Sunday, October 19, 2008

ಮುಸ್ಲಿಂ ರಾಜಕಾರಣದಲ್ಲಿ ಒಂದು ಸುತ್ತು.....


ಮೆರಾಜುದ್ದೀನ್ ಪಟೇಲರು ಈಗ ಬರೀ ನೆನಪು. ಅವರು ನಿಜವಾದ ಅರ್ಥದಲ್ಲಿ ಸರಳ, ಸಜ್ಜನಿಕೆಯ ರಾಜಕಾರಣಿ. ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ಅವರಿಗೆ ಬಯಸದೇ ಬಂದ ಪಟ್ಟ. ಜನತಾದಳದೊಂದಿಗಿನ ಹಾಗು ದೇವೇಗೌಡರ ಕುಟುಂಬದೊಂದಿಗಿನ ನಿಷ್ಠೆ ಅವರನ್ನು ಆ ಗಾದಿಗೆ ತಂದಿತ್ತು. ಆದರೆ ಜೆಡಿಎಸ್‌ನಲ್ಲಿ ದೇವೇಗೌಡರ ಕುಟುಂಬದ ಬಿಗಿಹಿಡಿತದಿಂದಾಗಿ ಯಾರು ಯಾವ ಪಟ್ಟ ಅಲಂಕರಿಸಿದರೂ, ಅವರು ಗೌಡರ ಆಣತಿಯಂತೇ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇರುವುದರಿಂದ ಮೆರಾಜುದ್ದೀನ್ ಅಂಥವರು ಅಲಂಕಾರದ ಬೊಂಬೆಯಾಗುವ ಅಪಾಯ ತಪ್ಪಿದ್ದಲ್ಲ. ಇದೆಲ್ಲ ಗೊತ್ತಿದ್ದೂ ಮೆರಾಜುದ್ದೀನ್ ಉತ್ಸಾಹದಿಂದ ಓಡಾಡಿಕೊಂಡಿದ್ದರು. ಅವರ ನಿರ್ಗಮನ ಆ ಪಕ್ಷವನ್ನಂತೂ ಭಾದಿಸುತ್ತದೆ.

ಮೆರಾಜುದ್ದೀನ್ ಸಕ್ಕರೆ ಕಾರ್ಖಾನೆಯ ಸಮಸ್ಯೆಗಳಿಗೆ ಸಿಲುಕಿ ಕೈ ಸುಟ್ಟುಕೊಂಡಿದ್ದರು. ಮನೆ ತುಂಬ ಹೆಣ್ಣುಮಕ್ಕಳು. ಒಮ್ಮೆ ಹೃದಯಾಘಾತವಾಗಿತ್ತು. ಅವರು ಇನ್ನಷ್ಟು ವರ್ಷ ಬದುಕಿದ್ದರೆ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರಾ? ಒಂದೊಮ್ಮೆ ಮುಂದೆ ರಾಜಕೀಯ ಪಲ್ಲಟಗಳಾಗಿ ಜೆಡಿಎಸ್‌ಗೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹುದ್ದೆ ದಕ್ಕಿದ್ದರೆ ಅವರನ್ನು ಗೌಡರು ಮತ್ತವರ ಮಕ್ಕಳು ಆ ಸ್ಥಾನಕ್ಕೆ ನಿಯೋಜಿಸುತ್ತಿದ್ದರಾ? ಉತ್ತರ ಹುಡುಕುವುದು ಬಲು ಕಷ್ಟವೇನಲ್ಲ. ಆ ಬಗ್ಗೆ ಇಲ್ಲಿ ಚರ್ಚೆ ಬೇಡ.

**********

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಹೆಸರು ನಜೀರ್ ಸಾಬ್ ಅವರದ್ದು. ಅಸಮಾನ್ಯ ದೂರದೃಷ್ಟಿಯ ಅಪರೂಪದ ನಾಯಕ ಅವರು. ಯಾರಿಗೂ ಬೇಡವಾಗಿದ್ದ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಕೇಳಿ ಪಡೆದು ಹೆಗಡೆ ಸಂಪುಟದಲ್ಲಿ ನೀರು ಸಾಬ್ ಎಂದೇ ಹೆಸರಾದವರು ಅವರು.

ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಜನರಿಗೆ ನೀರು ಕೊಟ್ಟಿದ್ದು ನಜೀರ್ ಸಾಬ್ ಅವರ ಸಾಧನೆ. ನಜೀರ್ ಹಳ್ಳಿ ಹಳ್ಳಿಗಳಲ್ಲೂ ಬೋರ್‌ವೆಲ್‌ಗಳನ್ನು ಕೊರೆಸಿದರು. ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತಾಗಿ ಅವರಿಗೆ ಸ್ಪಷ್ಟ ಕಲ್ಪನೆಯಿತ್ತು. ಅಧಿಕಾರ ವಿಕೇಂದ್ರೀರಣದ ಕಲ್ಪನೆಯನ್ನು ಸಾಧ್ಯವಾಗಿಸಿ, ಇಡೀ ದೇಶಕ್ಕೆ ಮಾದರಿಯಾಗಿದ್ದು ಕರ್ನಾಟಕ. ನಜೀರ್ ಸಾಬ್ ಅವರಂಥವರಿಂದಲೇ ಇದೆಲ್ಲವೂ ಸಾಧ್ಯವಾಗಿದ್ದು.

ಆದರೆ ಮುಸ್ಲಿಂ ಸಮುದಾಯ ನಜೀರ್ ಸಾಬ್‌ರನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಿತ್ತೆ? ಈ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ. ಯಾರು ಮುಸ್ಲಿಂ ಸಮುದಾಯದೊಳಗೆ ನಾಯಕರಾಗಿ ರೂಪುಗೊಳ್ಳುತ್ತಾರೋ ಅವರು ಇಡೀ ಸಮಾಜದ ನಾಯಕರಾಗಿ ಹೊರಹೊಮ್ಮಿದ ಉದಾಹರಣೆಗಳು ಬಹಳ ಕಡಿಮೆ. ಇಡೀ ಸಮಾಜದ ಮುಖಂಡರಾಗಿ ರೂಪುಗೊಂಡ ಮುಸ್ಲಿಂ ರಾಜಕಾರಣಿಯನ್ನು ಮುಸ್ಲಿಂ ಸಮುದಾಯ ಒಪ್ಪಿಕೊಳ್ಳುವುದು ಕಷ್ಟ.

ಇವತ್ತಿಗೂ ಮುಸ್ಲಿಂ ಸಮುದಾಯದ ನಾಯಕತ್ವ ಇರುವುದು ಆ ಸಮುದಾಯದ ರಾಜಕಾರಣಿಗಳ ಬಳಿಯಲ್ಲ. ಮೌಲ್ವಿಗಳೇ ಆ ಸಮುದಾಯದ ನಾಯಕರು. ರಾಜಕೀಯ ಮುಖಂಡರ ಭವಿಷ್ಯವನ್ನು ನಿರ್ಧರಿಸುವ, ಬದಲಿಸುವ ಶಕ್ತಿಯೂ ಇವರಿಗಿದೆ. ಧರ್ಮದ ಕಟ್ಟುಪಾಡುಗಳನ್ನು ಮೀರಿ ಒಬ್ಬ ಮುಸ್ಲಿಂ ರಾಜಕಾರಣಿ ಬೆಳೆದ ಉದಾಹರಣೆಗಳು ಕಡಿಮೆ.

*******



ಜಾಫರ್ ಷರೀಫ್ ಈಗ ಹಣ್ಣಾಗಿದ್ದಾರೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಅವರು ಎಚ್.ಟಿ.ಸಾಂಗ್ಲಿಯಾನ ಎದುರು ಸೋಲು ಅನುಭವಿಸಿದರು. ಪರೋಕ್ಷವಾಗಿ ಷರೀಫರನ್ನು ಸೋಲಿಸಿದವರು ಸಿ.ಎಂ.ಇಬ್ರಾಹಿಂ ಎಂಬ ಮತ್ತೊಬ್ಬ ಮುಸ್ಲಿಂ ಮುಖಂಡ. ಇಬ್ರಾಹಿಂ ಸ್ಪರ್ಧೆಯಲ್ಲಿ ಇರದೇ ಹೋಗಿದ್ದರೆ ಷರೀಫ್ ಗೆಲ್ಲುತ್ತಿದ್ದರೇನೋ?

ಒಂದೊಮ್ಮೆ ಷರೀಫರು ಗೆದ್ದಿದ್ದರೆ ಕೇಂದ್ರದ ಯುಪಿಎ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗುವ ಅವಕಾಶಗಳಿದ್ದವು. ಸೋಲಿನಿಂದಾಗಿ ನಷ್ಟ ಅನುಭವಿಸಿದ್ದು ಕರ್ನಾಟಕ ರಾಜ್ಯ. ಯಾಕೆಂದರೆ ಕಾಂಗ್ರೆಸ್‌ನಿಂದ ಗೆದ್ದವರ ಪೈಕಿ ಯುಪಿಎ ಸರ್ಕಾರಕ್ಕೆ ಕರ್ನಾಟಕದಿಂದ ಸಂಪುಟ ದರ್ಜೆ ಸಚಿವರಾಗುವ ಯೋಗ್ಯತೆಯ ಒಬ್ಬ ಮನುಷ್ಯನೂ ಕಾಣಿಸಲಿಲ್ಲ!

