ಜನರು ಸಮಾಜದಲ್ಲಿ ನೀಚ ಕೆಲಸ ಮಾಡಿದರೆ ಆಗ ಮಾತ್ರ ಧರ್ಮ ಮಲಿನವಾಗುತ್ತದೆ ಎಂದು ಅದು ವಿವರಿಸುತ್ತದೆ.
ಇಸ್ಲಾಂ ಏನು ಹೇಳುತ್ತೆ?
ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರರವರ ಅನುಮತಿ ಪಡೆದು ಅನ್ಯ ಧರ್ಮದ ವ್ಯಕ್ತಿಯೊಬ್ಬ, ರಾತ್ರಿ ಮಸೀದಿಯಲ್ಲಿ ತಂಗುತ್ತಾನೆ. ಬೆಳಿಗ್ಗೆ ಆತ ಮಸೀದಿಯಲ್ಲಿ ಹೇಸಿಗೆ ಮಾಡಿ ಹೋಗಿರುತ್ತಾನೆ. ಇದನ್ನು ಕಂಡ ಪ್ರವಾದಿಗಳು ತಮ್ಮ ಕೈಗಳಿಂದ ಹೇಸಿಗೆಯನ್ನು ಸ್ವಚ್ಛ ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ಹೀಗೆ ಮಾಡಬೇಕು ಎಂದು ಪ್ರವಾದಿಯವರು ಸೂಚಿಸಿರುವ ಧರ್ಮಬದ್ಧ ಪರಿಹಾರ ಇದೆಂದು ಧರ್ಮಕ್ಕೆ ಸಂಬಂಧಿಸಿದ ಗ್ರಂಥಗಳು ಹೇಳುತ್ತವೆ.
ಸ್ವಘೋಷಿತ ಧರ್ಮಪಾಲಕರು ಮಾಡುತ್ತಿರುವುದೇನು?
ಕೋಮು ಹಿಂಸಾಚಾರ ನಡಸಲು ಹಿಂದಿನಿಂದಲೂ ಬಳಸುತ್ತಿರುವ ಹಳಸಲು, ಸವಕಲು ತಂತ್ರಗಳಲ್ಲಿ ಒಂದು, ಹಂದಿ ದೇಹವನ್ನು ಮುಸ್ಲಿಂ ಪ್ರಾರ್ಥನಾ ಸ್ಥಳಗಳಲ್ಲಿ ಹಾಕುವುದು! ಇದನ್ನು ಕಂಡ ಮುಸ್ಲಿಮರು ರೊಚ್ಚಿಗೆದ್ದು ಬೀದಿಗಿಳಿದರೆ ಕೋಮುವಾದಿಗಳ ಯೋಜನೆಯನ್ನು ಸಫಲಗೊಳಿಸುವುದು. ಪ್ರಾಣ, ಆಸ್ತಿ-ಪಾಸ್ತಿ ಹಾಗು ನೆಮ್ಮದಿ ತಂತಾನೆ ಹಾಳಾಗುವುದು.
ದನ ತಿನ್ನೋರಿಗೆ ದನದ ಬುದ್ದಿ!
