Monday, November 3, 2008

ನಾರಾಯಣಗೌಡರು ಕರ್ನಾಟಕದ ರಾಜ್ ಠಾಕ್ರೆ ಆಗಬೇಕೆ?


ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವ ಬಿಡಿಬಿಡಿ ಹೋರಾಟಗಳು ಈಗ ನಿರ್ಣಾಯಕ ಸ್ಥಿತಿ ತಲುಪಿವೆ. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳವಳಿ ಯಶಸ್ವಿಯಾಗಿದ್ದು ಈಗ ಇತಿಹಾಸ. ತಮಿಳುನಾಡಿನಲ್ಲಿ ಈಗ ಇರುವುದು ದ್ವಿಭಾಷಾ ಸೂತ್ರ ಮಾತ್ರ. ಹಿಂದಿಹೇರಿಕೆಯನ್ನು ಸಮರ್ಥವಾಗಿ ಮಟ್ಟ ಹಾಕಿದ್ದು ತಮಿಳುನಾಡು ಮಾತ್ರ. ಆದರೆ ಕರ್ನಾಟಕ ಸೇರಿದಂತೆ ಇತರ ದಕ್ಷಿಣಭಾರತದ ರಾಜ್ಯಗಳು ಹಿಂದಿಯನ್ನು ಮೈಮೇಲೆ ಬಿಟ್ಟುಕೊಂಡಿವೆ.

ಹಿಂದಿಭೂತದ ಸಮಸ್ಯೆ ಇತರೆಲ್ಲ ರಾಜ್ಯಗಳಿಂದ ಹೆಚ್ಚು ಬಾಧಿಸುತ್ತಿರುವುದು ಮಹಾರಾಷ್ಟ್ರವನ್ನು. ಮರಾಠಿ ಅಸ್ಮಿತೆಯ ಹೋರಾಟವನ್ನು ಕೈಗೆತ್ತಿಕೊಂಡ ಶಿವಸೇನೆ ಈಗ ಅದರ ಅಧಿನಾಯಕ ಬಾಳಾ ಸಾಹೇಬ್ ಠಾಕ್ರೆಯ ಹಾಗೆ ಮುದಿಬಿದ್ದಿದೆ. ಬಾಳಾ ಠಾಕ್ರೆ ಮಹಾರಾಷ್ಟ್ರಕ್ಕೆ, ವಿಶೇಷವಾಗಿ ಮುಂಬೈಗೆ ಇದ್ದ ಸಮಸ್ಯೆ ಕನ್ನಡಿಗರದ್ದು, ತಮಿಳರದ್ದು ಎಂದು ಭಾವಿಸಿದ್ದರು. ಶಿವಸೇನೆ ಹೇಳಿಕೇಳಿ ಬಿಜೆಪಿಗಿಂತ ಹೆಚ್ಚು ಹಿಂದುತ್ವವನ್ನು ಪ್ರತಿಪಾದಿಸಿದ ರಾಜಕೀಯ ಪಕ್ಷ. ಹೀಗಾಗಿ ಬಿಜೆಪಿಯ ಏಕಧರ್ಮ, ಏಕಸಂಸ್ಕೃತಿ ಸಿದ್ಧಾಂತಗಳು ಶಿವಸೇನೆಯನ್ನೂ ಆವರಿಸಿತ್ತು. ಆದಕಾರಣ ಹಿಂದಿ ಅವರಿಗೆ ಹೊರಗಿನ ಭಾಷೇಯೇನಾಗಿರಲಿಲ್ಲ. ಹೀಗಾಗಿ ಉತ್ತರಭಾರತೀಯರ ವಿರುದ್ಧ ಬಾಳಾ ಠಾಕ್ರೆ ಎಂದೂ ಜಗಳಕ್ಕೆ ನಿಂತಿರಲಿಲ್ಲ.

ಆದರೆ ಶಿವಸೇನೆಯ ಉತ್ತರಾಧಿಕಾರತ್ವಕ್ಕಾಗಿ ಹಾತೊರೆದು ನಿಂತಿದ್ದ ಬಾಳಾ ಠಾಕ್ರೆಯ ಅಣ್ಣನ ಮಗ ರಾಜ್ ಠಾಕ್ರೆ ಅದು ದಕ್ಕದೇ ಹೋದಾಗ ಆಯ್ದುಕೊಂಡಿದ್ದು ಪರ್ಯಾಯ ಮಾರ್ಗವನ್ನು. ಮಹಾರಾಷ್ಟ್ರ ನವನಿರ್ಮಾಣ ಸಮಿತಿ (ಎಂ.ಎನ್.ಎಸ್) ಮೂಲಕ ರಾಜ್ ಠಾಕ್ರೆ ಹಿಂದೀವಾಲಗಳ ವಿರುದ್ಧ ಸಮರ ಸಾರಿದರು. ಅಲ್ಲಿಯವರೆಗೆ ಉತ್ತರಭಾರತೀಯರ ವಿರುದ್ಧ ಮೆದುವಾಗಿದ್ದ ಬಾಳಾ ಠಾಕ್ರೆ ಸಹ ಅನಿವಾರ್ಯವಾಗಿ ರಾಜ್ ಹಿಡಿದ ಹಾದಿಯನ್ನೇ ಹಿಡಿಯಬೇಕಾಯಿತು.

ಕಳೆದ ಎರಡು ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ ಕಳೆದ ಒಂದು ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ರೈಲ್ವೆ ಇಲಾಖೆ ನೇಮಕಾತಿ ಸಂದರ್ಭದಲ್ಲಿ ಬಿಹಾರಿ ಯುವಕರನ್ನು ಹಿಡಿದು ತದುಕಿದ್ದು, ರಾಜ್ ಠಾಕ್ರೆ ಬಂಧನವಾಗಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಹಲವೆಡೆ ಹಿಂಸಾಚಾರಗಳು ನಡೆದಿದ್ದು, ನಾಟಕೀಯ ಬೆಳವಣಿಗೆಯಲ್ಲಿ ಠಾಕ್ರೆಯನ್ನು ಕೊಲ್ಲುವೆ ಎಂದು ಪಿಸ್ತೂಲು ಹಿಡಿದು ಹುಚ್ಚಾಟ ಮಾಡಿದ ಬಿಹಾರಿ ಯುವಕನನ್ನು ಪೊಲೀಸರು ಕೊಂದಿದ್ದು, ಇದೆಲ್ಲದಕ್ಕೆ ಪ್ರತಿಕ್ರಿಯೆಯಾಗಿ ಬಿಹಾರದಲ್ಲಿ ರೈಲುಗಳಿಗೆ, ರೈಲು ನಿಲ್ದಾಣಗಳಿಗೆ ಬೆಂಕಿ ಹಚ್ಚಿದ್ದು... ಹೀಗೆ ಹಲವು ಕ್ರಿಯೆ-ಪ್ರತಿಕ್ರಿಯೆಗಳು ನಡೆಯುತ್ತಲೇ ಇವೆ. ಬಿಹಾರದ ಎಲ್ಲ ರಾಜಕಾರಣಿಗಳು ಪಕ್ಷಭೇದ ಮರೆತು ರಾಜ್ ಠಾಕ್ರೆ ವಿರುದ್ಧ ಕದನಕ್ಕೆ ನಿಂತಿದ್ದಾರೆ.

*******

ಇದೆಲ್ಲದರ ನಡುವೆ ಹಲವರು ಎಂಇಎಸ್ ಹಾಗು ಕರ್ನಾಟಕ ರಕ್ಷಣಾ ವೇದಿಕೆಯನ್ನು, ರಾಜ್ ಠಾಕ್ರೆಯನ್ನು ಹಾಗು ಟಿ.ಎ.ನಾರಾಯಣಗೌಡರನ್ನು ಹೋಲಿಸಿ ಮಾತನಾಡುತ್ತಿದ್ದಾರೆ. ಮತ್ತೆ ಕೆಲವರು ನಾರಾಯಣಗೌಡರು ಕರ್ನಾಟಕದ ರಾಜ್ ಠಾಕ್ರೆ ಆಗಬೇಕು ಎನ್ನುತ್ತಿದ್ದಾರೆ.

ಹಿಂದೆ ಗೌಡರೊಂದಿಗೆ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಒಬ್ಬ ಭಾಷಣಕಾರರು ಮಾತನಾಡುತ್ತ ಗೌಡರು ಕರ್ನಾಟಕದ ಬಾಳ ಠಾಕ್ರೆಯಾಗಬೇಕು ಎಂದಿದ್ದರು. ನನ್ನ ಸರದಿ ಬಂದಾಗ ನಾನು ಹೇಳಿದೆ: ನಾರಾಯಣಗೌಡರು ಕರ್ನಾಟಕದ ಬಾಳ ಠಾಕ್ರೆಯಾಗುವುದೂ ರಾಜ್ ಠಾಕ್ರೆಯಾಗುವುದೂ ಬೇಡ. ಬೇಕಿದ್ದರೆ ರಾಜ್ ಠಾಕ್ರೆಯೇ ಮಹಾರಾಷ್ಟ್ರದ ನಾರಾಯಣಗೌಡರಾಗಲಿ. ಗೌಡರು ಇನ್ನೊಬ್ಬರ ಮಾದರಿಯನ್ನು ಅನುಸರಿಸಬೇಕಾಗಿಲ್ಲ. ತಮ್ಮದೇ ಮಾದರಿಯನ್ನು ಸೃಷ್ಟಿಸಬೇಕು. ನಾರಾಯಣ ಗೌಡರು ನಾರಾಯಣಗೌಡರಾಗೇ ಉಳಿಯಬೇಕು, ಹಾಗೆಯೇ ಬೆಳೆಯಬೇಕು.

ಹೀಗೆ ಮಾತನಾಡುವಾಗ ಗೌಡರನ್ನು ಗಮನಿಸಿದ್ದೆ; ಅವರು ಮುಗುಳ್ನಗುತ್ತ ನನ್ನ ಮಾತಿಗೆ ಸಮ್ಮತಿಯೆಂಬಂತೆ ತಲೆಯಾಡಿಸಿದ್ದರು.

ಬಹುಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಎರಡೂ ಸಂಘಟನೆಗಳು ರೂಪುಗೊಂಡಿರುವುದೇ ಭಿನ್ನ ಉದ್ದೇಶ, ಆಲೋಚನೆಗಳು ಹಾಗು ಸಿದ್ಧಾಂತಗಳೊಂದಿಗೆ. ಎಂ.ಎನ್.ಎಸ್ ಹಾಗು ಶಿವಸೇನೆಗಳು ಅಪ್ಪಟ ರಾಜಕೀಯ ಪಕ್ಷಗಳು. ಮರಾಠಿ ಅಸ್ಮಿತೆಯ ಹೆಸರಿನಲ್ಲೇ ಶಿವಸೇನೆ ಮಹಾರಾಷ್ಟ್ರದಲ್ಲಿ ಅಧಿಕಾರ ಪಡೆಯಲು ಸಾಧ್ಯವಾಗಿದ್ದು. ಶಿವಸೇನೆಯ ಹಾಗೆಯೇ ಮರಾಠಿ ಭಾವನೆಗಳನ್ನು ಕೆರಳಿಸುವ ಮೂಲಕ ಅಧಿಕಾರ ಸ್ಥಾನದತ್ತ ಸಾಗಲು ರಾಜ್ ಠಾಕ್ರೆ ಪ್ರಯತ್ನಿಸುತ್ತಿದ್ದಾರೆ.

ಆದರೆ ಕರ್ನಾಟಕ ರಕ್ಷಣಾ ವೇದಿಕೆ ಹುಟ್ಟಿದಾಗಲೂ ರಾಜಕೀಯ ಪಕ್ಷವಾಗಿರಲಿಲ್ಲ. ಸರಿಸುಮಾರು ಒಂದು ದಶಕ ಕ್ರಮಿಸಿದರೂ (ಸ್ಥಾಪನೆ:೧೯೯೯) ಇನ್ನೂ ಅದು ರಾಜಕೀಯ ಪಕ್ಷವಾಗಿ ಬದಲಾಗಿಲ್ಲ. ಕರ್ನಾಟಕಕ್ಕೆ ಒಂದು ಪ್ರಾದೇಶಿಕ ಪಕ್ಷ ಬೇಕು; ರಾಜ್ಯದ ಎಲ್ಲ ಭಾಗಗಳಲ್ಲೂ ಸಂಘಟನೆ ಹೊಂದಿರುವ ಕರ್ನಾಟಕ ರಕ್ಷಣಾ ವೇದಿಕೆಯೇ ಹೊಸ ಪ್ರಾದೇಶಿಕ ಪಕ್ಷ ಕಟ್ಟಬೇಕು ಎಂದು ಹಲವರು ಆಗಾಗ ಹೇಳುತ್ತಿರುತ್ತಾರೆ. ಆದರೆ ನಾರಾಯಣಗೌಡರಿಗೆ ತಮ್ಮ ಇತಿಮಿತಿಗಳು ಗೊತ್ತು, ರಾಜಕಾರಣದ ಒಳಸುಳಿಗಳು ಗೊತ್ತು. ಈ ಬಗ್ಗೆ ಅವರನ್ನು ಕೇಳಿದಾಗ ‘ರಾಜಕೀಯ ನಮಗೆಲ್ಲ ಸರಿಹೋಗಲ್ಲ ದಿನೇಶ್, ನಾನು ಸಂಘಟನೆಯನ್ನೇ ಬೆಳೆಸಿಕೊಂಡು ಹೋಗುತ್ತೇನೆ, ಇದರಲ್ಲೇ ನನಗೆ ಆತ್ಮತೃಪ್ತಿ ಇದೆ. ರಾಜಕಾರಣದಲ್ಲಿ ತೊಡಗಿ ಮಾಡಬಹುದಾಗಿದ್ದನ್ನು ಸಂಘಟನೆಯಿಂದಲೇ ಮಾಡುತ್ತೇನೆ. ಮುಂದೆ ಜನರೇ ಬಯಸಿದರೆ, ಪ್ರಾದೇಶಿಕ ಪಕ್ಷದಿಂದಷ್ಟೆ ಕನ್ನಡದ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವುದಾದರೆ ಆ ಬಗ್ಗೆ ಯೋಚನೆ ಮಾಡೋಣ. ಸದ್ಯಕ್ಕಂತೂ ನೂರಾರು ಕೋಟಿ ರೂ.ಗಳ ವ್ಯವಹಾರವಾಗಿರುವ ಈ ರಾಜಕಾರಣದಲ್ಲಿ ಕಾಲಿಟ್ಟು ನಗೆಪಾಟಲಾಗುವುದು ಸರಿಯಲ್ಲ. ಮೊನ್ನೆ ಒಬ್ಬರು ಹಿರಿಯ ಸಾಹಿತಿಗಳು ಪ್ರಾದೇಶಿಕ ಪಕ್ಷ ಕಟ್ಟಲು ಹೊರಟಾಗಲೂ ನಾನು ಅವರಿಗೆ ಇದನ್ನೇ ಹೇಳಿದ್ದೆ ಎಂದಿದ್ದರು.

*******

ಶಿವಸೇನೆ ಅಪ್ಪಟ ಕೋಮುವಾದಿ ರಾಜಕೀಯ ಪಕ್ಷ. ಎಂ.ಎನ್.ಎಸ್. ಹಿಂದುತ್ವದ ಕುರಿತಾಗಿ ತನ್ನ ನಿಲುವನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ರಾಜ್ ಠಾಕ್ರೆ ಸಹ ಶಿವಸೇನೆಯಲ್ಲೇ ಇದ್ದವರು, ಅವರ ಅನುಯಾಯಿಗಳು ಸಹ ಆಕಾಶದಿಂದ ಉದ್ಭವಿಸಿದವರಲ್ಲ. ಅವರೂ ಶಿವಸೇನೆಯಲ್ಲೇ ಇದ್ದವರು. ಹೀಗಾಗಿ ಹಿಂದುತ್ವದ ಗುಪ್ತ ಕಾರ್ಯಸೂಚಿಗಳು ಎಂಎನ್‌ಎಸ್‌ನಲ್ಲೂ ಇದ್ದರೆ ಆಶ್ಚರ್ಯವೇನಿಲ್ಲ. ಸದ್ಯಕ್ಕೆ ರಾಜ್ ಅವರ ಯುದ್ಧ ನಡೆದಿರುವುದು ಯುಪಿವಾಲಾಗಳು ಹಾಗು ಬಿಹಾರಿಗಳ ಮೇಲೆ. ಹೀಗಾಗಿ ಸದ್ಯಕ್ಕೆ ಅವರ ಸಂಪೂರ್ಣ ಬಣ್ಣ ಹೊರಗೆ ಬಂದಿಲ್ಲ.

ಕರ್ನಾಟಕ ರಕ್ಷಣಾ ವೇದಿಕೆಗೆ ಇಂಥ ಹಿಡನ್ ಅಜೆಂಡಾಗಳು ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬುದು ವೇದಿಕೆಯ ಘೋಷವಾಕ್ಯ. ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ ಎಂದು ಘೋಷಿಸಿದ ಕುವೆಂಪು ಅವರ ಭಾವಚಿತ್ರವು ವೇದಿಕೆಯ ಹೆಸರಿನ ಜತೆಯೇ ಸದಾ ಕಂಗೊಳಿಸುತ್ತದೆ. ನಾರಾಯಣಗೌಡರಂತೂ ನಾನು ಗಮನಿಸಿದಂತೆ ಕುವೆಂಪು ಅವರ ಒಂದು ಕವಿತೆಯನ್ನಾದರೂ ಉದ್ದರಿಸದೆ ಭಾಷಣ ಮಾಡಿದ್ದೇ ಇಲ್ಲ. ಇದಕ್ಕೆ ಹಲವರು ಜಾತಿಯ ಬಣ್ಣ ಹಚ್ಚಿ ಕೊಳಕು ಮನಸ್ಥಿತಿ ತೋರಿದ್ದೂ ಉಂಟು.

ಕುವೆಂಪು ಅವರನ್ನು ಆದರ್ಶವಾಗಿ ಸ್ವೀಕರಿಸಿದಂತೆ ಗೌಡರು ಡಾ.ರಾಜ್ ಕುಮಾರ್‌ರವರನ್ನು ತಮ್ಮ ಗುರು ಎಂದೇ ಭಾವಿಸುತ್ತಾರೆ. ಅದನ್ನು ಸಾಕಷ್ಟು ಬಾರಿ ಹೇಳಿಕೊಂಡೂ ಇದ್ದಾರೆ. ನಾನು ಕನ್ನಡ ಹೋರಾಟದ ದೀಕ್ಷೆ ಪಡೆದಿದ್ದೇ ರಾಜ್ ಕುಮಾರ್ ಅವರಿಂದ. ಅವರ ಸಿನಿಮಾಗಳನ್ನು, ಅವರ ಹೋರಾಟಗಳನ್ನು ನೋಡಿಯೇ ನಾನು ಚಳವಳಿಗೆ ಬಂದೆ ಎನ್ನುತ್ತಾರೆ ಅವರು. ಗೌಡರ ಅದೃಷ್ಟಕ್ಕೆ ರಾಜ್‌ಕುಮಾರ್ ಅವರು ಒಕ್ಕಲಿಗರಲ್ಲ!

ಕರ್ನಾಟಕ ರಕ್ಷಣಾ ವೇದಿಕೆಯನ್ನು ನಾನೂ ಸಹ ಹಲವು ಅನುಮಾನಗಳ ಜತೆಯೇ ಹತ್ತಿರದಿಂದ ನೋಡಿಕೊಂಡು ಬಂದಿದ್ದೇನೆ. ಕನಿಷ್ಠ ವೇದಿಕೆಯ ಒಂದುನೂರು ಕಾರ್ಯಕ್ರಮಗಳಲ್ಲಿ ನಾನು ಅತಿಥಿಯಾಗಿ ಭಾಷಣ ಮಾಡಿದ್ದುಂಟು. ಅಲ್ಲಿ ಎಲ್ಲ ಜಾತಿಯ ಜನರಿದ್ದಾರೆ. ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯೇ ಒಬ್ಬ ಕ್ರಿಶ್ಚಿಯನ್. ಗಣನೀಯ ಪ್ರಮಾಣದಲ್ಲಿ ಮುಸ್ಲಿಮರೂ ಸಹ ಸಂಘಟನೆಯಲ್ಲಿದ್ದಾರೆ. ಬ್ರಾಹ್ಮಣರು, ದಲಿತರು, ಹಿಂದುಳಿದವರು ಹೀಗೆ ಎಲ್ಲ ಸಮುದಾಯದವರೂ ಅಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಜಿಲ್ಲಾ ಘಟಕಗಳ ಉಸ್ತುವಾರಿ ಹೊತ್ತಿರುವವರು ವೀರಶೈವರು. ನಾರಾಯಣಗೌಡರ ಬಗ್ಗೆ ಒಕ್ಕಲಿಗ ಹುಡುಗರಲ್ಲಿ ವಿಶೇಷವಾದ ಆಕರ್ಷಣೆ ಇದೆ ಎಂಬುದೇನೋ ನಿಜ. ಆದರೆ ಅದರರ್ಥ ಗೌಡರು ಜಾತಿವಾದಿ ಎಂದೇನಲ್ಲ. ನಾನು ಗಮನಿಸಿದಂತೆ ಅವರು ಅಪ್ಪಟ ದೈವಭಕ್ತ. ಆದರೆ ಜಾತಿವಾದಿಯೂ ಅಲ್ಲ, ಕೋಮುವಾದಿಯೂ ಅಲ್ಲ.

*******

ನಾರಾಯಣಗೌಡರು ಕರ್ನಾಟಕ ರಕ್ಷಣಾ ವೇದಿಕೆಯನ್ನೂ ಬೆಳೆಸುತ್ತಲೇ ಇತರ ಸಂಘಟನೆಗಳ ಜತೆ ಸದಾ ಸಂಪರ್ಕ, ಸಂವಹನ ಕಾಪಾಡಿಕೊಂಡು ಬಂದವರು. ಕನ್ನಡ-ಕರ್ನಾಟಕಕ್ಕೆ ಕುತ್ತು ಬರುವ ಸಂದರ್ಭಗಳು ಎದ್ದಾಗಲೆಲ್ಲ ಅವರು ನಾಡಪರ ಸಂಘಟನೆಗಳನ್ನೆಲ್ಲ ಕರೆದು ಸಭೆ ನಡೆಸಿಯೇ ಹೋರಾಟಕ್ಕೆ ಅಣಿಯಾಗುತ್ತಾರೆ. ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘಟನೆಗಳು, ವಿವಿಧ ಕನ್ನಡ ಸಂಘಟನೆಗಳು, ಪ್ರಗತಿಪರ ಸಂಘಟನೆಗಳನ್ನು ಸೇರಿಸಿ ಹೋರಾಟ ಹೇಗಿರಬೇಕು ಎಂದು ಸಲಹೆ ಸೂಚನೆಗಳನ್ನು ಪಡೆಯುತ್ತಾರೆ.

ಇಂಥ ಹಲವು ಸಭೆಗಳಲ್ಲಿ ನಾನು ಪಾಲ್ಗೊಂಡಿದ್ದೇನೆ. ಗೌಡರು ಸದಾ ತಮ್ಮ ಕಿವಿಗಳನ್ನು ತೆರೆದಿಟ್ಟುಕೊಂಡಿರುತ್ತಾರೆ. ಎಲ್ಲವನ್ನು ಕೇಳಿಸಿಕೊಂಡೇ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ನನಗೆ ಗೊತ್ತಿರುವಂತೆ ಅವರು ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಪತ್ರಕರ್ತರಿಂದ ಹಿಡಿದು ಬೇರೆಬೇರೆ ವಲಯಗಳಲ್ಲ್ಲಿರುವ ಕೆಲ ಪ್ರಜ್ಞಾವಂತರಿಂದ ಸದಾ ಸಲಹೆ ಪಡೆಯುತ್ತಾರೆ. ಕರವೇ ಜತೆ ಇವರ್‍ಯಾರೂ ನೇರವಾಗಿ ಇಲ್ಲವಾದರೂ ಗೌಡರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದಾರೆ. ಹಾಗೆಂದ ಮಾತ್ರಕ್ಕೆ ಯಾರೋ ಹೇಳಿದ್ದೆಲ್ಲವನ್ನು ಗೌಡರು ಕೇಳುತ್ತಾರೆ ಎಂದೇನಲ್ಲ. ಎಲ್ಲವನ್ನು ಕೇಳಿಸಿಕೊಂಡೇ ಅವರು ಹೆಜ್ಜೆ ಇಡುತ್ತಾರೆ. ತಮ್ಮದೇ ಆದ ನಿರ್ಧಾರವನ್ನು ಕೈಗೊಳ್ಳುತ್ತಾರೆ.

ಗೌಡರಿಗೆ ಇತರ ಕನ್ನಡ ಸಂಘಟನೆಗಳಲ್ಲೇ ಸಾಕಷ್ಟು ಜನ ಶತ್ರುಗಳಿದ್ದಾರೆ. ಹಲವರು ಕರವೇ ಬಿಟ್ಟು ಹೊರಹೋದವರು. ಮತ್ತೆ ಕೆಲವರು ಪರ್ಯಾಯ ಕರವೇಗಳನ್ನು ಕಟ್ಟಿಕೊಂಡವರು. ಮತ್ತೆ ಕೆಲವರು ಗೌಡರ ಜನಪ್ರಿಯತೆ ಸಹಿಸಲಾಗದೆ ದ್ವೇಷ ಕಾರುವವರು. ಆಗಾಗ ಗೌಡರ ಕಾಲೆಳೆಯುವ ಯತ್ನಗಳು ನಡೆಯುತ್ತಲೇ ಇರುತ್ತವೆ. ಇಂಥ ಪ್ರಚೋದನೆಗಳನ್ನು ಲಘುವಾಗಿಯೇ ಸ್ವೀಕರಿಸುವ ಗೌಡರು ಇತರ ಸಂಘಟನೆಗಳ ಮುಖಂಡರ ಬಗ್ಗೆ ವಿನಾಕಾರಣ ಕಾಲುಕೆದರಿ ಜಗಳಕ್ಕೆ ನಿಂತವರಲ್ಲ.

ಉಡುಪಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ನಾರಾಯಣಗೌಡರು ಕನ್ನಡ ಚಳವಳಿ ಕುರಿತಾಗಿ ಒಬ್ಬ ಭಾಷಣಕಾರರು. ಗೌಡರು ಅಲ್ಲಿ ವೇದಿಕೆ ಹತ್ತಬಾರದು ಎಂದು ತಡೆಯಲು ವಿರೋಧಿ ಗುಂಪಿನವರು ಸಾಕಷ್ಟು ಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ.

ಕಾರ್ಯಕ್ರಮ ಮುಗಿಸಿ ವಾಪಾಸು ಬರುವಾಗ ಗೌಡರ ಕಾರಿನಲ್ಲೇ ನಾನೂ ಇದ್ದೆ. ಇದ್ದಕ್ಕಿದ್ದಂತೆ ಎಲ್ಲರ ಮೊಬೈಲುಗಳು ಹೊಡೆದುಕೊಳ್ಳಲಾರಂಭಿಸಿದವು. ಗೌಡರ ಕಾರಿಗೆ ಕಲ್ಲು ಬಿತ್ತಂತೆ, ಟಿವಿಯಲ್ಲಿ ಫ್ಲಾಶ್ ನ್ಯೂಸ್ ಬರುತ್ತಿದೆ ಎಂದು ಕರೆ ಮಾಡಿದವರೆಲ್ಲ ಹೇಳುತ್ತಿದ್ದರು. ಗೌಡರಿಗೂ ಇದೇ ಕರೆಗಳು ಬರಲಾರಂಭಿಸಿದವು. ಕೆಲ ನಿಮಿಷಗಳು ಕಳೆದ ನಂತರ ನಿಜವಾಗಿಯೂ ಕಲ್ಲುಗಳು ಬೀಳತೊಡಗಿದವು. ಎಲ್ಲವೂ ಗುರಿತಪ್ಪಿದರೂ ನಾವು ಕುಳಿತಿದ್ದ ವಾಹನದ ಮುಂಭಾಗದಲ್ಲಿದ್ದ ಮತ್ತೊಂದು ವಾಹನಕ್ಕೆ ದೊಡ್ಡ ಕಲ್ಲೊಂದು ಬಿತ್ತು. ಗೌಡರ ವಾಹನವೂ ಸೇರಿ ಜತೆಯಲ್ಲಿ ಬಂದಿದ್ದ ವೇದಿಕೆಯ ಕಾರ್ಯಕರ್ತರ ವಾಹನಗಳೆಲ್ಲ ಗಕ್ಕನೆ ನಿಂತವು. ಕಾಡು, ಗವ್ ಗತ್ತಲು... ಯಾರ ಸುಳಿವೂ ಇಲ್ಲ. ಬೆಂಗಾವಲಾಗಿ ಬಂದಿದ್ದ ಪೊಲೀಸರೂ ಕಂಗಾಲು.

ಈ ಸಮಯದಲ್ಲಿ ಗೌಡರು ಎಷ್ಟು ಸ್ಥಿತಪ್ರಜ್ಞತೆಯಿಂದ ವರ್ತಿಸಿದರೆಂದರೆ ಅಲ್ಲಿದ್ದ ಎಲ್ಲ ವಾಹನಗಳನ್ನು ಹೊರಡಿಸಿ, ಆಕ್ರೋಶದಿಂದ ಕುದಿಯುತ್ತಿದ್ದ ಕಾರ್ಯಕರ್ತರನ್ನೆಲ್ಲ ಸಮಾಧಾನಪಡಿಸಿದ್ದರು. ಏನೋ ಅನಾಹುತವಾಗಲಿದೆ ಎಂಬ ವಾತಾವರಣವನ್ನು ಹಾಗೇ ತಿಳಿಗೊಳಿಸಿದ್ದನ್ನು ನೋಡಿ ಆಶ್ಚರ್ಯವೆನ್ನಿಸಿತ್ತು.

ತಮಾಶೆಯೆಂದರೆ ಗೌಡರ ಕಾರಿಗೆ ಕಲ್ಲು ಬಿದ್ದಿರಲೇ ಇಲ್ಲ, ಬಿದ್ದ ಕಲ್ಲೂ ಸಹ ಬೇರೆ ವಾಹನಕ್ಕೆ ಬಿದ್ದಿತ್ತು. ಆದರೆ ಕಲ್ಲು ಬೀಳುವ ಮುನ್ನವೇ ಎರಡು ಟಿವಿ ಸುದ್ದಿವಾಹಿನಿಗಳು ಕಿಗ್ಗಾ ಸಮೀಪ ನಾರಾಯಣಗೌಡರ ಕಾರಿಗೆ ಕಲ್ಲು ಎಂದು ಸುದ್ದಿ ಬಿತ್ತರಿಸಿದ್ದವು. ತಕ್ಷಣ ನೆನಪಾಗಿದ್ದು ಅಂಬರೀಷ್ ಅಭಿನಯದ ನ್ಯೂಡೆಲ್ಲಿ ಸಿನಿಮಾ.

*******

ಎಂಇಎಸ್ ಹಾಗು ಕರವೇ ಕಾರ್ಯವೈಖರಿಯ ಮಾದರಿಗಳಲ್ಲೇ ಸಾಕಷ್ಟು ಭಿನ್ನತೆಗಳಿವೆ. ಠಾಕ್ರೆಯದು ಹೊಡಿಬಡಿ ಮಾದರಿ. ಆದರೆ ದೈಹಿಕ ಹಲ್ಲೆ ಕರವೇಗೆ ಅಪಥ್ಯ. ಎಂಇಎಸ್ ವಿರುದ್ಧದ ಚಳವಳಿ ಸಂದರ್ಭದಲ್ಲಿ ಬೆಳಗಾವಿ ಮೇಯರ್ ಆಗಿದ್ದ ಮೋರೆ ಮೂತಿಗೆ ಮಸಿ ಬಳಿದದ್ದು ಇದಕ್ಕೆ ಅಪವಾದ. ಕರವೇ ಇತಿಹಾಸದಲ್ಲಿ ಇಂಥ ಪ್ರಕರಣಗಳು ತೀರಾ ಕಡಿಮೆ. ಮೋರೆ ಮೂತಿಗೆ ಮಸಿ ಬಳಿಯುವ ಕ್ರಿಯೆಯೂ ಒಂದು ಸಾಂಕೇತಿಕ ಅರ್ಥವನ್ನು ಧ್ವನಿಸುತ್ತಿತ್ತು. ಕರವೇ ಮುಖಂಡರನ್ನು ಭಯೋತ್ಪಾದಕರಿಗೆ ಹೋಲಿಸಿ ಕೆಲ ಬುದ್ಧಿಜೀವಿಗಳು ಮಾತನಾಡುತ್ತಿದ್ದಾಗ ಪೂರ್ಣಚಂದ್ರ ತೇಜಸ್ವಿಯವರು ‘ಅಲ್ರೀ ಅವನಿಗೆ ಮಸಿ ಬಳಿಯದೆ ಮತ್ತೇನು ಫೇರ್ ಅಂಡ್ ಲವ್ಲೀ ಬಳೀಬೇಕಿತ್ತಾ ಎಂದು ಝಾಡಿಸಿದ್ದರು.

ಇನ್ನು ನೋಡ್ರೀ, ಈ ಕರವೇಯವರು ಸಿಕ್ಕಸಿಕ್ಕವರಿಗೆಲ್ಲ ಹೋಡೀತಾರೆ, ಮಸಿ ಬಳೀತಾರೆ ಎಂದು ಹಲವರು ಹೇಳಿಕೊಂಡು ಓಡಾಡಿದರು. ಅವರಿಗೆಲ್ಲ ನಿರಾಶೆಯಾಯಿತು, ಮತ್ತೆ ಇನ್ನ್ಯಾರಿಗೂ ಮಸಿ ಬಳಿಯುವ ಕಾಯಕ ನಡೆಯಲಿಲ್ಲ. ಮಸಿ ಬಳಿಸಿಕೊಳ್ಳುವುದಕ್ಕೂ ಒಂದು ‘ಯೋಗ್ಯತೆ ಬೇಕಲ್ಲವೆ?!

ಕರವೇ ಯುವಕರ ಹೋರಾಟಗಳನ್ನು ಗಮನಿಸಿ ನೋಡಿ, ಅವರು ತಮ್ಮ ಆಕ್ರೋಶವನ್ನೆಲ್ಲ ತೀರಿಸಿಕೊಳ್ಳುವುದು ನಿರ್ಜೀವ ವಸ್ತುಗಳ ಮೇಲೆ. ಯಾವುದೋ ಪೋಸ್ಟರು, ಇನ್ನ್ಯಾವುದೋ ಕಛೇರಿಯ ಮೇಜು-ಕುರ್ಚಿ, ಕಂಪ್ಯೂಟರ್‌ಗಳು ಹೀಗೆ ನಿರ್ಜೀವ ವಸ್ತುಗಳು ಆಕ್ರೋಶಕ್ಕೆ ಗುರಿಯಾಗುತ್ತವೆ.

ರೈಲ್ವೆ ನೇಮಕಾತಿಯ ಹೋರಾಟದ ಸಂದರ್ಭದಲ್ಲಿ ಬಿಹಾರಿ ಯುವಕರನ್ನು ಥಳಿಸಲಾಯಿತು ಎಂದೇ ಕೆಲವರು ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಪ್ರತಿಭಟನೆ ನಡೆಸುವಾಗ ಬೆದರಿ ಬಿಹಾರಿ ಯುವಕರು ಓಡಿ ಹೋದರೆ ‘ಥಳಿಸಲಾಯಿತು ಎಂದು ವ್ಯಾಖ್ಯಾನಿಸಬೇಕೆ? ಬೆಂಗಳೂರಿನ ಹೃದಯ ಭಾಗದಲ್ಲಿರುವ ರೈಲ್ವೆ ವಲಯ ವ್ಯವಸ್ಥಾಪಕ ಮಹೇಶ್ ಮಂಗಲ್ ಕಛೇರಿಗೆ ನುಗ್ಗಿ ಕರವೇ ಕಾರ್ಯಕರ್ತರು ದಾಂಧಲೆ ನಡೆಸಿದರು. ಬಿಹಾರಿ ಅಧಿಕಾರಿ ಎದುರಿಗೇ ಇದ್ದರೂ ಕಾರ್ಯಕರ್ತರು ಒಡೆದಿದ್ದು ಕೇವಲ ಕುರ್ಚಿಗಳನ್ನಷ್ಟೆ. ಒಂದು ವೇಳೆ ಎಂ.ಎನ್.ಎಸ್ ಇದೇ ಹೋರಾಟ ನಡೆಸುತ್ತಿದ್ದರೆ ಬಿಹಾರಿ ಅಧಿಕಾರಿಗೆ ಹಿಡಿದು ಥಳಿಸುತ್ತಿದ್ದರಲ್ಲವೆ?

ಸಾಸ್ಕೆನ್ ಎಂಬ ಐಟಿ ಕಂಪೆನಿಯ ಉದ್ಯೋಗಿಯೊಬ್ಬ ಕನ್ನಡಿಗರನ್ನು ಹೀಯಾಳಿಸಿ ಪದ್ಯ ಬರೆದು ಓದುವ ವಿಷಯ ವಿವಾದವಾದಾಗಲೂ ಅಷ್ಟೆ. ಕರವೇ ಕಾರ್ಯಕರ್ತರು ಆ ಸಂಸ್ಥೆಯ ಯಾವೊಬ್ಬ ಉದ್ಯೋಗಿಯನ್ನೂ ಥಳಿಸಲು ಹೋಗಲಿಲ್ಲ. ಬದಲಾಗಿ ಸಂಸ್ಥೆಯ ಅಮೂಲ್ಯ ಕಂಪ್ಯೂಟರ್‌ಗಳನ್ನು ಹಾಳುಗೆಡವಿ ಬಂದರು.

ಹಿಂದಿ ಸಿನಿಮಾಗಳು ನಿಯಮ ಮೀರಿ ಪ್ರದರ್ಶನವಾಗುತ್ತಿದ್ದಾಗ ಕರವೇ ಕಾರ್ಯಕರ್ತರು ಥಿಯೇಟರುಗಳಿಗೆ ನುಗ್ಗಿದಾಗಲೂ ಪ್ರೇಕ್ಷಕರನ್ನು ಮುಟ್ಟಲಿಲ್ಲ. ತಮ್ಮ ಕೈಯಿಂದಲೇ ಗಾಜುಗಳನ್ನು ಒಡೆದು ಸ್ವತಃ ತಾವೇ ಗಾಯ ಮಾಡಿಕೊಂಡರು. ಈಗಲೂ ಕರವೇ ಹುಡುಗರ ಕೈಯಲ್ಲಿ ಗಾಯದ ಗುರುತುಗಳಿವೆ.

