Thursday, April 26, 2012

ಡಬ್ಬಿಂಗ್, ವಿಜಯ್ ಎತ್ತಿದ ಪ್ರಶ್ನೆಗಳಿಗೆ ಕೆಲವು ಉತ್ತರಗಳು...

ಡಬ್ಬಿಂಗ್ ಕುರಿತು ನಾನು ಬರೆದಿದ್ದ ಲೇಖನಕ್ಕೆ ವಿಜಯ ಕನಕೆರೆ ಪ್ರತಿಕ್ರಿಯಿಸಿದ್ದಾರೆ. ವಿಜಯ ಕನ್ನಡ ಚಲನಚಿತ್ರ ರಂಗದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡ್ತಾ ಇದ್ದಾರೆ. ಅವರ ಪ್ರತಿಕ್ರಿಯೆಗೆ ನನ್ನ ಉತ್ತರ ಇಲ್ಲಿದೆ.
ಪ್ರಿಯ ವಿಜಯ್ ಹನಕೆರೆ, ನೇರವಾಗಿ ವಿಷಯಕ್ಕೆ ಬರ‍್ತೀನಿ. ಈ ಚಾನಲ್‌ಗಳ ಟಿಆರ್‌ಪಿ-ಜಿಆರ್‌ಪಿ ಬಗ್ಗೆ ನಂಗೂ ಅಲ್ಪಸ್ವಲ್ಪ ಗೊತ್ತು. ಬೆಂಗಳೂರಲ್ಲಿ ನಂ.೧ ಚಾನಲ್ ಯಾವುದು ಗೊತ್ತಾ? ನಮ್ಮ ಉದಯ ಟಿವಿನೂ ಅಲ್ಲ, ಸುವರ್ಣನೂ ಅಲ್ಲ, ಈ ಟಿವಿ-ಜಿಟಿವಿಗಳೂ ಅಲ್ಲ. ನಂ.೧ ಸ್ಥಾನದಲ್ಲಿ ಇರೋದು ಸನ್ ಟಿವಿ. ಇದನ್ನು ಹೇಳೋದಕ್ಕೆ ಸಂಕಟ ಆಗುತ್ತೆ ಕಣ್ರೀ. ಹಾಗಂತ ನಾನು ತಮಿಳು ಭಾಷೆಯ ದ್ವೇಷಿನೂ ಅಲ್ಲ, ತಮಿಳು ಚಾನಲ್ ವಿರೋಧಿನೂ ಅಲ್ಲ. ಬರೀ ತಮಿಳರಷ್ಟೇ ಸನ್ ಟಿವಿ ನೋಡ್ತಾ ಇದ್ದಿದ್ದರೆ ಅದು ನಂ.೧ ಆಗೋದಕ್ಕೆ ಸಾಧ್ಯನೇ ಇರಲಿಲ್ಲ. ಕನ್ನಡಿಗರು ನೋಡ್ತಾರೆ. ಅದರಿಂದಾಗಿಯೇ ಅದು ನಂ.೧ ಆಗಿದೆ. ಸನ್ ಟಿವಿ ಮೊದಲ ಸ್ಥಾನಕ್ಕೆ ಬರೋದಕ್ಕೆ ಬೆಂಗಳೂರಲ್ಲಿ ತಮಿಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರೋದೇ ಕಾರಣ ಅಂತ ನೀವು ಉಡಾಫೆಯಾಗಿ ಉತ್ತರ ಕೊಟ್ಟುಬಿಡಬಹುದು. ಆದರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಸಾರವಿರುವ ಪತ್ರಿಕೆಗಳ ರೇಟಿಂಗು ತೆಗೆದುಕೊಳ್ಳಿ.. ಅಲ್ಲಿ ತಮಿಳು ಪತ್ರಿಕೆ ಯಾವತ್ತಿಗೂ ನಂ.