Wednesday, October 20, 2010

ಹುಡುಕುತ್ತಿದ್ದೇನೆ...



ಹುಡುಕುತ್ತಾ ಇದ್ದೇನೆ ನಿನ್ನನ್ನು
ಸಂಜೆಯ ಹಳದಿ ಸೂರ್ಯನ ತಂಪು ಬಿಸಿಲಿನಲ್ಲಿ
ಬೋಧಿವೃಕ್ಷದ ಕೆಳಗೆ ಬಿದ್ದ ಹಸಿರು ಎಲೆಗಳಲ್ಲಿ
ಜೋಲಿಯಲ್ಲಿ ಪವಡಿಸಿದ ಹಸುಗೂಸಿನ ಪಿಳಿಪಿಳಿ ಕಣ್ಣುಗಳಲ್ಲಿ

ನೀನು ಮಗುವಿನಂಥವಳು
ನೆತ್ತಿಯಿನ್ನೂ ಕೂಡಿಲ್ಲ
ಹಲ್ಲಿಲ್ಲ; ಬೊಚ್ಚುಬಾಯಿ
ಹೊಕ್ಕುಳ ಬಳ್ಳಿ ಕೊಯ್ದ ಗಾಯವಿನ್ನೂ ಮಾಸಿಲ್ಲ

ಯಾವುದೋ ಭೀತಿಗೆ
ಕಿಟಾರನೆ ಕಿರುಚಿದಾಗಲೆಲ್ಲ
ಓಡೋಡಿ ಬಂದು, ಸಾವರಿಸಿ
ಬಿಗಿದಪ್ಪಿ, ಮಡಿಲ ತುಂಬಿಕೊಳ್ಳುತ್ತೇನೆ
ನಿನ್ನ ಬಿಸಿಮೈ ಶಾಖಕ್ಕೆ ಇಷ್ಟಿಷ್ಟೇ
ಕರಗುತ್ತೇನೆ, ಕರಗುತ್ತಲೇ ಇರುತ್ತೇನೆ

ಒಮ್ಮೊಮ್ಮೆ ನೀನು
ರಚ್ಚೆ ಹಿಡಿದು, ನನ್ನೆದೆಯ ಮೇಲೆ
ನಿನ್ನ ಪುಟ್ಟ ಪಾದಗಳನ್ನಿಟ್ಟು
ತಲೆಗೂದಲು ಎಳೆದು ಕಿತ್ತು
ಕಣ್ಣಗುಡ್ಡೆಗೆ ಮುದ್ದು ಬೆರಳುಗಳಿಂದ ಚುಚ್ಚಿ
ಹಸಿ ಉಗುರಿನಿಂದ ಗೀರುವೆ
ಖಾಲಿ ಉಡಿಯನ್ನು ಬಡಿದುಕೊಂಡು
ಚೀತ್ಕರಿಸುವೆ

ಒಂದು ಪುಟ್ಟ ತಬ್ಬುಗೆಗೆ
ನೆತ್ತಿಗೆ ಇಟ್ಟ ಸಣ್ಣ ಮುತ್ತಿಗೆ
ಮತ್ತೆ ಲಲ್ಲೆಗೆರೆದು
ಮುಸುಮುಸು ತೋಳೊಳಗೆ ಸೇರಿಹೋಗುವೆ

ಮಗಳೇ,
ಹುಡುಕುತ್ತಲೇ ಇದ್ದೇನೆ ನಿನ್ನನ್ನು
ನಿನ್ನದೇ ಕಣ್ಣುಗಳ ಆಳದಲ್ಲಿ
ಅದರ ಅಂತರಾಳದಲ್ಲಿ ಹುಟ್ಟುವ ಬೆಳಕಿನಲಿ
ಆ ಬೆಳಕಿನ ಬಗಲಲ್ಲೇ ಹುಟ್ಟುವ ಕತ್ತಲಲ್ಲಿ...

No comments: