
ತುಟಿ ಹೊಲೆದುಕೊಂಡಿದ್ದಾಗ
ಹೃದಯಕ್ಕೆ ಸಾವಿರ ನಾಲಗೆ
ಚಿಮ್ಮುತ್ತದೆ.
-ರೂಮಿ
ಅಲ್ಲೋ ರೂಮಿ
ತುಟಿ ಹೊಲೆದುಕೊಳ್ಳೋದೇನೋ ಸುಲಭ
ಹೃದಯದ ನಾಲಗೆಯ ಮಾತುಗಳಿಗೆ
ಕಿವುಡಾಗೋದು ಹೇಗೆ?
ನಿನಗೋ ಶಂಸ್‌ನ ಕನವರಿಕೆ
ಎದೆಯಲ್ಲಿ ಧಗಧಗನೆ ಉರಿಯುವ ಪ್ರೇಮ
ತುಟಿ ನೀನೇ ಹೊಲೆದುಕೊಂಡೆಯಾ?
ಯಾರಾದರೂ ಹೊಲೆದುಬಿಟ್ಟರಾ?
ಅಗೋ ಅಲ್ಲಿ, ಸೂಜಿ-ದಾರ ಹಿಡಿದು ನಿಂತಿದ್ದಾರೆ
ನನಗೂ ಹೀಗೆ ತುಟಿ ಹೊಲೆಸಿಕೊಂಡು ಅಭ್ಯಾಸ
ಒಮ್ಮೊಮ್ಮೆ ನಾನೇ ಹೊಲೆದುಕೊಂಡಿದ್ದಿದೆ
ಆದರೆ ಹೃದಯದ ನಾಲಗೆಗಳದ್ದೇ ಕಾಟ
ಮಾತು ನನ್ನ ಹಿಡಿತದ್ದಲ್ಲ
ಹಿಡಿದು ಹಿಡಿದು ಮಾತಾಡೋಣವೆಂದರೆ
ಹೃದಯದಲ್ಲೊಂದು ಗಂಟಲಿಲ್ಲ,
ಇರೋದು ಬರೀ ಸಹಸ್ರ ನಾಲಗೆಗಳು
ಇದೇನೋ ವಿಚಿತ್ರ ಅನುಭೂತಿ ಮಾರಾಯ
ಭೂಮಿ ಆಕಾಶಗಳನ್ನು ಮೀರಿ
ನನ್ನ ಹೃದಯ ಬೆಳೆದುನಿಂತಂತೆ...
ಬೆಳೆದೊಮ್ಮೆ ಬಿರಿದುಹೋಗಿ ಕಣಕಣಗಳಾಗಿ
ಸಿಡಿದು ಚೆದುರಿ ನಿಂತಂತೆ...
ಉದುರಿದ ಕಣಗಳಲ್ಲಿ
ನನ್ನ ಅಸ್ಮಿತೆಗಾಗಿ ನಾನು ತಿಣುಕಾಡಿ ಹುಡುಕಿದಂತೆ...
ಪಟಗುಡುತ್ತಿವೆ ತುಟಿಗಳು
ಈಗಷ್ಟೇ ಸೂಜಿ ಚುಚ್ಚಿದ ಅಸಾಧ್ಯ ನೋವು
ಹೃದಯದ ಸಹಸ್ರ ನಾಲಗೆಯಲ್ಲೊಂದನ್ನು ತಂದು
ಈ ಹರಿದುಹೋದ ತುಟಿಗಳಿಗೆ ಜೋಡಿಸಲು ಯತ್ನಿಸಿದೆ
ಅದಾಗದು, ಅಸಾಧ್ಯ ಈಗ
ನಿಜ ಕಣೋ ರೂಮಿ
ಹೃದಯಕ್ಕೆ ಸಹಸ್ರ ನಾಲಗೆ ಇರೋದು ನಿಜ
ಆದರೆ ಕಣ್ಣಿಲ್ಲ, ಮೆದುಳಿಲ್ಲ...
ತುಟಿಯಲ್ಲಿ ಈಗ ಬಾವು, ಕೀವು...
ಸಹಸ್ರ ನಾಲಗೆಗಳ ಮಾತಿಗೆ ಕಿವಿ ಕಿತ್ತುಹೋಗಿದೆ
ಯಾರಾದರೂ ಈ ಕಿವಿಗಳನ್ನೂ ಹೊಲೆದುಬಿಡಬಾರದೇ?