Sunday, March 22, 2009

ಲೋಹಿಯಾ ಮತ್ತೆ ಮತ್ತೆ ನೆನಪಾಗುತ್ತಾರೆ...


ಮೊನ್ನೆ ಮೊನ್ನೆ ತಾನೇ ವರುಣ್ ಗಾಂಧಿ `ಮುಸ್ಲಿಮರ ಕೈಗಳನ್ನು ಕಡಿಯುವ ಮಾತನ್ನಾಡಿದ್ದಾನೆ. ಇದು ವರುಣ್ ಒಬ್ಬನ ಮಾತು ಆಗಿರಲು ಸಾಧ್ಯವೇ ಇಲ್ಲ. ಆತ ಒಂದು ವರ್ಗದ ಜನರ ಹೊಟ್ಟೆಯ ಮಾತನ್ನು ಹೇಳಿದ್ದಾನೆ. ಹೀಗಾಗಿ ವರುಣ್ ಕುರಿತು ಸಹಾನುಭೂತಿಯ ಮಾತುಗಳೂ ಅಲ್ಲಲ್ಲಿ ಕೇಳುಬರುತ್ತಿವೆ ಹಾಗು ಆತನ ಮಾತುಗಳನ್ನು ಎಲ್ಲರೂ ಟೀಕಿಸುವ ಮನಸ್ಸು ಮಾಡುತ್ತಿಲ್ಲ. ಇದು ಭಾರತದ ರಾಜಕಾರಣ ಹಿಡಿದಿರುವ ದುಷ್ಟಮಾರ್ಗದ ಒಂದು ಸ್ಯಾಂಪಲ್ ಅಷ್ಟೆ. ಇಂಥ ಮಾತುಗಳನ್ನು ಈ ಹಿಂದೆಯೂ ಹಲವರು ಆಡಿದ್ದಾರೆ. ಶಿವಸೇನೆಯ ಬಾಳಠಾಕ್ರೆಯಿಂದ ಹಿಡಿದು ಪ್ರವೀಣ್ ತೊಗಾಡಿಯಾವರೆಗೆ ಇಂಥ ಮಾತುಗಳನ್ನು ಆಡಿ ದಕ್ಕಿಸಿಕೊಂಡವರ ಪಟ್ಟಿಯೇ ದೊಡ್ಡದಿದೆ. `ಮನುಸ್ಮೃತಿಯನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಹೇಳುವ ನಮ್ಮವರೇ ಆದ ರಾಮಜೋಯಿಸರ ಮಾತಿನಲ್ಲೂ ಇದೇ ಕ್ರೌರ್ಯವೇ ಒಳಗುಟ್ಟಾಗಿ ಕಾಣಿಸುತ್ತದೆ.

ಡಾ.ರಾಮಮನೋಹರ ಲೋಹಿಯಾ ಅವರು ಸಕಾರಣವಾಗಿ ಪದೇ ಪದೇ ನೆನಪಾಗುತ್ತಾರೆ. ಗಾಂಧೀಜಿಯವರ ನಂತರ ದೇಶದ ರಾಜಕೀಯದಲ್ಲಿ ಒಂದು ಹೊಸ ಆದರ್ಶವನ್ನು ಹುಟ್ಟುಹಾಕಿದವರು ಲೋಹಿಯಾ. ಇವತ್ತಿನ ರಾಜಕಾರಣವು ಧರ್ಮದ ಕುತ್ತಿಗೆಗೆ ನೇಣುಬಿದ್ದಿರುವ ಸಂದರ್ಭದಲ್ಲಿ, ಹಣದ ಥೈಲಿಯಲ್ಲೇ ಉಸಿರುಗಟ್ಟಿರುವ ಸಂದರ್ಭದಲ್ಲಿ, ಜಾಗತೀಕರಣದ ಬಣ್ಣದ ಲೋಕದಲ್ಲಿ ತನ್ನನ್ನು ತಾನು ಮಾರಿಕೊಂಡಿರುವ ಸಂದರ್ಭದಲ್ಲಿ ಲೋಹಿಯಾ ನೆನಪಾಗುತ್ತಾರೆ.

ದೇಶದ ಸಾಮಾನ್ಯ ಜನರು ದಿನಕ್ಕೆ ಮೂರು ಆಣೆಯಷ್ಟು ಖರ್ಚು ಮಾಡುವ ಯೋಗ್ಯತೆ ಇಲ್ಲದಿದ್ದಾಗ ಪ್ರಧಾನ ಮಂತ್ರಿಗೆ ೨೫,೦೦೦ ರೂ. ಖರ್ಚು ಮಾಡುವುದು ಎಷ್ಟು ಸರಿ ಎಂದು ಜಗಳಕ್ಕೆ ನಿಂತವರು ಲೋಹಿಯಾ. ಈ ಲೆಕ್ಕಾಚಾರದಿಂದ ಪ್ರಧಾನಿ ಜವಹರಲಾಲ್ ನೆಹರೂ ಕಂಗೆಟ್ಟರು. ಆದರೆ ಲೋಹಿಯಾ ವಾದ ಎಷ್ಟು ಸಮರ್ಥವಾಗಿತ್ತೆಂದರೆ, ಯೋಜನಾ ಆಯೋಗ ನೀಡಿದ ಲೆಕ್ಕಾಚಾರದ ಪ್ರಕಾರ ಜನರ ತಲಾದಾಯ ೧೫ ಆಣೆ ಎಂಬುದನ್ನು ಸುಳ್ಳು ಎಂದು ನಿರೂಪಿಸಲಾಯಿತು.

ನೆಹರೂ ವಿಷಯದಲ್ಲಿ ಮಾತ್ರ ಲೋಹಿಯಾ ಹೀಗೆ ಮಾತನಾಡಿದ್ದಾರೆ ಎನ್ನುವಂತೆಯೇ ಇಲ್ಲ. ತಮ್ಮ ಅಂತಿಮ ದಿನಗಳಲ್ಲಿ ಅನಾರೋಗ್ಯಪೀಡಿತರಾದಾಗ ಲೋಹಿಯಾ ಗಣ್ಯ ವ್ಯಕ್ತಿಗಳಿಗೆ ಲಭ್ಯವಾಗುವ ಚಿಕಿತ್ಸೆಯನ್ನು ಪಡೆಯಲಿಲ್ಲ. ಸಾಮಾನ್ಯ ವ್ಯಕ್ತಿಯೊಬ್ಬನಿಗೆ ಎಂಥ ಚಿಕಿತ್ಸೆ ಲಭ್ಯವೋ ಅಷ್ಟನ್ನೇ ಪಡೆದರು. ಸರಿಯಾದ ಚಿಕಿತ್ಸೆಯಿಲ್ಲದೆ ಬಹುಬೇಗನೆ ತೀರಿ ಹೋದರು.

ಲೋಹಿಯಾ ಅವರಿಗೆ ಜವಹರಲಾಲ್ ನೆಹರೂ ಆತ್ಮೀಯ ಗೆಳೆಯರಾಗಿದ್ದರು. ಆದರೆ ನೆಹರೂ ಪ್ರಧಾನಿಯಾಗಿದ್ದಾಗ ಅವರ ದೇಶಕಟ್ಟುವ ಪರಿಯನ್ನು ಲೋಹಿಯಾ ಅವರಷ್ಟು ಟೀಕಿಸಿದವರು ಮತ್ತೊಬ್ಬರಿರಲಿಲ್ಲ. ಲೋಹಿಯಾ ನಿಜ ಅರ್ಥದಲ್ಲಿ ನೆಹರೂ ಅವರಿಗೆ ಒಂದು ವಿರೋಧಪಕ್ಷವಾಗಿದ್ದರು. ಹೀಗಾಗಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನುಭವಿಸದಷ್ಟು ಹಿಂಸೆ, ನೋವನ್ನು ಅವರು ಸ್ವಾತಂತ್ರ್ಯೋತ್ತರದಲ್ಲಿ ಅನುಭವಿಸಬೇಕಾಯಿತು.

ಲೋಹಿಯಾ ಪ್ರತಿಪಾದಿಸಿದ್ದು ಸಮಾಜವಾದ. ಅವರಿಗೆ ಬಂಡವಾಳಶಾಹಿ ವ್ಯವಸ್ಥೆ ಹಾಗು ಮಾರ್ಕಿಸಂ ಎರಡೂ ಏಕಕಾಲಕ್ಕೆ ಅಪಥ್ಯವಾಗಿತ್ತು. ಐರೋಪ್ಯ ಸಮುದಾಯ ಏಷಿಯಾ ವಿರುದ್ಧ ಬಳಸುತ್ತಿರುವ ಕಡೆಯ ಅಸ್ತ್ರವೇ ಮಾರ್ಕಿಸಂ ಎಂದು ಅವರು ಭಾವಿಸಿದ್ದರು. ಭಾರತದ ಸಮಾಜದ ಸಂರಚನೆಯು ವರ್ಗದಿಂದಾಗಿಲ್ಲ, ಜಾತಿಯಿಂದಾಗಿದೆ ಎಂದು ಅವರು ನಂಬಿದ್ದರು, ಹಾಗೆಯೇ ಪ್ರತಿಪಾದಿಸಿದ್ದರು. ಭಾರತದ ಪ್ರಗತಿಗೆ ಜಾತಿಯೇ ಬಹುದೊಡ್ಡ ಅಡ್ಡಿ ಎಂದು ಅವರು ಸರಿಯಾಗಿಯೇ ಗುರುತಿಸಿದ್ದರು.

`ಜಾತಿ ಅವಕಾಶಗಳನ್ನು ಮಿತಿಗೊಳಿಸುತ್ತದೆ. ಅವಕಾಶಗಳ ಮಿತಿಯು ವ್ಯಕ್ತಿಯ ಸಾಮರ್ಥ್ಯವನ್ನು ಹಾಳುಗೆಡವುತ್ತದೆ. ಸಾಮರ್ಥ್ಯದ ಕೊರತೆಯು ಮತ್ತೆ ಅವಕಾಶಗಳನ್ನು ಇಲ್ಲವಾಗಿಸುತ್ತದೆ ಎಂದ ಲೋಹಿಯಾ `ರೋಟಿ ಮತ್ತು ಬೇಟಿ ಎಂಬ ಘೋಷಣೆಯನ್ನು ಹೊರಡಿಸಿದ್ದರು. ರೋಟಿ ಎಂದರೆ ಎಲ್ಲ ಜಾತಿಯವರು ಒಟ್ಟಿಗೆ ಕುಳಿತು ಊಟ ಮಾಡುವಂಥ ವ್ಯವಸ್ಥೆ ನಿರ್ಮಾಣವಾಗುವುದು ಹಾಗು ಬೇಟಿ ಎಂದರೆ ಎಲ್ಲ ಜಾತಿಯವರು ಪರಸ್ಪರ ವೈವಾಹಿಕ ಸಂಬಂಧಗಳನ್ನು ಬೆಳೆಸುವುದು.