*******

ಕರವೇ ಹುಡುಗರು ಒಂಥರಾ ಆತ್ಮಹತ್ಯಾ ದಳಗಳಿದ್ದಂತೆ. ಆದರೆ ಇದು ಬೇರೆ ಅರ್ಥದ ಆತ್ಮಹತ್ಯಾ ದಳಗಳು. ಈ ದಳಗಳು ಬೇರೆಯವರನ್ನು ದೈಹಿಕವಾಗಿ ಹಿಂಸಿಸದೆ ತಮಗೆ ತಾವೇ ನೋವು ಕೊಟ್ಟುಕೊಂಡು ಹೋರಾಟ ನಡೆಸುತ್ತವೆ. ಪೊಲೀಸ್ ಠಾಣೆಗಳಲ್ಲಿ ಪೊಲೀಸರು ಹಲ್ಲೆ ನಡೆಸಲು ಮುಂದಾದರೆ, ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸರು ಅತಿರೇಕದಿಂದ ವರ್ತಿಸಿದರೆ ಕಾರ್ಯಕರ್ತರು ಮೈಮೇಲೆ ಹಾಕಿದ ಹಳದಿ-ಕೆಂಪು ಶಾಲನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುವ ಮೂಲಕ ಪೊಲೀಸರ ಸ್ಥೈರ್ಯ ಉಡುಗಿಸುತ್ತಾರೆ.

ಅಮಾಯಕ ಟ್ಯಾಕ್ಸಿ ಡ್ರೈವರ್‌ಗಳನ್ನು ಬೀದಿಬೀದಿಯಲ್ಲಿ ಹಿಡಿದು ಎಂಎನ್‌ಎಸ್‌ನವರು ಹೊಡೆದಂತೆ ಕರವೇ ಕಾರ್ಯಕರ್ತರು ಮಾಡುತ್ತ ಹೋಗಿದ್ದರೆ ಅವರನ್ನು ಕನ್ನಡದ ಶಾಂತಿಪ್ರಿಯ ಜನರು ಒಪ್ಪಲು ಸಾಧ್ಯವೇ ಇರಲಿಲ್ಲ. ಇಂಥ ಕಾರ್ಯಾಚರಣೆಗಳನ್ನು ಮಾಡುವುದಿದ್ದರೆ ದಿನಕ್ಕೊಂದು ದಾಂಧಲೆ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ ಕರವೇ ಈ ಬಗೆಯ ಹಿಂಸೆಗಳಲ್ಲಿ ನಂಬಿಕೆ ಇಟ್ಟಿಲ್ಲ ಎಂಬುದು ಗಮನಾರ್ಹ.

ಚಳವಳಿಗಳು ನೂರಾರು ನಡೆದಿವೆ. ಹಲವನ್ನು ನಾವೇ ಮರೆತುಹೋಗಿದ್ದೇವೆ. ಆದರೆ ಕರವೇ ಕಾರ್ಯಕರ್ತರು ತಮ್ಮ ಮೇಲೆ ಕೇಸುಗಳ ಮೇಲೆ ಕೇಸುಗಳನ್ನು ಹೇರಿಕೊಂಡಿದ್ದಾರೆ. ಕೋರ್ಟುಗಳಿಗೆ ತಿರುಗಿ ತಿರುಗಿ ಹೈರಾಣಾಗಿದ್ದಾರೆ. ಎಂದೋ ನಡೆಸಿದ ಹೋರಾಟದ ಕೇಸಿಗೆ ಸಂಬಂಧಿಸಿದಂತೆ ಇನ್ನ್ಯಾವತ್ತೋ ವಾರೆಂಟ್ ಬಂದಿರುತ್ತದೆ. ಮನೆಗಳಿಗೆ ಆಗಾಗ ಪೊಲೀಸರು ಹುಡುಕಿಕೊಂಡು ಬರುತ್ತಾರೆ. ಕೋರ್ಟುಗಳಲ್ಲಿ ನ್ಯಾಯಾಧೀಶರು ಸಿಡುಕುತ್ತಾರೆ; ಯಾಕ್ರಯ್ಯಾ ಹಿಂಗೆಲ್ಲಾ ಮಾಡ್ಕೊತೀರಾ? ಎನ್ನುತ್ತಾರೆ. ಕೆಲವು ನ್ಯಾಯಾಧೀಶರು ಪ್ರೀತಿಯಿಂದಲೂ ಗದರಿ ಬಿಟ್ಟು ಕಳಿಸುವುದುಂಟು.

ಏನೇ ಆದರೂ ಕರವೇ ಹುಡುಗರ ನೈತಿಕ ಸ್ಥೈರ್ಯ ಉಡುಗುವುದಿಲ್ಲ. ಯಾಕೆಂದರೆ ಅವರ ಬೆನ್ನಿಗೆ ನಾರಾಯಣಗೌಡರು ಇದ್ದಾರೆ ಮತ್ತು ಇರುತ್ತಾರೆ. ತಮ್ಮ ಹುಡುಗರ ಬಗ್ಗೆ ಗೌಡರು ವಿಪರೀತ ಪ್ರೊಟೆಕ್ಟಿವ್. ಎಲ್ಲ ಹೋರಾಟಗಳು ಆರಂಭಗೊಂಡು ಟಿವಿ ವಾಹಿನಿಯವರಿಗೆ, ಪತ್ರಿಕಾ ಛಾಯಾಗ್ರಾಹಕರಿಗೆ ಮಸ್ತಾದ ಚಿತ್ರಗಳು ಸಿಕ್ಕ ನಂತರ ವಿವಿಧ ಪೊಲೀಸ್ ಠಾಣೆಗಳಲ್ಲಿ ಸಿಕ್ಕಿಕೊಂಡ ಹುಡುಗರನ್ನು ಬಿಡಿಸಿ ತರುವವರೆಗೆ ಅವರು ಸಮಾಧಾನದಿಂದ ಇರುವುದಿಲ್ಲ.

ರೈಲ್ವೆ ಹೋರಾಟದ ಸಂದರ್ಭದಲ್ಲಿ ಹುಬ್ಬಳ್ಳಿಯ ವೇದಿಕೆಯ ಒಬ್ಬ ಮುಖಂಡನನ್ನು ಅಲ್ಲಿನ ಎಸ್‌ಪಿಯೊಬ್ಬರು ಕದ್ದುಮುಚ್ಚಿ ಕರೆದುಕೊಂಡು ಹೋಗಿ ಪ್ರವಾಸಿಮಂದಿರದಲ್ಲಿ ಕೂಡಿಟ್ಟು ಚಿತ್ರಹಿಂಸೆ ನೀಡಿದ್ದರು. ರಾತ್ರಿ ಎರಡು ಗಂಟೆಯ ವೇಳೆಗೆ ಗೌಡರಿಗೆ ವಿಷಯ ಹೋಗುತ್ತದೆ. ಆ ಅಧಿಕಾರಿಗೆ ಆ ಹೊತ್ತಿನಲ್ಲೇ ದೂರವಾಣಿ ಕರೆ ಮಾಡಿ ಗೌಡರು ಹೇಳಿದ್ದೇನು ಗೊತ್ತೆ? ತಾಯಿಯ ಎದೆಹಾಲು ಕುಡಿದವರ್‍ಯಾರೂ ಹೀಗೆ ಮಾಡಲು ಸಾಧ್ಯವಿಲ್ಲ. ನೀನೂ ಕನ್ನಡಿಗನೇ. ಆತನ ಮೇಲೆ ಸಿಟ್ಟಿದ್ದರೆ ಕೇಸು ಹೂಡಬಹುದಿತ್ತು. ಹೀಗೆ ಅನ್ಯಾಯವಾಗಿ ಹೇಡಿಯಂತೆ ಹೊಡೆಯುವ ಅಗತ್ಯವಿರಲಿಲ್ಲ.

ತದನಂತರ ಕರವೇ ಮುಖಂಡನ ಬಿಡುಗಡೆಯೂ ಆಯ್ತು. ಇಂಥ ಉದಾಹರಣೆಗಳು ನೂರಾರು. ಒಬ್ಬ ನಾಯಕನಿಗೆ ಇರಬೇಕಾದ ಎಲ್ಲ ಲಕ್ಷಣಗಳೂ ನಾರಾಯಣಗೌಡರಿಗೆ ಇದೆ ಎನ್ನಲು ಇದನ್ನು ಉಲ್ಲೇಖಿಸಿದೆ.

*******

ಗೌಡರು ತಮ್ಮ ಈ ಎಲ್ಲ ಗುಣಗಳಿಂದ ಸಾಕಷ್ಟು ಜನರನ್ನು ಆಕರ್ಷಿಸಿದ್ದಾರೆ. ಅವರನ್ನು ಬೆಂಬಲಿಸುವ ಅನಿವಾಸಿ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕನ್ನಡದ ಉದ್ಯಮಿಗಳು ಅವರನ್ನು ಪ್ರೀತಿಸುತ್ತಾರೆ. ಐಟಿಬಿಟಿ ಮತ್ತಿತರ ಕಾರ್ಪರೇಟ್ ಸಂಸ್ಥೆಗಳಲ್ಲಿ ದುಡಿಯುವ ಕನ್ನಡಿಗ ಟೆಕಿಗಳಲ್ಲಿ ಬಹುಪಾಲು ಜನರು ಗೌಡರ ಅಭಿಮಾನಿಗಳೇ ಆಗಿಹೋಗಿದ್ದಾರೆ. ಕರವೇ ಹೋರಾಟವನ್ನು ನೇರವಾಗಿ ಬೆಂಬಲಿಸುತ್ತಲೇ ಬನವಾಸಿ ಬಳಗದಂಥ ಸಂಘಟನೆಗಳು ಕ್ರಿಯಾಶೀಲವಾಗಿವೆ.

ಇತ್ತೀಚಿಗಷ್ಟೆ ಇಂಗ್ಲಿಷ್ ಪತ್ರಕರ್ತರೊಬ್ಬರು ಕರವೇ ಕುರಿತು ಬರೆಯುತ್ತ ಕರವೇ ಹುಡುಗರ ಬಳಿ ಕುವೆಂಪು, ಬೇಂದ್ರೆಯವರ ಒಂದು ಪದ್ಯ ಹೇಳಿಸಿ ನೋಡೋಣ ಎಂದಿದ್ದರು. ಹೀಗೆಲ್ಲ ಹೇಳೋದು ಕ್ಷುಲ್ಲಕ ಅನಿಸುವುದಿಲ್ಲವೆ? ಕನ್ನಡಪರವಾಗಿ ಮಾತನಾಡುವವರು, ಚಳವಳಿ ಮಾಡುವವರಿಗೆಲ್ಲ ಕುವೆಂಪು-ಬೇಂದ್ರೆ ಪದ್ಯಗಳು ಕಂಠಪಾಠ ಬರಬೇಕು ಎಂದು ಬಯಸುವ ಮನಸ್ಥಿತಿಯೇ ಅನಾರೋಗ್ಯಕರವಾದದ್ದು. ಕಾವ್ಯಮೀಮಾಂಸೆಗಳನ್ನೆಲ್ಲ ಅರೆದು ಕುಡಿಯದೇ ಇರುವವನು ಕವಿತೆಯನ್ನೇ ಬರೆಯಬಾರದು, ಶೇಕ್ಸ್‌ಪಿಯರ್, ಕಾಳಿದಾಸರ ನಾಟಕ ಓದದವನು ನಾಟಕವನ್ನೇ ಬರೆಯಬಾರದು ಎಂದರೆ ಹೇಗೆ? ಕನ್ನಡವನ್ನೂ ಸಂಸ್ಕೃತದಂತೆ ಪಂಡಿತರ ಭಾಷೆಯನ್ನಾಗಿ ಮಾಡಿ ಬಹುಸಂಖ್ಯಾತರಿಂದ ದೂರ ಮಾಡುವ ಹುನ್ನಾರವಿದು. ಕನ್ನಡವನ್ನು ಶಾಸ್ತ್ರೀಯವಾಗಿ ಕಲಿತವರಷ್ಟೆ ಹೋರಾಟ ಮಾಡಬೇಕು ಎಂದರೆ ಹೇಗೆ? ಕನ್ನಡ ಎಂದರೆ ಪುಸ್ತಕಗಳ ಕನ್ನಡ ಮಾತ್ರವೇ. ಶತಶತಮಾನಗಳಿಂದ ನಮ್ಮ ಹಳ್ಳಿಗಳಲ್ಲಿ ಆಡುತ್ತ ಬಂದಿರುವ ಭಾಷೆಯೂ ಕನ್ನಡವಲ್ಲವೆ?

ಈ ಪತ್ರಕರ್ತರ ಬರೆಹ ಓದುತ್ತಿದ್ದಾಗ ನಾರಾಯಣಗೌಡರ ಉಚ್ಛಾರಣೆ ಕುರಿತಾಗಿ ಒಂದೆರಡು ಪತ್ರಿಕೆಗಳಲ್ಲಿ ಬಂದಿದ್ದ ಕುಟುಕು ಮಾತುಗಳು ನೆನಪಾದವು. ಗೌಡರ ಹಕಾರ ದೋಷದ ಬಗ್ಗೆ ವ್ಯಂಗ್ಯವಾಗಿ ಆಗಾಗ ಬರೆಯಲಾಗುತ್ತವೆ. ಗೌಡರನ್ನು ಹಣಿಯಲು ಯತ್ನಿಸುವವರೆಲ್ಲ ಈ ಅಸ್ತ್ರವನ್ನು ಆಗಾಗ ಬಳಸುತ್ತಾರೆ.

ಇಡೀ ಕರ್ನಾಟಕ ತುಂಬ ಓಡಾಡಿದರೆ ಒಂದು ಕಡೆ ಬಳಸುವ ಕನ್ನಡ ಮತ್ತೊಂದು ಕಡೆ ಬಳಸುವುದಿಲ್ಲ. ಒಂದೊಂದು ಕಡೆ ಒಂದು ಭಾಷಾ ಶೈಲಿಯಿದೆ. ಇನ್ನು ಉಚ್ಛಾರಣೆಗಳ ಕುರಿತು ಹೇಳುವುದಾದರೆ ಪರಿಪೂರ್ಣವಾಗಿ ಭಾಷಾಶುದ್ಧಿಯಿಂದ ಮಾತನಾಡುವವರ ಸಂಖ್ಯೆ ತೀರಾ ಕಡಿಮೆ. ಗೌಡರನ್ನು ಟೀಕಿಸುವ ಪತ್ರಕರ್ತರು ಬರೆಯುವ ಪತ್ರಿಕೆಗಳಲ್ಲೇ ಅಲ್ಪಪ್ರಾಣ ಮಹಾಪ್ರಾಣಗಳ ದೋಷಗಳು ಕಾಣಿಸಿಕೊಳ್ಳುತ್ತವೆ.

ಇದೆಲ್ಲ ಗೊತ್ತಿದ್ದೂ ಸಂಸ್ಕೃತಭೂಯಿಷ್ಠವಾದ ಕನ್ನಡವನ್ನೇ ಮಾತನಾಡಬೇಕು ಎಂದು ಅಪ್ಪಣೆ ಹೊರಡಿಸುವವರು ತಾವು ಆಡುವುದು ಮಾತ್ರ ಕನ್ನಡ, ಮಿಕ್ಕವರದು ಅಲ್ಲ ಎಂದು ಕೀಳರಿಮೆ ಹೇರಲು ಯತ್ನಿಸುತ್ತಿರುತ್ತಾರೆ. ಕನ್ನಡ ಭಾಷೆಯಲ್ಲಿ ಸೇರಿಹೋಗಿರುವ ಸಂಸ್ಕೃತ ಪದಗಳನ್ನು ಉಚ್ಛರಿಸಲು ಶೂದ್ರ ಸಮುದಾಯ ತ್ರಾಸಪಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕನ್ನಡವನ್ನು ಶಾಸ್ತ್ರೀಯಗೊಳಿಸುವ ಮೂಲಕ, ಕನ್ನಡದ ಹೊರತು ಮತ್ತ್ಯಾವ ಭಾಷೆಯೂ ಗೊತ್ತಿಲ್ಲದ ಜನರನ್ನೂ ಹಂಗಿಸುವ, ಅವಮಾನಿಸುವ ಕುಚೋದ್ಯಗಳು ನಡೆಯುತ್ತಲೇ ಬಂದಿವೆ.

ಮತ್ತೆ ನಮ್ಮ ಇಂಗ್ಲಿಷ್ ಪತ್ರಕರ್ತರು ಬರೆದ ವಿಷಯಕ್ಕೆ ಬರುವುದಾದರೆ ಕನ್ನಡವನ್ನು ಕಟ್ಟಿ ಬೆಳೆಸಿದ್ದು ಕೇವಲ ಕುವೆಂಪು-ಬೇಂದ್ರೆ ಮಾತ್ರವಲ್ಲ. ಜನಪದರು ತಮ್ಮ ಆಡುಭಾಷೆಯಲ್ಲೇ ಸಾಕಷ್ಟು ಬರೆದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಶಿಷ್ಟ ಭಾಷೆಯಲ್ಲಿ, ಶಿಷ್ಟ ಸಂವೇದನೆಗಳನ್ನು ಬರೆಯದ ಜನಪದರು ಕನ್ನಡ ಸಾಹಿತಿಗಳಲ್ಲವೆ? ಅವರು ಕನ್ನಡಿಗರಲ್ಲವೆ? ಅವರು ಕನ್ನಡದ ಜ್ಞಾನಪರಂಪರೆಯನ್ನು ಪ್ರತಿನಿಧಿಸುವುದಿಲ್ಲವೆ? ನಮ್ಮ ಜನಪದ ಸಾಹಿತಿಗಳು ಪಂಪ, ರನ್ನರನ್ನು ಓದಿಕೊಂಡೇ ಕಾವ್ಯ ರಚಿಸಿದರೆ?

*******

ಕನ್ನಡದ ಬಹುತೇಕ ಚಳವಳಿಗಳು ಭಾವನಾತ್ಮಕ ನೆಲೆಯಲ್ಲಿ ನಡೆದವುಗಳು. ಇತ್ತೀಚಿನ ಕೆಲವರ್ಷಗಳಲ್ಲಿ ಇದಕ್ಕೆ ಅಪವಾದವೆಂಬಂತೆ ಕನ್ನಡಿಗರ ಬದುಕಿಗೆ ಸಂಬಂಧಿಸಿದ ಹೋರಾಟಗಳು ನಡೆದಿವೆ.

ಗೋಕಾಕ್ ಚಳವಳಿಯನ್ನು ನೆನಪಿಸಿಕೊಳ್ಳಿ. ಶಿಕ್ಷಣದಲ್ಲಿ ಕನ್ನಡ ಹಾಗು ಸಂಸ್ಕೃತದ ಸ್ಥಾನಮಾನಗಳ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಲು ಆಗಿನ ಗುಂಡೂರಾಯರ ಸರ್ಕಾರ ಪೇಜಾವರ ಸ್ವಾಮಿಗಳ ಚಿತಾವಣೆಗೆ ಬಿದ್ದು ವಿ.ಕೃ.ಗೋಕಾಕ್ ನೇತೃತದ ಸಮಿತಿಯನ್ನು ರಚಿಸಿತ್ತು. ಸಮಿತಿ ರಚನೆಯನ್ನೇ ಅಂದು ಸಾಹಿತಿಗಳು ವಿರೋಧಿಸಿ ಗೋಕಾಕ್ ಗೋಬ್ಯಾಕ್ ಎಂದು ಚಳವಳಿ ನಡೆಸಿದ್ದರು. ಆದರೆ ಗೋಕಾಕ್ ನೀಡಿದ್ದ ವರದಿ ಕನ್ನಡಕ್ಕೆ ವರದಾನವಾಗಿತ್ತು. ಆನಂತರ ನಡೆದಿದ್ದು ಗೋಕಾಕ್ ವರದಿ ಜಾರಿಗೊಳಿಸಿ ಎಂಬ ಬೃಹತ್ ಆಂದೋಲನ. ಗೋಕಾಕ್ ಸಮಿತಿ ಯಾಕೆ ರಚನೆಯಾಯಿತು? ಯಾಕೆ ಅದು ಜಾರಿಯಾಗಬೇಕು ಎಂಬ ಜ್ಞಾನವೂ ಇಲ್ಲದ ಜನರೆಲ್ಲ ಆ ಆಂದೋಲನದಲ್ಲಿ ತೊಡಗಿಕೊಂಡರು. ಡಾ.ರಾಜ್‌ಕುಮಾರ್ ಅವರು ಚಳವಳಿಯ ನೇತೃತ್ವ ವಹಿಸಿಕೊಂಡ ಮೇಲಂತೂ ರಾಜ್ ಅವರನ್ನು ಸಿನಿಮಾಗಳಲ್ಲಿ ನೋಡಿ ಅಭಿಮಾನಿಗಳಾಗಿದ್ದವರೆಲ್ಲ ಚಳವಳಿಯಲ್ಲಿ ತೊಡಗಿದ್ದರು.

ಅದು ನಿಜಕ್ಕೂ ಭಾವಾವೇಶದ ಚಳವಳಿ. ಗೋಕಾಕ್ ವರದಿ ಜಾರಿಯಿಂದ ಕನ್ನಡದ ಎಲ್ಲ ಸಮಸ್ಯೆಗಳೂ ಬಗೆಹರಿಯಬಹುದು ಎಂಬ ಕನಸು ಆ ಕಾಲಕ್ಕೆ ಚಳವಳಿಗೆ ಇಳಿದಿದ್ದ ಜನಸಾಮಾನ್ಯರಿಗೂ ಇದ್ದಿರಬಹುದು. ಚಳವಳಿ ತನ್ನ ಉದ್ದೇಶವನ್ನು ಮೀರಿ ರಾಜ್ಯದಲ್ಲಿ ಕನ್ನಡಪ್ರಜ್ಞೆಯನ್ನು, ಕನ್ನಡದ ಅಭಿಮಾನವನ್ನು ಹರಡಿಸಿ ಯಶಸ್ವಿಯಾಗಿದ್ದು ಇತಿಹಾಸ.

ತದನಂತರದ ಚಳವಳಿಗಳೂ ಸಹ ಭಾವನಾತ್ಮಕ ಆವೇಶಗಳಿಂದ ಹುಟ್ಟಿಕೊಂಡ ಚಳವಳಿಗಳು. ಉರ್ದು ವಾರ್ತೆ ವಿರೋಧಿ ಚಳವಳಿ ಹಾಗು ಕಾವೇರಿ ನದಿನೀರಿನ ವಿಚಾರದಲ್ಲಿ ಆಗಾಗ ನಡೆದ ಚಳವಳಿಗಳೆಲ್ಲ ಇಂಥ ಭಾವಾವೇಶದ ಚಳವಳಿಗಳೇ ಆಗಿದ್ದವು. ಕಾವೇರಿ ನದಿನೀರು ಅನ್ಯಾಯಯುತ ಹಂಚಿಕೆಯಿಂದ ಕರ್ನಾಟಕದ ಸಾವಿರಾರು ರೈತರಿಗೆ ಅನ್ಯಾಯವಾಗುತ್ತದೆ ಎಂಬುದೇನೋ ನಿಜ. ಆದರೆ ಇದಕ್ಕೆ ಪ್ರತಿಯಾಗಿ ನಡೆದ ಹೋರಾಟಗಳು ಕನ್ನಡಿಗರು ಹಾಗು ತಮಿಳರ ನಡುವಿನ ಕಾಳಗವಾಗಿದ್ದು ದುರಂತ. ೮೦ ಹಾಗು ೯೦ರ ದಶಕದಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ತಮಿಳರು ಬಹಿರಂಗವಾಗಿ ತಮಿಳುನಾಡಿಗೆ ನಿಷ್ಠೆ ವ್ಯಕ್ತಪಡಿಸುತ್ತಿದ್ದರಿಂದ ಕನ್ನಡಿಗರೂ ಸಹಜವಾಗಿ ಕೆರಳುತ್ತಿದ್ದರು. ಹೀಗಾಗಿ ಕಾವೇರಿ ಚಳವಳಿ ತಮಿಳಿಗರ ವಿರುದ್ಧದ ಚಳವಳಿಯಾಗಿಯೇ ಪರಿವರ್ತನೆಗೊಳ್ಳುತ್ತಿತ್ತು. ಉರ್ದು ವಾರ್ತೆ ವಿರುದ್ಧದ ಚಳವಳಿಯೂ ಕೋಮುವಾದಿಗಳ ಕುತಂತ್ರದಿಂದ ದಾರಿತಪ್ಪಿ ಹಿಂದೂ-ಮುಸ್ಲಿಂ ಹೊಡೆದಾಟದೊಂದಿಗೆ ಅರ್ಥ ಕಳೆದುಕೊಂಡಿದ್ದನ್ನೂ ನಾವು ಗಮನಿಸಿದ್ದೇವೆ.

ಆದರೆ ಕರ್ನಾಟಕ ರಕ್ಷಣಾ ವೇದಿಕೆ ಕ್ರಿಯೆಗಿಳಿದ ನಂತರ ಕನ್ನಡಿಗರ ಬದುಕಿನ ಹೋರಾಟಗಳು ಆರಂಭಗೊಂಡಿದ್ದು ವಿಶೇಷ. ಕರವೇ ಆರಂಭದ ದಿನಗಳಲ್ಲಿ ಮೈಸೂರು ಕರ್ನಾಟಕ ಭಾಗದ ರೈತರು ಆರಂಭಿಸಿದ್ದ ನೀರಾ ಚಳವಳಿಯೊಂದಿಗೆ ಗುರುತಿಸಿಕೊಂಡಿತ್ತು. ವಿವಿಧ ಬೆಳೆಗಳ ಬೆಂಬಲ ಬೆಲೆಗಾಗಿ ನಡೆದ ಹೋರಾಟಗಳಲ್ಲೂ ಕರವೇ ಭಾಗಿಯಾಯಿತು. ತದನಂತರ ನಿಧಾನವಾಗಿ ಕನ್ನಡಿಗರಿಗೆ ಉದ್ಯೋಗ ದೊರೆಯಬೇಕು ಎಂಬುದೇ ಕರವೇ ಹೋರಾಟಗಳ ಪ್ರಮುಖ ಧ್ವನಿಯಾಯಿತು ಎಂಬುದನ್ನು ಗಮನಿಸಬೇಕು.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬುದು ವೇದಿಕೆಯ ಮತ್ತೊಂದು ಘೋಷವಾಕ್ಯ. ಕನ್ನಡಿಗರು ಕರ್ನಾಟಕದಲ್ಲಿ ದೈನೇಸಿ ಸ್ಥಿತಿಗೆ ತಲುಪುವಂತಾಗದೆ ಎಲ್ಲ ಸೌಲಭ್ಯ, ಸಂಪತ್ತನ್ನು ಅನುಭವಿಸಬೇಕು ಎಂಬುದು ಈ ಘೋಷವಾಕ್ಯದ ಹಿಂದಿನ ಧೋರಣೆ. ಅದನ್ನು ಸಾಧ್ಯವಾಗಿಸುವತ್ತ ಕರವೇ ಇಟ್ಟಿರುವ ಹೆಜ್ಜೆಗಳು ಇವತ್ತಿಗೆ ಹೆಚ್ಚು ಹೆಚ್ಚು ಪ್ರಸ್ತುತವಾಗಿರುವುದರಿಂದಲೇ ಅದು ದಿನದಿಂದ ದಿನಕ್ಕೆ ಬಲಶಾಲಿಯಾಗಿ ಬೆಳೆಯುತ್ತಲೇ ಇದೆ.

*******

ಕೆಲವು ಉದಾಹರಣೆಗಳನ್ನು ಗಮನಿಸಿ. ರೈಲ್ವೆ ಇಲಾಖೆಯಲ್ಲಿ ಕನ್ನಡಿಗರನ್ನು ಕಡೆಗಣಿಸಿ ಬಿಹಾರಿಗಳನ್ನು ತುಂಬುವ ಯತ್ನವನ್ನು ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಆರಂಭಿಸಿದಾಗ ಮೊದಲು ಕೆರಳಿದ್ದು ಕರವೇ. ಕನಿಷ್ಠ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನಾದರೂ ಸ್ಥಳೀಯರಿಗೆ ಕೊಡಿ ಎಂದರೆ ಕೇಂದ್ರ ಸರ್ಕಾರ ಕಿವಿಗೊಡಲೇ ಇಲ್ಲ. ಈ ಕುರಿತು ಮಾತನಾಡಬೇಕಾದ ಸಂಸದರೂ ತುಟಿಬಿಚ್ಚಲಿಲ್ಲ. ಹೀಗಿದ್ದಾಗ ಏಕಾಂಗಿಯಾಗಿ ಹೋರಾಟ ಸಂಘಟಿಸಿದ್ದು ಕರವೇ. ತದನಂತರ ಹೋರಾಟದ ಸಾಗರಕ್ಕೆ ನೂರಾರು ನದಿಗಳು ಸೇರಿಕೊಂಡವು.

ಇಡೀ ಚಳವಳಿಯ ಬಿರುಸಿಗೆ ಬೆಚ್ಚಿಬಿದ್ದ ರೈಲ್ವೆ ಇಲಾಖೆ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಿತು. ಕಳೆದ ತಿಂಗಳು ಮತ್ತೆ ನೇಮಕಾತಿ ಪರೀಕ್ಷೆ ನಡೆಸಲು ಯತ್ನಿಸಿ ಇಲಾಖೆ ಕೈ ಸುಟ್ಟುಕೊಂಡಿದೆ. ಸ್ಥಳೀಯರಿಗೆ ಮೀಸಲಾತಿ ನೀಡದ ಹೊರತು ಇಲ್ಲಿ ನೇಮಕಾತಿ ಮಾಡಿಕೊಳ್ಳುವುದು ಕಷ್ಟ ಎಂದು ಈಗ ಕೇಂದ್ರ ಸರ್ಕಾರಕ್ಕೆ ರೈಲ್ವೆ ಅಧಿಕಾರಿಗಳು ವರದಿ ನೀಡಿದ್ದಾರಂತೆ. ಕನ್ನಡಿಗರಿಗೆ ಆದ್ಯತೆ ನೀಡದೆ ಈ ಹುದ್ದೆಗಳನ್ನು ತುಂಬುವುದು ರೈಲ್ವೆ ಇಲಾಖೆಗೆ ಅಸಾಧ್ಯ ಎಂಬಂಥ ವಾತಾವರಣ ಈಗ ನಿರ್ಮಾಣವಾಗಿದೆ.

ಹೊಗೇನಕಲ್ ಹೋರಾಟವೂ ಹೀಗೆಯೇ. ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಿದ್ದ ಕಾಲದಲ್ಲಿ ತಮಿಳುನಾಡು ಸರ್ಕಾರ ಹೊಗೇನಕಲ್‌ನಲ್ಲಿ ತನ್ನ ನೀರಾವರಿ ಹಾಗು ಜಲವಿದ್ಯುತ್ ಯೋಜನೆ ಆರಂಭಿಸಲು ಯತ್ನಿಸಿತು. ಸರ್ಕಾರವೇ ಇಲ್ಲದ ಅರಾಜಕ ಸನ್ನಿವೇಶದಲ್ಲಿ ಕರವೇ ಇತರ ಸಂಘಟನೆಗಳ ಹೋರಾಟದ ನಡುವೆಯೇ ತೀವ್ರ ಸ್ವರೂಪದಲ್ಲಿ ತೊಡಗಿಕೊಂಡಿತು. ತಮಿಳು ಸಿನಿಮಾಗಳು, ಚಾನೆಲ್‌ಗಳು ಬಂದ್ ಆಗುತ್ತಿದ್ದಂತೆ ತಮಿಳುನಾಡು ಸರ್ಕಾರದ ಉಸಿರು ಕಟ್ಟಿಹೋದಂತಾಯಿತು. ಕರುಣಾನಿಧಿ ಹೇಳಿಕೆ ನೀಡಿ ಹೊಗೇನಕಲ್ ಯೋಜನೆಯನ್ನು ಕರ್ನಾಟಕದಲ್ಲಿ ಜನಪ್ರಿಯ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಆರಂಭಿಸುವುದಿಲ್ಲ ಎಂದು ಹೇಳಿಕೆ ನೀಡಿದರು.

ಈಗ ಮತ್ತೆ ಹೊಗೇನಕಲ್‌ನಲ್ಲಿ ಚಟುವಟಿಕೆ ಆರಂಭವಾಗುವ ಲಕ್ಷಣಗಳಿವೆ. ಈ ಬಾರಿ ಅದನ್ನು ತಡೆಯುವ ಹೊಣೆ ರಾಜ್ಯದಲ್ಲಿರುವ ಜನಪ್ರಿಯ ಸರ್ಕಾರದ ಹೆಗಲಿಗೇರಿದೆ. ಸರ್ಕಾರವಿಲ್ಲದ ಅರಾಜಕ ಪರಿಸ್ಥಿತಿಯಲ್ಲಿ ಯೋಜನೆ ನಡೆಯದಂತೆ ತಡೆದದ್ದು ಕರವೇ ಸಾಧನೆಯಲ್ಲವೆ?

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ಒತ್ತಾಯಿಸಿ ಕರವೇ ನಡೆಸಿದ ಹೋರಾಟದ ಪರಿಣಾಮವಾಗಿ ತೃಪ್ತಿಕರವಾಗಲ್ಲದಿದ್ದರೂ ಸ್ವಲ್ಪ ಪ್ರಮಾಣದಲ್ಲಾದರೂ ಕನ್ನಡಿಗರಿಗೆ ಆದ್ಯತೆ ನೀಡುವ ಕೆಲಸ ಆಗಿದೆ. ಈ ಕುರಿತು ಸ್ವತಃ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವೇ ಹಲವು ಬಾರಿ ಸ್ಪಷ್ಟೀಕರಣ ನೀಡಿದೆ.

ಇನ್ನು ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಆರಂಭಗೊಂಡ ಚಳವಳಿಗೆ ವೇಗ ತಂದುಕೊಟ್ಟಿದ್ದು ಕರವೇ. ಕನ್ನಡಿಗರ ಹೋರಾಟವನ್ನು ದೆಹಲಿಗೆ ಕೊಂಡೊಯ್ದು ಜಂತರ್ ಮಂತರ್ ಮುಂಭಾಗ ಸುಮಾರು ಎರಡು ಸಾವಿರ ಕರವೇ ಕಾರ್ಯಕರ್ತರೊಂದಿಗೆ ಧರಣಿ ನಡೆಸಿದ್ದ ಗೌಡರು ಪ್ರಧಾನಿ, ಗೃಹಸಚಿವರಿಗೆ ಮನವಿ ಪತ್ರ ನೀಡಿ ಬಂದಿದ್ದರು. ಇದಲ್ಲದೆ ಮತ್ತೊಮ್ಮೆ ರಾಜ್ಯದ ಕೆಲ ಮಠಾಧೀಶರನ್ನು ಕರೆದೊಯ್ದು ದೆಹಲಿಯಲ್ಲಿ ಧರಣಿ ಹಮ್ಮಿಕೊಂಡಿದ್ದರು.

ಎಲ್ಲ ಹೋರಾಟಗಳ ಪ್ರತಿಫಲವಾಗಿಯೇ ಕನ್ನಡಕ್ಕೆ ಸಲ್ಲಬೇಕಾಗಿದ್ದ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತಿದೆ. ಈ ಸ್ಥಾನಮಾನದಿಂದ ಕನ್ನಡ ಭಾಷೆ ಏಕಾಏಕಿ ಉದ್ಧಾರವಾಗುತ್ತದೆ ಎಂಬ ಭ್ರಮೆ ನನಗೇನೂ ಇಲ್ಲ. ಆದರೆ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ಕನ್ನಡದಷ್ಟೇ ಪ್ರಾಚೀನವಾದ ತಮಿಳಿಗೆ ರಾಜಕೀಯ ಕಾರಣಗಳಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಿ ಕನ್ನಡವನ್ನು ವಂಚಿಸುವುದನ್ನು ಸಹಿಸಿಕೊಳ್ಳುವುದಾದರೂ ಹೇಗೆ?

*******

ಸದ್ಯದ ಪರಿಸ್ಥಿತಿಯಲ್ಲಿ ಕನ್ನಡದ ಅನೇಕ ಸಮಸ್ಯೆಗಳಿಗೆ ಮುಖಾಮುಖಿಯಾಗಿ ಕರವೇ ಚಳವಳಿ ನಡೆಸುತ್ತ ಬಂದಿದೆ. ಚಳವಳಿಗೆ ಆಯ್ದುಕೊಳ್ಳುವ ವಿಷಯಗಳ ಪರಿಧಿಯೂ ವಿಶಾಲವಾಗಿದೆ. ಕನ್ನಡಿಗರನ್ನು ಜೂಜುಕೋರರನ್ನಾಗಿಸುತ್ತಿದ್ದ ಆನ್‌ಲೈನ್ ಲಾಟರಿ ವಿರುದ್ಧ ತಿರುಗಿಬಿದ್ದಿದ್ದ ಕರವೇ ಕಾರ್ಯಕರ್ತರು ಲಾಟರಿ ಯಂತ್ರಗಳು ಕಂಡಲೆಲ್ಲ ಅದನ್ನು ನೆಲಕ್ಕೆ ಹಾಕಿ ಧ್ವಂಸಗೊಳಿಸಿ ಆ ಲಾಟರಿ ನಿಷೇಧಿಸುವುದಕ್ಕೆ ಕಾರಣವಾಗಿದ್ದರು. ಹಿಂದೀ ದಿವಸ್, ಹಿಂದೀ ಸಪ್ತಾಪದಂಥ ಹಿಂದಿ ಹೇರಿಕೆಯ ಕಾರ್ಯಕ್ರಮಗಳು ನಡೆದ ಜಾಗದಲ್ಲಿ ಬಲವಾಗಿ ಪ್ರತಿಭಟಿಸಿ ಕರ್ನಾಟಕದಲ್ಲಿ ಹಿಂದಿ ಹೇರುವ ಹಿಡನ್ ಅಜೆಂಡಾಗಳನ್ನು ಬಯಲಾಗಿಸಿದ್ದೂ ಕರವೇ. ಕನ್ನಡ ಭಾಷೆ ಸಂಸ್ಕೃತಿಯನ್ನು ತಿರಸ್ಕಾರದ ಭಾವನೆಯಿಂದ ನೋಡುವ ಐಟಿಬಿಟಿ ಸಂಸ್ಥೆಗಳ ಪರಭಾಷಿಕ ಧಣಿಗಳಿಗೆ ಆಗಾಗ ಚುರುಕು ಮುಟ್ಟಿಸಿದ್ದೂ ಕರವೇ. ಇಂಗ್ಲಿಷ್ ಮತ್ತು ಹಿಂದಿ ಹಾಡುಗಳನ್ನೇ ಪ್ರಸಾರ ಮಾಡುತ್ತಿದ್ದ ಬೆಂಗಳೂರಿನ ಖಾಸಗಿ ರೇಡಿಯೋ ಸ್ಟೇಷನ್‌ಗಳ ಮುಂದೆ ಆಗಾಗ ಪ್ರತಿಭಟನೆ ನಡೆಸಿ ಅಲ್ಲೂ ಸಹ ಸಂಪೂರ್ಣ ಕನ್ನಡೀಕರಣ ಆಗಲು ಕಾರಣವಾಗಿದ್ದೂ ಕರವೇ.