ಷರೀಫ್ ಕೇಂದ್ರ ರೈಲ್ವೆ ಸಚಿವರಾಗಿದ್ದಾಗಲೇ ಕರ್ನಾಟಕ ರೈಲ್ವೆ ಅಲ್ಪಸ್ವಲ್ಪ ಉದ್ಧಾರವಾಗಿದ್ದು. ಕನ್ನಡಿಗರಿಗೆ ರೈಲ್ವೆಯಲ್ಲಿ ಉದ್ಯೋಗ ದೊರೆತಿದ್ದು. ಜಾಫರ್ ಷರೀಫ್ ಹಟ ಹಿಡಿದು ಬೆಂಗಳೂರಿಗೆ ಅಚ್ಚು ಮತ್ತು ಗಾಲಿ ಕಾರ್ಖಾನೆ ತಂದರು. ಅಲ್ಲೂ ಸಹ ಕನ್ನಡಿಗರಿಗೆ ತಕ್ಕಮಟ್ಟಿಗೆ ಉದ್ಯೋಗ ದೊರೆಯಿತು. ಇತರೆ ರಾಜ್ಯಗಳವರ ಕಿರಿಕಿರಿ, ಆರೋಪಗಳನ್ನೆಲ್ಲ ಸಮರ್ಥವಾಗಿ ಎದುರಿಸುತ್ತಲೇ ಷರೀಫ್ ಕರ್ನಾಟಕಕ್ಕೆ ಏನೇನು ಮಾಡಲು ಸಾಧ್ಯವಿತ್ತೋ ಎಲ್ಲವನ್ನೂ ಮಾಡಿದರು.

ಷರೀಫ್ ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವವರು. ಹಾಗೆಯೇ ಮಾಡುವವರು. ಕಾಂಗ್ರೆಸ್ ಪಕ್ಷದಲ್ಲಿ ಷರೀಫ್ ಒಳಬಂಡಾಯಗಾರ. ಅದಕ್ಕಾಗಿ ಅವರು ಕಳೆದುಕೊಂಡಿದ್ದೇ ಹೆಚ್ಚು. ಪಕ್ಷದಲ್ಲಿ ಮೂಲೆಗುಂಪಾದ ಷರೀಫ್ ಒಮ್ಮೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಬಿಎಸ್ಪಿ ಸಮಾವೇಶಕ್ಕೆ ಹೋಗಿ ಕುಳಿತಿದ್ದರು. ಮಾಯಾವತಿ ಷರೀಫರನ್ನು ಗುರುತಿಸಿ ಅವರನ್ನು ವೇದಿಕೆಯಲ್ಲೇ ತಮ್ಮ ಪಕ್ಕದಲ್ಲೇ ಕೂರಿಸಿಕೊಂಡಿದ್ದರು. ಈ ಘಟನೆಯಿಂದ ರಾಜ್ಯದ ಕಾಂಗ್ರೆಸ್ ಮುಖಂಡರೆಲ್ಲ ಕಕ್ಕಾಬಿಕ್ಕಿಯಾಗಿದ್ದರು.

ಷರೀಫರ ಮೇಲಿರುವ ಗಂಭೀರ ಆರೋಪವೆಂದರೆ ಅವರು ಎರಡನೇ ಸಾಲಿನ ಮುಸ್ಲಿಂ ಮುಖಂಡರನ್ನು ಬೆಳೆಸದೇ ಹೋದರು ಎಂಬುದು. ಈಗಲೂ ರಾಜ್ಯವ್ಯಾಪಿಯಾಗಿ ಅವರಿಗೆ ತಮ್ಮದೇ ಆದ ಅಭಿಮಾನಿಗಳ, ಅನುಯಾಯಿಗಳ ಬಳಗವಿಲ್ಲ. ಹೊಸ ಮುಖಂಡರನ್ನು ಸಿದ್ಧಪಡಿಸುವಲ್ಲಿ ಅವರು ತೋರಿದ ನಿರ್ಲಕ್ಷ್ಯಕ್ಕೆ ಕಾರಣವೇನು ಎಂಬುದನ್ನು ಅವರೇ ಹೇಳಬೇಕು.

ಷರೀಫರ ಮಕ್ಕಳು ಅವರ ಸ್ಥಾನ ತುಂಬುವ ಯಾವ ಯತ್ನವನ್ನೂ ಮಾಡಲಿಲ್ಲ. ಒಬ್ಬ ಮಗ ತೀರಿಹೋದರು. ಇನ್ನೊಬ್ಬ ಮಗನೂ ರಾಜಕೀಯವಾಗಿ ಬೆಳೆಯಲಿಲ್ಲ. ಇಬ್ಬರೂ ವ್ಯಸನಗಳಿಗೆ ಸಿಕ್ಕು ಅವಕಾಶಗಳನ್ನು ತಪ್ಪಿಸಿಕೊಂಡರು ಎಂದೇ ಅವರ ಸುತ್ತಲಿನ ಜನರು ಹೇಳುತ್ತಾರೆ. ಈಗ ಅವರ ಮೊಮ್ಮಗ ರೆಹಮಾನ್ ಷರೀಫ್ ಅಖಾಡಕ್ಕೆ ಇಳಿದಿದ್ದಾರೆ. ಅವರಿಗಾದರೂ ರಾಜಕೀಯ ದೂರದೃಷ್ಟಿಯಿದೆಯಾ? ಕಾಲವೇ ಹೇಳಬೇಕು.

ಷರೀಫ್ ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ. ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನ ವಿರುದ್ಧ ಕರ್ನಾಟಕ ಬಂದ್ ಕರೆ ನೀಡಿದಾಗ, ಬಂದ್ ಯಶಸ್ಸುಗೊಳಿಸಲು ಕನ್ನಡ ಸಂಘಟನೆಗಳು ಎಲ್ಲೆಡೆ ಸಭೆಗಳನ್ನು ನಡೆಸುತ್ತಿದ್ದವು. ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಶಿವಾಜಿನಗರದಲ್ಲಿ ಬಂದ್ ಹಿಂದಿನ ರಾತ್ರಿ ಸಭೆ ನಡೆಸಿತ್ತು. ಷರೀಫರು ಆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜಕೀಯ ವ್ಯವಸ್ಥೆ ನೋಡಿ ಜಿಗುಪ್ಸೆ ಬಂದಿದೆ. ಇದೆಲ್ಲವನ್ನು ಗಮನಿಸಿದರೆ ಸುಮ್ಮನೆ ನಾರಾಯಣಗೌಡರ ರಕ್ಷಣಾ ವೇದಿಕೆಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಹೋಗುವ ಆಸೆಯಾಗುತ್ತಿದೆ ಎಂದಿದ್ದರು ಅವರು. ಷರೀಷ್ ಅವರ ಮಾತಿನಲ್ಲಿ ಕೃತ್ತಿಮತೆ ಇದ್ದಂತೆ ಕಾಣಲಿಲ್ಲ. ಷರೀಫರು ಸೊಗಸಾಗಿ ಕನ್ನಡ ಮಾತನಾಡುತ್ತಾರೆ. ಹಾಗೆಯೇ ಕನ್ನಡವನ್ನು ಪ್ರೀತಿಸುತ್ತಾರೆ.

ಅದೇ ಸಭೆಯಲ್ಲಿ ಮಾತನಾಡುತ್ತಾ ನಾನು ಹೇಳಿದೆ. ಮುಸ್ಲಿಮರಿಗೆ ಲಾಡೆನ್, ಸದ್ದಾಂ ಆದರ್ಶವಾಗಬಾರದು. ಕನ್ನಡದ ನೆಲದಲ್ಲಿ ಹುಟ್ಟಿದ ಶಿಶುನಾಳ ಷರೀಫ, ಇಮಾಮ್ ಸಾಬ್, ನಜೀರ್ ಸಾಬ್‌ರಂಥವರು ಆದರ್ಶವಾಗಬೇಕು.. ಕನ್ನಡ ನಾಡಿಗೆ ಮುಸ್ಲಿಂ ಸಂತರು, ಕವಿಗಳು, ಸೂಫಿ ಚಿಂತಕರು ನೀಡಿದ ಕೊಡುಗೆ ಅಪಾರ. ತಮಾಶೆಯೆಂದರೆ ಈಗಲೂ ಸಾಮಾನ್ಯ ಮುಸ್ಲಿಮರಲ್ಲಿ ಬಹುತೇಕ ಮಂದಿಗೆ ಸಂತ ಶಿಶುನಾಳ ಷರೀಫರೂ ಗೊತ್ತಿಲ್ಲ, ಜಾನಪದ ಜಂಗಮ ಎಸ್.ಕೆ.ಕರೀಂಖಾನರೂ ಗೊತ್ತಿಲ್ಲ. ಹಾಗಾಗಬಾರದು.

ಷರೀಫ್ ಬಗ್ಗೆ ಪತ್ರಕರ್ತ ಎನ್.ಎ.ಎಂ.ಇಸ್ಮಾಯಿಲ್ ಅವರು ಕೆಂಡಸಂಪಿಗೆಯಲ್ಲಿ ಈ ಹಿಂದೆಯೇ ಬರೆದಿದ್ದಾರೆ. ಜಾಫರ್ ಷರೀಫ್ ತಮಗೆ ಬೇಕಾದಾಗ ಮಾತ್ರ ಮುಸ್ಲಿಂ ಮುಖಂಡ ಎನ್ನುವುದು ಲೇಖನದ ಶೀರ್ಷಿಕೆ. ಷರೀಫ್ ವ್ಯಕ್ತಿತ್ವ ಕುರಿತ ಇನ್ನಷ್ಟು ಚಿತ್ರಣ ಇಲ್ಲಿದೆ.