ದೇಶದ ನಾಗರಿಕರು ತಮ್ಮನ್ನು ತಾವು ಭಾರತೀಯರು ಎಂದು ಗುರುತಿಸಿಕೊಳ್ಳುವುದಕ್ಕಿಂತ ಹೆಚ್ಚು ಇಂಥ ಜಾತಿಯವರು ಎಂದು ಗುರುತಿಸಿಕೊಳ್ಳಲು ಇಷ್ಟ ಪಡುತ್ತಾರೆ ಎಂಬುದನ್ನು ಲೋಹಿಯಾ ಗಮನಿಸಿದ್ದರು. ಜಾತಿಯ ಕೊಳಕನ್ನು ನಿವಾರಿಸುವ ಉದ್ದೇಶದಿಂದಲೇ ಲೋಹಿಯಾ ತಮ್ಮ ಸೋಷಿಯಲಿಸ್ಟ್ ಪಕ್ಷದಲ್ಲಿ ಕೆಳ ಜಾತಿಗಳ ನಾಯಕರಿಗೆ ಅವಕಾಶ ನೀಡಿದ್ದರು. ತಮ್ಮ ಪಕ್ಷದಿಂದ ಸ್ಪರ್ಧಿಸಲು ಈ ಸಮುದಾಯಗಳ ಅಭ್ಯರ್ಥಿಗಳಿಗೇ ಹೆಚ್ಚು ಟಿಕೆಟ್ ನೀಡಿದ್ದರು. ದೇಶವನ್ನು ಪ್ರಬಲವಾಗಿ ಕಟ್ಟಬೇಕೆಂದರೆ ಈ ಕಟ್ಟುವ ಕಾರ್ಯದಲ್ಲಿ ಎಲ್ಲ ಜಾತಿಯ ಜನರೂ ಭಾಗವಹಿಸಬೇಕು ಎಂದು ಅವರು ಬಲವಾಗಿ ನಂಬಿದ್ದರು.

ಲೋಹಿಯಾ ಇಂಗ್ಲಿಷ್ ಬಳಕೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಹಿಂದಿ ಭಾಷಿಕ ಪ್ರದೇಶಗಳಲ್ಲಿ ಹಿಂದಿ ಹಾಗು ಇತರ ಭಾಷೆಗಳು ಆಡುಮಾತಿರುವ ಪ್ರದೇಶಗಳಲ್ಲಿ ಅದೇ ಭಾಷೆಗಳನ್ನು ಬೆಳೆಸಬೇಕು ಎಂದು ಅವರು ಹೇಳುತ್ತಿದ್ದರು. ಇಂಗ್ಲಿಷ್‌ನಿಂದಾಗಿ ಶಿಕ್ಷಿತರು ಹಾಗು ನಿರಕ್ಷರಿಗಳ ನಡುವೆ ಕಂದರ ಉಂಟಾಗುತ್ತದೆ. ಇದು ಮೇಲರಿಮೆ, ಕೀಳರಿಮೆಗಳಿಗೆ ದಾರಿ ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಭಾಷೆಗಳನ್ನೇ ಬೆಳಸಬೇಕು, ಬಳಸಬೇಕು ಎಂದು ಲೋಹಿಯಾ ಅಭಿಪ್ರಾಯಪಡುತ್ತಿದ್ದರು.

ದೇಶ ಕಟ್ಟುವ ನೆಹರೂ ಮಾದರಿಯನ್ನು ಲೋಹಿಯಾ ಪ್ರಬಲವಾಗಿ ವಿರೋಧಿಸುತ್ತಿದ್ದರು. ದೇಶಕಟ್ಟುವ ಕೆಲಸದಲ್ಲಿ ಜನಸಾಮಾನ್ಯರೂ ಪಾಲ್ಗೊಳ್ಳುವಂತಾಗಬೇಕು ಎಂದು ಅವರು ಭಾವಿಸಿದ್ದರು. ತಮ್ಮ ನೆರೆಯ ರಸ್ತೆ, ಬಾವಿ, ಕಾಲುವೆಗಳನ್ನು ನಿರ್ಮಿಸುವ ಕೆಲಸಗಳಲ್ಲಿ ಜನರೇ ತೊಡಗಿಕೊಳ್ಳುವಂತಾಗಬೇಕು ಎಂದು ಅವರು ಹೇಳುತ್ತಿದ್ದರು. ತಮ್ಮ ಈ ಆಲೋಚನೆಯನ್ನು ಅವರು ಕ್ರಿಯೆಗೂ ಇಳಿಸಿ ಪನಿಯಾರಿ ಎಂಬ ನದಿಗೆ ಅಣೆಕಟ್ಟು ಕೆಲಸವನ್ನು ಜನರೊಂದಿಗೆ ಪ್ರಾರಂಭಿಸಿದರು. ಅಣೆಕಟ್ಟು ಇವತ್ತಿಗೂ ಲೋಹಿಯಾ ಸಾಗರ್ ಡ್ಯಾಮ್ ಎಂದೇ ಹೆಸರಾಗಿದೆ. ಕ್ರಿಯಾತ್ಮಕ ಚಟುವಟಿಕೆಗಳಿಲ್ಲ ಸತ್ಯಾಗ್ರಹ, ಕ್ರಿಯಾಪದವಿಲ್ಲದ ವಾಕ್ಯದಂತೆ ಎಂದು ಲೋಹಿಯಾ ಈ ಹಿನ್ನೆಲೆಯಲ್ಲೇ ಹೇಳಿದ್ದರು.

ಲೋಹಿಯಾ ತಾವು ಬದುಕಿದ್ದ ಕಾಲಘಟ್ಟದ ಎಲ್ಲ ಸಮಸ್ಯೆಗಳನ್ನೂ ಎದುರಿಸಿದ್ದರು, ಅವುಗಳಿಗೆ ಸಮಾಜವಾದಿ ನೆಲೆಯಲ್ಲಿ ಉತ್ತರ ಕಂಡುಕೊಳ್ಳಲು ಯತ್ನಿಸಿದ್ದರು. ಆಶ್ಚರ್ಯವೆಂದರೆ ಅವರು ಗತಿಸಿ ೪೨ ವರ್ಷಗಳು ಕಳೆಯುತ್ತ ಬಂದರೂ ಇವತ್ತಿನ ಎಲ್ಲ ಸಮಸ್ಯೆಗಳಿಗೂ ಲೋಹಿಯಾ ಅವರ ಮಾತುಗಳಲ್ಲಿ ಉತ್ತರವಿದೆ.

ಜಾಗತಿಕ ಸಮುದಾಯ ಆರ್ಥಿಕ ಹಿಂಜರಿತದ ಸಂಕಷ್ಟದಲ್ಲಿ ಮುಳುಗಿರುವಾಗ, ಭಾರತದ ರಾಜಕಾರಣ ಧರ್ಮ-ಜಾತಿಯ ನೆಲೆಯಲ್ಲಿ ಛಿದ್ರಗೊಂಡಿರುವಾಗ ಲೋಹಿಯಾ ಅವರಲ್ಲಿ ಉತ್ತರ ಹುಡುಕಿಕೊಳ್ಳುವ ಪ್ರಯತ್ನಗಳಾದರೂ ಆಗಬಾರದೆ ಎಂಬ ಆಶೆ ಲೋಹಿಯಾವಾದಿಗಳದ್ದು. ಆದರೆ ಲೋಹಿಯಾವಾದಿಗಳೇ ಅಧಿಕಾರ ರಾಜಕಾರಣದ ಬೆನ್ನು ಬಿದ್ದು ಭ್ರಷ್ಟರಾಗಿರುವ, ಕೋಮುವಾದಿಗಳ ತೆಕ್ಕೆಗೆ ಸರಿದಿರುವ ಈ ಕಾಲದಲ್ಲಿ ಹೊಸ ಪೀಳಿಗೆಯೇ `ಸಮಾಜವಾದದ ಕನಸುಗಳನ್ನು ನನಸಾಗಿಸಬಲ್ಲದೇನೋ?

ಮಾರ್ಚ್ ೨೩ ಲೋಹಿಯಾ ಜನ್ಮದಿನ. ಇಡೀ ಜಗತ್ತೇ ಸಂಕಟದಲ್ಲಿ ಮುಳುಗಿರುವಾಗ ಲೋಹಿಯಾ ಸಕಾರಣವಾಗಿ ನೆನಪಾಗುತ್ತಾರೆ. ಎಲ್ಲ ಪ್ರಶ್ನೆಗಳಿಗೆ ಲೋಹಿಯಾ ಉತ್ತರವಾಗಬಲ್ಲರಾದರೂ ಆ ಉತ್ತರಗಳಾದರೂ ಯಾರಿಗೆ ಬೇಕಿದೆ?

ಮುಸ್ಲಿಮರ ವಿರುದ್ಧವೋ, ಕ್ರಿಶ್ಚಿಯನ್ನರ ವಿರುದ್ಧವೋ ದ್ವೇಷಕಾರುವ ಒಂದು ಭಾಷಣ ಮಾಡಿ ರಾತ್ರೋರಾತ್ರಿ ಒಬ್ಬ ರಾಜಕಾರಣಿ ಸೃಷ್ಟಿಯಾಗುವ ಈ ಕಾಲದಲ್ಲಿ ಲೋಹಿಯಾ ಕಾಣಿಸಿದ ಬೆಳಕಿನ ದಾರಿ ಯಾರಿಗೆ ಬೇಕಾಗಿದೆ?

2 comments:

heggere said...

ರಾಮ್ ಮನೋಹರ್ ಲೋಹಿಯಾ ಅವರನ್ನು ಈಗಿನ ಯುವಕರಿಗೆ ಅರ್ಥ ಮಾಡಿಸುವ ತುರ್ತು ಅಗತ್ಯವಾಗಿದೆ. ಫ್ಯಾಸಿಸ್ಟ್ ಆಗಿರುವ ಮಾಧ್ಯಮಗಳ ಮೂಲಕ ಅದು ಸಾಧ್ಯವೇ ಎಂಬ ಆಲೋಚನೆ ಒಮ್ಮೆ ಬಂದು ಹೋಗುತ್ತದೆ. ನಿಜವಾಗಿಯೂ ರಾಮಮನೋಹರ್ ಲೋಹಿಯಾ ಒಂದು ಶಕ್ತಿಯಾಗಿ ಹೋರಾಟ ನಡೆಸಿದ್ದರ ಪರಿಯನ್ನು ಚಳವಳಿ ಮರೆತಿರುವ ನಮ್ಮ ನಾಯಕರಿಗೂ ಅರ್ಥ ಮಾಡಿಸುವ ಅಗತ್ಯವಿದೆಯೇ ಅನಿಸುತ್ತಿದೆ. ಸಾಮಾಜಿಕ ನ್ಯಾಯಾ ಎಂಬ ಪರಿಮಿತಿಯೇ ಗೊತ್ತಿಲ್ಲದಂತಹ ಇನ್ಫೋಸಿಸ್ ನಾರಾಯಣಮೂರ್ತಿ ಅಂತವರಿಗೆ ಲೋಹಿಯಾ ಅವರನ್ನು ಪರಿಚಯಿಸಬೇಕಾಗಿದೆ. ಹಾಗೆಯೇ ಅಧಿಕಾರ ಮತ್ತು ಹಣದ ಮುಂದೆ ಸತ್ತು ನಲುಗಿರುವ ರಾಜಕಾರಣಕ್ಕೆ ಲೋಹಿಯಾ ಬೆಳಕಾಗಬಲ್ಲರು ಎಂಬುದು ನಮ್ಮ ಮುಂದಿರುವ ಆಶಯ.

ಡಾ.ಅರುಣ್ ಜೋಳದ ಕೂಡ್ಲಿಗಿ said...

howdu..lohiya endigu prastuta. hosa tlemaarina barahagaararu lohiyanannu odalebeku. blog nalli beka bitti baredukolluvavara naduve lohiya nenapisikondiddeeri adakkagi thanks,