ಕನ್ನಡದ ಶತ್ರುಗಳೆಲ್ಲ ನಮ್ಮ ಶತ್ರುಗಳು ಎಂದು ನಾರಾಯಣಗೌಡರು ಆಗಾಗ ಹೇಳುತ್ತಿರುತ್ತಾರೆ. ವಿಶೇಷವೆಂದರೆ ಕೆಲ ಕನ್ನಡದ ಶತ್ರುಗಳು ಕನ್ನಡ ಪ್ರೇಮಿಗಳ ವೇಷದಲ್ಲೇ ಇರುತ್ತಾರೆ. ಇಂಥ ಶತ್ರುಗಳ ವಿರುದ್ಧ ಕರವೇ ಆಗಾಗ ಧ್ವನಿ ಮೊಳಗಿಸಿದೆ. ಶಿವಸೇನೆಯನ್ನು ಕರ್ನಾಟಕದಲ್ಲಿ ಸ್ಥಾಪಿಸಲು ಹೊರಟ ಪ್ರಮೋದ್ ಮುತಾಲಿಕ್, ಕರ್ನಾಟಕ ಕಾವೇರಿ ನ್ಯಾಯಮಂಡಳಿಯ ಅನ್ಯಾಯದ ತೀರ್ಪನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ ಗಿರೀಶ್ ಕಾರ್ನಾಡ್, ಕನ್ನಡದ ಹೋರಾಟವನ್ನು ಗೇಲಿ ಮಾಡಿದ ತೇಜಸ್ವಿನಿ ಶ್ರೀರಮೇಶ್, ಕಾವೇರಿ ನಮ್ಮದು ಎಂದು ಪಾದಯಾತ್ರೆ ಮಾಡಿ ರಾತ್ರೋ ರಾತ್ರಿ ತಮಿಳುನಾಡಿಗೆ ನೀರು ಬಿಟ್ಟ ಎಸ್.ಎಂ.ಕೃಷ್ಣ, ಕನ್ನಡಿಗರನ್ನು ಕೊಳಕರು ಎಂದ ಲಾಲೂ ಪ್ರಸಾದ್ ಯಾದವ್, ಕನ್ನಡಿಗರನ್ನು ಒದೆಯಬಾರದೆ ಎಂದ ರಜನೀಕಾಂತ್, ಕರ್ನಾಟಕಕ್ಕೆ ಕರವೇ ಬೇಕಿಲ್ಲ ಎಂದ ಎಂ.ಎಸ್.ಸತ್ಯು ಹೀಗೆ ಬಹಳಷ್ಟು ಜನ ಕರವೇ ಹೋರಾಟದ ಬಿಸಿಯನ್ನು ಅನುಭವಿಸಿದ್ದಾರೆ.

ಆದರೆ ಇದೆಲ್ಲವನ್ನು ವೈಯಕ್ತಿಕ ದ್ವೇಷದ ನೆಲೆಯಲ್ಲಿ ಬೆಳೆಸದೇ ಇರುವುದೂ ಕರವೇ ಹೆಚ್ಚುಗಾರಿಕೆ. ಮೋರೆ ಮಸಿ ಪ್ರಕರಣವನ್ನು ಯು.ಆರ್.ಅನಂತಮೂರ್ತಿಯವರು ಕಟುವಾಗಿ ಟೀಕಿಸಿದರೂ ಅವರು ರಾಜ್ಯಸಭಾ ಚುನಾವಣೆಗೆ ನಿಂತಾಗ ಸ್ವಾಭಿಮಾನವಿದ್ದರೆ ಅನಂತಮೂರ್ತಿಯವರಿಗೆ ಮತ ಹಾಕಿ ಎಂದು ಶಾಸಕರಿಗೆ ಅಬ್ಬರಿಸಿದ್ದೂ ನಾರಾಯಣಗೌಡರೇ. (ಆದರೆ ಸ್ವಾಭಿಮಾನವಿಲ್ಲದ ಶಾಸಕರು ಮತವನ್ನು ಮಾರಿಕೊಂಡು ಅನಂತಮೂರ್ತಿಯವರನ್ನು ಸೋಲಿಸಿದರು ಎಂಬುದು ಬೇರೆ ವಿಚಾರ)

*******

ಡೆರಿಕ್ ಫುಲ್ ಇನ್ಫಾ ಎಂಬ ಆಂಗ್ಲೋ ಇಂಡಿಯನ್ ಶಾಸಕ ಕನ್ನಡ ಗೊತ್ತಿದ್ದೂ ವಿಧಾನಸಭೆಯಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದರು. ಬೇರೆ ಸದಸ್ಯರು ಹಾಗು ಸ್ವತಃ ಸ್ಪೀಕರ್ ಮನವಿ ಮಾಡಿಕೊಂಡರೂ ಅವರು ಕನ್ನಡದಲ್ಲಿ ಮಾತನಾಡಲು ಒಲ್ಲೆ ಎಂದರು. ಇಂಗ್ಲಿಷ್‌ನಲ್ಲಿ ಮಾತನಾಡುವುದು ನನ್ನ ಹಕ್ಕು ಎಂದು ಉದ್ಧಟತನದಿಂದ ಮಾತನಾಡಿದರು. ಇಂಗ್ಲಿಷ್‌ನಲ್ಲಿ ಮಾತನಾಡಲು ಅವರಿಗೆ ಸಾಂವಿಧಾನಿಕ ಅವಕಾಶಗಳು ಇರುತ್ತವೆ, ನಿಜ. ಆದರೆ ಕನ್ನಡವನ್ನು ಗೌರವಿಸಲು ಕನ್ನಡದಲ್ಲೇ ಮಾತನಾಡಿ ಎಂದು ಪ್ರೀತಿಯಿಂದ ಹೇಳಿದರೂ ಕೇಳದಿದ್ದರೆ ಅದನ್ನು ಹೇಗೆ ಗ್ರಹಿಸುವುದು?

ಡೆರಿಕ್ ಫುಲ್ ಇನ್ಫಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಅಧ್ಯಕ್ಷರೂ ಆಗಿದ್ದಾರೆ. ಅವರ ನೇತೃತ್ವದಲ್ಲಿ ಮಲ್ಲೇಶ್ವರಂನ ಬಿಜೆಪಿ ಕಛೇರಿಯಲ್ಲಿ ಸಭೆ ನಡೆಯುತ್ತಿತ್ತು. ಅಲ್ಲಿಗೆ ಕರವೇಯ ಸುಮಾರು ಇನ್ನೂರು ಕಾರ್ಯಕರ್ತರು ಆಗಮಿಸಿ ಫುಲ್ ಇನ್ಫಾಗೆ ನೀರಿಳಿಸಿದರು.

ಪತ್ರಕರ್ತ ಗೆಳೆಯರೊಬ್ಬರನ್ನು ಕಾಣಲೆಂದು ಅಲ್ಲಿಗೆ ಹೋಗಿದ್ದ ನಾನು ಆಕಸ್ಮಿಕವಾಗಿ ಈ ಘಟನೆಗೆ ಸಾಕ್ಷಿಯಾಗಿದ್ದೆ. ಇದೆಲ್ಲ ನಡೆದ ಕೆಲಕ್ಷಣದಲ್ಲೇ ಮೊಬೈಲ್ ಮೂಲಕ ಗೌಡರು ಧಾವಂತದಿಂದ ನನ್ನನ್ನು ಕೇಳಿದರು. ನಮ್ಮ ಹುಡುಗರು ಏನಾದರೂ ಹೆಚ್ಚು ಕಡಿಮೆ ಮಾಡಿದರಾ? ನಾನು ಅಲ್ಲಿ ನಡೆದಿದ್ದೆಲ್ಲವನ್ನೂ ಅವರಿಗೆ ಒಪ್ಪಿಸಿದೆ.

“ಹಾಗೇನೂ ಆಗಲಿಲ್ಲ. ಫುಲ್ ಇನ್ಫಾ ವೇದಿಕೆಯಲ್ಲಿದ್ದರು. ಕಾರ್ಯಕ್ರಮ ಆರಂಭವಾಗಿರಲಿಲ್ಲ. ಅಷ್ಟೊತ್ತಿಗೆ ಕಾರ್ಯಕರ್ತರು ಬಂದರು. ಸಭೆಗೆ ಬಂದಿದ್ದವರೆಲ್ಲ ಅಲ್ಲಿಂದ ಕಾಲ್ತೆಗೆದರು. ನೂಕುನುಗ್ಗಾಟದಲ್ಲಿ ಫುಲ್ ಇನ್ಫಾಗೆ ತೊಂದರೆಯಾಗಬಾರದೆಂದು ಕಾರ್ಯಕರ್ತರೇ ಒಬ್ಬರ ಕೈ ಒಬ್ಬರು ಹಿಡಿದು ಅವರ ಸುತ್ತ ಕೋಟೆ ಕಟ್ಟಿದರು.

ಕರ್ನಾಟಕ ರಕ್ಷಣಾ ವೇದಿಕೆ ಯಾವ ವಿಷಯ ಕುರಿತು ಪ್ರತಿಭಟಿಸಲು ಬಂದಿದೆ ಎಂಬುದನ್ನು ನಿಮ್ಮ ದಾ.ಪಿ.ಆಂಜನಪ್ಪ ನಿಧಾನವಾಗಿ ಬಿಡಿಸಿ ಹೇಳಿದರು. ಅವರು ಹೇಳುವಾಗಲೂ ನಿಂದನೆಯ, ಅವಮಾನಿಸುವ ಒಂದಂಶವೂ ಇರಲಿಲ್ಲ. ಫುಲ್ ಇನ್ಫಾ ಸಹ ಅವರು ಹೇಳಿದ್ದೆಲ್ಲವನ್ನು ಕೇಳಿಸಿಕೊಂಡು ಹೌದು, ನನ್ನಿಂದ ತಪ್ಪಾಗಿದೆ, ಮುಂದೆ ನಾನು ಕನ್ನಡದಲ್ಲೇ ಮಾತನಾಡುತ್ತೇನೆ, ಕ್ಷಮಿಸಿ ಎಂದು ಹೇಳಿದರು. ಆನಂತರ ಕಾರ್ಯಕರ್ತರು ಘೋಷಣೆ ಕೂಗುತ್ತ ಅಲ್ಲಿಂದ ನಡೆದುಹೋದರು. ಕೆಲ ಟಿವಿಯವರ ಜತೆ ಮಾತನಾಡಿ ಅಲ್ಲಿಂದ ಹೋದರು. ನಂತರ ಪೊಲೀಸರು ಬಂದರು.

ಅಷ್ಟೊಂದು ಜನ ನಡೆದು ಬರುವಾಗ ಒಂದು ಹೂಕುಂಡ ಒಡೆದುಹೋಯಿತು. ಅದನ್ನು ಬಿಟ್ಟರೆ ಮತ್ತೇನೂ ಆಗಿಲ್ಲ. ತುಂಬ ಗೌರವದಿಂದಲೇ ಶಾಸಕರ ಜತೆ ಕಾರ್ಯಕರ್ತರು ವರ್ತಿಸಿದರು. ತಮ್ಮ ಉದ್ದೇಶ ಈಡೇರಿದ ನಂತರ ಶಾಂತಿಯಿಂದಲೇ ಹೊರಟು ಹೋದರು

ಇಷ್ಟನ್ನು ಹೇಳಿದ ಮೇಲೆಯೇ ಅವರಿಗೆ ಸಮಾಧಾನವಾಗಿದ್ದು. ಕೆಲ ಪೊಲೀಸ್ ಅಧಿಕಾರಿಗಳು ಅವರಿಗೆ ನಿಮ್ಮ ಹುಡುಗರು ಸಭೆ ನಡೆಯುತ್ತಿದ್ದ ಕಛೇರಿ ಧ್ವಂಸಗೊಳಿಸಿದ್ದಾರೆ. ಫುಲ್ ಇನ್ಫಾ ಮೇಲೆ ದಾಳಿ ಮಾಡಿದ್ದಾರೆ ಇತ್ಯಾದಿ ಸುಳ್ಳು ಹೇಳಿದ್ದರು.

ನಾರಾಯಣಗೌಡರ ಕಾರ್ಯಕರ್ತರು ಬಹುಪಾಲು ಸಂದರ್ಭಗಳಲ್ಲಿ ತಮ್ಮ ನಾಯಕನ ಅಣತಿ ಮೀರಿ ಏನನ್ನೂ ಮಾಡುವುದಿಲ್ಲ. ಗೌಡರೂ ಸಹ ಹದ್ದುಮೀರಿ ತಮ್ಮ ಕಾರ್ಯಕರ್ತರಿಂದ ಏನನ್ನೂ ಮಾಡಿಸುವುದಿಲ್ಲ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ.
ಈ ಘಟನೆಯಾದ ಎರಡನೇ ದಿನವೇ ಡೆರಿಕ್ ಫುಲ್ ಇನ್ಫಾ ನೇರವಾಗಿ ಗಾಂಧಿನಗರದ ಕರವೇ ಕಛೇರಿಗೆ ಪತ್ನಿಸಮೇತರಾಗಿ ಬಂದು ನಾರಾಯಣಗೌಡರ ಜತೆ ಚರ್ಚೆ ನಡೆಸಿದರು. ನೇರವಾಗಿ ಮೀಡಿಯಾದವರ ಸಮ್ಮುಖದಲ್ಲಿ ಕ್ಷಮೆ ಯಾಚಿಸಿ ಮುಂದೆ ಕನ್ನಡದಲ್ಲೇ ಮಾತನಾಡುತ್ತೇನೆ ಎಂದು ಹೇಳಿಹೋದರು.

*******

ಕರ್ನಾಟಕ ರಕ್ಷಣಾ ವೇದಿಕೆಯ ಮೇಲಿರುವ ಗುರುತರ ಆರೋಪವೆಂದರೆ ಅದು ಹಿಂಸೆಯ ಮೂಲಕ ಚಳವಳಿ ನಡೆಸುತ್ತದೆ ಎಂಬುದು. ನಾನು ಇದಕ್ಕೆ ಭಿನ್ನವಾದ ವಾದವನ್ನೇ ಮಂಡಿಸುತ್ತೇನೆ. ಕರ್ನಾಟಕ ರಕ್ಷಣಾ ವೇದಿಕೆ ರಂಗಕ್ಕಿಳಿದ ನಂತರವೇ ಕನ್ನಡ ಚಳವಳಿಯಲ್ಲಿನ ಹಿಂಸೆಯ ಪ್ರಮಾಣ ಕಡಿಮೆಯಾಗುತ್ತ ಬಂತು. ಇದು ಸಮರ್ಥನೆಗಾಗಿ ಹೇಳುತ್ತಿರುವ ಮಾತಲ್ಲ.

ಕರ್ನಾಟಕ ರಕ್ಷಣಾ ವೇದಿಕೆಗೂ ಪೂರ್ವದಲ್ಲಿ ರಾಜ್ಯದ ಉದ್ದಗಲಕ್ಕೂ ಹರಡಿಕೊಂಡಿದ್ದ ಸಂಘಟನೆಯೆಂದರೆ ಅದು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ. ವಿಶೇಷವೆಂದರೆ ನಾರಾಯಣಗೌಡರೂ ಈ ಸಂಘಟನೆಯ ಮೂಲಕವೇ ಚಳವಳಿಯ ಲೋಕಕ್ಕೆ ಕಾಲಿಟ್ಟವರು.

ರಾಜ್‌ಕುಮಾರ್ ಅಭಿಮಾನಿ ಸಂಘ ಹಿಂದೆಯೆಲ್ಲಾ ಚಳವಳಿಗೆ ಬೀದಿಗೆ ಇಳಿದರೆ ಕಲ್ಲು ಹೊಡೆಯುವವರಿಗೇನು ಬರವಿರಲಿಲ್ಲ. ರಾಜ್ ಕುಮಾರ್ ವಿರುದ್ಧ ಯಾರೇ ಏನೇ ಟೀಕೆ ಮಾಡಿದರೂ ಅವರ ಅಭಿಮಾನಿಗಳು ಹಿಡಿದು ಹೊಡೆಯುತ್ತಿದ್ದರು. ಅಭಿಮಾನಿ ಸಂಘಕ್ಕೆ ಸಾ.ರಾ.ಗೋವಿಂದು ಅಧ್ಯಕ್ಷರಾಗಿದ್ದರು, ಆದರೆ ಲಕ್ಷಾಂತರ ಕಾರ್ಯಕರ್ತರನ್ನು ನಿಯಂತ್ರಿಸುವುದು ಯಾರಿಗೂ ಸಾಧ್ಯವಿರಲಿಲ್ಲ. ಹೀಗಾಗಿ ಅಭಿಮಾನಿ ಸಂಘದ ಎಲ್ಲ ಕಾರ್ಯಕರ್ತರೂ ನಾಯಕರೇ ಆಗಿದ್ದರು ಹಾಗು ಅವರು ತಮಗೆ ಸರಿಯೆನಿಸಿದ್ದನ್ನು ಮುಲಾಜಿಲ್ಲದೆ ಮಾಡುತ್ತಿದ್ದರು. ಸ್ವತಃ ಡಾ.ರಾಜಕುಮಾರ್ ಮೆರವಣಿಗೆಯ ಮುಂಚೂಣಿಯಲ್ಲಿದ್ದರೆ ಮೆರವಣಿಗೆಯ ಇನ್ನೊಂದು ತುದಿಯಲ್ಲಿದ್ದ ಕಾರ್ಯಕರ್ತರು ಇಂಗ್ಲಿಷ್ ಬೋರ್ಡು ಕಂಡರೆ ಕಲ್ಲು ಬೀಸುತ್ತಿದ್ದರು.

ಕರವೇಗೂ ಮುನ್ನ ನಡೆದ ಉರ್ದು ವಾರ್ತೆ ವಿರೋಧಿ ಚಳವಳಿ, ಕಾವೇರಿ ಚಳವಳಿಗಳ ಸಂದರ್ಭದಲ್ಲಿ ಬೆಂಗಳೂರಿಗೆ ಬೆಂಗಳೂರೇ ಹೊತ್ತಿ ಉರಿದಿತ್ತು. ಹಾಗೆ ಹಿಂಸೆಗಿಳಿದವರು ಸಂಘಟಿತರಲ್ಲ. ಅವರಿಗೆ ಯಾವ ನಾಯಕನೂ ಇರಲಿಲ್ಲ. ಅವರು ಯಾವ ಸಂಘಟನೆಯ ಕಟ್ಟುಪಾಡಿಗೆ ಬದ್ಧರಾದವರಲ್ಲ.

ಆದರೆ ರಕ್ಷಣಾ ವೇದಿಕೆ ಬೆಳೆದಂತೆ ಕನ್ನಡ ಕಾರ್ಯಕರ್ತರೆಲ್ಲ ಈ ಸಂಘಟನೆಯೊಂದಿಗೆ ಗುರುತಿಸಿಕೊಳ್ಳಲಾರಂಭಿಸಿದರು. ಸಹಜವಾಗಿಯೇ ಅವರಿಗೆ ಜವಾಬ್ದಾರಿಗಳೂ ನಿಗದಿಯಾದವು. ಹೋರಾಟಗಳ ಸಂದರ್ಭದಲ್ಲಿ ಒಂದು ಬಗೆಯ ಶಿಸ್ತು ಮೂಡತೊಡಗಿತು. ಚಳವಳಿಗಳ ಸಂದರ್ಭದಲ್ಲಿ ಅರಾಜಕ ಹಿಂಸಾಚಾರಗಳು ನಡೆಯುತ್ತಿದ್ದವಲ್ಲ, ಅದೆಲ್ಲ ಮರೆಯಾದಂತೆ ರಕ್ಷಣಾ ವೇದಿಕೆ ಹಿಂಸೆಯ ಪ್ರಮಾಣವನ್ನು ಸಾಂಕೇತಿಕ ಮಟ್ಟಕ್ಕೆ ಇಳಿಸಿತು.

ಕಳೆದ ವರ್ಷ ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ನಡೆಯಿತು. ಅರಮನೆ ಮೈದಾನಕ್ಕೆ ಸುಮಾರು ಒಂದು ಲಕ್ಷ ಜನ ಕಾರ್ಯಕರ್ತರು ಮೆರವಣಿಗೆಯಲ್ಲೇ ಬರಬೇಕಿತ್ತು. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಕರವೇ ಮುಖಂಡರೊಂದಿಗೆ ಸಭೆ ನಡೆಸಿದಾಗ ಒಬ್ಬ ಡಿಸಿಪಿ ಯಾವುದೇ ಕಾರಣಕ್ಕೂ ಮೆರವಣಿಗೆಗೆ ಅವಕಾಶ ಕೊಡಲಾಗುವುದಿಲ್ಲ ಎಂದು ಪಟ್ಟು ಹಿಡಿದರು. ‘ಏನಾದ್ರೂ ಹೆಚ್ಚುಕಡಿಮೆಯಾದರೆ ನನ್ನ ಕೆಲಸ ಹೋಗುತ್ತೆ ಕಣ್ರೀ ಎಂದು ಅವರು ಅಳಲು ತೋಡಿಕೊಂಡಿದ್ದರು. ಆಗ ಗೌಡರು ಕನ್ನಡದ ಕೆಲಸ ಇದು, ಅದರ ಮುಂದೆ ನಿಮ್ಮ ಕೆಲಸ ಎಂಥದ್ದು, ಹೋದ್ರೆ ಹೋಗಲಿ ಬಿಡಿ ಸಾರ್ ಎಂದು ನಗುತ್ತಲೇ ಹೇಳಿದ್ದರು.

ಮೆರವಣಿಗೆ ಅಭೂತಪೂರ್ವ ಎನ್ನುವಂತೆ ನಡೆಯಿತು. ಮೆರವಣಿಗೆ ಉದ್ದಕ್ಕೂ ಡಿಸಿಪಿ ಸಾಹೇಬರು ನಡೆದು ಬಂದರು. ಎಲ್ಲವೂ ಮುಗಿದ ಮೇಲೆ ಪತ್ರಕರ್ತರ ಜತೆ ಮಾತನಾಡುತ್ತ ಅವರು ಹೇಳಿದ ಮಾತು: ರಕ್ಷಣಾ ವೇದಿಕೆಯವರು ಅಂದ್ರೆ ಕಲ್ಲು ಹೊಡೆಯೋರು, ಗಲಾಟೆ ಮಾಡೋರು ಅಂದುಕೊಂಡಿದ್ದೆ. ಇಷ್ಟು ಜನ ಮೆರವಣಿಗೆಯಲ್ಲಿ ಬಂದ್ರೂ ಒಂದೇ ಒಂದು ಅಹಿತಕರ ಘಟನೆ ನಡೆಯಲಿಲ್ಲ. ಇವ್ರು ಹೀಗೆಲ್ಲ ಇದ್ದಾರೆ ಅಂತ ಗೊತ್ತೇ ಇರಲಿಲ್ಲ ಕಣ್ರೀ.

ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಹೊರಬಂದ ಸಂದರ್ಭದಲ್ಲಿ, ಹೊಗೇನಕಲ್ ಹೋರಾಟ ಉತ್ಕರ್ಷಕ್ಕೆ ಏರಿದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಒಬ್ಬನೇ ಒಬ್ಬ ತಮಿಳನ ಮೇಲೂ ಸಣ್ಣ ಹಲ್ಲೆಯೂ ನಡೆಯಲಿಲ್ಲ. ಹೊಗೇನಕಲ್ ಹೋರಾಟ ನಡೆಯುತ್ತಿದ್ದಾಗ ಕರ್ನಾಟಕದ ಪ್ರಬಲ ತಮಿಳು ಸಂಘಟನೆಯಾದ ಬೆಂಗಳೂರು ತಮಿಳು ಸಂಘಂನ ಪದಾಧಿಕಾರಿಗಳೊಂದಿಗೆ ಕರವೇ ಮುಖಂಡರು ರಚನಾತ್ಮಕವಾದ ಚರ್ಚೆಯಲ್ಲಿ ತೊಡಗಿದ್ದರು. ಪ್ರೆಸ್ ಕ್ಲಬ್‌ನಲ್ಲಿ ಗೌಡರು ಪತ್ರಿಕಾಗೋಷ್ಠಿ ನಡೆಸಲು ಬಂದಿದ್ದಾಗ ಟಿವಿ-ಪತ್ರಿಕಾ ಮಾಧ್ಯಮದ ಎದುರಿನಲ್ಲೇ ಸಂಘದ ಅಧ್ಯಕ್ಷ ಷಣ್ಮುಗ ಸುಂದರಂ ಬಂದು ಹೂಗುಚ್ಚ ನೀಡಿ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ನಾವು ನಮ್ಮ ನಿರ್ಣಯವನ್ನು ತಮಿಳುನಾಡು ಸರ್ಕಾರಕ್ಕೂ ಕಳುಹಿಸುತ್ತೇವೆ ಎಂದು ಬಹಿರಂಗವಾಗೇ ಘೋಷಿಸಿದರು. ಕರ್ನಾಟಕದ ಎರಡು ಪ್ರಬಲ ಭಾಷಾ ಸಂಘಟನೆಗಳು ಹೀಗೆ ಒಂದೇ ವೇದಿಕೆಯಲ್ಲಿ ಕುಳಿತಿದ್ದೇ ಒಂದು ಇತಿಹಾಸ. ಯಾಕೋ ಏನೋ ಈ ಮಹತ್ವದ ಘಟನೆ ಸುದ್ದಿಮಾಧ್ಯಮಗಳಲ್ಲಿ ಅಷ್ಟು ಪ್ರಮುಖ ಸುದ್ದಿಯಾಗಲೇ ಇಲ್ಲ.

ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಈಗ ತಮಿಳರೂ ಕೆಲಸ ಮಾಡುತ್ತಿದ್ದಾರೆ. ತಮಿಳರೇ ಅಲ್ಲಲ್ಲಿ ರಾಜ್ಯೋತ್ಸವ ಮಾಡಿ ನಾರಾಯಣಗೌಡರನ್ನು ಆಹ್ವಾನಿಸುತ್ತಾರೆ. ಇಂಥದ್ದೊಂದು ಕಾರ್ಯವನ್ನು ಗುರುತಿಸುವ ಕೆಲಸ ಆಗಿಲ್ಲ ಅಷ್ಟೆ.

ಕರವೇ ಕನ್ನಡ ಚಳವಳಿಯ ಹಿಂಸಾತ್ಮಕ ಮಾರ್ಗವನ್ನು ಸಾಂಕೇತಿಕ ಮಟ್ಟಕ್ಕೆ ಇಳಿಸಿತು ಎಂದು ಹೇಳುವ ಮೂಲಕ ಈ ಸಾಂಕೇತಿಕ ಹಿಂಸೆಯನ್ನು ನಾನು ಸಮರ್ಥಿಸುತ್ತಿದ್ದೇನೆ ಎಂದು ಅರ್ಥ ಮಾಡಿಕೊಳ್ಳಬೇಕಾಗಿಲ್ಲ. ಕರವೇ ಸಹ ಎಲ್ಲ ಬಗೆಯ ಹಿಂಸೆಯ ಮಾರ್ಗಗಳಿಂದ ಮುಕ್ತವಾಗಬೇಕು ಎಂದು ಬಯಸುವವನು ನಾನು. ಹಿಂದೆ ಅಧಿಕಾರಿಗಳನ್ನು ಕಟ್ಟಿ ಹಾಕಿ, ಕಪಾಳಕ್ಕೆ ಬಿಗಿದು ತೀವ್ರಗಾಮಿಯಾಗಿ ನಡೆಯುತ್ತಿದ್ದ ರೈತ ಚಳವಳಿಯೂ ಕಾಲಾಂತರದಲ್ಲಿ ಸ್ವಯಂ ನಿಯಂತ್ರಣಗಳನ್ನು ಹೇರಿಕೊಂಡು ಬದಲಾದದ್ದು ನಮ್ಮೆದುರಿನ ಇತಿಹಾಸ. ಕರವೇ ಹೀಗೆ ಬದಲಾಗುವ ಕಾಲವೂ ದೂರವಿಲ್ಲ ಎಂಬ ಆಶಾವಾದ ನನ್ನದು.

*******

ರಕ್ಷಣಾ ವೇದಿಕೆಗೆ ದುಡ್ಡು ಎಲ್ಲಿಂದ ಬರುತ್ರೀ ಎಂದು ಬಹಳ ಜನ ನನ್ನನ್ನು ಪ್ರಶ್ನಿಸುತ್ತಿರುತ್ತಾರೆ. ಹೀಗೆ ಪ್ರಶ್ನಿಸುವವರ್‍ಯಾರೂ ದೇಶಪಾಂಡೆಯವರಿಗೆ, ಯಡಿಯೂರಪ್ಪನವರಿಗೆ, ಕುಮಾರಸ್ವಾಮಿಯವರಿಗೆ ದುಡ್ಡು ಎಲ್ಲಿಂದ ಬರುತ್ತೆ ಎಂದು ಯಾವತ್ತೂ ಪ್ರಶ್ನಿಸಿದವರಲ್ಲ.

ಗೌಡರು ವಿವಿಧ ಜಿಲ್ಲೆಗಳಿಗೆ ಪ್ರವಾಸ ಹೋದಾಗಲೂ ಅಲ್ಲಿ ಪತ್ರಕರ್ತರು ತುಂಬ ಆಸ್ಥೆಯಿಂದ ಕೇಳುವ ಪ್ರಶ್ನೆ ರಕ್ಷಣಾ ವೇದಿಕೆಯ ಖರ್ಚಿನ ಬಾಬತ್ತನ್ನು ಹೇಗೆ ಪೂರೈಸುತ್ತೀರಿ ಎಂಬುದೇ. ನೀವು ಅಲ್ಲಿ ಇಲ್ಲಿ ವಸೂಲಿ ಮಾಡ್ತೀರಾ ಎಂಬ ಆರೋಪವೇ ಪ್ರಶ್ನೆ ಕೇಳುವಾತನ ಮನಸ್ಸಿನಲ್ಲಿ ಇರುತ್ತದೆ.

ಗೌಡರು ತುಂಬ ಸಲೀಸಾಗಿ ಹೇಳುತ್ತಾರೆ: ರಾಜ್ಯದಲ್ಲಿ ಒಟ್ಟು ನಲವತ್ತು ಲಕ್ಷ ಜನ ಕರವೇ ನೋಂದಾಯಿತ ಕಾರ್ಯಕರ್ತರಿದ್ದಾರೆ. ಅವರೆಲ್ಲ ಒಂದೊಂದು ರೂಪಾಯಿ ಕೊಟ್ಟರು ನಲವತ್ತು ಲಕ್ಷ ರೂಪಾಯಿ ಆಗುತ್ತೆ. ಕೆಲ ಅನಿವಾಸಿ ಕನ್ನಡಿಗರು ವೇದಿಕೆಗೆ ಸಹಾಯ ಮಾಡ್ತಾರೆ. ಅದರ ವಿವರ ಬೇಕಾದರೆ ಕಛೇರಿಗೆ ಬನ್ನಿ. ಇಲ್ಲಿನ ಉದ್ಯಮಿಗಳೂ ಸಹಾಯ ಮಾಡುವುದುಂಟು. ಯಾರನ್ನೂ ಬೆದರಿಸಿ ಹಣ ಕೇಳುವ ಪ್ರಶ್ನೆಯೇ ಇಲ್ಲ. ಯಾರು ಪ್ರೀತಿಯಿಂದ ಕೊಡ್ತಾರೋ ಅದನ್ನು ಕನ್ನಡದ ಕೆಲಸಕ್ಕೆ ಬಳಸುತ್ತೇವೆ.

ತುಂಬ ತಮಾಶೆಯೆಂದರೆ ಗೌಡರು ಇತ್ತೀಚಿನವರೆಗೂ ಬಾಡಿಗೆ ಮನೆಯಲ್ಲೇ ಇದ್ದರು. ಅವರಿಗೆ ಬಾಡಿಗೆಗೆ ಮನೆ ಕೊಡಲೂ ಮನೆಮಾಲೀಕರು ಹಿಂಜರಿಯುತ್ತಿದ್ದರು. ಇದಕ್ಕೆ ಕಾರಣ ಮನೆ ಖಾಲಿ ಮಾಡದೇ ಇದ್ದರೆ ಎಂಬ ಭೀತಿ. ಕನ್ನಡದ ಮತ್ತೋರ್ವ ಅಗ್ರಗಣ್ಯ ನಾಯಕರು ಮನೆಯೊಂದನ್ನು ಸೇರಿಕೊಂಡು ಅದನ್ನು ಖಾಲಿ ಮಾಡದೆ ಸತಾಯಿಸಿದ ಕಥೆ ಎಲ್ಲರಿಗೂ ಗೊತ್ತು ಎಂದು ಭಾವಿಸಿದ್ದೇನೆ. ಕಡೆಗೆ ಬಡಪಾಯಿ ಮಾಲೀಕ ಕೋರ್ಟಿನ ಮೂಲಕ ಅವರನ್ನು ಖಾಲಿ ಮಾಡಿಸಬೇಕಾಗಿ ಬಂತು.

ನಾನು ಕಂಡಂತೆ ಗೌಡರು ಅವರ ಮನೆಯವರು ಐಶಾರಾಮಿ ಜೀವನವನ್ನೇನು ನಡೆಸುತ್ತಿಲ್ಲ. ಗೌಡರಿಗೆ ಇಬ್ಬರು ಮಕ್ಕಳು. ಆ ಇಬ್ಬರು ಹುಟ್ಟುವಾಗಲೂ ಅವರು ಜೈಲಿನಲ್ಲೇ ಇದ್ದರು.

ಈಗಲೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಅವರು ಓಡಾಡುತ್ತಾರೆ. ಬೆಳಿಗ್ಗೆ ಬೆಳಗಾವಿಯಲ್ಲಿದ್ದರೆ, ಸಂಜೆ ಹೊತ್ತಿಗೆ ಬೆಂಗಳೂರು, ಮಾರನೇ ದಿನ ಮಂಗಳೂರು, ಅದರ ನಂತರದ ದಿನ ಗುಲ್ಬರ್ಗ. ಈ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತಮ್ಮ ಆರೋಗ್ಯವನ್ನೂ ಸರಿಯಾಗಿಟ್ಟುಕೊಳ್ಳಲೂ ಸಹ ಅವರಿಗೆ ಸಾಧ್ಯವಾಗುವುದಿಲ್ಲ. ರಾತ್ರಿ ಎರಡು ಗಂಟೆಯ ಹೊತ್ತಿಗೆ ಯಾರೋ ಕರೆ ಮಾಡುತ್ತಾರೆ. ಅವರು ನಿದ್ರೆಯಿಂದ ಎದ್ದು ಮಾತನಾಡಿದರೆ, ಯಾವುದೋ ನೋವಿನ ಕತೆ, ಸಹಾಯದ ಮೊರೆ. ಕನ್ನಡಿಗರಿಗೆ ಅನ್ಯಾಯವಾಗ್ತಾ ಇದೆ. ನೀವೇನು ಮಾಡ್ತಾ ಇದ್ದೀರಿ ಎಂಬ ಉದ್ಧಟ ಪ್ರಶ್ನೆ (ಕೆಲವರು ಚಳವಳಿಗಾರರನ್ನು ಸಂಬಳಕ್ಕೆ ನಿಯೋಜಿಸಿ ಇಟ್ಟುಕೊಂಡಂತೆ ಅದ್ಯಾಕ್ರೀ ಮಾಡ್ಲಿಲ್ಲ, ಇದ್ಯಾಕ್ರೀ ಮಾಡ್ಲಿಲ್ಲ ಎಂದು ಪ್ರಶ್ನಿಸುತ್ತಿರುತ್ತಾರೆ. ಮನೆ ಎದುರು ಒಂದು ಮೆರವಣಿಗೆ ನಡೆದರೆ ಮೊದಲು ಬಾಗಿಲು ಕಿಟಿಕಿ ಬಂದ್ ಮಾಡಿಕೊಳ್ಳುವ ಜನ ಇವರು). ಅಪರಾತ್ರಿ ಎನ್ನುವುದನ್ನು ಮರೆತು ಮಾತನಾಡಿದವರಿಗೆಲ್ಲ ತಾಳ್ಮೆಯಿಂದ ಉತ್ತರಿಸಬೇಕು. ರಾತ್ರಿವೇಳೆಯ ಈ ಫೋನ್ ಕಾಲ್‌ಗಳ ಬಗ್ಗೆ ಗೌಡರು ಆಗಾಗ ಸ್ವಾರಸ್ಯಕರವಾಗಿ ಹೇಳುತ್ತಿರುತ್ತಾರೆ. ಅದನ್ನು ಮುಂದೆ ಎಂದಾದರೂ ಬರೆಯುತ್ತೇನೆ.

ಇದ್ಯಾವುದೂ ಗೊತ್ತಿಲ್ಲದ ಜನ ಮನಸ್ಸಿಗೆ ತೋಚಿದ್ದನ್ನು ಮಾತನಾಡುತ್ತಾರೆ. ನಾರಾಯಣಗೌಡನ್ನ ನೋಡ್ರೀ ಹೆಂಗೆ ಇನೋವಾದಲ್ಲಿ ಓಡಾಡ್ತಾನೆ? ಅಂತ ಕರುಬುತ್ತಾರೆ. ಯಾಕ್ರೀ ಕನ್ನಡ ಚಳವಳಿಗಾರರು ಕಾರು ಇಟ್ಟುಕೊಳ್ಳಬಾರ್‍ದಾ, ಅವರೇನು ಸಂನ್ಯಾಸಿಗಳಾ ಎಂದು ಕೇಳಿದರೆ ಅದು ಹಂಗಲ್ಲ... ಎಂದು ಬಡಬಡಿಸುತ್ತಾರೆ.

ನಾವಂತೂ ಯಾರ ಬಳಿಯೂ ರೋಲ್‌ಕಾಲ್ ಮಾಡೋದಿಲ್ಲ, ವೇದಿಕೆಯ ಯಾರೇ ಅದನ್ನು ಮಾಡಿದರೂ ಪೊಲೀಸರಿಗೆ ದೂರು ಕೊಡಿ, ಸಾಧ್ಯವಾದರೆ ನಮಗೂ ದೂರು ಕೊಡಿ ಎಂದು ಕರವೇ ಮುಖಂಡರು ಸಾಕಷ್ಟು ಬಾರಿ ಹೇಳಿದ್ದಾರೆ. ಆದರೂ ಇಂಥ ಪ್ರಶ್ನೆಗಳು ಉದ್ಭವಿಸುತ್ತಲೇ ಇರುತ್ತವೆ. ನಿಜ, ಸಾರ್ವಜನಿಕ ಜೀವನದಲ್ಲಿರುವವರು ಇಂಥ ಪ್ರಶ್ನೆಗಳನ್ನು ಎದುರಿಸಲೇಬೇಕು.

