Saturday, October 4, 2008
ಹೌದು, ಮಠಾಧೀಶರೆಲ್ಲ ಸ್ವಜಾತಿ ಪ್ರೇಮಿಗಳು!
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮೈಸೂರಿನಲ್ಲಿ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿದೆ. ‘ಇವರಿಗೆಲ್ಲ ಸ್ವಜಾತಿ ಪ್ರೇಮ ಹೆಚ್ಚಾಗುತ್ತಿದೆ ಎಂದು ಅವರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಅವರು ಗುಂಡು ಹೊಡೆದದ್ದು ಯಾರಿಗೆ ಎಂಬುದು ಎಲ್ಲರಿಗೂ ಗೊತ್ತಿದ್ದರೂ ಅವರು ಮುಂದೆ ಅನಿವಾರ್ಯತೆ ಬಂದರೆ ತಮ್ಮ ಹೇಳಿಕೆಯನ್ನು ಬೇರೆ ಯಾರಿಗೋ ಹೇಳಿದ ಮಾತು ಎಂದು ಬಚಾಯಿಸಿಕೊಳ್ಳಬಹುದು. ಆ ವಿಷಯ ಬೇರೆ, ಆದರೆ ಅವರ ಹೇಳಿಕೆ ಒಂದಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿರುವುದೇನೋ ನಿಜ.
ಕುಮಾರಸ್ವಾಮಿಯವರು ಆಡಿರುವ ಮಾತುಗಳನ್ನು ಗಮನಿಸಿ. ಸಿದ್ಧಗಂಗೆಯ ಡಾ.ಶಿವಕುಮಾರಸ್ವಾಮೀಜಿಯವರು ಕಳೆದ ಬಾರಿ ದಸರಾ ಉದ್ಘಾಟನೆಗೆ ಬಾರದೆ ಈ ಬಾರಿ ಬಂದು ಉದ್ಘಾಟಿಸಿರುವುದು ಅವರ ಅಸಮಾಧಾನಕ್ಕೆ ಕಾರಣ. ಮಠಾಧೀಶರು ಸ್ವಜಾತಿ ಪ್ರೇಮಿಗಳಾಗಿದ್ದಾರೆ ಎಂಬುದು ಕುಮಾರಸ್ವಾಮಿಯವರ ನೇರ ಆರೋಪ. ಇದು ಕೇವಲ ಶಿವಕುಮಾರ ಸ್ವಾಮೀಜಿಯವರನ್ನು ಉದ್ದೇಶಿಸಿ ಹೇಳಿದ ಮಾತುಗಳಲ್ಲ ಎಂಬುದು ಎಲ್ಲರಿಗೂ ಗೊತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬೆನ್ನಿಗೆ ನಿಂತಿರುವ ವೀರಶೈವ ಮಠಾಧೀಶರ ಒಂದು ದೊಡ್ಡಸಮೂಹವನ್ನೇ ಅವರು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ.
ಕುಮಾರಸ್ವಾಮಿಯವರು ಎತ್ತಿರುವ ಬಹುಮುಖ್ಯ ಪ್ರಶ್ನೆ ಏನೆಂದರೆ ಮಠಾಧೀಶರು ಸ್ವಜಾತಿ ಪ್ರೇಮಿಗಳೇ? ಎಂಬುದು. ಇಂಥ ಪ್ರಶ್ನೆಯನ್ನು ಎತ್ತುವ ಅರ್ಹತೆ ಕುಮಾರಸ್ವಾಮಿಯವರಿಗೆ ಇದೆಯೇ ಎಂಬುದು ಪ್ರತ್ಯೇಕವಾಗಿ ಚರ್ಚೆಯಾಗಬೇಕಾದ ವಿಷಯ. ಮಠಾಧೀಶರ ಜಾತಿಪ್ರೇಮದ ಬಗ್ಗೆ ಮಾತನಾಡುವ ಕುಮಾರಸ್ವಾಮಿಯವರು ಜಾತಿಪ್ರೇಮಿಯಲ್ಲವೆ? ಅಲ್ಲದಿದ್ದರೆ ಕುಮಾರಸ್ವಾಮಿಯವರೇ ಕೆಂಗೇರಿ ಮಠದ ಕುಮಾರಚಂದ್ರಶೇಖರನಾಥ ಸ್ವಾಮಿಗಳ ಗುರುವಂದನೆಯನ್ನು ತಮ್ಮ ಸಹಸ್ರಾರು ಬೆಂಬಲಿಗರೊಂದಿಗೆ, ಅಭೂತಪೂರ್ವವಾಗಿ ಆಚರಿಸುವ ಅಗತ್ಯವಾದರೂ ಏನಿತ್ತು? ಕುಮಾರಸ್ವಾಮಿಯವರು ತಾವು ಮುಖ್ಯಮಂತ್ರಿಗಳಾಗಿದ್ದಾಗ ಆಯಕಟ್ಟಿನ ಸ್ಥಾನಗಳಲ್ಲಿ ಒಕ್ಕಲಿಗ ಅಧಿಕಾರಿಗಳನ್ನೇ ಪ್ರತಿಷ್ಠಾಪಿಸುವ ಅಗತ್ಯವೇನಿತ್ತು? ಅವರ ಸಂಪುಟದಲ್ಲಿ ಒಕ್ಕಲಿಗ ಮಂತ್ರಿಗಳೇ ಹೆಚ್ಚು ಸಂಖ್ಯೆಯಲ್ಲಿದ್ದರು ಹಾಗು ಅವರೇ ಪ್ರಬಲ ಖಾತೆಗಳನ್ನು ಹೊಂದಿದ್ದರಲ್ಲ, ಅದಕ್ಕೇನು ಹೇಳುತ್ತಾರೆ?, ಕುಮಾರಸ್ವಾಮಿಯವರ ಅನುದಿನದ ಮಾರ್ಗದರ್ಶಿಯಾಗಿರುವ ಅವರ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವೆಂಕಟಸ್ವಾಮಿ, ಚಿನ್ನಪ್ಪರೆಡ್ಡಿ ಆಯೋಗಗಳ ವಿರುದ್ಧ ಕತ್ತಿ-ಗುರಾಣಿ ಹಿಡಿದು ನಿಂತಿದ್ದು ಅಪ್ಪಟ ಜಾತಿಪ್ರೇಮದಿಂದ ಅಲ್ಲವೇ?........... ಹೀಗೆ ಕುಮಾರಸ್ವಾಮಿಯವರಿಗೆ ಇರಬಹುದಾದ ‘ಜಾತಿಪ್ರೇಮದ ಬಗ್ಗೆ ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಹೀಗೆ ವಿಷಯಾಂತರ ಮಾಡದೇ ಕುಮಾರಸ್ವಾಮಿಯವರು ಎತ್ತಿರುವ ಈ ಕಾಲಘಟ್ಟದ ಮಹತ್ವದ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನನ್ನದು.
ನಿಜ, ಡಾ.ಶಿವಕುಮಾರಸ್ವಾಮಿಯವರ ಕರ್ತೃತ್ವ ಶಕ್ತಿಯ ಬಗ್ಗೆ, ತ್ರಿವಿಧ ದಾಸೋಹದ ಬಗ್ಗೆ ಎರಡು ಮಾತಿಲ್ಲ. ಅವರಂಥ ಸಾಧಕರು ಅಪರೂಪ. ನಿಜಾರ್ಥದಲ್ಲಿ ಅವರು ಕರ್ನಾಟಕ ರತ್ನವೇ ಹೌದು. ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡಿದ ಸ್ವಾಮೀಜಿಯವರ ಸಾಧನೆಗೆ ಸರಿಸಾಟಿಯೇ ಇಲ್ಲ. ಶಿವಕುಮಾರಸ್ವಾಮಿಗಳ ಹಾಗೆ ರಾಜ್ಯದ ಬಹಳಷ್ಟು ಮಠ-ಮಾನ್ಯಗಳು ಶಿಕ್ಷಣ-ಆರೋಗ್ಯದ ಕ್ಷೇತ್ರಗಳಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿವೆ. ಅವುಗಳ ಸಾಧನೆ ಮೆಚ್ಚುವಂಥದ್ದು, ಅನುಕರಣನೀಯವಾದುದು.
ಆದರೆ ಈಗ ಉದ್ಭವಿಸಿರುವ ಪ್ರಶ್ನೆ ಅದಲ್ಲ. ಈ ಎಲ್ಲ ಮಠಾಧೀಶರಿಗೆ ಸಲ್ಲಬೇಕಾದ ಎಲ್ಲ ಗೌರವಗಳನ್ನು ಇಟ್ಟುಕೊಂಡೇ ಜಾತಿಪ್ರೇಮದ ವಿಷಯಕ್ಕೆ ಬಂದರೆ, ಹೌದು, ಈ ಎಲ್ಲ ಮಠಾಧೀಶರೂ ಜಾತಿಪ್ರೇಮಿಗಳೇ ಎಂದು ಹೇಳಬೇಕಾಗುತ್ತದೆ. ಕುಮಾರಸ್ವಾಮಿಯವರಿಗೆ ಗೊತ್ತಿಲ್ಲದ ಅಥವಾ ಗೊತ್ತಿದ್ದೂ ಅವರು ಹೇಳದ ಮತ್ತೊಂದು ಅಂಶವನ್ನು ನಾನು ಸೇರಿಸಲು ಬಯಸುತ್ತೇನೆ. ಮಠಾಧೀಶರು ಕೇವಲ ಜಾತಿಪ್ರೇಮಿಗಳು ಮಾತ್ರವಲ್ಲ, ಅವರು ನೂರಕ್ಕೆ ನೂರು ಸ್ವ ಉಪಜಾತಿ ಪ್ರೇಮಿಗಳು! ಇನ್ನೂ ಒಂದು ಹೆಜ್ಜೆ ಮುಂದುವರಿದು ಹೇಳುವುದಾದರೆ ಸ್ವ ವಂಶ ಪ್ರೇಮಿಗಳು. ಯಾರಾದರೂ ಸ್ವಾಮೀಜಿಗಳು ತಮ್ಮನ್ನು ತಾವು (ಬೆರಳೆಣಿಕೆಯ ಕೆಲವರನ್ನು ಬಿಟ್ಟು) ಜಾತಿಪ್ರೇಮಿಯಲ್ಲ ಎಂದು ಹೇಳಿಕೊಂಡರೆ ಅದಕ್ಕಿಂತ ಆತ್ಮವಂಚನೆಯ ಮಾತು ಇನ್ನೊಂದಿರಲಾರದು.
ನಮ್ಮಲ್ಲಿ ಎರಡು ಬಗೆಯ ಮಠಗಳಿವೆ. ಒಂದು ಪುತ್ರವರ್ಗ ಪರಂಪರೆಯ ಮಠಗಳು, ಮತ್ತೊಂದು ಶಿಷ್ಯವರ್ಗ ಪರಂಪರೆಯ ಮಠಗಳು. ಪುತ್ರವರ್ಗ ಪರಂಪರೆಯ ಮಠಗಳಲ್ಲಿ ಸ್ವಾಮಿಯಾದವನು ಮದುವೆಯಾಗುತ್ತಾನೆ. ಆತನ ಪುತ್ರನೇ ಮಠದ ಮುಂದಿನ ಉತ್ತರಾಧಿಕಾರಿಯಾಗುತ್ತಾನೆ. ಮತ್ತೊಂದು ಶಿಷ್ಯವರ್ಗದ ಮಠಗಳು. ಈ ಮಠಗಳಲ್ಲಿ ಸ್ವಾಮಿಗಳು ಸಂನ್ಯಾಸಿಗಳಾಗುತ್ತಾರೆ. ಹೀಗಾಗಿ ಅವರು ನಿಯೋಜಿಸುವ ಶಿಷ್ಯರು ಉತ್ತರಾಧಿಕಾರಿಗಳಾಗುತ್ತಾರೆ. ಇವತ್ತು ಅತಿ ಹೆಚ್ಚು ಚಾಲ್ತಿಯಲ್ಲಿರುವುದು, ವ್ಯಾವಹಾರಿಕವಾಗಿ ಯಶಸ್ಸು ಗಳಿಸುತ್ತಿರುವವು ಶಿಷ್ಯ ವರ್ಗ ಪರಂಪರೆಯ ಮಠಗಳೇ ಆಗಿವೆ.
ಸ್ವಾಮಿ ಎಂದರೆ ಒಡೆಯ ಎಂದರ್ಥ. ಒಡೆಯ ಎಂದಿಗೂ ಸಂನ್ಯಾಸಿಯಾಗಲು ಸಾಧ್ಯವಿಲ್ಲ. ಸ್ವಾಮಿಗಳು ಹಿಂದೆಲ್ಲಾ ಸಂನ್ಯಾಸಿಗಳಾಗಿರಲಿಲ್ಲ. ಆದರೆ ಪೊಳ್ಳು ಆದರ್ಶದ ಬೆನ್ನು ಹತ್ತಿ ಪುತ್ರವರ್ಗ ಪರಂಪರೆಯ ಮಠಗಳೂ ಶಿಷ್ಯವರ್ಗ ಪರಂಪರೆಯನ್ನೇ ಅನುಸರಿಸಿದವು. ಮಠಗಳ ಭಕ್ತರು ತಮ್ಮ ಸ್ವಾಮೀಜಿಗಳನ್ನು ತಮಗಿಂತ ಬೇರೆಯಾಗಿ ಕಾಣಲು ಬಯಸುತ್ತಾರೆ. ವಿಶೇಷತೆಯೇನನ್ನಾದರೂ ಗುರುತಿಸಲು ಬಯಸುತ್ತಾರೆ. ತಮ್ಮ ಗುರು ಸ್ಥಾನದಲ್ಲಿರುವವರು ಸಂಸಾರವನ್ನು ತ್ಯಜಿಸಿದ್ದರೆ ವಿಶೇಷ ಗೌರವಾದರಗಳು ಲಭ್ಯ. ಈ ಕಾರಣಕ್ಕಾಗಿಯೇ ಮಠಗಳು ಸಂನ್ಯಾಸವನ್ನು ಒಪ್ಪಿಕೊಂಡವು.
ಆದರೆ ಕಠೋರ ವಾಸ್ತವವೆಂದರೆ ನೂರಕ್ಕೆ ೯೯ಕ್ಕೂ ಹೆಚ್ಚು ಸ್ವಾಮೀಜಿಗಳು ಸಂನ್ಯಾಸಿಯ ಗುಣಗಳನ್ನು ಧರಿಸಿದವರಲ್ಲ. ಸಂನ್ಯಾಸಿಗೆ ರಾಗ-ದ್ವೇಷಗಳಿರಲು ಸಾಧ್ಯವಿಲ್ಲ. ಆದರೆ ನಮ್ಮ ಸ್ವಾಮಿಗಳು ಜನಸಾಮಾನ್ಯರಿಗಿಂತಲೂ ಹೆಚ್ಚು ರಾಗ-ದ್ವೇಷಗಳನ್ನು ಮೈಮೇಲೆ ಎಳೆದುಕೊಂಡವರು. ಸಂನ್ಯಾಸಿ ಅರಿಷಡ್ವರ್ಗಗಳನ್ನು ಮೀರಬೇಕು, ಆದರೆ ಇವುಗಳಲ್ಲಿ ಯಾವುದನ್ನೂ ಬಿಡಲು ಈ ಮಠಾಧೀಶರು ಒಲ್ಲರು. ಸಂನ್ಯಾಸಿಗೆ ಒಂದು ನೆಲೆ ಇರಲು ಸಾಧ್ಯವಿಲ್ಲ. ಆದರೆ ನಮ್ಮ ಸ್ವಾಮಿಗಳು ಮಠ-ಮಂದಿರಗಳೆಂಬ ಲೌಕಿಕ ಜಗತ್ತಿನಲ್ಲಿ ತಮ್ಮನ್ನು ತಾವು ಸಂಸ್ಥಾಪಿಸಿಕೊಂಡವರು.
ತ್ಯಾಗ ಸಂನ್ಯಾಸಿಯ ಬಹುಮುಖ್ಯ ಗುಣ. ಆದರೆ ಯಾವ ಸ್ವಾಮಿ ಏನನ್ನು ತ್ಯಾಗ ಮಾಡಿದ್ದಾನೆ? ನಮ್ಮ ಸ್ವಾಮಿಗಳು ಸಂಪ್ರದಾಯದ ಹೆಸರಿನಲ್ಲಿ ಸಿಂಹಾಸನಗಳ ಮೇಲೆ ಕೂರುತ್ತಾರೆ, ವಜ್ರಖಚಿತ ಚಿನ್ನದ ಕಿರೀಟಗಳನ್ನು ಧರಿಸುತ್ತಾರೆ, ಪಲ್ಲಕ್ಕಿ ಏರಿ ಮನುಷ್ಯರ ಹೆಗಲ ಮೇಲೆ ಊರೂರು ಸಂಚಾರ ಮಾಡಿ ಉಘೇ ಉಘೇ ಎಂಬ ಪರಾಕು ಕೇಳುತ್ತಾರೆ. ಕೆಲವು ಸ್ವಾಮಿಗಳು ಉಣ್ಣುವುದು ಬೆಳ್ಳಿ ತಟ್ಟೆಯಲ್ಲಿ, ಕುಡಿಯುವುದು ಬೆಳ್ಳಿ ಲೋಟದಲ್ಲಿ. ಗುರುವಂದನೆಯ ಹೆಸರಿನಲ್ಲಿ ರಾಶಿರಾಶಿ ಹೂವುಗಳನ್ನು ಹೆಣದ ಮೇಲೆ ಸುರಿಯುವಂತೆ ಈ ಸ್ವಾಮಿಗಳ ಮೇಲೆ ಸುರಿಯಲಾಗುತ್ತದೆ. ಇವರ ಪಾದಗಳನ್ನು ಹೆಂಗಳೆಯರು ತೊಳೆದು ಶುಭ್ರಗೊಳಿಸುತ್ತಾರೆ. (ಕೆಲ ಭಕ್ತರು ಇದನ್ನೇ ತೀರ್ಥ ಎಂದು ಭಾವಿಸಿ ಕುಡಿಯುತ್ತಾರೆ)
ಇವರು ಎಂಥ ಸಂನ್ಯಾಸಿಗಳು? ಮಠಾಧೀಶರು ಮದುವೆಯಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಬ್ರಹ್ಮಾಚಾರಿಗಳೇ ಇವರು? ಶೇ.೯೦ಕ್ಕೂ ಹೆಚ್ಚು ಮಠಾಧೀಶರು ಲೈಂಗಿಕ ಕ್ರಿಯೆ-ಕರ್ಮಗಳನ್ನು ಸಾಂಗೋಪಾಂಗವಾಗಿ ನಡೆಸಿಕೊಂಡು ಬಂದವರೇ. ಪಾಪ, ಅವರೇನು ಮಾಡುತ್ತಾರೆ? ನಿಸರ್ಗ ಸಹಜವಾದ ಕಾಮನೆಗಳನ್ನು ಅದುಮಿಟ್ಟುಕೊಳ್ಳುವುದು ಸಾಧ್ಯವೆ? ಇದನ್ನೆಲ್ಲ ನೋಡಿದರೆ ನನಗನ್ನಿಸುವುದು ಇಡೀ ಮಠೀಯ ವ್ಯವಸ್ಥೆಯೇ ಆತ್ಮವಂಚನೆಯ ವ್ಯವಸ್ಥೆ. ಈ ವ್ಯವಸ್ಥೆಯ ಒಳಗೆ ಬರುವವರು ಈ ಆತ್ಮಘಾತಕತನಕ್ಕೆ ಸಜ್ಜಾಗಿಯೇ ಬರಬೇಕು.
ಈ ಆತ್ಮಘಾತಕತನ ಕೇವಲ ಮಠಾಧೀಶರ ಲೈಂಗಿಕ ಬದುಕಿಗೆ ಸಂಬಂಧಿಸಿದ್ದಲ್ಲ, ಅವರ ನಡೆ-ನುಡಿಯೇ ಆತ್ಮವಂಚನೆಯದ್ದು. ಮಠಾಧೀಶರು ಬಹಳ ಸುಲಭವಾಗಿ ತಮ್ಮ ಹೆಸರಿನೊಂದಿಗೆ ಜಗದ್ಗುರು ಎಂಬ ವಿಶೇಷಣ ಜೋಡಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಸ್ಪಷ್ಟವಾಗಿ ಗೊತ್ತಿದೆ: ಅವರು ಜಗದ್ಗುರುಗಳಲ್ಲ, ಜಾತಿ ಗುರುಗಳು.
ಮಾನವಧರ್ಮ ಪೀಠದ ನಿಡುಮಾಮಿಡಿ ಸ್ವಾಮೀಜಿ ಮಠಾಧೀಶರ ಮರ್ಮ ಎಂಬ ತಮ್ಮ ಕೃತಿಯಲ್ಲಿ ಹೀಗೆ ಹೇಳುತ್ತಾರೆ: ‘ನಮ್ಮ ವ್ಯವಸ್ಥೆಯಲ್ಲಿ ಯಾವುದನ್ನು ಜಾತ್ಯತೀತ ಮಠವೆಂದು ಹೇಳಲಿಕ್ಕೆ ಬರುತ್ತದೆ? ಅವರವರ ಮಠಗಳಿಗೆ ಅವರವರ ಸಂಬಂಧಿಕರನ್ನು ಅದೇ ಜಾತಿಯ ಜನರನ್ನು ಉತ್ತರಾಧಿಕಾರಿಗಳನ್ನಾಗಿ ಮಾಡುತ್ತ ಬಂದಿರುವುದು ವಂಶನಿಷ್ಠ, ಜಾತಿನಿಷ್ಠೆಯನ್ನು ಹೇಳುತ್ತಿಲ್ಲವೆ? ಆದರೆ ಎಲ್ಲರೂ ಭಾಷಣಗಳಲ್ಲಿ ಉದಾರವಾಗಿ ಮಾನವತೆಯ ಬಗ್ಗೆ ಮಾತನಾಡುತ್ತಾರೆ. ವಿಶ್ವಧರ್ಮವನ್ನು ಬೋಧಿಸುತ್ತಾರೆ. ಆಸ್ತಿ ಅಧಿಕಾರದ ವಿಷಯ ಬಂದಾಗ ತಮ್ಮ ವಂಶಕ್ಕೆ ತಮ್ಮ ಜಾತಿಗೆ ಅಂಟಿಕೊಳ್ಳುತ್ತಾರೆ. ಹೀಗಿದ್ದಾಗ ಮಾನವಧರ್ಮಕ್ಕೆ ಸ್ಥಾನ ಎಲ್ಲಿಯದು? ಜಾತಿಯ ಗುರುಗಳೇ ಇಲ್ಲಿ ಜಗದ್ಗುರುಗಳಾಗಿಬಿಟ್ಟಿದ್ದಾರೆ. ಇದಕ್ಕಿಂತ ನಗೆಪಾಟಲಿನ ಸಂಗತಿ ಇನ್ನೊಂದಿಲ್ಲ. ನಮ್ಮ ದೇಶ ಇನ್ನೂ ಜಾತಿನಿಷ್ಠ ದೇಶವಾಗಿಯೇ ಉಳಿದಿವೆ. ನಮ್ಮಲ್ಲಿನ ಪ್ರತಿಯೊಂದು ಮಠ, ಆಶ್ರಮ, ಸಂಘಸಂಸ್ಥೆಗಳು ಜಾತಿನಿಷ್ಠೆಯನ್ನೇ ಪೋಷಿಸುತ್ತಿವೆ. ಹಾಗಾಗಿ ನಮ್ಮಲ್ಲಿ ಅವರು ಮಾತ್ರ ಜಾತಿವಾದಿ, ಇವರು ಜಾತಿವಾದಿ ಅಲ್ಲ ಅಂಥ ಹೇಳಲಿಕ್ಕೆ ಬಾರದು. ಕೆಲವರು ಹೆಚ್ಚು ಜಾತಿವಾದಿಗಳು. ಕೆಲವರು ಕಡಿಮೆ ಜಾತಿವಾದಿಗಳು ಆಗಿರಬಹುದು. ಈ ದೇಶದಲ್ಲಿ ಜಾತಿಯೇ ನೀತಿ, ಜಾತಿಯೇ ಧರ್ಮ, ಜಾತಿಯೇ ದೇವರು, ಜಾತಿಯೇ ಮೋಕ್ಷ.
ಮಠೀಯ ವ್ಯವಸ್ಥೆಯ ಒಳಗೆ ಇದ್ದೇ ಅಲ್ಲಿನ ಕಪಟ-ವಂಚನೆಗಳನ್ನು ಬಯಲುಮಾಡುತ್ತ ಬಂದಿರುವ ನಿಡುಮಾಮಿಡಿಯವರು ಮಠಗಳ ಜಾತಿನಿಷ್ಠೆಯ ಬಗ್ಗೆ ಬಹಿರಂಗವಾಗಿ ಹರಿಹಾಯ್ದವರು. ಅವರು ಹೇಳುವುದು ಅಕ್ಷರಶಃ ನಿಜ. ಪ್ರತಿಯೊಂದು ಮಠವೂ ಒಂದು ಜಾತಿ-ಉಪಜಾತಿಯನ್ನು ಆಧರಿಸಿ ನಿಂತಿದೆ. ಒಂದು ಜಾತಿಯ ಮಠಾಧೀಶರನ್ನು ಇನ್ನೊಂದು ಜಾತಿಯ ಭಕ್ತರು ಒಪ್ಪುವುದಿಲ್ಲ. ತಮ್ಮ ಮಠಾಧೀಶರು ತಮ್ಮ ಜಾತಿಗೇ ನಿಷ್ಠರಾಗಿರಲಿ ಎಂದು ಭಕ್ತರೂ ಬಯಸುತ್ತಾರೆ, ಮಠಾಧೀಶರೂ ಅದನ್ನೇ ಮಾಡುತ್ತಾರೆ.
ಈ ಪ್ರಶ್ನೆಗಳನ್ನು ಗಮನಿಸಿ: ಪೇಜಾವರ ಸ್ವಾಮೀಜಿಯವರು ತಮ್ಮ ಉತ್ತರಾಧಿಕಾರತ್ವವನ್ನು ಮಾಧ್ವರಲ್ಲದವರಿಗೆ ಬಿಟ್ಟುಕೊಡಲು ಸಾಧ್ಯವೆ? ರಾಘವೇಶ್ವರ ಭಾರತಿಯವರು ಹವ್ಯಕರಲ್ಲದವರಿಗೆ ತಮ್ಮ ಪೀಠದ ಉತ್ತರಾಧಿಕಾರ ನೀಡುವರೆ? ಬಾಲಗಂಗಾಧರನಾಥ ಸ್ವಾಮೀಜಿಗಳ ಉತ್ತರಾಧಿಕಾರಿಯಾಗಿ ಒಬ್ಬ ದಲಿತನನ್ನು ಕಲ್ಪಿಸಿಕೊಳ್ಳುವುದು ಸಾಧ್ಯವೆ? ಸಿರಿಗೆರೆ ಪೀಠಕ್ಕೆ ಸಾದರ ಹೊರತಾಗಿ ಬೇರೆಯವರ ಆಧಿಪತ್ಯ ಸಾಧ್ಯವೆ? ಪಂಚಾಚಾರ್ಯ ಪೀಠಗಳು ಜಂಗಮರಲ್ಲದವರನ್ನು ತಮ್ಮ ಪೀಠಕ್ಕೆ ಕೂರಿಸುವರೆ? ಶೃಂಗೇರಿ ಶಂಕರಾಚಾರ್ಯ ಪೀಠಕ್ಕೆ ವೈಷ್ಣವ ಬ್ರಾಹ್ಮಣರನ್ನು ನೇಮಿಸಲು ಭಾರತೀತೀರ್ಥ ಸ್ವಾಮೀಜಿ ಒಪ್ಪುವರೆ?
ಇಂಥ ಪ್ರಶ್ನೆಗಳನ್ನು ಮೇಲಿನ ಸ್ವಾಮೀಜಿಗಳಿಗೆ ಕೇಳುವುದೇ ಅಪರಾಧ! ಪಂಚಾಚಾರ್ಯ ಪೀಠದವರು ವಿರಕ್ತ ಸ್ವಾಮೀಜಿಗಳ ಸರಿಸಮವಾಗಿ ವೇದಿಕೆಗಳಲ್ಲಿ ಕುಳಿತುಕೊಳ್ಳಲು ಒಪ್ಪುವುದೇ ಇಲ್ಲ. ಇನ್ನು ಅವರು ವಿರಕ್ತರನ್ನು ಪೀಠಕ್ಕೆ ನೇಮಿಸುವುದೆಲ್ಲಿಂದ ಬಂತು? ಪೇಜಾವರರು ತಮ್ಮ ಜತೆಗಾರ ಅಷ್ಟಮಠದ ಸ್ವಾಮಿಗಳ ಜತೆಯೇ ಹರಿದ್ವಾರದಲ್ಲಿ ಮಠ ಕಟ್ಟುವ ವಿಚಾರಕ್ಕೆ ಜಗಳಕ್ಕೆ ಬಿದ್ದವರು. ಇನ್ನು ಮಾಧ್ವರಲ್ಲವರನ್ನು ಅವರು ಒಪ್ಪಿಯಾರೇ? ಕೃಷ್ಣ ಕೃಷ್ಣಾ.....!
ಸ್ವಾಮೀಜಿಗಳು ತಮ್ಮ ಮಠಗಳಿಗೆ ಉತ್ತರಾಧಿಕಾರಿ ಮಾಡುವಾಗ ತಮ್ಮ ಪೂರ್ವಾಶ್ರಮದ ( ಈ ಪದಬಳಕೆಯ ಕುರಿತೇ ನನಗೆ ಜಿಜ್ಞಾಸೆಗಳಿವೆ) ಅಣ್ಣತಮ್ಮಂದಿರು, ಅಕ್ಕತಂಗಿಯರ ಮಕ್ಕಳನ್ನೇ ಹುಡುಕುತ್ತಾರೆ. ಸ್ವಜಾತಿ ಒಂದೆಡೆ ಇರಲಿ, ಇವರಿಗೆ ಸ್ವವಂಶದ ಮರಿಗಳೇ ಬೇಕು. ತಾವು ಆಗಿ ಹೋದರೂ ತಮ್ಮ ವಂಶಸ್ಥರ ಕೈಗೇ ಮಠದ ಆಸ್ತಿ ಹೋಗಲಿ ಎಂಬ ಆಸೆ ಇವರದು. ಎಂಥ ಸಂನ್ಯಾಸ? ಎಂಥ ಜಗದ್ಗುರುತ್ವ?
ಹಿಂದೂ ಧರ್ಮದಲ್ಲಿ ಇವತ್ತು ಜಾತಿಗಳೇ ಧರ್ಮಗಳಾಗಿವೆ. ಜಾತಿಯನ್ನು ಒಪ್ಪಿಕೊಂಡವರಷ್ಟೆ ಈ ಧರ್ಮದಲ್ಲಿ ಇರಲು ಸಾಧ್ಯ. ಈ ಜಾತಿ ಬಂಧನದ ಧರ್ಮನೇತಾರರು ಹೇಗೆ ಜಾತ್ಯತೀತರಾಗಲು ಸಾಧ್ಯ? ಬಹುತೇಕ ವೀರಶೈವ ಮಠಾಧೀಶರು ಅಜ್ಞಾನದಿಂದಲೋ, ಅನುಕೂಲಕ್ಕಾಗಿಯೋ ವೀರಶೈವವನ್ನೂ ಹಿಂದೂ ಧರ್ಮದ ಭಾಗ ಎಂದು ಪರಿಗಣಿಸುತ್ತಾರೆ. ಹೀಗಾಗಿ ಅವರೂ ಸಹ ಈ ಜಾತಿ ವ್ಯವಸ್ಥೆಯನ್ನು ಸಾರಾಸಗಟಾಗಿ ಒಪ್ಪಿಕೊಂಡವರೇ ಆಗಿದ್ದಾರೆ. ಹೀಗಾಗಿ ಹಿಂದೂ, ವೀರಶೈವ, ಬ್ರಾಹ್ಮಣ ಹೀಗೆ ಧರ್ಮಭೇದವಿಲ್ಲದೆ ಬಹುತೇಕ ಎಲ್ಲ ಮಠಗಳಲ್ಲೂ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿದೆ. ಈ ಮಠಗಳಿಗೆ ಇನ್ನೂ ದಲಿತರಿಗೆ ಪ್ರವೇಶವಿಲ್ಲ. ಎಲ್ಲ ಜಾತಿಯವರನ್ನು ಒಟ್ಟಿಗೆ ಕೂರಿಸಿ ಊಟ ಹಾಕುವ ಕನಿಷ್ಠ ಮಾನವೀಯತೆಯೂ ಈ ಮಠಗಳಿಗಿಲ್ಲ.
ಈ ಮಠಗಳ ಶಿಕ್ಷಣಸಂಸ್ಥೆಗಳಲ್ಲಿ ಜಾತಿಬಂಧುಗಳಿಗೆ ಹೆಚ್ಚಿನ ಆದ್ಯತೆ, ಅದರಲ್ಲೂ ಅದೇ ಉಪಜಾತಿಯವರಿಗೆ ಮಾತ್ರ ಅಲ್ಲಿ ಅಗ್ರತಾಂಬೂಲ. ಅಲ್ಲಿನ ಗುಡಿಗುಂಡಾರಗಳಲ್ಲಿ ಪೂಜಿಸುವವರು ಆಯಾ ಜಾತಿಯವರೇ ಆಗಿರುತ್ತಾರೆ; ಅಥವಾ ವೈದಿಕಧರ್ಮದ ಗುಲಾಮಗಿರಿಯನ್ನು ಒಪ್ಪಿಕೊಂಡವರು ಬ್ರಾಹ್ಮಣರಿಂದ ಪೂಜೆ ಮಾಡಿಸುತ್ತಾರೆ.
ಇವರನ್ನು ಜಾತಿಪ್ರೇಮಿಗಳೆನ್ನದೆ ಇನ್ನೇನು ಹೇಳಲು ಸಾಧ್ಯ?
ಇಷ್ಟು ಮಾತ್ರವಲ್ಲ, ಇವತ್ತು ದೇಶದಲ್ಲಿ ಜಾತಿ ವ್ಯವಸ್ಥೆ ಇಷ್ಟು ಪ್ರಬಲವಾಗಿ ಉಳಿದುಕೊಂಡಿರುವುದಕ್ಕೆ ಕಾರಣವಾಗಿರುವುದೇ ಈ ಮಠಾಧೀಶರು. ತಂತಮ್ಮ ಜಾತಿಗಳನ್ನು ಪೋಷಿಸುತ್ತ ಜಾತಿಯ ಬಂಧನಗಳನ್ನು ಬಿಗಿಗೊಳಿಸಿರುವುದು ಈ ಮಠಾಧೀಶರೇ. ಮಠಾಧೀಶರಿಲ್ಲದೇ ಹೋಗಿದ್ದರೆ ಕಾಲಾಂತರಲ್ಲಿ ಜಾತಿ ವ್ಯವಸ್ಥೆಯೂ ಸಹಜವಾಗಿ ಶಿಥಿಲಗೊಳ್ಳುತ್ತ ಹೋಗುತ್ತಿತ್ತು. ಆಗ ಕಡೇ ಪಕ್ಷ ಸಾಮಾಜಿಕ ಶೋಷಣೆ, ಅಸಮಾನತೆಗಳಾದರೂ ದೂರವಾಗುತ್ತಿದ್ದವು.
ನಾನು ಮೊದಲೇ ಹೇಳಿದಂತೆ ಮಠೀಯ ವ್ಯವಸ್ಥೆಯೇ ಆತ್ಮವಂಚನೆಯದ್ದು. ಅದು ಯಥಾಸ್ಥಿತಿಯನ್ನು ಬಯಸುತ್ತದೆ, ಪರಿವರ್ತನೆಯನ್ನಲ್ಲ. ಪರಿವರ್ತನೆಯ ಬಗ್ಗೆ ಇವರು ಗಂಟೆಗಟ್ಟಲೆ ಮಾತನಾಡುತ್ತಾರೆ. ಆದರೆ ಅದನ್ನು ಪಾಲಿಸುವ ವಿಧಾನ ಇವರಿಗೆ ತಿಳಿದಿಲ್ಲ.
ಕುಮಾರಸ್ವಾಮಿಯವರು ಹೇಳಿದ್ದು ನಿಜ;
ಮಠಾಧೀಶರು ಜಾತಿಪ್ರೇಮಿಗಳೇ ಹೌದು. ಅದು ಈ ಕ್ಷಣದ ಕಟುಸತ್ಯ. ಇದು ಬದಲಾಗುವ ಯಾವ ಲಕ್ಷಣವೂ ಸದ್ಯಕ್ಕೆ ಕಾಣುತ್ತಿಲ್ಲ.
Subscribe to:
Post Comments (Atom)
20 comments:
helo,swamy.....
ella ok kumarswamy target yake?
right time right story.
writing is so nice.
very good refarence.
have a nice evening.
-chukki
nimma artical Odi nange tumba tale kettuhogide dayavittu nimma artical infnsthu vivaravaagi bareyiri
belagindalatare.blogspot.com
ಶಿವ ಶಿವ
ಪ್ರಿಯರೇ ಈ 'ಜಗದ್ಗುರು' ಗಳಿಗೆಲ್ಲಾ ಒಂದೊಂದು ಜಗತ್ತಿದೆ. ಅವರವರ ಜಗತ್ತಿನಲ್ಲಿ ಅಂದರೆ ಭಾವಿಯಲ್ಲಿರುವ ಕಪ್ಪೆಗಳಂತೆ ಅವರಿದ್ದಾರೆ. ನಮ್ಮ ದುರದೃಷ್ಟವೆಂದರೆ ನಾವು ಓಟುಕೊಟ್ಟು ಆರಿಸಿದವರೆಲ್ಲಾ ಇವರ ಕಾಲಿಗೆ ಬೀಳುವುದು.
nimma baraha nannannu chinthanege attide... sawlpa time kodi sawmy....
ದಿನೇಶ್ ಅವರೇ,
ನಿಮ್ಮಲ್ಲಿ ಅತ್ಯಂತ ಆಳವಾದ ಜಾತಿಪ್ರಜ್ಞೆ ಮನೆ ಮಾಡಿದ್ದು, ನಿಮ್ಮ ಒಂದೊಂದು ಬರಹವೂ ಕನ್ನಡಿಗರ ಒಗ್ಗಟ್ಟಿಗೆ ಮಾರಕವಾದುದಾಗಿದೆ. ಪ್ರತಿ ಧರ್ಮಕ್ಕೂ ಅದರದ್ದೇ ಆದ ಕುಂದು ಕೊರತೆ, ಮೇಲ್ಮೆ ಇರುತ್ತೆ. ಪ್ರತಿ ಸಮಾಜ ಒಂದಲ್ಲ ಒಂದು ಆಧಾರದಲ್ಲಿ ವರ್ಗೀಕರಣ ಆಗಿರುತ್ತೆ. ಭಾರತದಲ್ಲಿ ಅದು ಜಾತಿಯಿಂದ ಆಗಿದೆ ಮತ್ತು ನಮ್ಮನ್ನು ಒಂದು ಮಾಡೋ ಬದಲು ಒಡೆಯುತ್ತಿದೆ. ಆದ್ರೂ ನೀವು ಸುಮ್ಮನೆ ಶೋಷಣೆ ಶೋಷಣೆ ಅಂತ ಸುಳ್ಳು ಸುಳ್ಳೇ ಬಾಯಿ ಬಡ್ಕೊಳ್ಳೋದು ಬಿಟ್ರೆ ನೀವು ಎಡಪಂಥದೋರಿಗೆ ಬೇರೆ ಬದುಕಿಲ್ಲ ಅನ್ಸುತ್ತೆ. ನೀವಿರೋ ಕೊಚ್ಚೆಯಿಂದ ಅಂಬೇಡ್ಕರ್ ಅವ್ರೇ ಬಂದು ಕಾಪಾಡ್ಬೇಕು ನಿಮ್ಮುನ್ನ.
ಸತೀಶ್ ಅವರೇ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ.
ನಿಮ್ಮಂತೆ ಯೋಚಿಸುವವರು ಹೆಚ್ಚು ಹೆಚ್ಚು ನನ್ನ ಬರೆಹಗಳನ್ನು ಓದಬೇಕು ಎಂದು ಬಯಸುತ್ತೇನೆ. ನನ್ನ ಬ್ಲಾಗಿಗೆ ಬಂದಿದ್ದಕ್ಕಾಗಿ ಥ್ಯಾಂಕ್ಸ್, ಆಗಾಗ ಬರುತ್ತಿರಿ.
ನೀವೇ ಒಪ್ಪಿಕೊಂಡ ಹಾಗೆ ಇಂಡಿಯಾದಲ್ಲಿ ನಮ್ಮ ಸಮಾಜ ಜಾತಿಯಿಂದ ವರ್ಗೀಕರಣ ಆಗಿದೆ ಹಾಗು ಅದು ನಮ್ಮನ್ನು ಒಂದು ಮಾಡುವ ಬದಲು ಒಡೆಯುತ್ತಿದೆ.
ಹೀಗೆ ಒಡೆದ ಸಮಾಜವನ್ನು ಒಂದುಗೂಡಿಸುವುದು ಹೇಗೆ ಎಂಬುದಷ್ಟೆ ನನ್ನ ಕಾಳಜಿ. ಇದಕ್ಕೆ ನಿಮ್ಮಂಥವರು ಸಲಹೆ ಕೊಟ್ಟರೆ ಅಭ್ಯಂತರವಿಲ್ಲ. ಎಲ್ಲರೂ ಸೇರಿಯೇ ಒಂದುಗೂಡಿಸುವ ಕೆಲಸ ಮಾಡೋಣ.
ಶೋಷಣೆ, ಶೋಷಣೆ ಅಂತ ನಾನು ಸುಳ್ಳು ಸುಳ್ಳೇ ಬಡಬಡಿಸುತ್ತಿದ್ದೇನೆ ಎಂಬುದು ನಿಮ್ಮ ಅಭಿಪ್ರಾಯ. ಅದು ಸತ್ಯವಲ್ಲ. ಒಂದೇ ನೀವು ಸತ್ಯ ಗೊತ್ತಿದ್ದೂ ಸುಳ್ಳಾಡುತ್ತಿರಬಹುದು ಅಥವಾ ಗೊತ್ತಿಲ್ಲದೇ ಹಾಗೆ ಮಾತನಾಡುತ್ತಿರಬಹುದು. ಒಮ್ಮೆ ನನ್ನ ಕಛೇರಿಗೆ ಬನ್ನಿ, ನಿಮಗೆ ಶೋಷಣೆಯ ವಿರಾಟ್ರೂಪ ಎಲ್ಲಿ ಹೇಗೆ ಇದೆ ಎಂಬುದನ್ನು ವಿವರಿಸಿ ಹೇಳುತ್ತೇನೆ.
ಕೊಚ್ಚೆಯಲ್ಲಿ ಇರುವುದು ನಾನು ಅಥವಾ ನನ್ನಂಥವರಲ್ಲ. ಈ ದೇಶದ ಜಾತಿವ್ಯವಸ್ಥೆಯೇ ಒಂದು ಕೊಚ್ಚೆ. ಆ ಕೊಚ್ಚೆಯನ್ನು ಸೃಷ್ಟಿಸಿದವರು ಅದರೊಳಗೆ ಹೆಚ್ಚು ಸುಖವಾಗಿದ್ದಾರೆ. ಅವರನ್ನು ಆ ಕೊಚ್ಚೆಯಿಂದ ಹೊರತರುವ ಕೆಲಸ ಆಗಬೇಕಿದೆ.
ನಿಮ್ಮ ಸಿಟ್ಟು, ಅಸಹನೆ ನನಗೆ ಅರ್ಥವಾಗುತ್ತದೆ. ಅದಕ್ಕೆ ನನ್ನ ಸಹಾನುಭೂತಿಯಿದೆ.
ನಿಮ್ಮ ಬರವಣಿಗೆಯ ಭಾಷೆ ನೋಡಿದರೆ ನೀವು ಒಳ್ಳೆಯ ಮನಸ್ಸಿನವರು ಎಂದು ನನಗನ್ನಿಸುತ್ತದೆ. ನಮ್ಮಂಥವರೊಂದಿಗೆ ಮುಕ್ತವಾಗಿ ಒಂದಷ್ಟು ಸಂವಾದ ಮಾಡಿದರೆ ನಿಮ್ಮ ಅನುಮಾನ, ಅಸಹನೆ ಎಲ್ಲವೂ ನಿವಾರಣೆಯಾಗುತ್ತದೆ.
ಈ ಕಾಳಜಿಯಿಂದಲೇ ನಿಮ್ಮ ಅಭಿಪ್ರಾಯಕ್ಕೆ ಉತ್ತರಿಸಿದ್ದೇನೆ.
ನಾವೂ, ನೀವು ಸೇರಿಯೇ ನೀವೇ ಉಲ್ಲೇಖಿಸಿರುವ ಒಂದುಗೂಡಿಸುವ ಕೆಲಸಕ್ಕೆ ತೊಡಗೋಣ.
ನಮ್ಮ ಈ ಮಠಾದೀಶರುಗಳು, ಅವರ ಅನುಯಾಯಿಗಳು ಮತಾತಂತರವಾಗಬೇಕಿದೆ... ಮನುಜಮತಕ್ಕೆ!! ಯಾವಾಗ ಆಗುತ್ತೋ ಏನೋ ಇದು!! ಅಲ್ಲವೇ?
ದಿನೇಶ್,
ನಿಮ್ಮ ಇತ್ತೀಚಿನ ಎರಡು ಬರಹಗಳನ್ನಷ್ಟೇ ಓದಿದೆ. ವಿಚಾರಪೂರ್ಣ ಮತ್ತು ಚಿಂತನಾ ಪ್ರಚೋದಕ ಬರಹಗಳು. ಸಮತೂಕದ ಒಳನೋಟಗಳಿಗೆ ಧನ್ಯವಾದ.
ಉಳಿದ ಬರಹಗಳನ್ನೂ ಓದಿದ ನಂತರ ಮತ್ತೆ ಸ್ಪಂದಿಸುತ್ತೇನೆ.
ಒಳಿತಾಗಲಿ. ಹೆಚ್ಚು ತಿಳಿದು, ಹೆಚ್ಚು ಬರೆಯಿರಿ,
ಪ್ರೀತಿಯಿಂದ
ಸಿಂಧು
ದಿನೇಶ್ ಅವರೇ,
ನಮಸ್ಕಾರ. ನಿಮ್ಮ ಆಹ್ವಾನಕ್ಕೆ ವಂದನೆಗಳು.
ನೀವು ಹೇಳುತ್ತಿರುವ ಮಠ-ಮಾನ್ಯಗಳಿಗೆ ಸಂಬಂಧಿಸಿದ ಸತ್ಯಗಳನ್ನು ನಾನು ಅಲ್ಲಗಳೆಯುತ್ತಿಲ್ಲ. ಶೋಷಿತರ ಪರವಾಗಿ ದನಿ ಎತ್ತುವವರು ಸದಾ ಆ ವ್ಯವಸ್ಥೆಯ ಹೊರನಿಂತು ಧಿಕ್ಕರಿಸಿ ಮಾತಾಡುತ್ತಾರೆಯೇ ಹೊರತು ಒಳಗಿದ್ದೇ ಹೇಗೆ ಸರಿ ಪಡಿಸಬೇಕೆಂದು ಯೋಚಿಸುವುದಿಲ್ಲ ಅನ್ನುವುದು ನನ್ನ ಅನಿಸಿಕೆ. ನೀವೇ ಹೇಳಿ, ನೀವು ಹೇಳಿದ ಸತ್ಯಗಳು ಆಯ್ದ ಸತ್ಯಗಳಲ್ಲವೇ? ಈ ಮಠ ಮಾನ್ಯಗಳ ಅಕ್ರಮ, ಅನೀತಿಗಳು ಹಿಂದು ಧರ್ಮಕ್ಕೆ ಅಥವಾ ಹಿಂದು ಧರ್ಮದ ಕೆಲವರ್ಗಗಳ ಮಠಕ್ಕೆ ಮಾತ್ರಾ ಸೀಮಿತವೇ? ಸರ್ವ ಸಂಗ ಪರಿತ್ಯಾಗಿ ಕಾನ್ಸೆಪ್ಟ್ ತುಂಬಾ ಚೆನ್ನಾಗಿತ್ತೇನೊ ಒಮ್ಮೆ, ಆದ್ರೆ ಅದು ಎಲ್ಲ ಧರ್ಮಗಳಲ್ಲಿಯೂ ಇತ್ತು ಮತ್ತು ಇಂದು ಎಲ್ಲ ಧರ್ಮದಲ್ಲೂ ಪೊಳ್ಳುತನ, ದಗಾಗಳಿಗೆ ಈಡಾಗಿಲ್ಲವೇ? ನೀವು ಹೇಳುತಿರುವ ಕೊಳಕು ಹತ್ತಿರುವುದು ಇಡೀ ಪ್ರಪಂಚದ ಮನುಕುಲಕ್ಕೇ ಇಡಿಇಡಿಯಾಗಿ ಅಲ್ಲವೇ?
ನಾನೇನು ಅವರೂ ಕಳ್ಳರು, ಇವರೂ ಕಳ್ಳರು... ಸೋ ಇಬ್ರುನ್ನೂ ಒಪ್ಪೋಣ ಅನ್ನುತ್ತಿಲ್ಲ. ಇಬ್ಬರು ಕಳ್ಳರ ಬಗ್ಗೇನೂ ಬರೀರಿ ಅಂತಿದೀನಿ ಅಷ್ಟೆ. ನೀವು ಹಿಂದು ಸಮಾಜದ ಹುಳುಕನ್ನು ಎತ್ತಾಡುವ ಭರದಲ್ಲಿ ಈ ಹುಳುಕೇ ಎಲ್ಲ ಮತಾಂತರದಂತಹ ಪಿಡುಗಿಗೆ ಕಾರಣ ಅನ್ನುತ್ತಿರುವುದು ಸರಿಯಲ್ಲ... ಯಾಕೆಂದರೆ ಈ ಪಿಡುಗಿನಿಂದ (ತನ್ನವರಿಗಾಗಿ ಪೀಠ ಕಾದಿಡೋ ಸ್ವಾರ್ಥ, ಸನ್ಯಾಸಿಯಾಗಿದ್ದರೂ ಸ್ತ್ರೀಸಂಗ ಇತ್ಯಾದಿ ಅನಾಚಾರಗಳು)ಮುಕ್ತವಾಗಿರೋ ಯಾವ ಧಾರ್ಮಿಕ ಸಮುದಾಯವೂ ಇಂದು ಇಲ್ಲ.
ಇನ್ನು ಶೋಷಣೆಯ ವಿಚಾರ... ನಿಮ್ಮಲ್ಲಿಗೆ ಬಂದರೆ ಶೋಷಣೆಯ ಹತ್ತಾರು ಉದಾಹರಣೆಗಳನ್ನು ತೋರಿಸಬಹುದು. ಸಮಾಜ ಹಾಗಿದೆ ಅನ್ನುವುದೂ ತಕ್ಕ ಮಟ್ಟಿಗೆ ನಿಜವೇ. ಯಾರೂ ಯಾರನ್ನೂ ಶೋಶ್ಃಅಣೆ ಮಾಡಬಾರದು ಅನ್ನುವುದು ನಿಮ್ಮ ನಿಲುವಾಗಿದ್ದರೆ ನಿಮ್ಮನ್ನು (ಎಡಪಂಥೀಯರನ್ನು)ಒಪ್ಪಬಹುದಿತ್ತು. ಆದರೆ ದಲಿತರನ್ನು ಶೋಷಿಸುವುದನ್ನು ಪ್ರತಿರೋಧಿಸುವ ನೀವು ಅದೇ ಉತ್ಸಾಹದಲ್ಲಿ ದಲಿತರಿಂದ ಆಗುತ್ತಿರುವ ಶೋಷಣೆಯ ಬಗ್ಗೆ ಬರೆಯಲಾರಿರಿ. ನೀವೇ ಹೇಳಿ. ಎಷ್ಟು ಅಟ್ರಾಸಿಟಿ ಕೇಸುಗಳು ವೈಯುಕ್ತಿಕ ದ್ವೇಶ ಸಾಧನೆಗೆ ಬಳಾಕೆಯಾಗ್ತಿಲ್ಲ. ಎಷ್ಟು ಸರ್ಕಾರಿ ಕಛೇರಿಗಳಲ್ಲಿ ದಲಿತ ಮೇಲಧಿಕಾರಿ ಬಂದ ಕೂಡಲೇ ಮುಂದುವರಿದ ಜಾತಿಯ ಕೆಲಸಗಾರರಿಗೆ ಕೊಡುವ ಕಿರುಕುಳಗಳು, ತಾವು ಕೆಲಸ ತಪ್ಪಿಸಿಕೊಳ್ಳಲು ಹಿಂದುಳಿದ ಜಾತಿಯ ಹಣೆಪಟ್ಟಿ ಬಳಸುವವರು, ತಾವು ಮುಂದುವರೆದು ಐ.ಏ.ಎಸ್ ಅಧಿಕಾರಿಯಾಗಿದ್ದರೂ ಮಕ್ಕಳಿಗೆ ರೆಸರ್ವೇಶನ್ ಕೋಟಾದಡಿಯಲ್ಲಿ ಅವಕಾಶ ಗಿಟ್ಟಿಸಿಕೊಡುವುದು... ನಿಮ್ಮ ನಿಲುವುಗಳು ಬರಹಗಳನ್ನು ನೀವೇ ಒಮ್ಮೆ ಪರಾಮರ್ಶಿಸಿ ನೋಡಿ. ನಿಮಗೂ ಕೋಮುಸೌಹಾರ್ದ ವೇದಿಕೆಯವರಿಗೂ ಅಂಥಾ ವ್ಯತ್ಯಾಸ ಕಾಣಿಸುವುದಿಲ್ಲ. ಅವರು ಹಿಂದುಗಳಿಂದಾಗುವ ಎಲ್ಲ ಆಕ್ರಮಣ, ಅತ್ಯಾಚಾರಗಳಾನ್ನು ಮಾತ್ರಾ ಪ್ರತಿಭಟಿಸುತ್ತಾರೆ, ಖಂಡಿಸುತ್ತಾರೆ. ನೀವೂ ಕೂಡಾ ಹಾಗೇ. ಅವರು ಮುಸ್ಲಿಂ ಭಯೋತ್ಪಾದಕರನ್ನೂ, ಕ್ರೈಸ್ತ ಮತಾಂತರಿಗಳನ್ನೂ ಖಂಡಿಸುವುದಿಲ್ಲ. ನೀವೂ ಅಷ್ಟೆ. ದಲಿತ ಸಂಘರ್ಷ ಸಮಿತಿಯ ಹೆಸರಲ್ಲಿ ಜಾತಿ ನಿಂದನೆ ಕೇಸ್ ಹಾಕ್ತೀವಿ ಅಂತ ಬೆದರಿಸಿ ದುಡ್ಡು ವಸೂಲಿ ಮಾಡುವ ಎಷ್ಟು ನಾಯಕರುಗಳು ಹಿಂದುಳಿದ ವರ್ಗದಲ್ಲಿಲ್ಲ... ಅವರನ್ನೆಲ್ಲಾ ಯಾಕೆ ನೀವು ಖಂಡಿಸುವುದಿಲ್ಲ? ಅದೇ ಕಾರಣಕ್ಕೆ ನಾನು ನಿಮ್ಮನ್ನು ಜಾತಿವಾದಿ ಎಂದು ದೂರಿದ್ದು.
ಮತ್ತಷ್ಟು ಬರೆಯುತ್ತೇನೆ...
ನಮಸ್ಕಾರ
ಮತ್ತೊಮ್ಮೆ ನಮಸ್ಕಾರ ದಿನೇಶ್,
ಭಾರತ ದೇಶದ ದರಿದ್ರ ಜಾತಿ ವ್ಯವಸ್ಥೆಯಿಂದ ಬಹುಸಂಖ್ಯಾತರನ್ನು ಸಾವಿರಾರು ವರ್ಷಗಳಿಂದ ಶೋಷಿಸಲಾಯಿತು ಅನ್ನುವುದು ನಮ್ಮ ಇತಿಹಾಸದ ಕರಾಳ ಸತ್ಯ. ಇದಕ್ಕೇನು ಪರಿಹಾರ? ಇಷ್ಟು ವರ್ಷ ನೀವು ನಮ್ಮನ್ನು ತುಳಿದಿದ್ದೀರಾ, ಇನ್ನು ನಿಮ್ಮನ್ನು ನಾವು ತುಳಿಯುತ್ತೇವೆ ಅನ್ನೋದು ಪರಿಹಾರವೇನು? ಯಾವ ವ್ಯವಸ್ಥೆ ನಮ್ಮ ಸಮಾಜದ ಒಡಕಿಗೆ ಕಾರಣವಾಯಿತೋ ಅದೇ ಧಾರ್ಮಿಕ, ಸಾಮಾಜಿಕ ವ್ಯವಸ್ಥೆ ಇಂದು ತನ್ನ ಇಂತಹ ಹುಳುಕುಗಳಿಂದಾಗಿಯೇ ಪರರ ದಾಳಿಗೆ ಈಡಾಗುತ್ತಿದೆ. ಏನು ಮಾಡಬೇಕು ಈಗ?
ಹಾಂ, ಇಷ್ಟು ಸಾವಿರ ವರ್ಷ ನಮ್ಮುನ್ನ ತುಳುದ್ರಿ ಈಗ ನಿಮ್ಮನ್ನು ತುಳಿಯೋರು ಬಂದಿದಾರೆ ಅನುಭವಿಸಿ. ನಿಮ್ಮಲ್ಲಿ ಕೊಳಕು ವ್ಯವಸ್ಥೆ ಇರೋದಕ್ಕೇ ಕ್ರೈಸ್ತರು ಮತಾಂತರ ಮಾಡೋದು, ನೀವು ದಲಿತರಾದ ನಮ್ಮನ್ನು ಶೋಷಿಸುತ್ತಿರುವುದಕ್ಕೇ ಮುಸ್ಲಿಮ್ ಉಗ್ರರು ಬಾಂಬ್ ಹಾಕುದ್ರೂ ಅವರನ್ನು ಬೆಂಬಲಿಸುತ್ತೇವೆ ಅನ್ನೋ ನಿಲುವು ತಪ್ಪಲ್ವಾ? ದಿನೇಶ್. ನಿಮ್ಮ ಬರಹಗಳನ್ನು ನೋಡಿ, ತಿಳಿದೋ ತಿಳಿಯದೆಯೋ ಅಂತಹ ನಿಲುವು ಕಾಣಿಸುತ್ತದೆ ಅವುಗಳಲ್ಲಿ.
ನಿಜವಾದ ಸಾಮಾಜಿಕ ಕಾಳಜಿಯಿರುವವರು ಧರ್ಮ,ಜಾತಿಗಳು ಸಾಮಾಜಿಕ ಜೀವನದ ಮೇಲೆ ಬೀರುವ ಎಲ್ಲಾ ಪ್ರಭಾವವನ್ನೂ ವಿರೋಧಿಸಬೇಕು. ಜಾತಿ ಸಂಘಟನೆಗಳು ರಾಜಕೀಯವಾಗಿ ಪ್ರಭಾವ ಬೀರುವುದನ್ನು ವಿರೋಧಿಸಬೇಕು. ಶೋಷಣೆ ಯಾರೇ ಮಾಡುದ್ರೂ ಎಲ್ಲೆ ನಡುದ್ರೂ ವಿರೋಧಿಸಬೇಕು. ಯಾರು ಯಾರ ಮೇಲೆ ಧಾರ್ಮಿಕ ದಾಳಿ ನಡೆಸಿದರೂ ಅದನ್ನು ಖಂಡಿಸುವ ಚಿಂತನೆಯಿರಬೇಕು. ಮೊದಲಿಗೆ ಸಮಾಜವನ್ನು ಜಾತಿಯಿಂದ ಗುರುತಿಸುವ, ತಮ್ಮನ್ನು ತಾವು ಜಾತಿಯಿಂದ ಗುರುತಿಸಿಕೊಳ್ಳುವ ಹೀನ ಬುದ್ಧಿಯನ್ನು ಬಿಟ್ಟು ನಾಡು ಒಂದೇ-ನಾಡಿನ ಜನ ಒಂದೇ ಎನ್ನುವ ದೊಡ್ಡಬುದ್ಧಿ ತೋರಿಸಬೇಕು. ಅದು ಬಿಟ್ಟು ಹಿಂದುಗಳನ್ನು ವಿರೋಧಿಸಬೇಕು ಅನ್ನೋ ಒಂದೇ ಕಾರಣಕ್ಕೆ ದ್ವಾರಕಾನಾಥ್ ತೀರ್ಥ ಕುಡಿಯಲ್ಲ ಅನ್ನೋದು, ಅದನ್ನು ಅವ್ರು ಬಲವಂತ ಮಾಡಿದಷ್ಟೇ ಹೇಯವಾದ ಮನಸ್ಥಿತಿ. ಗೋಹತ್ಯಾ ನಿಷೇಧಿಸಿ ಅಂತ ರಾಮಚಂದ್ರಪುರ ಮಠದವರು ಅಂದರೂ ಅನ್ನೋ ಒಂದೇ ಕಾರಣಕ್ಕೆ ಜಟಾಪಟ್ ನಾಗರಾಜ್ ಸಾರ್ವಜನಿಕ ಸ್ಥಳದಲ್ಲಿ ದನದ ಮಾಂಸದ ಅಡುಗೆ ಮಾದಿಕೊಂಡು ಉಣ್ಣೋದು ಹೀನ ಮನಸ್ಥಿತಿ. ಹೇಳಿ, ಇದನ್ನು ಪ್ರತಿಭಟಿಸಬಲ್ಲ, ಖಂಡಿಸಿ ಬರೆಯಬಲ್ಲಷ್ತು ದೊಡ್ಡತನ ನಿಮಗಿದೆಯೇ?