೫ರೊಳಗೆ ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಚಾನಲ್ ವಿಷಯದಲ್ಲಿ ಯಾಕೆ ಹೀಗೆ? ಕರ್ನಾಟಕದಲ್ಲಿ ಸನ್ ಟಿವಿಯೋ, ಜೆಮಿನಿ ಟಿವಿಯೋ ಪ್ರವರ್ಧಮಾನಕ್ಕೆ ಬಂದರೆ, ಅದನ್ನು ಕನ್ನಡಿಗರೂ ನೋಡುವುದನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ಸಿನಿಮಾ-ಟಿವಿ ಇಂಡಸ್ಟ್ರಿಯವರಿಗೇನು ಬೇಜಾರಾಗೋದಿಲ್ಲ. ತಮಿಳಿನ ೩ ಸಿನಿಮಾ ನೋಡಿ ಮೆಚ್ಚಿಕೊಂಡೆ, ಮಗಧೀರ ಕರ್ನಾಟಕದಲ್ಲಿ ಯಶಸ್ವಿಯಾಗಿದ್ದಕ್ಕೆ ಸಂತೋಷವಾಗಿದೆ ಎಂದು ನಿಮ್ಮ ಸಿನಿಮಾನಟರುಗಳೇ ಬಹಿರಂಗ ಹೇಳಿಕೆ ಕೊಡುತ್ತಾರೆ. ಬೇರೇನೂ ಬೇಡ, ನಿಮ್ಮ ಸಿನಿಮಾ ತಯಾರಾಗುವ ಸೆಟ್ ಗಳಲ್ಲೂ ಕನ್ನಡಕ್ಕಿಂತ ಹೆಚ್ಚು ತಮಿಳೇ ಕೇಳಿಸ್ತಾ ಇರುತ್ತೆ. ಯಾವುದಕ್ಕೂ ನಿಮಗೆ ಆತ್ಮಾಭಿಮಾನ ಕೆರಳೋದೇ ಇಲ್ಲ. ಒಂದು ಧಾರಾವಾಹಿಯನ್ನಾಗಲೀ, ಚಿತ್ರವನ್ನಾಗಲೀ ನಿರ್ದೇಶನ/ನಿರ್ಮಾಣ ಮಾಡದೇ ಇರುವ ನೀವು.... ಎಂದು ನನಗೆ ಸಂಬೋಧಿಸಿದ್ದೀರಿ. ನಾನು ಒಬ್ಬ ವೀಕ್ಷಕನಾಗಿ ನನಗೇನು ಬೇಕು ಎಂದು ಕೇಳುವ ಹಕ್ಕು ಇಲ್ಲವೇ? ಭತ್ತ ಬೆಳೆಯಲಾಗದವನು ಅನ್ನ ತಿನ್ನಲೇಬಾರದಾ? ನಾನೊಬ್ಬ ಗ್ರಾಹಕ, ನನಗೆ ಬೇಕಾದ್ದನ್ನೇ ನಾನು ಕೇಳುತ್ತೇನೆ. ಇದು ಸಾಮಾನ್ಯ ಜ್ಞಾನ. ಇನ್ನು ನೀವು ಹಸಿವಿನ ವಿಷಯ ಮಾತಾಡಿದ್ದೀರಿ. ಹಸಿವು ಏನೆಂಬುದು ನನಗೂ ಗೊತ್ತು. ಈ ನೆಲದ ರೈತನ, ಕೂಲಿ ಕಾರ್ಮಿಕರ, ದಲಿತರ, ಬಡವರ ಹಸಿವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದೇನೆ. ನಮ್ಮ ರೈತನನ್ನು ಬಲವಂತವಾಗಿ, ಅವನಿಗೆ ಗೊತ್ತೇ ಇಲ್ಲದಂತೆ ಜಾಗತೀಕರಣದ ಸ್ಪರ್ಧೆಗೆ ದೂಡಲಾಯಿತು. ಮೂಡಿಗೆರೆಯ ಸಣ್ಣ ಕಾಫಿ ಬೆಳೆಗಾರ ಮತ್ತು ಅವನ ಬಳಿ ಕೂಲಿ ಮಾಡುವವರು ಬ್ರೆಜಿಲ್ ನ ದೊಡ್ಡ ಕಾಫಿ ಬೆಳೆಗಾರರೊಂದಿಗೆ ಅವರಿಗೇ ಗೊತ್ತಿಲ್ಲದಂತೆ ಸ್ಪರ್ಧೆ ಮಾಡಬೇಕಾಯಿತು. ಅರಸೀಕೆರೆಯ ತೆಂಗು ಬೆಳೆಗಾರ ಶ್ರೀಲಂಕಾದ ಬೆಳೆಗಾರನೊಂದಿಗೆ ಸ್ಪರ್ಧೆ ಮಾಡಿದ. ಆದರೆ ಯಾವತ್ತೂ ಮಾರುಕಟ್ಟೆಗೆ ನನ್ನ ಕಾಫಿಯಷ್ಟೇ ಬರಬೇಕು, ಬ್ರೆಜಿಲ್ ನ ಕಾಫಿ ಬರಕೂಡದು, ಬಂದರೆ ನಾನು ಅದನ್ನು ನನ್ನ ತೋಳ್ಬಲದಿಂದ ತಡೆಯುತ್ತೇನೆ ಎಂದು ರೈತ ಹೇಳಲಿಲ್ಲ. ಯಾಕೆಂದರೆ ಅವನಿಗೆ ಸಿನಿಮಾ ನಟರಿಗೆ ಇರುವ ಫ್ಯಾನ್ ಫಾಲೋಯಿಂಗ್ ಇಲ್ಲ. ದುಡ್ಡು ಮೊದಲೇ ಇಲ್ಲ, ತೊಡೆತಟ್ಟಿ ಯುದ್ಧಕ್ಕೆ ನಿಂತರೆ ಅವತ್ತಿನ ಕೂಳೂ ಇಲ್ಲದಂತಾಗುತ್ತದೆ ಎಂಬ ಭೀತಿ. ನನ್ನ ತೇಜಸ್ವಿ ಡಾಕ್ಯುಮೆಂಟರಿ ಸರಣಿ ೮ ಕಂತುಗಳಲ್ಲಿ ಪ್ರಸಾರವಾಯಿತು. ಇನ್ನಷ್ಟು ಕಂತು ಮಾಡಬಹುದಿತ್ತು ನಿಜ. ಒಂದು ವೇಳೆ ಇದು ಯಶಸ್ವಿಯಾಗಿಲ್ಲ ಎಂದು ನಿಮಗನ್ನಿಸಿದ್ದರೆ, ಅದನ್ನು ಜನರು ಹೆಚ್ಚು ನೋಡಿಲ್ಲ ಎಂದನಿಸಿದ್ದರೆ ಅದಕ್ಕೆ ನಾನೇ ಹೊಣೆ. ಜನರನ್ನು ಹೊಣೆಯಾಗಿಸುವುದು ಸರಿಯಲ್ಲ. ಚಿಗುರಿದ ಕನಸು, ಕಲ್ಲರಳಿ ಹೂವಾಗಿ ಸಿನಿಮಾಗಳು ವ್ಯಾವಹಾರಿಕವಾಗಿ ಯಶಸ್ವಿಯಾಗಲಿಲ್ಲ. ಇದಕ್ಕೆ ಬೇರೆಯದೇ ತೆರನಾದ ಆತ್ಮಶೋಧನೆ ಆಗಬೇಕು. ನೋಡುಗರ ಅಭಿರುಚಿಯನ್ನು ಕೆಡಿಸಿದವರು ನಾವು. ಅದಕ್ಕೆ ಜನರನ್ನು ದೂರಿ ಪ್ರಯೋಜನವೂ ಇಲ್ಲ. ಜನರು ಏನನ್ನು ಬಯಸುತ್ತಾರೋ ಅದನ್ನು ಕೊಡುತ್ತೇವೆ ಎಂಬುದು ಯಾವುದೇ ಸಮೂಹ ಮಾಧ್ಯಮದ ನಿಲುವಾಗಬಾರದು. ಜನರಿಗೆ ಏನು ಅಗತ್ಯವಿದೆಯೋ ಅದನ್ನು ಕೊಡಬೇಕು. ನಾವು ಅಭಿರುಚಿಯನ್ನು ಬೆಳೆಸಲಿಲ್ಲ. ಅದರ ಫಲವನ್ನು ಈಗ ಉಣ್ಣುತ್ತಿದ್ದೇವೆ, ಅಷ್ಟೆ. ವಿಜಯ್, ಕನ್ನಡ ನಿಮ್ಮ ಸ್ಟ್ರಾಟಜಿ ಅಂತ ಹೇಳಿದ್ದೀರಿ. ಈ ಥರದ ಮಾತುಗಳನ್ನು ಆಡುವ ಮುನ್ನ ಹತ್ತು ಸಲ ಯೋಚನೆ ಮಾಡಿ. ಕನ್ನಡ ನಮ್ಮ ಬದುಕು ಕಣ್ರೀ, ನಮ್ಮ ಸಂಸ್ಕೃತಿ, ಅದು ನಮ್ಮ ಭಾವ. ಕನ್ನಡವನ್ನು ಸ್ಟ್ರಾಟಜಿ ಮಾಡಿಕೊಳ್ಳುವಷ್ಟು ಹರಾಮಿಕೋರತನ ನನಗಂತೂ ಇಲ್ಲ. ನೀವು ಮಣಿಪುರಿಗಳ ಬಗ್ಗೆ ಯಾಕೆ ಬರೆದಿಲ್ಲ ಅಂತ ಕೇಳ್ತಾ ಇದ್ದೀರಿ. ಕರವೇ ನಲ್ನುಡಿಯಲ್ಲೇ ನಾನು ಮಣಿಪುರಿಗಳ ಕುರಿತು ಸುದೀರ್ಘ ಲೇಖನ ಬರೆದಿದ್ದೇನೆ. ಬೇಕಿದ್ದರೆ ಆ ಸಂಚಿಕೆ ನಿಮಗೂ ಕಳಿಸ್ತೇನೆ. ಕನ್ನಡವನ್ನು ಪ್ರೀತಿಸುವುದು ಅಂದರೆ ಇತರ ಭಾಷೆಗಳನ್ನು ದ್ವೇಷಿಸುವುದು ಎಂದಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ಭಾಷೆ, ರಾಜ್ಯಗಳು ಸಮಾನವಾದ ಅಧಿಕಾರ, ಹಕ್ಕು ಮತ್ತು ಗೌರವವನ್ನು ಪಡೆಯಬೇಕು ಎಂಬುದಷ್ಟೇ ನಮ್ಮ ನಿಲುವು. ನಿಮಗೆ ಐದು ಸಾವಿರ ಮಂದಿ ಕಾರ್ಮಿಕರ ಹೊಟ್ಟೆ ಹಸಿವಿನ ಚಿಂತೆ. ನನಗೆ ಆರು ಕೋಟಿ ಕನ್ನಡಿಗರ ಜ್ಞಾನದ ಹಸಿವಿನ ಚಿಂತೆ. ನಮ್ಮ ಮಕ್ಕಳಿಗೆ ಡಿಸ್ಕವರಿ, ಅನಿಮಲ್ ಪ್ಲಾನೆಟ್ ಇತ್ಯಾದಿಗಳೆಲ್ಲವೂ ಕನ್ನಡದಲ್ಲೇ ಸಿಗುವಂತಾಗಬೇಕು, ತಮಿಳಿಗರಿಗೆ ಸಿಕ್ಕ ಹಾಗೆ. ಅದಕ್ಕೆ ನಿಮ್ಮ ಸಿನಿಮಾ ಇಂಡಸ್ಟ್ರಿಯೇ ದೊಡ್ಡ ಅಡ್ಡಿ, ನಿಮ್ಮ ಹಸಿವೇ ಅಡ್ಡಿ. ಕನ್ನಡ ಮತ್ತು ಕನ್ನಡ ಸಿನಿಮಾ ಎಂಬ ಎರಡು ಆಯ್ಕೆಗಳು ನನ್ನ ಮುಂದಿದ್ದರೆ ನಾನು ಕನ್ನಡವನ್ನೇ ಆಯ್ದುಕೊಳ್ಳುತ್ತೇನೆ. ಕನ್ನಡ ಸಿನಿಮಾಗೆ ನೂರು ವರ್ಷಗಳ ಇತಿಹಾಸವೂ ಇಲ್ಲ, ಆದರೆ ಕನ್ನಡಕ್ಕೆ, ಕನ್ನಡ ಸಂಸ್ಕೃತಿಗೆ ೨೦೦೦ ವರ್ಷಗಳ ಇತಿಹಾಸವಿದೆ. ಸಂಸ್ಕೃತಿಯ ಬಗ್ಗೆ ಮಾತನಾಡುವವರಿಗೆ ಈ ವಿವೇಕ ಇದ್ದರೆ ಒಳ್ಳೆಯದು. ಈಗ ಹೇಳಿ ವಿಜಯ್, ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಮಿಂಡನ ಚಿಂತೆ ಅನ್ನೋ ಗಾದೆ ನಿಮಗೇ ಹೆಚ್ಚು ಅನ್ವಯವಾಗುತ್ತೆ ಅಲ್ವಾ? (ಕ್ಷಮಿಸಿ ಈ ಥರದ ಗಾದೆಗಳನ್ನು ನಾನು ನನ್ನ ಬರೆಹದಲ್ಲಿ ಬಳಸೋದಿಲ್ಲ. ನೀವು ಹೇಳಿರೋದ್ರಿಂದ, ಮತ್ತು ಅದು ನಿಮಗೇ ಹೆಚ್ಚು ಅನ್ವಯಿಸಿದ್ದರಿಂದ ಈ ಪ್ರಶ್ನೆ ಕೇಳಬೇಕಾಯಿತು. ಪ್ರೀತಿ ಇರಲಿ ನಮಸ್ಕಾರಗಳು.

Wednesday, April 4, 2012

ಕೊಳೆತ


ಕೊಳೆಯುವಿಕೆ ಸಾಂಕ್ರಾಮಿಕ
ಎಲ್ಲ ಕೊಳೆಯುತ್ತದೆ
ಗಿಡ, ಮರ, ಹೂವು, ಹಣ್ಣು, ಅನ್ನ
ಪ್ರೀತಿ, ಕನಸು, ಮೋಹ, ಸಂಬಂಧ
ಮಾತು, ನಗು, ಮೌನ, ಶಬ್ದ
ಘಮಘಮಿಸುವ ಎಲ್ಲವೂ

ನಿಶ್ಚಲ ನಿನ್ನೆಗಳು
ದೀರ್ಘಗೊಳ್ಳುವ ರಾತ್ರಿಗಳು
ಅಬ್ಬೇಪಾರಿ ಹಗಲು, ಸಂಜೆಯ ಹಳದಿ ಸೂರ್ಯ
ಈ ತಂಗಾಳಿ, ಆ ಸುಡುಗಾಳಿ
ಎಲ್ಲವೂ ಕೊಳೆಯುತ್ತವೆ

ಕಟ್ಟಿಕೊಂಡ ಕೋಟೆಕೊತ್ತಲುಗಳು
ಗಡಿರೇಖೆಗಳು
ಬಾಗಿಲು, ಚಿಲಕ, ಬೀಗ
ಎಲ್ಲ ಎಲ್ಲ ಕೊಳೆಯುತ್ತವೆ.

ನಿನ್ನೆ ತಾನೇ ಕುಣಿದ ನವಿಲ ರೆಕ್ಕೆಗಳೂ ಕೊಳೆಯುತ್ತವೆ
ದೇಹ ಕೊಳೆಯುತ್ತದೆ, ಮನಸ್ಸು ಕೊಳೆಯುತ್ತದೆ
ಆದರೆ ಆತ್ಮ ಕೊಳೆಯಲಾಗದು;
ಹೀಗಂತ ಕೇಳಿದ ನೆನಪು

ಒಮ್ಮೊಮ್ಮೆ ಆತ್ಮವೂ ಪಿತಿಪಿತಿ
ಅದರ ಸುತ್ತಲೂ ನೊಣ ಮುತ್ತುತ್ತದೆ

ಆವಾಹಿಸಿಕೊಂಡಷ್ಟೇ ವೇಗವಾಗಿ ವಿಸರ್ಜಿಸಿಬಿಡು-
ಬುದ್ಧಿಯೂ ಕೊಳೆಯುತ್ತದೆ
ಎನ್ನುತ್ತಾರೆ ಬುದ್ಧಮಾರ್ಗಿಗಳು
ಆವಾಹನೆ ಸುಲಭ, ವಿಸರ್ಜನೆ ಕಷ್ಟ ಕಷ್ಟ

ವರ್ಣ ಕೊಳೆತಿದೆ, ಧರ್ಮ ಕೊಳೆತಿದೆ
ತರ್ಕ, ಸಿದ್ಧಾಂತಗಳು ಕೊಳೆತಿವೆ
ಎದೆ ಬಗೆದು ತೋರಿಸಿದ ದೇವರ ಪಟಗಳೂ ಕೊಳೆತಿವೆ
ಕೊಳೆತ ಎಲ್ಲದಕ್ಕೂ ಹೆಂಡದ ರುಚಿ, ಅಮಲು

ಯುಗವನ್ನೇ ಹೂತುಬಿಡಬೇಕು
ಕೊಳೆತದ್ದೆಲ್ಲ ಗೊಬ್ಬರವಾಗಬೇಕು
ಹೊಸ ಹಾಡು ಹುಟ್ಟಬೇಕು
ನವಿಲ ತೊಡೆಗಳಿಗೆ ಹೊಸ ಚೈತನ್ಯ ಬರಬೇಕು