ಉರಿವ ಸೂರ್ಯನ ಜತೆ ಗುದ್ದಾಡಿ
ಹಿಡಿ ಬೆಳಕ ತಂದಿದ್ದೇನೆ
ಮುಡಿಸಲೇ ನಿನ್ನ ತುರುಬಿಗೆ?
ಚೈತನ್ಯ ಬೆಳಕಿಗೆ ಮಾತ್ರವಲ್ಲ
ಅದನ್ನು ಮುಡಿದ ತುರುಬಿಗೂ
ಬಾ ಜಡೆ ಹೆಣೆಯುತ್ತೇನೆ
ಬೆಳಕಿನ ಎಳೆಗಳನ್ನು
ಒಂದರ ಮೇಲೊಂದು ಪೇರಿಸಿ
ಕಾಮನಬಿಲ್ಲು ಮೂಡಲಿ ನಿನ್ನ ಹೆರಳಲ್ಲಿ
ಇಕಾ, ಹಿಡಿ ನಿನ್ನ ಕೈಗೆ
ಹೃದಯದ ಬಣ್ಣದ ಗೋರಂಟಿ ಹಚ್ಚುತ್ತೇನೆ
ಅಂಗೈ ಮೇಲೆ ನಕ್ಷತ್ರಗಳ ಚಿತ್ತಾರ
ಮಿನುಗುತ್ತಿರಲಿ ಪಳಪಳ
ನಾನು ಖಾಲಿಖಾಲಿ
ನನ್ನದೇನೂ ಉಳಿದಿಲ್ಲ
ಅನ್ನುವಷ್ಟು ಖಾಲಿ
ನಿನ್ನ ಕಣ್ಣಬೆಳಕಲ್ಲಿ
ಇನ್ನೂ ಒಂದಿಷ್ಟು ದೂರ
ಹಿಂಗೇ ತೆವಳಿ ನಡೆದಿದ್ದೇನೆ
ಬಾ, ನನ್ನ ತೋಳೊಳಗೆ ಹುದುಗಿ
ಕೊಂಚ ನಿದ್ದೆ ಮಾಡು
ಪ್ರೀತಿಯೆಂದರೆ ವಿಸ್ಮೃತಿ ಕಣೇ
ಅಲ್ಲಿ ಎಲ್ಲ ತರ್ಕಗಳ ಸೋಲು
ಹಣೆಯ ಮೇಲೆ ಬೆವರ ಹನಿಗಳ ಸಾಲಾಗಿ
ನೋವೆಲ್ಲ ಹರಿದುಬಿಡಲಿ...
ಹೀರುತ್ತೇನೆ, ಗುಟುಕು ಗುಟುಕಾಗಿ
ಒಂದು ನಗೆಯರಳಿದರೆ ಸಾಕು ನಿನ್ನ ಮೊಗದಲ್ಲಿ
ನಾನು ಬಿಡುಗಡೆಯಾಗುತ್ತೇನೆ