***********



ನಕ್ಸಲ್ ಮುಖಂಡ ಸಾಕೇತ್ ರಾಜನ್ ಅವರನ್ನು ಧರ್ಮಸಿಂಗ್ ಸರ್ಕಾರವಿದ್ದಾಗ ಪೊಲೀಸರು ಗುಂಡಿಟ್ಟು ಕೊಂದರು. ಆಗ ರೋಷನ್ ಬೇಗ್ ಧರ್ಮಸಿಂಗ್ ಸಂಪುಟದಲ್ಲಿದ್ದರು. ಸಾಕೇತ್ ರಾಜನ್ ಅವರ ಶವವನ್ನು ಸ್ವೀಕರಿಸಲು ಅವರ ತಾಯಿಯೇ ನಿರಾಕರಿಸಿದರು. ಸಾಕೇತ್ ಅವರ ಸ್ನೇಹಿತರು, ಕೆಲ ಮಾವೋವಾದಿ ಚಿಂತನೆಯ ಬುದ್ಧಿಜೀವಿಗಳು ಶವ ಪಡೆಯಲು ಯತ್ನಿಸಿದರಾದರೂ ಪೊಲೀಸರು ಕೊಡಲು ಒಪ್ಪಲಿಲ್ಲ.

ಆಶ್ಚರ್ಯವೆಂದರೆ ರೋಷನ್ ಬೇಗ್ ಅವರು ಇದ್ದಕ್ಕಿದ್ದಂತೆ ತಮಗೆ ಶವ ಕೊಡಲು ಕೇಳಿಕೊಂಡರು. ತಾವೇ ಅಂತ್ಯಸಂಸ್ಕಾರ ಮಾಡುವುದಾಗಿ ಹೇಳಿದರು. ಬೇಗ್ ಹೀಗೇಕೆ ಕೇಳುತ್ತಿದ್ದಾರೆ ಎಂಬ ಆಶ್ಚರ್ಯ ಎಲ್ಲರದಾಗಿತ್ತು.

ಸಾಕೇತ್ ಸಹ ಹೋರಾಟಗಾರ. ಸಮಾಜದ ಒಳಿತಿಗಾಗಿ ಜೀವ ಸವೆಸಿದವರು. ಅವರು ಆಯ್ಕೆ ಮಾಡಿಕೊಂಡ ದಾರಿ ಸರಿಯಲ್ಲದಿರಬಹುದು, ಆದರೆ ಅವರ ಜನಪರ ಕಾಳಜಿಯನ್ನು ಅನುಮಾನಿಸಲು ಸಾಧ್ಯವಿಲ್ಲ. ಹೀಗಾಗಿ ನಾನು ಶವ ಕೇಳಿದೆ ಎಂದು ಬೇಗ್ ತಮ್ಮ ಆಪ್ತರಲ್ಲಿ ಹೇಳಿದ್ದರಂತೆ. ಹೀಗೆ ಒಬ್ಬ ನಕ್ಸಲ್ ನಾಯಕನ ಶವಸಂಸ್ಕಾರ ತಾನೇ ಮಾಡುವುದಾಗಿ ಹೇಳಲು ಬೇಗ್ ಎಂಥ ಗುಂಡಿಗೆ ಹೊಂದಿದ್ದರು ಎಂಬುದನ್ನು ಗಮನಿಸಬೇಕು.

ರೋಷನ್ ಬೇಗ್ ಸ್ವಭಾವವೇ ಹಾಗೆ. ಅವರು ಹಿಂದೂ ಮಿಲಿಟೆಂಟ್‌ಗಳನ್ನು ಎದುರಿಸುವ ಹಾಗೆಯೇ ಮುಸ್ಲಿಂ ಸಂಪ್ರದಾಯವಾದಿಗಳನ್ನೂ ಎದುರಿಸುತ್ತಾರೆ. ಹಾಗಾಗಿ ತಮ್ಮ ಸಮುದಾಯದೊಳಗೂ ಅಸಮಾಧಾನ, ವಿರೋಧಗಳನ್ನು ಎದುರಿಸಿದವರು. ಬೇಗ್ ಶಾಸಕರಾದ ನಂತರ ಶಿವಾಜಿನಗರ ಮತ್ತು ಸುತ್ತಮುತ್ತ ಕೋಮುಗಲಭೆಗಳೆಲ್ಲ ನಿಂತುಹೋಗಿದ್ದು ಕಾಕತಾಳೀಯವೇನೂ ಅಲ್ಲ. ಬೇಗ್ ಅವರ ಶ್ರಮ ಅದಕ್ಕೆ ಕಾರಣ.

ಹಿಂದೊಮ್ಮೆ ಪ್ರವೀಣ್ ತೊಗಾಡಿಯಾ ಹಾಗೆಯೇ ಒಬ್ಬ ಮುಸ್ಲಿಂ ಗುರು ಪ್ರಚೋದನಕಾರಿ ಉಪನ್ಯಾಸ ನೀಡುತ್ತಿದ್ದುದನ್ನು ಗಮನಿಸಿದ ಬೇಗ್ ಕೂಡಲೇ ಆ ಗುರುವನ್ನು ಜಾಗಖಾಲಿ ಮಾಡಿಸಿದರು. ಇದಕ್ಕಾಗಿ ವಿರೋಧ ಎದುರಾದರೂ ಅವರು ಲೆಕ್ಕಿಸಿರಲಿಲ್ಲ.

ಬೇಗ್ ಸುವರ್ಣ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಶಿವಾಜಿನಗರದಲ್ಲಿ ಸಾವಿರಾರು ಮುಸ್ಲಿಮರನ್ನು ಸೇರಿಸಿ ಅಭೂತಪೂರ್ವ ರಾಜ್ಯೋತ್ಸವ ಮಾಡಿ ಸೈ ಎನಿಸಿಕೊಂಡವರು. ಮದರಸಾಗಳಲ್ಲಿ ಕೇವಲ ಧಾರ್ಮಿಕ ಶಿಕ್ಷಣ ಕೊಟ್ಟರೆ ಸಾಲದು, ಟಿವಿ-ಕಂಪ್ಯೂಟರ್‌ಗಳೂ ಅಲ್ಲಿಗೆ ಬರಬೇಕು. ನಮ್ಮ ಮಕ್ಕಳೂ ಆಧುನಿಕ ಶಿಕ್ಷಣ ಪಡೆಯಬೇಕು ಎಂದು ಬೇಗ್ ಹೇಳಿದಾಗಲೂ ಪ್ರತಿರೋಧ ಎದುರಿಸಬೇಕಾಯಿತು. ಆದರೆ ಬೇಗ್ ಕಟ್ಟರ್‌ಧಾರ್ಮಿಕರ ವಿರೋಧ ಎದುರಿಸುತ್ತಲೇ, ಅವರನ್ನು ಮನವೊಲಿಸಿ ಬದಲಾವಣೆಗಳನ್ನು ತರಲು ಯತ್ನಿಸಿದರು. ತಕ್ಕ ಮಟ್ಟಿಗೆ ಯಶಸ್ವಿಯೂ ಆದವರು.

ರೋಷನ್ ಬೇಗ್ ಅವರಿಗೆ ಹಿಂದೂ-ಮುಸ್ಲಿಂ ಸಾಮರಸ್ಯದ ಅಗತ್ಯಗಳು ಚೆನ್ನಾಗಿ ಗೊತ್ತು. ಈ ಸಾಮರಸ್ಯಕ್ಕಾಗಿ ಹೇಗೆ ಹೆಣಗಬೇಕು ಎಂಬುದೂ ಗೊತ್ತು. ವಿರೋಧಗಳನ್ನು ಹೇಗೆ ಸಂಭಾಳಿಸಬೇಕು ಎಂಬುದೂ ಗೊತ್ತು. ಹೀಗಾಗಿ ಎಲ್ಲಾದರೂ ಕೋಮುಗಲಭೆಯ ವಾಸನೆ ಗೊತ್ತಾದರೂ ಅಲ್ಲಿ ಬೇಗ್ ಹಾಜರ್. ಕೆಲಕ್ಷಣಗಳಲ್ಲೇ ಅದನ್ನು ತಿಳಿಗೊಳಿಸುವ ಶಕ್ತಿಯೂ ಅವರಿಗಿರುವುದರಿಂದ ಪೊಲೀಸರೂ ಸಹ ಬೇಗ್ ಬರುವುದನ್ನೇ ಕಾಯುತ್ತಾರೆ.

ಇಂಥ ರೋಷನ್ ಬೇಗ್ ಛಾಪಾ ಕಾಗದ ಹಗರಣದಲ್ಲಿ ಹೆಸರು ಕೆಡಿಸಿಕೊಂಡರು. ಅವರು ಹಗರಣದಲ್ಲಿ ಕ್ಲೀನ್ ಚಿಟ್ ಪಡೆದುಕೊಂಡರೂ ಹಗರಣದಲ್ಲಿ ತಮ್ಮ ಹೆಸರು ಥಳುಕು ಹಾಕಿಕೊಂಡಿದ್ದರಿಂದ ಅನುಭವಿಸಿದ ಕಷ್ಟ-ಕೋಟಲೆಗಳು ನೂರಾರು. ಈಗಲೂ ಆ ಹಗರಣದ ನೆರಳಿನಿಂದ ಹೊರಬರಲು ಬೇಗ್ ಅವರಿಗೆ ಸಂಪೂರ್ಣ ಸಾಧ್ಯವಾಗಿಲ್ಲ.

ಬೇಗ್ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರನ್ನೇ ಎದುರುಹಾಕಿಕೊಂಡವರು. ಈಗಲೂ ಆ ಜಿದ್ದಾಜಿದ್ದಿ ಮುಂದುವರೆದೇ ಇದೆ. ಅವರು ಇಡೀ ರಾಜ್ಯದ ಮುಸ್ಲಿಮರಿಗೆ ನಾಯಕತ್ವ ನೀಡುವ ಮುಖಂಡರಾಗಿ ಹೊರಹೊಮ್ಮುತ್ತಾರಾ? ಕಾದು ನೋಡಬೇಕು.

*******



ಅಹಿಂದ ಮುಖಂಡ ಸಿ.ಎಂ.ಇಬ್ರಾಹಿಂ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಗುಂಡೂರಾಯರ ಸರ್ಕಾರದಲ್ಲಿ ಇಬ್ರಾಹಿಂ ಮಿಂಚಿದ್ದೇ ಮಿಂಚಿದ್ದು. ಯಾವಾಗ ಇಡೀ ರಾಜ್ಯದ ಜನ ಗುಂಡೂರಾಯರ ಜನವಿರೋಧಿ ಸರ್ಕಾರದ ವಿರುದ್ಧ ತಿರುಗಿಬಿತ್ತೋ ಇಬ್ರಾಹಿಂ ಆದಿಯಾಗಿ ಎಲ್ಲರೂ ಮನೆ ಸೇರಿದರು. ಆಮೇಲೆ ಇಬ್ರಾಹಿಂ ಸಾಹೇಬರು ಮಾಡಿದ್ದೆಲ್ಲಾ ಹಿಂಬಾಗಿಲ ರಾಜಕಾರಣ.

ಮುಂಬಾಗಿಲ ರಾಜಕಾರಣ ಇಬ್ರಾಹಿಂ ಅವರಿಗೆ ಇಷ್ಟವಿಲ್ಲ ಎಂದೇನಲ್ಲ. ಆದರೆ ೮೦ರ ದಶಕದಿಂದ ಈಚೆಗೆ ಅವರು ನೇರ ಚುನಾವಣೆಗಳಲ್ಲಿ ನಿಂತು ನಿಂತು ಸೋತು ಹೈರಾಣಾಗಿ ಹೋಗಿದ್ದಾರೆ. ಹಾಗೆ ನೋಡಿದರೆ ಅವರು ನಿಜಲಿಂಗಪ್ಪ, ವಿರೇಂದ್ರ ಪಾಟೀಲ್, ಹೆಗಡೆ, ದೇವೇಗೌಡ, ಬೊಮ್ಮಾಯಿ ಹೀಗೆ ಹಲವು ಘಟಾನುಘಟಿಗಳ ಗರಡಿಗಳಲ್ಲಿ ಪಳಗಿದವರು. ಯಾರ ಜತೆಯೂ ಪರ್ಮನೆಂಟ್ ಸ್ನೇಹ, ಪರ್ಮನೆಂಟ್ ದುಷ್ಮನಿ ಉಳಿಸಿಕೊಂಡವರಲ್ಲ.

ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಚಿಟಿಕೆ ಹೊಡೆಯುವಷ್ಟರಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದವನ್ನು ಬಗೆಹರಿಸಿದ ಖ್ಯಾತಿ ಇಬ್ರಾಹಿಂ ಅವರದ್ದು. ಗೌಡರು ಪ್ರಧಾನಿಯಾಗುತ್ತಿದ್ದಂತೆ ಅವರ ಪಂಚೆಯ ಚುಂಗು ಹಿಡಿದು ದಿಲ್ಲಿಗೆ ಹೋದ ಇಬ್ರಾಹಿಂ ಕೇಂದ್ರ ಸಂಪುಟದಲ್ಲಿ ಸಚಿವರಾಗಿ ಫಳಫಳಿಸಿದರು.

ಗೌಡರು ಗಾದಿ ಕಳೆದುಕೊಂಡು ವಾಪಾಸು ಬಂದಮೇಲೆ ಇಬ್ರಾಹಿಂ ಹುಡುಕಿಕೊಂಡ ಹೊಸ ಜತೆಗಾರ ಸಿದ್ಧರಾಮಯ್ಯ. ಅಲ್ಲೇ ಹುಟ್ಟಿಕೊಂಡ ಐಡಿಯಾ ಅಹಿಂದ. ಅಸಾಧ್ಯ ವಾಗ್ಪಟು ಇಬ್ರಾಹಿಂ ಸಾವಿರಸಾವಿರ ಸಂಖ್ಯೆಯ ಪ್ರೇಕ್ಷಕರನ್ನು ನಿಬ್ಬೆರಗಾಗಿಸುವಂತೆ ಮಾತನಾಡಬಲ್ಲರು. ಬಸವಣ್ಣನವರ ವಚನಗಳನ್ನು ಹೇಳುತ್ತಲೇ ಎದುರಾಳಿ ರಾಜಕಾರಣಿಗಳನ್ನು ತಮ್ಮ ಮಾತಿನಲ್ಲೇ ಕುಟ್ಟಿ ಬಿಸಾಡಬಲ್ಲವರು.

ಇಬ್ರಾಹಿ ಜಾತಿ ಸಮೀಕರಣದಲ್ಲಿ ಅತಿ ಹೆಚ್ಚು ನಂಬಿಕೆಯಿಟ್ಟವರು. ದೇವೇಗೌಡರ ಹಾಗೆಯೇ ಎಲ್ಲ ಜಾತಿಗಳ ಹೆಸರುಗಳನ್ನು ಬರೆದು ಕಳೆದು, ಕೂಡಿಸಿ, ಭಾಗಿಸಿ ತಮ್ಮ ಅನುಕೂಲದ ಲೆಕ್ಕಾಚಾರ ಹಾಕುವವರು. ಸಿದ್ಧರಾಮಯ್ಯ ಅವರ ತಲೆಗೂ ಈ ಸಮೀಕರಣವನ್ನು ತುಂಬಿಸಿ ಅವರ ರಾಜಕೀಯ ಜೀವನದ ದಿಕ್ಕನ್ನೇ ಬದಲಾಯಿಸಿದರು ಎಂಬ ಆರೋಪವೂ ಇದೆ.

ಇಂಥ ಇಬ್ರಾಹಿಂ ಸಾಹೇಬರು ಇವತ್ತು ಬೆಂಗಳೂರಿನಲ್ಲಿದ್ದರೆ ನಾಳೆ ಕೇರಳದ ಯಾವುದೋ ಊರಿನಲ್ಲಿರುತ್ತಾರೆ, ನಾಡಿದ್ದು ದಿಲ್ಲಿ, ಮತ್ತೊಂದು ದಿನ ತಮಿಳುನಾಡು. ಅವರ ಹೆಜ್ಜೆ ಜಾಡು ಕಂಡುಹಿಡಿಯುವುದು ಕಷ್ಟ. ಅವರ ಆಸ್ತಿಪಾಸ್ತಿ ಲೆಕ್ಕಾಚಾರವೂ ಅಷ್ಟು ಸುಲಭವಲ್ಲ ಎನ್ನುತ್ತಾರೆ ಬಲ್ಲವರು.

ಇಷ್ಟೆಲ್ಲ ಇದ್ದರೂ ಇಬ್ರಾಹಿಂ ಅವರನ್ನು ೮೦ರ ದಶಕದಿಂದೀಚೆಗೆ ಜನ ತಿರಸ್ಕರಿಸುತ್ತಲೇ ಬರುತ್ತಿದ್ದಾರೆ. ಜನ ತಿರಸ್ಕರಿಸಿದ ನಾಯಕ ಎಷ್ಟೇ ತಂತ್ರ ಮಾಡಿ ರಾಜ್ಯಸಭೆ, ವಿಧಾನಪರಿಷತ್ತು ಸೀಟುಗಳನ್ನು ಗಿಟ್ಟಿಸಿಕೊಂಡರೂ ಆತನನ್ನು ಪರಿಪೂರ್ಣ ರಾಜಕಾರಣಿ ಎನ್ನಲು ಸಾಧ್ಯವಿಲ್ಲ.

ಇಬ್ರಾಹಿಂ ಅವರಿಗೆ ಒಂದೇ ಒಂದು ಗೆಲುವಿನ ತುರ್ತು ಅಗತ್ಯವಿದೆ. ಅದು ಸಾಧ್ಯವಾಗದೇ ಹೋದರೆ ಸಿದ್ಧರಾಮಯ್ಯ ದಂಡಿನೊಂದಿಗೆ ಜನರನ್ನು ಸೆಳೆಯಲು ಒಬ್ಬ ಸಿನಿಮಾ ಹೀರೋ ಹಾಗೆ ಇಬ್ರಾಹಿಂ ಸುತ್ತುತ್ತಿರಬೇಕು ಅಷ್ಟೆ.

**********

ಇದಿನಬ್ಬ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಅವರು ಅಧ್ಯಕ್ಷರಾಗುವ ಹೊತ್ತಿಗೆ ಅವರಿಗೆ ವೃದ್ಧಾಪ್ಯ ಆವರಿಸಿತ್ತು. ಕೆಲ ಕನ್ನಡದ ಸಾಹಿತಿಗಳು ಪ್ರಾಧಿಕಾರಕ್ಕೆ ಹೀಗೆ ವಯಸ್ಸಾದ ವ್ಯಕ್ತಿ ಬೇಕಿತ್ತೇ ಎಂದು ವ್ಯಂಗ್ಯವಾಡಿದ್ದರು.

ಆದರೆ ಇದಿನಬ್ಬ ವಿಧಾನಮಂಡಲದಲ್ಲಿ ಆಡಿದ್ದ ಭಾಷಣಗಳು ಆ ಕಾಲಕ್ಕೆ ಅದ್ಭುತ. ಹೇಳಿಕೇಳಿ ಇದಿನಬ್ಬ ಆಶುಕವಿ. ಸಮಸ್ಯೆಗಳನ್ನು ತಮ್ಮ ಕವಿತ್ವದಿಂದಲೇ ಸಭೆಯ ಗಮನಕ್ಕೆ ತರುತ್ತಿದ್ದ ಇದಿನಬ್ಬ ಅಪ್ಪಟ ಗಾಂಧಿವಾದಿ.

ತೀರಾ ಧಾರ್ಮಿಕ ಮನಸ್ಸಿನವರೂ ಆಗಿದ್ದ ಇದಿನಬ್ಬ ಅವರಿಗೆ ಸರಿಯಾಗಿ ಉರ್ದು ಬರುತ್ತಿರಲಿಲ್ಲ. ಅವರ ಮಾತೃಭಾಷೆ ಕನ್ನಡ. ದಕ್ಷಿಣ ಕನ್ನಡದಲ್ಲಿ ಹೀಗೆ ಕನ್ನಡವನ್ನೇ ಮಾತೃಭಾಷೆಯಾಗಿ ಹೊಂದಿರುವ ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಇದಿನಬ್ಬ ಕನ್ನಡದವರಾಗಿದ್ದರಿಂದ ಅವರು ಉರ್ದು ಮಾತನಾಡುವ ಮುಸ್ಲಿಮರ ಜತೆ ಸಂವಹಿಸಲು ಸ್ವಲ್ಪ ಪ್ರಯಾಸಪಡಬೇಕಾಗಿತ್ತು.

ಕರ್ನಾಟಕ ರಾಜಕಾರಣದಲ್ಲಿ ಕೆಲ ಕಾಲ ಒಂದಷ್ಟು ಮೆರೆದ ಮತ್ತೊಬ್ಬ ಮುಸ್ಲಿಂ ರಾಜಕಾರಣಿ ನಜೀರ್ ಅಹಮದ್. ಕೋಲಾರದ ನಜೀರ್ ಅವರು ಬಂಗಾರಪ್ಪ ಅವರ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿದ್ದವರು. ನಜೀರ್ ಹಾಗು ಎಸ್.ರಮೇಶ್ ಇಬ್ಬರೂ ಬಂಗಾರಪ್ಪ ಅವರಿಗೆ ಬಲಗೈ- ಎಡಗೈ ಹಾಗಿದ್ದವರು.

ಸಾಕಷ್ಟು ಆಸ್ತಿ ಸಂಪಾದಿಸಿರುವ ನಜೀರ್ ದಾನ-ಧರ್ಮದಲ್ಲಿ ಎತ್ತಿದ ಕೈ. ಹೀಗಾಗಿ ಮುಸ್ಲಿಂ ಸಮುದಾಯದಲ್ಲಿ ಪ್ರೀತಿ ಗಳಿಸಿಕೊಂಡಿದ್ದಾರೆ. ಆದರೆ ಬಂಗಾರಪ್ಪ ನಿರ್ಗಮನದ ನಂತರ ನಜೀರ್ ರಾಜಕೀಯ ಜೀವನದ ಸುಖಪರ್ವವೆಲ್ಲ ಮುಗಿದುಹೋಗಿತ್ತು. ವಿಧಾನಪರಿಷತ್ ಸದಸ್ಯರಾಗಿರುವ ನಜೀರ್ ತಮ್ಮ ವ್ಯಾಪ್ತಿ, ಮಿತಿಯನ್ನು ಮೀರಿ ಬೆಳೆಯಲು ಯತ್ನಿಸಿದ ಉದಾಹರಣೆಗಳು ಕಡಿಮೆ.

ಖಮರುಲ್ ಇಸ್ಲಾಂ ಸಮಸ್ಯೆ ಇರುವುದೇ ಅವರ ಕನ್ನಡ ಭಾಷಾ ಅಜ್ಞಾನದಲ್ಲಿ. ಕನ್ನಡ ಬಾರದ ಯಾವುದೇ ಧರ್ಮದ ರಾಜಕಾರಣಿ ಕರ್ನಾಟಕದಲ್ಲಿ ಬೆಳೆಯುವುದು ಸಾಧ್ಯವೇ ಇಲ್ಲ. ಅಂಥ ಉದಾಹರಣೆಗಳೂ ಇಲ್ಲ. ಆದರೆ ಖಮರುಲ್ ಅವರಿಗೆ ಕನ್ನಡ ಮಾತನಾಡಲು ಬರುವುದಿಲ್ಲ. ಕಲಿಯುವ ಪ್ರಯತ್ನವನ್ನೂ ಆ ವ್ಯಕ್ತಿ ಮಾಡಿದ ಹಾಗೆ ಕಾಣುವುದಿಲ್ಲ.

ಕನ್ನಡ ಕಲಿಯದೇ ಹೋದರೆ ಖಮರುಲ್ ಮುಂದೆ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇತರರ ಕತೆ ಹಾಗಿರಲಿ ಕನ್ನಡ ಬಾರದ ಶಾಸಕ-ಮಂತ್ರಿ-ಜನಪ್ರತಿನಿಧಿಯನ್ನು ಮುಸ್ಲಿಮರೇ ಒಪ್ಪುವ ಸಾಧ್ಯತೆಗಳು ಕಡಿಮೆ.

ಸಲೀಂ ಅಹಮದ್ ಅವರಿಗೆ ಹಿಂಬಾಗಿಲ ರಾಜಕಾರಣ ಒಗ್ಗಿ ಹೋದಂತಿದೆ. ಹಿಂದೊಮ್ಮೆ ಸಲೀಂ ಬಿನ್ನಿಪೇಟೆಯಲ್ಲಿ ನಿಂತು ಸೋತಿದ್ದರು. ಆಮೇಲೆ ವಿಧಾನಪರಿಷತ್‌ಗೆ ಬಂದರು, ಮುಖ್ಯ ಸಚೇತಕರಾಗಿಯೂ ಇದ್ದವರು. ಆದರೆ ಸಲೀಂ ತಮ್ಮದೇ ಒಂದು ಕ್ಷೇತ್ರ ಗುರುತಿಸಿಕೊಳ್ಳದೇ ಹೋದರೆ ಮುಂದೆ ಅವರು ರಾಜಕೀಯ ಭೂಪಟದಲ್ಲಿ ಕಣ್ಮರೆಯಾಗುವ ಸಾಧ್ಯತೆಗಳೇ ಹೆಚ್ಚು.

***********



ಮುಮ್ತಾಜ್ ಅಲಿ ಖಾನ್ ಈಗ ಬಿಜೆಪಿ ಸರ್ಕಾರದಲ್ಲಿ ಮಂತ್ರಿ. ಭಾರತೀಯ ಜನತಾ ಪಕ್ಷದಲ್ಲಿ ಮಂತ್ರಿಯಾಗಲು ಸಾಧ್ಯವಿದ್ದ ಮುಸ್ಲಿಮರು ಇಬ್ಬರೇ. ಒಬ್ಬಾತ ಅಬ್ಬಾಸ್ ಅಲಿ ಬೋಹ್ರಾ. ಈತ ಮಂಡ್ಯದಲ್ಲಿ ಟಿಕೆಟ್ ಸಿಗಲಿಲ್ಲವೆಂಬ ಕಾರಣಕ್ಕೆ ಬಂಡಾಯವೆದ್ದು ಸ್ಪರ್ಧಿಸಿ ಸೋತವರು. ಹೀಗಾಗಿ ಉಳಿದುಕೊಂಡಿದ್ದು ಮುಮ್ತಾಜ್ ಅಲಿ ಖಾನ್ ಮಾತ್ರ.

ಮುಮ್ತಾಜ್ ಸಹೃದಯಿ, ಸರಳ, ಸಂಪನ್ನರು. ಅದರಲ್ಲಿ ಎರಡು ಮಾತಿಲ್ಲ. ಪಿಎಚ್‌ಡಿ ಮಾಡಿದ್ದಾರೆ, ಹಲವಾರು ಡಿಗ್ರಿಗಳನ್ನು ಪಡೆದಿದ್ದಾರೆ.

ಇದೆಲ್ಲಕ್ಕಿಂತ ಹೆಚ್ಚಾಗಿ ಮುಮ್ತಾಜ್ ಆರ್‌ಎಸ್‌ಎಸ್-ಬಿಜೆಪಿ ವಕ್ತಾರರ ಹಾಗೆ ಪದೇ ಪದೇ ಪತ್ರಿಕೆಗಳ ವಾಚಕರ ವಾಣಿಗಳಲ್ಲಿ ಬರೆದು ಸುದ್ದಿಯಾದವರು. ಅದೇ ಕಾರಣಕ್ಕೆ ಮುಸ್ಲಿಮರ ಕೋಪಕ್ಕೂ ಗುರಿಯಾದವರು. ತಾವೇ ಸಿಕ್ಕಿಬಿದ್ದಿರುವ ಆರ್‌ಎಸ್‌ಎಸ್ ಜಾಲದಿಂದ ಅವರು ಹೊರಬರಲಾರರು.

ಇನ್ನು ಅವರು ಮಂತ್ರಿಯಾಗಿರುವ ವಕ್ಫ್ ಖಾತೆಯ ನಿರ್ವಹಣೆಯಲ್ಲಿ ಅದ್ಭುತವಾದುದ್ದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಪರಭಾರೆಯಾಗಿರುವ ವಕ್ಫ್ ಆಸ್ತಿ ಬಿಡಿಸಿಕೊಳ್ಳಲು ಹೋದರೆ ಮುಮ್ತಾಜ್ ಅವರಿಗೆ ಮುಂದಿನ ಐದು ವರ್ಷ ಅದೇ ಕೆಲಸ ಆಗಿಹೋಗುತ್ತದೆ. ಅಂಥ ಸಾಹಸವನ್ನು ಅವರಿಗೆ ಮಾಡಲು ಆ ಸಮುದಾಯದ ಪಟ್ಟಭದ್ರರು ಬಿಡುವುದೂ ಅಷ್ಟು ಸಾಧ್ಯವೇನಲ್ಲ.

********

ಜಗಳೂರು ಇಮಾಮ್ ಸಾಬ್ ಅವರ ಬಗ್ಗೆ ಹೊಸ ತಲೆಮಾರಿನ ಮುಸ್ಲಿಂ ಯುವಕರಿಗೆ ಗೊತ್ತಿಲ್ಲದೇ ಇರಬಹುದು. ಇಮಾಮ್ ಸಾಬರು ಚಿತ್ರದುರ್ಗದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಹೋದವರು. ಯುವಮುಸ್ಲಿಂ ಮುಖಂಡರಿಗೆ ಇಮಾಮ್ ಸಾಬ್ ಅವರು ಆದರ್ಶ ಆಗಬಲ್ಲರು ಅನಿಸುತ್ತದೆ.

ಕೆಂಗಲ್ ಹನುಮಂತಯ್ಯನವರ ಸಂಪುಟದಲ್ಲಿ ಇಮಾಮ್ ಸಾಬ್ ಅವರು ಸಾರಿಗೆ ಸಚಿವರಾಗಿದ್ದರಂತೆ. ಆದರೆ ದುರಂತವೆಂದರೆ ಅವರು ತೀರಿಕೊಂಡಾಗ ಅಂತ್ಯಸಂಸ್ಕಾರ ಮಾಡಲೂ ಅವರ ಕುಟುಂಬದವರ ಬಳಿ ಹಣವಿರಲಿಲ್ಲ.

ಇಮಾಮ್ ಸಾಬ್ ಅವರಂಥ ಪ್ರಾಮಾಣಿಕರು ಮುಸ್ಲಿಂ ಸಮುದಾಯದಲ್ಲಿ ಮಾತ್ರವಲ್ಲ, ಎಲ್ಲ ಸಮುದಾಯಗಳಲ್ಲೂ ಅಪರೂಪ.

*******

ಅಜೀಜ್ ಸೇಟ್ ಅವರ ಬಗ್ಗೆ ಬರೆಯದೇ ಹೋದರೆ ಅಪಚಾರವಾದೀತು. ಅಜೀಜ್ ಸೇಟ್ ನಿಜವಾದ ಅರ್ಥದಲ್ಲಿ ಸಮಾಜವಾದಿ. ಅವರು ಜನಮುಖಿ ಆಗಿದ್ದರಿಂದಲೇ ಪ್ರಗತಿಯ ಕಡೆಗೆ ಮುಕ್ತ ಮನಸ್ಸು ಹೊಂದಿದ್ದರು. ಮುಸ್ಲಿಮರ ನಡುವೆ ಇಂಥ ಅಪ್ಪಟ ಸಮಾಜವಾದಿ ಹುಟ್ಟುಕೊಂಡರೆ ಹಿಂದೂ ಕಟ್ಟರ್‌ವಾದಿಗಳು ಸಹಿಸುವುದಿಲ್ಲ. ಈ ಕಾರಣದಿಂದಲೇ ಅವರನ್ನು ತುಳಿಯುವ ಎಲ್ಲ ಯತ್ನಗಳು ಪದೇ ಪದೇ ನಡೆದವು.

ಎಸ್.ಎಂ.ಕೃಷ್ಣ, ಶಾಂತವೇರಿ ಗೋಪಾಲಗೌಡರ ಹಾಗೆ ಸೋಷಿಯಲಿಸ್ಟ್ ಪಾರ್ಟಿಯಿಂದಲೇ ರಾಜಕಾರಣಕ್ಕೆ ಬಂದ ಅಜೀಜ್ ಸೇಟ್ ಕಡೆಯವರೆಗೂ ಸಮಾಜವಾದಿ ಮೌಲ್ಯಗಳನ್ನು ಬಿಟ್ಟುಕೊಟ್ಟವರಲ್ಲ. ಅಜೀಜ್ ಸೇಟ್ ಎಂಥ ಕನ್ನಡಪ್ರೇಮಿ ಎಂದರೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ರ್‍ಯಾಂಕ್ ಪಡೆದವರಿಗೆ ಸ್ವಂತ ಖರ್ಚಿನಲ್ಲಿ ಚಿನ್ನದ ಪದಕ ಕೊಡುತ್ತಿದ್ದರು. ಆದರೆ ಇದೇ ಸೇಟರನ್ನು ಕನ್ನಡವಿರೋಧಿ ಎಂದು ಹುಯಿಲೆಬ್ಬಿಸಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನ ನಡೆದಿತ್ತು.

ಅಜೀಜ್ ಸೇಟರ ಪುತ್ರ ತನ್ವೀರ್ ಸೇಟ್ ಅವರು ಈಗ ರಾಜಕಾರಣದಲ್ಲಿದ್ದಾರೆ. ಅವರಿಗೆ ತಂದೆಯ ಹಾಗೆ ಸಮಾಜವಾದಿ ಸಂಸ್ಕಾರವಿಲ್ಲ. ಹೀಗಿದ್ದರೂ ಸಮುದಾಯದ ಮುಖಂಡರಾಗಿ ಬೆಳೆಯಲು ಎಲ್ಲ ಅವಕಾಶಗಳೂ ಅವರಿಗಿವೆ.

*******

ಮುಸ್ಲಿಂ ರಾಜಕಾರಣದಲ್ಲಿ ಹೊಸ ಧ್ರುವತಾರೆಗಳಂತೆ ಉದ್ಭವಿಸಿದವರು ಅಬ್ದುಲ್ ಅಜೀಂ ಹಾಗು ಬಿ.ಜಡ್.ಜಮೀರ್ ಅಹಮದ್ ಖಾನ್. ಇವರಲ್ಲಿ ಅಜೀಂ ದೇವೇಗೌಡರ ನೆರಳಿನಂತೆ ಇದ್ದುಬಿಟ್ಟಿದ್ದಾರೆ. ಒಮ್ಮೆ ಬಿನ್ನಿಪೇಟೆಯಲ್ಲಿ ವಿಜಯನಗರದ ವೀರಪುತ್ರ ಸೋಮಣ್ಣನವರ ಎದುರಿನಲ್ಲಿ ಅಗ್ನಿಪರೀಕ್ಷೆಗೆ ಒಡ್ಡಿಕೊಂಡು ಸೋತವರು. ಸೋತರೆಂಬ ಅನುಕಂಪದಿಂದ ವಿಧಾನಪರಿಷತ್‌ಗೆ ನಾಮಕರಣವಾದವರು.

ಅಜೀಂ ನಾವೆಲ್ಲರೂ ಕಂಡಂತೆ ಉತ್ತಮ ಪೊಲೀಸ್ ಅಧಿಕಾರಿ. ರೌಡಿಗಳಿಗೆ ನಡುಕ ಹುಟ್ಟಿಸಿದವರು. ಆದರೆ ಒಳ್ಳೆಯ ರಾಜಕಾರಣಿಯಾಗುವುದು ಅಷ್ಟು ಸುಲಭವೇನಲ್ಲ. ಅಜೀಂ ಪೊಲೀಸ್ ಅಧಿಕಾರಿಯಾಗುವುದಕ್ಕೆ ಮುನ್ನವೇ ಶ್ರೀಮಂತರು. ರಾಜಕಾರಣದಲ್ಲಿ ಹಣ ಉಳ್ಳವರು ಹೇಗೆ ಹೇಗೋ ಬಳಕೆಯಾಗುತ್ತಾರೆ. ಅಜೀಂ ಹಾಗಾಗದಿರಲಿ.

ಇನ್ನು ಜಮೀರ್ ಅಹಮದ್ ಖಾನ್ ಆಗಾಗ ಕಾರ್ಟೂನ್ ಸಿನಿಮಾದ ಪಾತ್ರವೊಂದರ ಹಾಗೆ ಕಾಣುತ್ತಾರೆ. ದಿಢೀರನೆ ಯಶಸ್ಸು ಗಳಿಸಿದವರು ಜಮೀರ್. ಎಸ್.ಎಂ.ಕೃಷ್ಣ ರಾಜೀನಾಮೆ ನೀಡಿ ತೆರವಾದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಆರ್.ವಿ.ದೇವರಾಜ್‌ಗೆ ನೀರಿಳಿಸಿದವರು. ಗೆದ್ದ ಕೆಲ ದಿನಗಳಲ್ಲೇ ಮಂತ್ರಿಯಾದವರು. ನಂತರ ಈಗ ಎರಡನೇ ಅವಧಿಗೆ ಮತ್ತೆ ಶಾಸಕರಾಗಿದ್ದಾರೆ.

ಜಮೀರ್ ಅವರಿಗೆ ಇನ್ನೂ ಹುಡುಗುಬುದ್ಧಿ ಎಂದು ಅವರನ್ನು ಗಮನಿಸಿದವರಿಗೇ ಗೊತ್ತಾಗುತ್ತದೆ. ಯಾವ ಕುಮಾರಣ್ಣನ ಹೆಸರಿನಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರೋ, ಅದೇ ಕುಮಾರಣ್ಣನ ವಿರುದ್ಧ ಬಂಡೆದ್ದು ರಾಜೀನಾಮೆ ಬಿಸಾಕಿದವರು ಜಮೀರ್. ತದನಂತರ ಅದೇ ಕುಮಾರಣ್ಣನ ಜತೆ ಅಷ್ಟೇ ಬೇಗ ರಾಜಿಯಾದವರೂ ಅವರೇ.

ಅವರು ಪ್ರಬುದ್ಧರಾಗುವವರೆಗೆ ಕಾಯಬೇಕು, ಅಷ್ಟೆ.

*******

ಕನ್ನಡ ಚಳವಳಿಯ ಇತಿಹಾಸದಲ್ಲಿ ತಮ್ಮ ಹೆಸರನ್ನು ಉಳಿಸಿಹೋಗಿರುವ ರೆಹಮಾನ್ ಖಾನ್ ಅವರಿಗೆ ರಾಜಕೀಯ ಖಯಾಲಿಗಳಿರಲಿಲ್ಲ. ಬಯಸಿದ್ದರೆ ಅವರು ರಾಜಕಾರಣಕ್ಕೆ ಇಳಿಯಬಹುದಿತ್ತು. ಜೆ.ಎಚ್.ಪಟೇಲರೇ ಅವರಿಗೆ ರಾಜಕಾರಣ ಸೇರಲು ಆಹ್ವಾನ ನೀಡಿದ್ದರಂತೆ. ಆದರೆ ಆ ಜೀವ ಕಡೆಯವರೆಗೆ ಕನ್ನಡಕ್ಕೆ ಹೋರಾಡಿ, ತನ್ನ ಸಮುದಾಯದವರನ್ನು ಎದುರು ಹಾಕಿಕೊಂಡು ಬದುಕಿದರು. ಕನ್ನಡಕ್ಕಾಗಿಯೇ ಜೀವ ತೆತ್ತರು.

ರೆಹಮಾನ್ ಖಾನ್ ಅವರ ತಮ್ಮ ಸಮೀಯುಲ್ಲಾ ಖಾನ್ ಸಹ ಅಪರಿಮಿತ ಕನ್ನಡ ಪ್ರೇಮಿ. ಹಾಗೆಯೇ ಸಮುದಾಯದ ಒಳಗೂ ಈ ಕನ್ನಡಪ್ರೇಮವನ್ನು ಬೆಳೆಸುತ್ತ ಬಂದವರು. ಮದರಸಾಗಳಲ್ಲಿ ಕನ್ನಡ ಕಲಿಸಬೇಕು ಎಂದು ಹೋರಾಟ ನಡೆಸಿದವರು.

ಮೊನ್ನೆ ರಂಜಾನ್ ಸಂದರ್ಭದಲ್ಲಿ ಮತ್ತೀಕೆರೆಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಸುಮಾರು ಐದು ಸಾವಿರ ಮಂದಿ ಸೇರಿದ್ದರು. ಆ ಪ್ರಾರ್ಥನೆಗೆ ಅಲ್ಲಿನ ಸ್ಥಳೀಯ ಪೊಲೀಸ್ ಅಧಿಕಾರಿಯೇ ಅತಿಥಿ. ಸ್ವಾಗತ, ಭಾಷಣ ಎಲ್ಲವೂ ಕನ್ನಡದಲ್ಲೇ ನಡೆದಿದ್ದನ್ನು ನೋಡಿ ಆ ಅಧಿಕಾರಿ ಹೌಹಾರಿದರಂತೆ. ಸಮೀಯುಲ್ಲಾ ಅವರ ಕನ್ನಡಪ್ರೇಮದ ಪರಿಣಾಮವಿದು.

ಸಮೀಯುಲ್ಲಾ ಪ್ರತಿವರ್ಷ ಇಡೀ ರಾಜ್ಯದಲ್ಲಿ ಕನ್ನಡ ಭಾಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿಯರನ್ನೆಲ್ಲ ತಮ್ಮ ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ಕರೆಸಿಕೊಂಡು ಅವರಿಗೆ ಬಹುಮಾನ, ಪ್ರಶಸ್ತಿ ಪತ್ರ ಕೊಟ್ಟು ಕಳಿಸುತ್ತಾರೆ. ಮತ್ತೀಕೆರೆಯ ಮಸೀದಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಕಾರಣವಾದವರೂ ಇವರೇ. ಮಸೀದಿಗಳಿಗೆ ಹಿಂದೂ ಧರ್ಮದ ಮಠಾಧೀಶರನ್ನು ಕರೆದುಕೊಂಡು ಹೋಗಿ ಭಾಷಣ ಮಾಡಿಸಿದವರೂ ಇವರೇ.

ಹೀಗೆಲ್ಲ ಇರುವ ಸಮೀಯುಲ್ಲಾ ಅವರಿಗೆ ರಾಜಕೀಯ ಸೇರಿಕೊಳ್ಳಿ ಎಂದು ಹೇಳುತ್ತಿರುತ್ತೇನೆ. ಆದರೆ ಸಮೀಯುಲ್ಲಾ ತಮ್ಮ ಅಣ್ಣನ ಹಾಗೆ ವಿನಯದಿಂದ ಅದೆಲ್ಲ ನಮಗೆ ಸರಿಹೋಗಲ್ಲ ಎನ್ನುತ್ತಾರೆ.

*******

ಇನ್ನೊಬ್ಬ ಗೆಳೆಯನಿದ್ದಾನೆ. ಸರಿಸುಮಾರು ಹತ್ತು ವರ್ಷಗಳ ಕಾಲ ಸಕಲೇಶಪುರ ತಾಲ್ಲೂಕು ಬಹುಜನ ಸಮಾಜ ಪಕ್ಷದ ಅಧ್ಯಕ್ಷನಾಗಿದ್ದವನು. ಹೆಸರು ಮೆಹಬೂಬ್. ಅಲ್ಲಯ್ಯಾ, ಈ ಪಕ್ಷದಲ್ಲಿ ಎಷ್ಟು ವರ್ಷ ಇನ್ನೂ ಮಣ್ಣು ಹೊರುತ್ತೀಯಾ? ಬೇರೆ ಪಕ್ಷ ಸೇರಿ ಭವಿಷ್ಯ ರೂಪಿಸಿಕೊಳ್ಳಬಹುದಲ್ಲ? ಎಂದು ಆಗಾಗ ನಾನು ಕಾಲೆಳೆಯುತ್ತೇನೆ. ಆತ ಅಷ್ಟೇ ತಮಾಶೆಯಾಗಿ ಹೇಳುತ್ತಾನೆ: ಮಾಯಾವತಿ ನಮ್ಮ ಅಕ್ಕ, ಅವರನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗೋದಿಲ್ಲ. ಭವಿಷ್ಯ ಹಾಳಾದರೂ ಚಿಂತೆಯಿಲ್ಲ, ಸಿದ್ಧಾಂತ ಬಿಡೋದಿಲ್ಲ....

******

ಕೆ.ಎಫ್.ಡಿ ಹಾಗು ಪಿಎಫ್‌ಐ ಈ ಎರಡು ಸಂಘಟನೆಗಳು ಈಗ ಕರ್ನಾಟಕದ ಮುಸ್ಲಿಂ ಜಗತ್ತಿನಲ್ಲಿ ಸಾಕಷ್ಟು ಕ್ರಿಯಾಶೀಲವಾಗಿವೆ. ಈ ಸಂಘಟನೆಗಳು ಕೇರಳ ಮೂಲದಿಂದ ಬಂದವುಗಳು ಎನ್ನುತ್ತಾರೆ. ನನ್ನ ಮುಸ್ಲಿಂ ಗೆಳೆಯರೇ ಹೇಳುವಂತೆ ಈ ಸಂಘಟನೆಗಳು ಆರ್‌ಎಸ್‌ಎಸ್‌ನ ಇನ್ನೊಂದು ರೂಪ. ಆ ಅನುಮಾನ ನನಗೂ ಇದೆ.

ಕೆ.ಎಫ್.ಡಿ, ಪಿಎಫ್‌ಐಗಳಲ್ಲಿ ಹೊಸ ಮುಖಂಡರು ಹುಟ್ಟಬಹುದೆ? ಧರ್ಮದ ಆಮಲು ತುಂಬಿಕೊಂಡ ನಾಯಕರು ಜನನಾಯಕರಾಗಲು ಸಾಧ್ಯವೆ? ನಾಯಕರಾದರೂ ಮುಸ್ಲಿಮೇತರರಿಗೂ ನಾಯಕತ್ವ ನೀಡುವ ಹಂತಕ್ಕೆ ಬೆಳೆಯಬಲ್ಲರೆ? ಒಂದು ವೇಳೆ ಈ ಸಂಘಟನೆಗಳಿಂದ ರಾಜಕೀಯ ಶಕ್ತಿಯೊಂದು ಹುಟ್ಟಿದರೂ ಅದು ಬಿಜೆಪಿಗಿಂತ ಭಿನ್ನವಾಗಿರಲು ಸಾಧ್ಯವೆ? ಈ ಪ್ರಶ್ನೆಗಳನ್ನು ಕೆಎಫ್‌ಡಿ ಮುಖಂಡರೇ ಕೇಳಿಕೊಳ್ಳಬೇಕಾಗಿದೆ.

ಕೆಎಫ್‌ಡಿ ತತ್ವ-ಸಿದ್ಧಾಂತಗಳ ಬಗ್ಗೆ ನನಗಿನ್ನೂ ಅಷ್ಟಾಗಿ ತಿಳಿದಿಲ್ಲ. ಆದರೆ ಆ ಸಂಘಟನೆಗಳ ಹುಡುಗರ ಅಗ್ರೆಷನ್ ಗಮನಿಸಿದ್ದೇನೆ. ಈ ಅಗ್ರೆಷನ್ ಒಳ್ಳೆಯ ಕೆಲಸಕ್ಕೆ ಬರುವಂತಾಗಬೇಕು. ಸದ್ಯಕ್ಕೆ ಇಷ್ಟನ್ನು ಮಾತ್ರ ಹೇಳಬಲ್ಲೆ.

******

ಇನ್ನಷ್ಟು ಬರೆಯುತ್ತಾ ಹೋಗಬಹುದು. ಇನ್ನಷ್ಟು ಜನರ ಹೆಸರು ಗೊತ್ತಿದ್ದರೂ ಬಿಟ್ಟಿದ್ದೇನೆ. ಇಲ್ಲಿ ಬರೆದಿದ್ದನ್ನು ಬೇರೆಯವರು ಬೇರೆ ಅರ್ಥದಲ್ಲಿ ಗ್ರಹಿಸುವ ಅಪಾಯವೂ ಇದೆ.

ಇಡೀ ಕರ್ನಾಟಕಕ್ಕೆ ನಾಯಕತ್ವ ನೀಡುವ ಮುಸ್ಲಿಂ ಮುಖಂಡರ ತಲಾಷ್ ನನ್ನದು ಅಷ್ಟೆ, ಕಡೇ ಪಕ್ಷ ಇನ್ನು ಹತ್ತು ವರ್ಷದೊಳಗಾದರೂ ಅಂಥ ನಾಯಕತ್ವ ನೀಡುವಾತ ಎದ್ದು ನಿಲ್ಲಲಿ ಎಂಬುದು ದೂರದ ಆಶೆ.

ರಾಜ್ಯದ ಎಲ್ಲರ ನಾಯಕನಾಗಬಲ್ಲ ಒಬ್ಬ ಮುಸ್ಲಿಂ ಮುಖ್ಯಮಂತ್ರಿ ಸ್ಥಾನ ಏರುವಂತಾದರೆ ಅದೊಂದು ಪವಾಡವಾದೀತು. ಅಂಥದ್ದೊಂದು ಸಾಧ್ಯತೆಯನ್ನು ನಮ್ಮ ಯುವ ಮುಸ್ಲಿಂ ಮನಸ್ಸುಗಳು ನಿಜ ಮಾಡಲಿ ಎಂಬುದು ನನ್ನ ಆಸೆ.

ಮುಸ್ಲಿಮರು ಹೆಚ್ಚು ಹೆಚ್ಚು ರಾಜಕೀಯವಾಗಿ ಬೆಳೆದರೆ ಸಹಜವಾಗಿಯೇ ಆ ಸಮುದಾಯ ಮೌಲ್ವಿಗಳ ಹಿಡಿತದಿಂದ ಬಿಡಿಸಿಕೊಳ್ಳುತ್ತದೆ. ಪರಿಣಾಮವಾಗಿ ಆ ಧರ್ಮದ ಒಳಗಿನ ಮತಾಂಧರ ಸಂಖ್ಯೆ ಕಡಿಮೆಯಾಗುತ್ತದೆ. ಮುಸ್ಲಿಮರು ರಾಜಕೀಯವಾಗಿ ಬೆಳೆದಂತೆ ಸಾಮಾಜಿಕವಾಗಿಯೂ, ಆರ್ಥಿಕವಾಗಿಯೂ ಬೆಳವಣಿಗೆ ಸಾಧಿಸಲು ಅನುಕೂಲವಾಗುತ್ತದೆ. ಈ ಕಾರಣಕ್ಕಾಗಿಯಾದರೂ ಒಬ್ಬ ಮುಸ್ಲಿಂ ಮುಖಂಡ ಪ್ರಜ್ವಲಿಸಬೇಕಾಗಿದೆ.

7 comments:

Anonymous said...

ಪ್ರಿಯ ದಿನೇಶ್

ನೀವು ಪಟ್ಟಿ ಮಾಡಿರುವ 'ಮುಸ್ಲಿಂ ನಾಯಕ'ರಲ್ಲಿ ಆ ರೀತಿ ಕರೆಯಿಸಿಕೊಳ್ಳಲು ಅರ್ಹತೆ ಇರುವುದು ನಜೀರ್ ಸಾಬ್ ಮತ್ತು ಅಜೀಜ್ ಸೇಠ್ ಇಬ್ಬರಿಗೆ ಮಾತ್ರ. ಇಬ್ಬರ ಹಾದಿಗಳೂ ಸ್ವಲ್ಪ ಭಿನ್ನವಾಗಿದ್ದವು. ಇಬ್ಬರೂ ಕೇವಲ ಮುಸ್ಲಿಮರಿಗಷ್ಟೇ ನಾಯಕರಾಗಿರಲಿಲ್ಲ ಎಂಬುದೂ ಅವರ ಮತ್ತೊಂದು ಕ್ವಾಲಿಟಿ.ಬ್ಲಾಗ್ ಜಗತ್ತಿನಲ್ಲಿ 'ಬಲ'ವಲ್ಲದ ಬರೆಹಗಳ ಮತ್ತೊಂದು ತಾಣ ಆರಂಭಿಸಿದ್ದಕ್ಕೆ ನಿಮಗೆ ವಿಶೇಷ ಥ್ಯಾಂಕ್ಸ್

ಇಸ್ಮಾಯಿಲ್

Nagendra Trasi said...

Hello sir

Beautiful artical.

Nagendra.Trasi

Anonymous said...

a nice article. An informative one...govindraaj.

ಹರೀಶ್ ಕೇರ said...

ಇದುವರೆಗೆ ಬ್ಲಾಗ್ ಲೋಕದಲ್ಲಿ ಮತೀಯ ವಿಷ ತುಂಬಿಕೊಂಡ ಮನಸ್ಸುಗಳನ್ನು ನೋಡಿ ನೋಡಿ ಸಾಕಾಗಿತ್ತು. ರುಜುವಾತು, ಇಸ್ಮಾಯಿಲ್ ಬ್ಲಾಗ್‌ಗಳನ್ನು ಹೊರತುಪಡಿಸಿದರೆ, ಜನಪರ ದನಿಗಳು ಕನ್ನಡ ಅಂತರ್ಜಾಲದಿಂದ ಇಷ್ಟೊಂದು ದೂರ ಯಾಕೆ ನಿಂತಿವೆ ಅಂದುಕೊಳ್ಳುತ್ತಿದ್ದೆ. ನನ್ನ ನಿರೀಕ್ಷೆ ಹುಸಿಯಾಗಿಲ್ಲ. ದೇಸಿಮಾತು, ಸುದ್ದಿಮಾತು, ಕೆಂಡಸಂಪಿಗೆ, ಹಳ್ಳಿಕನ್ನಡ, ಒಳಗೂ ಹೊರಗೂ, ಬಾಗೇಶ್ರೀ- ಇವೆಲ್ಲ ಭರವಸೆಯ ಬೆಳೆ.
ಮುಸ್ಲಿಂ ನಾಯಕತ್ವದ ಬಗೆಗಿನ ಲೇಖನ ಅಧ್ಯಯನಪೂರ್ಣ.
ಇನ್ನು ನಾವೆಲ್ಲಾ ಯಾವ್ಯಾವುದೋ ವಿದ್ಯಾಭ್ಯಾಸ ಮಾಡಿ ಜನಜೀವನ ಮತ್ತು ಅಕ್ಷರಗಳ ಮೇಲಿನ ಸೆಳೆತದಿಂದ ಇತ್ತ ಬಂದವರು ; ಆದರೆ ‘ಪತ್ರಿಕೋದ್ಯಮ ಪದವಿ’ಗಳು ಯಾವಾಗ ಶುರುವಾದವೋ ಅಂದೇ ಪತ್ರಿಕೋದ್ಯಮದಲ್ಲಿ ಆಕ್ಟಿವಿಸಂ ಸತ್ತೇಹೋಯಿತು.
ನಿಮ್ಮ ಕನ್ನಡದ ಬಳಕೆ ನನಗೆ ತುಂಬಾ ಹಿಡಿಸಿತು. ಚಿಕ್ಕ ಚಿಕ್ಕ ವಾಕ್ಯ. ಯಾವ ಗೊಂದಲಕ್ಕೂ ಅವಕಾಶವಿಲ್ಲದ ಸ್ಪಷ್ಟ, ಸುಂದರ ನಿರೂಪಣೆ. ಕರಾರುವಾಕ್ ನಿಲುವು. ಪೊಲಿಟಿಕಲಿ ಮತ್ತು ಮಾರಲೀ ಕರೆಕ್ಟ್ ಅನಿಸುವಂಥದು.
ಶುಭಹಾರೈಕೆಗಳು.
- ಹರೀಶ್ ಕೇರ

Anonymous said...

I know KFD very well since last 3 years. It has an agenda of fighting against communalism, fascism and saffron terrorism. It always workhard to uplift the downtrodden, cornarised people of the society irrespective of cast, creed and religion. When the anti national forces like sanghparivar is busy distributing communal hatred venom, KFD has sworn to fail their attempt. KFD is the organisation of people like Muslims, Daliths, christians, and all peace loving people. I love kfd.

ಸಂಭವಾಮಿ ಯುಗೇ ಯುಗೇ said...

ಲೇಖನ ಚೆನ್ನಾಗಿದೆ. ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿ

Anonymous said...

Hange ondu suttu dalit leaders baggegoo bareeri saar. Anda hange adaralle athavaa prathyekavaagi vasee namma ex-Dr, ex-Prof B C Mylaarappa avara baggoo bareeri saaar...