Thursday, February 16, 2012

ರಾತ್ರಿ


ನನ್ನಿಡೀ ದಿನವನ್ನು
ನಗರದ ಟ್ರಾಫಿಕ್ಕು ಸಂದಣಿಯಲ್ಲಿ
ಎಷ್ಟೋ ವಾಹನಗಳು ತುಳಿದು ಹೋದವು

ಈಗ ರಾತ್ರಿ

ಗೀ ಗೀ ಎನ್ನುವ
ಹುಳುಗಳ ಹಾಡು
ಅದೇನು ಮೈಥುನದ ಚಡಪಡಿಕೆಯೋ?

ಎಲ್ಲ ಮಲಗಿದಂತಿದೆ
ಯಾರದೋ ಗೊರಕೆಯ ನಡುವೆ
ಮತ್ತೆ ಯಾರದೋ
ನಿಟ್ಟುಸಿರ ಏರಿಳಿತ

ಯಾವುದೋ ಮಗು
ಕೆಟ್ಟ ಕನಸು ಕಂಡು
ಕಿಟಾರನೆ ಕಿರುಚಿ ಎದ್ದಿದೆ
ತಾಯ ಮೊಲೆ ಕವುಚಿಕೊಂಡು
ಮತ್ತೆ ನಿದ್ದೆಗೆ ಜಾರಿದೆ

ನಾಯಿಯೊಂದರ ಆರ್ತನಾದ
ಎಂಥ ನೋವೋ?
ಅದರ ಯಜಮಾನ ರೇಗಿದ್ದಾನೆ
ಅದೀಗ ಸುಮ್ಮನೆ ಮಲಗಿದೆ

ಹೊರಗೆ ಗಾಳಿ
ಈ ರಾತ್ರಿಯಲ್ಲೂ ಯಾರೋ ಮಿಡುಕಿ ಬಿದ್ದಂತೆ
ಮುಚ್ಚಿದ ಕಿಟಕಿಗಳನ್ನು ದಾಟಿ
ಒಳಬರಲು ಹವಣಿಸುತ್ತಿದೆ

ಎಲ್ಲ ಶಬ್ದಗಳನ್ನು
ಒಂದಕ್ಕೊಂದು ಹೆಣೆಯುತ್ತಿದ್ದೇನೆ
ಅಪೂರ್ಣ ಪದ್ಯಗಳಿಗೆ
ಹೊಸ ಪದಗಳನ್ನು ಹುಡುಕುತ್ತಿದ್ದೇನೆ

ಸತ್ತು ಹೋದ ದಿನಕ್ಕೆ
ಇನ್ನೂ ಸಂಸ್ಕಾರ ಮುಗಿದಿಲ್ಲ
ಆಗಲೇ ರಾತ್ರಿ
ಅದು ಬದುಕಿರುವುದಕ್ಕೆ ನನ್ನ ಉಸಿರಷ್ಟೇ ಸಾಕ್ಷಿ

ಆಗಾಗ ರೆಪ್ಪೆಗಳ ನರ್ತನ
ಒಡಲಲ್ಲಿ ಬೇಯುವ ಬೆಂಕಿ
ಮಗ್ಗುಲು ಬದಲಾಯಿಸಿದಾಗ
ಪಥ ಬದಲಿಸುವ ನೆತ್ತರು

ರಾತ್ರಿ ಇನ್ನೂ ಬೆಳೆದಿದೆ
ಈಗ ಕನವರಿಕೆ, ಆಗಾಗ ಒಂದು ಸಣ್ಣನಗು
ಮುಷ್ಠಿ ಸಡಿಲಗೊಂಡು
ಬೆರಳುಗಳಿಗೆ ದಿಢೀರನೆ ಬಿಡುಗಡೆ

ದೇಹ ಹಗುರವಾಗುತ್ತಿದೆ
ನಿದ್ದೆ ಹತ್ತುತ್ತಿರಬೇಕು
ಬೆಳಗ್ಗಿನವರೆಗೂ ನಾನು ನಿಶ್ಚಿಂತ
ನನ್ನ ರಾತ್ರಿ ಸಾಯುವುದು ನನಗೆ ಗೊತ್ತಾಗುವುದಿಲ್ಲ

No comments: