Thursday, October 16, 2008

ಒಬ್ಬ ಜರ್ನಲಿಸ್ಟ್ ಆಕ್ಟಿವಿಸ್ಟ್ ಆಗಿರಬಾರದೆ?

ಗೆಳೆಯರು, ವಿಶೇಷವಾಗಿ ಪತ್ರಕರ್ತ ಮಿತ್ರರು ಕಳೆದ ಮೂರು ದಿನಗಳಿಂದ ಅಭಿನಂದಿಸುತ್ತಿದ್ದಾರೆ. ನಿಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ, ಮುಂದೇನು ಮಾಡ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ರಾಜ್ಯದ ೬ಕೋಟಿಗೂ ಹೆಚ್ಚು ಜನರ ಸಂಪೂರ್ಣ ಸಾಮಾಜಿಕ, ಆರ್ಥಿಕ ಮಾಹಿತಿಗಳನ್ನು ಸಂಗ್ರಹಿಸುವ ಜಾತಿವಾರು ಸಮೀಕ್ಷೆಯನ್ನು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸುವುದರೊಂದಿಗೆ ಒಂದು ಹೋರಾಟ ಯಶಸ್ವಿಯಾದಂತಾಗಿದೆ. ಒಂದು ಚಳವಳಿ ಯಶಸ್ವಿಯಾಗುವುದು ಇವತ್ತಿನ ಸಂದರ್ಭದಲ್ಲಿ ಅಪರೂಪ. ನಮ್ಮ ಚಳವಳಿ ಗೆದ್ದಿದೆ. ಸಂಭ್ರಮ ಪಡುವುದಕ್ಕೆ ಒಂದು ಕಾರಣ ಸಿಕ್ಕಿದೆ.

*****

ಇದೆಲ್ಲ ಶುರುವಾಗಿದ್ದು ಇಂಗ್ಲಿಷ್ ನಿಯತಕಾಲಿಕೆಗಳ ಪೈಕಿ ನಾವು ಹೆಚ್ಚು ನಂಬಲು ಸಾಧ್ಯವಿರುವ ಔಟ್‌ಲುಕ್‌ನಲ್ಲಿ ಕಾಣಿಸಿಕೊಂಡ ಒಂದು ಲೇಖನದ ಮೂಲಕ. ದೇಶದ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಒಳನೋಟ ಹೊಂದಿರುವ ಪತ್ರಕರ್ತ ಸುಗತ ಶ್ರೀನಿವಾಸರಾಜು ಔಟ್‌ಲುಕ್‌ನಲ್ಲಿ ಜಾತಿವಾರು ಸಮೀಕ್ಷೆಗೆ ಎದ್ದಿರುವ ವಿರೋಧಗಳ ಬಗ್ಗೆ ತಲಸ್ಪರ್ಶಿಯಾಗಿ ಬರೆದಿದ್ದರು. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಆರಂಭಿಸಿರುವ ಜಾತಿವಾರು ಸಮೀಕ್ಷೆಗೆ ಎದ್ದಿರುವ ವಿರೋಧಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಕಾರ್ಪರೇಟ್ ಸಂಸ್ಥೆಗಳು ಆಯೋಗಕ್ಕೆ ಮಾಹಿತಿ ನೀಡಲು ಹಿಂಜರಿಯುತ್ತಿರುವುದನ್ನು ಗುರುತಿಸಿ ಅವರು ಬರೆದಿದ್ದರು. ಇದೇ ಲೇಖನವನ್ನು ಆಧಾರವಾಗಿಟ್ಟುಕೊಂಡು ನಾನು ‘ಜಾತಿವಾರು ಸಮೀಕ್ಷೆಗೆ ಯಥಾಸ್ಥಿತಿವಾದಿಗಳ ಅಡ್ಡಿ ಎಂಬ ವರದಿ ಬರೆದಿದ್ದೆ. ಈ ಬ್ಲಾಗ್ ಮಾತ್ರವಲ್ಲದೆ ಇಂದು ಸಂಜೆ ದೈನಿಕ ಹಾಗು ಅಭಿಮನ್ಯು ಪಾಕ್ಷಿಕ ಪತ್ರಿಕೆಗಳಲ್ಲಿ ಇದೇ ವರದಿಯನ್ನು ವಿಸ್ತರಿಸಿ ಬರೆದಿದ್ದೆ.

ಸುಗತ ತಮ್ಮ ಲೇಖನದಲ್ಲಿ ಸಮೀಕ್ಷೆಯನ್ನು ಖಾಸಗಿ ಸಂಸ್ಥೆಗೆ ಒಪ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸೂಚ್ಯವಾಗಿ ಬರೆದಿದ್ದರು. ಕೆಲದಿನಗಳಲ್ಲಿ ಸುಗತ ಬರೆದಿದ್ದು ನಿಜವಾಗಿತ್ತು. ಪ್ರಜಾವಾಣಿಯಲ್ಲಿ ಈ ಕುರಿತಾದ ಟೆಂಡರ್ ಪ್ರಕಟಣೆಯೂ ಕಾಣಿಸಿಕೊಂಡಿತು.

ತಕ್ಷಣ ಕಾರ್ಯೋನ್ಮುಖರಾದವರು ಯುವಜನ ಜಾಗೃತಿ ವೇದಿಕೆಯ ಅಧ್ಯಕ್ಷರೂ, ಅಭಿಮನ್ಯು ಪಾಕ್ಷಿಕ ಪತ್ರಿಕೆಯ ಸಂಪಾದಕರೂ ಆದ ಬಿ.ಎನ್.ರಮೇಶ್ ಅವರು. ಹಲವು ಯಶಸ್ವಿ ಚಳವಳಿಗಳನ್ನು ಮುನ್ನಡೆಸಿದ ಹಿನ್ನೆಲೆ ಅವರದು. ಸದಾ ಜನಪರವಾಗಿ ಯೋಚಿಸುವ ರಮೇಶ್ ಅವರು ಆ ಜಾಹೀರಾತು ಪ್ರಕಟವಾದ ಕೂಡಲೇ ಮಾಡಿದ ಕೆಲಸವೇನೆಂದರೆ ಸಮೀಕ್ಷೆ ಖಾಸಗೀಕರಣ ಬೇಡ ಎಂಬ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು.

ಆನಂತರ ಜಾತಿವಾರು ಸಮೀಕ್ಷೆ ಖಾಸಗೀಕರಣದಿಂದ ಆಗುವ ಅಪಾಯಗಳ ಕುರಿತು ಎಲ್ಲ ಪಕ್ಷಗಳ ಪ್ರಮುಖ ರಾಜಕೀಯ ಮುಖಂಡರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದೆವು. ಹಲವು ರಾಜಕಾರಣಿಗಳನ್ನು ಹುಡುಕಿಕೊಂಡು ಹೋಗಿ ಈ ಸಂಬಂಧ ಮಾತನಾಡಿಸಿದೆವು. ಎಲ್ಲರಿಂದಲೂ ಪೂರಕವಾದ ಪ್ರತಿಕ್ರಿಯೆ ಲಭ್ಯವಾಯಿತು.

ನಮ್ಮೆಲ್ಲರ ಹಿರಿಯಣ್ಣನ ಹಾಗೆ ಇರುವ ಸಮತಾ ಸೈನಿಕ ದಳದ ಎಂ.ವೆಂಕಟಸ್ವಾಮಿ ಅಖಾಡಕ್ಕೆ ಇಳಿದರು. ಹಿಂದುಳಿದ ಜಾತಿಗಳ ಸಂಘಟನೆಗಳು ಮೀನಮೇಷ ಎಣಿಸುತ್ತಿದ್ದಾಗ ವೆಂಕಟಸ್ವಾಮಿಯವರು ನಮ್ಮ ಬೆಂಬಲಕ್ಕೆ ನಿಂತರು. ಒಂದೆರಡು ಸಭೆಗಳೂ ನಡೆದವು. ನಂತರ ಯುವಜನ ಜಾಗೃತಿ ವೇದಿಕೆಯ ಅಡಿಯಲ್ಲಿ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಒಂದು ಧರಣಿಯನ್ನೂ ನಡೆಸಿದೆವು. ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಜೆ.ಶ್ರೀನಿವಾಸನ್, ಅಹಿಂದ ಅಧ್ಯಕ್ಷ ಮುಕುಡಪ್ಪ, ಸವಿತಾ ಸಮಾಜದ ಮುಖಂಡ ಪ್ರೊ.ಎನ್.ವಿ.ನರಸಿಂಹಯ್ಯ, ಬಲಿಜ ಸಂಘದ ಮುಖಂಡ ಡಾ.ಜಗನ್ನಾಥ್, ಗಾಣಿಗರ ಸಂಘದ ಮುಖಂಡ ಅಮರನಾಥ್, ದಸಂಸ ಸಂಚಾಲಕ ಮಾವಳ್ಳಿ ಶಂಕರ್, ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಜೆ.ಎಂ.ವೀರಸಂಗಯ್ಯ ಹೀಗೆ ವಿವಿಧ ಸಂಘಟನೆಗಳ ಪ್ರಮುಖರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ನಂತರ ಚಳವಳಿ ನಿಧಾನವಾಗಿ ಎಲ್ಲ ಜಿಲ್ಲೆಗಳಿಗೂ ವ್ಯಾಪಿಸತೊಡಗಿದವು. ಕೋಲಾರದಲ್ಲಿ ವೆಂಕಟಸ್ವಾಮಿಯವರ ಸಮತಾ ಸೈನಿಕ ದಳ ಹಾಗು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಗಳ ಆಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಯಿತು. ಶಿವಮೊಗ್ಗದಲ್ಲಿ ಹಿಂದುಳಿದ ಜಾತಿಗಳ ಸಂಘಟನೆಗಳ ಪ್ರಮುಖರು ಧರಣಿ ನಡೆಸಿದರು. ಮೈಸೂರು, ಮಂಡ್ಯ, ಹಾಸನ, ತುಮಕೂರು, ಚಿತ್ರದುರ್ಗಗಳಲ್ಲೂ ಪ್ರತಿಭಟನೆಗಳಿಗೆ ದಿನಾಂಕ ನಿಗದಿಯಾಗಿತ್ತು. ಕೋಲಾರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಚಳವಳಿ ನಡೆಸಲು ವೆಂಕಟಸ್ವಾಮಿಯವರು ತಯಾರಿ ನಡೆಸಿದ್ದರು.

ಅಷ್ಟರೊಳಗೆ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು. ಆಯೋಗದಿಂದಲೇ ಸಮೀಕ್ಷೆ ನಡೆಸುವುದಾಗಿ ಸರ್ಕಾರದ ಅಧಿಕೃತ ಪ್ರಕಟಣೆ ಹೊರಗೆ ಬರುವುದರೊಂದಿಗೆ ಒಂದು ಅಸಂಬದ್ಧ, ಅನ್ಯಾಯದ, ಅಧಿಕಪ್ರಸಂಗದ ನಿರ್ಧಾರವೊಂದಕ್ಕೆ ತಡೆ ಒಡ್ಡಿದಂತಾಯಿತು.

*****

ಸರ್ಕಾರ ಈ ನಿರ್ಧಾರ ಪ್ರಕಟಿಸುತ್ತಿದ್ದಂತೆ ಎಲ್ಲ ಮಾಧ್ಯಮಗಳಲ್ಲೂ ಈ ವಿಷಯ ವರದಿಯಾಯಿತು. ಟಿವಿ೯ ಮಧ್ಯಾಹ್ನದ ಸುದ್ದಿಯಲ್ಲಿ ಸರ್ಕಾರದ ನಿರ್ಧಾರವನ್ನು ಬಿತ್ತರಿಸಿದಾಗ ನನ್ನನ್ನು ಫೋನ್ ಮೂಲಕ ಮಾತನಾಡಿಸಿದರು. (ಎಲೆಕ್ಟ್ರಾನಿಕ್ ಮಾಧ್ಯಮಗಳ ಭಾಷೆಯಲ್ಲಿ ಇದನ್ನು ‘ಫೋನೋ ಎನ್ನುತ್ತಾರೆ.) ಆಗ ಸುದ್ದಿವಾಚಕ ರೆಹಮಾನ್ ಹಾಸನ್ ನನ್ನನ್ನು ಕೇಳಿದರು: ಖಾಸಗಿಯವರು ಸಮೀಕ್ಷೆ ಮಾಡಿದರೆ ಅದು ಪಾರದರ್ಶಕವಾಗಿ, ಪರಿಪೂರ್ಣವಾಗಿ, ವೈಜ್ಞಾನಿಕವಾಗಿ ಹೊರಬರುವುದಿಲ್ಲ ಎನ್ನುತ್ತೀರಿ. ಹಾಗಿದ್ದರೆ ಸರ್ಕಾರ ಪಾರದರ್ಶಕವಾಗಿ ಸಮೀಕ್ಷೆ ಮಾಡುತ್ತದೆ ಎಂದು ಹೇಗೆ ಹೇಳುತ್ತೀರಿ?

ನಾನು ಉತ್ತರಿಸಿದೆ: ಸರ್ಕಾರ ಸಮೀಕ್ಷೆ ಮಾಡಿದಾಗಲೂ ಲೋಪದೋಷ ಆಗುವುದಿಲ್ಲ ಎಂದೇನಲ್ಲ. ಆದರೂ ಅದು ತೀರಾ ಕಡಿಮೆ. ಎಲ್ಲೋ ಒಂದು ಪರ್ಸೆಂಟ್, ಎರಡು ಪರ್ಸೆಂಟ್ ದೋಷಗಳಾಗಬಹುದು. ಆದರೆ ಸರ್ಕಾರ ಯಾವತ್ತಿದ್ದರೂ ನಮ್ಮ ಸರ್ಕಾರ. ಅದು ಪ್ರಜೆಗಳಿಗೆ ಯಾವತ್ತಿಗೂ ಉತ್ತರದಾಯಿಯಾಗಿರುತ್ತದೆ. ತಪ್ಪಾದರೆ ನಾವು ನಿಲ್ಲಿಸಿ ಕೇಳಬಹುದು. ಅಲ್ಲದೆ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಸಾಮಾನ್ಯ ಜನಗಣತಿಯನ್ನು ನಿರ್ವಹಿಸುವುದೂ ನಮ್ಮ ಸರ್ಕಾರವೇ. ಇಂಥ ಗಣತಿಯನ್ನು ಮಾಡಿದ ಅನುಭವ ಇರುವ ಶಾಲಾಶಿಕ್ಷಕರು, ವಿವಿಧ ಸ್ವಯಂಸೇವಾ ಸಂಘಟನೆಗಳು, ಸರ್ವಶಿಕ್ಷ ಅಭಿಯಾನ, ಎನ್‌ಎಸ್‌ಎಸ್ ಕಾರ್ಯಕರ್ತರು, ಗ್ರಾಮಪಂಚಾಯ್ತಿ ಕಾರ್ಯದರ್ಶಿಗಳು, ಕಂದಾಯ ಇಲಾಖೆಯ ನೌಕರರು... ಹೀಗೆ ಸರ್ಕಾರದ ಬಳಿ ಸಾಕಷ್ಟು ಮಾನವ ಸಂಪನ್ಮೂಲವಿದೆ. ಆದ್ದರಿಂದ ಸಮೀಕ್ಷೆಯನ್ನು ಆಯೋಗವೇ ಸರ್ಕಾರದ ಸಹಕಾರದೊಂದಿಗೆ ನಡೆಸಬೇಕು.

******

ಇದಾದ ನಂತರ ಒಂದೆಡೆ ಸಮೀಕ್ಷೆಯ ಖಾಸಗೀಕರಣ ನಿಲ್ಲಿಸುತ್ತಲೇ ಮತ್ತೊಂದೆಡೆ ಆಯೋಗದ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಅವರನ್ನು ಬದಲಿಸುವ ಕೆಲಸ ನಡೆಯುತ್ತಿದೆ ಎಂಬ ಗುಮಾನಿಗಳು ಹುಟ್ಟಿಕೊಂಡವು. ಈ ಕುರಿತು ಟಿವಿ೯ ವಾಹಿನಿಯಲ್ಲಿ ಒಂದು ಸುದ್ದಿಯೂ ಪ್ರಸಾರವಾಯಿತು. ಟಿವಿ೯ನ ಜನಪರ ಪತ್ರಕರ್ತ ಲಕ್ಷ್ಮಣ್ ಹೂಗಾರ್ ಈ ಸಂಬಂಧ ನನ್ನ ಬೈಟ್ ಪಡೆದರು. ಆಗ ನಾನು ಹೇಳಿದೆ: ಒಂದು ವೇಳೆ ದ್ವಾರಕಾನಾಥ್ ಅವರನ್ನು ಬದಲಿಸಲು ಸರ್ಕಾರ ಹೊರಟರೆ ಜೇನುಗೂಡಿಗೆ ಕಲ್ಲು ಹೊಡೆದಂತೆ ಆಗುತ್ತದೆ. ಸರ್ಕಾರ ಈಗಾಗಲೇ ಅಲ್ಪಸಂಖ್ಯಾತರ ವಿರೋಧಿ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಇಂಥ ದುಸ್ಸಾಹಸಕ್ಕೆ ಕೈ ಹಾಕಿದರೆ ಹಿಂದುಳಿದ ಜಾತಿಗಳ ವಿರೋಧಿ ಎಂದು ಬ್ರಾಂಡ್ ಆಗಬೇಕಾಗುತ್ತದೆ. ಸರ್ಕಾರ ಹಾಗೆ ಮಾಡದಿರಲಿ. ದ್ವಾರಕಾನಾಥ್ ಒಂದು ವರ್ಷದಿಂದ ಸಮೀಕ್ಷೆಯ ತಯಾರಿ ನಡೆಸಿದ್ದಾರೆ. ಸಮೀಕ್ಷೆ ಮುಗಿಯುವವರೆಗೆ ಸರ್ಕಾರ ಎಚ್ಚರಿಕೆಯಿಂದಿರಲಿ.

ಹಿಂದುಳಿದ ವರ್ಗಗಳ ಸಮೀಕ್ಷೆ ಖಾಸಗಿ ಸಂಸ್ಥೆಗೆ ಕೊಡುವ ವಿಷಯವನ್ನು ಕಟುವಾಗಿ ಟೀಕಿಸಿ ಕಸ್ತೂರಿ ವಾಹಿನಿ ಅಗ್ರ ಸುದ್ದಿ ಪ್ರಕಟಿಸಿತ್ತು. ಖಾಸಗೀಕರಣ ರದ್ದಾದ ಮೇಲೆ ಆ ಚಾನೆಲ್‌ನವರು ಬೈಟ್ ಪಡೆದಾಗ ನಾನು ಹೇಳಿದ್ದಿಷ್ಟು: ಸರ್ಕಾರ ಒಳ್ಳೆ ನಿರ್ಧಾರ ಕೈಗೊಂಡಿದೆ. ಅದು ಅನಿವಾರ್ಯವೂ ಆಗಿತ್ತು. ಇಡೀ ರಾಷ್ಟ್ರದಲ್ಲಿ ಸ್ವಾತ್ರಂತ್ರ್ಯ ಪಡೆದ ನಂತರ ಎಲ್ಲೂ ನಡೆಯದ ಸರ್ವೆ ಕರ್ನಾಟಕದಲ್ಲಿ ನಡೆಯುತ್ತಿದೆ. ಆದಷ್ಟು ಶೀಘ್ರ ಈ ಸಮೀಕ್ಷೆಯನ್ನು ಸರ್ಕಾರ ಮಾಡಿ ಮುಗಿಸಿದರೆ ಬಿಜೆಪಿಗೇ ಒಳ್ಳೇ ಹೆಸರು. ಕಾಲಮಿತಿ ನಿಗದಿ ಮಾಡಿಕೊಂಡು ಬೇಗನೇ ಸಮೀಕ್ಷೆ ನಡೆಸಲಿ. ಇಲ್ಲದಿದ್ದಲ್ಲಿ ಹಿಂದುಳಿದ ವರ್ಗದ ಜನರು ಬಹಳ ಸುಲಭವಾಗಿ ಈ ಸರ್ಕಾರವನ್ನು ತಮ್ಮ ವಿರೋಧಿ ಎಂದು ಭಾವಿಸಲು ಅವಕಾಶ ನೀಡಿದಂತಾಗುತ್ತದೆ.

******

ಈ ಬ್ಲಾಗ್ ಆರಂಭಿಸಬೇಕು ಎಂದುಕೊಂಡು ವರ್ಷದ ಹಿಂದೆಯೇ ಯೋಚಿಸಿದ್ದೆ, ಆದರೆ ಸಾಧ್ಯವಾಗಿರಲಿಲ್ಲ. ಸದಾ ಕನ್ನಡವನ್ನೇ ಉಸಿರಾಡುವ ಬನವಾಸಿ ಬಳಗದ ಗೆಳೆಯರೊಂದಿಗೆ ಹಲವು ಬಾರಿ ಈ ಕುರಿತು ಮಾತನಾಡಿದ್ದೆ. ಬನವಾಸಿ ಬಳಗದವರ ಒಪ್ಪಿಗೆ ಪಡೆದು ಅವರು ದಿನವೂ ಬರೆಯುವ ಏನ್‌ಗುರು ಬ್ಲಾಗಿನ ಲೇಖನಗಳನ್ನು ‘ಇಂದು ಸಂಜೆಯಲ್ಲಿ ನಿಯಮಿತವಾಗಿ ಪ್ರಕಟಿಸಲು ಆರಂಭಿಸಿದ್ದೆ. ಅಲ್ಲಿಯವರೆಗೆ ನಾನು ಗಮನಿಸಿದ್ದು, ಓದುತ್ತಿದ್ದುದ್ದು ಬನವಾಸಿ ಬಳಗದ ಬ್ಲಾಗ್ ಹಾಗು ಚುರುಮುರಿಯನ್ನು ಮಾತ್ರ. ಜುಲೈ ತಿಂಗಳಲ್ಲಿ ನಾನು ಸಹ ಬ್ಲಾಗಿಗನಾಗಿ ಪ್ರವೇಶ ಪಡೆದ ನಂತರ ಕನ್ನಡ ಬ್ಲಾಗುಗಳ ಮಹಾಲೋಕವೇ ಪರಿಚಯವಾಯಿತು.

ನಾನು ದೇಸೀಮಾತು ಆರಂಭಿಸುವಾಗ ನನ್ನ ಬರೆಹವನ್ನು ನಾನೇ ಓದಿಕೊಳ್ಳಬೇಕು ಎಂದು ಭಾವಿಸಿದ್ದೆ. ಆದರೆ ನನಗೆ ಅಪರಿಚಿತರಾದ ಹಲವಾರು ಮಂದಿ ಅದು ಹೇಗೋ ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯೆ ನೀಡಲಾರಂಭಿಸಿದಾಗ ಖುಷಿಯಾಗತೊಡಗಿತು. ನಿಧಾನವಾಗಿ ಹೊಸಹೊಸ ಪರಿಚಯಗಳೂ ಆದವು. ನನ್ನ ಬ್ಲಾಗನ್ನು ತಮ್ಮ ಪಟ್ಟಿಯಲ್ಲಿ ಸೇರಿಸಿಕೊಂಡು ಹೊಸ ಓದುಗರನ್ನು ನೀಡಿದ್ದು ಬರಹ ಬಳಗದವರು. ಅವರಿಗೆ ನಾನು ಆಭಾರಿ.

ಇನ್ನಷ್ಟು ಆಪ್ತಬರೆಹಗಳ ಬ್ಲಾಗ್‌ಗಳಿವೆ. ಅವುಗಳ ಕುರಿತು ಮತ್ತೊಮ್ಮೆ ಬರೆಯುತ್ತೇನೆ.


******

ಕೆಲವು ಸಣ್ಣಪುಟ್ಟ ಖುಷಿಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಬೇಕು ಎನಿಸುತ್ತದೆ.

ಪ್ರಜಾವಾಣಿಯ ಒರಿಸ್ಸಾ ಪ್ರಯೋಗ ಲೇಖನ ಬರೆದಾಗ ತುಂಬ ಸಂಕಟವೆನಿಸಿತ್ತು. ಪ್ರಜಾವಾಣಿ ನಿನ್ನೆಗೂ ಇವತ್ತಿಗೂ ನಾಳೆಗೂ ನಮ್ಮ ಪತ್ರಿಕೆ. ಪ್ರಜಾವಾಣಿ ಕುರಿತು ವಿಶೇಷವಾದ ಆಕರ್ಷಣೆ ಇರುವುದರಿಂದಲೇ ಅದರಲ್ಲಿ ಏನೇನೂ ತಪ್ಪಾಗಬಾರದು ಎಂದು ಭಾವಿಸುತ್ತೇವೆ; ಅದು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ. ಪ್ರಜಾವಾಣಿಯೇ ಬಜರಂಗಿಗಳಿಗೆ ಕುಮ್ಮಕ್ಕು ನೀಡಿದರೆ ಅನಾಹುತಗಳೇ ನಡೆಯುತ್ತದೆ ಎಂದು ಊಹಿಸಲು ವಿಶೇಷ ಬುದ್ಧಿಯೇನು ಖರ್ಚು ಮಾಡಬೇಕಾಗಿಲ್ಲ.

ದುರಂತವೆಂದರೆ ಇದನ್ನು ಬರೆದ ಮುಂದಿನ ವಾರವೇ ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಚರ್ಚುಗಳ ಮೇಲೆ ದಾಳಿ ನಡೆದಿದ್ದು. ಅದು ಕಾಕತಾಳೀಯ ಅಷ್ಟೆ ಎಂದು ನಾವು ಸಮಾಧಾನಪಟ್ಟುಕೊಳ್ಳಬೇಕು. ಆದರೆ ಮತ್ತೆಂದೂ ಪ್ರಜಾವಾಣಿಯಲ್ಲಿ ಬಜರಂಗಿಗಳಿಗೆ ಕುಮ್ಮಕ್ಕು ಕೊಡುವ ಯಾವ ವರದಿಯೂ ಪ್ರಕಟಗೊಳ್ಳಲಿಲ್ಲ. ಪ್ರಜಾವಾಣಿಯಲ್ಲಿ ಜನಹಿತ ಬಯಸುವ ಪತ್ರಕರ್ತರು ಕ್ರಿಯಾಶೀಲರಾಗಿರುವುದಕ್ಕೆ ಇದು ಸಾಕ್ಷಿ.

******

ಮತ್ತೊಂದು ಸಂತಸದ ವಿಷಯ: ಕೆ.ಆರ್.ಪುರಂ.ನಲ್ಲಿರುವ ಹಿಂದುಳಿದ ವರ್ಗಗಳ ಹಾಸ್ಟೆಲ್ ಭೇಟಿ ಕುರಿತು ದೇಸೀಮಾತು ಹಾಗು ಇಂದುಸಂಜೆಯಲ್ಲಿ ಬರೆದಿದ್ದೆ. ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ದಿ ಹಿಂದೂ ಹಾಗು ಇನ್ನಿತರ ಪತ್ರಿಕೆಗಳಲ್ಲಿ, ಕಸ್ತೂರಿ ಟಿವಿಯಲ್ಲಿ ಈ ಕುರಿತು ವರದಿಗಳು ಪ್ರಕಟಗೊಂಡಿದ್ದವು. ಈಗ ಆ ಹಾಸ್ಟೆಲ್ ಬೇರೆ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಮಕ್ಕಳಿಗೆ ಈಗ ಸರಿಯಾಗ ಊಟ-ತಿಂಡಿ ನೀಡಲಾಗುತ್ತಿದೆ. ಅಲ್ಲಿನ ಹುಡುಗಿಯರು ಖುಷಿಯಾಗಿದ್ದಾರೆ. ದ್ವಾರಕಾನಾಥ್ ಅವರೇ ಮತ್ತೊಮ್ಮೆ ಹಾಸ್ಟೆಲ್‌ಗೆ ಹೋಗಿ ಮಕ್ಕಳ ಜತೆ ಊಟ ಮಾಡಿ ಬಂದಿದ್ದಾರೆ.

ಹಾಸ್ಟೆಲ್ ಕಥೆಯನ್ನು ಬರೆದಾಗ ನಮ್ಮ ಪತ್ರಿಕೆಯ ಗೌರಿಬಿದನೂರು ವರದಿಗಾರ ಸಿದ್ಧಪ್ಪ ಕರೆ ಮಾಡಿದ್ದರು. ಅಲ್ಲಿ ನಮ್ಮ ಪತ್ರಿಕೆ ತಲುಪುತ್ತಿದ್ದಂತೆ ಓಬಿಸಿ ಹಾಸ್ಟೆಲ್‌ನಲ್ಲಿ ತರಾತುರಿಯಲ್ಲಿ ಹುಳುಕುಗಳನ್ನು ಮುಚ್ಚುವ ಕೆಲಸ ನಡೆಯಿತಂತೆ. ದ್ವಾರಕಾನಾಥ್ ಇಲ್ಲಿಗೂ ಬಂದರೆ ನಮ್ಮ ಕೆಲಸ ಹೋಗುತ್ತದೆ ಎಂದು ಹೆದರಿದ ಅಧಿಕಾರಿಗಳು ಹಾಸ್ಟೆಲ್‌ನಲ್ಲಿ ಮನುಷ್ಯರು ಬದುಕಲು ಸಾಧ್ಯವಿರುವ ವ್ಯವಸ್ಥೆಗಳನ್ನು ಮಾಡಿದರಂತೆ.

ಒಂದು ಕಡೆ ರಿಪೇರಿ ಮಾಡಿದರೆ ಬೇರೆ ಕಡೆ ತನ್ನಿಂತಾನೇ ರಿಪೇರಿ ಕೆಲಸಗಳು ನಡೆಯುತ್ತವೆ ಅಲ್ಲವೆ?

*****

ಮತಾಂತರ ತಪ್ಪು, ಅದರ ಹೆಸರಲ್ಲಿ ಚರ್ಚ್‌ಗಳ ಮೇಲೆ ದಾಳಿ ಮಾಡುವುದು ತಪ್ಪು ಎಂದು ಹಲವರು ಬ್ಯಾಲೆನ್ಸ್ ಮಾಡುತ್ತ ಇದ್ದಾಗ ಮತಾಂತರ ಸಹಜ ಕ್ರಿಯೆ, ಅದನ್ನು ತಡೆಯುವುದೇ ಮೂರ್ಖತನದ್ದು ಎಂದು ದೇಸೀಮಾತು ಬರೆಯುವುದರೊಂದಿಗೆ ಸಾಕಷ್ಟು ಜನರ ವಿರೋಧ ಕಟ್ಟಿಕೊಂಡಿತು.

ಆದರೆ ಈ ಬಾರಿ ಪೇಜಾವರ ನೇತೃತ್ವದಲ್ಲಿ ಸ್ವಾಮೀಜಿಗಳು ಅಸ್ಪೃಶ್ಯತೆ ಅಳಿಯಬೇಕು, ಈ ಕೆಲಸವನ್ನು ಧರ್ಮಗುರುಗಳೇ ಮಾಡಬೇಕು ಎಂದು ಫರ್ಮಾನು ಹೊರಡಿಸಿದರು. ಕನಿಷ್ಠ ಸೌಜನ್ಯಕ್ಕಾದರೂ ಅಸ್ಪೃಶ್ಯತೆ ಅಳಿಯಬೇಕು ಎಂದರಲ್ಲ ಎಂದು ನಾವು ಸಮಾಧಾನಪಟ್ಟುಕೊಳ್ಳಬೇಕು. ಹಿಂದೆ ಪೇಜಾವರರು ದಲಿತರ ಕೇರಿಯಲ್ಲಿ ಓಡಾಡಿ ತನ್ನನ್ನು ತಾನು ಪ್ರಗತಿಪರ ಎಂದು ಬಿಂಬಿಸಿಕೊಳ್ಳಲು ಯತ್ನಿಸಿದ್ದರು. ಇಂಥ ಹುಸಿನಾಟಕಗಳನ್ನು ಆಡುವ ಬದಲು ನಿಮ್ಮ ಮಠಕ್ಕೆ ದಲಿತ ಉತ್ತರಾಧಿಕಾರಿ ನೇಮಿಸಿ ಎಂದು ಕೇಳಿದರೆ ಅವರು ನಿಶ್ಯಬ್ದರಾಗುತ್ತಾರೆ. ಪಂಕ್ತಿಭೇದ ಕಿತ್ತುಹಾಕಿ ಎಂದರೆ ಒಪ್ಪುವುದಿಲ್ಲ.
ಪೇಜಾವರರು ದಲಿತರನ್ನು ತಮ್ಮ ಪೀಠಕ್ಕೆ ಉತ್ತರಾಧಿಕಾರಿ ಮಾಡುವುದು ಬೇಡ, ಎಂದೂ ಮಾಂಸಾಹಾರ ಸೇವಿಸದ, ಧರ್ಮಿಷ್ಠರಾದ ಒಬ್ಬ ಬ್ರಾಹ್ಮಣ ಮಹಿಳೆಯನ್ನು ಉತ್ತರಾಧಿಕಾರಿ ಮಾಡಲಿ ನೋಡೋಣ. ಇಂಥ ಸವಾಲುಗಳನ್ನು ಸ್ವೀಕರಿಸುವ ಎದೆಗಾರಿಕೆ ಅವರಿಗಿದೆಯೇ?

*****

ಹೋಗುವುದಿದ್ದರೆ ಮೊದಲು ತೊಲಗಿ ಪೀಡೆಗಳೆ ಎಂದು leavingbangalore.com ಕುರಿತು ಬರೆದಾಗ ನಾನು ನಿರೀಕ್ಷಿಸದಷ್ಟು ಪ್ರತಿಕ್ರಿಯೆಗಳು ಹರಿದು ಬಂದವು. ಈಗಲೂ ದಿನವೂ ಆ ಲೇಖನ ಹುಡುಕಿಕೊಂಡೇ ಸಾಕಷ್ಟು ಜನ ದೇಸೀಮಾತುಗೆ ಬರುತ್ತಿದ್ದಾರೆ.
leavingbangalore.com ಶುರುಮಾಡಿದ ಭೂಪರ ಕುರಿತು ಹಲವರು ಮಾಹಿತಿ ನೀಡಿದ್ದಾರೆ. leavingbangalore.com ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡರನ್ನು ಸಂಪರ್ಕಿಸಿದಾಗ ಅವರು ಪತ್ರಿಕಾ ಹೇಳಿಕೆ ನೀಡಿದರು. ಈ ಕುರಿತು ಕೆಲ ಪೊಲೀಸ್ ಅಧಿಕಾರಿಗಳಿಗೆ ದೂರೂ ಸಹ ಹೋಯಿತು. ಕಡೆಗೆ leavingbangalore.com ಆರಂಭಿಸಿದ ಧೂರ್ತರು ತಮ್ಮ ವೆಬ್‌ಸೈಟ್ ಬಾಗಿಲು ಮುಚ್ಚಿಕೊಂಡು ಹೋಗಿದ್ದಾರೆ.

ಹೋಗುವವರನ್ನು ನಿಂದಿಸುವುದು ಬೇಡ, ಹೋಗೋರೆಲ್ಲ ಒಳ್ಳೆಯವರು ಎಂದು ಹೇಳುತ್ತ ಅವರಿಗೆ ಬೀಳ್ಕೊಡುಗೆ ಕೊಡೋಣ.

*****

ನಾನು ಬ್ಲಾಗ್ ಆರಂಭಿಸಿದಾಗಿನಿಂದ ಇತರ ಬ್ಲಾಗ್‌ಗಳೂ ಪರಿಚಯವಾದವು. ಸಹಜವಾಗಿಯೇ ಅವಧಿ, ಕೆಂಡಸಂಪಿಗೆ, ದಟ್ಸ್ ಕನ್ನಡ, ಸಂಪದ ತರಹದ ಬ್ಲಾಗ್‌ಗಳು ಇಷ್ಟವಾದವು. ಮಾತು ಎಂಬ ಕಾಮನ್ ಫ್ಯಾಕ್ಟರ್ ಇದ್ದ ಕಾರಣದಿಂದ ಸುದ್ದಿಮಾತು ಸಹ ನಾನೇ ಬರೆಯಬಹುದು ಎಂದು ಹಲವರು ಭಾವಿಸಿದ್ದರು. ನನ್ನ ಕೆಲವು ಗೆಳೆಯರಿಗೆ ‘ನಾನವನಲ್ಲ ಎಂದು ಆಣೆ ಮಾಡಿ ಹೇಳಬೇಕಾಯಿತು. ಸುದ್ದಿಮಾತು ತನ್ನ ತೀಕ್ಷ್ಣ ಬರೆಹಗಳಿಂದ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದೆ. ಅದಕ್ಕಾಗಿ ಅದನ್ನು ಆರಂಭಿಸಿರುವ ಅನಾಮಿಕ ಗೆಳೆಯರಿಗೆ ಅಭಿನಂದನೆಗಳು.

ಅಮೆರಿಕ ರವಿ ಕುರಿತು ಹೆಚ್ಚೇನು ಗೊತ್ತಿರಲಿಲ್ಲ. ಆದರೆ ಆಳಕ್ಕೆ ಇಳಿದು ಬರೆಯುವ ಅವರ ಶೈಲಿ ಇಷ್ಟವಾಯಿತು. ಹಾಗೆಯೇ ಮಂಜುನಾಥಸ್ವಾಮಿಯವರ ಹಳ್ಳಿಕನ್ನಡದಲ್ಲಿ ಮಣ್ಣಿನ ವಾಸನೆ ಇದೆ. ಸುಂದರ ಹುಡುಗ ಮಲ್ಲಿಕಾರ್ಜುನ ತಿಪ್ಪಾರರ ನನ್ನ ಹಾಡು, ನಾಗೇಂದ್ರ ತ್ರಾಸಿಯವರ ಬಹುಮುಖಿ, ಲಕ್ಷ್ಮಿಕಾಂತ್ ಅವರ ಕವಿಬರಹ ನನಗಿಷ್ಟ.

ಹೊಸ ಸುದ್ದಿ ಏನೆಂದರೆ ಜನಪರ ಚಿಂತಕ, ಪತ್ರಕರ್ತ ಎಂ.ಮಂಜುನಾಥ ಅದ್ದೆ ಸದ್ಯದಲ್ಲೇ ಬ್ಲಾಗ್ ಲೋಕ ಪ್ರವೇಶಿಸುತ್ತಿದ್ದಾರೆ. ಗೆಳೆಯ, ಕಲಾವಿದ, ಪತ್ರಕರ್ತ ಹಾಗು ಸಮರ್ಥ ಲೇಖಕ ಸತೀಶ್ ಬಾಬು ಸಹ ತಮ್ಮ ಬ್ಲಾಗ್ ತೆರೆಯಲು ಸಿದ್ಧತೆ ನಡೆಸಿದ್ದಾರೆ. ಪತ್ರಕರ್ತ ಮಿತ್ರರಾದ ನ.ನಾಗೇಶ್, ಜ್ಞಾನೇಂದ್ರ ಕುಮಾರ್ ಸಹ ಬ್ಲಾಗ್ ಲೋಕ ಪ್ರವೇಶಿಸುತ್ತಿದ್ದಾರೆ. ಸದ್ಯದ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರಾದ ಪತ್ರಕರ್ತ ವೈ.ಗ.ಜಗದೀಶ್ ಹೊರಗಣವನು ಎಂಬ ಬ್ಲಾಗ್ ತೆರೆದು ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ತುಂಬ ಖುಷಿಯ ವಿಚಾರವೆಂದರೆ ಕಲಾವಿದ ಪುಂಡಲೀಕ ಈಗಾಗಲೇ ಪುಂಡಲೀಕ ಕಲಾಪ್ರಪಂಚದೊಂದಿಗೆ ಪ್ರತ್ಯಕ್ಷವಾಗಿದ್ದಾರೆ. ಸಣ್ಣ ಸಣ್ಣ ಹನಿಗಳೊಂದಿಗೆ ಕೆಣಕುವ ಇವಳು ತನ್ನ ಪಾಡಿಗೆ ತಾನು ಬರೆದುಕೊಂಡಿದ್ದಾಳೆ.

ಬ್ಲಾಗ್ ಲೋಕಕ್ಕೆ ಮೊಟ್ಟಮೊದಲ ಬಾರಿಗೆ ನನ್ನನ್ನು ಸ್ವಾಗತಿಸಿದ ಡೆಕ್ಕನ್ ಹೆರಾಲ್ಡ್ ವರದಿಗಾರ ಸತೀಶ್ ಶಿಲೆ ಯಾವಾಗ ತಮ್ಮ ಬ್ಲಾಗ್ ತೆರೆಯುತ್ತಾರೆ ಅಂತ ಕಾಯುತ್ತಿದ್ದೇನೆ.

*****

ಇದೆಲ್ಲದರ ನಡುವೆ ಬಿ.ಎನ್.ರಮೇಶ್ ಅವರ ನೇತೃತ್ವದಲ್ಲಿ ಒಂದು ಹೊಸ ಸಂಘಟನೆ ರೂಪ ಪಡೆದುಕೊಳ್ಳುತ್ತಿದೆ. ‘ಸಾಮಾಜಿಕ ನ್ಯಾಯಕ್ಕಾಗಿ ಸಮಾನ ಮನಸ್ಕರ ಸಂಘಟನೆ' ಎಂಬುದು ಅವರ ಘೋಷವಾಕ್ಯ. ರಮೇಶ್ ಅವರ ಜತೆ ನಾನು ಹಾಗು ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಸಕ್ರಿಯವಾಗಿರುವ ಹೊಸ ಪೀಳಿಗೆಯ ಜನರೆಲ್ಲ ಇರುತ್ತೇವೆ. ಹಿಂದುಳಿದ ಜಾತಿಗಳು, ದಲಿತರು, ಒಕ್ಕಲಿಗರು, ಅಲ್ಪಸಂಖ್ಯಾತರು, ಲಿಂಗಾಯಿತರು, ಬ್ರಾಹ್ಮಣರು ಹೀಗೆ ಎಲ್ಲ ಸಮುದಾಯಗಳ ಯುವಮನಸ್ಸುಗಳು ಈ ಸಂಘಟನೆಯಲ್ಲಿರುತ್ತವೆ.

ಈ ಸಂಘಟನೆಗೆ ಸಂಬಂಧಿಸಿದ ಕೆಲಸಗಳೆಲ್ಲ ಒಂದೊಂದಾಗಿ ನಡೆಯುತ್ತಿವೆ. ನಾವು ಅಂದುಕೊಂಡಂತೆ ಆದರೆ ಬರುವ ನವೆಂಬರ್ ೨೮ರಂದು ಸಂಘಟನೆಯನ್ನು ನಾವೆಲ್ಲರೂ ಇಷ್ಟಪಡುವ ಅಂಬೇಡ್ಕರ್‌ವಾದಿ, ಮಾಜಿ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್ ಉದ್ಘಾಟಿಸುತ್ತಾರೆ. ಕನಿಷ್ಠ ಐದುಸಾವಿರ ಜನರು ಪಾಲ್ಗೊಳ್ಳುವ ಈ ಬಹಿರಂಗ ಸಭೆಯಲ್ಲಿ ನಾಲ್ಕು ಪುಸ್ತಕಗಳ ಬಿಡುಗಡೆಯನ್ನೂ ಇಟ್ಟುಕೊಂಡಿದ್ದೇವೆ. ಆ ಬಗ್ಗೆ ಮುಂದೆ ಇನ್ನಷ್ಟು ಬರೆಯುತ್ತೇನೆ.

******

ನೀವು ಜರ್ನಲಿಸ್ಟೋ, ಆಕ್ಟಿವಿಸ್ಟೋ ಎಂದು ನನ್ನ ಗೆಳೆಯರು ಆಗಾಗ ಕಾಲೆಳೆಯುತ್ತಿರುತ್ತಾರೆ. ನಾನೂ ಸಹ ಒಮ್ಮೊಮ್ಮೆ ಈ ಎರಡಕ್ಕೂ ವ್ಯತ್ಯಾಸವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿರುತ್ತೇನೆ. ಜರ್ನಲಿಸ್ಟ್ ಆದವನು ಆಕ್ಟಿವಿಸ್ಟ್ ಆಗಿರುವುದು ಸರಿಯೇ ಎಂಬುದು ಹಲವರ ಪ್ರಶ್ನೆ.

ಬಾಗೂರು ನವಿಲೆ ಹೋರಾಟದ ಸಂದರ್ಭದಲ್ಲಿ ಆಗಿನ ಹಾಸನ ಜಿಲ್ಲಾ ಮಂತ್ರಿ ಎಚ್.ಡಿ.ರೇವಣ್ಣ ಹೋರಾಟ ನಡೆಸುತ್ತಿದ್ದ ಗಂಡಸರಿಗೆ ಪೊಲೀಸರಿಂದ ಹೊಡೆಸಿ ಜೈಲಿಗಟ್ಟಿದ್ದರು. ಕೈಗೆ ಸಿಗದೆ ಉಳಿದ ಗಂಡಸರು ಊರು ಬಿಟ್ಟಿದ್ದರು.

ಆಗ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪೊಲೀಸ್ ದೌರ್ಜನ್ಯ ನಡೆದ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸುವ ತೀರ್ಮಾನವಾಯಿತು. ಆದರೆ ಪಾದಯಾತ್ರೆ ಮಾಡಲು ಯತ್ನಿಸಿದರೆ ನಿಮ್ಮ ಮೇಲೆ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಅಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಸಾಯಿಕುಮಾರ್ ಶೈಲಿಯಲ್ಲಿ ಅಬ್ಬರಿಸಿದ್ದ.

ತಮಾಶೆ ಎಂದರೆ ಹಾಗೆ ಪೊಲೀಸ್ ಅಧಿಕಾರಿ ಹೇಳುತ್ತಿದ್ದಂತೆ ಒಂದು ಸಣ್ಣ ಗುಂಪು ನಾವು ಇಲ್ಲಿ ಪಾದಯಾತ್ರೆಗೆ ಬಂದಿಲ್ಲ, ಫ್ಯಾಕ್ಟ್ಸ್ ಫೈಂಡಿಂಗ್‌ಗೆ ಬಂದಿದ್ದೇವೆ ಎಂದು ಚದುರಿ ಹೋಯಿತು. ಜನತಾಮಾಧ್ಯಮ ಸಂಪಾದಕ ಆರ್.ಪಿ.ವೆಂಕಟೇಶ್ ಮೂರ್ತಿಯವರ ನೇತೃತ್ವದಲ್ಲಿ ಉಳಿದ ಸುಮಾರು ನೂರಕ್ಕೂ ಹೆಚ್ಚು ಪತ್ರಕರ್ತರು ಪೊಲೀಸರ ಬೆದರಿಕೆ ಲೆಕ್ಕಿಸದೆ ಪಾದಯಾತ್ರೆ ಮಾಡಿದೆವು.

ಆಗಲೂ ನನ್ನನ್ನು ಕಾಡಿದ ಪ್ರಶ್ನೆ: ಪತ್ರಕರ್ತರು ತೀರಾ ನಿರ್ಭಾವುಕರಾಗಿ ವರದಿ ಮಾಡುವುದಕ್ಕೆ ಮಾತ್ರ ಸೀಮಿತವಾಗಬೇಕೆ? ಅನಿವಾರ್ಯ ಅನಿಸಿದಾಗ ಆಕ್ಟಿವಿಸ್ಟ್ ಆದರೆ ತಪ್ಪೇನು?

ಯಾರಾದರೂ ಉತ್ತರಿಸುವಿರಾ?

6 comments:

ಹಳ್ಳಿಕನ್ನಡ said...

ಶುಭಾಶಯಗಳು ಮತ್ತು ಧನ್ಯವಾದಗಳು
- ಮಂಜುನಾಥಸ್ವಾಮಿ

ದಿನೇಶ್ ಕುಮಾರ್ ಎಸ್.ಸಿ. said...

ಮಲ್ಲಿಕಾರ್ಜುನ ಸ್ವಾಮಿಯವರೆ,
ಹಿಂಗಂದ್ರೆ ಹೆಂಗೆ? ನನ್ನ ಕಡೆಯ ಪ್ರಶ್ನೆಗೆ ನೀವು ಉತ್ತರ ಕೊಡಲಿಲ್ಲವಲ್ಲ?

ಹಳ್ಳಿಕನ್ನಡ said...

ಜರ್ನಲಿಸ್ಟ್ ಯಾವಾಗಲೂ ಆಕ್ಟಿವಿಸ್ಟೇ. ಆದರೆ ನಮ್ಮ ಪತ್ರಿಕೋದ್ಯಮದಲ್ಲಿ ಮೊದಲಿನಿಂದಲೂ ಅಂದರೆ ಭಾಷೆ ವ್ಯಾಕರಣ ಪದಸಂಯೋಜನೆ ಮಾತ್ರಗೊತ್ತಿದ್ದ ಕೆಲವು 'ಅಕ್ಷರಜ್ಞಾನಿ'ಗಳ ಗುಂಪೇ ಮೇಲುಗೈ ಪಡೆದಿದ್ದ ಕಾಲದಿಂದ ಇಂದಿನವರೆಗೂ ಒಬ್ಬ ಪತ್ರಕರ್ತ ಪ್ರಗತಿಪರವಾಗಿಯೋ, ಜನ ಕಾಳಜಿ ಉಳ್ಳವನಾಗಿಯೋ ಬರೆದಿದ್ದು ಕಡಿಮೆ.ಅವನದೇನಿದ್ದರು ಪ್ರಭುತ್ವದೊಂದಿಗೆ ಹೊಂದಾಣಿಕೆಯ ಜಾಯಮಾನ. ಆದರೆ ಕೆಲವು ವರ್ಷಗಳಿಂದ ಇತ್ತೀಚೆಗೆ ಹಿಂದುಳಿದವರು, ದಲಿತರು ಅಕ್ಷರ ಕಲಿತು ತಮ್ಮ ನೋವುಗಳಿಗೆ ಪದವಾಗಿ,ಸಮಾಜದ ಧ್ವನಿಯಾಗಿ ಎಲ್ಲೋ ಕೆಲವು ನಿಮ್ಮಂತವರು ಆಕ್ಟಿವ್ ಆಗಿದ್ದೀರಿ. ಆಗಾಗಿ ಈ ಪ್ರಶ್ನೆ ಉದ್ಭವಿಸಿರಬಹುದು.
- ಮಂಜುನಾಥ ಸ್ವಾಮಿ

ಆನಂದ್ said...

ಪ್ರೀತಿಯ ದಿನೇಶ್,

ನಿಮಗೆ ಸದಾ ಒಳ್ಳೆಯದಾಗಲಿ, ನಿಮ್ಮ ಬ್ಲಾಗ್ ಮತ್ತಷ್ಟು ಜನಪ್ರಿಯವಾಗಲಿ ಅನ್ನುವುದು ನನ್ನ ಹಾರೈಕೆ.

ನಮಸ್ಕಾರ

ಆನಂದ್

ಅಲೆಮಾರಿ said...

ತಪ್ಪೇನೂ ಇಲ್ಲ, ಖಂಡಿತಾ ಆಗಬೇಕು.
ಅದಕ್ಕೆ ನಿಮ್ಮದೇ ಉದಾಹರಣೆಗಳಿವೆ, ಪ್ರೇರೇಪಿಸುತ್ತವೆ.
ಅಭಿನಂದನೆಗಳು ಮತ್ತು ಧನ್ಯವಾದಗಳು.

ಮಲ್ಲಿಕಾಜು೯ನ ತಿಪ್ಪಾರ said...

thansk dinesh sir...

Nivu nimm deshimattinalli nannanu nenapisikondidakke dhanyavadagalu..

Nivu heluva haage journalist activist aagirbeku...