Friday, October 22, 2010
ಬೆಳಕು
ದೀಪ ಹಚ್ಚಿಡು
ಬೆಳಕಿನ ವರ್ಣಮಾಲೆಯಲ್ಲಿ
ನನಗೆ ಬೇಕಾದ ಅಕ್ಷರಗಳನ್ನು
ಹುಡುಕಿಕೊಳ್ಳುತ್ತೇನೆ
ಅಕ್ಷರಗಳನ್ನು
ಒಂದಕ್ಕೊಂದು ಹೆಣೆಯಬೇಕು
ಹೊಸ ನುಡಿಗಟ್ಟು ಕಟ್ಟಬೇಕು
ಈ ದೀರ್ಘ ಕರಾಳ ಮೌನವನ್ನು
ಒಡೆಯುವ ಶಬ್ದ ಹುಡುಕಬೇಕು
ಬೆಳಕು ಈಗೀಗ ದುಬಾರಿ
ಪಳಪಳ ಉರಿಯುವ
ದೊಡ್ಡದೊಡ್ಡ ನಿಯಾನ್ ಬಲ್ಬುಗಳ
ಸುತ್ತಲೇ ಮಬ್ಬುಗತ್ತಲು
ಕತ್ತಲಲ್ಲಿ ನಿನ್ನ ಮೊಗ ನನಗೆ
ನನ್ನ ಮೊಗ ನಿನಗೆ ಕಾಣುವುದಿಲ್ಲ
ಮುಖಕ್ಕೆ ಮುಖ ಕೊಡದೆ
ಮಾತಾಡುವುದು ನನಗೆ ರೂಢಿಯಲ್ಲ
ಹೊಸೆಯುತ್ತಿರು ಬತ್ತಿ
ತುಂಬುತ್ತಲಿರು ಎಣ್ಣೆ
ಆರದಿರಲಿ ದೀಪ
ಬೆಳಕು
ಹೀಗೆ ಗುಟುಕು ಗುಟುಕಾಗಿ
ಎದೆಗೆ ಇಳಿವಾಗ
ಒಳಗಿನ ಕತ್ತಲೆಗೆಲ್ಲಿ ತಾವು?
Wednesday, October 20, 2010
ಆಧುನಿಕ ದೇವತೆಗಳು
ನೀವು ಆಧುನಿಕ ದೇವತೆಗಳು
ಧರಿಸಿದ ಹಾರ ಒಣಗುವುದಿಲ್ಲ
ಪಾದ ನೆಲಕ್ಕೆ ತಾಕುವುದಿಲ್ಲ
ಕಣ್ಣ ರೆಪ್ಪೆಗಳು ಮಿಟುಕುವುದಿಲ್ಲ
ನಾವು ಕ್ಯಾಕರಿಸಿ ಉಗಿದರೂ
ಅದು ನಿಮ್ಮನ್ನು ತಲುಪುವುದಿಲ್ಲ
ಬೈದಿದ್ದು, ಕೂಗಿದ್ದು, ಚೀತ್ಕರಿಸಿದ್ದೆಲ್ಲ
ನಿಮ್ಮ ಎತ್ತೆತ್ತರದ ಮಹಲು-ಮಿನಾರುಗಳ ಗೋಡೆಗೆ ತಗುಲಿ
ವಾಪಾಸು ನಮ್ಮ ಅಂಗಳಕ್ಕೇ ಬೀಳುತ್ತದೆ
ನೀವು ಎಲ್ಲೋ ಆಕಾಶದಲ್ಲಿ ಇರುವವರು
ತಳದಲ್ಲಿ ನಾವು
ನಿಮ್ಮ ನೋಡಲು ತಲೆ ಎತ್ತಿ ಎತ್ತಿ
ನರಗಳು ಬಿಗಿದು, ಕುತ್ತಿಗೆ ನೋವು ಬಂದು
ಇದೀಗ ತಲೆ ತಗ್ಗಿಸಿ ನಿಂತಿದ್ದೇವೆ.
ತಗ್ಗಿದ ತಲೆಯೇ ನಮಗೀಗ ಖಾಯಮ್ಮು
ಆ ಕಾಲದ ದೇವತೆಯರು
ಪುಷ್ಪವೃಷ್ಟಿ ಸುರಿಸುತ್ತಿದ್ದರಂತೆ
ನಾವು ನಮ್ಮ ತಲೆಯ ಮೇಲೆ
ಈಗೀಗ ನಮ್ಮದೇ ಮಲ ಸುರಿದುಕೊಳ್ಳುತ್ತಿದ್ದೇವೆ
ನೀವು ಆಧುನಿಕ ದೇವತೆಗಳು
ವೇಷ ಮರೆಸಿಕೊಳ್ಳುವುದು ಸಲೀಸು ನಿಮಗೆ
ಗಂಡಂದಿರ ವೇಷದಲ್ಲಿ ಹೆಣ್ಣು ಮಕ್ಕಳ
ಜತೆ ಮಲಗೆದ್ದು ಬರುತ್ತೀರಿ
ದೇಶಭಕ್ತರ ಹೆಸರಿನಲ್ಲಿ
ಮಚ್ಚು, ತಲವಾರು, ಬಂದೂಕು ಹಿರಿದು
ಧರ್ಮಯುದ್ಧವಾಡುತ್ತೀರಿ
ರೈತನ ವೇಷದಲ್ಲಿ ಬಂದು
ಭೂಮಿ ಸಿಗಿದು ತಿನ್ನುತ್ತೀರಿ
ನಿಮ್ಮೆದುರು ಅಮಾಯಕವಾಗಿ ನಿಂತ
ನಮ್ಮ ತಲೆಯ ಮೇಲೆ ಕಾಲಿಟ್ಟು
ಮೂರೇ ಹೆಜ್ಜೆಗೆ ಭೂಮಂಡಳವನ್ನು ಅಳೆದು
ನಿಮ್ಮ ಹೆಸರಿಗೆ ರಿಜಿಸ್ಟರು ಮಾಡಿಕೊಂಡವರು ನೀವು
ಮುಟ್ಟಿದರೂ ಮುಟ್ಟಲಾಗದು ನಿಮ್ಮ;
ಚಣಮಾತ್ರದಲ್ಲಿ ಅಂತರ್ಧಾನರಾಗುತ್ತೀರಿ
ದೇವತೆಗಳು ನೀವು;
ಏನು ಮಾಡಿದರೂ ಅದು ಪುರಾಣೇತಿಹಾಸ
ನಾವೋ ಹುಲು ಮಾನವರು
ಪುಷ್ಪವೃಷ್ಟಿಗೆ ಕಾದು ನಿಂತು ಸೋತವರು
ಬೇಜಾರಾಗಿ ಮಲ ಸುರಿದುಕೊಂಡವರು..
ಹುಡುಕುತ್ತಿದ್ದೇನೆ...
ಹುಡುಕುತ್ತಾ ಇದ್ದೇನೆ ನಿನ್ನನ್ನು
ಸಂಜೆಯ ಹಳದಿ ಸೂರ್ಯನ ತಂಪು ಬಿಸಿಲಿನಲ್ಲಿ
ಬೋಧಿವೃಕ್ಷದ ಕೆಳಗೆ ಬಿದ್ದ ಹಸಿರು ಎಲೆಗಳಲ್ಲಿ
ಜೋಲಿಯಲ್ಲಿ ಪವಡಿಸಿದ ಹಸುಗೂಸಿನ ಪಿಳಿಪಿಳಿ ಕಣ್ಣುಗಳಲ್ಲಿ
ನೀನು ಮಗುವಿನಂಥವಳು
ನೆತ್ತಿಯಿನ್ನೂ ಕೂಡಿಲ್ಲ
ಹಲ್ಲಿಲ್ಲ; ಬೊಚ್ಚುಬಾಯಿ
ಹೊಕ್ಕುಳ ಬಳ್ಳಿ ಕೊಯ್ದ ಗಾಯವಿನ್ನೂ ಮಾಸಿಲ್ಲ
ಯಾವುದೋ ಭೀತಿಗೆ
ಕಿಟಾರನೆ ಕಿರುಚಿದಾಗಲೆಲ್ಲ
ಓಡೋಡಿ ಬಂದು, ಸಾವರಿಸಿ
ಬಿಗಿದಪ್ಪಿ, ಮಡಿಲ ತುಂಬಿಕೊಳ್ಳುತ್ತೇನೆ
ನಿನ್ನ ಬಿಸಿಮೈ ಶಾಖಕ್ಕೆ ಇಷ್ಟಿಷ್ಟೇ
ಕರಗುತ್ತೇನೆ, ಕರಗುತ್ತಲೇ ಇರುತ್ತೇನೆ
ಒಮ್ಮೊಮ್ಮೆ ನೀನು
ರಚ್ಚೆ ಹಿಡಿದು, ನನ್ನೆದೆಯ ಮೇಲೆ
ನಿನ್ನ ಪುಟ್ಟ ಪಾದಗಳನ್ನಿಟ್ಟು
ತಲೆಗೂದಲು ಎಳೆದು ಕಿತ್ತು
ಕಣ್ಣಗುಡ್ಡೆಗೆ ಮುದ್ದು ಬೆರಳುಗಳಿಂದ ಚುಚ್ಚಿ
ಹಸಿ ಉಗುರಿನಿಂದ ಗೀರುವೆ
ಖಾಲಿ ಉಡಿಯನ್ನು ಬಡಿದುಕೊಂಡು
ಚೀತ್ಕರಿಸುವೆ
ಒಂದು ಪುಟ್ಟ ತಬ್ಬುಗೆಗೆ
ನೆತ್ತಿಗೆ ಇಟ್ಟ ಸಣ್ಣ ಮುತ್ತಿಗೆ
ಮತ್ತೆ ಲಲ್ಲೆಗೆರೆದು
ಮುಸುಮುಸು ತೋಳೊಳಗೆ ಸೇರಿಹೋಗುವೆ
ಮಗಳೇ,
ಹುಡುಕುತ್ತಲೇ ಇದ್ದೇನೆ ನಿನ್ನನ್ನು
ನಿನ್ನದೇ ಕಣ್ಣುಗಳ ಆಳದಲ್ಲಿ
ಅದರ ಅಂತರಾಳದಲ್ಲಿ ಹುಟ್ಟುವ ಬೆಳಕಿನಲಿ
ಆ ಬೆಳಕಿನ ಬಗಲಲ್ಲೇ ಹುಟ್ಟುವ ಕತ್ತಲಲ್ಲಿ...
Tuesday, October 5, 2010
ಆಶೆಯ ಎಳೆಗಾಗಿ...
ನಿಜ,
ಚೀತ್ಕರಿಸುತ್ತಿದೆ ನವಿಲು
ಕುಣಿಯಲಾರದು ಅದು ಇನ್ನು
ಗರಿಗಳೆಲ್ಲ ಕಳಚಿಬಿದ್ದು
ನೃತ್ಯಕ್ಕೂ ಸಂಚಕಾರ
ಎಲ್ಲವೂ ಇಲ್ಲಿ ಬಯಲು
ಅಸಹ್ಯ ಹುಟ್ಟಿಸುವ ಬೆತ್ತಲು
ನಿಜಾಯಿತಿಯ ಎದೆಗೆ ಚೂರಿ
ಈ ಭೀಕರತೆಯಲ್ಲೇ
ನನ್ನ ಉಡಿಯಲ್ಲಿ ನೀನು
ನಿನ್ನ ಉಡಿಯಲ್ಲಿ ನಾನು
ದೂರದಲ್ಲೆಲ್ಲೋ ಪುಟ್ಟ ಮಗು
ಹಸಿಹಸಿ ಯೋನಿಯಿಂದ ಜಾರಿಬಿದ್ದು
ಕೇಕೆ ಹಾಕಿ ನಗುತ್ತದೆ
ನಿನ್ನೆವರೆಗೆ ತುಂಬಿದ್ದ
ಹಿತ್ತಲ ಬಾವಿಯಲ್ಲೀಗ ನೀರಿಲ್ಲ
ಇಣುಕಿ ನೋಡಿದರೆ
ನನ್ನ, ನಿನ್ನ ಮುಖ ಕಾಣುವುದೂ ಇಲ್ಲ
ಬಣ್ಣ ತುಂಬುತ್ತೇವೆ ನಾವು
ಮುರಿದುಬಿದ್ದ ಕ್ಯಾನ್‌ವಾಸಿನ ಮೇಲೆ
ಬಣ್ಣವಲ್ಲದ ಬಣ್ಣಗಳ ಬಳಸಿ
ಏನು? ಆಕಾಶಕ್ಕೇನು ಬಣ್ಣವಿದೆಯೆ?
ಹೋಗು, ಜಗುಲಿಯಲ್ಲಿ ನಿಂತಿದ್ದಾನೆ
ಬುಡುಬುಡುಕಿಯವನು
ಕಿವಿಗೊಡು ಅವನ ಜವಾಬುಗಳಿಗೆ
ಕೊಡು ಅವನಿಗೆ ವಸ್ತ್ರ, ಪುಡಿಗಾಸು, ಅಕ್ಕಿ
ಒಂದು ಆಶೆಯ ಎಳೆಗಾಗಿ
ಅಕ್ಕಿಯೇನು, ವಸ್ತ್ರವೇನು
ಹರಿದು ಕೊಟ್ಟುಬಿಡೋಣ
ನಮ್ಮದೇ ಮೂಳೆಮಾಂಸವ
Subscribe to:
Posts (Atom)