Monday, February 20, 2012
ದಾಕ್ಷಾಯಿಣಿಯ ನೆನೆದು...
ಮಹಾಕೋಪಕ್ಕೆ ರೂಪಕ ಶಿವ
ಮೂರನೇ ಕಣ್ಣು ತೆರೆದನೆಂದರೆ ಜಗತ್ತು ಸರ್ವನಾಶ
ಹಾಗಂತ ನಂಬಿಕೆ
ಸಿಟ್ಟು ಬಂದಾಗ ತಾಂಡವನೃತ್ಯಗೈಯುವ ಶಿವ
ನಿಂತ ನೆಲವೇ ಅವನಿಗೆ ದಕ್ಷಬ್ರಹ್ಮನ ಯಜ್ಞಕುಂಡ
ಕುಣಿಯುವ ಕಾಲಿಗೆ ಪದೇ ಪದೇ ಎಡತಾಕಿದ್ದು
ಬ್ರಾಹ್ಮಣ್ಯದ ಬೆಂಕಿಗೆ ಸಿಕ್ಕು ಚಿಟಪಟನೆ ಬೆಂದುಹೋದ
ದಾಕ್ಷಾಯಿಣಿಯ ನೆನಪು
ನಡುಗುವ ತೊಡೆಗಳಲ್ಲಿ ಅವಳ ಆತ್ಮಸಂಚಾರ
ಇಕೋ, ಮೂರನೇ ಕಣ್ಣನೂ ತೆರೆದುಬಿಟ್ಟ
ಆ ಕಣ್ಣೋ ಲಾವಾರಸ ಸುರಿಸುವ ಅಗ್ನಿಕುಂಡ
ಅಲ್ಲಿ ದಾಕ್ಷಾಯಿಣಿ ಬೆಳಕಾಗಿ ಹರಿಯುತ್ತಾಳೆ
ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ
ಪಂಚ ಪತಿವ್ರತೆಯರ ಪಟ್ಟಿಯಲ್ಲಿ ಇಲ್ಲದ ಹೆಸರು ದಾಕ್ಷಾಯಿಣಿ
ಹೇಗೆ ಸೇರಿಸಿಯಾರು?
ಅಪ್ಪನ ಗೊಡ್ಡು ಕಂದಾಚಾರ ಮೀರಿ ಅಂತರ್ಜಾತೀಯ ಮದುವೆಯಾದಳು
ಸ್ಮಶಾನವಾಸಿಯನ್ನು ಕೂಡಿ ಅಪ್ಪನ ಬ್ರಾಹ್ಮಣ್ಯದ ಸೊಕ್ಕನ್ನು ಮುರಿದವಳು
ಗಂಡನ ಮಾತು ಮೀರಿ ಅಪ್ಪನ ಯಜ್ಞ ನೋಡಲು ಬಂದವಳು
ಬಂದ ತಪ್ಪಿಗೆ ಅಪಮಾನಿತಳಾಗಿ ಯಜ್ಞ ಕುಂಡದಲ್ಲೇ ಬಿದ್ದು ಸತ್ತವಳು
ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ!
ಪುರುಷಾಹಂಕಾರ ಮೆಟ್ಟಿ ನಿಂತ ತಪ್ಪಿಗೆ
ಧೂರ್ತ ಆಚಾರಗಳನ್ನು ಧಿಕ್ಕರಿಸಿದ ತಪ್ಪಿಗೆ
ಅವಳಿಗೆ ಪೂಜೆಯಿಲ್ಲ, ಪುರಸ್ಕಾರವಿಲ್ಲ
ಗಂಗೆ-ಗೌರಿಯರ ಮಧ್ಯೆ ಇವಳಿಗೊಂದು ಜಾಗವೇ ಇಲ್ಲ
ಶಿವ ಕುಣಿಯುತ್ತಲೇ ಇದ್ದಾನೆ
ಎದೆಯಲ್ಲಿ ದಾಕ್ಷಾಯಿಣಿಯ ಪೂರ್ಣಾಹುತಿಯ ಬೆಂಕಿ
ರುದ್ರತಾಂಡವ ನಿಲ್ಲಿಸಲು ತಾಯ್ಗಂಡ ದೇವತೆಗಳು
ಮೇನಕೆಯರನ್ನು ಬೆತ್ತಲೆ ನಿಲ್ಲಿಸಬಹುದು
ದೇವತೆಗಳ ವ್ಯಭಿಚಾರದ ನಡುವೆ
ದಾಕ್ಷಾಯಿಣಿಯ ಮರ್ಯಾದಾ ಹತ್ಯೆಗಳು ನಡೆಯುತ್ತಲೇ ಇರುತ್ತದೆ
Subscribe to:
Post Comments (Atom)
1 comment:
ಬಹಳ ಅದ್ಭುತ ಕವಿತೆ ಸರ್. ದಾಕ್ಷಾಯಿಣಿ ಮೊತ್ತಮೊದಲ ಮರ್ಯಾದಾ ಹತ್ಯೆ ಎನ್ನುವುದು, ಕವಿತೆಯ ತುಂಬ ಬಳಸಿದ ಇಮೇಜ್ಗಳು, ವ್ಯಾಖ್ಯಾನ.. ತುಂಬ ಗಾಢವಾಗಿ ಆವರಿಸಿಕೊಂಡಿತು.
ಥ್ಯಾಂಕ್ಸ್.
ವಿಕಾಸ್ ನೇಗಿಲೋಣಿ
Post a Comment