ಪ್ರೀತಿಯಿಂದ
ಸತೀಶ್
ದಿನೇಶ್ ಸರ್,
ಜಟಾಪಟ್ ನಾಗರಾಜ್ ಅಲ್ಲಾ... ಇನ್ನೊಬ್ಬ ದಲಿತ ಸಂಘಟನೆಯೊಂದರ ಮುಖಂಡರು ಹಾಗೆ ಮಾಡಿದ್ದು,ಅವರ ಹೆಸರು ನನಗೆ ಗೊತ್ತಿಲ್ಲ. ತಪ್ಪಿಗೆ ಕ್ಷಮಿಸಿ
ವಿಶ್ವಾಸಿ
ಸತೀಶ್
nimma mathu satish naduvina kalagakke virama illave ?
************* chukki
ಪ್ರಿಯ ಸತೀಶ್
ಮತಾಂಧರು ಯಾವ ಧರ್ಮದವರಾದರೂ ಅವರು ಅಪಾಯಕಾರಿ. ಹಿಂದೂ ಮತಾಂಧರು, ಮುಸ್ಲಿಂ ಮತಾಂಧರು, ಕ್ರಿಶ್ಚಿಯನ್ ಮತಾಂಧರು ಇವರಲ್ಲಿ ಅಂಥ ಭೇದವೇನಿಲ್ಲ. ನಾನು ಈ ಎಲ್ಲರ ವಿರುದ್ಧ ಇರುವವನು. ಯಾರನ್ನು ನೀವು ನನ್ನಂಥವರು ಎನ್ನುತ್ತೀರೋ ಅವರೂ ಸಹ ಈ ಎಲ್ಲ ಮತಾಂಧರ ವಿರುದ್ಧ ಇರುವವರೇ ಆಗಿದ್ದಾರೆ ಎಂದು ಭಾವಿಸಿದ್ದೇನೆ. ನಿಮ್ಮ ಸಮಾಧಾನಕ್ಕೆ ಹೇಳುತ್ತೇನೆ ಕೇಳಿ, ತಸ್ಲೀಮಾ ನಜ್ರೀನ್ ಕುರಿತಾಗಿ ನಾನು ಕವಿತೆಯೊಂದನ್ನು ಬರೆದಿದಕ್ಕಾಗಿ ಮುಸ್ಲಿಂ ಮತಾಂಧರಿಂದ ಪ್ರಾಣ ಬೆದರಿಕೆಯನ್ನೂ ಎದುರಿಸಬೇಕಾಯಿತು. ಮತಾಂಧ ಹಿಂದೂಗಳನ್ನು ಖಂಡಿಸಿದ ಹಾಗೆಯೇ ಮತಾಂಧ ಮುಸ್ಲಿಮರನ್ನೂ ಖಂಡಿಸುತ್ತ ಬಂದವನು ನಾನು ಎಂಬುದಕ್ಕೆ ಬೇರೆ ಉದಾಹರಣೆ ಬೇಕಾಗಿಲ್ಲ ಎನಿಸುತ್ತದೆ.
ಹಿಂದೂಗಳು ಆ ಧರ್ಮದ ಒಳಗಿನ ಮತಾಂಧರನ್ನು ಮಟ್ಟ ಹಾಕಬೇಕು. ಅದೇ ಪ್ರಕಾರ ಮುಸ್ಲಿಮರು ತಮ್ಮೊಳಗಿನ ಮತಾಂಧರನ್ನು ಸದೆಬಡಿಯಬೇಕು, ಇದೇ ಪ್ರಕಾರ ಎಲ್ಲ ಧರ್ಮದ ಒಳಗಿನ ಸಜ್ಜನರು ಅಲ್ಲಿನ ದುರ್ಜನರ ವಿರುದ್ಧ ಹೋರಾಟ ಮಾಡುತ್ತ ಬರಬೇಕು.
ಎಲ್ಲ ಧರ್ಮಗಳಲ್ಲೂ ಅನಿಷ್ಟ ವ್ಯವಸ್ಥೆಯಿದೆ ಎಂಬ ಕಾರಣಕ್ಕೆ ನಮ್ಮ ಧರ್ಮದ ಒಳಗಿನ ಅನಿಷ್ಟಗಳನ್ನು ಸಹಿಸಿಕೊಳ್ಳಬೇಕು ಎಂಬುದು ಮೂರ್ಖತನವಲ್ಲವೆ? ಯಾರಿಗೆ ತೀರ್ಥ-ಪ್ರಸಾದದಲ್ಲಿ ನಂಬಿಕೆಯಿದೆಯೋ ಅವರು ತೆಗೆದುಕೊಳ್ಳುತ್ತಾರೆ. ನಂಬಿಕೆಯಿಲ್ಲದವರನ್ನು ಬಲವಂತ ಮಾಡಲು ಬಂದ ಕುಡುಕರ ಗುಂಪನ್ನು ಸಮರ್ಥಿಸಿಕೊಳ್ಳುತ್ತ ಹೋದರೆ ಧರ್ಮಕ್ಕೆ ಅರ್ಥವೇನು ಉಳಿಯಿತು? ತೀರ್ಥ, ಅದನ್ನು ನಂಬುವವರಿಗೆ ಪವಿತ್ರ ತೀರ್ಥ. ನಂಬದೇ ಇರುವವರಿಗೆ ಅದು ಬರಿಯ ನೀರು. ಇಷ್ಟನ್ನು ಅರಿಯದವರಿಂದ ಧರ್ಮ ಉದ್ಧಾರವಾಗುವುದೆ?
ದಲಿತರ ಮೇಲೆ ನಿಮಗೆ ಸಾಕಷ್ಟು ಪೂರ್ವಾಗ್ರಹಗಳಿರುವಂತಿದೆ. ಎಲ್ಲೋ ಅಲ್ಲೊಬ್ಬರು ಅಟ್ರಾಸಿಟಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡಿರಬಹುದು. ಆದರೆ ಅದನ್ನೇ ಜನರಲೈಸ್ ಮಾಡುವುದು ಬೇಡ. ವರದಕ್ಷಿಣೆ ತಡೆ ಕಾಯ್ದೆಯನ್ನೂ ದುರ್ಬಳಕೆ ಮಾಡಿಕೊಳ್ಳುವವರಿದ್ದಾರೆ. ಹಾಗೆಂದ ಮಾತ್ರಕ್ಕೆ ಕಾಯ್ದೆಯೇ ಬೇಡ ಎಂದು ನಮ್ಮ ಹೆಣ್ಣುಮಕ್ಕಳನ್ನು ವರದಕ್ಷಿಣೆಗಾಗಿ ಸುಟ್ಟುಹಾಕಲು ಅವಕಾಶ ನೀಡಲಾಗುತ್ತದೆಯೇ?
ಹಸುಗಳು ಶ್ರೇಷ್ಠವಾದರೆ ಕುರಿಗಳು ಕನಿಷ್ಠವೆ? ಪ್ರಾಣಿಗಳು ಪ್ರಾಣಿಗಳೇ. ರಾಘವೇಶ್ವರ ಸ್ವಾಮಿಗೆ ಗೋವುಗಳ ಮೇಲೆ ಯಾಕೆ ಪ್ರೀತಿ? ಕೋಳಿ, ಕುರಿಗಳೇನು ಮಾಡಿದ್ದವು? ದೇಶದ ಬಹುಸಂಖ್ಯಾತ ದಲಿತರಿಗೆ, ಹಿಂದುಳಿದವರಿಗೆ ದನದ ಮಾಂಸ ತಿನ್ನುವ ಆಹಾರ ಎನ್ನುವುದು ಗೊತ್ತಿಲ್ಲವೆ? ದನದ ಮಾಂಸ ಮಾರುವುದು, ತಿನ್ನುವುದನ್ನು ನಿಷೇಧಿಸುವುದಾದರೆ ಇತರೆ ಪ್ರಾಣಿಗಳ ಮಾಂಸಕ್ಕೂ ಇದೇ ನಿಷೇಧ ಇರಬೇಕು ಎಂದು ನಿಮಗನ್ನಿಸುವುದಿಲ್ಲವೆ?
ತಮಾಶೆಯಾಗಿ ಹೇಳುತ್ತೇನೆ ಸತೀಶ್, ನನ್ನ ಜಾತಿ ಯಾವುದು ಎಂದು ಗೊತ್ತಿಲ್ಲದ ನೀವು ನನ್ನನ್ನು ಜಾತಿವಾದಿ ಎಂದು ಹೇಗೆ ಬ್ರಾಂಡ್ ಮಾಡಿದಿರಿ?
ಮೊದಲು ನಾವು, ನೀವೆಲ್ಲ ಜಾತಿ, ಧರ್ಮದ ಪರಿಧಿಯನ್ನು ಮೀರಿ ಬೆಳೆಯಬೇಕಾಗಿದೆ. ಎಲ್ಲ ಧರ್ಮಗಳು ಅವು ಹುಟ್ಟಿಕೊಂಡ ಕಾಲದ ಅಗತ್ಯವಾಗಿದ್ದವು. ಆಹೊತ್ತಿನ ಅಗತ್ಯಗಳಿಗೆ ತಕ್ಕಂಥೆ ಧರ್ಮಗಳು ರೂಪುಗೊಂಡಿದ್ದವು. ಈಗಿನ ಕಾಲಘಟ್ಟದಲ್ಲಿ ಅಗತ್ಯವಿರುವುದು ಮಾನವಧರ್ಮವೊಂದೇ. ಮಾನವೀಯತೆ ಇಲ್ಲದ ಧರ್ಮ, ಅದು ಧರ್ಮವೇ ಅಲ್ಲ.
ಇದು ಅರ್ಥವಾಗದಿದ್ದರೆ ಏನೇನೂ ಅರ್ಥವಾಗುವುದಿಲ್ಲ.
ಪ್ರೀತಿಯಿಂದ,
ದಿನೇಶ್
HaI sir
Very good artical.
Nagendra.Trasi
ಮಾನವೀಯತೆ ಇಲ್ಲದ ಧರ್ಮ, ಅದು ಧರ್ಮವೇ ಅಲ್ಲ.
ಇದು ಅರ್ಥವಾಗದಿದ್ದರೆ ಏನೇನೂ ಅರ್ಥವಾಗುವುದಿಲ್ಲ.
Dinesh sir nivu heliddu satya sir
ದಿನೇಶ ಅವರೆ,
ಇವತ್ತು ಹಿಂದುಗಳ ಮೇಲೆ ಆಗ್ತಿರೊ ಶೋಷಣೆಗಳಿಗೆ ನಿಮ್ಮಂತಹವರೂ ಕಾರಣ. ಹಿಂದುಗಳಲ್ಲೆ ಇರುವ ಸಮಸ್ಯೆಗಳನ್ನ ಕೆದಕಿ ಕೆದಕಿ ತೆಗಿಯೊ ಬದಲು ಹಿಂದುಗಳನ್ನ ಒಂದಾಗಿಸೊದಕ್ಕೆ ನಾವೆಲ್ಲ ಪ್ರಯತ್ನಿಸಬೇಕು.
ಕುಮರಸ್ವಾಮಿ, ನೀಡಿದ ಹೇಳಿಕೆ ಶ್ರೀ ಸಿದ್ದಗಂಗಾ ಸ್ವಾಮಿಗಳ ವಿರುದ್ದ.
ಶ್ರೀ ಸಿದ್ದಗಂಗಾ ಸ್ವಾಮಿಗಳು ನಮ್ಮ ಸಮಾಜಕ್ಕೆ ನೀಡಿದ ಕೊಡುಗೆ ಬಗ್ಗೆ ಈಗ ಮಾತಾಡೊ ಅವಶ್ಯಕತೆ ಇಲ್ಲ. ಆದ್ರೆ ಒಂದು ಮಾತು, ಅವರು ಪ್ರಾರಂಭಿಸಿದ ವಿದ್ಯಾಮಂದಿರದಲ್ಲಿ ಅಂದಿನಿಂದ ಇವತ್ತಿನವರೆಗು ಕಲಿತ ಮತ್ತು ಕಲಿತಾಯಿರುವ ಮಕ್ಕಳಲ್ಲಿ ಏಷ್ಟೊ ಮಕ್ಕಳು ಬೇರೆ ಬೇರೆ ಜಾತಿಯವರು. ಶ್ರೀ ಸಿದ್ದಗಂಗಾ ಸ್ವಾಮಿಗಳು ಯಾವತ್ತು ಜಾತಿ-ಬೇಧ ಮಾಡಿಲ್ಲ. ಅವರು ಯಾವತ್ತು ಜಾತಿಯ ಹೆಸರಲ್ಲಿ, ಅನ್ಯ ಜಾತಿಯರಿಗೆ ಲಿಂಗವನ್ನು ತೊಡಸಿಲ್ಲ. ಆದ್ರೆ ಅದೆ ಕ್ರಿಶನ್ನರು ನಡಿಸುತ್ತಿರುವ ಕಾನ್ಮೆಂಟುಗಳಲ್ಲಿ, ಹಿಂದು ಹುಡುಗಿ ಬಳೆ ಹಾಕುವ ಹಾಗಿಲ್ಲ, ಹಬ್ಬದ ದಿನವು ಹೂವೂ ಮುಡಿವ ಹಾಗಿಲ್ಲ, ತೊಡೆಮೆಲೆ ಇರೊವಂತ ಬಟ್ಟೆ ಹಾಕ್ಕೊಬೇಕು. ಇದು western culture ಅಲ್ವೆನ್ರಿ???? ಅಂತಹದ್ರಲ್ಲಿ ಶ್ರೀ ಸಿದ್ದಗಂಗಾ ಸ್ವಾಮಿಗಳ ವಿರುದ್ದ ಕುಮರಸ್ವಾಮಿ ನೀಡಿರುವ ಹೇಳಿಕೆ ತಪ್ಪು, ಅದನ್ನ ನೀವು ಖಂಡಿಸೊ ಬದಲು, ಶ್ರೀ ಸಿದ್ದಗಂಗಾ ಸ್ವಾಮಿಗಳನ್ನ ಬೇರೆ ಸ್ವಾಮಿಗಳ ಜೊತೆ ಹೊಲಿಸಿದ್ದಿರಾ. ಅದು ತಪ್ಪಲ್ವೆ????
ಇವತ್ತು ಕುಮರಸ್ವಾಮಿ ಹೇಳಿಕೆಯನ್ನ ವಿರೊಧ ಮಾಡತಿರೊರು ಕೆಲವೆ ಕೆಲವು ಹಿಂದು ಸಂಸ್ಥೆಗಳು ಮಾತ್ರ. ಕಾರಣ ಹಿಂದುಗಳಲ್ಲಿ ಒಗ್ಗಟ್ಟಿಲ್ಲ.
ಇದೆ ಹೇಳಿಕೆಯನ್ನ ಕುಮರಸ್ವಾಮಿಯೆನದ್ರು ಮುಸ್ಲಿ ಅಥವಾ ಕ್ರಿಸ್ತರ ವಿರುದ್ದ ಹೇಳಿದ್ರೆ ಇವತ್ತಿಗೆ ಕ್ಶ಼ಮೆಯಾಚಿಸ್ತಿದ್ರು. ಅಲ್ವಾ????
ಆದ್ರೆ ಕುಮರಸ್ವಾಮಿಗೆ ಗೊತ್ತು, ಹಿಂದುಗಳ ವಿರುದ್ದ ಮಾತಾಡಿದ್ರೆ ಯಾರು ಏನು ಮಾಡಲ್ಲ ಅಂತ. ಅವರ ಮತ ಬ್ಯಾಂಕುಗಳಿಗು ತೊಂದರೆ ಆಗಲ್ಲ ಅಂತ. ಇದು ಪತ್ರಕರ್ತರಾದಂತಾ ನೀವು ನಮ್ಗೆ ಅರ್ಥಾ ಮಾಡಿಸ್ಬೇಕು ಅಲ್ವಾ?? ಹಿಂದುಗಳನ್ನ ಒಂದು ಮಾಡೊದು ನಮ್ಮೆಲ್ಲರ ಕರ್ತವ್ಯ. ಇವತ್ತು ಹಿಂದುಗಳ ಮೇಲೆ ಮತಂತರಾ ನಡಿತಾ ಇದೆ. ಮುಸ್ಲಿಮರ ಮೇಲೆ ಯಾಕಿಲ್ಲ??? ಇದಕ್ಕೆಲ್ಲ ಕಾರಣ ಒಗ್ಗಟ್ಟು. ಅದನ್ನ ನಾವು ಬೆಳೆಸಬೇಕು. ಅದು ಬಿಟ್ಟು ಹಿಂದುಗಳಲ್ಲೆ ಇರುವ ಸಮಸ್ಯೆಗಳನ್ನ ಕೆದಕಿ ಕೆದಕಿ ತೆಗಿಯೊ ಪ್ರಯತ್ನ ಮಾಡಬೇಡಿ. ಯಾವ ಧರ್ಮಗಳಲ್ಲಿ ಸಮಸ್ಯೆಗಳಿಲ್ಲ?? ಹಿಂದು ಧರ್ಮದಲ್ಲಿ ಮಾತನಾಡಲಿಕ್ಕೆ ಸ್ವಾತಂತ್ರ ಇದೆ. ಬೇರೆ ಧರ್ಮದಲ್ಲಿ ಅದು ಇಲ್ಲ. ಹಿಂದು ದೇವರುಗಳನ್ನ ಅವಹೆಳನೆ ಮಾಡೊಹಾಗೆ ಬೇರೆ ಧರ್ಮದಲ್ಲಿ ನಿಮ್ಗೆ ಮಾಡೊಕಾಗುತ್ತ??? ಇವತ್ತಿನ ಈ ಪರಿಸ್ತಿತಿಗೆ ನಾವೇ ಕಾರಣ. ಇವಗಾದ್ರು ಎಚ್ಹೆತ್ಕೊಲ್ಲೊನಾ. ನಮ್ಮಲ್ಲಿ ಒಗ್ಗಟ್ಟಿರಲಿ. ಮತ್ತು ಅದನ್ನ ಬೆಳೆಸೊ ಪ್ರಯತ್ನ ಮಾಡೊಣ.
ಮೊದಲು ಹಿಂದು ಧರ್ಮದಲ್ಲಿ ಒಗ್ಗಟ್ಟನ್ನು ಮೂಡಿಸೋ ಕೆಲಸವಾಗಬೇಕು. ಅದನ್ನು ಬಿಟ್ಟು ಅದರ ನೂನ್ಯತೆಗಳನ್ನು ಎತ್ತಿ ಎತ್ತಿ ತೋರಿಸುತ್ತಾ ಇತರೆ ಧರ್ಮದವರು ಅದನ್ನೆ ಅಸ್ತ್ರವನ್ನಾಗಿ ಮಾಡಲು ಬಿಡಬಾರದು. ಎಲ್ಲರೂ ವಿರೋಧಿಸುತ್ತಿರುವುದು ಆಮಿಷದ ಮತಾಂತರ. ಹಣದ ಅಥವಾ ಇನ್ಯಾವುದೋ ಆಮಿಷವೊಡ್ಡಿ ಅಮಾಯಕರನ್ನು ದಾರಿ ತಪ್ಪಿಸುವ ಕೆಲಸವನ್ನು ನಿಲ್ಲಿಸುವ ಕಾರ್ಯ ಪತ್ರಿಕೆಯಿಂದಾಗಬೇಕು. ಯಾರೂ ಪೂರ್ವಾಗ್ರಪೀಡಿತರಾಗಬಾರದು. ಅದರಲ್ಲೂ ಸಮಾಜವನ್ನು ಸರಿ ದಾರಿಗೆ ತರುವಲ್ಲಿ ಪತ್ರಿಕೆಯ ಪಾತ್ರ ಮಹತ್ವ. ಪ್ರಜ್ನಾವಂತ ಓದುಗ ಎಲ್ಲವನ್ನು ಗಮನಿಸುತ್ತಿರುತ್ತಾನೆ.
-ganesha
Sahajavaada prakriyeyalli yathaashakti bhaagiyaagi neevu bega mataantara aagi bidi saar!:)
ಲೇಖನ ಚೆನ್ನಾಗಿದೆ
Post a Comment