*******

ನಾರಾಯಣಗೌಡರ ಬಗ್ಗೆ ಏನೇನೂ ಗೊತ್ತಿಲ್ಲದ ಇಂಗ್ಲಿಷ್ ಪತ್ರಕರ್ತನೊಬ್ಬ ಡೆರಿಕ್ ಫುಲ್ ಇನ್ಫಾ ಕನ್ನಡದಲ್ಲೇ ಮಾತನಾಡುವಂತೆ ವೇದಿಕೆ ನಡೆಸಿದ ಹೋರಾಟದ ಕುರಿತು ಸಾಕಷ್ಟು ಬರೆದಿದ್ದರು. ಹೀಗೆಲ್ಲ ಕರವೇ ಬಗ್ಗೆ ಬರೆದಿರುವುದರಿಂದ ನಾನು ಅವರ ದಾಳಿಗೆ ಒಳಗಾಗಬಹುದು ಎಂದು ಭೀತಿ ವ್ಯಕ್ತಪಡಿಸಿದ್ದರು. ಇದೂ ಒಂದು ಬಗೆಯ ಆತ್ಮರತಿ! ಓದಿ ನಗು ಬಂತು. ಹೀಗೆ ಬರೆಯುವ ಪತ್ರಕರ್ತರು ದೆಹಲಿಯಲ್ಲಲ್ಲ, ಬೆಂಗಳೂರಿನಲ್ಲೇ ನೂರಾರು ಮಂದಿಯಿದ್ದಾರೆ. ಹಾಗೆ ತಮ್ಮ ವಿರುದ್ಧ ಬರೆದವರ ಮೇಲೆಲ್ಲ ಗೌಡರು ಹಲ್ಲೆ ನಡೆಸುತ್ತಿದ್ದರೆ ದಿನಕ್ಕೊಬ್ಬ ಪತ್ರಕರ್ತನ ಮೇಲೆ ದಾಳಿಯಾಗಬೇಕಿತ್ತು.

ಹಾಗೆ ನೋಡಿದರೆ ಗೌಡರು ಹಾಗು ಕರವೇ ಮಾಧ್ಯಮದ ಜನರಿಗೆ ಆಗಾಗ ಶಿಕಾರಿಯಾಗುತ್ತಲೇ ಇರುತ್ತಾರೆ. ಗೌಡರನ್ನು, ಕರವೇ ಮುಖಂಡರನ್ನು ‘ತಥಾಕಥಿತ ಕನ್ನಡ ರಕ್ಷಕರು, ‘ಸ್ವಯಂ ಘೋಷಿತ ಕನ್ನಡ ರಕ್ಷಕರು ಎಂದೇ ಕೆಲವು ಮಾಧ್ಯಮಗಳಲ್ಲಿ ಜರಿಯಲಾಗುತ್ತದೆ. ಎಲ್ಲೋ ಒಬ್ಬ ಕಾರ್ಯಕರ್ತ ಯಾವುದೋ ಕ್ರೈಂ ಪ್ರಕರಣದಲ್ಲಿ ಭಾಗಿಯಾದಾಗ ದಪ್ಪಕ್ಷರಗಳಲ್ಲಿ ಕರವೇ ಮುಖಂಡನ ಬಂಧನ ಎಂದು ಬರೆಯಲಾಗುತ್ತದೆ. ಕೆಲವರಂತೂ ಕರವೇ ವಿರುದ್ಧ ಬರೆಯುವುದನ್ನೇ ಗುತ್ತಿಗೆ ಪಡೆದುಕೊಂಡಂತೆ ಬರೆಯುತ್ತಿದ್ದಾರೆ. ಇಂಥ ಟೀಕೆಗಳನ್ನೆಲ್ಲ ಸ್ಫೂರ್ತಿಯಿಂದಲೇ ಸ್ವೀಕರಿಸುತ್ತ ಬರಲಾಗಿದೆ ಎಂಬುದು ಪಾಪ, ಇಂಗ್ಲಿಷ್ ಪತ್ರಕರ್ತರಿಗೆ ಗೊತ್ತಿಲ್ಲ.

ಮೇಯರ್ ಮೋರೆ ಮಸಿ ಪ್ರಕರಣದ ನಂತರ ಬೆಳಗಾವಿಯಲ್ಲಿ ಕನ್ನಡಿಗರು ತಲೆ ಎತ್ತಿ ಓಡಾಡುವಂತಾಗಿ ಕಡೆಗೆ ಕನ್ನಡದ ಮೇಯರ್ ಆಯ್ಕೆಯಾಗಿದ್ದು ಈಗ ಇತಿಹಾಸ. ಮೇಯರ್ ಹುದ್ದೆ ಏರಿದಾಕೆಯೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತೆ. ಈಕೆಯ ಪತಿ ಕರವೇ ನಗರ ಘಟಕದ ಅಧ್ಯಕ್ಷ. ಮೇಯರ್ ಹಾಗು ಉಪಮೇಯರ್ ಇಬ್ಬರನ್ನೂ ಬೆಂಗಳೂರಿಗೆ ಕರೆಸಿ ಅಭಿನಂದನಾ ಸಮಾರಂಭವನ್ನು ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ನಿಷ್ಠುರವಾಗಿ ಮಾತನಾಡುವ ಕನ್ನಡಪ್ರಭದ ಸಂಪಾದಕ ಎಚ್.ಆರ್.ರಂಗನಾಥ್ ಅವತ್ತು ಕರವೇ ಕನ್ನಡ ಕಾಳಜಿಯನ್ನು ಸಮರ್ಥಿಸುತ್ತಲೇ ವೇದಿಕೆಯ ಹುಡುಗರ ಲೋಪದೋಷಗಳನ್ನು ನೇರವಾಗಿ ಹೇಳುತ್ತ ಹೋದರು. ಮುಂದೆ ಇರುವ ಸವಾಲುಗಳ ಕುರಿತೂ ಗಂಭೀರವಾಗಿ ಮಾತನಾಡಿದರು. ಕರವೇಯನ್ನು ಪುಂಡರ ಗುಂಪು ಎಂದು ಬ್ರಾಂಡ್ ಮಾಡದಂತೆ ನೋಡಿಕೊಳ್ಳಿ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಎಲ್ಲಿ ರಂಗನಾಥ್ ವಿರುದ್ಧ ಕರವೇ ಕಾರ್ಯಕರ್ತರು ತಿರುಗಿಬೀಳುತ್ತಾರೋ ಎಂದು ಭೀತರಾದ ಪೊಲೀಸರು ವೇದಿಕೆಯ ಇಕ್ಕೆಲಗಳಲ್ಲೂ ನೆರೆದುಬಿಟ್ಟರು. ಗೌಡರು ಅದನ್ನು ಗಮನಿಸಿ ಕಣ್ಣಿನಿಂದಲೇ ಅಲ್ಲಿಂದ ಹೋಗುವಂತೆ ಪೊಲೀಸರಿಗೆ ಹೇಳಿದರು.

ರಂಗನಾಥ್ ಮಾತನಾಡಿದ್ದೆಲ್ಲವನ್ನೂ ಕಾರ್ಯಕರ್ತರು ತಾಳ್ಮೆಯಿಂದ ಕೇಳಿದರು. ಚಪ್ಪಾಳೆಯನ್ನೂ ಹೊಡೆದರು. ಹಾಗೆಯೇ ನಾರಾಯಣಗೌಡರು ಮಾತನಾಡುತ್ತ ರಂಗನಾಥ್ ಮಾತನಾಡುತ್ತಿದ್ದಾಗ ನಮಗೆಲ್ಲ ಯಾವುದೋ ಚಿಂತನಾ ಕಾರ್ಯಾಗಾರದಲ್ಲಿ ಕುಳಿತ ಅನುಭವವಾಯಿತು. ನಿಮ್ಮ ಅನಿಸಿಕೆಗಳನ್ನು ಸದಾ ಹೀಗೇ ಮುಕ್ತವಾಗಿ ಹೇಳಿ, ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮನಪೂರ್ವಕವಾಗಿ ಹೇಳಿದ್ದರು.

ನಾರಾಯಣಗೌಡರ ಕುರಿತಾಗಿ ಸಾಕಷ್ಟು ಜನರಿಗೆ ವಿಚಿತ್ರವಾದ ಪೂರ್ವಾಗ್ರಹಗಳಿವೆ, ಅನುಮಾನಗಳಿವೆ, ಭೀತಿಯಿದೆ. ಹೋರಾಟಗಳ ಸಂದರ್ಭದಲ್ಲಿ ಹುಬ್ಬುಗಂಟಿಕ್ಕಿಕೊಂಡು ಸರ್ಕಾರಗಳಿಗೆ ಎಚ್ಚರಿಕೆ ನೀಡುವ ಗೌಡರ ದೃಶ್ಯಗಳನ್ನು ಟಿವಿಗಳಲ್ಲಿ ನೋಡಿನೋಡಿ ಜನರಿಗೆ ಈ ಬಗೆಯ ಭೀತಿಗಳಿರಬಹುದು. ಆದರೆ ಆಂತರ್ಯದಲ್ಲಿ ಅವರದು ಹೆಂಗರಳು. ತಮ್ಮ ಬಳಿಗೆ ಸಮಸ್ಯೆ ಹೇಳಿಕೊಂಡು ಬರುವ ಎಷ್ಟೋ ಜನರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ.

ತಮ್ಮ ಕಾರ್ಯಕರ್ತರ ಜತೆ ಇರುವಾಗಲೂ ಅವರು ಸಹಜವಾಗಿಯೇ ವರ್ತಿಸುತ್ತಾರೆ. ಹೊರಗೆ ಕಾರ್ಯಕ್ರಮಗಳಿಗೆ ಹೋಗುವ ಸಂದರ್ಭದಲ್ಲಿ ಎಲ್ಲರೂ ಏನನ್ನು ತಿನ್ನುತ್ತಾರೋ ಅದನ್ನೇ ತಾವೂ ತಿನ್ನುತ್ತಾರೆ. ಎಲ್ಲರೂ ಯಾವ ಹೊಟೆಲ್‌ನಲ್ಲಿ ಮಲಗುತ್ತಾರೋ ಅಲ್ಲೇ ಅವರೂ ಮಲಗುತ್ತಾರೆ.

ಟೀಕೆಗಳ ವಿಷಯದಲ್ಲಿ ಅವರು ಈ ಮೊದಲೇ ಹೇಳಿದಂತೆ ಕಿವಿ ತೆರೆದೇ ಇಟ್ಟುಕೊಂಡಿರುತ್ತಾರೆ. ಟೀಕೆ ರಚನಾತ್ಮಕವಾಗಿದ್ದರೆ ಸ್ವೀಕರಿಸುತ್ತಾರೆ, ಇಲ್ಲವಾದಲ್ಲಿ ಕಸದ ಬುಟ್ಟಿಗೆ ಎಸೆಯುತ್ತಾರೆ.

ಬಹಳ ಜನರಿಗೆ ಗೊತ್ತಿಲ್ಲದ ವಿಚಾರವೆಂದರೆ ನಾರಾಯಣಗೌಡರಿಗೆ ಸೆನ್ಸ್ ಆಫ್ ಹ್ಯೂಮರ್ ಇದೆ. ಎಷ್ಟಿದೆಯೆಂದರೆ ಅವರ ಜತೆ ಇರುವವರಿಗೆ ಕಾಲ ಕಳೆದಿದ್ದೇ ಗೊತ್ತಾಗುವುದಿಲ್ಲ. ತಮ್ಮ ಅನುಭವದ ಕಥೆಗಳನ್ನೇ ಅವರು ಹೇಳುತ್ತ ಸುತ್ತಲಿರುವವರನ್ನು ನಗಿಸುತ್ತ ಇರುತ್ತಾರೆ. ತಾವೂ ಮನಬಿಚ್ಚಿ ನಗುತ್ತಾರೆ, ಜತೆಗಿರುವವರಿಗೂ ಆ ನಗುವನ್ನು ಹಂಚುತ್ತಾರೆ.

*******

ಇತ್ತೀಚಿಗೆ ತಾನೇ ಕರ್ನಾಟಕ ರಕ್ಷಣಾ ವೇದಿಕೆಯ ಔಷಧಿ ಅಂಗಡಿ ವ್ಯಾಪಾರಿಗಳ ಘಟಕವನ್ನು ಗೌಡರೇ ಉದ್ಘಾಟಿಸಿದರು. ಈ ತರಹದ ಘಟಕಗಳು ಸಾಕಷ್ಟಿವೆ. ನೇಕಾರರ ಘಟಕ, ಚಿನ್ನ ಬೆಳ್ಳಿ ವರ್ತಕರ ಘಟಕ, ಕಾರ್ಮಿಕ ಘಟಕ, ಗಾರ್ಮೆಂಟ್ಸ್ ಘಟಕ, ಆಟೋ ಚಾಲಕರ ಘಟಕ, ಟ್ಯಾಕ್ಸಿ ಚಾಲಕರ ಘಟಕ, ವಕೀಲರ ಘಟಕ, ಉದ್ದಿಮೆದಾರರ ಘಟಕ, ಹಣ್ಣು ಹೂವು ಮಾರಾಟಗಾರರ ಘಟಕ, ಬೀದಿ ಬದಿ ವ್ಯಾಪಾರಿಗಳ ಘಟಕ ಹೀಗೆ ಹಲವು ಘಟಕಗಳಿವೆ. ಮಾರ್‍ವಾಡಿಗಳ ಕಾಟದಿಂದ ಕುಲಕಸುಬುಗಳನ್ನು ನೆಚ್ಚಿಕೊಂಡ ಬಹುತೇಕ ಕನ್ನಡಿಗರು, ಈಗ ಬೀದಿಗೆ ಬಿದ್ದಿದ್ದಾರೆ, ಮಾರ್‍ವಾಡಿಗಳಿಗೆ ತಮ್ಮೆಲ್ಲ ಆಸ್ತಿ ಅಡವು ಮಾಡಿ ಅವರ ಬಳಿಯೇ ಈಗ ಕೂಲಿ ಮಾಡಿಕೊಂಡಿರಬೇಕಾದ ದಾರುಣ ಸ್ಥಿತಿಗೆ ತಲುಪಿದ್ದಾರೆ.

ಕರವೇ ಈಗ ಇಂಥ ಕುಲಕಸುಬು ನೆಚ್ಚಿಕೊಂಡವರಿಗೆಲ್ಲ ಆಧಾರವಾಗಿ ನಿಂತಿದೆ. ಹೀಗಾಗಿ ಎಲ್ಲರೂ ರಕ್ಷಣಾ ವೇದಿಕೆಯ ಅಡಿಯಲ್ಲಿ ಸಂಘಟಿತರಾಗಿ ತಮ್ಮ ವಿರುದ್ಧದ ದಾಳಿಯ ವಿರುದ್ಧ ಹೋರಾಡುತ್ತಿದ್ದಾರೆ.

ನೇಕಾರರ ಘಟಕದ ಉದ್ಘಾಟನೆ ಸಂದರ್ಭದಲ್ಲಿ ನಾನೂ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಆ ಸಂದರ್ಭದಲ್ಲಿ ಆ ಯುವಕರ ಆವೇಶವನ್ನು ನೋಡಿ ಅವರ ಕಣ್ಣಲ್ಲಿ ಎಷ್ಟೊ ವರ್ಷಗಳ ಆಕ್ರೋಶ, ಸಂಕಟದ ಬೆಂಕಿಯನ್ನು ಗುರುತಿಸಿದ್ದೆ. ನಾನು ಮಾತನಾಡುವಾಗ ಅದನ್ನೇ ಹೇಳಿದ್ದೆ. ನಿಮ್ಮ ಕಣ್ಣೊಳಗಿನ ಬೆಂಕಿ ನಿಮ್ಮ ಜೀವನವನ್ನು ಬೆಳಗಿಸುವ ದೀಪವಾಗಲಿ ಎಂದು ಹೇಳಿದ್ದೆ.

ಬೇರೆಯವರಿಗೆ ನೀವು ತೊಂದರೆ ಕೊಡಬೇಡಿ. ಆದರೆ ನಿಮ್ಮ ಅನ್ನಕ್ಕೆ ಕುತ್ತು ಬಂದರೆ, ನಿಮ್ಮ ಮೇಲೆ ಯಾವುದೇ ಸ್ವರೂಪದ ದಾಳಿ ನಡೆದರೂ ನೀವು ಎದೆಗುಂದಬೇಡಿ. ವೇದಿಕೆಯ ಲಕ್ಷಾಂತರ ಕಾರ್ಯಕರ್ತರು ನಿಮ್ಮ ಜತೆಗಿರುತ್ತಾರೆ. ಎಂಥ ಸವಾಲನ್ನೇ ಆಗಲಿ ಎದುರಿಸಲು ನಾವು ಸದಾ ಸಜ್ಜಾಗಿದ್ದೇವೆ, ಎದೆಗುಂದಬೇಡಿ ಎಂದಿದ್ದರು ನಾರಾಯಣಗೌಡರು.

ಈ ಕೆಲಸವನ್ನು ಇಷ್ಟು ವರ್ಷಗಳ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿ ಯಾರು ಮಾಡಿದ್ದರು? ಯಾವ ರಾಜಕಾರಣಿ ಹೀಗೆ ಮಾತನಾಡಲು ಸಾಧ್ಯ? ಪಾಪ, ರಾಜಕಾರಣಿಗಳಿಗೆ ಮಾರ್‍ವಾಡಿಗಳ ವೋಟೂ ಬೇಕಲ್ಲವೆ? ಅವರೇಕೆ ಹೀಗೆಲ್ಲ ಮಾತನಾಡುತ್ತಾರೆ?

*******

ಕನ್ನಡದ ಎಲ್ಲ ಚಳವಳಿಗಳೂ ಹಳೇ ಮೈಸೂರು ಕೇಂದ್ರಿತವಾಗಿದ್ದಾಗ ಕರವೇ ಅದನ್ನು ಇಡೀ ರಾಜ್ಯಕ್ಕೆ ವ್ಯಾಪಿಸುವಂತೆ ಮಾಡಿತು. ಕೃಷ್ಣಾ ಹೋರಾಟ, ಕಳಸಾ ಬಂಡೂರಿ ಹೋರಾಟ, ಬೆಳಗಾವಿ ಹೋರಾಟ, ಕಾರವಾರ ಹೋರಾಟ, ಬಾಗೇಪಲ್ಲಿ ಚಿತ್ರಾವತಿ ಅಣೆಕಟ್ಟು ಹೋರಾಟ... ಹೀಗೆ ಚಳವಳಿಯ ನೆಲೆಯನ್ನು ವಿಸ್ತರಿಸುತ್ತ ಹೋಗಿದ್ದು ಕರವೇ.

ಮಹದಾಯಿ ನದಿ ಹೋರಾಟದ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಕರವೇ ಆಯೋಜಿಸಿದ್ದ ಬೃಹತ್ ಸಭೆಯೊಂದರಲ್ಲಿ ನಾನೂ ಭಾಗವಹಿಸಿದ್ದೆ. ಆ ಸಂದರ್ಭದಲ್ಲಿ ನಾಡೋಜ ಪಾಟೀಲ ಪುಟ್ಟಪ್ಪನವರೂ ಇದ್ದರು. ಬೆಂಗಳೂರು ಮೂಲದ ಸಂಘಟನೆಯೊಂದು ಹೀಗೆ ಉತ್ತರಕರ್ನಾಟಕದಲ್ಲಿ ಹೋರಾಟದ ರಣಕಹಳೆ ಮೊಳಗಿಸಿದ್ದಕ್ಕೆ ಪಾಪು ಅಚ್ಚರಿಗೊಂಡಿದ್ದರು.

ಕಾವೇರಿ ನದಿವಿವಾದ ಭುಗಿಲೆದ್ದಾಗೆಲ್ಲ ಕರ್ನಾಟಕ ಬಂದ್ ಕರೆ ನೀಡುವುದು ಸಂಪ್ರದಾಯ. ಹಿಂದೆಲ್ಲ ಹೀಗೆ ಬಂದ್ ಕರೆ ನೀಡಿದಾಗ ಉತ್ತರ ಕರ್ನಾಟಕದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ನಮ್ಮ ಭಾಗದ ಸಮಸ್ಯೆ ಬಂದಾಗ ಯಾರೂ ಇತ್ತ ತಿರುಗಿ ನೋಡುವುದಿಲ್ಲ. ಈಗ ರಾಜ್ಯ ಬಂದ್ ಕರೆ ಕೊಟ್ಟರೆ ನಾವೇಕೆ ಬಂದ್ ಮಾಡಬೇಕು ಎಂದು ಉತ್ತರ ಕರ್ನಾಟಕ ಭಾಗದ ಜನರು ಹೇಳುತ್ತಿದ್ದರು.

