Sunday, June 19, 2011

ನಿಶ್ಯಬ್ದದ ಲಯ


-೧-

ನಿಶಬ್ದವಾಗಿದೆ ಈ ರಾತ್ರಿ
ಕಾಂಪೌಂಡಿನ ಗೋಡೆಗೆ
ಕೋಲು ಬಡಿದು ದಿನವೂ
ಸದ್ದು ಮಾಡುತ್ತಿದ್ದ
ಗೂರ್ಖ ಇಂದೇಕೋ ಬಂದಿಲ್ಲ,
ಭಯಂಕರ ಚಳಿ
ಅವನ ಸುಂಯ್ಯನೂದುವ
ವಿಷಲ್ಲಿಗೂ ತಾಗಿರಬೇಕು,
ಆಗೀಗ ಮುರುಗುಡುತ್ತಿದ್ದ
ಹಕ್ಕಿಗೂಡೂ
ಸದ್ದಿಲ್ಲದೆ ನಿಂತುಬಿಟ್ಟಿದೆ ಇಂದು,
ಜೀ...ಎಂದು ಬಿಡುವಿಲ್ಲದೆ
ಜೀವತೂರುತ್ತಿದ್ದ ಜೀರುಂಡೆಯ
ಗಂಟಲೂ ಕಟ್ಟಿರಬೇಕು,
ಬಿಡದೆ ತೊಟ್ಟಿಕ್ಕುತ್ತಿದ್ದ
ಆಕಾಶವೂ ಕಂಬಳಿಹೊದ್ದು
ಬೆಚ್ಚಗೆ ಮಲಗಿಬಿಟ್ಟಿದೆ.


-೨-

ನಿಶ್ಯಬ್ದವಾಗಿದೆ ರಾತ್ರಿ
ಶಬ್ದಗಳೆಲ್ಲ ಮೌನವಾಗಿ
ನಿರಾಕಾರ ಮೌನವೆ
ಗೂರ್ಖನಾಗಿ, ಹಕ್ಕಿಯಾಗಿ,
ಜೀರುಂಡೆಯಾಗಿ, ಮಳೆಹನಿಯಾಗಿ
ಹೀಗೆ
ನನ್ನೊಳಗೆ ನಾನೆ
ಮಾತಾಗಿ
ರಾತ್ರಿ ನಿಶ್ಯಬ್ದವಾಗಿದೆ.

-೩-

ಈ ನಿಶ್ಯಬ್ದದಲಿ
ಏಕಾಂಗಿ ನಾನು
ಮಾತಿಗಿಳಿಯುತ್ತೇನೆ ನಿನ್ನೊಡನೆ
ದೂರದಲ್ಲೆಲ್ಲೋ
ಗೂರ್ಖನ ಲಾಠಿಯ ಸದ್ದು
ಹತ್ತಿರ ಹತ್ತಿರವಾದಂತೆ
ಗೂಡಿನ ಹಕ್ಕಿಮರಿಗಳು
ತೂಗುವ ತೊಟ್ಟಿಲು
ಆಕಳಿಸಿ ಮೈಮುರಿದು
ಗಂಟಲು ಸರಿಮಾಡಿಕೊಳ್ಳುವ ಜೀರುಂಡೆ
ಎಚ್ಚರವಾಗಿಬಿಟ್ಟ ಆಕಾಶವೂ...

ಒಂದರೊಳಗೊಂದು
ಸೇರಿಹೋದ ಸದ್ದಿನ
ನಡುವೆಯೆ ನಾನು-ನೀನು
ಕೂಡೋಣ; ಲಯವಾಗೋಣ.

No comments: