
ಯಾಕೋ ಎಲ್ಲವೂ ಎಂದಿನಂತಿಲ್ಲ ಗೆಳತಿ
ಅಲಾರಾಮು ಹೊಡಕೊಂಡರೆ
ಯಾರೋ ಕರುಳು ಸೀಳಿದಂತೆ
ಕಾಲಿಂಗ್ ಬೆಲ್ ರಿಂಗಣಿಸಿದರೆ
ಹೃದಯ ಚೂರು ಚೂರಾದಂತೆ
ಬಾಗಿಲು ಬಡಿದ ಶಬ್ದಕ್ಕೆ
ಮಿದುಳು ಹರಿದು ಹೋದಂತೆ
ಯಾಕೋ ಎಲ್ಲವೂ ಎಂದಿನಂತಿಲ್ಲ ಗೆಳತಿ
ಬೇಟೆನಾಯಿಗಳು ಕೋರೆ ಅಗಲಿಸಿಕೊಂಡು ಕೂತಿವೆ
ಆ ಕುನ್ನಿಗಳಿಗೆ ಆಹಾರ ಯಾರು? ನೀನೇ? ನಾನೇ?
ಮೇಲೆ ನಭದಲ್ಲಿ ದಿಕ್ಕಾಪಾಲಾದ ಮೋಡಗಳು
ಸುರಿಸಿದ್ದು ಮಳೆಯೇ? ಬೆಂಕಿಯ ಉಂಡೆಗಳೆ?
ಕಿಟಕಿ ತೆರೆದು ನೋಡುತ್ತಿದ್ದೇನೆ
ಎಲ್ಲರ ಹೆಗಲ ಮೇಲೂ ಬಗೆಬಗೆಯ ಶಸ್ತ್ರಾಸ್ತ್ರಗಳ ಮಣಭಾರ
ಈಗೀಗ ಅನ್ನಕ್ಕಿಂತ ಬಂದೂಕೇ ಶ್ರೇಷ್ಠ
ನೀರಿಗಿಂತ ಬಿಸಿಬಿಸಿ ರಕ್ತವೇ ಸಸ್ತಾ
ಬೆದರಬೇಡ ಗೆಳತಿ
ಹಾಗೇ ಮಲಗು, ನಿದ್ದೆ ಹತ್ತಲಿ ನಿನಗೆ
ಇವೆಲ್ಲವೂ ನಾಳೆ ಬೆಳಗಾಗುವುದರೊಳಗೆ ಬದಲಾಗುತ್ತವೆ
ನಿರೀಕ್ಷೆ ಇಟ್ಟುಕೋ
ನಿನ್ನ ಸೈರಣೆಗಿದೋ ಅಗ್ನಿಪರೀಕ್ಷೆ
ಸೂರ್ಯನನ್ನೂ ಅಪಹರಿಸಲಾಗಿದೆ
ಅವನೇ ಒತ್ತೆಯಾಳು
ಅವನನ್ನು ಹೊತ್ತೊಯ್ದವರ ಬೇಡಿಕೆ
ನನ್ನ ನಿನ್ನ ಗುಟುಕು ಜೀವ
ಆಶೆಗಳನ್ನು ಕಟ್ಟಿಕೋ
ಕರಿಮೋಡಗಳನ್ನು ದಾಟಿ ಸೂರ್ಯನನ್ನು ತಲುಪಿ
ಬಿಡಿಸಿ ತರೋಣ ಅವನನ್ನು
ಹರಿಸೋಣ ಬೆಳಕನ್ನು
ಬೆಳಗೋಣ ಎಲ್ಲರೆದೆ ಗೂಡನ್ನೂ
ದ್ವೇಷ ಸುಡುವುದಕ್ಕೂ ಧೈರ್ಯ ಬೇಕು ಕಣೆ ಗೆಳತಿ
ಇಳಿಯಬೇಕು ಅಂತರಂಗಕ್ಕೆ
ಆಳಕ್ಕೆ, ಮತ್ತೂ ಆಳಕ್ಕೆ
ಅಲ್ಲಿ ಅಂಧಕಾರವಿಲ್ಲ, ಬೆಳಕೇ ಎಲ್ಲ
ಯಾವುದು ಜಗತ್ತೋ ಅದಕ್ಕೆ ಕತ್ತಲೆಯ ಹಂಗಿಲ್ಲ
ವಿದಾಯ ಹೇಳೋಣ ಬಾ
ಕಾಡಿದ ಕೆಟ್ಟ ಕನಸುಗಳಿಗೆ
ಬಾಡಿಗೆ ಹಂತಕ ತ್ರಿಶೂಲಗಳಿಗೆ, ಬಾಂಬುಗಳಿಗೆ
ನಂಬು ಗೆಳತಿ
ಎಲ್ಲ ಸರಿಹೋಗುತ್ತದೆ
ಸಿಡಿಲು, ಬಿರುಗಾಳಿ, ಸಮುದ್ರದುಬ್ಬರ
ಎಲ್ಲ ಅಬ್ಬರಗಳ ನಡುವೆಯೂ
ಒಂದೇ ಒಂದು ತೆನೆ ನನ್ನ, ನಿನ್ನ
ಹೊಟ್ಟೆ ತುಂಬಿಸುತ್ತದೆ
ಬಾ ಗೆಳತಿ
ನನ್ನ ತೋಳೊಳಗೆ ಹುದುಗಿ
ಗಡದ್ದಾಗಿ ನಿದ್ದೆ ಮಾಡು
ನಾಳೆ ಎಲ್ಲವೂ ಬದಲಾಗುತ್ತದೆ
2 comments:
ಹುಲಿಯ ತಲೆಯ ಹುಲ್ಲೆ
ಹುಲ್ಲೆಯ ತಲೆಯ ಹುಲಿ-
ಈ ಎರಡರ ನಡು ಒಂದಾಯಿತ್ತು !
ಹುಲಿಯಲ್ಲ - ಹುಲ್ಲೆಯಲ್ಲ
ಕೆಲದಲೊಂದು ಬಂದು ಮೆಲುಕಾಡಿತ್ತು ನೋಡಾ.
ತಲೆಯಿಲ್ಲದ ಮುಂಡ
ತರಗೆಲೆಯ ಮೇದರೆ
ಎಲೆಮರೆಯಾಯಿತ್ತು ಗುಹೇಶ್ವರ.
-ಮಂಜುನಾಥಸ್ವಾಮಿ
ದಿನೇಶ್,
'ಬಾಡಿಗೆ ಹಂತಕ ತ್ರಿಶೂಲ ಮತ್ತು ಬಾಂಬು' - ದಿಕ್ಕು ತಪ್ಪಿದ ಅಥವಾ ತಪ್ಪಿಸಲ್ಪಟ್ಟ ಯುವ ಮನಸುಗಳ ಆಯ್ಕೆಗಳಿವು.ಕವನ ಇಂತಹ ಸೂಕ್ಷ್ಮಗಳನ್ನು ಶಕ್ತವಾಗಿ ಅಭಿವ್ಯಕ್ತಿಸುತ್ತದೆ. ಕೆಲವೆಡೆ ವಾಚ್ಯ ಎನ್ನಿಸುತ್ತದೆ. ಆದರೆ ಆಶಯ ಮೆಚ್ಚುವಂಥದ್ದು. ಮುಖ್ಯವಾಗಿ ನಿಮ್ಮ ಕವನ ಅಂತ್ಯಗೊಳ್ಳುವುದು ಸದಾಶಯದಿಂದ. ಹೀಗೆ ಕವನ ಬರೆಯುತ್ತಿರಿ..
ಅಂದಹಾಗೆ ಒಂದು ಮಾತು. ಮೇಲಿನ ಕಾಮೆಂಟ್ ಹಾಕಿದ್ದು ಅಲ್ಲಮ ಪ್ರಭು ಇರಬೇಕು. ಇಲ್ಯಾರೋ ಮಂಜುನಾಥ ಸ್ವಾಮಿ ಎಂದು ಹೆಸರು ಹಾಕಿದ್ದಾರೆ. ಅಲ್ಲಮ ಕಾಪಿರೈಟ್ ಕಾಯ್ದೆ ಅಡಿ ಪ್ರಶ್ನೆ ಮಾಡಬಹುದು. ಆತನ ತಪ್ಪಿಗೆ ನೀವೂ ಜವಾಬ್ದಾರರಾಗುತ್ತೀರಿ. ಹುಷಾರ್
- ಇಲ್ಲಮ
Post a Comment