ಆದರೆ ಕಾವೇರಿ ನ್ಯಾಯ ಮಂಡಳಿಯ ಅಂತಿಮ ತೀರ್ಪಿನ ವಿರುದ್ಧ ನಡೆದ ರಾಜ್ಯ ಬಂದ್ ಉತ್ತರಕರ್ನಾಟಕದಲ್ಲೂ ಯಶಸ್ವಿಯಾಯಿತು. ಹಳೆ ಮೈಸೂರು ಭಾಗದವರು ನಮ್ಮ ಸಮಸ್ಯೆಗಳಿಗೂ ಕಿವಿಗೊಡುತ್ತಿದ್ದಾರೆ ಎಂಬ ಭಾವನೆ ಮೂಡಿದ್ದರಿಂದಲೇ ಇದು ಸಾಧ್ಯವಾಯಿತು.

ಮೊನ್ನೆ ಶಾಸ್ತ್ರೀಯ ಭಾಷೆಯ ಹೋರಾಟ ಯಶಸ್ವಿಯಾದ ಮೇಲೆ ಗೌಡರು ಹೇಳುತ್ತಿದ್ದರು: ನಮ್ಮ ಮುಂದಿನ ಹೋರಾಟ ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂಬಂಧ ಸಂವಿಧಾನ ತಿದ್ದುಪಡಿಗಾಗಿ ಹಾಗು ಮಹದಾಯಿ ಅನ್ಯಾಯದ ವಿರುದ್ಧ.

*******

ಇಷ್ಟೆಲ್ಲ ಹೇಳಿದ ಮೇಲೆ ನಾರಾಯಣಗೌಡರಿಗೆ, ಕರವೇಗೆ ದೌರ್ಬಲ್ಯಗಳೇ ಇಲ್ಲವೆ ಎಂದು ನೀವು ಕೇಳಬಹುದು. ನಿಜ ದೌರ್ಬಲ್ಯಗಳಿಲ್ಲದ ಸಂಘಟನೆಗಳಿಲ್ಲ, ವ್ಯಕ್ತಿಗಳಿಲ್ಲ. ಗೌಡರು, ಕರವೇ ಸಹ ಇದಕ್ಕೆ ಹೊರತಲ್ಲ.

ನಾನು ಗೌಡರನ್ನು ಕಂಡಿದ್ದು ಜಾಣಗೆರೆ ವೆಂಕಟರಾಮಯ್ಯನವರು ಕರುನಾಡ ಸಂಜೆ ಪತ್ರಿಕೆಯನ್ನು ನಡೆಸುತ್ತಿದ್ದ ಸಮಯದಲ್ಲಿ. ಜಾಣಗೆರೆಯವರ ಜಾಣಗೆರೆ ಪತ್ರಿಕೆಗೆ ನಾನು ಕೆಲವು ವಾರ ಬರೆದಿದ್ದರಿಂದಾಗಿ ಅವರ ಪರಿಚಯವಿತ್ತು. ಅವರನ್ನು ಕಾಣಲು ಹೋದಾಗಲೆಲ್ಲ ಗೌಡರನ್ನು ನೋಡುತ್ತಿದ್ದೆ. ಇಬ್ಬರೂ ಪರಸ್ಪರ ನಮಸ್ಕಾರ ಹೇಳಿಕೊಳ್ಳುತ್ತಿದ್ದೆವು, ಮಾತನಾಡುತ್ತಿರಲಿಲ್ಲ. ನಂತರ ಸ್ವಲ್ಪ ಕಾಲದ ನಂತರ ಕರುನಾಡ ಸಂಜೆಯನ್ನು ಜಾಣಗೆರೆಯವರು ಗುರುಟೀಕ್‌ನ ಗಂಗಾಧರ್ ಅವರಿಗೆ ಕೊಟ್ಟರು. ನಾನು ಕರುನಾಡ ಸಂಜೆಯ ಸುದ್ದಿ ಸಂಪಾದಕನಾಗಿ ಸೇರ್ಪಡೆಗೊಂಡೆ. ಜಾಣಗೆರೆಯವರಿಂದ ಬೇರೆಯಾದ ನಂತರ ಗೌಡರು ಆಗಾಗ ಕರುನಾಡ ಸಂಜೆಗೆ ಬರುತ್ತಿದ್ದರು. ನಂತರ ಸತತವಾಗಿ ಅವರೊಂದಿಗೆ ಒಡನಾಡಿದ್ದೇನೆ.

ಕಾವೇರಿ ಹೋರಾಟದ ಸಂದರ್ಭದಲ್ಲಿ ಸಾವಿರಾರು ಕನ್ನಡ ಕಾರ್ಯಕರ್ತರು, ರೈತರನ್ನು ದೆಹಲಿಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಅವರ ಸಂಘಟನಾಶಕ್ತಿ ಕಂಡು ಆಶ್ಚರ್ಯಪಟ್ಟವರಲ್ಲಿ ನಾನೂ ಒಬ್ಬ.

ಸಾಕಷ್ಟು ವಿಷಯಗಳನ್ನು ನಾನು ಅವರೊಂದಿಗೆ ಹಂಚಿಕೊಂಡಿದ್ದಿದೆ. ಯಾವುದೋ ಒಂದು ಚರ್ಚ್ ಗಲಾಟೆಯಲ್ಲಿ ಕರವೇ ಹುಡುಗರು ಭಾಗವಹಿಸಿದ್ದಾಗ ಅವರೊಂದಿಗೆ ನೇರವಾಗಿ ಅಸಮಾಧಾನ ತೋರ್ಪಡಿಸಿಕೊಂಡಿದ್ದೂ ಇದೆ. ನನಗೆ ಸರಿಯೆನಿಸಿದ್ದನ್ನು ಅವರಿಗೆ ಹೇಳಿದ್ದೇನೆ, ಸರಿ ಕಾಣದ್ದನ್ನೂ ಅಷ್ಟೆ ನಿರ್ಭಿಡೆಯಿಂದ ಹೇಳಿದ್ದೇನೆ. ಅಷ್ಟು ಮುಕ್ತ ಅವಕಾಶವನ್ನು ನನಗೆ, ನನ್ನಂಥವರಿಗೆ ಕೊಟ್ಟಿದ್ದಾರೆ. ವಿಶೇಷವೆಂದರೆ ಗೌಡರ ಜತೆ ಯಾರು ಬೇಕಾದರೂ ಅರ್ಥಪೂರ್ಣ ಸಂವಾದ ನಡೆಸಬಹುದು.

ಒಂದೊಂದು ಬಾರಿ ಎಲ್ಲರೊಂದಿಗೆ ಎಲ್ಲ ವಿಷಯವನ್ನು ಮಾತನಾಡಿ ಗೌಡರು ಯಡವಟ್ಟು ಮಾಡಿಕೊಳ್ಳುವುದುಂಟು. ಎದುರಿಗೆ ಕುಳಿತವರನ್ನು ಬಹುಬೇಗ ನಂಬುವುದರಿಂದ ಹೀಗೆ ಮಾತನಾಡಿ ಸಮಸ್ಯೆಗಳನ್ನು ಎದುರಿಸುವುದುಂಟು. ಇಂಥ ದೌರ್ಬಲ್ಯಗಳಿದ್ದರೂ ಗೌಡರು ಅದನ್ನು ಮೀರಲು ಯತ್ನಿಸುವುದನ್ನೂ ನಾನು ಗಮನಿಸಿದ್ದೇನೆ. ಇದು ಉತ್ತಮ ನಾಯಕನ ಲಕ್ಷಣ ಎಂದಷ್ಟೇ ಹೇಳಬಲ್ಲೆ.

*******

ಮಹಾರಾಷ್ಟ್ರದಲ್ಲಿನ ಹೋರಾಟಕ್ಕೂ ಕರ್ನಾಟಕದ ಚಳವಳಿಗಳಿಗೂ ಕೆಲ ಸಾಮ್ಯತೆಗಳಿವೆ, ನಿಜ. ಆದರೆ ಎರಡನ್ನೂ ಒಂದೇ ಎಂದು ಹೇಳಲು ಸಾಧ್ಯವಾಗದು. ಮಹಾರಾಷ್ಟ್ರದಲ್ಲಿ ಈಗ ನಡೆಯುತ್ತಿರುವ ಮರಾಠಿ ಅಸ್ಮಿತೆಯ ಚಳವಳಿ ಎತ್ತಿರುವ ಪ್ರಶ್ನೆಗಳು ಗಂಭೀರವಾಗಿವೆ. ಆದರೆ ಚಳವಳಿಗೆ ತೊಡಗಿರುವವರು ರಾಜಕಾರಣಿಗಳು. ಮರಾಠಿಗರನ್ನು ಭಾವನಾತ್ಮಕವಾಗಿ ಕೆರಳಿಸಿ ರಾಜಕೀಯ ಲಾಭ ಗಳಿಸಲು ಎಂಎನ್‌ಎಸ್ ಹಾಗು ಶಿವಸೇನೆ ಪ್ರಯತ್ನಿಸುತ್ತಿವೆ. ಈ ಎರಡು ರಾಜಕೀಯ ಪಕ್ಷಗಳ ನಡುವೆ ಜಗಳ ಹಚ್ಚಿ ಅದರ ಲಾಭ ಪಡೆಯಲು ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳು ತುದಿಗಾಲಲ್ಲಿ ನಿಂತಿವೆ. ರಾಜ್ ಠಾಕ್ರೆಯನ್ನು ಬೆಳೆಯಲು ಬಿಡುವ ಮೂಲಕ ಶಿವಸೇನೆಯನ್ನು ನಾಶ ಮಾಡಲು ಕಾಂಗ್ರೆಸ್ ಯತ್ನಿಸುತ್ತಿರುವುದು ಸ್ಪಷ್ಟ.

ಆದರೆ ಕರ್ನಾಟಕದ ಪರಿಸ್ಥಿತಿಯೇ ಬೇರೆ. ಇಲ್ಲಿ ಯಾವ ರಾಜಕೀಯ ಪಕ್ಷವೂ ಭಾಷಾ ಚಳವಳಿಯನ್ನು ಕೈಗೆತ್ತಿಕೊಂಡಿಲ್ಲ. ಭಾಷಾ ಚಳವಳಿಯ ನೇತೃತ್ವ ವಹಿಸಿರುವ ಕರವೇ ಮತ್ತಿತರ ಸಂಘಟನೆಗಳು ಎಂಎನ್‌ಎಸ್ ಮಾದರಿಯಲ್ಲಿ ದುಂಡಾವರ್ತಿಯನ್ನೇನು ನಡೆಸುತ್ತಿಲ್ಲ. ನಾನು ಮೊದಲೇ ಉಲ್ಲೇಖಿಸಿದಂತೆ ಕರವೇ ಕಾರ್ಯಕರ್ತರು ತಮ್ಮನ್ನು ತಾವು ಘಾಸಿ ಮಾಡಿಕೊಂಡು ಹೋರಾಟ ನಡೆಸುತ್ತಿದ್ದಾರೆ.

ಹೀಗಿರುವಾಗ ಕರ್ನಾಟಕದಲ್ಲೊಬ್ಬ ರಾಜ್ ಠಾಕ್ರೆ ಹುಟ್ಟಿಕೊಳ್ಳಲಿ ಎಂದು ಹೇಳುವುದೇ ಮೂರ್ಖತನ. ನಾರಾಯಣಗೌಡರು ರಾಜ್ ಠಾಕ್ರೆಯಾಗಲಿ ಎಂದು ಬಯಸುವುದರ ಹಿಂದೆಯೇ ನನಗೆ ಹಲವು ಬಗೆಯ ಅನುಮಾನಗಳಿವೆ. ಬಹುಶಃ ಕರವೇಯನ್ನು, ನಾರಾಯಣಗೌಡರನ್ನು ಬಲಿಪಶು ಮಾಡುವ ಉದ್ದೇಶವಿದ್ದರೂ ಆಶ್ಚರ್ಯವೇನಿಲ್ಲ.

ನಿಜವಾಗಿಯೂ ಮಹಾರಾಷ್ಟ್ರದ ಚಳವಳಿಯನ್ನು ಒಬ್ಬ ರಾಜಕೀಯೇತರ ವ್ಯಕ್ತಿ ಮುನ್ನಡೆಸುವ ಅಗತ್ಯವಿದೆ. ಈ ಹೋರಾಟ ಆದಷ್ಟು ಪ್ರಜಾಸತ್ತಾತ್ಮಕವಾಗಿ, ಇತರ ಭಾಷಿಗರ ಮೇಲಿನ ಹಲ್ಲೆ-ಕೊಲೆಗಳಿಂದ ಮುಕ್ತವಾಗಿ, ಮರಾಠಿಗರ ಸ್ವಾಭಿಮಾನದ ಅಭಿವ್ಯಕ್ತಿಯಾಗಿ ಮೂಡಿಬರಬೇಕಿದೆ.. ಹೀಗಾಗಿ ರಾಜ್ ಠಾಕ್ರೆಯೇ ನಾರಾಯಣಗೌಡರಾಗುವ ಅಗತ್ಯವಿದೆಯೇ ಹೊರತು ಗೌಡರು ರಾಜ್ ಠಾಕ್ರೆಯಾಗಬೇಕಿಲ್ಲ.

ಹಾಗಾಗಲಾರರು ಎಂಬ ನಂಬಿಕೆಯೂ ನನಗಿದೆ. ಒಂದೊಮ್ಮೆ ಗೌಡರು ನಾಳೆ ರಾಜಕಾರಣಕ್ಕೆ ಇಳಿದರೂ ಅವರು ರಾಜ್ ಠಾಕ್ರೆಯಾಗಲಾರರು. ಕನ್ನಡಿಗರು ಹೊಸಹೊಸ ಮಾದರಿಗಳನ್ನು ಜಗತ್ತಿಗೆ ನೀಡಿದವರು. ನಾವು ಬೇರೆಯವರ ಮಾದರಿಗಳನ್ನು, ಅದರಲ್ಲೂ ಕೆಟ್ಟ ಮಾದರಿಗಳನ್ನು ಎರವಲು ಪಡೆಯಬೇಕಾಗಿಲ್ಲ. ಇದನ್ನು ಮತ್ತೆಮತ್ತೆ ಸ್ಪಷ್ಟಪಡಿಸುತ್ತ ವಿರಮಿಸುತ್ತೇನೆ.

*******

ನಾನು ಇಲ್ಲಿ ಏನನ್ನು ಬರೆದಿದ್ದೇನೋ ಅದು ಎಲ್ಲೋ ಕೇಳಿದ, ಯಾರೋ ಹೇಳಿದ, ಇನ್ನ್ಯಾರೋ ಬರೆದಿಟ್ಟ ವಿಷಯಗಳೇನಲ್ಲ. ನಾನು ಸ್ವತಃ ಕಣ್ಣಾರೆ ಕಂಡಿದ್ದನ್ನೇ ಬರೆದಿದ್ದೇನೆ.

ಈ ಕುರಿತು ಚರ್ಚೆಗೆ ನಾನಂತೂ ಸಿದ್ಧ. ಪೂರ್ವಾಗ್ರಹಪೀಡಿತರಲ್ಲದ ಯಾರು ಬೇಕಾದರೂ ನನ್ನೊಂದಿಗೆ ಚರ್ಚೆ ನಡೆಸಬಹುದು. ನೇರವಾಗಿಯೂ ನನ್ನನ್ನು ಕಂಡು ಚರ್ಚಿಸಬಹುದು. ಚರ್ಚಿಸುವವರು ಅಂತೆಕಂತೆಗಳನ್ನು ಬಿಟ್ಟು ಮಾತನಾಡಿ ಎಂಬುದು ನನ್ನ ಅರಿಕೆ. ಒಂದು ಸಮರ್ಥ ಶಕ್ತಿಶಾಲಿ ಸಂಘಟನೆಯನ್ನು ದಾರಿತಪ್ಪದಂತೆ, ಜನಪರವಾಗಿಯೇ ಇರುವಂತೆ ನೋಡಿಕೊಳ್ಳುವ ಬದಲು ಅಸಹನೆಯಿಂದ ಟೀಕಿಸುತ್ತಲೇ ಇರುವುದು ಪ್ರಜ್ಞಾವಂತರಿಗೆ ಸಾಧುವಲ್ಲ ಎಂಬುದು ನನ್ನ ಅಭಿಮತ.

ಕುಚೋದ್ಯವಿಲ್ಲದ ಅಭಿಪ್ರಾಯಗಳಿಗೆ ಸ್ವಾಗತ.

4 comments:

vittal said...

kannidaru shanta priyaru.berobbarannu anukarisabekagilla. BIAL nalli kannada mallige gamagamisutilla. KSCA yalli kannada villa. Kumbleyavara saddanebagge chakaravilla. dayavittu alochisi. narayana gowdaru takre aaga bekkilla. Pulikeshi aggalendu ashisutheve
basavapatna v vittal

munna said...

chennagide. bjp govt bandamele yako gowdru tannagagiddaralla?

Anonymous said...

ದಿನೇಶ್,
ಇಂತಹದೊಂದು ಲೇಖನ ಸದ್ಯ ಅಗತ್ಯವಿತ್ತು. ನೀವು ಸೂಕ್ಷ್ಮ ಒಳನೋಟಗಳನ್ನು ಇಟ್ಟುಕೊಂದು ಬರೆದಿದ್ದೀರಿ. ಕೆಲವು ಕೋಮುವಾದಿ ಶಕ್ತಿಗಳು ನಾರಾಯಣ ಗೌಡರನ್ನು ಹೈಜಾಕ್ ಮಾಡುವ ಯತ್ನದಲ್ಲಿ ಇರುವ ಹೊತ್ತಿನಲ್ಲಿ ನೀವು ಈ ಲೇಖನ ಬರೆದು ಒಳ್ಳೆಯದು ಮಾಡಿದಿರಿ.
ನಿಮ್ಮ ಗ್ರಹಿಕೆ - ಕರವೇ ಹೆಚ್ಚು ಕ್ರಿಯಾಶೀಲ ಆದ ಮೇಲೆ, ಕನ್ನಡ ಹೋರಾಟದ ಹೆಸರಿನಲ್ಲಿ ಹಿಂಸೆ ಕಡಿಮೆಯಾಯಿತು ಎನ್ನುವುದು ನಿಜ. ನಿಮ್ಮ ಲೇಖನ ನೋಡಿದ ಮೇಲೆ 'ಈ ಸಂಗತಿ ಇಷ್ಟು ದಿನವಾದರೂ ಹೊಳೆಯಲಿಲ್ಲವಲ್ಲ' ಎಂದೆನಿಸಿತು. ಟೈಪ್ ರೈಟರ್, ಕಂಪ್ಯೂಟರ್ ಹೊಡೆದು ಹಾಕುವುದನ್ನು ನೋಡಿ ಇದೇ ಹಿಂಸೆಯ ದೊಡ್ಡ ಸ್ವರೂಪ ಎಂದುಕೊಂಡವರಿಗೆ ಈ ಸೂಕ್ಷ್ಮವೂ ಗೊತ್ತಾಗಬೇಕು.
ಸತೀಶ್

Anonymous said...

BARAHA NARAYANA GOWDARA PARAVAGIDE ENNISITU. IDAKE NIMA MATHU GOWDARA ODANATA KARANA IRABAHUDU. ADARE KARAVE KARYAKARTHARU KOMUVADI PRATHIBATANEGALALI BAGAVHISUVUDANNU HATHIRADINDA KANDIDDENE. GOWDARA HASYA PRAGNE IDE ENDDIRI. UDARANE KOTTILA....P.MANJUNATH