Sunday, November 14, 2010
ಹೋಗಿ, ಮತ್ತೆ ಬರಬೇಡಿ...
ಹಾಗೆ ದಡಬಡ ಅಂತ
ಬಾಗಿಲು ಬಡೀಬ್ಯಾಡಿ
ನಾನು ತೆರೆಯುವುದಿಲ್ಲ
ನಿಮ್ಮ ಹೆಜ್ಜೆ ಸಪ್ಪಳವನ್ನು ಗುರುತಿಸಬಲ್ಲೆ
ಸುಡುಸುಡು ನಿಟ್ಟುಸಿರು ಕೂಡ ತಾಕುತ್ತಿದೆ
ಕೂಗಿದ್ದೂ ಕೇಳಿಸಿದೆ, ಆದರೂ ಕದ ತೆಗೆಯಲೊಲ್ಲೆ
ನೀವು ಹೀಗೆ ಬರುತ್ತೀರೆಂದೇ
ಕುಯ್ಯೋ ಅನ್ನುವ ಬಾಗಿಲನ್ನು ಜೋರಾಗಿ ಬಡಿದು
ಚಿಲಕ ಹಾಕಿ, ಬೀಗ ಜಡಿದು ಕುಳಿತಿದ್ದೇನೆ
ಇಗೋ ಇವಳು ಈಗಷ್ಟೆ ಬಂದು
ನನ್ನ ಎದೆಗೊರಗಿ ನಿದ್ದೆ ಹೋಗಿದ್ದಾಳೆ
ಹಗಲಿಡೀ ದಣಿದಿದ್ದಾಳೆ, ಏಳಿಸಕೂಡದು
ನಾನು ಮಲಗಿದ ಜಾಗದಲ್ಲೇ ಗೋರಿಗಳಿವೆ
ನನ್ನವೇ ತರೇವಾರಿ ಗೋರಿಗಳು
ನಾನೇ ಕೈಯಾರೆ ನೆಲಬಗೆದು ಮಣ್ಣು ಮಾಡಿದ್ದೇನೆ
ಈ ಗೋರಿಗಳೋ, ಒಮ್ಮೊಮ್ಮೆ ಜೀವ ತಳೆದು
ಆಕಳಿಸಿ, ಮೈಮುರಿದೆದ್ದು ಊಳಿಡುತ್ತವೆ;
ಶತಮಾನಗಳ ಮಹಾಮೌನವನ್ನು ಮುರಿಯುತ್ತವೆ
ಇವಳಿಗೆ ಇದೇನೂ ಗೊತ್ತಿಲ್ಲ
ಪ್ರತಿರಾತ್ರಿ ಜೋಗುಳ ಹಾಡಿ
ತೋಳೊಳಗೆ ಮಲಗಿಸುತ್ತೇನೆ
ನನ್ನದಿನ್ನೂ ಬಿಸಿಬಿಸಿ ರಕ್ತ
ನೆತ್ತರ ಕಾವಿಗೆ ಅವಳು
ಬೆಚ್ಚಗೆ ಮಲಗುತ್ತಾಳೆ
ಬೇಡ, ಅವಳ ನಿದ್ದೆಗೆ ಭಂಗ ತಾರದಿರಿ
ಶಬ್ದವೆಂದರೆ ಅಲರ್ಜಿ ಅವಳಿಗೆ
ಅಪಶಕುನಗಳಿಗೆ ಬೆಚ್ಚುತ್ತಾಳೆ, ಹೊರಟು ಹೋಗಿ
ಮತ್ತೆ ವಾಪಾಸು ಬರಲೂಬೇಡಿ
ಬಂದು ಹೀಗೆಲ್ಲ ಬಾಗಿಲು ಬಡಿದು ಕಾಡಬೇಡಿ
ಸತ್ತವರನ್ನು ಹೀಗೆಲ್ಲ ಏಳಿಸುವುದು ಸಲ್ಲ
ಗರ್ಭದ ಚೀಲಕ್ಕೆ ವಾಪಾಸು ಹೋಗಿ...