ವೇದ ಸುಳ್ಳಾದರು, ಗಾದೆ ಸುಳ್ಳಾಗದು ಎಂಬಂತೆ ಹಂದಿ ದೇಹ ಮಸೀದಿಗೆ ಹಾಕಿದ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಅನೇಕರು ದನದ ಬುದ್ಧಿ ತೋರಿಸುತ್ತಿರುವುದು ವಿಷಾಧಕರ. ಹಾಲು, ಮೊಸರು, ಬೆಣ್ಣೆಯನ್ನು ಮಾತ್ರ ತಿನ್ನುವರಿಗಿಂತ, ದನದ ಮಾಂಸ ತಿನ್ನುವರೆ ಹೆಚ್ಚು ಸಾಧನೆಗಳನ್ನು ಮಾಡಿರುವುದಕ್ಕೆ ಜಗತ್ತಿನ ಬಹುತೇಕ ವಿಜ್ಞಾನಿಗಳು, ಉದ್ಯಮಿಗಳು, ಚಿಂತಕರು ಉದಾಹರಣೆಯಾಗಿ ನಿಂತಿದ್ದಾರೆ. ಆದರೆ ಪ್ರಾರ್ಥನಾ ಸ್ಥಳಕ್ಕೆ ಮಲಿನ ಪ್ರಾಣಿಯನ್ನು ಕೋಮುವಾದಿಗಳು ದುರುದ್ದೇಶದಿಂದ ಹಾಕಿದಾಗ ಕೆಲವು ಮುಸ್ಲಿಂಮರು ದನಗಳಂತೆ ತಮ್ಮ ಬುದ್ಧಿಯನ್ನು ಶಾಂತಿ ವಿರೋಧಿಗಳಿಗೆ ಒಪ್ಪಿಸಿ ಅವರ ಷಡ್ಯಂತ್ರಕ್ಕೆ ತಕ್ಕಂತೆ ವರ್ತಿಸುವುದರ ಮೂಲಕ ದನ ತಿನ್ನುವವರಿಗೆ ದನದ ಬುದ್ಧಿ ಯೆಂಬ ಗಾದೆ ಮಾತನ್ನು ಎತ್ತಿ ಹಿಡಿಯುತ್ತಿದ್ದಾರೆ.
ಅರ್ಥವಾಗದ್ದು........
ಸಮಾಜದ ಶಾಂತಿಯನ್ನು ಕದಡುವ ಉದ್ದೇಶದಿಂದಲೇ ಮುಸ್ಲಿಮರನ್ನು ಪ್ರಚೋದಿಸಲು, ಕೋಮುಗಲಭೆ ಸೃಷ್ಟಿಸಿ, ಶಾಂತಿ ಪ್ರಿಯರ ಪ್ರಾಣ, ಆಸ್ತಿ, ಪಾಸ್ತಿ ನಷ್ಟ ಮಾಡಲು ಕಾರ್ಯತಂತ್ರ ರೂಪಿಸಿ ಪ್ರಾರ್ಥನಾ ಸ್ಥಳಗಳಲ್ಲಿ ಹಂದಿ ದೇಹ ಹಾಕಲಾಗುತ್ತದೆ ಎಂಬ ಈ ಸತ್ಯ ಇಡಿ ಸಮಾಜಕ್ಕೆ ತಿಳಿದಿದ್ದರೂ, ಇಂಥ ಸಂದರ್ಭದಲ್ಲಿ ಕಿಡಿಗೇಡಿಗಳ ಕಾರ್ಯ ತಂತ್ರಕ್ಕೆ ತಕ್ಕಂತೆ, ಮುಸ್ಲಿಂ ಜನಾಂಗದ ಕೆಲವರು ವರ್ತಿಸುವುದು ಏಕೆ? ಎಂಬುದು ಅರ್ಥವಾಗುವುದಿಲ್ಲ.
ಗಮನಿಸಬೇಕಾದ ಅಂಶ......
ದೇವನನ್ನು ನಂಬುವ, ಮಹಮ್ಮದ್ ಪೈಗಂಬರ್‌ರವರ ಜೀವನ ಕ್ರಮವನ್ನು ತಮ್ಮ ಜೀವನದ ದಿನನಿತ್ಯದ ಬದುಕಿನಲ್ಲಿ ಆಳವಡಿಸಿಕೊಂಡು ಬದುಕಿ, ಮುಕ್ತಿಕಾಣಲು ಬಯಸುವ ಮುಸ್ಲಿಮರು ಮಸೀದಿಗೆ ಮಲಿನ ಪ್ರಾಣಿಯ ದೇಹ ಹಾಕಿದಾಗ ಪ್ರವಾದಿಯ ನಡೆ ನುಡಿಯನ್ನು ಏಕೆ ಪಾಲಿಸುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದ್ದು ಇದು ತರ್ಕಕ್ಕೆ ಸಿಗುವಂಥದ್ದಲ್ಲ.
