Sunday, November 14, 2010

ಗರ್ಭದ ಚೀಲಕ್ಕೆ ವಾಪಾಸು ಹೋಗಿ...


-೧-

ಮೊನ್ನೆ ತಾನೆ
ಬಿಸಿ ಕುಕ್ಕರ್‌ಗೆ ತಾಗಿ
ಸುಟ್ಟುಕೊಂಡಿತು ಕಾಲು
ಒಂದಿಂಚು ಗಾಯ
ಉರಿ ಕಿತ್ತು ಬೊಬ್ಬೆ ಬಂದು
ಈಗ ಕಪ್ಪಗೆ ಒಣಗಿದೆ

ಬೇಡ ಬೇಡವೆಂದರೂ
ಕೈ ಅಲ್ಲಿಗೇ ಹೋಗಿ
ಚರ್ಮದ ಚಕ್ಕಳ ಸುಲಿಯುತ್ತದೆ
ತಳದ ಮಾಂಸ
ಬಿಳಿಬಿಳಿಯಾಗಿ
ಮಿರಿಮಿರಿ ಮಿಂಚುತ್ತದೆ

ಹೀಗೆ
ಸುಟ್ಟುಕೊಳ್ಳೋದು, ಚುಚ್ಚಿಕೊಳ್ಳೋದು
ಕೆರೆದುಕೊಳ್ಳೋದು, ಸುಲಿದುಕೊಳ್ಳೋದು
ಮಾಂಸವನ್ನೇ ತರಿದು ಎಸೆಯೋದು
ಆಗಾಗ ನಡೆಯುತ್ತಿರುತ್ತದೆ

ಜತೆಗೆ ಅವರಿವರು
ಇರಿದಿದ್ದು, ಕೆರೆದಿದ್ದು, ಗುದ್ದಿದ್ದು, ಕತ್ತರಿಸಿದ್ದು...
ಆ ಗಾಯಗಳೂ ಹಸಿಹಸಿ
ಮಾಯುವುದಿಲ್ಲ
ಒಮ್ಮೊಮ್ಮೆ ಮಾಯಲು ನಾನೇ ಬಿಡುವುದಿಲ್ಲ


-೨-

ಗುಲಾಬಿಯ ಜತೆಗೆ ಮುಳ್ಳೂ ಇರುತ್ತೋ ಮಾರಾಯ
ಎಂಬ ಪಾಠ ಕಲಿತದ್ದು ತುಂಬ ಹಿಂದೆ
ಎಲ್ಲ ಪಠ್ಯಗಳು ಓದಿಗಾಗಿ
ಅನುಸರಣೆ ಕಷ್ಟಕಷ್ಟ

ಮೊದಲೆಲ್ಲ ನೋವಿಗೊಂದು
ಫಾರ್ಮುಲಾ ಇತ್ತು
‘ಅದಕ್ಕೆ ಇದಾದರೆ ಇದಾಗುತ್ತೆ ಎಂದು.
ಈಗ ಹಾಗಿಲ್ಲ
ಅಕಾರಣವಾಗಿ ಕಾರಣಗಳು
ಹುಟ್ಟಿಕೊಳ್ಳುತ್ತವೆ
ಹದ್ದೊಂದು ಎಗರಿ ಬಂದು
ತಲೆ ಚುಚ್ಚಿ
ಮಿದುಳ ಬಳ್ಳಿಯ ಹರಿದು ಹೋಗಿದ್ದಕ್ಕೆ
ಕಾರಣವೆಲ್ಲಿ ಹುಡುಕೋದು?

-೩-

ಕತ್ತರಿಸಿದ್ದು ಮಾಂಸವನ್ನು
ಸುಟ್ಟಿದ್ದು ಚರ್ಮವನ್ನು
ಆದರೆ
ಒಳಗಿನ ಅಹಂಕಾರ ಸುಡಬೇಕು
ಕತ್ತರಿಸಿ ಬೇಯಿಸಿ
ನಾನೇ ತಿಂದು ಕರಗಿಸಬೇಕು

ಹಾಗೆ ನಮ್ಮದೇ ಅಹಂಕಾರವನ್ನು
ಸುಟ್ಟು ತಿನ್ನುವುದು
ಸುಲಭವಲ್ಲ

ಅಹಂಕಾರವನ್ನು ಸುಡುವುದೆಂದರೆ
ಅಸ್ಮಿತೆಯನ್ನೇ ಪಣಕ್ಕಿಟ್ಟು
ಬೆತ್ತಲಾಗೋದು
ಬೋಧಿವೃಕ್ಷವೇ ಆಗಿ ಬಿಡೋದು
ಬುದ್ಧನನ್ನೇ ನಗಿಸಿಬಿಡೋದು

-೪-

ಸೆಗಣಿಯ ಉಂಡೆ ಮಾಡಿ
ಅದರ ಮೇಲೊಂದು ದೀಪ ಉರಿಸಿ
ಹೊಕ್ಕುಳ ಮೇಲಿಟ್ಟು
ಮಲಗಿದ್ದೇನೆ;
ಜಾರಿದ ಬಟ್ಟಿ ಸ್ವಸ್ಥಾನಕ್ಕೆ
ಮರಳಲೆಂದು

ದೀಪದ ಬೆಳಕಿಗೆ
ಕಣ್ಣು ಕೀಲಿಸಿದ್ದೇನೆ
ಅದು ಒಳಗೊಳಗೆ ತುಂಬಿಕೊಳ್ಳುವಾಗ
ಹೊಕ್ಕುಳಲ್ಲಿ ರಕ್ತಗಾಯದ ಅನುಭವ

ತಡವಿದ ಕೈಗೆ ತೊಡರಿದ್ದು
ಹೊಕ್ಕುಳಬಳ್ಳಿ
ಈಗಷ್ಟೆ ಹುಟ್ಟಿದ ಕೂಸಿನ
ಕಣ್ಣುಗಳು,
ಅದರ ಬೆರಳುಗಳು

-೫-

ಹೀಗೆ
ಕೈಗೆ ತೊಡರಿದ
ಹೊಕ್ಕುಳ ಬಳ್ಳಿ ಧರಿಸಿ
ಮತ್ತೆ ಬಂದ ದಾರಿಯಲ್ಲೇ
ಹಿಂದಿರುಗಿ ಹೋಗೋದು ಸಾಧ್ಯವೇ?

ವಾಪಾಸು ಹೋಗಿ
ಆ ಅಬೋಧ ಕಣ್ಣುಗಳಲ್ಲಿ
ಎಲ್ಲವನ್ನೂ ಹೊಸತಾಗಿ ನೋಡೋದು...
ಆ ಎಳೇ ಬೆರಳುಗಳಿಂದ
ಎಲ್ಲವನ್ನೂ ಮತ್ತೆ ಸ್ಪರ್ಶಿಸೋದು...

ಮತ್ತೂ ಹಿಂದಕ್ಕೆ ಹೋಗಿ
ಗರ್ಭದ ಚೀಲದಲ್ಲಿ
ಬೆಚ್ಚಗೆ, ಗಮ್ಮನೆ
ಈಜಾಡಿ
ಮಲಗಿ, ನಿದ್ದೆ ಹೋಗೋದು..

ಎಲ್ಲ ಗಾಯಗಳಿಂದ, ವ್ರಣಗಳಿಂದ
ಕಲೆಗಳಿಂದ
ಖಾಯಿಲೆಗಳಿಂದ
ಮುಕ್ತವಾಗೋದು...

ಯಾರು ಹೇಳಿದರು
ಬೆಳಕೆಂದರೆ ಚೈತನ್ಯವೆಂದು?
ಚೈತನ್ಯ ಇರೋದು
ಗರ್ಭವೆಂಬೋ
ಮಾಂಸದ, ರಕ್ತದ
ಮಾಯಾ ಚೀಲದಲ್ಲಿ
ಅದರೊಳಗಿನ ಕತ್ತಲಲ್ಲಿ

-೬-

ಅದಕ್ಕಾಗಿಯೇ
ಹೊಕ್ಕುಳ ಮೇಲೆ
ದೀಪವಿಟ್ಟುಕೊಂಡು
ಬೆಳಕ ದಿಟ್ಟಿಸುತ್ತಿದ್ದೇನೆ
ಕತ್ತಲ ಸಾಕ್ಷಾತ್ಕಾರಕ್ಕಾಗಿ
ಬೆತ್ತಲಾಗಲಿಕ್ಕಾಗಿ, ಬಯಲಾಗಲಿಕ್ಕಾಗಿ

2 comments:

Ashwini Dasare said...

It made my day :) thanks so much for the wonderful lines

Ashwini Dasare said...

It made my day :) thank you so much for the wonderful lines.