-೧-
ಮೊನ್ನೆ ತಾನೆ
ಬಿಸಿ ಕುಕ್ಕರ್‌ಗೆ ತಾಗಿ
ಸುಟ್ಟುಕೊಂಡಿತು ಕಾಲು
ಒಂದಿಂಚು ಗಾಯ
ಉರಿ ಕಿತ್ತು ಬೊಬ್ಬೆ ಬಂದು
ಈಗ ಕಪ್ಪಗೆ ಒಣಗಿದೆ
ಬೇಡ ಬೇಡವೆಂದರೂ
ಕೈ ಅಲ್ಲಿಗೇ ಹೋಗಿ
ಚರ್ಮದ ಚಕ್ಕಳ ಸುಲಿಯುತ್ತದೆ
ತಳದ ಮಾಂಸ
ಬಿಳಿಬಿಳಿಯಾಗಿ
ಮಿರಿಮಿರಿ ಮಿಂಚುತ್ತದೆ
ಹೀಗೆ
ಸುಟ್ಟುಕೊಳ್ಳೋದು, ಚುಚ್ಚಿಕೊಳ್ಳೋದು
ಕೆರೆದುಕೊಳ್ಳೋದು, ಸುಲಿದುಕೊಳ್ಳೋದು
ಮಾಂಸವನ್ನೇ ತರಿದು ಎಸೆಯೋದು
ಆಗಾಗ ನಡೆಯುತ್ತಿರುತ್ತದೆ
ಜತೆಗೆ ಅವರಿವರು
ಇರಿದಿದ್ದು, ಕೆರೆದಿದ್ದು, ಗುದ್ದಿದ್ದು, ಕತ್ತರಿಸಿದ್ದು...
ಆ ಗಾಯಗಳೂ ಹಸಿಹಸಿ
ಮಾಯುವುದಿಲ್ಲ
ಒಮ್ಮೊಮ್ಮೆ ಮಾಯಲು ನಾನೇ ಬಿಡುವುದಿಲ್ಲ
-೨-
ಗುಲಾಬಿಯ ಜತೆಗೆ ಮುಳ್ಳೂ ಇರುತ್ತೋ ಮಾರಾಯ
ಎಂಬ ಪಾಠ ಕಲಿತದ್ದು ತುಂಬ ಹಿಂದೆ
ಎಲ್ಲ ಪಠ್ಯಗಳು ಓದಿಗಾಗಿ
ಅನುಸರಣೆ ಕಷ್ಟಕಷ್ಟ
ಮೊದಲೆಲ್ಲ ನೋವಿಗೊಂದು
ಫಾರ್ಮುಲಾ ಇತ್ತು
‘ಅದಕ್ಕೆ ಇದಾದರೆ ಇದಾಗುತ್ತೆ ಎಂದು.
ಈಗ ಹಾಗಿಲ್ಲ
ಅಕಾರಣವಾಗಿ ಕಾರಣಗಳು
ಹುಟ್ಟಿಕೊಳ್ಳುತ್ತವೆ
ಹದ್ದೊಂದು ಎಗರಿ ಬಂದು
ತಲೆ ಚುಚ್ಚಿ
ಮಿದುಳ ಬಳ್ಳಿಯ ಹರಿದು ಹೋಗಿದ್ದಕ್ಕೆ
ಕಾರಣವೆಲ್ಲಿ ಹುಡುಕೋದು?
-೩-
ಕತ್ತರಿಸಿದ್ದು ಮಾಂಸವನ್ನು
ಸುಟ್ಟಿದ್ದು ಚರ್ಮವನ್ನು
ಆದರೆ
ಒಳಗಿನ ಅಹಂಕಾರ ಸುಡಬೇಕು
ಕತ್ತರಿಸಿ ಬೇಯಿಸಿ
ನಾನೇ ತಿಂದು ಕರಗಿಸಬೇಕು
ಹಾಗೆ ನಮ್ಮದೇ ಅಹಂಕಾರವನ್ನು
ಸುಟ್ಟು ತಿನ್ನುವುದು
ಸುಲಭವಲ್ಲ
ಅಹಂಕಾರವನ್ನು ಸುಡುವುದೆಂದರೆ
ಅಸ್ಮಿತೆಯನ್ನೇ ಪಣಕ್ಕಿಟ್ಟು
ಬೆತ್ತಲಾಗೋದು
ಬೋಧಿವೃಕ್ಷವೇ ಆಗಿ ಬಿಡೋದು
ಬುದ್ಧನನ್ನೇ ನಗಿಸಿಬಿಡೋದು
-೪-
ಸೆಗಣಿಯ ಉಂಡೆ ಮಾಡಿ
ಅದರ ಮೇಲೊಂದು ದೀಪ ಉರಿಸಿ
ಹೊಕ್ಕುಳ ಮೇಲಿಟ್ಟು
ಮಲಗಿದ್ದೇನೆ;
ಜಾರಿದ ಬಟ್ಟಿ ಸ್ವಸ್ಥಾನಕ್ಕೆ
ಮರಳಲೆಂದು
ದೀಪದ ಬೆಳಕಿಗೆ
ಕಣ್ಣು ಕೀಲಿಸಿದ್ದೇನೆ
ಅದು ಒಳಗೊಳಗೆ ತುಂಬಿಕೊಳ್ಳುವಾಗ
ಹೊಕ್ಕುಳಲ್ಲಿ ರಕ್ತಗಾಯದ ಅನುಭವ
ತಡವಿದ ಕೈಗೆ ತೊಡರಿದ್ದು
ಹೊಕ್ಕುಳಬಳ್ಳಿ
ಈಗಷ್ಟೆ ಹುಟ್ಟಿದ ಕೂಸಿನ
ಕಣ್ಣುಗಳು,
ಅದರ ಬೆರಳುಗಳು
-೫-
ಹೀಗೆ
ಕೈಗೆ ತೊಡರಿದ
ಹೊಕ್ಕುಳ ಬಳ್ಳಿ ಧರಿಸಿ
ಮತ್ತೆ ಬಂದ ದಾರಿಯಲ್ಲೇ
ಹಿಂದಿರುಗಿ ಹೋಗೋದು ಸಾಧ್ಯವೇ?
ವಾಪಾಸು ಹೋಗಿ
ಆ ಅಬೋಧ ಕಣ್ಣುಗಳಲ್ಲಿ
ಎಲ್ಲವನ್ನೂ ಹೊಸತಾಗಿ ನೋಡೋದು...
ಆ ಎಳೇ ಬೆರಳುಗಳಿಂದ
ಎಲ್ಲವನ್ನೂ ಮತ್ತೆ ಸ್ಪರ್ಶಿಸೋದು...
ಮತ್ತೂ ಹಿಂದಕ್ಕೆ ಹೋಗಿ
ಗರ್ಭದ ಚೀಲದಲ್ಲಿ
ಬೆಚ್ಚಗೆ, ಗಮ್ಮನೆ
ಈಜಾಡಿ
ಮಲಗಿ, ನಿದ್ದೆ ಹೋಗೋದು..
ಎಲ್ಲ ಗಾಯಗಳಿಂದ, ವ್ರಣಗಳಿಂದ
ಕಲೆಗಳಿಂದ
ಖಾಯಿಲೆಗಳಿಂದ
ಮುಕ್ತವಾಗೋದು...
ಯಾರು ಹೇಳಿದರು
ಬೆಳಕೆಂದರೆ ಚೈತನ್ಯವೆಂದು?
ಚೈತನ್ಯ ಇರೋದು
ಗರ್ಭವೆಂಬೋ
ಮಾಂಸದ, ರಕ್ತದ
ಮಾಯಾ ಚೀಲದಲ್ಲಿ
ಅದರೊಳಗಿನ ಕತ್ತಲಲ್ಲಿ
-೬-
ಅದಕ್ಕಾಗಿಯೇ
ಹೊಕ್ಕುಳ ಮೇಲೆ
ದೀಪವಿಟ್ಟುಕೊಂಡು
ಬೆಳಕ ದಿಟ್ಟಿಸುತ್ತಿದ್ದೇನೆ
ಕತ್ತಲ ಸಾಕ್ಷಾತ್ಕಾರಕ್ಕಾಗಿ
ಬೆತ್ತಲಾಗಲಿಕ್ಕಾಗಿ, ಬಯಲಾಗಲಿಕ್ಕಾಗಿ
Friday, October 22, 2010
ಬೆಳಕು
ದೀಪ ಹಚ್ಚಿಡು
ಬೆಳಕಿನ ವರ್ಣಮಾಲೆಯಲ್ಲಿ
ನನಗೆ ಬೇಕಾದ ಅಕ್ಷರಗಳನ್ನು
ಹುಡುಕಿಕೊಳ್ಳುತ್ತೇನೆ
ಅಕ್ಷರಗಳನ್ನು
ಒಂದಕ್ಕೊಂದು ಹೆಣೆಯಬೇಕು
ಹೊಸ ನುಡಿಗಟ್ಟು ಕಟ್ಟಬೇಕು
ಈ ದೀರ್ಘ ಕರಾಳ ಮೌನವನ್ನು
ಒಡೆಯುವ ಶಬ್ದ ಹುಡುಕಬೇಕು
ಬೆಳಕು ಈಗೀಗ ದುಬಾರಿ
ಪಳಪಳ ಉರಿಯುವ
ದೊಡ್ಡದೊಡ್ಡ ನಿಯಾನ್ ಬಲ್ಬುಗಳ
ಸುತ್ತಲೇ ಮಬ್ಬುಗತ್ತಲು
ಕತ್ತಲಲ್ಲಿ ನಿನ್ನ ಮೊಗ ನನಗೆ
ನನ್ನ ಮೊಗ ನಿನಗೆ ಕಾಣುವುದಿಲ್ಲ
ಮುಖಕ್ಕೆ ಮುಖ ಕೊಡದೆ
ಮಾತಾಡುವುದು ನನಗೆ ರೂಢಿಯಲ್ಲ
ಹೊಸೆಯುತ್ತಿರು ಬತ್ತಿ
ತುಂಬುತ್ತಲಿರು ಎಣ್ಣೆ
ಆರದಿರಲಿ ದೀಪ
ಬೆಳಕು
ಹೀಗೆ ಗುಟುಕು ಗುಟುಕಾಗಿ
ಎದೆಗೆ ಇಳಿವಾಗ
ಒಳಗಿನ ಕತ್ತಲೆಗೆಲ್ಲಿ ತಾವು?
Wednesday, October 20, 2010
ಆಧುನಿಕ ದೇವತೆಗಳು
ನೀವು ಆಧುನಿಕ ದೇವತೆಗಳು
ಧರಿಸಿದ ಹಾರ ಒಣಗುವುದಿಲ್ಲ
ಪಾದ ನೆಲಕ್ಕೆ ತಾಕುವುದಿಲ್ಲ
ಕಣ್ಣ ರೆಪ್ಪೆಗಳು ಮಿಟುಕುವುದಿಲ್ಲ
ನಾವು ಕ್ಯಾಕರಿಸಿ ಉಗಿದರೂ
ಅದು ನಿಮ್ಮನ್ನು ತಲುಪುವುದಿಲ್ಲ
ಬೈದಿದ್ದು, ಕೂಗಿದ್ದು, ಚೀತ್ಕರಿಸಿದ್ದೆಲ್ಲ
ನಿಮ್ಮ ಎತ್ತೆತ್ತರದ ಮಹಲು-ಮಿನಾರುಗಳ ಗೋಡೆಗೆ ತಗುಲಿ
ವಾಪಾಸು ನಮ್ಮ ಅಂಗಳಕ್ಕೇ ಬೀಳುತ್ತದೆ
ನೀವು ಎಲ್ಲೋ ಆಕಾಶದಲ್ಲಿ ಇರುವವರು
ತಳದಲ್ಲಿ ನಾವು
ನಿಮ್ಮ ನೋಡಲು ತಲೆ ಎತ್ತಿ ಎತ್ತಿ
ನರಗಳು ಬಿಗಿದು, ಕುತ್ತಿಗೆ ನೋವು ಬಂದು
ಇದೀಗ ತಲೆ ತಗ್ಗಿಸಿ ನಿಂತಿದ್ದೇವೆ.
ತಗ್ಗಿದ ತಲೆಯೇ ನಮಗೀಗ ಖಾಯಮ್ಮು
ಆ ಕಾಲದ ದೇವತೆಯರು
ಪುಷ್ಪವೃಷ್ಟಿ ಸುರಿಸುತ್ತಿದ್ದರಂತೆ
ನಾವು ನಮ್ಮ ತಲೆಯ ಮೇಲೆ
ಈಗೀಗ ನಮ್ಮದೇ ಮಲ ಸುರಿದುಕೊಳ್ಳುತ್ತಿದ್ದೇವೆ
ನೀವು ಆಧುನಿಕ ದೇವತೆಗಳು
ವೇಷ ಮರೆಸಿಕೊಳ್ಳುವುದು ಸಲೀಸು ನಿಮಗೆ
ಗಂಡಂದಿರ ವೇಷದಲ್ಲಿ ಹೆಣ್ಣು ಮಕ್ಕಳ
ಜತೆ ಮಲಗೆದ್ದು ಬರುತ್ತೀರಿ
ದೇಶಭಕ್ತರ ಹೆಸರಿನಲ್ಲಿ
ಮಚ್ಚು, ತಲವಾರು, ಬಂದೂಕು ಹಿರಿದು
ಧರ್ಮಯುದ್ಧವಾಡುತ್ತೀರಿ
ರೈತನ ವೇಷದಲ್ಲಿ ಬಂದು
ಭೂಮಿ ಸಿಗಿದು ತಿನ್ನುತ್ತೀರಿ
ನಿಮ್ಮೆದುರು ಅಮಾಯಕವಾಗಿ ನಿಂತ
ನಮ್ಮ ತಲೆಯ ಮೇಲೆ ಕಾಲಿಟ್ಟು
ಮೂರೇ ಹೆಜ್ಜೆಗೆ ಭೂಮಂಡಳವನ್ನು ಅಳೆದು
ನಿಮ್ಮ ಹೆಸರಿಗೆ ರಿಜಿಸ್ಟರು ಮಾಡಿಕೊಂಡವರು ನೀವು
ಮುಟ್ಟಿದರೂ ಮುಟ್ಟಲಾಗದು ನಿಮ್ಮ;
ಚಣಮಾತ್ರದಲ್ಲಿ ಅಂತರ್ಧಾನರಾಗುತ್ತೀರಿ
ದೇವತೆಗಳು ನೀವು;
ಏನು ಮಾಡಿದರೂ ಅದು ಪುರಾಣೇತಿಹಾಸ
ನಾವೋ ಹುಲು ಮಾನವರು
ಪುಷ್ಪವೃಷ್ಟಿಗೆ ಕಾದು ನಿಂತು ಸೋತವರು
ಬೇಜಾರಾಗಿ ಮಲ ಸುರಿದುಕೊಂಡವರು..
ಹುಡುಕುತ್ತಿದ್ದೇನೆ...
ಹುಡುಕುತ್ತಾ ಇದ್ದೇನೆ ನಿನ್ನನ್ನು
ಸಂಜೆಯ ಹಳದಿ ಸೂರ್ಯನ ತಂಪು ಬಿಸಿಲಿನಲ್ಲಿ
ಬೋಧಿವೃಕ್ಷದ ಕೆಳಗೆ ಬಿದ್ದ ಹಸಿರು ಎಲೆಗಳಲ್ಲಿ
ಜೋಲಿಯಲ್ಲಿ ಪವಡಿಸಿದ ಹಸುಗೂಸಿನ ಪಿಳಿಪಿಳಿ ಕಣ್ಣುಗಳಲ್ಲಿ
ನೀನು ಮಗುವಿನಂಥವಳು
ನೆತ್ತಿಯಿನ್ನೂ ಕೂಡಿಲ್ಲ
ಹಲ್ಲಿಲ್ಲ; ಬೊಚ್ಚುಬಾಯಿ
ಹೊಕ್ಕುಳ ಬಳ್ಳಿ ಕೊಯ್ದ ಗಾಯವಿನ್ನೂ ಮಾಸಿಲ್ಲ
ಯಾವುದೋ ಭೀತಿಗೆ
ಕಿಟಾರನೆ ಕಿರುಚಿದಾಗಲೆಲ್ಲ
ಓಡೋಡಿ ಬಂದು, ಸಾವರಿಸಿ
ಬಿಗಿದಪ್ಪಿ, ಮಡಿಲ ತುಂಬಿಕೊಳ್ಳುತ್ತೇನೆ
ನಿನ್ನ ಬಿಸಿಮೈ ಶಾಖಕ್ಕೆ ಇಷ್ಟಿಷ್ಟೇ
ಕರಗುತ್ತೇನೆ, ಕರಗುತ್ತಲೇ ಇರುತ್ತೇನೆ
ಒಮ್ಮೊಮ್ಮೆ ನೀನು
ರಚ್ಚೆ ಹಿಡಿದು, ನನ್ನೆದೆಯ ಮೇಲೆ
ನಿನ್ನ ಪುಟ್ಟ ಪಾದಗಳನ್ನಿಟ್ಟು
ತಲೆಗೂದಲು ಎಳೆದು ಕಿತ್ತು
ಕಣ್ಣಗುಡ್ಡೆಗೆ ಮುದ್ದು ಬೆರಳುಗಳಿಂದ ಚುಚ್ಚಿ
ಹಸಿ ಉಗುರಿನಿಂದ ಗೀರುವೆ
ಖಾಲಿ ಉಡಿಯನ್ನು ಬಡಿದುಕೊಂಡು
ಚೀತ್ಕರಿಸುವೆ
ಒಂದು ಪುಟ್ಟ ತಬ್ಬುಗೆಗೆ
ನೆತ್ತಿಗೆ ಇಟ್ಟ ಸಣ್ಣ ಮುತ್ತಿಗೆ
ಮತ್ತೆ ಲಲ್ಲೆಗೆರೆದು
ಮುಸುಮುಸು ತೋಳೊಳಗೆ ಸೇರಿಹೋಗುವೆ
ಮಗಳೇ,
ಹುಡುಕುತ್ತಲೇ ಇದ್ದೇನೆ ನಿನ್ನನ್ನು
ನಿನ್ನದೇ ಕಣ್ಣುಗಳ ಆಳದಲ್ಲಿ
ಅದರ ಅಂತರಾಳದಲ್ಲಿ ಹುಟ್ಟುವ ಬೆಳಕಿನಲಿ
ಆ ಬೆಳಕಿನ ಬಗಲಲ್ಲೇ ಹುಟ್ಟುವ ಕತ್ತಲಲ್ಲಿ...
Tuesday, October 5, 2010
ಆಶೆಯ ಎಳೆಗಾಗಿ...
ನಿಜ,
ಚೀತ್ಕರಿಸುತ್ತಿದೆ ನವಿಲು
ಕುಣಿಯಲಾರದು ಅದು ಇನ್ನು
ಗರಿಗಳೆಲ್ಲ ಕಳಚಿಬಿದ್ದು
ನೃತ್ಯಕ್ಕೂ ಸಂಚಕಾರ
ಎಲ್ಲವೂ ಇಲ್ಲಿ ಬಯಲು
ಅಸಹ್ಯ ಹುಟ್ಟಿಸುವ ಬೆತ್ತಲು
ನಿಜಾಯಿತಿಯ ಎದೆಗೆ ಚೂರಿ
ಈ ಭೀಕರತೆಯಲ್ಲೇ
ನನ್ನ ಉಡಿಯಲ್ಲಿ ನೀನು
ನಿನ್ನ ಉಡಿಯಲ್ಲಿ ನಾನು
ದೂರದಲ್ಲೆಲ್ಲೋ ಪುಟ್ಟ ಮಗು
ಹಸಿಹಸಿ ಯೋನಿಯಿಂದ ಜಾರಿಬಿದ್ದು
ಕೇಕೆ ಹಾಕಿ ನಗುತ್ತದೆ
ನಿನ್ನೆವರೆಗೆ ತುಂಬಿದ್ದ
ಹಿತ್ತಲ ಬಾವಿಯಲ್ಲೀಗ ನೀರಿಲ್ಲ
ಇಣುಕಿ ನೋಡಿದರೆ
ನನ್ನ, ನಿನ್ನ ಮುಖ ಕಾಣುವುದೂ ಇಲ್ಲ
ಬಣ್ಣ ತುಂಬುತ್ತೇವೆ ನಾವು
ಮುರಿದುಬಿದ್ದ ಕ್ಯಾನ್‌ವಾಸಿನ ಮೇಲೆ
ಬಣ್ಣವಲ್ಲದ ಬಣ್ಣಗಳ ಬಳಸಿ
ಏನು? ಆಕಾಶಕ್ಕೇನು ಬಣ್ಣವಿದೆಯೆ?
ಹೋಗು, ಜಗುಲಿಯಲ್ಲಿ ನಿಂತಿದ್ದಾನೆ
ಬುಡುಬುಡುಕಿಯವನು
ಕಿವಿಗೊಡು ಅವನ ಜವಾಬುಗಳಿಗೆ
ಕೊಡು ಅವನಿಗೆ ವಸ್ತ್ರ, ಪುಡಿಗಾಸು, ಅಕ್ಕಿ
ಒಂದು ಆಶೆಯ ಎಳೆಗಾಗಿ
ಅಕ್ಕಿಯೇನು, ವಸ್ತ್ರವೇನು
ಹರಿದು ಕೊಟ್ಟುಬಿಡೋಣ
ನಮ್ಮದೇ ಮೂಳೆಮಾಂಸವ
Tuesday, August 24, 2010
ದೂರ ಹೋಗಿ ಬಿಡು
ದೂರ ಹೋಗಿ ಬಿಡು
ಕೆಂಡದಂಥ ನಾನು ಇಷ್ಟಿಷ್ಟೇ ಸುಡುತ್ತೇನೆ
ಚರ್ಮ ಸುಡುವ ಕಮಟು ವಾಸನೆಗೆ
ನಾನೇ ಮುಖ ಸಿಂಡರಿಸಿ,
ಚಿಟಪಟ ಸುಟ್ಟ ಮಾಂಸವೆಲ್ಲ ಬೂದಿಯಾಗಿ
ಬೂದಿಯೂ ಇಷ್ಟಿಷ್ಟೇ ಕರಗಿ ನೀರಾಗಿ
ಏನೂ ಇಲ್ಲದಂತಾಗುವ ಮನ್ನ
ದೂರ ಹೋಗಿ ಬಿಡು
ನನ್ನದು ಈ ಬೆಟ್ಟದಿಂದ ಆ ಬೆಟ್ಟದವರೆಗೆ
ಚಾಚಿದ ನಾಲಿಗೆ
ಸಿಡಿವ ಮಾತಿಗೆ ಬೆಟ್ಟಬೆಟ್ಟಗಳೇ ನಡುಗುತ್ತವೆ
ಬೆಟ್ಟಗಳಡಿಯ ನೀರು ಮುಲುಕುತ್ತದೆ
ಮುಲುಕಿದ ನೀರು ಕುಲುಕೆದ್ದು, ಚಿಮ್ಮಿ
ಹರಿದು ಬಯಲಾಗಿ, ಏನೂ ಇಲ್ಲದಂತಾಗುವ ಮುನ್ನ
ದೂರ ಹೋಗಿ ಬಿಡು
ನನ್ನದು ಆಳಕ್ಕೆ, ಪಾತಾಳಕ್ಕೆ ಇಳಿದ ಕಣ್ಣುಗಳು
ದೃಷ್ಟಿ ನೆಟ್ಟರೆ ಜಗದಗಲ, ಯುಗದಗಲ
ಎಳೆದು ಬಿಟ್ಟ ಬಾಣದಂತೆ ಅದು
ಇರಿಯುತ್ತದೆ ಗಾಳಿಯನ್ನೂ, ಬೆಂಕಿಯನ್ನೂ.
ಉರಿವ ಗಾಳಿ, ಹರಿವ ಬೆಂಕಿ
ಎಲ್ಲವನ್ನು ಎಳೆದು ದಿಗಂತದಾಚೆಗೆ ಎಸೆದು
ಏನೂ ಇಲ್ಲದಂತಾಗುವ ಮುನ್ನ
ದೂರ ಹೋಗಿ ಬಿಡು
ನನ್ನುಸಿರೋ, ಲಾವರಾಸದಂತೆ
ಕುಣಿದೆದ್ದು ಹೊರಟರೆ
ಆವರಿಸಿ, ಆವರಿಸಿ
ಎಲ್ಲವನ್ನೂ ಚಾಚಿ ತಬ್ಬಿ
ಮುಗಿಸಿಬಿಡುತ್ತದೆ.
ಅದು ಬೆಳಕನ್ನೂ, ಬಯಲನ್ನೂ ನುಂಗಿ ಬಿಡುವೆ ಮುನ್ನ
ದೂರ ಹೋಗಿ ಬಿಡು
ಇರಲೇಬೇಕಿಂದಿದ್ದರೆ ಇರು,
ನಾನು ಸುಡುತ್ತೇನೆ; ಸುಟ್ಟ ವಾಸನೆ ನನಗೆ ಮಾಮೂಲಿ
Subscribe to:
Posts (Atom)