ಅರ್ಥಮಾಡಿಕೊಳ್ಳಬೇಕಾಗಿರುವುದು.......
ಇಲ್ಲಿ ಓಟಿಗಾಗಿ ದೇವರು ಧರ್ಮವನ್ನು ಬೀದಿಗೆ ತಂದು ಬೆತ್ತಲೆಗೊಳಿಸುವ ಖಾದಿಧಾರಿಗಳಿದ್ದಾರೆ. ಖಾದಿಯೂಳಗೆ ಬಚ್ಚಿಟ್ಟುಕೊಂಡಿರುವ ಕೋಮುವಾದಿಗಳಿದ್ದಾರೆ. ಒಂದು ಕೋಮಿನ ಕರಿ ಕೋಟು ಧರಿಸಿರುವ ಕಾನೂನು ಪಾಲಕರಿದ್ದಾರೆ. ಕೋಮುವಾದಿ ವ್ಯವಸ್ಥೆಯನ್ನು ಪ್ರತಿನಿಧಿಸುವ ಆಡಳಿತ ರಾಜ್ಯದಲ್ಲಿ ಜಾರಿಯಲ್ಲಿದೆ. ಇವರ ಮುಂದೆ ಪ್ರಾಮಾಣಿಕವಾಗಿ ನಮ್ಮ ತಲೆ ಕಡಿದು ಅವರ ಪಾದದ ಮೇಲಿಟ್ಟರೂ, ಇದು ಎಳನೀರು ಚಿಪ್ಪು ಎಂದು ವಾದಿಸುವವರ ಮುಂದೆ ಜಾಗೃತರಾಗಿ ಬದುಕುವುದನ್ನು ಅರ್ಥಮಾಡಿಕೊಳ್ಳಬೇಕು.
ಏನು ಮಾಡಬೇಕು?
ಮಲೀನ ಪ್ರಾಣಿಯ ದೇಹವನ್ನು ಮಸೀದಿಗೆ ಹಾಕಿದಾಗ ಪೋಲಿಸರಿಗೆ ವಿಷಯ ತಿಳಿಸಬೇಕು. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳ ಪರಿಶೀಲಿಸುವವರೆಗೆ ಯಾರು ಹತ್ತಿರಕ್ಕೆ ಹೋಗಬಾರದು. ಪೋಲಿಸರ ಮಾರ್ಗದರ್ಶನದಂತೆ ನಡೆದುಕೊಂಡು ಮಸೀದಿ ಸ್ವಚ್ಚಗೊಳಿಸುವುದು. ಮಾದ್ಯಮದವರಿಗೆ ವಿಷಯ ತಿಳಿಸುವುದು. ಇಂಥಹ ವಿಷಯಗಳಿಂದ ಏನೂ ಸಾಧಿಸಲು ಸಾದ್ಯವಾಗುವುದಿಲ್ಲ ಎಂಬುದನ್ನು ತಮ್ಮ ಮಾನಸಿಕ ಸ್ಥೈರ್ಯ ಹಾಗು ಧಾರ್ಮಿಕ ವಿಚಾರಧಾರೆಗಳ ಮೂಲಕ ಸಾಬೀತುಪಡಿಸುವುದು. ಪೊಲೀಸರ ಆಶ್ರಯದಲ್ಲಿ ಸೌಹಾರ್ದ ಸಭೆಯನ್ನು ವಿಶಾಲವಾದ ಸಭಾಂಗಣದಲ್ಲಿ ನಡೆಸುವುದು. ಘಟನೆಯ ಬಗ್ಗೆ ಉರಿನ ಎಲ್ಲ ವರ್ಗದ ಜನರು ಸೇರಿ ಖಂಡಿಸುವಂಥ ವಿಶ್ವಾಸಾರ್ಹ ವಾತಾವರಣ ನಿರ್ಮಿಸುವುದು. ಪ್ರ್ರಾಮಾಣಿಕವಾದ ಚರ್ಚೆಗಳ ಮೂಲಕ ಎಲ್ಲ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದು.
ಈ ಎಲ್ಲ ಕ್ರಿಯೆಗಳ ಮೂಲಕ ದುಷ್ಟಶಕ್ತಿಗಳ ಷಡ್ಯಂತ್ರ ವಿಫಲಗೊಳಿಸುವುದು ಹಾಗು ಜಾತ್ಯತೀತ ಶಕ್ತಿಗಳ ಧ್ವನಿಯನ್ನು ಗಟ್ಟಿಗೊಳಿಸುವುದು. ಬದುಕಿಗೆ ಶಾಂತಿ ಸೌಹಾರ್ದತೆ ಎಷ್ಟು ಮುಖ್ಯ ಎಂಬುದನ್ನು ಸಮಾಜಕ್ಕೆ ಸಾರುವುದು. ಕಿಡಿಗೇಡಿಗಳು ಯಾವುದೆ ಧರ್ಮದವರಾಗಲಿ, ಅವರ ಕುತಂತ್ರಕ್ಕೆ ಬಲಿಯಾಗದಂತಹ ವಾತಾವರಣ ನಿರ್ಮಿಸುವುದು ಅತಿ ಜರೂರಿನ ಕರ್ತವ್ಯಗಳಾಗಬೇಕು.
ಧಾರ್ಮಿಕ ಮುಖಂಡರು ಚರ್ಚೆ, ಸಂವಾದ ನಡೆಸಿ ಅರಿವು ಮೂಡಿಸಲು ಯತ್ನಿಸಬೇಕು. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕ ಹಾದಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು. ಯುವಕರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಹಿಂಸೆಗೆ ಯಾರು ಬಲಿಯಾಗದಂತೆ ಎಚ್ಚರವಹಿಸಬೇಕು .
ಹಂದಿ ಮುಸ್ಲಿಂರಿಗೆ ಹರಮ್ (ದೇವ ನಿಷೇಧ) ಆಗಿದೆ. ಆಹಾರವಾಗಿ ಸೇವಿಸುವಂತಿಲ್ಲ. ಹರಮ್ ಹಂದಿಗೆ ಮಾತ್ರ ಸೀಮಿತವಾಗಿಲ್ಲ. ಬಡ್ಡಿ ವ್ಯವಹಾರ, ಅನೈತಿಕ ಸಂಬಂಧ, ವ್ಯಭಿಚಾರ, ಮದ್ಯ ಸೇವನೆ, ಕೊಲೆ, ಸುಲಿಗೆ ಇತ್ಯಾದಿಗಳು ಕೂಡ ಹರಮ್. ಹರಮ್‌ನಲ್ಲಿ ಹಂದಿಗೆ ಹೆಚ್ಚು ಮಾನ್ಯತೆ ನೀಡಿ ಇತರೆ ವಿಷಯಗಳಿಗೇನು ಕಡಿಮೆ ಆದ್ಯತೆ ನೀಡಿಲ್ಲ. ಅರ್ಥಾತ್ ಧರ್ಮದ ದೃಷ್ಟಿಯಲ್ಲಿ ಈ ಎಲ್ಲವೂ ಒಂದೇ.
ಶೋಷಿತರು, ದೌರ್ಜನ್ಯಕ್ಕೆ ಒಳಗಾದವರು ತಮ್ಮ ಹನಿ ಹನಿ ಕಣ್ಣೀರನ್ನು, ದುಃಖವನ್ನು, ಆಕ್ರೋಶವನ್ನು ಶೇಖರಿಸಿ ಸಾಗರದ ಸುನಾಮಿ ಅಲೆಯಾಗಿಸಿಕೊಳ್ಳಬೇಕು. ಹೆದರಿಕೆಯ ಎದೆ ಬಡಿತದ ಸದ್ದನ್ನು ಅದುಮಿ ಕೂಡಿಟ್ಟು, ಗುಡುಗಾಗಿಸಿ ಮುಂದಿನ ಚುನಾವಣೆಯಲ್ಲಿ ಬ್ಯಾಲೆಟ್ ಮೇಲೆ ಪ್ರಯೋಗಿಸಬೇಕು. ಈ ವ್ಯವಸ್ಥೆಯನ್ನು ಬದಲಾಯಿಸಿ ಪ್ರ್ರಾಮಾಣಿಕ ವ್ಯಕ್ತಿಗಳಿಂದ ಕೂಡಿದ ಜನತಂತ್ರ ವ್ಯವಸ್ಥೆ ಆಡಳಿತಕ್ಕೆ ಬರುವಂತೆ ಮಾಡಿದಾಗ ಮಾತ್ರ ನ್ಯಾಯ ಪಡೆಯಲು ಸಾಧ್ಯ ಬೀದಿಯಲ್ಲಿ ಕೂಗಾಡುವುದರಿಂದ, ಕಲ್ಲೆಸೆಯುವುದರಿಂದ, ಅಮಾಯಕರನ್ನು ಇರಿಯುವುದರಿಂದ ಏನೂ ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸಮಾಜವನ್ನು ಹಂದಿಯ ಸುತ್ತ ಗಿರಕಿ ಹೊಡೆಯಲು ಬಿಡಬಾರದು.
-ಮಲ್ನಾಡ್ ಮೆಹಬೂಬ್ ಸಕಲೇಶಪುರ
1 comment:
ಲೇಖನ ಓದಿದೆ, ಮಲ್ನಾಡ್ ಮಹಬೂಬ್ ಅವರನ್ನ ನಾನು ಹಾಸನಲ್ಲಿದ್ದಾಗ ನೋಡಿದ್ದೆ, ಆಕ್ಟಿವಿಸ್ಟ್ ಅಂತಾ ಗೊತ್ತಾಗಿತ್ತು.ಆದ್ರೆ ಚನ್ನಾಗಿ ಬರೀತಾರೆ ಅಂತ ಗೊತ್ತಾಗಿರಲಿಲ್ಲ ಅದೆಲ್ಲಾ ಇರಲಿ, ಹಂದಿಯನ್ನ ಮಸೀದಿಗೆ ಹಾಕಿದ್ದಾರೆ ಅಂದ ಕ್ಷಣ ಹಿಂದೂಗಳೆಲ್ಲ ಸೇರಿ ಅದನ್ನ ಮಾಡಿದ್ದಾರೆ, ಹಿಂದೂ ದೇವಾಲಯದಲ್ಲಿ ಏನೋ ಆಗಿದೆ ಅಂತ ಮುಸ್ಲಿಂರೇ ಮಾಡಿದ್ದಾರೆ ಅಂತ ತಿಳಕೊಳ್ಳದಿಂದ ಆಗುವ ಅಪಾಯವೇ ಇದು ಅಲ್ಲವಾ, ಬೇರೆ ಬೇರೆ ಕಡೆ ಕೋಮುಗಲಭೆ ಆದಾಗಲೆಲ್ಲ ನನಗೆ ನನ್ನದು ಯಾವ ಧರ್ಮ ಅಂತ ಪ್ರಶ್ನೆ ಎದ್ದಿದೆ, ಯಾಕಂದರೆ ನನ್ನದು ಯಾವ ಧರ್ಮ ಅನ್ನೊದರ ಬಗ್ಗೆ ಇನ್ನೂ ಚರ್ಚೆಯಾಗಬೇಕಿದೆ...
ಕಣ್ಮು ತೆರೆಸುವ ಬರಹಕ್ಕೆ ದಿನೇಶ್ ಮತ್ತು ಮೆಹಬೂಬ್ ಗೆ ಥ್ಯಾಂಕ್ಸ್...
Post a Comment